ಕಾಮನ ಬಿಲ್ಲು ಕಂಡತ್ತು : ಕಥೆ – ಪ್ರಸನ್ನಾ.ವಿ. ಚೆಕ್ಕೆಮನೆ

May 28, 2012 ರ 9:30 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಿಷು ವಿಶೇಷ ಸ್ಪರ್ಧೆ- 2012 ರಲ್ಲಿ ಕಥಾ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಕತೆ.
ಲೇಖಕಿ ಶ್ರೀಮತಿ ಪ್ರಸನ್ನಾ.ವಿ.ಚೆಕ್ಕೆಮನೆ ಇವಕ್ಕೆ ಪ್ರತಿಷ್ಠಾನದ ಪರವಾಗಿ ಅಭಿನಂದನೆಗೊ.

ಕಾಮನ ಬಿಲ್ಲು ಕಂಡತ್ತು

ಉಗ್ರಾಣದ ಮಂಚಲ್ಲಿ ಗಿಳಿಬಾಗಿಲಿಂಗೆ ಎರಗಿ ಕೂದೊಂಡು ಭಾರೀ ಏಚನೆ ಮಾಡಿಂಡಿದ್ದತ್ತು ಶಾರದೆ.
“ಇಲ್ಲಿಗೆ ಬಂದು ಒಂದೂವರೆ ತಿಂಗಳೂ ಆಯಿದಿಲ್ಲೆ. ಅಷ್ಟಪ್ಪಗಳೇ ಎಷ್ಟೊಂದು ಉಪದ್ರಂಗೊ!. ಹೀಗೆಲ್ಲ ಆವ್ತೂಳಿ ಗೊಂತಿದ್ದರೆ ಛೇ..ಬೇಕಾತಿಲ್ಲೆ. ಆರಾರ ಮಾತು ಕೇಳ್ಯೊಂಡು ಹಾಳಾದೆ. ಅವರ ಮಾತಿಂಗೆ ಕೆಮಿ ಕೊಡದ್ದೆ ಸುಮ್ಮನೆ ಕೂದಿದ್ದರೆ ಎಂತಾದರೂ ಹೀಂಗಾವ್ತಿತಿಲ್ಲೆ. ಅಲ್ಲಿಂದಲೇ ಕಾಲು ನೀಡಿ ಕೂದು ಮೆಲ್ಲಂಗೆ ಕೆಳ ಹೊಟ್ಟೆ ಮುಟ್ಟಿತ್ತು. ಇಷ್ಟೆಲ್ಲ ಸಾಲದ್ದಕ್ಕೆ ಒಟ್ಟಿಂಗೆ ಇದೊಂದು ಬೇರೆ…” ಒಂದಾರಿ ಹಾಂಗೆ ಗ್ರೇಶಿರೂ ಫಕ್ಕನೆ ಹಾಂಗೆ ಗ್ರೇಶಿದ್ದು ತಪ್ಪೂ ಹೇಳಿ ಆತದಕ್ಕೆ.
ಇನ್ನು ತಿರುಗಿ ಆ ಮನೆಯ ಹೊಸ್ತಿಲು ದಾಂಟೆಕಾರೆ, ಆ ಸಂಬಂಧ ಇನ್ನೂ ಒಳುದ್ದೂಳಿ ಹೇಳೆಕ್ಕಾರೆ ಬೇರೆ ಎಂತ ದಾರಿಯೂ ಕಾಣ್ತಿಲ್ಲೆ.
ಹಾಂಗೆ ಗ್ರೇಶುಗಳೇ ಮನಸ್ಸಿಂಗೆ ರಜಾ ಕೊಶಿಯಾತು. ಸುಮ್ಮನೆ ಮನುಗಿ ಕಣ್ಣು ಮುಚ್ಚಿತ್ತು.
ಅಂದರೂ ಮನಸ್ಸು ಮಾತ್ರೆ ಎಲ್ಲೆಲ್ಲಿಗೋ ಹೋಗಿ ಕುಂಬ್ಳೆ ಸೀಮೆಗೆ ಎತ್ತಿತ್ತು.

~*~

“ಈಗ ನೀನವನ ಮದುವೆಪ್ಪಲೆ ಒಪ್ಪು, ಮತ್ತೆ ಪೇಟೆಲಿ ಬಿಡಾರ ಮಾಡೆಕ್ಕೂಳಿ ನೀನು ಹಠ ಹಿಡುದರೆ ಅವ ° ಒಪ್ಪದ್ದೆ ಎಲ್ಲಿಗೆ ಹೋವ್ತ?  ಈಗಾದರೆ ಅವ್ವೇ ಎರಡು ಹೊಡೆಂದಲೂ ಖರ್ಚು ಹಾಕಿ ಮದುವೆ ಮಾಡುತ್ತೆಯಾಳಿ ಹೇಳುಗ ಇಷ್ಟೊಳ್ಳೆ ಪೊದು ಬಿಟ್ರೆ ಹೇಂಗೆ?”
ಅಬ್ಬೆ ಸುಮತಿಯ ಮಾತು ಕೇಳ್ಯಪ್ಪಗ ಶಾರದೆಗೂ ಅದುವೇ ಸರಿ ಹೇದು ಕಂಡತ್ತು.
ಹೇಂಗೂ ಡಿಗ್ರಿಯಾಯ್ದು. ಬೆಂಗಳೂರು ಪೇಟೆಲಿ ಕೆಲಸ ಸಿಕ್ಕುಲೆ ಎಂತ ಬಂಙವೂ ಆಗ. ಬೆಂಗ್ಳೂರಿಲ್ಲಿ ಇಪ್ಪ ಅಕ್ಕನೂ ಅಬ್ಬೆ ಹೇಳಿದ ಹಾಂಗೆ ಹೇಳಿತ್ತು.

ಲೇ. ಶ್ರೀಮತಿ ಪ್ರಸನ್ನಾ ವೆಂಕಟಕೃಷ್ಣ ಚೆಕ್ಕೆಮನೆ

“ಇಲ್ಲಿ ಅತ್ತೆ, ಮಾವ, ಹಟ್ಟಿ, ತೋಟ…ಹೇಳುವ ರಗಳೆ ಎಲ್ಲ ಬಿಟ್ಟಿಕ್ಕಿ ಪೇಟಗೆ ಬಂದರೆ ಆರ ಉಪದ್ರವೂ ಇಲ್ಲೆ. ಈಗ ಎಂಗೊ ನೋಡು,ಹೇಂಗಿದ್ದೆಯೊ, ಎಂತ ತಲೆ ಬೆಶಿ ಇಲ್ಲೆ, ಅಡಿಗೆ ಕೂಡಾ ಬೇಕಾರೆ ಮಾಡಿತ್ತು, ಇಲ್ಲದ್ರೆ ಹೋಟ್ಲಿದ್ದು.
ಈ ಸೀರೆ, ನೈಟಿ ಹೇಳ್ವ ರಗಳೆಯೂ ಇಲ್ಲೆ. ಕೊಶೀಲಿ ಜೀನ್ಸ್ ಪ್ಯಾಂಟ್, ಲೆಗ್ಗಿಂಗ್ ಎಲ್ಲ ಹಾಕಿ ತಿರುಗಿರೆ ಆರು ಕೇಳ್ತವೂಳಿ ಇಲ್ಲೆಯಾ? ಒಂದು ರಜ್ಜ ಸಮಯ ಇಲ್ಲಿ ನಿಂದಿಕ್ಕಿ ಮತ್ತೆ ನೀನು ಸುರು ಮಾಡು.
ಗೆಂಡನ ಸೆರಗಿಲ್ಲಿ ಗೆಂಟಾಕೆಕಾದ್ದು ಹೇಂಗೇಳಿ ಬೇಕಾರೆ ಆನು ಹೇಳಿ ಕೊಡ್ತೆ”
ಅಬ್ಬೆಯ, ಅಕ್ಕನ ಮಾತುಗಳ ಎಲ್ಲ ಸರಿಯಾಗಿ ನೆಂಪು ಮಡ್ಕೊಂಡೇ ಶಾರದೆ ಮೇಗಾಣ ಮನೆ ಈಶ್ವರಣ್ಣನ ಒಬ್ಬನೇ ಮಗ ರಘುರಾಮನ ಹೆಂಡತಿಯಾಗಿ ಅವರ ಮನೆಯ ಹೊಸ್ತಿಲು ಪೂಜೆ ಮಾಡಿ ಒಳ ಹೊಕ್ಕತ್ತು.

ಈಶ್ವರಣ್ಣನ ಹೆಂಡತಿ ಅಚ್ಚುಮಕ್ಕಂಗೆ ಸೊಸೆ ಹೇಳಿರೆ ಭಾರೀ ಕೊಂಡಾಟ.
“ಎನ್ನ ಸೊಸೆ ಬೆಳಿಯಾಗಿ ಚೆಂದಕೆ ಇದ್ದು, ಅದಕ್ಕೆ ಉದ್ದ ಜೆಡೆ ಇದ್ದೂ”ಳಿ ಶಾರದೆಯ ತುಂಬಾ ಲಾಯ್ಕಲ್ಲಿ ನೋಡಿಕೊಂಡಿತ್ತಿದ್ದವು.
ಅಂದರೂ ಶಾರದೆಗೆ ಅಲ್ಯಾಣ ಕ್ರಮಂಗೊ ಏವದೂ ಹಿಡುಶಿದ್ದಿಲ್ಲೆ. ಉದಿಯಪ್ಪಗ ಎದ್ದು ಚೆಂಬಿನ ಗಿಂಡಿಲಿ ನೀರು ತಂದು, ಹರಿವಾಣಲ್ಲಿ ಹೂಗು ತಂದು, ಹೊಸ್ತಿಲಿಂಗೆ ಸೇಡಿ ಬರದು ಅಕ್ಕಿ ಕಾಳು, ಹೂಗು, ಗಂಧ ಎಲ್ಲ ಹಾಕಿ “ಹೊಸ್ತಿಲೆ ಹೊಸ್ತಿಲೆ ಹೊನ್ನ ಹೊಸ್ತಿಲೇ…”ಹೇಳಿ ಹೊಡಾಡೆಕು.
ಹಟ್ಟಿಲಿಪ್ಪ ದನಗೊಕ್ಕೆಲಾ ಬೆಣ್ತಕ್ಕಿ, ಬಾಳೆಹಣ್ಣು, ಬೆಲ್ಲ ಎಲ್ಲ ಕೊಟ್ಟು, “ಗಾವೋ ಮೇ ಮಾತರಃ ಸಂತು….” ಹೇಳಿ ಅವರ ಕಾಲಿಡಿಯೆಕು.
ತಿಂಗಳಿಲ್ಲಿ ಮೂರು ದಿನ ಬೇರೆ ಕೂರೆಕು.
ಅರಶಿನ ನೀರು ಹಾಕಿ ಮೀಯೆಕು, ಕೆಳ ನೆಲಕ್ಕಲ್ಲಿ ಕೂದೊಂಡು ಉಣ್ಣೆಕು, ಉಂಡಲ್ಲಿ ಸಗಣ ನೀರು ಹಾಕೆಕು, ಹೀಂಗಿಪ್ಪ ಕ್ರಮಂಗೊ ಎಲ್ಲ ಬರೀ ಹಳೇ ಕ್ರಮಂಗೊ ಹೇಳಿ ಅದರ ಎಲ್ಲ ಮಾಡ್ಲೆ ಮನಸ್ಸೇ ಇತ್ತಿದ್ದಿಲ್ಲೆ.
ಸಣ್ಣ ಸಣ್ಣ ವಿಷಯಂಗಳನ್ನೇ ದೊಡ್ಡ ಮಾಡಿ ಗೌಜಿ ಮಾಡಿಂಡಿದ್ದತ್ತು.

ಅದರ ಗೆಂಡ ರಘುರಾಮ ತುಂಬಾ ಒಳ್ಳೆಯವ°. ಅವಂಗೆ ಅಬ್ಬೆ ಹೇಳಿರೆ ಕಣ್ಣಿಂಗೆ ಕಾಂಬ ದೇವರು ಹೇಳಿಯೇ ಲೆಕ್ಕ. ಹೆಂಡತಿಯ ಸಣ್ಣ ಸಣ್ಣ ಚರಿಪಿರಿಗೆಲ್ಲ ಅವ° ಕೆಮಿ ಕೊಟ್ಟುಗೊಂಡೇ ಇತ್ತಿದ್ದಾ ಇಲ್ಲೆ.
ಅಂದರೂ ಶಾರದೆಯ ಅಬ್ಬೆಯೂ ಅಕ್ಕನೂ ಅಂಬಗಂಬಗ ಫೋನ್ ಮಾಡಿ ಗಂಟೆಗಟ್ಲೆ ಮಾತಾಡಿ ಅದರ ತಲೆ ಹಾಳು ಮಾಡಿಂಡಿತ್ತಿದ್ದವು.
ಅಷ್ಟಪ್ಪಗೆಲ್ಲ ಅದಕ್ಕೆ ಈ ಹಳ್ಳಿಯ ಬದ್ಕು ಬರೀ ದಂಡ ಹೇಳಿ ಆಗಿ ಗಂಡನತ್ರೆ “ಪೇಟೆಗೆ ಹೋಪ°” ಹೇಳಿ ಲಡಾಯಿ ಕೊಟ್ಟುಕೊಂಡಿತ್ತು.
ರಘು ಆದಷ್ಟು ಈ ವಿಶಯ ಅಬ್ಬೆ ಅಪ್ಪನ ಗುಮಾನಿಗೆ ಬಾರದ್ದ ಹಾಂಗೆ ನೋಡ್ಯೊಂಡ. ಅಂದರೂ ಅಚ್ಚುಮಕ್ಕಂಗೆ ಇವರೊಳ ಎಂತದೋ ಸರಿಯಿಲ್ಲೇಳಿ ಗೊಂತಾತು.
ಮಗನತ್ರೆ ಕೇಳ್ಯಪ್ಪಗ “ ಎಂತ ಮಣ್ಣಾಂಗಟ್ಟಿಯೂ ಇಲ್ಲೆಬ್ಬೆ” ಹೇಳಿ ಜಾರಿದ.

ಅಂದರೂ ಅಚ್ಚುಮಕ್ಕ ಸೊಸೆ ಹತ್ತರೆ ಮೆಲ್ಲಂಗೆ “ಎಂತ ವಿಷಯಾ” ಹೇಳಿ ಕೇಳ್ಯಪ್ಪಗ ಅದು ಮೆಲ್ಲಂಗೆ ಬಾಯಿ ಬಿಟ್ಟತ್ತು.
“ಎನಗೆ ಇಲ್ಲಿ ಹೀಂಗೆ ಬದ್ಕುಲೆ ಮನಸ್ಸಿಲ್ಲೆ, ಸ್ವತಂತ್ರವಾಗಿ ಬದ್ಕು ನೆಡೆಶೆಕೂಳಿಯೇ ಎನಗಿಪ್ಪದು. ಅದಕ್ಕೆ ಆನು ಬೆಂಗಳೂರಿಂಗೆ ಹೋಪೊ°, ಅಲ್ಲಿ ಎನ್ನ ಭಾವ ’ಇವಕ್ಕೆ’ ಎಂತಾರು ಕೆಲಸ ಮಾಡ್ಸಿ ಕೊಡುಗು ಹೇಳಿರೆ ’ಇವು’ ಕೇಳೆಕ್ಕನ್ನೆ.
ಎನ್ನ ಮಾತು ಅವಕ್ಕೆ “ಆನೆ ಕುಂಡಗೆ ತಗತ್ತೆ ಕೋಲಿಲ್ಲಿ ಕುತ್ತಿದ ಹಾಂಗೇ ಅಪ್ಪದು”.

ಸೊಸೆಯ ಬಾಯಿಂದ ಉದುರಿದ ಮಾತುಗಳ ಕೇಳ್ಯಪ್ಪಗ ಅಚ್ಚುಮಕ್ಕಂಗೆ ಎದಗೆ ಆರೋ ಪಿಶಾತಿ ಹಾಕಿದ ಹಾಂಗಾತು.
ಒಬ್ಬನೇ ಮಗಂಗೆ ಮದುವೆಯಾಗಿ ಸೊಸೆ ಬಂದಪ್ಪಗ ಅವು ಚೆಂದಕೆ ಸಂಸಾರ ನೆಡೆಶುದು ನೋಡ್ಯೊಂಡು ಪುಳ್ಯಕ್ಕಳ ಆಡ್ಸಿಯೊಂಡು ಕೂಬಲಕ್ಕೂಳಿ ಗ್ರೇಶಿತ್ತಿದ್ದವು.
ಮನೆಯ ಕ್ರಮಂಗೊಕ್ಕೆಲ್ಲ ಶಾರದೆ ನೇರ್ಪ ಹೊಂದಿಕೊಳ್ಳದ್ರೂ, ನಿಧಾನಕ್ಕೆ ಎಲ್ಲ ಸರಿಯಕ್ಕೂಳಿ ಜಾನ್ಸಿಂಡಿತ್ತಿದ್ದವಕ್ಕೆ ತಲಗೆ ಮರ ಬಿದ್ದ ಹಾಂಗಾತು.

ಸೀದಾ ಹೋಗಿ ಗೆಂಡನತ್ರೆ ಹೇಳಿ ಕಣ್ಣೀರು ಹಾಕಿದವು. ಈಶ್ವರಣ್ಣ ಅವಕ್ಕೆ ಸಮಾಧಾನ ಹೇಳಿದವು.
“ನೀನು ಹಾಂಗೆಲ್ಲ ಕುಂಞಿ ವಿಷಯವ ದೊಡ್ಡ ಮಾಡೆಡ, ರಘುವಿನತ್ರೆ ಆನು ಹೇಳ್ತೆ, ಅದಕ್ಕೆ ಹಾಂಗೆ ಆಶೆ ಇದ್ದೂಳಿ ಆದರೆ ಅವು ಹೋಗಲಿ.
ಇಲ್ಲಿ ನಾವಿಬ್ರೇ ಸಾಕು. ನಿನಗೆ ಆನು, ಎನಗೆ ನೀನು. ನಮ್ಮಿಬ್ರಿಂಗೂ ಈ ದನಗೊ, ನಾಯಿ ಪುಚ್ಚೆಗೊ ಎಲ್ಲ ಇದ್ದವನ್ನೆ” ಅಕೇರಿಯಾಣ ಮಾತು ಹೇಳುಗ ಅವರ ದೆನಿಯೂ ನಡುಗಿತ್ತು.

ಅಕೇರಿಗೆ ಅವ್ವೇ ರಘುವಿನ ದಿನಿಗೊಳಿ ಹೇಳಿದವು. “ನೀನು ಹೇಂಗೂ ಪೇಟೆಲಿ ಕೆಲ್ಸಕ್ಕೆ ಹೋವ್ತಷ್ಟು ಕಲ್ತಿದೆ ಮಗಾ, ಆ ಕೂಸಿಂಗೂ ಬೇರೆ ಮನೆ ಮಾಡೆಕೂ, ಪೇಟೆಲಿ ಬದ್ಕೆಕೂಳಿ ಆವ್ತರೆ ನಿಂಗೊ ಇಬ್ರೂ ಬೆಂಗ್ಳೂರಿಂಗೆ ಹೋಗಿ.
ಆನು ಮುರಳಿ ಭಾವನತ್ರೆ ನಿಂಗೊಗೊಂದು ಮನೆ ಹುಡ್ಕಿ ಮಡುಗಲೆ ಹೇಳ್ತೆ. ಎಂಗಳ ಕೈ ಕಾಲು ಗಟ್ಟಿ ಇಪ್ಪನ್ನಾರ ಎಂಗೊ ಹೀಂಗೆಯೆ ಇರ್ತೆಯೊ°. ಮತ್ತೆಂತಾವ್ತೋ ನಮ್ಮ ಕೈಲಿಲ್ಲೆನ್ನೆ..”
ಅಪ್ಪನ ಮಾತು ಕೇಳ್ಯಪ್ಪಗ ರಘುವಿನ ಕಣ್ಣಿಲ್ಲಿ ನೀರೇ ಬಂತು. “ಎಂತದೂ ಬೇಡ ಅಪ್ಪಾ°, ಆನು ಎಂತಾದರೂ ನಿಂಗಳ ಬಿಟ್ಟಿಕ್ಕಿ ಎಲ್ಲಿಗೂ ಹೋವ್ತಿಲ್ಲೆ. ಅಬ್ಬೆ ಅಪ್ಪಂದ ಹೆಚ್ಚಿನವು ಎನಗೆ ಆರೂ ಇಲ್ಲೆ. ಅದಕ್ಕೆ ಬೇಕಾರೆ ಪೇಟಗೆ ಹೋಗಿ ನಿಲ್ಲಲಿ. ಆನು ತಳ್ಪುತ್ತಿಲ್ಲೆ. ನಿಂಗೊ ಮಾತ್ರ ಹೀಂಗೆ ಹೇಳೆಡಿ ಅಪ್ಪಾ°…

~*~

ಈಶ್ವರಣ್ಣಂಗೆ ಮಗನ ಮಾತು ಕೇಳಿ ಎದೆ ತುಂಬಿ ಬಂತು. ಎಷ್ಟೋ ಮಕ್ಕೊ ಹೆಂಡತಿ ಬಂದ ಮತ್ತೆ ಅಬ್ಬೆ ಅಪ್ಪನನ್ನೇ ಮರೆತ್ತವು.
ಅಂದರೂ ಎಂಗಳ ಮಗ ಹಾಂಗಲ್ಲ. ಅವ° ಶುದ್ಧ ಚಿನ್ನ, ಅವನ ಸಂಸಾರ ಸರಿಯಾಯೆಕೂಳಿ ಆದರೆ ಬೇರೆಂತ ದಾರಿಯೂ ಕಾಣ್ತಿಲ್ಲೆ.
ಸೊಸೆಗೆ ಬುದ್ಧಿ ಹೇಳುದಾದರೂ ಆರು? ಈಗಾಣ ಕಾಲದ ಕೂಸುಗಳೇ ಹಾಂಗೆ. ಅವಕ್ಕೆ ಗೆಂಡನೂ, ಅವನ ಪೈಸೆಯೂ ಇದ್ದರೆ ಸಾಕು ಅವನ ಅಬ್ಬೆಪ್ಪ ಬೇಡ…” ಎಂತ ಮಾಡುದೂಳಿ ಗೊಂತಾಗದ್ದೆ ಗೆಡ್ಡಕ್ಕೆ ಕೈ ಹಿಡ್ಕೊಂಡು ಕೂದವು.

ಆರು ಎಷ್ಟು ಬುದ್ಧಿ ಹೇಳಿರೂ ಶಾರದೆ ತರ್ಕ ಬಿಟ್ಟಿದಿಲ್ಲೆ. ರಘು ಹೆಂಡತಿಗೆ ಸರೀ ಹೇಳಿ ನೋಡಿದ.
“ಕೇಳಿತ್ತಾ. ’ಭೂತಕ್ಕೆ ಮರ್ಲು ಹೇಳಿ ಮಾಡಕ್ಕೆ ಮರ್ಲಪ್ಪಲಾಗ’ ಎನ್ನ ಮಾತಿಂಗೆ ಬೆಲೆ ಕೊಟ್ಟು ಇಲ್ಲಿಯೇ ನಿಂದರೆ ಮಾತ್ರ ನಿನಗೆ ಒಳ್ಳೆದಕ್ಕಷ್ಟೆ ಹೇಳುದು ನೆಂಪಿರ್ಲಿ. ಹೇಳಿದ್ದಕ್ಕಾರೆ ಇಲ್ಲಿ ಕೂರು. ಇಲ್ಲಿಂದ ಹೆಚ್ಚಿಗೆ ನಿನಗೆ ಪೇಟೆಲಿ ಎಂತ ಇದ್ದು? ಇಲ್ಲಿ ಏವ ಸೌಕರ್ಯಕ್ಕೆ ಕೊರತೆಯಿದ್ದೂಳಿ ಹೇಳು”
“ನಿಂಗೊಗೆ ಎನ್ನ ಕಷ್ಟ ಅರ್ಥ ಆವ್ತರಲ್ಲದಾ? ಇಲ್ಲಿ ದೊಡ್ಡ ಮಂಡಗೆಲಿ ನೀರು ಕಾಸಿ ಮಿಂದೊಂಡು, ತೋಟಕ್ಕೆ ಹೋಗಿ ಕುಂಡೆ ಕುತ್ತ ಮಾಡಿ ಅಡಕ್ಕೆ ಹೆರ್ಕಿಂಡು ಬದ್ಕುಲೆ ಎನಗೆ ರಜವೂ ಮನಸ್ಸಿಲ್ಲೆ, ನಿಂಗೊ ಎನ್ನೊಟ್ಟಿಂಗೆ ಬತ್ತರೆ ಬನ್ನಿ, ಇಲ್ಲದ್ರೆ ಅನೊಬ್ಬನೆಯಾದರೂ ಹೋಪದು ಹೋಪದೇ”
“ತರ್ಕಕ್ಕೆ ಬರ್ಕತ್ತಿಲ್ಲೆ’, ನಿನ್ನ ಹಾಂಗಿಪ್ಪ ಭಾಶೆ ಇಲ್ಲದ್ದವಕ್ಕೆ ಬುದ್ಧಿ ಹೇಳುವ ಎನಗೆ ಬೈಯೆಕು. ಎಂತ ಬೇಕಾರೂ ಮಾಡು.ಅಂದರೂ ನಿನಗಲ್ಯಾಣ ಬದ್ಕು ಬೊಡುದರೆ ಇಲ್ಲಿ ಆನಿದ್ದೇಳಿ ನೆಂಪಿರ್ಲಿ”
ಅವನ ಅಕೇರಿಯಾಣ ಮಾತಿಂಗೆ ಒಂದಾರಿ ಮನಸ್ಸು ತಿರಿಗಿದಾಂಗಾದರೂ ಪೇಟೆಯ ಮೋಹವೇ ಅದರ ದೂರಕ್ಕೆ ಎಳಕ್ಕೊಂಡೋತು.

ಒಂದು ದಿನ ಉದಿಯಪ್ಪಗಳೇ ಅದರ ಪಡಿ ಬಿಡಾರ ಕಟ್ಟ್ಯೊಂಡು ಬೆಂಗ್ಳೂರಿನ ಅಕ್ಕನ ಮನಗೆ ಬಂತು ಶಾರದೆ.
“ಅಲ್ಲ ಮಾರಾಯ್ತಿ, ’ಇಬ್ರೂ ಒಟ್ಟಿಂಗೆ ಬನ್ನಿ’ ಹೇಳಿರೆ ಈಗ ನೀನೊಬ್ಬನೇ ಬಂದ್ಯನ್ನೆ. ಬರೀಕೈಲಿ ಬಂದ ಹಾಂಗೆ ಕಾಣ್ತು, ಬಪ್ಪಗ ರಜಾ ತೆಂಗಿನ ಕಾಯಿಯೋ, ಬಾಳೆಕೊನೆಯೋ ತಪ್ಪಲಾವ್ತಿತನ್ನೇ”
ಅಕ್ಕ ಶರಣ್ಯ ಹಾಂಗೆ ಹೇಳಿಂಡೇ ಶಾರದೆಯ ಎದ್ರುಗೊಂಡತ್ತು.
ಈಗ ಆನೊಬ್ಬನೇ ಬಂದದು. ಆನು ಬೇಕೂಳಿ ಆದರೆ ಅವ್ವು ಬಕ್ಕು. ಭಾವನತ್ರೆ ಎನಗೆಲ್ಲಿಯಾರೂ ಕೆಲಸ ಹುಡ್ಕಿ ಕೊಡ್ಳೆ ಹೇಳು”
ಆಯ್ಯೋ ಬೆಪ್ಪಿ, ಬರೇ ಬೋದಾಳನಾಂಗೆ ಮಾಡ್ತೆನ್ನೆ, ನೀನೆಂತರ ಕೆಲಸಕ್ಕೆ ಹೋಪದು? ಬರೀ ಡಿಗ್ರಿಯಾದವಕ್ಕೆ ಇಲ್ಲಿ ಎಷ್ತು ಸಂಬಳ ಹೇಳಿ ಗೊಂತಿದ್ದಾ?, ಅದೂ ಅಲ್ಲದ್ದೆ ನಿನಗೆ ಬರೀ ಬಿ.ಎ. ಆದ್ದದ್ದುದೆ.
ಅಕ್ಕನ ಮಾತು ಕೇಳ್ಯಪ್ಪಗಳೇ ಶಾರದೆಗಿಪ್ಪ ಅರ್ಧ ಧೈರ್ಯವೂ ಹೋತು. ಅಂದರೂ “ಹೇಂಗೂ ಬಂದಾಯ್ದು, ಭಾವ ಮನಸ್ಸು ಮಾಡಿರೆ ಎನಗೊಂದು ಕೆಲಸ ತೆಗೆಶಿ ಕೊಡ್ಲೆಡಿಗೂಳಿ ಗ್ರೇಶುತ್ತೆ”
“ಆತು. ಈಗ ನಿನ್ನ ಸಾಮಾನಿನ ಎಲ್ಲ ಈ ಉಗ್ರಾಣಲ್ಲಿ ಮಡುಗು. ಆನು ಕಾಫಿಗೆ ತಿಂಡಿ ಎಂತ ಮಾಡಿದ್ದಿಲ್ಲೆ. ಎಂಗೊ ಹೆರ ಹೋವ್ತೆಯೊ°, ನೀನೆಂತಾರು ಬೇಕಾರೆ ಮಾಡಿ ತಿನ್ನು” ಹೇಳಿಕ್ಕೆ ಅದು ಅಟ್ಟಕ್ಕೆ ಹೋತು.

~*~

ಬೆಂಗ್ಳೂರಿಂಗೆ ಬಂದು ಒಂದು ವಾರಪ್ಪಗ ಶಾರದೆಗೆ ಅಲ್ಲೇ ಒಂದು ಖಾಸಗಿ ಕಂಪೆನಿಲಿ ಸಣ್ಣ ಕೆಲಸ ಸಿಕ್ಕಿತ್ತು. ಆರು ಸಾವಿರ ಸಂಬಳ ಹೇಳುಗ ಕೊಶಿಯಾದರೂ, ದಿನಾಗಳೂ ಹೋಗಿ ಬಪ್ಪಲೆ ಶುರು ಮಾಡ್ಯಪ್ಪಗಳೇ ಅದರ ಬಂಙ ಎಷ್ಟೂಳಿ ಅದಕ್ಕೆ ಗೊಂತ್ತಾದ್ದದು.
ಅಷ್ಟು ಮಾತ್ರ ಅಲ್ಲ, ದಿನಾಗಳೂ ಅಕ್ಕನ ಮನೇಲೇ ನಿಂಬಲೆ ಸುರುವಾದ ಮತ್ತೆ ಭಾವನ ನಡವಳಿಕೆಯೂ ಅದಕ್ಕೆ ಉಪದ್ರ ಅಪ್ಪಲೆ ಸುರುವಾತು.
ಎಂತಾರೂ ಪೋಲಿ ಮಾತಾಡುದು, ಮೈ ಕೈ ಮುಟ್ಟುದು ಮಾಡುಗ ಅದಕ್ಕೆ ಮೈಗೆ ಇಂಗಾಳು ಸೊರ್ಗಿದಾಂಗೆ ಆಗಿಂಡಿದ್ದತ್ತು.

ಹೇಂಗಾರು ಮಾಡಿ ಅದರೊಟ್ಟಿಂಗೆ ಕೆಲಸ ಮಾಡುವ ವಿಜಯಕ್ಕನ ಚಂಙಯ ಮಾಡ್ಯೊಂಡು ಒಬ್ಬನೇ ಕೋಣೆಲಿಪ್ಪಗ ಅದರೊಟ್ಟಿಂಗೆ ನಿಂಬಲೆ ಸುರು ಮಾಡಿತ್ತು. ವಿಜಯಕ್ಕ ಒಳ್ಳೆ ಹೆಮ್ಮಕ್ಕೊ.
ತಿಂಗಳಿಂಗೆ ಐದು ಸಾವಿರವೂ ಕೋಣೆಯ ಬಾಡಿಗೆಗೆ ಕೊಡೆಕಾಗಿ ಬಂದಪ್ಪಗ ಶಾರದೆಗೆ ತಲೆ ತಿರುಗಿದ ಹಾಂಗಾತು.
ಮನೆಂದ ಬಪ್ಪಗ ಕಟ್ಟ್ಯೊಂಡು ಬಂದ ನಾಲ್ಕೈದು ಸೀರೆ ಬಿಟ್ರೆ ಬೇರೆಂತದೂ ಇತ್ತಿಲ್ಲೆ ಅದರತ್ರೆ.
ಇನ್ನು ಒಳ್ದ ಖರ್ಚಿಂಗೆ ಎಂತ ಮಾಡುದೂಳಿ ದಾರಿ ಕಾಣದ್ದಿಪ್ಪಗಳೇ ಅದಕ್ಕೆ ಉದಿಯಪ್ಪಗಲೇ ಹೊಟ್ಟೆ ತೊಳಸುಲೆ, ಬಾಯಿ ಚೆಪ್ಪೆ ಚೆಪ್ಪೆ ಅಪ್ಪಲೆ ಸುರುವಾತು.
ಅಂಗಳೇ ಅದಕ್ಕೆ ನೆಂಪಾದ್ದದು ’ತಿಂಗಳ ಕುದಿ’ ತಪ್ಪಿ ಎರಡು ತಿಂಗಳಾತೂಳಿ.
ಈಗ ’ಇವ್ವು’ ಎನ್ನೊಟ್ಟಿಂಗೆ ಇದ್ದರೇ… ಹೇಳಿ ನೆಂಪೇ ಅದಕ್ಕೆ ಕೊಶೀಯಾತು.

“ನಮಗೆ ಮೊದಲು ಮಗಳಾದರೆ ಒಳ್ಳೆದು, ಅಬ್ಬಗೂ ಕೂಸುಗೊ ಹೇಳಿರೆ ಪ್ರೀತಿ…..ಮದುವೆಯಾದ ಸುರುವಿಂಗೆ ರಘು ಎಂತೋ ಮಾತಾಡುಗ ಹೇಳಿತ್ತಿದ್ದ
“ನಮಗೆ ಇಷ್ಟು ಬೇಗ ಮಕ್ಕಳೇ ಬೇಡ, ಎನ್ನ ಅಕ್ಕನ ಮದುವೆ ಕಳುದು ಐದು ವರ್ಷಾತು, ಅದೂದೆ ಈಗಳೇ ಮಕ್ಕೊ ಬೇಡಾಳಿ ಕೂಯ್ದು, ಅಷ್ಟಪ್ಪಗ ನಮಗೆ ಇಷ್ಟು ಬೇಗ….” ಶಾರದೆ ಗೆಂಡನ ಮಾತಿನ ಅರ್ಧಲ್ಲೇ ತಡದು ಹೇಳಿದ್ದು.
ಹಾಂಗೆ ಹೇಳಿದ್ದು ಮಾತ್ರ ಅಲ್ಲ, ಅಪ್ಪನ ಮನಗೆ ಹೋಗ್ಯಪ್ಪಗ ಡಾಕ್ಟ್ರಲ್ಲಿಗೆ ಹೋಗಿ ಮಾತ್ರೆಯನ್ನು ತಂದು ಗೆಂಡಂಗೆ ಗೊಂತಾಗದ್ದ ಹಾಂಗೆ ತಿಂದೊಂಡೂ ಇತ್ತಿದ್ದು.
ಅಂದರೂ ಪೇಟಗೆ ಹೋಯೆಕೂಳಿ ಲಡಾಯಿ ಕೊಡುವ ಅಂಬೆರ್ಪಿಲ್ಲಿ ಮಾತ್ರೆ ಅದಕ್ಕೆ ಮರದೇ ಹೋಗಿದ್ದತ್ತು. ಬಹುಶಃ ದೇವರೇ ಎನಗೆ ಮರದೋಪ ಹಾಂಗೆ ಮಾಡಿದಾಗಿಕ್ಕು..

ಎಲ್ಲ ನೆಂಪಾಗಿ ಮನುಗಿದಲ್ಲಿಯೇ ಎಕ್ಕಿ ಎಕ್ಕಿ ಕೂಗಿಂಡಿಪ್ಪಗಳೇ ವಿಜಯಕ್ಕ ಬಂದದು.

“ಇದಾ ಮಾರಾಯ್ತಿ, ನೀನು ಹೀಂಗೆ ಗೆಂಡನ, ಮನೆಯವರ ಎಲ್ಲ ಗ್ರೇಶಿಂಡು ಕಣ್ಣೀರಾಕುದಕ್ಕಿಂತ, ಅವರ ಹತ್ರಂಗೆ ಹೋಗಿ ಅವರತ್ರೆ ತಪ್ಪಾತೂಳಿ ಹೇಳು, ಖಂಡಿತಾ ಅವು ನಿನ್ನ ಬೈಯವು, ನಿನ್ನ ಬಾಬೆ ಅಪ್ಪ, ಅಜ್ಜಿ ಅಜ್ಜನ ಕೊಂಡಾಟಲ್ಲಿ ದೊಡ್ಡಾಯೆಕೂಳಿ ಗ್ರೇಶಿಂಡು ಪುನಃ ನೀನು ಆ ಮನೆಯ ಮೆಟ್ಟು ಕಲ್ಲು ಹತ್ತು.
ನಿನಗೆ ಒಳ್ಳೆದಕ್ಕೂಳಿಯೇ ಎನ್ನ ಮನಸ್ಸು ಹೇಳ್ತು. ಆನೀಗಳೇ ನಿನ್ನ ಊರಿಂಗೋಪ ಬಸ್ಸು ಹತ್ಸಿಕ್ಕಿ ನಿನ್ನ ಗೆಂಡಂಗೆ ಫೋನ ಮಾಡ್ತೆ”.
ಕೆಪ್ಪಟೆಲಿ ಅರುದ ಕಣ್ಣು ನೀರಿನ ಉದ್ದ್ಯೊಂಡೇ ಸಾಮಾನು ಎಲ್ಲ ಬ್ಯಾಗಿಂಗೆ ತುಂಬಿಸಿತ್ತು ಶಾರದೆ. ಮನಗೆ ಹೋದರೆ ಗೆಂಡ, ಅತ್ತೆ, ಮಾವ ಎಲ್ಲ ಎಂತ ಹೇಳುಗೋ ಹೇಳಿ ಹೆದರಿಕೆ ಆಗ್ಯೊಂಡಿದ್ದರೂ, ಮನಸ್ಸಿನ ಒಳ ಎಲ್ಲ್ಯೋ ರಜಾ ಸಮಾಧಾನವೇ ಸಿಕ್ಕಿತ್ತದಕ್ಕೆ.
ವಿಜಯಕ್ಕ ಶಾರದೆಯ ಬಸ್ಸು ಹತ್ಸಿಕ್ಕಿ” ಶಾರದೇ, ಆನೊಂದು ಮಾತು ಹೇಳ್ತೆ, ಆರಾರ ಮಾತು ಕೇಳಿ ‘ಚೆಂದ ಕಂಡವರ ಅಪ್ಪ’ ಹೇಳಿ ಹೇಳುವ ನಿನ್ನ ಹಳೆಯ ಬುದ್ದಿಯ ಬಿಟ್ಟು, ಮನೆಯವರೊಟ್ಟಿಂಗೆ ಒರ್ಮಯಿಸಿಕೊಂಡು ಹೋಗು, ಆನು ಹೀಂಗೆ ಹೇಳಿದ್ದೇಳಿ ಬೇಜಾರ ಮಾಡೆಡಾ” ಹೇಳಿತ್ತು

“ಇಲ್ಲೆ ವಿಜಯಕ್ಕ, ನಿಂಗೊ ಹೇಳಿದ ಹಾಂಗೇ ಕೇಳ್ತೆ. ಕತ್ತಲೆಲಿ ಇದ್ದ ಎನಗೆ ಬೆಣ್ಚಿ ತೋರ್ಸಿದ ದೇವರು ನಿಂಗೊ”
“ಹಾಂಗೆಲ್ಲ ಎಂತ ಹೇಳೆಡ, ಮತ್ತೆ ಬಯಕ್ಕೆ ಹೇಳಿ ಕೈಗೆ ಸಿಕ್ಕಿದ ಕಾಟಂಕೋಟಿಯೆಲ್ಲ ತಿನ್ನೆಡ, ಅತ್ತೆ ಮಾಡಿ ಕೊಡುವ ಕುರುಂತೋಟಿ ಕಷಾಯವ , ಬೇಂಗದ ಕೆತ್ತೆ ಕಷಾಯವ ಎಲ್ಲ ನೇರ್ಪಕೆ ಕುಡಿ. ಕೋಡಿಗೆ ಎನಗೂ ಮರೆಯದ್ದೆ ಹೇಳಿಕೆ ಹೇಳು..”
ಹೇಳಿ ನೆಗೆ ಮಾಡಿಂಡೇ ಶಾರದೆಯ ಬೆನ್ನು ತಟ್ಟಿಕ್ಕಿ ಕೈ ಬೀಸಿತ್ತು ವಿಜಯಕ್ಕ. ಶಾರದೆ ಕೂದ ಬಸ್ಸು ಊರಿನ ಹೊಡೆಂಗೆ ಹೋಪಲೆ ಹೆರಟತ್ತು.
ವಿಜಯಕ್ಕ ಫೋನ್ ಮಾಡಿದ ಕಾರಣ ಉದಿಯಪ್ಪಗ ಆರು ಗಂಟಗೇ ಶಾರದೆಯ ಮನೆಗೆ ಕರ್ಕೊಂಡು ಹೋಪಲೆ ರಘು ಜೀಪು ತಂದು ಕಾದು ಕೂದೊಂಡಿತ್ತಿದ್ದ.
ಶಾರದೆ ಬಸ್ಸಿಳಿದು ಬಂದಪ್ಪಗ ಅದರ ಕೈಲಿಪ್ಪ ಚೀಲವ ಜೀಪಿಲ್ಲೆ ಮಡುಗಿ ಅದಕ್ಕೆ ಕೂಬಲೆ ಬಾಗಿಲು ತೆಗದುಕೊಟ್ಟ ರಘು ಒಂದಕ್ಷರವೂ ಮಾತಾಡಿದ್ದಾ ಇಲ್ಲೆ.

~*~

‘ಹಾಂಗಾರೆ ಆನು ಮಾಡಿದ ತಪ್ಪಿಂಗೆ ಮಾಫಿ ಇಲ್ಲೆಯಾ’ ಹೇಳಿ ಮನಸ್ಸಿಲ್ಲಿಯೇ ಕೂಗ್ಯೊಂಡಿದ್ದ ಅದು ಜೀಪು ಮನೆಯ ಪಡಿಪ್ಪೊರೆ ಎದುರೆ ನಿಲ್ಸಿಯಪ್ಪಗ ಅಲ್ಲಿಗೆ ಬಂದ ಅತ್ತೆ ಮಾವನ ಕಂಡು ಓಡಿಂಡು ಹೋಗಿ ಅವಕ್ಕೆ ಹೊಡಾಡಿತ್ತು.
“ಎನ್ನದು ತಪ್ಪಾತತ್ತೆ, ಇನ್ನು ಹೀಂಗೆ ಮಾಡ್ತಿಲ್ಲೆ. ದೂರದ ಗುಡ್ಡೆ ಕಾಂಬಲೆ ಚೆಂದ ಇದ್ದೂಳಿ ಹತ್ತಲೆ ಹೆರಟೆ. ಹತ್ತರಂಗೆ ಎತ್ತ್ಯಪ್ಪಗಳೇ ಅಲ್ಲಿಯೂ ಕೊರಕ್ಕುಳಿ, ಹೊಂಡ ಎಲ್ಲ ಇದ್ದೂಳಿ ಗೊಂತಾದ್ದದು….” ಮುಂದೆ ಮಾತಾಡ್ಲೆಡಿಯದ್ದೆ ಎಕ್ಕಿದ ಸೊಸೆಯ ಅಚ್ಚುಮಕ್ಕ ನೆಗ್ಗಿ ಅಪ್ಪಿ ಅದರ ಕಣ್ಣು ನೀರು ಸೆರಗಿಲ್ಲಿಯೇ ಉದ್ದಿದವು.
“ನೀನು ಈ ಮನೆಯ ಭಾಗ್ಯ ಲಕ್ಷ್ಮಿ. ಕಣ್ಣೀರಾಕುಲಾಗ, ಮನುಷ್ಯ ತಪ್ಪು ಮಾಡದ್ದೆ ಮರ ತಪ್ಪು ಮಾಡ್ಲಿದ್ದೋ?. ಆ ತಪ್ಪಿನ ಅರ್ತೊಂಡು ತಿದ್ದಿದೆ ನೀನು, ಹೀಂಗೆ ಕೂಗಿರೆ ಹೇಂಗೆ?”

ಈಶ್ವರಣ್ಣಂದೆ “ಬಾ.. ಒಳ ಬಂದು ಆಸರಿಂಗೆ ಕುಡಿ, ಬಸ್ಸಿಲ್ಲಿ ಕೂದು ಕೂದು ಬಚ್ಚಿತ್ತಾಗಿಕ್ಕು” ಹೇಳಿದವು.
“ಆತು, ನಿಂಗೊ ಇಬ್ರು ಒಳ ಬನ್ನಿ” ಹೇಳಿಕ್ಕಿ ಅತ್ತೆಯುದೆ, ಮಾವನ್ದೆ ಒಳ ಹೋದಪ್ಪಗ ರಜ ದೂರ ಮಾತಾಡದ್ದೆ ನಿಂದೊಂಡಿಪ್ಪ ಗೆಂಡನ ಮೋರೆ ನೋಡಿತ್ತು ಶಾರದೆ.
ಅಷ್ಟಪ್ಪಗ ಅದರ ಕಣ್ಣಿಂದ ನೀರು ಧಾರೆಯಾಗಿ ಅರುದತ್ತು.

“ಇದೆಂತ ಇನ್ನೂದೆ ಕೂಗುತ್ತೆ, ಆಗ ನೀನು ಕೂಗುದು ನಿಲ್ಸಿಯಪ್ಪಗ ಅಕಾಶಲ್ಲಿಪ್ಪ ಕಪ್ಪು ಮುಗಿಲೆಲ್ಲಾ ಮಳೆಯಾಗಿ ಬಂದು ಮುಗ್ದಪ್ಪಗ ಕಾಮನ ಬಿಲ್ಲು ಕಾಣುತ್ತಲ್ಲದಾ? ಹಾಂಗೇ ಆತೂಳಿ ಗ್ರೇಶಿದ್ದಾನು” ಅವನ ಪ್ರೀತಿ ತುಂಬಿದ ಜೇನಿನ ಎರಿ ಹಾಂಗಿಪ್ಪ ಮಾತು ಕೇಳ್ಯಪ್ಪಗ ಎಲ್ಲಿ ಕೆಳಾಂಗೆ ಬಿದ್ದರೇ ಹೇಳುವಷ್ಟು ಕೊಂಡಾಟಾತದಕ್ಕೆ.
ಕಣ್ಣಿಲ್ಲಿ ಮತ್ತೂ ಮತ್ತೂ ನೀರು ಒರತೆಯಾಂಗೆ ಹರ್ದು ಬಪ್ಪಗ ರಘು ಹೆಂಡ್ತಿಯ ಕೆಮಿಲಿ “ನೀನು ಹೀಂಗೆ ಕೂಗಿರೆ ನಮ್ಮ ಮಗಳೂದೆ ಬರೀ ‘ಕೂಗಟೆ ಸುಬ್ಬಿ’ಯಕ್ಕು” ಹೇಳಿದ°.
ಶಾರದೆಗೆ ನಾಚಿಕೆಯಾಗಿ ಕೆಪ್ಪಟೆಲಿ ಕಣ್ಣು ನೀರು ಅರಿತ್ತರೂ ತೊಡಿ ಬಿಡ್ಸಿ ನೆಗೆ ಮಾಡಿತ್ತು.
“ಅಬ್ಬಬ್ಬ ಹೇಂಗಾರೂ ಕಾಮನ ಬಿಲ್ಲು ಕಂಡತ್ತದ ಈಗ…” .ರಘು ನೆಗೆ ಮಾಡಿಂಡೇ ಹೆಂಡತ್ತಿಯ ಕೈ ಹಿಡ್ಕೊಂಡು ಮನೆಯ ಮೆಟ್ಟುಕಲ್ಲು ಹತ್ತಿದ.
ಆ ಕೈಯ ಬಿಟ್ಟಿಕ್ಕಿ ಇನ್ನೆಲ್ಲಿಗೂ ಹೋವ್ತಿಲ್ಲೆ ಹೇಳಿ ಮನಸ್ಸಿಲ್ಲಿಯೇ ಗ್ರೇಶಿಂಡು ಗೆಂಡನೊಟ್ಟಿಂಗೆ ಮನೆಯ ಹೊಸ್ತಿಲು ದಾಂಟಿತ್ತು ಶಾರದೆ.
’ದೇವರೇ ಇವು ಯಾವಗಳೂ ಹೀಂಗೇ ನೆಗೆ ಮಾಡಿಂಡಿರ್ಲಿ’ ಹೇಳಿ ಕಾಣದ್ದ ದೇವರಿಂಗೆ ಮನಸ್ಸಿಲ್ಲಿಯೇ ಕೈ ಮುಗುದವು ಅಚ್ಚುಮಕ್ಕ.

~*~*~

ಸೂ:

 • ಲೇಖಕಿ ಯಶಸ್ವಿ ಗೃಹಿಣಿ ಆಗಿದ್ದೊಂಡು ಹವ್ಯಕ ಸರಸ್ವತಿ ಸೇವೆ ಮಾಡುದು ನಿಜವಾಗಿಯೂ ಅಭಿನಂದನೀಯ
 • ಲೇಖಕಿಯ ವಿಳಾಸ:
  ಶ್ರೀಮತಿ ಪ್ರಸನ್ನ ವೆಂಕಟಕೃಷ್ಣ ಚೆಕ್ಕೆಮನೆ
  ಧರ್ಮತ್ತಡ್ಕ ಅಂಚೆ
  ಮಂಗಲ್ಪಾಡಿ
  ಕಾಸರಗೋಡು 671324
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ದೂರದ ಗುಡ್ದೆ ಹಸೂರಾಗಿ ಚೆ೦ದ ಕಾಣುತ್ತು,ಆದರೆ ಹತ್ತರ೦ಗೆ ಎತ್ತಿಯಪ್ಪಗ ಕಲ್ಲು ಮುಳ್ಳಿನ ಅನುಭವ ಅಪ್ಪದು.ಈ ಕಥೆ ನಿಜಜೀವನದ ಅನುಭವವೊ ಹೇಳುವಷ್ಟು ಸರಾಗಲ್ಲಿ ನಿರೂಪಿಸಿದ ಪ್ರಸನ್ನಕ್ಕ೦ಗೆ ಅಭಿನ೦ದನೆಗೊ.
  ಹವ್ಯಕ ಸಾಹಿತ್ಯದ ಬೆಳವಣಿಗೆಗೆ ನಿ೦ಗಳ ಕೊಡುಗೆ ಹೆಚ್ಚು ಹೆಚ್ಚು ಸಲ್ಲಲಿ ಹೇಳ್ತ ಆಶಯದೊಟ್ಟಿ೦ಗೆ ಶುಭಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ
  ವಿಜಯಾ ಸುಬ್ರಹ್ಮಣ್ಯ , ಕುಂಬಳೆ

  ಕಥೆ ಲಾಯಕಿದ್ದು.. ಓದುಸ್ಯೊಂಡು ಹೋವ್ತು.. ಹವ್ಯಕ ಗಾದೆಗಳೊ ಕೆಲವು ನೆಂಪಾವ್ತು.. ಕೃಷಿಕ ಗೆಂಡನ ಕೈ ಹಿಡುದು, ಪರರ ಮಾತು ಕೇಳಿ ಎಲ್ಲಾ ಸೌಲಭ್ಯ ಇಪ್ಪ ಮನೆಯನ್ನೂ, ಗೆಂಡನನ್ನೂ ಬಿಟ್ಟು ಪೇಟೆ ಜೀವನವೆ ಸುಖ ಹೇಳಿ ಗ್ರೇಶಿ ಹೋಪ ಕೂಸುಗೊಕ್ಕೆ ಇದೊಂದು ಒಳ್ಳೆ ಸಂದೇಶ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಗೋಪಾಲಣ್ಣಪ್ರಕಾಶಪ್ಪಚ್ಚಿದೊಡ್ಮನೆ ಭಾವಸುಭಗಸಂಪಾದಕ°ಮುಳಿಯ ಭಾವದೊಡ್ಡಮಾವ°ವೆಂಕಟ್ ಕೋಟೂರುತೆಕ್ಕುಂಜ ಕುಮಾರ ಮಾವ°ಯೇನಂಕೂಡ್ಳು ಅಣ್ಣಅಕ್ಷರ°ಮಂಗ್ಳೂರ ಮಾಣಿಕೊಳಚ್ಚಿಪ್ಪು ಬಾವಡಾಮಹೇಶಣ್ಣವೇಣಿಯಕ್ಕ°ಸರ್ಪಮಲೆ ಮಾವ°ದೀಪಿಕಾಚೆನ್ನಬೆಟ್ಟಣ್ಣದೊಡ್ಡಭಾವಸುವರ್ಣಿನೀ ಕೊಣಲೆವಾಣಿ ಚಿಕ್ಕಮ್ಮಚುಬ್ಬಣ್ಣವೇಣೂರಣ್ಣನೆಗೆಗಾರ°ಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ