ಸೋಮೇಶ್ವರ ಶತಕ (21-25)

ಮಧ್ಯಕಾಲೀನ ಕನ್ನಡದ ಮೇರು ಕೃತಿ “ಸೋಮೇಶ್ವರ ಶತಕ”ದ ಆಯ್ದ ಪದ್ಯಂಗಳ ಶರ್ಮಪ್ಪಚ್ಚಿ ಅರ್ಥಸಹಿತ ವಿವರಣೆ ಕೊಡ್ತವು. ಹೊಸಬೆಟ್ಟು ಶ್ರೀಶಣ್ಣ ಮಧುರವಾಗಿ ಹಾಡಿ, ಪದ್ಯಂಗಳ ಇನ್ನಷ್ಟು ಹತ್ತರೆ ಮಾಡ್ತವು.
ಕಳುದ ಸರ್ತಿ ಪ್ರಕಟ ಆದ ಐದು ಪದ್ಯಂಗೊ ಇಲ್ಲಿದ್ದು.
ಮುಂದಾಣ (21 – 25) ಈ ಸರ್ತಿ. ಎಲ್ಲೋರುದೇ ಓದಿ ಅರ್ತುಗೊಂಬೊ!

ಸೋಮೇಶ್ವರ ಶತಕ:

ಅರ್ಥ ವಿವರಣೆ: ಶರ್ಮಪ್ಪಚ್ಚಿ
ಗಮಕ ವಾಚನ
: ಶ್ರೀಶಣ್ಣ

ಅವಿನೀತಂ ಮಗನೇ ಅಶೌಚಿ ಮುನಿಯೇ ಬೈವಾಕೆ ತಾಂ ಪತ್ನಿಯೇ |
ಸವಿಗೆಟ್ಟನ್ನವದೂಟವೇ ಕುಜನರೊಳ್ ಕೂಡಿರ್ಪವಂ ಮಾನ್ಯನೇ ||
ಬವರಕ್ಕಾಗದ ಬಂಟನೇ ಎಡರಿಗಂ ತಾನಾಗದಂ ನಂಟನೇ|
ಶಿವನಂ ಬಿಟ್ಟವ ಶಿಷ್ಟನೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೨೧||

ಅವನೀತ= ವಿನಯ ಇಲ್ಲದ್ದವ°, ಬವರ = ಯುದ್ಧ, ಶಿಷ್ಟ = ಯೋಗ್ಯ

ಮಗ ವಿನಯವಂತನಾಗಿರೆಕು, ಋಷಿ ತನ್ನ ಚರ್ಯೆಲಿ ಪರಿಶುದ್ಧನಾಗಿರೆಕು,  ಹೆಂಡತಿ ಸಹಬಾಳ್ವೆ ನೆಡೆಶೆಕ್ಕು, ಊಟ ರುಚಿಯಾಗಿರೆಕು, ಎಷ್ಟೇ ದೊಡ್ಡ ಮನುಷ್ಯನಾದರೂ ಅವನ ಸಹವಾಸ ಒಳ್ಳೆಯವರೊಟ್ಟಿಂಗೆ ಇರೆಕು, ಸೈನಿಕರು ಎಲ್ಲಾ ಕಾಲಲ್ಲಿಯೂ ಯುದ್ಧ ಮಾಡ್ಲೆ ತಯಾರಾಗಿಯೇ ಇರೆಕು, ನೆಂಟರು ಕಷ್ಟ ಕಾಲಲ್ಲಿ ಸಕಾಯ ಮಾಡೆಕ್ಕು, ಯೋಗ್ಯನಾದವ ಶಿವನ (ದೇವರ) ಆರಾಧನೆ ಮಾಡೆಕ್ಕು. ಈ ಗುಣಂಗೊ ಇಲ್ಲದ್ದವು ಅವರವರ ಹೆಸರಿಂಗೆ ತಕ್ಕ ಮನುಷ್ಯರಲ್ಲ.

ಕೊಲುವಾ ಕೂಟವು ನಷ್ಟಮಪ್ಪ ಕೆಲಸಂ ಕೈಲಾಗದಾರಂಭಮುಂ |
ಗೆಲವೇನಿಲ್ಲದ ಯುದ್ಧ ಪಾಳುನೆಲದೊಳ್ ಬೇಸಾಯ ನೀಚಾಶ್ರಯಂ ||
ಹಲವಾಲೋಚನೆ ಜೂಜು ಲಾಭ ಮನೆ ಮಾರಾಟಂ ರಸದ್ಯೌಷಧಂ |
ಫಲವ ಭ್ರಾಂತಿಯ ತೋರ್ಪುದೈ ಹರಾ ಶ್ರೀ ಚೆನ್ನ ಸೋಮೇಶ್ವರಾ ||೨೨||

ಜೆನಂಗಳ ಕೊಂದು ದರೋಡೆ ಮಾಡುವವರ ಒಡನಾಟ, ಮಾಡಿದ ಕೆಲಸಂಗಳಲ್ಲಿ ನಷ್ಟವೇ ಬತ್ತ ಹಾಂಗಿಪ್ಪ ಕೆಲಸ, ತನ್ನ ಕೈಲಾಗದ್ದ ಕೆಲಸಕ್ಕೆ ಕೈ ಹಾಕುವದು, ಗೆಲ್ಲಲೆ ಎಡಿತ್ತಿಲ್ಲೆ ಹೇಳಿ ಗೊಂತಿದ್ದರೂ ಮಾಡುವ ಯುದ್ಧ, ಸತ್ವ ಇಲ್ಲದ್ದ ಮಣ್ಣಿಲ್ಲಿ ಬೇಸಾಯ ಮಾಡುವದು, ನೀಚರ ಆಶ್ರಯಲ್ಲಿ ಇಪ್ಪದು, ಒಂದು ಕೆಲಸ ಮಾಡ್ಲೆ ಹೆರಟಪ್ಪಗ ನಿರ್ದಿಷ್ಟವಾದ ದಾರಿಯ ನಿಶ್ಚಯ ಮಾಡದ್ದೆ ಹಲವಾರು ಆಲೋಚನೆಗಳ ಮಾಡುವದು,  ಜೂಜಿಂದ ಲಾಭ ಬತ್ತು ಹೇಳಿ ಜೂಜಾಡುವದು, ತಾನು ವಾಸ ಮಾಡಿಂಡು ಇಪ್ಪ ಮನೆಯ ಮಾರುವದು, ರಸದ ಮದ್ದುಗೊ ಪ್ರಯೋಜನಕ್ಕೆ ಬಕ್ಕು ಹೇಳುವ ಅಲೋಚನೆಗೊ, ಇದೆಲ್ಲವೂ ಬರೇ ಭ್ರಾಂತಿ. ಇವುಗಳಿಂದ ಯೇವ ಪ್ರಯೋಜನವೂ ಇಲ್ಲೆ.

ತೆರನಂ ಕಾಣದ ತಾಣದಲ್ಲಿ ಕಪಟಂಗಳ್ ಮಾಳ್ಪರಿರ್ಪಲ್ಲಿ ನಿ|
ಷ್ಠುರ ಭಾಷಾ ನೃಪನಲ್ಲಿ ನಿಂದೆ ಬರಿದೇ ಬರ್ಪಲ್ಲಿಯನ್ನೋದಕಂ ||
ಕಿರಿದಾದಲ್ಲಿ ರಿಪುವ್ರಜಂಗಳೆಡೆಯೊಳ್ ದುಸ್ಸಂಗ ದುರ್ಗೋಷ್ಠಿಯ |
ಲ್ಲಿರಸಲ್ಲಿರ್ದೊಡೆ ಹಾನಿಯೈ ಹರಾ ಶ್ರೀ ಚೆನ್ನ ಸೋಮೇಶ್ವರಾ ||೨೩||

ರಿಪುವ್ರಜ= ಶತ್ರುಗಳ ಸಮೂಹ

ಪರಿಚಯ ಇಲ್ಲದ್ದ ಜಾಗೆಲಿಯೂ, ಮೋಸಗಾರಂಗೊ ಇಪ್ಪ ಕಡೆಲಿಯೂ, ಯಾವಾಗಲೂ ನಿಷ್ಟುರಂದ ಮಾತಾಡುವ ರಾಜನ ಹತ್ರೆಯೂ, ಸುಮ್ಮನೆ ಇದ್ದಲ್ಲಿಯೂ ಅಪವಾದ ಬತ್ತಲ್ಲಿಯೂ, ಅನ್ನ ನೀರಿಂಗೆ ಕೊರತೆ ಇಪ್ಪಲ್ಲಿಯೂ, ಶತ್ರುಗಳ ಮಧ್ಯಲ್ಲಿಯೂ, ಕೆಟ್ಟವರ ಸಹವಾಸಲ್ಲಿಯೂ, ದುಷ್ಟರ ಸಹವಾಸಲ್ಲಿಯೂ ಇಪ್ಪಲಾಗ. ಇದ್ದರೆ ಹಾನಿ ಅಕ್ಕಲ್ಲದ್ದೆ ಯಾವುದೇ ಗುಣ ಸಿಕ್ಕ.

ಚರಿಪಾರಣ್ಯದ ಪಕ್ಷಿಗೊಂದು ತರು ಗೊಡ್ಡಾಗಲ್ ಫಲಂ ತೀವಿದಾ |
ಮರಗಳ್ ಪುಟ್ಟವೆ ಪುಷ್ಪವೊಂದು ಬಳಲಲ್ ಭೃಂಗಕ್ಕೆ ಪೂವಿಲ್ಲವೇ ||
ನಿರುತಂ ಸತ್ಕವಿಗೊರ್ವ ಗರ್ವಿ ಪುಸಿಯುತ್ತಂ ಲೋಭಿಯಾಗಲ್ ನಿಜಂ |
ಧರೆಯೊಳ್ ದಾತರು ಪುಟ್ಟರೇ ಹರಾ ಶ್ರೀ ಚೆನ್ನ ಸೋಮೇಶ್ವರಾ ||೨೪||

ಹಕ್ಕಿಗೊ ಹಣ್ಣು ತಿಂಬಲೆ ಕಾಡೆಲ್ಲಾ ಸುತ್ತುತ್ತವು. ಹಾಂಗಿಪ್ಪಗ ಒಂದು ಮರಲ್ಲಿ ಹಣ್ಣು ಇಲ್ಲದ್ದೆ ಹೋದರೆ, ಹಣ್ಣಿಪ್ಪ ಮರ ಹಕ್ಕಿಗೆ ಬೇರೆ ಸಿಕ್ಕದ್ದಿಕ್ಕೋ? ಜೇನ ಹೀರಲೆ ಹಾರುತ್ತ ದುಂಬಿಗೆ ಒಂದು ಹೂಗು ಬಾಡಿ ಅದರಿಂದ ಮಕರಂದ ಸಿಕ್ಕದ್ರೆ, ಬೇರೆ ಹೂಗು ಸಿಕ್ಕುತ್ತಿಲ್ಲೆಯೋ?, ಇದೇ ರೀತಿ ಒಳ್ಳೆಯ ಕವಿಯೊಬ್ಬ ಸಹಾಯ ಕೇಳಿಯಪ್ಪಗ, ಗರ್ವಂದ ಒಬ್ಬ ಜಿಪುಣ ಲೊಟ್ಟೆ ಹೇಳಿ ಸಕಾಯ ಮಾಡದ್ರೆ, ಆ ಕವಿಗೆ ಸಕಾಯ ಮಾಡುವ ದಾನಿಗೊ ಲೋಕಲ್ಲಿ ಆರೂದೆ ಇಲ್ಲೆ ಹೇಳಿ ಅಕ್ಕೋ?

ಮದನಂ ದೇಹ ನೀಗಿದಂ ನೃಪವರಂ ಚಂಡಾಲಗಾಳಾದ ಪೋ |
ದುದು ಬೊಮ್ಮಂಗೆ ಶಿರಸ್ಸು ಭಾರ್ಗವನು ಕಣ್ಗಾಣಂ ನಳಂ ವಾಜಿಪಂ ||
ಸುಧೆಯಂ ಕೊಟ್ಟು ಸುರೇಂದ್ರ ಸೋಲ್ತ ಸತಿಯಂ ಪೋಗಾಡಿದಂ ರಾಘವಂ |
ವಿಧಿಯಂ ಮೀರುವನಾವನೈ ಹರಾ ಶ್ರೀ ಚೆನ್ನ ಸೋಮೇಶ್ವರಾ ||೨೫||

ಮನ್ಮಥ ತನ್ನ ದೇಹವನ್ನೇ ಕಳಕ್ಕೊಂಡು ಅನಂಗ ಎನಿಸಿಗೊಂಡ, ರಾಜ ಶ್ರೇಷ್ಠನಾದ ಹರಿಶ್ಚಂದ್ರ ಆದರೋ ಸ್ಮಶಾನ ಕಾಯುವ ಚಂಡಾಲನ ಕೈ ಕೆಳ ಕೆಲಸ ಮಾಡುವನಾದ, ಬ್ರಹ್ಮಂಗೆ ಒಂದು ತಲೆಯೇ ಹೋತು, ಶುಕ್ರಾಚಾರ್ಯಂಗೆ ಒಂದು ಕಣ್ಣೇ ಹೋತು, ನಳ ಮಹಾರಾಜ ಕುದುರೆಯ ಲಾಯ ಕಾಯುವವನಾದ, ಇಂದ್ರ ಅಮೃತವ ಕಳಕ್ಕೊಂಡು ಯುದ್ಧಲ್ಲಿ ಸೋಲೆಕ್ಕಾಗಿ ಬಂತು, ಶ್ರೀ ರಾಮ ತನ್ನ ಹೆಂಡತಿಯ ಕಳಕ್ಕೊಳೆಕ್ಕಾಗಿ ಬಂತು. ಎಷ್ಟೆಷ್ಟೋ ದೊಡ್ಡ ಮನುಷ್ಯರಿಂಗೆ ಹೀಂಗಿಪ್ಪ ಗತಿ ಬರೆಕಾದೆ ಇದರ ವಿಧಿ ಹೇಳಿಯೇ ಹೇಳೆಕ್ಕಷ್ಟೆ. ವಿಧಿ ನಿಯಮವ ಮೀರಲೆ ಸಮರ್ಥರಾದವು ಆರೂ ಇಲ್ಲೆ.

~~~***~~~

ಶರ್ಮಪ್ಪಚ್ಚಿ

   

You may also like...

9 Responses

 1. ಚೆನ್ನೈ ಭಾವ° says:

  ಸೋಮೇಶ್ವರ ಶತಕ ಹೇಳ್ವದು ನಿಜವಾಗಿ ಒಂದು ವಿಶಿಷ್ಟ ರಚನೆ. ಅನುಭವಿಸಿ ಓದಲೆ ತುಂಬ ಕೊಶಿ ಆವ್ತು.
  ಅದರ ಚೆಂದಕ್ಕೆ ಹವಿಗನ್ನಡಲ್ಲಿ ವಿವರಿಸಿ ಧ್ವನಿಸಹಿತ ನೀಡುವ ಅಪ್ಪಚ್ಚಿಯ ಆಸಕ್ತಿ, ಶ್ರಮಕ್ಕೆ – ‘ಹರೇ ರಾಮ’. ಶ್ರೀಶಣ್ಣನ ಈ ಸರ್ತಿಯಾಣ ವಾಚನವೂ ಲಾಯಕ ಆಯ್ದು ಅಪ್ಪಚ್ಚಿ.

 2. jayashree.neeramoole says:

  ಸೋಮೇಶ್ವರ ಶತಕವ ಸವಿವಲೆ ಅವಕಾಶ ಮಾಡಿಕೊಟ್ಟ ಶರ್ಮಪ್ಪಚ್ಚಿಗೆ ಹಾಂಗೂ ಶ್ರೀಶಣ್ಣ೦ಗೆ ನಮೋ ನಮ:

 3. ಕೊರೆಂಗು ಭಾವ° says:

  ಸೋಮೇಶ್ವರ ಶತಕವ ಬರದವ° ಸೋಮೇಶ್ವರ ಕವಿ. ನಡುಗನ್ನಡವೂ ಅಲ್ಲದ್ದ ಹಳೆಗನ್ನಡವೂ ಅಲ್ಲದ್ದ ಶೈಲಿ ಇವನದ್ದು. ಸಂಸ್ಕೃತದ ಸುಭಾಷಿತಂಗಳ ಅನುವಾದ ಮಾಡಿ ಅವ° ಕನ್ನಡಲ್ಲಿ ಬರದ° ಹೇಳಿ ತಿಳುದವು ಹೇಳ್ತವು. ಅಪ್ಪಚ್ಚಿ ಸೋಮೇಶ್ವರ ಶತಕವ ಸಂಗ್ರಹ ಮಾಡಿ ಕೊಟ್ಟವು. ಅದರ ಅನುಭವಿಸಿಯೇ ಓದೆಕ್ಕು ಹೇಳಿ ಹೇಳಿದವು ಚೆನ್ನೈ ಭಾವ°. ನಿಂಗಳುದೆ ಓದಿ ಹೇಳಿ ಹೇಳಿದವ° ಕೊರೆಂಗು ಭಾವ°.

 4. ಲಾಯ್ಕಾಯಿದು ಅಪ್ಪಚ್ಚೀ ಃ)

 5. ಗೋಪಾಲ ಬೊಳುಂಬು says:

  ಸೋಮೇಶ್ವರ ಶತಕಲ್ಲಿಪ್ಪ ಉತ್ತಮ ಸಂದೇಶವ ನಮ್ಮ ಭಾಷೆಲಿ ಉಣ ಬಡುಸಿದ ಶರ್ಮಪ್ಪಚ್ಚಿಗೆ, ಒಟ್ಟಿಂಗೆ ಚೆಂದಕೆ ದನಿಗೂಡುಸಿ ಮತ್ತಷ್ಟು ಅನುಭವಿಸುವ ಹಾಂಗೆ ಮಾಡಿದ ಶ್ರೀಶಣ್ಣಂಗೆ ವಂದನೆಗೊ. ಶತಕದ ಕೆಲವು ವಿಷಯಂಗಳನ್ನು ಈಗಾಣ ಜೆನಂಗೊ ಜೀವನಲ್ಲಿ ಅಳವಡಿಸೆಂಡರೆ, ನಮ್ಮದು ರಾಮ ರಾಜ್ಯ ಖಂಡಿತಾ ಅಕ್ಕು.

 6. ಬಾಲಣ್ಣ (ಬಾಲಮಧುರಕಾನನ) says:

  ಬರದವಕ್ಕೆ , ಕೇಳುಸಿದವಕ್ಕೆ ಅಭಿನಂದನೆಗೊ.

 7. ಕೊರೆಂಗು ಭಾವ° says:

  ಕವಿಯ ಬಗ್ಗೆ ಅಪ್ಪಚ್ಚಿ ಮದಲೇ ಬರದ್ದರ ನೋಡದ್ದಿಲ್ಲೆ.

 8. ಶರ್ಮಪಚ್ಚಿ says:

  ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಎಲ್ಲರಿಂಗೂ, ಧನ್ಯವಾದಂಗೊ.

 9. Shivanand Dixit says:

  Tumba chennaagide

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *