ವಿಷು ವಿಶೇಷ ಸ್ಪರ್ಧೆ 2013: ಕಥೆ ದ್ವಿತೀಯ: ಕು.ಅನುಷಾ ಹೆಗಡೆ

May 20, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ಕಥಾ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕರಾದ ಕುಮಾರಿ ಅನುಷಾ ಹೆಗಡೆ ಕುಳಿಮನೆ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಕಥೆ: ಆಲೆಮನೆ | ಲೇ: ಅನುಷಾ ಹೆಗಡೆ

ಲೇ: ಅನುಷಾ ಹೆಗಡೆ ಕುಳಿಮನೆ
ಲೇ: ಅನುಷಾ ಹೆಗಡೆ ಕುಳಿಮನೆ

“ಭಾಗೀ… ಕೇಳ್ತನೆ… ಕಬ್ಬು ಸುತ್ತಲೆ ಆಳಗಾ ಬತ್ವನಾ,  4 ದೋಸೆ ಜಾಸ್ತಿ ಎರದಿಡು” ಹೇಳಿ ಮಾಬ್ಲಜ್ಜ ತನ್ನ ಕೇಳಿಸದ ಕಿವಿಗೆ ಕೇಳ್ವಷ್ಟು ಜೋರಾಗಿ ಕೂಗ್ತಾ ಇದ್ದಿದ್ದಾ.
ಅತ್ಲಾಗೆ ಭಾಗಜ್ಜಿ “ನಿಂಗ್ಳದ್ದು ಇದೇ ಆತು..  ದೋಸೆ ಎರ್ದು ದಿನಾ ಕೆಂಪಿ ದನಕ್ಕೆ ಕೊಡದೆಯಾ.. ಆ ಆಳ್ಗಾ ನಾವು ಕರದ್ರೆ ಬತ್ವಿಲ್ಲೆ, ನಮ್ಮ ಕೈಯಲ್ಲಿ ಆಗ್ತಿಲ್ಲೆ.. ಈಗ್ಲೂ ಕಬ್ಬು ಸುತ್ತದೆ ಹೋದ್ರೆ ಕಬ್ಬೆಲ್ಲಾ ಚೊಕ್ಕಾಗ್ತು.. ಮಾಣಿಗಾದ್ರೂ ಪೋನ್ ಮಾಡಿ. ಪ್ಯಾಟಿಂದ ಒಂದು ದಾರಿ ಬಂದು ಮುಂಗಡ ಕೊಟ್ಟಾರಿ ಕೆಲ್ಸ ಮಾಡ್ಸಲೇಳಿ” ಹೇಳಿ ಮಾಬ್ಲಜ್ಜನ ಹತ್ರೆ ಬಂದು ಹೇಳಿಕ್ಕೆ ಹೋತು.
ಮಾಬ್ಲಜ್ಜ ಮಾಡಗುಳಿಲಿದ್ದ ಕನ್ನಡಕ ತೆಕ್ಕಂಡು ಪೋನ್ ಪಟ್ಟಿ ತೆಗೆದು ಪರಮು- 9440…. ಹೇಳಿ ನಂಬರ್ ಹೊಡಿವಷ್ಟರಲ್ಲಿ “ಅಯ್ಯೋ, ಈ ಪೋನ್ ಮಾತೇ ಆಡ್ತಿಲ್ಯಲೆ, ಡೆಡ್ಡಾ ಎಂತಾ ಸುಡಗಡನಾ.. ಅವಂಗೆ ನೆನಪಾದಾಗ ಅವ್ನೆ ಬರ್ತಾ ತಗ” ಹೇಳಿ ಅನ್ಕತ್ತ ಕಬ್ಬಿನ ಗದ್ದೆ ಬದಿಗೆ ಕೋಲು ತಗಂಡು ಹೊರಟ.

“ನೀಲ ಗಗನದೊಳು ನವಿಲು ಕುಣಿಯುತಿದೆ ನೋಡೆ..!” ಹೇಳಿ ಒಂದು ಕಾಲದಲ್ಲೆ ಯಕ್ಷಗಾನ ಭಾಗವತಿಗೆಗೆ ಆ ಸೀಮೆಲ್ಲೆ ಪ್ರಸಿದ್ಧವಾಗಿದ್ದ ಮಾಬ್ಲಜ್ಜ ತಂಗಿನ್ನೂ 25ನೇ ವರ್ಷ ಹೇಳ ಠೀವಿಯಲ್ಲಿ ಗದ್ದೆ ಬದಿಗೆ ಹೊಂಟ ಹೇಳಾತು. ಕಣ್ಣು ಹಾಯಿಸದಷ್ಟು ಉದ್ದಕ್ಕೆ ಹಸಿರು.. ಉರಿಬಿಸ್ಲಲ್ಲಿ ಚಪ್ಲಿ ಹಾಕ್ಯಳ್ದೆ ನಡದ್ರೂ ತಂಪು ತಂಪು ಆಪ ನಮ್ನಿ ಮಣ್ಣು.. ಹಂಗೇಳಿ ಎಲ್ಲದೂ ಅವ್ರ ಮನೆ ಜಮೀನೆ ಅಲ್ಲಾ.. ಆ ಊರಲ್ಲಿಪ್ಪ ಎಲ್ಲರ ಮನೆ, ತೋಟ ಗದ್ದೆನೂ ತಾಕ್ಯಂಡೆ ಇದ್ದಿದ್ದಕ್ಕೆ ಅಷ್ಟು ಚಂದ ಕಾಣ್ತಿತ್ತು.  ಮೊದ್ಲಾಗಿದ್ರೆ ಆ ಕೆರೆಮೂಲೆಯಿಂದಾ 25 ಬಣ್ಣ ಗಪ್ಪಣ್ಣಂದು.. ಅಲ್ಲಿಂದ ಮಾವಿನಮರದ ತನಕ ನರಸಜ್ಜಂದು.. ಅಲ್ಲಿಂದ ಮುಂದೆ ತಮ್ದು ಹೇಳಿ ನಿಂತಲ್ಲೆ ಹೇಳಲಾಗಿತ್ತು. ಈಗ ಹಾಂಗಲ್ಲ ಬಾಂಬೆ ಶೆಟ್ಟಿ ತೋಟ, ಇಮಾಂ ಸಾಬಿ ಗದ್ದೆ, ಮಾರವಾಡಿ ಪ್ಲಾಟು ಹೇಳಿ ಎಲ್ಲಾ ಹರಿದು ಹಂಚಿ ಹೋಜು. ಮಾಬ್ಲಜ್ಜಂಗೆ ಇದ್ನೆಲ್ಲಾ ಯೋಚ್ನೆ ಮಾಡಿರೆ ಒನಮ್ನಿ ಜುಃಖ ಆಗ್ತು.. ಆದ್ರೆ ಒಂದು ಸಮಾಧಾನ, ತಮ್ಮ ಜಮೀನು ತನ್ನ ಕಣ್ಮುಂದೆನೆ ಇದ್ದು.

ಹಿರಿಮಕ್ಕಳಿಬ್ರೂ ಅಮೇರಿಕಕ್ಕೆ ಹೋಪ ವಿಮಾನದಲ್ಲೆ ಕುತ್ಗಂಡು ಜಮೀನು ನೋಡವಾದ್ರೂ.. ಕಿರಿಮಗ ಆದ್ರೂ ಇದ್ನಲಿ.. ಹತ್ರಿಲ್ದೆ ಹೋದ್ರೂ, ಪ್ಯಾಟೆಲ್ಲೆ ಬ್ಯಾಂಕಿನ ಕೆಲ್ಸಾ ಮಾಡ್ಕ್ಯತ್ತಾ ಜಮೀನನ್ನೂ ನೋಡ್ಕ್ಯತ್ನಲಿ.. ಅದೇ ಖುಷಿ. ಹಂಗೆ ಯೋಚ್ನೆ ಮಾಡ್ತಾ ಕಬ್ಬಿನ ಜಳಿಗೆ ನೀರು ಬಿಡ್ತಾ ಇರಕಾದ್ರೆ “ಮಾಬ್ಲಜ್ಜಾ, ಜೋರು ಕೆಲ್ಸವನೋ?” ಹೇಳಿ ಯಾರೋ ಕರದಂಗಾತು ಹೇಳಿ ತಿರುಗಿ ನೋಡದ್ರೆ ಆಚ್ಚೆಮನೆ ಗಿರೀಶ, ಪರಮುನ ವಾರಿಗೆಯವ್ನೆಯಾ. “ಅಲ್ದಾ ಅಜ್ಜಾ, ನೀ ಈ ವಯಸ್ನಲ್ಲೂ ಹೆಂಗೆ ಕೆಲಸ ಮಾಡದು ಈ ವರ್ಷನೆ ಕೊನೆನನ ನೋಡು.. ಮೊನ್ನೆ ಪರಮು ಪ್ಯಾಟೆಲ್ಲಿ ಸಿಕ್ಕದಾಗ ಹೇಳಿದ್ದ. ಈ ಸರಿ ಕಬ್ಬಿನಗದ್ದೆ ಗುತ್ತಿಗೆ ಕೊಟ್ತ್ನಡ. ಅವೇ ಕಬ್ಬು ಕಡದು ಬೆಲ್ಲ ಮಾಡಾದ್ಮೆಲೆ ನಾವು ಅವ್ರ ಹತ್ರನೆ ತಗಂಬದಡಾ.. ಆರಾಮು ನೋಡು.. ರಗಳೆ ಇಲ್ಲೆ” ಹೇಳಿ ಮುಗ್ಸವಷ್ಟರಲ್ಲೆ “ಹೌದಾ ತಮ್ಮಾ, ಹಂಗೆಂತಾ ಆಗ್ತಾ. ಆಲೆಮನೆ ಅಂದ್ರೆ ಹುಡ್ಗಾಡ್ಕತೆಯನಾ? ಒಂದು ಮದ್ವೆ ಮಾಡದಷ್ಟು ಕಷ್ಟಾ.. ಆದ್ರೆ ಅಷ್ಟೆ ಖುಷಿ.. ಭತ್ತದ ಗೆದ್ದೆ ತೆಗ್ದು ತೋಟ ಹಚ್ತಿ, ಕೆಲಸ ಸಸಾರ ಅಂದ.. ಹೂ ಹೇಳ್ದು.. ಅದ್ರ ಸಂತಿಗೆ ಮತ್ತೆಂತೂ ಬೆಳದೂ ಕೈ ಸುಟ್ಕಂಡಾತು ಈಗ ಕಬ್ಬೂ ಗುತ್ಗೆ ಪತ್ಗೆ ಅಂದ್ರೆ ಎಂತಾ? ಎನ್ಗ್ಯಲ್ಲಿ ಹೇಳಲಿ, ಆನು ನೋಡ್ಕ್ಯಲ್ತೆ ಬಿಡು. ಈಗ ನಿಮ್ಮನೆ ತೋಟದ ತುದಿಗೆ ಮಂಗ ಬಂದಂಗೆ ಕಾಣ್ತು, ಒಂದು ಛೂ ಹಾಕು ಹೋಗು” ಹೇಳಿ ಗಿರೀಶನ್ನ ಕಳ್ಸ್ಬಿಟ್ಟ.

ಇತ್ಲಾಗೆ ಭಾಗಜ್ಜಿ “ಹೊಸ್ತಿಲು ಗಣಪತಿಗೆ ತುಪ್ಪ ಸಕ್ಕರೆಯಿಕ್ಕಿ..” ಹೇಳಿ ಹಳೇ ಹಾಡು ಹೇಳ್ಕ್ಯತ್ತಾ ಪದಾರ್ಥಕ್ಕೆ ಕೊರಿತಾ ಇತ್ತು. ಅಷ್ಟೊತ್ತಿಗೆ “ಭಾಗತ್ತೆ.. ಓ ಭಾಗತ್ತೆ ಇದ್ಯನೆ ಮನೆಲ್ಲೆಯಾ?” ಹೇಳಿ ಶಂಕರಜ್ಜನ ಮನೆ ಸೊಸೆ ಸಾವಿತ್ರಿ ಒಳಗೆ ಬಂತು. “ಮತ್ತೆಂತಾ ಅಲ್ದೆ.. ಯಮ್ಮನೆಳಿ ಆಲೆಮನೆ ಆಗಿತ್ತು ನಿನ್ನೆಯಾ.. ಮಶಿನ್ ಕಣೆ ಆಗಿದ್ದಕ್ಕೆ ಒಂದೇ ದಿನಕ್ಕೆ ಮುಗದೋತು, ಯಾರನ್ನೂ ಕರ್ಸಲೇ ಆಜಿಲ್ಲೆ.. ನಿಂಗಕ್ಕಿಗೆ ಕಬ್ಬಿನ ಹಾಲು ಅಂದ್ರೆ ಪ್ರೀತಿನಲೆ. ಅದ್ಕೆ ಕೊಟ್ಟಿಕ್ಕಿ ಹೋಪನಾ ಹೇಳಿ ಬಂದಿ” ಹೇಳಿಕ್ಕಿ ಹಂಗೆ ನಾಕು ಮಾತಾಡ್ಕ್ಯಂಡು ಹೋತು. ಭಾಗತ್ತಿಗೆ ಆವಾಗ ನೆನಪಾತು. ತಮ್ಮನೆಲೂ ಇನ್ನೊಂದು ತಿಂಗ್ಳೊಪ್ಪತ್ನಲಿ ಆಲೆಮನೆ ಮಾಡದೆಯಾ, ನೆಟ್ಟಿ ತಡ ಆದ್ರೂ ಚೊಲೊ ಬೆಳೆ ಇದ್ದು.. ಈ ಸರಿ ಒಂದು ಅಡಿಗೆ ಬೆಲ್ಲ ಜಾಸ್ತಿ ಆಗ್ಲಕ್ಕು ಹೇಳಿ ಸಾಲು ಸಾಲು ಯೋಚನೆಗಳು. ಭಾಗತ್ತೆ ಆ ಮನೆ ಸೊಸೆ ಆದಾಗ್ಲಿಂದನೂ ಆಲೆಮನೆ ಅಂದ್ರೆ ವರ್ಷದ ಸಂಭ್ರಮ. ಹತ್ರದ ನೆಂಟರಿಷ್ಟರಿಗೆಲ್ಲಾ ಹೇಳಿ ಕಳ್ಸದು. ಬರದೇ ಇದ್ದವ್ಕೆ ಹಾಲು ಕೊಟ್ಟು ಕಳ್ಸದು.. ಆಲೆಮನೆ ಒಂದು ವಾರ ಇದ್ರೆ ಅಡುಗೆ ಮನೆಯಲ್ಲೂ ಅದ್ರದ್ದೆ ದರ್ಬಾರು. ಕಬ್ಬಿನಹಾಲು ದೋಸೆ, ಮಣ್ಣಿ, ತೊಡೆದೇವು ಹೇಳಿ ನಾನಾ ತರದ ಕಜ್ಜಾಯ. ಈಗ್ಲೂ ತೊಡೆದೇವು ಒಡ್ಡೆ ತೊಳೆದಿಡದು, ಕಬ್ಬಿನ ಹಾಲಿನ ಸಂತಿಗೆ ತಿಂಬಲೆ ಮಂಡಕ್ಕಿ ಚುಡುವಾ ಮಾಡದು ಹಿಂಗೆ ಎಲ್ಲಾ ತಯಾರಿ ಭಾಗತ್ತೆದೆಯಾ. ಎಂತಕ್ಕೆ ಅಂದ್ರೆ ಪ್ಯಾಟೆಲ್ಲಿಪ್ಪ ಸೊಸೆಗೆ ಇದೆಲ್ಲಾ ಬರ್ತು ಇಲ್ಲೆ. ಮಾಡಲೆ ಇಷ್ಟನೂ ಇಲ್ಲೆ.

ಮಾಬ್ಲಜ್ಜ ಮನೆಗೆ ಬಪ್ಪದಕ್ಕೂ.. ಪರಮು ಯಾರಾರ್ನೋ ಕರಕೊಂಡು ಕರಿಂದ ಇಳ್ಯದಕ್ಕೂ ಸರಿ ಹೋತು. ಪರಮು ತನ್ನ ಬ್ಯಾಂಕಿನಲ್ಲಿ ಕೆಲಸ ಮಾಡುವವರ ಸ್ನೇಹಿತರು ಹೇಳಿ ಅಪ್ಪಯ್ಯ, ಆಯಿಗೆ ಪರಿಚಯ ಮಾಡಿಕೊಟ್ಟ. ಆಚ್ಗೆಮನೆ ಸಾವಿತ್ರಿ ತಂದಿಟ್ಟಿದ್ದ ಕಬ್ಬಿನಹಾಲನ್ನೆ ಬಾಯಿ ಚಪ್ಪರಿಸ್ಕ್ಯಂಡು ಕುಡ್ಕಂಡು, ಗದ್ದೆ ತೋಟನೆಲ್ಲಾ ತಿರಗಾಡ್ಕ್ಯಂಡು ಬಂದವರನ್ನೆಲ್ಲಾ ಕಳ್ಸಿಕ್ಕೆ ಪರಮು ಮನೆಗೆ ಬಂದಕೂಡ್ಳೇ ಭಾಗತ್ತೆ ಷುರು ಮಾಡ್ತು. “ಮಗಾ, ಕೆಲಸಕ್ಕೆ ಆಳ್ಗನೆ ಸಿಕ್ತ್ವಾಲ್ಲೆ, ಸ್ವಲ್ಪ ಮುಂಗಡ ಕೊಟ್ಟಾದ್ರೂ ಅಡ್ಡಿಲ್ಲೆ, ಮುಂದಿನ ತಿಂಗ್ಳು ಆಲೆಮನೆಯಷ್ಟೊತ್ತಿಗೆ ಕಬ್ಬು ಕಡಿಯಲೆ ಬಂದ್ರೂ ಸಾಕು” ಹೇಳ್ತು. “ಆಯಿ, ಇನ್ನೂ ಆಲೆಮನೆ ಮಾಡದೆಲ್ಲಾ ಇಲ್ಲೆ, ಈಗ ಬಂದಿದ್ವಲೆ ಅವ್ಕೆ ಕಬ್ಬಿನಗದ್ದೆ ಗುತ್ಗೆ ಕೊಟ್ಟಿದ್ದಿ. ಅವೇ ಇನ್ನೊಂದು ವಾರದಲ್ಲಿ ಬಂದು ಕಬ್ಬು ಕಡಿದು ಬೆಲ್ಲ ಮಾಡ್ಕ್ಯಂಡು ಹೋಗ್ತ. ಒಟ್ನಲ್ಲಿ ನಮ್ಗೆ ಕೆಲ್ಸಾನೂ ಕಡಿಮೆ.. ಲಾಭನೂ ಜಾಸ್ತಿ” ಹೇಳಿ ಅವರ ಪ್ರಶ್ನೆಗಳಿಗೂ ಕಾಯದೇ ಹೊರಟೆ ಬಿಟ್ಟ.

ಮುಂದೊಂದೆರಡು ದಿನ ಭಾಗತ್ತೆ, ಮಾಬ್ಲಜ್ಜಂಗೆ ಎಂತಾ ಮಾಡಲೂ ಗೊತ್ತಾಗ್ದೆ ಹೋದ ನಮ್ನಿ ಪರಿಸ್ಥಿತಿ. ತಮ್ಮ ನೆಲದಲ್ಲೇ ತಾವು ಪರಕೀಯರೆಂಬ ಭಾವನೆ. ಹಳ್ಳಿಗಳ್ಳೆಲ್ಲಾ ಬರೀ ವೃದ್ಧಾಶ್ರಮಗಳಾಗ್ತಾ ಇದ್ದಾ ಹೇಳಿ ಎಲ್ಲೋ ವಾರ್ತೆಲಿ ಕೇಳಿದ್ದು, 60 ವರ್ಷ ಆದ್ಮೆಲೆ ಅಡುಗೆಮನೆಯಲ್ಲೊಂದು ಕೆಮ್ಮು, ಜಗುಲಿ ಮನೆಯಲ್ಲೊಂದು ಕೆಮ್ಮು ಹೇಳಿ ಡಾಕ್ಟ್ರುಭಾವ ಹೇಳಿದ್ದು ಎಲ್ಲಾ ನೆನಪಾಗಿ ಕಣ್ಣು ಒದ್ದೆ ಆತು. ಅದಾಗಿ ಎರಡೇ ದಿನಕ್ಕೆ ಒಂದು ಗಾಡಿ ತುಂಬಾ ಜನಾ ಬಂದಿಳಿದ. ಸಂತಿಗೆ ಮಗಾ, ಸೊಸೆ ಮೊಮ್ಮಗನೂ ಬಂದಾ. ಆವಾಗಷ್ಟೆ ಬೆಳಿಗ್ಗೆನಾ ಆಸ್ರಿಗೆ ಮುಗಸ್ಕ್ಯಂಡು ಕುಂತ್ಕಂಡಿದ್ದ ಮಾಬ್ಲಜ್ಜಂಗೆ ಎಂತಾ ಆಗ್ತಾ ಇದ್ದು ಹೇಳಿ ಗೊತ್ತಾಗ್ವಷ್ಟರಲ್ಲೆ ಮಗ ಪರಮು ಅವ್ಕೆ ಕಬ್ಬಿನಗದ್ದೆ ತೋರ್ಸಿಕ್ಕಿ ಒಳಗೆ ಬಂದ. “ಎಂತಾ ಮಗಾ ಇದು.. ಆಲೆಮನೆ ಬಿಡಲಾಗ್ತನಾ.. ಅದೂ ಅಲ್ದೆ ಇನ್ನು ಗಟ್ಟಿ ಬೆಳಿದೆ ಇರೊ ಕಬ್ಬಿನ ಬೆಲ್ಲ ಮಾಡದ್ರೆ ವರ್ಷ ಆಗದ್ರೊಳಗೆ ಹುಳಿ ಬಂದೊಗ್ತು.. ಅವ್ಕೆ ಈಗಾದ್ರೂ ಬೇಡ ಹೆಳು” ಹೇಳಿ ಭಾಗತ್ತೆ ಮಾತಾಡ್ತು. “ಆಯಿ ಇದು ನಿಂಗೆ ತಿಳಿತಿಲ್ಲೆ.. ಹಿಂಗೆ ಮಾಡದ್ರೆ ಲಾಭ ಜಾಸ್ತಿ, ಅದೂ ಅಲ್ದೆ ಮುಂದಿನ ತಿಂಗ್ಳು ನಂಗೆ ಬೆಂಗಳೂರಿಗೆ ಟ್ರಾನ್ಸ್‌ಫರ್ ಆಗ್ತು. ಪದೇ ಪದೇ ಬಂದು ಹೋಗಿ ಮಾಡಲಾಗ್ತಿಲ್ಲೆ. ನಿಂಗವೂ ನಂಗ್ಳ ಸಂತಿಗೆ ಬಂದ್ಬಿಡಿ. ಈ ಜಮೀನನ್ನಾ ಯಾರಿಗಾದ್ರೂ ನೋಡ್ಕ್ಯಂಬಲೆ ಕೊಡನಾ. ವರ್ಷಕ್ಕೊಂದು ಬಾರಿ ಬಂದ್ರೆ ಆತು. ಎಲ್ಲರೂ ಆರಾಮಿಪ್ಪಲಾಗ್ತು” ಹೇಳಿ ಮುಗಿಸುವಷ್ಟರಲ್ಲಿ ಮಾಬ್ಲಜ್ಜ ಬಂದು ಮಾತಾಡದೇ ಗದ್ದೆ ಕಡೆ ಹೊರಟುಹೋದ.

ಅಲ್ಲಿ ನೋಡದ್ರೆ ಅರ್ಧಗದ್ದೆ ಕಬ್ಬು ಕಡಿದಾಗೊಗಿತ್ತು. ಪಂಪಿನಮನೆ ಸ್ವಿಚ್ ಬೋರ್ಡಿಗೆ ಕನೆಕ್ಟ್ ಆಕ್ಯಂಡಿರ ದೊಡ್ಡ ಹಂಡೆಲಿ ಕಬ್ಬಿನ ಹಾಲು ಕುದಿತಾ ಇತ್ತು. ಗುತ್ತಿಗೆ ತಗಂಡ ಯಜಮಾನನ ಮುಖದಲ್ಲಿ ಎಂತದೋ ನಿರ್ಭಾವುಕತೆ. ಕಬ್ಬಿನ ಸಿಹಿ ಹಂಚಿರೆ ಸುಖ ಜಾಸ್ತಿ ಅನ್ನೊ ನಂಬಿಕೆಯ ಆಲೆಮನೆ ಒಣ ಒಣವಾಗಿ ನಡಿತಾ ಇತ್ತು. ಮಾಬ್ಲಜ್ಜನ ಅಸಹಾಯಕ ಕಣ್ಣಲ್ಲಿ ಕಣ್ಣೀರೂ ಹೊರಗೆ ಬರಲೆ ಒದ್ದಾಡ್ತಾ ಇತ್ತು. ಅಷ್ಟೊತ್ತಿಗೆ ಮೊಮ್ಮಗ ಓಡಿ ಬಂದು “ಅಜ್ಜಾ, ಇಲ್ನೋಡು ನನ್ನ ಪುಸ್ತಕದಲ್ಲಿಪ್ಪಂತ ಹೂವೂ ನಮ್ಮನೆ ಗೆದ್ದೆ ಹಾಳಿಮೇಲೆ ಬಿಟ್ಟಿದ್ದು, ಅಮ್ಮಂಗೂ ತೋರಸ್ತಿ, ಅಜ್ಜಾ.. ಇಲ್ನೋಡು ರಾಶಿ ಕಬ್ಬಿನ ಬೀಜ. ಇದ್ನೆಲ್ಲಾ ಮತ್ತೆ ನೆಟ್ಟು ಮುಂದಿನ ವರ್ಷ ರಾಶಿ ದಿನ ಆಲೆಮನೆ ಮಾಡನಾ ಅಕಾ” ಹೆಳಿ ಒಂದು ಕೈಯಲ್ಲಿ ಹೊರಲಾರದಷ್ಟು ಕಬ್ಬಿನ ಬೀಜ, ಇನ್ನೊಂದು ಕೈಯಲ್ಲಿ ಅಜ್ಜನ್ನೂ ಹಿಡ್ಕಂಡು ಮನೆ ಕಡೆ ಹೊರಟ.

~*~*~

ಸೂ:

 • ವೈದ್ಯ ವಿದ್ಯಾರ್ಥಿನಿ, ಯುವ ಕತೆಗಾತಿ ಪ್ರತಿಭಾನ್ವಿತೆ ಅನುಷಕ್ಕನ ಮೋರೆಪುಟ: ಸಂಕೊಲೆ

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಅನುಷಕ್ಕ,ಕಥೆ ಲಾಯಕಾಯಿದು. (ಕೊನೇ ಪಾರ) ಗದ್ದೆಲಿ ಬೇರೆ ಆರೋ ಕೆಲಸ ಮಾಡುವ ಸಂಧರ್ಭಲ್ಲಿ ಮಾಬ್ಲಜ್ಜನ ಮನಸ್ಸಿನ ತಲ್ಲಣ ನಮ್ಮ ಮನಸ್ಸನ್ನೂದೆ ತಟ್ಟುತ್ತು. ಶುಭಾಶಯಂಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ಸುವರ್ಣಿನೀ ಕೊಣಲೆಕೊಳಚ್ಚಿಪ್ಪು ಬಾವvreddhiವಿದ್ವಾನಣ್ಣವೆಂಕಟ್ ಕೋಟೂರುದೊಡ್ಡಭಾವಚೆನ್ನಬೆಟ್ಟಣ್ಣಬಟ್ಟಮಾವ°ಗಣೇಶ ಮಾವ°ಹಳೆಮನೆ ಅಣ್ಣಅಜ್ಜಕಾನ ಭಾವಶೇಡಿಗುಮ್ಮೆ ಪುಳ್ಳಿಪೆಂಗಣ್ಣ°ಜಯಶ್ರೀ ನೀರಮೂಲೆಪಟಿಕಲ್ಲಪ್ಪಚ್ಚಿಡೈಮಂಡು ಭಾವಚೂರಿಬೈಲು ದೀಪಕ್ಕತೆಕ್ಕುಂಜ ಕುಮಾರ ಮಾವ°ಪವನಜಮಾವಅನುಶ್ರೀ ಬಂಡಾಡಿಸರ್ಪಮಲೆ ಮಾವ°ಪ್ರಕಾಶಪ್ಪಚ್ಚಿಬಂಡಾಡಿ ಅಜ್ಜಿಒಪ್ಪಕ್ಕವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ