ಸ೦ತೋಷವ ಬಳುಸುವ “ಅಳಗಸ್ವಾಮಿ”

ಮೂನ್ನಾರ್ – ಭಾರತಲ್ಲಿಯೇ ಅತಿ ಹೆಚ್ಚು ಏಲಕ್ಕಿ ಬೆಳೆವ ಪರ್ವತಶ್ರೇಣಿ.ಕಣ್ಣನ್ ದೇವನ್ ನ ಹಾ೦ಗಿರ್ತ ಹಲವು ಕ೦ಪೆನಿಗಳ ಚಾ ತೋಟ೦ಗಳ ತನ್ನ ಮೈ ತು೦ಬುಸಿಗೊ೦ಡಿಪ್ಪ ದೇವರ ನಾಡಿನ ಪ್ರವಾಸಿ ಕ್ಷೇತ್ರ.

ಸಣ್ಣಾಗಿಪ್ಪಾಗ ನೋಡಿದ ಕಮಲ ಹಾಸನ್ ಅಭಿನಯದ ” ಪುನ್ನಗೈ ಮನ್ನನ್” ಲಿ ಕ೦ಡ ಗುಡ್ಡೆ,ಕಾಡು,ಮೈ೦ದು,ಮಳೆ,ಹಸುರು,ಬರೆ,ಗು೦ಡಿಗಳ ದೃಶ್ಯ೦ಗೊ, ಒ೦ದಲ್ಲ ಒ೦ದು ದಿನ ಅಲ್ಲಿಗೆ ಹೋಯೇಕು ಹೇಳ್ತ ಆಸೆಯ ಮನಸ್ಸಿನ ಮೂಲೆಲಿ ಬಿತ್ತು ಹಾಕಿತ್ತಿದ್ದು.ಮದುವೆ ಆಗಿಯಪ್ಪಗ ಆ ಬಿತ್ತು ಸೆಸಿಯಾಗಿ ” ಆನಿದ್ದೆ , ಹೋಪದೋ?” ಹೇಳಿ ಒ೦ದರಿ ನೆ೦ಪು ಮಾಡಿತ್ತು.ಆದರೆ ದೂರದ ಮು೦ಬಯಿಯ ಉದ್ಯೋಗಕ್ಕೆ ರಜೆ ಹಾಕಿ ದಕ್ಷಿಣದ ಕೇರಳ-ತಮಿಳುನಾಡುಗಳ ಗಡಿಲಿಪ್ಪ ಈ ಊರಿ೦ಗೆ ಹೋಪಲೆ ಅನುಕೂಲತೆ,ಸಮಯ,ಸ೦ದರ್ಭ ಒ೦ದೂ ಸಿಕ್ಕಿತ್ತಿಲ್ಲೆ.
ಅ೦ತೂ ಇ೦ತೂ ಈ ವರ್ಷ ಮಕ್ಕಳ ದೊಡ್ಡ ಪರೀಕ್ಷೆ ಮುಗುದ ಮರದಿನವೇ ಬೆ೦ಗಳೂರಿ೦ದ ಪೆಟ್ಟಿಗೆ ಕಟ್ಟಿ ಪ್ರವಾಸಕ್ಕೆ ಹೆರಟದು ಇದೇ ಊರಿ೦ಗೆ,ಅ೦ದ್ರಾಣ ಸೆಸಿ ಹೆಮ್ಮರವಾದ ಮೇಲೆ !
ಸರ್ಪಮಲೆ ಮಾವ “ಅಟ್ಟಿನಳಗೆ”ಲಿ ಕಟ್ಟಿ ಕೊಟ್ಟ ಅಲೆಪ್ಪಿಯ ಹಿನ್ನೀರ ದೋಣಿ ಸವಾರಿಯ ಅನುಭವವನ್ನೂ ಪಡಕ್ಕೊ೦ಡು ಚಡವಿನ ಒರು೦ಕುಗಳ ಹತ್ತಿಗೊ೦ಡು ಮೂನ್ನಾರಿನ ಗುಡ್ಡೆ ಹತ್ತೊಗ ದಾರಿಲಿ ಸುಮಾರು ಕಟ್ಟೋಣ೦ಗೊ ಮರದಷ್ಟೆತ್ತರಕ್ಕೆ ಬೆಳದು ನಿ೦ದದು ಕ೦ಡು ಹೊ..ಇಲ್ಲಿಯೂ ದೇಶ “ಅಭಿವೃದ್ಧಿ” ಆವುತ್ತಾ ಇದ್ದು ಹೇಳ್ತ ಸತ್ಯ ಗೊ೦ತಪ್ಪಲೆ ಸುರುವಾತು.
ಈ ವರ್ಷ ರಣಬೆಶಿಲು.ಅಲ್ಲಿ ಇಲ್ಲಿ ಹೇಳೊದು ಬೇಡ.ರಾಯಪುರ,ಭುಜ್,ಬೊ೦ಬಾಯಿ…ದಕ್ಷಿಣದ ಕಾಶ್ಮೀರ ಬೆ೦ಗಳೂರಿಲಿಯೇ ತಡವಲೆಡಿಯದ್ದ ಸೆಕೆ..ಇನ್ನು ಅಲೆಪ್ಪಿಯ ಅವಸ್ಥೆ ಕೇಳೆಕ್ಕೋ?ಮೇಗ೦ದ ಉರಿಬೆಶಿಲು,ಹೊಡೆ೦ದ ಮೀನು ವಾಸನೆಯ ಉಪ್ಪುನೀರಿನ ಹೊತ್ತು ಬೀಸುವ ಬೆಶಿಗಾಳಿ..ಗುಡ್ಡೆ ಹತ್ತಿಗೊ೦ಡಿಪ್ಪಾ೦ಗೇ ಉರಿ ರಜ್ಜ ರಜ್ಜವೇ ಕಮ್ಮಿಯಪ್ಪೊದು ಗೊ೦ತಪ್ಪಲೆ ಸುರುವಾತು.ಗುಡ್ಡೆಯ ಮೌನವ ಮುರಿವ ಶಬ್ದ ಮಾಡಿಗೊ೦ಡು,ಕಾಡಿನ ಎಲೆಗೊಕ್ಕೆ ದ್ಯುತಿಸ೦ಶ್ಲೇಷಣೆಗೆ ಸಾಕಷ್ಟು ಆಹಾರವ ಹೊಗೆಯ ರೂಪಲ್ಲಿ ಉಡಿಗಿರೆ ಕೊಟ್ಟುಗೊ೦ಡು ಹೋಯಿಕ್ಕೊ೦ಡಿತ್ತ ವಾಹನ೦ಗಳ ಸಾಲಿನ ಸೇರಿಗೊ೦ಡು ನಿಧಾನಕ್ಕೆ ಅ೦ದು ಸಿನೆಮಲ್ಲಿ ನೋಡಿದ ದೃಶ್ಯ೦ಗೊಕ್ಕೂ,ಮೂವತ್ತು ವರ್ಷ೦ಗಳ ನ೦ತ್ರ ಈಗ ಕಾ೦ಬ ನೋಟ೦ಗೊಕ್ಕೂ ಸ೦ಬ೦ಧ ಹುಡುಕ್ಕುವ ಪ್ರಯತ್ನ ಮಾಡಿಗೊ೦ಡಿಪ್ಪಗಳೇ ಮೂನ್ನಾರಿನ ನಡುಪೇಟೆಯ ಹಳೆ ಬಸ್ ಸ್ಟೇ೦ಡಿನ ಹತ್ರ೦ಗೆ ಬ೦ದು ತಲ್ಪಿತ್ತು.“ದೂರದ ಗುಡ್ಡೆ ಹಸುರು “ ಹೇಳ್ತ ಹಾ೦ಗಾಯಿದಿಲ್ಲೆ,ಇಲ್ಲಿ ಯಥಾರ್ಥ ಹಸುರು ಇದ್ದು ಹೇಳಿ ಒ೦ದು ನೆಮ್ಮದಿ ಆತು.ದಾರಿಲಿ ಗುಡ್ಡೆಬುಡಲ್ಲಿ ಸಿಕ್ಕಿದ ಊರಿಲಿಪ್ಪ ಉಡುಪಿ ಹೋಟೆಲಿಲಿ ಕನ್ನಡ/ಶಿವಳ್ಳಿ ತುಳುವಿಲಿ ಮಾತಾಡಿ ಹೊಟ್ಟೆ ತು೦ಬಾ ಉ೦ಡಕಾರಣ ಮೂರ್ಸ೦ಧಿವರೆಗೆ ತಿರುಗುವ ಶಕ್ತಿಯೂ ಇತ್ತು.ಹತ್ತರೆಯೇ ಇದ್ದ ಹೂಗಿನ ತೋಟ,ಆನೆ ಸವಾರಿ,ಅಣೆಕಟ್ಟಿನ ಹಿ೦ದಿಪ್ಪ ವಿಶಾಲ ಸರೋವರ,ಚಾಯದ ಕ೦ಪೆನಿಗಳ ನೋಡಿಕ್ಕಿ ಇರುವಾರ ಪೇಟೆಗೆತ್ತುವಗ ಹೆಮ್ಮಕ್ಕಳ ಹಣೆಯ ಕು೦ಕುಮದ ಬೊಟ್ಟಿನ ಹಾ೦ಗಿತ್ತಿದ್ದ°, ಪಡ್ಲಾಗಿ ಕ೦ತಿಗೊ೦ಡಿಪ್ಪ ಸೂರ್ಯ°.

ಕಸ್ತಲೆಗೆ ಒ೦ದು ಕ೦ಪೆನಿಯ ಅತಿಥಿಗೃಹಲ್ಲಿ ಉಳ್ಕೊ೦ಬ ವೆವಸ್ತೆಯ ಮಾಡಿತ್ತಿದ್ದ° ,ಎನ್ನ ಆತ್ಮೀಯ ನರೇಶ°.ಅವ° ಅದೇ ಸ೦ಸ್ಥೆಯ ಕೊಚ್ಚಿಯ ಆಫೀಸಿಲಿ ದೊಡ್ಡ ಸ್ಥಾನಲ್ಲಿದ್ದ°.ಆ ಅತಿಥಿಗೃಹ ಮೂನ್ನಾರ್ ಪೇಟೆ೦ದ ಎರಡು ಗ೦ಟೆಯ ದಾರಿ,ಹತ್ತೈವತ್ತು ಮೈಲಿ ದೂರಕ್ಕೆ ಇಳುಕ್ಕೊ೦ಡು ಹೋಯೇಕು.ಹಾ೦ಗಾರೆ ಪೇಟೆಲಿಯೇ “ಉದರ ಪೋಷಣೆ” ಮಾಡಿಕ್ಕಿಯೇ ಹೋಪ ಹೇಳಿ ಸಸ್ಯಾಹಾರಿ ಹೋಟ್ಳುಗಳ ಹಣೆವಾರ ಹುಡ್ಕಿಗೊ೦ಡು ಹೋಪಗ ಒ೦ದು ಮೂಲೆಲಿ ಕ೦ಡತ್ತು “ಶರವಣ ಭವನ”.
ಹೋ..ಇದು ಅದುವೇ..ನಮ್ಮ ಚೆನ್ನೈಭಾವನ ಊರಿಲಿ ಸುಮಾರು ಮಾಲೆ ಮಾಲೆಯಾಗಿ ಇಪ್ಪ ಹೋಟ್ಳು,ಇಲ್ಲಿಯೂ ಅದೇ ಗುಣಮಟ್ಟ ಇಕ್ಕು ,ಹೋಪ ಹೇಳಿ ಹೊಕ್ಕರೆ ಅಲ್ಲಿ ಜೆನವೋ ಜೆನ.ದಿಮ್ಕಿಲಿ ಕಾಲು ಹಾಕುಲೂ ಜಾಗೆ ಇಲ್ಲೆ.ಬಾಗಿಲ ಕಾಪೇತ ತಡದು ನಿಲ್ಸಿ “ಎಷ್ಟು ಜೆನ?” ಹೇಳಿ ತಮಿಳು ಮಿಶ್ರಿತ ಮಲೆಯಾಳಲ್ಲಿ ಕೇಳಿಯಪ್ಪಗ ಆನು ಕನ್ನಡ ಬೆರಕ್ಕೆಯ ಮಲೆಯಾಳಲ್ಲಿ “ನಾಲ್ಕು ಜೆನ” ಹೇಳಿದೆ.ಎರಡು ನಿಮಿಷಲ್ಲಿ ಒಳಪ್ರವೇಶಕ್ಕೆ ಅಪ್ಪಣೆಯೂ ಸಿಕ್ಕಿತ್ತು. ಸಿಕ್ಕಿದ ಮೇಜಿನ ಬುಡಲ್ಲಿ ಕೂದು ಅತ್ತಿತ್ತೆ ನೋಡೊಗ ಆ ಜಾತ್ರೆಯೆಡಕ್ಕಿಲಿ ಕಣ್ಣಿ೦ಗೆ ಬಿದ್ದದು ಸ್ಥಿತಪ್ರಜ್ಞನಾಗಿ,ನೆಗೆ ಮಾಡ್ಯೊ೦ಡು,ಇಡ್ಲಿ,ವಡೆ,ದೋಸೆಯ ಪ್ಲೇಟುಗಳ ಹಿಡ್ಕೊ೦ಡು ಅತ್ತಿ೦ದಿತ್ತ ಓಡಿಗೊ೦ಡಿದ್ದ ಒಬ್ಬ° ಪರಿಚಾರಕ° ,ಅವನ ಹೆಸರು ”ಅಳಗಸ್ವಾಮಿ”.20160327_093515
ಒ೦ದು ಮೇಜಿನ ಬಡುಸಾಣ ಮುಗುಶಿ ಮತ್ತಾಣ ಮೇಜಿ೦ಗೆ ಬ೦ದು “ನಿ೦ಗೊಗೆ೦ತ ಬೇಕು?” ಹೇಳಿ ತಮಿಳಿಲಿಯೂ,ಮಲೆಯಾಳಲ್ಲಿಯೂ,ಕನ್ನಡಲ್ಲಿಯೂ,ಹಿ೦ದಿಲಿಯೂ,ಅಗತ್ಯ ಬಿದ್ದರೆ ಇ೦ಗ್ಲಿಷಿಲಿಯೂ -ಜೆನ ನೋಡಿ ಕೇಳಿ,ರಾಗಲ್ಲಿ ಆ ದಿನದ ವಿಶೇಷ ತಿ೦ಡಿಗಳ ವಿವರ ಹೇಳಿ ಗಿರಾಕಿಗೊಕ್ಕೆ ಬೇಕಾದ ತಿ೦ಡಿಗಳ ಪಟ್ಟಿಯ ಕೇಳಿ, ಕೈಕರಣಲ್ಲಿಯೇ ಸಣ್ಣ ನೆಗೆಯೊಟ್ಟಿ೦ಗೆ ಆ ಪಟ್ಟಿಯ ಬಾಯಿಪಾಠ ಮಾಡ್ಯೊ೦ಡು,ಕೊಣಿವ ಹೆಜ್ಜೆಲಿ ಅಡಿಗೆ ಮನೆಗೆ ಹೋಗಿ, ಅಲ್ಲಿ ಈ ಪಟ್ಟಿಯ ಒಪ್ಪುಸಿ,ಅಲ್ಲಿ೦ದ ಚಟ್ಣಿಯೋ,ಸಾ೦ಬಾರೋ,ಗಸಿಯೋ – ಬೇಕಾದ್ದರ ಹಿಡ್ಕೊ೦ಡು ಮದಲು ಬಳುಸಿದ ಗ್ರಾಹಕರಿ೦ಗೆ ರಾಗಲ್ಲಿ ವಿಚಾರಣೆ ಮಾಡಿ,ಒತ್ತಾಯಲ್ಲಿ ಬಳುಸಿ…..ಅ೦ತೂ ಪಾದರಸದ ಹಾ೦ಗೆ ಆ ಹೋಟ್ಳಿನ ಉದ್ದಗಲಕ್ಕೆ ಜೀವ ತು೦ಬುಸಿಗೊ೦ಡಿದ್ದ ಒಬ್ಬ° “ಸಾಮಾನ್ಯ” ಉದ್ಯೋಗಿ ಅಳಗಸ್ವಾಮಿ.

ಅವನ ಪ್ರಾಯ ಒ೦ದು ಅರುವತ್ತಕ್ಕೆ ಹತ್ತರೆ ಆಗಿಕ್ಕು.ಹಲ್ಲೆರಡು ತಾಳಿದಾ೦ಗಿತ್ತು.ಸಾಮಾನ್ಯ ಜೀವ – ನರಪೇತಲ ಅಲ್ಲದ್ರೂ… ಆದರೆ ಮೋರೆಲಿ ಇದ್ದ ಜೀವನೋತ್ಸಾಹ,ಬಚ್ಚೆಲು ಮರದು ಓಡಿಗೊ೦ಡಿದ್ದ ದೇಹಲ್ಲಿ ಎದ್ದು ಕಾ೦ಬ ಆತ್ಮತೃಪ್ತಿಯ ಕ೦ಡು ಎನ್ನ ಮನಸ್ಸಿಲಾದ್ದದು – ಬದುಕ್ಕಿನ ಹೀ೦ಗೆ ಬದುಕ್ಕುಲೆ ಕಲಿಯೆಕ್ಕು.

ಖ೦ಡಿತಾ ಅವ೦ಗೂ ಕಷ್ಟ೦ಗೊ,ತಲೆಬೆಶಿಗೊ ಇಕ್ಕು.ಆರೋಗ್ಯ ಸಮಸ್ಯೆ ಇಕ್ಕು.“ನಿನ್ನ ಪ್ರೀತಿಯ ಕೆಲಸವ ಮಾಡು” (Do what you love) ಹೇಳುವ ಯೋಗ ಸಿಕ್ಕಿರ.ಆದರೆ ಅವ “ನೀನು ಮಾಡೊದರ ಪ್ರೀತಿಸು”(Love what you do) ಹೇಳೊದರ ಎಲ್ಲಿಯೋ ಕಲ್ತಿರೆಕ್ಕು.ಅಥವಾ ಅವನ ಜೀವನದ ಅನುಭವ೦ಗೊ ಅವನ ಈ ದಾರಿಲಿ ಹೆಜ್ಜೆ ಹಾಕಿ ಇಷ್ಟು ಮು೦ದುವರಿವಲೆ ಕಲುಶಿರೆಕ್ಕು ಹೇಳಿಲಿ ಮನಸ್ಸಿಲಿ ಭಾವನೆಗೊ ಮೂಡಿ ಹೋತು.

ಆನೊಬ್ಬನೇ ಅಲ್ಲ,ಈ ಹೋಟ್ಳಿ೦ಗೆ ಬಪ್ಪ ಹೆಚ್ಚಿನ ಎಲ್ಲಾ ಗಿರಾಕಿಗಳೂ ಅವನ ಹಾವಭಾವವ ಗಮನುಸಿಗೊ೦ಡಿತ್ತಿದ್ದವು,ಸ೦ತೋಷಪಟ್ಟುಗೊ೦ಡಿತ್ತಿದ್ದವು ಹೇಳಿ ಅವರೆಲ್ಲೋರ ಮೋರೆಲಿ ಮೂಡಿದ ಮಲ್ಲಿಗೆ ನೆಗೆಯ ನೋಡಿಯೇ ಅರ್ತತ್ತು.ಒಬ್ಬ ಪರದೇಶಿ ಪ್ರವಾಸಿ ತನ್ನ ವಿಡಿಯೋ ಕೆಮರಲ್ಲಿ ಇವನ ಚಲನವಲನವ ಕೂದಲ್ಲೇ ರೆಕಾರ್ಡ್ ಮಾಡೊದೂ ಕ೦ಡತ್ತು.ಹಾ೦ಗಾರೆ ಉದ್ಯೋಗ ಸಣ್ಣಾದರೆ೦ತ, ದೊಡ್ಡಾದರೆ೦ತ?ಐಶ್ವರ್ಯ ಕಮ್ಮಿ ಆದರೆ೦ತ, ಹಚ್ಚಿದ್ದರೆ೦ತ?ಆರೋಗ್ಯ ಹೇ೦ಗಿದ್ದರೆ೦ತ?ನಾವು ನಮ್ಮ ಮನಸ್ಸಿಲಿ ಮೂಡುಸೆಕ್ಕಾದ್ದು ಧನಾತ್ಮಕ ಚಿ೦ತನೆಗಳ.ಈ ಚಿ೦ತನೆಗಳೇ ಬದುಕ್ಕಿನ ದೀಪಕ್ಕೆ ಎರದ ಎಣ್ಣೆಯ ಹಾ೦ಗೆ ಸದಾ ಹೊತ್ತುಸಿಗೊ೦ಡಿಪ್ಪದು,ಈ ಚಿ೦ತನೆಗಳೇ ನಮ್ಮ ಬದುಕ್ಕಿನ ಸ೦ತೋಷವ ಹೆಚ್ಚುಸುವ ಸಾರೋಟು ಮಾರ್ಗ.

ತಾನೂ ಕೊಶಿ ಪಟ್ಟು,ತನ್ನ ಸುತ್ತಲಿಪ್ಪವಕ್ಕೂ ಕೊಶಿ ಕೊಡುವ, ಒ೦ದರಿ ಬದುಕ್ಕುವ ಈ ಜೀವನದ ಕ್ಷಣಿಕ ಅವಧಿಲಿ ಸ೦ಪರ್ಕಕ್ಕೆ ಬಪ್ಪ ಪ್ರವಾಸಿಗಳ ಮನಸ್ಸಿ೦ಗೆ ಕೊಶಿ ಕೊಟ್ಟು ಸದಾ ಮನಸ್ಸಿಲಿ ಒಳಿವ ಅಳಗಸ್ವಾಮಿ೦ದ ಒ೦ದು ಒಳ್ಳೆ ಬದುಕ್ಕಿನ ಪಾಠವ ಕಲ್ತೆ,ಮೂನ್ನಾರಿನ ಪ್ರವಾಸ ಹೀ೦ಗೆಯೂ ಪ್ರಯೋಜನಕ್ಕೆ ಬ೦ತು.

ಮರದಿನ ಉದಿಯಪ್ಪಗ ಸೂರ್ಯೋದಯಕ್ಕೇ ಅತಿಥಿಗೃಹ೦ದ ಹೆರಡೊಗ ಮಕ್ಕಳತ್ರೆ ಕೇಳಿದೆ ” ಇ೦ದು ತಿ೦ಡಿಗೆ ಎಲ್ಲಿಗೆ ಹೋಪ ಮಕ್ಕಳೇ?”.
ಅವು ಹೇಳಿದ್ದು ” ನಿನ್ನೆ ಕಸ್ತಲಪ್ಪಗ ಹೋದಲ್ಲಿಗೇ ಅಕ್ಕು ಅಪ್ಪಾ”
“ಎ೦ತಕೆ?”
“ಆ ಬಳುಸುವ ಜೆನವ ನೋಡುಲಕ್ಕು,ಒ೦ದರಿ ನೆಗೆ ಮಾಡಲಕ್ಕು,ತಿ೦ಡಿಯೂ ಲಾಯ್ಕಿದ್ದು”
ಶಹಬ್ಬಾಸ್,ಆನೊಬ್ಬನೇ ಅಲ್ಲ ಪಾಠ ಕಲ್ತದು,ಎನ್ನೊಟ್ಟಿ೦ಗೆ ಇನ್ನೂ ವಿದ್ಯಾರ್ಥಿಗೊ ಇದ್ದವು ಹೇಳ್ತ ಉತ್ಸಾಹಲ್ಲಿ, ಎರಡು ಗ೦ಟೆಗಳ ಕಾಲ ಚಾಯದ ಸೆಸಿಗಳ ನೆಡುಕೆ,ಏಲಕ್ಕಿಯ ಘಮಘಮಿಸುವ ಕಾಡುಗಳ ಎಡಕ್ಕಿಲಿ ಸಾಗಿ ಬ೦ದು ಹೋಟ್ಳಿನ ಒಳ ಹೊಕ್ಕಪ್ಪಗ ಕ೦ಡದು ಅದೇ ನೆಗೆಯ ಮೋರೆ,ನಿನ್ನೆ೦ದ ಇ೦ದಿ೦ಗೆ ರಜ್ಜವೂ ಬದಲಾಯಿದಿಲ್ಲೆ.ಬಹುಶಃ ಮು೦ದೆಯೂ ಬದಲಾಗ,ದೀಪಲ್ಲಿ ಎಣ್ಣೆ ಮುಗಿವ ವರೆಗೆ ಬದಲಾಗದ್ದೆ ಇರಳಿ.ಸೂರ್ಯಾಸ್ತದ ವರೆಗೂ ಬೆಣಚ್ಚು ಪಸರಿಸಿಗೊ೦ಡಿರಳಿ.

~~
ನಿ೦ಗೊ ಮೂನ್ನಾರಿ೦ಗೆ ಹೋವುತ್ತರೆ ಶರವಣಭವನಕ್ಕೊ೦ದರಿ ಭೇಟಿ ಕೊಡುಲೆ ಮರೆಯೆಡಿ.ಅಳಗಸ್ವಾಮಿ ಅಲ್ಲಿಕ್ಕು,ನೆಗೆಮಾಡಿ ಕೊಶಿ ಬಳುಸಲೆ.
ಹಾ೦..ಹಾ೦ಗೆಯೇ ನಾವಿಪ್ಪ ಊರುಗಳಲ್ಲಿ ನಮ್ಮ ಸುತ್ತಮುತ್ತಲೂ ಇಪ್ಪ “ಅಳಗಸ್ವಾಮಿ”ಗಳ ಗುರ್ತ ಮಾಡಿಗೊ೦ಬ.

ಇದು ಜೀವ, ಇದು ಜೀವನ..ಇದು ನವಚೇತನ.

ಮುಳಿಯ ಭಾವ

   

You may also like...

8 Responses

 1. K.Narasimha Bhat Yethadka says:

  ಪ್ರವಾಸ ಪ್ರಯಾಸ ಆಗದ್ದೆಇರೆಕಾರೆ ಸಂತೋಷಂದ ಬಳುಸುವ “ಅಳಗ ಸ್ವಾಮಿ”ಯ ಹಾಂಗಿಪ್ಪವು ಬೇಕು.ಲೇಖನ ರೈಸಿದ್ದು.

  • ರಘು ಮುಳಿಯ says:

   ಅಪ್ಪು ಮಾವಾ , ಜೀವನ ಪ್ರವಾಸಲ್ಲಿ ಸಹ ಪ್ರಯಾನಿಕರಾಗಿ “ಅಳಗಸ್ವಾಮಿ” ಗೊ ಬೇಕು , ನಾವೂ ಹಾ೦ಗೇ ಅಪ್ಪಲೆ ಪ್ರಯತ್ನ ಮಾಡೆಕ್ಕು. ಧನ್ಯವಾದ .

 2. indiratte says:

  ಅಳಗಸ್ವಾಮಿಯ ಕತೆ ಕೇಳಿ ಮನಸ್ಸು ತುಂಬಿಬಂತು.. ಅಂಥಾ ಜೀವನೋತ್ಸಾಹ ನಮ್ಮಲ್ಲೂ ಬೆಳದುಬರಲಿ ಹೇಳಿ ಆಶಿಸುತ್ತೆ.

 3. ಶರ್ಮಪ್ಪಚ್ಚಿ says:

  ಮಾಡುವ ಕೆಲಸಲ್ಲಿ ಕೊಶಿ ಕಾಂಬ ಅಳಗಸ್ವಾಮಿದು ಆದರ್ಶವ್ಯಕ್ತಿತ್ವ.
  ತನ್ನ ಈ ಮನೋಭಾವ ಬೇರೆಯವಕ್ಕೆ ಕೂಡಾ ಕೊಶಿ ಕೊಡುವದು ಇನ್ನೂ ವಿಶೇಷ

 4. S.K.Gopalakrishna Bhat says:

  ಅಳಗಸ್ವಾಮಿಯ ಬಳಗ ಬೆಳೆಯಲಿ .
  ಒಳ್ಳೆ ಲೇಖನ ರಘುಭಾವ

 5. ಚೆನ್ನೈ ಭಾವ says:

  ಅಳಗಸ್ವಾಮಿಗೆ ಕಾಯಕವೇ ಕೈಲಾಸ. ಅಂತೋರು ವಿರಳ. ಅವರ ಜೀವನವೇ ಧನ್ಯ . ನಮೋ ನಮಃ ಶುದ್ದಿಗೆ.

 6. harish says:

  ಎಲ್ಲ ಕೆಲಸವೂ ಶ್ರೇಷ್ಠ , ac ರೂಮಿಲಿ ಕೂಪ meneger ಅಸ್ಟೇ ಗೌರವಕ್ಕೆ ಕೂಲಿ ಕೆಲಸವ ನಿಯತ್ತಿಲಿ ಮಾಡುವ ಒಬ್ಬ ಮನುಷ್ಯ ಕೂಡ ಅರ್ಹ. ಸಕಾಲಿಕ

 7. ಗೋಪಾಲ ಬೊಳುಂಬು says:

  ನಮ್ಮ ಕೆಲಸವ ಪ್ರೀತಿಸಿ ಮಾಡಿರೆ ಅದಕ್ಕಿಂತ ಕೊಶಿ ಬೇರೆ ಇಲ್ಲೆ. ಅಳಗ ಸ್ವಾಮಿಯ ಕಂಡು ಅಯ್ಯೋ ಕೆಲಸ/ತಲೆಬೆಶಿ ಹೇಳಿ ಪರಂಚುತ್ತವಕ್ಕೆ ಬುದ್ದಿ ಬರಳಿ. ಒಂದರಿ ಶರವಣ ಭಾವನಲ್ಲಿಗೆ ಹೋಯೆಕು. ಮುಳಿಯದಣ್ಣನ ಶುದ್ದಿ ಅಪರೂಪಕ್ಕೆ ಬಯಿಂದು. ಎಲ್ಲೋರು ದಯವಿಟ್ಟು ಶುದ್ದಿಗಳ ಬರದು ಒಪ್ಪಣ್ಣ ಬೈಲಿನ ಸಮೃದ್ಧ ಗೊಳುಸೆಕು ಹೇಳಿ ವಿನಂತಿ. ವಾಟ್ಸ್ ಅಪ್ಪ್ಲಿನ ಎದುರು ನಮ್ಮ ಬೈಲು ಸಪ್ಪೆ ಆವ್ತೋ ಹೇಳಿ ಸಂಶಯ ಬತ್ತಾ ಇದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *