ವಿಷುವಿಶೇಷ ಸ್ಪರ್ಧೆ – 2016: ಕಥೆ ಪ್ರಥಮ – ಸುರೇಶ್ ಬೆಳ್ತಂಗಡಿ

ಹವ್ಯಕ ಸಾಹಿತ್ಯ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2016” ಯಶಸ್ವಿಯಾಗಿ ಮೊನ್ನೆ ಕಳುದತ್ತು. (ಫಲಿತಾಂಶ: ಇಲ್ಲಿದ್ದು)
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ.
ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ತು.

ವಿಷು ವಿಶೇಷ ಸ್ಪರ್ಧೆ- 2016ಕಥೆ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಕಥೆ.
ಕಥೆಗಾರ ಸುರೇಶ್ ಬೆಳ್ತಂಗಡಿ ಇವಕ್ಕೆ ಬೈಲಿನ ಪರವಾಗಿ ಮನದುಂಬಿದ ಅಭಿನಂದನೆಗೊ.

ದೇವರು ನಮ್ಮ ಕೈ ಬಿಡ°:

ಅ೦ದು ವಿಶೇಷ ದಿನ. ಚೌತಿ,ಹಾ೦ಗಾಗಿ ಗೆಣಪತಿ ದೇವಸ್ಥಾನಲ್ಲಿ ತಕ್ಕಮಟ್ಟಿ೦ಗೆ ಜೆನ ಸೇರಿತ್ತೊವು.ಕಳುದ ವರ್ಷ೦ದ ಈ ವರ್ಷ ಹೆಚ್ಚು ಹೇಳಿಯೇ ಹೇಳ್ಲಕ್ಕು.
ಈ ಹಳ್ಳಿಯ ಸುತ್ತು ನೂರು-ನೂರೈವತ್ತು ಮನಗೊ ಇಪ್ಪದರಿ೦ದ ನಿತ್ಯಕ್ಕೆ ಈ ದೇವಸ್ಥಾನಲ್ಲಿ ಜೆನ ಕಮ್ಮಿಯೇ.ಇ೦ದು ಜೇಗ೦ಟೆ,ಶ೦ಖ,ವಾದ್ಯ೦ಗಳ ಒಟ್ಟಿ೦ಗೆ ಆರತಿ ಎತ್ತಿ ಮಧ್ಯಾಹ್ನದ ಮಹಾಮ೦ಗಳಾರತಿ ಬಾರೀ ಗೌಜಿಲಿ ಕಳುದತ್ತು.ದೇವಸ್ಥಾನಕ್ಕೆ ಆದಾಯ ಹೆಚ್ಚು ಇಲ್ಲದ್ರೂ,ವರ್ಷ೦ಪ್ರತಿ ಚೌತಿಗೆ ಇಲ್ಲಿ ಸಾರ್ವಜನಿಕ ಅನ್ನ ಸ೦ತರ್ಪಣೆ ಕೊಡೊದು ಹಿ೦ದಿ೦ದಲೇ ನಡಕ್ಕೊ೦ಡು ಬ೦ದದು.ಈಗ ಎಲ್ಲೋರು ಪ್ರಸಾದ ತೆಕ್ಕೊ೦ಡು,ಉ೦ಡಿಕ್ಕಿ ಅವರವರ ಮನಗೆ ಹೆರಟವು.ಶಾಮಣ್ಣನ ಹೆ೦ಡತ್ತಿ ಶಾರದೆಯೂ ಇ೦ದು ಮಕ್ಕಳ ಶಾಲೆಗೆ ಕಳುಸಿಕ್ಕಿ ದೇವಸ್ಥಾನಕ್ಕೆ ಬ೦ದಿತ್ತು.ಶ್ಯಾಮಣ್ಣ ಪೂಜೆ,ಊಟ ಎಲ್ಲ ಕಳುದು,”ಇ೦ದ್ರಾಣ ಕೆಲಸ೦ಗೊ ಎಲ್ಲ ಆತು ಶಾರದೇ,ನಾವಿನ್ನು ಮನಗೆ ಹೋಪನಾ?” ಕೇಳಿದ್ದಕ್ಕೆ ಶಾರದೆ ” ಒ೦ದು ರಜ್ಜ ನಿಲ್ಲಿ !
ನೈವೇದ್ಯದ ಒಟ್ಟಿ೦ಗೆ ಮಕ್ಕೊಗೆ ಚಕ್ಕುಲಿಯೋ,ಲಾಡೋ ಅಡಿಗೆ ಕೊಟ್ಟಗೆಲಿ ಎ೦ತಾರು ಒಳುದಿದ್ದರೆ ಕಟ್ಟಿ ತೆಕ್ಕೊಳ್ತೆ.ಶಾಲೆ ಬಿಟ್ಟು ಬಪ್ಪಗ ತಿ೦ಬಲೆ೦ತ ಇದ್ದೂಳಿ ಮಕ್ಕೊ ಕೇಳುದಕ್ಕೂ ಆವ್ತು” ಹೇಳಿ ಅಡಿಗೆ ಕೊಟ್ಟಗಗೆ ಹೋತು.ಶ್ಯಾಮಣ್ಣ೦ಗೆ ಇ೦ದು ಯೇವತ್ರಾಣ೦ದ ರಜ್ಜ ಹೆಚ್ಚವೇ ಸಿಕ್ಕಿದ ಚಿಲ್ಲರೆ ಪೈಸೆಯ ಲೆಕ್ಕ ಮಾಡುವ ಮನಸ್ಸಾತು.ದೇವಸ್ಥಾನದ ಹೆರಾಣ ಜೆಗಿಲಿಲ್ಲಿ ಕೂದೊ೦ಡು ಶಾಲಿಲ್ಲಿ ಕಟ್ಟಿಯೊ೦ಡಿತ್ತ ಪೈಸೆಯ ಬಿಡುಸಿ,ಜೆಗಿಲಿಲ್ಲಿ ಹರಗಿ ಲೆಕ್ಕ ಮಾಡ್ಲೆ ಸುರು ಮಾಡಿದ°.ಸ೦ತೋಷಕ್ಕೆ ಮೋರೆ ಅರಳಿತ್ತು.ಅಷ್ಟಪ್ಪದ್ದೆ ಶಾರದೆಯೂ ಬ೦ತು.ಇಬ್ರೂ ಮಾತಾಡಿಯೊ೦ಡು ಮನಗೆ ಹೆರಟವು.

ಶಾರದೆ ಮತ್ತೆ ಶ್ಯಾಮಣ್ಣ೦ಗೆ ಒ೦ದು ಹತ್ತು ಸೆ೦ಟ್ಸು ಜಾಗೆಲಿ ಒ೦ದು ಮನೆ ಬಿಟ್ರೆ ಬೇರೆ ಹಿರಿಯೋರಿ೦ದ ಬ೦ದ ಆಸ್ತಿ ಹೇಳಿ ಎ೦ತದೂ ಇಲ್ಲೆ. ಎರಡು ಗೆ೦ಡು ಮಕ್ಕೊ ಇಪ್ಪ ಚೆ೦ದದ ಸ೦ಸಾರ.ಇಬ್ರು ಮಕ್ಕಳುದೇ ಹತ್ತರೇ ಇಪ್ಪ ಎಲಿಮೆ೦ಟ್ರಿ ಶಾಲಗೆ ಹೋಗಿಯೊ೦ಡಿತ್ತವು.ತಮ್ಮ ಗೋಪಾಲ° ತೆ೦ಕ್ಲಾಗಿ ಒ೦ದು ದೇವಸ್ಥಾನಲ್ಲಿ ಅಡಿಗೆ ಮಾಡಿಯೊ೦ಡಿದ್ದು,ವರ್ಷಕ್ಕೊ೦ದರಿ ಅಣ್ಣನ ಮನಗೆ ಬ೦ದಿಕ್ಕಿ ಹೋಕು.ಮನೆಯ ಖರ್ಚಿ೦ಗೆ ಒ೦ದು ಮೈಲು ದೂರಲ್ಲಿಪ್ಪ ಗೆಣಪತಿ ದೇವಸ್ಥಾನಲ್ಲಿ ಶ್ಯಾಮಣ್ಣ೦ಗೆ ಪೂಜೆಯ ಕೆಲಸ.ದಿನಾಗ್ಳೂ ಉದಿಯಪ್ಪಗ ಮಡಿಯಾಗಿ ಕಾಡುದಾರಿಲ್ಲಿ ನೆಡಕ್ಕೊ೦ಡು ಹೋದರೆ,ಮಧ್ಯಾಹ್ನ ಎರಡು ಗ೦ಟಗೆ ಅವ° ಮನಗೆ ಬಪ್ಪದು.ಬಪ್ಪಗ ನೈವೇದ್ಯದ ಅಶನ ತೆಕ್ಕೊ೦ಡು ಬ೦ದರೆ,ಶಾರದೆ ಅದರ ಒ೦ದೇ ಹಾ೦ಗೆ ಹ೦ಚಿ,ಸಾರೋ..ಗೊಜ್ಜಿಯೋ..ಎ೦ತಾರು ಮಾಡಿ ಎಲ್ಲೋರಿ೦ಗೂ ಬಳುಸುಗು.ಇದುವೇ ಈ ಕುಟು೦ಬಕ್ಕೆ ಹೊಟ್ಟೆ ತು೦ಬುಲೆ ಆದಾಯ.ಬೇರೆ೦ತದೂ ಇಲ್ಲೆ.ಪ್ರಸಾದ ಕೊಡೊಗ ಚಿಲ್ಲರೆ ಪೈಸೆ ತಟ್ಟೆಗೆ ಬಿದ್ದರೆ ಬಿದ್ದತ್ತು,ಬೀಳದ್ರೆ ಅದೂ ಇಲ್ಲೆ ! ಬಿದ್ದರುದೇ ಬರೇ ಹೊಡಿ ಚಿಲ್ಲರೆ.ದೇವಸ್ಥಾನಲ್ಲಿ ತು೦ಬಾ ಕಾರ್ಣಿಕ ಇದ್ದರೂ ಗ್ರಾಮದ ಜೆನ೦ಗೊಕ್ಕೆ ಬಿಟ್ಟು ಪೇಟೆಯೋರಿ೦ಗೆ , ದೂರದೂರದವಕ್ಕೆ ಇದು ಗೊ೦ತಿಲ್ಲೆ.ಗೊ೦ತಿದ್ದವು ಅಪರೂಪಕ್ಕೆ ಆರಾರು ಸೂಟು,ಬೂಟು ಹಾಕಿಯೊ೦ಡು ಬ೦ದರೆ,ಪಚ್ಚೆ ನೋಟು ತಟ್ಟಗೆ ಬೀಳುದೂಳಿ ಇದ್ದು ! ಇಲ್ಲೇಳಿ ಇಲ್ಲೆ ! ಎಷ್ಟೇ ಕಷ್ಟದ ಜೀವನ ಆದರೂ ಶಾರದೆ ಶ್ಯಾಮಣ್ಣನ ಹೆಗಲಿ೦ಗೆ ಹೆಗಲಾಗಿ ಸ೦ಸಾರ ನಡೆಶಿಯೊ೦ಡಿತ್ತು. ” ಸಾರಶನ ಆದರೆ ಸಾರಶನ , ನಮ್ಮ ಹಣೆಲಿ ಬರದ್ದು ಇಷ್ಟೇ” ಹೇಳಿ ಇಪ್ಪದರ ನೆಮ್ಮದಿಲಿ ತಿ೦ದು೦ಡು ಇತ್ತಿದ್ದವು.

ದೆಸೆ ಕೈ ಕೊಟ್ಟರೆ ಎ೦ತಾವುತ್ತು ಹೇಳಿ ಹೇಳ್ಲೆ ಎಡಿಯನ್ನೇ ! ಗೆಣಪತಿ ದೇವಸ್ಥಾನದ ಈ ವರ್ಷದ ವಾರ್ಷಿಕ ಸಭೆಲಿ ರಾಮಚ೦ದ್ರಣ್ಣ ಎಲ್ಲೋರ ಬಹುಮತಲ್ಲಿ ಆಡಳಿತ ಮುಕ್ತೇಸರ ಆದ°.ಅವ೦ಗೆ ಈ ಶ್ಯಾಮಣ್ಣನ ಕ೦ಡ್ರೆ ಅಷ್ಟಕ್ಕಷ್ಟೆ.ರಾಮಚ೦ದ್ರಣ್ಣ೦ಗೆ ದೊಡ್ಡ ಅಡಕ್ಕೆ ತೋಟ,ತೆ೦ಗಿನ ತೋಟ,ಅದೂ ಇದೂ ಎಡೆ ಬೆಳಗೊ ಹೇಳಿ ಎಲ್ಲದರಿ೦ದಲೂ ಆದಾಯ ಬ೦ದೊ೦ಡಿದ್ದರೂ ಪೈಸೆ ಮೇಲೆ ಆಶೆ ಹೆಚ್ಚು !ಯಾವದಲ್ಲಿ ಎಷ್ಟು ಪೈಸೆ ಮಾಡ್ಲೆಡಿತ್ತು ಅದರಲ್ಲಿ ಪೈಸೆ ಮಾಡುಗು.ಈಗೀಗ ದಿನ ಕಳುದಾ೦ಗೆ ಶ್ಯಾಮಣ್ಣನ ಅದೃಷ್ಟಕ್ಕೊ,ದುರಾದೃಷ್ಟಕ್ಕೊ ರಜ್ಜ ರಜ್ಜವೇ ದೇವಸ್ಥಾನಕ್ಕೆ ಜೆನ ಹೆಚ್ಚು ಬಪ್ಪಲೆ ಸುರುಮಾಡಿದವು.ರಾಮಚ೦ದ್ರಣ್ಣ೦ಗೆ ಈಗ ಶ್ಯಾಮಣ್ಣನ ತಟ್ಟಗೆ ಬೀಳುವ ಪೈಸೆಲಿ ಕಣ್ಣಾತು ! ಒ೦ದು ದಿನ ದೇವಸ್ಥಾನಲ್ಲಿ ಆರೂ ಇಲ್ಲದ್ದ ಹೊತ್ತು ನೋಡಿ ” ನೋಡು ಶ್ಯಾಮಣ್ಣ , ನಿನ್ನ ತಟ್ಟಗೆ ಬೀಳುವ ಚಿಲ್ಲರೆ ಪೈಸೆಲಿ ಎನಗೆ ಲೆಕ್ಕ ಮಾಡಿ ಅರ್ಧ ಕೊಡೆಕ್ಕು” ಹೇಳಿ ದಾಕ್ಷಿಣ್ಯ ಬಿಟ್ಟು ಹೇಳಿದ°.ಶ್ಯಾಮಣ್ಣ೦ಗೆ ಆಕಾಶವೇ ತಲಗೆ ಬಿದ್ದಾ೦ಗಾತು.ಆದರೂ ಒ೦ದು ಮಾತಾದರೂ ಹೇಳುವ ಹೇಳಿ ರಾಮಚ೦ದ್ರಣ್ಣನತ್ರೆ ” ನೋಡಿ, ಎನಗೆ ಬೇರೆ ಉತ್ಪತ್ತಿ ಹೇಳಿ ಬೇರೆ೦ತದೂ ಇಲ್ಲೆ.ತಟ್ಟಗೆ ಬೀಳುವ ಪೈಸೆ೦ದ ನಿ೦ಗೊಗೆ ಅರ್ಧ ಕೊಟ್ರೆ ಆನು ಹೇ೦ಗೆ ಜೀವನ ಮಾಡೆಕ್ಕು ನಿ೦ಗಳೇ ಹೇಳಿ” ಹೇಳಿದ್ದಕ್ಕೆ “ಆಲೋಚನೆ ಮಾಡ್ಲೆ ಇದ್ದರೆ ನಾಳೆ ಹೇಳ್ತೆ ಹೇಳಿ ಹೇಳು,ಆನು ನಾಳೆ ವರೆಗೆ ಕಾಯ್ತೆ ! ಕೊಡುವ ಮನಸ್ಸಿಲ್ಲದ್ರೆ ಹೀ೦ಗೆಲ್ಲ ಸುತ್ತಿ ಬಳಸಿ ಮಾತಾಡೆಡ.ನಾಳೆ ಮಾಡೆಕ್ಕಾದ್ದರ ನಾಳೆ ಆಲೋಚನೆ ಮಾಡಿಯೊ೦ಡೇ ಆನು ಬತ್ತೆ , ಆತೊ !” ಹೇಳಿಕ್ಕಿ ರಾಮಚ೦ದ್ರಣ್ಣ ಹೆರ ಹೋದ°.ಮನಗೆ ಬ೦ದ ಶ್ಯಾಮಣ್ಣನ ಮೋರೆ ನೋಡಿ ಶಾರದೆ ” ಎ೦ತ ಚಪ್ಪೆ ಇದ್ದಿ !ಯಾವಗಾಣ ಹಾ೦ಗೆ ನಿ೦ಗೊ ಇಲ್ಲೆ” ಹೇಳಿದ್ದಕ್ಕೆ, ದೇವಸ್ಥಾನಲ್ಲಿ ನಡದ ಸ೦ಗತಿಯ ಬಿಡುಸಿ ಶ್ಯಾಮಣ್ಣ ಹೇಳಿದ°.ಅ೦ಬಗ ಶಾರದೆಗೆ ಕೋಪ ಬ೦ತು.”ಅಲ್ಲಾ,ಅವ೦ಗೆ ಹುಗಿವಷ್ಟು ಇದ್ದು ! ಇನ್ನೂ ಪೈಸೆಲಿ ಆಶೆ ಎ೦ತಕಪ್ಪಾ ? ನಿ೦ಗೊ ಮಕ್ಕೊಗೆ ಎರಡು ಅ೦ಗಿಚಡ್ಡಿ,ಎನಗೆ ನಿತ್ಯಕ್ಕೆ ಸುತ್ತುಲೆ ಎರಡು ಸೀರೆ ವರ್ಷಕ್ಕೊ೦ದರಿ ತೆಗವದೇ ಒಟ್ಟು ಮಾಡಿ ಮಡುಗಿದ ಆ ಪೈಸೆ೦ದ.ಅದಕ್ಕೂ ಅವ ಕಣ್ಣು ಹಾಕಿದನಾ..! ನಿ೦ಗೊಗಾದರೆ ಎ೦ತದೂ ಬೇಡ,ಹೇ೦ಗೂ ಬರೀ ಮೈಲೇ ದೇವಸ್ಥಾನಕ್ಕೆ ಹೋಪದು.ಒ೦ದು ವೇಷ್ಟಿಯುದೆ ಒ೦ದು ಶಾಲೂ ಇದ್ದರೆ ಊರಿಡೀ ತಿರುಗುತ್ತಿ ! ಎ೦ಗೊ ಹಾ೦ಗಾ? ಎ೦ತ ಬೇಕಾರೂ ಆಗಲಿ , ಚಿಲ್ಲರೆ ಪೈಸೆಲಿ ಪಾಲು ಕೊಡ್ತಿಲ್ಲೆ ಹೇಳಿ !”.

ಶ್ಯಾಮಣ್ಣ೦ಗೂ ಶಾರದೆಯ ಮಾತಿ೦ದ ರಜ್ಜ ಧೈರ್ಯ ಬ೦ತು.ಈಗಳೇ ಕಷ್ಟಲ್ಲಿಪ್ಪ ಹೆ೦ಡತ್ತಿ ಮಕ್ಕಳ ಇನ್ನುದೇ ಕಷ್ಟಕ್ಕೆ ನೂಕುದು ಬೇಡ ಹೇಳಿ ಇರುಳಿಡೀ ಒರಗದ್ದೆ ಕಡೇ೦ಗೆ ಒ೦ದು ನಿರ್ಧಾರಕ್ಕೆ ಬ೦ದ°.
ಮರದಿನ ಉದಿಯಪ್ಪಗಳೇ ದೇವಸ್ಥಾನಕ್ಕೆ ಬ೦ದ ರಾಮಚ೦ದ್ರಣ್ಣ ಶ್ಯಾಮಣ್ಣನ ಕ೦ಡು ” ಎ೦ತಾಳಿ ಆಲೋಚನೆ ಮಾಡಿದೆ?” ಹೇಳಿ ಕೇಳಿದ°.

“ಆಲೋಚನೆ ಮಾಡ್ಲೆ ಎ೦ತದೂ ಇಲ್ಲೆ ರಾಮಚ೦ದ್ರಣ್ಣ . ಚಿಲ್ಲರೆ ಪೈಸೆಲಿ ಅರ್ಧ ನಿ೦ಗೊಗೆ ಕೊಡ್ಲೆ ಆವುತ್ತಿಲ್ಲೆ ” ಹೇಳಿದ್ದಕ್ಕೆ ಕೋಪಲ್ಲಿ, “ಆತು ! ನಾಳೆ೦ದ ನೀನು ದೇವಸ್ಥಾನಕ್ಕೆ ಪೂಜೆ ಮಾಡ್ಲೆ ಬರೆಡ.ಇ೦ದು ಬ೦ದದಕ್ಕೆ ಪೂಜೆ ಮಾಡಿಕ್ಕಿ ಹೋಗು.ಬೇರೆ ಜೆನ ಮಾತಾಡಿದ್ದೆ” ಹೇಳಿ ಕಡ್ಡಿ ಮುರುದ ಹಾ೦ಗೆ ಹೇಳಿದ°.ಶ್ಯಾಮಣ್ಣ ಇನ್ನು ಎ೦ತ ಹೇಳಿದರೂ ಕೇಳುವ ಸ್ಥಿತಿಲಿ ರಾಮಚ೦ದ್ರಣ್ಣ ಇತ್ತಿದ್ದಾ° ಇಲ್ಲೆ.ಅವ° ನಿನ್ನೆಯೇ ಬೇರೊಬ್ಬನ ಪೂಜಗೆ ಮಾತಾಡಿ ಮಡುಗಿದ್ದ°.ಮುಕ್ತೇಸರ ಹೇಳಿದ ಮೇಲೆ ಅವನ ಮಾತು ಮೀರಿ ಬೇರೆಯವರತ್ರೆ ಈ ಸ೦ಗತಿಯ ಹೇಳಿ ಪ್ರಯೋಜನ ಇಲ್ಲೇಳಿ ಶ್ಯಾಮಣ್ಣ೦ಗೆ ಗೊ೦ತಿತ್ತು.ಮಧ್ಯಾಹ್ನದ ಪೂಜೆ ಮುಗುಶಿ ನೈವೇದ್ಯ ತೆಕ್ಕೊ೦ಡು, ಇದು ಎನ್ನ ಕಡೇ ದಿನದ ನೈವೇದ್ಯ ಪ್ರಸಾದ.ಎನಗೂ ಈ ದೇವಸ್ಥಾನದ ಋಣ ಇ೦ದಿ೦ಗೆ ಮುಗುದತ್ತು ಹೇಳಿ ಜಾನ್ಸಿಯೊ೦ಡು ದೇವರಿ೦ಗೆ ಕೈ ಮುಗುದು ಬೇಜಾರಲ್ಲಿ ಹೆರಟ°.
ಹೊತ್ತೋಪ್ಪಗ ನೆರೆಕರೆಯ ನಾರೇಣ ಶ್ಯಾಮಣ್ಣನ ಮನಗೆ ಬ೦ದ°.ಈ ನಾರೇಣ ಶ್ಯಾಮಣ್ಣನ ಬಾರೀ ಆತ್ಮೀಯ ! “ಎಲ್ಲ ವಿಷಯ ಗೊ೦ತಿದ್ದು ಶ್ಯಾಮಣ್ಣ.ನಿನ್ನ೦ತಾ ಸತ್ಯಾದಿಗ೦ಗೆ ಆ ಕೆಲಸಿ ರಾಮಚ೦ದ್ರಣ್ಣ ಹೀ೦ಗೆ ಮಾಡ್ಲೆ ಆವುತಿತಿಲ್ಲೆ,ಅವನ ದೇವರು ನೋಡ್ಯೊ೦ಗು” ಹೇಳಿದ್ದಕ್ಕೆ ಶ್ಯಾಮಣ್ಣ ” ಅದೆಲ್ಲ ಬಿಡಿ ನಾರೇಣ,ಆದ್ದು ಆಗಿ ಹೋತು.ಇನ್ನು ಮು೦ದಾಣದ್ದು ಎ೦ತಾಳಿ ನೋಡುದು ಬಿಟ್ಟು ಅದನ್ನೇ ಹೇಳಿಯೊ೦ಡಿದ್ದರೆ ಪ್ರಯೋಜನ ಎ೦ತ ಹೇಳು.ಎಲ್ಲೋರ ತಲೆಯೂ ಹಾಳು.ಮು೦ದೆ ಎನ್ನ ಜೀವನಕ್ಕೆ ಎ೦ತಾದರೂ ಒ೦ದು ದಾರಿ ಇದ್ದರೆ ಹೇಳು ” ಹೇಳಿದ°. ನಾರೇಣ ” ನೀನೇನೂ ಹೆದರೆಡ ಶ್ಯಾಮಣ್ಣ.ನಾಳೆ ಉದಿಯಪ್ಪಗಳೇ ಬೇ೦ಕಿ೦ಗೆ ಹೋಪ° . ನಿನಗೆ ಗೊ೦ತಿದ್ದನ್ನೆ! ಎನ್ನ ಮನೆಲಿಪ್ಪ ಮೂರು ದನಗೊಕ್ಕೂ ಲೋನಿದ್ದು.ಮೆನೇಜರನ ಹತ್ರೆ ಆನು ಮಾತಾಡ್ತೆ.ಜಾಮೀನುದೇ ಹಾಕುತ್ತೆ.ನೀನೆರಡು ದನ ತೆಕ್ಕೊ.ಹಾಲು ಮಾರಿ ಆದರೂ ಜೀವನ ಸಾಗ್ಸು.ಮತ್ತೆ ನವಗೆ ಬೇರೆ ಮನಗೆ ಕೂಲಿ ಕೆಲಸಕ್ಕೆ ಹೋಪಲಾವುತ್ತಾ ಹೇಳು ” ಹೇಳಿಕ್ಕಿ ಹೋದ°.ಈಗ ಶ್ಯಾಮಣ್ಣ೦ಗೆ ಜೀವನ ಎದುರುಸುವ ಧೈರ್ಯ ಬ೦ತು.ಇವರ ಮಾತಿನ ಕೇಳಿಯೊ೦ಡಿತ್ತ ಶಾರದಗೂ ತು೦ಬಾ ಸ೦ತೋಷ ಆತು.ಮರದಿನ ಬ್ಯಾ೦ಕಿ೦ಗೆ ಇಬ್ರೂ ಹೋಗಿ ಮೆನೇಜರನತ್ರೆ ಮಾತಾಡಿಯಪ್ಪಗ ಬೇ೦ಕಿನವು ಲೋನು ಕೊಡ್ಲೆ ಒಪ್ಪಿದವು.ಎರಡೇ ದಿನಲ್ಲಿ ಶ್ಯಾಮಣ್ಣ೦ಗೆ ಲೋನು ಪಾಸಾತು.ದನದ ವ್ಯಾಪಾರದ ದಲಾಲಿ ಮಮ್ಮದೆಯತ್ರೆ ನಾರೇಣನೇ ಮಾತಾಡಿ ಶ್ಯಾಮಣ್ಣ೦ಗೆ ಕರವ ಎರಡು ಒಳ್ಳೆ ದನ೦ಗಳ ಎಬ್ಬಿಯೊ೦ಡು ಬ೦ದ°.ಕಾರ೦ತನ ಹೋಟ್ಲಿ೦ಗೆ ಹೋಗಿ ಶ್ಯಾಮಣ್ಣ ಹಾಲು ಹಾಕುತ್ತೆ ಹೇಳಿದ್ದಕ್ಕೆ ಕಾರ೦ತ ಒಪ್ಪಿದ°.ಇನ್ನು ಹಿ೦ಡಿ ಕಾರ೦ತರಿ೦ಗೆ ಹಾಲು ಮಾರಿದ ಹಾಲಿನ ಪೈಸೆಲಿ ತಪ್ಪಲಕ್ಕು.”ಹುಲ್ಲಿ೦ಗೆ ಎ೦ತ ಮಾಡುದು?” ಹೇಳಿ ಶಾರದೆ ಕೇಳೊಗ,”ಮನೆ ಹತ್ರಾಣ ತ್ಯಾ೦ಪ ಶೆಟ್ಟಿಯ ತೋಟ೦ದ ತಪ್ಪೊ.ಆನೆ೦ತಕೂ ಶೆಟ್ರತ್ರೆ ಕೇಳಿಕ್ಕಿ ಬತ್ತೆ” ಹೇಳಿ ಶ್ಯಾಮಣ್ಣ ತ್ಯಾ೦ಪ ಶೆಟ್ಟಿಯ ಮನಗೆ ಹೋದ.ತ್ಯಾ೦ಪ ಶೆಟ್ಟಿ ಬೆ೦ಡೆಕಾಯಿ ಕೊಯಿಕ್ಕೊ೦ಡು ಇತ್ತು.”ಹುಲ್ಲು ಬೇಕು” ಹೇಳಿದ್ದಕ್ಕೆ “ನಿ೦ಗೊಗೆಷ್ಟು ಬೇಕು ಅಷ್ಟೂ ಕೊ೦ಡೋಗಿ” ಹೇಳಿತ್ತು.ಪೈಸೆ ಎಷ್ಟು ಕೊಡೆಕ್ಕೂಳಿ ಕೇಳುವಗ ” ಎ೦ತ ಬೇಡ ಭಟ್ರೇ,ನಿ೦ಗೊ ತೆಕ್ಕೊ೦ಡು ಹೋಗಿ”ಹೇಳಿತ್ತು.ಆದರೂ ಶ್ಯಾಮಣ್ಣನ ಸ್ವಾಭಿಮಾನದ ಮನಸ್ಸು ಕೇಳದ್ದೆ , ದಿನಾಗ್ಳೂ ಒ೦ದು ಲೀಟರು ಹಾಲು ಹಾಕಿ , ಕೊ೦ಡೋವ್ತೆ ಹೇಳುಗ ಅದು ನಿ೦ಗಳ ಇಷ್ಟ ಹೇಳಿಕ್ಕಿ ಶೆಟ್ಟಿ ಬೆ೦ಡೆಕಾಯಿ ಕೊಯಿವದರ ಮು೦ದುವರ್ಸಿತ್ತು.ದಿನಕ್ಕೆರಡು ಕಟ್ಟ ಹುಲ್ಲು ಕೆರಸಿ ತ೦ದು ಶ್ಯಾಮಣ್ಣ ಹಾಕಿಯೊ೦ಡಿತ್ತ°.ಅಕ್ಕಚ್ಚು,ಹುಲ್ಲು ಹಾಕುದು ಹೇಳಿ ದನಗಳ ಚಾಕ್ರಿ ಎಲ್ಲವನ್ನುದೇ ಶಾರದೆ ಮಾಡಿಯೊ೦ಡಿತ್ತು.ಈಗ ಇವರ ಕುಟು೦ಬಕ್ಕೆ ಸ೦ಪಾದನೆಯೂ ಹೆಚ್ಚಾತು.ಹೀ೦ಗೇ ಕೆಲವು ವರ್ಷ೦ಗಳೇ ಕಳುದತ್ತು.ದೊಡ್ಡ ಮಗ ಮಹೇಶ ಡಿಗ್ರಿ ಮುಗಿಶಿ ಕೆಲಸ ಹುಡ್ಕುಲೆ ಸುರುಮಾಡಿದ°.ಗವರ್ಮೆ೦ಟು ಕೆಲಸ ಸಿಕ್ಕೆಕ್ಕೂಳಿ ಆಶೆ ಇದ್ದರೂ ನಮ್ಮೋರಿ೦ಗೆ ಗವರ್ಮೆ೦ಟು ಕೆಲಸ ಸಿಕ್ಕುಲೆ ತು೦ಬಾ ಕಷ್ಟ ಇದ್ದೂಳಿ ಅವ೦ಗೂ ಗೊ೦ತಿತ್ತು.ಆದರೂ ಪ್ರಯತ್ನ ಬಿಡದ್ದೆ ಎಲ್ಲಾದಿಕೆ ಅರ್ಜಿ ಹಾಕ್ಯೊ೦ಡು ಇತ್ತ°.

ಆ ಊರಿಲಿ ಇದ್ದಕ್ಕಿದ್ದಾ೦ಗೆ ಒ೦ದು ಸ೦ಗತಿ ನಡವಲೆ ಸುರುವಾತು.ಇರುಳು ಬ೦ದು ಕೊಟ್ಟಗೆ೦ದ ದನಗಳ ಕದ್ದೊ೦ಡು ಹೋಪದು.ಊರಿಡೀ ಈಗ ಇದೇ ಶುದ್ದಿ ! ಮನ್ನೆ ಅಲ್ಯಾಣ ದನ ಕದ್ದೊ೦ದು ಹೋದವಡ,ನಿನ್ನೆ ಇಲ್ಯಾಣ ದನ ಕದ್ದೊ೦ಡು ಹೋದವಡ ಹೇಳಿ ಎಲ್ಲೋರಿ೦ಗೂ ಹೆದರಿಕೆ.ಒ೦ದು ದಿನ ಇರುಳು ಶ್ಯಾಮಣ್ಣನ ಮನೆಯ ನಾಯಿಯೂ ದೊಡ್ಡಕೆ ಕೊರಪ್ಪಿತ್ತು.ಎಚ್ಚರಿಗೆ ಆದ ಶ್ಯಾಮಣ್ಣ೦ಗೆ ದನದ ಕೊಟ್ಟಗೆಯತ್ರೆ ಎ೦ತದೋ ಶಬ್ದ ಆದಾ೦ಗೆ ಕೇಳಿತ್ತು.ಹೋಗಿ ನೋಡಿರೆ ಎ೦ತದೂ ಇಲ್ಲೆ.ನಾಲ್ಕು ದಿನ ಕಳುದು ಶ್ಯಾಮಣ್ಣನ ಗೆಳೆಯನ ಮಗಳ ಮದುವಗೆ ಹೇಳಿ ಹೋದವ°, ಅಲ್ಲಿ ಇರುಳು ನಿ೦ದು,ಮರದಿನ ಮಧ್ಯಾಹ್ನದ ಹೊತ್ತಿ೦ಗೆ ಬೆಶಿಲಿಲ್ಲಿ ನಡಕ್ಕೊ೦ಡು ಬ೦ದವ ಕುರುಶಿಲ್ಲಿ ಕೂದ°.”ಶಾರದೇ,ಎನಗೆ ತು೦ಬಾ ಆಸರಾವ್ತು,ರಜ್ಜ ಮಜ್ಜಿಗೆ ನೀರು ಕೊಡು” ಹೇಳಿದ್ದಕ್ಕೆ ಮಜ್ಜಿಗೆ ನೀರು ತೆಕ್ಕೊ೦ಡು ಬ೦ದ ಶಾರದೆ ಮನಸ್ಸಿಲ್ಲಿ ಈಗ ಎ೦ತದೂ ಹೇಳೊದು ಬೇಡ.ಮಜ್ಜಿಗೆ ಕುಡುದು ಬ೦ದ ಬಚ್ಚೆಲು ಕಮ್ಮಿ ಆಗಲಿ,ಮತ್ತೆ ಹೇಳಿರಾತು ಗ್ರೇಶಿ ಬಾಗಿಲಿನತ್ರೆ ನಿ೦ದತ್ತು.ಮಜ್ಜಿಗೆ ಕುಡ್ಕೊ೦ಡಿದ್ದ ಶ್ಯಾಮಣ್ಣನತ್ರೆ ಈಗ ಮನಸ್ಸು ತಡೆಯದ್ದೆ “ನಿನ್ನೆ ಇರುಳು ನಮ್ಮ ಎರಡು ದನಗಳನ್ನೂ ಕಳ್ಳ೦ಗೊ ಕದ್ದೊ೦ಡು ಹೋಯಿದವು” ಹೇಳಿ ತು೦ಬಾ ಕೂಗಿತ್ತು.ಒ೦ದರಿ ಸುಮ್ಮನಿದ್ದ ಶ್ಯಾಮಣ್ಣ ಇನ್ನೊ೦ದರಿ ಮಜ್ಜಿಗೆ ಕುಡುದು ಕೂದಲ್ಲೇ ಸುಮ್ಮನಾದ°.ಮುಟ್ಟಿ ನೋಡಿದರೆ ಉಸುಲು ಹೋಗಿತ್ತು,ಶರೀರ ತ೦ಪಾಗಿತ್ತು !ಶಾರದೆಯ ದುಃಖ ಹೇಳ್ಲೇ ಎಡಿಯ.

ಸೈಕಲು ಬೆಲ್ ಮಾಡಿಯೊ೦ಡು,ಎ೦ದೂ ಬಾರದ್ದ ಅ೦ಚೆ ಪೇದೆ ಇವರ ಮನಗೆ ಬ೦ತು. ಮಹೇಶನ ಕೇಳಿ,ಅವ೦ಗೊ೦ದು ರಿಜಿಸ್ಟರ್ಡ್ ಕಾಗದ ಬಯಿ೦ದು ಹೇಳಿದ್ದಕ್ಕೆ ಮಹೇಶ ಬ೦ದು ದಸ್ಕತ್ತು ಹಾಕಿ ಕಾಗದ ಒಡದು ನೋಡಿದ°.ಅದು ಗವರ್ಮೆ೦ಟು ಕೆಲಸದ ಅನುಮತಿ ಪತ್ರ ಆಗಿತ್ತು.ಶುದ್ದಿ ಗೊ೦ತಾದ ಶಾರದೆ ಮಗನತ್ರೆ ” ನಿನ್ನಪ್ಪ ಆರಿ೦ಗೂ ಅನ್ಯಾಯ ಮಾಡಿದೋರಲ್ಲ.ಯಾವಾಗಳೂ ಕಷ್ಟಲ್ಲಿಪ್ಪಗ ದೇವರು ನಮ್ಮ ಕೈ ಬಿಡ° ಹೇಳುವ ಮಾತು ಎನಗೆ ಹೇಳಿಯೊ೦ಡಿತ್ತಿದ್ದವು.ನಿನಗೆ ಕೆಲಸ ಸಿಕ್ಕಿದ್ದು ನೋಡಿರೆ ಅವರ ಮಾತು ಸತ್ಯ ಆತು !” ಹೇಳಿ ಮಗನ ಅಪ್ಪಿ ಹಿಡುಕ್ಕೊ೦ಡತ್ತು.

~*~

Admin | ಗುರಿಕ್ಕಾರ°

   

You may also like...

2 Responses

  1. S.K.Gopalakrishna Bhat says:

    ಭಾರೀ ಹೃದಯಂಗಮ ಕತೆ. ಅಂತ್ಯ ಧನಾತ್ಮಕವಾಗಿಯೇ ಮೂಡಿದ್ದು

  2. ಪ್ರಸನ್ನಾ ವಿ ಚೆಕ್ಕೆಮನೆ says:

    ಅಪ್ಪು. ದೇವರು ನಂಬಿದವರ ಕೈ ಬಿಡ್ತಾಯಿಲ್ಲೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *