ಆಯ-ವ್ಯಯದ ನೆಮ್ಮದಿಗೆ ಆಲಯದ ‘ಆಯ’…

ಜೋಯಿಷಪ್ಪಚ್ಚಿ ಮಾತಾಡುದೇ ಸ್ವಾರಸ್ಯಪೂರ್ಣ; ಅದರ್ಲಿಯೂ ಅವು ಕತೆ ಹೇಳ್ತರೆ ಕೇಳುಲೇ ಚೆಂದ.
ವಾರ ಇಡೀ ಜ್ಯೋತಿಷ್ಯ, ಪಂಚಾಂಗ, ದಿನ ನೋಡುತ್ಸು, ಕುಟ್ಟಿ ಬಡಿತ್ಸು – ಹೇದು ಅಂಬೆರ್ಪಿಲಿದ್ದರೂ, ಎಡೆಲಿ ಸಿಕ್ಕುತ್ತ ಸಮೆಯವ ಚೆಂದಲ್ಲಿ ನೆಗೆನೆಗೆಮಾಡಿಂಡು ಕಳಿತ್ಸು ಅವರ ಶೆಗ್ತಿ.
ಪೇಟೆಮಾಣಿಯ ಹಾಂಗೆ ಆಯಿತ್ಯವಾರ ರಜೆ ಅಲ್ಲ; ಆಯಿತ್ಯವಾರ ಪ್ರಶ್ನೆಗೆ ಬತ್ತೋರು ಜಾಸ್ತಿಯೇ.
ಇದರೆಡೆಲಿಯೂ ಜೋಯಿಷಪ್ಪಚ್ಚಿ ಕತೆ ಹೇಳೇಕಾರೆ ಅವು ಅಷ್ಟೂ ಪುರ್ಸೋತಿಲಿ ಇರೆಕ್ಕು.
ಮನ್ನೆ ಹಾಂಗೆ ಅಪ್ರೂಪಲ್ಲಿ ಪುರ್ಸೋತಿದ್ದೊಂಡು ಸಿಕ್ಕಿದವು.  ಯೇವತ್ತು? ಅದೇ – ಅವರ ಮಗನ ಬದ್ಧಕ್ಕೆ ಕೂಸಿನ ಮನಗೆ ಹೋಪಗ.

ಬೈಲಕರೆಂದ ಕೂಸಿನ ಮನಗೆ ಎರಡು ವೇನು. ಒಂದ್ನೇದು ಬೇಗ ಹೋಪಲೆ – ಕಳೀಯಬಾರದ್ದ ಹತ್ತರಾಣೋರಿಂಗೆ;
ಒಂದರಿಯಾಣ ಅಕ್ಕಚ್ಚುಕೊಟ್ಟು, ಕರದು, ಹುಲ್ಲು ಮಾಡಿಕ್ಕಿ ಹದಾಕೆ ಹೆರಡ್ತೋರಿಂಗೆ ಎರಡ್ಣೇದು, ಹನ್ನೊಂದು ಗಂಟೆಗೆ.
ಎಲ್ಲೋರುದೇ ಎರಡ್ಣೇ ವೇನು ಹೇದರೆ ಅಕ್ಕೋ? ಬೇರೆ ಕೆಲಸವೂ ಏನೂ ಇದ್ದತ್ತಿಲ್ಲೆ – ಹಾಂಗೆ ಸುರುವಾಣದ್ದಕ್ಕೇ ಹೆರಟತ್ತು ನಾವು.
ಜೆನವೂ ಕಮ್ಮಿ ಇದ್ದ ಕಾರಣ ಕಾಲಿಕಾಲಿ ಇದ್ದತ್ತು; ನವಗೆ ಜೋಯಿಶಪ್ಪಚ್ಚಿಯ ಹತ್ತರೆಯೇ ಸಿಕ್ಕಿತ್ತು.
ಜೋಯಿಶಪ್ಪಚ್ಚಿಯ ಅಪ್ರೂಪದ ಪುರ್ಸೊತ್ತು ಅಂಬಗಳೇ ಇದಾ!
~

ಜೋಯಿಶಪ್ಪಚ್ಚಿ ಬಾಯಿಲಿ ಬಪ್ಪ ಕತೆಗಳಲ್ಲಿ ಮುಕ್ಕಾಲಂಶವೂ ತೆಂಕ್ಲಾಗಿಯಾಣದ್ದೇ!
ಅವರ ಅಪ್ಪಚ್ಚಿ – ನೆರಿಯದಜ್ಜ° ಹೇಳಿಂಡಿದ್ದ ಕತೆಗಳೂ ಅಲ್ಲದ್ದೆ; ಅವು ಕಲ್ತದೂ ತೆಂಕ್ಲಾಗಿ ಆದ ಕಾರಣ ಅಲ್ಯಾಣ ಜಾನಪದಂಗೊ ಸುಮಾರು ನಾಲಗೆ ಕೊಡಿಲಿದ್ದು.
ಮೊನ್ನೆಯೂ ಹೇಳಿದ್ದು ತೆಂಕ್ಲಾಗಿಯಾಣ ಕತೆಯೇ.

ಮದಲಿಂಗೆ ಈಗಾಣ ಹಾಂಗೆ ಪೈಸೆ ಕೊಟ್ಟು ಉಣ್ತ ಪಂಚಾತಿಗೆ ಇತ್ತಿಲ್ಲೆ ಇದಾ.
ದಾರಿಹೋಪವು ಸಾಮಾನ್ಯವಾಗಿ ಆ ಊರಿನ ದೊಡ್ಡ ಮನಗೆ ಹೋಕಡ, ಹೊತ್ತಿಂಗೆ ಉಂಬಲೆ.
ಮನೆಯೋರುದೇ ಹಾಂಗೆ, ಹೊಟ್ಟೆತುಂಬ ಊಟವೂ, ಕೈ ತುಂಬ ಊಟಕ್ಷಿಣೆಯೂ ಕೊಡುಗಡ. 😉

ಹಾಂಗೆ ಒಂದರಿ, ಒಂದು ಮಹಾ ವಾಸ್ತುಶಿಲ್ಪಿ ಆಚಾರಿ ಒಂದು ಮನಗೆ ಬಂತಡ; ನಾಕು ಸೂತ್ರದ ದೊಡಾ ಮನೆ; ನಂಬೂದ್ರಿಗಳದ್ದು.
ಮನೆಲಿ ಹೆಮ್ಮಕ್ಕೊ ಮಾಂತ್ರ ಇದ್ದವು; ಎಜಮಾನ್ರು ಎಲ್ಲಿದ್ದವು? ಕೇಳಿತ್ತಡ ಈ ಆಚಾರಿ.
ಅವು ಉಂಬಲೆ ಬೇರೆದಿಕ್ಕಂಗೆ ಹೋಯಿದವು – ಹೇಳಿ ಉತ್ತರ ಬಂತಾಡ ಹೆಮ್ಮಕ್ಕಳದ್ದು.
ಚೆಲ, ಇಷ್ಟು ದೊಡ್ಡ ಮನೆ ಇದ್ದೊಂಡು ಊಟಕ್ಕೆ ಬೇರೆ ದಿಕ್ಕಂಗೆ ಹೋಪ ಪರಿಸ್ಥಿತಿಯೋ – ಆಚಾರಿಗೆ ಆಶ್ಚರ್ಯ ಆತು.
ಮತ್ತೂ ವಿಚಾರ್ಸುವಗ ಆ ಆಚಾರಿಗೆ ಸಂಗತಿ ಗೊಂತಾತು – ಮದಲಿಂಗೆ ಸಿರಿವಂತಿಗೆ ಇದ್ದ ಕುಟುಂಬಕ್ಕೆ ಆ ದೊಡ್ಡ ಮನೆ ಕಟ್ಟಿದ ಲಾಗಾಯ್ತು ಬಡಪ್ಪತ್ತು ಸುತ್ತಿಗೊಂಡತ್ತಡ. ಈಗ ಎಷ್ಟು ಹೇದರೆ ಆ ಮನೆಯೋರು ಯೇವದಾರು ಮನೆಗೋ / ಜೆಂಬ್ರಕ್ಕೋ ಮಣ್ಣ ಹೋಗಿ ಸಂಪಾದನೆ ಮಾಡಿ ಉಂಬದು – ಹೇದು.
ಇಂತಾ ಬಡಪ್ಪತ್ತಿಲಿಯೂ ತಾನು ಅಲ್ಲಿಗೆ ಬಂದೆ ಅಲ್ಲದೋ – ಬಂದರೂ ಪ್ರೀತಿಲಿ ಅನ್ನದಾನ ಮಾಡಿದವಲ್ಲದೋ – ಹೇಳಿಗೊಂಡು ಆ ಮನೆಯೋರ ಬಗ್ಗೆ ಹೆಮ್ಮೆ ಅನುಸಿತ್ತಾಡ. ಅನ್ನದಾನಕ್ಕೆ ಪ್ರತಿಫಲವಾಗಿ ಇವಕ್ಕೇನಾರು ಉಪಕಾರ ಮಾಡ್ಳೇಬೇಕು ಹೇದು ತೋರಿತ್ತಡ.

ಉಂಡಾಗಿ ಅಪ್ಪದ್ದೇ, “ಎನಗೆ ರಜಾ ಕೆಲಸ ಇದ್ದು” – ಹೇಳಿಗೊಂಡು ಉಳಿಯೂ –ಮುಂಗಾರೂ ಹಿಡ್ಕೊಂಡು ಮನೆಗೆ ಒಂದು ಸುತ್ತು ಬಂತಡ. ಅನುಭವಿ ಶಿಲ್ಪಿ ಆದ ಕಾರಣ ಆ ಮನೆಯ ವಾಸ್ತುವಿಲಿ ಇದ್ದಿದ್ದ ದೋಷ ಪಕ್ಕನೇ ಗೊಂತಾತಡ.
ಮನೆಯ ಪಕ್ಕಾಸುಗಳ ವಿತ್ಯಾಸಲ್ಲಿ, ಪಂಚಾಂಗದ ಏರುಪೇರಿಲಿ, ಮಾಡಿನ ಓರೆಕೋರೆಲಿ ಹುಗ್ಗಿದ್ದ ’ಆಯದೋಷ’ವ ಸರಿಪಡುಸಿತ್ತಡ. ರಜ ಹೊತ್ತು ಕುಟುಕುಟುನೆ ಕುಟ್ಟಿಕ್ಕಿ ’ಹಾಂ, ಇನ್ನು ನಿಂಗಳ ಕಷ್ಟಂಗೊ ಪರಿಹಾರ ಆತು’ ಹೇಳಿಕ್ಕಿ ಊಟಕ್ಕೆ ಧನ್ಯವಾದ ಹೇಳಿತ್ತಡ.

ಮರದಿನವೇ ಒಬ್ಬ ಕೋಟುಸೂಟು ಹಾಕಿದ ವೆಗ್ತಿ ಬಂದು ‘ಎನಗೆ ರೈಟ° ಆಗಿದ್ದ ಅನುಭವ ಇದ್ದು; ನಿಂಗಳ ಮನೆಲಿ ಕೆಲಸ ಕೊಡೇಕು’ ಹೇಳಿದನಡ ಆ ಮನೆ ಎಜಮಾನ್ರ ಹತ್ತರೆ. ಎಂಗೊಗೇ ಉಂಬಲಿಲ್ಲೆ, ನಿನಗೆಲ್ಲಿಂದ ಕೆಲಸ – ಹೇಳಿದರೂ ಕೇಳದ್ದೆ, ಒತ್ತಾಯಲ್ಲಿ ಸೇರಿದನಡ.

ಕಾನೂನಿನ ಅನುಭವ, ಮಾತುಗಾರಿಗೆ ಎಲ್ಲವೂ ಗೊಂತಿದ್ದ ಆ ರೈಟ ಹಳೆ ರಿಕಾರ್ಡುಗಳ ತೆಗದು – ಇಂತಾ ಗೇಣಿದಾರರದ್ದು ಇಂತಿಷ್ಟು ಗೇಣಿ ಬಾಕಿದ್ದು – ಹೇಳ್ತ ಪಟ್ಟಿ ತೆಗದು ಪ್ರತಿ ಮನೆಗೂ ಹೋಗಿ ವಸೂಲು ಮಾಡ್ಳೆ ಸುರುಮಾಡಿದನಡ.
ಅಷ್ಟನ್ನಾರ ಪಾಪದ ನಂಬೂದ್ರಿಗಳ ಕಣ್ಣಿಂಗೆ ಮಣ್ಣು ಹಾಕಿ ಗೇಣಿ ತಪ್ಪುಸಿಗೊಂಡಿದ್ದ ಒಕ್ಕಲುದಾರರು ಇವನ ಬರ್ಮಿಂಗೆ ಹೆದರಿ ಗೇಣಿ ತಂದು ಸೊರುಗಿದವಡ.
ಹಾಂಗೆ, ಆ ದಿನಂದ ಅವರ ಮನೆಲಿ ಲಕ್ಷ್ಮಿ ಪುನಾ ಬಂದು ಸೊರುಗಲೆ ಸುರು ಆತಾಡ. ಆ ಸಂಸಾರ, ಆ ರೈಟ° – ಎಲ್ಲೋರುದೇ ಸುಖವಾಗಿ ಇತ್ತಿದ್ದವಡ.
ಅವರ ಮನೆಲಿ ಇದ್ದಿದ್ದ ಸೂಕ್ಷ್ಮ ಆಯ ದೋಷವೇ ಆ ನಮುನೆ ಕಷ್ಟ ಕಾರ್ಪಣ್ಯಂಗೊ ಬಂದು ಒದಗಲೆ ಕಾರಣ-  ಹೇಳ್ತದು ಆ ಕತೆಯ ಸಾರ.
~

ವಾಸ್ತು ಸರೀ ಇದ್ದರೆ ವಾಸ್ತುಪುರುಷನೂ ಆರಾಮಲ್ಲಿ ಕೂದುಗೊಳ್ತ!

ಜೋಯಿಶಪ್ಪಚ್ಚಿ ಈ ಹಳೇ ಕತೆಯ ಮತ್ತೊಂದರಿ ಹೇಳಿ ನೆಂಪುಮಾಡುವಗ ಒಪ್ಪಣ್ಣಂಗೆ ತಲೆಲಿ ಎಂತದೋ ಬಂದು ತಿರುಗಿತ್ತು.
ಆ ಆಚಾರಿ ಎಂತರ ಸರಿಮಾಡಿದ್ದು? ಅಷ್ಟು ಮಹತ್ವದ ‘ಆಯ’ದ ಕತೆ ಎಂತರ – ಎಲ್ಲವನ್ನೂ ಜೋಯಿಶಪ್ಪಚ್ಚಿ ಕೈಂದ ವಿವರವಾಗಿ ತಿಳಿಯಲೆ ಮನಸ್ಸಾತು.
ವೇನು ಮೂಡ್ಳಾಗಿ ಗುಡ್ಡೆಹತ್ತಿ ಹೋಗಿಂಡಿದ್ದತ್ತು. ಆಯದ ಬಗ್ಗೆ ಅರಡಿಯಲೆ ಕೇಳಿದ್ದರ ಪುರ್ಸೋತಿಲಿ ವಿವರುಸಿದವು.
~

ಆಯ:

ಉದ್ದ ಕೂಡಿಸು ಅಗಲವೇ ಸುತ್ತಳತೆ – ಹಾಂಗಾಗಿ, ಯೇವದಕ್ಕೆಲ್ಲ ಉದ್ದವೂ ಅಗಲವೂ ಇರ್ತೋ – ಆ ಎಲ್ಲಾ ರಚನೆಗೊಕ್ಕೂ ಸುತ್ತಳತೆ ಇರ್ತು.
ಹಾಂಗೆ ನೋಡಿರೆ, ಪ್ರತಿ ಭೌತಿಕ ರಚನೆಗೂ ಒಂದು ಸುತ್ತಳತೆ ಇರ್ತು; ಈ ವೇನಿಂಗೂ ಇದ್ದು; ಆ ಮೋರಿಗೂ ಇದ್ದು; ಓ ಆ ಬಷ್ಟೇಂಡಿಂಗೂ ಇದ್ದು – ಹೇದು ಬೆಳ್ಳಾರೆ ಬಸ್ಸು ತಂಗುದಾಣವ ತೋರ್ಸಿಂಡು ಹೇಳಿದವು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯೇವದೇ ಕಟ್ಟೋಣದ “ಸುತ್ತಳತೆ ಎಷ್ಟು” ಹೇಳ್ತದರ ಮೇಗೆ ಆಯಾ ರಚನೆಯ ಭವಿಷ್ಯ, ಪರಿಣಾಮಂಗೊ ಎಂತದು ಹೇಳ್ತ ನಿರ್ಧಾರ ಅಪ್ಪದಡ; ಹೇಳಿದವು.

ಇಡೀ ಪ್ರಪಂಚಲ್ಲಿಪ್ಪ ಕಟ್ಟೋಣಂಗಳ ಎಂಟು ವಿಭಾಗಲ್ಲಿ ವಿಂಗಡುಸಿದ್ದಡ.
ಆ ಎಂಟು ವಿಭಾಗದ ವರ್ಗೀಕರಣಕ್ಕೆ “ಆಯ” ಹೇಳುದಡ; ಪ್ರತಿ ವಿಭಾಗಂಗೊಕ್ಕೆ ಒಂದೊಂದು ಹೆಸರಿದ್ದಡ.
ಬೇರೆಬೇರೆ ಆಕಾರದ, ಬೇರೆಬೇರೆ ವಿನ್ಯಾಸದ ಕೋಟ್ಯಂತರ ಕಟ್ಟೋಣ ಇಪ್ಪಗ ಆಯಂಗೊ ಮಾಂತ್ರ ಎಂತಕೆ ಎಂಟೇ ಇಪ್ಪದು? ಅಷ್ಟು ಸಾಕೋ? – ಕೇಳಿಂಡೇ ಜೋಯಿಶಪ್ಪಚ್ಚಿಗೆ ಅಂಟಿದೆ.

ಶಾಸ್ತ್ರಪ್ರಕಾರ ಜ್ಯೋತಿಷ್ಯ ಅಧ್ಯಯನ ಮಾಡಿರೆ ‘ಮನುಷ್ಯಾಲಯ ಚಂದ್ರಿಕಾ’ ಹೇಳ್ತ ಪುಸ್ತಕವನ್ನೂ ಓದೇಕಾವುತ್ತಡ.
ನಮ್ಮ ಅಜ್ಜಂದ್ರ ಪ್ರಕಾರ ಬರದ ವಾಸ್ತು ವಿವರಂಗೊ ಅದರ್ಲಿ ಇದ್ದಾಡ. ಆ ಪುಸ್ತಕಲ್ಲಿ ಆಯ ಲೆಕ್ಕಾಚಾರವೂ ಹೇಳಿದ್ದಡ.

~

ಆಯ ಲೆಕ್ಕಾಚಾರ:

ಯೇವದೇ ಒಂದು ಕಟ್ಟೋಣದ ಸುತ್ತಳತೆಯ ಅಂಗುಲ ಲೆಕ್ಕಲ್ಲಿ ತೆಕ್ಕೊಳೇಕು – ಹೇದು ಸುರುಮಾಡಿದವು.
ಈಗಾಣ ಮೀಟ್ರು, ಪೀಟ್ರೋಲು ಯೇವದೂ ಅಲ್ಲ, ಕೋಲು – ಅಂಗುಲ ಲೆಕ್ಕಾಚಾರ!
ಅಜ್ಜಂದ್ರ ಕೋಲು; ಗೊಂತಾತನ್ನೇ? –ನಾಕು ಸರ್ತಿ ಕೇಳಿಕ್ಕಿ ವಿವರ್ಸುಲೆ ಸುರುಮಾಡಿದವು.
ಅದಾ, ಸುರುಮಾಡುವಗಳೇ ವಿಶಯ ಇನ್ನೊಂದು ಹೊಡೆಂಗೆ ತಿರುಗಿ ಬಂತು.

ಅಂಗುಲ – ಕೋಲು:
ಅಂಗುಲ ಹೇದರೆ ಎಷ್ಟು? – ಹತ್ತು ಬತ್ತವ ಒಂದರ ಕರೆಲಿ ಒಂದರ ಹಾಂಗೆ ಮಡಗಿಪ್ಪಗ ಆವುತ್ತ ಅಗಲಕ್ಕೆ ಒಂದು ಅಂಗುಲ – ಹೇಳ್ತದು.
ಇಪ್ಪತ್ತನಾಕು ಗಂಟೆಗೆ ಒಂದು “ದಿನ” ಹೇಳಿದ ಹಾಂಗೆ – ಇಪ್ಪತ್ತನಾಕು ಅಂಗುಲಕ್ಕೆ ಒಂದು “ಕೋಲು” ಹೇಳುಸ್ಸು.
ಹಳೆಕಾಲಲ್ಲಿ ಶಿಲ್ಪಿಗೊ, ಜೋಯಿಶರು, ಆಚಾರಿಗೊ, ಮಣ್ಣಕೆಲಸದವು, – ಎಲ್ಲೋರುದೇ ಇದೇ ಪ್ರಮಾಣವ ಅನುಸರ್ಸೆಂಡಿತ್ತಿದ್ದವು – ಹೇಳಿದವು. ಈಗಾಣ ಕಾಲಲ್ಲಿ ರಜ ಕಮ್ಮಿ ಹೇದು ಕಂಡರೂ, ಕೊಗ್ಗು ಆಚಾರಿಯ ಹಾಂಗಿರ್ಸ ಹಲವಾರು ಜೆನಂಗೊ ಈಗಳೂ ಲೆಕ್ಕ ಹಾಕುತ್ಸು ಕೋಲು ಲೆಕ್ಕಲ್ಲೇ!
ಈ ಕೋಲು ಹೇದರೆ, ಮೀಟ್ರಿಂದ ಸಣ್ಣ, ಪೀಟ್ರೋಲಿಂದ ದೊಡ್ಡ ಅಳತೆ.

ಒಂದೊಂದು ಊರಿಲಿ ಒಂದೊಂದು ಜಾತಿ ಬತ್ತ ಇಪ್ಪ ಕಾರಣವೋ ಏನೋ – ಒಂದೊಂದು ಊರಿಲಿ ಒಂದೊಂದು ಉದ್ದದ ‘ಕೋಲು’ಗೊ ಇದ್ದಡ, ಸ್ಥಳೀಯ ಲೆಕ್ಕಾಚಾರದ್ದು. ಹಾಂಗಾಗಿ, ಒಂದು ಕೋಲಿಂಗೆ ಇಪ್ಪತ್ತನಾಕೇ ಅಂಗುಲ ಆದರೂ, ಆ ಕೋಲಿನ ಉದ್ದ ಹೆಚ್ಚುಕಮ್ಮಿ ಆಗಿದ್ದಡ.

 • ಸುಬ್ರಹ್ಮಣ್ಯ ಕೋಲು ಹೇದರೆ ಮೂವತ್ತೊಂದು ಇಂಚಿನಷ್ಟು ಉದ್ದವ ಇಪ್ಪತ್ತನಾಕು ಅಂಗುಲ ಮಾಡಿದ ಅಳತೆ ಅಡ.
 • ಉದ್ಯಾವರ ಕೋಲಿನ ಇಪ್ಪತ್ತನಾಕು ಅಂಗುಲ ಹೇದರೆ ಮೂವತ್ತು ಇಂಚಿನಷ್ಟು ಉದ್ದ.
 • ಮಧೂರು ಕೋಲಿನ ಇಪ್ಪತ್ತನಾಕು ಅಂಗುಲಕ್ಕೆ  ಇಪ್ಪತ್ತೊಂಬತ್ತೂ ಕಾಲು ಇಂಚಿನ ಉದ್ದ.
 • ವಯನಾಡು ಕೋಲು ಹೇದರೆ ಇಪ್ಪತ್ತೆಂಟೂವರೆ ಇಂಚು ಉದ್ದದ ಇಪ್ಪತ್ನಾಕು ಅಂಗುಲ ಅಡ.
 • ಪಯ್ಯನ್ನೂರು ಕೋಲಿನ ಇಪ್ಪತ್ತನಾಕು ಅಂಗುಲ ಹೇದರೆ ಇಪ್ಪತ್ತೆಂಟು ಇಂಚಿನಷ್ಟು ಉದ್ದ ಅಡ.

ಸುಬ್ರಮಣ್ಯಕೋಲು – ಹೇದರೆ ಇಪ್ಪದರ್ಲಿ ಅತೀ ಉದ್ದದ ಕೋಲು ಅಡ – ಮೂವತ್ತೊಂದು ಇಂಚಿಂದು.
ಇದರ ಇಕ್ಕೇರಿ ಕೋಲು ಹೇಳಿಯೂ ಹೇಳ್ತವಡ; ಗಟ್ಟದ ಮೇಗೆ ಹೆಚ್ಚಿನ ಪ್ರಚಲಿತಲ್ಲಿ ಇದೇ ಅಳತೆ ಇಪ್ಪದಡ.
ಪಯ್ಯನೂರು ಕೋಲು ಹೇದರೆ ಅತೀ ಸಣ್ಣ- ಇಪ್ಪತ್ತೆಂಟು ಇಂಚಿನಷ್ಟು ಉದ್ದದ್ದು.
ಆಯಾ ಊರಿನ ರಾಜರು / ತುಂಡರಸರು ನಿರ್ಧಾರ ಮಾಡಿದ ಅಳತೆಗೊ ಆಯಾ ಊರಿಂಗೆ ನೆಡಕ್ಕೊಂಡು ಬಯಿಂದು.
ಒಂದೇ ಆಚಾರಿ ರಥ ಮಾಡಿಂಡು ಬೇರೆಬೇರೆ ಊರಿಂಗೆ ಈ ಕೋಲಿನ ಊರಿಂಡು ಹೋಗಿ ತಳದ್ಸು – ಹೇದು ಒಂದು ಲೊಟ್ಟೆಕತೆ ಇದ್ದಾಡ, ಅದಿರಳಿ.

~

ಜೋಯಿಷಪ್ಪಚ್ಚಿ ಒಂದು ವಿಷಯ ವಿವರುಸಲೆ ಸುರು ಮಾಡಿರೆ – ಬಳ್ಳಿ ಹಬ್ಬಿದ ಹಾಂಗೆ ಸುಮಾರು ಎಗೆಗೊ.
ಅಂಬಗಂಬಗ ಎದುರಾಣೋನು ನೆಂಪು ಮಾಡಿಂಡಿರೆಕು, ಮುಖ್ಯವಾಹಿನಿಲಿ ಎಂತರ ಮಾತಾಡಿಗೊಂಡಿದ್ದದು ಹೇದು.
ಅದೇ, ಅವೆಲ್ಲಿತ್ತಿದ್ದವು? ಯೇವದೇ ಒಂದು ಕಟ್ಟೋಣದ ಸುತ್ತಳತೆಯ ಅಂಗುಲ ಲೆಕ್ಕಲ್ಲಿ ತೆಕ್ಕೊಳೇಕು – ಹೇದು ಮಾತಾಡಿದವು. ಅಲ್ಲದೋ? ನೆಂಪುಮಾಡಿಕೊಟ್ಟೆ; ಅಲ್ಲದ್ದರೆ ಅಂಗುಲದ ಅಂಗುಲಂಗುಲವೂ ವಿವರ್ಸೆಂಡು ಬಾಕಿ ಒಳಿತ್ತಿತವು.
ಪುನಾ ಆಯ ಲೆಕ್ಕಾಚಾರಕ್ಕೆ ಬಂದವು:
ಒಂದು ಕೋಲಿಂಗೆ ಇಪ್ಪತ್ತನಾಕು ಅಂಗುಲದ ಹಾಂಗೆ ತೆಕ್ಕೊಂಡು ಕಟ್ಟೋಣದ ಸುತ್ತಳತೆಯ ಸಂಪೂರ್ಣವಾಗಿ ಅಂಗುಲಕ್ಕೆ ಪರಿವರ್ತನೆ ಮಾಡಿಗೊಳೇಕು.

ಅಂಗುಲ ರೂಪಲ್ಲಿಪ್ಪ ಸುತ್ತಳತೆಯ ಮೂರರಿಂದ ಗುಣುಸೇಕು.
ಬಂದ ಗುಣಲಬ್ಧಕ್ಕೆ ಎಂಟರಿಂದ ಭಾಗುಸೇಕು.

ಒಂದು ಸಂಕೆಯ ಎಂಟರಿಂದ ಭಾಗುಸಿರೆ ಒಳುದ ಶೇಷ –ಸೊನ್ನೆಂದ ಏಳರ ವರೆಗೆ ಇಕ್ಕಷ್ಟೆ.
ಈ ಒಂದೊಂದು ಶೇಷಕ್ಕೂ ಒಂದೊಂದು ಆಯದ ಹೆಸರು.
ಶೇಷ ಒಂದು ಒಳುದರೆ ಧ್ವಜಾಯ,
ಶೇಷ ಎರಡು ಬಂದರೆ ಧೂಮ್ರಾಯ,
ಶೇಷ ಮೂರು ಬಂದರೆ ಸಿಂಹಾಯ… ಇತ್ಯಾದಿ – ಹೇಳಿದವು.

ಹೋ, ಹೀಂಗೋ? – ಅಂಬಗ ಈ ಎಂಟು ಆಯಂಗಳ ಹೆಸರು ಸಾಲಾಗಿ ನೆಂಪು ಮಡಗುತ್ತ ಕೆಣಿ ಹೇಂಗೆ? ಕೇಳಿದ್ದಕ್ಕೆ
ಸೂತ್ರ ಶ್ಲೋಕ ಇದ್ದು – ಹೇಳಿಗೊಂಡು ಶ್ಲೋಕ ಹೇಳಿದವು:

ಧ್ವಜೋ ಧೂಮಶ್ಚ ಸಿಂಹಶ್ಚ ಸಾರಮೇಯೋ ವೃಷಃ ಖರಃ |
ದಂತೀ ಕಾಕಃ ಕ್ರಮಾದೇತೇ ದಿಶಾಸ್ವೇಂದ್ರಾದಿಶು ಸ್ಥಿತಾ ||

ಅಥವಾ,

ಧ್ವಜ ಧೂಮ ಸಿಂಹ ಕುಕ್ಕುರ ವೃಷ ಖರ ಗಜ ವಾಯಸಾಃ ಕ್ರಮೇಣಸ್ಯುಃ |
ಪ್ರಾಗಾದಿಯೋನಯೋಷ್ಟೌ ತೇಶ್ವಯುಜಃ ಸಂಪದೇ ಯುಜೋ ವಿಪದೇ ||

ಧ್ವಜಾಯ, ಧೂಮಾಯ, ಸಿಂಹಾಯ, ಶ್ವಾನಾಯ, ವೃಷಭಾಯ, ಖರಾಯ, ಗಜಾಯ, ಕಾಕಾಯ – ಹೇದು ಎಂಟು ನಮುನೆ ಆಯಂಗೊ.
ಕ್ರಮವಾಗಿ ಸಮಸಂಖ್ಯೆಯ ಆಯಂಗೊ ಸಂಪಧ್ಭರಿತವೂ, ವಿಷಮ ಸಂಖ್ಯೆಯ ಆಯಂಗೊ ವಿಪದ್ಭರಿತವೂ ಆಗಿದ್ದು – ಹೇಳ್ತದು ಅದರ ಅರ್ಥ ಅಡ.

~

ಆಯದ ಲೆಕ್ಕಾಚಾರವೂ, ಎಂಟು ಆಯದ ಹೆಸರುಗಳೂ ಗೊಂತಾತು.
ಇನ್ನು ಅದರ ಬಗ್ಗೆ ವಿವರಣೆ ಕೊಟ್ಟುಗೊಂಡು ಹೋದವು.
ಅಪ್ಪಲೆ ಎಂಟು ಆಯಂಗೊ ಇದ್ದರೂ, ಅದರ್ಲಿ ನಾಲ್ಕೇ ಆಯಂಗೊ ಮನುಕುಲಕ್ಕೆ ಒಳ್ಳೆದಾಡ; ಮತ್ತೆ ಒಳುದ ನಾಕು ಒಳ್ಳೆದಲ್ಲಡ. ಹೇದರೆ, ಸುತ್ತಳತೆಯ ಅಂಗುಲ ಲೆಕ್ಕಾಚಾರವ ಗುಣಾಕಾರ-ಭಾಗಾಕಾರ ಮಾಡಿ ಸಿಕ್ಕುತ್ತ ಶೇಷ 1,3,5,7 – ಬೆಸ ಸಂಖ್ಯೆಗೊ ಆಗಿ ಇದ್ದರೆ ಧ್ವಜಾಯ, ಸಿಂಹಾಯ, ವೃಷಭಾಯ, ಗಜಾಯ – ಹೀಂಗೆ ನಾಲ್ಕು ಆಯಂಗೊ ಸಿಕ್ಕುತ್ತಲ್ಲದೋ – ಇದು ಮನುಷ್ಯಜೀವನಕ್ಕೆ ಅಕ್ಕಡ.  ಈ ಆಯಲ್ಲಿಪ್ಪ ಕಟ್ಟೋಣಂಗೊ ಏಳಿಗೆ ಅಕ್ಕಡ.
ಇದರ್ಲಿಪ್ಪ ಕುಟುಂಬಂಗೊ, ಮನುಷ್ಯವಾಸಂಗೊ ಉದ್ಧಾರ ಅಕ್ಕಡ.

ಅದೇ, 2, 4, 6, 0 (ವಿಷಮ) ಸಮ ಸಂಖ್ಯೆ ಶೇಷ ಆಗಿ ಸಿಕ್ಕಿ ಅಪ್ಪಗ – ಬಪ್ಪ ಧೂಮ್ರಾಯ, ಕುಕ್ಕುರಾಯ, ಖರಾಯ, ವಾಯಸಾಯ – ಇವಿಷ್ಟು ಮನುಷ್ಯ ಜೀವನಕ್ಕೆ ಹೇಳಿದ ಆಯಂಗೊ ಅಲ್ಲಾಡ.
ಇದರ್ಲಿ ಕಟ್ಟಿದ ಕಟ್ಟೋಣಂಗೊ ಬರ್ಕತ್ತು ಕಾಣ ಅಡ, ಇದರಲ್ಲಿ ಏಳಿಗೆ, ಮುಕ್ತಿ ಇಲ್ಲೇಡ – ಹೇಳಿದವು ಜೋಯಿಷಪ್ಪಚ್ಚಿ.

~

1.ಧ್ವಜಾಯ

ಲೆಕ್ಕಾಚಾರಲ್ಲಿ ಶೇಷ ಒಂದು ಒಳುದರೆ ಧ್ವಜಾಯ ಹೇದು ಲೆಕ್ಕ ತೆಕ್ಕೊಂಬದು.
ಧ್ವಜಃ ಸರ್ವತ್ರ ಶಸ್ಯತೇ – ಹೇದು ಶಾಸ್ತ್ರ ಇದ್ದಾಡ; ಧ್ವಜಾಯ ಎಲ್ಲ ದಿಕ್ಕಂಗೂ ಸೂಕ್ತವಾದ್ಸು – ಹೇದು; ಯೇವ ಕಟ್ಟೋಣ ಆದರೂ ಧ್ವಜಾಯಲ್ಲಿ ಮಾಡ್ಳಕ್ಕು.
ಎಲ್ಲ ದಿಕ್ಕೆಯೂ ಮಾಡ್ಳಕ್ಕು ಹೇಳಿ ಶಾಸ್ತ್ರ ಹೇಳಿರೂ, ಎಲ್ಲದಕ್ಕೂ ಇದರ ಬರದು ಕೊಡವು ಜೋಯಿಷರು.
ಹೆಸರೇ ಹೇಳ್ತ ಹಾಂಗೆ ಧ್ವಜಸ್ತಂಭಕ್ಕೆ, ಅಥವಾ ದೇವಸ್ಥಾನಕ್ಕೆ, ತರವಾಡು ಮನೆಗೊಕ್ಕೆ, ಈ ಧ್ವಜಾಯ ಪ್ರಾಶಸ್ತ್ಯ ಅಡ.
ಧ್ವಜಾಯದ ಮನೆ ಪೂರ್ವಮುಖ ಇದ್ದರೆ ತುಂಬಾ ಒಳ್ಳೆದಡ.

2.ಧೂಮಾಯ:
ಲೆಕ್ಕಾಚಾರದ ಶೇಷ ಎರಡು ಒಳುದರೆ ಧೂಮಾಯ ಹೇದು ಲೆಕ್ಕ.
ಹೆಸರೇ ಹೇಳ್ತ ಹೇಳ್ತ ಹಾಂಗೆ ಈ ಮನೆಲಿ ಇದ್ದರೆ ಹೊಗೆಯೇ ಗೆತಿ!
ಏಳಿಗೆ ಆಯೇಕಾದಲ್ಲಿ ಹೊಗೆ ಬಂದರೆ ಅಕ್ಕೋ? ಇದೊಂದು ಅಶುಭ ಆಯ.
ಆಯ ಹಾಕಿ ಕಟ್ಟಿದ ಮನೆಯ ಲೆಕ್ಕಾಚಾರಲ್ಲಿ ಒಂದು ಅಂಶ ಹೆಚ್ಚುಕಮ್ಮಿ ಆದರೆ ಧ್ವಜ ಇಪ್ಪದು ಧೂಮಾಯ ಅಕ್ಕಿದಾ! ಜಾಗ್ರತೆ ಬೇಕು, ಅಲ್ಲದೋ?

3.ಸಿಂಹಾಯ:
ಆಯಲೆಕ್ಕಲ್ಲಿ ಶೇಷ ಮೂರು ಒಳುದರೆ ಅದು ಸಿಂಹಾಯ.
ಪೌರುಷವೇ ಪ್ರಾಮುಖ್ಯವಾದ ಅರಮನೆಗೆ, ರಾಜರ ಕೋಟೆಗೆ – ಸಿಂಹಾಯ ಮಡುಗುಗಡ.
ಸಿಂಹೋ ದಕ್ಷಿಣ ಸಂಸ್ಥಿತಾಃ (ಸಿಂಹ ದಕ್ಷಿಣಲ್ಲಿ ಸ್ಥಿತ ಆಯಿದು) – ಹೇದರೆ ಸಿಂಹಾಯವ ಸಾಮಾನ್ಯವಾಗಿ ಉತ್ತರ ಮುಖವಾಗಿ ಕಟ್ಟುತ್ತವಡ.

4.ಕುಕ್ಕುರ:
ಎಂಟರ ಭಾಗಾಕಾರಲ್ಲಿ ಶೇಷ ನಾಲ್ಕು ಒಳುದರೆ ಅದು “ನಾಯಿ”ಯ ಆಯ.
ಈ ಆಯಲ್ಲಿ ಕಟ್ಟಿದ ಮನೆ ನಾಯಿಗೂಡಿನ ಹಾಂಗೆ ಇಕ್ಕಷ್ಟೆ, ಒಳ ಕೂದವನೂ ನಾಯಿಪಾಡು ಅನುಭವಿಸೇಕಕ್ಕು ಹೇದು ಅಭಿಪ್ರಾಯ ಅಡ!

5.ವೃಷಭಾಯ
ಭಾಗಾಕಾರದ ಶೇಷ ಐದು ಒಳುದರೆ ಅದು ವೃಷಭಾಯ.
ಹೆಸರೇ ಹೇಳ್ತ ಹಾಂಗೆ ಗೋಶಾಲೆಗೆ ಇದು ಪ್ರಾಶಸ್ತ್ಯ. ಮನೆ ಈ ಆಯಲ್ಲಿ ಕಟ್ಟುತ್ತರೆ ಅದರ ಪೂರ್ವಪಶ್ಚಿಮಲ್ಲೇ ಕಟ್ಟುತ್ಸಡ.
ಅಷ್ಟು ಮಾಂತ್ರ ಅಲ್ಲದ್ದೆ, ತಾತ್ಕಾಲಿಕವಾಗಿ ಕಟ್ಟುವ ಕೊಟ್ಟಗೆ, ಪಂಪಿನಕೊಟ್ಟಗೆ-  ಹೀಂಗಿರ್ಸಕ್ಕೆ ವೃಷಭಾಯ ಅಕ್ಕಡ. ಬಟ್ಯನ ಸುರೂವಾಣ ಗುಡಿಚ್ಚೆಲಿಂಗೆ ವೃಷಭಾಯಲ್ಲೇ ಕುಟ್ಟಿಬಡುದ್ದಡ.

6.ಖರಾಯ:
ಹೆಸರಿನ ಅರ್ತ ಕತ್ತೆದು.
ಈ ಆಯಲ್ಲಿ ಕಟ್ಟಿದ ಮನೆಯೊಳ ಬದ್ಕಿದೋನುದೇ ಕತ್ತೆಯ ಹಾಂಗೇ ಅಕ್ಕು ಹೇದು ಲೆಕ್ಕವೋ ಏನೋ – ಈ ಆಯ ನಿಷಿದ್ಧ.

7.ಗಜಾಯ:

ಲೆಕ್ಕಾಚಾರದ ಶೇಷ ಆನೆಯ ಹಾಂಗೆ ದೊಡ್ಡ – ಏಳು ಬಂದರೆ ಗಜಾಯ.
ಗಜಾಯದ ಕಟ್ಟೋಣ ದಕ್ಷಿಣಮುಖಲ್ಲಿ ಇಪ್ಪದು ಹೇಳಿದವು ಅಪ್ಪಚ್ಚಿ.
ಚೆಲ, ದಕ್ಷಿಣಾಭಿಮುಖವಾಗಿ ಕಟ್ಟೋಣ ಕಟ್ಟುತ್ತವೋ ಅಂಬಗ – ಕೇಳಿದೆ.
ಹ್ಮ್, ದೇವಸ್ಥಾನಂಗಳಲ್ಲಿ ಬಡಗ ಹೊಡೇಣ ಗೋಪುರಂಗಳದ್ದು ತೆಂಕ ಮೋರೆ ಇರ್ತಲ್ಲದೋ – ಅದೆಲ್ಲ ಗಜಾಯಲ್ಲೇ ಇಪ್ಪಲಕ್ಕು – ಹೇಳಿದವು.
ಅಪ್ಪಚ್ಚಿ ಹೇಳಿಗೊಂಡೇ ಹೋದವು; ಕೂಸಿನ ಮನೆ ಎತ್ತುವನ್ನಾರವೂ.

0. (8) ವಾಯಸಾಯ:

ವಾಯಸ ಹೇದರೆ ಕಾಕೆ ಹೇದು ಅರ್ತ ಅಡ.
ಕಾಕೆ ಎಷ್ಟು ಸಮಯ ಒಂದೇ ಮನೆಲಿ ನಿಂಗು? ಕೈಗೆ ಸಿಕ್ಕಿದ ಒಂದು ಮರಲ್ಲಿ ಕಟ್ಟುಗು, ರಜ್ಜ ಸಮಯಕ್ಕೆ.
ಮತ್ತೆ ಎದ್ದು ಹಾರಿಕ್ಕಿ ಹೋಕು.
ಮದಲಿಂಗೆ ದಣಿಗೊ ಒಕ್ಕಲುಗೊಕ್ಕೆ ಮನೆ ಕಟ್ಟಿಕೊಡುವಗ ಈ ಆಯಲ್ಲೇ ಕಟ್ಟುಗಡ. ಎಂತಗೆ? ಜಾಸ್ತಿ ಸಮೆಯ ನಿಂದರೆ ತೊಂದರೆ ತಪ್ಪಿದ್ದಲ್ಲ, ಹಾಂಗಾಗಿ ಬೇಗ ಹಾರಿಕ್ಕಿ ಹೋಗಲಿ, ಕಾಕೆಗಳ ಗೂಡಿನ ಹಾಂಗೆ! 😉
ಈಗ ಕಾಕಂಗೊಕ್ಕೂ ಅಕ್ಕೋ ಏನೋ – ಹೇದು ಜೋಯಿಷಪ್ಪಚ್ಚಿ ನೆಗೆ ಹೊಟ್ಟುಸಿದವು.

~
ಇದು ಎಂಟು ಆಯಂಗಳ ಕತೆ.
ಆಲಯಂಗಳ ಕಟ್ಟುವಗ ಅದರ ಸುತ್ತಳತೆಯ ಲೆಕ್ಕಾಚಾರವ, ಆಯವ ಯೇವ ರೀತಿಲಿ ಗಣಿತ ಮಾಡ್ತವು ಹೇದು ನಾವು ಕಲ್ತುಗೊಂಡಿದೋ?
ನಮ್ಮ ಅಜ್ಜಂದ್ರು ಅನುಸರ್ಸಿ ಕಟ್ಟಿದ, ಕಟ್ಟಿ ಬೆಳೆಶಿದ ಈ ಲೆಕ್ಕಾಚಾರವ ನಾವು ಕಲಿತ್ತೋ?
ಅದಕ್ಕೆ ಸರಿಯಾಗಿ ಕಟ್ಟುತ್ತೋ?

ನಮ್ಮ ವ್ಯವಹಾರದ ಆಯ-ವ್ಯಯ ಸರಿಯಾಗಿ, ಜೀವನಲ್ಲಿ ನೆಮ್ಮದಿ ಇರೇಕು ಹೇದು ಆದರೆ, ಅದು ಸರಿಯಾದ ಆಯಲೆಕ್ಕಾಚಾರಲ್ಲಿ ಒಳಗೊಂಡಿರೆಕಡ.ನಾವು ವಾಸ ಇಪ್ಪ ಮನೆ ನವಗೆ ಅನುಕೂಲವಾದ ಆಯಲ್ಲಿ ಇರೇಕಡ.
ಸರಿಯಾದ ಉದ್ದಳತೆ ಸುತ್ತಳತೆಲಿ ಇಲ್ಲದ್ದರೆ ಅದು ನವಗೆ ಒದಗಿ ಬತ್ತಿಲ್ಲೆ; ನಮ್ಮ ಜೀವನಕ್ಕೆ ಸೇರಿ ಬತ್ತಿಲ್ಲೆ.
ಆದರೆ, ಸದ್ಯದ ಕಾಲಘಟ್ಟಲ್ಲಿ ಈ ಯೇವ ಲೆಕ್ಕಾಚಾರವೂ ಬಳಕೆಲಿಲ್ಲದ್ದೆ ಆಧುನಿಕ ವೆವಸ್ತೆಯನ್ನೇ ಬಳಸಿಗೊಂಡಿದು.

ಈಗ ಬೆಳಿಅಂಗಿ ಇಂಜಿನಿಯರುಗೊ ಹೇಳಿದ್ದೇ ಲೆಕ್ಕ; ಅವು ಮಾಡಿದ್ದೇ ಲೆಕ್ಕಾಚಾರ!
ಅವು ಮಾಡುದು ಸರಿಯೋ ತಪ್ಪೋ, ಅವು ಕಲ್ತದು ಅಪ್ಪೋ ಅಲ್ಲದೋ ಹೇಳುಲೆ ನವಗೂ ಗೊಂತಿಲ್ಲೆ! – ಹೇದು ಜೋಯಿಶಪ್ಪಚ್ಚಿ ಬೇಜಾರು ಮಾಡಿಗೊಂಡವು.
ಕೂಸಿನ ಮನಗೆ ಎತ್ತುವನ್ನಾರವೂ ಜೋಯಿಷಪ್ಪಚ್ಚಿ ಮಾತಾಡಿಗೊಂಡೇ ಇತ್ತಿದ್ದವು.
~

ಕಾಲಕ್ರಮೇಣ ಕೋಲು ಹೋಗಿ ಮೀಟ್ರು ಬಂತು, ಅಂಗುಲ ಹೋಗಿ ಇಂಚು ಬಂತು.
ಆಯ ಲೆಕ್ಕಾಚಾರ ಹೋಗಿ?
ಈಗ ಎಂತೆಂತದೋ ಬಂದು ತುಂಬಿಗೊಂಡಿದು.
ಶಾಸ್ತ್ರೀಯವಾಗಿ ಕಲ್ತುಗೊಂಡವು ಮಾತಾಡದ್ದೆ ಕೂದಪ್ಪದ್ದೇ, ಅರ್ದಂಬರ್ಧ ಕಲ್ತು ಶಾಸ್ತ್ರ ಹೇಳುವೋರೇ ತುಂಬುತ್ತವು; ಬಾಯಿಗೆ ಬಂದ ಹಾಂಗೆ ಶಕುನ ಹೇಳುವೋರು, ಮನೆ ನೋಡಿ ಆಯ ಹೇಳುವೋರು, ಬಾವಿ ಅಲ್ಲಿ ಆಯೇಕು, ತೋಟ ಇಲ್ಲಿ ಆಯೇಕು
– ಹೇದು ಸಲಹೆ ಕೊಡ್ತೋರೇ ತುಂಬಿ ಹೋಯಿದವು – ಜೋಯಿಷಪ್ಪಚ್ಚಿ ಬೇಜಾರು ಹೇಳಿದವು.

~

ಪೂರ್ತಿ ಶಾಸ್ತ್ರ ಒಂದೇ ಸರ್ತಿಗೆ ಕಲಿಯಲೆಡಿಯದ್ದರೂ, ರಜ ರಜ ಆಗಿಯೇ ಕಲ್ತುಗೊಂಬೊ ನಾವು; ಅಲ್ಲದೋ?
ಏ?

ಒಂದೊಪ್ಪ: ಆದಾಯ ಲೆಕ್ಕಾಚಾರವೇ ಮುಖ್ಯ ಆದ ಕಾಲಲ್ಲಿ ಆಯ ಲೆಕ್ಕ ಮರದ್ಸು ಬೇಜಾರ!

ಸೂ: ಪಟ ಇಂಟರ್ನೆಟ್ಟಿಂದ

ಒಪ್ಪಣ್ಣ

   

You may also like...

15 Responses

 1. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಪಾಯ ತೆಗೆವ ಮೊದಲೇ ಆಯ ನೋಡಿ ಕುಟ್ಟಿ ಬಡಿವದೆಂತಗೆ ಹೇಳಿ ವಿವರಿಸಿದ ಉತ್ತಮ ಬರಹ.ಈಗ ವಾಸ್ತು ಕೋವಿದರು ಜಾಸ್ತಿ ಆಯಿದವು,ಹಲವು ರೀತಿ ಬರೆದು ಗೊಂದಲ ಮಾಡುತ್ತವು.ಮನುಷ್ಯಾಲಯ ಚಂದ್ರಿಕೆ ಕನ್ನಡಲ್ಲೂ ಸಂಕ್ಷಿಪ್ತ ರೂಪಲ್ಲಿ ಬಯಿಂದು ,ನೋಡಿದ್ದೆ.

 2. ಶರ್ಮಪ್ಪಚ್ಚಿ says:

  “ಆಯ” ದ ಬಗ್ಗೆ ಮಾಹಿತಿ ಕೊಟ್ಟ ಒಳ್ಳೆ ಲೇಖನ
  ಆಯ ವ್ಯಯಕ್ಕೆ ಪ್ರಾಮುಖ್ಯ ಕೊಡುವ ಈ ಕಾಲಲ್ಲಿ ಮನೆಯ ಆಯಕ್ಕೆ ಪ್ರಾಮುಖ್ಯತೆ ಕೊಡ್ತವಿಲ್ಲೆ ಹೇಳುವದು ಸತ್ಯವೇ.
  ಆದರೆ ಇತ್ತೀಚೆಗೆ ಜೋರಾಗಿ ನೆಡೆತ್ತಾ ಇಪ್ಪದು “ವಾಸ್ತು ಶಾಸ್ತ್ರ”
  ಅರ್ದಂಬರ್ಧ ಗೊಂತಿಪ್ಪವು, ವಾಸ್ತು ಸರಿ ಇಲ್ಲೆ ಹೇಳಿ ಅದಕ್ಕೆ ನಿವೃತ್ತಿ ಮಾಡ್ಸುವದು ಹೇಳಿ ಸಾಕಷ್ಟು ಖರ್ಚು ಮಾಡ್ಸುತ್ತವು.

 3. ರಾಮಚಂದ್ರಯ್ಯ ಕೆ ವಿ says:

  ನನಗೆ ಒಂದು ವಾಸ್ತು ಪುಸ್ತಕ ಬೇಕು

 4. shreeharsha says:

  ಅಂಬಗ ಸುತ್ತಳತೆ ಹೇಳುವಾಗ ಉದ್ದ ಎರಡು ಸರ್ತಿ ಅಗಲ ಎರಡು ಸರ್ತಿ ಕೂಡಿಸೇಕೋ ಅಲ್ಲ ಒಂದು ಉದ್ದ ಒಂದು ಅಗಲ ಸಾಕೋ? ರೇಖಾಶಾಸ್ತ್ರ ಲಿ ಎರಡು ಸರ್ತಿ ಹಾಕಿ ಸುತ್ತಳತೆ ತೆಗವದಲ್ಲದೋ ಹಾಂಗಾಗಿ ಈ ಪ್ರಶ್ನೆ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *