Oppanna.com

ಆಟಿಲಿ ಮರವಲಾಗದ್ದ ಮರಕೆಸವು ಪತ್ರೊಡೆ..!

ಬರದೋರು :   ಒಪ್ಪಣ್ಣ    on   24/07/2015    5 ಒಪ್ಪಂಗೊ

ಆಟಿ ಮಳೆ ಧೋ ಧೋ ಹೇದು ಸೊರಿತ್ತಾ ಇದ್ದು. ಮಳೆಗೆ ತೋಟಕ್ಕೆ ಹೋತಿಕ್ಕಲೆಡಿತ್ತಿಲ್ಲೆ, ನುಸಿಪಿಳ್ಳೆಗಳೂ ಬೆಳ್ಳಕ್ಕೆ ಹೋಗಿ ಮನಾರ ಮಾಡ್ತ ಮಳೆಗೆ ಎಲ್ಲವೂ ಜಡ. ಮಾಡ್ಳೆ ಕೆಲಸ ಇಲ್ಲೆ, ಬಡಿವಲೆ ನುಸಿ ಇಲ್ಲೆ –ಹೇಳ್ತ ಪರಿಸ್ಥಿತಿ ಆಯಿದು! ಈ ಉದಾಸ್ನದ ಸಮೆಯಲ್ಲಿ ಮಾಡುಸ್ಸಾದರೂ ಎಂತರ? ಮೂರೂ ಹೊತ್ತು ಗುಡಿಹೊದ್ದು ಒರಗುಸ್ಸು ಸುಲಭ ಅಲ್ದೋ?
ಬೋಚಬಾವಂಗೆ ಹನ್ನೆರಡು ತಿಂಗಳೂ ಆಟಿಯ ಜಡವೇ ಇಪ್ಪದು. ಅದಿರಳಿ.
~

ನಮ್ಮ ಬೈಲಿಲಿ ಕಾಲಕಾಲಕ್ಕೂ ಅದರದ್ದೇ ಆದ ವಿಶೇಷತೆಗೊ ಇರ್ತು. ಆಚರಣೆ, ವೇಷ ಭೂಷಣಂಗಳಲ್ಲಿ ಅಷ್ಟೇ ಅಲ್ಲದ್ದೇ – ಊಟಲ್ಲಿಯೂ ವೈಶಿಷ್ಠ್ಯ ಇದ್ದು. ಬೇಸಗೆಲಿ ತಂಬುಳಿ, ಮಳೆಗಾಲ ಮಾಂಬ್ಳಗೊಜ್ಜಿ, ಚಳಿಗಾಲಲ್ಲಿ ಅಂಬಟೆ ಸಾರು.. ಇತ್ಯಾದಿ.
ಹಾಂಗೇ ಆಟಿ ಬಂದರೆ? ಪತ್ರೊಡೆ ಇದ್ದೇ ಇರ್ತು.

~

ಪತ್ರೊಡೆ ಶಬ್ದದ ಮೂಲ ಎಂತ್ಸರ ಹೇದು ಕೂಳಕ್ಕೂಡ್ಳಣ್ಣನೋ, ವಿದ್ವಾನಣ್ಣನೋ ಮಣ್ಣ ವಿವರ್ಸುಗು. ಆದರೆ ಒಪ್ಪಣ್ಣನ ಮಟ್ಟಿಂಗೆ ಅದೊಂದು ಫಲಾರ ತಿಂಡಿ. ಪತ್ರ ಹೇದರೆ ಎಲೆ ಅಡ ಸಂಸ್ಕೃತಲ್ಲಿ. ಅಕ್ಕಿಹಿಟ್ಟಿಲಿ ಮಾಡ್ತ ಒಡೆಯ ನಮುನೆ ಇದನ್ನೂ ಅಕ್ಕಿ ಹಿಟ್ಟಿನ ಪಾಕಲ್ಲಿ ಬೇಶುತ್ತದು ಆದ ಕಾರಣ ಪತ್ರ-ಒಡೆ ಸೇರಿ ಪತ್ರೊಡೆ ಆದ್ಸಾಯಿಕ್ಕು ಹೇದು ತರವಾಡುಮನೆ ಶಾಂಭಾವನ ಸಂಧಿವಿಗ್ರಹ. ಅದೇನೇ ಇರಳಿ, ಪಾತಿಅತ್ತೆಯ ಪತ್ರೊಡೆ ಎದುರಿದ್ದರೆ ಯೇವ ಸಮಾಸವೂ ಬೇಡ.

ಆಟಿ ಬಂದರೆ ಸಮ, ಓ ಅಲ್ಲಿ ಕಟ್ಟಪುಣಿ ತಲೇಲಿಪ್ಪ ಗೋಳಿ ಮರದ ಗೆಲ್ಲುಸಂದಿಗಳಲ್ಲಿ ಮರಕೆಸವು ಬಂದೇ ಬತ್ತು. ಪಾತಿಅತ್ತೆ ಬಂದ ಲಾಗಾಯ್ತು ಎಲ್ಲಾ ಮಳೆಗಾಲವೂ ಬಯಿಂದು. ಎಂತಗೆ, ಅವರ ಅತ್ಯೋರು – ಕಾಂಬುಅಜ್ಜಿಯ ಕಾಲಲ್ಲಿಯೂ ಇದ್ದತ್ತು. ಅದರಿಂದ ಮೊದಲೂ ಇದ್ದಿಕ್ಕು. ಒಂದರಿ ಒಂದು ಮರಕ್ಕೆ ಮರಕೆಸವು ಬಂದರೆ ಅದು ಸುಲಭಲ್ಲಿ ಅಳಿತ್ತಿಲ್ಲೇಡ. ಬೇಸಗೆಲಿ ಕಾಣ, ಆಟಿಲಿ ಕಾಣದ್ದೆ ಒಳಿಯ!

ಎತಾರ್ತಕ್ಕೆ, ಅದು ಇತರೇ ಕೆಸವಿನ ಹಾಂಗೇ ಆದರೂ – ಅದೊಂದು ಪರಾವಲಂಬೀ ಪ್ರಬೇಧ. ಮರದ ಪೊಟರೆಗಳಲ್ಲಿ, ಕುಂಬು ಮಾಟೆಗಳಲ್ಲಿ ಅದರ ಜೀವನ. ಮಳೆಗಾಲಲ್ಲಿ ಆ ಸಂದಿಗಳಲ್ಲಿ ನೀರಪಸೆ ನಿಂದು ಜೀವಾಂಶ ತುಂಬಿದ ತಕ್ಷಣ ಅಲ್ಲಿಪ್ಪ ಮರಕೆಸವಿನ ಗೆಂಡೆಗೆ ಎಚ್ಚರಿಗೆ ಆವುತ್ತು, ಚೆಂದಕೆ ನಾಲ್ಕು ಎಲೆ ಬಿಟ್ಟು ನೆಗೆಮಾಡಿಂಡು ನಿಂಗು. ಮಳೆಗಾಲ ಹೋದಪ್ಪಾಗ ಮತ್ತೆ ಆ ಗೆಂಡೆ ಒರಗಲೆ ಸುರು ಮಾಡುಗು, ಬಪ್ಪೊರಿಶ ಒರೆಂಗೆ.
ಆ ಮರ ಕಡಿವನ್ನಾರವೂ ಕೆಸವಿನ ಬುಡ ಹಾಂಗೇ ಇಕ್ಕು. ಮರವೂ ಕೆಸವಿನ ಕೊಲ್ಲ, ಕೆಸವುದೇ ಮರವ ಕೊಲ್ಲ. ಒಂಥರಾ – ಪರಸ್ಪರ ಹೊಂದಾಣಿಕೆಯ ಪರಾವಲಂಬನೆ ಅದು.

~

ಆ ಕೆಸವಿನ ತಂದು ಪತ್ರೊಡೆ ಮಾಡ್ಳಾವುತ್ತು ಹೇದು ಆರು ಕಂಡು ಹಿಡುದವೋ, ನಮ್ಮ ಅಜ್ಜಿಯಕ್ಕೊಗೆ ಅದರ ಆರು ಹೇಳಿಕೊಟ್ಟವೊ! ದೇವರಿಂಗೇ ಗೊಂತು.
ಯೇವದಾರು ಮರಲ್ಲಿ ಪತ್ರೊಡೆಸೊಪ್ಪು ಕಂಡ್ರೆ ಅದರ ಕೊಯಿಶಿ ತಂದು, ಮನಾರಕ್ಕೆ ತೊಳದು, ಸಣ್ಣಸಣ್ಣಕೆ ತುಂಡುಸಿ, ಅಕ್ಕಿಹಿಟ್ಟಿಂಗೆ ಬೆರುಸಿ,ತೊರುಸುತ್ತದಕ್ಕೆ ರಜಾ ಹುಳಿ, ಸೀವಿಂಗೆ ರಜಾ ಬೆಲ್ಲ, ರುಚಿಗೆ ರಜಾ ಉಪ್ಪು – ಇತ್ಯಾದಿಗಳ ಹಾಕಿ ಕೊಟ್ಟಿಗೆಯ ಹಾಂಗೆ ಹಬೆಲಿ ಬೇಶುಗು.
ಬೆಂದ ಮುದ್ದೆಯ ಬಿಡುಸಿ, ಒಗ್ಗರಣೆ ಹಾಕುಗು. ಬೆಲ್ಲಸುಳಿಯೋ, ತೆಂಙಿನೆಣ್ಣೆಯೋ ಮಣ್ಣ ಹಾಕಿರೆ ತಿಂಬಲೆ ಬಹು ರುಚಿ. ಪತ್ರೊಡೆಗೆ ಎಲೆ ಆದರೆ ಆತು. ಅದರ್ಲಿಯೂ – ಮರಕೆಸವು ಹೇದರೆ ಪತ್ರೊಡೆಗೆ ಒಳ್ಳೆ ಚೇರ್ಚೆ.
ಹಾಂಗಾಗಿ, ಒರಿಶದ ಹನ್ನೊಂದು ತಿಂಗಳೂ ಬೇಡದ್ರೂ ಆಟಿ ಬಂದಪ್ಪದ್ದೇ ಎಲ್ಲೋರುದೇ ಮರಚ್ಚೇವು ಹುಡ್ಕಿಂಡು ಹೋಕು.

~

ಮರಕೆಸವು – ಹೆಸರೇ ಹೇಳ್ತ ಹಾಂಗೆ ಅದು ಮರಲ್ಲಿ ಅಪ್ಪದು. ಸ್ವಾಭಾವಿಕ ಜೀವನ, ಕಾಡುಗಳಲ್ಲಿ.
ಆದರೆ, ಈಗೀಗ ಕೆಲವು ಜೆನ ಮರದ ಮಿಲ್ಲಿಂದ ಹೊಡಿ ತಂದು ಚಟ್ಟಿಲಿ ಮಡಗಿ ಬೆಳೆಶುತ್ತವಾಡ, ಇದರ ರುಚಿಗೆ ತಡೆಯದ್ದೆ. ಅಪ್ಪು, ಕಾಡುಕಾಡು ಹುಡ್ಕಿಂಡು ಹೋವುಸ್ಸು ಆರು? ಅದಕ್ಕೆ ಕೈಗೆ ಸಿಕ್ಕುತ್ತಲ್ಲೇ  – ಚಟ್ಟಿಲೇ ಇದ್ದರೆ ಸುಲಭ ಅಲ್ದೋ?

~

ಹೀಂಗೆ ಬೆಳೆಶಿದ ಮರಕೆಸವಿನ ಪೇಟೆಲಿ ಈಗ ಮಾರ್ತವಾಡ. ಕೊಂಕಣಿಗೊಕ್ಕೆ ಇದಿಲ್ಲದ್ದೆ ಆತೇ ಇಲ್ಲೆ ಇದಾ, ಕೆಸವಿನ ಎಲೆಗೆ ಹಿಟ್ಟು ಉದ್ದಿ, ಸುಂದರಿ ಬೀಡಿ ಸುಂದಿದ ಹಾಂಗೆ ಸುಂದಿ ಬೇಶುದು ಅವು. ಮತ್ತೆ ಅದರ ಲಾಯ್ಕಕ್ಕೆ ತುಂಡುಸಿ ಅದರ ತಿಂಸು ಕೊಂಕಣಿಗಳ ಕ್ರಮ. ಹಾಂಗಾಗಿ ಕೊದಿಬಿಟ್ಟು ತೆಕ್ಕೊಳ್ತವಾಡ. ಒಂದು ಎಲೆಗೆ ಹತ್ರುಪಾಯಿ ಇದ್ದರೂ – ತೆಕ್ಕೊಂಬ ಕೊದಿ ಅದು – ಹೇದು ಜೀಪಿನ ಪ್ರಸಾದಣ್ಣ ಹೇಳುಗು.

ಆದರೆ, ಜೀಪಿನ ಪ್ರಸಾದಣ್ಣ ಮರಕೆಸವು ಪೇಟೆಂದ ತೆಗವದು ನಿಲ್ಲುಸಿದ್ದವಾಡ ಈಗ. ಎಂತಕೆ ಗೊಂತಿದ್ದೋ? ಒಂದಾರಿ ಉದಿಉದಿಯಪ್ಪಾಗ ಪುತ್ತೂರು ಪೇಟೆಲಿ ಜೀಪುಬಿಟ್ಟುಗೊಂಡು ಹೋಪಾಗ – ಎಲ್ಲಿಂದಲೋ ತಂದ ಮರಕೆಸವಿನ ಮಣ್ಣು ಹೋಪಲೆ ಹೇದು ಪುತ್ತೂರಿನ ತೋಡಿಲಿ ತೊಳಕ್ಕೊಂಡು ಇತ್ತಿದ್ದವಾಡ.
ಪುತ್ತೂರಿನ ತೋಡು ಹೇದರೆ ಅದು ಲೋಕಪ್ರಸಿದ್ಧಿ. ಗಂಗಾನದಿ ಎಷ್ಟು ಶುದ್ಧವೋ – ಅದಿಂದ ಒಂದು ಕೈ ಮೇಲೆಯೇ ನಮ್ಮ ಪುತ್ತೂರು ತೋಡು – ಅಡ. ಹಾಂಗಿರ್ಸ ತೋಡಿಲಿ ತೊಳದ ಮತ್ತೆ ಅಷ್ಟು ಶುದ್ಧದ್ದರ ನಾವು ತಿಂದರೆ ನಮ್ಮ ಹೊಟ್ಟೆಗೆ ಏನಾರು ಬಂದು ಸುತ್ತುಗು – ಹೇಳುಸ್ಸು ಪ್ರಸಾದಣ್ಣನ ಅಭಿಪ್ರಾಯ. ಅದಿರಳಿ.

~

ಹಾಂಗಿಪ್ಪ ಕೊದಿ ನಮ್ಮ ಬೈಲಿಲಿ – ಮರಕೆಸವು ಬಗ್ಗೆ.
ಈ ಪ್ರೀತಿ ಅಂತೇ ಬೆಳದತ್ತೋ ಕೆಸವಿನ ಬಗ್ಗೆ? ಮರಕೆಸವಿನ ಬಗ್ಗೆ ನಮ್ಮ ಹೆರಿಯರಲ್ಲಿ? ಸೊಪ್ಪುಗಳಲ್ಲಿ ಇಪ್ಪ ಮದ್ದಿನ ಗುಣಂಗಳ ಕಂಡೋರು ಅವು! ಈಗಾಣ ಯೇವ ಎರಡು ಡಿಗ್ರಿಯವರಿಂದ ಹೆಚ್ಚಿಗೆ ಜ್ಞಾನ ಇತ್ತು ನಮ್ಮವಕ್ಕೆ. ಅದರಲ್ಲಿಯೂ ಆಟಿಲಿ ಮದ್ದಿನ ಸತ್ವ ತುಂಬಿರ್ತು ಹೇಳುದರನ್ನೂ ಕಂಡುಗೊಂಡಿದವು. ಜಾಲಿಲಿಪ್ಪ ಹಲವು ಸೊಪ್ಪುಗ ಊಟಲ್ಲಿ ನಮ್ಮ ಹೊಟ್ಟೆ ಸೇರಿ ಆರೋಗ್ಯ ಕೊಡ್ತ ಕೆಣಿ ಅವಕ್ಕೆ ಅರಡಿಗಾಯಿದು. ನಮ್ಮ ಮುಂದಾಣವಕ್ಕೆ ಅದು ಒಳಿಯೆಕ್ಕಾದರೆ ಪತ್ರೊಡೆ ಮಾಡ್ತ ಕ್ರಮ ಮಾಂತ್ರ ಅಲ್ಲ, ಮರ ನೆಡ್ತ ಕ್ರಮವೂ ಮಕ್ಕೊಗೆ ಹೇಳಿ ಕೊಡೆಕ್ಕು. ಇಲ್ಲದ್ದರೆ ಮುಂದೆ ಮರವೂ ಇರ, ಮರಕೆಸವೂ ಇರ!

~

ಇಷ್ಟೆಲ್ಲ ಶುದ್ದಿ ಮಾತಾಡಿ ಅಪ್ಪಾಗ – ಬೈಲಿಲಿ ಮರಕೆಸವಿಂದಾದ ಒಂದು ಘಟನೆ ಹೇಳುಲೇಬೇಕು, ಅಪ್ಪೋ. ಒಂದರಿ ನಾವು ಬೈಲಿಲಿ ಆ ವಿಷಯ ಮಾತಾಡಿದ್ದು. ಆದರೂ – ಮತ್ತೊಂದರಿ ನೆಂಪು  ಮಾಡುವೊ°.
ಸದ್ಯ ಮದುವೆ ಆದ ಸಂಕುವಿನ ಮಗ ಸೂರಿ – ಅದರ ಹೆಂಡತ್ತಿಗೆ ಮರಕೆಸವು ತಿಂಬ ಬಯಕ್ಕೆ ಆತು ಹೇದು ಹುಡ್ಕಿಂಡು ಹೋತು. ಒಂದು ಮರಲ್ಲಿ ಕಂಡತ್ತುದೇ. ಹಾಂಗೆ ಹತ್ತಿತ್ತು.

ಹತ್ತಿಂಡು ಹೋತು, ಮರಕೆಸವು ಸಿಕ್ಕಿತ್ತು, ಕೊಯಿವಲೆ ಕೈ ಉದ್ದ ಮಾಡಿತ್ತು. ಅದಾ!
ಇನ್ನೊಂದು ಕೈ ಹಿಡ್ಕೊಂಡ ಗೆಲ್ಲು ಕುಂಬಾಗಿತ್ತು! ಕುಂಬು ಹೊಡಿ ಇಪ್ಪಲ್ಲೇ ಅಲ್ದೋ ಮರಕೆಸವುದೇ ಇಪ್ಪದು! ಮಳೆ ನೀರಿಂಗೆ ಅದಕ್ಕೆ ಕುಂಬೇವದು, ಗೆನಾದ್ಸು ಯೇವದು ಹೇದು ಗೊಂತಾಗದ್ದೆ ಹೋಗಿದ್ದತ್ತು. ಹಾಂಗೆ ಕುಂಬು ಗೆಲ್ಲು ಚರಚರನೆ ಮುರುದತ್ತು. ಇನ್ನೊಂದು ಕೈಲಿ ರಪ್ಪನೆ ಆಧರುಸಿದ ಇನ್ನೊಂದು ಗೆಲ್ಲು – ಅದುದೇ ಕುಂಬು!

ಬಡೋಲನೆ ಬಿದ್ದತ್ತು, ನಾಕೈದು ಕೋಲು ಎತ್ತರಂದ.
ಬಿದ್ದದರ್ಲಿ ಬೇರೆಲ್ಲಿಗೆ ಪೆಟ್ಟಾಗದ್ರೂ, ಸೊಂಟಕ್ಕೆ – ಬೆನ್ನೆಲುಬು ಸೇರ್ತಲ್ಲಿಗೆ ಮಾಂತ್ರ ಪೆಟ್ಟಾತು.
ಏವ ಮಟ್ಟಿನ ಪೆಟ್ಟು ಹೇದರೆ, ಬೆನ್ನೆಲುಬು ಮುರುದೇ ಹೋಪಷ್ಟೂ ತೀವ್ರತರದ್ದು. ಬಿದ್ದಲ್ಲಿಂದ ಏಳುಲೇ ಎಡಿಯ, ಮತ್ತೆ ಬಾಬೆಯ ಹಾಂಗೆ ಹರಕ್ಕೊಂಡು ಹರಕ್ಕೊಂಡು ಸುಮಾರು ದೂರ – ಮಾರ್ಗದ ಕರೆ ಒರೆಂಗೆ ಬಂದು, ಮತ್ತೆ ಆರಾರೋ ಆಸ್ಪತ್ರೆಗೆ ಕರಕ್ಕೊಂಡು ಹೋಪ ಹಾಂಗೆ ಮಾಡಿಗೊಂಡು – ಅಂತೂ ಅಲ್ಲಿ ಆದ ಹೆರಾಣ ಗಾಯ ಗುಣ ಆತೋ ಏನೋ, ಆ ಬೆನ್ನೆಲುಬು ಮುರುದ್ದು ಸರಿ ಆಯಿದಿಲ್ಲೆ ಇನ್ನುದೇ!

ಅಂದು ಮನುಗಿದ ಸೂರಿ ಇಂದಿಂಗೂ ಎದ್ದಿದಿಲ್ಲೆ. ಇನ್ನು ಏಳುದೂ ಸಂಶಯವೇ ಅಡ. ಆ ಮನೆಯ ಮುಂದಾಣ ಭವಿಷ್ಯವೇ ಕರಂಚಿ ಹೋದ ಹಾಂಗೆ! ಪ್ರೀತಿಯ ಹೆಂಡತ್ತಿ ಬಸರಿ ಆಗಿದ್ದದು ಒಂದು ಮಗಳನ್ನೂ ಹೆತ್ತು ಕೊಟ್ಟತ್ತು. ಅದರ ಅಮ್ಮನೇ ಕೂಲಿ ಕೆಲಸ ಮಾಡಿ ಮಗನ ಸಂಸಾರ ಸಾಂಕೆಕ್ಕಾದ ಅನಿವಾರ್ಯತೆ ಮುಂದುವರುದತ್ತು.
ಅದು ಹತ್ತಿದ ಮರಲ್ಲಿ ಭೂತವೋ, ಬ್ರಹ್ಮರಕ್ಷಸನೋ ಎಂತದೋ ಇದ್ದತ್ತು – ಹೇಳ್ತದು ಕೆಲವು ಜೆನರ ಅಭಿಪ್ರಾಯ. ಅದೇನೇ ಇದ್ದರೂ – ಎಲ್ಲವುದೇ ಆದ್ದು ಒಂದು ಮರಕೆಸವಿನ ಕೆಸವಿನ ನೆಪಲ್ಲಿ ಇದಾ!
ಮರಕೆಸವು ಕೊಯ್ವಲೆ ಹೇದು ಮಳೆಗಾಲಲ್ಲಿ ಮರ ಹತ್ತುತ್ತರೆ ಜಾಗ್ರತೆ ಬೇಕು. ಅಲ್ಲ, ಅದು ಮಾಂತ್ರ ಅಲ್ಲ – ಯೇವ ಕೆಲಸ ಮಾಡ್ತರೂ ಜಾಗ್ರತೆ ಬೇಕಪ್ಪಾ. ಅದಿರಳಿ.

~

ಮಳೆಗಾಲದ ಮಳೆಗೆ ಬೆಶ್ಚಂಗೆ ಮನೆಲಿಪ್ಪಾಗ – ಒಂದರಿ ಆದರೂ ಮರಕೆಸವಿನ ಪತ್ರೊಡೆ ಮಾಡಿ ತಿಂದಿಕ್ಕಿ – ಆತೋ?
ಚೀಪೆದೂ ಅಕ್ಕು, ಖಾರದ್ದೂ ಅಕ್ಕು – ಮಾಡಿಪ್ಪಾಗ ಒಪ್ಪಣ್ಣನನ್ನೂ ದಿನಿಗೆಳುದು ಮರೇಡಿ. ಗೊಂತಾತೋ? ಏ?

~

ಒಂದೊಪ್ಪ: ಈಗ ಸಿನೆಮಲ್ಲಿ ಗುಲಾಬಿ ತಂದು ಕೊಡ್ತ ಕೊಶಿಯ ನಮುನೆ, ಮದಲಿಂಗೆ ಆಟಿಲಿ ಮರಕೆಸವು ತಂದು ಕೊಡುಸ್ಸು ಕೊಶಿಕಾರಕ ಅಡ! 🙂

5 thoughts on “ಆಟಿಲಿ ಮರವಲಾಗದ್ದ ಮರಕೆಸವು ಪತ್ರೊಡೆ..!

  1. ಒಳ್ಳೆದಾಯಿದು ಲೇಖನ. ಪತ್ರ=ಎಲೆ; ಅಡೆ=ಅಡ್ಯ=ಅಕ್ಕಿಯ ತಿಂಡಿ ,ಹೀಂಗೆ ಆಗಿ ಪತ್ರಡೆ ಹೇಳಿ ಬಂದದಾದಿಕ್ಕು.

  2. ಎಲ್ಲಿದ್ದು ಮರಕೆಸವು ?ಎ೦ಗೊಗೆ ಇದುವರೆಗೂ ಸಿಕ್ಕಿದ್ದಿಲ್ಲೆ. ಕಾಟು ಕೆಸವಿ೦ದು ಆದರೆ ಮಾಡ್ತಾ ಇರ್ತೆ .ಅಕ್ಕಾದರೆ ಒಪ್ಪಣ್ಣ ಬಪ್ಪ ಮುನ್ನಾಣ ದಿನ ಹೇಳಿದರೆ ಸಾಕು . ಖ೦ಡಿತಾ ಮಾಡಿ ಕೊಡ್ತೆ .

  3. ಆಟಿಲಿ ಮರವಲೆಡಿಯದ್ದು ಇದಲ್ಲ ಬೇರೆ ಹೇಳ್ತವು, ಹೊಸ ಮದುವೆ ಆದ ಅಳಿಯಂದ್ರು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×