ಏಪುಲು ಹಣ್ಣೇ ತಿಂತವಕ್ಕೆ ‘ಕೇಪುಳು ಹಣ್ಣು’ ಮೆಚ್ಚುಗೋ?

ಜೆಂಬ್ರದ ಹಂತಿಲಿ ಜೆನರ ಅಂದಾಜಿ ಹಾಕುತ್ತ ಅಜ್ಜಂದ್ರ ಶುದ್ದಿ ಕಳುದ ವಾರ ಮಾತಾಡಿದ್ದು.
ಈಗಂತೂ ಎಲ್ಲಿ ಹೋದರೂ ಜೆಂಬ್ರದ್ದೇ ಶುದ್ದಿಗೊ; ಜೆಂಬ್ರಂಗಳೇ ಜೆಂಬ್ರಂಗೊ!
ಒರಿಶಾವದಿ ಇಪ್ಪ ಪೂಜೆ-ತಿತಿಗೊ ಮಾಂತ್ರ ಅಲ್ಲದ್ದೆ, ಈ ಒರಿಶ ಮದುವೆಗಳದ್ದೂ ಚೊರಿಯೇ!!
ಎಷ್ಟು ಮದುವೆಗೊ! ನಮ್ಮ ಬೈಲಿಲೇ ತೆಕ್ಕೊಳಿ ನಿಂಗೊ- ನೆರೆಕರೆಲಿ ಮದುವೆ ಆಗದ್ದವೂ, ಮದುವೆ ಆವುತ್ತಿಲ್ಲೇ ಹೇದು ಕೂದವೂ – ಎಲ್ಲೋರುದೇ ಈ ಒರಿಶವೇ ಕಂಕಣ ಕಟ್ಟಿಗೊಳ್ತವೋ ಹೇದು!
ಮೊನ್ನೆ ಕೊಳಚ್ಚಿಪ್ಪುಬಾವನ ಪಾಚದೂಟದ ಪರಿಮ್ಮಳ ಇನ್ನೂ ಕೈಂದ ಸಮಗಟ್ಟು ಹೋಪ ಮದಲೇ – ಮತ್ತೆ ಮೂರು ಹೇಳಿಕೆ ಕಾಗತಂಗೊ – ಓ ಅದ, ನೇತೊಂಡಿದ್ದು. ನಿನ್ನೆ ಮೊನ್ನೆ ಆಗಿ ಮತ್ತೊಂದು ಮದುವೆ ಶುದ್ದಿ ಕೇಳಿತ್ತಪ್ಪ.
ಜೆಂಬ್ರಂಗಳ ಬೆಶಿ ಈಗಳೇ ಏರಿಗೊಂಡಿದ್ದು. ಪೋ!
ಹೋಳಿಗೆ ಹೇಳಿಕೆಗೆ ಹೋಗದ್ದೆ ಕಳಿಗೋ?!

~

ಬೈಲಿನ ಹತ್ತರಾಣ ಅನೇಕ ಜೆಂಬ್ರಂಗಳ ಪೈಕಿ ಮೊನ್ನೆ ಆಚಮನೆಲಿಯೂ ಒಂದು ಕಳುದತ್ತು; ಆಚಮನೆ ದೊಡ್ಡಣ್ಣನ ಎರಡ್ಣೇ ಮಗಳ ಬಾರ್ಸ. ಕುಂಞಿಕೂಸು ಗಾಯತ್ರಿಗೆ ಕುಂಞಿತಂಗೆ ಹುಟ್ಟಿದ ಕೊಶಿ ಅಂದೇ ಮಾತಾಡಿದ್ದತ್ತು ನಾವು ಬೈಲಿಲಿ.
ಪಾಪ – ನಿನ್ನ ತಂಗೆಗೆ ನಾಳೆ ಬಾರ್ಸುದೋ – ಹೇದು ನಾವು ಮೊನ್ನೆ ಗಾಯತ್ರಿಯ ಬಾಯಿಗೆ ಕೋಲು ಹಾಕಲೆ ಹೆರಟು – ಅದು ಜೋರು ಕೂಗಲೆ ಸುರುಮಾಡಿದ್ದು ನಿಂಗೊಗೆ ಗೊಂತಿರ!
ಅನ್ನಪ್ರಾಶನವ ಕುಂಬ್ಳೆಸೀಮೆಲಿ ಬಾರ್ಸ ಹೇಳ್ತವು. ಅದೆಂತಕೆ ಹಾಂಗೆ – ಹೇಳ್ತದು ನವಗರಡಿಯ, ಅಜಕ್ಕಳ ಮಾಷ್ಟ್ರಣ್ಣನೋ,ಮಾಷ್ಟ್ರುಮಾವನೋ ಮಣ್ಣ ವಿವರಣೆ ಕೊಡೆಕ್ಕಟ್ಟೆ.
ಅಬ್ಬೆಹಾಲೋ, ಮಣ್ಣಿಯೋ – ಹೀಂಗೆಂತಾರು ದ್ರವಾಹಾರ ತೆಕ್ಕೊಂಡಿದ್ದ ಬಾಬೆಗೆ ಘನ ಆಹಾರ – ಅನ್ನವ – ಕೊಡ್ಳೆ ಆರಂಭ ಮಾಡ್ತ ಕಾರ್ಯಕ್ರಮವೇ ಅನ್ನಪ್ರಾಶನ. ಸಂಪ್ರದಾಯಲ್ಲಿ ಅದೇ ದಿನ ಹೆಸರೂ ಮಡುಗುತ್ತವು. ಅದಿರಳಿ.

~
ಈ ಜೆಂಬ್ರಕ್ಕೆ ಹೋಪಲೆ ಯೇವ ಬಾವನ ಬೈಕ್ಕು ಸಿಕ್ಕಿತ್ತಪ್ಪೋ ಒಪ್ಪಣ್ಣಂಗೆ – ಹೇದು ಚೆನ್ನೈಭಾವ ಕೋಂಗಿ ಮಾಡ್ಳೂ ಸಾಕು,
ನವಗೆ ಇಲ್ಲೇ ಆಚಮನೆಗೆ ಹೋಪಲೆ ಬೈಕ್ಕು ಎಂತಗೆ – ನೆಡಕ್ಕೊಂಡೇ ಹೋವುತ್ತಿಲ್ಲೆಯೋ!
ಉದೀಯಪ್ಪಗ ಬೇಗ ಹೋದರೆ ಇಡ್ಳಿಕಾಪಿಯೂ ಸಿಕ್ಕುಗು ಹೇಳ್ತ ಲೆಕ್ಕಾಚಾರಲ್ಲಿ ಬೇಗವೇ ಹೋದೆ. ಗ್ರೇಶಿದಾಂಗೇ ಆತು.
ಆಚಮನೆಯೇ ಆದ ಕಾರಣ ದಾಕ್ಷಿಣಿ, ಮುಲಾಜು ಏನಿಲ್ಲೆ – ಎರಡು ಉರು ರುದ್ರ ಹೇಳಿರೆಂತಾತು, ಎಂಟಿಡ್ಳಿಯೂ – ಎರಡು ಸೌಟು ಕ್ಷೀರವೂ ಸಿಕ್ಕಿತ್ತು.

ಬಟ್ಟಮಾವನ ನೇತೃತ್ವಲ್ಲಿ ಒಯಿದೀಕ ಕಾರ್ಯಕ್ರಮಂಗೊ ಚೆಂದಲ್ಲಿ ಕಳಾತು. ಸ್ವತಃ ದೊಡ್ಡಣ್ಣಂಗೇ ಮಂತ್ರ ಅರಡಿವ ಕಾರಣ – ಆಚಮನ ಮಾಡುದು ಹೇಂಗೆ, ಹೂಗು ಹಾಕುತ್ಸುಹೇಂಗೆ, ತೊಳಶಿ ಎಲೆ ಹಿಡ್ಕೊಂಬದು ಹೇಂಗೆ – ಹೇದು ಒಂದೊಂದಕ್ಕೂ ಬಟ್ಟಮಾವ ವಿವರಣೆ ಕೊಡೆಕ್ಕಾದ ಅಗತ್ಯ ಇತ್ತಿಲ್ಲೆ. ಕಾರ್ಯಕ್ರಮಂಗಳೂ ಬೇಗಬೇಗವೇ ಮುಗಾತು.

ಬಾರ್ಸ ಚೆಂದಲ್ಲಿ ಕಳಾತು.
ಮಣ್ಣಿ ತಿಂದುಗೊಂಡಿದ್ದ ಬಾಬೆಗೆ ಅಶನ ತಿಂಬಲೆ ಹೇಳಿಕೊಟ್ಟಾತು. ನಾಳೆಂದ ಅದುವೇ ಹೆಜ್ಜೆಮಡಗಿ ಉಂಗೋ ಏನೋ,
ಉಮ್ಮಪ್ಪ!

ಸುರುವಾಣ ಹಂತಿ ಬಳುಸಿ, ಎರಡ್ಣೇ ಹಂತಿ ಉಂಡು, ಹೆರಡುವೋರ ಹೆರಡುಸಿ, ಒಂದೊರಕ್ಕು ಒರಗಿ ಎದ್ದೂ ಆತು.
ಒಂದು ಬೆಶಿಬೆಶಿ ಛಾಯ ಕುಡುದು ಮೋರೆ ಉದ್ದುವಗ ಗಾಯತ್ರಿ ಪೆರೆಪೆರೆ ಲಡಾಯಿಮಾಡುದು ಅಜನೆ ಆತು.
ಆರತ್ರೆ? – ಹೋ – ಇದು ಅವ° – ನಮ್ಮ ಬೊಂಬಾಯಿ ಬಾವನ ಮಗ° ಅಲ್ಲದೋ!
~

ಆಚಮನೆ ದೊಡ್ಡಣ್ಣನ ಸೋದರ ಮಾವನ ಮಗನೇ ಬೊಂಬಾಯಿಬಾವ.
ಸಣ್ಣ ಪ್ರಾಯಲ್ಲೇ ಕಾರ್ಯ ನಿಮಿತ್ತ ಊರಿಂದ ಹೆರಟ ಕಾರಣ, ಈಗ ಅಲ್ಲಿಯೇ – ದೂರಲ್ಲಿ ಇಪ್ಪದು.
ಬೊಂಬಾಯಿಲಿ ಎಲ್ಲಿ ಕೇಳಿರೆ ಒಪ್ಪಣ್ಣ ಟ್ಟೆಟ್ಟೆಟ್ಟೆ. ಇಲ್ಲಿಂದ ದೂರ, ಬೊಂಬಾಯಿಗೆ ಹತ್ತರೆ; ಅಂತೂ ನವಗೆಲ್ಲ ಬೊಂಬಾಯಿಲಿ – ಹೇಳಿ ಅಷ್ಟೇ ಗೊಂತು.
ಬೊಂಬಾಯಿಬಾವಂಗೆ ಬಂಙಬಂದರೆ ನಮ್ಮ ಭಾಶೆ ನೆಂಪಾವುತ್ತು – ಆದರೆ ಅವರ ಸಂಸಾರಕ್ಕೆ ನಮ್ಮಭಾಶೆ ಮಧ್ಯಮವೇ.
ಬೊಂಬಾಯಿಬಾವನ ಹೆಂಡತ್ತಿ ಗಟ್ಟದಮೇಗಾಣದ್ದಡ. ಅಲ್ಲೇ – ಬೊಂಬಾಯಿಲೇ ಸಿಕ್ಕಿ ಜಾತಕಲ್ಲಿ ಕೂಡಿಬಂದ ಬಗೆ! 😉

ಅದೇನೇ ಇರಳಿ, ಒರಿಶಕ್ಕೊಂದರಿಯೋ, ಎರಡೊರಿಶಕ್ಕೊಂದರಿಯೋ – ಊರಿಂಗೆ ಬಕ್ಕು; ನೆಂಪಾದರೆ ಆಚಮನಗೂ ಬಕ್ಕು.
ಈ ಸರ್ತಿ ಊರಿಂಗೆ ಬಂದಿಪ್ಪಗಳೇ ಈ ಬಾರ್ಸದ ಹೇಳಿಕೆ ಸಿಕ್ಕಿದ ಕಾರಣ – ತುಂಬ ಸಮೆಯ ಕಳುದ ಮತ್ತೆ ಸೋದರತ್ತೆ ಮನೆಗೆ ಜೆಂಬ್ರದೂಟಕ್ಕೆ ಬಂದವು.
ಒಪ್ಪಣ್ಣಂಗೆ ಸುರುವಿಂಗೆ ಗುರ್ತವೇ ಹಿಡಿಯಲೆ ಎಡಿಗಾತಿಲ್ಲೆ, ಹತ್ತನ್ನೆರಡೊರಿಶ ಮದಲು ಕಂಡದಲ್ಲದೋ!

~

ಬೊಂಬಾಯಿ ಬಾವಂಗೆ ಇಬ್ರು ಮಕ್ಕೊ. ಮಕ್ಕಳ ಹತ್ತರೆ ಅವು ಹಿಂದಿಯೇ ಮಾತಾಡುದಡ.
ದೊಡ್ಡ ಮಗಳು ಎಂಟುನೇ ಕ್ಳಾಸು; ಹಿಂದಿಲಿ ಮಾತಾಡಿ ಮಾತಾಡಿ ಈಗ ಹಿಂದಿಲಡ್ಕಿಯೇ ಆಗಿಬಿಟ್ಟಿದೋ ತೋರ್ತು.

ಎರಡ್ಣೇವ ಮಗ – ಗಾಯತ್ರಿಯ ಪ್ರಾಯದೋನು.
ಅವಂಗೂ ನಮ್ಮ ಭಾಶೆ ಬತ್ತಿಲ್ಲೆ – ಆದರೆಂತಾತು, ಗಾಯತ್ರಿಗೂ ಬತ್ತಿಲ್ಲೆ –  ಹಾಂಗಾಗಿ ಅವಿಬ್ರು ಒಳ್ಳೆ ಜೆತೆ.

ತೆಚೆಪೆಚೆ ಮಾತಾಡಿಗೊಂಡ್ರೆ – ಇವೆಂತ ಮಾತಾಡ್ತವು ಹೇದು ದೊಡ್ಡವೇ ಮೇಲೆನೋಡಿಗೊಂಡಿತ್ತವು.
ಆ ಜೆಂಬ್ರಲ್ಲಿ ನಿಸ್ಪೃಹವಾಗಿ, ನಿಸ್ಸಂಕೋಚವಾಗಿ ಮಾತಾಡಿಗೊಂಡದು ಇವಿಬ್ರೇಯೋದು.
~

ಜೆಂಬ್ರ ಕಳುದ ಹೊತ್ತೋಪಗ ಬೊಂಬಾಯಿಬಾವಂಗೆ – ಮಾಷ್ಟ್ರುಮಾವನ ಮನಗೆ ಹೋಯೇಕು – ಹೇದು ಅನುಸಿತ್ತು.
ಸುಮಾರೊರಿಶ ಮದಲೇ ಹೋದ್ಸಡ, ಈಗ ಪುನಾ ಹೋಗಿ ಹಳೆನೆಂಪಿನ ಹೊಸತ್ತು ಮಾಡೇಕು ಹೇಳಿಗೊಂಡು.
ದಾರಿ ಗೊಂತಾಗದ್ರೆ ಹೇದು ಆಚಮನೆ ದೊಡ್ಡಪ್ಪನೂ ಹೆರಟವು. ನವಗೂ ಹೊತ್ತಪ್ಪಗಾಣ ಚಾಯ ಬಯಿಂದು; ಇನ್ನೆಂತ ಬಾಕಿ? – ನಾವುದೇ ಹೆರಟತ್ತು.
ಬೆಳಿಬೆಳಿ ಬೊಂಬಾಯಿಬಾವ, ಅವನಿಂದಲೂ ಬೆಳಿ ಅವನ ಮಗ, ಕನ್ನಡ ಮಾತಾಡುವ ಬೊಂಬಾಯಿ ಅಕ್ಕ – ಅವರ ಮಗಳು.
ಮುಂದಂದ ನಾವು, ಹಿಂದಂದ ಆಚಮನೆ ದೊಡ್ಡಪ್ಪ – ಎಲ್ಲೋರುದೇ ಹೆರಟದು ಮಾಷ್ಟ್ರುಮಾವನ ಮನಗೆ.
ಆಚಮನೆ ದೊಡ್ಡಪ್ಪನಲ್ಲಿಂದ ಮಾಷ್ಟ್ರುಮಾವನಲ್ಲಿಗೆ ಅರ್ದಮೈಲೂ ಆಗ.
ಓ ಆ ಗುಡ್ಡೆ ಹತ್ತಿಳುದು ಹೋದರೆ ಮಾಷ್ಟ್ರುಮಾವನ ಮನೆಯೇ. ಮಾರ್ಗಲ್ಲೇ ನೆಡೆತ್ತರೆ ಅರ್ದ ಮೈಲು, ಇಲ್ಲೇ ವಳಚ್ಚಿಲಿಂದ ಹಾರಿ ಹೋವುತ್ತರೆ ಎರಡು ಪರ್ಲಾಂಗು.
ಎಡೆಲಿ ಸಿಕ್ಕುದು ಎರಡೇ ಗೇಟು – ಒಂದು ದೊಡ್ಡಪ್ಪನವರದ್ದು, ಇನ್ನೊಂದು ಮಾಷ್ಟ್ರುಮಾವನವರದ್ದು.
~

ಗುಡ್ಡೆದಾರಿಲಿ ಮಾತಾಡಿಗೊಂಡೇ ನೆಡವಗ ಉರುಟುರುಟು ಹಣ್ಣುಗೊಂಚಲು ಮದಾಲು ಗೋಷ್ಟಿಆದ್ಸು ಆ ಕುಂಞಿಮಾಣಿಗೆ.
ಸಣ್ಣ ಸಣ್ಣ ಪೊದೆಲುಗಳ ಎಡೆಲಿ ಬಂಬಲವಾಗಿಪ್ಪ ಆ ಕೆಂಪುಕೆಂಪು ಹೂಗುದೇ – ಹಣ್ಣುದೇ ಆ ಮಾಣಿಯ ಗಮನವ ಎಳಕ್ಕೊಂಡತ್ತು.
ಇದೆನಗೆ ಬೇಕೂ – ಹೇಳ್ತಾಂಗೆ ಹಟ ಮಾಡಿದ°.
ಚಿ, ಅದರ ತಿಂಬಲಾಗ – ನಿನಗೆ ಏಪುಲ್ ಕೊಡ್ತೆ ಮನಗೆತ್ತಿದ ಮತ್ತೆ – ಹೇದು ಅವನ ಅಮ್ಮ ಸಮದಾನ ಮಾಡ್ಳೆ ಸುರುಮಾಡಿತ್ತು.
ಮಾಣಿ ಕೇಳ್ತನೋ – ಬೊಬ್ಬೆ ನಿಂದಿದಿಲ್ಲೆ. ಕಂಡದರ ತಿಂದೇ ಕಳಿಯೇಕು.
ಅವಂಗೆ ಹಟ ಜಾಸ್ತಿ – ಹೇದು ಅವನ ಅಮ್ಮ ಪರಂಚಿಗೊಂಡಿದ್ದತ್ತು. ಅವನ ಅಪ್ಪಂಗೂ ಇಪ್ಪಗ ಹಾಂಗೇ ಇದ್ದತು – ಹೇದು ಆಚಮನೆದೊಡ್ಡಪ್ಪ° ಅನುಭವ ಹೇಳುವಗ ಬೊಂಬಾಯಿಬಾವ° ಕಣ್ಣುಸಣ್ಣಮಾಡಿ ನೆಗೆಮಾಡಿಗೊಂಡ°.
ಅಬ್ಬೆಯ ಸೊರ ಏರಿದ ಹಾಂಗೆ ಈ ಮಾಣಿದೂ ಗವುಜಿ ಏರಿತ್ತು.
ಗಲಾಟೆ ಜೋರಪ್ಪಗ ಹೋಗಿ ನೋಡಿದೆ – ಅವ° ಹಟ ಹಿಡುದ್ದು ಎಂತ ಹಣ್ಣಿಂಗೆ ಹೇದು ನೋಡಿರೆ –
ಅದೆಂತರ? ಕೇಪುಳೆ ಹಣ್ಣು!

ಚೆಂದಚೆಂದದ ಕಿಸ್ಕಾರ ಹೂಗಿನ ಗೊಂಚಲಿನ ಒತ್ತೊತ್ತಿಂಗೇ – ಕಡುಕೆಂಪು ಬಣ್ಣದ ಕೆಲವು ಹಣ್ಣುಗಳ ಗೊಂಚಲೂ ಇದ್ದತ್ತು.
‘ಹೋ, ಇದರನ್ನೋ ಅವ° ತಿನ್ನೇಕು ಹೇದು ಹಟ ಮಾಡಿದ್ಸು ಅಕ್ಕ, ಇದರ ತಿಂಬಲಾವುತ್ತು’ – ಒಂದು ಗೊಂಚಲು ಮುರುದು, ಹಣ್ಣಿನ ಕೈಲಿ ತೆಗದು ಬಾಯಿಗೇ ಹಾಕಿಯೂ ತೋರ್ಸಿತ್ತು ನಾವು.
ಕೇಪುಳುಹಣ್ಣು ತಿಂಬಲಕ್ಕು ಹೇಳ್ತದರ ಬೊಂಬಾಯಿಬಾವನೂ ಒಪ್ಪಿದವು, ಆ ಮಾಣಿಯೂ ಒಪ್ಪಿದ° – ಆದರೂ ಅವನ ಅಮ್ಮ ಒಪ್ಪಿದ್ದಿಲ್ಲೆ. ಆತಂಬಗ – ಆ ಹಣ್ಣುಗಳ ಒಳುದೋರಿಂಗೆ ಹಂಚಿ, ತಿಂದು ಮುಗುಶಿ ಆತು.

ಮಾಣಿಯ ಬೊಬ್ಬೆ ಕಮ್ಮಿ ಅಪ್ಪಲೆ ಬೇಗಿಂದ ಏಪುಳು ತೆಗದೂ ಕೊಟ್ಟತ್ತು ಆ ಅಬ್ಬೆ. ಅಲ್ಲದ್ದೆ ಬಾಯಿಮುಚ್ಚೆಕ್ಕೆ ಅವ°!
ಕೇಪುಳುಹಣ್ಣಿನ ಆಕಾರದ್ದು, ಅದೇ ಬಣ್ಣದ್ದು, ಆದರೆ ಚೆಂಡಿನಷ್ಟು ದೊಡ್ಡ – ಕೆಂಪು ಏಪುಳು ಕಂಡಪ್ಪದ್ದೆ, ಕೈಲಿಡೀ ಹಿಡ್ಕೊಂಡು ತಿಂಬಲೆ ಸುರುಮಾಡಿದ° ಆ ಮಾಣಿ.
~

ಮತ್ತೆ ರಜ್ಜ ನೆಡದರೆ ಮಾಷ್ಟ್ರುಮಾವನ ಮನೆಯೇ; ಅಲ್ಲಿಗೆ ಎತ್ತುವನ್ನಾರವೂ ನಮ್ಮ ತಲೆಲಿ ಇದೇ ಓಡಿಗೊಂಡಿತ್ತು.
ಆ ಮಾಣಿಗೆ ಕೇಪುಳುಹಣ್ಣು ತಿಂಬಲೆ ಅವನ ಅಮ್ಮ ಬಿಟ್ಟತ್ತಿಲ್ಲೆ. ಸಣ್ಣ ಇಪ್ಪಗ ನಾವು ತಿಂದುಗೊಂಡಿದ್ದ ಹಣ್ಣುಗೊ ನೆಂಪಾತು ಒಂದರಿ.
ಶಾಲೆಂದ ಮನಗೆತ್ತುವ ದಾರಿಲಿ ಹಣ್ಣಿನೆ ಗೆಡುಗೊ ಎಲ್ಲೆಲ್ಲಿ ಇದ್ದೋ –ಎಲ್ಲ ಗುರ್ತ ಮಡಿಕ್ಕೊಂಡು, ಆಯಾ ಸಮೆಯದ ಹಣ್ಣುಗೊ ನೆಂಪು ಮಡೂಗಿ ತಿಂದುಗೊಂಡಿದ್ದತ್ತು.

ತಿಂಬದು ಹೇದರೆ ಹೇಂಗೆ? ಅನುಭವಿಸಿ ತಿಂಬದು. ಮನಗೆತ್ತುವಗ ಅಮ್ಮಂಗೆ – ಇಂದು ಇಂತಾ ಹಣ್ಣನ್ನೇ ತಿಂದಿದ ಹೇದು ಗೊಂತಕ್ಕು, ನಮ್ಮಂದ ಮದಲು ಅಂಗಿಚಡ್ಡಿಯೇ ಹೇಳುಗು! ಹು!
ಇದೆಲ್ಲ ಈಗಾಣ ಮಕ್ಕೊಗೆ ಅರಡಿಗೊ! ಟೀಚರು ಬೈಗು – ಕ್ಲೀನು ಇಲ್ಲೆ ಹೇದು!!
~

ಕೇಪುಳು ಮಾಂತ್ರ ಅಲ್ಲದ್ದೆ, ಅದರೊಟ್ಟಿಂಗೆ ಸುಮಾರು ಹಣ್ಣುಗೊ ಬಾಲ್ಯಕಾಲಲ್ಲಿ ತಿಂದಿದು.
(ಕೆಲವೆಲ್ಲ ನೆಂಪುಮಾಡಿ ಇಲ್ಲಿ ಪಟ್ಟಿಮಾಡಿದ್ದೆ, ಬಿಟ್ಟುಹೋದ್ದಿದ್ದರೆ ನಿಂಗೊಗೆ ನೆಂಪಾದರೆ ತಿಳಿಶಿಕ್ಕಿ, ಆತೋ?)

 • ಕೇಪುಳು ಹಣ್ಣು:
  ಕಾಡಿಲಿರ್ತ ಕಾಟುಕಿಸ್ಕಾರ ದುರ್ಗೆಗೆ ಹೇಂಗೆ ವಿಶೇಷವೋ, ಅದರ್ಲಿ ಆವುತ್ತ ಹಣ್ಣು ಮಕ್ಕೊಗೂ ವಿಶೇಷವೇ!
  ಕೇಪುಳೆಹಣ್ಣು ತಿಂತ ಸರಿಯಾದ ಕ್ರಮ ಹೇಂಗೆ? ಅದರ ಮಕ್ಕಳತ್ರೇ ಕೇಳೇಕು – ಕೇಪುಳೆ ಹಣ್ಣಿನ ಗುಳ ತಿಂದು, ಒಳುದ ಬಿತ್ತಿನ ಹಲ್ಲಿಲಿ ಕಚ್ಚಿ ಒಡದು – ಅದರೊಳ ಇಪ್ಪ ಚಮ್ಚದ ಹಾಂಗಿರ್ತ ಬೆಳೀ ಆಕೃತಿಯ ತೆಗದು ಚೆಂಙಾಯಿಗೊಕ್ಕೆ ತೋರುಸುದು! ಚಮ್ಚ ತೆಗವಲೆಡಿಯದ್ದೋನು ಬೂಸು – ಹೇದು ಲೆಕ್ಕ!
 • ಚೂರಿ :
  ಮೈಲಿಡೀ ಮುಳ್ಳು ತುಂಬಿದ ಸೆಸಿಯ ಬಗ್ಗುಸಿ, ಪಳಗುಸಿರೆ ಅದರ್ಲಿ ಬಿಟ್ಟ ಕರಿಕರಿ ಹಣ್ಣು ಸಿಕ್ಕುಗು. ಹುಳಿ, ಸೀವಿನ ಒಟ್ಟಿಂಗೆ ಅದರದ್ದೇ ಆದ ಪರಿಮ್ಮಳ. ಅದುವೇ ಚೂರಿಹಣ್ಣಿನ ರುಚಿ.
 • ಕಾರೆ:
  ಕಾರೆಲಿ ಎರಡು ಜಾತಿ ಇದ್ದು, ನಾವು ತಿಂಬಲೆ ಸಣ್ಣಜಾತಿ ಆಯೇಕು, “ಮೂಡುಕಾರೆ” ಹೇಳುದದರ. ದೊಡ್ಡಜಾತಿ ಕಾರೆಕಾಯಿ – ವಿಷಯುಕ್ತ. ಸಾರಡಿತೋಡಿಲಿ ಮೀನಿಂಗೆ ಕಡುಹಾಕಲೆ ಸುಂದರ° ಉಪಯೋಗುಸುಗು.
 • ಜೇಡೆಹಣ್ಣು:
  ಬದಿಯೆಡ್ಕ ಆಸುಪಾಸಿನ ಪಾರೆಗುಡ್ಡೆಲಿ, ಕಲ್ಲಿಲಿ ಬೆಳೆತ್ತ ಮುಳ್ಳಿನ ಪೊದೆಲುಸೆಸಿ. ಆ ಸೆಸಿಯ ಎಡಕ್ಕಿಲಿ ಮಾಲೆಮಾಲೆ ಇಕ್ಕು ಈ ಜೇಡೆ ಹಣ್ಣು. ಒಳ್ಳೆತ ಸೀವು. ಮೂಡ್ಳಾಗಿ ಇದು ಕಾಂಬಲೆ ಸಿಕ್ಕ ಅಡ, ಮಾಷ್ಟ್ರುಮಾವ° ಹೇಳುಗು.
 • ಕೊಟ್ಟೆಮುಳ್ಳು:
  ಬೆಳೀ ಬಣ್ಣದ ಸೀವು ಹಣ್ಣು ತಿಂಬಲೆ ಬಲುರುಚಿ. ಶಾಲಗೆ ಹೋಪಗ ಬಪ್ಪಗ ಇದೊಂದು ತಿನ್ನದ್ದರೆ ಆಗಲೇ ಆಗ.
 • ಚಾಕೊಟೆ:
  ಮುಳ್ಳುಮುಳ್ಳು ಉಂಡ್ಳಕಾಳಿನಷ್ಟಕೆ ಉಂಡೆಯ ಒಳ ಪಿಚಿಪಿಚಿ ಹಣ್ಣು – ಹುಳಿಪಿಂಡ,
  ಆದರೂ ತಿನ್ನದ್ದೆ ಕಳಿಯ ಮಕ್ಕೊಗೆ.  ಜಾಸ್ತಿ ತಿಂದರೆ ಹೊಟ್ಟೆಬೇನೆ ಏಳುಗಡ. ಉಮ್ಮ, ಒಪ್ಪಣ್ಣಂಗೆ ಹಾಂಗೆಂತೂ ಆಯಿದಿಲ್ಲೆ.
 • ಅಬ್ಳುಕ° :
  ವಿಚಿತ್ರ ಹೆಸರಿನ ಈ ಸೆಸಿಗೆ ಮುಳ್ಳುಸಂಪಗೆ ಹೇಳಿಯೂ ಹೇಳ್ತವವಡ. ಈ ಹಣ್ಣು ಅದರ “ಒಗರು” ಗುಣಕ್ಕಾಗಿಯೇ ಪ್ರಸಿದ್ಧ! ಆಹಾ – ಎಂತಾ ರುಚಿ!
 • ಮಡಕ್ಕೆ ಹಣ್ಣು:
  ಅಡಕ್ಕೆ ಹಣ್ಣಿನ ಹಾಂಗೇ ಇಪ್ಪ ಇನ್ನೊಂದು ಹಣ್ಣು – ಮಡಕ್ಕೆ ಹಣ್ಣು. ಸೀವುಸೀವಾಗಿ ಒಳ್ಳೆ ರುಚಿ ಅಕ್ಕು ಮಕ್ಕಳ ನಾಲಗ್ಗೆ.
  ಇದೇ ನಮುನೆ ಕಾಂಬಲೆ ಒಂದು ವಿಷದ ಹಣ್ಣು ಇದ್ದಾಡ –ಮದಲಿಂಗೆ ಈ ಹಣ್ಣು ಹೇಳಿ ಗ್ರೇಶಿ ಆಚದರ ತಿಂದು ಮಕ್ಕೊ ಕೆಲವು ಹೋಯಿದವಡ.
 • ಶಾಂತಿಬೊಂಡು:
  ಶಾಂತಿಕಾಯಿ ಗೊಂತಿಲ್ಲೆಯೋ?
  ಕೈಕ್ಕೆ ಚೋಲಿಯ ಒಳ ಇಪ್ಪ ಗಟ್ಟಿ ಕರಟವ ಗುದ್ದಿರೆ ಒಳ ನೆಲಕಡ್ಳೆಯ ಹಾಂಗಿರ್ತ ಬೊಂಡು ಸಿಕ್ಕುಗು.
  ಹೆಚ್ಚು ತಿಂದರೆ ಪಿತ್ಥ ಕೆದರುಗಡ, ಅಣಿಲೆಡಾಗುಟ್ರು ಬೈಗು. ಉಮ್ಮ! ನವಗೆ ಅಂದಾಜಿ ಆಯಿದಿಲ್ಲೆ.
 • ನೆಲ್ಲಿಕಾಯಿ:
  ಹುಳಿ!! ಗ್ರೇಶಿರೇ ಹುಳಿ ಎಳಗಿ ಬಾಯಿಲಿ ನೀರು ಬಕ್ಕು. ಆದರೂ ತಿನ್ನದ್ದೆ ಕಳಿಯ!
 • ಸರಳಿ ಹಣ್ಣು:
  ಚಿನ್ನದ ಬಣ್ಣದ ಈ ಹಣ್ಣಿಲಿಪ್ಪ ಹುಳಿಮಿಶ್ರಿತ ಸೀವು ಅದರ ರುಚಿಯ ಹೆಚ್ಚಿಸಿರ್ತು! ಮಳೆಬಂದ ಮರದಿನ ನೀರಹನಿ ನಿಂದಿಪ್ಪದು ಕಂಡ್ರೆ ಕೆಮರದ ಅಣ್ಣಂದ್ರಿಂಗೆ ಕೊದಿ ಎಳಗ್ಗು – ಪಟತೆಗವಲೆ!
 • ಕುಂಟಾಂಗಿಲ:
  ಬಟ್ಯ ಇದರ ಕುಂಟಲ ಹೇಳುಗು, ಕನ್ನಡಲ್ಲಿ ಕುಂಟುನೇರಳೆ ಹೇಳಿಯೂ ಹೇಳ್ತವಡ. ಗುಡ್ಡೆತಲೆಲಿ ಧಾರಾಳ ಮರಂಗೊ ಇದ್ದು. ಕರಿಕರಿ ಹಣ್ಣಿನ ತಿಂಬಲೆ ಹೆರಟ್ರೆ ಕೈ-ಬಾಯಿ ಪೂರ ನೀಲಿ!
  ಇದರ ತಿಂದೂ ತಿಂದಿದಿಲ್ಲೆ ಹೇದು ಲೊಟ್ಟೆ ಹೇಳೇಕಾರೆ ಅದು ಬೋಚಬಾವನೇ ಆಗಿರೆಕ್ಕಷ್ಟೆ.
 • ನೇರಳೆ ಹಣ್ಣು:
  ಕುಂಟಾಂಗಿಲ ಹಣ್ಣಿನ ದೊಡ್ಡಬ್ಬೆ ಮಗ°. ದೊಡ್ಡದೊಡ್ಡ ಹಣ್ಣುಗೊ. ಇದುದೇ ಹಾಂಗೇ, ತಿಂಬಲೆ ಸುರುಮಾಡ್ರೆ ತಲೆಒರೆಂಗೆ ನೇರಳೆ ಬಣ್ಣ ಹಿಡಿಯದ್ದೆ ಇರ. ಚಡ್ಡಿ ಕಿಸೆ, ಬೆಳಿಅಂಗಿ – ಎಲ್ಲವೂ ಉಜಾಲದ ಬಣ್ಣ!

  ರುಚಿ ಯೇವದು ಜಾಸ್ತಿ? (ಪಟ: ಇಂಟರ್ನೆಟ್ಟಿಂದ)

 • ಕರಗಳ ಕಾಯಿ:
  ಮದಲಿಂಗೆ ಬೈಲ ಗೆದ್ದೆಕರೆಗಳಲ್ಲಿ ಧಾರಾಳ ಇಕ್ಕಡ ಈ ಕರಗಳ ಕಾಯಿ.
  ಕಾಂಬಲೆ ತೊಂಡೆಕಾಯಿಯ ನಮುನೆ, ತಿಂಬಲೆ ಸೌತ್ತೆ ಮೆಡಿ ತಿಂದಾಂಗೆ ಆವುತ್ತು. ಕಂಡ್ರೆ ಎರಡು ಮೆಡಿ ಕೊಯಿದು ಕರುಕುರು ತಿಂದೊಂಡು ಮನಗೆತ್ತುಗು ಮಕ್ಕೊ!
 • ಚವಿ ಹಣ್ಣು:
  ಹುಳಿರುಚಿ ಆದರೂ, ರುಚಿಯ ಕೊದಿಬರುಸುವ ಇನ್ನೊಂದು ಹಣ್ಣು ಈ ಚವಿ.
  ಜಾಲಕರೆಲಿ, ತೋಟದೊಳ ಒಂದೊಂದಾರೂ ಇರದ್ದೆ ಇರ ಮನೆಗಳಲ್ಲಿ. ಉದಾಸನ ಅಪ್ಪಗ ಒಂದರಿ ತೋಟಕ್ಕೆ ಹೋಪಗ ಹಣ್ಣಾದ ಒಂದು ಗೊಂಚಲು ಮುರುದು ತಿಂಬಲೆ ಸುರುಮಾಡುಗು. ಬಿತ್ತುಬಿತ್ತಟೆ ಗುಳ ತಿಂಬಲೆ ಬಲು ರುಚಿ.
 • ಕಂಬುಳಿಹಣ್ಣು:
  ಮೈ ಇಡೀ ಕಜ್ಜುಕಜ್ಜು, ಹುಳಿಪ್ಪಟೆ ರುಚಿ. ಕನ್ನಡಲ್ಲಿ ಹಿಪ್ಪುನೇರಳೆ ಹೇಳಿಯೂ ಹೇಳ್ತವಡ.
  ಈಗೀಗ ರೇಷ್ಮೆ ಸಾಂಕಲೆ ಇದರದ್ದೇ ಎಲೆಗೊ ಪಷ್ಟಾವುತ್ತು ಹೇದು ಈ ಕಾಟು ಸೆಸಿಯ ಹೈಬ್ರೀಡು ಮಾಡಿ ಬೆಳೆಶುತ್ತವಡ.
 • ಬೀಂಪುಳಿ:
  ಹುಳಿ, ಹುಳಿಯನ್ನೇ ತಿಂತೋರಿಂಗೆ ಇಷ್ಟ ಅಪ್ಪ ಇನ್ನೊಂದು ಹಣ್ಣು.
  ನೀರುನೀರಟೆ ಈ ಹಣ್ಣಿನ ಕರುಕುರುನೆ ತಿಂಬ ಶಬ್ದವೂ ಎದುರಾಣವಂಗೆ ಕೇಳುಗು – ಆದರೂ ತಿನ್ನದ್ದೆ ಬಿಡವು ಮಕ್ಕೊ.
 • ಓಟೆಹುಳಿ:
  ಹುಣಸೆಹುಳಿ ಹೇದು ಕನ್ನಡಲ್ಲಿ ಹೆಸರು. ಎಲ್ಯಾರು ಮರ ಇದ್ದರೆ ಕಲ್ಲಿಡ್ಕಿಯೇ ಅದರ ಕೊಂಬುಗಳ ಉದುರ್ಸುಗು ಮಕ್ಕೊ.
  ಒಂದೊಂದರ ಚೀಪಿಂಡು ಹೋದರೆ ಶಾಲೆಂದ ಮನೆ ಒರೆಂಗೆ ಸಾಕಕ್ಕು. ಕದ್ರಿ ವಾಲಗ ಉರುಗುವಗ ಎದುರಾಣೋನು ಈ ಓಟೆಹುಳಿ ಚೀಪಲೆ ಸುರುಮಾಡಿರೆ ವಾಲಗ ಮಡುಸಿ ಏಳೆಕ್ಕಟ್ಟೆ ಅದು – ಆ ನಮುನೆ ಹುಳಿಲಿ, ಬಾಯಿ ನೀರು ಬಂದುಬಿಡ್ತು!!
 • ಮಾವಿನ ಮೆಡಿ:
  ಮಾವಿನ ಹೂಗುಹೋಪ ಸಮೆಯಲ್ಲಿ ಮತ್ತೆ ಕೇಳುದೇ ಬೇಡ, ಯೇವ ಮರದ ಯೇವ ಮೆಡಿ ಆದರೂ ಆವುತ್ತು.
  ಬಾಡಟೆ, ಹಿಸ್ಕಟೆ ಮೆಡಿ ಸಿಕ್ಕಿರೂ ಅಕ್ಕು. ಆರ ಮರಲ್ಲಿದ್ದರೂ ಅಕ್ಕು – ಕಲ್ಲಿಡ್ಕಿ ಕೊಯಿದು ತಿಂದೊಂಡು ಹೋಕು.
 • ಪೇರಳೆಹಣ್ಣು:
  ಸೀಬೆಕಾಯಿ ಹೇಳ್ತ ಕನ್ನಡ ಹೆಸರಿನ ಈ ಹಣ್ಣು, ಬಾವಲಿ ಬಿಟ್ರೆ ಮಾಂತ್ರ ನವಗೆ ಸಿಕ್ಕುದು. ಶಾಲೆದಾರಿ ಕರೇಲಿ ಈ ಸೆಸಿ ಇದ್ದರೆ ಬಾವಲಿಗೂ ಸಿಕ್ಕ!! ಹಣ್ಣು ಬಾವಲಿ ಮಡುಗದ್ದ ಕಾರಣ ಹೆಚ್ಚಾಗಿ ಕಾಯಿಯೇ ತಿಂದು ಮುಗಿತ್ತು. 😉

(ಯೇವದು ಬಾಕಿ ಆತಪ್ಪಾ, ನೆಂಪಾವುತ್ತಿಲ್ಲೆ!!)

~

ಬೈಲಿನ ಮಕ್ಕೊ ಸಣ್ಣ ಇಪ್ಪಗ ಈ ನಮುನೆ ಎಷ್ಟೆಲ್ಲ ತಿಂದುಗೊಂಡಿತ್ತವು.
ಈಗಾಣೋರಿಂಗೆ ಹೀಂಗಿರ್ತದರ ರುಚಿಯೇ ಕಂಡು ಗೊಂತಿರದೋ ಹೇದು ಆವುತ್ತು ಒಪ್ಪಣ್ಣಂಗೆ.
ಈಗ ಇದೇವದೂ ರುಚಿ ಇಲ್ಲದ್ದೆ, ಪೇಟೇಹಣ್ಣುಗೊ ಮಾಂತ್ರ ತಿಂತದು ಹೇಳಿ ಆಗಿಬಿಟ್ಟತ್ತೋ!
ಇದ್ದರೂ ಪೇಟೆಯ ಏಪುಳು, ಮುಸುಂಬಿ, ಚಿತ್ತುಪುಳಿ, ಹೀಂಗಿರ್ಸರನ್ನೇ ತಂದು ಕೊರದಾಯೆಕ್ಕು ತಿನ್ನೇಕಾರೆ.
ಒಂದೊಂದರಿ ಈ ಹಳೆಹಣ್ಣುಗಳ ಗ್ರೇಶಿ ಚೆ –ಅದಕ್ಕೆ ಗಿರಾಕಿಯೇ ಇಲ್ಲೇನ್ನೇಪ್ಪಾ – ಹೇದು ಬೇಜಾರಪ್ಪಲಿದ್ದು,.

~

ಅನ್ನಪ್ರಾಶನದ ದಿನವೇ ಈ ತಿಂತ ಬಗೆ ತಲಗೆ ಹೋದ್ಸಕ್ಕೆ ಒಪ್ಪಣ್ಣಂಗೆ ಆಶ್ಚರ್ಯ ಆತು!
ಮಾಷ್ಟ್ರುಮಾವನ ಮನಗೆ ಎತ್ತಿದ ಮತ್ತೆ ಈ ಶುದ್ದಿ ಎಂತಕೆ ಅಲ್ಲದೋ!

~

ಒಂದೊಪ್ಪ: ಪೈಸೆ ಕೊಟ್ಟು ತಪ್ಪದಾದರೆ ಯೇಪುಳೂ ರುಚಿಯೇ, ಕೇಪುಳೂ ರುಚಿಯೇ! ಅಲ್ಲದೋ ಭಾವಯ್ಯ?!

ಒಪ್ಪಣ್ಣ

   

You may also like...

78 Responses

 1. ರಘು ಮುಳಿಯ says:

  ಒಪ್ಪಣ್ಣಾ..ಜೀವನದ ಸುಮಾರು ವರುಷ ಹಿ೦ದ೦ಗೆ ಹೋತೊ೦ದರಿ.
  ಆದರೆ,ಈಗಳೂ ಇದೆಲ್ಲಾ ಸಿಕ್ಕುತ್ತೋ ಹೇಳಿ ಗುಡ್ಡೆಲಿ ತಿರುಗುವ ಅಭ್ಯಾಸ ಬಿಟ್ಟಿದಿಲ್ಲೆ ! ಈಗ ಬೀಜದ ಹಣ್ಣು ಅಪ್ಪ ಸಮಯ ಇದಾ.ರಜಾ ಕಲ್ಲುಪ್ಪು ಒಟ್ಟಿ೦ಗೆ ಕಾಗದಲ್ಲಿ ಕಟ್ಟಿಗೊ೦ಡೇ ಹೆರಡೆಕ್ಕು ಮಿನಿಯಾ.

  • ಅದಾ, ಬೀಜದಣ್ಣು ತುಂಡುಸಿ ಕಲ್ಲುಪ್ಪು ಸೇರ್ಸಿ ತಿಂತದು ಒಳ್ಳೆ ಚೇರ್ಚೆ.
   ಆದರೆ ಹಾಂಗೇ ತಿಂಬದೂ ಇನ್ನೊಂದು ಕುಶಿ.
   ಅಕೇರಿಗೆ ಹಲ್ಲೆಡೆಲಿ ಹಣ್ಣಿನ ನಾರು ನಿಂದು – ಎರಡು ನಿಮಿಶಲ್ಲಿತಿಂದ ಹಣ್ಣು ಎರಡು ಗಂಟೆ ಉಪದ್ರ ಕೊಡ್ತು, ಅಪ್ಪೋ!

   ಪೆರ್ಲಲ್ಲಿ ಪಿಕ್ಲಾಟ ಮಾಡುವಗ ಇದುದೇ ಇದ್ದೋ ಹೇಂಗೆ? 😉

 2. ಬೊಳುಂಬು ಮಾವ says:

  ಬೊಳುಂಬಿಂದ ನೀರ್ಚಾಲಿಂಗೆ ಶಾಲೆಗೆ ಹೋಪಗ ಎಂಗೊ ಮಾಡಿದ ಕಾರ್ಬಾರೆಲ್ಲ ಒಂದರಿ ನೆಂಪಾತು. ಪೆರ್ವದ ಅಳಿಯ ಹೇಳಿದ ಹಾಂಗೆ, ಕಂಬುಳಿ ಹಣ್ಣು ಬಿಟ್ಟು ಬಾಕಿ ಎಲ್ಲ ಹಣ್ಣುಗಳ ಗುರ್ತ ಇದ್ದು. ಕಾಡು ಹಣ್ಣುಗಳ ಬಗೆಲಿ ಸಮಗ್ರ ಮಾಹಿತಿ ಕೊಟ್ಟತ್ತು ಲೇಖನ. ಅನುಪಮ ಹೇಳಿದ ಪೂಚೆ ಹಣ್ಣುದೆ ತಿಂಬಲೆ ಭಾರಿ ರುಚಿ. ಅಜ್ಜಿ ಪುಟ್ಳದ ಹಳದಿ ಹಣ್ಣಿನ ನಾಲಗೆಲಿ ಹಲ್ಲಿನ ಎಡೆಂಗೆ ಮಡಗಿ ಅರಚ್ಚುವಗ ಆವ್ತ ಅನುಭವವೇ ವರ್ಣನಾತೀತ. ಅಜ್ಜಿ ಪುಟ್ಳ ಕಾಯಿಯ ಬೆರಳಿಲ್ಲಿ ಒತ್ತಿ ಒತ್ತಿ ಅದರ ಒಳಾಣ ನೀರಿನ ಹೆರ ತೆಗದು, ಸೀಡ್ ಲೆಸ್ ದ್ರಾಕ್ಷೆ ಹಾಂಗೆ ಮಾಡುವ ಪ್ರಕ್ರಿಯೆ ಎಲ್ಲೋರಿಂಗು ಗೊಂತಿಕ್ಕು. ಗೇರು ಬೀಜದ ಹಣ್ಣಿನ ಕಲೆ ಅಂಗಿಲಿ ಸಾಮಾನ್ಯ. ಮತ್ತೆ ಹುಣಸೆ ಹುಳಿ ಬೀಜ, ಹೊರುದ್ದದು ಏವತ್ತುದೆ ಕಂಪಾಸು ಪೆಟ್ಟಿಗೆ ಒಳ ಇದ್ದ್ಕು. ಕೂಸುಗವಕ್ಕೆ ಇದು ಹೇಳಿರೆ ಭಾರೀ ಪ್ರೀತಿ.
  ಶಾಂತಿಕಾಯಿಯ ಒಳಾಣ ಬೊಂಡು, ಈಗಾಣ ಮಕ್ಕೊಗೆ ಗೊಂತಿಪ್ಪ ಬಾದಾಮಿ,ಪಿಸ್ತಕ್ಕಿಂತಲೂ ರುಚಿ. ಕೆಲವೊಂದರಿ ಶಾಂತಿಕಾಯಿ, ಒಣಗಿ ಹೊಡಿಯಾದ ಸಗಣಲ್ಲಿಯೂ ಕಂಡುಬಕ್ಕು, ಅದನ್ನುದೆ ಮಕ್ಕೊ ಬಿಡವು !!

  ಹಿಂದಾಣ ದಿನಂಗಳ ಮತ್ತೆ ನೆಂಪು ಮಾಡಿದೆ ಒಪ್ಪಣ್ಣ. ಒಪ್ಪಣ್ಣಾ, ಒಪ್ಪ ಲೇಖನಕ್ಕೆ ಹೀಂಗೊಂದು ಪ್ರೀತಿಯ ಒಪ್ಪ.

  • ಬೊಳುಂಬುಮಾವಾ,
   { ನಾಲಗೆಲಿ ಹಲ್ಲಿನ ಎಡೆಂಗೆ ಮಡಗಿ ಅರಚ್ಚುವಗ ಆವ್ತ ಅನುಭವ}
   ಆಹಾ,ಎಷ್ಟು ಚೆಂದ ಒಪ್ಪ ಬರದ್ದಿ ನಿಂಗೊ! ಪಷ್ಟಾಯಿದು!! 🙂
   ಗೊಂತಿಲ್ಲದ್ದೋನಿಂಗೆ – ಈಗ ಹೋಗಿ ತಿಂಬೊ – ಹೇದು ಅನುಸುಗು ಒಂದರಿ! 😉

   ಶಾಂತಿಕಾಯಿಯ ರುಚಿ ಹಿಡುದೋರು – ಬಾಗ್ಯಕ್ಕ ಹೇಳಿದಾಂಗೆ- ಕೈ ಅರಚ್ಚುವನ್ನಾರ ಬಿಡವು! 😉

 3. ಒಪ್ಪಣ್ಣೋ….
  ಏಪುಲು ಹಣ್ಣುದೇ ಕೇಪುಲು ಹಣ್ಣುದೇ ಒಟ್ಟಿಂಗೆ ತೋರಿಸಿ “ನಿನಗೆ ಯಾವುದು ಬೇಕು” ಹೇಳಿ ಕೇಳಿದರೆ ಕೇಪುಲು ಹಣ್ಣಿಂಗೇ ಮೊದಲು ಕೈ ಹೋಕ್ಕಷ್ಟೆ ಅಲ್ಲದಾ 🙂 ಲೇಖನ ತುಂಬಾ ಒಪ್ಪ ಆಯಿದು.

 4. ನೀರ್ಕಜೆ ಮಹೇಶ says:

  {ಏಪುಲು ಹಣ್ಣುದೇ ಕೇಪುಲು ಹಣ್ಣುದೇ ಒಟ್ಟಿಂಗೆ ತೋರಿಸಿ “ನಿನಗೆ ಯಾವುದು ಬೇಕು” ಹೇಳಿ ಕೇಳಿದರೆ ಕೇಪುಲು ಹಣ್ಣಿಂಗೇ ಮೊದಲು ಕೈ ಹೋಕ್ಕಷ್ಟೆ ಅಲ್ಲದಾ} Depends. ಮಾರಾಟಕ್ಕಾರೆ ಕೇಪುಳು, ಧರ್ಮಕ್ಕಾರೆ ಏಪುಲು ಮೇಲೆ ಕೈ ಹೋಕು 🙂

 5. ನೀರ್ಕಜೆ ಮಹೇಶ says:

  ಜಾರಿಗೆ ಹಣ್ಣು, ರೆಂಜೆ ಹಣ್ಣು ಬಿಟ್ಟು ಹೋಯಿದಾ ಒಪ್ಪಣ್ಣ? ಅಲ್ಲ ಅದಕ್ಕೆ ಬೇರೆ ಎಂತಾರು ಹೆಸರು ಕೊಟ್ಟಿದೆಯೋ?? 🙂

 6. ನೀರ್ಕಜೆ ಮಹೇಶ says:

  ಎಂಗೊ ಶಾಲೆಗೆ ಹೋಪಗ ಬೀಜದ ಹಣ್ಣು, ಕುಂಟಾಲ, ರೆಂಜೆ, ಚೂರಿ ಮುಳ್ಳು ಮತ್ತೆ ಚೀಮುಳ್ಳು (ಇದೆರಡು ಬೇರೆ ಬೇರೆ), ಒಂದೊಂದಾರಿ ಜಾರಿಗೆ ಮತ್ತೆ ಅಬ್ಳುಂಕ… ಇವಿಷ್ಟು ಹೊಟ್ಟೆಗೆ ಇಳುಕ್ಕೊಂಡಿತ್ತು. ಒಳುದ ಹಣ್ಣುಗೊ ಎಂಗಳ ರೂಟಿಲಿ ಇತ್ತಿದವಿಲ್ಲೆ ಹೇಳಿ ಕಾಣುತ್ತು 🙂

  • ಬೀಜದ ಹಣ್ಣು ತಿಂದು ಅಂಗಿ ಕಲೆ ಆದ್ಸು ಈಗಳೂ ಹೋಯಿದಿಲ್ಲೇಡ, ಅಪ್ಪೋ?
   ಮನ್ನೆ ಚಿಕ್ಕಮ್ಮ ಪರಂಚಿಗೊಂಡಿತ್ತವು! 😉

   { ಬೇರೆ ಎಂತಾರು ಹೆಸರು ಕೊಟ್ಟಿದೆಯೋ?? }
   ಹ ಹ, ಇಲ್ಲೆಪ್ಪ. ಅದು ಬಿಟ್ಟು ಹೋದ್ಸರ ಬೈಲಿನೋರು ಒಪ್ಪಲ್ಲಿ ನೆಂಪುಮಾಡಿಕೊಟ್ಟಿದವಿದಾ.

   { ಎಂಗಳ ರೂಟಿಲಿ ಇತ್ತಿದವಿಲ್ಲೆ }
   ಅಪ್ಪು, ಹೀಂಗಿರ್ಸ ಹಣ್ಣಿಂಗೆ ಬೇಕಾಗಿ ನಿಂಗೊ ಬೇಲಿ ಹಾರೆಯಿ – ಹೇದು ಒಪ್ಪಣ್ಣಂಗೂ ಅಂದಾಜಿದ್ದು! 😉

 7. ಅನುಶ್ರೀ ಬಂಡಾಡಿ says:

  ಶುದ್ದಿ ತುಂಬ ಲಾಯ್ಕಾಯ್ದು ಒಪ್ಪಣ್ಣ. ಸಣ್ಣದಿಪ್ಪಗ ಶಾಲೆಗೆ ಹೋಪಗ, ಹೀಂಗಿರ್ತ ಹಣ್ಣುಗಳ ತಿಂಬಲೆ ಬೇಕಾಗಿ ಎಲ್ಲೆಲ್ಲೊ ಗುಡ್ಡೆ ಸುತ್ತಿಗೊಂಡು ಹೋಗ್ಯೊಂಡಿದ್ದದೆಲ್ಲ ನೆಂಪಾತು. ಹುಳಿ ಅಪ್ಪ ಸಮಯಲ್ಲಿ ಹುಳಿಮರ ಸಿಕ್ಕುವ ಒಳದಾರಿಲಾಗಿ ಹೋಗಿ ಹುಳಿ ಹೆರ್ಕಿಗೊಂಡಿತಿದೆಯ. ಕಾಯಿ ಹುಳಿಯೂ ರುಚಿಯೇ, ಹಣ್ಣು ಹುಳಿಯೂ ರುಚಿಯೇ. ಅದರ ಗ್ರೇಶುವಗಳೇ ಬಾಯಿಲಿ ನೀರು ಬತ್ತೀಗ. ಮುಂದೆ ಒಂದು ದಿನ ಮಕ್ಕೊಗೆಲ್ಲ ಹುಳಿ ಅಂಗಡಿಲಿ ಸಿಕ್ಕುದು ಹೇಳಿ ಮಾಂತ್ರ ಗೊಂತಿಕ್ಕಷ್ಟೆಯೋ ಏನೊ.
  ನವಗೆಲ್ಲ ಈ ಹಣ್ಣುಗಳ ಶುದ್ದಿ ಕೇಳುವಾಗ ಬಾಲ್ಯದ ನೆಂಪಾವುತ್ತು. ದಾರಿಲಿಪ್ಪ ಕಾರೆಕಾಯಿ, ಚೂರಿಮುಳ್ಳು, ಅಬ್ಳುಕ, ಕುಂಟಾಗಿಲ ಇತ್ಯಾದಿ ಎಲ್ಲಾ ಸೆಸಿಗೊಕ್ಕೂ ನಮ್ಮ ಗುರ್ತ ಇದ್ದೇ ಇಕ್ಕು ಆವ್ಗ. ಈಗಾಣ ಮಕ್ಕೊಗೆ ಅದರ ಹೆಸರು ಕೇಳಿಯೂ ಗೊಂತಿಲ್ಲೆ ಹೆಚ್ಚಿನವಕ್ಕೆ.
  ಮತ್ತೆ ಈಗ ಅಪ್ಪಾಮ್ಮ ಹಾಂಗಿಪ್ಪ ದಾರಿಕರೆ ಹಣ್ಣುಗಳ ತಿಂಬದು ಬೇಡ ಹೇಳುದಕ್ಕೆ ಇನ್ನೊಂದು ಕಾರಣವೂ ಇದ್ದು. ಈಗ ಬರೇ ಕಾಲುದಾರಿ ಹೇಳಿ ಇಪ್ಪದು ಕಮ್ಮಿಯೇ ಅಲ್ದ. ಎಲ್ಲವೂ ವಾಹನ ಸಂಚಾರ ಇಪ್ಪಂಥ ದಾರಿಗಳೇ. ದಾರಿ ಇಪ್ಪ ಕಾರಣ ವಾಹನಂಗಳೂ ಧಾರಾಳ. ಒಂದು ವಾಹನ ಬಂದು ಭರಾನೆ ಧೂಳು ಹಾರ್ಸಿಕ್ಕಿ ಹೋದರೆ ಕೇಪುಳು ಕಾಯಿಯೂ ಕೆಂಪಾವುತ್ತು! ಮೊದಲು ಹಾಂಗೆ ವಾಹನ ಸಂಚಾರ ಎಲ್ಲ ಕಮ್ಮಿ ಇದಾ. ಇದು ಎನ್ನದೊಂದು ಸಣ್ಣ ಊಹೆ ಅಷ್ಟೆ . ಮನೆಲಿ ಕಸವು ಉಡುಗುವಾಗ ಬಪ್ಪ ಧೂಳಿಂಗೇ ಆ..ಕ್ಷೀ ಮಾಡುವ ಮಕ್ಕೊಗೆ ಆ ದಾರಿಕರೆ ಧೂಳು ಹೇಂಗೂ ರೋಗ ತಕ್ಕು!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *