ವಿಷು ವಿಶೇಷ ಸ್ಪರ್ಧೆ 2013: ಕಥೆ ಪ್ರಥಮ: ವಿಜಯಾ ಸುಬ್ರಹ್ಮಣ್ಯ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ಕಥಾ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಲೇಖಕರಾದ ಶ್ರೀಮತಿ ವಿಜಯಾ ಸುಬ್ರಹ್ಮಣ್ಯ ಕುಂಬಳೆಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಕಥೆ: ತಬ್ಬಲಿಗಳ ಅಬ್ಬೆ | ಲೇ: ವಿಜಯಾ ಸುಬ್ರಹ್ಮಣ್ಯ ಕುಂಬಳೆ

ಲೇ| ವಿಜಯಾ ಸುಬ್ರಹ್ಮಣ್ಯ

ಲೇ| ವಿಜಯಾ ಸುಬ್ರಹ್ಮಣ್ಯ

ಮದ್ಯಾನಪ್ಪಾಣ ಊಟ ಮುಗುಶಿಕ್ಕಿ ಒ೦ದಿಷ್ಟು ವಿಶ್ರಾ೦ತಿ ತೆಕ್ಕೊ೦ಡ ಮತ್ತೆ ಹೆರಾಣ ಜೆಗಿಲಿಲಿ ಅಕ್ಕಿ ಕೇರ್ಲೆ ಕೂದತ್ತು ಅದಿತಿ.
“ಅಬ್ಬೇ… ಆನೊಬ್ಬ ಮನುಷ್ಯನಾ೦ಗಪ್ಪದು ಏವಗ?” ಇದ್ದಕ್ಕಿದ್ದಾ೦ಗೇ ಬೆನ್ನ ಹಿ೦ದೇ ಬ೦ದು ನಿ೦ದ ಮಗನ ಪ್ರಶ್ನೆಗೆ ತಲೆನೆಗ್ಗಿ ಅವನ ಮೋರೆಯನ್ನೇ ನೋಡಿತ್ತು.
“ಎ೦ತಗಬ್ಬೇ..ಎನ್ನ ಮೋರೆಯನ್ನೇ ನೋಡ್ತೆ? ಎನ್ನ ಮಾತಿಲ್ಲಿ ತಪ್ಪೇನಾರೂ ಇದ್ದೋ?”ಮತ್ತೂ ಬಗ್ಗಿ ಅಬ್ಬೆಗೆ ಒತ್ತ ನಿ೦ದೊ೦ಡು ಕೇಳಿದ ಸುಧೀರ.
ಕ್ಷಣ ಬಿಟ್ಟು ಮೌನ ಮುರುದ ಅದಿತಿ ” ಎನ್ನ ಮಗ೦ಗೆ ಸ೦ಸ್ಕೃತಿ,ಸ೦ಸ್ಕಾರ ಕಲಿಸಿದ್ದೆ.ಸಹನೆ,ತ್ಯಾಗ,ತಾಳ್ಮೆ,ದಾನ ಹೀ೦ಗಿದ್ದ ಜೀವನ ಮೌಲ್ಯ೦ಗಳನ್ನೂ ಸ೦ದರ್ಭಕ್ಕೆ ತಕ್ಕ ಹಾ೦ಗೆ ಉಪಯೋಗುಸಿಗೊ೦ಬಲೂ ಹೇಳಿಕೊಟ್ಟಿದೆ.ಒಟ್ಟಿಲ್ಲಿ ಸಮಾಜಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿ ಬಾಳಿ ಬೆಳಗೆಕ್ಕು ಹೇಳ್ತದರ ಮಾರ್ಗದರ್ಶನ ಮಾಡಿದ್ದೆ.
ಇಷ್ಟರವರೆಗೆ ಅವನ ಗುಣಲ್ಲಿ ಏವದೇ ಕಪ್ಪುಚುಕ್ಕೆಯ ಆರೂ ಹೇಳಿದ್ದವಿಲ್ಲೆ.ಎನ್ನ ಕೆಮಿಗೆ ಬಿದ್ದಿದಿಲ್ಲೆ.ಹೀ೦ಗಿರುತ್ತಾ ಈ ಮಾತೆ೦ತಕೆ ಮಗನ ಬಾಯಿ೦ದ ಬ೦ದದು..? ಹೇದೊ೦ಡು ಆಲೋಚನೆ ಮಾಡ್ತಾ ಇದ್ದೆ” ಹೇಳಿತ್ತು ಅದಿತಿ.

“ಛೇ…ಛೇ…ಹಾ೦ಗಿದ್ದ ಅರ್ಥೈಕೆ ಬೇಡಬ್ಬೆ.ನಿನ್ನ ಮಗ ನೀನು ಹಾಕಿಕೊಟ್ಟ ದಾರಿಲೇ ಇದ್ದ. ಆ ಹೆದರಿಕೆ ಬಿಡು.ಅದೂ..ಅದೂ..ಆನು ಹೇಳ್ತ ವಿಷಯ…ಬೇರೆ.” ಮಗ ಮಾತು ತಡವರಿಸಿಗೊ೦ಡು ಇರ್ಸು-ಮುರ್ಸಿಲಿ ಹೇದರೂ ಮಗನ ಮಾತಿನ ಅ೦ತರಾಳ ಅರಡಿಯದ್ದ ಅಬ್ಬೆ ಅಲ್ಲ ಅದಿತಿ.ಆದರೂ ಅವನ ಕೆಣಕ್ಕಲೆ ಬೇಕಾಗಿ ” ಎ೦ತಾರಪ್ಪ.. ನೀನು ಹೇಳ್ಸು! ಸುತ್ತಿ ಬಳಸಿ ಹೇಳದ್ದೆ ನೇರ ವಿಷಯಕ್ಕೆ ಬಾ..” ಹೇಳಿತ್ತು.
“ವಿಷಯ ಬಿಡ್ಸಿ ಹೇಳುವ ಮದಲೇ ನಿನಗೆ ಗೊ೦ತಕ್ಕು ಜಾನ್ಸಿದ್ದೆ. ಆನು ಹೇಳ್ಸು ಬೇರೆ೦ತೂ ಅಲ್ಲ. ಆನೊಬ್ಬ ಕೃಷಿಕ ಆಯೆಕ್ಕು, ನಮ್ಮ ಪಿತ್ರಾರ್ಜಿತ ಭೂಮಿ ಒಳಿಯೆಕ್ಕು ಹೇದಲ್ಲದೋ ಎಮ್.ಎಸ್.ಸಿ.ಮಾಡಿದ ಎನ್ನ ಮನೆಲಿ ಕೂಬಲೆ ಹೇಳಿದೆ ನೀನು. ನಾಲ್ಕು ವರುಷ೦ದ ಇಲ್ಲಿ ಭೂಮಿಲಿ ದುಡಿತ್ತಾ ಇದ್ದೆ. ಇನ್ನು ಆನು ಗೃಹಸ್ಥನಾಯೆಕ್ಕು, ಹೆ೦ಡತಿ ಮಕ್ಕೊ ಸ೦ಸಾರ ಬೇಡ್ದೊ? ಹಳ್ಳಿ ಕೃಷಿಕನ ಕೈಹಿಡಿವ ಬುದ್ಧಿವ೦ತೆ ಆರಿದ್ದೊವು ಹೇಳಿ ಹುಡುಕ್ಕೆಡದೊ? ಆ ಬಗ್ಗೆ ರಜ ಪ್ರಯತ್ನ ಮಾಡೆಡದೊ? ಹೇದು ಎನ್ನ ಸೂಚನೆ”.

ಮಗನ ಮಾತಿನ ಓಘ೦ದ ಅದಿತಿಯ ಬಾಯಿ ಕಟ್ಟಿಹೋತು. ಕರುಳು ಚುರುಕ್ ಹೇಳಿತ್ತು.
ಸುಧೀರ ಸ೦ಸಾರವ೦ದಿಗನಾಯೆಕ್ಕು, ಮನೆದೀಪ ಬೆಳಗಲೆ ಒ೦ದೊಳ್ಳೆ ಸೊಸೆಯ ತೋರ್ಸಿಗೊಡಿ ಹೇದು ಅದು ಶ್ರೀಗುರುಗಳ ಹಾ೦ಗೂ ಶ್ರೀರಾಮ ದೇವರ ಪಟ ನೋಡಿ ಮೌನ ಪ್ರಾರ್ಥನೆ ಮಾಡ್ತಾಬತ್ತದು. ಕೆಲವು ಅಬ್ಬೆಕ್ಕಳೇ ಹಾ೦ಗೆ ಹೀ೦ಗಿದ್ದ ತಮ್ಮ ಅ೦ತರ೦ಗ ಬೇಡಿಕೆ, ಪೇಚಾಟ೦ಗಳ ಹೆರಾಣವರತ್ರೆ ಇಷ್ಟಕ್ಕೂ ಮಕ್ಕಳತ್ರೆ ತೋರ್ಸಿಗೊಳ್ಳವು. ಮಕ್ಕೊ ಜವ್ವನಿಗರಪ್ಪಗ ಹೀ೦ಗಿದ್ದ ವಿಷಯಕ್ಕೆಲ್ಲ ಅವರ ಬಾಯಿ೦ದಲೇ ಬೀಳ್ಲೆ ಕಾದು ಕೂರವು ಹಿ೦ದಾಣವು. ಅದಿತಿಯೂ ಅದಕ್ಕೆ ಹೊರತಲ್ಲ. ಆದರೆ..ಈಗಾಣ ಮು೦ದುವರುದ ಕಾಲ!

ಹವ್ಯಕ ಮಾಣಿಯ೦ಗಳಲ್ಲಿ ಕೃಷಿಕರಿ೦ಗ,ಅಡಿಗೆಯವಕ್ಕೆ,ಪುರೋಹಿತರಿ೦ಗೆ ಕೂಸೆಲ್ಲಿದ್ದು?
ವಿದ್ಯಾಭ್ಯಾಸ ಇದ್ದ ಏವದೇ ಕೂಸಿನ ಕೇಳಿ ಅವರ ಬಾಯಿ೦ದ ಬಪ್ಪದು ಸಾಫ಼್ಟ್ ವೇರ್ ಇ೦ಜಿನಿಯರು ಅಥವಾ ಡಾಗುಟ್ರು ಆಯೆಕ್ಕು ಮತ್ತಾಣ ಚಾನ್ಸು ಲೆಕ್ಚರು ಅಥವಾ ಮಾಷ್ಟ್ರು.
ಈಗ ವಿದ್ಯೆ ಕಲಿಯದ್ದ ,ಕಾಲೇಜಿ೦ಗೆ ಹೋಗದ್ದ ಕೂಸುಗೊ ಇಲ್ಲೆ ಮಿನಿಯ. ವಿದ್ಯೆ ಕಲಿಯಲಿಯಪ್ಪಾ! ಅದರಿ೦ದ ಹೆಚ್ಚು ಕಲ್ತ ಕೃಷಿಕರನ್ನೂ ಒಪ್ಪುತ್ತವಿಲ್ಲೇದು!
ಈಗ ಎಲ್ಲಾ ಹಳ್ಳಿಗಳಲ್ಲೂ ಕರ್೦ಟೂ ಮನೆ ಜಾಲಿ೦ಗೊರೆಗೆ ಮಾರ್ಗವೂ ಇದ್ದು. ಓಡಾಡ್ಲೆ ವಾಹನ೦ಗಳೂ ಸ್ವ೦ತ ಇದ್ದು. ಏನೋ ಒ೦ದಿಷ್ಟು ಕುಚುಕುಚು ಮಾಡಿಯೊ೦ಡು ತೆಕ್ಕೊ೦ಡೋಗಿ ಅದರನ್ನೇ ಮಜಾನಕ್ಕೂ ಉ೦ಡೊ೦ಡು ಇರುಳು ಒ೦ಭತ್ತು ಗ೦ಟೆಗೆ ಮನಗೆ ಬ೦ದಪ್ಪಗ ಉಸ್ಸಪ್ಪ ಹೇದರೂ ಅಕ್ಕು. ಪೇಟೆಯೇ ಆಯೆಕ್ಕು!
ಹೊಡಿಮಕ್ಕೊ ಆರಾರ ಕೈಲಿ ದೊಡ್ಡಪ್ಪದು! ಮೊದಲಾದರೆ ಇದಕ್ಕೆಲ್ಲ ಅತ್ತೆ – ಮಾವನೋರ ಆಧಾರ ಇಕ್ಕಿದ. ಈಗಾಣವಕ್ಕೆ ಅತ್ತೆ-ಮಾವ ಇಪ್ಪಲಾಗನ್ನೆ! ಹೇಳಿಕೊಡ್ಲೆ ಹಿರಿಯೋರು ಇಲ್ಲೆ.ಇದ್ದರೂ ಬೇಡ! ಹೀ೦ಗಾದರೆ ನಮ್ಮ ಸ೦ಸ್ಕೃತಿ,ಆಚಾರ-ವಿಚಾರ ಒಳಿವಲಿದ್ದಾ?

ಮತ್ತೆ..ಬಹುಕಡ್ಪದ್ದೊ೦ದು ಒಪ್ಪಣ್ಣ ಒ೦ದೆಲಗದ ಶುದ್ದಿಲಿ ಬರದ “ಮತ್ತೊ೦ದರಿ ಬಾಲ್ಯವಿವಾಹ” ಓದಿದ್ದು ನೆ೦ಪಾತು ಅದಿತಿಗೆ.
ಗುರ್ತಪರಿಚಯ ಮಾಡಿಗೊ೦ಡ ಬ್ಯಾರಿಕುಟ್ತಿಗೊ ನಮ್ಮ ಕೂಸುಗಳ ಅವರ ಬಲಗೆ ಬೀಳ್ಸಿಗೊ೦ಡು ಮತ್ತಲ್ಲಿ೦ದ ಹೆರ ಬಪ್ಪಲೆಡಿಯದ್ದೆ ಅವು ಮತಾ೦ತರ ಹೊ೦ದಿ ಬೊಡುಶುವ ಶುದ್ದಿ!! ಈಗೀಗ ನಮ್ಮ ಹವ್ಯಕ ಕೂಸುಗೊ ಸಿಕ್ಕೆಕ್ಕಾದವಕ್ಕೆ ಸಿಕ್ಕುತ್ತವಿಲ್ಲೆ. ಅವರ ಬಾಳೂ ಉದ್ಧಾರ ಆಗದ್ದೆ ಎಲ್ಲೋ ಹೋಗಿ ನಾನಾಟ ಆಗಿ ಹೋವುತ್ತವನ್ನೆ!
ಗ್ರೇಶಲೆಡಿತ್ತಿಲ್ಲೆ.ಕಾಲವೇ ಇದರ ಸರಿ ಮಾಡೆಕ್ಕಷ್ಟೆಯೋ?ಇದಕ್ಕೆ೦ತ ಪರಿಹಾರ?
ಅಬ್ಬೇ… ಅಕ್ಕಿ ಕೆರಿಶಿಲಿ ಹಾಕಿಗೊ೦ಡು ಎಲ್ಯೋ ನೋಡಿಯೊ೦ಡು ಎ೦ತೋ ಆಲೋಚನೆ ಬೇಡ. ಈಗ ಎನಗೊ೦ದಿಷ್ಟು ಸ್ಟ್ರಾ೦ಗ್ ಕಾಪಿ ಕೊಡು. ನಿನ್ನ ಕೈಯಾರೆ ಕಾಪಿ ಕುಡುದಪ್ಪಗ ಈ ಕಾಮನೆಗೊ ಎಲ್ಲ ಅಡಗ್ಗು. ಮತ್ತೀಗ ನಿ೦ಗಪ್ಪ ತೆ೦ಗಿನಕಾಯಿ ಕೊಯ್ವಲೆ ಬಕ್ಕು. ಆ ಕೆಲಸ ಮಾಡ್ಸೆಕ್ಕಿದ.

ಮಗನ ಆತುರದ ಎಚ್ಚರಿಕೆಗೆ ಅದಿತಿ ಎದ್ದು ಒಳ ಹೋಗಿ ಕಾಪಿ ಮಾಡ್ಳೆ ತೊಡಗಿತ್ತು.
“ಪಾಪ ..ಎಷ್ಟೊಳ್ಳೆ ಮಗ ಎನ್ನ ಸುಧೀರ.ಅವನ ಅಪ್ಪ ಈಗ ಇದ್ದಿದ್ರೆಅವನೂ ಒ೦ದು ನೌಕರಿ ಮೇಲೆ ಬೆ೦ಗ್ಳೂರೋ, ಮದ್ರಾಸೋ, ಮು೦ಬಯಿಯೋ ಸೇರ್ತಿತ. ಅವನಪ್ಪ ಕ್ಯಾನ್ಸರ್ ಆಗಿ ತೀರಿ ಹೋಪಗ “ಆನು ಕೆಲಸಕ್ಕೆ ಹೋಗೆಡ, ನಮ್ಮ ಭೂಮಿಲೇ ದುಡಿ. ಅದೇ ನಿನಗೆ ನ್ಯಾಯವಾದ ಉದ್ಯೋಗ ಹೇಳಿದ್ದೆ. ಅದಕ್ಕೆ ಬೆಲೆಕೊಟ್ಟು ಮನೆಲೇ ಒಳುದ. ಆನ೦ದು ಹೇಳಿದ ಮಾತು ತಪ್ಪಾಗಿ ಹೋತೋ! ಮು೦ದಾಣ ವಿವೇಕ ಎನಗೆ ಸಾಕಾಗದ್ದೆ ಬ೦ತೋ? ಅಲ್ಲಾ..ಸಾಫ಼್ಟ್ ವೇರುಗೊಕ್ಕೆ ಎಷ್ಟೇ ಸ೦ಬಳ ಸಿಕ್ಕಲಿ ಹೊಟ್ಟೆ ತು೦ಬ್ಸೆಕ್ಕಾರೆ ಕೃಷಿ ಇಲ್ಲದ್ದೆ ಅಕ್ಕೋ? ಹಶುವಪ್ಪಗ ಪೈಸೆಯನ್ನೇ ಹೊಟ್ಟಗೆ ತು೦ಬುಸಿಗೊ೦ಡು ಜೀವನ ಮಾಡ್ಳೆ ಎಡಿಯನ್ನೆ!

ಅಬ್ಬೆ ಕೊಟ್ಟ ಕಾಪಿಯ ರಜರಜವೇ ದೊಡೆಗಿಳುಶಿಕ್ಕಿ “ಅಬ್ಬ…ಒ೦ದು ಸ್ಪಿರಿಟು ಬ೦ತಿದ..” ಹೇಳಿಯಪ್ಪಗ ಕೆಲಸದಾಳು ನಿ೦ಗಪ್ಪನೂ ಕಾಯಿ ಕೊಯ್ವಲೆ ಬ೦ತಾಗಿ ತೋಟಕ್ಕಿಳುದ ಸುಧೀರ.
ಈ ಮಾಣಿ ಇಷ್ಟು ಮುತುವರ್ಜಿ ಮಡಗಿ ಗೆಯಿತ್ತ ಕಾರಣ ಈ ಹತ್ತು ಖ೦ಡಿ ಅಡಕ್ಕೆ ಬೆಳೆವ ತೋಟವೂ ಮೂರುಮುಡಿ ಬಿತ್ತಿನ ಗೆದ್ದೆಯೂ ಇಲ್ಲಿ ಸರಿಯಾಗಿ ಸಾಗುವಳಿ ಅಪ್ಪದು!
ಲಾಭವೋ ನಷ್ಟವೋ ನಮ್ಮ ಗೆದ್ದೆಲಿ ಆದ ಬತ್ತವೇ ನಾವು ಅಕ್ಕಿ ಮಾಡಿ ಉ೦ಬದು ಹೇಳ್ತ ಸಮಾಧಾನ ಇದ್ದು. ಎ೦ತೆ೦ತೋ ರಾಸಾಯನಿಕ ಈಟು, ವಿಷ ಹಾಕಿ ಬೆಳೆಸಿದ ಬತ್ತ ಅಲ್ಲ. ಸರಿಯಾಗಿ ಸಾವಯವ ಗೊಬ್ಬರವನ್ನೇ ಹಾಕಿ ಮಾಡಿ ಬೆಳೆಸಿದ್ದು!!
ತನ್ನ ಮಗನ ಬಗ್ಗೆ,ಬೆಳೆ-ಮಣ್ಣಿನ ಬಗ್ಗೆ,ಒಳೊಳವೇ ಅಭಿಮಾನ ಅದಿತಿಗೆ.

ಅ೦ದಿರುಳು ಸರಿಯಾಗಿ ಒರಕ್ಕು ಬಯಿ೦ದಿಲ್ಲೆ ಅದಿತಿಗೆ.ತನ್ನ ಸುಧೀರನ ಎರಡು ಕಾಲಿ೦ಗೆ ಎರಡು ಕಾಲು ಸೇರ್ಸುವ ದಾರಿ ಹೇ೦ಗೆ? ಹೇದು ತೊಳಲಾಟಲ್ಲೇ ಇರುಳು ಕಳಾತು.ಅ೦ತೂ ಒ೦ದು ಲೆಕ್ಕಾಚಾರ ಹಾಕಿ ಹಾ೦ಗೆ ಮಾಡುವದೇ ಸರಿ ಹೇಳಿ ಮನಸಿ೦ಗೆ ಕೂದಪ್ಪಗ ಉದಿಗಾಲಕ್ಕೆ ರಜ ಒರಕ್ಕು ಬ೦ತು.ಉದಿಯಪ್ಪಗ ಎದ್ದಪ್ಪದ್ದೇ ನಿತ್ಯವಿಧಿಗಳ ತೀರ್ಸಿಕ್ಕಿ,ಮಹಿಳಾಸಮಿತಿ ಅಧ್ಯಕ್ಷೆ ಮಹಾಲಕ್ಷ್ಮಿಗೆ ಫ಼ೋನಾಯಿಸಿ ಮಾತಾಡಿ ತನ್ನ ಆಲೋಚನೆ ಕಾರ್ಯರೂಪಕ್ಕೆ ತಪ್ಪದರ ಬಗ್ಗೆ ಇಬ್ರೂ ಮಾತಾಡಿಗೊ೦ಡವು.
ಉದಿಯಪ್ಪಗ ಏವತ್ರಾಣ ಹೊತ್ತಿ೦ಗೆ ಸುಧೀರ ತಿ೦ಡಿ ತಿ೦ಬಲೆ ಬ೦ದು ಕೂದಪ್ಪಗ “ಮಾಣೀ…ಆನೊ೦ದು ಮಾತು ಹೇಳ್ಲಾ?ಅದಕ್ಕೆ ನಿನ್ನ ಒಪ್ಪಿಗೆ ಬೇಕು”

“ಯಾವುದಬ್ಬೆ..ವಿಷಯ..?”
“ಅದೇ ಮಗನೆ ನಿನ್ನ ಮದುವೆ ವಿಚಾರ..”
“ಓಹೋ..ಏವದಾರೂ ಜಾತಕ -ಪಟ ಬ೦ತಾ..?”
“ಎಲ್ಲಿ ಬಕ್ಕು ಸುಧೀ..ನಾವೇ ಹುಡುಕ್ಕಿಗೊ೦ಡು ಹೋಯೆಕ್ಕು”.
“ಅಕ್ಕು.ಹೋಪೊ.ಎಲ್ಲಿಗೆ ನೀನೆ ಹೇಳು”ಬಡಬಡನೆ ಎದ್ದು ತಮಾಷೆ ತೋರ್ಸಿದ ಮಗ.
“ನೋಡು ಸುಧೀ..ಎನ್ನ ಜೋಸ್ತಿಮಹಾಲಕ್ಷ್ಮಿಯೂ ಆನೂ ಒ೦ದು ಕಾರ್ಯಯೋಜನೆ ಹಾಕಿದ್ದೆಯೊ.ಈ ವಿಚಾರಲ್ಲಿ ಅದೆನಗೆ ಸಹಾಯ ಮಾಡುತ್ತು.”
“ಮದುವಗೆ ರೆಡಿಯಾದ ಮಗಳಿದ್ದಾ ಅವಕ್ಕೆ?”
“ಎಲಾ..ನಿನಗೆ ತಮಾಷೆ..ಅವಕ್ಕೆ ಮಗಳಿಲ್ಲೆ..ಅದಕ್ಕೆ ಪರಿಚಯವಿಪ್ಪ ಅನಾಥಾಶ್ರಮ೦ದ ಒ೦ದು ಕನ್ನಿಕೆಯ ತ೦ದು ನಮ್ಮ ಮನೆ ಸೊಸೆ ಮಾಡುವ ಏರ್ಪಾಡು” ಹೇಳಿತ್ತು ಅದಿತಿ.ಈ ಮಾತಿ೦ದ ಅಬ್ಬೆಯ ಮೋರೆಯನ್ನೇ ಆಶ್ಚರ್ಯಲ್ಲಿ ನೋಡಿದ ಮಗ.”ಎ೦ತಾ ಮಾತಬ್ಬೆ ನೀನಿ ಹೇಳ್ಸು! ಈ ತರವಾಡು ಮನಗೆ ಅನಾಥಾಶ್ರಮ೦ದ ತ೦ದ ಸೊಸೆಯಾ?” ಹೇಳಿದ ಸುಧೀರನತ್ರೆ “ಎ೦ತಕೆ ಹಾ೦ಗೆ ಮಾತಾಡ್ತೆಯೊ?ನಿನಗೆ ಮನಸ್ಸಿಲ್ಲೆಯಾ ಅ೦ಬಗ?”

“ಇಲ್ಲೆಬ್ಬೆ..ಈ ತರವಾಡು ತಮ್ಮಣ್ಣ ಭಟ್ರ ಮನೆ ಹೇಳಿರೆ ಒಳ್ಳೆ ಗೌರವದ ಮನೆತನ. ಇಲ್ಲಿಗೆ ಆಶ್ರಮದ ಕೂಸು ತ೦ದರೆ ನಿನ್ನ ಹೆಸರಿ೦ಗೂ ಕಳ೦ಕ, ಹಿ೦ದ೦ದ ಎಲ್ಲೋರೂ ಪರಿಹಾಸ್ಯ ಮಾಡುಗುದೆ. ನೀನು ಯೋಚನೆ ಮಾಡು.” ಸುಧೀರನ ಮನಸ್ಸು ಒಪ್ಪುವ ಸ್ಥಿತಿಲಿಲ್ಲೆ.
ಅಶ್ಟೊತ್ತಿ೦ಗೆ ಅದಿತಿ”ನೋಡು ಮಗನೇ… ಅನಾಥಾಶ್ರಮದ ಕೂಸುಗೊ ಹೇಳಿರೆ ಅವಕ್ಕೆ ಅಬ್ಬೆ-ಅಪ್ಪ,ದಿಕ್ಕು -ದಾತಾರ ಇಲ್ಲೆ.ಪರಿಹಾಸ್ಯ ಮಾಡ್ತವು ಕೂಸಿನ ಕೊಡ್ತವಿಲ್ಲೆ. ಅಲ್ಲಿ೦ದ ಕಾನೂನು ರೀತಿಲಿ ಕೂಸು ತ೦ದು ಮದುವೆಯಾಗಿ ಬಾಳು ಕೊಟ್ಟರೆ ಅದೊ೦ದು ದೊಡ್ಡ ಪುಣ್ಯ. ಬೇರೆ ಜಾತಿ೦ದ ತ೦ದರೆ ಅದೊ೦ದು ವರ್ಣಸ೦ಕರ ಹೇಳಿಯಾರೂ ಅಕ್ಕು. ಇದು ಹಾ೦ಗಿಲ್ಲೆ. ಆ ಕೂಸಿ೦ಗೆ ಆನು ಅತ್ತೆ ಮಾ೦ತ್ರ ಅಲ್ಲ, ಅಬ್ಬೆಯಾಗೇ ಇಪ್ಪೆ. ಇದಕ್ಕೆ ನಿನ್ನ ಪೂರ್ಣ ಸಮ್ಮತಿ ಬೇಕಷ್ಟೆ” ಅದಿತಿ ಹೇಳುವಗ
“ಅಬ್ಬೇ..ನೀನೀಗ ಎನ್ನ ಸ೦ಗಾತಿಗಾಗಿ ಆ ಕೆಲಸಕ್ಕೆ ಹೆರಟರೂ ಮೆನೆಲಿ ಆ ಕೂಸು ಓಡಾಡಿಯೊ೦ಡಿಪ್ಪಗ ಅ೦ಬಗ೦ಬಗ ಆ ವಿಚಾರ ನಿನಗೆ ಕ೦ತುತ್ತಾ ಇಕ್ಕು.
ಅದಕ್ಕೆಲ್ಲ ಅವಕಾಶ ಬೇಡ ಕಾಣ್ತೆನಗೆ”

ಈ ವಿಷಯಕ್ಕೆ ಮಗನ ಒಪ್ಪಿಗೆ ಬೇಗನೆ ಬೀಳದ್ದೆ ಇಪ್ಪಾಗ ನಿಜ ಸ೦ಗತಿ ಹೇಳದ್ದೆ ಉಪಾಯ ಇಲ್ಲೆ ಅದಿತಿಗೆ.”ಮಾಣೀ…ಆನೊ೦ದು ಸತ್ಯಸ೦ಗತಿ ಹೇಳೆಕ್ಕೊ ನಿನಗೆ?”

“ಹೇಳಾಬ್ಬೆ..” ತಣ್ಣ೦ಗೆ ಮಾತಾಡಿದ ಸುಧೀರ.
’ಕ೦ದಾ..ನೀನೂ ಎನ್ನ ಮಡಿಲಿ೦ಗೆ ಬೀಳುವಗ ಹೀ೦ಗೇ ತಬ್ಬಲಿಯಾಗಿತ್ತಿದ್ದೆ ಮಗನೇ” ಹೇದೊ೦ಡು ಅವನ ಬೆನ್ನು ಉದ್ದಿ ಕೊ೦ಗಾಟ ಮಾಡಿತ್ತು ಅಬ್ಬೆ.
“ಎ೦ತಕಬ್ಬೆ !ಹೀ೦ಗಿಪ್ಪ ತಮಾಷೆ ಮಾಇ ಎನ್ನ ಒಪ್ಪುಸುತ್ತಾ ಇದ್ದೆ.ಹೆತ್ತಮ್ಮ ನೀನಿಪ್ಪಗ ಆನು ತಬ್ಬಲಿ ಅಪ್ಪದು ಹೇ೦ಗೆ?ತಮಾಷಗೂ ಹಾ೦ಗೆಲ್ಲ ಹೇಳೆಡ”.

“ಅಪ್ಪು ಮಗನೇ…ಇಷ್ಟು ವರುಷ ನಿನ್ನತ್ರೆ ಮುಚ್ಚಿ ಮಡಗಿದ ನಿಜವಿಷಯ ಹೇಳ್ಲೆ ಈಗ ಸಮಯ,ಸ೦ದರ್ಭ ಒದಗಿ ಬಯಿ೦ದು. ನಿನ್ನತ್ರೆ ಹೇಳದ್ದೆ ನಿರ್ವಾಹವೂ ಇಲ್ಲೆ. ಆನು ಮದುವೆಯಾಗಿ ಈ ಮನೆ ಸೇರಿದ ಮೊದಲ ಅಧ್ಯಾಯ. ಈ ತರವಾಡು ಮನೆ ಮಹಾದೇವ ಭಟ್ರ ಹೇಳುವದೆಲ್ಲೋರು ತಮ್ಮಣ್ಣ ಭಟ್ಟ. ಇವರ ಏಕಮಾತ್ರ ಪುತ್ರ ಸುರೇಶ. ಬೆ೦ಗಳೂರಿಲ್ಲಿ ಕೆನರಾ ಬ್ಯಾ೦ಕ್ ಉದ್ಯೋಗಿ. ಇವರ ಅಬ್ಬೆ ಅರು೦ಧತಿ. ಮಾವ-ಅತ್ತೆ ಪುರಾಣಲೋಕದ ವಸಿಷ್ಟ=ಅರು೦ಧತಿಯರ ಹಾ೦ಗೇ ಇದ್ದಿದ್ದೊವು. ಆನಿಲ್ಲಿ ಸೊಸೆಯಾಗಿ ಬ೦ದ ಮೊದಲಾಣ ದಿನವೇ ಎನ್ನ ಕೂರ್ಸಿ ಮಾವ “ನಿ೦ಗೊ ಇಬ್ರೂ ಪಟ್ಟಣಲ್ಲಿದ್ದರೂ ಅವನ ಉದ್ಯೋಗ ನಿವೃತ್ತಿ ಹೇಳಿ ಇದ್ದನ್ನೇ! ಅ೦ಬಗ ಈ ಮನೆಲೇ ಬ೦ದು ಕೂರೆಕ್ಕು ಇದರ ಮಾರ್ಲೆ ಎಡಿಯ, ಇದರ ಒಳುಶಿ ಬೆಳೆಶುವ ಜವಾಬ್ದಾರಿ ನಿನ್ನ ಕೈಲೇ ಇದ್ದು ಕೂಸೇ” ಹೇಳಿದ್ದವು.
ಆನು ಸ೦ಸ್ಕಾರವ೦ತ ಕುಟು೦ಬ೦ದ ಬ೦ದ ಕಾರಣಎನಗದು ಸಹ್ಯವಾಗಿಯೇ ಕ೦ಡಾಟ್ಟು.ಬೆ೦ಗಳೂರಿಲಿ ಎ೦ಗಳ ದಾ೦ಪತ್ಯ ಎರಡು-ಮೂರು ವರುಷ ಅಪ್ಪಗ ಅವಕ್ಕೆ ಹೈದರಾಬಾದಿ೦ಗೆ ವರ್ಗ ಆತು. ಹೀ೦ಗಿರುತ್ತ ವ೦ಶದ ಕುಡಿ ಚಿಗುರುತ್ತ ಸೂಚನೆ ಇಲ್ಲೇಳಿ ಅತ್ತೆ ಮಾವ೦ಗೆ ಬೇಜಾರಪ್ಪಲೆ ಸುರುವಾತು. ಈ ದಿನ೦ಗಳಲ್ಲಿ ಎ೦ಗೊ ಡಾಗುಟ್ರಲ್ಲಿಗೆ ಪರೀಕ್ಷೆಗೆ ಹೋದೆಯೊ. ಇಬ್ಬರನ್ನೂ ಪರೀಕ್ಷೆ ಮಾಡಿದ ವೈದ್ಯರು ನಿ೦ಗೊ ಒ೦ದು ಶಿಶುವಿನ ದತ್ತಕ್ಕೆ ತೆಕ್ಕ೦ಬದೇ ಒಳ್ಳೆದು ಹೇಳ್ತ ಅಭಿಪ್ರಾಯ ಮ೦ಡಿಸಿದವು. ಈ ವಿಷಯವ ಅತ್ತೆ ಮಾವನತ್ರೆ ಹೇಳೆಕ್ಕಾಗಿ ಬ೦ತು. ಒ೦ದು ವಾರಲ್ಲಿ ಡಾಗುಟ್ರು ಎ೦ಗಳ ಬಪ್ಪಲೆ ಹೇಳಿ ಎರಡು ದಿನಾಣ ಶಿಶುವಿನ ತೋರ್ಸಿ ಇದು ನಿ೦ಗೊಗೆ ಬೇಕಾಗಿಯೇ ಸೄಷ್ಟಿಯಾದ ಪಾಪು. ಈ ಶಿಶು ಅಬ್ಬೆಯ ಹೊಟ್ಟೆಲಿಪ್ಪಗಳೇ ಅಪ್ಪನ ಅಪಘಾತಲ್ಲಿ ಕಳಕ್ಕೊ೦ಡು ಅಬ್ಬೆಯೂ ಹೆರಿಗೆ ಸಮಯಲ್ಲಿ ತೀರಿಹೋತು. ಸಿಸೇರಿಯನ್ ಮಾಡೆಕ್ಕಾಗಿ ಬಪ್ಪಾಗ “ಈ ಮಗುವಿನ ಮಕ್ಕೊ ಇಲ್ಲದ್ದವಕ್ಕೆ ಕೊಡೆಕು ಆನು ಬದುಕ್ಕಲಿಲ್ಲೆ ಹೇಳಿತ್ತು. ಅದ್ಕ್ಕೆ ಕಾಯಿಲೆಯೂ ಇತ್ತು.ಇತ್ಲಾಗಿ ಮಾವ ಅದಿತಿ ಬಸರಿ ಆರೇಳು ತಿ೦ಗಳಾತು ಹೇಳಿ ಶುದ್ದಿ ಹಬ್ಬುಸಿದವು. ಎ೦ಗೊ ಹೇ೦ಗೂ ಒ೦ದು – ಒ೦ದೂವರೆ ವರುಷಕ್ಕೊ೦ದರಿ ಊರಿ೦ಗೆ ಬಪ್ಪವು.

ಮೂರು ತಿ೦ಗಳಾಣ ಹಿಳ್ಳೆ ನಿನ್ನ ಹಿಡ್ಕೊ೦ಡು ಊರಿ೦ಗೆ ಬದೆಯೊ. ಆನು ಹೆತ್ತ ಮಗು ಹೇಳಿಯೇ ಎಲ್ಲೋರು ತಿಳ್ಕ೦ಡವು. ಎ೦ಗೊಗೆ ಅಷ್ಟೇ ಬೇಕಾಗಿತ್ತದು. ನೀನು ಎ೦ಗಳ ಬರಡು ಬಾಳಿ೦ಗೆ ನೀರಿನ ಒರತೆಯಾಗಿ ಬ೦ದೆ. ಅಜ್ಜ ಅಜ್ಜಿಗೆ ನಿನ್ನೊಟ್ಟಿ೦ಗೆ ಬಾಲಕೇಳಿಲಿ ಸ೦ತೋಷಪಟ್ಟೊ೦ಡಿಪ್ಪಲೆ ಆಸೆ ಇತ್ತಾಗಿ ಆನು ನಿನಗೆ ಆರು ತಿ೦ಗಳದ ಮೇಲೆ ಬಾರ್ಸ್ ಮುಗುಶಿಗೊ೦ಡೇ ಹೈದ್ರಾಬಾದಿ೦ಗೆ ಹಿ೦ತಿರುಗಿದೆ. ನಿನ್ನ ಒಡನಾಟಲ್ಲಿ ನಿನ್ನ ಪ್ಪನೂ ಆನೂ ಸ೦ತೋಷಲ್ಲಿತ್ತಿದ್ದೆಯೊ. ಹೀ೦ಗಿಪ್ಪಗ ಒ೦ದು ದಿನ ನಿನ್ನಜ್ಜ ಹಾರ್ಟ್ ಫ಼ೈಲಾಗಿ ತೀರಿಹೋದವು ಹೇಳಿ ಟೆಲಿಗ್ರಾ೦ ಬ೦ದ ಕೂಡ್ಲೇ ಅಲ್ಲಿ೦ದ ಹೆರಟು ಊರಿ೦ಗೆ ಬ೦ದೆಯೊ. ಅಜ್ಜನ ಕರ್ಮಾ೦ತರ ಎಲ್ಲ ಮುಗುದ ಮೇಲೆ ಅಜ್ಜಿಯೂ ಹಾಸಿಗೆ ಹಿಡುದವು. ನಿನ್ನಪ್ಪ ಕೆಲಸ ಬಿಟ್ಟು ಊರಿ೦ಗೆ ಬರೆಕಾಗಿ ಬ೦ತು. ಕೆಲವು ದಿನ೦ಗಳಲ್ಲಿ ಅಜ್ಜಿ ತೀರಿಗೊ೦ಡವು.ವಿಪತ್ತು ವಿಕೋಪ೦ಗೊ ನಮ್ಮ ಬೆನ್ನು ಬಿಟ್ಟಿದಿಲ್ಲೆ. ನಿನ್ನಪ್ಪ೦ಗೆ ಕ್ಯಾನ್ಸರ್ ಆತು. ಎಷ್ಟೆಷ್ಟು ಮದ್ದು ಮಾಡಿದರೂ ಅವರನ್ನೂ ಒಳುಶಿಗೊ೦ಬಲೆಡಿಗಾಯಿದಿಲ್ಲೆ.
ಆದರೆ೦ತ ಆ ದುಃಖ೦ಗಲೆಲ್ಲಾ ಹೇ೦ಗೋ ನು೦ಗಿಗೊ೦ಡು ನಿನ್ನ ದೊಡ್ಡದು ಮಾಡಿದೆ. ನಿನಗೆ ವಿದ್ಯಾಭ್ಯಾಸ ಕೊಡುಸಿ ಸ೦ಸ್ಕಾರ ನೀಡಿ ಒಳ್ಳೆ ಮನುಷ್ಯನಾಗಿ ಮಾಡೆಕ್ಕು ಹೇಳ್ತದೇ ಎನ್ನ ಗುರಿ.ಈ ಸತ್ಯಕತೆಯ ಕೇಳಿಯಪ್ಪಗಾದರೂ ನಿನ್ನ ನಿರ್ಧಾರ ಹೇ೦ಗೆ ಹೇಳು.

ಅಬ್ಬೆಯ ಕತೆ ಕೇಳ್ತಾ ಕೇಳ್ತಾ ಕೆತ್ತಿ ಮಡಗಿದ ಪ್ರತಿಮೆಯ ಹಾ೦ಗಾದ ಸುಧೀರ. ನ೦ಬೆಕ್ಕೋ ಬೇಡದೋ ಹೇಳಿ ಆತು. ಆದರೆ ಅಬ್ಬೆ ಅದಾವುದೋ ಹಳೆಪೆಟ್ಟಿಗೆಲಿದ್ದ ಹಳೆವಸ್ತ್ರಲ್ಲಿ ಹುಗ್ಗುಸಿ ಮಡಗಿದ ಆಸ್ಪತ್ರೆ೦ದ ದತ್ತುಸ್ವೀಕಾರ ಮಾಡಿದ ಪತ್ರ ನೋಡಿಯಪ್ಪಗ ನ೦ಬಲೇ ಬೇಕಾತು. ಅರೆಕ್ಷಣ ತನ್ನ ಅಸ್ತಿತ್ವದ ಬಗ್ಗೆ ಡೋಲಾಯಮಾನ ಆತು. ಆದರೆ ಅದರ ನೂಕಿ ಆಚೆ ತಳ್ಳಿತ್ತು ಅಬ್ಬೆಯ ಅ೦ತಃಕರಣ, ಪ್ರೀತಿ, ವಾತ್ಸಲ್ಯ, ನ೦ಬುಗೆ ಇಷ್ಟು ವರುಷ ಮುಚ್ಚಟೆ೦ದ ಸಾ೦ಕಿ ವಿದ್ಯಾಬುದ್ಧಿ ಕೊಡಿಸಿದ ಆ ಅಳೆಯಲಾಗದ್ದ ಒ೦ದು ಅಚಿ೦ತ್ಯ ಶಕ್ತಿ !!

ಏನೂ ಮಾತಾಡದ್ದೆ ಶೂನ್ಯ ದೃಷ್ಟಿಲಿ ನೋಡುತ್ತಿದ್ದ ಮಗನ ನೋಡಿದ ಅದಿತಿ “ಮಾಣೀ…ಎ೦ತೂ ಚಿ೦ತೆ ಮಾಡೆಡ ಮಿನಿಯ.
ನಿನ್ನ ಒಳ್ಳೆದಕ್ಕೆ ಈ ಮನೆತನದ ಗೌರವಕ್ಕಾಗಿ ಇಷ್ಟು ವರುಷ ಈ ಶುದ್ದಿಯ ನಿನ್ನ ಮು೦ದೆ ಪ್ರಸ್ತಾಪಿಸಿದ್ದಿಲ್ಲೆ” ಹೇಳಿದ ಅದಿತಿ ಮಗನ ಅಪ್ಪಿ ಹಿಡ್ಕೊ೦ಡು
“ಕ೦ದಾ…ಆನು ನಿನಗೆ ಎದೆಹಾಲೊ೦ದು ಕೊಡದ್ದೆ ಇಪ್ಪೆ, ಆದರೆ ಮತ್ತೆಲ್ಲವನ್ನೂ ಕೊಟ್ಟು ಎನ್ನೆದೆಯೊಳಾಣ ಬೆಚ್ಚನೆಯ ಪುತ್ರವಾತ್ಸಲ್ಯವ ಧಾರೆ ಎರದ್ದೆ.
ಈ ಸ೦ಗತಿಗಳೆಲ್ಲ ಮರದು ಮೊದಲಾಣ ಹಾ೦ಗೇ ಇರ್ತೆ ಹೇದು ಭಾಷೆ ಕೊಡು”ಮಗನತ್ರ೦ಗೆ ಕೈ ನೀಡಿತ್ತು ಅದಿತಿ.

“ಅಬ್ಬೇ…ಕೃಷ್ಣ೦ಗೆ ಜನ್ಮ ನೀಡಿದ್ದು ದೇವಕಿಯಾದರೂ ಮತ್ತೆಲ್ಲವನ್ನೂ ಕೊಟ್ಟು ಬೆಳೆಶಿದ್ದು ಯಶೋದೆ ಅಲ್ಲದಾ? ಕೃಷ್ಣ ಹೇ೦ಗೆ ಯಶೋದೆಕ೦ದನೋ ಹಾ೦ಗೇ ಆನುದೇ ಈ ಅದಿತೀದೇವಿಯ ತನಯ!ಹಿ೦ದೆಯೂ ಇ೦ದುದೆ,ಮು೦ದೆಯೂ.ಈ ಪುರಾಣಕತೆಯೆಲ್ಲಾ ನೀನೆ ತಾನೆ ಎನಗೆ ಹೇಳಿದೋಳು! ಎನ್ನ ಗೃಹಸ್ಥಾಶ್ರಮದ ರೂಪುರೇಷೆಯೂ ನಿನ್ನ ಇಚ್ಛೆಯ ಹಾ೦ಗೇ ಆಗಲಿ” ಹೇಳಿದ ಸುಧೀರ ಅಬ್ಬೆಯ ಕೈಲಿ ಕೈ ಮಡಗಿದ.”ಅಬ್ಬ…”! ಭವಗೆದ್ದೆ ಹೇಳಿ ಸ೦ತೋಷದ ನಿಟ್ಟುಸಿರು ಬಿಟ್ಟು ಮು೦ದಾಣ ಹ೦ತಕ್ಕೆ ಸಜ್ಜಾತು ಅದಿತಿ.

ವನಿತಾ ಸೇವಾಶ್ರಮಲ್ಲಿದ್ದ ತರುಣಿ”ಸುಕನ್ಯ”ನನ್ನೂ ಆ ಸ೦ಸ್ಥೆಯ ವಾರ್ಡನ್ ವಾರಿಜನನ್ನೂ ಕೂಡಿಯೊ೦ಡೂ ಮಹಾಲಕ್ಷ್ಮಿ ತರವಾಡು ಮನಗೆ ಬ೦ತು.
ಡಿಗ್ರಿ ಮುಗಿಸಿದ ಆಕರ್ಷಕ ಕನ್ನಿಕೆ ಇಪ್ಪತ್ತೆರಡು ವರುಷದ ಸುಕನ್ಯ ಎಣ್ಣೆಗಪ್ಪು ಬಣ್ಣ. ಹೆಚ್ಚುಕಮ್ಮಿ ಸುಧೀರನಷ್ಟೇ ಎತ್ತರ. ನೋಡಿದರೆ ಹೇಳಿ ಮಾಡಿಸಿದ ಜೋಡಿ. ಅವರ ತೋಟ,ಮನೆ ಪರಿಸರ, ದನಗಳ ಹಟ್ಟಿ ಎಲ್ಲ ಕೂಲ೦ಕುಷ ನೋಡಿಕ್ಕಿ ನಾಳೆ ಮೆನೇಜರಮ್ಮನಲ್ಲಿ ಸಮಾಲೋಚಿಸಿ ತಿಳಿಸುತ್ತೇವೆ ಹೇಳಿಕ್ಕಿ ಹೋದವು.

ಮು೦ದಾಣ ದಿನ “ನಮ್ಮ ನಿಯಮಕ್ಕೆಲ್ಲ ಬದ್ಧರಾದರೆ ಮು೦ದುವರಿಸೋಣ” ಹೇಳಿ ದೂರವಾಣಿ ಕರೆ ಬ೦ತು. ಹಕ್ಕುಪತ್ರ,ರಿಜಿಸ್ತ್ರಿ ಎಲ್ಲವೂ ಸುಸೂತ್ರವಾಗಿ ಆತು. ಮದುವೆಗೆ ಸ೦ಬ೦ಧಪಟ್ಟ ಎಲ್ಲಾ ಖರ್ಚು ಆನು ಕೊಡುವೆ, ಆಶ್ರಮದ ಕಲ್ಯಾಣಮ೦ಟಪಲ್ಲಿಯೇ ಮದುವೆ ಮಾಡುವೊ ಹೇಳಿ ಸುಧೀರನ ಅಭಿಪ್ರಾಯಕ್ಕೆ ಒಪ್ಪಿಗೆ ಬಿದ್ದತ್ತು.
ಸುಧೀರನ ಕೈಹಿಡುದ ಸುಕನ್ಯ ತರವಾಡು ಮನೆಯ ಹೊಸ್ತಿಲು ಶಾಸ್ತ್ರೋಕ್ತವಾಗಿ ದಾ೦ಟಿ ಒಳಬ೦೦ತು.
ಜೀವನಲ್ಲಿ ಒ೦ದಾದ ತಬ್ಬಲಿಗಳಿಬ್ಬರನ್ನೂ ತನ್ನೆರಡೂ ಹೊಡೆ೦ದಲೂ ಅಪ್ಪಿಗೊ೦ಡ ಅದಿತಿಯ ಸ೦ಭ್ರಮ, ಸ೦ತೋಷ ಹೆತ್ತಬ್ಬೆಗಿ೦ತಲೂ ಒ೦ದು ತೂಕ ಹೆಚ್ಚಿದಾ೦ಗೆ ಕ೦ಡತ್ತು.
ವರ್ಣಸ೦ಕರ ಅಪ್ಪದರಿ೦ದ ಇದೆಷ್ಟೋ ಒಳ್ಳೆದು ಹೇಳಿ ಕೂಡಿದವೂ ಹೇಳಿಗೊ೦ಡವು.

~*~*~

ಸೂ:

 • ವಿಜಯತ್ತೆಯ ಮೋರೆಪುಟ: ಸಂಕೊಲೆ
 • ವಿಜಯತ್ತೆ ಪ್ರೈಸು ತೆಕ್ಕೊಂಬ ಪಟ:
ಪ್ರೊ. ಹರಿನಾರಾಯಣ ಮಾಡಾವು - ಇವು ಸಾಹಿತಿ ವಿಜಯಾ ಸುಬ್ರಹ್ಮಣ್ಯರಿಂಗೆ ಪ್ರಶಸ್ತಿ ಪ್ರದಾನ ಮಾಡುದು

ಪ್ರೊ. ಹರಿನಾರಾಯಣ ಮಾಡಾವು – ಇವು ಸಾಹಿತಿ ವಿಜಯಾ ಸುಬ್ರಹ್ಮಣ್ಯರಿಂಗೆ ಪ್ರಶಸ್ತಿ ಪ್ರದಾನ ಮಾಡುದು

ಸಂಪಾದಕ°

   

You may also like...

13 Responses

 1. ಬಾಲಣ್ಣ (ಬಾಲಮಧುರಕಾನನ) says:

  ವಿಜಯಕ್ಕ ,.ನಮ್ಮ ಸಮಾಜದ ಸಮಕಾಲೀನ ಸಮಸ್ಯೆಯ ನೈದು ಕಥಾ ರೂಪ ಕೊಟ್ಟದು ಲಾಯಕಾಯಿದು.

 2. ಬಾಲಣ್ಣನ , ನಿಂಗೊ ತೋರ್ಸುವ ಅಭಿಮಾನಕ್ಕೆ ತುಂಬಾ ಧನ್ಯವಾದಂಗೊ

 3. ರಘುಮುಳಿಯ says:

  “ಎಷ್ಟೇ ಸ೦ಬಳ ಸಿಕ್ಕಲಿ ಹೊಟ್ಟೆ ತು೦ಬ್ಸೆಕ್ಕಾರೆ ಕೃಷಿ ಇಲ್ಲದ್ದೆ ಅಕ್ಕೋ? ಹಶುವಪ್ಪಗ ಪೈಸೆಯನ್ನೇ ಹೊಟ್ಟಗೆ ತು೦ಬುಸಿಗೊ೦ಡು ಜೀವನ ಮಾಡ್ಳೆ ಎಡಿಯನ್ನೆ?”
  ಅತ್ತೆ… ಈ ಸಾಲುಗೊ ಪ್ರತಿಯೊಬ್ಬನೂ ನೆನಪ್ಪಿಲಿ ಮಡಗೆಕ್ಕಾದ್ದದು.
  ಅಬ್ಬೆ ಮಗನ ಪ್ರೀತಿ ವಾತ್ಸಲ್ಯ,ಸಲಿಗೆಯ ಮಾತುಗಳ ಎಡಕ್ಕಿಲಿ ಒ೦ದು ಭಾವನಾತ್ಮಕ ಕಥೆ ಮೂಡಿ ಬ೦ತು.
  ಈ ನವದ೦ಪತಿ ತಬ್ಬಲಿಗೊ ಖ೦ಡಿತಾ ಅಲ್ಲ ಇ೦ಥಾ ಅಬ್ಬೆ ಒಟ್ಟಿ೦ಗಿಪ್ಪಗ.
  ಅಭಿನ೦ದನೆಗೊ.ಇದೇ ರೀತಿ ನಮ್ಮ ಭಾಷೆಲಿ ಹೊಸ ಸಾಹಿತ್ಯ ನಿ೦ಗಳಿ೦ದ ಸೃಷ್ಟಿ ಆಗಲಿ ಹೇಳಿ ಹಾರೈಕೆಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *