Oppanna.com

ಬಂಗಾಳದ ಭಟ್ಟಾಚಾರ್ಯಂಗೂ ಕರ್ನಾಟಕದ ಕನ್ಯಾನಕ್ಕೂ “ಎತ್ತಣಿಂದೆತ್ತ ಸಂಬಂಧವಯ್ಯಾ!’’

ಬರದೋರು :   ಸರ್ಪಮಲೆ ಮಾವ°    on   03/06/2012    19 ಒಪ್ಪಂಗೊ

ಸರ್ಪಮಲೆ ಮಾವ°

ಇತ್ತೀಚಗೆ ಒಂದೆರಡು ಸರ್ತಿ ಕನ್ಯಾನದ ಭಾರತ ಸೇವಾಶ್ರಮಕ್ಕೆ ಹೋಗಿಪ್ಪಗ ಎನ್ನ ಮನಸ್ಸಿಲ್ಲಿ ಎದ್ದ ಪ್ರಶ್ನೆ ಇದು.
ಯಾವುದೋ ಊರಿಲ್ಲಿ ಅಥವಾ ಯಾವುದೋ ದೇಶಲ್ಲಿ ಹುಟ್ಟಿ ಬೆಳದವು ಇನ್ಯಾವುದೋ ಊರಿಲ್ಲಿ ಅಥವಾ ದೇಶಲ್ಲಿ ಬಡವರ, ವೃದ್ಧರ, ರೋಗಿಗಳ ಅಥವಾ ನಿರ್ಗತಿಕ ಮಕ್ಕಳ ಸೇವೆ ಮಾಡಿದ ಅಥವಾ ಅಂತಹ ಸೇವಗೆ ಶಾಶ್ವತ ವ್ಯವಸ್ಥೆ ಮಾಡಿದ ಬಗ್ಗೆ ನಮ್ಮ ಪೈಕಿ  ಎಷ್ಟೋ ಜನಕ್ಕೆ ಓದಿ, ಕೇಳಿ ಅಥವಾ ನೋಡಿ ಗೊಂತಿಕ್ಕು.

ಮಹಾರಾಷ್ಟ್ರಲ್ಲಿ ಬಾಬಾ ಅಮ್ಟೆ ನಾಗಪುರದ ಹತ್ತರೆ ಕುಷ್ಠ ರೋಗಿಗಳ ಆರೈಕೆ ಮಾಡ್ಳೆ “ಆನಂದವನ” ಕಟ್ಟಿ ಮಾಡಿದ ಮಹತ್ಕಾರ್ಯದ ಬಗ್ಗೆ, ಅವಂಗೆ ಮತ್ತೆ ಅವನ ಮಗಂಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಸಿಕ್ಕಿದ ಬಗ್ಗೆ ಓದಿ ಗೊಂತಿದ್ದನ್ನೆ?
ಬಾಬಾ ಅಮ್ಟೆಯ ಇಡೀ ಸಂಸಾರವೇ ಈ ಸೇವಾಕಾರ್ಯಲಿದ್ದು. ೨೦೦೮ರಲ್ಲಿ ಬಾಬಾ ತೀರಿ ಹೋದ ಮತ್ತೆ ಅವನ ಮಕ್ಕೊ ಆನಂದವನದ ಕೆಲಸವ ಅದೇ ರೀತಿ ಮುಂದುವರಿಸ್ಯೊಂಡು ಹೋವುತ್ತಾ ಇದ್ದವು.
ಈಗ ಅವು ಪ್ರಾಯಸ್ಥರಪ್ಪಗ ಅವರ ಮಕ್ಕೊ (ಬಾಬಾನ ಪುಳ್ಯಕ್ಕೊ) ಅದೇ ಕೆಲಸವ ಮುಂದೆ ತೆಕ್ಕೊಂಡು ಹೋಪಲೆ ತಯಾರಾಯಿದವು. (ಇದರ ಬಗ್ಗೆ ತಿಳಿಯೆಕಾದರೆ ಇದೇ ಮೇ ತಿಂಗಳ ರೀಡರ್ಸ್ ಡೈಜೆಸ್ಟ್ ನೋಡಿ.)
ಇದೇ ರೀತಿಯ ಇನ್ನೊಂದು ಉದಾಹರಣೆ ಮದರ್ ತೆರೆಸ.
ಹೀಂಗಿಪ್ಪ ಸೇವಾ ಕಾರ್ಯವ ದೊಡ್ಡ ಅಥವಾ ಸಣ್ಣ ಮಟ್ಟಲ್ಲಿ ಮಾಡುವ ಬೇರೆ ಎಷ್ಟೋ ವ್ಯಕ್ತಿಗೊ ಅಥವಾ ಸಂಘಸಂಸ್ಥೆಗೊ ಇಕ್ಕು.
ಆದರೆ ನಮ್ಮ ಊರಿಲ್ಲೇ, ನಮ್ಮ ನೆರೆಕರೆಲೇ ಇಪ್ಪ ಕನ್ಯಾನದ ಆಶ್ರಮದ ಬಗ್ಗೆ ಗೊಂತಿದ್ದೋ?

~~

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ ಹೇಳುವ ಒಂದು ಗ್ರಾಮೀಣ ಪ್ರದೇಶದಲ್ಲಿ ಈ ಸೇವಾಶ್ರಮವ ೧೯೬೪ರಲ್ಲಿ ಸ್ಥಾಪಿಸಿದ್ದು ಇಲ್ಲಿಯ ಭಟ್ಟನೂ ಅಲ್ಲ, ಬಂಟನೂ ಅಲ್ಲ; ತುಳುವನೂ ಅಲ್ಲ, ಕನ್ನಡಿಗನೂ ಅಲ್ಲ; ಕರ್ನಾಟಕದವನೇ ಅಲ್ಲ –
ದೂರದ ಬಂಗಾಳದ ಭಟ್ಟಾಚಾರ್ಯ ಹೇಳಿದರೆ ನಂಬಲೆ ಕಷ್ಟ ಆವುತ್ತು; ಆದರೆ ನಂಬಲೇ ಬೇಕು.
ನಂಬಿದರೂ  ಆಶ್ಚರ್ಯ ಆವುತ್ತು!

~~

೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕುವಾಗ ನಮ್ಮ ದೇಶವ  ಭಾರತ, ಪಶ್ಚಿಮ ಪಾಕಿಸ್ಥಾನ, ಪೂರ್ವ ಪಾಕಿಸ್ಥಾನ ಹೇಳಿ ಮೂರು ತುಂಡು ಮಾಡಿದ್ದು, ಕೋಟಿಗಟ್ಳೆ ಜೆನ ಪಾಕಿಸ್ಥಾನಂದ ಭಾರತಕ್ಕೆ, ಅದೇ ರೀತಿ ಭಾರತಂದ ಪಾಕಿಸ್ಥಾನಕ್ಕೆ ನಿರಾಶ್ರಿತರಾಗಿ ಓಡಿದ್ದು, ಲಕ್ಷಾಂತರ ಜೆನ ಹಿಂಸಾಚಾರಲ್ಲಿ ಸತ್ತದು ಎಲ್ಲ ಎಲ್ಲೋರಿಂಗೂ ಗೊಂತಿಪ್ಪ ಐತಿಹಾಸಿಕ ಸತ್ಯ.
ಹೀಂಗೆ ಪೂರ್ವ ಪಾಕಿಸ್ಥಾನಂದ (ಇಂದ್ರಾಣ ಬಾಂಗ್ಲಾ ದೇಶ) ಆಸ್ತಿಪಾಸ್ತಿ, ಮನೆಮಠ, ನೆಂಟರಿಷ್ಟರು – ಎಲ್ಲವನ್ನೂ ಬಿಟ್ಟು ಭಾರತಕ್ಕೆ ನಿರಾಶ್ರಿತ° ಆಗಿ ಬಂದ ಧೀರೇಂದ್ರನಾಥ ಭಟ್ಟಾಚಾರ್ಯ ಹೇಳುವ ಒಬ್ಬ ಹೃದಯವಂತ ಮಹಾನುಭಾವನೇ ಕನ್ಯಾನದ ಈ ಆಶ್ರಮದ ಸ್ಥಾಪಕ°.
ದೇಶ, ಭಾಷೆ, ಜಾತಿ, ಮತ ಹೇಳುವ ಭೇದಭಾವ ಇಲ್ಲದ್ದೆ, ನಿರ್ಗತಿಕರ, ನಿರಾಶ್ರಿತರ, ಬಡವರ, ಕಷ್ಟಲ್ಲಿಪ್ಪವರ ಸಹಾಯಕ್ಕೆ ಏನಾದರೂ ಪ್ರಾಮಾಣಿಕವಾಗಿ ಮಾಡೆಕ್ಕು ಹೇಳುವ ಒಂದೇ ಉದ್ದೇಶಂದ ಊರಿನ, ಜೆನರ, ಭಾಷೆಯ ಪರಿಚಯ ಇಲ್ಲದ್ದರೂ, ಜನ ಬೆಂಬಲ, ಹಣ ಬೆಂಬಲ ಇಲ್ಲದ್ದ ಪರಿಸರಲ್ಲಿ ಆಶ್ರಮ ಕಟ್ಟುವ ಕೆಲಸಕ್ಕೆ ಹೆರಟು ಅದರ ನೆಡೆಶಿ, ಬೆಳೆಶಿದ ಧೀರೋದಾತ್ತ ವ್ಯಕ್ತಿಯೇ ಧೀರೇಂದ್ರನಾಥ ಭಟ್ಟಾಚಾರ್ಯ!

ಢಾಕ್ಕಾ ಜಿಲ್ಲೆಯ ನಾರಾಯಣಗಂಜ್ ಪ್ರದೇಶಂದ ಕುಟುಂಬ ಸಮೇತ ನಿರಾಶ್ರಿತ ಆಗಿ ದೆಹಲಿಗೆ ಬಂದ ಭಟ್ಟಾಚಾರ್ಯ (೧೯೧೨ – ೨೦೦೧) ಗಣಿಗಾರಿಕೆಲಿ ಇಂಜಿನಿಯರಿಂಗ್ ಪದವೀಧರ.
ಹೊಟ್ಟೆಪಾಡಿಂಗೆ ಮುಂಬಯಿಯ ಪೊದ್ದಾರ್ ಕಂಪೆನಿಲಿ ಕಬ್ಬಿಣದ ಅದಿರು ಗಣಿಗಾರಿಕೆಯ ವಿಭಾಗಲ್ಲಿ ಉದ್ಯೋಗಿಯಾಗಿ  ಕೆಲಸಕ್ಕೆ ಸೇರಿದ°.
೧೯೬೦ರಲ್ಲಿ ಈ ಕಂಪೆನಿ ಕನ್ಯಾನ ಗ್ರಾಮದ ಕಳಂಜಿಮಲೆ ಗುಡ್ಡೆಲಿ ಕಬ್ಬಿಣದ ಅದಿರು ಅನ್ವೇಷಣಗೆ ಕಳಿಸಿದ ಉದ್ಯೋಗಿಗಳಲ್ಲಿ ಈ ಧೀರೇಂದ್ರನಾಥ ಭಟ್ಟಾಚಾರ್ಯನೂ ಒಬ್ಬ°.

~~

ಹೀಂಗೆ ಕನ್ಯಾನಕ್ಕೆ ಬಂದ ಭಟ್ಟಾಚಾರ್ಯಂಗೆ ಕಂಡದು ಇಲ್ಲಿಯ ಜೆನರ ಕಡುಬಡತನ; ’ಅಶನ, ವಸನ, ವಸತಿ’ (ರೋಟಿ, ಕಪಡಾ, ಮಕಾನ್) ಇಲ್ಲದ್ದ ಕುಗ್ರಾಮದ ಜೆನರ ಕಷ್ಟಕಾರ್ಪಣ್ಯ.
ಡೆಲ್ಲಿಯ ನಿರಾಶ್ರಿತರ ಶಿಬಿರಲ್ಲಿದ್ದು ಈ ಸ್ಥಿತಿಯ ಅನುಭವ ಇದ್ದ ಭಟ್ಟಾಚಾರ್ಯ ಮನಸ್ಸು ಗಟ್ಟಿ ಮಾಡಿದ° ಈ ಜೆನಂಗೊಕ್ಕೆ ಏನಾದರೂ ಸಹಾಯ ಮಾಡೆಕ್ಕು ಹೇಳಿ.
೧೯೬೩ರಲ್ಲಿ ಕಂಪೆನಿಂದ ಭಟ್ಟಾಚಾರ್ಯಂಗೆ ವರ್ಗಾವಣೆಯ ಆದೇಶ ಬಂದು ಔರಂಗಾಬಾದಿಂಗೆ ಹೋದರೂ, ಮನಸ್ಸು ಕನ್ಯಾನವ ಬಿಡ್ಳೆ ಒಪ್ಪಿದ್ದಿಲ್ಲೆ. ಮನಶ್ಶಾಂತಿಗೆ ಶಿರಡಿ ಬಾಬಾನ ಆಶ್ರಮಕ್ಕೆ ಹೋಗಿ ಕೂದ°.
ಬಾಬಾನ ಪ್ರೇರಣೆ  ಆತು – ಕನ್ಯಾನಕ್ಕೇ ಹೋಗು, ಹೃದಯ, ಮನಸ್ಸು ಹೇಳುವ ಕೆಲಸವ ಮಾಡು ಹೇಳಿ. ಮನಸ್ಸಿಂಗೆ ಸಮಾಧಾನ ಆತು.  ಭಟ್ಟಾಚಾರ್ಯ  ಕಂಪೆನಿ ಬಿಟ್ಟ°, ಕನ್ಯಾನ ಬಿಟ್ಟಿದಾಯಿಲ್ಲೆ!

~~

೧೯೬೪ರಲ್ಲಿ ೧೦ ಸೆಂಟ್ಸ್ ಜಾಗೆಲಿ ಮುಳಿ ಹುಲ್ಲಿನ ಒಂದು ಜೋಪಡಿಲಿ ಭಾರತ ಸೇವಾಶ್ರಮ ಸ್ಥಾಪನೆ ಆತು.
ಆಶ್ರಮಲ್ಲಿ ಇದ್ದದು ಐದು ಜೆನ ಮಕ್ಕೊಮಾಂತ್ರ°!
ಆಶ್ರಮಕ್ಕೆ ಸಹಾಯ ಕೇಳ್ಳೆ ಭಟ್ಟಾಚಾರ್ಯನೇ ಸ್ವತಹ ಮನೆಮನೆ ತಿರುಗಿದರೂ, ಊರಿನ ಪರಿಚಯ ಇಲ್ಲದ್ದ, ಕನ್ನಡ, ತುಳು ಗೊಂತಿಲ್ಲದ್ದ, ಬರೇ ಇಂಗ್ಲೀಷು, ಹಿಂದಿ, ಬಂಗಾಳಿ ಮಾಂತ್ರ ಮಾತಾಡ್ಳೆ ಗೊಂತಿಪ್ಪ ಈ ಅಪರಿಚಿತ ವ್ಯಕ್ತಿಗೆ ಬೇಕಾದ ಸಹಾಯ, ಸಹಕಾರ ಅಗತ್ಯ ಇದ್ದ ಪ್ರಮಾಣಲ್ಲಿ ಆ ಸಮಯಲ್ಲಿ ಸಿಕ್ಕದ್ದೇ ಇದ್ದದು ಆಶ್ಚರ್ಯ ಪಡುವ ಸಂಗತಿ ಅಲ್ಲ.
ಅದು ಆರ್ಥಿಕ ಸ್ಥಿತಿ ಇಂದ್ರಾಣಷ್ಟು ಒಳ್ಳೆದಿಲ್ಲದ್ದ ಆ ಕಾಲಲ್ಲಿ ಸಹಜವೆ.
ಕನ್ಯಾನ, ವಿಟ್ಲ ಪರಿಸರದ ಪ್ರಾಯಸ್ಥರು, ಹೆಗಲಿಂಗೆ ಜೋಳಿಗೆ ನೇಲಿಸಿಯೊಂಡು ಬೆಶಿಲಿಂಗೆ ಬರಿಗಾಲ್ಲಿ ತಿರಿಗಿಯೊಂಡಿದ್ದ ಗೆಡ್ಡದ ಭಟ್ಟಾಚಾರ್ಯನ ನೋಡಿದ ನೆಂಪಿದ್ದು ಹೇಳಿ ಈಗ ಹೇಳುತ್ತವು !!

ಭಟ್ಟಾಚಾರ್ಯ ದಂಪತಿಗೊ ಆ ಕಾಲಲ್ಲಿ ಪಟ್ಟ ಕಷ್ಟನಷ್ಟಂಗಳ ನವಗೆ ಊಹಿಸಲೂ ಎಡಿಯ°!
ಗೆಂಡಂಗೆ ತಕ್ಕ ಹೆಂಡತಿ ಶ್ರೀಮತಿ ಸರೋಜಿನಿ ಭಟ್ಟಾಚಾರ್ಯ. ಎಷ್ಟೇ ಕಷ್ಟ ಬಂದರೂ ಮನಸ್ಸು ಬದಲಾಯಿಸಿದ್ದವಿಲ್ಲೆ.
ಭಟ್ಟಾಚಾರ್ಯ ದಂಪತಿಗೊ ಒಬ್ಬ ಮಗ, ನಾಲ್ಕು ಮಗಳಕ್ಕಳೊಟ್ಟಿಂಗೆ ಆಶ್ರಮಲ್ಲೇ, ಆಶ್ರಮವಾಸಿಗಳ ಹಾಂಗೇ, ಇದ್ದದು. ಆಶ್ರಮವಾಸಿಗೊ ಭಟ್ಟಾಚಾರ್ಯರ  ’ಸ್ವಾಮೀಜಿ’ ಹೇಳಿಯೇ ಹೇಳುವದು.
ಈಗ ’ಸ್ವಾಮೀಜಿ’ ಇಲ್ಲೆ; ೨೦೦೧ರಲ್ಲಿ ಸ್ವರ್ಗಸ್ಥರಾದವು.

~~

ಮಾತೆ ಸರೋಜಮ್ಮನವರ ಹತ್ತರೆ ಪುರುಸೊತ್ತಿದ್ದರೆ ಮಾತಾಡಿ ನೋಡಿ; ಆ ಕಷ್ಟ ಕಾಲದ ಜೀವನ, ಎಷ್ಟೇ ಕಷ್ಟ ಬಂದರೂ ಮಾಡೆಕು ಹೇಳಿ ಗ್ರೇಶಿದ ಕೆಲಸವ ಹಟ ಹಿಡುದು ಸಾಧಿಸಿಯೊಂಡಿದ್ದ ಭಟ್ಟಾಚಾರ್ಯನ ಸ್ವಭಾವ, ಆ ಕಾಲಲ್ಲಿ ಆಶ್ರಮಲ್ಲಿ ಭಟ್ಟಾಚಾರ್ಯ ದಂಪತಿಗೊ ಮಾಡಿಯೊಂಡಿದ್ದ ಒಳ್ಳೆಯ ಸೇವೆಯ ನೋಡಿ  ಸ್ವಪೇರಣೆಂದ ಯಾವದೇ ಪ್ರಚಾರ ಬಯಸದ್ದೆ ಸಹಾಯ ಮಾಡಿದ ವ್ಯಕ್ತಿಗಳ ಬಗ್ಗೆ, ಅದೇ ರೀತಿ ಆಶ್ರಮದ ಬೆಳವಣಿಗೆಯ ನೋಡಿ ಅಸೂಯೆಂದ ಎಡಿಗಾದಷ್ಟು ಉಪದ್ರ ಕೊಟ್ಟುಗೊಂಡಿದ್ದವರ ಬಗ್ಗೆ, ಸರೋಜಮ್ಮ ಮೆಲುಕು ಹಾಕುವದರ ನೋಡಿ.
ಎಲ್ಲ ಕಷ್ಟಂಗಳ ಎದುರಿಸಿ “ಜಗ್ಗದೆಯೆ, ಕುಗ್ಗದೆಯೆ” ಮುಂದುವರುದ ಭಟ್ಟಾಚಾರ್ಯನ ಧೈರ್ಯ ಹಾಂಗೂ  ಸಾಧನೆಯ ಗ್ರೇಶಿದರೆ ಆಶ್ಚರ್ಯ ಆವುತ್ತು!

ಕಳುದ ೪೭ ವರ್ಷಲ್ಲಿ ಊರು, ಪರಊರುಗಳ ದಾನಿಗೊ ಕೊಟ್ಟ ಉದಾರ ಸಹಾಯ, ಸಹಕಾರಂದ  ಆಶ್ರಮಲ್ಲಿಪ್ಪ ಸ್ಥಳಾವಕಾಶ, ಸೌಲಭ್ಯಂಗೊ ನಿದಾನವಾಗಿ ಹೆಚ್ಚುತ್ತಾ ಇದ್ದು.
ಬರೇ ಐದು ಮಕ್ಕಳೊಟ್ಟಿಂಗೆ ಸುರುವಾದ ಆಶ್ರಮಲ್ಲಿ ಈಗ ಇಪ್ಪ ಆಶ್ರಮವಾಸಿಗಳ ಸಂಖ್ಯೆ ೨೭೦ಕ್ಕೂ ಹೆಚ್ಚು.
ಈಗ ಮಕ್ಕೊ ಮಾಂತ್ರ ಇಪ್ಪದಲ್ಲ; ಎಲ್ಲಾ ಪ್ರಾಯದ, ಎಲ್ಲಾ ತರದ ಗೆಂಡುಸರೂ, ಹೆಂಗುಸರೂ ಇದ್ದವು.

ಈಗ ಆಶ್ರಮಲ್ಲಿಪ್ಪವರಲ್ಲಿ ಶಾಲಗೆ ಹೋಪ ಹುಡುಗರು ೩೪, ಶಾಲಗೆ ಹೋಪ ಹುಡುಗಿಯರು ೪೨, ಹಿರಿಯರು(ವೃದ್ಧ, ವೃದ್ಧೆಯರು) ೧೩೬, ಅಬಲೆಯರು ೪೮, ಅಂಗವಿಕಲರು ೪; ಅಲ್ಲದ್ದೆ ೪ ಕಾರ್ಯಕರ್ತೆಯರೂ ಇದ್ದವು.

~~

ಸ್ವಾಮೀಜಿ ೨೦೦೧ರಲ್ಲಿ ಸಾವಂದ ಮದಲೆ ಆಶ್ರಮವ ನೆಡೆಶಿಯೊಂಡು ಹೋಪ ಹೊಣೆಗಾರಿಕೆಯ ಮಗಳಕ್ಕೊಗೂ ಅಳಿಯಂದಿರಿಂಗೂ ಒಪ್ಪಿಸಿದ್ದವು.
ಸಣ್ಣ ಪ್ರಾಯಂದಲೇ ಆಶ್ರಮವಾಸಿಯಾಗಿದ್ದ ಶ್ರೀ ಈಶ್ವರ ಭಟ್ರಿಂಗೆ ಎರಡನೇ ಮಗಳು ಸರಿತನ ಮದುವೆ ಮಾಡಿ ಕೊಟ್ಟದೂ ಭಟ್ಟಾಚಾರ್ಯನೆ.
ಈಗ ಆಶ್ರಮದ ಹೆಚ್ಚಿನ ಜವಾಬ್ದಾರಿಗಳ ಹೊತ್ತುಗೊಂಡವು ಕಾರ್ಯದರ್ಶಿ, ಜೊತೆ ಕಾರ್ಯದರ್ಶಿಗೊ ಆಗಿ ಕೆಲಸ ಮಾಡುವ ಈಶ್ವರ ಭಟ್ ದಂಪತಿಗೊ.
ಇವುದೆ ಇವರ ಇಬ್ರು ಮಕ್ಕಳೊಟ್ಟಿಂಗೆ ಆಶ್ರಮಲ್ಲೇ ಒಳುದವರ ಹಾಂಗೇ ಇಪ್ಪದು; ಆಶ್ರಮಲ್ಲಿ ಎಲ್ಲೋರು ಯಾವುದೇ ಭೇದ ಇಲದ್ದೆ ಒಂದೇ ರೀತಿಯ ಜೀವನ ಮಾಡುತ್ತವು.

ಕಾರ್ಯದರ್ಶಿ ಈಶ್ವರ ಭಟ್ ಕಾನೂನು ಪದವೀಧರ°. ಆಶ್ರಮಕ್ಕೆ ಸಂಬಂಧಪಟ್ಟ ಎಲ್ಲಾ ವ್ಯವಹಾರಂಗಳ ನೋಡಿಗೊಂಬದು ಕಾರ್ಯದರ್ಶಿಯೆ.
ಮುಖ್ಯವಾಗಿ ಆಶ್ರಮದ ಲೆಕ್ಕಪತ್ರ, ಆಹಾರದ ವ್ಯವಸ್ಥೆಗಳ ನೋಡಿಗೊಂಬ ಶ್ರೀಮತಿ ಸರಿತ ಆಶ್ರಮದ ಎಲ್ಲಾ ಕೆಲಸಲ್ಲಿ ಕಾರ್ಯದರ್ಶಿಯ ಸಹಭಾಗಿಯಾಗಿಪ್ಪ ಸಹಧರ್ಮಿಣಿ.

~~

ಈ ಆಶ್ರಮಲ್ಲಿ ದಿನನಿತ್ಯದ ಯಾವದೇ ಕೆಲಸಕ್ಕೆ ಸಂಬಳದ ಕೆಲಸದವು ಇಲ್ಲೆ!
ಎಲ್ಲಾ ಕೆಲಸಂಗಳ ದೈಹಿಕವಾಗಿ ಕೆಲಸ ಮಾಡ್ಳೆ ಸಾಧ್ಯ ಇಪ್ಪ ಆಶ್ರಮದ ನಿವಾಸಿಗಳೇ ಹಂಚಿಯೊಂಡು ಮಾಡುತ್ತವು.
ಅಡಿಗೆ, ಸ್ವಚ್ಛತೆ ಇತ್ಯಾದಿಗಳ ಆಶ್ರಮಲ್ಲಿಪ್ಪ ಹೆಮ್ಮಕ್ಕಳೇ ಸಂತೋಷಂದ, ಆಸಕ್ತಿಂದ ಮಾಡುತ್ತವು.
ಆಶ್ರಮವಾಸಿಗೊಕ್ಕೆ ಕೃಷಿ, ಪಶುಸಂಗೋಪನೆ, ಮುದ್ರಣ, ಹೊಲಿಗೆ, ಹಪ್ಪಳ ತಯಾರಿ ಇತ್ಯಾದಿ ಕೆಲಸಕ್ಕೆ ತರಬೇತಿಯೂ ಆವುತ್ತು; ಇದರಿಂದ ಆಶ್ರಮಕ್ಕೆ ಸಣ್ಣ ಮಟ್ಟಿನ ಆದಾಯವೂ ಬತ್ತು.

ಈಗ ಮೂಲ ಆಶ್ರಮಂದ ೩ಕಿಲೋಮೀಟರ್ ದೂರಲ್ಲಿ ೨೫ ಎಕ್ರೆ ಗುಡ್ಡೆಯ ತೆಕ್ಕೊಂಡು ಅಲ್ಲಿ ಸೇವಾಧಾಮ ಹೇಳುವ ವೃದ್ಧಾಶ್ರಮವ ಕಟ್ಟಿದ್ದವು.
ಈ ಜಾಗೆಲಿ ೫೦೦ ತೆಂಗಿನ ಮರ ನೆಟ್ಟಿದವು; ಅಲ್ಲದ್ದೆ, ರಬ್ಬರು, ಒಳ್ಳೆ ಮೆಣಸು, ಗೋಡಂಬಿ, ತರಕಾರಿ, ಹಣ್ಣು ಹಂಪಲು ಇತ್ಯಾದಿಗಳ ಬೆಳೆಶುತ್ತವು.
ಇದರಿಂದ ಬಪ್ಪ ಆದಾಯವೂ ಆಶ್ರಮಕ್ಕೇ ಉಪಯೋಗ ಆವುತ್ತು.

ಆಶ್ರಮದ ಗೋಶಾಲೆಲಿಪ್ಪ ೭೦ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಹಾಲು ಕೊಡುವ ೨೬ ದನಗೊ ಆಶ್ರಮದ ಹಾಲಿನ ಆವಶ್ಯಕತೆಯ ಸಂಪೂರ್ಣ ಪೂರೈಸುತ್ತವು.
ಗೋಬರ್ ಗ್ಯಾಸಿನ ವ್ಯವಸ್ಥೆಯೂ ಇದ್ದು. ಆಶ್ರಮದ ಗೋಶಾಲೆಯಲ್ಲದ್ದೆ, ಇನ್ನೊಂದು ಗೋಸಂರಕ್ಷಣಾ ಶಾಲೆಯೂ ಇದ್ದು. ಇಲ್ಲಿಗೆ ಎಷ್ಟೋ ಜನ ಸಾಂಕಲೆಡಿಯದ್ದ ಜಾನುವಾರುಗಳ ತಂದು ಬಿಟ್ಟಿಕ್ಕಿ ಹೋವುತ್ತವು.
ಅದೇ ರೀತಿ ಅಕ್ರಮ ಸಾಗಾಟದ ಜಾನುವಾರುಗಳ ಪೋಲೀಸಿನವು ಹಿಡುದರೆ ಇಲ್ಲಿ ತಂದು ಬಿಡುತ್ತವು. ಈ ಕೇಂದ್ರಲ್ಲಿ ೧೦೦ಕ್ಕೂ ಹೆಚ್ಚು ಜಾನುವಾರುಗೊ ಇದ್ದವು.

ಆಶ್ರಮಲ್ಲಿ ಸ್ವಚ್ಛತಗೆ, ಶಿಸ್ತಿನ ಜೀವನಕ್ಕೆ, ಆರೋಗ್ಯಕ್ಕೆ, ಒಳ್ಳೆಯ ಸಂಸ್ಕಾರಕ್ಕೆ ಹೆಚ್ಚಿನ ಗಮನ ಕೊಡುತ್ತವು. ಜಿಲ್ಲೆಯ ಹಲವು ಆಸ್ಪತ್ರಗೊ ವೈದ್ಯಕೀಯ ಸಹಾಯ ಒದಗುಸುತ್ತವು. ಅಲ್ಲದ್ದೆ ಕೆಲವು ಡಾಕ್ಟ್ರುಗೊ ಕೂಡಾ ಅವರ ಸೇವೆಯ ಆಶ್ರಮಕ್ಕೆ ಯಾವುದೇ ಸಂಭಾವನೆಯಿಲ್ಲದ್ದೆ  ಕೊಡುತ್ತವು. ಈಗ ವಾರಕ್ಕೊಂದು ದಿನ ಡಾ. ಆರ್. ಯನ್. ಶಾಸ್ತ್ರಿ (ನಿವೃತ್ತ ಸೇನಾ ವೈದ್ಯಾಧಿಕಾರಿ) ಆಶ್ರಮಕ್ಕೆ ಬಂದು ನಿವಾಸಿಗಳ ಆರೋಗ್ಯ ತಪಾಸಣೆ ಮಾಡಿ ಸಲಹೆ ಸೂಚನೆ ಕೊಡುತ್ತವು. ಪುತ್ತೂರಿನ ದಂತ ವೈದ್ಯ ಡಾ. ಶ್ರೀಪ್ರಕಾಶ್ ಕೂಡಾ ಇದೇ ರೀತಿಯ ಸೇವೆ ಮಾಡುತ್ತವು. ಇದು ಸೇವಾಮನೋಭಾವದ ವೈದ್ಯರ ಉಚಿತ ಸೇವೆ.

~~

ಸ್ವಾಮೀಜಿ ಶ್ರೀ ಧೀರೇಂದ್ರನಾಥ ಭಟ್ಟಾಚಾರ್ಯ

ಆಶ್ರಮಲ್ಲಿ ಹಲವು ಹಬ್ಬಂಗಳ ಆಚರುಸುತ್ತವು.
ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚೌತಿ, ದಸರಾ, ದೀಪಾವಳಿ, ಕಾಳಿಪೂಜೆ, ಶಿವರಾತ್ರಿ, ಶ್ರೀರಾಮನವಮಿ, ತುಳಸಿ ಪೂಜೆ, ಮಕರ ಸಂಕ್ರಾಂತಿ, ಯುಗಾದಿ, ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ, ಗಾಂಧಿಜಯಂತಿ, ಸ್ಥಾಪಕರ ದಿನಾಚರಣೆ ಇತ್ಯಾದಿ ಹಬ್ಬಂಗಳ ವಿಜೃಂಭಣೆಂದ ಆಚರುಸುತ್ತವು.

~~

ಆಶ್ರಮಲ್ಲೇ ಇದ್ದು ವಿದ್ಯಾಭ್ಯಾಸ ಮುಗಿಶಿ, ಉದ್ಯೋಗ ಪಡದು ಹೋದವರ ಸಂಖ್ಯೆ ೧೦೦ಕ್ಕೂ ಹೆಚ್ಚು; ಬ್ಯಾಂಕುಗಳಲ್ಲಿ, ಸರಕಾರಿ ಉದ್ಯೋಗಲ್ಲಿ, ಸ್ವಂತ ಉದ್ಯಮಲ್ಲಿ, ಸೈನ್ಯಲ್ಲಿ – ಹೀಂಗೆ ಬೇರೆ ಬೇರೆ ಕ್ಷೇತ್ರಲ್ಲಿ ಕೆಲಸ ಮಾಡುತ್ತಾ ಇದ್ದವು.
ಈ ವರೆಗೆ ಆಶ್ರಮಲ್ಲೇ ಬೆಳದ ೧೮ ಹುಡುಗಿಯರ ಪ್ರಾಪ್ತ ವಯಸ್ಸಿಲ್ಲಿ ಯೋಗ್ಯ ಸಂಬಂಧ ಹುಡುಕ್ಕಿ ಆಶ್ರಮಲ್ಲೇ ಮದುವೆ ಮಾಡಿ ಕೊಟ್ಟಿದವು.
ಇವೆಲ್ಲ ಈಗ ಒಳ್ಳೆಯ ಗೃಹಿಣಿಯರಾಗಿ ಜೀವನ ಮಾಡುತ್ತಾ ಇದ್ದವು. ಆಶ್ರಮವೇ ಅವರ ತವರುಮನೆ; ಚೊಚ್ಚಲ ಹೆರಿಗೆ ಹಾಂಗೂ ಬಾಣಂತನಕ್ಕೆ ಆಶ್ರಮಕ್ಕೆ ಬತ್ತವು.
ಇಲ್ಲಿ ಬಾಣಂತಿಯ ಆರೈಕೆ ಮಾಡ್ಳೆ, ಮಗುವಿನ ನೋಡಿಗೊಂಬಲೆ ಆಸಕ್ತಿ ಇಪ್ಪ ಅಜ್ಜಿಯಕ್ಕೊ ಬೇಕಾಷ್ಟು ಜೆನ ಇದ್ದವು. ಒಂದು ಮನೆಯ ವಾತಾವರಣವೇ ಇಲ್ಲಿದ್ದು.

~~

ಇಂತಹ ಆಶ್ರಮ ನಿರ್ವಹಣೆ ಸುಲಭದ ಕೆಲಸ ಅಲ್ಲ.ಈ ಸೇವಾಕಾರ್ಯ ಬಹುದೊಡ್ಡ ಸಮಾಜ ಸೇವೆ.
ಜನತಾಸೇವೆಯೇ ಜನಾರ್ದನ ಸೇವೆ. ಇದು ಖಂಡಿತವಾಗಿಯೂ ದೇವರು ಮೆಚ್ಚುವ ಕೆಲಸ.
ಇದಕ್ಕೆ ಬೇಕಾದ್ದು ಅಧಿಕಾರ, ಹಣ ಯಾವುದೂ ಅಲ್ಲ; ಈ ರೀತಿಯ ಸೇವಗೆ ಬೇಕಾದ್ದು ಮನಸ್ಸು, ಹೃದಯ.

~~

ಇದು ಕನ್ಯಾನ ಭಾರತ ಸೇವಾಶ್ರಮದ ಸ್ಥೂಲ ಪರಿಚಯ.
ಈ ಆಶ್ರಮದ ಬಗ್ಗೆ ಪ್ರಚಾರ ಇಲ್ಲೆ ಹೇಳಿಯೇ ಹೇಳ್ಳಕ್ಕು.
ಯಾವುದೇ ರೀತಿಯ ಅಬ್ಬರದ ಪ್ರಚಾರ ಇಲ್ಲದ್ದೆ ಇಲ್ಲಿ ನೆಡವ ಸೇವಾಕಾರ್ಯವ ಆಸಕ್ತಿ ಇದ್ದರೆ ಒಂದು ಸರ್ತಿ ಪುರುಸೊತ್ತು ಮಾಡಿ ಹೋಗಿ ನೋಡಿ.

ಸೂಚನೆ:

ಆಶ್ರಮದ ಪಟಂಗಳ ಪಟದ ಪುಟಲ್ಲಿ ನೋಡಿ:
https://oppanna.com/photo-gallery/kanyana-bharata-sevashrama-photos

~*~*~*~

19 thoughts on “ಬಂಗಾಳದ ಭಟ್ಟಾಚಾರ್ಯಂಗೂ ಕರ್ನಾಟಕದ ಕನ್ಯಾನಕ್ಕೂ “ಎತ್ತಣಿಂದೆತ್ತ ಸಂಬಂಧವಯ್ಯಾ!’’

  1. ಭಟ್ಟಾಚಾರ್ಯರು ಅಷ್ಟೇ ಸ್ವಾಭಿಮಾನಿ ಕೂಡಾ..
    ಒಂದು ಉದಾಹರಣೆ
    ನಮ್ಮವರ ಒಂದು ಮದುವೆ ಕಾರ್ಯಕ್ರಮ..
    ಊಟಕ್ಕೆ ಮಾಡಿದ ಅಡುಗೆ ತುಂಬಾ ಒಳುದಿತ್ತು.. ಎಂಥ ಮಾಡುದು ಹೇಳಿ ಯಜಮಾನರ ಕಳವಳ.. ಯಾರೋ ಹೇಳಿದವು ಇದನ್ನ ನಮ್ಮ ಆಶ್ರಮಕ್ಕೆ ಕಳುಶುವ.. ಅಲ್ಲಿಯ ಮಕ್ಕೊ ತಿಂಗು ಹೇಳಿ.. ಸರಿ ಹೇಳಿ ತೆಕ್ಕೊಂಡ್ ಹೋದವು..
    ಆಗ ಭಟ್ಟಾಚಾರ್ಯರು ಹೇಳಿದ ಮಾತು ” ಇಲ್ಲಿಪ್ಪ ಮಕ್ಕ ಭಿಕ್ಶುಕರಲ್ಲ.. ನಿಂಗಳ ಕಾರ್ಯಕ್ರಮದ ಸಂತೋಷ ಹಂಚಿಕೊೞುವುದಿದ್ದರೆ ಒಪ್ಪೊತ್ತಿನ ಊಟದ ಖರ್ಚು ಕೊಡಿ.. ಒೞೆ ಊಟ ಎಂಗಳೆ ಹಾಕುತ್ತೆಯ ಮಕ್ಕೊಗೆ.. ಅದು ಬಿಟ್ಟು ಉಳ್ದು ಹೇಳಿ ತಂದು ಹಾಕೆಕ್ಕು ಹೇಳಿ ಇಲ್ಲೆ… ಮಕ್ಕಳ ಸಾಕುವ ಯೊಗ್ಯತೆ ಮತ್ತು ಅದಕ್ಕೆ ಬೇಕಾದ ಪರಿಶ್ರಮ ಎರಡು ನನ್ನಲ್ಲಿದೆ”
    ಅಲ್ಲಿಯ ಗಣೇಶೊತ್ಸವಕ್ಕೆ ಎನ್ನ ಅಜ್ಜನೊಟ್ಟಿಂಗೆ ಹೋಗುತ್ತಿದ್ದ ನೆನಪು ಇನ್ನು ಇದೆ.. ನಿಜವಾಗಿಯೂ ಆದರ್ಶಪ್ರಾಯ ವ್ಯಕ್ತಿ..

  2. eE vyakthi engala urinavu. anu sannagippaga dinavu nodidde. ivr activities baari doddadu. ivra nenapu maadiddakke thanks

  3. ಭಾರೀ ಲಾಯ್ಕಿನ ಮತ್ತೆ ಮುಖ್ಯವಾದ ಮಾಹಿತಿ ಕೊಟ್ಟಿದಿ ಮಾವ…..
    ಧನ್ಯವಾದ…..

  4. ಓದಿದವಕ್ಕೂ, ಓದಿ ಅನಿಸಿದ್ದರ ಬರದವಕ್ಕೂ ಧನ್ಯವಾದಂಗೊ.

    ಆಶ್ರಮದ ವಿಳಾಸ ಬೇಕಾದರೆ ಇಲ್ಲಿದ್ದುಃ

    ಭಾರತ ಸೇವಾಶ್ರಮ (ರಿ),
    “ಸೇವಾಧಾಮ”
    ಕನ್ಯಾನ – 574 279 (ದ.ಕ.)

    ಫೋನ್: 08255-266235

  5. ಕನ್ಯಾನಲ್ಲಿ ಒ೦ದು ಆಶ್ರಮ ಇದ್ದು ಹೇಳ್ತದು ಮಾ೦ತ್ರ ಗೊ೦ತಿತ್ತು.
    ಉದ್ಯೋಗಕ್ಕಾಗಿ ಬ೦ದು ಇಲ್ಲಿಯೇ ತನ್ನ ಜೀವನವನ್ನೇ ಸಮಾಜಸೇವೆಗಾಗಿ ಸಮರ್ಪಣೆ ಮಾಡಿದ ಭಟ್ಟಾಚಾರ್ಯರು ಅವತಾರಪುರುಷರೇ ಸರಿ.ಯೇವದೇ ಪ್ರಚಾರ ಇಲ್ಲದ್ದೆ ಅವು ಕಟ್ಟಿಬೆಳೆಶಿದ ಸ೦ಸ್ಥೆ ಇ೦ದು ಮಾಡ್ತಾ ಇಪ್ಪ ಸಾಧನೆಯ ಓದೊಗ ಮನಸ್ಸು ತು೦ಬಿತ್ತು.
    ಪಟ೦ಗಳ ಒಟ್ಟಿ೦ಗೆ ಶುದ್ದಿ ಹೇಳಿ ಪರಿಚಯ ಮಾಡ್ಸಿದ ಸರ್ಪಮೂಲೆ ಮಾವ೦ಗೆ ಧನ್ಯವಾದ.

  6. ಕನ್ಯಾನದ ಆಶ್ರಮದ ಬಗ್ಗೆ ಇಷ್ಟೆಲ್ಲ ಇದ್ದು ಹೇಳಿ ಇಂದು ಗೊಂತಾತು. ಆಶ್ರಮವ ಕಷ್ಟಲ್ಲಿ ಕಟ್ಟಿ ಬೆಳಶಿದ ಭಟ್ಟಾಚಾರ್ಯರ ಎಷ್ಟು ಹೊಗಳಿರೂ ಸಾಲ. ಜನ ಸೇವೆಗೆ ಬೇಕಾಗಿ ಕಂಪೆನಿಯ ಕೆಲಸವನ್ನೂ ಬಿಟ್ಟು ಬಂದ ಆ ಧೀಮಂತ ವ್ಯಕ್ತಿಯ ಎದುರು, ಪೈಸೆ ಮಾಡ್ಳೇ ಹುಟ್ಟಿ ಬಂದವರ ಹಾಂಗೆ ಮಾಡ್ತ ರಾಜಕಾರಣಿಗವಕ್ಕೆ ನಾಚಿಕೆ ಆಯೆಕು. ಸರ್ಪಮಲೆ ಮಾವನ ಲೇಖನ ಲಾಯಕಿತ್ತು. ಧನ್ಯವಾದಂಗೊ.

  7. ಆನು ಕನ್ಯಾನಲ್ಲಿ ಹೈಸ್ಕೂಲ್ ಓದಿಗೊಂಡಿಪ್ಪಗ ಎಷ್ತೋ ದೂರದ ಊರಿನ ಮಕ್ಕ ಇದೇ ಆಶ್ರಮಲ್ಲಿ ಇದ್ದುಗೊಂಡು ಶಾಲೆಗೆ ಬತ್ತಾ ಇತ್ತಿದ್ದವು.ಎಷ್ಟೋ ಬಡ ಮಕ್ಕೊಗೆ ಉಚಿತ ವಸ್ತ್ರ, ಊಟ , ವಸತಿ ಎಲ್ಲ ಕೊಟ್ಟು ವಿದ್ಯಾಭ್ಯಾಸ ಕೂಡ ಕೊಡ್ಸಿದ್ದವು.

    ಭಟ್ಟಾಚಾರ್ಯರು ಮಾಡಿದ ಸಾಧನೆ ಅಪಾರ…..

  8. ಕನ್ಯಾನಲ್ಲಿ ಆಶ್ರಮ ಇದ್ದು ಹೇಳಿ ಮಾತ್ರ ಗೊಂತಿತ್ತು. ಆಶ್ರಮದ ಹಿಂದಾಣ ಪರಿಶ್ರಮದ ಕತೆ ಗೊಂತಿತ್ತಿಲ್ಲೆ.
    ಒಬ್ಬನ ಸಾಧನೆ ಹಲವರ ಬಾಳಿಂಗೆ ಬೆಳಕಾತು.
    ಭಾಷೆ ಊರು ಯಾವದೂ ಗೊಂತಿಲ್ಲದ್ದಲ್ಲಿಗೆ ತನ್ನ ಕೆಲಸವನ್ನೂ ಬಿಟ್ಟು ಬಂದು ಈ ಸೇವೆ ಮಾಡಿದ ಭಟ್ಟಾಚಾರ್ಯಂಗೆ ನಮೋ ನಮಃ
    ಇಲ್ಲಿ ಪರಿಚಯಿಸಿದ ಭಾವಯ್ಯಂಗೆ ಧನ್ಯವಾದಂಗೊ

  9. ಓಳ್ಳೆ ಮಾಹಿತಿ ಕೊಟ್ಟದಕ್ಕೆ ಮಾವಂಗೆ ಧನ್ಯವಾದ.

  10. ಕರ್ಮ ಯೋಗಿ ಭಟ್ಟಾಚಾರ್ಯರ ವಿಷಯ ಕೇಳಿ ಸಂತೋಷ ಆತು. ವಿಷಯ ತಿಳಿಸಿದ್ದಕ್ಕೆ ಧನ್ಯವಾದ.

  11. ಭಟ್ಟಾಚಾರ್ಯರ ಸೇವಾ ಕೈ೦ಕಯ೯ದ ಬಗ್ಗೆ ಓದಿ ಸ೦ತೋಷ ಆತು. ಮಾಹಿತಿ ಕೊಟ್ಟ ಉದಯಶ೦ಕರ ಸಪ೯ಮಲೆ ಇವರಿ೦ಗೆ ಧನ್ಯವಾದ.

  12. ಭಟ್ಟಾಚಾರ್ಯನ ಬಗ್ಗೆ ಬರೆದ್ದು ಲಾಯ್ಕ ಆಯಿದು.ಅವು ಒಂದು ಅದ್ಭುತ ಸಮಾಜಸೇವಕನೇ ಸರಿ.

  13. ಚೊಲೋ ಮಾಹಿತಿ. ಇತಿಹಾಸದ ಪುಟಗಳನ್ನ ಹೆಕ್ಕಿ ತೆಗೆದ್ರೆ ಎ೦ತೆ೦ಥದಿದ್ದು! ಯಾರಾದ್ರೂ ಒಬ್ರು ಹಿ೦ಗೆ ಬರೀದೆ ಹೋದ್ರೆ ಮು೦ದಿನ ಪೀಳಿಗೆಗೆ ಎ೦ಥ ಗೊತ್ತಾಗ್ತು? ಸರ್ಪಮಲೆ ಮಾವ೦ಗೆ ಧನ್ಯವಾದ.

  14. ನಮೋ ನಮಃ । ಹರೇ ರಾಮ ॥

    ಮನಮುಟ್ಟುವ ಶುದ್ದಿಗೆ ಸರ್ಪಮಲೆ ಮಾವಂಗೆ ಧನ್ಯವಾದ. ಮಹಾನ್ ವ್ಯಕ್ತಿ. ಭಗವದ್ಗೀತೆಲಿ ಹೇಳುವ ದೇವತಾಸ್ವರೂಪಿ ಹೇಳಿರೆ ಇದುವೇ ಹೇಳಿ ಅರ್ಥ ಮಾಡಿಗೊಂಬಲೆ ಸಾಧ್ಯ ಆತು.

  15. ಉತ್ತಮ ಮಾಹಿತಿ, ಧನ್ಯವಾದ೦ಗೊ

  16. ಎನಗೆ ಮಾತುಗೊ ಸಿಕ್ಕುತ್ತಿಲ್ಲೆ, ಅಲ್ಲದ್ರೂ ಇ೦ತಹ ಕೄತಿಗೊ ಇಪ್ಪಲ್ಲಿ ಮಾತುಗೊಕ್ಕೆ ಎ೦ತ ಬೆಲೆ!! ಆ ಪುಣ್ಯಾತ್ಮ೦ಗೆ ಪರಲೋಕಲ್ಲಿಯೂ ಪೂರ್ಣ ಶಾ೦ತಿ ಸಿಕ್ಕಲಿ ದೇವರೇ!!

  17. ಈ ಸೇವಾಕಾರ್ಯವ ನಾವು ಮೆಚ್ಚೆಕ್ಕೆ..ನಿಜವಾಗಿಯು ಸಾಧನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×