Oppanna.com

ಅಪವಾದ ಬಂದರೆಂತಾತು, ಜಾಂಬವತಿ ದರ್ಮಕ್ಕೇ ಸಿಕ್ಕಿತ್ತಿಲ್ಯೋ!

ಬರದೋರು :   ಒಪ್ಪಣ್ಣ    on   28/08/2009    9 ಒಪ್ಪಂಗೊ

ಚೌತಿ ದಿನ ಗೆಣವತಿಗೆ ವಿಶೇಷ ಹಬ್ಬ.

ನಮ್ಮದರಲ್ಲಿ ಹಾಂಗೇ, ಒಂದೊಂದು ದೇವರಿಂಗೆ ಒಂದೊಂದು ದಿನ ವಿಶೇಷ ಹೇಳಿಗೊಂಡು ಪ್ರತೀತಿ. ಕೃಷ್ಣಾಷ್ಟಮಿ, ರಾಮ ನವಮಿ, ಬಲಿ ಪಾಡ್ಯಮಿ – ಹಾಂಗೇ ಗೆಣವತಿ ದೇವರಿಂಗೆ ಬಾದ್ರಪದ ಮಾಸದ ಶುಕ್ಲಪಕ್ಷ(ಹುಣ್ಣಮೆ ಎದುರಾಣ ಹದಿನೈದು ದಿನ)ದ ನಾಕನೇ ತಿತಿ – ಚೌತಿ.
ಈ ಚೌತಿಯ ’ಗಣೇಶ ಚತುರ್ತಿ’ ಹೇಳಿಯೂ ಹೇಳ್ತವು. ಚೆತರ್ತಿ ಅಲ್ಲ ಆತಾ! (ಶಂಬಜ್ಜನ ಕಾಲಲ್ಲಿ ಎಲ್ಲ ಒಂದು ವಾರದ ಮದುವೆ ಇದಾ, ನಾಲ್ಕನೇ ದಿನ ಚೆತರ್ತಿ (ಮೂಲ ಶಬ್ದ: ಚತುರ್ಥಿ) ಹೇಳಿ ಒಂದು ಕಾರ್ಯಕ್ರಮ ಮಾಡಿಗೊಂಡು ಇತ್ತಿದ್ದವು. ಈಗ ಎಲ್ಲ ಒಂದೇ ದಿನದ ಮದುವೆ, ಮದುಮ್ಮಾಯನಿಂದ ಅಂಬೆರ್ಪಿನ ಬಟ್ಟಮಾವ° ! ಹಾಂಗಾಗಿ ಅದೇ ದಿನ ಇರುಳಿಂಗೆ ಮಾಡ್ತವು.) ಈ ‘ಗೆಣವತಿಗೆ ಮದುವೆಯೇ ಆಯಿದಿಲ್ಲೆ, ಅವಂಗೆಲ್ಲಿಂದ ಚೆತರ್ತಿ?’ ಹೇಳಿ ಪುಟ್ಟಕ್ಕ ಮೊನ್ನೆ ಪರಂಚಿತ್ತು! 😉

ಸ್ವಾತಂತ್ರ ಹೋರಾಟದ ಸಮಯಲ್ಲಿ – ಧರ್ಮದ ವಿಷಯ ಅಲ್ಲದ್ದೆ ಬೇರೆ ಲೆಕ್ಕಲ್ಲಿ ಜೆನ ಒಟ್ಟು ಸೇರುಸುಲಾಗ ಹೇಳಿಗೊಂಡು ಇಂಗ್ಳೀಶರು ನಿರ್ಬಂಧ ಹಾಕಿತ್ತಿದ್ದವು. ಬಾಳಗಂಗಾಧರ ತಿಳಕನ ಹಾಂಗಿಪ್ಪ ಕೆಣಿಯಂಗೊ ಕೆಲವು ಜೆನ ಸೇರಿ ಒಂದು ಉಪಾಯ ಮಾಡಿದವಡ. ಸಾಮೂಹಿಕವಾಗಿ ಗೆಣವತಿ ಮೂರ್ತಿ ಮಡಗಿ – ಉಪಾಯಲ್ಲಿ, ಮಣ್ಣಿಂದು (-ಈಗ ಪೇರಿಸು ಪ್ಲೇಶ್ಟಿಕಿಲಿದೇ ಮಾಡ್ತವಡ, ಆಗಪ್ಪಾ!) – ಅದಕ್ಕೆ ಪೂಜೆ ಮಾಡಿ, ಜೆನರ ಸೇರುಸಿ, ಸಾಂಸ್ಕೃತಿಕ, ಧಾರ್ಮಿಕ (ಎಡೆಡೆಲಿ ರಾಷ್ಟ್ರಾಭಿಮಾನ ಪ್ರಚೋದಕ) ಭಾಷಣ ಮಾಡುಸುದು. ಪೂಜೆ ಕಳುದು ವಿಸರ್ಜನೆ ಆಗಿ ಅತ್ತೆ ನೀರಿಂಗೆ ಹಾಕುದು ಅದರ, ಬೊಡೋಲನೆ! ಅಷ್ಟಪ್ಪಗ ಪರೆಂಗಿಗೊ ಎಂತೂ ಮಾತಾಡುವ ಹಾಂಗಿಲ್ಲೆನ್ನೆ! ಅಲ್ಲಿವರೆಗೂ ಮನೆಯ ಮಟ್ಟಿಂಗೆ ಇದ್ದ ಗೆಣವತಿ ಆರಾಧನೆ ಅದರಿಂದ ಮತ್ತೆ ತುಂಬ ಜೋರಾತು. ಅಲ್ಲಲ್ಲಿ ಗೆಣವತಿಯ ಮೂರ್ತಿ ಮಾಡಿ ಕೂರುಸಲೆ ಸುರು ಮಾಡಿದವು, ಈಗಳೂ ಅದು ಮುಂದುವರುದು ನಮ್ಮ ಊರಿನ ಭಜನಾ ಮಂದಿರಂಗಳಲ್ಲೂ ಕೂರುಸುಲೆ ಸುರು ಆಯಿದು. ಈಗ ಅಂತೂ ಅದೊಂದು ರಾಷ್ಟ್ರೀಯ ಹಬ್ಬ ಆಗಿ ಹೋಯಿದು. ಒಳ್ಳೆದೇ!

ಗೆಣವತಿಗೆ ಪೂಜೆ ಹೀಂಗೇ ಆಯೆಕ್ಕು ಹೇಳಿ ಕಟ್ಟು ಎಂತೂ ಇಲ್ಲೆ. ಹೊತ್ತು-ಗೊತ್ತು ಮದಲೇ ಇಲ್ಲೆ, ನವಗೆ ಎಡಿವಗ, ಅರಡಿವ ಹಾಂಗೆ – ಶ್ರದ್ಧೆ-ಭಕ್ತಿಲಿ ಕೊಟ್ಟದರ ಕುಶೀಲಿ ತೆಕ್ಕೊಳ್ತನಡ°. ಇದರಿಂದಾಗಿ ಅವನ ಆರಾಧನೆ ತುಂಬ ಜಾಸ್ತಿ. ಹಿಂದೂ ದೇವರುಗಳ ಪೈಕಿ ಅತ್ಯಂತ ಹೆಚ್ಚು ಪೂಜೆ ಮಾಡ್ತದು ಗೆಣವತಿಗೇ ಅಡ. ಎಲ್ಲ ಕೆಲಸಲ್ಲೂ ಮೊದಾಲಿಂಗೆ ಅವಂಗೆ ನಮಸ್ಕಾರ. ತುಂಬ ಧಾರ್ಮಿಕವಾಗಿ ಹಿಡುದು, ಅತ್ಯಂತ ಆಧುನಿಕ ಜಗತ್ತಿಲಿದೇ ಗೆಣವತಿ ಪೂಜೆ ಇದ್ದೇ ಇದ್ದು. ನಿತ್ಯ ಜೀವನಲ್ಲೇ ಅಷ್ಟೊಂದು ಇಪ್ಪಗ, ಇನ್ನು ಚೌತಿ ದಿನ ಹೇಂಗಿಕ್ಕು? ಅದೇ ನೋಡ್ಳಿಪ್ಪದು.
ಅವನ ಆರಾಧನೆ ಜಾಸ್ತಿ ಆದ ಹಾಂಗೆ ಆರಾಧನಾ ವಿಧಾನಂಗೊ ಜಾಸ್ತಿ ಅಪ್ಪಲೆ ಸುರು ಆತು. ಮೊನ್ನೆ ಚೌತಿಗೆ ನಮ್ಮ ಊರಿಲೇ, ನಮ್ಮೋರಲ್ಲೇ ನಾನಾ ನಮುನೆಲಿ ಆರಾಧನೆ ಮಾಡಿದ್ದವು, ಚೌತಿ ದಿನ ಹೇಂಗೆ ಮಾಡಿರೂ ಅದು ಗೆಣವತಿಗೆ ತೃಪ್ತಿಯೇ ಅಡ ಅಲ್ಲದೋ!

ನೆಕ್ರಾಜೆ ಅಪ್ಪಚ್ಚಿಯಲ್ಲಿಗೆ ಉದಿಯಪ್ಪಗ ಬಟ್ಟಮಾವ° ಬಂದು ಹನ್ನೆರಡುಕಾಯಿ ಗೆಣವತಿ ಹೋಮ ಮಾಡಿದ್ದವು. ಒರಿಷವೂ ಅಲ್ಲಿ ಹಾಂಗೇ ನಡೆತ್ತದು. ಯಜ್ಞೇಶ್ವರನ ಆವಾಹನೆ ಮಾಡಿ – ನೂರೆಂಟು ಆಹುತಿ ಕೊಟ್ಟು, ಅಷ್ಟದ್ರವ್ಯ, ಸುಟ್ಟವು ಎಲ್ಲ ಮಾಡಿ ಕ್ರಮಪ್ರಕಾರ. ತಲೆತಲಾಂತರದ ಕ್ರಮ ಅದು.
ನಮ್ಮ ಮಾಷ್ಟ್ರುಮಾವನಲ್ಲಿ ಮದ್ಯಾನ್ನಕ್ಕೆ ಒಂದು ಕಾಯಿ ಗೆಣವತಿ ಹೋಮ ಮಾಡಿದ್ದಡ. ಅಷ್ಟದ್ರವ್ಯ ನೈವೇದ್ಯ. “ವರವರದ ಸರ್ವ ಜನಂಮೇ ಯಶಮಾನಾಯ ಸ್ವಾಹಾಆ” ಹೇಳಿ ಆಹುತಿ ಮಂತ್ರಲ್ಲಿ ಅಷ್ಟದ್ರವ್ಯ ಸಮರ್ಪಣೆ ಮಾಡಿಗೊಂಡು. ತೂಷ್ಣಿಲಿ. ಮನೆಯೋರೇ ಇದ್ದುಗೊಂಡು.
ಬೈಲಕರೆ ಗಣೇಶಮಾವ° ಹೊತ್ತೋಪಗ “ಗಂ ಗಣಪತಯೇ ಸ್ವಾಹಾಆ” ಹೇಳ್ತ ಮೂಲಮಂತ್ರಲ್ಲಿ ಆಹುತಿ ಕೊಟ್ಟು ಬಾವಡೆಲಿ ಸಣ್ಣ ಮಟ್ಟಿಂಗೆ ಅಗ್ನಿಕಾರ್ಯ ಮಾಡಿದವಡ. ನಿತ್ಯಜೆಪ ಮಾಡಿದ ಮೇಲೆ ದಿನವೂ ಅಗ್ನಿಕಾರ್ಯ ಮಾಡ್ತವಿದಾ, ಅಷ್ಟದ್ರವ್ಯವೂ, ಪಚ್ಚಪ್ಪವೂ ವಿಶೇಷ ಆಗಿತ್ತು.
ಪಾರೆ ಮಗುಮಾವ° ಒಲಗೇ(ಒಲೆ) ಹೋಮ ಮಾಡಿದವಡ. ಅವರ ಮನೆಲಿ ಅದೇ ಕ್ರಮ, ಅಂದಿಂದಲೇ! ಮಗುಅತ್ತೆ ಮದ್ಯಾನ್ನವೇ ಸಗಣ ಬಳುಗಿ ಶುದ್ಧಮಾಡಿದ ನಿತ್ಯಒಲೆಗೆ ಇರುಳಿಂಗೆ ಹಲಸಿನ ಸೌದಿ ಮಡಗಿ, ಅಷ್ಟದ್ರವ್ಯ ಒಲಗೆ ಹಾಕಿ, ಕರೆಂಗೆ ಹೂಗು ಮಡಗಿ, ನಾಕು ಗರಿಕ್ಕೆ ಹಾಕಿ, ದೀರ್ಘದಂಡ ನಮಸ್ಕಾರ ಮಾಡಿದವಡ, ಮನೆಯೋರು ಎಲ್ಲೊರುದೇ. ಅಗ್ನಿದೇವರೂ, ಗೆಣವತಿದೇವರೂ ಒಟ್ಟು ಸೇರಿದ ಸುಂದರ ಕ್ಷಣ.
ತರವಾಡು ಮನೆ ರಂಗಮಾವಂಗೆ ಈ ಒರಿಷ ಪುರುಸೊತ್ತು. ಏವತ್ತೂ ಅವರ ಮನೆಲಿ ಗೆಣವತಿ ಹೋಮ ಮಾಡ್ತದು, ಈ ಸರ್ತಿ ಆರೋ ನೆಂಟ್ರ ಪೈಕಿ ಸೂತಕ ಬಂದು ಒಳುದ್ದು. ಆದರೂ ಒಂದು ಅಡ್ಡ ಬೀಳಲೆ ಮರದ್ದವಿಲ್ಲೆ.
ಚೂರಿಬೈಲು ದೀಪಕ್ಕ, ಜಾಲಕರೆಯ ಕರಿಕ್ಕೆ ಪೊರ್ಪಿ ಮಾಲೆ ಮಾಡಿ ಉದಿಯಪ್ಪಗಳೇ ಗೆಣವತಿಯ ಪಟಕ್ಕೆ ಹಾಕಿ ಕೈ ಮುಗುದ್ದು. ಹೇಂಗೂ ಮಲ್ಲಿಗೆ ಕಟ್ಟಿ ಅಬ್ಯಾಸ ಇದ್ದನ್ನೆ, ಕರಿಕ್ಕೆ ಕಟ್ಳೆ ತುಂಬ ಹೊತ್ತು ಏನೂ ಬೇಕಾಗಿರ!
ಪಾಲಾರಣ್ಣ ಅಡಕ್ಕೆ ಸಿಂಗಾರದೇ ಕರಿಕ್ಕೆ ಕಟ್ಟವುದೇ ಹಿಡ್ಕೊಂಡು ಮದೂರಿಂಗೆ ಹೋದ°. ಚೌತಿದಿನ ಮದೂರು ಗೆಣಪ್ಪಣ್ಣಂಗೆ ರಜ ವೈಶಿಷ್ಠ್ಯ!
ಗುಣಾಜೆ ಮಾಣಿ ಬೇಳದ ರೋಸಮ್ಮನ ಕೈಂದ ಸೇವಂತಿಗೆ ಮಾಲೆ ಎರಡು ಮೊಳ ತೆಕ್ಕೊಂಡು ಬೈಕ್ಕಿಂಗೆ ಹಾಕಿಯೊಂಡ°. ಸೂರಂಬೈಲು ಪೇಟೆ ಇಡೀಕ ಕಾಣಲಿ ಹೇಳಿಗೊಂಡು ಒಂದು ದ್ವಜವುದೇ ಕಟ್ಟಿಗೊಂಡಿದ.
ಸೂರಂಬೈಲಿನ ’ಗಣೇಶೋತ್ಸವ’ಲ್ಲಿ ಎಲ್ಲೊರೂ ಸಮನಾಗಿ ಸೇರಿಗೊಂಡಿತ್ತಿದ್ದವು. ಕುಂಕುಮ ನಾಮ ಎಳಕ್ಕೊಂಡು, ಜೀನ್ಸುಪೇಂಟು ಹಾಕಿದ ಮುಕಾರಿ ಆಣು ಸಂಕಪ್ಪ – ಪೂಜೆಬಟ್ರು ಕೃಷ್ಣಣ್ಣನ ಮುಟ್ಟಿ ಶುದ್ದ ಪೂರ ಲಗಾಡಿ ತೆಗದಿತ್ತಿದ್ದು. ಆರನ್ನೂ ಬೈವ ಹಾಂಗಿಲ್ಲೆ. ಗೆಣವತಿಗೇ ಅಕ್ಕಾರೆ ಕೃಷ್ಣಣ್ಣಂಗೆ ಏಕೆ ಆಗ? ಧರ್ಮ ಒಳಿವಲೆ ಸಂಕಪ್ಪನ ಹಾಂಗಿಪ್ಪವುದೇ ಬೇಕಿದಾ!.
ಒಬ್ಬೊಬ್ಬ ಒಂದೊಂದು ನಮುನೆ ಮಾಡಿರೂ, ಅದೇ ಗೆಣಪ್ಪಣ್ಣ ಎಲ್ಲೊರಿಂಗೂ ಶುಭಾಶೀರ್ವಾದ ಕೊಡ್ತ ಹೇಳಿ ಎಲ್ಲೊರೂ ಗ್ರೇಶಿ ಕುಶು ಕುಶುಲಿ ಇತ್ತಿದ್ದವು.

ಚೌತಿದಿನ ಹೊತ್ತೋಪಗ ಪೇಟೆಯ ಗಣೇಶೋತ್ಸವಕ್ಕೆ ಹೋಪೋರು ಕೆಲವು ಜೆನ ಸೇರಿತ್ತಿದ್ದೆಯೊ°. ನೇರಂಪೋಕು ಮಾತಾಡಿಗೊಂಡು ಇಪ್ಪಗ ಚೌತಿಯ ಸಂಬಂದಿ ರಜ ಶುದ್ದಿ ಬಂತು. ಕೆಲವೆಲ್ಲ ಚೌತಿ ಸಂಬಂದಿ ಅಜ್ಜಿಕತೆಗಳ ಮಾಷ್ಟ್ರುಮಾವ° ನೆಂಪು ಮಾಡಿದವು. ಸಾರ ನೆಂಪಿದ್ದದರ ಇಲ್ಲಿ ಹೇಳ್ತೆ, ಮುಂದಕ್ಕೆ ಚೌತಿ ಬಪ್ಪಗ ಇಷ್ಟಾರೂ ನೆಂಪಾಗಲಿ:
~~
ಶಿವ° ಯೇವದೋ ರಾಕ್ಷಸನ ಕೊಲ್ಲಲೆ ಹೇಳಿ ಹೋಗಿಪ್ಪ ಸಮಯ. ಗೌರಿ (- ಶಿವನ ಹೆಂಡತ್ತಿ) – ಮೀವಲೆ ಹೋಪಲಪ್ಪಗ ಮಾಣಿಯ ಮಣ್ಣಿನ ಮೂರ್ತಿ ಮಾಡಿ, ಜೀವ ಕೊಟ್ಟು ’ಆರು ಬಂದರೂ ಒಳ ಬಿಡೆಡ’ ಹೇಳಿತ್ತಡ. ಈ ಮಾಣಿ (- ಗೌರೀಪುತ್ರ°) ಕಾದುಗೊಂಡಿತ್ತಿದ್ದ°. ಶಿವ° ಬಂದಪ್ಪಗ ಒಳಬಿಟ್ಟಿದನಿಲ್ಲೆ- ಗುರ್ತ ಇಲ್ಲೆ ಇದಾ!, ಹಾಂಗೆ. ಶಿವಂಗೆ ಪಿಸುರು ಬಂದು ಮಾಣಿಯ ತಲೆತುಂಡುಸಿದ°. ಗೌರಿ ಬಂದು ನೋಡುವಗ ಪ್ರಮಾದ ಆಗಿ ಕಳುದ್ದು. ಮತ್ತೆ ಒಂದು ಆನೆಯ ಮೋರೆ ತಂದು ಸಿಕ್ಕುಸಿದ್ದಡ. ಹಾಂಗೆ ಈ ಗೆಣವತಿ ಗಜಮುಖ ಆದ°.
ಮೋರೆ ಹೇಂಗೂ ಆನೆದೇ, ಆನೆಯ ಪ್ರಮಾಣಲ್ಲೇ ತಿಂಬದುದೇ. ಕಬ್ಬು, ಕರಿಕ್ಕೆ ಎಲ್ಲ ಭಾರೀ ಕುಶಿ. ವಿಶೇಷ ವ್ಯಾಯಾಮ ಎಂತೂ ಇಲ್ಲೆ, ಅಪ್ಪಮ್ಮನ ಮೊಟ್ಟೆಲಿ ಕೂಬದು ಬಿಟ್ರೆ. ಮತ್ತೆ ಹೊಟ್ಟೆ ದೊಡ್ಡ ಆಗದ್ದೆ ಎಲ್ಲಿಗೆ? ಲಂಬೋದರ (ಲಂಬ + ಉದರ) ಹೇಳಿ ಹೆಸರು ಬರುಸಿಗೊಂಡ°. ನಮ್ಮ ಊರಿಲಿಯೂ ಇದ್ದವು ಕೆಲವು ಆ ನಮುನೆಯವು. 😉
~~
ಗೆಣವತಿ ಎಲಿಯ ಮೇಲೆ ಕೂದುಗೊಂಡು ಹೋಯ್ಕೊಂಡಿಪ್ಪಗ, ಮೇಗಂದ ನೋಡಿಗೊಂಡು ಇದ್ದ ಚಂದ್ರಂಗೆ – ನೆಕ್ರಾಜೆ ಯೇಕ್ಟಿವಲ್ಲಿ ಆಚಕರೆ ಮಾಣಿ ಹೋದ ಹಾಂಗೆ ಕಂಡತ್ತೋ ಏನೋ! – ಜೋರು ನೆಗೆಮಾಡಿದನಡ. ಗೆಣವತಿಗೆ ಪಿಸುರು ಬಂತು, ಒಂದು ದಾಡೆ ಹಲ್ಲಿನ (ಆನೆಮೋರೆ ಇದಾ) ತುಂಡುಮಾಡಿ ಇಡ್ಕಿದ°. ಚಂದ್ರ° ಮೋಡದ ಎಡಕ್ಕಿಲಿ ಹುಗ್ಗಿ ತಪ್ಪುಸಿಗೊಂಡದಕ್ಕೆ ಗೆಣವತಿ ಶಾಪ ಕೊಟ್ಟನಡ, ’ಈ ದಿನ ನೀನು ಹುಗ್ಗಿಯೇ ಕೂದುಗೊ, ನೀನು ಆರಿಂಗೂ ಕಾಂಬದು ಬೇಡ, ಆರಾರು ನಿನ್ನ ಕಂಡ್ರೆ ಅವಂಗೆ ಅಪವಾದ ಬರಳಿ’ ಹೇಳಿ. ಚಂದ್ರಂಗೆ ಸಾರ ಇಲ್ಲೆ, ಮೊದಲೇ ಮದುವೆ ಆಗಿತ್ತು, ಒಂದೆರಡಲ್ಲ, ಇಪ್ಪತ್ತೇಳು.! ಈಚಿಗೆ ಗೆಣವತಿಯ ಹಲ್ಲು ತುಂಡಾತು. ಏಕದಂತ ಹೇಳಿ ಹೆಸರೂ ಆತು. ಅಂತೂ ಇಂತೂ, ಚೆಂದ ಹಾಳಾತು. ಇನ್ನುದೇ ಕೂಸು ಸಿಕ್ಕಿದ್ದಿಲ್ಲೆ ಮಾಂತ್ರ! ಅದಕ್ಕೇ ಹೇಳುದು- ಪಿಸುರಿನ ಗಡಿಬಿಡಿಲಿ ಏನಾರು ಮಾಡಿಗೊಂಬಲಾಗ, ನಾವೇ ಅನುಬವಿಸೆಕ್ಕಾವುತ್ತು – ಹೇಳಿಗೊಂಡು. (ಮೊದಲೇ ಒಂದೂವರೆ ಹಲ್ಲು, ಅದುದೇ ಹಲ್ಲು ಹೆರ. ಹೊಟ್ಟೆ ಡುಮ್ಮ, ಮನೆಲೇ ಇಪ್ಪದು ಬೇರೆ, ಅಪ್ಪಮ್ಮನೊಟ್ಟಿಂಗೆ, ಬೆಂಗ್ಳೂರಿಲಿ ಕೆಲಸ ಏನು ಇಲ್ಲೆ – ಆರು ಕೂಸು ಕೊಡುಗು ಬೇಕೇ? ಪಾಪ!- ಹೇಳಿ ಅಜ್ಜಕಾನ ಬಾವ ಬೇಜಾರು ಮಾಡಿಗೊಂಡಿತ್ತಿದ್ದ°.)
ಅಂತೂ ಚೌತಿ ದಿನ ಚಂದ್ರನ ನೋಡ್ಳೇ ಆಗ ಅಡ. ನೋಡಿರೆ ಅಪವಾದ ಬತ್ತಡ. ದ್ವಾಪರಲ್ಲಿ ಒಂದರಿ ಕೃಷ್ಣ ಹೀಂಗೇ ಚಂದ್ರನ ನೋಡಿ ಕೆಣುದ್ದನಡ!
~~
ಸತ್ರಾಜಿತ° ಹೇಳಿ ಒಬ್ಬ ಇತ್ತಿದ್ದನಡ. ಕೃಷ್ಣನ ಸಂತಾನಗಾರ°(ಕುಟುಂಬಸ್ತ). ತಪಸ್ಸು ಮಾಡಿ ಸೂರ್ಯನ ಒಲುಸಿ ಮಣಿ ಪಡಕ್ಕೊಂಡನಡ – ’ಶಮಂತಕ ಮಣಿ’ ಹೇಳಿ ಹೆಸರು – ಕೇಳಿದ್ದರ ಕೊಟ್ಟುಗೊಂಡು ಇತ್ತಡ ಆ ಮಣಿ. ಚಿನ್ನವೋ, ಊಟವೋ, ಸಂಪತ್ತುಗಳೋ, ಗೋವುಗಳೋ, ಇತ್ಯಾದಿ ಎಂತ ಅಪೇಕ್ಷೆ ಇದ್ದೋ ಅದು. ’ಸತ್ರಾಜಿತನತ್ರೆ ಹಾಂಗಿರ್ತ ಮಣಿ ಇದ್ದು’ ಹೇಳಿ ದೊಡ್ಡ ಶುದ್ದಿ ಆತು ಊರು-ಪರಊರಿಲಿ. ಆ ಮಣಿಗೆ ಗಾಳ ಹಾಕುತ್ತ ಜೆನಂಗಳೂ ಜಾಸ್ತಿ ಆದವು. ಅವನ ಜೀವಕ್ಕೇ ತೊಂದರೆ ಇದ್ದು ಹೇಳಿ ಕೃಷ್ಣಂಗೆ ಅದು ಅಂದಾಜಿ ಆತು, ಅವನ ಮುರ್ಕಟೆ ಮನೆಗೆ ಹೋಗಿ ಹೇಳಿದ°ಡ, ’ನೋಡು ಕುಂಞೀ, ನಿನಗೆ ಆ ಮಣಿಯ ಆಳುಸಿಗೊಂಬಲೆ ಎಡಿಯ, ಎಂಗಳ ಬಂದವಸ್ತಿನ ಅರಮನೆಲಿ ಮಡಿಕ್ಕೊ. ಇಲ್ಲದ್ರೆ ನಿನಗೆ ಜೀವಕ್ಕೇ ಸಂಚಕಾರ!’ ಹೇಳಿ. ’ಏನೋ ಒಳಪ್ಪೆಟ್ಟು ಮಡಿಕ್ಕೊಂಡು ಹೇಳ್ತಾ ಇಪ್ಪದು ಈ ಕೃಷ್ಣ°’ ಹೇಳಿ ಗ್ರೇಶಿದ ಸತ್ರಾಜಿತ ’ಇಲ್ಲೆ, ಎನ್ನ ಹತ್ರವೇ ಇರಳಿ, ಆನು ನೋಡಿಗೊಂಬೆ!’ ಹೇಳಿದನಡ. ’ಆತಂಬಗ, ನಿನ್ನ ಹಣೆಬಾರ’ ಹೇಳಿಕ್ಕಿ ಕೃಷ್ಣ° ಬಿಟ್ಟ° ಆ ವಿಶಯವ.
ಒಂದು ಸರ್ತಿ (ಸತ್ರಾಜಿತ) ಸತ್ರಾಜಿತನ ತಮ್ಮ ಪ್ರಸೇನಜಿತ ಆ ಮಣಿಯ ಕಟ್ಟಿಗೊಂಡೇ ಬೇಟಗೆ ಹೋದನಡ – ಮಾಟಿ,ಅವಲಕ್ಕಿಸರ ಹಾಯ್ಕೊಂಡು ರೂಪತ್ತೆ ತೋಟಕ್ಕೆ ಹೋದ ನಮುನೆಲಿ. ಕಾಡಿಲಿ ಒಂದು ಬಲಾಢ್ಯ ಸಿಮ್ಮ(ಸಿಂಹ) ಅವನ ಕೊಂದು ಮಣಿಯ ತೆಕ್ಕೊಂಡು ಹೋತಡ. ಅಜ್ಜ° ಕರಡಿ ಒಂದು (ಜಾಂಬವ°) ಸಿಮ್ಮದ ಕೈಲಿ ಹೊಳೆತ್ತದರ ಕಂಡು- ಸಿಮ್ಮವ ಕೊಂದು, ಮಣಿ ಬಿಡುಸಿ ಅದರ ಸಾಂಕು ಮಗಳು ಜಾಂಬವತಿಗೆ ಆಡ್ಳೆ ಕೊಟ್ಟತ್ತಡ.
ಅದೇ ಸಮಯದ ಚೌತಿಲಿ ಕೃಷ್ಣ° ಚಂದ್ರನ ನೋಡಿತ್ತಿದ್ದ ಇದಾ! ಅಪವಾದ ಬಂದೇ ಬರೆಕ್ಕನ್ನೆ. “ಮಣಿಯ ಆಸೆಗೆ ಕೃಷ್ಣನೇ ಎಂಗಳ ಮಗನ ಕೊಂದದು” ಹೇಳಿ ಸತ್ರಾಜಿತನ ಮನೆಯೋರು ಅಪವಾದ ಹಾಕಿದವು. ಲೊಟ್ಟೆ ಶುದ್ದಿ ಬೇಗ ಹರಡುದು ಯೇವತ್ತುದೇ. ಕೃಷ್ಣ ದೊಡ್ಡ ಗುಮನ ಮಾಡದ್ದೆ ರಜ ಸಮಯ ಸುಮ್ಮನೆ ಕೂದರೂ, ಅಪವಾದ ಜೋರಪ್ಪಗ “ಇದರ ಸತ್ಯ ತಿಳುದು ಬತ್ತೆ” ಹೇಳಿಗೊಂಡು ಹೆರಟನಡ.
(ಸತ್ರಾಜಿತ)ಪ್ರಸೇನಜಿತನ ಕಾಲಿನ ಗುರುತಿನ ನೋಡಿಗೊಂಡು ಕಾಡಿಂಗೆ ಎತ್ತಿದ° – ಸಿಂಹದೊಟ್ಟಿಂಗೆ ಯುದ್ಧಮಾಡಿದ್ದು ಕಾಣ್ತು – ಪ್ರಸೇನಜಿತ° ಬಿದ್ದಿದ° – ಸಿಮ್ಮದ ಹೆಜ್ಜೆಗುರುತು ಮುಂದರುದ್ದು – ಹಾಂಗೇ ಅದನ್ನೂ ಅನುಸರುಸಿ ಅಪ್ಪಗ ಇನ್ನೊಂದು ಯುದ್ಧಮಾಡಿದ್ದು ಕಾಣ್ತು – ಕರಡಿಯ ಹೆಜ್ಜೆಯ ಹಾಂಗೆ ಇದ್ದು – ಸಿಮ್ಮ ಸತ್ತು ಬಿದ್ದಿದು – ಕಾಡಿನ ರಾಜ ಸಿಮ್ಮವ ಮುಗುಶೆಕ್ಕಾರೆ ಬಲಾಢ್ಯ ಕರಡಿಯೇ ಆಗಿರೆಕ್ಕು; ಅದರ ಅನುಸರುಸಿಗೊಂಡು ಹೋಪಗ ಗುಹೆ ಒಳ ಒಂದು ಕೂಚಕ್ಕ° ಈ ಮಣಿಯ ಹಿಡ್ಕೊಂಡು ಆಡಿಗೊಂಡಿದ್ದು. ಕರೆಲಿ ಈ ಜಾಂಬವಂದೇ.
ಆ ಮಣಿಯ ಕೃಷ್ಣ ಕೇಳುವಗ ಕೊಟ್ಟವಿಲ್ಲೆ. ’ಆನು ಯುದ್ದ ಮಾಡಿ ಗೆದ್ದುಗೊಂಡದು, ಎನ್ನತ್ರೆ ಗೆದ್ದು ನೀನು ತೆಕ್ಕೊಂಡೋಗು’ ಕಡ್ಪಕ್ಕೆ ಹೇಳಿತ್ತಡ ಆ ಕರಡಿ. ಅಜ್ಜಂದ್ರು ರಜ್ಜ ಕಡ್ಪ ಜಾಸ್ತಿಯೇ ಅಲ್ಲದೋ! ಅಂತೂ ಇಪ್ಪತ್ತೆಂಟು ದಿನ ಅವಿಬ್ರೂ ಯುದ್ಧಮಾಡಿದವಡ. ನಾನಾ ನಮುನೆಲಿ. ಯುದ್ಧದ ಎಡಕ್ಕಿಲಿ ಜಾಂಬವಂಗೆ ಅವನ ಆರಾಧ್ಯದೈವ ರಾಮ ಆಗಿ ಕಾಂಬಲೆ ಸುರು ಆತಡ ಈ ಕೃಷ್ಣನ. ಯೇವ ರಾಮಂಗೆ ಬಂಟ ಆಗಿ ಸೀತೆಯ ತಪ್ಪಲೆ ಸೇವೆ,ಸಕಾಯ ಮಾಡಿದ್ದನೋ, ಅದೇ ರಾಮನೊಟ್ಟಿಂಗೆ ಯುದ್ಧಮಾಡಿಗೊಂಡಿಪ್ಪದು ಗ್ರೇಶಿ ಪಶ್ಚಾತ್ತಾಪ ಆತಡ. ರಾಮನೇ ಕೃಷ್ಣ ಆಗಿ ಬಂದದು ಹೇಳಿ ಗೊಂತಾತು.
ಕೃಷ್ಣರೂಪೀ ರಾಮಂಗೆ ಸಮ್ಮಾನ ಮಾಡಿ, (ಸಮ್ಮಾನ ಹೇಳಿರೆಂತ, ಹಲಸಿನಣ್ಣು-ಜೇನ ಕೊಟ್ಟಿಕ್ಕು, ಅಷ್ಟೇ ಉಳ್ಳೊ!) ಸತ್ಕಾರ ಮಾಡಿತ್ತಡ.
ಮಾಷ್ಟ್ರುಮಾವನ ಮನೆಲಿ ಮನ್ನೆ ಇತ್ಲಾಗಿ ತಾಳಮದ್ದಳೆ ಆಡಿತ್ತಿದ್ದವು, ಬೆಳ್ಳಾರೆ ರಾಂಬಾವ – ಕಾಡಿನ ಜಾಂಬವ ಆಗಿ ರೈಸಿದ್ದ° – ಇದೇ ಪ್ರಸಂಗ. ಹಾಂಗೆ ಒಪ್ಪಣ್ಣಂಗೆ ಈ ಕತೆ ಸರೀ ನೆಂಪು.

ಅಂತೂ ಮತ್ತೆ ಕೃಷ್ಣಂಗೆ ಮಣಿಯ ಕೊಟ್ಟ ಜಾಂಬವ°. ಒಂದಲ್ಲ-ಎರಡು!
ಜೀವಂತ ಮಣಿ ಜಾಂಬವತಿಯ ಕೃಷ್ಣಂಗೇ ಮದುವೆ ಮಾಡಿ ಕೊಟ್ಟು ಪಾವನ ಆದ° ಆ ಸಾಂಕಿದ ಅಪ್ಪ ಜಾಂಬವ°.
ಅಪವಾದ ಬಯಿಂದಿಲ್ಲೆ ಹೇಳಿ ಆದರೆ ಕೃಷ್ಣ ಆ ಶಮಂತಕ ಮಣಿಯ ಹುಡ್ಕಿಯೋಂಡು ಹೆರಡ್ಳಿತ್ತೋ? ಇಷ್ಟೆಲ್ಲ ಅಪ್ಪಲಿತ್ತೋ? ಏ°?
ಅದಕ್ಕೇ ಹೇಳಿದ್ದು, ಒಂದರಿ ಅಪವಾದ ಬಂದರೆಂತಾತು? ಜಾಂಬವತಿ ದರ್ಮಕ್ಕೇ ಸಿಕ್ಕಿತ್ತಿಲ್ಯೋ!!!?
~~
ಈ ಕತೆ ಕೇಳಿದ ಆಚಕರೆ ಮಾಣಿ ಸೀದಾ ಚಂದ್ರನ ನೋಡ್ಳೆ ಸುರು ಮಾಡಿದ್ದೇ ಅಲ್ದೋ! ಗಮ್ಮತ್ತು ಎಂತರ ಹೇಳಿರೆ ಅಷ್ಟರೊರೆಂಗೆ ಕಪ್ಪುಕನ್ನಡ್ಕ (ಕೂಲಿಂಗ್ಲಾಸು – ಬೈಕ್ಕಿಲಿ ಹೋಪಗ ಮಡಗುತ್ತವಲ್ದೋ, ಅದು) ಮಡಿಕ್ಕೊಂಡಿದ್ದವ° ತೆಗದೇ ನೋಡ್ಳೆ ಸುರು ಮಾಡಿದ°. ಹಾಂಗೊಂದು ಆವುತ್ತರೆ ಆಗಲಿ ಹೇಳಿ ಆಯಿಕ್ಕು – ಪಾಪ! 😉
ಜಾಂಬವತಿ ಸಿಕ್ಕೆಕ್ಕಾರೆ ಎಷ್ಟೋ ಜಾಂಬವಂದ್ರ ಎದುರುಸೆಕ್ಕಾವುತ್ತು ಹೇಳಿ ಅವಂಗೆ ಆರು ಅರ್ತ ಮಾಡುಸ್ಸು?! 😉

ಎಂಗೊ ಮೆಲ್ಲಂಗೆ ಅಲ್ಲಿಂದ ಹೆರಡ್ತ ಏರ್ಪಾಡು ಮಾಡಿದೆಯೊ°.ಇನ್ನುದೇ ತಲೆ ಕೆಳ ಹಾಕದ್ದ ಇವನ ಸಮಾದಾನ ಮಾಡ್ತ ಲೆಕ್ಕಲ್ಲಿ ಗುಣಾಜೆ ಕುಂಞಿಯೂ ಎಡೆಡೆಲಿ ಚಂದ್ರನ ನೋಡಿಗೊಂಡ°. ಪಾಪ. ’ಚೆ ಚೇ! ಬಡಪಾಯಿ ಬ್ರಹ್ಮಚಾರಿಗಳ ಬವಣೆ!’ ಹೇಳಿ ಪುಟ್ಟಕ್ಕ ಸಾಹಿತ್ಯಿಕವಾಗಿ ಪರಂಚಿತ್ತು. ;-(
ಇರುಳು ಮತ್ತೆ ಗೆಣವತಿಯ ನೋಡಿಕ್ಕಿ ಮನೆಗೆ ಬಂದೆಯೊ, ಕೊಟ್ಟಿಗೆ ತಿಂದು ಒರಗಿದೆಯೊ.

ಈ ಚೌತಿಗೆ ನಿಂಗೊ ಚಂದ್ರನ ನೋಡಿದಿರಾ? ಕನಿಷ್ಠ ಪಕ್ಷ ಗೆಣವತಿಯ?
ಚೌತಿ ಸಮಯದ ಶುದ್ದಿಗಳಲ್ಲಿ ಇಪ್ಪ ಗಮ್ಮತ್ತುಗಳ ವಿವರುಸುವಗ ಇದರ ಎಲ್ಲ ಹೇಳೆಕ್ಕಾತು.ಇನ್ನು ಒಳುದ್ದು ಇದ್ದರೆ ನಿಂಗೊ ಹೇಳಿ. ಆತೋ? ಏ°? 😉

ಒಂದೊಪ್ಪ: ಅಪವಾದ ಬಂತು, ತೊಂದರೆ ಬಂತು ಹೇಳಿಗೊಂಡು ಮನೆಲೇ ಕೂದುಗೊಂಡ್ರೆ ಯೇವ ಮಣಿಯೂ ಸಿಕ್ಕ, ಪಲ ಯೇವತ್ತೂ ನಮ್ಮ ಹುಡ್ಕಿಯೊಂಡು ಬಾರ – ಹೇಳ್ತದು ಚೌತಿ ಶುದ್ದಿಲಿ ನೆಂಪಾಗಲಿ!

9 thoughts on “ಅಪವಾದ ಬಂದರೆಂತಾತು, ಜಾಂಬವತಿ ದರ್ಮಕ್ಕೇ ಸಿಕ್ಕಿತ್ತಿಲ್ಯೋ!

  1. ಮೊದಲನೇದಾಗಿ ಎಲ್ಲೋರಿಂಗು ಲೇಟ್ ಆಗಿ ವಿಶ್ ಮಾಡ್ತಾ ಇದ್ದೆ.
    ನಾಗರಪಂಚಮಿಯ, ಶ್ರೀ ಕೃಷ್ಣ ಜನ್ಮಾಷ್ಟಮಿಯ, ಸ್ವಾತಂತ್ಯ್ರ ದಿನಾಚರಣೆಯ, ಗಣೇಶ ಚತುರ್ತಿಯ ಹಾರ್ದಿಕ ಶುಭಾಶಯಗಳು.
    ಒಪ್ಪಣ್ಣ, ಈ ಸರ್ತಿಯ ಲೇಖನದೆ ಎಂದಿನಂತೆ ಲಾಯಿಕ ಆಯಿದು.
    ಚೌತಿಯ ಬೇರೆ ಬೇರೆ ನಮೂನೆಲಿ ಆಚರ್ಸಿದ್ದು ಮತ್ತೆ ಚೌತಿ ಬಗ್ಗೆ ಬೇರೆ ಬೇರೆ ಕತೆ ಎಲ್ಲ ಓದಿ ಖುಷಿ ಆತು.
    ಆನು ರಜ್ಜ ಬ್ಯುಸಿ ಇದ್ದ ಕಾರಣ ಓದಲೇ ಲೇಟ್ ಆಗಿ ಎನ್ನ ಕಾಮೆಂಟ್ ದೇ ಲೇಟ್ ಆತು.
    ಈ ವಾರದೆ ಹಾಂಗೆ ಲೇಟ್ ಅಕ್ಕು, ಮನಸ್ಸು ಕೇಳ್ತಿಲ್ಲೇ ಓದಿ ಆಗದ್ದರೆ … ಆದರೂ ಸಮಯ ಸಿಕ್ಕಿದ್ದಿಲ್ಲೇ.
    ಇನ್ನಾಣ ಲೇಖನಕ್ಕೆ ಕಾಯ್ತೆ.

  2. ಲಾಯ್ಕ ಬರದ್ದೆ ….
    ಒಪ್ಪಣ್ಣನ ಹೊಟ್ಟೆಯೂ ದೊಡ್ಡ ಆಯ್ದನ್ನೇ…..ಚೌತಿಗೆ ಮನೇಲಿ ಹುಗ್ಗಿ ಕೂದ್ದಡ ಬೆಳ್ಳಕ್ಕೆ ಬಿಡುಗು ಹೇಳಿ …. 😉
    ಬಟ್ಟಮಾವನ ಇಡೀ ಪಟ ಹಾಕೆಕ್ಕಾತು …..:-(

  3. ಒಪ್ಪಣ್ಣ ಭಾರೀ ಒಪ್ಪಕ್ಕೆ ಬರದ್ದ. ಭಾರೀ ಕುಶಿ ಆತು.

  4. ಬರದ್ದು ಲಾಯ್ಕ ಆಯಿದು ಬಾವ… ಗಣೇಶನ ಆರಾಧನೆ ಒಂದೊಂದು ಕಡೆ ಒಂದೊಂದು ರೀತಿಲಿ ಮಾಡುತ್ತಿಪ್ಪದು ನಿಜವಾಗಿಯೂ ವಿಶೇಷವಾದ್ದೆ. ಬೇರೆ ಯಾವ ದೇವರಿಂಗೂದೇ ಈ ರೀತಿಯ ಪೂಜೆ ನಡೆತ್ತಿಲ್ಲೆ ಇದಾ..ಪಾಪ ಲಂಬೋದರ ಬ್ರಹ್ಚಾರಿ ಅಲ್ಲದೋ ಹೇಂಗೆ ಮಾಡಿದರೂ ಆವುತ್ತು. ನಮ್ಮ ಪ್ರಾಯದವನೇ ಇದಾ…
    ಅಂದ ಹಾಂಗೆ ಈ ಬಾಳ-ಗಂಗಾಧರ ತಿಳಕ ಆರು ಬಾವ?
    ಒಳ್ಳೆಯ ಲೇಖನ…

  5. ಲಾಯ್ಕಾಯಿದು. . . ಗೆಣವತಿ ಚಾಮಿಯ ಕತೆಗಳ ಒಪ್ಪಣ್ಣ[ಬಟ್ಟಮಾವ? :D]ನ ಶೈಲಿಲಿ ಓದಿ ಕುಶೀ ಆತು. . .

    ಛೆ, ಅಪ್ಪನ್ನೆ. . . ಅಲ್ಲಿ ಬಟ್ಟಮಾವನ ಕಾಣ್ತೇ ಇಲ್ಲೆ. . . ಇಡೀ ಪಟ ಹಾಕೆಕಾತು… 🙂

  6. ಸತ್ರಾಜಿತನ ಸಿಂಹ ಕೊಂದದ್ದಲ್ಲವೋ ಒಪ್ಪಣ್ಣ. ಅವನ ತಮ್ಮ ಪ್ರಸೇನಜಿತನ..! ಆದರೆ ಕೃಷ್ಣಂಗೆ ಅಪವಾದ ಬಂದರೂ ಎರಡು ಕೂಸು ಸಿಕ್ಕಿದವಿದ. ಅಲ್ಲ್ದೋ !
    ಅನ್ದಹಾನ್ಗೆ ನೀನು, ಆಚೆಕರೆ ಮಾಣಿಯೂದೇ ಗೆಣಪತಿಗೆ ಕೋಮ್ಪಿಟೇಷನ ಕೊಡ್ಲೇ ಹೊರಟಿದಿ ಹೇಳಿ ನಿನ್ಗಲಿಬ್ರ ಹೊಟ್ಟೆ ನೋಡಿರೆ ಗೊಂತಾವ್ತು. ಹೀನ್ಗಿಪ್ಪಾಗ ಅದರ ಇಳುಶದ್ರೆ ನಿಂಗೊಗೂ ಗೆಣವತಿಯ ಹಾಂಗೆ ಅಕ್ಕದಾ !
    ಅಂದಹಾಂಗೆ ಆನು ಮೊನ್ನೆ ಚೌತಿಗೆ ಕಬ್ಬು, ಅಪ್ಪಕಜ್ಜಾಯ, ಪಾಯಸ, ಸುಟ್ಟವು, ಗೆಣಸಲೇ, ಕರ್ಜಿಕಾಯಿ, ಕೊಟ್ಟಿಗೆ, ಹಸಿ ಉಂಡ್ಲೆಕಾಳು, ಪಂಚಕಜ್ಜಾಯ..ಎಲ್ಲಾ ತಿಂದಿದೆ. ಗೆಣವತಿಗೆ ಮಾಡಿದ್ದೆಲ್ಲಾ ನವಗೆ ಅಲ್ದೋ !? ದೇವರು ಕೊಡುದೆಲ್ಲಾ ನವಗೆ !:-)
    ಹಾಂಗೆ ಹೇಳಿ ಪೂಜೆ ಮಾಡದ್ದೆ ಒಳುದ್ದಿಲ್ಲೇ ಆತೋ? ಎನಗೆ ಗೆಣಪತಿ ದೇವರು ಹೇಳಿರೆ ಭಾರೀ ಪ್ರೀತಿ ಇದಾ !

  7. bhatta mava arati ettudu mantra kantaste more kantille.more kambale aaga heli idda bhatta mava.appappa dodda hotteyavu nammoorili iddavu nija aaru heli hesaru barekatu adakkondu maja ittu.mastru mavana maneli homa madle bhatru arada avara maganeyo henge.bhatta mavana hotte nodire nege maduvadu beda heli arati ettuva photo hakiddu allada oppanno ha ha ha…..

  8. ಬೈಲಕೆರೆ ಗಣೇಶ ಮಾವಂಗೆ ಪಚ್ಚಪ್ಪ ಹೇಳಿದರೆ ಭಾರೀ ಪ್ರೀತಿ.ಗೆಣವತಿ ಹೋಮದ ಹೆಳೆಲಿ ತನ್ನ ಇಷ್ಟಾರ್ಥ ಸಿದ್ದಿ ಆವತು ಹೇಳಿ ಪಚ್ಚಪ್ಪ ನೈವೇದ್ಯ…ಮತ್ತೆ ಉದರ ಪೂಜೆಗೂ ಆವ್ತನ್ನೆ….ಅದೆಲ್ಲ ಅಪ್ಪು……ಎಂಗಳ ಮಾಷ್ಟ್ರು ಮಾವನ ಮಗ ಚೌತಿಯ ಆಚರಣೆ ಎಲ್ಲಿ ಎಲ್ಲ ಆಯಿದು ಹೇಳಿ ಬಗ್ಗೆ ವಿವರಣೆ ಕೊಟ್ಟಿದ …..ಚೌತಿ ಲೆಕ್ಕದ ಉದರ ಪೂಜೆ ಹೆಂಗೆ ಆಯಿದು ಹೇಳಿ ಹೇಳಿದ್ದನೇ ಇಲ್ಲೆ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×