Oppanna.com

ನಾವಿಷ್ಟಪಟ್ಟ ರಾಗಲ್ಲಿ “ಅನುಷ್ಟುಪ್” ಹಾಡುಲಕ್ಕಡಾ..!!

ಬರದೋರು :   ಒಪ್ಪಣ್ಣ    on   31/08/2012    14 ಒಪ್ಪಂಗೊ

“ಗುರುಗಳ ಚಾತುರ್ಮಾಸ್ಯಕ್ಕೆ ಯೇವಾಗ ಬಪ್ಪದು ಒಪ್ಪಣ್ಣೋ” – ಎಡಪ್ಪಾಡಿಭಾವ° ಸಿಕ್ಕಿಸಿಕ್ಕಿಪ್ಪಗ ಕೇಳ್ತದು ನಿಂಗೊಗೆ ಗೊಂತಿದ್ದೋ ಏನೋ.
ಹೋಯೇಕು ಹೇದು ನವಗೂ ಆಗಿಂಡಿದ್ದತ್ತು, ಆದರೆ ಒಬ್ಬನೇ ಹೋಪಲೆ ಅರಡಿತ್ತೋ!?
ಮೊನ್ನೆ ಪರ್ತಿಕಾರು ಭಾವನ ಕೆಂಪುಜೀಪು ಬೈಲಿಂದ ಹೋಪದಿತ್ತಲ್ಲದಾ, ಹಿಂದಾಣ ಸೀಟಿಲಿ ನಾವುದೇ ನೇತುಗೊಂಡು ಹೆರಟಿದ್ದತ್ತು.
ಉಪಾಯಲ್ಲಿ ಹೋಗಿ, ಉಪಾಯಲ್ಲಿ ಊರಿಂಗೆತ್ತಿದ್ದು.

ಎಡಪ್ಪಾಡಿಬಾವನ ಬಿಡಾರ ಅಲ್ಲೇ – ಮಠದ ಹತ್ತರೆ ಇಪ್ಪ ಕಾರಣ ಪರ್ತಿಕಾರು ಜೀಪು ಸೀತ ಅವರ ಮನೆ ಜಾಲಿಲೇ ನಿಂದತ್ತು. ಮೀಯಾಣ ಮುಗುಶಿ ತೆಂಗಿನಕಾಯಿ ಹಿಡ್ಕೊಂಡು ಮಠಕ್ಕೆ ಎತ್ತುವಗ ಪೂಜೆ ಸುರು ಆಗಿತ್ತು.
ಉದಿಯಪ್ಪಗಾಣ ಪೂಜೆ ಮುಗುಶಿಕ್ಕಿ, ಉಪಾಹಾರಕ್ಕೆ ಹೋದೆಯೊ°. ಇನ್ನು ಗುರುಗೊ ಭಿಕ್ಷೆ ಸ್ವೀಕರುಸಿ ಪೀಠಕ್ಕೆ ಬಪ್ಪಗ ಗಂಟೆ ಹನ್ನೆರಡೂವರೆ ಕಳಿತ್ತಾಡ; ಎಡಪ್ಪಾಡಿ ಭಾವ° ಹೇಳಿತ್ತಿದ್ದ°.
ಹಾಂಗೆ ಎಂಗಳೂ ಉಪಾಹಾರ ತೆಕ್ಕೊಂಬಲೆ ಹೋದೆಯೊ°.

~
ಉಪಾಹಾರ ಆಗಿ ಹೆರ ಬಪ್ಪಗ – ಎಲೆ ತಿಂದರೆ ತುಪ್ಪುಲೂ ಜಾಗೆ ಇಲ್ಲೆ ಹೇದು ಸುಭಾವ° ಮಾಷ್ಟ್ರುಮಾವಂಗೆ ಹೇಳಿಂಡಿಪ್ಪಗಳೇ – ವಿದ್ವಾನಣ್ಣನ ಕಂಡತ್ತು. “ಹರೇರಾಮಾ – ನಮಸ್ಕಾರಾ” – ಹೇಳಿ ಮಾಷ್ಟ್ರುಮಾವಂದೇ ವಿದ್ವಾನಣ್ಣಂದೇ ಮಾತಾಡಿಗೊಂಡವು.
ಮಾತಾಡಿಗೊಂಡೇ – ಮೂಡುಗೋಪುರಲ್ಲಿ ರಾಮದೇವರ ಎದುರೆ ಕೂದುಗೊಂಡವು. ಡೈಮಂಡು ಭಾವನೂ, ಅಭಾವನೂ ಕೊಂಡಿಬೈಲು ಜೋಯಿಸರ ಕಂಡಿಕ್ಕಿ ಬಪ್ಪಲೆ ಒಳ ಹೋದವು; ನಾವು ಅಲ್ಲೇ ಬಾಕಿ ಆತು. ನಾವು ಅಲ್ಲೇ ಕಾಲುನೀಡಿತ್ತು.

ಈ ಸರ್ತಿ ಚಾತುರ್ಮಾಸ್ಯಕ್ಕೆ ಹೋಗಿ ಬಂದ ಕತೆ ಎಂತಾತು, ಊಟಕ್ಕೆ ಗವುಜಿ ಎಂತರ – ಎಲ್ಲವನ್ನೂ ನಿದಾನಕ್ಕೆ ಮಾತಾಡುವೊ°, ಆದರೆ ಮಠಲ್ಲಿ ವಿದ್ವಾನಣ್ಣ ಸಿಕ್ಕಿ ಮಾತಾಡುವಗ ಯೇವ ಶುದ್ದಿ ಬಂತು ಹೇದು ಮದಾಲು ಹೇಳಿಗುತ್ತೆ. ಆಗದೋ?
ಹೇಂಗೆ ಬಂದದು, ಯೇವಗ ಬಂದದು – ಇತ್ಯಾದಿ ಮಾತಾಡಿಗೊಂಡವು ವಿದ್ವಾನಣ್ಣಂದೇ – ಮಾಷ್ಟ್ರುಮಾವಂದೇ.
ಮಾತುಕತೆ ಎಡೆಲಿ ಸಣ್ಣ ಮವುನ ಬಪ್ಪಗ ಅತ್ತಿತ್ತೆ ನೋಡಿದೆ; ತಲೆಮೇಲ್ಕಟೆ ಇಪ್ಪ ರಾಮನ ಚಿತ್ರ ನೋಡಿಂಡಿದ್ದ ಹಾಂಗೇ, ಅದರ ಬುಡಲ್ಲಿ ಬರದಿದ್ದ ಶ್ಲೋಕವ ಪಕ್ಕನೆ ಬಾಯಿಲಿ ಹೇಳಿ ಹೋತು.

ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ|
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ ||

ಎರಡ್ಣೇಗೆರೆಗಪ್ಪಗ ಮಾಷ್ಟ್ರುಮಾವಂದೇ ಸೊರ ಸೇರುಸಿತ್ತಿದ್ದವು.
ಶ್ಲೋಕ ಮುಗುದಪ್ಪದ್ದೇ, ವಿದ್ವಾನಣ್ಣ ಹೇಳಿದವು, “ಎಷ್ಟು ಸುಂದರ ಶ್ಲೋಕ” – ಹೇಳಿ.

ಹೀಂಗಿರ್ತ ಶ್ಲೋಕಂಗಳ ಗುರ್ತ ಇದ್ದರೂ, ಛಂದಸ್ಸಿನ ಸರಿಯಾದ ವಿವರಣೆ ಒಪ್ಪಣ್ಣಂಗೆ ಗೊಂತಾದರೆ ಒಳ್ಳೆದೋದು ಕಂಡತ್ತು.
ಸಿಕ್ಕಿದ್ದೇ ಸಮಯ – ಹೇದು ವಿದ್ವಾನಣ್ಣನ ಮೋರೆನೋಡಿಂಡು ಕೇಳಿದೆ, ಶ್ಲೋಕ ಛಂದಸ್ಸಿನ ಲಕ್ಷಣ ಎಂತರ? ಹೇದು.
ವಿದ್ವಾನಣ್ಣ ಅನುಷ್ಟುಪ್ಪಿನ ವಿವರ ಹೇಳುಲೆ ಶುರುಮಾಡಿದವು.
ಮಾಷ್ಟ್ರುಮಾವನೂ ಎಡೆಡೆಲಿ ಸೊರ ಸೇರ್ಸೆಂಡವು.
~

ಪ್ರಪಂಚದ ಮೊದಲ ನಾಗರಿಕತೆ ನಮ್ಮದು; ನಮ್ಮ ಮೊದಲ ಮಹಾಕಾವ್ಯ ರಾಮಾಯಣ.
ಶ್ರೀರಾಮನ ಆವಿರ್ಭಾವ ಮದಲೇ ಆದರೂ, ವಾಲ್ಮೀಕಿಯ ಬಾಯಿಂದ ರಾಮಾಯಣ ಆಗಿ ಹರುದು ಬಂದದು!
ಇಪ್ಪತ್ತನಾಕು ಸಾವಿರ ಶ್ಲೋಕದ ಮಹಾಕಾವ್ಯದ ಜನನದ ಒಟ್ಟಿಂಗೇ. ಒಂದು ವಿಶಿಷ್ಠ ಛಂದಸ್ಸುದೇ ಹುಟ್ಟಿಗೊಂಡಿದು.
ಅದುವೇ “ಶ್ಲೋಕ ಛಂದಸ್ಸು” ಅಥವಾ, ಅನುಷ್ಟುಪ್ ಛಂದಸ್ಸು.
ಈ ಛಂದಸ್ಸಿನ ಉಗಮ ಆದ್ದದೂ ಒಂದು ಚೆಂದದ ಸನ್ನಿವೇಶಲ್ಲಿ – ಹೇಳಿಗೊಂಡು ಸಣ್ಣ ಕತೆ ಸುರುಮಾಡಿದವು ವಿದ್ವಾನಣ್ಣ.
ಅದು ಒಪ್ಪಣ್ಣಂಗೆ ಅರಡಿತ್ತ ಕತೆಯೇ ಆದ ಕಾರಣ ಬೇಗ ತಲೆಆಡುಸಿತ್ತು ನಾವು – ಅಪ್ಪಪ್ಪು ಹೇದು.
ಜೋಡಿಹಕ್ಕಿಗಳ ಕಂಡ ಬೇಡ° ಒಬ್ಬ° ಬಾಣ ಮಡಾಗಿ ಕೊಲ್ಲುತ್ತದರ ಕಂಡ ವಾಲ್ಮೀಕಿ ಮಹರ್ಷಿಗೊ ಶಾಪ ಕೊಟ್ಟವಡ. ಮಹರ್ಷಿಗೊ ಶಾಪ ಕೊಡುದು ಇಪ್ಪದೇ; ಈ ಶಾಪ ಮಾಂತ್ರ ರಜ್ಜ ವಿಶೇಷದ್ದು.
ಹೇಂಗೆ? ಶಾಪ ಕೊಟ್ಟದು ಅಂಬೆರ್ಪಿನ ಪಿಸುರಿಂಗೇ ಆದರೂ – ಆ ಶಾಪದ ವಾಕ್ಯ-ಅಕ್ಷರಂಗೊ ಒಂದು ನಿರ್ದಿಷ್ಟ ರೀತಿಲಿ ಜೋಡಣೆ ಆಗಿದ್ದತ್ತಾಡ.
(ಮಾನಿಷಾದ – – – ಕಾಮಮೋಹಿತಮ್ | – ವಿದ್ವಾನಣ್ಣ ಶ್ಲೋಕ ಪೂರ್ತ ಹೇಳಿದ್ದವು.)
ಆ ಅಕ್ಷರಜೋಡಣೆಯ ರಚನೆಯೇ ಮುಂದೆ “ಅನುಷ್ಟುಪ್” ಛಂದಸ್ಸು ಆಗಿ, ಇಡೀ ರಾಮಾಯಣವೇ ಆ ಛಂದಸ್ಸಿಲಿ ಚೆಂದಕೆ ಹುಟ್ಟಿಬಂತಾಡ.
ಅಂಬಗ ಅನುಷ್ಟುಪ್ಪಿನ ಲಕ್ಷಣಂಗೊ ಎಂತರ?
~

ಏತತ್ ಶ್ಲೋಕಸ್ಯ ಲಕ್ಷಣಮ್!!

ಕಾಲ ಹೋದ ಹಾಂಗೆ ಕಾನೂನು ಕ್ಲಿಷ್ಟ ಅಪ್ಪದಡ!
ಆರಂಭಲ್ಲೇ ಹುಟ್ಟಿದ ಛಂದಸ್ಸು ಇದಾದ ಕಾರಣ ದೊಡ್ಡ ಮಟ್ಟಿನ ನಿಯಮಾವಳಿ ಎಂತೂ ಇಲ್ಲೆ. ತುಂಬ ಸುಲಬ ಇದ್ದು.
ಕನ್ನಡದ ಷಟ್ಪದಿಗಳಲ್ಲಿ ಇಪ್ಪ ಹಾಂಗೆ ಮಾತ್ರೆಯ ತಲೆಬಿಸಿ ಇಲ್ಲೆ – ಅಕ್ಷರ ನೆನ್ಪಿಟ್ಕೊಂಡ್ರೆ ಆತು -ಹೇಳಿದವು.
ಅಬ್ಬ, ಮುಳಿಯಭಾವನ ಭಾಮಿನಿಯಷ್ಟು ಕಷ್ಟ ಇಲ್ಲೆಪ್ಪೋ – ಹೇದು ಒಂದರಿ ಸಮಾದಾನ ಆತು; ಆದರೆ, ಎಡೆಡೆಲಿ ಒಂದೊಂದಿಕ್ಕೆ ಲಘು-ಗುರು ಬರ್ಲೇ ಬೇಕು ಹೇದು ಕಡ್ಡಾಯ ಇದ್ದಾಡ.
ಅನುಷ್ಟುಪ್ಪಿನ ಲಕ್ಷಣಂಗಳ– ಒಪ್ಪಣ್ಣಂಗೆ ಅರ್ತ ಅಪ್ಪ ರೀತಿಲಿ – ಸುಲಾಬಲ್ಲಿ ವಿವರ್ಸೆಂಡು ಹೋದವು.

  • ಶ್ಲೋಕಲ್ಲಿ ಒಟ್ಟು ಮೂವತ್ತೆರಡು ಅಕ್ಷರಂಗೊ; ಬಾಯೊಳ ಮೂವತ್ತೆರಡು ಹಲ್ಲು ಇಪ್ಪ ಹಾಂಗೆ.
    ಅದರ – ಎಂಟಕ್ಷರದ ನಾಲ್ಕು ಪಾದ ಆಗಿ ಗುರುತುಸೇಕು.
  • ಎಲ್ಲಾ ಪಾದದ ಐದ್ನೇ ಅಕ್ಷರ “ಲಘು”, ಆರನೇ ಅಕ್ಷರ ಗುರು ಆಗಿರೇಕು.
    ಹೇದರೆ – ಎಂಟಕ್ಷರದ ಪಾದವ ಪುನಾ ಅರ್ಧ ಮಾಡಿರೆ, ನಾಲ್ಕಕ್ಷರದ ಎರಡ್ಣೇ ತುಂಡು ಲಘುವಿಂದಲೇ ಸುರು ಆಯೇಕು, ಮತ್ತಾಣದ್ದು ಗುರುವೇ ಆಗಿರೇಕು.
    ನಾನಾನಾನಾ-ನನಾನಾನಾ – “ನನಾ” ಬಪ್ಪ ಜಾಗೆಯ ಉದಾಹರಣೆ ಸಹಿತ ವಿವರ್ಸಿದವು.
  • ಎರಡು ಮತ್ತೆ ನಾಲ್ಕನೇ ಪಾದಲ್ಲಿ ಏಳ್ನೇ ಅಕ್ಷರ “ಲಘು” ಇರೇಕು.
    ಹೇದರೆ – ಶ್ಲೋಕವ ಹದ್ನಾರಕ್ಷರದ ಎರಡು ಗೆರೆ ಹೇಳಿ ತಿಳ್ಕೊಂಡ್ರೆ,
    ಪ್ರತಿ ಗೆರೆ ಮುಗಿವಲೆ ಇಪ್ಪ ರಾಗ – ನಾನಾನಾನಾ-ನನಾನಾ | ಕೊನೆಯ “ನಾ|” ಬರುಸಲೆ ಅಲ್ಲೊಂದು ಲಘು ಬೇಕಾದ್ಸು.
  • ಇಂತಲ್ಲಿ ಮಾಂತ್ರ ಲಘು ಬರೇಕು ಹೇದರೆ, ಒಳುದ ಜಾಗೆಲಿ ಬಪ್ಪಲಿಲ್ಲೆ ಹೇಳಿಗೊಂಡು.
    ಹಾಂಗಾಗಿ – ಒಳುದ ಜಾಗೆಲಿ ಗುರು ಬಂದರೆ ಚೆಂದ ಆಡ.
    ಒಂದುವೇಳೆ – ಲಘು ಬರ್ಲೇ ಬೇಕು ಹೇಳಿ ಆದರೆ, ಎರಡು ಲಘುವಿಂದ ಹೆಚ್ಚಿಗೆ ಒಂದು ಸರ್ತಿಂಗೆ ಬರ್ಲಾಗ – (ಐದ್ನೇ ಜಾಗೆಯ ಲಘುವಿನ ಹೊರತುಪಡುಸಿ)- ಹೇಳಿದವು.
    ಬೇಂಕಿನ ಬೊಳುಂಬುಮಾವ “ಒಂದುವೇಳೆ ರಜೆ ಬೇಕೇಬೇಕು ಹೇಳಿ ಆದರೆ ಎರಡು ರಜೆಂದ ಹೆಚ್ಚಿಗೆ ಒಂದೇ ಸರ್ತಿಗೆ ತೆಗವಲಾಗ, ಆಯಿತ್ಯವಾರ ಹೊರತುಪಡುಸಿ” –ಹೇಳ್ತವಾಡ; ಹೀಂಗೇ ಆಯಿಕ್ಕಲ್ಲದೋ? 😉

ಲಕ್ಷಣ ಸುಲಬ ಹೇಳಿರೂ ನಾಲ್ಕು ಬೆರಳು ಮಡುಸಿಗೊಂಡವಿದಾ!
ಮರದಿಕ್ಕುದು ಬೇಡ, ಬರಕ್ಕೊಂಬದು ಒಳ್ಳೆದು ಹೇಳಿ ಆಲೋಚನೆ ಮಾಡಿದೆ. ಕಲರು ಪೆನ್ನಿನ ಒಂದು ಪೆಟ್ಟಿಗೆಯೂ, ಕೈಲಿ ಎರಡು ತಾವುಕಾಗತವೂ ಹಿಡ್ಕೊಂಡು ಅಭಾವ ಅಲ್ಲೇ ಓಡುತ್ಸು ಕಂಡತ್ತು.
ಒಂದು ಕಾಗತವೂ, ಒಂದರಿಯಂಗೆ ಪೆನ್ನುದೇ ಬೇಡಿತೆಕ್ಕೊಂಡೆ.
ವಿದ್ವಾನಣ್ಣ ಹೇಳಿದ ಎಲ್ಲ ಲಕ್ಷಣಂಗಳನ್ನೂ ಮತ್ತೆ ಪುರ್ಸೋತಿಲಿ ಬರದು ನೋಡುವಗ ಶ್ಲೋಕ ಹೀಂಗಾತು:

ನಾನಾನಾನಾನಾನಾನಾ
ನಾನಾನಾನಾನಾನಾ||
ಈ ಬಣ್ಣಲ್ಲಿಪ್ಪದು = ಲಘು / ಗುರು ಯೇವದೂ ಅಕ್ಕು. (ಒಂದು ಸರ್ತಿಗೆ ಎರಡೇ ಲಘು ಬಪ್ಪಲಕ್ಕಷ್ಟೆ).
ಈ ಬಣ್ಣಲ್ಲಿಪ್ಪದು = ಲಘುವೇ ಆಗಿರೇಕು.
ಈ ಬಣ್ಣಲ್ಲಿಪ್ಪದು = ಗುರುವೇ ಆಗಿರೇಕು.

~

ಅಲ್ಲ, ಇದರ ಹೇಂಗೆ ನೆಂಪುಮಡಿಕ್ಕೊಂಬದಪ್ಪೋ – ಆಲೋಚನೆ ಮಾಡಿಂಡಿಪ್ಪಗಳೇ ಮಾಷ್ಟ್ರುಮಾವ° ಅದರ “ಲಕ್ಷಣ ಶ್ಲೋಕ”ವ ಹೇಳಿದ್ದು. ಅದು ಹೀಂಗಿದ್ದು:
ಪಂಚಮಂ ಲಘು ಸರ್ವತ್ರ
ಸಪ್ತಮಂ ದ್ವಿತುಷ್ಟಯೋಃ ||
ಗುರು ಷಷ್ಠಂತು ಸರ್ವೇಷಾಂ
ಏತತ್ ಶ್ಲೋಕಸ್ಯಕ್ಷಣಂ ||
ಓಹೋ, ಇದು ನೆಂಪು ಮಡುಗಲೆ ಸುಲಾಬವೇ ಇದಾ! ಬರೇಕೂ ಹೇಳಿಯೇ ಇಲ್ಲೆ.

~

ಎಲ್ಲಾ ದೇವರ ಪ್ರಾರ್ಥನೆ ಶ್ಲೋಕಂಗೊ ಒಂದಾದರೂ ಅನುಷ್ಟುಪ್ಪಿಲಿ ಇಪ್ಪದಾಡ. ಲಲಿತಾಸಹಸ್ರನಾಮ – ವಿಷ್ಣುಸಹಸ್ರನಾಮ ಇತ್ಯಾದಿ ಸಹಸ್ರನಾಮಂಗೊ, ಭಗವದ್ಗೀತೆ ಇತ್ಯಾದಿ ಕಾವ್ಯಂಗೊ, ಜ್ಯೋತಿಷ್ಯಾಸ್ತ್ರಲ್ಲಿಪ್ಪ ಕೆಲವು ಗ್ರಂಥಂಗೊ – ಎಲ್ಲವುದೇ ಅನುಷ್ಟುಪ್ಪಿಲೇ ರಚನೆ ಆದ್ಸಾಡ.
ಸಂಗೀತದೋರಿಂಗೂ ಇದು ಅತಿ ಮೆಚ್ಚಿನ ಛಂದಸ್ಸು ಆಡ. ಯೇವ ರಾಗಲ್ಲಿ ಬೇಕಾರೂ ಹಾಡ್ಳೆಡಿತ್ತು. ಯೇವ ಭಾವಲ್ಲಿ ಬೇಕಾರೂ ಹಾಡ್ಳೆಡಿತ್ತು.
ಲತತ್ತೆ ಈ ಕೂಜಂತಂ ಶ್ಲೋಕವ ಆಭೇರಿಲಿ ಹಾಡಿಯೇ ರಾಮಕಥೆ ಸುರುಮಾಡುದಡ, ದೀಪಿಅಕ್ಕ° ಭಜನೆ ಮುಗುಶಲೆ ಯೇವದಾರು ಅನುಷ್ಟುಪ್ಪಿನ ಮೋಹನಲ್ಲಿ ಹಾಡಿಯೇ ಮುಗುಶುದಾಡ.
ನವಗೂ ಹಾಂಗೇ – ಮನಸ್ಸಿನ ಭಾವನೆ ಹೇಂಗಿದ್ದೋ – ಆ ರಾಗಲ್ಲಿ ಅನುಷ್ಟುಪ್ಪಿನ ಹಾಡ್ಳಕ್ಕಡ; ಹೊಂದಿಗೊಂಡು ಹೋವುತ್ತಾಡ!

~
ಸುಲಭವೂ, ಸರಳವೂ ಆದ ಕಾರಣ ರಚನೆ ಮಾಡ್ಳೆ ತುಂಬ ಹೊತ್ತು ಬೇಡ ಇದಾ – ಹಾಂಗಾಗಿಯೇ ಇಂದಿಂಗೂ ಪಂಡಿತರಿಂಗೆ ಇದೊಂದು ಹೇರಳವಾಗಿ ಉಪಯೋಗ ಅಪ್ಪ ಛಂದಸ್ಸಡ.
“ಅಂಬಗ ಒಂದು ಈಗಳೇ ರಚನೆ ಮಾಡುವನೋ ವಿದ್ವಾನಣ್ಣಾ?” – ಕೇಳಿದೆ.
“ನೀನು ಯನ್ನ ಸುಮ್ನೆ ಕೂಪ್ಲೆ ಬಿಡ್ತಿಲ್ಲೆ ಒಪ್ಪಣ್ಣಾ” ಹೇಳಿ ನೆಗೆಮಾಡಿಂಡವು.
ಅವಕ್ಕೆ ಪಿಸುರು ಬಂದರೂ ನೆಗೆಮಾಡುದು, ಬೇಜಾರಾದರೂ ನೆಗೆಮಾಡುದು, ಅಸಮಾಧಾನ ಆದರೂ ನೆಗೆಮಾಡುದು, ನೆಗೆಬಂದರೂ ನೆಗೆಮಾಡುದು – ಹೇದು ಎಡಪ್ಪಾಡಿಭಾವ° ಹೇಳಿದ್ದದು ನೆಂಪಾತು! 😉

~

ಮಠಲ್ಲಿ ಕೂದುಗೊಂಡು ಶ್ಲೋಕಕ್ಕೆ ವಸ್ತು ಎಂತರ ಹುಡ್ಕುದು, ಗುರುಗಳ ಬಗ್ಗೆಯೇ ಶ್ಲೋಕ ಮಾಡುವ° – ಹೇಳಿಗೊಂಡವು.
ರಾಮಚಂದ್ರ-ರಾಮಚಂದ್ರಾಪುರ-ರಾಮಚಂದ್ರಾಪುರಾಧೀಶಂ – ಹೇಳಿ ಶ್ಲೋಕ ಸುರುಮಾಡಿ ಒಂದನೇ ಬೆರಳು ಮಡುಸಿದವು.
ಹೋ – ಅಲ್ಲಿಗೆ ಒಂದು ಪಾದ ಆತಿದಾ! 🙂 “ಪು” ಲಘು ಬಂದ ಕಾರಣ ಮಾಷ್ಟ್ರುಮಾವನ “ಪಂಚಮಂ ಲಘು” ಕಡ್ಡಾಯವುದೇ ಸಿಕ್ಕಿತ್ತು.
ರಾಘವೇಶ್ವರ – ವೇಶ್ವರ ಭಾರತೀ – ರಾಘವೇಶ್ವರ ಭಾರತೀ || – ಎರಡ್ಣೇ ಬೆರಳು ಮಡುಸಿ ನೆಗೆಮಾಡಿದವು.
ವೇಶ್ವ”ರ” – ಪಂಚಮಲ್ಲಿ ರ ಲಘು ಬಂತು.
ಸಪ್ತಮಲ್ಲಿ ಲಘುಬರೇಕು ಹೇದು ಒಪ್ಪಣ್ಣಂಗೆ ಮರದಿತ್ತು; ಆದರೆ ಶ್ಲೋಕದ ರಾಗ ನೆಂಪಿದ್ದ ಕಾರಣ ಅದರ ಪ್ರತ್ಯೇಕ ನೆಂಪುಮಡುಗೇಕಾದ್ಸಿಲ್ಲೆ ಇದಾ! ಭಾರತೀ – ಹೇಳಲ್ಲಿ ಸಪ್ತಮಲ್ಲಿಯೂ ಲಘು “ರ” ಬಂತು
ಈ ಸರ್ತಿ ಮಾಷ್ಟ್ರುಮಾವಂದೇ ಮುಗುಳುನೆಗೆ ಕೊಟ್ಟವು; ಎಷ್ಟು ಸರಳವಾಗಿ ಶ್ಲೋಕ ಮಾಡಿದವಪ್ಪೋ?

ಅರೆ! ಗುರುಗಳ ಪೂರ್ತಿ ಹೆಸರು – ಅದುವೇ ಅನುಷ್ಟುಪ್ಪಿನ ಒಂದು ಗೆರೆ!!
ರಾಮಚಂದ್ರಾಪುರಾಧೀಶಂ ರಾಘವೇಶ್ವರ ಭಾರತೀ ||

ಅನುಷ್ಟುಪ್ಪಿನ ಮತ್ತಾಣ ಗೆರೆ ಎಂತದೋ ಹೇಳಿದವು, ಬರಕ್ಕೊಂಬಲೆ ಹೆರಾಡುವಗ – ಅಜ್ಜಕಾನಬಾವ° ಬಂದು ಪೆನ್ನಿನ ಕಟ್ಟ ಹಿಡ್ಕೊಂಡು ಹೋದ°!
ಒಪ್ಪಣ್ಣಂಗೆ ಬರಕ್ಕೊಂಬಲೆ ಆಯಿದಿಲ್ಲೆ; ನಿಂಗೊಗೆ ಗೊಂತಿದ್ದರೆ ಬರದು ತಿಳುಶಿ, ಆತೋ?

~
ನಮ್ಮ ಪ್ರಾಚೀನ ಮಹಾಕಾವ್ಯಂಗ ನಿಬದ್ಧವಾಗಿಪ್ಪ ಸರಳ ಛಂದಸ್ಸಿನ ಕಲ್ತ ಕೊಶಿಲಿ ನಾವಿದ್ದತ್ತು.
ಕೊಂಡಿಬೈಲು ಜೋಯಿಶರು ಬಂದು ವಿದ್ವಾನಣ್ಣಂಗೆ “ಬರ್ಬೇಕಂತೆ” ಹೇಳಿಕ್ಕಿ ಹೋದವು. ಬರ್ಬೇಕು “ಅಂತೆ” – ಹೇಳಿರೆ ಆರು ಬಪ್ಪಲೆ ಹೇಳಿದ್ದು ಹೇದು ನವಗೆ ಅರ್ತ ಆತು!
ಸರಿ, ಮತ್ತೆ ಸಿಗ್ತೆ –ಮಾಷ್ಟ್ರುಮಾವನ ಹತ್ತರೆ ಹೇಳಿಕ್ಕಿ ಒಳ ಹೋದವು.ಅವು ಒಳ ಹೋದ ಮತ್ತೆಯೂ ತಲೆಲಿ ಅನುಷ್ಟುಪ್ಪೇ ತಿರುಗಿಂಡಿತ್ತು.

~
ಬೇರೆಬೇರೆ ಶ್ಲೋಕದ ಅರ್ಧ, ಉತ್ತರಾರ್ಧ ಎಲ್ಲ ಸಿಕ್ಕುಸಿ ಅಕ್ಷರಂಗೊ, ಲಘು ಗುರುಗೊ ಸರಿ ಬತ್ತೋದು ತಿರುಗೆಂಡಿತ್ತು ತಲೆಯೊಳ.
ಕೂಜಂತಂ ರಾಮರಾಮೇತಿ – ಸಜ್ಜನಂ ತದನಂತರಂ – ಉಪಮಾ ಕಾಲಿದಾಸಸ್ಯ – ಪ್ರದ್ಯುಮ್ನೋ ಮೀನಕೇತನಃ – ಹೀಂಗೆಲ್ಲ- ಎಲ್ಲೆಲ್ಲಿಂದಲೋ ಕೇಳಿದ ಶ್ಲೋಕಂಗಳ ಒಂದಕ್ಕೊಂದು ಸಿಕ್ಕುಸಿ ರಾಗ ಸರೀ ಬತ್ತೋದು ನೋಡಿಂಡಿತ್ತು.

~
ವಿದ್ವಾನಣ್ಣ ಎದ್ದು ಹೋದರೂ, ಮಾಷ್ಟ್ರುಮಾವ° ಅಲ್ಲೇ ಇತ್ತಿದ್ದವು. ಹಾಂಗಾಗಿ ಈ ವಿಷಯ ಮುಂದುವರಿಯಲೆ ಹೆಚ್ಚು ಅವಕಾಶ ಆತು.
ಸಂಸ್ಕೃತ ಶ್ಲೋಕಂಗೊ ರಚನೆ ಮಾಡುವಗ ಕೆಲವೆಲ್ಲ “ಸಲುಗೆ”ಗೊ ಇರ್ತಾಡ.

  • ಛಂದಸ್ಸಿಂಗೆ ಬೇಕಾಗಿ ಶಬ್ದದ ಒಂದೊಂದು ಅಕ್ಷರಂಗಳ ಬೇಕಾರೆ ಮೊದಲಾಣ ಗೆರೆ – ಮತ್ತಾಣ ಗೆರೆಗೆ ಹೊಂದುಸೆಂಬಲೆ ಅಕ್ಕಾಡ.
  • ಛಂದಸ್ಸು ಪೂರ್ಣ ಮಾಡ್ಳೆ ಬೇಕಾರೆ ಕೆಲವು ನಿರ್ದಿಷ್ಟ ಅಕ್ಷರಂಗಳ ಸೇರ್ಸಲೆ ಅಕ್ಕಾಡ:
    ಚ, ವೈ, ಹಿ, ತು
    ಈ ಅಕ್ಷರಂಗೊಕ್ಕೆ ವಿಶೇಷ ಅರ್ಥ ಎಂತೂ ಇಲ್ಲದ್ದರೂ, ಅಕ್ಷರ ಸಂಖ್ಯೆ, ಛಂದಸ್ಸು ಪೂರ್ಣ ಅಪ್ಪಲೆ ಬೇಕಾರೆ ಉಪಯೋಗಿಸೆಂಬಲಕ್ಕಡ!

ಇಷ್ಟು ಹೇಳಿಕ್ಕಿ ಒಬ್ಬ ಬೋಚಬಾವನ ತಮಾಶೆ ಕತೆಯ ಜೋಕು ಆಗಿ ಹೇಳಿದವು ಮಾಷ್ಟ್ರುಮಾವ°.
ಒಬ್ಬ ಪಂಡಿತ ಅವನ ಶಿಷ್ಯಂದ್ರಿಂಗೆ ಈ ಮೇಗಾಣ ವಿಷಯ ಹೇಳಿಕ್ಕಿ ಶ್ಲೋಕ ಬರವಲೆ ಹೇಳಿದ್ದಾಡ. ಎಲ್ಲೋರುದೇ ಚೆಂದಲ್ಲಿ ಬರದವು. ಒಬ್ಬ ಮಾಂತ್ರ ಹೀಂಗೆ ಬರದನಾಡ:

ಪ್ರಾತರುತ್ತಿಷ್ಠ ರಾಜೇಂದ್ರಾ
ಮುಖಂಪ್ರಕ್ಷಾಯ ಸ್ವ ಟಃ ||
ಪ್ರಾತರಾಹೂ ಥೇ ಕುಕ್ಕು
ಚವೈಹಿತು ವೈಹಿತು ||

ಸುರುವಿಂಗೆ ಅರ್ತ ಆತಿಲ್ಲೆ, ವಿವರಣೆ ಕೊಟ್ಟಪ್ಪಗ ಮತ್ತೆ ಅಂದಾಜಿ ಆತು.
ಕುಕ್ಕುಟ ಲ್ಲಿ ಒಂದಕ್ಷರ ಹಿಡಿಯದ್ದರೆ ಮತ್ತಾಣ ಗೆರೆಲಿ ಹಾಕಲಾವುತಿತು; ಅದರ ಬದಲು ಇದು ಇನ್ನೆಲ್ಲಿಯೋ “ಸ್ವ” ದ ಹತ್ತರೆ ಬರದು ಮಡಗಿದ್ದ°!
ಈಗ ಕುಕ್ಕು – ಹೇಳಿರೆ ಎಂತಪ್ಪ? ಮಾವಿನಕಾಯಿಯೋ? ಬಟ್ಯಂಗೇ ಗೊಂತು.
ಚ, ವೈ, ಹಿ, ತು – ವಿಲಿ ಯೇವದಾರು ಒಂದರ ಅಗತ್ಯಕ್ಕೆ ಬೇಕಾರೆ ಉಪಯೋಗಿಸೆಂಬಲಕ್ಕು ಹೇಳಿದ್ದಕ್ಕೆ ಆ ನಾಲ್ಕರನ್ನೂ ಇಡೀಯಾಗಿ ಎರಡು ಸರ್ತಿ ಸೇರ್ಸಿ ಒಂದು ಪಾದವನ್ನೇ ತಿಂದುಬಿಟ್ಟನಾಡ!!

ಮಾಷ್ಟ್ರುಮಾವಂಗೆ ಜೋಕು ಹೇಳಿದ ನೆಗೆ ಮುಗಿವಲಪ್ಪಗ ಅರ್ಥ ಆಗಿ ನೆಗೆ ಸುರುಆತು.
ಅವರ ಜೋಕುಗಳೂ ಅವರ ಜೋಕುಳುಗಳ ಹಾಂಗೇ, ಗಮನ ಕೊಡದ್ರೆ ತಲೆಬುಡ ಅರ್ಥವೇ ಆಗ ಇದಾ! 😉
ಅದಿರಳಿ.

~

ಮಠಲ್ಲಿ ಹಲವು ಕಾರ್ಯಂಗೊ, ಕಾರ್ಯಕ್ರಮಂಗೊ ಇದ್ದತ್ತು.
ಎಂಗೊ ಕೂದುಗೊಂಡಿದ್ದಲ್ಲಿಗೇ, ಶಾಸ್ತ್ರಿಗೊ ಬಂದವು, ಪಾದಪೂಜೆ ನೆಡೆಶಲೆ. ಹಾಂಗೆ ಕೂದುಗೊಂಡಿದ್ದೋರು ಮೆಲ್ಲಂಗೆ ಏಳೇಕಾತು. ಆ ದಿನ ಇಡೀ ಚೆಂದಲ್ಲಿ ಕಳಾತು – ನಿಂಗೊಗೆ ಗೊಂತಿಕ್ಕು.
ಉಂಡಿಕ್ಕಿ ಗೋಪುರಕ್ಕೆ ಬಪ್ಪಗ ವಿದ್ವಾನಣ್ಣ ಪುನಾ ಸಿಕ್ಕಿದವು; ಪುನಾ ಹೋಗಿ “ಆಗಾಣ ಎರಡ್ಣೇ ಗೆರೆ ಎಂತರ?” ಹೇದು ಬೆಲಕ್ಕಲೆ ಹೋಯಿದಿಲ್ಲೆ. ಅವಕ್ಕೆ ಆಗ ಮಾಡಿದ ಗೆರೆ ಮರದಿಕ್ಕು, ಈಗ ಕೇಳಿರೆ ಇನ್ನೊಂದು ಗೆರೆ ಮನಸ್ಸಿಂಗೆ ಬಕ್ಕಿದಾ!
ತೊಂದರಿಲ್ಲೆ, ನಿಂಗೊ ಹೇಳಿರೂ ಅಕ್ಕು ಒಪ್ಪಣ್ಣಂಗೆ – ಆತೋ? 🙂

~

ಕನ್ನಡ ಷಟ್ಪದಿಗಳ ಕಂಪು ಅದಾಗಲೇ ನಮ್ಮ ಬೈಲಿಲಿ ಶುದ್ದಿಲಿ, ಸಮಸ್ಯಾ ಪೂರಣಂಗಳಲ್ಲಿ ಹಬ್ಬಿದ್ದು.
ಅದರೊಟ್ಟಿಂಗೆ ಈ ಅನುಷ್ಟುಪ್ಪುದೇ ಉಪಾಯಲ್ಲಿ ಕಲ್ತಿಕ್ಕುವನೋ ಹೇದು ಬೈಲಿಂಗೆ ಈ ಶುದ್ದಿಯನ್ನೇ ಹೇಳಿಕ್ಕಿದ್ದು ಈ ವಾರ!
ಹೇಂಗೆ? ನಿಂಗಳೂ ಒಂದು ಕೈ ನೋಡಿಕ್ಕುತ್ತಿರೋ?
ಬರಳಿ ಅಂಬಗ, ಅನುಷ್ಟುಪ್. ಮತ್ತೆ ನವಗೆ ಬೇಕಾದ ರಾಗಲ್ಲಿ ಹಾಡ್ಳಕ್ಕದಾ!

~

ಒಂದೊಪ್ಪ: “ಇಷ್ಟುಪ್ಪು” ಹೇಳಿ ಸುಮ್ಮನೆ ಕೂದರೆ ಬಾರ; ಇಷ್ಟಪಟ್ಟು ಕಲ್ತರೆ ಅನುಷ್ಟುಪ್ಪು ಬಾರದ್ದೆ ಇರ!

ಸೂ:
ಪದ್ಯಪಾನಿಗೊಕ್ಕೆ ಶತಾವಧಾನಿ ಗಣೇಶರು ಅನುಷ್ಟುಪ್ಪಿನ ಬಗ್ಗೆ ಮಾಡಿದ ಪಾಟ:
http://youtu.be/H1M0l-8zWIg

14 thoughts on “ನಾವಿಷ್ಟಪಟ್ಟ ರಾಗಲ್ಲಿ “ಅನುಷ್ಟುಪ್” ಹಾಡುಲಕ್ಕಡಾ..!!

  1. ಒಳ್ಳೆ ವಿವರಣೆ, ಸುಲಾಭಲ್ಲಿ ಅರ್ಥ ಅಪ್ಪ ಹಾಂಗೆ.

  2. ಒಪ್ಪಣ್ಣ, ಎಂದಿನಂತೆ ಚಂದ ಬರದ್ದ….
    ಅದು
    “ರಾಮಚಂದ್ರಪುರಾಧೀಶಂ ರಾಘವೇಶ್ವರಭಾರತೀಮ್
    ಅಂತ ಮಾಡಿದ ನೆನಪು…
    ಕೊನೆಯ ಅನುಸ್ವಾರ ಬಿಟ್ಟುಹೋಯ್ದು…

  3. ಅನುಷ್ಟುಪ್ ನ ಬಗ್ಗೆ ಭಾರೀ ಲಾಯ್ಕಕ್ಕೆ ವಿವರ್ಸಿದ್ದ ಒಪ್ಪಣ್ಣ, ಯೇವಗಾಣ ಆಂಗೆ 🙂
    ಸಂಸ್ಕೃತ ಮತ್ತೆ ಕನ್ನಡ ವ್ಯಾಕರಣ ಕಲಿವಲೆ ನಮ್ಮ ಬೈಲಿಲ್ಲಿ ಒಳ್ಳೆ ಅವಕಾಶ ಇಪ್ಪದು ಸಂತೋಷ..

  4. ಭಾರೀ ಲಾಯ್ಕ ಆಯಿದು…ಭಯಂಕರಂ[ಮಲೆಯಾಳಲ್ಲಿ ಹೇಳುವ ಹಾಂಗೆ]

  5. ಒಪ್ಪಣ್ಣ! ಲಾಯ್ಕಾಯ್ದು…ಅನುಷ್ಟುಪ್ ಛಂದಸ್ಸಿಲಿ ಇಪ್ಪ ಎಲ್ಲಾ ರಚನೆಗಳ ಹಾಡುದರ ಕೇಳುಲೆ ಚೆಂದ..
    @ಡಾ.ಮಹೇಶಣ್ಣ – (ವಿದ್ವಾನಣ್ಣ ಹೇಳಿದ್ದದು ಹೀಂಗಾಗಿಕ್ಕೋ?) – ಖಂಡಿತಾ ಹಾಂಗೆಯೇ.. ಪಷ್ಟಾಯ್ದು..

  6. ಒಪ್ಪಣ್ಣನ ಕಾವ್ಯರಚನೆಯ ಪಾಠ ತುಂಬಾ ಲಾಯಕಾಯಿದು!

    ವಿದ್ವಾನಣ್ಣ ಹೇಳಿದ್ದದು ಹೀಂಗಾಗಿಕ್ಕೋ?

    ಒಪ್ಪಣ್ಣಬಾಂಧವಾಃ ಸರ್ವೇ
    ನಮಾಮ ಗುರುದೇವತಾಂ ।
    ರಾಮಚಂದ್ರಾಪುರಾಧೀಶಂ
    ರಾಘವೇಶ್ವರಭಾರತೀಂ ।।

    (ನಮಾಮ=ನಮಸ್ಕರಿಸುವೊ°; ಗುರುದೇವತಾಂ = ಗುರುದೇವರ; ರಾಮಚಂದ್ರಾಪುರಾಧೀಶಂ = ರಾಮಚಂದ್ರಪುರಾಧೀಶನ; ರಾಘವೇಶ್ವರಭಾರತೀಂ=ರಾಘವೇಶ್ವರಭಾರತಿಯ)

    ಅಲ್ಲದ್ರೆ ಹೀಂಗೆಯೋ?

    ಒಪ್ಪಣ್ಣಬಾಂಧವಾನ್ ಸರ್ವಾನ್
    ಅನುಗೃಹ್ಣಾತಿ ಭಾಷಣೈಃ ।
    ರಾಮಚಂದ್ರಾಪುರಾಧೀಶೋ
    ರಾಘವೇಶ್ವರಭಾರತೀ ।।

    “ರಾಮಚಂದ್ರಾಪುರಾಧೀಶಃ ರಾಘವೇಶ್ವರಭಾರತೀ ಒಪ್ಪಣ್ಣಬಾಂಧವಾನ್ ಸರ್ವಾನ್ ಭಾಷಣೈಃ ಅನುಗೃಹ್ಣಾತಿ”
    (ಬಾಂಧವಾನ್=ಬಾಂಧವರನ್ನು; ಸರ್ವಾನ್=ಎಲ್ಲೋರನ್ನು; ಭಾಷಣೈಃ = ಮಾತುಗಳಿಂದ; ಅನುಗೃಹ್ಣಾತಿ = ಅನುಗ್ರಹಿಸುತ್ತ(ವು)….)

    ಇದೂ ಅಲ್ಲದ್ರೆ ಮತ್ತೆ ಹೇಂಗಾಗಿಕ್ಕು? ಚೆನ್ನೈಭಾವ ಹೇಳುಗೊ?

    1. ಒಪ್ಪಣ್ಣ ಮತ್ತಾಣಗೆರೆ ಬರವಲೆ ಸುರುಮಾಡುವಾಗ ಅಲ್ಲದೊ ಪೆನ್ನಕಟ್ಟ ಬಲಿಗ್ಯೊಂಡು ಹೋದ್ದು ! ಅಂಬಾಗ ವಿದ್ವಾನಣ್ಣ ಹೀಂಗೆ ಹೇಳಿದ್ದಾದಿಕ್ಕೋ ಮಹೇಶಣ್ಣ ? –

      ರಾಮಚಂದ್ರಾಪುರಾಧೀಶೋ ರಾಘವೇಶ್ವರಭಾರತೀ ।
      ಚಾರುಹಾಸಕೃಪಾಸಿಂಧೋ ದೇಹಿಮೇಸತ್ಪಥಂಸದಾ ॥

      1. ಚೆನ್ನೈಭಾವಾ,
        {ಹೀಂಗೆ ಹೇಳಿದ್ದಾದಿಕ್ಕೋ}
        ಆಗಿಕ್ಕು, ಭಾರೀ ಲಾಯಕ ಆಯಿದು.
        {ಚಾರುಹಾಸಕೃಪಾಸಿಂಧುಃ}
        ಅಪ್ಪಪ್ಪು, ನಮ್ಮ ಗುರುಗಳ ಗುಣಕ್ಕೆ ಒಪ್ಪುವ ವರ್ಣನೆ! ಲಾಯಕ ಇದ್ದು.
        ~~~~~~~~~~~~
        ಚಾರುಹಾಸಕೃಪಾಸಿಂಧೋ=ಚೆಂದದ ನೆಗೆಯುಳ್ಳ ಕೃಪಾಸಾಗರವೇ !
        ಇದು ಸಂಬೋಧನೆಯ ರೂಪಲ್ಲಿ ಇಪ್ಪ ಕಾರಣ ಮೊದಲಾಣ ಎರಡು ಶಬ್ದಂಗಳೂ ಹಾಂಗೇ ಸಂಬೋಧನಾ ರೂಪಲ್ಲಿ ಇರೆಕು. `ರಾಮಚಂದ್ರಾಪುರಾಧೀಶ’ `ರಾಘವೇಶ್ವರಭಾರತಿ’ ಹೇಳಿ.
        ಹಾಂಗಾರೆ ಶ್ಲೋಕದ ಅರ್ಥ ಹೀಂಗೆ ಬತ್ತು —
        “ರಾಘವೇಶ್ವರ ಭಾರತಿಯೆಂಬ ರಾಮಚಂದ್ರಪುರಾಧೀಶನೇ, ಸುಂದರ ನಗುಮುಖದ ಕೃಪಾಸಾಗರನೇ, ಎನಗೆ ಯಾವಾಗ್ಳೂ ಒಳ್ಳೆ ದಾರಿ ಕೊಡು.”

        ಅಥವಾ

        ರಾಮಚಂದ್ರಾಪುರಾಧೀಶಃ=ರಾಮಚಂದ್ರಾಪುರಾಧೀಶನಾದ
        ಚಾರುಹಾಸಕೃಪಾಸಿಂಧುಃ =ಚೆಂದದ ನೆಗೆಯುಳ್ಳ ಕೃಪಾಸಾಗರನು
        ದದಾತು ಸತ್ಪಥಂ ಸದಾ= ಯಾವಾಗ್ಳುದೆ ಒಳ್ಳೆ ದಾರಿ ಕೊಡ್ಳಿ .
        ಹೇಳಿ ಮಾಡ್ಳಕ್ಕು.
        ಅರ್ಥ —
        “ರಾಮಚಂದ್ರಪುರಾಧೀಶನೂ ಸುಂದರ ನಗುಮುಖದ ಕೃಪಾಸಾಗರನೂ ಆಗಿಪ್ಪ ರಾಘವೇಶ್ವರ ಭಾರತಿಯು ಯಾವಾಗ್ಳೂ ಒಳ್ಳೆ ದಾರಿ ಕೊಡ್ಳಿ” ।

    2. ಸಂಧರ್ಭಕ್ಕೆ ತಕ್ಕ ಹಾಂಗೆ ಮಹೇಶಣ್ಣ ಶ್ಲೋಕವೇ ಹೇಳಿದವದ..ಚೆನ್ನೈ ಭಾವನೂ ಒಂದಕ್ಕೆ ಮತ್ತೊಂದು ಇರಲಿ ಹೇಳಿ ನವಗೆ ಹೇಳಿದವು..ಒಂದು ಒಪ್ಪ..

  7. ಉಪ್ಪಿಂದ ರುಚಿ ಬೇರೆ ಇಲ್ಲೆ ಆಡ. ಇದೀಗ ಅನುಷ್ಟುಪ್ಪಿನ ಬಗ್ಗೆ ಒಪ್ಪಣ್ಣ ವಿವರವಾಗಿ ತಿಳುಶಿ ಕೊಟ್ಟ. ಇದಕ್ಕುದೆ ಒಳ್ಳೆ ರುಚಿ ಇದ್ದಾನೆ. ಮಾಷ್ಟ್ರು ಮಾವ ಬೋರ್ಡಿಲ್ಲಿ ಬರದು ಪಾಟ ಮಾಡಿದ ಹಾಂಗೆ ಅಜ್ಜಕಾನ ಭಾವನ ಕಲರ್ ಪೆನ್ನಿಲ್ಲಿ ಬರದು, ವಿವರುಸಿದ್ದ ಒಪ್ಪಣ್ಣ. ಎಡಕ್ಕಿಲ್ಲಿ ಅಜ್ಜಕಾನ ಭಾವ ಬಂದು ಪೆನ್ನು ಎಳಕ್ಕೊಂಡು ಹೋಗಿ ಶ್ಲೋಕದ ಇನ್ನೊಂದು ಗೆರೆ ನವಗೆ ಸಿಕ್ಕದ್ದ ಹಾಂಗಾತಾನೆ. ಚೆ, ಒಂದು ಒಳ್ಳೆ ಶ್ಲೋಕ ನವಗೆ ತಪ್ಪಿ ಹೋತು. ಬೈಲಿಲ್ಲಿ ಸಂಸ್ಕೃತ ಸರೀ ಗೊಂತಿಪ್ಪವು ಪ್ರಯತ್ನ ಮಾಡುಗು. ಚ ವೈ ಹಿ ತು ಅಕ್ಷರಂಗಳ ಎಡೆಲಿ ಸೇರುಸಿದರುದೆ ಎನ್ನ ಮಂಡಗೆ ಎಂತೂ ಹೋವ್ತಿಲ್ಲೆ.

    ಒಪ್ಪಣ್ಣ ಬೆಂಗಳೂರಿಂಗೆ ಚಾತುರ್ಮಾಸ್ಯಕ್ಕೆ ಹೋಗಿ ಬಂದ ಕತೆಯ ಬೈಲಿಂಗೆ ಹೇಳೆಕು, ನಿದಾನ ಆದರೂ ತೊಂದರೆ ಇಲ್ಲೆ ಆತೊ ?
    ಒಂದು ಒಳ್ಳೆ ವಿಚಾರವ ಬೈಲಿಂಗೆ ಶುದ್ದಿಯ ರೂಪಲ್ಲಿ ಕೊಟ್ಟದಕ್ಕೆ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×