“ಪದ ಹಾಕಿದ ಕ(ವ್ಯ)ಥೆ” – ಅನುಶ್ರೀ ಲಕ್ಷ್ಮೀನಾರಾಯಣ – ವಿಷು ಸ್ಪರ್ಧೆ 2015 – ನೆಗೆಬರಹ ಪ್ರಥಮ

September 10, 2015 ರ 8:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

 

ವಿಷು ವಿಶೇಷ ಸ್ಪರ್ಧೆ- 2015 ರ ನೆಗೆಬರಹ ಸ್ಪರ್ಧೆಲಿ  ಪ್ರಥಮ ಬಹುಮಾನ ಪಡೆದ ಬರಹ.
ಲೇಖಕಿ ಶ್ರೀಮತಿ ಅನುಶ್ರೀ ಲಕ್ಷ್ಮೀನಾರಾಯಣ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ. ಇವು ನಮ್ಮ ಬೈಲಿಲಿ ಹಲವಾರು ಶುದ್ದಿಗಳ ಬರದು ಸಾಹಿತ್ಯಸೇವೆಲಿ ಸಕ್ರಿಯವಾಗಿ ಇದ್ದವು.

 ‘ಪದ’ ಹಾಕಿದ ಕ(ವ್ಯ)ಥೆ

ಎನ್ನಪ್ಪನ ಮನೆ ಇಪ್ಪ ಊರು, ಮೊಬೈಲ್ ನೆಟ್ವರ್ಕುಗೊ ರಜರಜವೇ ಕಾಲುಮಡುಗುತ್ತಾ ಇಪ್ಪ ಒಂದು ಕುಗ್ರಾಮ.  ಮೊಬೈಲಿಂಗೆ ಒಳ್ಳೆತ ‘ಎಳವ’ ಅಭ್ಯಾಸ ಇದ್ದರೆ ಪೂರ್ತಿ ನೆಟ್ವರ್ಕು ಸಿಕ್ಕುಗು. ಇಲ್ಲದ್ರೆ ಮೊಬೈಲಿನ, ಕೃಷ್ಣಚಾಮಿ ಗೋವರ್ಧನಗಿರಿ ಎತ್ತಿದ ನಮುನೆ, ಎತ್ತಿ ಮೇ…ಲೆ ಹಿಡುದರೆ ಸಾಧಾರಣ ನೆಟ್ವರ್ಕು ಬಕ್ಕು.  ಕೈಕ್ಕಾಲು ಗಟ್ಟಿ ಇದ್ದರೆ ಗುಡ್ಡೆ ಹತ್ತಿ ಸರ್ಕಸ್ಸುಮಾಡಿ ನೆಟ್ವರ್ಕು ಬತ್ತೊ ನೋಡ್ಳಕ್ಕು. ಹೀಂಗಿದ್ದ ಊರಿಲಿ ವಾಟ್ಸಾಪು, ಫೇಸುಬುಕ್ಕಿನ ಚಟ ಇಪ್ಪವಕ್ಕೆ ಎರಡು ದಿನಂದ ಹೆಚ್ಚಿಗೆ ಬದ್ಕುಲೆಡಿಯ. ಅದಿರಳಿ, ಈಗ ಈ ನೆಟ್ವರ್ಕಿನ ಶುದ್ದಿ ಬಂದದೆಂತಕೆ ಹೇಳಿರೆ, ಅನಿವಾರ್ಯವಾಗಿ ಅದು ಬೇಕೇ ಬೇಕು ಹೇಳ್ತ ಸಂದರ್ಭ ಬಂದ ಕಾರಣ. ಅಂಬಗ ಹಾಂಗಿದ್ದ ಸಂದರ್ಭ ಏಕೆ ಬಂತು ಹೇಳಿರೆ…

ಆನು ಹೆರಿಗೆಯ ಲೆಕ್ಕಲ್ಲಿ ಅಪ್ಪನ ಮನೆಗೆ ಹೋಗಿ ಗಟ್ಟಿ ಕೂದಿತ್ತಿದ್ದೆ. ಸಾಮಾನ್ಯವಾಗಿ ಅಪ್ಪನ ಮನೆಲಿ ಕೂಪದು ಹೇಳಿರೆ ಕೂಪದೇ, ಅಂತಾ ಕೆಲಸ ಎಂತ ಇರ್ತಿಲ್ಲೆ ಇದಾ. ಹಾಂಗೆ ಮನೆಕೆಲಸದ ಮಂಡೆಬೆಶಿ ಇಲ್ಲದ್ದೆ ಅಂತೆ ಕೂದು ಕೂದು ಮಂಡೆ ಹಾಳಪ್ಪಷ್ಟು ಪುರ್ಸೊತ್ತು ಇದ್ದ ಕಾರಣ ಆನು ಪುಸ್ತಕಲ್ಲಿ ಗೀಚಿ ಗೀಚಿ ಮಡುಗಿದ ಸುಮಾರು ಬರಹಂಗಳ ಟೈಪು ಮಾಡಿ ಬ್ಲೋಗಿಂಗೊ, ಒಪ್ಪಣ್ಣನ ಬೈಲಿಂಗೊ ಹಾಕುವಾಳಿ ಹೆರಟಿತ್ತಿದೆ. ಕನ್ನಡಲ್ಲಿ ಟೈಪು ಮಾಡ್ಳೆ ಎಂತಾರು ಬೇಕಲ್ದ? ಎನ್ನತ್ರೆ ಆವ್ಗ ಒಂದು ವಿಂಡೋಸು ಮೊಬಯಿಲು ಇದ್ದತ್ತು. ಆದರೆ ಅದಕ್ಕೆ ಕನ್ನಡ ಅರಡಿಗೊಂಡಿತ್ತಿಲ್ಲೆ. ಅದರ್ಲಿಪ್ಪ ಕನ್ನಡ ಟೈಪಿನ ಆ್ಯಪು ಓಪನಾಯೆಕಾರೆ ನಾಕು ಕುಟ್ಟಿ ನೆಟ್ವರ್ಕು ಬೇಕಾಗಿಯೊಂಡಿದ್ದತ್ತು. ಅಷ್ಟು ಕುಟ್ಟಿ ಕನಸಿಲೂ ಬಾರ ಅಲ್ಲಿ. ಹಾಂಗೆ ಎಂತರ ಮಾಡುದಪ್ಪ ಹೇಳಿ ಆಲೋಚನೆ ಮಾಡಿಗೊಂಡಿಪ್ಪಗ, ಆಚಮನೆ ಕೂಸಿನ ಹತ್ರ ಟೇಬ್ಲೆಟ್ ( tablet) ಇಪ್ಪದು ಗೊಂತಾತು. ಹೇಳಿ ಕೇಲಿ ಮಾಷ್ಟ್ರ-ಮಾಷ್ಟ್ರೆತ್ತಿಯ ಮಗಳು, ಪೀಯೂಸಿ ಸೆಕೆಂಡೀಯರು ಬೇರೆ. ಉದಿಯಪ್ಪಗ ಏಳು ಗಂಟೆಗೆ ಮನೆ ಬಿಟ್ರೆ ಹೊತ್ತೊಪಗ ಆರು ಗಂಟೆಗೆ ಒಪಾಸು ಎತ್ತುದು. ಬಂದು ಓದಿ-ಬರದು ಮಾಡ್ಯಪ್ಪಗ ಒರಗುಲಾತು. ಒರಗ್ಯಪ್ಪಗ ಏಳುಲಾತು. ಎದ್ದಪ್ಪಗ ಹೋಪಲಾತು. ಹಾಂಗಾಗಿ ಅದಕ್ಕೆ ಟೇಬ್ಲೆಟಿನ ಬೇಗಡೆಂದ ತೆಗವಲೂ ಪುರ್ಸೊತ್ತಿಲ್ಲದ್ದೆ ಆ ಟೇಬ್ಲೆಟು ಕಪಾಟಿಲಿ ಬೆಶ್ಚಂಗೆ ಒರಗಿತ್ತಿದು. ಹಾಂಗೆ ಎನ್ನ ಸಮಸ್ಯೆಗೊಂದು ಟೇಬ್ಲೆಟ್ ಮಾತ್ರೆ ಸಿಕ್ಕುವ ಅಂದಾಜಿದ್ದೂಳಿ ಗ್ರೇಶಿಗೊಂಡು, ಅದರ ಹಿಡ್ಕೊಂಡು ಬಂದೆ.
ಅದರ್ಲಿ ‘ಪದ’ ಹೇಳ್ತ ಆ್ಯಪಿನ ಹಾಕಿರೆ ಇಂಟರ್ನೆಟ್ ಇಲ್ಲದ್ರುದೆ ಕನ್ನಡ ಟೈಪ್ ಮಾಡ್ಳಾವ್ತು ಹೇಳಿ ಇವು ಹೇಳಿತ್ತಿದ್ದವು.

ಅಂತು ಟೇಬ್ಲೆಟು ಕೈಗೆ ಬಂದಾತು. ಇನ್ನದಕ್ಕೆ ಪದ ಹಾಕುಲೆ ಒಂದರಿಯಂಗೆ ಇಂಟರ್ನೆಟ್ಟು ಬೇಕು. ಹಾಂಗೆ ಉದೀಯಪ್ಪಗ ಬೇಗ ಎದ್ದು, ಮಿಂದು ಮಡಿಯಾಗಿ, “ಇಂದೆನ್ನ ಮೊಬೈಲಿಂಗೆ ಪೂರ್ತಿ ಕುಟ್ಟಿ ನೆಟ್ವರ್ಕು ಬಪ್ಪಾಂಗೆ ಮಾಡಿರೆ ಇಪ್ಪತ್ತೊಂದು ಕರಿಕ್ಕೆ ಹಾಕುತ್ತೆ ” ಹೇಳಿ ಸೌತ್ತಡ್ಕ ಗೆಣಪ್ಪಣ್ಣಂಗೆ ರೆಜ ಆಮಿಷ ಒಡ್ಡಿಕ್ಕಿ, ಮೊಬೈಲನ್ನೂ, ಟೇಬ್ಲೆಟನ್ನೂ ಹಿಡ್ಕೊಂಡು ಗುಡ್ಡೆ ಹತ್ತಿ ಕೂದುಗೊಂಡೆ. ಸುರೂವಿಂಗೆ ಮೊಬೈಲಿಂದ ಟೇಬ್ಲೆಟಿಂಗೆ ಇಂಟರ್ನೆಟ್ಟು ಕನೆಕ್ಷನು ಮಾಡಿಗೊಂಡೆ. ಮತ್ತೆ ಗೂಗುಲುಕ್ರೋಮಿಲಿ ಆ್ಯಪಿನ ಹುಡ್ಕುಲೆ ಹೆರಟೆ. ಅದು ಮೆಲ್ಲಂಗೆ ಚೋರಟೆ ತಿರುಗಿದಾಂಗೆ ತಿರುಗಿ.. ತಿರುಗಿ… ತಿರುಗಿ.. ಹತ್ತು ನಿಮಿಷ ತಿರುಗಿ.. ತಿರುಗಿ.. ಅಂತೂ ಲೋಡ್ ಆತು. ಸುಮ್ಮನೆ ಅಲ್ಲ ಅಷ್ಟು ತಿರುಗಿದ್ದು, ಲೋಕ ಪೂರ್ತಿ ಸುತ್ತಿಕ್ಕಿ ಸಾವಿರ ಪುಟದ ಸರ್ಚು ಫಲಿತಾಂಶ ತಂದುಕೊಟ್ಟಿದದು! ಎನಗೆ ಅಷ್ಟೆಲ್ಲ ಬೇಡಪ್ಪ ಒಂದು ಸಾಕು ಹೇಳಿ ಹೇಳಿರೆ ಕೇಳೆಕ್ಕೆ ಅದು. ಎನ್ನಮ್ಮ ಬಂದೋರಿಂಗೆಲ್ಲ ನೆಟ್ಟಿಕಾಯಿಯನ್ನೋ, ಉಪ್ಪಿನಕಾಯಿಯನ್ನೋ ಬೇಡ ಬೇಡ ಹೇಳಿರೂ ಕೇಳದ್ದೆ ದಾರಾಳ ಕೊಡ್ತ ಹಾಂಗೆ ಇದುದೇ ಧಾರಾಳಿ ಕಾಣ್ತು. ಇರಳಿ ನವಗೆಂತ, ಅಂತು ಲೋಡ್ ಆದ್ದದೇ ಪುಣ್ಯ ಹೇಳಿಗೊಂಡು ಸುರೂಗಾಣ ಕೊಂಡಿಯ ನೋಡಿದೆ. ‘ಗೂಗ್ಲುಪ್ಲೇ’ ಹೇಳಿ ಇದ್ದತ್ತು. ಇದೆಂತರ ಗೂಗ್ಲಿಲಿ ಆಟಾಡುದೋ ಹೇಳಿ ಆಲೋಚನೆ ಮಾಡಿಗೊಂಡಿಪ್ಪಗ ಅಲ್ಲೇ ಕೆಳ ಕಂಡತ್ತು; ಗೂಗ್ಲುಪ್ಲೆ ಹೇಳಿರೆ ಏಂಡ್ರಾಯ್ಡು ಸಾಮಾನುಗೊಕ್ಕೆ ಬೇಕಪ್ಪ ಆ್ಯಪುಗ ಸಿಕ್ಕುವ ಇ-ಬೈಲು ಹೇಳಿ. ಎಂತಾ ಹೆಸರೊ! ಈಗಾಣ ಮಕ್ಕೊಗೆ ನಾಲಗೆ ತೊಳಚ್ಚದ್ದಾಂಗಿಪ್ಪ ಹೆಸರು ಮಡುಗುವ ನಮುನೆ ಈ ಇಂಟರ್ನೆಟ್ಟಿಲಿ ಅರ್ಥ ಇಲ್ಲದ್ದ ಹೆಸರುಗೊ! ಅಲ್ಲ ಹೆಸರು ಕಟ್ಟಿಗೊಂಡು ಎನಗೆಂತಾಯೆಕ್ಕು, ಎಂತ ಇದ್ದು ನೋಡುವ ಹೇಳಿ ಆ ಕೊಂಡಿಯ ಒತ್ಯಪ್ಪಗ ಪುನ ಹಾಂಗೇ ತಿರುಗೀ ತಿರುಗೀ ಲೋಡ್ ಆವ್ತೂಳಿ ಅಪ್ಪಗ ನೆಟ್ವರ್ಕು ಹೋಯೆಕ್ಕಾ…  ರಜ ಹೊತ್ತು ಕಾದುಕೂದು ಪುನ ಒತ್ಯಪ್ಪಗ ಹೇಂಗಾರು ಲೋಡಾತು. ಅದರ್ಲಿ ಇನ್ಸ್ಟಾಲ್ ಹೇಳ್ತ ಗುಬ್ಬಿ (ಬಟನು)  ಇದ್ದತ್ತು. ಅದರ ಒತ್ತಿದೆ. ಊಹೂಂ ಎಂತದೂ ಸುದ್ದಿಲ್ಲೆ… ನಾಕೈದು ಸರ್ತಿ ಒತ್ತಿದೆ.. ಊಹೂಂ ಮತ್ತೂ ಸುದ್ದಿಲ್ಲೆ… ಸುದ್ದಿಪ್ಪಲೆ ಇತ್ಲಾಗಿ ನೆಟ್ವರ್ಕು ಹೋಯಿದು! ಮೂಡ ಮೋರೆ ಮಾಡಿದ್ದೋಳು ಪಡುವಕ್ಕೆ ತಿರುಗಿಯಪ್ಪಗ ಬಂತು, ನೆಟ್ವರ್ಕು. ಬಂತೂಳಿ ಖುಷಿಲಿ ಇನ್ನೊಂದರಿ ಆ ಗುಬ್ಬಿ ಒತ್ತಿರೆ, “ಕುಳುಂಕ್… ಎನಗೆ ಬೇಟ್ರಿ ಇಲ್ಲೆ..” ಹೇಳಿ ಅರೆದ್ದಿಗೊಂಡು ಟೇಬ್ಲೆಟು ಓಫಾತು…!

ಹೋದ ದಾರಿಗೆ ಸುಂಕ ಇಲ್ಲೇಳಿ ಕೆಳ ಇಳುದು ಬಂದು ಟೇಬ್ಲೆಟಿನ ಚಾರ್ಜಿಂಗೆ ಕುತ್ತಿಕ್ಕಿ, ಅದಕ್ಕೆ ಬೆಟ್ರಿ ಬಂದಪ್ಪಗ ಪುನ ಗುಡ್ಡೆ ಹತ್ತಿ ಎನ್ನ ‘ಹುಡ್ಕುವ’ ಕೆಲಸ ಮುಂದುವರ್ಸಿದೆ. ಒಂದು ಕೈಲಿ ಮೊಬೈಲಿನ ಏಂಟೆನದ ಹಾಂಗೆ ಕುತ್ತ ಹಿಡುದು, ಇನ್ನೊಂದು ಕೈಲಿ ಟೇಬ್ಲೆಟ್ ಹಿಡಿದು, “ಇನ್ನೆರಡು ಕೈ ಇದ್ದಿದ್ದರೆ ಲಾಯ್ಕಿತ್ತು” ಹೇಳಿ ಗ್ರೇಶಿಗೊಂಡು, ಮೆಲ್ಲಂಗೆ ಹೆಬ್ಬಟೆ ಬೆರಳಿಲಿ ಕ್ರೋಮು ಓಪನು ಮಾಡಿ, ಆಗಾಣ ಪುಟವ ರೀಲೋಡು ಮಾಡಿದೆ. ಇನ್ಸ್ಟಾಲ್ ಗುಬ್ಬಿಯ ಮೇಲೆ ನಾಕೈದು ಸರ್ತಿ ಒತ್ಯಪ್ಪಗ ಡೊಯಿಂಕ ಹೇಳಿ ಒಂದು ಸಂದೇಶ ಬಂತು. “ನೀನು ಇಷ್ಟ್ರೊರೆಗೆ ಗೂಗ್ಲುಪ್ಲೇಂದ ಎಂತದೂ ಇಳಿಶಿಗೊಂಡಿದಿಲ್ಲೆ” – ಹೇಳ್ತ ನಮುನೆದು. ‘ಅಪ್ಪು ಇಷ್ಟ್ರೊರೆಗೆ ಇಳಿಶಿದ್ದಿಲ್ಲೆ ಈಗ ಇಳಿಶುತ್ತಾ ಇದ್ದೆನ್ನೆ.. ಹೊಸತ್ತು ಕೆಲಸ ಹುಡ್ಕುವೋರಿಂಗೆ ಅನುಭವ ಕೇಳಿರೆ, ಕೆಲಸ ಸಿಕ್ಕದ್ದೆ ಅನುಭವ ಬಪ್ಪದಾದರು ಎಲ್ಲಿಂದ ಬೇಕೆ…’ ಹೇಳಿ ಮನಸ್ಸಿಲೆ ಗ್ರೇಶಿಗೊಂಡೆ. ಆ ಸಂದೇಶಲ್ಲಿ ಇನ್ನೂ ಹೆಚ್ಚಿಗೆ ಮಾಹಿತಿ ಬೇಕಾರೆ ಇಲ್ಲಿ ಒತ್ತು ಹೇಳಿ ಇತ್ತು. ಎಂತಾದಿಕ್ಕೂಳಿ ಒತ್ತಿ ನೋಡ್ಯಪ್ಪಗ, ಏವದೇ ಆ್ಯಪಿನ ಇನ್ಸ್ಟಾಲ್ ಮಾಡೇಕಾರೆ ಪ್ಲೇಸ್ಟೊರ್ ಹೇಳ್ತ ಷ್ಟೋರಿಲಿ  ನಮ್ಮ ರಿಜಿಸ್ತ್ರಿ ಆಗಿರೆಕ್ಕು. ಅದರೊಳಂಗೆ ಲಾಗ ಹಾಕಿಕ್ಕಿ ಎಂತಾರು ಒಂದು ಆ್ಯಪು ಇಳಿಶಿಗೊಂಡರೆ ಮತ್ತೆ ಬೇಕಾದಾಂಗೆ ಆ್ಯಪುಗಳ ಹಾಯ್ಕೊಂಬಲಕ್ಕು ಹೇಳಿ ಗೊಂತಾತು.

ಸರಿ ಅದೂ ಆಗಲಿ ಹೇಳಿ ಪ್ಲೇಸ್ಟೋರಿಲಿ ಎನ್ನ ಜೀಮೇಲು ಐಡಿದೆ, ಗುಟ್ಟುಶಬ್ದದೆ ಹಾಕಿ ಒಳ ಹೋಪಲೆ ನೋಡಿದೆ. ಎಲಾ ಅದುವೆ! ಎನ್ನ ಗುಟ್ಟುಶಬ್ದ ಸರಿ ಇಲ್ಲೆ ಹೇಳಿ ಹೇಳ್ತನ್ನೆ… ಪುನ ಪುನ ಹಾಕಿರೂ.. ಊಹೂಂ… ತಲೆ ಅಡ್ಡಡ್ಡ ಆಡ್ಸುತ್ತಷ್ಟೆ ಹೊರತು ಒಳಂಗೆ ಕಳ್ಸುತ್ತಿಲ್ಲೆ. ‘ಶೆ ಈ ಷ್ಟೋರಿಂದ ನಮ್ಮ ರೇಶನು ಷ್ಟೋರಿಲೇ ಇದು ಸಿಕ್ಕುವಾಂಗಿದ್ದರೆ ಇಷ್ಟೆಲ್ಲ ಬಂಙವೇ ಇತ್ತಿಲ್ಲೆ’ ಹೇಳಿ ಆತೊಂದರಿ. ಆನು ಗುಟ್ಟುಶಬ್ದವ ಗುಟ್ಟಿಲಿ ಮಡುಗಿದ ಕಾರಣ ಇನ್ನು ಇದಕ್ಕೆ ಗೊಂತಾಗದ್ದೆ ಹೀಂಗೆ ಹೇಳ್ತಾ ಇಪ್ಪದ ಏನ; ಒಟ್ಟಾರೆ ಎಂತ ಕಥೆ ಹೇಳಿ ಗೊಂತಾಗದ್ದೆ ಇವಕ್ಕೆ ಫೋನು ಮಾಡಿ ಕೇಳಿದೆ. ಅವು ಕೆಲಸದ ಅಂಬೆರ್ಪಿನ ನಡುಕೆ “ಅದು ಗೂಗಲ್ ಸೆಕ್ಯುರಿಟಿಲಿ ಪಾಸ್ವರ್ಡ್ ಜನರೇಟ್ ಮಾಡೆಕ್ಕು” ಹೇಳಿಕ್ಕಿ ಟಕ್ಕ ಮಡುಗಿದವು ಫೋನಿನ. ಹ್ನೆ ಇದೆಂತರ ಸೆಕ್ಯುರಿಟಿ ಗಾರ್ಡು ಜನರೇಟರ್ ಹಾಕೆಕ್ಕೊ.. ಉಮ್ಮಪ್ಪ ಎಂತಾಳಿ ತಲೆಗೆ ಹೊಕ್ಕತ್ತಿಲ್ಲೆ. ಇದ್ದನ್ನೆ ಗೂಗುಲು ಪರಮಾತ್ಮ  ಅರ್ಥಾಗದ್ದದರ ನೋಡುಲೆ.  ಅಪ್ಪಮ್ಮ ಒಂದು ಬಿಟ್ಟು ಮತ್ತೆಲ್ಲವೂ ಸಿಕ್ಕುತ್ತಿದ ಗೂಗುಲಿಲಿ. ಹಾಂಗೆ ಇನ್ನೊಂದು ಸರ್ಚು ಕೊಟ್ಟಪ್ಪಗ, ಆ ಷ್ಟೋರಿಂಗೆ ಪ್ರತ್ಯೇಕ ಗುಟ್ಟುಶಬ್ದ ಬೇಕು, ಅದು ಎನ್ನ ಜೀಮೇಲಿಂದಲೇ ಜಾರಿ ಬರೆಕ್ಕು ಹೇಳಿ ಗೊಂತಾತು. ಅದರ ಅಲ್ಲಿಂದ ಜಾರ್ಸುಲೆ ಅರ್ಧ ಗಂಟೆ ಹೊಣದಾತು. ಆ ಗುಟ್ಟುಶಬ್ದವ ಈ ಷ್ಟೋರಿಂಗೆ ಹಾಕ್ಯಪ್ಪಗ… ಅಬ್ಬ… ಒಳಾಂಗೆ ಹೋಪಲೆ ಬಿಟ್ಟತ್ತು. ಇನ್ನು ಎಂತಾರು ಆ್ಯಪು ಇಳಿಶೆಕಲ್ದ ಹೇಳಿ ಅದರ್ಲಿ ಬಪ್ಪ ‘ಆ್ಯಪ್ಸ್’ ಹೇಳ್ತ ಗುಬ್ಬಿ ಒತ್ತಿದೆ. ಕಪ್ಪು ಪರದೆಲಿ ನಡೂಕೆ “ಲೋಡಿಂಗ್” ಡಿಂಗ್ ಡಿಂಗ್ ಹೇಳಿ ಚಕ್ರ ತಿರುಗುತ್ತಷ್ಟೆ ಹೊರತು ಮಣ್ಣಂಗಟ್ಟಿ ಲೋಡ್ ಅಪ್ಪದು ಎಂತದೂ ಕಾಣ್ತಿಲ್ಲೆ. ಇದಾವ್ತಿಲ್ಲೆ ಹೇಳಿ ಪುನ ಇಂಟರ್ನೆಟ್ಟಿನ ಗೂಗ್ಲುಪ್ಲೇ ಬೈಲಿಂಗೆ ಹೋಗಿ ಪದ ಹಾಕುಲೆ ನೋಡಿರೆ ಮಾಷ್ಟ್ರ ತಲೆಗೆ ಕುಟ್ಟಿ ಹಾಕಿದಾಂಗೆ ಟೊಯಿಂಕ ಹೇಳಿ ಅದೇ ಎರರ್ ಮೆಸೇಜು!  ಪುನಾ ಇತ್ಲಾಗಿ ಬಂದು ಷ್ಟೋರಿಲಿ ಲೋಡಾವುತ್ತೋ ಹೇಳಿ ಕಾದು… ಕಾದು… ಕಾದೂ … ಟೇಬ್ಲೆಟ್ ಬೆಶೀ ಆತು, ಲೋಡಪ್ಪ ಗೌಜಿಗೆ.

ಹೊತ್ತೊಪ್ಪಾಗಂಗೊರೆಗೆ ಹೀಂಗೆ ಲೋಡಪ್ಪದೇ ಆತು… ಲಾರಿಗೆ ಆಗಿದ್ದರೆ ನಾಕು ಲೋಡು ಮಣ್ಣು ಲೋಡಾಗಿ ಅನ್ಲೋಡುದೇ ಆವುಸಿತ್ತು ಇಷ್ಟೊತ್ತಿಂಗೆ. “ಇದಿನ್ನು ಅಪ್ಪ ಹೋಪ ಸಂಗತಿ ಅಲ್ಲ” ಹೇಳಿಗೊಂಡು ಕಡೇ ಪ್ರಯತ್ನ ಒಂದು ಮಾಡಿಕ್ಕುವಾಳಿ ಇ-ಬೈಲಿಲಿ ಪುನ ಒಂದರಿ ಇನ್ಸ್ಟಾಲು ಒತ್ತಿದೆ. ಉದಿಯಾಂದ ಈ ಬಸರಿಯ ಅವಸ್ಥೆ ನೋಡಿ ಅದಕ್ಕೆ “ಪಾಪಪುಣ್ಯ” ಕಂಡತ್ತೋ ಏನೊ! ಟಪಕ್ಕ ಡೌನ್ಲೋಡಾಗಿ ರಪಕ್ಕ ಇನ್ಸ್ಟಾಲುದೇ ಆತು! ! ಆಹಾ… ಜಿಂಗ್ ಚಿಕ ಜಿಂಗ್ .. ಸೊರ್ಗಕ್ಕೆ ಮೂರೇ ಗೇಣು! ಟೇಬ್ಲೆಟಿಲಿ ಪದ ಓಪನಾತು. ಭಾರೀ ಖುಷಿಲಿ ಸುರೂವಿಂಗೆ ಎನ್ನ ಹೆಸರನ್ನೇ ಟೈಪು ಮಾಡಿದೆ. ಆದರೆ… ಆದರೆ ಅದರ್ಲಿ ಬರೇ ಬೆಳಿ ಪುಟಲ್ಲಿ ಮಿಣ್ಕ ಮಿಣ್ಕ ಕರ್ಸರು ಮುಂದೆ ಮುಂದೆ ಹೋಪದು ಕಾಣ್ತಷ್ಟೆ ಹೊರತು ಕನ್ನಡ ಅಕ್ಷರಂಗ ಕಾಣ್ತೇ ಇಲ್ಲೆ…

ಶೆಕ್ ಇದೆಂತ ಕಥೆ ಹೇಳಿ ಒಂದಷ್ಟು ಸರ್ಚು-ರಿಸರ್ಚು ಮಾಡ್ಯಪ್ಪಗ ಗೊಂತಾತು, ಈ ಟೇಬ್ಲೆಟಿಂಗೆ ಕನ್ನಡ ಫೋಂಟು ಅರಡಿತ್ತಿಲ್ಲೆ ಹೇಳಿ. ಅರ್ಥಾತ್, ಅದಕ್ಕೆ ಉರುಟುರುಟಾಗಿ ಚೆಂದ ಚೆಂದ ಇಪ್ಪ ಕನ್ನಡ ಅಕ್ಷರಂಗಳ ಬರವಲೆ ಬತ್ತಿಲ್ಲೆ, ಕೋಲು ಕೋಲಾಗಿ ಸುರ್ಪ ಇಲ್ಲದ್ದ ಇಂಗ್ಲೀಶು ಅಕ್ಷರಂಗ ಮಾತ್ರ ಬಪ್ಪದು ಹೇಳಿ. ಆತನ್ನೆ, ಅಷ್ಟ್ರೊರೆಗಾಣ ಎನ್ನ ಪ್ರಯತ್ನ ಎಲ್ಲ ನೀರಿಲಿ ಮಾಡಿದ ಹೋಮ.

ಕಡೇಂಗೆ ಆ ಹೋಮದ ಹೊಗೆ ಇವರ ಮೋರೆಗೆ ಸುಳುದಪ್ಪಗ ಏನೋ ಒಂದು ಚಮತ್ಕಾರ ಆಗಿ ಎನಗೊಂದು ಫಳ ಫಳ ಹೊಳವ ಹೊಸಾ ಮೊಬೈಲು ತಂದುಕೊಟ್ಟವದ. ಅದಕ್ಕೆ ಕನ್ನಡ ‘ಪದ’ ಅರಡಿತ್ತು. ಅಂತೂ ಎನ್ನ ಬಹುಕಾಲದ ಬಯಕೆ ಈಡೇರಿತ್ತು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. parvathimbhat
  parvathimbhat

  ಸೂಪರ್ .ನಗೆ ಬರಹ ತು೦ಬಾ ಲಾಯಿಕ ಆಯಿದು. ಅಭಿನ೦ದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಅನುವಿನ ಅನುಭವ ಕಥನ ಲಾಯಕಿತ್ತು. ಭಗೀರಥ ಪ್ರಯತ್ನ ಮಾಡಿ “ಪದ”ವ ಭುವಿಗೆ ಇಳಿಶೊಂಡರುದೆ ನೀರ ಮೇಗಾಣ ಹೋಮ ಆದ್ದದು ನೈಜವಾಗಿ ಬಯಿಂದು. ಎಡೆ ಎಡೆಲಿ ಉಪಮೆಗೊ ಕೊಶಿ ಕೊಟ್ಟತ್ತು. ಅಭಿನಂದನೆಗೊ. ಈಗ ಬಂಡಾಡಿ ಅಜ್ಜಿಗೆ ಪುಳ್ಳಿಯ ನೋಡ್ಯೊಳ್ತರಿಂದಾಗಿ ಬೈಲಿಂಗೆ ಬಪ್ಪಲೆ ಪುರುಸೊತ್ತಿಲ್ಲೆಯೊ ಹೇಳಿ.

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಅಪ್ಪು ಬೊಳುಂಬು ಮಾವ.
  ಎರಡು ಕಣ್ಣು, ಎರಡು ಕೈ, ಎರಡು ಕಾಲು, ಇಪ್ಪತ್ತು+ನಾಲ್ಕು ಗಂಟೆಗಳೂ ಸಾಕಾವ್ತಿಲ್ಲೆ.. ಲೂಟಿ ಮಗನ ಆಳ್ಸುಲೆ.. ಬೈಲಿನ ಹೊಡೆಂಗೆ ಬರೆಕ್ಕು ಬರೆಕ್ಕು ಹೇಳಿ ಗ್ರೇಶುದೇ ಆತು.. ಬಪ್ಪಲೇ ಆವ್ತಿಲ್ಲೆ..

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಭಗೀರಥ ಪ್ರಯತ್ನವೇ ಇದು. ಅನುಶ್ರೀ ಗೆ ಅಭಿನಂದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಮೊಬೈಲು ‘ಎಳವದರಿಂದ’ ಹಿಡುದು ಕಡೆಯವರೆಗೂ ನೆಗೆ ಮಾಡ್ಸಿತ್ತು . ಒಳ್ಳೆ ನೆಗೆಬರಹ. ಅಭಿನಂದನೆ ಅನುಶ್ರೀ ಅಕ್ಕಂಗೆ .

  [Reply]

  VA:F [1.9.22_1171]
  Rating: 0 (from 0 votes)
 5. ವಿಜಯತ್ತೆ

  ಒಳ್ಳೆದಾಯಿದು ಅನುಶ್ರೀ. ನಿನಗೆ ಆದಹಾಂಗೆ ಎನಗು ಎರಡೆರಡು ಸರ್ತಿ ಕರೆಂಟು ಹೋಗಿ ಬೊಡುದತ್ತನ್ನೆ !

  [Reply]

  VN:F [1.9.22_1171]
  Rating: 0 (from 0 votes)
 6. ವಿಜಯತ್ತೆ

  ಒಳ್ಳೆದಾಯಿದು ಅನುಶ್ರೀ. ನಿನಗೆ ಆದಹಾಂಗೆ ಎನಗು ಎರಡೆರಡು ಸರ್ತಿ ಕರೆಂಟು ಹೋಗಿ ಒಪ್ಪಕೊಡ್ಳೆ ಬೊಡುಶಿತ್ತನ್ನೇ

  [Reply]

  VN:F [1.9.22_1171]
  Rating: 0 (from 0 votes)
 7. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಶುದ್ದಿಗೆ ಒಪ್ಪಕೊಟ್ಟು ಪ್ರೋತ್ಸಾಹಿಸಿದ ಎಲ್ಲೊರಿಂಗೂ ಧನ್ಯವಾದಂಗೊ
  ಆನು ಇಷ್ಟು ಬರೆಯೆಕ್ಕಾರೆ ಈ ಬೈಲೇ ಕಾರಣ. ಬರವಣಿಗೆ ವಿಷಯಲ್ಲಿ, ಇಲ್ಲೇ ಓಡಿ ಆಡಿ ಬೆಳದ್ದದು ಆನು. ಈಗ ಮಾತ್ರ ಮದುವೆ ಮಾಡಿ ಕೊಟ್ಟ ಮಗಳ ಹಾಂಗೆ ಆಯಿದೆ ಇಲ್ಲಿ. ಮನೆಕೆಲಸ, ಕುಂಞಿಮಗನ ನೋಡ್ಯೊಂಬ ಎಡಕ್ಕಿಲಿ ಇತ್ಲಾಗಿ ಬಪ್ಪಲಾವ್ತಾ ಇಲ್ಲೆ.
  ಈ ಬರಹಕ್ಕೆ ಪ್ರೈಸು ಬಂದದು ಒಪ್ಪಣ್ಣ ಬೈಲಿನ ಪ್ರೇರಣೆಂದಲೇ. ಇದಕ್ಕೆ ಚಿರಋಣಿ ಆನು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿವಿದ್ವಾನಣ್ಣಮಾಲಕ್ಕ°ಒಪ್ಪಕ್ಕಶೀಲಾಲಕ್ಷ್ಮೀ ಕಾಸರಗೋಡುವೇಣಿಯಕ್ಕ°ಬಟ್ಟಮಾವ°ಡೈಮಂಡು ಭಾವವೇಣೂರಣ್ಣಬೊಳುಂಬು ಮಾವ°ಪುಟ್ಟಬಾವ°ಸರ್ಪಮಲೆ ಮಾವ°ಡಾಗುಟ್ರಕ್ಕ°ಅನುಶ್ರೀ ಬಂಡಾಡಿನೀರ್ಕಜೆ ಮಹೇಶಬೋಸ ಬಾವವಿಜಯತ್ತೆಚೂರಿಬೈಲು ದೀಪಕ್ಕಗೋಪಾಲಣ್ಣಪವನಜಮಾವಶ್ಯಾಮಣ್ಣಮಂಗ್ಳೂರ ಮಾಣಿಚೆನ್ನಬೆಟ್ಟಣ್ಣವಸಂತರಾಜ್ ಹಳೆಮನೆಕೇಜಿಮಾವ°ವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ