ಪರಿಶುದ್ಧ ತೆಂಗಿನೆಣ್ಣೆ

ಕಳುದ ಅದಿತ್ಯವಾರ ಶ್ರೀಶ° ಫೋನ್ ಮಾಡಿದ°.
“ಊರಿಂಗೆ ಹೋವ್ತಾ ಇದ್ದೆ, ಒಂದರಿ ಅಜ್ಜಿಯ ಮಾತಾಡಿಸಿಕ್ಕಿ ಬರೆಕು. ಇಲ್ಲಿ ಡ್ಯೂಟಿ, ಓಟಿ ಹೇಳಿ ಹೋಪಲೇ ಪುರುಸೊತ್ತು ಆಯಿದಿಲ್ಲೆ. ಬತ್ತೆಯಾ?” ಕೇಳಿದ°.
ನಿಂಗೊ ಹೊಸ ದಂಪತಿಗೊ ಹೋಪಗ ಆನು ಎಂತಗೆ ಎಡೆಕ್ಕಿಲಿ! ಕೇಳಿದೆ.
ಅಜ್ಜನ ಮನೆ ಸಮ್ಮಾನ ಎಲ್ಲಾ ಅಂದೇ ಕಳುದ್ದು. ಅಜ್ಜಿಯ ಮಾತಾಡ್ಸಿಕ್ಕಿ ಬಪ್ಪಲೆ ಹೋಪದು. ನಿನ್ನನ್ನೂ ಕಾಣೆಕ್ಕು ಹೇಳಿ ಅಜ್ಜಿ ಬೇರೆ ಹೇಳಿ ಕಳ್ಸಿದ್ದವು. ಒಟ್ಟಿಂಗೆ ಹೋಪನಾ ಕೇಳಿದ°.
ಮನೆ ಯೆಜಮಾನ್ತಿ ಮಗಳ ಮನೆಗೆ ಹೋಯಿದು.
ಇಲ್ಲಿ ಒಬ್ಬನೇ ಕೂದು ಮಾಡ್ತೆಂತರ. ಬೈಲಿಲ್ಲಿ ರೆಜಾ ತಿರುಗಿ, ನೆಂಟ್ರುಗಳ  ಮಾತಾಡ್ಸುವೊ° ಹೇಳಿರೆ, ಇಂಟರ್ನೆಟ್ ಕನ್ನೆಕ್ಟ್ ಬೇರೆ ಆವ್ತಿಲ್ಲೆ. ಆತು ಹೇಳಿ ಒಪ್ಪಿಗೆ ಕೊಟ್ಟೆ.

‌‌‌‌‌‌===

ಕಾರಿಂದ ಇಳುದು ಬಾಗಿಲು ಹಾಕುತ್ತ ಶಬ್ದ ಕೇಳಿ ಅಜ್ಜಿ ಹೆರಾಂಗೆ ಬಂದವು. ದಂಪತಿ ಸಮೇತ ಪುಳ್ಳಿ, ಒಟ್ಟಿಂಗೆ ಶ್ರೀಶನ ತಂಗೆ ಪ್ರಿಯಾ, ಮತ್ತೆ ಆನು, ಅಜ್ಜಿಗೆ ಕೊಶೀ ಆತು.
ಕೈ ಕಾಲು ತೊಳಕ್ಕೊಂಡು ಒಳ ಬನ್ನಿ ಹೇಳಿ, ಆಸರಿಂಗೆ ಲಾವಂಚ ಹಾಕಿದ ಪರಿಮಳದ ನೀರು, ಮಸಾಲೆ ಬೆಲ್ಲ ತಂದು ಮಡುಗಿದವು.
“ಅಲ್ಲ ಶ್ರೀಶ°, ಎಷ್ಟು ಸರ್ತಿ ಆತು; ಒಂದರಿ ಬಂದು ಮೋರೆ ತೋರ್ಸಿಕ್ಕಿ ಹೋಗು ಹೇಳಿ ಆನು ಹೇಳುವದು. ಮದುವೆ ಆದ ಮತ್ತೆ ಪುರುಸೊತ್ತೇ ಸಿಕ್ತಿಲ್ಲೆ ಆಯಿಕ್ಕು”
ಆಕ್ಷೇಪದೊಟ್ಟಿಂಗೆ ಪ್ರೀತಿಯೂ ಸೇರಿಸಿ ಕೊಂಗಾಟಲ್ಲಿ ಬೈದವು. ಇವಂಗೂ ಹೀಂಗೆ ಹೇಳ್ಸಿಗೊಂಬದು ಕೊಶೀಯೇ ಹೇಳಿ ಕಂಡತ್ತು. ಎನ್ನನ್ನೂ ವಿಚಾರಿಸಿದವು.

ಬಂದದು ಸಂತೋಷ ಆತು ಹೇಳಿದ್ದು ಬರೇ ಬಾಯಿ ಮಾತು ಮಾತ್ರ ಅಲ್ಲ, ಆ ಕೊಶಿ ಮೋರೆಲಿಯೂ ಕಂಡತ್ತು.
ಇದರೆಡೆಕ್ಕಿಲಿ, ಪ್ರಿಯಾ, ಅಜ್ಜಿಯ ಅಡಿಗೆ ಕೋಣೆಗೆ ನುಗ್ಗಿತ್ತು. ಅಜ್ಜಿ ಮನೆ ಅಲ್ಲದಾ. ಯಾವ ಡಬ್ಬಿಲಿ ಎಂತ ಇಪ್ಪದು ಎಲ್ಲಾ ಅದಕ್ಕೆ ಗೊಂತಿದ್ದು.
ಚಕ್ಕುಲಿ, ಉಂಡ್ಳಕಾಳು ತಂದು ಎಂಗಳ ಎದುರು ಮಡುಗಿತ್ತು. ಕೈಗೂ ಬಾಯಿಗೂ ಕೆಲಸ ಕೊಟ್ಟತ್ತು. ಅಜ್ಜಿ ಚಾಯ ತಂದವು.

ಎಂಗೊ ಬಪ್ಪದು ಗೊಂತಿದ್ದ ಕಾರಣ ಅಜ್ಜಿ ಅಡಿಗೆ ಎಲ್ಲಾ ಬೇಗ ಮುಗುಶಿತ್ತಿದ್ದವಡ. ಇಲ್ಲದ್ದರೆ ಪಟ್ಟಾಂಗ ಹೊಡವಲೆ ಸಮಯ ಸಿಕ್ಕುತ್ತಿಲ್ಲೆ ಹೇಳಿ ಅಜ್ಜಿದೊಂದು ಯೋಚನೆ.
ಶ್ರೀಶನತ್ರೆ, ಬಾಡಿಗೆ ಮನೆ ಸೌಕರ್ಯ, ನೆರೆಕರೆ ಜೆನಂಗೊ, ಫೇಕ್ಟರಿ ಕೆಲಸ, ಎಲ್ಲಾ ವಿಚಾರಿಸಿಗೊಂಡವು.
ಮಗಳು ಸದ್ಯ ಬಯಿಂದಾ, ಎಂತಾರೂ ವಿಶೇಷ ಇದ್ದಾ ಹೇಳಿ ಎನ್ನತ್ರೂದೆ ವಿಚಾರಿಸಿಗೊಂಡವು.

~~~

ಒಂದೊಂದೇ ಮಾತಾಡಿ ಅಪ್ಪಗ, ತೋಟಂದ ಅಜ್ಜ° ಬಂದವು. ಪುಳ್ಳಿಯಕ್ಕಳ ನೋಡಿ ಕೊಶೀ ಆತು.
ಕೈಲಿ ಇಪ್ಪ ಕೊಡಿ ಬಾಳೆಯ ಕಟ್ಟವ ಅಜ್ಜಿ ಹತ್ರೆ ಕೊಟ್ಟು, ಉಂಬಲೆ ಬಾಳೆ ಮಡುಗು ಹೇಳಿಕ್ಕಿ ಕೈ ಕಾಲು ತೊಳಕ್ಕೊಂಡು ಬಂದವು.
ಅಜ್ಜಿಯೂ ಪುಳ್ಳಿಯೂ ಸೇರಿ ಮಣೆ ಮಡುಗಿ, ಬಾಳೆಯ ತೊಳದು, ಗ್ಲಾಸಿಲ್ಲಿ ನೀರು ಮಡುಗಿದವು. ತಾನೇ ಕೈಯ್ಯಾರೆ ಬಳುಸದ್ದರೆ ಅಜ್ಜಿಗೆ ಹಿತ ಆವ್ತಿಲ್ಲೆ. ನಿಂಗೊ ಎಲ್ಲರೂ ಕೂರಿ, ಆನು ಮತ್ತೆ ಉಂಬೆ ಹೇಳಿದವು. ಆನು ಅಜ್ಜಿ ಒಟ್ಟಿಂಗೆ ಕೂಬದು ಹೇಳಿ ಬಳುಸಲೆ ಸೇರಿತ್ತು ಪ್ರಿಯಾ .

ಮನೆಲಿ ಅಪ್ಪನೊಟ್ಟಿಂಗೆ ಉಂಬಲೆ ಕೂದರೆ, ಅಬ್ಬೆಯೊಟ್ಟಿಂಗೆ ಏಳುವದು ನೀನು. ಇಲ್ಲಿ ಅಜ್ಜಿಯೊಟ್ಟಿಂಗೆ ಕೂದರೆ ಆರೊಟ್ಟಿಂಗೆ ಏಳುವದು? ಶ್ರೀಶ° ತಂಗೆಯ ಕಾಲು ಎಳದ°.
ಸುಮ್ಮನೆ ಕೂರ°, ತಳೀಯದ್ದೆ ಉಣ್ಣು ನೋಡ°. ಹೇಳಿತ್ತು ಸಲಿಗೆಂದ. ಅದೂದೆ ಬಿಟ್ಟು ಕೊಟ್ಟಿದಿಲ್ಲೆ.
ಲಾಯಿಕಲ್ಲಿ ತೆಂಗಿನೆಣ್ಣೆ, ಕಾಯಿ ಸುಳಿ ಹಾಕಿ ಒಗ್ಗರಿಸಿದ ಗುಜ್ಜೆ ತಾಳು, ಎಣ್ಣೆಲಿ ಹೊರುದ ಹಲಸಿನ ಹಪ್ಪಳ, ಬೆಂಡೆಕಾಯಿ ಸಾಂಬಾರು, ಅಳತ್ತಂಡೆ ಮೇಲಾರ, ಬೆಲ್ಲ ಮಾತ್ರ ಹಾಕಿ ಮಾಡಿದ ಹಸರ ಸೀವು (ಪಾಯಸ ಅಲ್ಲ- ಸೀ….ವು), ಕಾಯಿ ಬರ್ಫಿ, ಊರ ದನದ ಹಾಲಿನ ಗಟ್ಟಿ ಮೊಸರು. ಅಪ್ಪೆಮೆಡಿ ಉಪ್ಪಿನಕಾಯಿ, ಭರ್ಜರಿ ಸಮ್ಮಾನ.

ಈ ನಮ್ಮ ಶ್ರೀಶ° ಇದ್ದ ಅಲ್ಲದಾ, ಎಲ್ಲದಕ್ಕೂ ಬೇಡ ಹೇಳಿ ತಲೆ ಆಡಿಸಿಂಡು ಕೊಡಿ ಕೊಡಿ ತಿಂಬಲೆ ಸುರು ಮಾಡಿದ°.
‘ಎಂತ ಹಶು ಇಲ್ಲೆಯಾ? ಅಜ್ಜಿ ಬಂಙ ಬಂದು ಇಷ್ಟು ಲಾಯಿಕಲ್ಲಿ ಅಡಿಗೆ ಮಾಡಿ ಕೈಯ್ಯಾರೆ ಬಳುಸಿರೆ, ನೀನು ಒಳ್ಳೆ ಪಥ್ಯದವರ ಹಾಂಗೆ ಮಾಡ್ತಾ ಇದ್ದೆ ಅಲ್ಲದ?’ – ಹತ್ರೆ ಕೂದ ಆನು ಆಕ್ಷೇಪ ಸ್ವರಲ್ಲಿಯೇ ಕೇಳಿದೆ.
ಅಜ್ಜಿಗೂ ಗೊಂತಾತು. ಮಾಣಿ ಯೇವತ್ರಾಣ ಹಾಂಗೆ ಇಲ್ಲೆ ಹೇಳಿ.

“ಜೋರು ಊದಿರೆ ಗಾಳಿಗೆ ಹಾರುತ್ತ ಹಾಂಗೆ ಇದ್ದೆ. ಸರೀ ಉಂಡು ತಿಂದು ಮಾಡು. ಅಂತೇ ಕೊರಂಙಿನ ಹಾಂಗೆ ಆಗೆಡ” – ಅಜ್ಜಿ ಪ್ರೀತಿಂದ ಗದರಿಸಿದವು.
“ಹಾಂಗಲ್ಲ ಅಜ್ಜಿ, ತೆಂಗಿನ ಕಾಯಿ, ತೆಂಗಿನೆಣ್ಣೆ ಹಾಕಿದ್ದರ ತಿಂಬದು ಒಳ್ಳೆದಲ್ಲಡ. ಅದಲ್ಲಿ ಕೊಲೆಸ್ಟ್ರಾಲ್ ಇದ್ದಡ. ಹಾಂಗೆ ಕಾಯಿ ಹಾಕಿದ್ದರ ಎಲ್ಲ ಕಮ್ಮಿ ಮಾಡುವದು ಆನು” ಹೇಳಿದ° ಈ ನಮ್ಮ ಮಾಣಿ.
ಪೇಟೆಲಿ ಹೋದ ಕೂಡ್ಲೆ ಇದೆಲ್ಲಾ ನಿನಗೆ ಆರು ಕಲುಶಿದವು? ತೆಂಗಿನೆಣ್ಣೆ ತೆಂಗಿನ ಕಾಯಿ ಹಾಕಿದ್ದರ ಇಷ್ಟು ವರ್ಷಂದ ಎಂಗೊ ತಿಂತಾ ಇಲ್ಲೆಯಾ. ಗುಂಡು ಕಲ್ಲಿನ ಹಾಂಗೆ ಗಟ್ಟಿ ಮುಟ್ಟು ಇಲ್ಲೆಯಾ. ಅಜ್ಜಿ ಪುನಃ ಹೇಳಿದವು.
ನೋಡು ಅಜ್ಜಿಗೆ ಅಂತೇ ಬೇಜಾರು ಮಾಡ್ಸೆಡ. ಈಗ ಸರಿ ಉಣ್ಣು. ತೆಂಗಿನ ಎಣ್ಣೆ, ಕಾಯಿಯ ಬಗ್ಗೆ ಮತ್ತೆ ನಾವು ಮಾತಾಡುವೊ°.
ಒಂದು ದಿನ ತಿಂದರಿಂದಾಗಿ ಎಂತೂ ಆಗ ಹೇಳಿ ಅವನ ಒಪ್ಸಿದೆ.

ಉಂಡಿಕ್ಕಿ ಅದು ಇದು ಮಾತಾಡಿ ಹೆರಡುವಾಗ ಅಜ್ಜ° ನೇಂದ್ರ ಬಾಳೆ ಕಾಯಿಯ ಎರಡು ಪಾಡ ಕೊಟ್ಟು, ಇದರ ತೆಂಗಿನೆಣ್ಣೆಲಿ ಹೊರುದು ಲಾಯಿಕಕೆ ಚಿಪ್ಸ್ ಮಾಡಿ ತಿನ್ನಿ ಮಕ್ಕಳೇ ಹೇಳಿರೆ, ಅಜ್ಜಿ ಎರಡು ಕಟ್ಟ ಹಲಸಿನ ಹಪ್ಪಳವ ಶ್ರೀಶನ ಹೆಂಡ್ತಿ ಸುಮನ ಹತ್ರೆ ಕೊಟ್ಟು, ತೆಂಗಿನೆಣ್ಣೆಲಿ ಹೊರುದು, ಕಾಯಿ ಹೋಳು ಸೇರಿಸಿ ಎಡೆ ಹೊತ್ತಿಂಗೆ ತಿಂಬಲಕ್ಕು ಹೇಳಿ ಬೀಳ್ಕೊಟ್ಟವು.
ಪುರುಸೊತ್ತು ಮಾಡಿ ಎಂಗಳಲ್ಲಿಗೆ ಬನ್ನಿ ಹೇಳಿ ಸುಮನೂ ಪ್ರಿಯಾನೂ ಅಜ್ಜಿಯ ಹತ್ರೆ ಹೇಳ್ಳೆ ಮರದ್ದಿವಿಲ್ಲೆ.

~**~

ಮೊನ್ನೆ ಹೊತ್ತೋಪಗ ಮಳೆ ಜೋರು ಬಂದೊಂಡು ಇತ್ತಿದ್ದು. ಹೊರುದ ಹಲಸಿನ ಹಪ್ಪಳಕ್ಕೆ ಕಾಯಿ ಹೋಳು ಸೇರಿಸಿಂಡು, ಬೆಶಿ ಬೆಶಿ ಚಾಯ ಕುಡ್ಕೊಂಡು ಇತ್ತಿದ್ದೆ.
ಶ್ರೀಶ° ಒಳ ಬಂದು ಕೂದವನೇ, ಆಕ್ಷೇಪ ಮಾಡಿದ.
“ಅಲ್ಲ ಅಪ್ಪಚ್ಚಿ, ನೀನು ಹೀಂಗೊಂದು ತೆಂಗಿನಕಾಯಿ, ಎಣ್ಣೆ ತಿಂದರೆ ಹೇಂಗೆ? ಕೊಲೆಸ್ಟ್ರೋಲ್ ಜಾಸ್ತಿ ಆಗಿ ತೊಂದರೆ ಅಕ್ಕನ್ನೆ. ನಿನಗೆ ನೋಡಿರೆ ಆ ತೆಂಗಿನ ಕಾಯಿ, ತೆಂಗಿನೆಣ್ಣೆ ಅದುವೇ ಆಯೆಕ್ಕು. ಎಣ್ಣೆ ಅದರೂ ಬದಲ್ಸಲೆ ಆಗದಾ?”
“ಇಲ್ಲೆ ಶ್ರೀಶಾ. ಆನು ತೆಂಗಿನೆಣ್ಣೆ ಅಲ್ಲದ್ದೆ ಬೇರೆ ಎಂತದೂ ಉಪಯೋಗಿಸೆ. ಕಲ್ಪವೃಕ್ಷಂದಲೇ ಸಿಕ್ಕುತ್ತ ಈ ಎಣ್ಣೆಂದ ಒಳ್ಳೆ ಎಣ್ಣೆ ಯಾವದು ಇದ್ದು? ನೀನೇ ಹೇಳು.”
“ಇದಾ, ವಾರ ಪತ್ರಿಕೆಲಿ ನೋಡು. ಸನ್ ಪ್ಲವರ್ ಎಣ್ಣೆ ಒಳ್ಳೆದು ಹೇಳ್ತವು ಬೇರೆ ಬೇರೆ ಕಂಪೆನಿಯವು ಅವರವರ ಬ್ರಾಂಡ್ ಹೆಸರಿಲ್ಲಿ, ಈ ಎಣ್ಣೆಯೇ ಒಳ್ಳೆದು ಹೇಳಿ ಡಾಕ್ಟ್ರಕ್ಕಳೂ ಹೇಳುತ್ತವು” ಅವನ ಹೇಳಿಕೆಯ ಸಮರ್ಥಿಸಿಗೊಂಡ°.

ಸನ್ ಫ್ಲವರ್ ಎಣ್ಣೆ, ಸೋಯಾ ಎಣ್ಣೆ, ಹತ್ತಿ ಬೀಜದ ಎಣ್ಣೆ, ಕಡ್ಲೆ ಎಣ್ಣೆ……..
ಪಟ್ಟಿ ಉದ್ದ ಬೆಳವಲೆ ಸುರು ಆತು. ಅವನ ಓಟಕ್ಕೆ ಅಡ್ಡ ಕಾಲು ಹಾಕಿದೆ.

ಎನಗೆ ಗೊಂತಿದ್ದು, ಇವನ ತಲೆಗೆ ಹುಳ ಹೊಕ್ಕರೆ ಅದರ ತೆಗೆಯದ್ದೆ ಸುಮ್ಮನೆ ಕೂರ° ಹೇಳಿ.
ಇನ್ನು ರೆಜ  ತಯಾರಿ ಮಾಡದ್ರೆ ಆಗ. ಇನ್ನಾಣ ಸರ್ತಿ ಇವ ಬಪ್ಪನ್ನ ಮದಲೇ ರೆಜ ಮಾಹಿತಿ ಸಂಗ್ರಹ ಮಾಡೆಕ್ಕು. ಇಲ್ಲದ್ರೆ ಎನ್ನ ತಲೆ ತಿಂಗು ಇವ° ಹೇಳಿ ಅಂಬಗಳೇ ನಿಶ್ಚಯ ಮಾಡಿದೆ.

~~**~~

– ದೇವಸ್ಥಾನಲ್ಲಿ ಯಾವ ಹೊತ್ತಿಂಗಾದರೂ ಮಾಡುತ್ತ ನೈವೇದ್ಯ ಹೇಳಿರೆ ಹಣ್ಣು ಕಾಯಿ.
– ಅಸೌಖ್ಯ ಆಗಿಪ್ಪಗ ಸುಸ್ಥಿತಿಗೆ ಬಪ್ಪಲೆ ಬೊಂಡಕ್ಕಿಂತ ಒಳ್ಳೆ ಟಾನಿಕ್ ಇಲ್ಲೆ ಹೇಳಿಯೇ ಹೇಳ್ಲಕ್ಕು. ಡಾಕ್ಟ್ರಕ್ಕಳೂ ಶಿಫಾರಸು ಮಾಡುವದು ಬೊಂಡ ಕುಡಿವಲೇ.
– ಪೇಟೆಲಿ ಎಂತನ್ನೂ ತೆಕ್ಕೊಳ್ಳದ್ದ ಭಟ್ಟಮಾವಂಗೂ ಬೊಂಡ – ಬಾಳೆಹಣ್ಣು ವರ್ಜ್ಯ ಅಲ್ಲ.
– ಶ್ರೀ ಗುರುಗಳ ಭೇಟಿ ಸಮಯಲ್ಲಿ ಫಲ ಸಮರ್ಪಣೆಲಿ ಆದ್ಯತೆ ಇಪ್ಪದು ತೆಂಗಿನಕಾಯಿಗೆಯೇ.
ಹೀಂಗಿಪ್ಪ ಫಲಂದ ಸಿಕ್ಕುವ ಎಣ್ಣೆಗೆ ಎಂತಕೆ ಕಳಂಕ ತಟ್ಟಿತ್ತು?

ಸೀತಾ ಮಾತೆಗೆ ಒಂದರಿ ಕಳಂಕ ತಟ್ಟಿದ ಕತೆ ನವಗೆ ಗೊಂತಿದ್ದು. ಮತ್ತೆ ಅಗ್ನಿ ಪರೀಕ್ಷೆಲಿ ಗೆದ್ದು ಬಂದದೂ ಗೊಂತಿದ್ದು.

ಇದೇ ಕತೆ ತೆಂಗಿನೆಣ್ಣೆಗೆ ಒದಗಿ ಬಂತು ಒಂದು ಸರ್ತಿ.
ಶುದ್ಧತೆ ಇಪ್ಪದಕ್ಕೆ ಕಳಂಕ ತಪ್ಪದು ಸುಲಾಭ. ಬೆಳಿ ವಸ್ತ್ರಲ್ಲಿ ಸಣ್ಣ ಚುಕ್ಕೆ ಕಂಡರೂ ಕಲೆಯೇ. ಬಣ್ಣ ಬಣ್ಣದ ವಸ್ತ್ರ ಆದ್ರೆ ಅದು ಕಾಂಗೋ?
ಇಲ್ಲಿ ಉದ್ದೇಶ ಮಾತ್ರ ಬೇರೆ. ಬಣ್ಣ ಬಣ್ಣದ ಎಣ್ಣೆಯ ಮಾರ್ಕೆಟ್ ಮಾಡ್ಲೆ ಒಂದು ತಂತ್ರ ಹೂಡಿದವು. ಎಲ್ಲಾ ಕಂಪೆನಿಯವೂ ಸೇರಿದವು.
ಸಂಶೋಧನೆ ಮಾಡ್ಲೆ ಹೇಳಿ ಒಂದಷ್ಟು ಪೈಸೆ ಸೊರುಗಿದವು. ಪೈಸೆಗೆ ಬಾಯಿ ಬಿಡದ್ದವು ಆರು?
ಬೇಕಾದವರ ಹತ್ರೆ ಸಂಶೋಧನೆ ಮಾಡಿಸಿದವು. ಬೇಕಾದ ಹಾಂಗೆ ವರದಿಯೂ ಬರೆಶಿದವು. ಒಂದು ಭೂತವ ಜೆನಂಗೊಕ್ಕೆ ತಂದು ಬಿಟ್ಟವು.

ಅದುವೇ “ಕೊಲೆಸ್ಟ್ರೋಲ್”.

ತೆಂಗಿನೆಣ್ಣೆಲಿ ಕೊಲೆಸ್ಟ್ರೋಲ್ ಇದ್ದು ಹೇಳಿ ಪ್ರಚಾರ ಕೊಟ್ಟವು. ಇದರಷ್ಟು ಹಾಳು ಎಣ್ಣೆ ಬೇರೆ ಯಾವದೂ ಇಲ್ಲೆ. ಇದರ ಉಪಯೋಗಿಸಿರೆ ಹೃದಯದ ಕಾಯಿಲೆ ಗ್ಯಾರಂಟಿ.
ತೆಂಗಿನೆಣ್ಣೆ, ತೆಂಗಿನ ಕಾಯಿ ಉಪಯೋಗ ಮಾಡ್ಲೇ ಆಗ. ಅದರಲ್ಲೂ ಹಾರ್ಟಿನ ತೊಂದರೆ ಇಪ್ಪವು ಇದರ ಮುಟ್ಟಲೆ ಕೂಡಾ ಆಗ ಹೇಳಿ ತಲೆಯೊಳಾಂಗೆ ಇನ್ನೊಂದು  ಭೂತವ ಹೊಕ್ಕುಸಿದವು.
ಪೇಪರ್ ಗಳಲ್ಲಿ ಅಡ್ವರ್ಟೈಸ್ಮೆಂಟ್ ಕೊಟ್ಟವು. ಎಂಗಳ ಎಣ್ಣೆ ಉಪಯೋಗಿಸಿರೆ, ಹಾರ್ಟಿನ ತೊಂದರೆ ಬತ್ತಿಲ್ಲೆ. ನಿಂಗೊಗೆ ಡಾಕ್ಟ್ರಕ್ಕಳ ಹತ್ತರೆ ಹೋಯೆಕ್ಕು ಹೇಳಿಯೇ ಇಲ್ಲೆ.
ಎಂಗಳ ಎಣ್ಣೆಯೇ ನಿಂಗಳ ಮನೆ ಡಾಕ್ಟ್ರು ಹೇಳಿ ಪ್ರಚಾರ ಕೊಟ್ಟವು. ಕೆಲವು ಡಾಕ್ಟ್ರಕ್ಕಳೂ ಅದನ್ನೇ ಹೇಳಿದವು.
ಅಡ್ವರ್ಟೈಸ್ಮೆಂಟ್ ಅದರ ಕೆಲಸ ಮಾಡಿತ್ತು. ಸತ್ಯದ ತಲೆ ಮೇಗಂಗೆ ಸರಿಯಾಗಿ ಹೆಟ್ಟಿತ್ತು. ಆನು ಹೇಳಿದ್ದೇ ಸತ್ಯ ಹೇಳಿ ಮತ್ತೆ ಮತ್ತೆ ಹೇಳಿತ್ತು.

ಸಾವಿರ ಸರ್ತಿ ಒಂದು ಲೊಟ್ಟೆ ಹೇಳಿರೆ ಅದುವೇ ನಿಜ ಹೇಳಿ ಕಾಂಬದಲ್ಲದಾ. ಜೆನಂಗೊ ನಂಬಿದವು. ಬಣ್ಣ ಬಣ್ಣದ ಎಣ್ಣೆಯ ವ್ಯಾಪಾರ ಅಭಿವೃದ್ಧಿ ಆತು.
ಅಂಬಗ ನಿಜ ಸಂಗತಿ ಇದುವೆಯೋ ಹೇಳಿ ತಿಳಿತ್ತ ಕುತೂಹಲ ಕೆಲವು ವಿಜ್ಞಾನಿಗೊಕ್ಕೆ ಸುರು ಆತು.
ತೆಂಗಿನ ಸಂಶೋಧನೆ ಕೇಂದ್ರಲ್ಲಿ ಇದರ ಬಗ್ಗೆ ಸಂಶೋಧನೆ ಮಾಡಿದವು.
ಅವು ಹೇಳಿದವು, ಯಾವುದೇ ಸಸ್ಯಜನ್ಯ ಎಣ್ಣೆಲಿ ಕೊಲೆಸ್ಟ್ರೋಲೆ ಇಲ್ಲೆ, ಅದು ಪ್ರಾಣಿಗಳ ಶರೀರಲ್ಲಿ ಉತ್ಪತ್ತಿ ಅಪ್ಪ ಒಂದು ಅಂಶ ಹೇಳಿ.
ನಾವೂದೆ ಇದರ ಬಗ್ಗೆ ರೆಜ ತಿಳಿವೊ. ಈ ಕಲ್ಪ ವೃಕ್ಷದ ಎಣ್ಣೆ ಪರಿಶುದ್ಧ ಅಪ್ಪೋ ಅಲ್ಲದೋ ಹೇಳಿ ತಿಳ್ಕೊಂಬ ಒಂದು ಪ್ರಯತ್ನ  ಇಂದ್ರಾಣ ಈ ಲೇಖನ.

ಇದರ ಬಗ್ಗೆ ತಿಳಿವ ಮೊದಲು ಇದರಲ್ಲಿ ಬಪ್ಪ ಕೆಲವು ವೈಜ್ಞಾನಿಕ ಶಬ್ದಂಗಳ ಪರಿಚಯ ಮಾಡಿಗೊಂಬ° ಆಗದೋ?

 • ಕೊಲೆಸ್ಟ್ರೋಲ್ (Cholsterol):
  ಇದು ಲಿವರ್ ಮತ್ತೆ ಕರುಳಿಲ್ಲಿ ಉತ್ಪತ್ತಿ ಅಪ್ಪ ಒಂದು ಜಿಡ್ಡು ಪದಾರ್ಥ.
  ಸಸ್ಯಜನ್ಯ ಅಲ್ಲ.
  ಪ್ರಾಣಿಗಳ ಕೊಬ್ಬಿಲ್ಲಿ (Fat)  ಇದು ಜಾಸ್ತಿ ಇರ್ತು.
  ಸಸ್ತನಿಗಳಲ್ಲಿ ಇದು ಜೀವ ಕೋಶದ ಭಿತ್ತಿ (cell membrane)ಯ ಒಂದು ಅಂಶವಾಗಿಯೇ ಇದ್ದುಗೊಂಡು, ಜೀವ ಕೋಶ ಸರಿಯಾಗಿ ಕೆಲಸ ಮಾಡ್ಲೆ ಸಹಕಾರ ಮಾಡುತ್ತು.
  ಬೈಲ್ ರಸ, ಹಾರ್ಮೋನ್ (ಅಡ್ರಿನಾಲ್ ಗ್ರಂಥಿ ಹಾರ್ಮೋನ್. ಪ್ರೊಜೆಸ್ಟೆರೋನ್, ಈಸ್ಟ್ರೋಜೆನ್, ಟೆಸ್ಟೋಸ್ಟೆರೋನ್) ಮತ್ತೆ ವಿಟಮಿನ್ “ಡಿ” ತಯಾರು ಮಾಡ್ಲೆ ಕೊಲೆಸ್ಟ್ರೋಲ್ ಅಗತ್ಯ ಇದ್ದು.
  ಕೊಲೆಸ್ಟ್ರೋಲ್, ನವಗೆ  ಅಗತ್ಯ ಇದ್ದುಹೇಳಿ ಆತು. ಆದರೆ ಯಾವುದಾದರೂ, ಅತಿ ಅಪ್ಪಲಾಗ ಅಲ್ಲದಾ? ಹಾಂಗೆ ಇದು ಕೂಡಾ ಅತಿ ಆದರೆ, ರಕ್ತ ನಾಳಲ್ಲಿ ರಕ್ತ ಸಂಚಾರಕ್ಕೆ ತೊಂದರೆ ಕೊಡ್ತು. ಇದರಿಂದಾಗಿ ಹೃದಯಕ್ಕೆ ತೊಂದರೆ ಅವುತ್ತು.
 • ಲಿಪೋ ಪ್ರೊಟೀನ್ (Lipoprotein):
  ಹೆಚ್ಚಿನ ಅಂಶ  ನೀರೇ ಇಪ್ಪ ನೆತ್ತರಿಲ್ಲಿ ಕೊಲೆಸ್ಟ್ರೋಲ್ ಕರಗುತಿಲ್ಲೆ.
  ಅದರೆ ದೇಹಕ್ಕೆ ಇದು ಅಗತ್ಯ ಇದ್ದು. ಹಾಂಗಾಗಿ ದೇಹಲ್ಲಿ ಅದರ ಸಂಚಾರ ಮಾಡುಸುವದು ಈ ಲಿಪೋಪ್ರೊಟೀನ್.
  ಡಾಕ್ಟ್ರಕ್ಕೊ ನೆತ್ತರು ಪರೀಕ್ಷೆ ಮಾಡುಸಲೆ ಹೇಳಿರೆ ಅದರಲ್ಲಿ HDL, LDL, Triglycerides ಅಂಶಂಗೊ ಎಷ್ಟೆಷ್ಟು ಇದ್ದು ಹೇಳಿ ನೋಡ್ಲೆ ಹೇಳ್ತವು
 • ಹೈ ಡೆನ್ಸಿಟಿ ಲಿಪೋಪ್ರೊಟೀನ್ (High Density Lipoproteins):
  ಇದರ ಕೆಲಸ ಶರೀರದ ಟಿಶ್ಯೂ ವಿಂದ ಕೊಲೆಸ್ಟ್ರೋಲಿನ ಲಿವರಿಂಗೆ ಸಾಗುಸುವದು.  ಇದರ ಒಳ್ಳೆ ಕೊಲೆಸ್ಟ್ರೋಲ್ ಹೇಳ್ತವು.
  ಹೈ ಡೆನ್ಸಿಟಿ ಹೇಳಿರೆ, ಪ್ರೋಟೀನ್ ಜಾಸ್ತಿ ಇದ್ದೊಂಡು ಕೊಲೆಸ್ಟ್ರೋಲ್ ಕಮ್ಮಿ ಹೇಳಿ ಅರ್ಥ. ಇದೇ ರೀತಿ ಲೋ ಡೆನ್ಸಿಟಿ ಹೇಳಿರೆ, ಪ್ರೋಟೀನ್ ಕಮ್ಮಿ ಇದ್ದೊಂಡು ಕೊಲೆಸ್ಟ್ರೋಲ್ ಜಾಸ್ತಿ ಇದ್ದು ಹೇಳಿ ಅರ್ಥ.
 • ಲೋ ಡೆನ್ಸಿಟಿ ಲಿಪೋಪ್ರೊಟೀನ್ (Lowe Density Lipoproteins):
  ಇದರ ಕೆಲಸ ಕೊಲೆಸ್ಟ್ರೋಲಿನ ಲಿವರಿಂದ ಜೀವ ಕೋಶಕ್ಕೆ ಸಾಗುಸುವದು.
  ಇದರ ಹಾಳು ಕೊಲೆಸ್ಟ್ರೋಲ್ ಹೇಳ್ತವು.
 • ಟ್ರೈ ಗ್ಲಿಸೆರೈಡ್ (Triglyceride):
  ಇದು ಮುಖ್ಯವಾಗಿ ಪ್ರಾಣಿ ಜನ್ಯ ಕೊಬ್ಬಿಲ್ಲಿ ಕೊಲೆಸ್ಟ್ರೋಲ್ ಒಟ್ಟಿಂಗೆ ಇಪ್ಪ ಇನ್ನೊಂದು ಅಂಶ.
 • “ಫೇಟ್ಟೀ ಅಸಿಡ್” (Fatty Acid):
  ಎಲ್ಲಾ ಎಣ್ಣೆ ಅಥವಾ ಕೊಬ್ಬಿಲ್ಲಿ, ಇಪ್ಪ ಮುಖ್ಯ ಅಂಶ ಹೇಳಿರೆ “ಫೇಟ್ಟೀ ಅಸಿಡ್” (Fatty Acid).
  ಇದರ ಎರಡು ರೀತಿಲಿ ವರ್ಗೀಕರಣ ಮಾಡ್ಲೆ ಆವ್ತು.

  • ಒಂದನೇ ವರ್ಗೀಕರಣಲ್ಲಿ,
   • ಸಂತೃಪ್ತ (Saturated Fatty Acid),
   • ಅಸಂತೃಪ್ತ (Unsaturated Fatty Acid) ಹೇಳಿ ವಿಂಗಡಣೆ.
  • ಎರಡನೇ ವರ್ಗೀಕರಣಲ್ಲಿ
   ಇದರಲ್ಲಿಪ್ಪ ಸಂಕೋಲೆಯ (Chain) ಉದ್ದದ ಮೇಲೆ – ಇದರಲ್ಲಿ ಮೂರು ವಿಧ

   • ಅತಿ ಉದ್ದ ಸಂಕೋಲೆ ಇಪ್ಪ ಫೇಟ್ಟೀ ಅಸಿಡ್ (Long Chain Fatty Acid)
   • ಸಾಧಾರಣ ಉದ್ದ ಸಂಕೋಲೆ ಇಪ್ಪ ಫೇಟ್ಟೀ ಅಸಿಡ್ (Medium Chain Fatty Acid)
   • ಸಣ್ಣ ಸಂಕೋಲೆ ಇಪ್ಪ ಫೇಟ್ಟಿ ಅಸಿಡ್ (Short Chain Fatty Acid).

***

ತೆಂಗಿನೆಣ್ಣೆಲಿ ಸಂತೃಪ್ತ ಫೇಟೀ ಅಸಿಡ್ ಜಾಸ್ತಿ ಇದ್ದ ಕಾರಣ ಇದು ಆರೋಗ್ಯಕ್ಕೆ ಒಳ್ಳೆದಲ್ಲ ಹೇಳ್ತ ಒಂದು ಅಭಿಪ್ರಾಯ ಜನಂಗಳಲ್ಲಿ ಉಂಟು ಮಾಡಿತ್ತಿದ್ದವು.
ನಾವು ಉಪಯೋಗಿಸುವ ಹೆಚ್ಚಿನ ಎಣ್ಣೆಗಳಲ್ಲಿ, ಬೆಣ್ಣೆ, ತುಪ್ಪ ಇದರಲ್ಲೆಲ್ಲಾ Long Chain Fatty Acid ತುಂಬಾ ಜಾಸ್ತಿ ಇರ್ತು.
ಕೆಲವು ಎಣ್ಣೆಗಳಲ್ಲಿ ಇದು 98 ರಿಂದ 100 ಪ್ರತಿಶತ ಕೂಡಾ ಇರ್ತು.

ಫೇಟ್ಟೀ ಅಸಿಡ್ ಲ್ಲಿ ಇಪ್ಪ ಸಂಕೋಲೆಯ ಉದ್ದದ ಮೇಲೆ ಅದು ಶರೀರಲ್ಲಿ ಜೀರ್ಣ ಅಪ್ಪ ಗುಣ ನಿರ್ಧಾರ ಆವುತ್ತು.
ಕಮ್ಮಿ ಉದ್ದ ಇಪ್ಪ ಸಂಕೋಲೆ ಆದರೆ ಅದರ ತುಂಡು ತುಂಡು ಮಾಡ್ಲೆ ಸುಲಾಭ.

ಇದೇ ರೀತಿ Medium Chain Fatty Acid ಇಪ್ಪ ಎಣ್ಣೆ ನಮ್ಮ ಜೀರ್ಣಾಂಗ ವೆವಸ್ಥೆಲಿ ಬೇಗ ಜೀರ್ಣ ಅಗಿ ರಕ್ತಗತ ಆವುತ್ತು.
ಆದರೆ Long Chain Fatty Acid ಆದರೆ ಜೀರ್ಣ ಅಪ್ಪಲೆ ಕಷ್ಟ.

ತೆಂಗಿನೆಣ್ಣೆಲಿ ಇಪ್ಪ ಫೇಟ್ಟೀ ಅಸಿಡ್ Medium Chain Fatty Acid .
ಹಾಂಗಾಗಿ ಇದು ಬೇಗ ಜೀರ್ಣ ಆವುತ್ತು.

ಇಲ್ಲಿ ನಾವು ಗಮನಿಸೆಕ್ಕಾದ ಅಂಶ ಎಂತ ಹೇಳಿರೆ, ಬೆಣ್ಣೆ, ತುಪ್ಪ ಅಥವಾ ಇನ್ನಿತರ ಎಣ್ಣೆಲಿ ಇಪ್ಪ ಫೇಟ್ಟಿ ಅಸಿಡ್ Long Chain ಆಗಿರ್ತು ಆದರೆ, ತೆಂಗಿನೆಣ್ಣೆಲಿ ಇಪ್ಪ ಫೇಟ್ಟೀ ಅಸಿಡ್ Medium Chain ಅಗಿರ್ತು.
ಹಾಂಗಾಗಿ ತೆಂಗಿನೆಣ್ಣೆಯ ಇವುಗಳ ಒಟ್ಟಿಂಗೆ ತುಲನೆ ಮಾಡಿ ನೋಡ್ಲಾಗ ಮಾತ್ರ ಅಲ್ಲದ್ದೆ ತೆಂಗಿನೆಣ್ಣೆ ಇವೆಲ್ಲಕ್ಕಿಂತಲೂ ಬೇಗ ಜೀರ್ಣ ಅಗಿ ರಕ್ತಗತ  ಅವುತ್ತು.
ನಮ್ಮ ಶರೀರಲ್ಲಿ ಕೊಲೆಸ್ಟ್ರೋಲ್ ಉಂಟು ಮಾಡುವದರ ಮೇಲೆ Medium Chain Fatty ಅಸಿಡ್ ಯಾವುದೇ ಪರಿಣಾಮ ಬೀರುತ್ತಿಲ್ಲೆ.

(ಚಿತ್ರ: ಅಂತರ್ಜಾಲ)

ತೆಂಗಿನೆಣ್ಣೆಯ ಗುಣಂಗಳ ನೋಡುವೊ°:

 • ಪ್ರಕೃತಿಂದಲೇ ಸಿಕ್ಕುವ ಎಣ್ಣೆಯ ಯಾವುದೇ ಸಂಸ್ಕರಣೆ ಮಾಡದ್ದೆ ಉಪಯೋಗ ಮಾಡ್ಲಾವುತ್ತು.
 • ಇದರಲ್ಲಿ ಸಂತೃಪ್ತ ಫೇಟ್ಟಿ ಅಸಿಡ್ ಜಾಸ್ತಿ ಇಪ್ಪ ಕಾರಣ ಹೆಚ್ಚು ಸಮಯ ಹಾಳಾಗದ್ದೆ ಒಳಿತ್ತು. ಎಣ್ಣೆಲಿ ಇಪ್ಪ ನೀರಿನ ಪಸೆಯ ಬೆಶಿಲಿಂಗೆ ಮಡುಗಿ ತೆಗದರೆ, ವರ್ಷಂದಲೂ ಹೆಚ್ಚು ಸಮಯ ಹೇಮಾರಿಸಿ ಮಡುಗಲಾವುತ್ತು.
 • ಯಾವುದೇ ಬಣ್ಣ ಇಲ್ಲದ್ದೆ, ಒಳ್ಳೆ ಪರಿಮಳ, ರುಚಿ ಇಪ್ಪ ಎಣ್ಣೆ ಇದೊಂದೇ ಹೇಳಿ ಹೇಳ್ಳಕ್ಕು.
 • ನಮ್ಮ ಚರ್ಮಕ್ಕೆ ಹೇಳಿ ಮಾಡಿಸಿದ ಎಣ್ಣೆ. ತಲೆಗು ಕೂಡಾ ಯಾವುದೇ ಹೆದರಿಕೆ ಇಲ್ಲದ್ದೆ ಉಪಯೋಗ ಮಾಡ್ಲಕ್ಕು ಮಾತ್ರ ಅಲ್ಲದ್ದೆ, ಕೂದಲು ಉದ್ದ ಬೆಳವಲೆ ಸಕಾಯ ಮಾಡುತ್ತು.  ಉದುರುವದರ ಕಮ್ಮಿಮಾಡುತ್ತು. ಸಣ್ಣ ಮಕ್ಕಳ ಶರೀರಕ್ಕೂ ಹಿತವಾದ ಎಣ್ಣೆ.
 • ತೆಂಗಿನೆಣ್ಣೆಲಿ ಹೊರುದ ಐಟಂಗಳ ಹೆಚ್ಚು ದಿನ ಮಡುಗಲೆ ಆವ್ತು.
 • ಪ್ರಾಣಿ ಜನ್ಯ ಕೊಬ್ಬಿಲ್ಲಿ ಇಪ್ಪ ಹಾಂಗೆ ಇದರಲ್ಲಿ ಕೊಲೆಸ್ಟ್ರೋಲ್ ಇಲ್ಲೆ (ಯಾವದೇ ಸಸ್ಯ ಜನ್ಯ ಎಣ್ಣೆಲಿ ಕೊಲೆಸ್ಟ್ರೋಲ್ ಇಲ್ಲೆ)
 • ಸುಲಭವಾಗಿ ಜೀರ್ಣ ಆವುತ್ತು.
 • ಶರೀರಲ್ಲಿ ಕ್ಯಾಲ್ಸಿಯಂ, ವಿಟಮಿನ್, ಲವಣಂಗಳ ಹೀರಲೆ ಅನುಕೂಲ ಮಾಡಿ ಕೊಡುತ್ತು.
 • ನೆತ್ತರಿಲ್ಲಿ ಇಪ್ಪ ಹಾಳು ಕೊಲೆಸ್ಟ್ರೋಲ್ (LDL) ಅಂಶವ ಜಾಸ್ತಿ ಮಾಡ್ತಿಲ್ಲೆ. ಬದಲಾಗಿ ಒಳ್ಳೆ ಕೊಲೆಸ್ಟ್ರೋಲ್ (HDL) ಅಂಶವ ಜಾಸ್ತಿ ಮಾಡುತ್ತು.
 • ಬೇರೆ ಎಣ್ಣೆಗಳಲ್ಲಿ ಅಸಂತೃಪ್ತ ಫೇಟ್ಟಿ ಅಸಿಡ್ (Un-Saturted Fatty Acid) ಜಾಸ್ತಿ ಇಪ್ಪದರಿಂದಾಗಿ ಅದರ ಸಂತೃಪ್ತ ಸ್ಥಿತಿಗೆ ತಪ್ಪಲೆ ಹೈಡ್ರೊಜನ್ ಸೇರಿಸಲೆ ಬೇಕಾಗಿ ಸಂಸ್ಕರಣೆ ಮಾಡೆಕ್ಕಾವ್ತು (Hydrogenation), ಅದರೆ ತೆಂಗಿನೆಣ್ಣೆಗೆ ಇದರ ಅಗತ್ಯ ಇಲ್ಲೆ.
  ಈ ರೀತಿ ಸಂಸ್ಕರಣೆ ಮಾಡುವಾಗ Trans Fatty Acid ಉಂಟಾವುತ್ತು. ಇದು ಅರೋಗ್ಯಕ್ಕೆ ಒಳ್ಳೆದಲ್ಲ. ಕೊಲೆಸ್ಟ್ರೋಲ್ ಹೆಚ್ಚು ಮಾಡುವ್ಲಲ್ಲಿ ಇದರ ಪಾತ್ರ ದೊಡ್ಡದು.
 • Hydrogenation ಮಾಡಿ ಸಂಸ್ಕರಣೆ ಮಾಡುವಾಗ ನಿಕ್ಕೆಲ್ ಹೇಳ್ತ ಲೋಹವ ವೇಗೋತ್ಕರ್ಷ (Catalyst) ಆಗಿ ಉಪಯೋಗ ಮಾಡುತ್ತವು. ಈ ಲೋಹದ ಅಂಶ ಶರೀರಕ್ಕೆ ಯಾವುದೇ ರೀತಿಲಿ ಒಳ್ಳೆದಲ್ಲ.
 • ತೆಂಗಿನೆಣ್ಣೆಲಿ ಇಪ್ಪ ಫೇಟ್ಟಿ ಅಸಿಡ್ ಪೈಕಿ 70 ಕ್ಕಿಂತಲೂ ಅಧಿಕ ಶೇಕಡಾ, ಸಣ್ಣ ಮತ್ತೆ ಮೀಡಿಯಂ ಸಂಕೋಲೆ ಇಪ್ಪ ಫೇಟ್ಟಿ ಅಸಿಡ್ (Small and Medium Chain Fatty Acid).
  ಹಾಂಗಾಗಿ ಹೊಟ್ಟೆಲಿ ಮತ್ತೆ ಸಣ್ಣ ಕರುಳಿಲ್ಲಿ ಜೀರ್ಣ ಆಗಿ ಪಿತ್ತ ಜನಕಾಂಗ (Liver) ಸೀದಾ ಸೇರುತ್ತು.

ಉಪಯೋಗ ಮಾಡುವಾಗ ತೆಕ್ಕೊಳೆಕ್ಕಾದ ಜಾಗ್ರತೆಗೊ:

 • ಅಗತ್ಯಕ್ಕಿಂತ ಹೆಚ್ಚಿನ ಎಣ್ಣೆ ಉಪಯೋಗ ದೇಹಕ್ಕೆ ಒಳ್ಳೆದಲ್ಲ.
 • ಸಾಧಾರಣ ಮನುಷ್ಯಂಗೆ ದಿನಕ್ಕೆ ೧೫ ಗ್ರಾಂ ನಷ್ಟು ಎಣ್ಣೆ ಸಾಕಾವುತ್ತು.
 • ನಾವು ತೆಕ್ಕೊಂಬ ಹೆಚ್ಚಿನ ಎಲ್ಲಾ ಆಹಾರಂಗಳಲ್ಲಿಯೂ ನೈಸರ್ಗಿಕ ಎಣ್ಣೆ ಇಪ್ಪದರಿಂದ ಎಣ್ಣೆಯ ನೇರವಾಗಿ ತೆಕ್ಕೊಂಬದರ ಆದಷ್ಟು ಕಮ್ಮಿ ಮಾಡ್ಲೆ ಅಕ್ಕು.
 • ಎಣ್ಣೆಲಿ ಹೊರುದ ನಂತರ ಒಳುದ ಎಣ್ಣೆಯ ಪುನಃ ಬಳಕೆ ಒಳ್ಳೆದಲ್ಲ.
 • ಹೊರುದ ತಿಂಡಿಂದ ಎಣ್ಣೆಯ ಬಳುಶಿ ಇಲ್ಲದ್ರೆ, ಎಣ್ಣೆ ಹೀರುತ್ತ ಕಾಗದಲ್ಲಿ ಹಾಕಿ ಆದಷ್ಟು ಕಮ್ಮಿ ಎಣ್ಣೆ,  ಹೊಟ್ಟೆಗೆ ಸೇರುತ್ತ ಹಾಂಗೆ ನೋಡಿಗೊಳ್ಳೆಕ್ಕು.
 • ಸುಟ್ಟ ಹಾಕಿ ತಿಂಬಲೆ ಎಡಿಗಾದ್ದರ ಸುಟ್ಟಹಾಕಿ, ಅದಕ್ಕೆ ಬೇಕಾರೆ ಹಸಿ ಎಣ್ಣೆಯ ಪಸೆ ಮಾಡಿ ತಿಂಬದು ಒಳ್ಳೆದು.
 • ಎಣ್ಣೆ, ಕಸಂಟು ಬಾರದ್ದ ಹಾಂಗೆ ಜಾಗ್ರತೆಲಿ ಶೇಖರಣೆ ಮಾಡೆಕ್ಕು. ಹೇಮಾರ್ಸುವ ಎಣ್ಣೆಗೆ ನೀರು ಬೆರಕ್ಕೆ ಆಗದ್ದ ಹಾಂಗೆ ನೋಡಿಗೊಳೆಕ್ಕು.
 • ದೊಡ್ಡ ಪಾತ್ರೆಂದ ದಿನ ನಿತ್ಯದ ಉಪಯೋಗಕ್ಕೆ ತೆಗವಲೆ ಆಗ. ಹೀಂಗೆ ಮಾಡಿರೆ ಅದಕ್ಕೆ ನಿತ್ಯಾ ಹೆರಾಣ ಗಾಳಿ ತಾಗುವದರಿಂದ ಬೇಗ ಹಾಳು ಅಪ್ಪ ಚಾನ್ಸ್ ಜಾಸ್ತಿ.
  ಒಂದು ಸಣ್ಣ ಪಾತ್ರೆಗೆ ಎರೆಶಿ ಮಡುಗಿ ಅದರಿಂದ ದಿನ ನಿತ್ಯದ ಉಪಯೋಗಕ್ಕೆ ತೆಗವದು ಉತ್ತಮ.

~~~

ಶ್ರೀಶ° ಯಾವಾಗ ಬತ್ತ° ಗೊಂತಿಲ್ಲೆ. ಎನಗೆ ತಿಳುದ ಮಟ್ಟಿಂಗೆ ವಿಶಯ ಸಂಗ್ರಹ ಮಾಡಿ ಮಡುಗಿದ್ದೆ.
ನಿಂಗೊಗೆ ಹೇಳುವೊ° ಹೇಳಿ ಕಂಡತ್ತು.
ಓದಿ ನಿಂಗಳ ಅಭಿಪ್ರಾಯ ಹೇಳಿ. ಹೆಚ್ಚಿನ ಮಾಹಿತಿ ಇದ್ದರೆ ಒದಗಿಸಿಕೊಡಿ.

ನಮ್ಮಲ್ಲಿ ಇಷ್ಟು ಒಳ್ಳೆ ಎಣ್ಣೆ ಇಪ್ಪಗ ಬೇರೆ ಎಣ್ಣೆಯ ಹುಡ್ಕಿಂಡು ಹೋದರೆ, “ಅಂಗೈಲಿ ಬೆಣ್ಣೆ ಮಡ್ಕೊಂಡು ತುಪ್ಪಕ್ಕೆ ಬೈಲಿಡೀ ತಿರುಗಿದ ಹಾಂಗೆ” ಅಕ್ಕು ಅಲ್ಲದಾ!!!

***

ಶರ್ಮಪ್ಪಚ್ಚಿ

   

You may also like...

47 Responses

 1. ಸಂಗ್ರಹಯೋಗ್ಯ ಲೇಖನ ಅಪ್ಪಚ್ಚಿ…
  ಖುಶಿ ಆತು…

 2. ಶರ್ಮಪ್ಪಚ್ಚಿ..,
  ಯೇವತ್ರಾಣ ಹಾಂಗೆ ಪೂರ್ಣ ಬರಹ. ಎಲ್ಲಿಯೂ ಸಂಶಯ ಬಾರದ್ದ ಹಾಂಗೆ ಚೆಂದಲ್ಲಿ ಬರದ್ದಿ. ತುಂಬಾ ವಿಷಯಂಗ ಗೊಂತಾತು.

  ನಮ್ಮಲ್ಲಿಯೇ ಬೆಳವದರ ಉಪಯೋಗ ಮಾಡುದು ಬಿಟ್ಟು, ಅಂತೇ ವಿಪರೀತ ಕ್ರಯ ಕೊಟ್ಟು ಪೇಟೆಂದ ತಂದು ಇದ್ದ ಆರೋಗ್ಯವ ಹಾಳು ಮಾಡಿಗೊಳ್ತಾ ಇದ್ದಿ ಹೇಳಿ ಸೂಕ್ಷ್ಮಲ್ಲಿ ಎಚ್ಚರಿಸಿದ್ದಿ. ಎಲ್ಲೊರೂ ಈ ವಿಷಯಲ್ಲಿ ಹೆಚ್ಚು ಅರ್ತುಗೊಂಬ ಹಾಂಗೆ ಮಾಡಿದಿ.

  ಇನ್ನಾದರೂ ನಮ್ಮ ಕಲ್ಪವೃಕ್ಷಕ್ಕೆ ಸಿಕ್ಕೆಕ್ಕಾದ ಮರಿಯಾದಿ ಸಿಕ್ಕಿ, ತೆಂಗಿನೆಣ್ಣೆಯ ಉಪಯೋಗ ಸರ್ವತ್ರ ಆಗಿ, ಬೆಳವ ಕೃಷಿಕನ ಬಾಳುದೇ ತೆಂಗಿನ ಎಣ್ಣೆಯ ಹಾಂಗೆ ಪರಿಶುದ್ಧ ಆಗಲಿ..

  ಧನ್ಯವಾದಂಗೋ ಅಪ್ಪಚ್ಚಿ.

 3. ಶರ್ಮಪ್ಪಚ್ಚಿ says:

  [ಕೃಷಿಕನ ಬಾಳುದೇ ತೆಂಗಿನ ಎಣ್ಣೆಯ ಹಾಂಗೆ ಪರಿಶುದ್ಧ ಆಗಲಿ] ಒಳ್ಳೆ ಆಶಯ.
  [ಸಂಶಯ ಬಾರದ್ದ ಹಾಂಗೆ ಚೆಂದಲ್ಲಿ ಬರದ್ದಿ.]-ಧನ್ಯವಾದಂಗೊ. ಬರವಾಗ ಎನ್ನ ಆಶ್ಯವೂ ಅದೇ.

 4. Suvarnini Konale says:

  ಉತ್ತಮ ಮಾಹಿತಿ ಅಪ್ಪಚ್ಚಿ. ಸಾಮಾನ್ಯರಿಂಗೆ ಅರ್ಥ ಅಪ್ಪ ರೀತಿಲಿ ವಿವರಣೆ ಇದ್ದು…. ತೆಂಗಿನೆಣ್ಣೆ ಆರೋಗ್ಯಕ್ಕೆ ಹಾಳಲ್ಲ ಹೇಳುದರ ಲಾಯ್ಕಕ್ಕೆ ನಿರೂಪಿಸಿದ್ದಿ 🙂 ಧನ್ಯವಾದ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *