ವಟ ಸಾವಿತ್ರೀ ವ್ರತ

July 20, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಪ್ಪಣ್ಣ ಹೇಳ್ತ ಹಾಂಗೆ ಈ ಜೆಂಬಾರಂಗಳ ಎಡೆಲಿ ಎಡಿಯಪ್ಪಾ ಎಡಿಯ.
ಸದ್ಯಕ್ಕೆ ಇನ್ನು ಯಾವುದೇ ಜೆಂಬಾರ ಇಲ್ಲೆ ಹೇಳಿ ಜಾನ್ಸಿರೆ, ಒಂದಲ್ಲ ಮೂರು ನಾಲ್ಕು ಒಟ್ಟಿಂಗೆ ಹೇಳಿಕೆ ಬಂದು ಕೂರುಗು. ಹೋಗದ್ದೆ ಗೊಂತಿದ್ದೋ?.
ಹೋದ ಮತ್ತೆ ಸುಮ್ಮನೆ ಕೂದು ಉಂಡಿಕ್ಕಿ ಬಪ್ಪದು ಮನಸ್ಸಿಂಗೆ ಹಿತ ಆವುತ್ತಿಲ್ಲೆ. ತಿಂದ ಉಪ್ಪಿನ ಋಣ ಆದರೂ ತೀರಿಸೆಕ್ಕಡ. ಹಸಿ ನೀರೋ, ಬೆಶಿ ನೀರೋ ಕೇಳುವದಾದರೆ ಸರ್ತಕ್ಕೆ ಒಂದರಿ ಹಂತಿಲಿ ಹೋಗಿಂಡು ಬಪ್ಪಲಕ್ಕು.
ಹೆಚ್ಚು ಬಗ್ಗುತ್ತ ಕೆಲಸ ಇಲ್ಲೆ. ಸಣ್ಣ ಸಣ್ಣ ಪಾತ್ರೆಗಳಲ್ಲಿ ತಾಳೋ, ಉಪ್ಪು, ಉಪ್ಪಿನ ಕಾಯಿಯೋ ಹಿಡ್ಕೊಂಡು ಹೆರಟರೂ ತೊಂದರೆ ಇಲ್ಲೆ. ಅದು ಬಿಟ್ಟು ಅಶನಕ್ಕೆ ಹಿಡಿವಲೆ ಹೆರಟರೆ ಮಾತ್ರ ಎನ್ನ ಹಾಂಗೆ ಬೆನ್ನು ಬಗ್ಗುಸಲೆ ಎಡಿಯದ್ದವಕ್ಕೆ ಬಙವೇ.
ದೊಡ್ಡ ಹಾಲ್ ಗಳಲ್ಲಿ ದೊಡ್ಡ ದೊಡ್ಡ ಹಂತಿಗೆ ಎಂತಾರೂ ತೆಕ್ಕೊಂಡು ಹೆರಟರೆ ಆಚ  ತಲೇಂಗೆ ಎತ್ತಿ ಅಪ್ಪಗ ಬಗ್ಗಿಸಿದ ಬೆನ್ನು ಸರ್ತ ಮಾಡ್ಲೇ ಕಷ್ಟ.

ಮೊನ್ನೆ ಹಾಂಗೇ ಆತಿದ. ಹತ್ರಾಣ ಮನೆ ಜೆಂಬಾರ. ಮನೆಲಿ ಅಪ್ಪ ಜೆಂಬಾರಂಗೊಕ್ಕೆ ಅವೆಲ್ಲಾ ಬಂದು ಸುದರಿಕೆ ಮಾಡುವವೇ. ನಾವು ಪೇಂಟ್ ಅಂಗಿ ಸಿಕ್ಕಿಸಿಂಡು ಹೋಗಿ ಸುಮ್ಮನೆ ಕುರ್ಚಿ ಬೆಶಿ ಮಾಡಿಕ್ಕಿ ಬಂದರೆ ಅಕ್ಕೋ ಹೇಳಿ ವೇಷ್ಟಿ ಸುತ್ತಿ, ಶಾಲು ಹಾಕಿಂಡೇ ಹೆರಟೆ. ಸಟ್ಟುಮುಡಿ ಕಾರ್ಯಕ್ರಮ. ಮೂರ್ತ ಹೇಳಿ ಇಲ್ಲೆದ. ಬೇಗ ಬಾಳೆಲೆ ಹಾಕಿದವು. ಒಂದನೇ ಹಂತಿಗೆ ಗೊಂತಿದ್ದನ್ನೆ. ಅಡಿಗೆ ಶಾಲೆ ತುಂಬಾ ಬಳುಸಲೆ ನಿಂದ ಜೆನಂಗಳೇ ಜೆನಂಗ. ಇನ್ನು ಅವರ ಎಡೆಲಿ ಅಂತೇ ಹೋಗಿ ನಿಂಬದು ಎಂತಕೆ. ಮತ್ತಾಣ ಹಂತಿಗಾರೂ ಬಳುಸಲಕ್ಕನ್ನೆ.

ಉಂಡಿಕ್ಕಿ, ಎರಡನೇ ಹಂತಿಗೆ ಬಳುಸಲೆ ಹೆರಟರೆ ಜೆನಂಗೊ ಎಲ್ಲಿದ್ದವು. ಸುರುವಿಂಗೆ ಬಳುಸಿದವರ ಉಂಬಲೆ ಕೂರ್ಸಿ ಆಯಿದು. ಉಂಡು ಆದವು ಕೈ ತೊಳದಿಕ್ಕಿ ಅಲ್ಲಿಂದಲೇ ಪದ್ರಾಡ್. ಬಳುಸಲೆ ಒಂದಷ್ಟು ಹೆಮ್ಮಕ್ಕಳೂ ಮಕ್ಕಳೂ ಬಂದವು. ನಿವೃತ್ತಿ ಇಲ್ಲದ್ದೆ ಅಶನದ ಪಾತ್ರಕ್ಕೆ ಕೈ ಹಿಡುದಾತು. ನಮ್ಮ ಫಜೀತಿ ಕೇಳೆಕ್ಕೊ. ಒಂದು ಹಠಲ್ಲಿ ಹಿಡ್ದರ ಬಿಟ್ಟಿದಿಲ್ಲೆ.

ಇದಾ ಅಶನ ಬಳುಸಿದವಂಗೆ ಹೋಳಿಗೆ ಕೆರುಶಿ ಹಿಡಿವ ಮರ್ಯಾದೆ ಹೇಳಿದ ಒಬ್ಬ. ಕೊಶಿ ಆತು. ಕೆರುಶಿ ಅಲ್ಲದ, ಭಾರ ಇಲ್ಲೆ. ಅದನ್ನೂ ಬಳುಸಿ ಆತು. ಬಙ ಆದರೂ ತೊಂದರೆ ಇಲ್ಲೆ. ಸಿಕ್ಕುತ್ತ  ಮರ್ಯಾದೆ ಬಿಡುವದು ಎಂತಕೆ ಅಲ್ಲದಾ?

ಉಂಡಿಕ್ಕಿ ಎಲ್ಲರೂ ಎದ್ದವು. ಇನ್ನು ಬಾಳೆ ತೆಗೆತ್ತ ಕೆಲಸವೂ ಅಶನ ಹಿಡುದವಂಗೆ ಅಡ. ಅಂಬಗ ಬಂತದ ಪೀಕಲಾಟ. ಇನ್ನಂತೂ ಬೆನ್ನು ಬಗ್ಗುಸಲೆ ಖಂಡಿತಾ ಎಡಿಯ ಹೇಳುವ ಪರಿಸ್ಥಿತಿ. ಮನೆ ಯಜಮಾನಂಗೆ ಇದೆಲ್ಲಾ ಅನುಭವ ಇದ್ದು ಕಾಣ್ತು. ಎಂಜಲು ಬಾಳೆ ತೆಗದು ಉಡುಗಲೆ ಬೇರೆ ಜೆನ ಮಾಡಿತ್ತಿದ್ದ. ಪುಣ್ಯ, ಸದ್ಯಕ್ಕೆ ಬಚವಾದೆ. ಇಲ್ಲದ್ದರೆ ಹೋಳಿಗೆ ಬಳುಸುವಾಗ ಸಿಕ್ಕಿದ ಮರ್ಯಾದೆ ಇದರ ಒಟ್ಟಿಂಗೆ ತೊಳದು ಹೋವುತ್ತಿತ್ತು.

ಮನೆಲಿ ಬಂದು ಬೆನ್ನು ಸರ್ತ ಮಾಡುವೊ ಹೇಳಿ ಸೋಪಾಲ್ಲಿ ಮನುಗಿಂಡು ಇಪ್ಪಗ ಆತು ಎಂಗಳ ಗುರಿಕ್ಕಾರರ ಫೋನ್

ಅಪ್ಪೋ ಶರ್ಮಣ್ಣ, ಮೊನ್ನೆ ಸುರತ್ಕಲ್ಲಿಲ್ಲಿ ವಟ ಸಾವಿತ್ರೀ ವ್ರತ ಆಚರಿಸಿದವಡ. ಹೇಂಗಾತು? ಅಂದು ಮನೆಲಿ ಪೂಜೆ ಇದ್ದ ಕಾರಣ ಬಪ್ಪಲೆ ಆಯಿದಿಲ್ಲೆ. ಎಂತ ವಿಶೇಷ-ಕೇಳಿದವು.

ಪ್ರವಚನ ಪೂಜೆ ಎಲ್ಲಾ ಗೌಜಿಲೇ ಆಯಿದು. ಹೆಮ್ಮಕ್ಕೊ ಎಲ್ಲಾ ಸೇರಿ ಕುಂಕುಮಾರ್ಚನೆ ಮಾಡಿದ್ದವು. ಈಗ ಜೆಂಬಾರಂದ ಬಂದು ಬಚ್ಚಲು ಆರುಸುತ್ತಾ ಇದೆ. ನಾಳೆ ಅಲ್ಲಿಗೆ ಬಂದು ಸುದ್ದಿ ಮಾತಾಡ್ತೆ ಆಗದೊ-ಹೇಳಿದೆ.

**

ವಟ ಸಾವಿತ್ರೀ ವ್ರತವ ನಮ್ಮ ಸಮಾಜಲ್ಲಿ ಈ ಮೊದಲು ಆಚರಿಸಿದ ಉದಾಹರಣೆಗೊ ಸಿಕ್ಕುಗು ಹೇಳಿ ಕಾಣ್ತಿಲ್ಲೆ. ಈ ವರ್ಷ ನಮ್ಮ ಗುರುಗಳ ಮಾರ್ಗದರ್ಶನಲ್ಲಿ, ಮಹಿಳಾ ವಿಭಾಗದವು ಇದರ ಹಮ್ಮಿಯೊಂಡಪ್ಪಗ, ಇದರ ಹೇಂಗೆ ಮಾಡುವದು, ಇದರ ಮಹತ್ವ ಎಂತ ಹೇಳಿ ರಜ ಜಿಜ್ಞಾಸೆ ಸುರು ಆತು.
ನಮ್ಮ ವಲಯಲ್ಲಿ ಡಾ|| ಸೋಂದಾ ಭಾಸ್ಕರ ಭಟ್ ಹೇಳುವ ಸಂಸ್ಕೃತ ವಿದ್ವಾಂಸರ ಕೇಳಿಗೊಂಡಪ್ಪಗ ಅವು ಸಂತೋಷಲ್ಲಿ ಒಪ್ಪಿಗೊಂಡು ಈ ವ್ರತದ ಬಗ್ಗೆ ಮಾಹಿತಿಗಳ ಕಲೆ ಹಾಕಿ, ಅದರ ಎಂಗೊಗೆ ಉಣಿಸಿದವು.
ಅವು ಹೇಳಿದ್ದರಲ್ಲಿ ನೆಂಪು ಇಪ್ಪ ಕೆಲವು ವಿಶಯಂಗಳ ನಿಂಗಳ ಒಟ್ಟಿಂಗೆ ಹಂಚಲೆ ಎನಗೆ ಕೊಶಿ ಆವುತ್ತು.

ಸತ್ಯವಾನನ ಪಡಕ್ಕೊಂಬ ಸಾವಿತ್ರಿ
ಸತ್ಯವಾನನ ಪಡಕ್ಕೊಂಬ ಸಾವಿತ್ರಿ

ಹಿಂದಿನ ಕಾಲಲ್ಲಿ ಸಾವಿತ್ರೀ ವ್ರತವಾಗಿ ಆಚರಿಸಿಂಡು ಇತ್ತಿದ್ದದು, ಸತ್ಯವಾನ ಸಾವಿತ್ರಿ ಕಾಲದ ನಂತರ “ವಟ ಸಾವಿತ್ರೀ ವ್ರತ” ವಾಗಿ ಮಾರ್ಪಾಡು ಆತು. ಕತೆಯ ಸ್ಥೂಲ ರೂಪ ಹೀಂಗಿದ್ದು:

ಮಾದ್ರಿ ರಾಜ್ಯದ ರಾಜ ಅಶ್ವಪತಿಗೆ ಮಕ್ಕೊ ಆಗದ್ದೆ ಇಪ್ಪಗ ದಂಪತಿ ಸಮೇತ “ಸರಸ್ವತೀ” ದೇವಿಯ ಅನುಗ್ರಹ ಪಡದು ಅವಕ್ಕೆ ಒಂದು ಮಗಳು ಹುಟ್ಟುತ್ತು. ಆ ಮಗಳಿಂಗೆ ಸಾವಿತ್ರಿ ಹೇಳಿ ಹೆಸರು ಮಡುಗುತ್ತವು.
ದೊಡ್ಡ ಅಪ್ಪಗ ಅದಕ್ಕೆ ಬೇಕಾದ ವರನ ಆಯ್ಕೆ ಮಾಡ್ಲೆ ಅದರ ಬಿಡ್ತವು. ರಾಜ್ಯವ ಕಳಕ್ಕೊಂಡ ಕಣ್ಣಿಲ್ಲದ್ದ ರಾಜ ಧುಮತ್ಸೇನನ ಮಗ “ಸತ್ಯವಾನ” ನ ಅದು ನೋಡಿ ಇಷ್ಟ ಪಡುತ್ತು. ಹಾಂಗೇ ಹೆತ್ತವಕ್ಕೆ ತಿಳುಸುತ್ತು. ಅಷ್ಟಪ್ಪಗ ಅಲ್ಲಿ ಬಂದ ದೇವ ಋಷಿ  ನಾರದ “ಸತ್ಯವಾನ ಸನ್ನಡತೆಯ ರಾಜ ಕುಮಾರ, ಇವರದ್ದು ಒಳ್ಳೆ ಜೋಡಿ ಆವುತ್ತು” ಹೇಳಿ ಅಶ್ವಪತಿ ರಾಜಂಗೆ ತನ್ನ ಮೆಚ್ಚುಗೆ ಸೂಚಿಸುತ್ತ. ಇವರ ಜಾತಕ ಲೆಕ್ಕ ಹಾಕಿ “ಈ ಮದುವೆ ಆದ ಒಂದು ವರ್ಷಲ್ಲಿ ಸಾವಿತ್ರಿಗೆ ವೈಧವ್ಯ ಬತ್ತು” ಹೇಳಿ ಕೂಡಾ ಹೇಳ್ತ. ಇದರ ಕೇಳಿದ ರಾಜ, ಸಾವಿತ್ರಿ ಹತ್ರ ಇವನ ಬಿಟ್ಟು ಬೇರೆ ಆರ ಬೇಕಾದರೂ ಆಯ್ಕೆ ಮಾಡು ಹೇಳಿ ಅಪ್ಪಗ ಸಾವಿತ್ರಿ ಒಪ್ಪುತ್ತಿಲ್ಲೆ ಮಾತ್ರ ಅಲ್ಲದ್ದೆ ಆನು ಮನಸಾರೆ ಮೆಚ್ಚಿದ ನಂತರ ಎಂತ ಆದರೂ ಅವನೇ ಎನ್ನ ಗಂಡ ಹೇಳಿ ತನ್ನ ದೃಢ  ನಿರ್ಧಾರ ತಿಳಿಸುತ್ತು. ಹಾಂಗೆ “ಸತ್ಯವಾನ ಸಾವಿತ್ರಿ” ದಂಪತಿಗೊ ಆವುತ್ತವು.

ಸಾವಿತ್ರಿಗೆ ನಾರದ ಋಷಿ ಹೇಳಿದ ವಿಷಯ ಮನಸ್ಸಿಲ್ಲಿ ಇರ್ತು. ಹಾಂಗೇ ಯಾವಗಲೂ ಗಂಡನ ಸೇವೆ ಮಾಡಿಂಡು ಒಟ್ಟಿಂಗೇ ಇರ್ತು. ಒಂದು ವರ್ಷ ಅಪ್ಪಲೆ ಇನ್ನು ಮೂರು ದಿನ ಬಾಕಿ ಇದ್ದು ಹೇಳಿ ಅಪ್ಪಗ ಸಾವಿತ್ರಿ ಉಪವಾಸ ವ್ರತ ಸುರು ಮಾಡುತ್ತು.

ಒಂದು ವರ್ಷದ ಅವಧಿ ಮುಗುದ ದಿನ, ಸೌದಿ ಕಡಿವಲೆ ಕಾಡಿಂಗೆ ಹೆರಟ ಸತ್ಯವಾನನ ಹೋಪದು ಬೇಡ ಹೇಳಿ ಕೇಳಿಗೊಳ್ತು. ಅವ⁰ ಅದಕ್ಕೆ ಒಪ್ಪುತ್ತಾ ಇಲ್ಲೆ. ಇಬ್ರೂ ಒಟ್ಟಿಂಗೆ ಕಾಡಿಂಗೆ ಹೋಗಿ ಸೌದಿ ಕಡಿವಗ ಸತ್ಯವಾನ ತಲೆ ತಿರುಗಿ ಬೀಳುತ್ತ. ಸಾವಿತ್ರಿ ಅವನ ತನ್ನ ತೊಡೆಯ ಮೇಗೆ ಮನುಗಿಸಿ ಗೋಳಿ ಮರದ (ವಟ ವೃಕ್ಷ)  ಕೆಳ ಉಪಚಾರ ಮಾಡುತ್ತು. ಅಷ್ಟಪ್ಪಗ “ಯಮ ರಾಜ” ಸ್ವತಹ  ಅಲ್ಲಿಗೆ ಬತ್ತ. ಸತ್ಯವಾನನ “ಆತ್ಮ”ವ ಯಮ ಲೋಕಕ್ಕೆ ತೆಕ್ಕೊಂಡು ಹೊರಡುತ್ತ. ಸಾವಿತ್ರಿ ಒಟ್ಟಿಂಗೆ ಹೆರಡುತ್ತು. ನೀನು ಬಪ್ಪಲೆ ಆಗ, ವಾಪಾಸು ಹೋಗು ಹೇಳಿದ ಯಮಂಗೆ ಸಾವಿತ್ರಿ “ ಆನು ಯಾವಗಲೂ ಎನ್ನ ಗಂಡನನ್ನೇ ಅನುಸರಿಸುವದು, ಇದು ಎನ್ನ ವ್ರತ, ನಿಯಮ, ಅವನ ಬಗ್ಗೆ ಎನ್ನ ವಿಶ್ವಾಸ, ಪ್ರೀತಿ ಎಲ್ಲವೂದೆ”. ಈಗ ಆನು ಉಪವಾಸ ವ್ರತಲ್ಲಿ ಇದ್ದೆ. ಅದರ ಶಕ್ತಿ ಮತ್ತೆ ನಿನ್ನ ಔದಾರ್ಯಂದಾಗಿ ನಿಇನ್ನೊಟ್ಟಿಂಗೆ ಬಪ್ಪಲೆ ಎನಗೆ ಏನೂ ತೊಂದರೆ ಆಗ. ಅವನ ಬಿಟ್ಟು ಆನು ಮಾತ್ರ ಹಿಂದೆ ಹೋಪ ಪ್ರಶ್ನೆಯೇ ಇಲ್ಲೆ ಹೇಳುತ್ತು.

ಯಮ, ಸಂಕಟಕ್ಕೆ ಸಿಕ್ಕುತ್ತ. ಸಾವಿತ್ರಿಯ ಕರಕ್ಕೊಂಡು ಹೋಪ ಹಾಂಗೆ ಇಲ್ಲೆ, ಅದು ಹಿಂದೆ ಹೋವುತ್ತು ಕೂಡಾ ಇಲ್ಲೆ. ಎಂತ ಮಾಡುವದು ಹೇಳಿ ಆಲೊಚನೆ ಮಾಡಿ ಅದರ ಹತ್ರ “ನಿನ್ನ ಗಂಡನ ಆತ್ಮ ಬಿಟ್ಟು ಬೇರೆ ಎಂತ ಬೇಕಾರೂ ಕೇಳು, ಆನು ಕೊಡ್ತೆ” ಹೇಳುತ್ತ.

“ಎನ್ನ ಮಾವಂಗೆ ಕಣ್ಣು ಕಾಂಬ ಹಾಂಗೆ ಮಾಡಿ ಅವ ಕಳಕ್ಕೊಂಡ ರಾಜ್ಯ ಅವಂಗೆ ಸಿಕ್ಕುವ ಹಾಂಗೆ ಅನುಗ್ರಹಿಸು” ಹೇಳಿ ಅಪ್ಪಗ “ತಥಾಸ್ತು” ಹೇಳಿ ಅನುಗ್ರಹಿಸುತ್ತ ಮತ್ತೆ ಸಾವಿತ್ರಿ ಹತ್ರ ಇನ್ನು ನೀನು  ವಾಪಾಸು ಹೋಗು ಹೇಳ್ತ.

ಅವನ ಬಿಟ್ಟು ಆನು ಹೇಂಗೆ ಇರಲಿ, ಅವ ಎಲ್ಲಿ ಇದ್ದನೋ ಅಲ್ಲಿಯೇ ಆನೂ ಇಪ್ಪದು ಹೇಳ್ತು ಸಾವಿತ್ರಿ.

ಯಮ, ಪುನಃ “ನಿನ್ನ ಗಂಡನ ಪ್ರಾಣ ಅಲ್ಲದ್ದೆ ಬೇರೆ ಎಂತ ಬೇಕಾರೂ ಕೇಳು” ಹೇಳಿ ಅಪ್ಪಗ “ ಎನ್ನ ಅಪ್ಪಂಗೆ ಗಂಡು ಸಂತತಿ ಇಲ್ಲೆ, ಅವಂಗೆ ನೂರು ಮಕ್ಕೊ ಅಪ್ಪ ಹಾಂಗೆ ಅನುಗಹಿಸು ಹೇಳ್ತು. ಅದಕ್ಕೂ ಯುಮ “ಹಾಂಗೇ ಆಗಲಿ” ಹೇಳಿ ಒಪ್ಪಿಕ್ಕಿ, ಇನ್ನಾದರೂ ನೀನು ವಾಪಸು ಹೋಗು ಹೇಳ್ತ. ಸಾವಿತ್ರಿ “ನಿನಗೆ ಧರ್ಮ, ಅಧರ್ಮವ ಬಗ್ಗೆ ಸರಿಯಾಗಿ ತಿಳುವಳಿಕೆ ಇಪ್ಪದರಿಂದಲೇ ನಿನ್ನ ಯಮ ಧರ್ಮ ರಾಜ ಹೇಳುವದು, ಹೇಳಿ ಯಮನ ಹೊಗಳುತ್ತು.  ತನ್ನ ಗಂಡನ ಪ್ರಾಣವ ಬಿಟ್ಟು ಹಿಂದಂಗೆ ಹೋಗದ್ದೆ ಇಪ್ಪ ತನ್ನ ಹಠವ ಬಿಡ್ತಿಲ್ಲೆ. ಇನ್ನೊಂದು ವರವಾಗಿ “ಎನಗೆ ಧೀರರೂ ಶೂರರೂ ಆದ ನೂರು ಮಕ್ಕಳ ಭಾಗ್ಯ” ಕರುಣಿಸು ಹೇಳಿ ಅಪ್ಪಗ ಯಮ ಹಿಂದೆ ಮುಂದೆ ಆಲೋಚನೆ ಮಾಡದ್ದೆ ಅದಕ್ಕೂ ’ತಥಾಸ್ತು” ಹೇಳ್ತ.

ಸಾವತ್ರಿಗೆ ಮಕ್ಕೊ ಆಯೆಕ್ಕಾರೆ ಅದರ ಗಂಡ ವಾಪಾಸು ಬಪ್ಪಲೇ ಬೇಕಲ್ಲದ. ತನ್ನ ದೈವ ಭಕ್ತಿ, ಶ್ರದ್ಧೆ, ಜಾಣ್ಮೆ, ಧೈರ್ಯ ಸಾಧನೆಂದ ಗಂಡನ ಪ್ರಾಣ ವಾಪಾಸು ಪಡಕ್ಕೊಂಡತ್ತು.

**

ಮೇಗೆ ಹೇಳಿದ ಕತೆಯ ಹೇಳಿಕ್ಕಿ ಅವರ ವಿಚಾರ ಧಾರೆಯ ಹೀಂಗೆ ಹರಿಸಿದವು.

ಮಾರ್ಗದ ಕರೆಲಿಪ್ಪ ವಟವೃಕ್ಷ (ಗೋಳಿ ಮರ)
ಮಾರ್ಗದ ಕರೆಲಿಪ್ಪ ವಟವೃಕ್ಷ (ಗೋಳಿ ಮರ)

ಮನುಷ್ಯ ಆಗಿ ಹುಟ್ಟಿದ ಮತ್ತೆ ಕೆಲವೊಂದು ಅನುಷ್ಠಾನಂಗಳ ಮಾಡೆಕ್ಕಾದ್ದು ಅವನ ಕರ್ತವ್ಯ.

ಸಂಧ್ಯಾವಂದನೆ, ಜಪ, ತಪ ಇದೆಲ್ಲಾ ನಿತ್ಯಾನುಷ್ಠಾನ ಯಾವುದಾದರೂ ನಿಮಿತ್ತವಾಗಿ ಮಾಡುವ ದೇವತಾ ಆರಾಧನೆ ನೈಮಿತ್ತಿಕ.
ಕುಟುಂಬದ ಎಲ್ಲರ ಹಿತವ ಬಯಸಿ ಮಾಡುವ ಅರಾಧನೆಗೊ ಕಾಮ್ಯಕ.

ವಟ ಸಾವಿತ್ರೀ ವ್ರತ ಕಾಮ್ಯಕ ವರ್ಗಕ್ಕೆ ಸೇರುತ್ತು. ಎಲ್ಲಾ ವ್ರತಂಗಳಲ್ಲಿಯೂ, ಸಂಕಲ್ಪ ಮಾಡಿಗೊಂಬಗ ಕೇಳಿಗೊಂಬದು ದೀರ್ಘಾಯುಷ್ಯ, ಆರೋಗ್ಯ, ಆನಂದ, ಐಶ್ವರ್ಯ, ಸೌಭಾಗ್ಯ, ಕುಟುಂಬದ  ಶೇಯಸ್ಸು ಆದರೂ ಈ ವ್ರತಲ್ಲಿ “ಮುತ್ತೈದೆ ಭಾಗ್ಯ”ಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು, ಹೆಣ್ಣು ತಾನೇ ದೇವತಾ ಪೂಜೆಯ ಮಾಡುವದು.
ಈ ವ್ರತಲ್ಲಿ ಕಲಶ ಮಡುಗಿ ಲಲಿತ ಸಹಸ್ರ ನಾಮ ಹೇಳಿ ಕುಂಕುಮಾರ್ಚನೆ ಮಾಡ್ಲಕ್ಕು. ಅಕೇರಿಗೆ ಸಿಹಿ ಭಕ್ಷ್ಯ ನೈವೇದ್ಯ, ಮಂಗಳಾರತಿ ಮಾಡಿ, ಸೇರಿದ ಎಲ್ಲರಿಂಗೂ ಪ್ರಸಾದ ಹಂಚೆಕ್ಕು.

ಈ ಕತೆಲಿ ಬಪ್ಪ ಕೆಲವು ಘಟನೆಗಳ ಬಗ್ಗೆ ರೆಜಾ ವಿಮರ್ಷೆ:

 • ಯಮ ರಾಜ, ತನ್ನ ದೂತರ ಕಳುಸದ್ದೆ ತಾನೇ ಬತ್ತ. ಸತ್ಯವಾನನ ಪಿತೃ ವಾತ್ಸಲ್ಯ, ಧರ್ಮ ನಿಷ್ಟೆ, ಸತ್ಯ ನಿಷ್ಟೆ ಇದೆಲ್ಲದರಿಂದ ಸಂತುಷ್ಟ ಆದ ಕಾರಣ ತಾನೇ ಬಂದೆ ಹೇಳಿ ಕೂಡಾ ಹೇಳ್ತ.
 • ಸಾವಿತ್ರಿ, ತನ್ನ ಗಂಡನ ಪ್ರಾಣಕ್ಕೆ ಬದಲಾಗಿ ಸುರುವಿಂಗೆ ಕೇಳಿದ ವರ, ತನ್ನ ಅತ್ತೆ ಮಾವನ ಹಿತಕ್ಕಾಗಿ.
 • ಮತ್ತೆ ಕೇಳಿದ ವರ ತನ್ನ ತವರಿನ ಹಿತಕ್ಕಾಗಿ.
 • ಅಕೇರಿಗೆ ಮಾತ್ರ ತನಗಾಗಿ ಕೇಳಿತ್ತು. ಇಲ್ಲಿ ಸಾವಿತ್ರಿ ತನ್ನ ಸ್ವಾರ್ಥವ ಬಯಸದ್ದೆ ಅತ್ತೆ ಮಾವನ ಹಿತ, ಅಬ್ಬೆ ಅಪ್ಪನ ಹಿತವ ಬಯಸಿತ್ತು. ಅದಕ್ಕೇ ಹೇಳುವದು ಹೆಣ್ಣು, ಎರಡೂ ಮನೆಯ ಬೆಳಗುವ ದೀಪ ಹೇಳಿ.
 • ಅಕೇರಿಗೆ ತನಗೆ ಬೇಕಾದ್ದರ ಕೇಳುವಾಗಲೂ ತನ್ನ ಜಾಣ್ಮೆ ತೋರಿಸಿತ್ತು. ಎನ್ನ ಗಂಡನ ಪ್ರಾಣ ಕೊಡು ಹೇಳಿರೆ ಯಮರಾಜ ಖಂಡಿತಾ ಕೊಡ ಹೇಳಿ ಗೊಂತಾಗಿ ಎನಗೆ ನೂರು ಮಕ್ಕೊ ಆಗಲಿ ಹೇಳ್ತ ವರವ ಬೇಡಿತ್ತು. ಎಂಥಾ ಉದಾತ್ತ ಭಾವನೆ, ಎಂಥಾ ಜಾಣ್ಮೆ, ಅದೆಂಥಾ ಶ್ರದ್ಧೆ.
 • ಸತ್ಯವಾನನ ತನ್ನ ತೊಡೆ ಮೇಲೆ ಮನುಗಿಸಿದ್ದು ಮತ್ತೆ ಯಮ ಬಂದದು ಎಲ್ಲಾ ಆದ್ದು ವಟ ವೃಕ್ಷದ (ಗೋಳಿ ಮರ)  ಅಡಿಲಿ, ಅದರ ನೆರಳಿಲ್ಲಿ.
 • ಗೋಳಿ ಮರದ ವಿಶೇಷ ಎಂತ ಹೇಳಿರೆ ಅದು ವಿಸ್ತಾರ ಆಗಿ ಬೆಳೆತ್ತು ಮಾತ್ರ ಅಲ್ಲದ್ದೆ, ತನ್ನ ಬೀಳಲಿಂದಾಗಿ ಗಟ್ಟಿಯಾಗಿ ನೆಲೆ ಊರುತ್ತು. ಹಲವಾರು ಜೀವಿಗೊಕ್ಕೆ ನೆರಳು ಕೊಡುತ್ತು. ನಮ್ಮ ಜೀವನಲ್ಲಿ ಕೂಡಾ ಹಾಂಗೇ, ಸಂಬಂಧಂಗಳ ವಿಸ್ತಾರ ಮಾಡುವದರೊಟ್ಟಿಂಗೆ ಅದರ  ಗಟ್ಟಿ ಕೂಡಾ ಮಾಡಿಗೊಂಡು ಹೋಯೆಕ್ಕು.  ಒಟ್ಟಿಂಗೆ ಬೇರೆಯವಕ್ಕೆ ಆಶ್ರಯ ಕೂಡಾ ಕೊಡೆಕು ಹೇಳುವ ಒಂದು ತತ್ವ ಕೂಡಾ ಇದ್ದು.

ಅವರ ವಿಚಾರ ಧಾರೆಯ ಕೆಲವು ತುಣುಕುಗೊ:

 • ಇಂದ್ರಾಣ ಮಕ್ಕೊಗೆ ಕ್ರಿಕೆಟ್ ನವರದ್ದೋ ಸಿನೆಮಾ ತಾರೆಗಳದ್ದೋ ಹೆಸರು, ಅವರ ಕುಟುಂಬದ ವಿವರ ಎಲ್ಲ ಗೊಂತಿಕ್ಕು, ಆದರೆ ಅವರ ಮನೆಯ ಹಿರಿ ತಲೆಗಳ (ಅಜ್ಜ, ಅಜ್ಜಿ, ಮುತ್ತಜ್ಜ, ಮುತ್ತಜ್ಜಿ) ಹೆಸರು ಕೇಳಿರೆ ಗೊಂತಿರ.
 • ಮುಖ್ಯವಾಗಿ ಸಣ್ಣ ಮಕ್ಕಳ ಧಾರ್ಮಿಕ, ಸಾಂಸ್ಕೃತಿಕ  ಕಾರ್ಯಕ್ರಮಂಗಳಲ್ಲಿ ಒಟ್ಟಿಂಗೆ ಸೇರಿಸಿಗೊಳೆಕ್ಕು. ಅಂದರೆ ಮಾತ್ರವೇ ಅವಕ್ಕೆ ನಮ್ಮ ಸಂಸ್ಕೃತಿಯ ಪರಿಚಯ ಅಕ್ಕು.

  ಉತ್ತರಭಾರತಲ್ಲಿ ವಟಸಾವಿತ್ರಿ ವ್ರತ ಮಾಡುದು
  ಉತ್ತರಭಾರತಲ್ಲಿ ವಟಸಾವಿತ್ರಿ ವ್ರತ ಮಾಡುದು
 • ಇಂದು ಎಷ್ಟೋ ಹಿರಿಯರು ಮಕ್ಕೊ ಇದ್ದರೂ ವೃದ್ಧಾಶ್ರಮಲ್ಲಿ ಕಾಲ ಕಳೆವ ಪರಿಸ್ಥಿತಿ ಬಪ್ಪಲೆ ಕಾರಣ ಮಕ್ಕೊಗೆ ನಮ್ಮ ಸಂಸ್ಕೃತಿಯ ತಿಳುವಳಿಕೆ ಇಲ್ಲದ್ದು. ಸಂಬಂಧಂಗಳ ಗಟ್ಟಿ ಮಾಡೆಕಾದ್ದು ಮುಖ್ಯ.
 • ಸರ್ವೇ ಜನಾಃ ಸುಖಿನೋ ಬವಂತು, ಧಿಯೋ ಯೋ ನಃ ಪ್ರಚೋದಯಾತ್  ಹೇಳುವದು ನಮ್ಮ ಸಂಸ್ಕೃತಿ. ಎಲ್ಲರಿಂಗೂ ಹಿತವಾಗಲಿ , ಎಲ್ಲರ ಬುದ್ಧಿ ಶಕ್ತಿಯನ್ನೂ ಪ್ರಚೋದಿಸಲಿ ಹೇಳಿ ಪ್ರಾರ್ಥಿಸುವಲ್ಲಿ ತನಗೆ ಮಾತ್ರ ಕೊಡು ಹೇಳುವ ಸ್ವಾರ್ಥ ಇಲ್ಲೆ.
 • ಪೂಜೆ ಮಾಡ್ಲೆ ಮುಖ್ಯವಾಗಿ ಬೇಕಾದ್ದು “ಶ್ರದ್ಧೆ” ಮತ್ತೆ “ಭಕ್ತಿ” ಹೇಳುವ ಎರಡು ಹೂಗುಗೊ
 • ಪೇಟೆಂದ ತಂದ ಹೂಗಿಗಿಂತ ಮನೆ ಹತ್ರವೇ ಬೆಳದ ಹೂಗೊಗೊ ಶ್ರೇಷ್ಠ
 • ಯಾವುದೇ ದೇವತಾ ಕಾರ್ಯಕ್ರಮಂಗಳಲ್ಲಿ ಸಮರ್ಪಿಸುವ ಹೂಗುಗೊ ಮತ್ತೆ ಪತ್ರೆಗೊಕ್ಕೆ ವನಸ್ಪತಿ (ಔಷಧೀಯ) ಗುಣಂಗೊ ಇದ್ದು. ಈ ಗುಣಂಗೊ ಇಲ್ಲದ್ದರ ಉಪಯೋಗ ಅಲ್ಲಿ ಇಲ್ಲೆ.
 • ಅಶ್ವತ್ಥ ಮರ ಬಿಟ್ಟರೆ ಅತ್ಯಂತ ಹೆಚ್ಚು ಆಮ್ಲಜನಕ ಬಿಡುವ ಮರ ಹೇಳಿರೆ ಮಾವಿನ ಮರ. ಹಾಂಗಾಗಿ ಅದರ “ಕೊಡಿ” ಪೂಜೆಗಳಲ್ಲಿ ಕಲಶ ಮಡುಗುವಾಗ ಪ್ರಮುಖ ಸ್ಥಾನ ಪಡೆತ್ತು. ಇದೇ ಕಾರಣಕ್ಕೆ ಶುಭ ಕಾರ್ಯಂಗಳಲ್ಲಿ ಮಾವಿನ ತೋರಣ ಕೂಡಾ ಹಾಕುವ ಕ್ರಮ ಕೂಡಾ ಬಂದದು.
 • ಪೂಜೆ ಕಳುದ ನಂತರ ಪ್ರಸಾದ ಹಂಚೆಕ್ಕು. ಭಕ್ತರು ತಿಂಬಗ ನೆಲಕ್ಕೆ ಬಿದ್ದ ಎಂಜಲು, ಆ ಜಾಗೆಲಿ ನಮ್ಮಿಂದ ಉಂಟಾದ “ವಾಕ್ ದೋಷ” ವ ನಿವಾರುಸುತ್ತು.

ಪ್ರವಚನ ಕೇಳಿದವರ ಮನಸ್ಸಿಲ್ಲಿ ಪೂಜೆ, ವ್ರತದ ಬಗ್ಗೆ  ಜಾಗೃತಿ ಮೂಡಿದ್ದು ಹೇಳಿ ಅವರ ಮುಖ ಭಾವನೆಲೇ ವ್ಯಕ್ತ ಆಗಿಂಡು ಇತ್ತಿದ್ದು.

ಎಲ್ಲರೂ ಸೇರಿ ಚೆಂದಕೆ ಲಲಿತ ಸಹಸ್ರ ನಾಮ ಹೇಳಿ ಕುಂಕುಮಾರ್ಚನೆ ಮಾಡಿ, ದೇವಿಗೆ ನೈವೇದ್ಯ ಸಮರ್ಪಿಸಿ, ಆರತಿ ಎತ್ತಿ ರಾಮ ಮಂಗಳ ಹಾಡಿ, ಪ್ರಸಾದ ಹಂಚಿ ಅಪ್ಪಗ ಅವರ ಮೋರೆಲಿ ಧನ್ಯತಾ ಭಾವ ಎದ್ದು ಕಂಡತ್ತು.

ಇನ್ನಾಣ ಸರ್ತಿ, ಭಾವನೆಗಳ, ಮಹತ್ವಂಗಳ ಅರ್ಥ ಮಾಡಿಂಡು ಪೂಜೆಯೋ ವ್ರತವೋ ಮಾಡುವೊ .
ಆಗದೋ?

ವಟ ಸಾವಿತ್ರೀ ವ್ರತ, 5.0 out of 10 based on 4 ratings
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಡಾ.ಸೌಮ್ಯ ಪ್ರಶಾಂತ

  ಅಪ್ಪಚ್ಚಿ,ಲೇಖನ ಬರದ್ದು ತುಂಬಾ ಲಾಯಿಕ್ಕ ಆಯಿದು..ಸತ್ಯವಾನ-ಸಾವಿತ್ರಿ ಕಥೆ ಗೊಂತಿತ್ತು ಆದರೂ ನಿಂಗ ಹೇಳುವಗ ಇನ್ನೂ ಖುಶಿ ಆತು ಓದುಲೆ… ಹೀಂಗೆ ಬೇರೆ ಬೇರೆ ವಿಷಯಂಗಳ ಬರಕ್ಕೊಂಡಿರಿ.. ಓದುಲೆ ಖುಶಿ ಆವುತ್ತು… :)

  [Reply]

  VA:F [1.9.22_1171]
  Rating: 0 (from 0 votes)
 2. ಅಡ್ಕತ್ತಿಮಾರುಮಾವ°

  ವಟ ಸಾವಿತ್ರಿ ವ್ರತದ ಬಗ್ಗೆ ತುಂಬಾ ಮಾರ್ಮಿಕವಾಗಿ ತಿಳಿಸಿದ್ದಿ ಶರ್ಮಣ್ಣ ಧನ್ಯವಾದಂಗ….ಇಂತಹ ಲೇಖನಂಗಳ ಬರೆತ್ತಾ ಇರಿ ಆಗದಾ…ಏ°

  [Reply]

  VN:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಶರ್ಮಪ್ಪಚ್ಚಿ ವಟ ಸಾವಿತ್ರಿ ವ್ರತ ದ ಬಗ್ಗೆ ತುಂಬಾ ಚಂದಲ್ಲಿ ಬರದ್ದವು.. ಸಾವಿತ್ರಿ ತನ್ನ ಗಂಡ ಸತ್ಯವಾನನ ಜೀವವ ತನ್ನ ಶ್ರದ್ಧೆ, ಭಕ್ತಿ ಮತ್ತೆ ವ್ರತಂದ ವಾಪಾಸು ಪಡದತ್ತು.. ಇದು ಒಂದು ಸ್ತ್ರೀ ಸಂಕಲ್ಪ ಮಾಡಿದರೆ ತನ್ನ ಗಂಡ, ಗಂಡನ ಮನೆಗೆ, ಅಪ್ಪನ ಮನೆಗೆ ಬೇಕಾಗಿ ಎಂತದುದೆ ತ್ಯಾಗ, ಸಾಧನೆ ಮಾಡುಲೆ ತಯಾರಿದ್ದು ಹೇಳಿ ಸೂಚಿಸುತ್ತು.. ಹೆಣ್ಣಿನ್ಗೆ ಇಪ್ಪ ಸಂಸ್ಕಾರವೇ ಅದು ಮದುವೆ ಆದ ಮೇಲೆ ಗಂಡನ ಮನೆಗೆ ಪ್ರಾಶಸ್ತ್ಯ ನಮ್ಮ ಹಿರಿಯೋರು ಹೇಳಿದ್ದವು.. ಮತ್ತೆ ಅದು ಬೆಳದು ಬಂದ ಅಪ್ಪನ ಮನೆ.. ಈ ಎರಡು ಬಂಧದ ಸೇತು ಒಂದು ಸ್ತ್ರೀ.. ಈ ಎರಡು ಮನೆ ಒಳಿಶುದು, ಬೆಳೆಶುದು ಅದರ ಕೈಲೆ ಇಪ್ಪದು.. ವರ್ಷವೂ ನಾವು ಎಲ್ಲೋರೂ ವಟ ಸಾವಿತ್ರಿ ವ್ರತವ ಆಚರಣೆ ಮಾಡಿ ನಮ್ಮ ಮನೆಯವರ ಆಯುಷ್ಯ, ಆರೋಗ್ಯ, ಸಕಲ ಸೌಭಾಗ್ಯಂಗ ಹೆಚ್ಚುಸುವ°.. ಲೋಕದ ಎಲ್ಲಾ ಹೆಮ್ಮಕ್ಕಳ ಮುತ್ತೈದೆ ಭಾಗ್ಯ ಇದರಿಂದಾಗಿ ಬೆಳಗಲಿ..

  [Reply]

  VA:F [1.9.22_1171]
  Rating: 0 (from 0 votes)
 4. ನೆಗೆಗಾರ°

  ಮಾಹಿತಿಗೊ ಒಳ್ಳೆದಿದ್ದು ಶರ್ಮಪ್ಪಚ್ಚಿ..

  ನಮ್ಮ ಊರಿನ ವಟವಟ ಸಾವಿತ್ರಿಅಕ್ಕಂಗೆ ಇದರ ಹೇಳಿಕೊಟ್ರೆ ಒಳ್ಳೆದೋ ಏನೋ!
  ರಜ್ಜ ಹೊತ್ತಾದರೂ ಬಾಯಿ ಸುಮ್ಮನೆ ಕೂರುಗಾಯಿಕ್ಕು, ಪಾಪ!! 😉

  [Reply]

  VA:F [1.9.22_1171]
  Rating: +1 (from 1 vote)
 5. ಡೈಮಂಡು ಭಾವ

  ಶರ್ಮಪ್ಪಚ್ಚಿ…. ಭಾರಿ ಲಾಯಿಕ್‌ ಆಯಿದು ಬರದ್ದು.. ಚಿಂತನೆಗೆ ಹಚ್ಚುತ್ತು. ಓದಲೆ ರಜ್ಜ ಹೊತ್ತು ತೆಕ್ಕೊಂಡತ್ತು..
  ಅಭಿನಂದನೆಗೊ…

  [Reply]

  VA:F [1.9.22_1171]
  Rating: 0 (from 0 votes)
 6. Ninga baraddu bhari layaka ittu.
  illi gaovratavaalli parti manegalalliyouuu… .eeeee…. vartava jati bhedavilladde aacharisuttavu.

  [Reply]

  VN:F [1.9.22_1171]
  Rating: 0 (from 0 votes)
 7. Ninga baraddu bhari layaka ittu.
  illi gaovalli parti manegalalliyouuu… .eeeee…. vartava jati bhedavilladde aacharisuttavu..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿನೆಗೆಗಾರ°ಮಂಗ್ಳೂರ ಮಾಣಿಅನಿತಾ ನರೇಶ್, ಮಂಚಿಸುವರ್ಣಿನೀ ಕೊಣಲೆಅಕ್ಷರದಣ್ಣಕಳಾಯಿ ಗೀತತ್ತೆಸಂಪಾದಕ°ಅಜ್ಜಕಾನ ಭಾವದೊಡ್ಡಮಾವ°ಬಟ್ಟಮಾವ°ಪಟಿಕಲ್ಲಪ್ಪಚ್ಚಿದೊಡ್ಡಭಾವಅನು ಉಡುಪುಮೂಲೆತೆಕ್ಕುಂಜ ಕುಮಾರ ಮಾವ°ಅನುಶ್ರೀ ಬಂಡಾಡಿಕೇಜಿಮಾವ°ದೇವಸ್ಯ ಮಾಣಿಚೆನ್ನೈ ಬಾವ°ಕೊಳಚ್ಚಿಪ್ಪು ಬಾವಅಡ್ಕತ್ತಿಮಾರುಮಾವ°ಅಕ್ಷರ°ಡೈಮಂಡು ಭಾವಎರುಂಬು ಅಪ್ಪಚ್ಚಿಚುಬ್ಬಣ್ಣಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ