ಉಪ್ಪಿನಕಾಯಿ ಮೆಡಿ

‘ಊಟಕ್ಕಿಲ್ಲದ್ದ ಉಪ್ಪಿನಕಾಯಿ ಎಂತಗೆ?’ ಹೇಳಿ ಕೊಚ್ಚಿಕೊಂಬೋರಿದ್ದವು.
ಕೊಚ್ಚಿಕೊಂಬೋರು ಹೇಳಿದೆ – ಎಂತಗೆ ಹೇಳಿದರೆ ಅವಕ್ಕೂ ಉಪ್ಪಿನಕಾಯಿ ಹೇಳಿದಾಗ ಬಾಯಿಲಿ ನೀರು ಸೊರಿತ್ತು.
ಮಾವಿನ ಕಾಯಿ, ನಿಂಬೆ ಹಣ್ಣು, ನೆಲ್ಲಿ ಕಾಯಿ, ಕರಂಡೆಕಾಯಿ ಅಲ್ಲಾ ಇನ್ನಾವುದೇ ಉಪ್ಪಿನಕಾಯಿಯಾಗಲೀ ಹೆಸರು ಕೇಳಿದ ಕೂಡ್ಲೆ ಬಾಯಿ ತುಂಬಾ ನೀರು (ಪಾವ್ಲನ ಸಿದ್ದಾಂತ ಸರಿ ಆತನ್ನೆ!). ಕಾರಣ ಇಷ್ಟೇ – ಎಲೆಯ ಮೂಲೆಲಿ ಅಥವಾ ಬಟ್ಲಿಲಿ (ಬಟ್ಲಿನ ಮೂಲೆ ಹೇಳುಲಾವುತ್ತಿಲ್ಲೆನ್ನೆ) ಒಂದು ಉಪ್ಪಿನಕಾಯಿ ಇಲ್ಲದ್ದೆ ಯಾವ ಊಟದೆ ಪೂರ್ಣ ಅತು ಹೇಳ್ಲೆಡಿಯ. ಉದಿಯಪ್ಪಾಣ ಬೆಶಿ ಬೆಶಿ ಹೆಜ್ಜೆಗೆ ತುಪ್ಪ ಅಥವಾ ಮಜ್ಜಿಗೆಯ ಒಟ್ಟಿಂಗೆ ಉಪ್ಪಿನಕಾಯಿ, ಬೇರೆ ಹೊತ್ತಿನ ಊಟದ ಅಖೇರಿಗೆ ಮಜ್ಜಿಗೆಯೊಟ್ಟಿಂಗೆ ಉಪ್ಪಿನಕಾಯಿ ಇಲ್ಲದ್ದರೆ, ಅದೂ ಮಳೆಗಾಲಲ್ಲಿ, ಊಟ ಖಂಡಿತವಾಗಿಯೂ ಅಪೂರ್ಣವೆ. ಬಂದ ನೆಂಟ್ರುಗೊಕ್ಕೆ ಊಟಕ್ಕೆ ಉಪ್ಪಿನಕಾಯಿ ಬಡಿಸದ್ದರೆ ಅಪರಾಧವೇ. ಎಲೆಯ ಅಲಂಕಾರಕ್ಕಾದರೂ ಉಪ್ಪಿನಕಾಯಿ ಬೇಕೇ ಬೇಕು.

ಇಷ್ಟೆಲ್ಲ ವಿಚಾರ ಎಂತಗೆ ಬಂತು ಹೇಳಿದರೆ ಮೊನ್ನೆ ಮದುವೆ ಊಟಲ್ಲಾದ ಘಟನೆ, ಹಾಂಗೇ ನಂತರಣ ಬೆಳವಣಿಗೆ.
ಘಟನೆಯನ್ನೇ ಹೇಳದ್ದರೆ ಹೇಂಗೆ?
ಮದುವೆ ಊಟ ಹೇಳಿದರೆ ಕೇಳಕ್ಕೊ, ಸುಗ್ರಾಸ ಭೋಜನ. ಎಲ್ಲಾ ಭಕ್ಶ್ಯ ಬಗೆಗೊ ಬಂದು ಇನ್ನೆಂತ ಮಜ್ಜಿಗೆ ಬಪ್ಪದ ಬಾಕಿ. ನಮ್ಮ ಬೈಲಿನ ಮಾಣಿ ಒಬ್ಬ ಬಾರೀ ಉಮೇದಿಲಿ ಉಪ್ಪಿನಕಾಯಿ ಬಡ್ಸಿಕೊಂಡು ಬಂದ. ಎನ್ನ ಎಲೆಲಿ ಮೊದಲು ಬಡಿಸಿದ ಉಪ್ಪಿನಕಾಯಿಯೇ ಹಾಂಗೇ ಇದ್ದ ಕಾರಣ ಬೇಡ ಹೇಳಿ ಕೈ ಅಡ್ಡ ಮಾಡಿದೆ. ಆದರುದೆ ಆ ಮಾಣಿ ಗಡಿಬಿಡಿಲಿ ಎನ್ನ ಕೈ ಮೇಲೇ ಒಂದು ತುಂಡು ಉಪ್ಪಿನಕಾಯಿ ಹಾಕಿಯೇ ಬಿಟ್ಟ. ನಿರ್ವಾಹ ಇಲ್ಲದ್ದೆ, ಅಭ್ಯಾಸಂದ ಉಂಡ ಕೈಯ ನಕ್ಕೆ.
ಅದ್ಭುತ ಅನುಭವ! ಅಂತಾ ರುಚಿಯ ಉಪ್ಪಿನಕಾಯಿಯ ಎನ್ನ ಜನ್ಮಲ್ಲಿ ತಿಂದಿತ್ತಿಲ್ಲೆ! ಮಾಣಿಗೆ ಮನಸ್ಸಿಲೇ ‘ಥೇಂಕ್ಸ್’ ಹೇಳಿದೆ.
ರುಚಿಯ ಗುಂಗಿಲೇ ಇಪ್ಪಾಗ ಎನ್ನ ಹತ್ತರೆ ಊಟಕ್ಕೆ ಕೂದೋನು, ಬಹಶಃ ಬೊಂಬಾಯಿಯೋನೋ, ಪೂನಾದೋನೋ ಆಗಿರಕ್ಕು, ಎನ್ನ ಪಕ್ಕೆಗೆ ಕೈಗೆಂಟಿಂದ ಕುಟ್ಟಿದ. ಹಾಂಗೆ ರಜಾ ಅಸಮಧಾನಲ್ಲೇ ಮೋರೆ ತಿರ್‍ಗಿಸಿದಾಗ ಅವನ ಮರಾಠಿ ಛಾಯೆಯ ಕನ್ನಡಲ್ಲಿ ಕೇಳಿದ ‘ಇದೇನು ಬೆಡೇಕರ್ ಆಚಾರ್ ಏನ್ರೀ?’
‘ಗೊತ್ತಿಲ್ಲ. . .ಯಾಕೆ?’
‘ಅಷ್ಟು ಛಲೋ ಐತ್ರಿ.. ಈಗೇನು ಮಾವಿನ ಮಿಡಿ ಸಿಗುತ್ತೇನ್ರೀ?’
ಆನು ಹೇಳಿದೆ , ಎನಗೆ ಉಪ್ಪಿನಕಾಯಿ ತಿಂದಷ್ಟೇ ಗೊಂತು. ಮತ್ತೆ ಮಾವಿನ ಮೆಡಿ, ಕಂಪೆನಿ ಎಲ್ಲಾ ಎನಗೂ ಹೊಸತ್ತೇ ಹೇಳಿ. ಎಂಗಳ ಮಾತು ಆಯ್ಕೊಂಡಿದ್ದಾಂಗೆ ಎಲ್ಲರುದೆ ಗಡಿಬಿಡಿಲಿ ಕೈ ತೊಳವಲೆ ಎದ್ದವು. ಎಂಗಳೂ ಎದ್ದೆಯೊ.
ಹಾಂಗೇ ಹೇಳಿದೆ, ಕೆಳ ಅಡಿಗೆಯೋರನ್ನೇ ವಿಚಾರ್‍ಸುವೊ ಹೇಳಿ.
==
‘ಹೋ. .ಹೋ. .’ ಅಡುಗೆಯೋನು ಎಂಗಳ ಪ್ರಶ್ನೆ ಕೇಳಿ ದೊಡ್ಡಕ್ಕೆ ನೆಗೆ ಮಾಡುಲೆ ಸುರು ಮಾಡಿದ.
‘ಬೆಡೇಕರೂ ಅಲ್ಲಾ ಯು ಕೆ ಯೂ ಅಲ್ಲ. ಟಾಟ ಬಿರ್‍ಲರದ್ದಂತೂ ಮೊದಲೇ ಅಲ್ಲ. ಇದು ಸೇಡಿಯಾಪಿನ ಆಶಕ್ಕನ ಸ್ಪೆಶಲ್’.
ಎಂಗಳ ಹಾಂಗೇ ಇನ್ನೂ ಕೆಲವರ ಕುತೂಹಲದ ಪ್ರಶ್ನೆಗೆ ಉತ್ತರ ತನ್ನಿಂತಾನೆ ಸಿಕ್ಕಿತ್ತನ್ನೆ. ‘ನೋಡಿ, ಆಶಕ್ಕನ ಉಪ್ಪಿನಕಾಯಿ ಹೇಳಿದರೆ ಉಪ್ಪಿನಕಾಯಿ. ಕೆಲವು ವರ್ಷಂದ ನೋಡುತ್ತಾ ಇದ್ದೆ, ಅವರ ಉಪ್ಪಿನಕಾಯಿ ರುಚಿಯೇ ಬೇರೆ. ಸುತ್ತ ಮುತ್ತ ಎಲ್ಲಿದೆ ಅವರ ಉಪ್ಪಿನಕಾಯಿಗೆ ತಾಗುವ ಉಪ್ಪಿನಕಾಯಿಯೇ ಇಲ್ಲೆ.
ಕಂಪೆನಿಗೊ ಬಿಡಿ ವಗಟ್ಟಲೆ ಅನುಭವದ ಅಜ್ಜಿಯಕ್ಕಳ ಉಪ್ಪಿನಕಾಯಿದೆ ಇವರದ್ದಕ್ಕೆ ಬಾರ.’ ಹೇಳಿಕೊಂಡು ಒಂದು ತುಂಡು ಬಾಯಿಗೆ ಹಾಕಿಕೊಂಡು ಮಜ್ಜಿಗೆ ಕುಡ್ದ.

ಅಡಿಗೆಯೋನ ವರ್ಣನೆ, ಮತ್ತವ ಉಪ್ಪಿನಕಾಯಿ ತಿಂದ ರೀತಿ ಎಲ್ಲಾ ಬಾರೀ ಚೆಂದ, ಮನಸ್ಸಿಂಗೆ ಅಂಟುವಂತಾದ್ದು. ಹೊಟ್ಟೆತುಂಬ ಉಂಡು ನಿಂದೋರ ಬಾಯಿಲಿಯೂ ಕೊದಿ ಅರಿವಾಂಗಾತು.
ಅಷ್ಟಪ್ಪಗ ಎನಗೆ ಮನಸ್ಸಿಂಗೆ ಕಂಡತ್ತು – ಈ ಆಶಕ್ಕನ ಕಂಡು ಅವರ ಸೂತ್ರ ಎಂತಾ ಹೇಳಿ ತಿಳ್ಕೊಂಡರೆಂತ.?
==

ಉಪ್ಪಿನಕಾಯಿಯ ರುಚಿ ನೋಡಿದೋರು ಗ್ರೇಶುಗು ಇದರ ಪಾಕ ಮಾಡಿದ ಜನ ಒಂದು ಹಣ್ಣು ಹಣ್ಣು ತೊಂಡಿ, ದಿನ ಇಡೀ ಕುಟ್ಟಣೆಲಿ ಎಲೆ ಅಡಕ್ಕೆ ಕುಟ್ಟಿಗೊಂಡು, ಅಗಿಕ್ಕೊಂಡು, ಉಗಿಕ್ಕೊಂಡು, ಹೋಗಿ ಬಪ್ಪೋರೆಲ್ಲಾ ವಿಚಾರಿಸಿಕೊಂಡು, ಮಕ್ಕಳೆಲ್ಲಾ ಜೋರುಮಾಡಿಕ್ಕೊಂಡು ಇಪ್ಪ ಮುದಿ ಅಬ್ಬೆ ಆದಿಕ್ಕೂ ಹೇಳಿ. ಇಲ್ಲೇ ಅಂದಾಜು ಹೆಚ್ಚು ಕಡಿಮೆ ಅಪ್ಪದು. ಇದೇ ಚಿತ್ರವ ಮನಸ್ಸಿಲಿ ಮಡಿಕ್ಕೊಂಡು ಹೋಗಿ ವಿಚಾರಿಸಿದಾಗ ನೆಗೆಮಾಡಿಕೊಂಡು ಬಪ್ಪಲೆ ಮಾಡಿಕೊಂಡ ಹೆಮ್ಮಕ್ಕೊ ‘ಆನೇ ಆಶಾ’ ಹೇಳಿದಾಗ ಎನ್ನ ಮನಸ್ಸಿನ ಚಿತ್ರ ಎಲ್ಲ ಮಂಗಮಾಯ! ಗೌರ ಬಣ್ಣದ, ಹೊಳೆತ್ತ ಕಣ್ಣುಗಳ, ನೆಗೆ ಮಾಡಿಕೊಂಡಿಪ್ಪ ಆಶಕ್ಕ ಪಾದರಸದಾಂಗಿಪ್ಪೋರು.
ಮತ್ತೆ ವಿಚಾರಿಸಿದಾಗ ಗೊಂತಾದ್ದು ಆಶಕ್ಕೆಂತ ಮುದುಕಿಯಲ್ಲದ್ದರುದೇ ತನ್ನ ಇಬ್ರು ಮಕ್ಕಳೊಟ್ಟಿಂಗೇ ಕುಟುಂಬದ ಹತ್ತಿಪ್ಪತ್ತು ಮಕ್ಕಳ ಕೈಯಾರೆ ಸಾಂಕಿದ ದೊಡ್ಡ ಅಬ್ಬೆ ಹೇಳಿ.
ಮನಸ್ಸಿನ ಲೆಕ್ಕಾಚಾರ ಎಲ್ಲಾ ಹೆಚ್ಚುಕಡಿಮೆ ಆಗಿ, ಬೆಪ್ಪ್ಫಾಗಿ ಇನ್ನೂ ಸುದಾರ್‍ಸಿಕೊಳ್ಳಕ್ಕಾರೆ ಲಿಟರ್ ಗಾತ್ರದ ಗ್ಲಾಸಿಲಿ ಬೆಶಿ ಬೆಸಿ ಕಾಫಿ ಆಶಕ್ಕ ತಂದು ಮಡುಗಿದವು. ಕಾಫಿ ಕುಡ್ಕೊಂಡು ಆನು ಬಂದ ಉದ್ದೇಶ ಹೇಳಕ್ಕು ಹೇಳಿ ಮಾಡಿದರೂ ಆಶಕ್ಕನ ಕೆಲಸದ ಗಡಿಬಡಿಲಿ ಬಾಯಿ ಬಿಡ್ಲಾಯಿದಿಲ್ಲೆ. ಆದರುದೆ ಕುಡುದ ಗ್ಲಾಸು ತೆಕ್ಕೊಂಡು ಹೋಪಲೆ ಬಂದಿಪ್ಪಾಗ ಧೈರ್ಯಮಾಡಿ ಕೇಳಿದೆ ‘ಆಶಕ್ಕ, ನಿಂಗಳ ಉಪ್ಪಿನಕಾಯಿ ರುಚಿನೋಡಿದೋರಿಂಗೆಲ್ಲ ಆಶ್ಚರ್ಯ. ನಿಂಗೊ ಅಂತಹ ಪಾಕ ಹೇಂಗೆ ಸಾಧಿಸಿದಿ, ನಿಂಗಳ ತಯಾರಿಯ ವೈಶಿ ಎಂತ? ರಜಾ ಪುರುಸೊತ್ತು ಮಾಡಿ ಹೇಳುಲಕ್ಕೊ’ ಹೇಳಿ ಕೇಳಿದ್ದಕ್ಕೆ ಓಡಾಟ ಮದ್ಯೆ ಸಣ್ಣ ನೆಗೆ ಮಾತ್ರ.
ಆನೆಂತ ಗ್ರೇಂಶಕ್ಕು. ಒಪ್ಪಿದವೇಳಿಯೋ ಇಲ್ಲೇಳಿಯೋ. ಆನೆಂತಾ ಪೇಪರಿನೋನು ಅಲ್ಲ.
ಮತ್ತೆ ಸಂದರ್ಶನ ಮಾಡಿ ಪೇಪರಿಂಗೆ ಕೊಡುವ ಉದ್ದೇಶವೂ ಇಲ್ಲೆ. ಹಾಂಗೇ ಯಾವ ಗೊತ್ತು ಗುರಿ ಇಲ್ಲದ್ದೆ ಹೊತ್ತು ಹಾಳುಮಾಡ್ಲೆ ಒತ್ತಾಯ ಮಾಡುದಾದರೂ ಹೇಂಗೆ.
ಈ ಮಂಡೆ ಬೆಶಿಲಿ ಇಪ್ಪಗಳೇ ಬಂದದು ಜನ್ನಣ್ಣ, ಆಶಕ್ಕನ ಯಜಮಾನ್ರು.
‘ಹೋಯ್, ಒಳ್ಳೆ ಸಮಯಕ್ಕೆ ಬಂದಿ. ಯಜಮಾನ್ತಿಯೊಟ್ಟಿಂಗೆ ಹಲಸು ಮೇಳಕ್ಕೆ ಇಂದೇ ಹೋಪೋ ಹೇಳಿ ಇತ್ತಿದ್ದೆ. ನಿಂಗೊಳು ಬನ್ನಿ, ಎಂತಾಹೇಳಿ ನೋಡುವ. ಈಗ ಮಿಂದು ಉಂಬೊ. ಮತ್ತಲ್ಲಾ ಮತ್ತೆ’ ಒಂದೆ ಉಸಿರಿಲಿ ಜನ್ನಣ್ಣನ ಅಪ್ಪಣೆ! ಎನ್ನ ಸಮಸ್ಯೆ ಬಗೆಹರಿವ ಹಾಂಗೆ ಕಂಡತ್ತು!
==
ಜನ್ನಣ್ಣಂದೇ ಸವಾರಿ. ಹತ್ತರೆಯೇ ಆನುಕೂದ್ದು. ಹಿಂದೆ ಆಶಕ್ಕ, ಜನ್ನಣ್ಣನ ಅಕ್ಕ ಮತ್ತೆ ಸೊಸೆ ಕೂದ್ದು. ಹೀಂಗೆ ಕೂದೋರು ಎಲ್ಲಿಗೂ ಓಡ್ಲಿಲ್ಲೆನ್ನೆ!
ಕಾರು ಜೋರಿಲಿ ಹೋಪಲೆ ಸುರುಮಾಡ್ತಾ ಇದ್ದಾಂಗೆ ಆಶಕ್ಕನ ಕೇಳಿದೆ ‘ಈಗ ನಿಂಗಳ ಉಪ್ಪಿನಕಾಯಿ ಹಾಕುವ ರೀತಿ ಹೇಳ್ಲಕ್ಕನ್ನೆ ’. ಜನ್ನಣ್ಣಂದೆ ಉಮೇದಿಲಿಯೇ ಹೇಳಿದ ‘ಅಪ್ಪಪ್ಪು, ನಿನ್ನದೂ ಒಂದೂ ಸಂದರ್ಶನ ಆಗಲಿ ನೋಣಾ.’ ಆಶಕ್ಕ ನಾಚಿ ಮುದ್ದೆ ಆದವು.
ಹತ್ತರೆ ಕೂದ ಅತ್ತಿಗೆ, ಸೊಸೆ ಉಮೇದು ಕೊಟ್ಟಪ್ಪಾಗ ನಿಧಾನಕ್ಕೆ ಹೇಳುಲೆ ಸುರು ಮಾಡಿದವು.

‘ಒಳ್ಳೆ ಮಾವಿನ ಮೆಡಿ ಬೇಕು.’
‘ಒಳ್ಳೆ ಮೆಡಿ ಹೇಳಿದರೆ?’
‘ಅಪ್ಪೆ ಮೆಡಿ. ಒಳ್ಳೆ ಪರಿಮ್ಳ ಇರುತ್ತು. ಅದರ ತೊಟ್ಟು ಮುರ್‍ದಾಗ ಸೊನೆ ಅ ದೂರಕ್ಕೆ ಹಾರುತ್ತು. ಬರೇ ಎಳತ್ತು ಅಥವಾ ತುಂಬಾ ಬೆಳದ ಮೆಡಿ ಆಗ. ಸಾಧಾರಣ ಮೂರು ನಾಲ್ಕು ವಾರ ಬೆಳವಣಿಗೆಯ ಮೆಡಿ ಯೋಗ್ಯ.’
‘ನಿಂಗಳಲ್ಲೇ ಮೆಡಿ ಸಿಕ್ಕುತ್ತಾ ಅಥವಾ ಬ್ಯಾರಿಗಳ ಕೈಯಿಂದ ತೆಕ್ಕೊಂಬದೊ? ’
‘ಶಿವತೋಟ, ಬದಿಯಡ್ಕ, ಗಾಣಕೊಟ್ಟಗೆ, ಬಂಡಸಾಲಿಲೆಲ್ಲ ಕಾಟು ಮಾವಿನ ಮರಂಗೊ ಇದ್ದವು.
ಎಲ್ಲೂ ಸಿಕ್ಕದ್ದರೆ ಬ್ಯಾರಿಗಳ ಕೈಯಿಂದ ಕೊಂಬದಷ್ಟೆ.
‘ಮೆಡಿಗೆ ಇಷ್ಟೆಲ್ಲ ಊರು ಸುತ್ತೆಕ್ಕಾವುತ್ತಾ?’
‘ಇಲ್ಲೆ, ಇಲ್ಲೆ ಇವೆಲ್ಲ ಎಂಗಳದ್ದೇ ಜಾಗೆಯ ಒಳಚ್ಚಿಲುಗೊ. ಬಂಡೆಸಾಲೆಯ ಮರಂಗಳಲ್ಲಿ ಅಪ್ಪೆ ಮೆಡಿ ಸಿಕ್ಕುತ್ತು. ಆದರೆ ಮರ ಇಡೀ ಉರಿಗೊ ಇಪ್ಪ ಕಾರಣ ಮೆಡಿ ಕೊಯ್ಸುದೇ ಕಷ್ಟದ ಕೆಲಸ’ ನೆಗೆ ಮಾಡಿಕೊಂಡೇ ಹೇಳಿದವು.
‘ಹಾಂಗಾರೆ ಉರಿಯ ಗೆದ್ದರೆ ಮತ್ತೆ ಕೆಲಸ ಆದ ಹಾಂಗೇ, ಅಲ್ಲದೊ?’
‘ಇದು ಶುರು ಅಷ್ಟೆ. ಮಾವಿನ ಮೆಡಿಯ ಗೊಂಚಲು ಗೊಂಚಲು ಕೊಯ್ದು ಹೆಡಗೆಲಿ ಇಳಿಸಿದ್ದ ಉಪ್ಪಿನಕಾಯಿಗೆ ಲಾಯಕ್ಕು. ಮರಂದ ಬಿದ್ದ ಮೆಡಿಗಳ ಆಗಾಣ ಉಪಯೋಗಕ್ಕಷ್ಟೆ ಅಕ್ಕು.
ಕಾರಿನ ಚುಕ್ಕಾಣಿ ಹಿಡ್ಕೊಂಡ ಜನ್ನಣ್ಣ ಒನ್ಸತ್ತಿ ಬ್ರೇಕ್ ಹಾಕಿ ‘ಇದಕ್ಕೋ ಉಪ್ಪಿನಕಾಯಿಗೆ ಎಷ್ಟು ಮೆಡಿ ಇದ್ದರೂ ಸಾಲದ್ದಪ್ಪದು?’

‘ಹಾಂಗಲ್ಲ, ರುಚಿ ಮತ್ತು ಬಾಳಕೆ ಬರಕ್ಕೇಳಿಯಾದರೆ ಹೆಡಗೆಲಿ ಇಳಿಸಿದ ಮೆಡಿಯೇ ಆಯಕ್ಕು. ಇಲ್ಲದ್ದರೆ ಉಪ್ಪಿನಕಾಯಿ ಹಾಕಿ ಕೆಲವೇ ಸಮಯಲ್ಲಿ ಬರಣಿ ಇಡೀ ಹುಳ ತುಂಬುಗು!’ ಆಶಕ್ಕನ ಸಮಜಾಯಿಶಿ.
‘ಮನೆಗೆ ತಂದ ಮೆಡಿಯ ತೊಟ್ಟು ಮುರಿದು ಒಂದೊಂದನ್ನೇ ಶುಬ್ರ ವಸ್ತ್ರಲ್ಲಿ ಉದಿಕೊಳ್ಳಕ್ಕು.
ಹೀಂಗೆ ಉದ್ದಿದ ಮೆಡಿಗಳ ಒಂದು ಬಾಲ್ದಿಗೆ ಹಾಕಕ್ಕು. ಒಟ್ಟಿಂಗೆ ಎಲ್ಲಾ ಮೆಡಿಯ ಬಾಲ್ದಿಲಿ ತುಂಬುದಲ್ಲ.

ಒಂದೆರಡು ಮೊಗೆ ಮೆಡಿಹಾಕಿದ ಮೇಲೆ ಉಪ್ಪಿನ ಹೊಡಿ ಬಿಕ್ಕಕ್ಕು. ಬಾಲ್ದಿ ತುಂಬುವಲ್ಲಿವರೆಗೆ ಮೆಡಿ ಆದ ಮೇಲೆ ಉಪ್ಪು ಮತ್ತೆ ಮೆಡಿ ಹಾಂಗೆ ತುಂಮ್ಸಿಕೊಂಡಿರಕ್ಕು.
ಬಾಲ್ದಿ ಪೂರ್ತಿ ತುಂಬಿದ ಮೇಲೆ ನಿರ್ಮಲದ ಕಗ್ಗಲ್ಲಿನ ತುಂಡುಗಳ ಅವುಗಳ ಮೇಲೆ ಮಡಿಗಿ ಮುಚ್ಚಕ್ಕು.’
‘ಅಲ್ಲ ಆಶಕ್ಕ, ತಿಂಬ ಮೆಡಿಯ ಮೇಲೆ ಕಲ್ಲೊಯಿಶುವುದು ಅದೆಂತಾ ಪ್ರಯೋಗ?’
‘ಅಣ್ಣಾ, ಮೆಡಿಗೆ ಉಪ್ಪುಹಾಕಿ ಮಡಿಗಿದಾಗ ಅದು ನೀರು ಬಿಡುತ್ತು. ಪೂರ್ತಿ ನೀರು ಬಿಡ್ಲೆ ಕೈಲಿಯೇ ಒತ್ತಕ್ಕಕ್ಕು. ಕೈಲಿ ಒತ್ತಿದರೆ ಮೆಡಿ ನಜ್ಜುಗುಜ್ಜಕ್ಕು. ಅದಕ್ಕೆ ಮೆಡಿಯ ಮೇಲೆ ಕಲ್ಲು ಮಡುಗುತ್ತೆ. ಅದೆಂತ ಕೆಸರು ಬಿಡ್ತಿಲ್ಲೆ.’
‘ಇಷ್ಟೆಲ್ಲಾ ಸೂಕ್ಷ್ಮ ಎನಗೇಂಗೆ ಗೊಂತಾಯೆಕ್ಕು?’ ಜನ್ನಣ್ಣ ನೆಗೆ ಮಾಡಿದ.
ಆಶಕ್ಕನೂ ಅತ್ತಿಗೆ ಸೊಸೆಯರೊಟ್ಟಿಂಗೆ ನೆಗೆಮಾಡಿದವು.
‘ಮರದಿನ ಬಾಲ್ದಿ ಮುಚ್ಚಳ ತೆಗದು, ಕಲ್ಲ ಎತ್ತಿ ಮಡಿಗಿ ಮೆಡಿಗಳ ಮತ್ತೊಂದು ಬಾಲ್ದಿಗೆ ಸೊರಿಯೆಕ್ಕು.
ಸೊರಿವಾಗ ಕೈ ಎಂತ ಮುಟ್ಸದ್ದೆ ಮೆಡಿ ಅಡಿ ಮೇಲಪ್ಪಾಂಗೆ ಸೊರಿಯೆಕ್ಕು. ಮತ್ತೆ ಕಲ್ಲ ತುಂಡುಗಳ ಮಡಿಗಿ ಮುಚ್ಚಕ್ಕು.
ಈ ರೀತಿ ಎಂಟೊಂಭತ್ತು ದಿನ ಮೆಡಿ ಪೂರ್ತಿ ಚಿರುಟುವನ್ನಾರ ಮಾಡಕ್ಕು.’
‘ಮೆಡಿ ಚಿರಿಟಿದರೆ ಮೆಡಿ ಆದ ಹಾಂಗೆ ಅಲ್ಲದ, ಅಕ್ಕಾ? ’
‘ಅದು ಹೇಂಗೆ? ಇದೆಲ್ಲಾ ಒಂದು ಹೊಡೆಲಿ ಅಪ್ಪ ಕೆಲಸ. ಇದಕ್ಕೆ ಹೊಂದಿಕೊಂಡೆ ಅಪ್ಪ ಕೆಲಸ ಮತ್ತೊಂದು ಹೊಡೆಲಿ. ಒಳ್ಳೇ ಒಣಗಿದ ಕೆಂಪು ಮೆಣಸು, ಸಾಸೆಮೆಯ ಅಜಪ್ಪಿ ಮಿಲ್ಲಿಂಗೆ ಕೊಟ್ಟು ನಯಕ್ಕೆ ಹೊಡಿ ಮಾಡಿಸಿಕೊಳ್ಳಕ್ಕು. ಸಾಸಮೆ ದೊಡ್ಡ ನಮುನೆದು ಆದರೆ ಒಳ್ಳೇದು. ಕೆಂಪು ಊರ ಮೆಣಸು ಉದ್ದದ್ದು, ಉರುಟಿಂದಲ್ಲ, ಉಪ್ಪಿನಕಾಯಿಗೆ ಒಳ್ಳೆದು. ಹಾಂಗೇ ನಮ್ಮ ಹಿತ್ತಿಲ್ಲಾದ ಅರಶಿನವ ಒಣಗಿಸಿ ಹೊಡಿ ಮಾಡಿದ್ದು ಒಳ್ಳೇ ಎರಕ್ಕ. ಬೇರೆ ಒಂದು ಪಾತ್ರೆಲಿ ಉಪ್ಪಿನ ಕಡುನೀರಿನ ಕೊದಿಶಿ, ತಣಿಶಿ ಅರಿಶಿ ಮಡಿಕ್ಕೊಳ್ಳಕ್ಕು. ’
‘ಇನ್ನು ಗೊಂತಾತು ಬಿಡಿ. ಎಲ್ಲಾ ಒಟ್ಟಿಂಗೆ ಕಲಸಿಕೊಂಡರಾತು ಅಲ್ಲದೊ?’
‘ನೋಡಣ್ಣ, ಉಪ್ಪಿನಕಾಯಿಯ ರುಚಿ, ಪರಿಮ್ಮಳ ಮಡಿಕ್ಕೊಂಬಲೆ ಇನ್ನೂ ಚೂರು ಕೆಲಸ ಇದ್ದು. ಮೆಡಿ ಪೂರ್ತಿ ಚಿರುಂಟಿದ ಮೇಲೆ ಬಾಲ್ದಿಯ ಬಗ್ಗಿಸಿ ಎಲ್ಲಾ ನೀರಿನ ಚೆಲ್ಲಕ್ಕು. ಈಗೊಳಿದ
ಮೆಡಿಗಳೆಲ್ಲ ಶುಭ್ರ ವಸ್ತರಲ್ಲಿ ಹರಡಿ ಒಣಗುಲೆ ಬಿಡಕ್ಕು. ನೀರಿನ ಪಸೆ ಎಲ್ಲ ಹೋದ ಮೇಲೆ ದೊಡ್ಡಗಾತ್ರದ, ಕಪ್ಪಾದ ಮೆಡಿಗಳ ಹೆಕ್ಕಿ ತೆಗೆದು ಮಡಿಕ್ಕೊಳ್ಳಕ್ಕು. ಇವೆಂತ ಹಾಳಾದ್ದಲ್ಲ, ಆದರೆ ರುಚಿಲಿ ವ್ಯತ್ಯಾಸ ತೋರಿಸುತ್ತವು. ಹೀಂಗೆ ಆದ ಹತ್ತು ಕೆಜಿ ಮೆಡಿಗೆ ಒಂದುವರೆ ಕೆಜಿ ಸಾಸಮೆ ಹೊಡಿ, ಒಂದು ಕೆಜಿ ಮೆಣಸಿನ ಹೊಡಿ, ಇನ್ನೂರು ಗ್ರಾಂ ಅರಶಿನ ಅಗತ್ಯ. ಈ ಮೂರೂ ಹೊಡಿಗಳ ಕೊದಿಶಿ,ತಣಿಶಿ, ಅರಿಶಿದ ಉಪ್ಪಿನ ಕಡು ದ್ರಾವಣವ ಅಗತ್ಯದ ಹಾಕಿಕೊಂಡು ಗಟ್ಟಿ ಚಟ್ನಿಯ ಹಾಂಗೆ ಕಲಸಿಕೊಳ್ಳಕ್ಕು. ಈ ಚಟ್ನಿಯೊಟ್ಟಿಂಗೆ ಮೆಡಿಯ ಹಾಕಿ ಸರಿಯಾಗಿ ಬೆರ್‍ಸಿಕೊಂಡು ಪಿಂಗಾಣಿಯ ಭರಣಿಲಿ ತುಂಬ್ಸಿಕೊಳ್ಳಕ್ಕು ’
‘ಈ ಭರಣಿಯ ಕಂಪೆನಿಯೋರಹಾಂಗೆ ಸೀಲು ಎಂತಾರು ಮಾಡ್ಲೆ ಇದ್ದೊ? ’
‘ಸೀಲೆಂತ? ಭರಣಿ ಮುಚ್ಚೆಲಿನಡಿ ಚಟ್ನಿಹಾಂಗಿಪ್ಪ ಹೊಡಿಯ ಹರಡಿ ಬಾಯಿ ಕಟ್ಟಿ ಮಡುಗುದು. ಈ ಹೊಡಿಯೇ ಹೊರಡಿ.

ಹೊರಡುದೆಲ್ಲಿಗೇ, ಹೊರಟೇ ಇದ್ದೆನ್ನೆ! ಆದರೂ ಕೆಲವು ಸಂಶಯಂಗೊ.
ಒಂದನೇದಾಗಿ, ಈ ಉಪ್ಪಿನಕಾಯಿಯ ಸೂತ್ರ ನಿಂಗಳದ್ದೊ?
ಎರಡ್ನೇದಾಗಿ, ಈ ಎಲ್ಲಾ ಕೆಲಸಂಗಳ ನಿಂಗೊಬ್ಬರೇ ಮಾಡ್ತೀರ?
ಮೂರ್‍ನೇದಾಗಿ, ಈ ಉಪ್ಪಿನಕಾಯಿ ಎಷ್ಟು ವರ್ಷ ಬಾಳಿಕೆ ಬಕ್ಕು?’

‘ಅಣ್ಣಾ, ಎನ್ನ ಅತ್ತೆಗಳ ಸೂತ್ರವನ್ನೇ ಆನು ಅನುಸರಿಸುದು. ಮತ್ತೆ ಇಲ್ಲಾ ಕೆಲಸ ಎನ್ನ ಒಬ್ಬಂದಲೇ ಹೇಗೆ ಸಾಧ್ಯ. ಎನ್ನ ತಂಗೆಕ್ಕೊ, ಸೊಸೆ ಎಲ್ಲಾ ಎನಗೆ ಸಕಾಯತ ಮಾಡ್ತವು. ಬಾಳಿಕೆಯ ಬಗ್ಗೆ ಹೇಂಗೆ ಹೇಳಲಿ. ಎನ್ನ ಅತ್ತಿಗೆಯ ಮಗಂಗೆ ಉಪ್ಪಿನಕಾಯಿ ಕೊಟ್ಟು ಮೂರು ವರ್ಷ ಮೀರಿತ್ತು. ಇನ್ನೂ ಅದೇ ರುಚಿಯೇ ಇದ್ದು ಹೇಳಿ ಹೇಳ್ತ. ಎಂಗಳಲ್ಲಿ ಇವಕ್ಕೆ ತಾಳ್ಳಿಂದ ಜಾಸ್ತಿ ಉಪ್ಪಿನಕಾಯಿಯೇ ಬೇಕು! ವರ್ಷ ಮೀರಿ ಒಳ್ದರಷ್ಟೆ!

‘ಆದರೂ ಎನ್ನ ಸಂಶಯ ಪೂರ್ಣ ಪರಿಹಾರ ಆಯಿದಿಲ್ಲೆ ಅಕ್ಕಾ. ನಿಂಗಳ ಅತ್ತೆಯೋರು ಮಾಡಿದ ಉಪ್ಪಿನಕಾಯಿಯ ರುಚಿಯ ಹಾಂಗು ನಿಂಗಳ ಉಪ್ಪಿನಕಾಯಿಯ ರುಚಿಯ ಎರಡನ್ನೂ
ನೋಡಿದೋವು ಇದ್ದವು. ನಿಂಗಳದ್ದೇ ವಿಶೇಷ ಆಗಿಪ್ಪದು ಕೈಗುಣವೋ ಎಂತ?’
ಆಶಕ್ಕ ಸಣ್ಣಕ್ಕೆ ನೆಗೆ ಮಾಡಿದವು. ಜನ್ನಣ್ಣನ ಸವಾರಿ ಹಲಸು ಮೇಳದ ಹತ್ತರೆ ಬಂತು. ಎಲ್ಲಿಂದಲೋ ಬಂದು ಎಲ್ಲಿಗೋ ಹೋಪಾಗ ಎಂತದೋ ಒಗಟಿನ ಬಿಡ್ಸಿದ ತೃಪ್ತಿಂದ ಜನ್ನಣ್ಣನೊಟ್ಟಿಂಗೆ ಹಲಸು ಮೇಳಕ್ಕೆ ಹೋದೆ.

~*~*~

ರಾಮಚಂದ್ರ ಮಾವ°

   

You may also like...

5 Responses

 1. ಸುಮನ ಭಟ್ ಸಂಕಹಿತ್ಲು. says:

  ವಾಹ್… ಶುಧ್ಧಿಯ ತಲೆಬರಹಂದ ಹಿಡುದು ಅಖೇರಿವರೆಗೆ ಓದುವಗ ಬಾಯಿಲಿ ಎಂಜಲು ತುಂಬುದು, ನುಂಗುದು ಮಾಡ್ತಾ ಓದಿದೆ.
  ಭಾರೀ ಲಾಯಿಕಾಯಿದು ವಿವರಣೆ.
  ಎನ್ನ ದೊಡ್ದ ಸೋದರ ಮಾವನ ೨ ತಂಗೆಕ್ಕಳ ಸೇಡಿಯಾಪಿಂಗೆ ಕೊಟ್ಟದು, ಹಾಂಗೆ ಈ ಶುಧ್ಧಿಲಿ ಬಂದವರೆಲ್ಲ ಹತ್ತರಂದ ಪರಿಚಯದೆ ಇದ್ದು.
  ಇನ್ನೊಂದರಿ ಸೇಡಿಯಾಪಿಂಗೆ ಹೋಯೆಕಂಬಗ ಆ ಉಪ್ಪಿನಕಾಯಿ ರುಚಿ ನೋಡ್ಲೆ.
  ಲಾಯಿಕಾಯಿದು ಬರದ್ದು.

 2. ಚೆನ್ನೈ ಭಾವ° says:

  ಒಂಚೂರು ಬೇಕಾದ ಉಪ್ಪಿನಕಾಯಿಲಿ ಎಷ್ಟೊಂದು ಶುದ್ದಿ!. ಲಾಯಕ ಆಯ್ದು. ಒಂಚೂರೇ ಬೇಕಾದ್ದಾರೂ ಅದಿಲ್ಲದೆ ಮತ್ತೆಂಸರ ಹವೀಕರ ಊಟ ಅಲ್ಲದೋ !

  ಬಿಡೇಕಾರ್ ಉಪ್ಪಿನಕಾಯಿಗಿಂತ ಆಶಕ್ಕನ ಉಪ್ಪಿನಕಾಯಿಯೇ ವಾಸಿ. ಶುದ್ದಿ ಪಷ್ಟಾಯು ಮಾಂವ° ಹೇದು ಹೇಳಿತ್ತು ಇತ್ಲಾಗಿಂದ.

  • ಪೆಂಗಣ್ಣ° says:

   ಯೇ ಚೆನ್ನೈ ಭಾವಾ
   ಈ ಬಿಡೇಕಾರೆ ಉಪ್ಪಿನಕಾಯಿ ಹೇಂಗೆ ಹಿಡ್ಕೊಂಬದು ಅಂಬಗ..!

  • A Ramachandra Bhat says:

   oppannana bailinoringella uppinakaayi hattareye allado?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *