ಎಷ್ಟೇ ವ್ಯವಧಾನ ಇದ್ದರೂ, ಅಷ್ಟಾವಧಾನ ಕಷ್ಟವೇ…!

ಆರ್ದ್ರೆ ಮಳೆಯ ಹಾಂಗೆ – ಒಂದರ ಮೇಗೆ ಒಂದು ಜೆಂಬ್ರಂಗೊ ಸೊರಿತ್ತಾ ಇದ್ದು.
ಇನ್ನೂ ಸಮಯ ಇದ್ದು ಗ್ರೇಶಿಂಡು ಕೂದ್ದೇ ಸರಿ; ದಿನಂಗೊ ಪೆಟ್ರೋಲು ಕ್ರಯದ ಹಾಂಗೆ ಮುಂದೆ ಹೋತಪ್ಪೋ!
ಆಚಮನೆ ಪುಟ್ಟಣ್ಣನ ಮದುವೆ ಕಳುದು ಬಚ್ಚಲು ಮುಗುದ್ದಿಲ್ಲೆ. ಬೈಲಕರೆ ಮದುವೆಗೆ ಇನ್ನೂ ಒಂದು ವಾರ ಇದ್ದರೂ, ದೊಡ್ಡಜ್ಜನ ಮನೆ ಜೆಂಬ್ರ ಬಂದೇ ಬಿಟ್ಟತ್ತು!

ದೊಡ್ಡಜ್ಜನ ಮನೆ ಜೆಂಬ್ರಂಗೊ ಪೂರ ಸಾಯಿಮಂದಿರಲ್ಲೇ ಅಪ್ಪದೋ –ಆರಾರು ಕೇಳುವಷ್ಟೂ ನಿಘಂಟಾಯಿದು ಈಗ. ಈ ಸರ್ತಿಯಾಣ ಜೆಂಬ್ರವುದೇ ಸಾಯಿಮಂದಿರಲ್ಲೇ!
ಮಾರ್ಗಂದ ರಜ ಒಳ; ದೊಡ್ಡಜ್ಜನ ಮನೆ ಜಾಲಿಂದ ಗುಡ್ಡೆತಲೆಲಿಪ್ಪ ಕುಂಟಾಂಗಿಲ ಮರದ ಒರೆಂಗೆ ನೆಡದಷ್ಟು ಹೋಯೇಕು.
ಆದರೂ ಬೈಲಿಂಗೆ ಹತ್ತರೆ ಇದಾ; ಬೈಲಿನೊಳಂದ ನೆಡಕ್ಕೊಂಡು ಬತ್ತೋರಿಂಗೆ ಅನುಕ್ಕೂಲವೇ. 🙂

~

ಮನೆಜೆಂಬ್ರ ಹೇದರೆ ಯೇವತ್ತೂ ಹಾಂಗೇ – ದೊಡ್ಡಜ್ಜಂಗೆ ಪುರ್ಸೊತ್ತೇ ನಾಸ್ತಿ; ನಾಸ್ತಿ ಕಚ್ಚಿರೆ ತೊರುಸಿಗೊಂಬಲೂ ಎಡಿಯದ್ದಷ್ಟು! ಮನ್ನೆ ಆಯಿತ್ಯವಾರ ಮದುವೆ ಜೆಂಬ್ರ ಇದ್ದ ಕಾರಣ ಶೆನಿವಾರ ಇರುಳೇ ಅತ್ತಾಳದ ಬೆಂದಿಗೆ ಕೊರವಲೆ ಹೋಗಿತ್ತಿದ್ದೆಯೊ° ಅಲ್ಲದೋ – ಅಂಬಗ ಮತ್ತೊಂದರಿ ಈ ಸಂಗತಿ ನೆಂಪಾತು.

ಜೆಂಬ್ರದ ಮುನ್ನಾದಿನ ಹೇಳಿ ಸುಕ ಇಲ್ಲೆ; ಎಲ್ಲೋರುದೇ ದೊಡ್ಡಜ್ಜನತ್ರೆ ಕೇಳುವೋರೇ!!
ಬೆಂದಿಗೆ ಕೊರವಲೆ ಇನ್ನೂ ಹೊತ್ತು ಇದ್ದು; ಸೇರಿದ ನೆರೆಕರೆಯೋರ ಕೂರ್ಸಿಗೊಂಡು ಬಾಳೆಕಟ್ಟುಲೆ ಕೇಳಿಗೊಂಡವು ದೊಡ್ಡಜ್ಜ.
ಆ ಪ್ರಕಾರ ಎಂಗೊ ಬಾಳೆಕೆಲಸಲ್ಲಿ ಇದ್ದಿದ್ದೆಯೊ.
ಅಂಬಗ ಒಪ್ಪಣ್ಣಂಗೆ ಕಂಡ ಒಂದು ಸನ್ನಿವೇಶ ನೋಡಿಕ್ಕಿ:

ಆಗಳೇ ಬದಿಯೆಡ್ಕಕ್ಕೆ ಬಂದ ಬಟ್ಟಮಾವಂಗೆ ಬಸ್ಸು ಸಿಕ್ಕದ್ದಿಲ್ಲೆ ಹೇದು ದೊಡ್ಡಜ್ಜಂಗೆ ಪೋನು ಮಾಡಿದ್ದದಕ್ಕೆ ಜೀಪಿನಶಿವಣ್ಣನ ಕಳುಸಿತ್ತಿದ್ದವು. ಈಗ ಎತ್ತಿದವು. “ಏನು ಬಟ್ಟಮಾವಾ?” ಹೇದು ಎದುರುಗೊಂಡು ಮಂಟಪದ ಕರೆಲಿ ಹಸೆಲಿ ಕೂರ್ಸಿ ಮಾತಾಡುಸಿಗೊಂಡಿತ್ತಿದ್ದವು.

ಕುಂಟಾಂಗಿಲ ಭಾವಂಗೆ ಸುದರಿಕೆ ಎಡೆಲಿ ಹಲವು ಸಂಶಯಂಗೊ ಬಪ್ಪದು; ಸಂಶಯ ಬಂದಷ್ಟೂ ಸರ್ತಿ ದೊಡ್ಡಜ್ಜನ ಹತ್ತರೆ ಕೇಳಿಗೊಂಬದು. ಬಟ್ಟಮಾವನ ಹತ್ತರೆ ಮಾತಾಡಿಗೊಂಡಿಪ್ಪಗ ಕುಂಟಾಂಗಿಲಭಾವ ಬಂದು “ದೊಡ್ಡಜ್ಜಾ, ಊಟ ಆಗಿ ಬೆಂದಿಗೆ ಕೊರವದೋ, ಮದಲೇಯೋ?” ಕೇಳಿದ. ದೊಡ್ಡಜ್ಜ ಕೂದಲ್ಲಿಂದಲೇ “ಊಟ ಆಗಿ” ಹೇಳಿಕ್ಕಿ ಬಟ್ಟಮಾವನ ಹತ್ತರೆ ಮಾತುಮುಂದುವರುಸಿದವು.
ನಾಳಂಗೆ ಮೂರ್ತ ಎಷ್ಟೊತ್ತಿಂಗೆ, ಕೂಸಿನ ಕೂರ್ಸುದು ಎಷ್ಟೊತ್ತಿಂಗೆ, ಮೂರ್ತಕ್ಷಿಣೆ ಎಷ್ಟು, ಎಷ್ಟು ಕೈಗೆ ಕೊಡುದು – ಇತ್ಯಾದಿ ವಿಶಯಂಗೊ ಬಟ್ಟಮಾವನ ಹತ್ತರೆ ವಿಮರ್ಶೆ ಆಗಿಂಡಿತ್ತು.
ಅಡಿಗೆ ಉದಯಣ್ಣ ಅಷ್ಟಪ್ಪಗಳೇ ಬಂದು – ಇದೂ, ನಾಳಂಗೆ ಏರ್ಪಾಡೂ – ಹೇದು ಒಯಿವಾಟು ಮಾತಾಡ್ಲೆ ಸುರುಮಾಡಿದ. ಬಟ್ಟಮಾವನ ಹತ್ತರೆ ಮಾತಾಡಿಗೊಂಡಿದ್ದದರ ಒಂದರಿಂಗೆ ನಿಲ್ಲುಸಿಕ್ಕಿ ಪಕ್ಕನೆ ತಿರುಗಿ ಅಡಿಗೆಉದಯಣ್ಣನ ಸಂಶಯ ಪರಿಹಾರಂಗೊ ಮಾಡಿದವು.

ಅದಾದಪ್ಪದ್ದೇ, ಜೀಪಿನ ಶಿವಣ್ಣ ಹಿಂದೆಯೇ ಕಾದು ನಿಂದಿತ್ತಿದ್ದವಲ್ಲದೋ – ನಾಳಂಗೆ ಹೋಲಿಂದ ಮನಗೆ ಹೋಗಿ ಬಾಕಿ ಒಳುದೋರ ಕರಕ್ಕೊಂಡು ಬತ್ತ ಏರ್ಪಾಡು ಮಾತಾಡ್ಳೆ’ ಸುರುಮಾಡಿದವು. ಇದೆರಡೂ ಮುಗುಶಿಕ್ಕಿ ಬಟ್ಟಮಾವನ ಹತ್ತರೆ ಮಾತು ಮುಂದುವರುಸಿದವು. ಮೂರ್ತಕ್ಷಿಣೆ, ಊಟಕ್ಷಿಣೆ – ಇತ್ಯಾದಿ ಇತ್ಯಾದಿ.

ಮಾತುಕತೆ ಪೂರ್ತಿ ಮುಗುದ್ದಿಲ್ಲೆ, ಅಷ್ಟಪ್ಪದ್ದೇ – ಕೊಡೆಯಾಲದ ಕುಂಞಿಪುಳ್ಳಿ ಬಂದು ’ಅಜ್ಜಾ, ಆನು ಬಂದೇ’ ಹೇದು ಬೆಳಿಗೆಡ್ಡಕ್ಕೆ ಒಂದು ಗಟ್ಟಿ ಒಪ್ಪ ಕೊಟ್ಟ; ಪೋಕ್ರಿ. ದೊಡ್ಡಜ್ಜಂಗೂ ಮಕ್ಕಳ ಕೊಂಗಾಟ ಮಾಡುಸುದು ಕೊಶಿಯೇ ಇದಾ – “ಬಂದೆಯಾ ಪುಳ್ಳಿಯೇ…” ಹೇಳಿ ಕೆಣಕ್ಕಿದವು. ಅಜ್ಜಾ, ಎನ್ನ ಹೊಸಾ ಮೆಟ್ಟಿನಜೋಡು ತೋರ್ಸುತ್ತೆ ಬನ್ನೀ – ಹೇದು ಕೈ ಹಿಡುದು ಎಳವಲೆ ಸುರುಮಾಡಿದ°; ಮತ್ತೆ ಬತ್ತೆ ಆತಾ, ದೊಡ್ಡಜ್ಜ ಅವನ ಮಂಕಡುಸಿದವು. ಕೂದಲ್ಲಿ ಕೂದಿಕ್ಕಲೆ ಬಿಡವು ಈ ಪುಳ್ಯಕ್ಕೊ!
ಪುಳ್ಳಿಮಾಣಿಯ ಹಿಂದಂದಲೇ ಸಂಸಾರವೇ ಬಂದು ಮಾತಾಡ್ಳೆ ಸುರುಮಾಡಿತ್ತು.
ಎಷ್ಟೊತ್ತಿಂಗೆ ಹೆರಟದು, ಹೇಂಗೆ ಬಂದ್ಸು – ಇತ್ಯಾದಿ ಮಾತಾಡುಸಿಗೊಂಡವು. ಹೆಮ್ಮಕ್ಕೊ ಸೀರೆಮಾತಲೆ ಹೋದಪ್ಪದ್ದೇ, ದೊಡ್ಡಜ್ಜ ಬಟ್ಟಮಾವನ ಹತ್ತರೆ ಮಾತು ಮುಂದುವರುಸಿದವು. ಹಸ್ತೋದಕ ಹಂತಿ ಎಲ್ಲಿ, ಎಷ್ಟು, ಹೇಂಗೆ – ಇತ್ಯಾದಿ.

ಅದಾ, ಅಷ್ಟಪ್ಪಗಳೇ ಮನೆ ಎಜಮಾನ್ರ ಹುಡ್ಕಿಂಡು ಹೋಲಿನ ಜೆನಂಗೊ ಬಂದವು.
ಕರೆಂಟು ಹೋದರೆ ಜೆನ್ರೇಟ್ರು ಸ್ಟಾರ್ಟು ಮಾಡ್ತ ವಿಶಯಲ್ಲಿ ಎಂತದೋ ಮಾತಾಡ್ಳೆ ಬಂದದು. ಬಟ್ಟಮಾವನ ಹತ್ತರಂದ ಎದ್ದು ಅವರ ಹತ್ತರೆ ಮಾತಾಡ್ಳೆ ದೊಡ್ಡಜ್ಜ ಹೆರಟವು.

ಹೋಪ ದಾರಿಲಿ ಬಾಳೆಕಟ್ಟಿಗೊಂಡಿದ್ದ ಎಂಗಳ ಮಾತಾಡ್ಸಿಕ್ಕಿ, ಆಸರಿಂಗೆ ಬಂತೋಂತ ವಿಚಾರ್ಸಿಯೇ ಮುಂದುವರುದ್ದು.
ಇದರೆಡಕ್ಕಿಲಿ ಸಿಂಗಾರವ ಕೈಲಿ ಹಿಡ್ಕೊಂಡು ತಂದ ಕುಂಬ್ಳೆಜ್ಜನ ಕಂಡು “ಗೆಣವತಿ ಪೂಜೆಯ ಏರ್ಪಾಡು” ಮಾಡ್ಳೆ ಕೇಳಿದವು.

~

ಉಫ್! ಎಷ್ಟೂ ವಿಷಯಂಗೊ.
ಒಂದಕ್ಕೊಂದು ಸಂಮ್ಮಂದವೇ ಇಲ್ಲದ್ದ ಹಲವು ಒಯಿವಾಟುಗೊ ಏಕಕಾಲಲ್ಲಿ ಬಂದು ತಲೆಮೇಗೆ ಸೊರುಗುತ್ತು; ಅವಿಭಕ್ತ ಕುಟುಂಬದ ಜೆಬಾದಾರಿಕೆ ತೆಕ್ಕೊಂಡ್ರೆ ಹಾಂಗೇ ಇದಾ.
ನಾನಾ ವಿಭಾಗದ ಹಲವು ವಿಷಯಂಗೊ; ಎಲ್ಲವನ್ನೂ ಮಾಡ್ಳೇ ಬೇಕು; ಯೇವದನ್ನೂ ಅಸಡ್ಡೆ ಮಾಡುವ ಹಾಂಗಿಲ್ಲೆ.
ಸಾಮಾನ್ಯವಾಗಿ ಒಟ್ಟಿಂಗೆ ಎರಡ್ರಿಂದ ಹೆಚ್ಚಿಗೆ ಕೆಲಸ ಮಾಡಿರೆ / ಕೆಲಸ ಹೇಳಿರೆ ಪಿಸುರೇ ಬಂದು ಹೋಕಪ್ಪೋ!!
ದೊಡ್ಡಜ್ಜಂಗೆ ಅದು ಅಭ್ಯಾಸ ಆಯಿದು; ಒಪ್ಪಣ್ಣಂಗಾದರೆ ತಲೆ ಕರಡಿ ಹೋವುತಿತ್ತು! 😉
~

ದೊಡ್ಡಜ್ಜನ ಈ ಅಂಬ್ರೇಪಿನ ಎಡೆಲಿಯೂ ಗಮನ ಕೊಡ್ತ ಚಾಕಚಕ್ಯತೆ ಕಾಂಬಗ ಗಣೇಶರ ನೆಂಪಾತು. ಯೇವ? – ಜೆಂಬ್ರದ ಗಡಿಬಿಡಿಲಿ ಇಪ್ಪ ಬೈಲಕರೆ ಗಣೇಶಮಾವ ಅಲ್ಲ, ಅವಧಾನಿ “ಡಾ. ಆರ್. ಗಣೇಶ್”ರ ನೆಂಪಾತು ಒಂದರಿ.
~

ಭಾರತೀಯ ಸಂಸ್ಕೃತಿ ಹೇದರೆ ಹಲವು ಕಲೆಗಳ ಆಗರ.
ದೈಹಿಕ, ಮಾನಸಿಕ ಚಾಕಚಕ್ಯತೆಯ ತೋರ್ಸಿಗೊಂಡು ಸಭಿಕರ ಕೊಶಿ ಪಡುಸುತ್ತ ಹಲವು ಚಟುವಟಿಕೆಗೊ ನಮ್ಮಲ್ಲಿದ್ದು. ಯಕ್ಷಗಾನ, ಭರತನಾಟ್ಯ, ಸಂಗೀತ ಇತ್ಯಾದಿಗೊ ಸರ್ವೇ ಸಾಮಾನ್ಯ ಆದರೂ – ಭಾರೀ ಅಪುರೂಪದ “ಅಷ್ಟಾವಧಾನ” ಹೇಳ್ತ ವಿಶೇಷ ಕಲೆ ಒಂದಿದ್ದು.

ಅವಧಾನ” ಹೇದರೆ ಗಮನ – ಹೇಳಿ ಅರ್ತ ಅಡ; ಅಂದೊಂದರಿ ವಿದ್ವಾನಣ್ಣ ಹೇಳಿತ್ತಿದ್ದವು.
ಏಕಕಾಲಕ್ಕೆ ಒಂದರಿಂದ ಹೆಚ್ಚು ವಿಶಯಕ್ಕೆ ಗಮನಕೊಟ್ಟು ಜಟಿಲ ಸಮಸ್ಯೆಗಳ ಬಿಡುಸುವ ಕಲೆಗೆ “ಅವಧಾನ ಕಲೆ” ಹೇಳ್ತವಡ.
ಈಗಾಣ ಆಧುನಿಕ “ಕ್ವಿಜ್” ಇಲ್ಲೆಯೋ – ಹೆಚ್ಚುಕಮ್ಮಿ ಅದೇ ನಮುನೆ. ಆದರೆ, ವಿತ್ಯಾಸ ಎಂತರ ಹೇದರೆ
– ಕ್ವಿಜ್ಜಿಲಿ ಒಬ್ಬ ಕ್ವಿಜ್ ಮಾಸ್ಟರ್ ಕೇಳುದು, ಅನೇಕ ತಂಡಂಗೊ ಉತ್ತರ ಕೊಡುದು.
ಅವಧಾನಲ್ಲಿ ಅನೇಕ ಜೆನ ಕೇಳುದು, ಒಬ್ಬ ಅವಧಾನಿ ಉತ್ತರ ಕೊಡುದು.
ಕ್ವಿಜ್ಜಿಲಿ ಸರದಿ ಪ್ರಕಾರ ತಂಡಕ್ಕೆ ಪ್ರಶ್ನೆ ಕೇಳುದು, ಅವಧಾನಲ್ಲಿಯೂ ಹೆಚ್ಚಿಂದು ಸರದಿ ಪ್ರಕಾರವೇ (– ಆದರೆ ಕೆಲವು ವಿಶಯಕ್ಕೆ ಸರದಿಯ ಲೆಕ್ಕ ಇಲ್ಲೆ. ಅದಿರಳಿ.)
~

ಅವಧಾನಲ್ಲಿ ಪ್ರಶ್ನೆ ಕೇಳುವೋರ “ಪೃಚ್ಛಕ” ಹೇಳಿಯೂ, ಉತ್ತರ ಹೇಳ್ತೋರ “ಅವಧಾನಿ” ಹೇಳಿಯೂ ಹೇಳುದಡ.
ಪೃಚ್ಛಕರು ಎಂಟೇ ಜೆನ ಆಗಿರೇಕು ಹೇದು ಏನಿಲ್ಲೆ, ಎಂಟು ಜೆನ ಇದ್ದರೆ ಅದರ “ಅಷ್ಟಾವಧಾನ” ಹೇಳುಸ್ಸು. ಅವಧಾನಿಗೊ ಏಕಕಾಲಕ್ಕೆ ಎಂಟು ವಿಭಾಗಕ್ಕೆ ಗಮನ ಕೊಡುಸ್ಸು ಅಷ್ಟಾವಧಾನದ ಲಕ್ಷಣ.
ನೂರು ಜೆನ ಪೃಚ್ಛಕಂಗೊ ಇದ್ದರೆ ಶತಾವಧಾನ ಹೇಳಿಯೂ, ಸಾವಿರ ಜೆನ ಪ್ರಶ್ನೆ ಕೇಳ್ತರೆ ಸಹಸ್ರಾವಧಾನ – ಹೇಳಿಯೂ, ಎಡಕ್ಕಿನ ಇಪ್ಪತ್ನಾಕು ಜೆನ ಪೃಚ್ಛಕಂಗೊ ಇದ್ದರೆ “ತ್ರಿಗುಣಿತ ಅಷ್ಟ”ಅವಧಾನ ಹೇಳಿಯೂ – ಇನ್ನೂ ಹಲವು ನಮುನೆ ಇರ್ತು; ಅವಧಾನಿಗಳ ಸಾಮರ್ಥ್ಯದ ಮೇಗೆ.
~

ಅವಧಾನದ ಬಗ್ಗೆ ಹೇಳುಸ್ಸು ಕೇಳಿ ಇಷ್ಟು ಗೊಂತಿತ್ತು ಒಪ್ಪಣ್ಣಂಗೆ.
ಮನ್ನೆ ಮುಜುಂಗರೆಗೆ ಬಂದಿದ್ದ ವಿದ್ವಾನಣ್ಣ ಹೊತ್ತೋಪಗ ಕುಂಬ್ಳೆಜ್ಜನಲ್ಲಿಗೆ ಬಂದಿತ್ತವಲ್ಲದೋ – ರಜ ಪುರ್ಸೋತಿಲಿ ಮಾತಾಡ್ಳೆ ಸಿಕ್ಕಿದವು. ಅಲ್ಲಿ ಮಾತಾಡುವಗ ಅವಧಾನದ ಬಗ್ಗೆ ಇನ್ನೂ ಹೆಚ್ಚು ಶುದ್ದಿಗಳ ತಿಳುಶಿ ಕೊಟ್ಟವು.
ಅವು ಹೇಳಿದ್ದರ ಪೂರ ನೆಂಪಿಲಿ ಮಡಿಕ್ಕೊಂಬಲೆ ಒಪ್ಪಣ್ಣ ಎಂತ ಅವಧಾನಿಯೋ?! 😉
ಈಗ ನೆಂಪಿಪ್ಪಷ್ಟು ಹೇಳ್ತೆ; ಆತೋ?!

~

ಡಾ|ರಾ|ಗಣೇಶ್ - ಕನ್ನಡದ ಹೆಮ್ಮೆಯ ಶತಾವಧಾನಿಗೊ. (ಪಟ ಕೃಪೆ: http://mantapupadhya.blogspot.in)

ಸನಾತನ ಕಲೆಗಳಲ್ಲೇ ಅತ್ಯಂತ ಕ್ಲಿಷ್ಟವಾದ ಕಲೆ ಅವಧಾನ ಅಡ.
ಮಾನಸಿಕ ಬುದ್ಧಿಮತ್ತೆ ಅತ್ಯಂತ ಚುರ್ಕು ಇಪ್ಪವಕ್ಕೆ ಮಾಂತ್ರಾ ಸಾಧ್ಯ ಆಡ.

ಆಗಳೇ ಮಾತಾಡಿದ ಹಾಂಗೆ, ಶತಾವಧಾನ, ಸಹಸ್ರಾವಧಾನ ಹೇಳಿ ಇದ್ದರೂ, ಸಾಮಾನ್ಯವಾಗಿ ಕಾಂಬಲೆ ಸಿಕ್ಕುದು ಅಷ್ಟಾವಧಾನವೇ ಅಡ. ಹೇದರೆ, ಒಬ್ಬ ಅವಧಾನಿ – ಎಂಟು ಜೆನ ಪೃಚ್ಛಕಂಗೊ.
ಆ ಎಂಟು ಜೆನವುದೇ ಒಂದೊಂದು ವಿಭಾಗಲ್ಲಿ ಕೃಷಿಮಾಡಿ, ಪಾಂಡಿತ್ಯ ಗಳುಸಿಗೊಂಡ ಜೆನಂಗೊ ಆಗಿರ್ತವು.
ಅಷ್ಟಾವಧಾನ ರೈಸಲೆ ಅವಧಾನಿಗೊ ಮಾಂತ್ರ ಅಲ್ಲ, ಪೃಚ್ಛಕಂಗಳೂ ಉಶಾರಿ ಇರೇಕಡ.
(ನಮ್ಮ ವಿದ್ವಾನಣ್ಣಂದೇ “ಪೃಚ್ಛಕ” ಆಗಿ ಅಷ್ಟಾವಧಾನವ ರಂಜಿಸುತ್ತವು ಹೇಳ್ತದು ಬೈಲಿಂಗಿಡೀ ಗೊಂತಿಪ್ಪ ಸಂಗತಿಯೇ).

ಒಟ್ಟಾರೆ ಆಗಿ ಅವಧಾನದ ಕಳ ಹೇಂಗಿರ್ತು ಗೊಂತಾಯೇಕಾರೆ – ಎಂತೆಲ್ಲ ವಿಭಾಗದ ಪೃಚ್ಛಕಂಗೊ ಇರ್ತವು ಹೇಳ್ತದು ಅರಡಿಯೇಕು. ವಿದ್ವಾನಣ್ಣಂಗೆ ಸ್ವತಃ ಅನುಭವ ಇಪ್ಪ ಕಾರಣ ಅವು ಅಷ್ಟಾವಧಾನದ ಅಂಗಂಗಳ ಮೆಲ್ಲಂಗೆ ವಿವರುಸಲೆ ಸುರುಮಾಡಿದವು.
ಅವರ ವಿಲಂಬಿತ ಮಂದ್ರಸ್ವರಲ್ಲಿ ವಿವರುಸುವಗ ಅವಧಾನವನ್ನೇ ಕಂಡ ಹಾಂಗೆ ಆತು ಒಂದರಿ.

~

ಹಿನ್ನೆಲೆ:

ಆರಂಭಲ್ಲಿ ಸಭಾ ಪರಿಚಯವ ಮಾಡಿದ ಮತ್ತೆ ಅವಧಾನಿಗೊ ಮಾತಾಡ್ಳೆ ಸುರುಮಾಡ್ತವಡ. ವ್ಯಾಸ, ಸರಸ್ವತಿ, ಗೆಣವತಿ –ಎಲ್ಲೋರನ್ನೂ ನೆಂಪುಮಾಡಿಗೊಂಡು ಸಭೆಗೂ ವಂದನೆಮಾಡಿಗೊಂಡು ಅವಧಾನ ಯಜ್ಞಾರಂಭ ಮಾಡ್ತವಡ.
ಎಲ್ಲಾ ಪೃಚ್ಛಕಂಗಳ ಬಗ್ಗೆ ಎರಡೆರಡು ಮಾತು ಪರಿಚಯ ಮಾಡಿಕ್ಕಿ; ಅವಧಾನಕಲೆಯ ಬಗ್ಗೆಯೂ ವಿವರುಸಿಗೊಂಡು ಹೋವುತ್ತವಾಡ. ಇಷ್ಟಾದ ಮತ್ತೆಯೇ ನಿಜವಾದ ಅವಧಾನ ಸುರು.
ಇಸ್ಪೇಟು ಆಟಲ್ಲಿ ಹೇಂಗೆ ಸಾಲಾಗಿ ಇಳುಶಿಗೊಂಡು ಹೋಪದೋ, ಅವಧಾನಲ್ಲಿಯೂ ಹಾಂಗೇ – ಒಬ್ಬೊಬ್ಬನೇ ಪೃಚ್ಛಕ ಪ್ರಶ್ನೆ ಕೇಳುಲೆ ಸುರುಮಾಡ್ತವಡ. ಅವಧಾನಿಗೊ ಅದಕ್ಕೆಲ್ಲದಕ್ಕೂ ಸಮಧಾನಲ್ಲಿ ಉತ್ತರ ಕೊಟ್ಟುಗೊಂಡು ಹೋಯೇಕಡ.
ಕೆಲವು ಸಮಸ್ಯೆ ಸಾಹಿತ್ಯಿಕ, ಕೆಲವು ಸಮಸ್ಯೆಗೊ ಬೌದ್ಧಿಕ, ಕೆಲವು ಸಮಸ್ಯೆಗೊ ಲೌಖಿಕ – ಒಟ್ಟು ಎಲ್ಲವುದೇ ಸೇರಿ ಕಲಸಿದ ಅವಿಲು ಅದು!
ಆದರೆ ಒಂದಿದ್ದು – ಯೇವ ಸಮಸ್ಯೆ ಬಿಡುಸುತ್ತರೂ, ಪೆನ್ನು-ಕಾಗತವ ಹಿಡುದು ಪರಿಹರುಸುವ ಹಾಂಗಿಲ್ಲೆ; ಎಲ್ಲವೂ ಮನಸ್ಸಿಲೇ.
ಕಲ್ಪನೆ, ಚಿಂತನೆ, ಯೋಚನೆ, ಸ್ಮರಣೆ ಮಾಡಿಗೊಂಡು ಮುಂದೆ ತೆಕ್ಕೊಂಡು ಹೋಯೇಕಡ.

ಕೂದ ಕಳಲ್ಲಿ ಎಲ್ಲೋರನ್ನೂ ಒಂದೊಂದು ಸುತ್ತು ಮಾತಾಡುಸಿಗೊಂಡು ಬಂದ ಮತ್ತೆ, ಎರಡ್ಣೇ ಸುತ್ತಿಂಗೆ ಬತ್ತಾಡ. ಇರುವಾರ ಬಪ್ಪಗ ಕಳುದ ಸುತ್ತಿಲಿ ಎಲ್ಲಿ ನಿಂದದು ಹೇದು ಅವಧಾನಿಗಳೇ ನೆಂಪುಮಾಡಿ ಕೊಡೇಕಡ! ಒಂದರಿ ಹರಟೆ ಮುಗಿಯಲಿ ಹೇದು ಒಂದೇ ಸರ್ತಿ ಮುಗುಶುವ ಹಾಂಗಿಲ್ಲೆ; ಪೃಚ್ಛಕರ ಕಳಲ್ಲಿ ಒಂದೊಂದೇ ಆವರ್ತನೆ ಮೂಲಕ ಹಂತ ಹಂತವಾಗಿ ಪದ್ಯ, ಕಾವ್ಯ, ಸಾಹಿತ್ಯ ರಚನೆ ಮಾಡೇಕಡ ಅವಧಾನಿಗೊ.

ಸಾಮಾನ್ಯವಾಗಿ, ಅಷ್ಟಾವಧಾನಲ್ಲಿ ಕೆಲವು ಖಾಯಂ ವಿಭಾಗಂಗೊ ಕಾಂಬಲೆ ಇರ್ತಾಡ. ಅದು ಇದ್ದರೇ ಅವಧಾನಕ್ಕೆ ಅದರ ತೂಕ ಬಪ್ಪದಾಡ.

ನಿಷೇಧಾಕ್ಷರಿ:

ಹೆಸರೇ ಹೇಳ್ತ ಹಾಂಗೆ ಅವಧಾನಿಗೊ ಪದ್ಯ ರಚನೆ ಮಾಡುವಗ “ನಿರ್ದಿಷ್ಟ ಅಕ್ಷರಕ್ಕೆ ನಿಷೇಧ” ಹಾಕಿಂಡು ಜಟಿಲತೆಯ ಕೊಡುದೇ ನಿಷೇಧಾಕ್ಷರಿ ಅಡ. ಪ್ರತಿ ಹೆಜ್ಜೆ ಹಾಕುವಗಳೂ ಇನ್ನಾಣ ಹೆಜ್ಜೆ ಹಾಕುಲೆ ತಡೆಮಡಗುದು – ನಿಷೇಧಾಕ್ಷರಿ.
ವಿದ್ವಾನಣ್ಣ ಉದಾಹರಣೆ ಸಹಿತ ವಿವರುಸಿ ಅಪ್ಪಗಳೇ ಒಪ್ಪಣ್ಣಂಗೆ ಅರ್ತ ಅಕ್ಕಷ್ಟೆ.

ನಿಷೇಧಾಕ್ಷರಿಯ ಪೃಚ್ಛಕ ಒಂದು ಸನ್ನಿವೇಶವ ಕೊಟ್ಟು ಪದ್ಯ ರಚನೆ ಮಾಡ್ಳೆ ಹೇಳುಗಾಡ.
ಉದಾಹರಣೆಗೆ, “ಸೀತೆಯೂ-ರಾಮನೂ ನಿಂದಿಪ್ಪ ಚಿತ್ರಣ ವರ್ಣನೆ ಮಾಡಿ” ಹೇಳ್ತವು ಮಡಿಕ್ಕೊಂಬ.
ಅವಧಾನಿಗೊ ಅವರ ಪದ್ಯವ “ಸೀತಾರಾಮ..” ಹೀಂಗೆಂತಾರು ಸುರುಮಾಡುಗು ಹೇದು ಪದ್ಯ ಸುರುಮಾಡುವಗಳೇ ಪೃಚ್ಛಕರು “ಸ”ಕಾರ ನಿಷೇಧ ಹೇಳುಗು.
ಹಾಂಗಾರೆ ಆ ಪದ್ಯವ “ಸ ಸಾ ಸಿ ಸೀ..” ಯೇವದರಿಂದಲೂ ಸುರುಮಾಡ್ತ ಹಾಂಗೆ ಇಲ್ಲೆ.
ರಾ” – ಹೇಳ್ತವು ಅವಧಾನಿಗೊ.
ರಾಮ
– ಹೇಳುಲೆ ಯೋಚನೆ ಮಾಡಿದ್ದು ಹೇಳ್ತದು ಪೃಚ್ಛಕಂಗೆ ಗೊಂತಾವುತ್ತು.
ಮತ್ತೆ ಮ ಹೇಳುಗು ಗ್ರೇಶಿ ಅದಕ್ಕೇ ನಿಷೇಧ ಹಾಕುತ್ತವು; “ಮ”ಕಾರ ನಿಷೇಧ – ಹೇಳಿಬಿಡ್ತವು.
ಆತನ್ನೇ! ಇನ್ನು ಅವಧಾನಿಗೊ ಮತ್ತಾಣ ಅಕ್ಷರ “ಮ” ಹಾಕಲಾಗ ಹೇದು ತಲೆಬೆಶಿ ಮಾಡಿಂಡು ಕೂರ್ತದಲ್ಲ,
ಅದರ ಬದಲು ಅದೇ ಅರ್ತ ಬಪ್ಪ ಬೇರೆ ಅಕ್ಷರ ಹುಡ್ಕಿ ಹಾಕೇಕು.
ಜೀ” ಹೇಳಿದವು ಅವಧಾನಿಗೊ.
ರಾಮ ಇಪ್ಪಲ್ಲಿ ರಾಜೀವ ಹೇಳುವ ಯೋಚನೆ.
ಇನ್ನು ವಕಾರ ನಿಷೇಧ ಹಾಕಿರೆ ವಿದ್ವಾನಣ್ಣನೇ ಬರೆಕ್ಕಷ್ಟೆ; ಅಲ್ಲದ್ದರೆ ಅವಧಾನಿಗಳೇ ಬರೆಕ್ಕಷ್ಟೆ; ಒಪ್ಪಣ್ಣಂದ ಹರಿಯ ಅದೆಲ್ಲ 😉

ಹೀಂಗೇ – ಹೆಜ್ಜೆ ಹೆಜ್ಜೆಗೂ ನಿಷೇಧವ ಎದುರಿಸೆಂಡು ಇಡೀ ಪದ್ಯ ಕಟ್ಟೇಕು.
ಪದ್ಯಲ್ಲಿ ಅರ್ಥವೂ ಬರೇಕು; ಒಟ್ಟಿಂಗೆ ಛಂದಸ್ಸು, ಮಾತ್ರೆ, ಗಣಂಗಳೂ ಸರೀ ಬರೇಕು.
ಪೆನ್ನು ಕಾಗತ ಹಿಡ್ಕೊಂಡು ಮಾಡ್ತ ಜೆಂಬಾರ ಅಲ್ಲ; ಗೊಂತಿದ್ದನ್ನೇ? ಎಲ್ಲವೂ ಮನಸ್ಸಿಲೇ ಆಯೇಕು.

ಇದು ಪೃಚ್ಛಕಂಗೂ, ಅವಧಾನಿಗೊಕ್ಕೂ ಅಪ್ಪ ಮಲ್ಲಯುದ್ಧ – ಹೇಳಿ ವಿದ್ವಾನಣ್ಣ ನೆಗೆಮಾಡುಗು.
ಒಂದು ಲೆಕ್ಕಲ್ಲ್ಲಿ ನೋಡಿರೆ ಅವಧಾನದ ಅತ್ಯಂತ ಕಷ್ಟದ ಸುತ್ತು ಇದುವೇ ಅಡ.

~

ಸಮಸ್ಯಾ ಪೂರಣ:

ಅಷ್ಟಾವಧಾನಿಗಳ ಕಳಲ್ಲಿ ಕೂದ ಮತ್ತೆ ಸಮಸ್ಯೆ ಎಂತರ?
ಅದುವೇ ಗಮ್ಮತ್ತಿಪ್ಪದು. ಯೇವದಾರು ಒಂದು ಛಂದಸ್ಸಿಲಿ ನಿಬದ್ಧವಾಗಿಪ್ಪ ಒಂದು ಸಾಲಿನ ತೆಯಾರು ಮಾಡಿ ಪೃಚ್ಛಕ ಕೊಡ್ತವು. ಆ ಗೆರೆಯ “ಅಕೇರಿಯಾಣ ಗೆರೆ”ಆಗಿ ಬಪ್ಪ ಹಾಂಗೆ ಅರ್ಥಗರ್ಭಿತ ಪದ್ಯವ ಅವಧಾನಿಗೊ ರಚನೆ ಮಾಡೇಕಡ.
ಅವಧಾನಿಗೊ ಅರ್ಥಗರ್ಭಿತ ಪದ್ಯ ರಚನೆ ಮಾಡೆಕು; ಹಾಂಗೆ ಹೇಳಿಗೊಂಡು ಪೃಚ್ಛಕರು ಅಸಂಬದ್ಧ ಕೊಡ್ಳಾಗ ಹೇದು ಏನಿಲ್ಲೆ – ಹೇಳಿದವು ವಿದ್ವಾನಣ್ಣ.

ಹೆಚ್ಚಿನ ಸರ್ತಿಯೂ ಈ ಸಮಸ್ಯೆಗೊ ಕೊಡುದು ಅಸಂಬದ್ಧವೇ ಆಗಿರ್ತಾಡ.
ಅವಧಾನಿಗೊ ಅದರ ಹೇಂಗೆ ಸರಿಮಾಡಿಗೊಳ್ತವು ಹೇಳಿ ನೋಡುದೇ ಇದರ ದೊಡ್ಡ ಕುತೂಹಲ ಅಡ.
ಉದಾಹರಣೆಗೆ, ಒಂದು ಸರ್ತಿ ಪೃಚ್ಛಕ ಕೇಳಿದ ಪ್ರಶ್ನೆ ಹೀಂಗಿತ್ತಾಡ: “ದನವಂ ಕಡಿಕಡಿದು ಬಸದಿಗೊಯ್ಯುತ್ತಿರ್ಪರ್”
ಅರೆ! ಅಹಿಂಸೆಯನ್ನೇ ಹೇಳುವ ಜೈನರು ದನವ ಕಡುದು ಬಸದಿಗೆ ಕೊಂಡು ಹೋಕೋ? – ಹೇದು ಅವಧಾನಿಗೊ ತಲೆಬೆಶಿ ಮಾಡ್ತ ಕ್ರಮ ಇಲ್ಲೆ, ಬದಲಾಗಿ ಇಪ್ಪಲ್ಲಿಗೇ ಹೇಂಗೆ ಗಂಭೀರಾರ್ಥ ಕೊಡ್ಳೆಡಿತ್ತು – ಹೇದು ನೋಡ್ತವಾಡ.
ಈ ಸಮಸ್ಯೆಗೆ ಕೊಟ್ಟ ಗೆರೆ ನಾಕನೇ ಸಾಲಿಲಿ ಬತ್ತರೆ, ಮೂರ್ನೇ ಸಾಲಿನ ಅಕೇರಿಗೆ “ಚಂ-“ ಒಂದು ಅಕ್ಷರವ ಸೇರ್ಸಿದವಡ ಅವಧಾನಿಗೊ. ಈಗ ಎಂತಾತು?
“ಚಂದನವಂ ಕಡಿಕಡಿದು..” – ಗಂಧವ ತುಂಡುಸಿ ತುಂಡುಸಿ ದೇವಸ್ಥಾನಕ್ಕೆ ಕೊಂಡು ಹೋದವಾಡ.
ಆಯಿಕ್ಕಾಯಿಕ್ಕು – ಎಲ್ಲೋರುದೇ ತಲೆತೂಗಿ ಕೈಚಪ್ಪಾಳೆ ತಟ್ಟೇಕಾದ “ಪೂರಣ”ವೇ!

~

ದತ್ತಪದಿ:

ಹೆಸರೇ ಹೇಳ್ತ ಹಾಂಗೆ ’ದತ್ತ’ – ಕೊಟ್ಟ, ಪದಿ – ಪದಂಗೊ / ಶಬ್ದಂಗೊ.

ಪೃಚ್ಛಕ ಕೊಟ್ಟ ಕೆಲವು ಶಬ್ದಂಗಳ ಬಳಸಿಗೊಂಡು ನಿರ್ದಿಷ್ಟ ಸನ್ನಿವೇಶವ ವರ್ಣನೆ ಮಾಡುವ ಪದ್ಯ ಕಟ್ಟೇಕಡ.
ಯೇವ ಸನ್ನಿವೇಶ, ಪದ್ಯದ ಛಂದಸ್ಸು ಯೇವದು ಹೇಳ್ತ ವಿಚಾರಂಗಳನ್ನೂ ಪೃಚ್ಛಕನೇ ನಿಘಂಟು ಮಾಡ್ತದಡ.
ಇದರ್ಲಿಯೂ ಹಾಂಗೇ – ಶಬ್ದಂಗೊ ಕೊಡುವಗ ಅಸಂಬದ್ಧವೇ ಕೊಡ್ತವಾಡ.

ವಿದ್ವಾನಣ್ಣ ಸದ್ಯ ಎಲ್ಲಿಯೋ ಒಂದಿಕ್ಕೆ ಕೇಳಿದ ದತ್ತಪದಿ ಹೀಂಗಿತ್ತಾಡ:
“ಶವ, ಚಿತೆ, ಚಟ್ಟ, ಮಡಕೆ” – ಈ ಶಬ್ದಂಗಳ ಬಳಸಿಂಡು ರುಕ್ಮಿಣೀಕಲ್ಯಾಣದ ವರ್ಣನೆ ಮಾಡ್ಳೆ.
ಯಬ್ಬೊ ದೇವರೆ, ಎಂತೆಂತ ಅಮಂಗಳ ಶಬ್ದಂಗೊ; ಮಂಗಳ ಸನ್ನಿವೇಶವ ವರ್ಣನೆ ಮಾಡುವಗ!!
ಪದ್ಯ ರಚನೆ ಮಾಡುವಗ ಶವ – ಇಪ್ಪದರ “ಕೇಶವ” ಮಾಡಿಂಬಲಕ್ಕು,
ಚಿತೆ – ಇಪ್ಪಲ್ಲಿ “ಉಚಿತೆ” ಹೇಳುಲಕ್ಕು,
ಚಟ್ಟ – ಹೇಳ್ತದಕ್ಕೆ ಪಕ್ಕ – ಹೇಳುವ ವಿಶೇಷಣೆಯಾಗಿಯೂ ಉಪಯೋಗುಸೆಂಬಲಕ್ಕು. ಅಲ್ಲದೋ?
ಅದು ಅವಧಾನಿಗಳ ಸಾಮರ್ತಿಗೆಗೆ ಸೇರಿದ್ದು. ಎಂತದೇ ಮಾಡಿರೂ, ಹೇಂಗೆ ಬಳಸಿಗೊಂಡರೂ ಅಕೇರಿಗೆ ಸುಂದರ ಪದ್ಯ ತೆಯಾರಾದರೆ ಆತು; ಎಲ್ಲೋರ ಕರತಾಡನ ನಿಘಂಟೇ.

~

ಕಾವ್ಯವಾಚನ:

ಪೃಚ್ಛಕ ಶೃತಿಪೆಟ್ಟಿಗೆ ಮಡಿಕ್ಕೊಂಡು ಒಂದು ಕಾವ್ಯ ಓದುತ್ತವು – ರಾಗಲ್ಲಿ.
ಆ ಕಾವ್ಯವ ಕೇಳಿಅಪ್ಪದ್ದೇ, ಆರು ಬರದ್ದು, ಅದು ಎಲ್ಲಿಂದ, ಯೇವ ಸಂದರ್ಭದ್ದು, ಆರು ಆರಿಂಗೆ ಹೇಳ್ತದು – ಎಲ್ಲವನ್ನುದೇ ಅವಧಾನಿಗೊ ವಿವರ್ಸೇಕು ಸಭಿಕರಿಂಗೆ.
ನಮ್ಮ ಹಳಬ್ಬರ ಅಗಾಧ ಸಾಹಿತ್ಯ ಕೃತಿಗಳಲ್ಲಿ ಯೇವ ಪುಸ್ತಕಂದ ಯೇವ ಪದ್ಯ ಬೇಕಾರೂ ಓದಲಕ್ಕು ಆ ಪೃಚ್ಛಕ.
ಆ ಸ್ವಾತಂತ್ರ್ಯ ಇದ್ದು. ಹೀಂಗಾಗಿ, ಈ ಸುತ್ತಿಲಿ ಉತ್ತರ ಹೇಳುಲೆ ಅವಧಾನಿಗೊಕ್ಕೆ ತುಂಬಾ “ಕಾವ್ಯಜ್ಞಾನ ಬೇಕಾವುತ್ತು” ಹೇಳಿದವು ವಿದ್ವಾನಣ್ಣ.

~

ಆಶುಕವಿತೆ:

ಅವಧಾನಲ್ಲಿ ಹೆಚ್ಚಾಗಿ ಇಪ್ಪದು ಆಶುಕವಿತ್ವವೇ ಆದರೂ, ಇದೊಂದು ಸುತ್ತು ಅದಕ್ಕೆ ಹೇಳಿಯೇ ಇಪ್ಪಂತಾದ್ದು; ಆಶುಕವಿತೆ – ಹೇದು.
ಕೊಟ್ಟ ಸನ್ನಿವೇಶವ, ಸಂದರ್ಭವ ವರ್ಣನೆ ಮಾಡಿಂಡು ಕೊಟ್ಟ ಛಂದಸ್ಸು / ಆಧುನಿಕ ಕಾವ್ಯಂಗಳ ರೂಪಲ್ಲಿ ರಚನೆ ಮಾಡೇಕಾದ್ಸು ಆಶುಕವಿತ್ವ. ವಿದ್ವಾನಣ್ಣನ ಪ್ರಕಾರ, ಎಲ್ಲಾ ಅವಧಾನಿಗೊಕ್ಕೂ ಇದೊಂದು ಮೂಲಭೂತ ಸಾಮರ್ಥ್ಯ.

~

ಇದಿಷ್ಟು ಸಾಮಾನ್ಯ ಎಲ್ಲ ಅವಧಾನಿಗೊ ಮಾಡ್ತವು.
ಇನ್ನು ಅವರವರ ಆಸಕ್ತಿ, ಸಾಮರ್ಥ್ಯದ ಮೇಗೆ ಬೇರೆಬೇರೆ ವಿಭಾಗಂಗಳ ತೊಡಗುಸಿಗೊಂಬಲಕ್ಕು. ಉದಾಹರಣೆಗೆ:

~

ಚಿತ್ರಬಂಧ:

ಕಾವ್ಯಶಾಸ್ತ್ರಂಗಳಲ್ಲಿ ವೃತ್ತ, ಛಂದಸ್ಸುಗೊ ಇಪ್ಪ ಹಾಂಗೇ ಬಂಧಂಗಳೂ ಇರ್ತಾಡ. ಆ ಬಂಧಕ್ಕೆ ಅದರ ಸ್ವರೂಪದ್ದೇ ಹೆಸರಾಡ.
ಉದಾಹರಣೆಗೆ, ಅಷ್ಟದಳಪದ್ಮಬಂದ – ಹೇದರೆ ಎಂಟು ದಳ ಇಪ್ಪ ತಾವರೆಯ ಹಾಂಗೆ ಎಸಳುಗೊ ಬಿಡುಸಿ, ಅದರ್ಲಿ ಅಕ್ಷರಂಗಳ ತುಂಬುಸೆಂಡು ಹೋಪದು. ಆ ಎಸಳುಗಳ ಎಡೆಂದ ಹರ್ಕಿ ಹೆರ್ಕಿ ಓದುಲೆ ಮದಲೇ ಒಂದು ನಿಗದಿತ ಸೂತ್ರ ಇರ್ತು;
ಹಾಂಗಾಗಿ ಓದಲೆ ಒಂದು ಶ್ಲೋಕವೂ ಆಯೇಕು, ಈ ಎಸಳಿಲಿ ತುಂಬುಸಲೆ ಅಕ್ಷರಂಗಳೂ ಸರೀ ಬರೇಕು.
ಸುಭಗಣ್ಣನ ಗತಪ್ರತ್ಯಾಗತವೂ ಇದರ್ಲಿ ಬತ್ತಾಡ.
ವಿದ್ವಾನಣ್ಣಂಗೆ ಇದರ ಬಗ್ಗೆ ತುಂಬ ಗೊಂತಿದ್ದು; ಪುರ್ಸೋತಿಲಿ ವಿವರವಾದ ಶುದ್ದಿ ಹೇಳುಗೋ ಏನೋ..!

~

ಈಗ ಮಾತಾಡಿದ ಅವಧಾನಂಗೊ ಇಸ್ಪೇಟು ಆಟದ ಹಾಂಗೆ ಸಾಲಿಲಿ ಬಪ್ಪದಾದರೆ, ಇನ್ನು ಕೆಲವು ವಿಷಯಂಗೊ ಅನಿರೀಕ್ಷಿತವಾಗಿ ಬಕ್ಕು. ಇಂತಾ ಹೊತ್ತಿಲಿಯೇ ಬರೇಕು ಹೇದು ಏನಿಲ್ಲೆ, ಪೃಚ್ಛಕಂಗೆ ಮನಸ್ಸು ಬಪ್ಪಗ ಅವಧಾನಿಗಳ ಹತ್ತರೆ ಪ್ರಶ್ನೆ ಕೇಳಿ, ಅವರ ಇನ್ನಷ್ಟು ಇಕ್ಕಟ್ಟಿಂಗೆ ಸಿಕ್ಕುಸುಲೆ ಅಕ್ಕು.
ಉದಾಹರಣೆಗೆ:

ಸಂಖ್ಯಾಬಂಧ:

ಅವಧಾನ ಆರಂಭ ಅಪ್ಪ ಮದಲೇ ಒಬ್ಬ ಪೃಚ್ಛಕ ಒಂದು ಗೆರೆಪೆಟ್ಟಿಗೆ ತೆಯಾರು ಮಾಡಿರ್ತ. ಐದು X ಐದು, ಅತವಾ ನಾಕು X ನಾಕು – ಈ ನಮುನೆ ಚೌಕಲ್ಲಿ.
ಪೃಚ್ಛಕ ಕೇಳಿದ ಒಂದು ನಿರ್ದಿಷ್ಟ ಸಂಖ್ಯೆಯ ಗಮನಲ್ಲಿ ಮಡಿಕ್ಕೊಂಡು ಈ ಚೌಕಂಗಳ ತುಂಬುಸೇಕು.
ಉದ್ದ, ಅಗಲ, ಅಡ್ಡ, ನೀಟ, ಓರೆ, ಕೋನ – ಹೇಂಗೆ ಕೂಡುಸಿರೂ ಪೃಚ್ಛಕ ಕೊಟ್ಟ ಸಂಖ್ಯೆ ಬರೇಕು.
ನೆಂಪಿರಲಿ, ಈ ಪೆಟ್ಟಿಗೆ ತುಂಬುಸುವಾಗ ಪೆನ್ನು, ಕಾಗತ ಹಿಡ್ಕೊಂಡು ತಲೆಕೆರಸುಲೆ ಅವಕಾಶ ಇಲ್ಲೆ.
ಎಷ್ಟನೇ ಸಾಲಿನ – ಎಷ್ಟನೇ ಮನೆಲಿ ಎಷ್ಟು ಇಪ್ಪದು ಹೇಳ್ತ – ಎಲ್ಲವೂ ತಲೆಯೊಳದಿಕೆಯೇ ಗಣಿತ ಆಯೇಕು.

ಆಗಲೇ ಹೇಳಿದಾಂಗೆ, ಇದರ ಪುರ್ಸೋತಿಲಿ ಕೇಳ್ತದಲ್ಲ, ಯೇವದೋ ಛಂದಸ್ಸಿನ, ಯೇವದೋ ಮಾತ್ರೆ ಲೆಕ್ಕಲ್ಲಿ ತಲೆಬೆಶಿ ಮಾಡಿಂಡಿಪ್ಪಾಗ – ಎಡಕ್ಕಿಲಿ “ಅವಧಾನಿಗಳೇ, ಮೂರ್ನೇ ಸಾಲಿನ ನಾಲ್ಕನೇ ಮನೆಯಲ್ಲಿ ಎಷ್ಟೂ??” ಕೇಳುಗು.
ಅವಧಾನಿಗೊ ಸಮಾದಾನಲ್ಲಿ ಉತ್ತರ ಕೊಟ್ಟುಗೊಳೇಕು. ಪಾಪ.
~

ಘಂಟಾವಾದನ

ಇದು ಸಾಹಿತ್ಯಕ್ಕೆ ಸಂಬಂಧ ಪಟ್ಟ ಸುತ್ತು ಅಲ್ಲ; ಬದಲಾಗಿ ಸ್ಮರಣ ಶಕ್ತಿಗೆ ಸಂಬಂಧ ಪಟ್ಟಂತಾದ್ದು.
ಆರಾರು ಪೃಚ್ಛಕನ ಯೇವದೋ ಸಮಸ್ಯೆಗೆ ಅವಧಾನಿಗೊ ಗಂಭೀರವಾಗಿ ಚಿಂತನೆ ಮಾಡ್ತಾ ಇದ್ದವೋ,
ಎಡೆಸಿಕ್ಕಿಪ್ಪಗ ಒಂದು ಗಳಿಗೆ ನೀರು ಕುಡಿತ್ತಾ ಇದ್ದವೋ,
ಅಲ್ಲ, ಆರಾರು ಪ್ರಶ್ನೆ ಕೇಳ್ತಾ ಇಪ್ಪಗ ಅವಧಾನಿಗೊ ಕೆಮಿಕೊಟ್ಟು ಕೇಳ್ತಾ ಇದ್ದವೋ,
ಅಲ್ಲ ಗೆರೆಪೆಟ್ಟಿಗೆಯ ಲೆಕ್ಕ ಭರ್ತಿ ಮಾಡಿಂಡಿದ್ದವೋ,
ಅಲ್ಲ ಸಭೆಗೆ ವಿವರುಸಿಗೊಂಡಿದ್ದವೋ – ಇದೇವದೂ ಗುಮಾನ ಇಲ್ಲದ್ದೆ ಒಬ್ಬ ಜೆನ ಅಂಬಗಂಬಗ ಗಂಟೆ ಬಡಿಗು.
ಪ್ರತಿ ಸರ್ತಿ ಗಂಟೆ ಬಡಿವಾಗಳೂ “ಎಷ್ಟು ಸರ್ತಿ ಗಂಟೆ ಬಡುದೆ” ಹೇದು ಬಡುದ ಜೆನ ಬರಕ್ಕೊಳ್ತನೋ ಬಿಡ್ತನೋ, ಆದರೆ ಅವಧಾನಿಗೊ ಬರಕ್ಕೊಳೇಕು – ಮನಸ್ಸಿಲೇ.
ಒಟ್ಟು ಎಷ್ಟು ಸರ್ತಿ ಗಂಟೆ ಬಡುದ್ದು – ಹೇಳ್ತದರ ಅವಧಾನದ ಅಕೇರಿಗೆ ಸಭೆಗೆ ತಿಳುಶುದು ಅವಧಾನಿಗಳ ಕರ್ತವ್ಯ.
ಯೇವ ವಿಶಯಲ್ಲಿ ಎಷ್ಟೇ ತಲ್ಲೀನ ಆಗಿದ್ದರೂ, ಈ ಗಂಟೆಬಡುದ್ದರ ಗಮನ ಮಡುಗಿ ನೆಂಪು ಮಡಿಕ್ಕೊಳೇಕಾದ್ದು, ಪ್ರತಿ ಸರ್ತಿ ಗಂಟೆ ಬಡುದಪ್ಪಗಳೂ ಲೆಕ್ಕವ ಒಂದು ಹೆಚ್ಚು ಮಾಡಿಗೊಂಡು ಹೋಯೇಕಾದ್ಸು ಸ್ಮರಣಶೆಗ್ತಿಗೆ ಒಂದು ಸವಾಲೇ ಸರಿ – ಹೇಳಿದವು ವಿದ್ವಾನಣ್ಣ.

~

ಅಪ್ರಸ್ತುತ ಪ್ರಸಂಗ:

ಹ್ಹ ಹ್ಹಾ!! ಅವಧಾನದ ಬಗ್ಗೆ ಇಷ್ಟೆಲ್ಲ ಮಾತಾಡಿ ಇದೊಂದರ ಬಿಟ್ರೆ ಅಕ್ಕೋ?
ಅವಧಾನದ ಗಂಭೀರ ಸಾಹಿತ್ಯಿಕ ಓಟಕ್ಕೆ ಒಂದೊಂದು ಹಾಸ್ಯ ಲೇಪನ ಕೊಟ್ಟು ಸಭೆಯ ಜಡಬಿಡುಸುದೇ ಅಪ್ರಸ್ತುತ ಪ್ರಸಂಗದ ಕಾರ್ಯ. ಹೆಸರೇ ಹೇಳ್ತ ಹಾಂಗೆ, ಒಬ್ಬ ಪೃಚ್ಛಕ ಅವಧಾನಿಗಳ ಹತ್ತರೆ “ಅಪ್ರಸ್ತುತ” ಅತವಾ, ಅಸಂಬದ್ಧ ಪ್ರಶ್ನೆಗಳ ಕೇಳುಗು.
ಅದಕ್ಕೆ ಅಷ್ಟೇ ಅಸಂಬದ್ಧ ಉತ್ತರವನ್ನೂ ಕೊಡ್ಳಕ್ಕು, ಅತವಾ, ಗಂಭೀರ ಉತ್ತರಂಗಳನ್ನೂ ಕೊಡ್ಳಕ್ಕು.
ಆದರೆ, ಉತ್ತರ ಕೊಡ್ಳೇ ಬೇಕು; ಕೊಡದ್ದೆ ಇಪ್ಪ ಹಾಂಗಿಲ್ಲೆ.

ಉದಾಹರಣೆಗೆ, ಯೇವದೋ ನಿಷೇಧಾಕ್ಷರಿಯ ಇನ್ನಾಣ ಅಕ್ಷರ ಎಂತರ ಹಾಕುಲಕ್ಕು ಹೇದು ಚಿಂತನೆ ಮಾಡಿಂಡಿಪ್ಪ ಸಮಯ ನೋಡಿಗೊಂಡೇ, ಅಪ್ರಸ್ತುತ ಪ್ರಸಂಗಿ ಪಕ್ಕನೆ “ಅವಧಾನಿಗಳೇ, ನಿಂಗೊ ಪ್ರಧಾನಿ ಆದರೆ ಎಂತ ಮಾಡುವಿ?”, ಅತವಾ “ಪೆಟ್ರೋಲು ಕ್ರಯ ಏರಿದ್ದಕ್ಕೆ ನಿಂಗಳ ಪರಿಹಾರ ಎಂತರ” – ಹೀಂಗಿರ್ಸ ಪ್ರಶ್ನೆ ಕೇಳುಲಕ್ಕು.
ಈ ಪ್ರಶ್ನೆಗಳ ಕೇಳಿಯೇ ಬಾಧಿ ಮನಸ್ಸುಗೊ ಒಂದರಿ ಹಗುರ ಆವುತ್ತು; ಅದರೊಟ್ಟಿಂಗೇ, ಅವಧಾನಿಗೊ ಇನ್ನೂ ತಮಾಷೆಯ ಉತ್ತರ ಕೊಟ್ಟು ಇನ್ನೂ ಹಗುರ ಮಾಡುಸುತ್ತವು
– ಹೇಳಿದವು.

~

ಅಷ್ಟಾವಧಾನಕ್ಕೆ ಇವಿಷ್ಟು ಆದರೂ, ಅವಧಾನದ ಸಂಖ್ಯೆ ಏರಿದ ಹಾಂಗೆ ಇನ್ನೂ ಇನ್ನೂ ಪೃಚ್ಛಕಂಗೊ ಸೇರ್ತಾ ಹೋವುತ್ತವಾಡ. ಕಾವ್ಯವಾಚನಲ್ಲಿ ಕನ್ನಡ, ಸಂಸ್ಕೃತ – ಹೇದು ಎರಡು ಸುರು ಆವುತ್ತು; ಅವಧಾನಿಗೊಕ್ಕೆ ಅರಡಿವ ಭಾಶೆಲಿ ಎಲ್ಲ ಪದ್ಯರಚನೆ ಆರಂಭ ಆವುತ್ತು; ಸಮಸ್ಯೆ, ದತ್ತಪದಿ ಬೇರೆಬೇರೆ ಭಾಶೆಲಿ ಆರಂಭ ಆವುತ್ತು – ಹೀಂಗೇ ಶತಾವಧಾನ, ಸಹಸ್ರಾವಧಾನ ನೆಡೆತ್ತಾಡ.

ಯೋ..ಪ!
ಇದೊಂದು ಕಲೆಯೇ ಸರಿ.
ದೇವರ ಕೈಂದ ವಿಶೇಷವಾಗಿ ಸ್ಮರಣಶೆಗ್ತಿಯ ಆಶೀರ್ವಾದ ಪಡಕ್ಕೊಂಡು ಬಂದ ಕೆಲವು ಜೆನಕ್ಕೆ ಮಾಂತ್ರ ಎಡಿಗಕ್ಕಷ್ಟೆ.
ಯೇವದೋ ಬೋಚಬಾವ ಹೋಗಿ ಆನುದೇ ಅಷ್ಟಾವಧಾನ ಮಾಡ್ತೇನೆ ಹೇದರೆ ಎಡಿಯ.
ಒಂದರಿಂದ ಹೆಚ್ಚು ವಿಶಯವ ಒಟ್ಟಿಂಗೇ ಮರದು ಕೂಪದೇ ಬೋಚಬಾವನ ಅವಧಾನ ಕಲೆ – ನೆಗೆಮಾಣಿ ಒಂದೊಂದರಿ ನೆಗೆಮಾಡುಗು. ಅದಿರಳಿ.
ದೊಡ್ಡಜ್ಜನ ಹಾಂಗಿರ್ತೋರುದೇ ಹಲವು ಕಾರ್ಯಂಗಳ ಒಟ್ಟಿಂಗೇ ಮಾಡ್ತವು, ಒಂದು ಲೆಕ್ಕಲ್ಲಿ ನೋಡಿರೆ ಅದುದೇ ಅವಧಾನವೇ ಅಲ್ಲದೋ -ಹೇದು ಅನುಸುದು! 🙂

~

ಪುರಾತನ ಕಾಲಲ್ಲಿ, ಯೇವದೇ ಆಧುನಿಕ ವಸ್ತುಗಳ ಹಂಗಿಲ್ಲದ್ದೇ, ಎಷ್ಟೆಷ್ಟೋ ಮೆಮೊರಿ ತಲೆಯೊಳ ತೆಗದು ಮಡಿಕ್ಕೊಂಡಿತ್ತಿದ್ದವಾಡ; ಬೇಕಪ್ಪಗ ಒಪಾಸು ತೆಗದು ತಪ್ಪ ಹಾಂಗೆ! ಇಂದು?
ಒಂದು ಪದ್ಯ ಕಟ್ಳೆ ನಮ್ಮಂದ ಎಡಿತ್ತಿಲ್ಲೆ.
ಒಂದು ತುಂಡು ಸಾಹಿತ್ಯ ಬರವಲೆ ನಮ್ಮಂದ ಪೂರೈಶುತ್ತಿಲ್ಲೆ;
ಒಂದು ಸ್ವಂತದ್ದು ರಚನೆ ಮಾಡಿ ಹಾಕಲೆ ಎಡಿತ್ತಿಲ್ಲೆ. ಹಳಬ್ಬರು ಬರದ್ದರ ಓದುಲೂ ಪುರ್ಸೊತ್ತಿರ್ತಿಲ್ಲೆ; ಅದು ಬೇರೆ!
ಒಂದು ಪೋನ್ನಂಬ್ರ ನೆಂಪು ಮಡಗಲೂ ನಮ್ಮ ಮೆದುಳಿನ ಉಪಯೋಗುಸೆಳ್ತಿಲ್ಲೆ; ಎಲ್ಲದಕ್ಕೂ ಮೊಬೈಲು, ಕಂಪ್ಯೂಟ್ರು ಇರ್ತು.
ಒಂದೊಂದ್ಲಿ ಒಂದು ಎಷ್ಟು ಹೇದು ಲೆಕ್ಕ ಹಾಕಲೂ ಕ್ಯಾಲ್ಕುಲೇಟ್ರು ಬೇಕಾವುತ್ತು.
ಆಧುನಿಕ ಸಲಕರಣೆಗೊ ಜಾಸ್ತಿ ಆದ ಹಾಂಗೇ, ನಾವು ಮೆದುಳಿನ ಉಪಯೋಗುಸೆಂಬದು ಕಮ್ಮಿ ಆಯಿದು – ಹೇಳ್ತದು ವಿದ್ವಾನಣ್ಣನ ಬೇಜಾರು.

ಪುರಾತನಲ್ಲಿ ಹಲವಾರು ಅಷ್ಟಾವಧಾನಿಗೊ ಇದ್ದರೂ, ಪ್ರಸ್ತುತ ಬಹು ಕಡಮ್ಮೆ ಆಯಿದವಾಡ. ತೆಲುಗಿಲಿ ಕೆಲವು ಜೆನ ಅವಧಾನಿಗೊ ಇದ್ದರೂ, ಕನ್ನಡಲ್ಲಿ ಈಗ ಬೆರಳೆಣಿಕೆಯಷ್ಟು ಜೆನ ಮಾಂತ್ರ ಇಪ್ಪದಾಡ. ಅದರ್ಲಿಯೂ ಶತಾವಧಾನಿಗೊ ಬಹುಷಃ ಒಬ್ಬರೇ – ಆರ್. ಗಣೇಶರು ಮಾಂತ್ರ ಇಪ್ಪದು – ಹೇಳ್ತದು ವಿದ್ವಾನಣ್ಣನ ಅಭಿಪ್ರಾಯ. ಕಷ್ಟದ ಅಷ್ಟಾವಧಾನ ಕಲೆಯ ಒಳಿಶಿ ಬೆಳೆಶಿ ನಮ್ಮೊಟ್ಟಿಂಗೆ ಇಪ್ಪ ಹಲವು ಅವಧಾನಿಗೊಕ್ಕೆ ಒಪ್ಪಣ್ಣನ ವಿಶೇಷ ನಮಸ್ಕಾರಂಗೊ.
“ಎಲ್ಲೋರುದೇ ಬುದ್ಧಿಜೀವಿಗೊ ಅಪ್ಪಲೆ ಹೆರಡ್ತವು; ಆರುದೇ ಬುದ್ಧಿಯ ಉಪಯೋಗುಸೆಂಬಲೆ ಹೆರಡ್ತವಿಲ್ಲೆ ಒಪ್ಪಣ್ಣಾ” ಹೇಳಿ ವಿದ್ವಾನಣ್ಣ ವಿದ್ವಾನಣ್ಣ ಹೇಳಿದ್ದು ಮಾಂತ್ರ ಲಾಯಿಕಲ್ಲಿ ನೆಂಪೊಳುದ್ದು ಒಪ್ಪಣ್ಣಂಗೆ.
ವಿದ್ವಾನಣ ವಿವರುಸಿಗೊಂಡು ಹೋಪಗಳೇ ಗೋಡೆಲಿಪ್ಪ ಗಂಟಾವಾದನ ಆತು. ಬಸ್ಸಿಂಗೆ ಲೇಟಾತು ಹೇದು ಅಂಬೆರ್ಪಿಲಿ ಹೆರಟವು.
~
ಎಷ್ಟೇ ಆದರೂ, ಅವಧಾನ ಹೇಳ್ತದು ಒಂದು ಕಲೆ ಅಪ್ಪನ್ನೇ. ಪ್ರಯತ್ನ ಮಾಡಿರೆ, ಅಭ್ಯಾಸ ಮಾಡಿರೆ ಎಡಿಯದ್ದ ಸಂಗತಿ ಆಗಿರ.
ಪೂರ ಕಲ್ತುಗೊಂಬಲೆ ಎಡಿಯದ್ದರೂ, ಒಂದೊಂದೇ ಆಗಿ ಕಲಿವಲಕ್ಕನ್ನೇ ಬೈಲಿನೋರಿಂಗೆ?

ಎಂತ ಹೇಳ್ತಿ?
~

ಒಂದೊಪ್ಪ: ಅವಧಾನ ಮಾಡ್ಳೆ ವ್ಯವಧಾನ ಇಲ್ಲದ್ದರೂ, ಅವಧಾನವ ಒಳುಶಿ ಬೆಳೆಶಲೆ ತಕ್ಕ ವ್ಯವಧಾನ ಬೆಳೆಶಿಗೊಳ್ಳಿ.

ಸೂ:

 • ಶತಾವಧಾನಿ ಆರ್.ಗಣೇಶರ ಮಾರ್ಗದರ್ಶನಲ್ಲಿ, ಹಲವು ಸಾಹಿತ್ಯಾಸಕ್ತರ ಬಳಗ “ಪದ್ಯಪಾನ” ಹೇಳಿ ಒಂದು ಬೈಲು ಸುರುಮಾಡಿದ್ದವು. ಮದ್ಯಪಾನ ಎಷ್ಟು ಹಾಳೋ, ಪದ್ಯಪಾನ ಅಷ್ಟೇ ಒಳ್ಳೆದು. ಸಮಸ್ಯಾಪೂರಣ, ದತ್ತಪದಿ ಇತ್ಯಾದಿಗೊ ಅಲ್ಲಿ ನೆಡೆತ್ತಾ ಇರ್ತು. ಆಸಕ್ತ ಎಲ್ಲೋರುದೇ ಭಾಗವಹಿಸಲಕ್ಕು.
  ಸಂಕೊಲೆ: http://padyapaana.com
 • ಅವಧಾನ ಕಲೆಲಿ ಒಂದಾದ “ಸಮಸ್ಯಾ ಪೂರಣ”ವ ನಮ್ಮ ಬೈಲಿಲಿಯೂ ಅಳವಡುಸಿಗೊಂಡರೆ ಹೇಂಗೆ?
  ಮೊನ್ನೆ ಬೆದುರ ಹೂಗಿನ ಶುದ್ದಿಲಿ ಅದಾಗಲೇ ಹಲವು ಜೆನ ಸೇರಿದ್ದಿ; ಅದೇ ರೀತಿ ಮುಂದುವರುಸುತ್ತರೆ ಎಲ್ಲೋರುದೇ ಒಟ್ಟಿಂಗಿದ್ದಿ ಅಲ್ಲದೋ?
 • ಅವಧಾನದ ಸಣ್ಣ ವೀಡ್ಯ, ಅಂತರ್ಜಾಲಲ್ಲಿ ಸಿಕ್ಕಿದ್ದದು:
 • ಭಾಗ – 01:
 • ಭಾಗ – 02:

ಒಪ್ಪಣ್ಣ

   

You may also like...

21 Responses

 1. ಸುಮನ ಭಟ್ ಸಂಕಹಿತ್ಲು. says:

  ಒಪ್ಪಣ್ಣನ ಶುಧ್ಧಿ ಯಾವತ್ತಿನಂತೆ ತುಂಬಾ ಒಪ್ಪ ಒಪ್ಪ ಇದ್ದು.
  ಎಲ್ಲರ ಪ್ರತಿಕ್ರಿಯೆಯೂ ತುಂಬಾ ಲಾಯಿಕ ಇದ್ದು.
  ಒಪ್ಪಣ್ಣನ ಪ್ರತೀ ವಾರದ ಶುಧ್ಧಿಗಳ ಸಾರವ ಎಲ್ಲ ನಮ್ಮ ಜೀವನಲ್ಲಿ ಅಳವಡಿಸಿಕೊಂಬತ್ತದ್ದು.
  ಇಲ್ಲಿ ಎಂಗಳ ಮಗ ಯಾವಾಗಲೂ ಪಾಪಕ್ಕೆ ಇದ್ದು ಒಂದೊಂದರಿ ಲೂಟಿ ಮಾಡಿರೆ ಕೋಪ ಬತ್ತು, ತಾಳ್ಮೆ ತಪ್ಪುತ್ತು.
  ಹಾಂಗಿಪ್ಪಗ ಅವಧಾನಿಗಳ ತಾಳ್ಮೆಯ ಮೆಚ್ಚಲೇ ಬೇಕು.
  ಇನ್ನು ಅವಧಾನಿಗಳ ಜ್ನಾಪಕ ಶಕ್ತಿ, ಕಾರ್ಯಕ್ರಮ ನಡಶಿಕೊಡುವ ಚಂದ ಎಲ್ಲ ಭಾರೀ ಲಾಯಿಕ, ಅದರ ವಿವರ್ಸಿದ ವಿದ್ವಾನಣ್ಣ, ಒಪ್ಪಣ್ಣಂಗೆ ಧನ್ಯವಾದಂಗೊ.
  ಆನು ಸಣ್ಣ ಇಪ್ಪಗ ೨ ಸರ್ತಿ ಆರ್. ಗಣೇಶರ ಕಾರ್ಯಕ್ರಮ ಅಪ್ಪನ ಒಟ್ಟಿಂಗೆ ಹೋಗಿ ಆನಂದಿಸಿದ್ದೆ.
  ಇನ್ನಾಣ ವಾರ ಇನ್ನೆಂತ ಶುಧ್ಧಿ ಒಪ್ಪಣ್ಣ?
  ~ಸುಮನಕ್ಕ…

 2. ವಿದ್ಯಾ ರವಿಶಂಕರ್ says:

  ಅದ್ಭುತ ಲೇಖನ ಒಪ್ಪಣ್ಣ. ಈ ಶತಾವಧಾನಿಗಳ ವಿದ್ವತ್ತಿನ ಬಗ್ಗೆ ವಿವರಿಸಿದ್ದದು ಲಾಯಿಕಾಯಿದು. ಇಂತಹ ಅವಧಾನಿಗಳ ಬಗ್ಗೆ ವಿವರವಾಗಿ ತಿಳಿಸಿದ ಒಪ್ಪಣ್ಣಂಗೆ ದನ್ಯವಾದಂಗೊ.

 3. ದೀಪಿಕಾ says:

  ಭಾರಿ ಲಾಯ್ಕಾಯಿದು ಲೆಖನ..ಒ೦ದು ೭-೮ ವರ್ಷದ ಹಿ೦ದೆ ಎ೦ಗೊ ಕುದುರೆಮುಖಲ್ಲಿ ಇಪ್ಪಗ ಅಲ್ಲಿ ಒ೦ದರಿ ಆರ್.ಗಣೇಶರ ಅಷ್ಟಾವಧಾನ ಕಾರ್ಯಕ್ರಮ ಆಗಿತ್ತು..ಇದರ ಓದಿ ಅಪ್ಪಗ ಅಲ್ಲಿ ಆದ ಸ೦ಖ್ಯಾಬ೦ಧ ಒ೦ದು ಎನಗೆ ಸರೀ ನೆನಪ್ಪಾತು..ಬೆರೆ೦ತ ನೆನಪ್ಪಿಲ್ಲೆ. ಲೆಖನ ಓದಿಕ್ಕಿ ಇನ್ನೊ೦ದರಿ ಹೋಯೆಕು ಹೀ೦ಗಿಪ್ಪ ಕಾರ್ಯಕ್ರಮಕ್ಕೆ ಹೇಳಿ ಆಯ್ದು.

 4. shyamaraj.d.k says:

  ಭಾರೀ ಲಾಯಕ ಆಯಿದು ಒಪ್ಪಣ್ಣಾ….

 5. ಮಂಗ್ಳೂರ ಮಾಣಿ says:

  ಒಳ್ಳೆ ಶುದ್ದಿ ಒಪ್ಪಣ್ಣಾ..
  ಎನಗೆ – “ಅವಧಾನ ಹೇಳಿ ಒಂದಿದ್ದು” ಹೇಳಿ, ಕೇಳಿ ಗೊಂತಿತ್ತಷ್ಟೇ.. ನೀ ಬರದ್ದು ಅವಧಾನಕಲೆಯ ಬಗ್ಗೆ ರಜ್ಜ ತಿಳುಕ್ಕೊಂಬಲೆ ಅವಕಾಶ ಆದಹಾಂಗಾತು 🙂
  ಆನೂ ಪದ್ಯಪಾನ ಮಾಡಿಯೊಂಡಿರ್ತೆ. ಬಳುಸಲೆ ಎಡಿಯದ್ರೂ ತಿಂಬಲೆಡಿಗು 😉

 6. ಗಣೇಶ್ says:

  ಪ್ರಿಯ ಒಪ್ಪಣ್ಣನವರೇ ಹಾಗೂ ಅವರಿಗೆ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿರುವ ಎಲ್ಲ ಸಹೃದಯರೇ,
  ನಿಮ್ಮ ಅವಧಾನಕಲಾಪ್ರೀತಿಗೂ ನನ್ನ ಬಗೆಗಿರುವ ಸದ್ಭಾವನೆಗೂ ಧನ್ಯವಾದಗಳು. ನನ್ನ ಗೆಳೆಯ ಶ್ರೀ. ಕೆ.ಬಿ.ಎಸ್. ರಾಮಚಂದ್ರನ ಮೂಲಕ ಈ ನಿಮ್ಮ ವಿವರಗಳೆಲ್ಲ ತಿಳಿದುವು. ನಿಮ್ಮ ಬರೆಹಗಳೆಲ್ಲ ಚೆನ್ನಾಗಿವೆಯೆಂದರೆ ನನ್ನನ್ನೇ ಹೊಗಳಿದಂತಾಗುತ್ತದೆ .ಹೀಗಾಗಿ ಆ ಬಗೆಗೆ ಏನನ್ನೂ ಹೇಳದೆ ವಿರಮಿಸುತ್ತೇನೆ. ಮತ್ತೊಮ್ಮೆ ನಮನಗಳು.

  • ಗೌರವಾನ್ವಿತ ಅವಧಾನಿ ಗಣೇಶರಿಂಗೆ ಬೈಲಿಂಗೆ ಹೃತ್ಪೂರ್ವಕ ಸ್ವಾಗತಮ್.
   ತುಂಬಿದ ಕೊಡ ತುಳುಕುವುದಿಲ್ಲ; ಹಾಗೆಯೇ ವಿದ್ವಜ್ಜನರನ್ನು ಹೊಗಳಿದರೆ ಮುಜುಗರವಾಗುತ್ತದಂತೆ 🙂

   ಈ ಶುದ್ದಿಯ ಓದಿ ಒಪ್ಪ ಕೊಟ್ಟು ಪ್ರತಿಕ್ರಯಿಸಿದ್ದಕ್ಕೆ ಅನಂತ ವಂದನೆಗಳು.
   ಅಂತೆಯೇ, ಶತಾವಧಾನಿಗಳನ್ನು ಬೈಲಿಗೆ ಕರೆತಂದ ರಾಮಚಂದ್ರಣ್ಣನಿಗೂ, ವಂದನೆಗಳು.

 7. ಬೆಟ್ಟುಕಜೆ ಮಾಣಿ says:

  ಉತ್ತಮ ಶುದ್ಧಿ..ಲಾಯ್ಕ ಆಯ್ದು..ಇದರ ರುಚಿ ಸ್ವಲ್ಪ ಸಿಕ್ಕಿದ್ದು..ಇನ್ನು ನಮ್ಮ ನೆರೆಕರೆಲಿ ಎಲ್ಯಾರು ಗಣೇಶಣ್ಣನ ಶತಾವಧಾನ ಇದ್ದರೆ ಹೋಯೆಕ್ಕೇ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *