ಮಿಂಚಿನ ಹಾಂಗೆ ಮಿಂಚಿ ಮರೆ ಆದ “ಕೊಡಗಿನ ಗೌರಮ್ಮ”

ನಮ್ಮ ಹವ್ಯಕ ಸಮಾಜಲ್ಲಿ ಹಲವಾರು ಪ್ರತಿಭೆಗ ಮಿಂಚಿ ಮರೆ ಆಯಿದವು. ಶಾಲೆಯ ಕಲಿಯುವಿಕೆ ಹೇಳಿ ವಿಶೇಷ ಕಲಿಯದ್ದರೂ ಕೂಡಾ ಮನೆಲಿಯೇ ಓದಿದ ಅನುಭವಸ್ಥ ಹಿರಿಯರಿಂದ, ನಿತ್ಯ ಮನೆಲಿ ಪುರಾಣ ಗ್ರಂಥ ಪಠಣಂದ ಎಲ್ಲ ರೀತಿಂದ ಸಣ್ಣಪ್ರಾಯಂದಲೇ ಮಕ್ಕಳ ತಿಳುವಳಿಕೆ ಬೆಳದು ಅವ್ವು ಸಾಕಷ್ಟು ಮಟ್ಟಿಂಗೆ ಮನೆಲಿಯೇ ಅಕ್ಷರಂಗಳ ಕಲ್ತು ಮನೆಯ ಮಟ್ಟಿಂಗೇ ಅಪ್ಪ ಹಾಂಗೆ ಕಥೆ, ಕವನ, ವ್ಯಾಖ್ಯಾನಂಗಳ ಬರಕ್ಕೊಂಡು ಇತ್ತಿದ್ದವು. ಎಷ್ಟೋ ಸಾವಿರ ಹೀಂಗಿಪ್ಪ ಜನಂಗಳಲ್ಲಿ ಕೆಲವೇ ಕೆಲವು ಮತ್ತಾಣ ಪೀಳಿಗೆಯೋರಿಂದಾಗಿ ಬೆಳಕು ಕಂಡಿದು. ಇನ್ನೂ ಹಲವು ಕಾಲನ ಕೈಯ್ಯೊಳ ಕಾಣದ್ದ ಹಾಂಗೆ ಮನೆಗಳ ಒಟ್ಟಿಂಗೇ ಮಣ್ಣಾಗಿ ಹೋಯಿದು. ಮೊದಲಾಣ ಕಾಲಲ್ಲಿ ಆಯುಷ್ಯವೂ ಕಡಮ್ಮೆಯೇ! ಹಲವು ಚಿಗುರುಗೊ ಅರಳೆಕ್ಕಾದರೆ ಮದಲೇ ಮುದುಡಿ ಹೋಯಿದವು. ಹೀಂಗೇ ಒಂದು ಅರಳೆಕ್ಕಾದರೆ ಮೊದಲೇ ಮುದುಡಿದ ವನಸುಮ- ಕೊಡಗಿನ ಗೌರಮ್ಮ.
ನಮ್ಮ ಹೆರಿಯರ ಮೊದಲೊಂದು ಕಾಲಲ್ಲಿ ಕೊಡಗಿನ ರಾಜ ಕೊಡಗಿಂಗೆ ಗೌರವಲ್ಲಿ ಬರಮಾಡಿಗೊಂಡು ಬಿಳಿಗಿರಿಲಿ ಬೇಕಾದ ವೆವಸ್ತೆ ಮಾಡಿಕೊಟ್ಟು ಹವ್ಯಕ ಜನಂಗ ಕೊಡಗಿನ ಮಣ್ಣಿಲಿಯೂ ಬೆಳವ ಹಾಂಗೆ ಮಾಡಿದ ಕತೆ ನಿಂಗೊಗೆ ಎಲ್ಲ ಅರಡಿಗು. ಹಾಂಗೆ ಇಪ್ಪ ಒಂದು ಪೀಳಿಗೆಲಿ ಇಂದಿಂಗೆ ಸರಿಯಾಗಿ ನೂರು ವರುಷ ಮದಲು ಕುಕ್ಕೆಮನೆಲಿ (ಕುಕ್ಕೆ ನರಸಜ್ಜನ ಮನೆ) ಹುಟ್ಟಿ ಜಮದಗ್ನಿ ಗೋತ್ರದ ಚಕ್ರಕೋಡಿ ಮನೆತನಕ್ಕೆ ಸೊಸೆಯಾಗಿ ಬಂದು ಮನೆತನಕ್ಕೆ ಒಂದು ಚಿಗುರು ಕೊಟ್ಟು, ಅದು ಬೆಳದು ಹರಡುದರ ನೋಡುವ ಮದಲೇ ಬಹುಬೇಗ ಮರೆಯಾದ ಮಹಾಚೇತನ ಗೌರಮ್ಮ.

ಮಡಿಕೇರಿಲಿ ಒಕೀಲ ಮತ್ತೆ ಪ್ಲಾಂಟರ್ ಆಗಿದ್ದ ಎನ್ ಎಸ್ ರಾಮಯ್ಯ ಮತ್ತೆ ನಂಜಕ್ಕ ದಂಪತಿಗಳ ಸಣ್ಣ ಮಗಳಾಗಿ 1912 ಮಾರ್ಚ್ 3 ಕ್ಕೆ ಜನ್ಮ ತಾಳಿದವು.
ಸಣ್ಣ ಪ್ರಾಯಲ್ಲಿಯೇ ಅಬ್ಬೆ ತೀರಿ ಹೋಗಿ ಮನಸ್ಸಿಂಗೆ ಬೇಜಾರಾದರೂ ಅಪ್ಪನ ಕಾಳಜಿಲಿ ಸೈಂಟ್ ಜೋಸೆಫ್ಸ್ ಶಾಲೆಲಿ ಎಸ್ ಎಸ್ ಎಲ್ ಸಿ ವರೆಗೆ ಓದಿತ್ತಿದ್ದವು. ಅಪ್ಪ° ಒಕೀಲ್ತಿಗೆ ಮತ್ತೆ ಅಣ್ಣ ಜಡ್ಜ ಆಗಿಪ್ಪಗ ಗೌರಮ್ಮ ಅವು ಕೊಡ್ತಾ ಇದ್ದ ತೀರ್ಪುಗಳ ಆಂಗ್ಲಭಾಷೆಗೆ ತರ್ಜುಮೆ ಮಾಡಿಕೊಟ್ಟುಗೊಂಡು ಅವಕ್ಕೆ ಸಕಾಯ ಮಾಡಿಗೊಂಡು ಇತ್ತಿದ್ದವು. 1925 ರಲ್ಲಿ ಶುಂಟಿಕೊಪ್ಪಲ್ಲಿದ್ದ ಶ್ರೀ ಬಿ.ಟಿ ಗೋಪಾಲಕೃಷ್ಣ ಹೇಳುವವರ ಒಟ್ಟಿಂಗೆ ಮದುವೆ ಆವುತ್ತು.
ಮೊದಲೇ ಸಂಬಂಧಿಕರಾಗಿದ್ದ ಶ್ರೀ ಗೋಪಾಲಕೃಷ್ಣ, ಮದುವೆ ಆದ ಮೇಲೆ ಗೌರಮ್ಮನವರ ತನ್ನ ಸಮಾನವಾಗಿಯೇ ನೋಡಿಗೊಂಡು ಅವಕ್ಕೆ ಕಲಿವಲೆ, ಬರವಲೆ ಇತ್ಯಾದಿ ಎಲ್ಲಾ ಆಸಕ್ತಿಯ ವಿಷಯಂಗಳ ಮಾಡ್ಲೆ ಅನುಕೂಲ ಮಾಡಿಕೊಟ್ಟು ನಿಜವಾದ ಅರ್ಥದ ಜೀವನಸಂಗಾತಿ ಆದವು. ಗೆಂಡನ ಪ್ರೋತ್ಸಾಹಂದಾಗಿಯೇ ಗೌರಮ್ಮ ಹಿಂದೀವಿಶಾರದ ಕಲಿತ್ತವು. ಮಿಸೆಸ್ ಬಿ.ಟಿ.ಜಿ.ಕೃಷ್ಣ ಹೇಳುವ ಹೆಸರಿಲಿ ಪತ್ರಿಕೆಗೊಕ್ಕೆ ಕಥೆಗಳ ಬರವಲೆ ಸುರು ಮಾಡಿದವು. ಗೋಪಾಲಕೃಷ್ಣ ತುಂಬಾ ಸಜ್ಜನ ಮನುಷ್ಯ. ಗುಂಡುಕುಟ್ಟಿ ಮಂಜುನಾಥಯ್ಯರ ದೊಡ್ಡ ಎಷ್ಟೇಟ್ ಲಿ ಪ್ರಭಂಧಕ ಆಗಿ ಕೆಲಸ ಮಾಡಿಗೊಂಡು ಸಾತ್ವಿಕ ಜೀವನ ನೆಡೆಶಿದ ವೆಗ್ತಿ. ಆರು ಎಂತ ಕೇಳಿದರೂ ಕೊಡುವ ಸ್ವಭಾವದವ್ವು. ಎಲ್ಲಿಯವರೆಗೆ ಹೇಳಿದರೆ, ಗೌರಮ್ಮನ ಮದುವೆ ಅಪ್ಪಲೆ ಹೇಳಿ ತೆಗದು ಮಡಗಿದ ಪೈಸೆಯನ್ನೂ ಕೂಡಾ ಕಷ್ಟ ಹೇಳಿಗೊಂಡು ಬಂದ ಆರಿಂಗೊ ಕೊಟ್ಟು ಮತ್ತೆ ತನ್ನ ಮದುವೆ ಖರ್ಚಿಂಗೆ ಪರಡಾಟ ಮಾಡಿದ ವೆಗ್ತಿ. ಗೌರಮ್ಮನೂ ಕೂಡಾ ಗೆಂಡಂಗೆ ತಕ್ಕ ನೆಡಕ್ಕೊಂಡು ಬಪ್ಪ ಹೆಮ್ಮಕ್ಕೊ.

ಕೊಡಗಿಲಿ ಸ್ವಾತಂತ್ರ್ಯದ ಹೋರಾಟದ ಕಾವು ಏರಿಗೊಂಡು ಇದ್ದ ಸಮಯ. ಆಸುಪಾಸು ಅಪ್ಪ ಘಟನೆಗೊ ಗೌರಮ್ಮನ ಗಮನಕ್ಕೆ ಬಾರದ್ದೆ ಇತ್ತಿಲ್ಲೆ. ಸಾಕಷ್ಟು ವಿದ್ಯಾಭ್ಯಾಸ ಇದ್ದ ಕಾರಣ ರಾಜಕೀಯದ ಬಗ್ಗೆಯೂ ಅವಕ್ಕೆ ಆಸಕ್ತಿ ಇದ್ದತ್ತು. ಗಾಂಧೀಜಿಯವರ ಸತ್ಯಾಗ್ರಹಂಗಳಿಂದ ಬಹಳ ಪ್ರೇರಣೆಗೊಂಡು ಅವ್ವು ಕೊಡಗಿನ ಯುವ ಜನಂಗಳ ನಾಷನಲ್ ಕಾಂಗ್ರೆಸ್ ನ ಒಟ್ಟಿಂಗೆ ಸೇರ್ಲೆ ಓಡಾಟ ಮಾಡಿ, ಸಂಘಟನೆ ಮಾಡಿದವು. ಹಲವು ಜನಂಗಳ ಮತ್ತಾಣ ರಾಜಕೀಯ ಜೀವನಕ್ಕೆ ಅಡಿಪಾಯ ಹಾಕಿದೋರು ಗೌರಮ್ಮ. 1934 ರಲ್ಲಿ ಫ಼ೆಬ್ರವರಿ ತಿಂಗಳಿಲಿ ಗಾಂಧೀಜಿ ಮಡಿಕೇರಿಗೆ ಬಂದು ಗೌರಮ್ಮನವರ ಮನೆ ಹತ್ರದ ಗುಂಡುಕುಟ್ಟಿ ಮಂಜುನಾಥಯ್ಯರ ಮನೆಲಿ ಉಳ್ಕೊಂಡು ಇತ್ತಿದ್ದವು. ಅಂಬಗ ಹೆಮ್ಮಕ್ಕಳೂ ಕೂಡಾ ಗಾಂಧೀಜಿಯವಕ್ಕೆ ತಮ್ಮ ಹತ್ತರೆ ಇದ್ದ ಚಿನ್ನವ ಕೊಟ್ಟುಗೊಂಡು ದೇಶಸೇವೆಗೆ ಹೇಳಿ ದಾನ ಮಾಡಿಗೊಂಡಿತ್ತಿದ್ದವು. ಗೌರಮ್ಮನವಕ್ಕೆ ಗಾಂಧೀಜಿಯ ಮೇಲೆ ತುಂಬಾ ಅಭಿಮಾನ ಇದ್ದತ್ತು. ಅವರ ಮಾತುಗಳಿಂದ ಪ್ರೇರಣೆಗೊಂಡು ಖಾದಿ ಒಸ್ತ್ರ ಸುತ್ತುಲೆ ಸುರು ಮಾಡಿತ್ತಿದ್ದವು. ಗೌರಮ್ಮ ಗಾಂಧೀಜಿಯವ್ವು ಅವರ ಮನೆಗೆ ಬರೆಕ್ಕು ಹೇಳಿ ಹಲವು ವಿಧ ಪ್ರಯತ್ನ ಮಾಡಿದವು. ಗಾಂಧೀಜಿ ಬಾರದ್ದಿಪ್ಪಗ ಉಪವಾಸ ಕೂದು ಸತ್ಯಾಗ್ರಹ ಮಾಡಿದವು. ಗಾಂಧೀಜಿ ಗೌರಮ್ಮನವರ ಮನಸ್ಸು ಬದಲ್ಸುಲೆ ಹಲವು ಪ್ರಯತ್ನ ಮಾಡಿದವು. ಆದರೆ ಯಾವುದಕ್ಕೂ ಗೌರಮ್ಮ ಬಗ್ಗಿದ್ದವಿಲ್ಲೆ. ಇವರ ಹಟಕ್ಕೆ ಸೋತು ಗಾಂಧೀಜಿ ಗೌರಮ್ಮನವರ ಮನಗೆ ಬರಲೇಬೇಕಾತು. ಮನೆಗೆ ಬಂದ ರಾಷ್ಟ್ರಪಿತನ ಗೌರವಲ್ಲಿ ಬರಮಾಡಿ, ಅವಕ್ಕೆ ತನ್ನ ಹತ್ರೆ ಇದ್ದ ಎಲ್ಲಾ ಚಿನ್ನವ ಹರಿಜನರ ಉದ್ಧಾರಕ್ಕೆ ಹೇಳಿ ಕೊಟ್ಟವು. ಮಾಂತ್ರ ಅಲ್ಲದ್ದೆ ಇನ್ನು ಮುಂದೆ ಸೌಭಾಗ್ಯದ ಸಂಕೇತ ಆದ ಕೊರಳಿನ ಕರಿಮಣಿ, ಕೆಮಿಯ ಬೆಂಡೋಲೆ, ಮೂಗಿನ ಮೂಗುಬೊಟ್ಟು ಅಲ್ಲದ್ದೆ ಬೇರೆ ಯಾವ ಒಡವೆಯೂ ಹಾಕಿಗೊಳ್ತಿಲ್ಲೆ ಹೇಳಿ ಪ್ರತಿಜ್ಞೆ ಮಾಡಿದವು. ಅಂಬಗ ಗೌರಮ್ಮನವರ ಪ್ರಾಯ 21 ವರ್ಷ!! ಈ ಘಟನೆಯ 1934 ಮಾರ್ಚ್ 2 ರ ‘ಹರಿಜನ’ ಪತ್ರಿಕೆಲಿ ಗಾಂಧೀಜಿ ಬರದ್ದವು.

ಗೌರವಾನ್ವಿತ ಮನೆತನದ ಹೆಮ್ಮಕ್ಕೊ ಆಗಿದ್ದ ಗೌರಮ್ಮಂಗೆ ಪುರಾಣದ ಕಥೆಗಳಲ್ಲಿ ಬಹು ಆಸಕ್ತಿ ಇದ್ದತ್ತು. ಹಾಂಗೇ ನಾಟಕ ಪ್ರದರ್ಶನಂಗಳಲ್ಲಿ, ತಾಳಮದ್ದಳೆಗಳಲ್ಲಿಯೂ ಕೂಡಾ ಅಭಿರುಚಿ ಇದ್ದತ್ತು. ಮಡಿಕೇರಿಯ ಸುಂದರ ವಾತಾವರಣದ ನಡುಗೆ ಅವರ ಸುಂದರ ಜೀವನ ಅರಳಿಗೊಂಡು ಇದ್ದತ್ತು. 1931 ರಲ್ಲಿ ಒಬ್ಬನೇ ಮಗ° ವಸಂತನ ಆಗಮನ ಅವರ ಬಾಳಿಲೂ ವಸಂತನ ಆಗಮನವೇ ಮಾಡಿತ್ತು. ಸಾರಸ್ವತ ಲೋಕಲ್ಲಿ ಗೌರಮ್ಮ ಚಿಗುರುತ್ತಾ ಇಪ್ಪ ಕಾಲಲ್ಲಿ ಅಂಬಗಾಣ ಸಾರಸ್ವತ ದಿಗ್ಗಜರ ಒಡನಾಟ ಅವಕ್ಕೆ ಸಿಕ್ಕಿ ಅವರೊಳ ಇಪ್ಪ ಸಾರಸ್ವತ ಹರಿವು ಹೆರ ಬಪ್ಪಲೆ ತುಂಬಾ ಸಕಾಯ ಆತು. ಮಾಸ್ತಿ, ಬೇಂದ್ರೆ, ಶಿವರಾಮ ಕಾರಂತ ಹೀಂಗೆ ಎಲ್ಲಾ ದೊಡ್ಡ ಬರಹಗಾರರೊಟ್ಟಿಂಗೆ ಸಾಹಿತ್ಯಿಕ ಚರ್ಚೆ ಮಾಡ್ತಷ್ಟು ಪ್ರೌಢಿಮೆ ಅವರಲ್ಲಿತ್ತು. ಅವರ 21 ವರುಷದ ಸಾಹಿತ್ಯದ ಬದುಕಿಲಿ 27 ಕತೆಗಳ ಬರದಿತ್ತಿದ್ದವು! ಕನ್ನಡಲ್ಲಿ ಸಣ್ಣ ಕಥೆಗಳ ಬರದ ಪ್ರಥಮ ಕಥೆಗಾರ್ತಿ ಹೇಳ್ತ ಗರಿಮೆಯನ್ನೂ ಪಡಕ್ಕೊಂಡವು. ಅವರ ಕಥೆಗೊ ಎಲ್ಲ ಸಾಮಾನ್ಯ ಜನಂಗಳ ಜೀವನವ, ಹೆಮ್ಮಕ್ಕಳ ಸ್ವಾತಂತ್ರ್ಯವ ಬಿಂಬಿಸುವ ಮತ್ತೆ ಬದುಕ್ಕಿಲಿ ಸೋಲದ್ದೆ ಸಾಧನೆ ಮಾಡುವ ಹೆಮ್ಮಕ್ಕಳ ಬಗ್ಗೆ ಆಗಿದ್ದುಗೊಂಡು, ಕಥೆಗಳ ಓದುವಾಗ ಮನಸ್ಸಿಂಗೆ ನಾಟುತ್ತ ಹಾಂಗೆ ಬರವಣಿಗೆಯ ಶೈಲಿಯ ಮೈಗೂಡಿಸಿತ್ತಿದ್ದವು ಹೇಳಿ ಕಥೆಗಳ ಓದಿದೋರು ಅಭಿಪ್ರಾಯ ಪಡ್ತವು. ಬರವದರ ಒಟ್ಟಿಂಗೆ ಅವಕ್ಕೆ ಓದುವ ಹವ್ಯಾಸವೂ ಇದ್ದತ್ತು. ಹಲವು ವಿಷಯಂಗಳ, ಹಲವು ವಿಚಾರಂಗಳ ಬಗ್ಗೆ ಓದಿ ತಿಳುದೋರ ಹತ್ತರೆ ಚರ್ಚೆ ಮಾಡಿಗೊಂಡು ಇತ್ತಿದ್ದವು. ಗೌರಮ್ಮ ಬರದ ಎಲ್ಲಾ ಕಥೆಗಳೂ ಕೂಡಾ ವಿಭಿನ್ನವಾಗಿದ್ದುಗೊಂಡು ಅವರ ಮನಸ್ಸಿನ ವೈಶಾಲ್ಯತೆಯ, ಅವರ ರಚನೆಯ ಪಕ್ವತೆಯ ತೋರ್ಸುತ್ತು.
ಅವರ ಕೆಲವು ಕತೆಗೊ: ವಾಣಿಯ ಸಮಸ್ಯೆ, ಒಂದು ಪುಟ್ಟ ಚಿತ್ರ, ಅವಳ ಭಾಗ್ಯ, ಅಪರಾಧಿ ಯಾರು, ಹೋಗಿಯೇ ಬಿಟ್ಟಿದ್ದ, ಯಾರು, ಎರಡನೇ ಮದುವೆ, ಕಾಗದ ಮಾಲೆ, ಬಲಿ, ಪಾಪನ ಮದುವೆ, ಅದೃಷ್ಟದ ಆಟ, ನನ್ನ ಮದುವೆ, ಮರದ ಗೊಂಬೆ, ತಪ್ಪಿತಸ್ಥ ಯಾರು, ಸುಳ್ಳು ಸ್ವಪ್ನ, ನಾಲ್ಕು ಘಟನೆ

ಉದ್ದ, ಬೆಳ್ಳಂಗೆ ಶರೀರದ ಗೌರಮ್ಮ ದಿಟ್ಟ ಹೆಮ್ಮಕ್ಕೊ. ತಪ್ಪಿನ ರಜ್ಜವೂ ಸಹಿಸುವೋರೂ ಅಲ್ಲ, ಅವಕಾಶವೂ ಕೊಡುವೋರು ಅಲ್ಲ. ಮಗ° ವಸಂತ ತುಂಬಾ ಸಣ್ಣವೇ ಇದ್ದರೂ ಎಂತಾರು ತಪ್ಪು ಮಾಡಿದರೆ ಶಿಕ್ಷೆ ಕೊಡದ್ದೆ ಇತ್ತಿದ್ದವಿಲ್ಲೆ. ನೇರನಡೆ,ನುಡಿ ಆಗಿದ್ದುಗೊಂಡು ಅದರ ಒಟ್ಟಿಂಗೆ ಸರಳ ಜೀವನವೂ ರೂಢಿಸಿಗೊಂಡು ಎಲ್ಲರ ಹತ್ತರೆ ಆತ್ಮೀಯವಾಗಿ ಬೆರಕ್ಕೊಂಡು ಇತ್ತಿದ್ದವು. ಆಗಾಣ ಕಾಲಕ್ಕೆ ನಮ್ಮ ಸಂಪ್ರದಾಯದ ಹೆಮ್ಮಕ್ಕಳ ಹಾಂಗೆ ಮನೆಯ ಒಳವೇ ಇರದ್ದರೂ ಕೂಡಾ ಮನೆಯ ಬಗ್ಗೆ ಉದಾಸಿನ ಮಾಡದ್ದೆ ಮನೆಯೂ, ಹೆರವೂ ಎರಡು ಕಡೆಯೂ ಸಮರ್ಥವಾಗಿ ನಿರ್ವಹಿಸಿಗೊಂಡು ಇತ್ತಿದ್ದವು.

ಗೌರಮ್ಮನವರ ಇನ್ನೆರಡು ಹವ್ಯಾಸಂಗ ಈಜುದು ಮತ್ತೆ ಟೆನ್ನಿಸ್ ಆಟ. ಸಣ್ಣಾದಿಪ್ಪಗಳೇ ಟೆನ್ನಿಸ್ ಕಲ್ತುಗೊಂಡು ದಿನಾ ಹೊತ್ತಪ್ಪಗಾಣ ಹೊತ್ತಿಂಗೆ ಟೆನ್ನಿಸ್ ಆಡಿಗೊಂಡು ಇತ್ತಿದ್ದವು, ಈಜುದು ಗೌರಮ್ಮ ಮತ್ತೆ ಆಸಕ್ತಿ ವಹಿಸಿದ ವಿಷಯ ಆದರೂ ದಿನಾ ಹರದೂರು-ಹಾರಂಗಿ ಹೊಳೆಗೆ ಹೋಗಿ ಈಜುದು ಅವಕ್ಕೆ ತುಂಬಾ ಇಷ್ಟ ಆಗಿದ್ದತ್ತು. ಹಲವು ಸರ್ತಿ ಹೊಳೆ ಕರೆಲಿ ಕೂದುಗೊಂಡು ಓದುವ ಅಭ್ಯಾಸ ಮಡಿಕ್ಕೊಂಡು ಹೊಳೆಯ ಒಟ್ಟಿಂಗೆ ಒಂದು ಪ್ರೀತಿಯ ಮಡಿಕ್ಕೊಂಡು ಇತ್ತಿದ್ದವು. 1939 ರ ಎಪ್ರಿಲ್ 13 ತಾರೀಕು ಹೊಳೆಲಿ ಈಜುಲೆ ಹೋದ ಗೌರಮ್ಮ ನೀರಿನ ಸುಳಿಗೆ ಸಿಕ್ಕಿ ತನ್ನ ಅತಿ ಪ್ರೀತಿಯ ಹೊಳೆ ಕಾವೇರಿಯ ನೀರಿನ ಸೆಳೆತಲ್ಲಿ ತನ್ನ ಪ್ರಾಣ ಸಮರ್ಪಿಸಿಗೊಂಡವು. ಗೌರಮ್ಮ ಈ ಅಕಾಲಿಕ ನಿಧನ ಆದಪ್ಪಗ ಅವರ ಪ್ರಾಯ 27 ವರ್ಷ!!
ಅರಳೆಕ್ಕಾದ ಒಂದು ಜೀವ – ಒಂದು ಜೀವನ ನೀರಿನ ಪಾಲಾತು. ಆರು ವರ್ಷದ ಪ್ರೀತಿಯ ಮಗ° ವಸಂತ ತನಗೆ ಸಿಕ್ಕಿದ ಬಹು ರಜ್ಜ ಕಾಲದ ಅಬ್ಬೆಯ, ಅಬ್ಬೆಯ ಪ್ರೀತಿಯ ಇಡೀ ಜೀವನ ಹಸಿರು ಹಸಿರು ಮಾಡಿ ನೆನೆಸುವ ಹಾಂಗೆ ಮಾಡಿ ಕಣ್ಮರೆ ಆದವು. ಈ ನಷ್ಟ ಅವರ ಮಗ°ವಸಂತ ಮತ್ತೆ ಗೌರಮ್ಮನವರ ಗೆಂಡ ಗೋಪಾಲಕೃಷ್ಣನವಕ್ಕೆ ಮಾಂತ್ರ ಆದ ನಷ್ಟ ಅಲ್ಲ. ಕನ್ನಡ ಸಾರಸ್ವತ ಜಗತ್ತಿಂಗೆ – ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ- ನಮ್ಮ ಸಮಾಜಕ್ಕೆ ಕೂಡಾ! ಗೌರಮ್ಮ ಅಷ್ಟು ಸಣ್ಣ ಪ್ರಾಯಲ್ಲಿ ನಮ್ಮ ಬಿಟ್ಟು ಹೋದರೂ ಅವರಿಂದ ಮತ್ತೆ ಬಂದ ಹಲವಾರು ಕಥೆಗಾರ್ತಿಗೊಕ್ಕೆ ಮಾದರಿಯಾಗಿ ಹೋದವು. ಗೌರಮ್ಮ ಭೌತಿಕವಾಗಿ ಈ ಲೋಕಂದ ಹೋದ ದುಃಖವ ಸಾರಸ್ವತ ಜಗತ್ತಿಂಗೆ ತಡಕ್ಕೊಂಬಲೆ ಆಯಿದಿಲ್ಲೆ.
ಅವರ ನೆಂಪಿಂಗೆ ಮತ್ತೆ ಮುದ್ರಣ ಆದ “ಕಂಬನಿ” ಹೇಳುವ ಪುಸ್ತಕಲ್ಲಿ ಮೇರು ಸಾಹಿತಿ ದ.ರಾ.ಬೇಂದ್ರೆ ಹೀಂಗೆ ಬರದ್ದದರಲ್ಲಿ ಆ ಕಾಲಲ್ಲಿ ಸಾರಸ್ವತ ಜಗತ್ತಿಂಗೆ ಅವ್ವು ಎಷ್ಟು ಮಹತ್ವದ ವೆಗ್ತಿ ಆಗಿತ್ತಿದ್ದವು ಹೇಳಿ ಅಂದಾಜು ಮಾಡ್ಲಾವುತ್ತು.

 ತಂಗಿ ಗೌರಮ್ಮ

ಜಲದೇವತೆ ವನದೇವತೆ ಒಂದೆಡೆಯಲಿ ಸೇರಿ
ಬಿನದಿಸುತಿಹ ಹೊಳೆಮಡುವಿಗೆ ನೀನೀಸಲು ಹಾರಿ
ತಾಯೊಡಲನು ಕೂಸಾಟಕೆ ತಾಯ್ಮಡಲಿಗೆ ಬೀರಿ
ತೀರಲು, ಜಡವಾಗಳೆ ಕಾವೇರಿಯೆ ತಂಪೇರಿ?
ನೆನೆದರೆಯೇ ನಾ ನಡುಗುವೆ ಇದು ಆದುದೆಂತೋ?
ಎಲ್ಲಿಂದೀ ಎಳೆಜೀವಕೆ ಸಾವೆಂಬುದು ಬಂತೋ?
ಪತಿಯೊಲವಿನ ಸುತನೊಲವಿನ ಕೆಳೆಯೊಲವಿನ ತಂತು
ಜಗ್ಗದೆ ನಿನ್ನನು ಮೇಲಕೆ ನೀ ಮುಳುಗಿದೆಯೆಂತು?

ಗೌರವಸ್ತ್ರ ಗೌರಸ್ಮಿತ ಗೌರವದೀ ಗೌರೀ
ಮಿಂಚಿದಳದೋ ಬಾನಂಚಿಗೆ ಕಾವೇರಿಯ ಕುವರಿ !
ಬೆಳದಿಂಗಳೆ ಕರುವಿಟ್ಟಿತೊ ಈ ನಿರ್ಮಲಮೂರ್ತಿ
ಮೊದಲಿಲ್ಲಿಯೆ ಕುಡಿಬಿಟ್ಟಿತೊ ಮುಗುಳಿಟ್ಟಿತೊ ಕೀರ್ತಿ?
ಉಷೆ ಸುರಿಸುವ ಇಬ್ಬನಿಯೊಲು ಕರುಣೆಯ ಕಂಬನಿಯ
ಬಾಳ್ ಬಳ್ಳಿಗೆ ಬೀರಿದೆ ನೀ ಮಧು ಹಾಸ್ಯದ ಹನಿಯ
-ಅಂಬಿಕಾತನಯದತ್ತ.

ಗೌರಮ್ಮ ಈ ಲೋಕಂದ ಹೋದ ಮೇಲೆ ಅವರ ಗೆಂಡ ಗೋಪಾಲಕೃಷ್ಣ ವಿರಾಗಿಯ ಹಾಂಗೆಯೇ ಜೀವನ ನಡೆಶಿದವು.
ಗೌರಮ್ಮನವರ ಮಗ ವಸಂತ ಮಾವ°, ಕಮಲಾ ಹೇಳಿ ಅವರ ಸೋದರ ಮಾವನ ಮಗಳನ್ನೇ ಮದುವೆ ಆಗಿ ಅವಿನಾಶ ಮತ್ತೆ ಅಶೋಕ ಹೇಳುವ ಎರಡು ಪುತ್ರರತ್ನಂಗಳ ಪಡದ್ದವು.
ಸಾದ್ವಿಯಾಗಿದ್ದ ಗೌರಮ್ಮನವರ ಮನೆ ಚಿಗುರಿದ್ದು ಮಾಂತ್ರ ಅಲ್ಲ ತುಂಬಿದ ಸಂಸಾರ ಬೆಳದು ಹರಡುತ್ತಾ ಇದ್ದು.

ಗೌರಮ್ಮನವರ ಮಗ° ವಸಂತ ಮಾವ° ಅಬ್ಬೆ ತೀರಿ ಹೋಪಗ ಆರು ವರ್ಷದ ಪುಟ್ಟು ಮಾಣಿ. ಅವಕ್ಕೆ ಅಪ್ಪ° ಅಮ್ಮನ ಬಗ್ಗೆ ನಾಡಿಂಗೆ ಒಳ್ಳೆದಪ್ಪ ಹಾಂಗೆ ಇಪ್ಪ ಕೆಲಸಂಗ ಮಾಡೆಕ್ಕು ಹೇಳುವ ತುಂಬಾ ಆಶೆ ಇದ್ದತ್ತು. ಅಮ್ಮನ ಬಗ್ಗೆ ವಸಂತ ಮಾವಂಗೆ ತುಂಬಾ ಅಭಿಮಾನ. ಅವ್ವು ಸಣ್ಣ ಮಾಣಿ ಹೇಳಿ ಬೇಧ ಮಾಡದ್ದೆ ಅವ್ವು ಮಾಡುವ ಸಾಹಿತ್ಯದ ಚರ್ಚೆಗಳ ಕೂಡಾ ಮಗನ ಹತ್ತರೆ ಹೇಳಿಗೊಂಡು ಇತ್ತಿದ್ದವು. ವಸಂತಮಾವನ ಜೀವನದ ಬಹು ಭಾಗ ಕಳುದಪ್ಪಗ ಅವಕ್ಕೆ ನಮ್ಮ ಬೈಲ ಕರೆಯಾಣ ಏತಡ್ಕದ ಕೇಶವಜ್ಜನ ಪರಿಚಯ ಆವುತ್ತು.
ಕೇಶವಜ್ಜಂಗೆ ಶುಂಟಿಕೊಪ್ಪಲ್ಲಿ ಜಾಗೆ ಇದ್ದತ್ತು. ಹಾಂಗೆ ಪರಿಚಯ ಆದ ಸ್ನೇಹ ತುಂಬಾ ಮುಂದುವರುದು ಯೇತಡ್ಕ ಮನೆಯ ಉಂಬೆಗಳ ಡಾಗುಟ್ರು ಕೃಷ್ಣಮೂರ್ತಿ ಮಾವನನ್ನೂ ಪರಿಚಯ ಆತು. ಅವರ ಹತ್ತರೆ ವಸಂತಮಾವ° ಅಬ್ಬೆಯ ಹೆಸರಿನ ಶಾಶ್ವತ ಮಾಡುವ ಯೋಜನೆಯ ಮಡಗಿದವು. ಅದರ ಫಲಸ್ವರೂಪವೇ “ಕೊಡಗಿನ ಗೌರಮ್ಮ ದತ್ತಿ ನಿಧಿ”.

ಇದರ ಮೂಲಕ ರಾಷ್ಟ್ರಮಟ್ಟಲ್ಲಿ ಹವ್ಯಕ ಹೆಮ್ಮಕ್ಕೊಗೆ ವರ್ಷಕ್ಕೊಂದರಿ ಕಥಾಸ್ಪರ್ಧೆ ನೆಡೆಶಿ ಹಲವಾರು ಹೆಮ್ಮಕ್ಕಳ ಬರವಣಿಗೆಗೆ ಒಂದು ವೇದಿಕೆ ಕಲ್ಪಿಸಿ ಕೊಟ್ಟು ನಮ್ಮ ಹೆಮ್ಮಕ್ಕಳೂ ಆಲೋಚನೆಯ ಕವಲುಗಳ ಹಲವು ಕಡೆಂಗೆ ಹರಿಸುವ ಹಾಂಗೆ ಮಾಡಿದ್ದವು.
ಇದರಲ್ಲಿ ಮುಖ್ಯವಾಗಿ ಕೆಲಸ ಮಾಡ್ತಾ ಇಪ್ಪದು ನಮ್ಮ ಬೈಲಿನ ವಿಜಯತ್ತೆ. ಕಾರ್ಯದರ್ಶಿ ಆಗಿದ್ದುಗೊಂಡು ಸಮರ್ಪಕವಾಗಿ ಕಾಲಕಾಲಕ್ಕೆ ಆಯೆಕ್ಕಾದ್ದದರ ಮಾಡಿಗೊಂಡು ಚೆಂದಲ್ಲಿ ನೆಡೆಶಿಗೊಂಡು ಬತ್ತಾ ಇದ್ದವು.
ನಮ್ಮ ಸಮಾಜದ ಎಲ್ಲಾ ಕೂಸುಗೊಕ್ಕೂ, ಹೆಮ್ಮಕ್ಕೊಗೂ ಗೌರಮ್ಮ ಮಾದರಿಯಾಗಿ ನಮ್ಮಲ್ಲಿಯೂ ಹಲವಾರು ಗೌರಮ್ಮಂಗ ಸಮಾಜಲ್ಲಿ ಮಾದರಿಯಾಗಿ ಶಾಶ್ವತ ಆಗಿ ನಮ್ಮ ಹವ್ಯಕಸರಸ್ವತೀ ದೇವಿಗೂ ತಮ್ಮ ತಮ್ಮ ಸೇವೆ ಸಲ್ಲುಸಲಿ..

ಸೂ: ಕೊಡಗಿನ ಗೌರಮ್ಮನ ಬಗ್ಗೆ ಮಾಹಿತಿ ಕೊಟ್ಟ ವಿಜಯತ್ತೆಗೆ, ಕಾರ್ಯಾಡು ಯಶೋದೆ ದೊಡ್ದಮ್ಮಂಗೆ, ಮಡಿಕೇರಿ ಶಶಿ ಅಕ್ಕಂಗೆ, ಪಟ ಒದಗಿಸಿ ಕೊಟ್ಟ ಕೂಳಕ್ಕೂಡ್ಲು ಪಾರ್ವತಿ ಅಕ್ಕಂಗೆ ಧನ್ಯವಾದಂಗೋ.

ಕೆಲವು ಪಟಂಗೊ:

~*~

ಶ್ರೀಅಕ್ಕ°

   

You may also like...

9 Responses

 1. ಶರ್ಮಪ್ಪಚ್ಚಿ says:

  ಕೊಡಗಿನ ಗೌರಮ್ಮ ಬಗ್ಗೆ ಪರಿಚಯ, ಅವರ ಸಾಧನೆ ಇದರ ಬಗ್ಗೆ ತುಂಬಾ ವಿಷಯಂಗಳನ್ನೂ, ಪಟಂಗಳನ್ನೂ ಸಂಗ್ರಹಿಸಿ ಕೊಟ್ಟ ಶ್ರೀ..ಗೆ ಧನ್ಯವಾದಂಗೊ.
  ಅಷ್ಟು ಸಣ್ಣ ಪ್ರಾಯಲ್ಲಿ ಅವರ ದೊಡ್ಡ ಸಾಧನೆ ನೋಡಿರೆ ಹೆಮ್ಮೆ ಆವ್ತು.
  ಗಾಂಧೀಜಿಯ ಸತ್ಯಾಗ್ರವನ್ನೇ ಅಸ್ತ್ರ ಮಾಡಿ ಅವರನ್ನೂ ಮನೆಗೆ ಬಪ್ಪ ಹಾಂಗೆ ಮಾಡೆಕ್ಕಾರೆ ಅವರ ಮನಸ್ಸು, ಸಂಕಲ್ಪ ಎಷ್ಟು ಧೃಢ ಹೇಳಿ ಗೊಂತಾವ್ತು. ತ್ಯಾಗಕ್ಕೆ ಇನ್ನೊಂದು ಹೆಸರೇ ಹೇಳ್ತಾಂಗೆ, ತನ್ನಲ್ಲಿಪ್ಪ ಚಿನ್ನವ ಗಾಂಧೀಜಿಗೆ ಒಪ್ಪಿಸಿ, ತಾನು ಇನ್ನು ಮುಂದೆ ಆಭರಣವಾಗಿ ಚಿನ್ನ ಉಪಯೋಗಿಸುತ್ತಿಲ್ಲೆ ಹೇಳ್ತಲ್ಲಿ ಅವರ ತ್ಯಾಗದ ಪರಿಚಯ ಆವ್ತು.
  “ಕೊಡಗಿನ ಗೌರಮ್ಮ ದತ್ತಿ ನಿಧಿ” ಸ್ಥಾಪಿಸಿ ಅವರ ಸರಸ್ವತಿ ಸೇವೆಯ ಮುಂದುವರುಸುವ, ಹೊಸಬರಿಂಗೆ ಪ್ರೋತ್ಸಾಹ ಕೊಡುವ ನಿಟ್ಟಿಲ್ಲಿ ಕೆಲಸ ಮಾಡುವ ಎಲ್ಲರಿಂಗೂ ಅಭಿನಂದನೆಗೊ.

 2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಗೌರಮ್ಮನವರ ಬಗ್ಗೆ ಬಹಳ ಹಿಂದೆ ಓದಿದ್ದೆ.ಅವರ ಸಾಧನೆ,ದೇಶಭಕ್ತಿ ತುಂಬಾ ಅದ್ಭುತ. ಅವರ ಅಂತ್ಯ ದಾರುಣ.ಇದ್ದಿದ್ದರೆ ಅವು ಇನ್ನೂ ದೊಡ್ದ ಸಾಧನೆ ಮಾಡುತ್ತಿದ್ದವು. ಭಾವಗೀತೆ ಗಾಯಕ ಅತ್ರಿ ತುಂಗೆಲಿ ಮುಳುಗಿ ಅಪ್ಪಾಗ ಎನಗೆ ಗೌರಮ್ಮನವರ ನೆಂಪಾತು. ಮುದ್ದಣ, ಯರ್ಮುಂಜ ರಾಮಚಂದ್ರ ಇವರ ಹಾಂಗೆ ಅಲ್ಪಾಯುಷಿ ಸಾಹಿತಿಗೊ. ಇವರ ಸಾವು ಸಾಹಿತ್ಯಕ್ಕೆ ನಿಜವಾದ ಅರ್ಥಲ್ಲಿ ಬಲು ದೊಡ್ಡ ನಷ್ಟ-ಬರೀ ಬಾಯಿ ಮಾತಿಂಗೆ ಹೇಳುದಲ್ಲ.
  ಬೈಲಿಲಿ ಇವರ ಬಗ್ಗೆ ಬರೆದ ಶ್ರೀ ಅಕ್ಕಂಗೆ, ಸ್ಪರ್ಧೆಯ ನಡೆಸುವ ಗೌರಮ್ಮನವರ ಮಕ್ಕೊಗೆ, ಸಂಚಾಲಕಿ ವಿಜಯಚಿಕ್ಕಮ್ಮಂಗೆ ನಮ್ಮ ಅಭಿನಂದನೆಗೊ ಸಲ್ಲುತ್ತು.

 3. ಚೆನ್ನೈ ಭಾವ° says:

  ನಮೋ ನಮಃ

 4. ಪದ್ಯಾಣ ಉದಯ ಶ೦ಕರ says:

  ನಮ್ಮ ಸಮಾಜದ ಒಂದು ಹೆಮ್ಮಕ್ಕ ಗಾ೦ಧೀಜಿಯವರ ಇಷ್ಟು ಹತ್ತರಂದ ನೋಡಿದ್ದವು ಹೇಳುದೆ ಹೆಮ್ಮೆಯ ವಿಷಯ.
  ಫೊಟೊ ಎಲ್ಲ ಕೊಟ್ಟು, ಲೇಖನ ಲಾಯಿಕ್ಕಾಯಿದು.

 5. ಕೊಡಗಿನ ಗೌರಮ್ಮನ ಬಗ್ಗೆ ತುಂಬಾ ವಿಷಯ ಗೊಂತಾತು. ನಿಜವಾಗಿಯೂ ಅವರ ತ್ಯಾಗವ ಮೆಚ್ಚೆಕಾದ್ದೆ. ಅಂಬಗಾಣ ಕಾಲಲ್ಲಿ ಅಷ್ಟು ಸಾಧನೆ ಮಾಡಿದ ಅವು ಸಣ್ಣ ಪ್ರಾಯಲ್ಲೆ ದುರ್ವಿಧಿಯ ಕೈಲಿ ಸಿಕ್ಕಿದ್ದು ತುಂಬಾ ಬೇಜಾರಿನ ವಿಷಯ. ಅವರ ನೆಂಪಿಲ್ಲಿ ನಿಧಿಸ್ಥಾಪಿಸಿ ಒಳ್ಳೆ ಕಾರ್ಯ ನೆಡಸುತ್ತಾ ಇಪ್ಪ ವಸಂತ ಮಾವನ ಕೆಲಸ ಸ್ತುತ್ಯರ್ಹ. ಬೈಲಿಂಗೆ ಮಾಹಿತಿಕೊಟ್ಟ ಶ್ರೀ ಅಕ್ಕಂಗೆ ಧನ್ಯವಾದಂಗೊ.

 6. ಶ್ರಿ ಅಕ್ಕ, ಗೌರಕ್ಕನ ಬಗ್ಗೆ ಈ ಹನ್ನೆರಡು ವರುಷಲ್ಲಿ ಆನು ತಿಳಕ್ಕಂಡ ವಿಶಯಂಗಳ ನೀನು ಒಂದು ವಾರಲ್ಲಿ ತಿಳುದು ಬರದೆ ಕೆಲವು ಎನ ಗೊಂತಿಲ್ಲದ್ದ ವಿಷಯವೂ ಸಿಕ್ಕಿತ್ತು ಉದಾ;-ಅವರಗೋತ್ರ, ಅವರ ಕುಟುಂಬದ ಹೆಸರು ಇತ್ಯಾದಿ

  ಹಾಂಗೇ ಫೊಟೊ ಕೂಡಾ ಹಾಕಿ ಬರಹದ ಚೆಂದ ಹೆಚ್ಚಿಗೆ ಮಾಡಿದ್ದೆ.ತುಂಬಾ ತುಂಬಾ ಧನ್ಯವಾದಂಗೊ.
  ಅದರೊಟ್ಟಿಂಗೆ ಇಂದು ವಿದ್ಯಾಪೀಠ ಬದಿಯಡ್ಕಲ್ಲಿ ನಿರ್ವಹಣೆ ಮಾಡಿ ಸಭೆಗೆ ಚೆಂದ ಹೆಚ್ಚಿಸಿದ್ದೆ. ನಿನಗೆ ಕೃತಜ್ನತೆಗೊ.

  ವಿ.ಸೂಃ ಎನಗೆ ಗೊಂತಿದ್ದಾಂಗೆ ಗೌರಮ್ಮನ ಜನ್ಮದಿನ ೫-೦೩-೧೯೧೨.

 7. ತೆಕ್ಕುಂಜ ಕುಮಾರ ಮಾವ° says:

  {ಗೌರವಸ್ತ್ರ ಗೌರಸ್ಮಿತ ಗೌರವದೀ ಗೌರೀ
  ಮಿಂಚಿದಳದೋ ಬಾನಂಚಿಗೆ ಕಾವೇರಿಯ ಕುವರಿ }

  ಅಂಬಿಕಾತನಯ ದತ್ತರ ಎರಡು ಸಾಲುಗೊ ಗೌರಮ್ಮನವರ ಸ್ತೂಲ ಪರಿಚಯವ ಕೊಟ್ಟತ್ತು. ಇವರ ಬಗ್ಗೆ ಈ ಮದಲು ಗೊಂತಿತ್ತಿಲೆ. ಪರಿಚಯ ಕೊಟ್ಟದು ಸಕಾಲಿಕ. ಶ್ರೀ ಅಕ್ಕಂಗೆ ಧನ್ಯವಾದ.

 8. ವಿದ್ಯಾ ರವಿಶಂಕರ್ says:

  ಶ್ರೀಅಕ್ಕ ಗೌರಮ್ಮನ ಬಗ್ಗೆ ಪರಿಚಯ ಮಾಡಿ ಕೊಟ್ಟದು ಅದ್ಭುತ ಆಯಿದು. ಧನ್ಯವಾದಂಗೊ.

 9. raghumuliya says:

  ಅಕ್ಕಾ,
  ಕೊಡಗಿನ ಗೌರಮ್ಮನ ನೆನಪಿಲಿ ಕಥಾಕಮ್ಮಟ ಇದ್ದು ಹೇಳಿ ಗೊ೦ತಾಗಿಯಪ್ಪಗ ಅವರ ವಿಷಯ ತಿಳಿಯೆಕ್ಕು ಹೇಳುವ ಕುತೂಹಲ ಆಗಿತ್ತು.ಈಗ ಸುಮಾರು ಗೊ೦ತಾತು.ಅವರ ಕಥಾಸ೦ಗ್ರಹ ಪ್ರಕಟ ಆಯಿದೊ?ಪ್ರತಿ ಎಲ್ಲಿಯಾರು ಸಿಕ್ಕುಗೊ?
  ‘ಕ೦ಬನಿ’ಲಿ ಕವಿ ಬೇ೦ದ್ರೆಯ ಕವನದ ಕಲ್ಪನೆಗೊ ಅದ್ಭುತ.
  ಧನ್ಯವಾದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *