Oppanna.com

ತೆಕ್ಕುಂಜ ಶಂಕರ ಭಟ್ಟ ವಿರಚಿತ “ಶ್ರೀ ಸತ್ಕೃತಿ ಮಂಜರೀ” – ಉತ್ತರಾರ್ಧ

ಬರದೋರು :   ತೆಕ್ಕುಂಜ ಕುಮಾರ ಮಾವ°    on   21/09/2011    4 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಸ್ಮರಣ ಸಂಚಿಕೆ “ಗುರು ದಕ್ಷಿಣೆ” ಲಿ ಶ್ರೀ  ಸೊಡಂಕೂರು ತಿರುಮಲೇಶ್ವರ ಭಟ್ಟ, ಇವು ಅಜ್ಜನ ಬಗ್ಗೆ ಹೀಂಗೆ ಬರದ್ದವು ಃ

“ಶ್ರೀ ಶಂಕರ ಭಟ್ಟರ ಪರಿಚಯ ನನಗೂ ಇತ್ತೀಚೆಗಿನದಲ್ಲ. ಸುಮರು ಮೂವತ್ತು ವರ್ಷಗಳ ಹಿಂದಿನದು. ನಾನು ಸಂಸ್ಕೃತ ಕಲಿಯುತ್ತಿರುವ ವಿದ್ಯಾರ್ಥಿಯಗಿದ್ದಾಗಲೇ ನನಗವರ ಪರಿಚಯವಿದ್ದಿತು…….”

” ಅವರ ಪ್ರತಿಯೊಂದು ಮಾತಿನಲ್ಲೂ ಸಂಸ್ಕೃತದ ಮೇಲೆ ಅವರಿಗಿದ್ದ ಅಗಾಧವಾದ ಅಭಿಮಾನ ಮತ್ತು ಪಾಂಡಿತ್ಯ ಕಂಡುಬರುತ್ತಿತ್ತು. ಶ್ರೀ ಶಂಕರ ಭಟ್ಟರು ಎಷ್ಟು ಸಜ್ಜನರೋ ಅಷ್ಟೇ ಸಾಧ್ವಿ ಅವರ ಪತ್ನಿ. ಅವರದು ತುಂಬು ಬಾಳುವೆ….”

ಅಜ್ಜನ “ಶ್ರೀ ಸತ್ಕೃತಿ ಮಂಜರೀ”ಯ ಒಳುದ ಸ್ತೋತ್ರಂಗಳ ಕೊಟ್ಟಿದೆ ಃ

ಶುಕ್ತೌ ಯಥಾ ರಾಜತಲೋಹಬುದ್ಧಿ

ಸ್ತಥಾ ಪರಸ್ಮಿನ್ನಪರಾ ವಿಭುದ್ಧೀಃ

ಕ್ಷೇತ್ರಜ್ಞಲೋಕಂ ಕಲಯೇ ಕಲಂತಂ

ಕಲಾಮಯಂ ನಿಷ್ಕಲಮಂತಕಾಂತಂ

ಮುತ್ತಿನ ಚಿಪ್ಪನ್ನು ಕಂಡು – ಅಜ್ಞಾನದಿಂದ ಅದನ್ನು”ಬೆಳ್ಳಿ”ಯೆಂದು ಮನುಷ್ಯರು ಭ್ರಮೆ ಹೊಂದುವರು.ಅವರಂತೆಯೇ, ಸಕಲಶರೀರಗಳಲ್ಲಿ ವ್ಯಾಪಿಸಿರುವ ಪರಮಾತ್ಮ ಚೈತನ್ಯವನ್ನು – ಜೀವಾತ್ಮನೆಂದು ವ್ಯವಹರಿಸುವರು. ಮುತ್ತಿನ ಚಿಪ್ಪಿನಲ್ಲಿದ್ದ ಸ್ವಧರ್ಮವು ಮಾಯೆಯಿಂದ ಅಡಗಿಸಲ್ಪಟ್ಟು, ಅನ್ಯವಾಗಿರುವ ಬೆಳ್ಳಿಯ ಧರ್ಮವು ಅದರಲ್ಲಿ ಆರೋಪಿಸಲ್ಪಟ್ಟಿದೆ. ಹಾಗೆಯೇ, ಪರಮಾತ್ಮ ಚೈತನ್ಯದಲ್ಲಿರುವ – ಶುದ್ಧ, ಬುದ್ಧ, ಸಚ್ಚಿದಾನಂದತ್ವಾದಿ ಧರ್ಮಗಳು ಮಾಯೆಯಿಂದ ಅಡಗಿಸಲ್ಪಟ್ಟು, ಅಶುದ್ಧ, ಅಬುದ್ಧ, ಸಚ್ಚಿದಾನಂದ ಭಿನ್ನತ್ವಾದಿ ಕರ್ಮಗಳು ಆರೋಪಿಸಲ್ಪಟ್ಟಿರುವುವು ಎಂದರ್ಥ. ಹೀಗೆ ಜೀವಾತ್ಮದೆಸೆಯಲ್ಲಿ “ಕ್ಷೇತ್ರಜ್ಞ”ನೆಂದು ಕರೆಯಲ್ಪಡುವ, ಚಂದ್ರನಂತೆ ಪ್ರಕಾಶಿಸುತ್ತಿರುವ, ಮಾಯಾತೀತನಾದ, ಕಾಲಾತೀತನಾದ, ಆ ಪರಮಾತ್ಮನನ್ನು ನಾನು ಚಿಂತನೆಮಾಡುವೆನು.

ವಸ್ವಸ್ರಪದ್ಮಸ್ಥಿತಮಾಗಮಾಂತ

ಪ್ರಬೋಧ್ಯಮಾನಂ ಪುರುಷಂ ಪುರಾಣಂ

ಹೃದಾ ಮನೀಷಾ ಪ್ರತಿಬುಧ್ಯಮಾನಂ

ಗೃಣಾಮಿ ತಂ ಬ್ರಹ್ಮಪರಂ ವರೇಣ್ಯಂ೧೦

ಉಪಾಸಕರು ತಮ್ಮ ಹೃದಯವೆಂಬ ಎಂಟು ದಳಗಳುಳ್ಳ ಕಮಲಾಸನದಲ್ಲಿ ಧ್ಯಾನಮಾಡಿದಾಗ, ಅಲ್ಲಿ ಪುರುಷಾಕಾರದಿಂದ ಗೋಚರವಾಗುವ, ಪ್ರತಿಯೊಂದು ಶಾಸ್ತ್ರದಲ್ಲಿ ಸಿದ್ಧಾಂತವಾಗಿ ನಿರೂಪಿಸಲ್ಪಟ್ಟ, ಅನಾದಿವಸ್ತುವಾದ, ಧ್ಯಾನಮಾಡಿದಾಗ ಹೃದಯದಲ್ಲಿ ಜ್ಞಾನರೂಪದಿಂದ ಗೋಚರವಾಗುವ, ಲೋಕೋತ್ತರವೆನಿಸಿದ ಪರಬ್ರಹ್ಮವಸ್ತುವನ್ನು ನಾನು ಧ್ಯಾನಮಾಡುವೆನು.

ಪ್ರಜ್ಞಾನಮೂರ್ತಿಂ ಪರಮಂ ಪವಿತ್ರಂ

ಸ್ವಯಂಪ್ರಕಾಶಂ ಯತಿಸನ್ನಿವಿಷ್ಟಂ

ಸದೇವ ಸೌಮ್ಯೇದಮಿತಿಪ್ರಣೀತಂ

ಸಂಚಿಂತ್ಯಮಾನಂ ಮುನಿಭಿರ್ನಮಾಮಿ೧೧

ಪ್ರಕೃಷ್ಟವಾದ ಜ್ಞಾನಮಯವಾಗಿಯೂ, ಅತ್ಯಂತಪಾವನವಾಗಿಯು, ಇತರ ತೇಜಸ್ಸುಗಳ ಹಂಗಿಲ್ಲದೆ ತನ್ನನ್ನು ತಾನೇ ಪ್ರಕಾಶಿಸುತ್ತಿರುವದಾಗಿಯು, ಜಿತೇಂದ್ರಿಯರಾದ ಮುನಿಗಳ ಹೃದಯದಲ್ಲಿ ಸನ್ನಿಹಿತವಾಗಿಯೂ, ಉಪನಿಷತ್ತಿನಲ್ಲಿ – ” ಈ ಬ್ರಹ್ಮವಸ್ತುವು ಮಾತ್ರ ಆದಿಯಲ್ಲಿತ್ತು” ಇತ್ಯಾದಿ ರೀತಿಯಿಂದ ವರ್ಣಿಸಲ್ಪಟ್ಟದ್ದಾಗಿಯೂ, ಮುನಿಗಳು ಧ್ಯಾನಮಾಡುವಂತಹುದಾಗಿಯೂ, ಇರುವ ಪರಮಾತ್ಮ ಚೈತನ್ಯವನ್ನು ನಮಸ್ಕರಿಸುವೆನು.

ಷಡ್ಭಿಃ ಪ್ರಮಣೈಃ ಪರಿಕೀರ್ತ್ಯಮಾನಂ

ಷಟ್ಚಕ್ರಮಧ್ಯಸ್ಥಿತಿಮಾಶ್ರಯಂತಂ

ಷಡ್ಭಾವಶೂನ್ಯಂ ಶರಣಂ ಪ್ರಪದ್ಯೇ

ಷಡಂಗವೇದೈರವಿಮೃಶ್ಯಮಾಣಂ೧೨

ಪ್ರತ್ಯಕ್ಷ-ಅನುಮಾನ-ಉಪಮಾನ-ಆಗಮ-ಅರ್ಥಾಪತ್ತಿ-ಅನುಪಲಬ್ಧಿಗಳೆಂಬ ಆರು ಪ್ರಮಾಣಗಳಿಂದ ನಿರೂಪಸಲ್ಪಡುವ,ಮೂಲಾಧಾರ-ಸ್ವಾಧಿಷ್ಟಾನ-ಮಣಿಪೂರ-ಅನಾಹತ-ವಿಶುದ್ಧಿ-ಆಜ್ಞಾ- ಎಂಬ ಅಕ್ಷರಮಯಗಳಾದ- ಭಾವನಾತ್ಮಕಗಳಾದ ದೇಹಾಂತರ್ಗತಗಳಾದ, ಆರುಚಕ್ರಗಳಲ್ಲಿ-ಯೋಗಿಗಳಿಂದ ಧ್ಯಾನಿಸಲ್ಪಡುವ,ಹುಟ್ಟುವಿಕೆ, ಇರುವಿಕೆ-ವೃದ್ದಿಹೊಂದುವಿಕೆ-ಕ್ಷೀಣಿಸುವಿಕೆ-ರೂಪಾಂತರ ಹೊಂದುವಿಕೆ, ಮರಣಹೊಂದುವಿಕೆಗಳೆಂಬ ಆರು ತೆರನಾದ ಭಾವವಿಕಾರಗಳಿಲ್ಲದ, ಋಗ್ವೇದ -ಯಜುರ್ವೇದ-ಸಾಮವೇದ-ಅಥರ್ವವೇದ-ಶಿಕ್ಷಾ-ವ್ಯಾಕರಣ-ಛಂದಸ್ಸು-ನಿರುಕ್ತ-ಜ್ಯೋತಿಷ-ಕಲ್ಪಸೂತ್ರಗಳೆಂಬ ಈ ಹತ್ತು ಗ್ರಂಥಗಳು, ಕೇವಲ ಕರ್ಮಕಾಂಡಕ್ಕೆ ಸಂಬಂಧಪಟ್ಟವುಗಳಾದುದರಿಂದ,ಅವುಗಳ ವಿಮರ್ಶೆಗೆ ಒಳಗಾಗದ, ಪರಮಾತ್ಮ ತತ್ವವನ್ನು ಶರಣಾಗತನಾಗುವೆನು.

ಕರ್ಮಣಾ ಪ್ರಜಯೇತಿ ವೇದಾ

ಯತ್ಪ್ರಾಪ್ತಯೇ ತ್ಯಾಗಮನನ್ಯಬೋಧಂ

ಗೃಣಂತಿ ಮೂರ್ಧ್ನಾಹಿತಪಾದಮೇಕಂ

ಸಂಭಾವಯೇ ಸಂಭೃತಯೋಗವೃಂದಂ೧೩

“ಕರ್ಮದಿಂದಾಗಲಿ-ಸಂತತಿಯಿಂದಾಗಲಿ-ಪರಮಾತ್ಮ ತತ್ವವನ್ನು ಕಾಣಲು ಸಾಧ್ಯವಿಲ್ಲ.! ಸರ್ವಸಂಗತ್ಯಾಗ ರೂಪವಾದ ಸನ್ಯಾಸದಿಂದ ಮಾತ್ರ ಕಾಣಲು ಸಾಧ್ಯ” ಎಂದು ಉಪನಿಷತ್ತುಗಳು ಸಾರುತ್ತಿವೆ. ಆದುದರಿಂದ ಆ ಸನ್ಯಾಸ ಹೊರತು ಇತರ ಮಾರ್ಗಗಳಿಂದ ಕಾಣಲು(ಪಡೆಯಲು) ಸಾಧ್ಯವಾಗದ,ಕರ್ಮಯೋಗ-ಜ್ಞಾನಯೋಗ-ಭಕ್ತಿಯೋಗಗಳೆಂಬ ನಾಲ್ಕು ಸಾಧನಗಳ ಮೂಲಕ ಲಭ್ಯವಾಗತಕ್ಕ, ಆ ಮುಖ್ಯವಾದ, ಪರಮಾತ್ಮ ತತ್ವವನ್ನು, ನಾನು ಪ್ರಣಾಮಪೂರ್ವಕವಾಗಿ ಧ್ಯಾನಿಸುವೆನು.

ಯದಪ್ರಬೋಧಾದಿದಮಃಪ್ರತಿಷ್ಠಾ

ಯದ್ಬೋಧತೋ ಯಾತಿ ಲಯಂ ಪ್ರದೃಶ್ಯಂ

ಯದ್ಭಾವಭೂತಾ ಯತಯೋ ವಿಶಂತಿ

ಸ್ವಾತ್ಮಾನಮೇಕಂ ಶರಣಂ ಪ್ರಪದ್ಯೇ೧೪

ಯಾವ ಪರಮಾತ್ಮ ತತ್ವದ ಅನುಭವ ಬಾರದಿದ್ದುದರಿಂದ ಈ ಮಿಥ್ಯಾ ಪ್ರಪಂಚವು ಸತ್ಯವೆಂದು ನಮಗೆ ತೋರುವುದೋ, ಯಾವ ಪರಮಾತ್ಮ ತತ್ವದ ಅನುಭವ ಬಂದೊಡನೆಯೇ ಈ ಪ್ರಪಂಚವು ನಮ್ಮ ಜ್ಞಾನದೃಷ್ಟಿಗೆ ಗೋಚರವಾಗದೆ ಲಯವಾಗಿಬಿಡುವುದೋ, ಯಾವ ಪರಮಾತ್ಮ ತತ್ವವನ್ನು ಎಡೆಬಿಡದೆ ಧ್ಯಾನಿಸಿ ಯೋಗಿಗಳು ಈ ದೇಹಾಭಿಮಾನವನ್ನು ಬಿಟ್ಟು, ಅದರಲ್ಲಿ ಲಯಹೊಂದುವರೋ, ಅಂತಹ ಸಕಲರ ಆತ್ಮವೆನಿಸಿದ ಪರಮಾತ್ಮ ತತ್ವವನ್ನು ಶರಣಾಗತನಾಗುವೆನು.

ಬ್ರಹ್ಮಾಣಮೀಶಂ ಗರುಡಧ್ವಜಂ ತ್ವಂ

ಬಲಾರಿಮರ್ಕಂ ಗಣಪಂ ಸುಶಕ್ತಿಂ

ಆಹುಸ್ತಥಾನೇಕವಿಧಂ ವಿಮೂಢಾ

ಯಮೇವ ದೇವಂ ಸತತಂ ನಮಾಮಿ೧೫

ನಿತ್ಯಾನಂದ ಮೂರ್ತಿಯಾದ ಪರಮಾತ್ಮ ತತ್ವವನ್ನು ಮೂಢ ಜನರು ಬ್ರಹ್ಮನೆಂತಲೂ, ಶಿವನೆಂತಲೂ,ವಿಷ್ಣುವೆಂತಲೂ,ಇಂದ್ರನೆಂತಲೂ,ಸೂರ್ಯನೆಂತಲೂ,ಗಣನಾಥನೆಂತಲೂ,ದುರ್ಗೆ ಎಂತಲೂ,ಇನ್ನೂ ಅನೇಕ ವಿಧವಾದ ದೇವತೆಗಳೆಂತಲೂ ಹೇಳುತ್ತಿರುವರೋ, ಅಂತಹ ಪರಮಾತ್ಮ ತತ್ವವನ್ನು ನಿರಂತರವೂ ನಮಸ್ಕರಿಸುವೆನು.

ಚಿದಾತ್ಮರೂಪಂ ಕಲಮಾಗ್ರಬುದ್ಧಿ

ಪ್ರಕಾಶ್ಯಮಾನಂ ಪ್ರಥಿತಪ್ರಕಾಶಂ

ಸಂಪ್ರಾರ್ಥಯೇ ನಿತ್ಯಮನನ್ಯಚೇತಾಃ

ಪ್ರಸೀದತಾಮಜ್ಞಕೃತಿಂ ವಿಲೋಕ್ಯಂ೧೬

ಜ್ಞಾನರೂಪಿಯಾದ, ಕಲಮಾಗ್ರದಂತೆ ಸೂಕ್ಷವಾದ ಬುದ್ಧಿಯುಳ್ಳ ಮಹಾತ್ಮರಿಗೆ ಮಾತ್ರ ಗೋಚರಿಸುವ, ಸೂರ್ಯಾದಿಗಳ ತೇಜಸ್ಸಿಗಿಂತಲೂ ಮಿಕ್ಕಿದ ಪ್ರಕಾಶವುಳ್ಳ, ಆ ಪರಮಾತ್ಮ ತತ್ವವನ್ನು ನಾನು ನಿತ್ಯವೂ ಏಕಾಗ್ರತೆಯಿಂದ ಪ್ರಾರ್ಥಿಸುತ್ತಿರುವೆನು. ಮೂಢನಾದ ನನ್ನೀ ಕೃತಿಯನ್ನು ಕಂಡು ಆ ಪರಮಾತ್ಮ ತತ್ವವು ನನಗೆ ಅನುಗ್ರಹಿಸಲಿ.

ಗಾಧೇಯಗೋತ್ರೋದ್ಭವಕೃಷ್ಣಶರ್ಮಾ

ಪ್ರಾಸೂತ ಸೂನುಂ ದ್ವಿಜಶಂಕರಾಖ್ಯಂ

ತೇನಾತ್ಮಬುದ್ಧಿಪ್ರತಿಭಾಪ್ರಣೀತಾ

ಜೇಜೀಯತಾಂ ಸತ್ಕೃತಿಮಂಜರೀಯಂ೧೭

ವಿಶ್ವಾಮಿತ್ರ ಗೋತ್ರೋತ್ಪನ್ನರಾದ ಕೃಷ್ಣ ಎಂಬವರ ಮಗನಾದ ಶಂಕರನೆಂಬ ನಾನು “ಈ ಸತ್ಕೃತಿಮಂಜರಿ” ಎಂಬ ಸ್ತೋತ್ರವನ್ನು, ಸ್ವಬುದ್ಧಿಯಲ್ಲಿ ಹೊಳೆದ ಪ್ರತಿಭಾಶಕ್ತಿಯಿಂದ ರಚಿಸಿರುವೆನು. ಇದು ಸರ್ವತ್ರ ಉತ್ಕೃಷ್ಟವಾಗಿ ಬೆಳಗಲಿ.

ಸಮಾಪ್ತಿ.

~*~*~

4 thoughts on “ತೆಕ್ಕುಂಜ ಶಂಕರ ಭಟ್ಟ ವಿರಚಿತ “ಶ್ರೀ ಸತ್ಕೃತಿ ಮಂಜರೀ” – ಉತ್ತರಾರ್ಧ

  1. ಅದ್ಭುತ. ಇದರ ಪರಿಚಯಿಸಿದ ಕುಮಾರ ಮಾವಂಗೆ ಧನ್ಯವಾದ.

  2. ತೆಕ್ಕುಂಜ ಅಜ್ಜಂಗೆ ನಮೋ ನಮಃ
    ಹಾಂಗೇ ಇಷ್ಟೊಂದು ತತ್ವ ಅಡಕ ಅಗಿಪ್ಪ ಈ ಸ್ತೋತ್ರಂಗಳ ಒದಗಿಸಿ ಕೊಟ್ಟ ಕುಮಾರಣ್ಣಂಗೆ ಧನ್ಯವಾದಂಗೊ.

    ಸಂಸ್ಕೃತ ಸ್ತೋತ್ರವ ಅರ್ಥ ಮಾಡುವಷ್ಟು ಪರಿಣಿತರಲ್ಲದ್ದವಕ್ಕೆ ಕನ್ನಡ ಅರ್ಥ ಸಹಿತ ಕೊಟ್ಟದು ಲಾಯಿಕ ಆತು.
    [ಸಕಲರ ಆತ್ಮವೆನಿಸಿದ ಪರಮಾತ್ಮ ತತ್ವವನ್ನು ಶರಣಾಗತನಾಗುವೆನು.] ಮನಸ್ಸಿಂಗೆ ತುಂಬಾ ಹಿತ ಆತು.
    ಕೆಲವೊಂದು ಮಾಹಿತಿಗೊ ಸಿಕ್ಕಿತ್ತು:
    ಪ್ರತ್ಯಕ್ಷ-ಅನುಮಾನ-ಉಪಮಾನ-ಆಗಮ-ಅರ್ಥಾಪತ್ತಿ-ಅನುಪಲಬ್ಧಿಗಳೆಂಬ ಆರು ಪ್ರಮಾಣಂಗೊ,
    ಮೂಲಾಧಾರ-ಸ್ವಾಧಿಷ್ಟಾನ-ಮಣಿಪೂರ-ಅನಾಹತ-ವಿಶುದ್ಧಿ-ಆಜ್ಞಾ- ಆರುಚಕ್ರಂಗೊ,
    ಹುಟ್ಟುವಿಕೆ, ಇರುವಿಕೆ-ವೃದ್ದಿಹೊಂದುವಿಕೆ-ಕ್ಷೀಣಿಸುವಿಕೆ-ರೂಪಾಂತರ ಹೊಂದುವಿಕೆ, ಮರಣಹೊಂದುವಿಕೆಗಳೆಂಬ ಆರು ತೆರನಾದ ಭಾವವಿಕಾರಂಗೊ,
    ಋಗ್ವೇದ -ಯಜುರ್ವೇದ-ಸಾಮವೇದ-ಅಥರ್ವವೇದ-ಶಿಕ್ಷಾ-ವ್ಯಾಕರಣ-ಛಂದಸ್ಸು-ನಿರುಕ್ತ-ಜ್ಯೋತಿಷ-ಕಲ್ಪಸೂತ್ರಗಳೆಂಬ ಈ ಹತ್ತು ಗ್ರಂಥಂಗೊ.
    **

  3. ತೆಕ್ಕುಂಜ ಶಂಕರಜ್ಜಂಗೆ ಇಲ್ಲಿಂದಲೇ ಸಾಷ್ಟಾಂಗ ನಮಸ್ಕಾರ. ಅದ್ಭುತ ವಿದ್ವತ್.
    ಅಜ್ಜನ ಬೈಲಿಂಗೆ ಕರಕ್ಕೊಂಡು ಬಂದ ಕುಮಾರ ಮಾವಂಗೆ ಧನ್ಯವಾದ ಹೇಳುತ್ತು -‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×