Oppanna.com

ಅಮೇರಿಕದ ಅಕ್ಕಂಗೆ ಭಾಷೆಯೇ ಮರದ್ದಡ!

ಬರದೋರು :   ಒಪ್ಪಣ್ಣ    on   11/03/2011    62 ಒಪ್ಪಂಗೊ

ನಿಂಗೊಗೆ ಮುಣ್ಚಿನಡ್ಕ ರಾಮಚಂದ್ರ ಭಟ್ರ ಅರಡಿಗೋ?
ಉಮ್ಮ, ಅರಡಿವಲೂ ಸಾಕು! ಅರಡಿಗಾರೆ ಒಳ್ಳೆದಾತು, ಅರಡಿಯದ್ರೆ ಮತ್ತೂ ಒಳ್ಳೆದಾತು! 😉
ನಾವು ಅವರ ಶುದ್ದಿ ಮಾತಾಡಿದ್ದು ರಜ ಕಮ್ಮಿಯೇ!

ಕೃಷಿಯೇ ಭಾರತದ ಬೆನ್ನೆಲುಬು ಹೇಳ್ತ ಮಾತಿನ ಒಪ್ಪಿಗೊಂಡು, ಪಿತ್ರಾರ್ಜಿತ ಬಂದ ಆಸ್ತಿಲಿ ಭಗ್ತೀಲಿ ಕೃಷಿ ಮಾಡಿಗೊಂಡು ಬಂದ ವೆಗ್ತಿ ಅವು.
ಜವ್ವನಲ್ಲಿ ಜಡಮುರುದು ಕೆಲಸ ಮಾಡಿಗೊಂಡು, ಕೃಷಿಂದ ಬಂದ ಉದ್ಪತ್ತಿಲಿ ಮಕ್ಕಳ ಬೆಳೆಶಿ ಈಗ ನಿವೃತ್ತರಾಯಿದವು.
ಪ್ರಸ್ತುತ ಮನೆಲೇ ಟೀವಿನೋಡ್ತವು – ಯೀಸಿ ಚಯರಿಲಿ ಉದಾಕೆ ಕೂದುಗೊಂಡು!
~

ಅವಕ್ಕೆ ನಾಕು ಜೆನ ಮಕ್ಕೊ – ಮೂರು ಕೂಸುಗೊ, ಒಬ್ಬ° ಮಾಣಿ!
ದೊಡ್ಡದು ಕೂಸು, ವೀಣಕ್ಕ°. ಕನ್ಯಾನದ ಹೊಡೆಂಗೆ ಕೊಟ್ಟದು.
ಕನ್ಯಾನ ಹೇಳಿತ್ತುಕಂಡ್ರೆ, ಬುಡ ಕನ್ಯಾನ ಅಷ್ಟೆ; ಈಗ ಕನ್ಯಾನಲ್ಲಿ ಇಲ್ಲೆ ಅವು.
ಕೊಡೆಯಾಲಲ್ಲಿ ಸಣ್ಣ ಒಂದು ಹಿತ್ತಿಲುಮನೆಲಿ ಅಜ್ಜ°-ಅಜ್ಜಿ ಇದ್ದವು.
ಮಾಣಿ – ವೀಣಕ್ಕನ ಗೆಂಡ – ಅಮೇರಿಕಲ್ಲಿಪ್ಪದಿದಾ.
ಒರಿಶಕ್ಕೊಂದರಿ ಹದ್ನೈದ್ದಿನಕ್ಕೆ ಬಂದರೆ ಈ ಅಜ್ಜಿಪುಣ್ಯ..!

ಎರಡ್ಣೇದು ವಿನಯಕ್ಕ, ಪುತ್ತೂರು ಹತ್ತರೆ ಕೊಟ್ಟದು.
ಮಾಣಿ ಈಗ ಬೆ೦ಗುಳೂರಿಲಿ – ಶುಭತ್ತೆಯ ಊರಿಲಿ – ಇಪ್ಪ ಕಾರಣ ಪರಿಭಾಷೆಲಿ ಬೆಂಗುಳೂರಿಂಗೆ ಕೊಟ್ಟದು – ಹೇಳಿಯೂ ಹೇಳ್ತವು.
ಮೂರ್ನೇದರ ಗುರ್ತ ಇಕ್ಕನ್ನೆಪ್ಪಾ ನಿಂಗೊಗೆ – ಅದೇ ನಮ್ಮ ವಿದ್ಯಕ್ಕ°, ತರವಾಡುಮನೆ ಪಾತಿಅತ್ತೆಯ ಸೊಸೆ!

~

ವಿದ್ಯಕ್ಕನ ಶುದ್ದಿ ನಾವು ಸುಮಾರು ಸರ್ತಿ ಮಾತಾಡಿದ್ದಲ್ಲದೋ?
ಹಾಂಗಾಗಿ ನಿಂಗೊಗೆ ಅರಡಿಗು; ಅಲ್ಲದೋ?
ವಿದ್ಯಕ್ಕಂಗೆ ಒಬ್ಬ° ತಮ್ಮ, ವಿವೇಕ – ರಾಮಜ್ಜನ ಕೋಲೇಜಿಲಿ.
ಕಲ್ತಾತೋ – ಆಯೆಕ್ಕಟ್ಟೆಯೋ; ಅಂತೂ ಆ ಕೋಲೇಜಿಂಗೆ ಹೋವುತ್ತ ಪ್ರಾಯ ಅವಂಗೆ.
~

ಮುಣ್ಚಿನಡ್ಕ ರಾಮಚಂದ್ರ ಮಾವನ ಮನೆಯೋರು – ಶಶಿಅತ್ತೆಗೆ – ದೊಡ್ಡ ಮಗಳ ಅಮೇರಿಕಕ್ಕೆ ಕೊಟ್ಟ ಸಮೆಯಲ್ಲಿ ಜೀವನವೇ ಸಾರ್ಥಕ ಹೇಳಿ ಕಂಡಿತ್ತು.
ಆದರೆ ಅಲ್ಯಾಣ ಅಜ್ಜಿ – ಶಶಿಅತ್ತೆಯ ಅತ್ತೆ ಗೌರಜ್ಜಿಗೆ ಮಾಂತ್ರ – ಪುಳ್ಳಿ ದೂರ ಹೋತನ್ನೆ ಹೇಳಿ ಬೇಜಾರು ಆಗಿಯೇ ಆಗಿತ್ತಾಡ.
ಅಜ್ಜಿ ಪರಂಚಿರೆ ಆರು ಕೇಳ್ತ°, ಶಶಿಅತ್ತೆಯ ಗೌಜಿಯ ಎಡಕ್ಕಿಲಿ ಇದೆಲ್ಲ ಕೇಳಿದ್ದೇ ಇಲ್ಲೆ. 🙁
~

ಶಶಿಅತ್ತೆ ಕೇಳವು, ಆದರೆ ರಾಮಚಂದ್ರ ಮಾವ° ಕೇಳದ್ದೆ ಇಕ್ಕೋ!
ಎಷ್ಟಾರೂ ಅಜ್ಜಿ ಹೇಳುದು ತನ್ನ ಪುಳ್ಯಕ್ಕೊಗೆ ಬೇಕಾಗಿಯೇ ಅಲ್ಲದೋ? – ಹಾಂಗೆ ಅಜ್ಜಿಯ ಹಟಕ್ಕೇ ಒಳುದ ಇಬ್ರು ಮಕ್ಕಳ – ಹತ್ತರೆಯೇ – ಭಾರತಲ್ಲೇ ಇರ್ತೋರಿಂಗೆ ಕೊಟ್ಟದು.

ಹತ್ತರೆ ಹೇದರೆ – ಎರಡ್ಣೇದರ ಬೆಂಗುಳೂರಿಂಗೆ ಕೊಟ್ಟವು – ಮೂರ್ನೇದರ ಶುದ್ಧ ಹಳ್ಳಿಯ ತರವಾಡುಮನೆಗೆ ಕೊಟ್ಟವು!
ಎಲ್ಲ ಅಜ್ಜಿಂದಾಗಿ.
ಈ ಅಜ್ಜಿಯ ಬಗ್ಗೆ ಒಂದೊಂದರಿ ಒಪ್ಪಣ್ಣಂಗೆ ನೆಂಪಪ್ಪದಿದ್ದು. ನೆಂಪಾಗಿ ಪಾಪನ್ನೇ ಅನುಸುಲೆ ಇದ್ದು!
~
ಅದೆಂತಕೆ? ಎಂತಕೆ ಹೇಳಿತ್ತುಕಂಡ್ರೆ…

ಮದುವೆ ಸಮ್ಮಾನ ಕಳುಶಿಗೊಂಡು ವೀಣಕ್ಕ° ಅಮೇರಿಕಕ್ಕೆ ಹೋಗಿಯೇ ಬಿಟ್ಟವು.
ಅವರ ಅಮ್ಮನ ಹಾಂಗೆ ವೀಣಕ್ಕನೂ ಬೆಳಿಬೆಳಿಯೇ ಇದ್ದಿದ್ದವು, ಅವರ ಯೆಜಮಾನ್ರು ಅನಂತಭಾವನೂ ಕಪ್ಪೇನಲ್ಲ.
ಹಾಂಗಾಗಿ ಅಮೇರಿಕದ ಕೆಂಪುಮುಸುಡಿನೋರ ಎಡಕ್ಕಿಲಿ ಒಂದಾಗಿ ಸೇರಿಗೊಂಬಲೆ ದೊಡ್ಡ ಬಂಙ ಆಯಿದಿಲ್ಲೆ ತೋರ್ತು!

ಒರಿಶಕ್ಕೆ ಒಂದೆರಡುವಾರ ಪುರುಸೊತ್ತು ಮಾಡಿಗೊಂಡು ಭಾರತಕ್ಕೆ ಬಂದುಗೊಂಡಿತ್ತಿದ್ದವು.
ಬಂದದರ್ಲಿ ಅನಂತ ಭಾವನ ಅಪ್ಪಮ್ಮನ ಕಂಡುಗೊಂಡು, ವೀಣಕ್ಕನ ಅಪ್ಪನ ಮನೆಗೆ, ಎಲ್ಲಾ ತಂಗೆಕ್ಕಳ ಮನೆಗೆ ಒಂದೊಂದು ದಿನ ಬಂದಿಕ್ಕುಗು!
ತರವಾಡುಮನೆಗೂ ಬಕ್ಕು, ಸಣ್ಣ ತಂಗೆ ವಿದ್ಯಕ್ಕನ ಕಾಂಬಲೆ.
ಪ್ರತಿ ಸರ್ತಿ ವೀಣಕ್ಕನ ಕಾಂಬಗಳೂ, ವೀಣಕ್ಕನ ಪ್ರತಿ ಶುದ್ದಿ ಕೇಳುವಗಳೂ – ವಿದ್ಯಕ್ಕಂಗೆ ತಾನು ಎಷ್ಟು ಸಣ್ಣ, ಇನ್ನೂ ಈ ಹಳ್ಳಿ ಮನೆಲಿ, ಹೊಗೆ ಅಟ್ಟದ ಬುಡಲ್ಲಿ ಹೆಜ್ಜೆತೆಳಿ ಮಾಡಿಗೊಂಡಿದ್ದೆ – ಹೇಳಿ ಅನುಸಿ ಕೀಳರಿಮೆ ಬಂದುಬಿಡುಗು!
ಅದಿರಳಿ,
ವೀಣಕ್ಕ ಮಾಂತ್ರ ಬಂದೇ ಬಕ್ಕು!
~
ಸುರುಸುರುವಿಂಗೆ ತುಂಬ ಪ್ರೀತಿಲಿ ಬಂದುಗೊಂಡಿದ್ದರೂ, ಕ್ರಮೇಣ – ಒರಿಶ ಹೋದ ಹಾಂಗೆ ವೀಣಕ್ಕಂಗೂ ಸಂಸಾರ ತಾಪತ್ರಯ ಜಾಸ್ತಿ ಆಗಿ – ಕಾಲಾವಧಿ ಸೇವೆಯ ನಮುನೆ – ಬಂದರೂ ಒಂದು ಗಳಿಗ್ಗೆ – ಅಷ್ಟೇ.

ವೀಣಕ್ಕಂಗೆ ಸಂಸಾರ ತಾಪತ್ರೆ ಸುರು ಆತು; ಎರಡು ಮುದ್ದು ಮಕ್ಕೊ ಆದವು.
ಆದವು ಹೇಳ್ತರಿಂದಲೂ ಆದವಡ – ಹೇಳಿ ಮಾಂತ್ರ ಗೊಂತು.
ಅವುಳಿ-ಜೆವುಳಿ ಮಕ್ಕೊ ಅಪ್ಪ ಸಮೆಯಲ್ಲಿ ವೀಣಕ್ಕನ ಅಮ್ಮ ಇಲ್ಲಿಂದ ಹೋಗಿತ್ತವು, ಬಾಳಂತನಕ್ಕೆ.
ಆರು ತಿಂಗಳು ಅಲ್ಲಿ ಇದ್ದು ಒಪಾಸು ಬಂದ ಶಶಿಅತ್ತೆಗೆ ಅಲ್ಲಿ ಸಾಕೋಸಾಕಾಗಿ ಹೋಗಿತ್ತಡ!
ಊರಿಂಗೆ ಬಂದ ಎರಡುದಿನ ಮೂರೊತ್ತು ಹೆಜ್ಜೆಉಂಡಮತ್ತೆಯೇ ಅವಕ್ಕೆ ಸಮದಾನ ಆದ್ದಡ. ಅದಿರಳಿ.
ಎಷ್ಟೇ ಬೊಡುದರೂ – ಅಮೆರಕ ಬಯಂಕರ – ಹೇಳ್ತದು ಬೊಡ್ತಿಲ್ಲೆ!
~
ಹೇಳಿದಾಂಗೆ, ಅವಕ್ಕಿಬ್ರು ಮಕ್ಕೊ – ಒಬ್ಬ ಮಗ°, ಒಂದು ಮಗಳು.
ಅವು ಹುಟ್ಟಿ ರಜ ದೊಡ್ಡ ಅಪ್ಪಷ್ಟು ಸಮೆಯ ವೀಣಕ್ಕ° ಭಾರತಕ್ಕೆ ಬಯಿಂದಿಲ್ಲೇಡ.
– ಆಹಾರ, ಪರಿಸರ ಬದಲಾಗಿ ಆಗಿ ಮಕ್ಕಳ ಆರೋಗ್ಯ ವಿತ್ಯಾಸ ಬತ್ತದು ಬೇಡ – ಹೇಳ್ತ ನಮುನೆಲಿ.
~
ಮಕ್ಕೊಗೆ ಒಂದೂವರೆ-ಎರಡೊರಿಶ ಆಗಿಪ್ಪಗ ಒಂದರಿ ಬಂದಿತ್ತಿದ್ದವು ಊರಿಂಗೆ.
ಅದೇ ಸಮೆಲ್ಲಿ ಆದ ತರವಾಡುಮನೆ ಪೂಜೆಗೂ ಬಯಿಂದವು!
ಬೆಳಿಬೆಳಿ – ಕೆಂಪುಕೆಂಪು, ಶುಬತ್ತೆ ಪಲಾವಿಲಿಪ್ಪ ಬಟಾಟೆ- ಕೇರೆಟ್ಟಿನ ತುಂಡಿನ ನಮುನೆ!

– ಸಣ್ಣ ಮಕ್ಕೊ ಒಳ್ಳೆ ಚುರುಕ್ಕು ಇದ್ದಿದ್ದವು.
ಎಲ್ಲೋರ ಹತ್ರೂ ಸೇರುಗು, ಗುರ್ತ ನೋಡದ್ದೆ ಬಕ್ಕು!
ವೀಣಕ್ಕನ ಮಕ್ಕೊ – ಹೇಳಿ ಎಲ್ಲೋರಿಂಗೂ – ಕೊಶಿ.
ಸಣ್ಣ ಸಣ್ಣ ಶಬ್ದಂಗಳ ಮಾತಾಡ್ಳೆ ಸುರುಮಾಡಿಗೊಂಡಿತ್ತಿದ್ದವು.
ಎಷ್ಟೂ ತೆಚೆಪೆಚೆ ಮಾತಾಡುಗು, ಆದರೆ ಆರಿಂಗೂ ಅರ್ತ ಆಗ! 😉
ಗೌರಜ್ಜಿಗೆ ಮಕ್ಕಳ ಸರೀ ಅರ್ತ ಅಕ್ಕು, ಹಾಂಗಾಗಿ ಅವು ತೆಚೆಪೆಚೆ ಮಾತಾಡಿದ್ದುದೇ ಅರ್ತ ಆಗಿಂಡಿದ್ದಿಕ್ಕು! 🙂
~

ಮಕ್ಕೊ ದೊಡ್ಡ ಆದ ಮೇಗೆ ಇತ್ಲಾಗಿ ಗ್ರೇಶಿದಾಂಗೆ ಬಂದುಗೊಂಬಲೆ ಎಡಿತ್ತೋ? -ಇಲ್ಲಲೇ ಇಲ್ಲೆ!
ಹಾಂಗೆ, ಇತ್ಲಾಗಿಯಾಣ ಸಂಪರ್ಕ ಕಮ್ಮಿ ಆತದಾ..
ಮುಂದೆಂತಾತು, ಅದುವೇ ಇಂದ್ರಾಣ ಶುದ್ದಿ!!
~
ಆ ಮಕ್ಕೊಗೆ ಯೇವದೂ ಕಮ್ಮಿ ಅಪ್ಪಲಾಗ ಹೇಳ್ತದು ವೀಣಕ್ಕನ ಪ್ರಥಮ ದ್ಯೇಯೋದ್ದೇಶ ಆಗಿದ್ದತ್ತು.
ಎಲ್ಲ ಅಮ್ಮಂದ್ರ ಹಾಂಗೆ ವೀಣಕ್ಕನೂ ಮಕ್ಕೊಗೆ ಬೇಕಾಗಿ ಎಷ್ಟೋ ಬದಲಾವಣೆಗಳ ಮಾಡಿತ್ತು.
ಸೆರೆಲ್, ಸೆರ್ಲೇಕು, ನೂಡುಲು, ಬ್ರೆಡ್ಡು – ಹೀಂಗಿರ್ತದು ನಿತ್ಯದೂಟ ಆಗಿ ಹೋತು.
ಎಲ್ಲದರಿಂದ ಮುಖ್ಯವಾಗಿ, ಆ ಮಕ್ಕೊಗೆ ಮುಂದೆ ಕ್ಳಾಸಿಂಗೆತ್ತುವಾಗ ಮಾತಾಡ್ಲೆ ಕಷ್ಟ ಅಪ್ಪಲಾಗ – ಹೇಳ್ತ ಕಾರಣಲ್ಲಿ ಸಣ್ಣ ಇಪ್ಪಗಳೇ ಇಂಗ್ಳೀಶು ಕಲಿಶುಲೆ ಸುರುಮಾಡಿತ್ತು!
ಟೀವಿಲಿಯೂ ಇಂಗ್ಳೀಶು, ಪೇಪರುಗಳಲ್ಲಿಯೂ ಇಂಗ್ಳೀಶು, ಹೆರ ಹೋದರೂ ಇಂಗ್ಳೀಶು, ಶಾಲೆಲೂ ಇಂಗ್ಳೀಶು – ಮಕ್ಕೊಗೆ ಎಲ್ಲಿ ಹೋದರೂ ಇಂಗ್ಳೀಶೇ ಇಂಗ್ಳೀಶು!

ಈ ಮಕ್ಕಳ ಕೆಮಿಗೆ ಹವ್ಯಕ ಭಾಶೆ ಬೀಳ್ತದೇ ಬೇಡ- ಹೇಳಿಗೊಂಡು ಅಪ್ಪಮ್ಮ ಅತ್ತಿತ್ತೆ ಮಾತಾಡುವಗಳೂ ಇಂಗ್ಳೀಶಿಳೇ ಮಾತಾಡಿಗೊಂಡವಡ.
ಆ ಮಕ್ಕೊ ಮಾತಾಡುದು, ನೆಗೆಮಾಡುದು, ಕೂಗುದು, ಉಂಬದು, ತಿಂಬದು, ಒರಗುದು – ಎಲ್ಲವೋ ಇಂಗ್ಳೀಶಿಲೇ ಆಗಿ ಹೋತು! 🙁
~

ವೀಣಕ್ಕನ ಮನೆಲಿ ಇಂಗ್ಳೀಶು ಅಕ್ಷರಂಗೊ ಡೇನ್ಸು ಮಾಡ್ತದು!

ಸುರುಸುರುವಿಂಗೆ ಅಮೆರಿಕಲ್ಲಿ ವೀಣಕ್ಕನ ಸಂಸಾರದ್ದು ಸ್ವತಃ ಸೃಷ್ಟಿ ಮಾಡಿದ ಪುಟ್ಟ ದ್ವೀಪ ಆಗಿದ್ದತ್ತು.
ಆದರೆ ಮಕ್ಕೊ ಹುಟ್ಟೆಕ್ಕಾರೆ ಮೊದಲೇ ಅವರ ಭವಿಷ್ಯ ಅಲ್ಲಿಯೇ ಹೇಳಿ ನಿಗಂಟು ಮಾಡಿತ್ತು ಅಲ್ಲದೋ, ಅದಕ್ಕೆ ಬೇಕಾದಾಂಗೆ ಅವರ ಬೆಳೆಶುವ ವಾತಾವರಣವನ್ನುದೇ ಮಾಡಿಗೊಂಡತ್ತು.
ನಮ್ಮ ಸಂಸ್ಕೃತಿಯ ದ್ವೀಪ ಸಾಗರಲ್ಲಿ ಮುಳುಗಿಯೇ ಹೋತು!

ನಮ್ಮ ಸಂಸ್ಕೃತಿಯ ಆಚರಣೆಗಳ ಆದಷ್ಟು ಕಮ್ಮಿ ಮಾಡಿ ಅಲ್ಲಿಯಾಣದ್ದನ್ನೇ ಅನುಸರುಸುಲೆ ಸುರು ಮಾಡಿತ್ತು.
ಹೋದಲ್ಲಿ ಬಂಙ ಅಪ್ಪಲಾಗ ಹೇಳಿಗೊಂಡು ಚಮ್ಚ, ಇಸುಮುಳ್ಳಿಲೇ ಉಂಬಲೆ ಕಲುಶಿತ್ತಡ.
ತಾತಾಗುಬ್ಬಿ, ತಾರಮ್ಮಯ್ಯ ಎಲ್ಲ ಹೇಳಿಕೊಟ್ರೆ ಮತ್ತೆ ಇಂಗ್ಳೀಶು ಉಚ್ಛಾರಣೆ ಸರಿ ಬಾರ ಹೇಳಿಗೊಂಡು ರೈಮು-ಪೋಯೆಮ್ಮುಗಳನ್ನೇ ಹೇಳಿಕೊಟ್ಟತ್ತಡ. ನವಗೆ ಇಬ್ರಾಯಿಯ ಅಳಿಯ ರೈಮನ ಮಾಂತ್ರ ಗುರ್ತ ಇಪ್ಪದು! 😉

ದೀಪಾವಳಿಗೆ ದೀಪ ಹೊತ್ತುಸದ್ದರೂ ಅಲ್ಯಾಣ ಹಬ್ಬ ಕ್ರಿಸ್ಸುಮಸ್ಸಿಂಗೆ ಕೇಂಡ್ಳು ಹೊತ್ತುಸಲೆ ಹೇಳಿಕೊಟ್ಟತ್ತಡ.
ಹೀಂಗೆ ಅಮೇರಿಕದ್ದೇ ಸಂಸ್ಕೃತಿಲಿ ಅಮೇರಿಕದವರ ನಮುನೆಲೇ ಬೆಳದವು ಆ ಮಕ್ಕೊ. 🙁
~
ನವಗೆ ಇಷ್ಟೆಲ್ಲ ಗೊಂತಾದ್ದು ಮೊನ್ನೆ ವೀಣಕ್ಕ° ಸಂಸಾರ ಸಮೇತ ಊರಿಂಗೆ ಬಂದಿದ್ದ ಸಮೆಯಲ್ಲಿ.
ಅಂದು ಅಮೇರಿಕ ಅಮೇರಿಕ ಹೇಳಿ ಕೊಶೀಲಿ ಕೊಣುದಿದ್ದ ಶಶಿಅತ್ತೆಯೇ ಇಂದು ಈ ಎಲ್ಲ ಶುದ್ದಿ ಹೇಳಿಗೊಂಡು ಬೇಜಾರುಮಾಡಿಗೊಂಡಿದ್ದವು!

ಅಪ್ಪು, ಮೊನ್ನೆ ವೀಣಕ್ಕ ಊರಿಂಗೆ ಬಂದಿಪ್ಪಾಗ ಒಂದು ವಿಚಿತ್ರ, ಬೇಜಾರದ ಸಂಗತಿ ನೆಡದತ್ತಡ.
ಅದೆಂತರ?
~

ಬೆಳಿಬೆಳಿ ಹಲ್ಲಿಗಳ ಹಾಂಗೆ ಇರ್ತ ಮಕ್ಕೊ ಅವರ ಮಮ್ಮಿಯ ಒಟ್ಟಿಂಗೆ ಊರಿಂಗೆ ಬಂದವು.
ಮಕ್ಕೊ ಈಗ ದೊಡ್ಡ ಆಯಿದವು.
ಬೆಳಿವಾತಾವರಣಲ್ಲೇ ಬೆಳದ ಕಾರಣ ಚರ್ಮ ರಜವೂ ಕಪ್ಪಾಯಿದಿಲ್ಲೆ.
ಮಕ್ಕೊಗೆ ನೆಂಪು ಬತ್ತ ನಮುನೆಲಿ ಇದು ಸುರೂ ಬತ್ತಾ ಇಪ್ಪದು.
ಮದಲೇ ಬಂದಿದ್ದರೂ, ಅವಕ್ಕೆ ನೆಂಪಿಲ್ಲೆ. ಬರೇ ಸಣ್ಣ ಇಪ್ಪಗ ಇದಾ..!
ಬಂದದರ್ಲೇ ಯೇವತ್ತಿನಂತೇ ಎಲ್ಲಾ ಮನೆಗೂ ಹೋದವು. ನಮ್ಮ ಬೈಲಿನ ತರವಾಡುಮನೆಗೂ ಬಯಿಂದವು, ವೀಣಕ್ಕನ ಅಪ್ಪಮ್ಮನ ಕಾಂಬಲುದೇ ಹೋಗಿಬಂದವು
~
ರಾಮಚಂದ್ರ ಮಾವನ ಅಬ್ಬೆ – ಗೌರಜ್ಜಿ ಈಗಳೂ ಇದ್ದವು, ಇದರ ಎಲ್ಲ ನೋಡ್ಳೆ.
ಮೊನ್ನೆ ಈ ಮಕ್ಕೊ ಬಂದಿಪ್ಪಗ ಗೌರಜ್ಜಿಗೆ ಕೊಶಿಯೋ ಕೊಶಿ!
ಪುಳ್ಯಕ್ಕಳತ್ರೆ ಮಾತಾಡೇಕು – ಹೇಳಿ ಅಜ್ಜಿ ಕಾದ್ದದೇ ಬಂತು, ಪುಳ್ಯಕ್ಕೊ ಬಂದ ಕೂಡ್ಳೇ ತಚಪಚ ಮಾತಾಡ್ಲೆ ಸುರು ಮಾಡಿದವು!!
ಕಳುದ ಸರ್ತಿ ಗೌರಜ್ಜಿಗೆ ಆದರೂ ಮಕ್ಕಳ ತೆಚೆಪೆಚೆ ಅರ್ತ ಆಯಿದು, ಈ ಸರ್ತಿ ಎಂತದೂ ಅರ್ತ ಆಗ!
ಎಂತಕೆ ಹೇಳಿರೆ ಈಗ ಮಾತಾಡಿದ್ದು ಮಕ್ಕಳ ಭಾಶೆ ಅಲ್ಲ, ಇಂಗ್ಳೀಶು ಬಾಶೆ. 🙁
~

ಬತ್ತ ಸಂಭ್ರಮ ಬಪ್ಪದು ಸುಲಬ, ಆದರೆ ಅದರ ಒಳಿಶಿಗೊಂಬದು ಸುಲಭವೋ?
ಅಜ್ಜಿಗೆ ಈ ಪುಳ್ಯಕ್ಕಳತ್ರೆ ಮಾತಾಡಿ ತುಂಬಾ ಕೊಂಗಾಟ ಮಾಡೇಕು – ಹೇಳಿ ಅನಿಸಿಂಡಿತ್ತು, ಆದರೆ ಎಂತ ಮಾಡುತ್ಸು?
ಅಜ್ಜಿಗೆ ಇಂಗ್ಳೀಶು ಅರಡಿಯ, ಮಕ್ಕೊಗೆ ಅಜ್ಜಿ ಭಾಶೆ ಅರಡಿಯ!
ಅಜ್ಜಿ ಪುಳ್ಯಕ್ಕಳ ತಲೆ ಮುಟ್ಟಿ ಮುಟ್ಟಿ ಕೊಂಗಾಟ ಮಾಡಿತ್ತು, ಮಾತಿಲ್ಲೆ, ಬರೇ ಕೊಂಗಾಟ ಮಾಂತ್ರ!
ತರವಾಡುಮನೆ ಹಟ್ಟಿಲಿಪ್ಪ ಕೆಂಪಿಯ ಪಾತಿಅತ್ತೆ ಕೊಂಗಾಟಮಾಡಿದ ಹಾಂಗೆ ಕಂಡುಗೊಂಡಿತ್ತು!
ಆದರೆ ಮಕ್ಕೊಗೆ ಅದು ಒಂದು ವಿಚಿತ್ರ ಅನುಸುಲೆ ಸುರು ಆತು.
~
ಅಜ್ಜಿಯ ಪ್ರೀತಿ ವಿಚಿತ್ರ ಕಾಂಬಲೆ ಸುರು ಆದ್ದು ಎಂತಕೇ?
ಎಂತಕೆ ಹೇಳಿತ್ತುಕಂಡ್ರೆ ಅವಕ್ಕೆ ಅಜ್ಜಿಯ ಭಾಶೆಯೂ ಗೊಂತಿಲ್ಲೆ, ಅಜ್ಜಿಯ ಪ್ರೀತಿ ತೆಕ್ಕೊಂಬ ಸಂಸ್ಕೃತಿಯೂ ಕಂಡೇ ಗೊಂತಿಲ್ಲೆ.
~
ಮಕ್ಕೊಗೆ ಕೋಪ ಬಪ್ಪದು ಸಹಜವೇ! ಅವರ ಬೈದಿಕ್ಕಲೆ ಕಾರಣವೇ ಇಲ್ಲೆ,
ಎಂತ್ಸಕೆ ಹೇಳಿತ್ತುಕಂಡ್ರೆ, ಮಕ್ಕಳ ಬೆಳೆಶೇಕಾದ ಅಪ್ಪಮ್ಮನ ಕತೆ ಎಂತ್ಸರ?
ನೋಡಿರೆ, ಈಗೀಗ ವೀಣಕ್ಕಂಗೇ ಭಾಶೆ ಮರಕ್ಕೊಂಡು ಬಯಿಂದಡ.
ಮಾತಾಡುವಗ ಒಂದು ಗೆರೆಲಿ ಅರ್ದಕ್ಕರ್ದ ಇಂಗ್ಳೀಶು ಶಬ್ದಂಗೊ ಬತ್ತಡ. ಅಜ್ಜಿಗೆ ಆ ವಾಕ್ಯಂಗೊ ತಲಗೇ ಹೋವುತ್ತಿಲ್ಲೆಡ.
ಅಜ್ಜಿಯ ಅವಸ್ಥೆ ಕಂಡು ಒಪ್ಪಣ್ಣಂಗೆ ಭಾರೀ ಬೇಜಾರಾಗಿತ್ತು. 🙁

ಮಗಳು ಅಮೇರಿಕಕ್ಕೆ ಹೋತು ಹೇಳಿ ಅಂದು ಶಶಿಅತ್ತೆ ಚೂರಿಬೈಲು ದೀಪಕ್ಕ ಮಾಡಿದ ಬನುಸಿನ ನಮುನೆ ಉಬ್ಬಿತ್ತಿದ್ದವು!
ಇಂದು, ಮಗಳತ್ತರೆ, ಪುಳ್ಯಕ್ಕಳ ಹತ್ತರೆ ಮಾತಾಡುಲೇ ಗೊಂತಿಲ್ಲದ್ದ ಹಾಂಗಾಯಿದು.
ಮಗಳಿಂಗಾದರೂ ಇವು ಮಾತಾಡಿದ್ದು ರಜ್ಜ ಅರ್ತ ಅಕ್ಕು. ಆದರೆ ಪುಳ್ಯಕ್ಕೊಗೆ? ಬಾಯಿಬಾರದ್ದೋರ ಹಾಂಗೆ ಕೈಬಾಶೆಲೇ ಮಾತಾಡೆಕ್ಕಟ್ಟೆ.
ಆ ಮಕ್ಕೊಗುದೇ ಇಲ್ಲಿಯಾಣ ಜನಂಗಳ, ಇಲ್ಲಿಯಾಣ ಆಚರಣೆಗಳ ಎಲ್ಲ ನೋಡುವಾಗ ಯೇವದೋ ಕಾರ್ಟೂನಿನ ಜೋಕರಿನ ಹಾಂಗೆ ಕಾಣ್ತೋ ಎಂತೊ.
ಎಲ್ಲವನ್ನು ನೋಡಿ ಪಿಸಿಪಿಸಿ ನೆಗೆಮಾಡಿಗೊಂಡಿದ್ದಿದ್ದವು!

ನಮ್ಮ ಊರಿನ ಮಕ್ಕೊಗೆ ನಮ್ಮ ಸಂಸ್ಕೃತಿ ವಿಚಿತ್ರ ಕಾಣ್ತು!
ಅವಕ್ಕೆ ಹೇಳಿಕೊಡೆಕ್ಕಾದ ಅವರ ಅಮ್ಮ -ವೀಣಕ್ಕಂಗೇ ಈಗ ಅದೆಲ್ಲ ಮರತ್ತು ಹೋಯಿದು.
ಮೋರೆಗೆ ಬೊಟ್ಟು ಹಾಕುಲೂ ಮರಗು, ಕೈಗೆ ಬಳೆ ಹಾಕುಲೂ ಮರಗು.
ಅದೆಲ್ಲ ಬಿಡಿ, ಮಾತಾಡ್ಳೆ ಸಿಕ್ಕಿದ ನೆಂಟ್ರತ್ತರೆ ನೇರ್ಪಕ್ಕೆ ಏನು-ಒಳ್ಳೆದು ಹೇಳ್ಳೂ ಮರದ್ದು!
~
ಬೈಲಿಲಿ ಮರದಿನ ಮಾಷ್ಟ್ರುಮಾವ° ಸಿಕ್ಕಿಪ್ಪಗ ಈ ವಿಶಯ ಹೇಳಿದೆ, ಅದಕ್ಕೆ ಅವು ಪೂರಕವಾಗಿ ಹೊಸ ವಿಶಯ ರೆಜ ಹೇಳಿದವು.
ಅದೆಂತರ? ಭಾಶೆಯೂ – ಸಂಸ್ಕೃತಿಯೂ ಒಂದೇ ಪಾವಲಿಯ ಎರಡು ಹೊಡೆ ಅಡ!
ಭಾಶೆ ನೆಂಪಿದ್ದರೆ ಸಂಸ್ಕೃತಿಯೂ ನೆಂಪಿಕ್ಕಡ, ಭಾಶೆ ಮರದರೆ ಕ್ರಮೇಣ ಸಂಸ್ಕೃತಿಯೂ ಮರಗಡ!
ಒಂದು ಸಂಸ್ಕೃತಿಗೆ ಬೇಕಪ್ಪ ಎಷ್ಟೋ ವಿಶೇಷ ಶಬ್ದಂಗೊ ಆಯಾ ಭಾಶೆಲಿ ಇರ್ತಾಡ.
ಅದರ ಇನ್ನೊಂದು ಸಂಸ್ಕೃತಿಯ ಭಾಶೆಲಿ ಹೇಳುಲೆ ಎಡಿಯ ಅಡ.
~
ಅದಪ್ಪನ್ನೇ ಹೇಳಿ ಆತು ಒಪ್ಪಣ್ಣಂಗೆ!!
“ಭಾಶೆ ಇಲ್ಲೆಯೋ?” ಹೇಳಿ ಬೈದರೆ “ಸಂಸ್ಕಾರ ಇಲ್ಲೆಯೋ?” ಹೇಳಿಯೇ ಅರ್ತ ಬತ್ತಲ್ಲದೋ?
ಎಂತ ಹೇಳ್ತಿ?
~
ವೀಣಕ್ಕಂಗೆ ಭಾಶೆ ಮರವಲೆ ಕಾರಣ, ಅದು ನಮ್ಮ ಸಂಸ್ಕೃತಿಯ ಮರದ್ದಡ!

ಇದು ನಮ್ಮ ವೀಣಕ್ಕನ ಕತೆ ಮಾಂತ್ರ ಅಲ್ಲ.
ನಮ್ಮ ಹಳಬ್ಬರು ತೆಂಕ್ಲಾಗಿ ಹೋದೋರದ್ದುದೇ ಹಾಂಗೇಡ.
ಅವುದೇ ನಮ್ಮ ಹವ್ಯಕ ಮರದು ಮಲೆಯಾಳ ಮಾಂತ್ರ ನೆಂಪು ಮಡಗಿ, ಶುದ್ಧ ಮಲೆಯಾಳಿಗಳೇ ಆಗಿ ಬಿಟ್ಟಿದವಡ.

ಆದರೆ ಇಂಗ್ಳೀಶಿಂಗೆ ಹೋಲುಸುವಾಗ ಮಲೆಯಾಳ ದೊಡ್ಡ ತಲೆಬೇನೆ ಅಲ್ಲ, ಎಂತ್ಸಕೆ ಹೇಳಿತ್ತುಕಂಡ್ರೆ, ಅದು ಎರಡುದೇ ಭಾರತದ ಒಳಾಣ ಸಂಸ್ಕೃತಿಯೇ ಅಲ್ಲದೋ?
ನಮ್ಮ ದೇಶಲ್ಲಿ ಸಾವಿರಗಟ್ಳೆ ಭಾಶೆ ಇದ್ದು, ಹಾಂಗಾಗಿ ಸಾವಿರಗಟ್ಳೆ ಸಂಸ್ಕೃತಿ ಇದ್ದು.
ಹೊಸ ಇಂಗ್ಳೀಶು ಬಂತು ಹೇಳಿಗೊಂಡು ಹಳತ್ತರ ಮರದರೆ ಸಂಸ್ಕೃತಿಯೇ ನಾಶ ಅಕ್ಕಾಡ!
~
ವೀಣಕ್ಕನ ಕತೆ ಹಾಂಗಾತು. ಹೇಳಿ ಸುಕ ಇಲ್ಲೆ.
ಆ ಮಕ್ಕೊ ಇನ್ನು ಕ್ರಮೇಣ ಅಲ್ಲಿಗೇ ಒಗ್ಗಿ ಬಿಡ್ತವು.
ತಪ್ಪಲ್ಲ, ಆದರೆ ಎಷ್ಟೋ ಗೌರಜ್ಜಿಗೊಕ್ಕೆ ಪ್ರೀತಿಯ ಪುಳ್ಯಕ್ಕೊ ಇಲ್ಲದ್ದೆ ಆವುತ್ತನ್ನೇ!

ಇದರ ಎಲ್ಲ ಗ್ರೇಶಿರೆ ರಾಮಚಂದ್ರ ಮಾವಂಗೆ ಒಂದೊಂದರಿ ಯೀಸಿಚೆಯರಿಲಿ ಕೂದರೂ ನೆಮ್ಮದಿ ಸಿಕ್ಕುತ್ತಿಲ್ಲೇಡ!

ಒಂದೊಪ್ಪ: ಭಾಶೆ ನೆಂಪಿದ್ದರೆ ಸಂಸ್ಕೃತಿಯೂ ನೆಂಪಿಕ್ಕಡ, ಭಾಶೆ ಮರದರೆ ಕ್ರಮೇಣ ಸಂಸ್ಕೃತಿಯೂ ಮರಗಡ..!

ಸೂ:

  • ಪಟ ಇಂಟರುನೆಟ್ಟಿಂದ.
  • ವೀಣಕ್ಕನ ನಿಜ ಹೆಸರು ಹಾಂಗಲ್ಲ! 😉
  • ಅಮೇರಿಕಲ್ಲೇ ಇಪ್ಪ ಎಷ್ಟೋ ಜೆನ ನಮ್ಮ ಭಾಶೆಯ ಒಳುಶಿಗೊಂಡಿದವು. ಅವರ ಬಗ್ಗೆ ಒಪ್ಪಣ್ಣಂಗೆ ಅಭಿಮಾನ ಇದ್ದು.

62 thoughts on “ಅಮೇರಿಕದ ಅಕ್ಕಂಗೆ ಭಾಷೆಯೇ ಮರದ್ದಡ!

  1. tumba laikaidu oppanna koshi aathu.
    nijavagi appadaranne baradde.eega heenge nadetta iddu.
    americalliyu indiyalliyu.
    highschoolinge hopa makkoge kannada odule battille.
    idu ella english prabhava allada oppanno.
    odi kelavu dikke negeyu battappa.
    heenge baravale oppannange oppannane sari.
    good luck.

  2. I do not disagree that efforts should be made. I also understand the aspiration behind the post. But some of us get into situation where it is almost impossible even to remember the language. I may not forget it since I find a way to use it but it sure is a overhead when life becomes busy with increasingly complex lifestyle. I was arguing similarly until I came to know the realities of being away. @Vishnu they are people who have almost forgotten but that takes more than 30 years or so. Not because they wanted to but because telephones were expensive 30 years ago and there was no Internet or communication tools of today. Today we have more opportunity to keep the language alive. As for forgetting even in villages English words are used liberally. Guys laughed at me when I said “Car Haralu Yerisu” – instead of “Car Glass Yerisu”. So things are changing.

    1. ರಾಗುಅಣ್ಣಾ..
      ಸಾಧ್ಯ ಆದಷ್ಟು ಹವ್ಯಕಲ್ಲೇ ಮಾತಾಡುವ.

      ಹವ್ಯಕ ಯಾವ ಊರಿಂದೇ ಆಗಿರ್ಲಿ, ಅಡಿಲೆ.
      ಆದರೆ ಭಾಶೆ ಹವ್ಯಕಾನೇ ಆಗಿರ್ಲಿ, ಅಲ್ದಾ? ಎಂತ ಹೇಳ್ತ್ರಿ?

      ಕನ್ನಡದಲ್ಲಿ ಬರಿವ ಸಾಧ್ಯತೆ ಇಲ್ಲೇ ಇದ್ದು, ಹಾಂಗಾಗಿ ನಿಂಗಕ್ಕೆ ಅದೂ ದೊಡ್ಡ ಕಷ್ಟ ಆಗಲ್ಲೆ – ಹೇಳಿ ಅನ್ಕಂಡಿದೆ. ಅಲ್ದಾ?

      ಬೈಲಿಂಗೆ ಸ್ವಾಗತಮ್!

  3. It is very hard to remember a language if it is not used for a long time. We have to understand their issues as well. It is very easy preaching others. I sometimes can not find a Kannada word and I have been out for only 5 years.

    Ragu
    http://www.thoughtslot.blogspot.com

    1. ರಾಗು ಅಣ್ಣ,
      ಹಳೆ ಕಬ್ಬಿಣ ಉಪಯೋಗ ಇಲ್ಲದ್ರೆ ತುಕ್ಕು ಹಿಡುವ ಹಾ೦ಗೆಯೇ ಭಾಷೆಯೂ.ಆದರೆ ಉಪಯೋಗ ಮಾಡುವ ಅವಕಾಶ ಇದ್ದರೂ ಮನಸ್ಸು ಇಲ್ಲದ್ದೆ ಹೋದರೆ ಮು೦ದಾಣ ಪರಿಸ್ಥಿತಿ ಹೇ೦ಗಕ್ಕು ಹೇಳಿ ಒಪ್ಪಣ್ಣನ ಈ ಬರಹದ ಒಟ್ಟು ಅಭಿಪ್ರಾಯ ಅಲ್ಲದೋ?

    2. Aarude yellavu nenpili irekku heli helthaville. Maratthu hopadu shabdango idi bhashe alla. Bere desha yenthake ille benglooli iddaru namma halavaru gramya shabdango maratthu hovutthu aadare bhashe alla.

      Bhasheya maratthavakke kshame ille.

  4. ಒಪ್ಪಣ್ಣ ..ಭಾರೀ ಲಾಯಕ್ಕಾಯಿದು.

    ಕೆಲವು ಸಮಯ ಮೊದಲು ನಮ್ಮ ಮಕ್ಕಳ ಪ್ರತಿಭಾ ಪಲಾಯನದ / ಅಪಹರಣದ ಬಗ್ಗೆ ” ಹರೇ ರಾಮ ” ಲಿ ಇದೇ ರೀತಿ ಯ ಅನಿಸಿಕೆಯ ಪ್ರಸ್ತಾಪಮಾಡಿತ್ತಿದ್ದೆ.–ಸಂದರ್ಭ ಸಿಕ್ಕಿರೆ ನೋಡಿ

  5. ಭಾರೀ ಲಾಯಕ ಆಯಿದು ,ದನ್ಯವಾದ೦ಗೊ….

  6. ಈಗ ಭಾಶೆಯನ್ನೇ ಮರದವು .ಇನ್ನು ರಜ್ಜ ಸಮಯಲ್ಲಿ ನಮ್ಮ ಸಂಸ್ಕ್ರಿತಿ,ದೇಶ ಎಲ್ಲವನ್ನೂ ಮರಗಾಯಿಕ್ಕು……….

  7. ತುಂಬಾ ಒಳ್ಳೆಯ ಲೇಖನ ಒಪ್ಪಣ್ಣಾ… ಅಂದು ಬ್ರಿಟೀಷರು ಭಾರತಕ್ಕೆ ಬಂದು ಅವರ ಸಂಸ್ಕೃತಿಯ ನಮಗೆ ಕಲಿಸಿ, ನಮ್ಮ ಸಂಸ್ಕೃತಿ, ಭಾಷೆ ಎಲ್ಲಾ ದೋಚಿಕೊಂಡು ಹೋದವು. ಹೆಸರಿಂಗೆ ನಾವು ಸ್ವತಂತ್ರರು. ಆದರೆ ಸಂಸ್ಕೃತಿಲಿ ‘ಪರದೇಶಿ’ಗೊ. ಎಂತ ಮಾಡುಲೆ ಎಡಿಯ… 🙁

  8. ಪಾಯಿಖಾನೆಗೆ ಹೋದ ಶುದ್ದಿ .ಟಿಸ್ಯ್ಯೂ ಪೇಪರ್ ಕೇಳಿದ ಶುದ್ದಿ ಎಲ್ಲಾ ಸೆನ್ಸಾರ್ ಕಟ್ ಆಯಿದನ್ನೇ 🙂

    ಒಳ್ಳೇ ಲೇಖನ

  9. ಹಳ್ಳಿ ಸಂಸ್ಕೃತಿಯ ಒಳಿಶಿಗೊಂಡರೆ ಡೆಲ್ಲಿಲಿಯೂ ಬದ್ಕುಲೆ ಎಡಿಗು ಹೇಳುವ ಹೆರಿಯೋರ ಮಾತು ಎಷ್ಟು ಸತ್ಯ ಅಲ್ದಾ?ಆದರೆ ಗೌರಜ್ಜಿಗೆ ಇನ್ನು ಮುಂದಾಣ ಸರ್ತಿ ಆ ಮಕ್ಕ ಹಳ್ಳಿಗೆ ಬಪ್ಪ ಈ ರೀತಿ ಕೊಂಡಾಟ ಮಾಡ್ಲೆ ಎಡಿಯ.ಅವು ಇಂಗ್ಲೀಷು ಮೆತ್ತಿಗೊಂಡು ಬೆಳದು ಇರ್ತವು.ಅಥವಾ ಬಕ್ಕೋ ಬಾರವೋ?ಒಂದೊಪ್ಪ ಲಾಯಿಕ ಆಯಿದು..ಹಳ್ಳಿಯ ಚಿತ್ರಣವ ಚೆಂದಕೆ ವಿವರ್ಸಿದ್ದಕ್ಕೆ ಧನ್ಯವಾದಂಗೋ!!

  10. ಒಪ್ಪಣ್ಣಾ.., ನೀನು ಬರದ ಒಂದು ಶುದ್ದಿಯ ಎಷ್ಟು ನಮುನೆ ಯೋಚನೆ ಮಾಡಿದರೂ ಬೇರೆ ಬೇರೆ ವಿಚಾರಂಗ ಇರ್ತು ಅದರಲ್ಲಿ!!! ನೀನು ಬರದ್ದದು ಬರೇ ಅಮೆರಿಕಾಲ್ಲಿಪ್ಪ ಒಂದು ಅಕ್ಕನ ಬಗ್ಗೆ ಅಲ್ಲ, ಲೋಕಲ್ಲಿ ಎಲ್ಲಾ ಕಡೆ ಇಪ್ಪ ಹೀಂಗಿಪ್ಪ ವ್ಯಕ್ತಿಗಳ ಬಗ್ಗೆ!!! ಇದು ಒಂದು ಉದಾಹರಣೆ ಮಾತ್ರ!! ದೇಶ ಯಾವುದೇ ಆಗಿರಲಿ, ಇನ್ನೊಂದು ಸಂಸ್ಕೃತಿಯ ಅಂಧಾನುಕರಣೆ ಮಾಡಿದರೆ ಎಂತ ಆವುತ್ತು ಹೇಳಿ ಸೂಚ್ಯವಾಗಿ ಹೇಳಿದ್ದೆ.
    ಮಾಷ್ಟ್ರು ಮಾವ° ಹೇಳಿದ ಹಾಂಗೆ ಭಾಷೆ ಮರದರೆ ಸಂಸ್ಕೃತಿ ಮರಗು!! ಇದರಲ್ಲಿ ಕಳದು ಹೋಪದು ಅಜ್ಜಿ ಪುಳ್ಳಿಗಳ ಸಂಬಂಧ!!! ಮತ್ತೆ, ಒಂದು ತಲೆಮಾರು ಇನ್ನೊಂದು ತಲೆಮಾರಿನ ಬೆಸವ ಕೊಂಡಿದೆ!! ಶುದ್ದಿ ಲಾಯ್ಕಾಯಿದು.

    ನಮ್ಮ ದೇಶಲ್ಲಿದ್ದೂ ಕಾರಣವಶಾತ್ ಇನ್ನೊಂದು ಭಾಷೆಯ ಮೂಲಕ್ಕೆ ಮುಟ್ಟಿದರೂ ನಮ್ಮ ಮೂಲ ಭಾಷೆಗೆ ಪೆಟ್ಟು ಬೀಳ್ತು, ಆದರೆ, ನಮ್ಮ ಸಂಸ್ಕಾರ ಹಾಳಾವುತ್ತಿಲ್ಲೆ. ಯಾವ ಊರಿಲೇ ಇದ್ದರೂ ನಮ್ಮತನವ ಒಳಿಶಿಗೊಂಡು ಬಂದ ಎಲ್ಲಾ ಮಹಾಚೇತನರಿಂಗೆ ಮನಸಾ ನಮನಂಗ.
    ಒಂದೊಪ್ಪ ಲಾಯ್ಕಾಯಿದು.

    1. {ಯಾವ ಊರಿಲೇ ಇದ್ದರೂ ನಮ್ಮತನವ ಒಳಿಶಿಗೊಂಡು ಬಂದ ಎಲ್ಲಾ ಮಹಾಚೇತನರಿಂಗೆ ಮನಸಾ ನಮನಂಗ}
      – ಸರಿಯಾದ ವಿಶಯ ತೆಗದಿ ಅಕ್ಕ. ಅಲ್ಲದ್ದರೂ, ನಮ್ಮ ಹೆರಿಯೋರು ನಮ್ಮ ಒರೆಂಗೆ ತಂದ ಕಾರಣ ಈಗ ನಾವು ಅಭಿಮಾನ ಮಾಡಿಗೊಂಬಲೆ ಆತು!

      ನಮ್ಮ ಸಂಸ್ಕಾರದ ಮೂಲ ನಮ್ಮ ಹಿಂದಾಣ ತಲೆಮಾರು. ಅವರ ಮೊದಲಾಗಿ ಗೌರವಿಸುವೊ° , ಅಲ್ಲದೋ?
      ಒಪ್ಪ ಒಪ್ಪಕ್ಕೆ ಅಭಿವಂದನೆಗೊ, ಅಕ್ಕ° ..

  11. ಅಪ್ಪು. ಭಾಷೆ ಮರದರೆ ಸಂಸ್ಕೃತಿ ಮರದ ಹಾಂಗೇ. ನಮ್ಮ ಎಲ್ಲ ಭಾರತೀಯ ಭಾಷೆಗಳ ಅಬ್ಬೆ ಸಂಸ್ಕೃತ. ನಾವು ಬೇರೆ ಬೇರೆ ಕಾರಣಂದಾಗಿ ಈ ಗೀರ್ವಾಣಿ ಭಾಷೆಯನ್ನೂ ಮರೆತ್ತಾ ಇದ್ದು. ಇದು ಆತಂಕಕಾರಿ ವಿಷಯ. ಕೇರಳಲ್ಲಿ ಈ ಭಾಷೆಯ ಮುಗಿಸಿ ಬಿಡ್ಲೆ ಸರಕಾರವೇ ಹುನ್ನಾರ ಮಾಡ್ತಾ ಇದ್ದು. ಆನು ಹತ್ತನೇ ಕ್ಲಾಸ್ ಕಲಿವಾಗ ಎಂಗೊಗೆ (ಆನು ಹೈಸ್ಕೂಲ್ ಕಲ್ತದು ಒಂದು ಸರಕಾರಿ ಶಾಲೆಲಿ) ಸಂಸ್ಕೃತ ಕಲುಶಲೆ ಮಾಷ್ಟ್ರಕ್ಕೊ ಇಲ್ಲದ್ದೆ ಭಾರೀ ಕಷ್ಟ ಆಯಿದು.

    ಭಾಷೆ ನಮ್ಮ ಸಂಸ್ಕೃತಿಯ ತೋರುಸುತ್ತು. ಕೆಲಾವು ಜನಂಗೊಕ್ಕೆ ಇಂಗ್ಲಿಷ್ ಭಾಷೆಲಿ ಮಾತಾಡಿರೆ ಅದೆಂಥದೋ ದೊಡ್ಡ ಹೆಮ್ಮೆ. ನಮ್ಮಲ್ಲಿ ಇನ್ನೂ ಹಾಂಗಿಪ್ಪ ಭಾವನೆಯೇ ತುಂಬಿಯೊಂಡಿದ್ದು.

  12. ಒಪ್ಪಣ್ಣೋ!
    ವೀಣಕ್ಕನ ಮನೆಲಿ ಮಾಂತ್ರ ಅಲ್ಲ ಈಗ ಇಂಗ್ಳೀಶು ಅಕ್ಷರಂಗೊ ಡೇನ್ಸು ಮಾಡ್ತದು, ಊರಿಲಿ ರಜ್ಜ ಸುರುವಾಯಿದು. ಒಂದು ಲಾಯ್ಕದ ಶುದ್ದಿಯೊಟ್ಟಿಂಗೆ ಶುಬತ್ತೆಯ ಪಲಾವಿಲಿಪ್ಪ ಬಟಾಟೆ, ದೀಪಕ್ಕ ಮಾಡಿದ ಬನ್ಸು – ತಿನ್ಸುಗಳ ಒಗ್ಗರಣೆಗೊ; ಭಾಷೆ – ಸಂಸ್ಕೃತಿಯ ಕಾಳಜಿಗೊ ಒಂದಕ್ಕಿಂತ ಒಂದರ ಮಿಗಿಲಾಗಿ ಬರದ್ದೆ.
    ಮಲೆಯಾಳ ಅಪ್ಪದುದೇ ಈಗಣ ಕಾಲಲ್ಲಿ ನಮ್ಮ ಸಂಸ್ಕೃತಿಂದ ಹೆಱ ಹೋದ ಹಾಂಗೆಯೇ. ಎಂತಕೆ ಹೇಳಿರೆ ನಾವು ‘ನಮ್ಮ ಸಂಸ್ಕೃತಿ’ ಹೇಳಿಗೊಂಬದರ (ಈಗಣ) ಮಲೆಯಾಳದ್ದರ ಒಟ್ಟಿಂಗೆ ಹೋಲಿಕೆ ಮಾಡಿಗೊಂಡು, ನಮ್ಮದು ಅವರದ್ದಕಿಂತ ಕೆಳ ಇಪ್ಪದು ಹೇಳ್ತ ಭಾವನೆ ಕೆಲವು ಜೆನಕ್ಕೆ ಬಪ್ಪದಿದ್ದು. ಭಾಷೆಯನ್ನೂ ಸಂಸ್ಕೃತಿಯನ್ನೂ ಮಱೆಯದ್ದಿಪ್ಪೊ°.

    1. { ಭಾಷೆಯನ್ನೂ ಸಂಸ್ಕೃತಿಯನ್ನೂ ಮರೆಯದ್ದಿಪ್ಪೊ° }

      ಕೃಷ್ಣಭಾವಾ – ಒಳ್ಳೆ ಒಪ್ಪವೇ ನಿಂಗಳದ್ದು.
      ಮಲೆಯಾಳ ಸಂಸ್ಕಾರಕ್ಕೆ ಅದರದ್ದೇ ಆದ ತೂಕ ಇದ್ದು. ನಮ್ಮದಕ್ಕೆ ನಮ್ಮದೇ ಆದ್ದಿದ್ದು. ಅದೆರಡರ ಹೋಲುಸಿರಾಗ! ಅಲ್ಲದೋ? 🙂
      ಹೆತ್ತಬ್ಬೆ ಮಕ್ಕೊಇಬ್ರ ಹೋಲುಸಿದ ಹಾಂಗಕ್ಕು!!

  13. ನಮ್ಮ ಭಾಷೆ ನಮ್ಮ ಕ್ರಮ ಹೇಳಿ ಬರವದಲ್ಲದ್ದೆ ಇಂದು ನಮ್ಮ ಕ್ರಮ ಒಳಿಶಿಗೊಂದವಿರಳಿ ಗೊಂತಿಪ್ಪವೂ ಕಮ್ಮಿ.ಮಾಷ್ಟ್ರು ಮಾವನ ಹಾಅಂಗಿಪ್ಪ ಕೆಲವರ ಬಿಟ್ರೆ ಇನ್ನಾರಿಂದಗೂ ಗೊಂತಇದ್ದೋ?ಗೊಂತಿದ್ದು ಹೇಳ್ತವು ತುಂಬ ಜನ ಇಕ್ಕು.ಸತ್ಯವ ಗುಟ್ಟಿಲ್ಲಿ ಕೇಳಿರೆ……………….

    1. ಕೇಜಿಮಾವಾ°!!
      ನಿಂಗಳ ಇಂಜೆಕ್ಷನಂಗೆ ಎದುರಿಲ್ಲೆ! 🙂
      ಕೊಶಿ ಆತು.

      ಆದರೂ,
      ಭಾಶೆ ಒಳಿಯೇಕು ಹೇಳ್ತ ಮನಸ್ಥಿತಿ ಇಪ್ಪ ನೆರೆಕರೆಯೋರು, ಅಭಿಮಾನವೇ ಇಲ್ಲದ್ದ ವೀಣಕ್ಕನಿಂದ ಸಾವಿರಪಾಲು ಒಳ್ಳೆದನ್ನೇ? 🙂
      ಎಂತ ಹೇಳ್ತಿ?

  14. ಭಾಷೆ ಮಾತಾಡಿರೆ ಮಾತ್ರ ಒಳಿಗು.ಧರ್ಮ ಆಚರಿಸಿರೆ ಮಾತ್ರ ಒಳಿಗು.ಹೊಳೆ ಹರಿಕ್ಕೊಂಡಿದ್ದರೆ ಮಾತ್ರ ಒಳೀಗು!

  15. ತು೦ಬಾ ಲಾಯಿಕ ಆಯಿದು . { ಅಜ್ಜಿಯ ಪ್ರೀತಿ ವಿಚಿತ್ರ ಕಾಂಬಲೆ ಸುರು ಆದ್ದು ಎಂತಕೇ?
    ಎಂತಕೆ ಹೇಳಿತ್ತುಕಂಡ್ರೆ ಅವಕ್ಕೆ ಅಜ್ಜಿಯ ಭಾಶೆಯೂ ಗೊಂತಿಲ್ಲೆ, ಅಜ್ಜಿಯ ಪ್ರೀತಿ ತೆಕ್ಕೊಂಬ ಸಂಸ್ಕೃತಿಯೂ ಕಂಡೇ ಗೊಂತಿಲ್ಲೆ.}…………… ಆದರೆ ಇಲ್ಲೆಯೆ ಹುಟ್ಟೀ ಬೆಳದ ಮಕ್ಕಸಹ ಇಲ್ಲಿಯ samskruti ಗೊತಿಪ ಮಕ್ಕ?????????………. ಅಜ್ಜಿ ಮತದಿದರೆ ಮಾತೆ ಇಲ್ಲೆ,,,,,,,,ಅಜ್ಜಿ ಎನ್ಥ ಕೊತ್ತರು ತಿ೦ಬಲೆ ಇಲ್ಲೆ……… ಆ ಅಜ್ಜಿಗೆ ಎಸ್ತು ಬೇಜರಾ……….ಇದು ಆನು ಕಣ್ಣಾರೆ ಕ೦ಡ ಸ೦ಗತಿ…….ಗೊರಿ ಅಜ್ಜಿಗೆ ಮಕ್ಕಳ ಪ್ರೀತಿ ಮಾಡುವ ಹಕ್ಕು ಇತ್ತು ಆದರೆ ಆನು ನೊಡಿದ ಅಜ್ಜಿಗೆ ಕೊ೦ಡಾಟಾ ಮಾಡುವ ಹಕ್ಕು ಮಗ ಕೊತ್ತಿದ ಇಲ್ಲೆ…. ಆನು ನೊಡಿದ ಅಜ್ಜಿ೦ದ ಆ ಅಜ್ಜಿಯೆ ಸ್ತಿತಿಯೆ ವಾಸಿ ಹೆಳಿ ಅನ್ಸಿತು.
    ~

  16. ಒಪ್ಪಣ್ಣ,
    ಶುದ್ದಿ ಲಾಯಿಕ ಅಯಿದು. ನಮ್ಮ ಮಕ್ಕೊಗೆ ನಮ್ಮ ಆಚಾರ, ವಿಚಾರ, ಭಾಷೆ, ಸಂಸ್ಕೃತಿಯ ನಾವು ಹೇಳಿ ಕೊಡದ್ದರೆ ಮತ್ತೆ ಅರು ಹೇಳಿ ಕೊಡ್ತವಲ್ಲದಾ?
    ಒಬ್ಬ ಹೆರ ದೇಶದವನ ಹತ್ರೆ ತೀರ್ಥ, ನೈವೇದ್ಯ, ಪ್ರಸಾದ, ಪ್ರದಕ್ಷಿಣೆ ಹೇಳಿ ಎಲ್ಲಾ ಹೇಳಿರೆ ಅವಂಗೆ ಎಂತ ಅರ್ಥ ಅಕ್ಕು? ಆದರೆ ನಮ್ಮ ಮಕ್ಕೊಗೆ ಈ ಶಬ್ದಂಗೊ ಕೆಮಿಗೆ ಬಿದ್ದ ಕೂಡ್ಲೆ ಎಲ್ಲವೂ ಸ್ಪಷ್ಟ ಆವ್ತಲ್ಲದ. ಇದು ಸಾಧ್ಯ ಅಪ್ಪದು ನಮ್ಮ ಒಟ್ಟಿಂಗೆ ಬೆಳೆದ ಪರಿಸರ, ಸಂಸ್ಕೃತಿ, ಸಂಸ್ಕಾರಂದ ಅಲ್ಲದಾ?. ನಮ್ಮ ಭಾಷೆಲಿ ಆ ಸಂಸ್ಕೃತಿಗೆ ಅಪ್ಪ ಶಬ್ದಂಗೊ ಇದ್ದು. ಹೇಳಿ ಅಪ್ಪಗ ಅರ್ಥ ಆವ್ತು. ಆ ಸಂಸ್ಕೃತಿಯೇ ಇಲ್ಲದ್ದವಕ್ಕೆ ಇದರ ಎಷ್ಟು ವಿವರಿಸಿರೂ ಶಬ್ದದೊಟ್ಟಿಂಗೆ ಸೇರಿಗೊಂಡು ಇಪ್ಪ ಭಕ್ತಿ ಭಾವ ಸರಿಯಾಗಿ ಅರ್ಥ ಅಕ್ಕಾ?
    ***
    [ಅಜ್ಜಿಗೆ ಇಂಗ್ಳೀಶು ಅರಡಿಯ, ಮಕ್ಕೊಗೆ ಅಜ್ಜಿ ಭಾಶೆ ಅರಡಿಯ!]
    ಊರಿಂಗೆ ಬಂದಿಪ್ಪಗ ಅಜ್ಜಿ ಅಜ್ಜಂಗೆ ಪುಳ್ಳಿಯಕ್ಕಳ ಮಾತಾಡ್ಸಲೆ ಅರಡಿತ್ತಿಲ್ಲೆ ಹೇಳಿರೆ ಅವಕ್ಕೆಷ್ಟು ಬೇಜಾರ ಆಕ್ಕು?
    [ತರವಾಡುಮನೆ ಹಟ್ಟಿಲಿಪ್ಪ ಕೆಂಪಿಯ ಪಾತಿಅತ್ತೆ ಕೊಂಗಾಟಮಾಡಿದ ಹಾಂಗೆ ಕಂಡುಗೊಂಡಿತ್ತು!]
    [ಅಜ್ಜಿಯ ಭಾಶೆಯೂ ಗೊಂತಿಲ್ಲೆ, ಅಜ್ಜಿಯ ಪ್ರೀತಿ ತೆಕ್ಕೊಂಬ ಸಂಸ್ಕೃತಿಯೂ ಕಂಡೇ ಗೊಂತಿಲ್ಲೆ.] ಅಪ್ಪ ಅಮ್ಮನ ತಪ್ಪಿಂದಾಗಿ, ಪರಸ್ಪರ ಪ್ರೀತಿ, ಕೊಂಗಾಟ ಕಳಕ್ಕೊಂಡದು ಅಜ್ಜಿಯೂ ಪುಳ್ಯಕ್ಕಳೂ , ಎಂಥಾ ವಿಪರ್ಯಾಸ. ಅವಕ್ಕೆ ಅವರ ಅಜ್ಜಿ ಅಜ್ಜನ ಪ್ರೀತಿ ಸಿಕ್ಕಿದ್ದು, ಮಕ್ಕೊಗೆ ಇಲ್ಲದ್ದ ಹಾಂಗೆ ಮಾಡಿದವು-ಕಾರಣ? ಹೆರ ದೇಶಕ್ಕೆ ಹೋಗಿ ವಾಸ್ತವ್ಯ ಮಾಡಿದ್ದು !!!
    [ಅಜ್ಜಿಯ ಅವಸ್ಥೆ ಕಂಡು ಒಪ್ಪಣ್ಣಂಗೆ ಭಾರೀ ಬೇಜಾರಾಗಿತ್ತು] ಇಲ್ಲಿ ಓದುತ್ತವಕ್ಕೂ ಅದರ ಅನುಭವ ಆವ್ತು.
    ***
    ಕೆಲವು ತಲೆಮಾರು ಹಿಂದೆ ಹೋದ ಹವ್ಯಕರಿಂಗೆ ನೀನು ಹೇಳಿದ ಹಾಂಗೆ ನಮ್ಮ ಭಾಷೆ ಬತ್ತಿಲ್ಲೆ. ಅವು ಅದರ ಬಿಡೆಕ್ಕಾಗಿ ಬಂದದಕ್ಕೆ ಬೇರೆ ಬೇರೆ ಕಾರಣಂಗೊ ಇಕ್ಕು. ಅಲ್ಲಿಯೇ ವಾಸ್ತವ್ಯ ಹೂಡಿ ಅಲ್ಲಿಯಾಣ ಕೂಸುಗಳ ಮದುವೆ ಆಗಿ, ಮತ್ತಾಣ ತಲೆಮಾರಿನ ಮಕ್ಕೊಗೆ ಮಾತೃ ಭಾಷೆ ಮಲಯಾಳ ಆದ್ದು ಆಯಿಕ್ಕು. ಆದರೆ ಹಿಂದೂ ಸಂಸ್ಕೃತಿಯ ಒಳುಶಿ ಬೆಳೆಶುವ ಕಾರ್ಯ ಮಾಡಿಗೊಂಡಾದರೂ ಇದ್ದವು ಹೇಳುವದೇ ಸಂತೋಷದ ವಿಶಯ.
    ***
    [ದೊಡ್ಡ ಮಗಳ ಅಮೇರಿಕಕ್ಕೆ ಕೊಟ್ಟ ಸಮೆಯಲ್ಲಿ ಜೀವನವೇ ಸಾರ್ಥಕ ಹೇಳಿ ಕಂಡಿತ್ತು.]- ದೂರದ ಬೆಟ್ಟ ನುಣ್ನಂಗೆ ಹೇಳಿ ಕಂಡತ್ತು ,
    [ಊರಿಂಗೆ ಬಂದ ಎರಡುದಿನ ಮೂರೊತ್ತು ಹೆಜ್ಜೆಉಂಡಮತ್ತೆಯೇ ಅವಕ್ಕೆ ಸಮದಾನ ಆದ್ದಡ.]-ಈಗ ಹಿತ್ತಲ ಗಿಡ ಮದ್ದು ಅಪ್ಪು ಹೇಳಿ ಗೊಂತಾತು.
    ***
    [ಎಷ್ಟೂ ತೆಚೆಪೆಚೆ ಮಾತಾಡುಗು, ಆದರೆ ಆರಿಂಗೂ ಅರ್ತ ಆಗ!] ಅಂದರೂ ಕೇಳ್ಲೆ ತುಂಬಾ ಚೆಂದ ಅಲ್ಲದಾ. ಅದೇ ಕೊಙೆ ಭಾಷೆಲಿ ಅವರತ್ರೆ ಮಾತಾಡುವದೂ ಕೊಶಿಯೇ ಅಲ್ಲದಾ
    ***
    [ಅಪ್ಪಮ್ಮ ಅತ್ತಿತ್ತೆ ಮಾತಾಡುವಗಳೂ ಇಂಗ್ಳೀಶಿಳೇ ಮಾತಾಡಿಗೊಂಡವಡ]-
    [ದೀಪಾವಳಿಗೆ ದೀಪ ಹೊತ್ತುಸದ್ದರೂ ಅಲ್ಯಾಣ ಹಬ್ಬ ಕ್ರಿಸ್ಸುಮಸ್ಸಿಂಗೆ ಕೇಂಡ್ಳು ಹೊತ್ತುಸಲೆ ಹೇಳಿಕೊಟ್ಟತ್ತಡ.]- ಇದೇ ಹೆತ್ತವು ಮಾಡುವ ದೊಡ್ಡ ತಪ್ಪು
    ಕೊಶೀ ಆದ ಸಾಲುಗೊ:
    ಭಾಶೆಯೂ – ಸಂಸ್ಕೃತಿಯೂ ಒಂದೇ ಪಾವಲಿಯ ಎರಡು ಹೊಡೆ ಅಡ!
    “ಭಾಶೆ ಇಲ್ಲೆಯೋ?” ಹೇಳಿ ಬೈದರೆ “ಸಂಸ್ಕಾರ ಇಲ್ಲೆಯೋ?” ಹೇಳಿಯೇ ಅರ್ತ ಬತ್ತಲ್ಲದೋ?
    ಒಂದೊಪ್ಪ ಲಾಯಿಕ ಆಯಿದು

    1. ಶ್ರೀಶಣ್ಣಾ..
      ಯೇವತ್ರಾಣ ಹಾಂಗೇ, ಸ್ಪಷ್ಟವಾಗಿ ಶುದ್ದಿಕೇಳಿ ಶುದ್ಧವಾಗಿ ವಿಮರ್ಶೆ ಮಾಡಿದ್ಸು ಕಂಡು ಕೊಶೀ ಆತು!
      “ಶ್ರೀಶಣ್ಣ ವಿಮರ್ಶೆ” ಕೇಳಿ ಆನಂದನಾದ ಒಪ್ಪಣ್ಣ! 🙂

      ಅಪ್ಪು,ನೀ ಹೇದ ಹಾಂಗೆ, ತೀರ್ಥ, ಆರತಿ – ಇದೆಲ್ಲ ಸಂಸ್ಕೃತಿಂದಾಗಿ ಒಳುದುಬಂದ ಭಾಶೆಗೊ.. ಅರ್ತ ಆಯೇಕಾರೆ ಸಂಸ್ಕಾರದ ಗಂಧ ಬೇಕೇಬೇಕು! 🙂

  17. Oppanna baraddadu laikaidu.AAdaru innu eshto jena americalli 40 varshanda iddaru namma bhashe, samskrutia olishiddou.Eega illiayou tumba badalavane baindu.Bere prantyangalli ippa nammavakke namma bhashe/ Kannadavu bathille. Idu vyakthige bitta vichara. Namma oorillie eshto samarambhakke hodare kanuthu. Elloru ottinge umbale koodare hantia suruvinge koodavu ellora ootakke madale enjalu arushiondu eddikki hovuthou. 15 dina modalu ondu maduvege hogithidde, kasudugale purusothille hange line hidudovu. Kadamme paksha namma oorilli namma samskrutia olusuvo. Navella tiddigomba .Ellora hattarude onde kelike navu navagiye ippon.

    1. {ಎಲ್ಲೋರ ಹತ್ತರುದೇ ಒಂದೇ ಕೇಳಿಕೆ, ನಾವು ನಾವಾಗಿಯೇ ಇಪ್ಪೊ..}
      ವೈವೀಮಾವಾ..
      ತುಂಬಾ ಕೊಶಿ ಆತು ನಿಂಗಳ ಈ ಮಾತು!
      ನಾವು ನಾವಾಗಿ ಇಪ್ಪಲೆ ನವಗಾಗಿ ನಮ್ಮೋರು ಒಳುಶಿದ ನಮ್ಮದರ ನಮ್ಮ ಮುಂದಾಣೋರಿಂಗೆ ಎತ್ತುಸೆಡದೋ..??
      ಎಲ್ಲೋರಿಂಗೂ ಆ ಜೆವಾಬ್ದಾರಿಗೊ ಇದ್ದು!
      ಇದು ಮರದರೆ ತಂತು ಮುರಿಗು!!

      ನಿಂಗೊ ಹೇಳಿದ ಹಂತಿಯ ಶುದ್ದಿ ಊರಿಲಿ ಈಗೀಗ ಜೋರು ನೆಡೆತ್ತು. ಎಲ್ಲೋರಿಂಗೂ ಅಂಬೆರ್ಪಿದಾ!!

  18. ಮಣ್ಣು ಬದಲಿರೂ ಮನಸ್ಸು ಬದಲ್ಲಾಗ ಅಲ್ಲದ?
    ಅದಕ್ಕೆ ಬೇಕಾದ ಶಕ್ತಿಯುದೆ ಮೂಲಮಣ್ಣಿ೦ದಲೇ ಸಿಕ್ಕೆಕಷ್ಟೆ.!

    1. ಮಣ್ಣು ಬದಲಿತ್ತು ಹೇಳಿ ಮನಸ್ಸು ಬದಲಾಯಿಸಿದರೆ ಮಣ್ಣೇ ತಿನ್ನೆಕ್ಕಷ್ಟೆ ಯೋ?

      1. ಅಂಬಗ ‘ ಬ್ರೆಡ್ಡು ‘ ‘ಜಾಮು’ ಭಾವ?!

  19. ಭಾಷೆಯೂ ಸ೦ಸ್ಕೃತಿಯೂ ಒ೦ದೇ ಪಾವಲಿಯ ಎರಡು ಮೋರೆ ಹೇಳುವ ಮಾತಿನ ನಿಜಜೀವನಲ್ಲಿ ಹೇ೦ಗೆ ಕಾ೦ಬಲೆಡಿಗು ಹೇಳೊದರ ಸರಿಯಾಗಿ ಚಿತ್ರಿಸಿದ್ದೆ,ಒಪ್ಪಣ್ಣಾ.
    ಮಾತಾಡುವ ಭಾಷೆ,ಆಹಾರಕ್ರಮ ಬದಲಾದ ಮೇಲೆ ಸ೦ಬ೦ಧ೦ಗಳೂ ದುರ್ಬಲ ಆವುತ್ತು ಹೇಳೊದು ಸತ್ಯದ ಮಾತು. ಭಾಷೆ ಬದಲಾದ ಕೂಡಲೇ ಆತ್ಮೀಯತೆಲಿ ಒ೦ದು ಅಡ್ಡಗೋಡೆ ಬ೦ತು ಹೇಳಿ ಲೆಕ್ಕ ಅಲ್ಲದೋ?ಅಜ್ಜಿಗೆ ಪುಳ್ಳಿಯ ಮೇಲೆ ಎಷ್ಟು ಪ್ರೀತಿ ಇದ್ದರೂ ಮಾತು ಅರ್ಥ ಆಗದ್ದೆ ಅಪ್ಪಗ ಬೇಜಾರು ಆವುತ್ತಿಲ್ಲೆಯೋ?ಕೈಕ್ಕರಣಲ್ಲಿ ಹೃದಯದ ಭಾವನೆಗಳ, ಪ್ರೀತಿಯ ಹ೦ಚುಲೆಡಿಗೋ ಅಜ್ಜಿಗೆ?
    ನಮ್ಮ ದೇಶದ ಪ್ರೀತಿ,ಆತ್ಮೀಯತೆ ,ಸ೦ಬ೦ಧ೦ಗೊ ಜಗತ್ತಿನ ಇನ್ನು ಯೇವ ದೇಶಲ್ಲಿಯೂ ಕಾ೦ಬಲೆ ಸಿಕ್ಕ.ಆದರೂ ನವಗೆ ನಮ್ಮ ಸ೦ಸ್ಕೃತಿ ಕೀಳು ಕಾ೦ಬದು ವಿಪರ್ಯಾಸ.ಅಮೆರಿಕ ಎ೦ತಗೆ ನಮ್ಮ ಆಸುಪಾಸಿಲಿಯೂ ಈ ಮನೋಭಾವ ಬೆಳೆಸಿಗೊ೦ಡು ಬದುಕ್ಕುವವು ಇದ್ದವು ಒಪ್ಪಣ್ಣಾ.
    ರೈಮು ಹೇಳುವ,ನೂಡುಲು ತಿ೦ಬ,ಶುಬತ್ತೆಯ ಪಲಾವಿಲಿ ಇಪ್ಪ ಕೇರೆಟಿನ ನಮೂನೆ ಇಪ್ಪ ಮಕ್ಕೊ ನಮ್ಮ ಭಾಷೆ ಕಲಿಯದ್ದೆ ಇ೦ಗ್ಲೀಷಿನ ಗುಲಾಮರಾವುತ್ತವನ್ನೇ..ಛೆ.ಛೆ.ಅದು ಅವರ ತಪ್ಪಲ್ಲ,ದಾರಿ ತೋರುಸೆಕ್ಕಾದ ಅಬ್ಬೆ ಅಪ್ಪನ ಹೇಳೆಕ್ಕಲ್ಲದೋ?

    1. ಮುಳಿಯಭಾವಾ..
      ಶುದ್ದಿಗೆ ಪೂರಕವಾದ ಚಿಂತನೆ, ಕೊಶಿ ಆತು.

      ನಿಂಗೊ ಹೇಳಿದ ಹಾಂಗೆ, ನಮ್ಮ ಆಸುಪಾಸಿಲಿ ಇದ್ದೊಂಡು ಹಾಳಪ್ಪೋರು ವೀಣಕ್ಕನಿಂದಲೂ ಕಡೆ – ಅಲ್ಲದೋ? 🙁

  20. ಇದು ಬಾರದ್ದು ಲಾಯಕ ಆಯ್ದು ..ಇದು ಈಗ ನಡೆತ್ತ ಇಪ್ಪ ವಿಷಯವೇ ..ನಮ್ಮ ಭಾಷೆ ,ನಮ್ಮತನ ಹೇಳುದಕ್ಕೆ ಅಭಿಮಾನ ಇಲ್ಲದ್ರೆ ,ಒಳಿಶಿಗೊಳದ್ರೆ ನಮ್ಮೋರು ಹೇಳುದರಲ್ಲೂ ಅರ್ಥ ಇಲ್ಲೆ…

    1. ಗೀತತ್ತೇ! ಒಪ್ಪ ಭಾರೀ ಲಾಇಕಿದ್ದಾತ!!
      ನಮ್ಮ ಬಗ್ಗೆ ಅಭಿಮಾನ ಇಲ್ಲದ್ದೋರು ನಮ್ಮೋರುದೇ ಅಲ್ಲ – ಸರಿಯಾಗಿ ಹೇಳಿದ್ದಿ..

  21. ಭಾಷೆ ಒಟ್ಟಿಂಗೆ ಸಂಸ್ಕೃತಿ. ಒಂದರ ಬಿಟ್ಟು ಇನ್ನೊಂದು ಇಲ್ಲೆ ಹೇಳಿ ಬರದ್ದು ಲಾಯಿಕ ಆಯಿದು. ಹೆರ ದೇಶದವು, ಭಾರತೀಯ ಸಂಸ್ಕೃತಿಲಿ ಇಪ್ಪ ಸತ್ವವ ತಿಳಿವಲೆ ಇಷ್ಟ ಪಡುವ ಸಮಯಲ್ಲಿ ನಮ್ಮವು ನಮ್ಮತನವ ಬಿಟ್ಟರೆ ಹೇಂಗೆ?
    ಹೆರ ದೇಶಕ್ಕೆ ಹೋದ ಕೂಡ್ಲೆ ನಮ್ಮ ಮಕ್ಕೊಗೆ ನಮ್ಮ ಭಾಷೆಲಿ ಮಾತಾಡ್ಸುವದರ ನಿಲ್ಲುಸುವದಕ್ಕೆ ಅವು ಕೊಡುವ ಕಾರಣಂಗೊ ಹೇಳಿರೆ, ಅಲ್ಲಿಯಾಣ ಭಾಷೆ ಮಾತಾಡುವಾಗ ನಮ್ಮ ಭಾಷೆಯ accent ಬತ್ತಡ, ಅಲ್ಲಿಯಾಣವು ನೆಗೆ ಮಾಡ್ತವಡ ಹೇಳಿ.
    ಸುಮಾರು ವರ್ಶ ಹೆರ ಇದ್ದರೂ, ಮಕ್ಕೊ ನಮ್ಮ ಭಾಷೆಲಿ ನಮ್ಮಷ್ಟೆ ಚೆಂದಕೆ ಮಾತಾಡುವದನ್ನೂ ನೋಡಿದ್ದೆ, ಏನೂ ಬಾರದ್ದೆ ಇಲ್ಲಿ ಬಂದಿಪ್ಪಗ ಅಸ ಬಡಿವದನ್ನೂ ನೋಡಿದ್ದೆ. ಅಂಕಲ್, ಆಂಟಿ, ಕಸಿನ್ ಇದು ಬಿಟ್ಟರೆ ಬೇರೆ ಸಂಬಂಧ ರೂಪ ಶಬ್ಧಂಗಳ ಕೇಳಿಯೇ ಗೊಂತಿರ್ತಿಲ್ಲೆ. ಇದೆಲ್ಲಾ ಮಕ್ಕಳ ಬೆಳಶುವವರ ಸಂಸ್ಕಾರ ಹೊಂದಿಗೊಂಡು ಇಪ್ಪದು. ಅಪ್ಪ ಅಮ್ಮ ಸಂಸ್ಕಾರವಂತರಾದರೆ ಮಕ್ಕಳನ್ನೂ ಅದೇ ದಾರಿಲಿ ಕರಕ್ಕೊಂಡು ಹೋಕು.

    1. ಗಂಗಾ ನದಿಲಿ ನೀರು ವರ್ಷ ಇಡಿ ಹರುದರು ನಾವು ತೆಕ್ಕೊಂಡು ಹೋದ ಪಾತ್ರಲ್ಲಿ ತುಮ್ಬಿಸಿ ತಪ್ಪಲೆ ಎದಿಗಷ್ಟೇ (ರಾಮಕೃಷ್ಣ ಪರಮ ಹಂಸ) . ನಾವು ತುಮ್ಬುಸುವಾಗ ಅದರಲಿ ಹುಳು ಬಂದರೆ ಅದಕ್ಕೆ ವಿಧಿ ಲೀಲೆ ಹೆಳೇಆಶ್ಟೇ.. .

      1. ಶರ್ಮಪ್ಪಚ್ಚೀ..
        ಸುಮಾರೊರಿಶ ಹೆರ ಇದ್ದಂಡು ನಮ್ಮ ಭಾಶೆ ನಮ್ಮ ಹಾಂಗೇ ಮಾತಾಡ್ತವರ ಶುದ್ದಿ ಕೇಳಿ ಕೊಶೀ ಆತು. ಅವಕ್ಕೆ ಶ್ರದ್ಧೆ ಇದ್ದು – ಹೇಳ್ತದು ನೂರಕ್ಕೆ ನೂರು ನಿಜ! 🙂

        ಒಪ್ಪ ಒಪ್ಪಕ್ಕೆ ಧನ್ಯವಾದಂಗೊ.

  22. ಒಪ್ಪಣ್ಣನ ಲೇಖನದ ಶೀರ್ಷಿಕೆ ನೋಡುವಗ, ಇದು ಅಮೇರಿಕದ “ಅಕ್ಕ” ಕನ್ನಡ ಸಂಘದ ಬಗೆಗೆ ಹೇಳ್ತನೋ ಹೇಳಿ ಗ್ರೇಶಿದೆ. ನೋಡಿರೆ, ಅದು ಅಮೇರಿಕದ ವೀಣಕ್ಕನ ಕಥೆ. ಒಂದೇ ಒಂದು ಉಸಿಲಿಲ್ಲಿ ಎಲ್ಲವನ್ನೂ ಓದಿ ಮುಗುಶಿದೆ. ಹೇಳಿರೆ, ನಡುವೆ ಉಸಿಲು ತೆಕ್ಕೊಂಡಿದೇ ಇಲ್ಲೆ. ಆ ರೀತಿ ಓದುಸೆಂಡು ಹೋತು ಲೇಖನ. ಒಪ್ಪಣ್ಣ, ವೀಣಕ್ಕನ ಹಾಂಗ್ರುತ್ತವು ನಮ್ಮ ಭಾರತಲ್ಲಿ, ನಮ್ಮವರ ಮನೆಗಳಲ್ಲಿ ತುಂಬಾ ಜೆನ ಇದ್ದವು. ಅವಕ್ಕೆ ಹೇಳ್ತವು ಆರೂ ಇಲ್ಲೆ. ಅವರ ಮಕ್ಕಳುದೆ ನೀ ಲೇಖನಲ್ಲಿ ಹೇಳಿದ ಹಾಂಗೇ “ಭಾಷೆ ಇಲ್ಲದ್ದೆ” ಬೆಳೆತ್ತವು. ಮಾಸ್ಟ್ರು ಮಾವ ಹೇಳಿದ್ದು ಎಷ್ಟು ನಿಜ ಅಲ್ಲದೊ ? ಭಾಷೆ, ಸಂಸ್ಕೃತಿ ಎರಡೂ ಒಟ್ಟೊಂಟ್ಟೊಂಗೆ ಇರ್ತು, ನಿಜ.
    ವೀಣಕ್ಕನ ಮಕ್ಕೊ, ಪಲಾವಿನ ಕ್ಯಾರೆಟ್, ಬಟಾಟೆಯ ಬಣ್ಣಲ್ಲಿ ಕಂಡದು, ಬೆಳಿಬೆಳಿ ಹಲ್ಲಿಗಳ ಹಾಂಗೆ ಕಂಡದು, ಕಲ್ಪನೆ ಅಲ್ಲ ನಿಜ. ಉಮಪಮೆ ಲಾಯಕಾಯಿದು.

    “ಕಳುದ ಸರ್ತಿ ಗೌರಜ್ಜಿಗೆ ಆದರೂ ಮಕ್ಕಳ ತೆಚೆಪೆಚೆ ಅರ್ತ ಆಯಿದು, ಈ ಸರ್ತಿ ಎಂತದೂ ಅರ್ತ ಆಗ!”
    ಸರಿಯಾಗಿ ಹೇಳಿದೆ ಒಪ್ಪಣ್ಣ. ಮಕ್ಕೊ ಸಣ್ಣ ಇಪ್ಪಗ, ಅದೆಷ್ಟು ಮುಗ್ಧತೆ ಇರುತ್ತು. ಒಪ್ಪಣ್ಣಂಗೊ ಆಗಿ ಇರ್ತವು. ಅಂಬಗಾಣ ಪ್ರೀತಿಲಿ ನೈಜತೆ ಇರುತ್ತು. ಆ ಪ್ರೀತಿಗೆ ಭಾಷೆ ಬೇಕಾಗಿಯೇ ಇಲ್ಲೆ. ಆದರೆ ಆ ಮಕ್ಕೊ ದೊಡ್ಡ ಆಗಿ ಅಪ್ಪಗ, ಅವರ ಮನಸ್ಸಿಲ್ಲಿ ಒಂದು ರೀತಿಯ ಗರ್ವ ಬಂದು, ಅವು ಕೆಪ್ಪಣ್ಣಂಗೊ ಆದ ಕಾರಣ, ಅವು ಮಾತಾಡ್ತ ಭಾಷೆ ಅಜ್ಜಿಗೆ ಅರ್ಥ ಆಯಿದಿಲ್ಲೆ.

    “ತರವಾಡುಮನೆ ಹಟ್ಟಿಲಿಪ್ಪ ಕೆಂಪಿಯ ಪಾತಿಅತ್ತೆ ಕೊಂಗಾಟಮಾಡಿದ ಹಾಂಗೆ ಕಂಡುಗೊಂಡಿತ್ತು!” ವಾಹ್. ಸೂಪರ್ ಕಲ್ಪನೆ.
    ಕಡೆಣ ಒಪ್ಪ ಒಪ್ಪಕಿದ್ದು. ಸೂಚನೆಯನ್ನು ಕೊಟ್ಟದು ಒಳ್ಳೆದಾಯಿದು. ಎಲ್ಲೋರು ವೀಣಕ್ಕನ ಹಾಂಗಿದ್ದವಲ್ಲ ಹೇಳ್ತದೂ ನಿಜ.
    ಅಣ್ಣ, ಅಕ್ಕಂದ್ರು ನಮ್ಮ ಭಾಷೆ ಮರೆಡಿ ಹೇಳಿ ಸಂದೇಶ ಬೀರಿದ ಒಪ್ಪಣ್ಣಾ, ಧನ್ಯವಾದಂಗೊ.

    1. ಬೊಳುಂಬುಮಾವಾ°..
      ಶುದ್ದಿಯ ಸಾರವ ಚೆಂದಕೆ ತಿಳುದು ಒಪ್ಪ ಕೊಟ್ಟಿದಿ..
      ಕೊಶೀ ಆತು ಒಪ್ಪಣ್ಣಂಗೆ…

  23. Huttida dharma, bhashe maratthavu sattha hange.

    Hingippa kelavu nidarshanango yenage gonthiddu. Ivakke jeevanada sandya kalalli madida thappina arivakku.

    Bhashe, Samskruthi, Dharmada bagge kalishudu abbe-appana kelasa.

    Hingippa kurudu vyamoha eega kammi avuttha iddu. 1 thalemarina jenangokke idu thirugi baduddu (Americalli hhuti belada koosu-maniyogokke bharathanda sariyada sambhanda batthille adda).

    Koneli kuvempu helida mathina namma havyka samjakkagi rajja badalsuva: “Yelliye Iru… Henge Iru…Yavatthingoo Ninu Havyaka aagiru”

    1. ಇಂಗ್ಳಿಶ್ ಒಪ್ಪ ಒಂಬುತ್ತಿಲ್ಲೆ.. ರಜ ಕನ್ನಡಲ್ಲೇ ಬರವೋ°, ಇಂಗ್ಳಿಶ್ ಓದಲೆ ರಜ್ ಪರಡೆಕಾವುತ್ತು..

    2. ಮಾಣೀ..
      ಈ ಸರ್ತಿಯೂ ಹಾಂಗೇ, ಚೆಂದದ ಒಪ್ಪ ಕೊಟ್ಟಿದೆ.
      ಹುಟ್ಟಿದ ಧರ್ಮ ಮರದರೆ ಸತ್ತ ಹಾಂಗೇ – ಹೇಳ್ತದು ತುಂಬಾ ಒಳ್ಳೆ ಮಾತು!

      ಎರಡೇ ಎರಡು ಕೋರಿಕೆ ಒಪ್ಪಣ್ಣಂದು:
      ಒಂದನೇದು – ಈಗ ಬೈಲಿಲಿ ಕನ್ನಡ ಅಕ್ಷರಲ್ಲಿ ಬರವಲೆ ಎಡಿತ್ತಲ್ದೋ? ಉಪಯೋಗ ಮಾಡ್ತೆಯೋ?
      ಎರಡ್ಣೇದು – ಚೆಂದ ಒಂದು ಶುದ್ದಿ ಹೇಳುಮಾಣೀ, ಬೈಲಿಂಗೆ!!

      1. ಸರಿ ಇನ್ನು ಮುಂದೆ ಕನ್ನಡಲ್ಲಿಯೆ ಬರೆತ್ಥೆ.

        ಎನಗೆ ಕನ್ನಡಲ್ಲಿ ಬರವಗ ತುಂಬ ಹೊತ್ಥು ಬೇಕಾವುತ್ತು ಹಾಂಗಾಗಿ ಇಂಗ್ಲಿಷ್ ಲಿ ಬರಕ್ಕೊಂಡು ಇತ್ಥದು. ಇನ್ನು ಮುಂದೆ ಕನ್ನಡಲ್ಲಿಯೆ ಬರೆತ್ತೆ.

        ಹಾಂ ಖಂಡಿತ ಶುದ್ದಿ ಹೇಳ್ತೆ… ರಜ್ಜ ಸಮಯ ಕೊಡಿ.

  24. hare rama oppanna hangoo bailina elloringude namaskaragalu nadadu ashokeli nadeuva virat pooje engogella bailili noduva avakasha madikodeku oppanna harerama

    1. ಒಳ್ಳೆ ಸಲಹೆ, ಹೇಂಗಾವುತ್ತ ನೋಡುವೊ°..
      ಗುರಿಕ್ಕಾರ್ರ ಹತ್ತರೆ ಖಂಡಿತ ಮಾತಾಡ್ತೆ, ಆತೋ?
      ಹರೇರಾಮ..

  25. ಮನಮುಟ್ಟುತ್ತು ಒಪ್ಪಣ್ಣ..ಈಗೀಗ ಅಮೇರಿಕಕ್ಕೆ ಹೋಯೆಕು ಹೇಳಿ ಇಲ್ಲೆ. ಇಲ್ಯಾಣ ಕೆಲವು ಕುಟುಂಬಂಗಳಲ್ಲಿಯೂ ಹೀಂಗಿರ್ತ ಕತೆ ಕಾಂಗು.
    {ತರವಾಡುಮನೆ ಹಟ್ಟಿಲಿಪ್ಪ ಕೆಂಪಿಯ ಪಾತಿಅತ್ತೆ ಕೊಂಗಾಟಮಾಡಿದ ಹಾಂಗೆ ಕಂಡುಗೊಂಡಿತ್ತು!}ವ್ಹಾ..ನಿನ್ನ ಉಪಮೆ ನೋಡಿ ಕೊಶಿ ಆವುತ್ತು.

    1. ಕುಮಾರಣ್ಣಾ…
      {ಇಲ್ಯಾಣ ಕೆಲವು ಕುಟುಂಬಂಗಳಲ್ಲಿಯೂ ..}
      ಅಪ್ಪಡ, ಕೊಳಚ್ಚಿಪ್ಪುಬಾವ ಒಂದೊಂದರಿ ಹೇಳಿ ಪಿಸುರುಮಾಡಿಗೊಳ್ತ.
      ಆದರೆ ಈ ಶುದ್ದಿಲಿ ಸ್ವತಃ ಅಕ್ಕಂಗೇ ಮರದ್ದು, ಮಕ್ಕೊಗೆ ಮಾಂತ್ರ ಅಲ್ಲ ಇದಾ!! 🙁

  26. ಛೆ! ಎಂಥ ದುರಂತ!

    ‘ಭಾಷೆಯ ಮರದರೆ ಸಂಸ್ಕೃತಿಯ ಮರದಹಾಂಗೆ’. ಸಂಸ್ಕೃತಿಯ ಮರದರೆ ಹೆತ್ತಬ್ಬೆಯನ್ನೇ ಮರದಹಾಂಗೆ ಅಲ್ಲದೊ?!

    ಅಮೆರಿಕದ ಅಕ್ಕಂದಿರೆ, ನಿಂಗೊಗೆ ಅಲ್ಲಿ ನೆರೆಕರೆಲಿ ಸುಕ ದುಕ್ಕ ಮಾತಾಡ್ಲೆ ನಮ್ಮವು ಸಿಕ್ಕದ್ದ ಕೊರತೆಯೋ? ಇದಾ, ಜಗದಗಲ ವಿಸ್ತಾರ ಇಪ್ಪ ಈ ಬೈಲಿಂಗೆ ಬನ್ನಿ.. ಇಲ್ಲಿ ಎಲ್ಲೊರೂ ಇದ್ದವು. ನಮ್ಮ ಮನಸ್ಸಿನ ಭಾವನೆಗಳ ನಮ್ಮ ಭಾಷೆಲೇ ಇಲ್ಲಿ ಎಲ್ಲರೊಟ್ಟಿಂಗೆ ಹಂಚಿಯೊಂಬೊ. ನಮ್ಮ ಭಾಷೆಯ ಒಳುಶಿ ಬೆಳಶುವೊ.

    1. ಇದು ಬೇಕಾದವಕ್ಕೆ ಮಾಂತ್ರ ಅಲ್ಲದೋ ಭಾವ. ನಮ್ಮ ಭಾಷೆ ಸಂಸ್ಕೃತಿ ಮಕ್ಕೊಗೆ ಬೇಡ , ಬಪ್ಪಲಾಗ ಹೇಳಿ ಅಲ್ಲದೋ ಈ ಅತ್ತೆ ಹೀಂಗೇ ಮಾಡಿಗೊಂಡದು. ಬೇಕು ಉಳಿಯೆಕು ಹೇಳಿ ಇಪ್ಪವು ಕೆಲವರಿಂಗೆ ಇರ್ತು ಅಪ್ಪೋ . ನೆಂಪಿದ್ದೋ ಓ ಆ ನಮ್ಮ ನೆಂಟ್ರು ೪೦ ವರ್ಷಂದ ಯು.ಕೆ.ಲಿ ಇದ್ದರೂ ಅರ್ಘ್ಯ ಜೆಪ ಬಿಟ್ಟಿದವಿಲ್ಲೆ ಹೇಳಿ ಹೇಳೋದು ಕೇಳಿದ್ದೆ ಆನು. ಅಲ್ಲಿ ಹುಟ್ಟಿ ಬೆಳದ ಅವರ ಮಕ್ಕೊಗೂ ನಮ್ಮ ಭಾಷೆ ಸರೀ ಬತ್ತು . – ನೆಂಪಾತೋ?

      1. ಸುಭಗಣ್ಣಾ..
        ಕಳಕಳಿ ಕಂಡು ಭಾರೀ ಕೊಶಿ ಆತು.
        ಅಪ್ಪು, ಈ ಬೈಲು ಜಗದ್ವ್ಯಾಪಿ ಆದ ಕಾರಣ ಎಲ್ಲೋರಿಂಗೆ ಬಂದಿಕ್ಕಲೆಡಿಗು.
        ಎಲ್ಲೋರು ಬಂದು ಸೇರಿರಿ ನಮ್ಮತ್ವ ಒಳಿಗದಾ!!

        ಚೆನ್ನೈಭಾವ,
        ನಲುವತ್ತೊರಿಶಂದ ಅರ್ಘ್ಯಬಿಟ್ಟೋರ ಶುದ್ದಿ ಹೇಳಿದಿ. ಕೊಶೀ ಆತು.
        ಆದರೆ ಆ ನಮುನೆಯ ನಿಷ್ಠೆಯೋರು ತುಂಬ ಕಮ್ಮಿ.
        ಅವರ ಕಂಡ್ರೆ ಒಪ್ಪಣ್ಣಂಗೆ ತುಂಬ ಅಭಿಮಾನ ಬತ್ತು!

        ಹೆಚ್ಚಿನೋರುದೇ ಹೆರ ಹೋಗಿ ನಲುವತ್ತು ದಿನ ಆಯೇಕಾರೆ ಜೆಪವನ್ನೇ ಬಿಡ್ತವಿದಾ.
        ಅದು ತೊಂದರೆ! 🙁

        1. ‘…ನಲುವತ್ತೊರಿಶಂದ ಅರ್ಘ್ಯಬಿಟ್ಟೋರ ಶುದ್ದಿ ಹೇಳಿದಿ. ಕೊಶೀ ಆತು.’ –
          ನೋಡಿ ಇದರ ಓದಿ ನಮ್ಮಲ್ಲಿಯೂ ಹಲವರಿಂಗೆ ಕೊಶೀ – ‘ಆನುದೇ ನಲುವತ್ತೊರಿಶಂದ ಅರ್ಘ್ಯಬಿಟ್ಟಿದೆ ಹೇಳಿ.’ ಇನ್ನು ಹನಿಯ ಮಿಂದಿಕ್ಕಿ ಬಪ್ಪಗಳೇ ಜೆಪ ಮಾಡಿ ಮುಗಿಶಿಕ್ಕಿಯೇ ಬತ್ತವಡಾ!

  27. ಒಪ್ಪಣ್ಣ,

    ಲೇಖನ ತುಂಬ ಲಾಯ್ಕಾಯ್ದು.
    (ಭಾಶೆ ನೆಂಪಿದ್ದರೆ ಸಂಸ್ಕೃತಿಯೂ ನೆಂಪಿಕ್ಕಡ, ಭಾಶೆ ಮರದರೆ ಕ್ರಮೇಣ ಸಂಸ್ಕೃತಿಯೂ ಮರಗಡ..!) – ಅಮೇರಿಕದ ಅಕ್ಕಂಗೆ ಸಂಸ್ಕೃತಿ ಮರದ್ದು ಹೇಳ್ತದರ ಸೂಚ್ಯವಾಗಿ “ಅಮೇರಿಕದ ಅಕ್ಕಂಗೆ ಭಾಷೆಯೇ ಮರದ್ದಡ!” ಯೆಂಬುದಾಗಿ ಹೇಳಿದ್ದು ತುಂಬ ಅರ್ಥವಥ್ತಾಗಿ ಮೂಡಿದ್ದು. ಆಭಿನಂದನೆಗೊ.

    1. ಕುಮಾರಣ್ಣೋ..
      ಶುದ್ದಿಸಾರವ ಹಿಡುದು ಕೊಟ್ಟ ಸುಂದರ ಒಪ್ಪ ಕೊಶಿ ಆತು.
      ಬನ್ನಿ, ನಿಂಗಳೂ ಬೈಲಿಂಗೆ ಶುದ್ದಿ ಹೇಳಿ.. 🙂

  28. oppannana lekana baari laayakkalli bayndu.
    eega namma oorilippavaralli kelavu jananga kooda videshi samskritigala alavadisutta iddavu.

    1. ಅಪ್ಪು ಡಾಗುಟ್ರೇ! ಒಂದೊಂದರಿ ಗ್ರೇಶಿರೆ ಬೇಜಾರಾವುತ್ತು, ಅಲ್ಲದೋ?
      ಆದರೆಂತ ಮಾಡುಸ್ಸು, ನಮ್ಮದರ ಬಗ್ಗೆ ಅಭಿಮಾನ ಇಲ್ಲದ್ದರೆ ಅದೇ ಕತೆ!

  29. ಒಪ್ಪಣ್ಣ ಒಪ್ಪಣ್ಣನೆ. ಒಪ್ಪ ಒಪ್ಪಕೆ ಒಪ್ಪಣ್ಣನ್ನಾಂಗೇ ಬರದ್ದಪ್ಪಾ.

    ಮುಣ್ಚಿನಡ್ಕ ರಾಮಚಂದ್ರ ಭಟ್ರ ಗೌರಜ್ಜಿಯ ಕೂರ್ಸಿಕ್ಕಿ ಶಶಿಯತ್ತೆಯ ಹಿಡ್ಕೊಂಡು ಅಮೇರಿಕಕ್ಕೆ ಕರಕ್ಕೊಂಡು ಹೋಗಿ ಬಂದು ವಿದ್ಯಕ್ಕನನ್ನೂ ಚಾಂಟ್ಸಿ, ಮಾಸ್ಟ್ರು ಮಾವನಲ್ಲಿವರೇಗೆ ಬಂದು ವೀಣಕ್ಕನ ಮೂಲಕ – “ಭಾಶೆ ನೆಂಪಿದ್ದರೆ ಸಂಸ್ಕೃತಿಯೂ ನೆಂಪಿಕ್ಕಡ, ಭಾಶೆ ಮರದರೆ ಕ್ರಮೇಣ ಸಂಸ್ಕೃತಿಯೂ ಮರಗಡ..!” ಎತ್ತಿ ಕಟ್ಟಿದ್ದು ಒಪ್ಪ ಆಯ್ದು ಹೇಳುತ್ತಿಲಿಂದ.

    ಒಂದು ಕ್ಷಣಕ್ಕೆ ಟಿ.ವಿ ಸೀರಿಯಲ್ ಮರದೇ ಹೋಕು ಹಲವು ಒಳ್ಳೆ ಹೃದಯಂಗಗೊಕ್ಕೆ.

    1. ಕೊಶಿ ಆತು ಭಾವಯ್ಯನ ಒಪ್ಪ ಕಂಡು!
      ಶುದ್ದಿ ಹೋದ ದಾರಿಯ ತಮಾಶೆಗೆ ತೋರುಸಿ, ಸಾರವ ಎತ್ತಿಹಿಡುದ್ದರ್ಲಿ ಒಪ್ಪಣ್ಣನ ಸಾವಿರ ಶಬ್ದ ಚೆನ್ನೈಬಾವನ ಒಂದು ಗೆರೆಲಿ ನಿಮುರ್ತಿ ಆತದಾ! 🙂

  30. Uttama lekhana oppanna..Ega namma havayka samajalli nadavadanne spastavagii chitirsidde,.Kaalaya tasmai namaha…

    1. ಕೇವಳದಣ್ಣೋ..
      ದೂರದ ಅರಬ್ಬಿದೇಶಲ್ಲಿ ಕೂದುಗೊಂಡು ಒಪ್ಪವಾದ ಒಪ್ಪ ಕೊಟ್ಟದು ಕಂಡು ಒಪ್ಪಣ್ಣಂಗೆ ಕೊಶಿ ಆತು.
      ಭಾಶೆ ಒಳಿಯದ್ರೆ ಭಾಷಿಕರು ಒಳಿಗೋ? ಅಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×