ಅಟ್ಟ ಹತ್ತಿ “ಓಲೆ ಬಿಡುಸಿ”; ಬಹುರಹಸ್ಯ ಸಿಕ್ಕುಗು..!

ವಿಟ್ಳದೇವರ ಬ್ರಮ್ಮಕಲಶದ ಗೌಜಿಯೋ ಗೌಜಿಲಿ ಕಳಾತು.
ಅಷ್ಟಪ್ಪದ್ದೇ ಪುತ್ತೂರು ಬ್ರಮ್ಮಕಲಶಕ್ಕೆ ತೆಯಾರಾವುತ್ತಾ ಇದ್ದದಾ!
ಇದರೆಡಕ್ಕಿಲಿ ಕಳಾಯಿ ಗೀತತ್ತೆಯ ಮದುವೆ ಗೌಜಿಯೂ ಬಂತು.
ನವಗೆ ಜೆಂಬ್ರದೂಟಕ್ಕೆ ಕೊರತ್ತೆ ಬಾರ – ಹೇದು ಈ ಒರಿಶದ ಒಯಿಜಯಂತಿಲಿ ಇದ್ದೋ ಏನೋ! ಉಮ್ಮಪ್ಪ.
~

ನೆರೆಕರೆಯ ಹತ್ತಾರು ಮನೆಯ ಕಾಗತಂಗಳ ಪೂರ ಓ ಆ ಬೈಲಕರೆ ಪೋಷ್ಟುಪೆಟ್ಟಿಗೆಲಿ ಹಾಕುಸ್ಸು ನಮ್ಮ ಪೋಷ್ಟುಮನಿಶ್ಶ°.
ಆರಾರು ಕರಿಮಾರ್ಗದ ಕರೆಂಗೆ ಹೋಪದಿದ್ದರೆ “ಹೊಸತ್ತು ಇದ್ದೋ?”ದು ನೋಡಿಂಡು ಬಪ್ಪದು ಕ್ರಮ.
ಕಳಾಯಿ ಮದುವೆ ಕಳಿಶಿ ಬಪ್ಪಾಗ ಪೋಷ್ಟುಪೆಟ್ಟಿಗೆ ನೋಡಿದ್ದರಲ್ಲಿ – ಒಪ್ಪಣ್ಣಂಗೆ ಎಂತೂ ಕಾಗತ ಇತ್ತಿಲ್ಲೆ, ಆದರೆ ತರವಾಡುಮನೆ ಶಾಂಬಾವಂಗೆ ಎಂತದೋ ಇಂಗ್ಳೀಶು ಕಾಗತ ಬಂದಿತ್ತು – ಎಂತಾರು ಒಯಿವಾಟಿಂದೋ ಮಣ್ಣ ಆಯಿಕ್ಕು.
ಹಾಂಗೆ, ಹಿಡ್ಕೊಂಡೆ. ತರವಾಡುಮನೆ ಆಗಿಯೇ ಬಂದು ಕಾಗತ ಕೊಟ್ಟಿಕ್ಕಿಯೇ ಮನಗೆತ್ತಿದೆ.
ಕತೆ ಇಷ್ಟೇ ಆದರೆ ಬೈಲಿಂಗೆ ಹೇಳುಲೆ ಎಂತ ಇದ್ದು, ಅಲ್ಲದೋ?
ತರವಾಡುಮನೆಲಿ ಎಂತಾತು? ರಂಗಮಾವ ಎಂತ ಮಾಡಿಗೊಂಡಿತ್ತವು? ಅವು ಎಂತ ಹೇಳಿದವು?
ಅಲ್ಲೇ ಇಪ್ಪದು ಈ ವಾರದ ಸಂಗತಿ!
~

ತರವಾಡುಮನೆ ಹೇದರೆ ಮೂರಂತಸ್ತಿನ ಮನೆ.
ಬಾಜಿರ, ಕೈಸಾಲೆ, ಉಗ್ರಾಣ, ಉಪ್ಪರಿಗೆ, ಅಟ್ಟ – ಎಲ್ಲವೂ ಇದ್ದು.
ಅದಾ, ಅಂದೊಂದರಿ ಈ ಬಗ್ಗೆ ನಾವು ಮಾತಾಡಿದ್ದು ನೆಂಪಿದ್ದಲ್ಲದೋ? (http://oppanna.com/oppa/adda-pakkasu-bertolu)
ಎಲ್ಲ ಒಳವೂ ಸುವಸ್ತುಗೊ ತುಂಬಿದ್ದು. ಇನ್ನು ತುಂಬುಸುತ್ತರೂ ಜಾಗೆ ಇದ್ದು. ಒಟ್ಟು ಆ ಮನೆಯೇ ಪರಿಪೂರ್ಣ!

ಉಪ್ಪರಿಗೆ ಮೇಲಿಪ್ಪ ಅಟ್ಟಲ್ಲಿ ಅಂತೂ – ಬ್ರಹ್ಮಾಂಡವೇ ಇದ್ದು.
ಒಂದೊಂದರಿ ತೆಗದರೆ ಎಂತೆಲ್ಲ ಹೆರ ಬತ್ತು ಹೇಳ್ತದು ಸ್ವತಃ ಬ್ರಹ್ಮಂಗೂ ಅರಡಿಯದೋದು!
ಬ್ರಹ್ಮಂಗೆ ಅರಡಿಯದ್ದರೆ ಎಂತಾತು, ರಂಗಮಾವಂಗೆ ಅರಡಿಗು.

ಎಲ್ಲೆಲ್ಲಿ ಅಡಕ್ಕೆ ಇದ್ದು, ಎಲ್ಲೆಲ್ಲಿ ಹೇಮಾರ್ಸಿ ಮಡಗಿದ್ಸು ಇದ್ದು, ಎಲ್ಲೆಲ್ಲಿ ಕೊಪ್ಪರಿಗೆ ಇದ್ದು, ಎಲ್ಲೆಲ್ಲಿ ತಾಳೆಗರಿ ಕಟ್ಟ ಇದ್ದು – ಎಲ್ಲವುದೇ.
ಅದಾ – ಅಂದೊಂದರಿ ಕೈಲು, ಕುಡ್ತೆ, ಸೇರು ಎಲ್ಲ ಒಂದರಿ ತೆಗದು ಮನಾರಕ್ಕೆ ಉದ್ದಿ ಪೋಚಕಾನ ಮಾಡಿ, ಒಪಾಸು ಮಡಗಿದ್ದು – ನಿಂಗೊಗೆಲ್ಲ ನೆಂಪಿಕ್ಕು. (http://oppanna.com/oppa/kailu-kudte-seru-preserve)
ಒರಿಶಕ್ಕೊಂದರಿ ಆದರೂ ಹಾಂಗೆ ನೋಡಿಗೊಂಡರೆ ಮಾಂತ್ರವೇ ಸೊತ್ತುಗಳ ಬಾಳತನ ಬಕ್ಕಷ್ಟೇ – ಹೇಳ್ತದು ರಂಗಮಾವಂಗೆ ಅವರ ಅಪ್ಪ ಶಂಬಜ್ಜ° ಕಲುಶಿದ ಸಂಸ್ಕಾರ.
ಮೊನ್ನೆ ಒಪ್ಪಣ್ಣ ಹೋಪಗಳೂ ಹೀಂಗೇ ಒಂದು ಸಂಸ್ಕಾರ ಮಾಡಿಂಡು ಇತ್ತಿದ್ದವು.
ಎಂತರ?
~

ಅಟ್ಟದ ಇಟ್ಟೇಣಿಬುಡಲ್ಲಿ ಜೋಡುಸಿ ಮಡಗಿ, ಪಟ್ಟೆಒಸ್ತ್ರಲ್ಲಿ ಸುತ್ತಿದ ತಾಳೆಗರಿಯ ಕಟ್ಟವ ತಂದು ಮನಾರ ಮಾಡಿಂಡಿತ್ತವು.
ಒರಿಶಕ್ಕೊಂದರಿ ಅವು ಹಾಂಗೆ ಮನಾರ ಮಾಡಿ, ಧೂಳು, ಬಲೆಯೋ, ಪುಸ್ತಕದ ಹುಳುವೋ – ಬಂದು ಸೇರಿಗೊಂಡಿದ್ದರೆ ಎಲ್ಲ ತೆಗದು, ಉದ್ದಿ, ಇರುವಾರ ಜೋಡುಸಿ ಮಡಗುದು ಅವರ ಕೆಲಸ.
ಈ ಒರಿಶದ ಆ ದಿನ ಮೊನ್ನೆ ಬಂದಿತ್ತು.
ಹೆರಾಣ ಜೆಗೆಲಿಲಿ ಈಗ ಅವರದ್ದೇ ಕಾರ್ಬಾರು. ಪಾತಿಅತ್ತೆಗೆ ಈಗ ನೆಲ ಉದ್ದಿಕ್ಕಲೆಡಿಯ; ಉದ್ದಿರೂ ಪ್ರೇಜನ ಇಲ್ಲೆ, ಪುನಾ ಕಸವಕ್ಕು.
ಹದ್ನೈದಕ್ಕೂ ಹೆಚ್ಚು ಓಲೆಗರಿ ಪುಸ್ತಕವ ಒಂದು ಕೆರಿಶಿಲಿ ಹರಾ..ಗಿ ಮಡಗಿದ್ದವು ರಂಗಮಾವ°.
ಬೇರೆಬೇರೆ ಗಾತ್ರದ ಪುಸ್ತಕಂಗೊ. ಕೆಲವು ಉದ್ದ, ಕೆಲವು ಸಣ್ಣ, ಕೆಲವು ಕಪ್ಪಣೆ, ಕೆಲವು ಬೆಳ್ಚೆ – ಬೇರೆಬೇರೆ ಕಾಲಲ್ಲಿ ಬರದ್ದಾಯಿಕ್ಕು.

ಓಲೆಗರಿ ಪುಸ್ತಕದ ಎರಡೂ ಹೊಡೆಲಿ ಮರದ ತುಂಡುಗೊ ಇರ್ತು, ಅದುವೇ ಪುಸ್ತಕದ ಬೈಂಡು.
ಆ ಮರದ ತುಂಡಿಲಿ ಎರಡು ಒಟ್ಟೆ – ಆ ಒಟ್ಟೆ ಬಪ್ಪ ಜಾಗೆಲೇ ಪ್ರತೀ ಓಲೆಗೂ ಒಟ್ಟೆ ಇರ್ತು.
ಒಟ್ಟೆಲೆ ಆಗಿ ಕೆಂಪು ಪಟ್ಟೆನೂಲು ಸುರುದ್ದು, ಇಡೀ ಪುಸ್ತಕವ ಗಟ್ಟಿಗೆ ಹಿಡುದು ನಿಂದಿದು. ಪಟ್ಟೆನೂಲು ಅಭಯ ಕೊಡ್ತಡ ಅಲ್ಲದೋ!?
ಒಪ್ಪಣ್ಣನ ಕೈಲಿದ್ದ ಪೋಷ್ಟುಕಾಗತವ ಅಲ್ಲೇ ಮೇಜಿನ ಮೇಗೆ ಮಡಗಿ ರಂಗಮಾವನ ಹತ್ತರೆ ಮಾತಾಡ್ಳೆ ಕೂದೆ.
~

ಕೆರಿಶಿಂದ ಪುಸ್ತಕ ಒಂದೊಂದನ್ನೇ ಕೈಲಿ ತೆಗದು, ಮಣೆಯ ಮೇಗೆ ಮಡಗುತ್ತವು ರಂಗಮಾವ°.
ಆ ಧೂಳುಹಿಡ್ಕಟೆ ಪುಸ್ತಕವ ಒಂದು ಒಸ್ತ್ರಲ್ಲಿ ಸುತ್ತಲೂ ಉದ್ದಿಕ್ಕಿ, ಕಟ್ಟ ಬಿಡುಸಿಕ್ಕಿ, ಎಲ್ಲ ಹಾಳೆಗಳನ್ನೂ ಪರ್ರನೆ ಬಿಡುಸೆಂಡು, ಎಡಕ್ಕಿಲಿ ಪುಸ್ತಕದ ಹುಳು ಎಂತೂ ಇಲ್ಲೆನ್ನೇ ಹೇದು ಧೃಢಮಾಡಿಕ್ಕಿ, ಒಪಾಸು ಕಟ್ಟ ಸರೀ ಕಟ್ಟಿಕ್ಕಿ – ಇನ್ನೊಂದು ಕೆರಿಶಿಲಿ ಮಡಗುತ್ತವು. ಪಟ್ಟೆನೂಲು ಕುಂಬಾದರೆ ಬದಲುಸಲೆ ಎರಡುಮಾರು ಪಟ್ಟೆನೂಲುದೇ ಇದ್ದು ಕರೆಲಿ.
ಇದೆಲ್ಲ ಹೊತ್ತು ತಿಂಬ ಕೆಲಸ. ಮಾಡ್ತ ಕಾರ್ಯಲ್ಲಿ ಪ್ರೀತಿ ಇದ್ದರೇ ಮಾಡ್ಳೆಡಿಗಕ್ಕಷ್ಟೆ. ಅಂಬೆರ್ಪಿನೋರಿಂಗೆ ಎರಡು ಪುಸ್ತಕದ್ದು ಮಾಡುವಗಳೇ ಬೊಡುದು ಹೋಕು!
ರಂಗಮಾವಂಗೆ ಇದು ಅಭ್ಯಾಸ ಇಪ್ಪ ಕಾರಣ ಎಡಕ್ಕಿಲಿ ಮಾತಾಡಿಗೊಂಬಲೂ ಸಮಸ್ಯೆ ಆಯಿದಿಲ್ಲೆ.
“ಇದೆಲ್ಲ ಎಂತರ ಪುಸ್ತಕಂಗೊ ಮಾವಾ?” ಈ ಓಲೆಗರಿ ಪುಸ್ತಕಂಗಳ ಬಗ್ಗೆ ಹೇಳ್ತಿರಾ ಮಾವಾ ಕೇಟೆ.
ಒಪ್ಪಣ್ಣನ ಹತ್ತರೆ ಮಾತಾಡಿಗೊಂಡೇ ಆ ಕಾರ್ಯ ಸಾಗಿತ್ತು.
~
ಇದುವೋ – ಇದೂ.. ಹೇದು ಕೈಲಿದ್ದ ಪುಸ್ತಕವ ಒಂದರಿ ನೋಡಿಕ್ಕಿ “ವಿಷ್ಣು ಸಹಸ್ರನಾಮ” ಹೇಳಿದವು!
ಈಗ ಆದರೆ ಶುಭದ ಕಿಟ್ಟಣ್ಣಭಾವನತ್ರೆ ಕೇಳಿರೆ ರಪಕ್ಕ ಒಂದು ಪುಸ್ತಕ ಕೊಡ್ತವು, ಆದರೆ ಮದಲಿಂಗೆ ಹಾಂಗಲ್ಲನ್ನೇ?
ಎಲ್ಲವನ್ನೂ ಪ್ರತಿ ತೆಗದಾಯೇಕು. ಒಂದು ವಿಷ್ಣುಸಹಸ್ರನಾಮವ ಕೈಲಿ, ಓಲೆಗರಿಲಿ ಬರೇಕಾರೆ ಎಷ್ಟು ಹೊತ್ತು ಬೇಕಪ್ಪೋ!?
ಇಪ್ಪದರ್ಲಿ ಸಣ್ಣ ಪುಸ್ತಕ ಅದುವೇಯೋದು!

ಅಂಬಗ ಒಳುದ್ದೆಲ್ಲ ಎಂತೆಂತರ? ಕೇಳಿದೆ.
ಇದಾ – ಇದು ಜೈಮಿನಿ, ಇದು ರಾಮಾಯಣ, ಇದಾ, ಇದು ಮೂರು ಮಂತ್ರ-ಪ್ರಯೋಗ ಪುಸ್ತಕಂಗೊ, ಇದು ಎರಡು ಜ್ಯೋತಿಷದ್ದು. ಇದು ಮಂತ್ರವಾದದ್ದು, ಇದು ವೈದ್ಯದ್ದು – ಹೇದು ಮುಟ್ಟಿಮುಟ್ಟಿ ತೋರ್ಸಿದವು.
“ಆರದ್ದು ಇದೆಲ್ಲ? ಇಲ್ಲಿಗೆ ಹೇಂಗೆ ಬಂತು?”
ಆರೋ – ಈ ಮನೆಲಿ ಹುಟ್ಟಿ ಬಾಳಿ ಬೆಳಗಿದೋರು ಸಂಪಾಲುಸಿದ್ದು, ಅತವಾ ಬರದ್ದು, ಅತವಾ ಪ್ರತಿ ತೆಗದು ಮಡಿಕ್ಕೊಂಡದು.
ಎಲ್ಲೆಲ್ಲಿಂದ ಸಂಗ್ರಹ ಮಾಡಿದವು ಹೇದು ಗೊಂತಿಲ್ಲೆ, ಆದರೆ ಈಗ ನಮ್ಮ ಸಂಗ್ರಹಲ್ಲಿ ಇದ್ದು – ಹೇಳಿದವು ರಂಗಮಾವ°.
ತರವಾಡುಮನೆಯ ಆರೋ ಒಬ್ಬ ಅಜ್ಜಂಗೆ ಆಯುರ್ವೇದ ಆಸಕ್ತಿ ಇತ್ತು,
ಮತ್ತೊಬ್ಬಂಗೆ ಜ್ಯೋತಿಷ್ಯ ಅರಡಿಗಾಗಿತ್ತೋ ಏನೊ,
ಮತ್ತೊಬ್ಬಂಗೆ ಹಳ್ಳಿ ವೈದ್ಯಲ್ಲಿ ನಂಬಿಕೆ ಇತ್ತು,
ಮತ್ತೊಬ್ಬಂಗೆ ಯಕ್ಷಗಾನ, ಕಾವ್ಯವಾಚನ – ಹಾಂಗೆ ಅವೆಲ್ಲ ಸಂಪಾಲುಸಿ ಮಡಗಿದ್ದಾಯಿಕ್ಕು!
ಅಂತೂ ಇಂತೂ ಈಗ ರಂಗಮಾವನ ಸಂಗ್ರಹ ಬೆಳದೇ ಬೆಳದತ್ತು.
ಅಜ್ಜಂದ್ರ ಜೀವನಕಾಲಘಟ್ಟಕ್ಕೆ, ಅವರವರ ಆಸಕ್ತಿದರ, ಅಮೂಲ್ಯ ಮಾಹಿತಿಗಳ ಹೆರ್ಕಿ ಇದರೊಳ ಮಡಗಿದ್ದವು.
ಅವ್ವೇ ಗೌರವಲ್ಲಿ ಸಂಪಾಲುಸಿ ಕೊಟ್ಟಿಪ್ಪಗ, ನವಗೆ ಅದರ ಒಂದು ಒರಿಶಕ್ಕೊಂದರಿ ಆದರೂ ಪೋಚಕಾನ ಮಾಡಿ ಮಡಗಲೆ ಎಡಿಗಾಗೆಡದೋ– ಹೇಳ್ತದು ರಂಗಮಾವನ ಅನಿಸಿಕೆ.
ಹಾಂಗೆ, ಒರಿಶಕ್ಕೊಂದು ದಿನ ಶ್ರದ್ಧೇಲಿ ಕೂದುಗೊಂಡು, ಈ ಕಾರ್ಯ ಮಾಡುದು.
~

ತಾಳೆಗರಿ

ರಂಗಮಾವನ ಹತ್ತರೆ ಇದ್ದದು ಇದೇ ನಮುನೆಯ ಪುಸ್ತಕಂಗೊ (ಪಟ: ಇಂಟರ್ನೆಟ್ಟು)

ರಂಗಮಾವಂಗೆ ಇಷ್ಟು ಶ್ರದ್ಧೆ ಬಪ್ಪಲೆ ಕಾರಣ ಎಂತರ –ಹೇಳ್ತದನ್ನೂ ವಿವರ್ಸಿದವು, ಒಂದು ಕತೆಯ ಒಟ್ಟಿಂಗೆ.
ಕತೆ ಹೇದರೆ ಹಳೇ ಕತೆ. ಹಳತ್ತಾದಷ್ಟು ಕ್ರಯ ಜಾಸ್ತಿ ಅಲ್ಲದೋ; ಆದರೆ ಇದು ಎಷ್ಟು ಹಳತ್ತು?
ರಂಗಮಾವನ ಅಪ್ಪ ಶಂಬಜ್ಜ°, ಅವರ ಅಪ್ಪ ಎಂಕಪ್ಪಜ್ಜ°, ಅವರ ಅಪ್ಪ ಶಂಬಜ್ಜ°.
ವಿನುವಿಂಗೆ ಅಪ್ಪಗ ಅಪ್ಪ-ಅಜ್ಜ-ಪಿಜ್ಜ-ಮುದಿಅಜ್ಜ ಅಲ್ಲ, ತೊಂಡಜ್ಜ!!
ರಂಗಮಾವಂಗೆ ಗೊಂತಿಪ್ಪ ಪ್ರಕಾರಲ್ಲಿ ಆ ತೊಂಡಜ್ಜ ಶಂಬಜ್ಜಂಗೆ ಮಂತ್ರವಾದ ಎಲ್ಲ ಇದ್ದತ್ತಾಡ.
ಅವು ಎಲ್ಲಿಯೋ ತೆಂಕ್ಲಾಗಿ ಹೋಗಿ ಕಲ್ತುಗೊಂಡು ಬಂದದಾಡ; ಹಾಂಗೆ ಕೆಲವು ಓಲೆಗರಿಗೊ ಮಲೆಯಾಳ ಲಿಪಿಯೂ, ತುಳುಲಿಪಿಲಿಯೂ ಇಪ್ಪದಿದ್ದು – ಹೇಳಿ ಎರಡು ಮೂರರ ಮುಟ್ಟಿ ತೋರ್ಸಿದವು ರಂಗಮಾವ°.

ಒಂದರಿ ಆ ತೊಂಡು ಶಂಬಜ್ಜಂಗೆ ಅವರ ಮನೆದೇವರ ಮೂಲಮಂತ್ರ ಯೇವದು ಹೇದು ಸಂಶಯ ಬಂತಾಡ.
ನಿತ್ಯಪೂಜೆಗೆ ಧ್ಯಾನ, ಆವಾಹನೆ, ನೈವೇದ್ಯ ಎಲ್ಲ ಇದ್ದರೂ – “ಮೂಲಮಂತ್ರಲ್ಲಿ ಅರ್ಚನೆ ಮಾಡಿರೆ ಅವರ ಮಂತ್ರವಾದ ಇನ್ನೂ ಸಿದ್ಧಿಸುಗು” ಹೇಳ್ತದು ಅವರ ಅನಿಸಿಕೆ. ಹಾಂಗೆ, ಮೂಲಮಂತ್ರ ಯೇವದು!?
ಅವರ ಪ್ಪ, ತೊಂಡು ಎಂಕಪ್ಪಜ್ಜಂಗೆ ಕೇಳಿರೆ ಗೊಂತಿಲ್ಲೆ. ಒಂದೋ ಪಾಠ ಆಗಿರ, ಅತವಾ ರೂಢಿಲಿ ಇತ್ತಿಲ್ಲೆ ಆಯಿಕ್ಕು.
ಹಾಂಗೆ, ಮತ್ತೆಂತ ಮಾಡುದು?
ಕುಲಪುರೋಹಿತರ ಹತ್ತರೆ ಕೇಳುಲೆ ಹೋದವು.
“ಸಾಮಾನ್ಯವಾಗಿ ನಿಂಗಳ ಮನೆದೇವರಾದ ಇಂತದ್ದಕ್ಕೆ ಇಂತಾ ಮೂಲಮಂತ್ರ ಇಪ್ಪದು. ಆದರೆ ನಿಂಗಳ ಮನೆ ಕ್ರಮ ಹೇದು ಪ್ರತ್ಯೇಕ ಇದ್ದೋ ಗೊಂತಿಲ್ಲೆ” – ಹೇಳಿದವಾಡ.
ಅಂತೂ ಆ ಸಂಶಯಲ್ಲೇ ಇದ್ದಿದ್ದವು ಆ ಶಂಭಜ್ಜ.
~
ಅದೊಂದು ದಿನ ಯೇವದೋ ಗಳಿಗೆಲಿ – ಮನೆ ಅಟ್ಟಲ್ಲಿದ್ದಿದ್ದ ಓಲೆಗರಿ ಪುಸ್ತಕಂಗಳ – ಪ್ರತಿಯೊಂದನ್ನೂ – ತೆಗದು ಪ್ರಪ್ರತ್ಯೇಕವಾಗಿ ಓದಲೆ ಸುರುಮಾಡಿದವಾಡ ಶಂಬಜ್ಜ.
ಹೀಂಗೇ ಓದಲೆ ಸುರುಮಾಡಿದ್ದು – ಎಂತೆಲ್ಲ ಸಂಗ್ರಹ ಇದ್ದು ನೋಡುವ° ಹೇದು.
ಅದರ್ಲಿ ಒಂದು ಪುಸ್ತಕದ ಸುರೂವಾಣ ಪುಟಲ್ಲಿ “ಮನೆದೇವರ ಪೂಜಾಕ್ರಮವನ್ನು ಬರೆಯುವುದಕ್ಕೆ ಶುಭಮಸ್ತು” – ಹೇದು ಬರಕ್ಕೊಂಡಿತ್ತಾಡ.
ಅವರ ಮನೆಯ ಆರೋ ಹಿರಿಯೋರು ಬರದು ಮಡಗಿದ್ದು ಸಿಕ್ಕಿತ್ತಾಡ.
ಆ ಪುಸ್ತಕಲ್ಲಿ – ಅವರ ಮನೆದೇವರು ಎಂತಕೆ ಆ ದೇವರು,
ಕುಲ ಪುರೋಹಿತ್ರು ಆರು,
ಗುರು ಪೀಠ ಯೇವದು,
ಅವರ ದೇವರ ಪೂಜಾಕ್ರಮ ಎಂತರ,
ನೈವೇದ್ಯ ಎಷ್ಟು – ಇತ್ಯಾದಿ ಸಮಗ್ರ ವಿವರಂಗೊ ಇದ್ದತ್ತಾಡ.
ಅದೂ ಅಲ್ಲದ್ದೆ, ಅವು ತುಂಬ ಸಮಯಂದ ಹುಡ್ಕಿಂಡಿದ್ದಿದ್ದ “ಮನೆದೇವರ ಮೂಲಮಂತ್ರ”ವನ್ನೂ ಬರದು ಮಡಗಿತ್ತಿದ್ದವಾಡ!
ಓಹ್, ಹುಡ್ಕಿಂಡಿದ್ದ ಬಳ್ಳಿ ಕಾಲಿಂಗೇ ಸುತ್ತಿಗೊಂಡತ್ತು! ಹಿತ್ತಿಲ ಗಿಡಲ್ಲೇ ಮದ್ದು ಇದ್ದತ್ತು!!
ಆರೋ ಮದಲಿಂಗೆ ಬರದು ಮಡಗಿದ ಪುಸ್ತಕಲ್ಲಿ ತಾನು ಹುಡ್ಕಿಂಡಿದ್ದದೇ ಸಿಕ್ಕಿತ್ತಪ್ಪೋ!
ಅಷ್ಟು ಮಾಂತ್ರ ಅಲ್ಲದ್ದೆ, ಅವರ ಗೋತ್ರ ಸೂತ್ರ ಪ್ರವರ ವಿವರ, ಅದು ಎಂತಗೆ ಹಾಂಗೆ – ಎಲ್ಲವನ್ನೂ ಸವಿವರವಾಗಿ ಬರದು ಮಡಗಿದ್ದವಾಡ.
ಛೆ, ತನ್ನ ಮನೆಲೇ, ತನ್ನ ಕೈಯೊಳವೇ ಈ ಮಾಹಿತಿ ಇದ್ದುಗೊಂಡು ಇಷ್ಟು ಸಮಯ ನೋಡದ್ದೆ ಹೋದೆನ್ನೇ – ಹೇದು ಅವು ತುಂಬ ಬೇಜಾರುಮಾಡಿಗೊಂಡ್ರೂ – ಅಮೂಲ್ಯ ಸಂಗತಿಗೊ ಗೊಂತಾದ್ದಕ್ಕೆ ಕೊಶಿಪಟ್ಟುಗೊಂಡವಾಡ.

~
ಇದು ಓಲೆಗರಿಯ ಮಹಿಮೆ.
ಬೈಂಡು ಎಂತದೂ ಹೇಳ್ತಿಲ್ಲೆ, ಒಂದೊಂದರೊಳ ಎಂತೆಲ್ಲ ಇದ್ದು ಹೇಳ್ತದು ಬಿಡುಸಿ ನೋಡಿಯೇ ಗೊಂತಾಯೇಕಟ್ಟೆ.
ಪುಸ್ತಕ ಆದರೆ “ಇದು ಒಂದೆಲಗ”, “ಇದು ಷೋಡಶ ಸಂಸ್ಕಾರಂಗಳ ಪುಸ್ತಕ”, ಇದು “ಆವರಣ ಕಾದಂಬರಿ” ಹೇದು ಆ ಪುಸ್ತಕವ ಕೈಗೆ ತೆಕ್ಕೊಂಬ ಮದಲೇ ಅದರ ಬೈಂಡು ಹೇಳ್ತು.
ಆದರೆ ತಾಳೆಗರಿ, ಕೈಗೆತ್ತಿ, ಪ್ರೀತಿಲಿ ಪುಟ ಬಿಡುಸಲೆ ಸುರುಮಾಡಿರೇ – ಅದರೊಳ ಎಂತ ಇಪ್ಪದು ಹೇಳಿ ಗೊಂತಕ್ಕಟ್ಟೇ!
ಅಲ್ಲದೋ?
~

ತಡವೆಂತಕೆ.
ನಿಂಗಳ ಮನೆ ಅಟ್ಟಲ್ಲಿಪ್ಪ ಓಲೆಗರಿಯನ್ನೂ ಬಿಡುಸಿ ನೋಡಿ ಹಾಂಗಾರೆ.
ನಿಂಗಳ ಪೈಕಿಯೋರಿಂಗೂ ಒಂದರಿ ಪುರ್ಸೋತು ಮಾಡಿ ಓದಲೆ ಹೇಳಿ.
ಅದರೊಳ ಯೇವ ಅದ್ಭುತ ಇದ್ದೋ ಆರಿಂಗೊಂತು!
ಎಂತ ರಹಸ್ಯ, ಎಂತ ಮಾಹಿತಿ, ಯೇವ ಮದ್ದು, ಯೇವ ಜ್ಯೋತಿಷ್ಯ ಶಾಸ್ತ್ರದ ವಿವರಣೆಗೊ ಇದ್ದೋ ಏನೋ!
ತುಂಬ ಆಸಕ್ತಿದು ಇದ್ದರೆ ಬೈಲಿಂಗೆ ಹೇಳಿಕ್ಕಿ ಆತೋ? ಎಲ್ಲೋರುದೇ ಸೇರಿ ಒಂದು ದೊಡ್ಡ ಸಂಗ್ರಹ ಮಾಡುವೊ°; ಆಗದೋ?

ಈಗ ನಿಂಗೊಗೆ ಅದರ ಜ್ಞಾನ ಇದ್ದೋ ಇಲ್ಲೆಯೋ – ನಿಂಗಳ ಹೆರಿಯೋರಿಂಗೆ ಅದರ ಆಸಕ್ತಿಯೂ ಇದ್ದತ್ತು, ಅದರ ಮಾಹಿತಿಯೂ ಇದ್ದತ್ತು. ಹಾಂಗಾಗಿ ಅದರ ಗೌರವಿಸಿ.
ಎಲ್ಲೋರುದೇ ಅವರವರ ಮನೆ ಅಟ್ಟಕ್ಕೆ ಒಂದರಿ ಹತ್ತಿ ನೋಡಿ.
ಎಂತ ಅಗಾಧ ಜ್ಞಾನಸಂಪಾದನೆ ನಮ್ಮ ಹೆರಿಯೋರು ಮಾಡಿದ್ದವು ಹೇಳ್ತದು ಅರಡಿಗಕ್ಕು.
ಆ ಗೌರವಲ್ಲೇ, ರಂಗಮಾವನೂ ಪ್ರತಿ ಒರಿಶ ಓಲೆಗರಿಯ ಮನಾರ ಮಾಡಿ ಮಡಿಕ್ಕೊಂಬದು.
“ಅದರ್ಲಿಪ್ಪ ಸಾರಸತ್ವವ ಮನನ ಮಾಡುವಷ್ಟು ಬೌದ್ಧಿಕತೆ ತನ್ನ ಹೆರಿಯೋರಿಂಗಿತ್ತು. ತನಗಿಲ್ಲೆ. ಸಾರ ಇಲ್ಲೆ, ಮುಂದಕ್ಕೆ ಆರಿಂಗಾರು ಗೊಂತಕ್ಕನ್ನೇ, ಅಷ್ಟು ಸಮಯ ಒಳಿಶಿಗೊಂಡು ಬಪ್ಪೊ°” – ಹೇಳ್ತದು ರಂಗಮಾವನ ಅನಿಸಿಕೆ.

ಉದ್ದದ ಕರೆಂಟು ವಯರಿಲಿ ಸಣ್ಣದೊಂದು ಕಂಬ ಆಗಿಂಡು,
ದೊಡಾ ವಂಶಲ್ಲಿ ಸಣ್ಣ ಒಂದು ವಂಶವಾಹಿನಿಯಾಗಿ ಕೆಲಸ ಮಾಡ್ತ ಸಾರ್ಥಕತೆ ರಂಗಮಾವನ ಮಾತಿಲಿ ಕೇಳಿಗೊಂಡಿತ್ತು.
ಈ ಪುಸ್ತಕಂಗಳಲ್ಲಿ ಎಂತೆಲ್ಲ ಇದ್ದು ಹೇಳ್ತದು ರಂಗಮಾವಂಗೆ ಅರಡಿಯದ್ದರೂ – ಪುಸ್ತಕ ಎಂತರದ್ದು ಹೇಳ್ತದು ಗುರ್ತ ಇದ್ದು.
ಶ್ಯಾಂಬಾವಂಗೆ ಆ ವಿಶಯವನ್ನೂ ಕಲ್ತಾಯೇಕಟ್ಟೆ!
~
ಒಪ್ಪಣ್ಣನ ಮನೆಲಿಪ್ಪ ಓಲೆಗರಿ ಪುಸ್ತಕದ ಕಟ್ಟವ ಒರಿಶಕ್ಕೊಂದರಿ ಪುಸ್ತಕ ಪೂಜಗೆ ಮಡಗಿ ತೆಗೆತ್ತ ಮರಿಯಾದಿ ಇದ್ದು.
ಇಂದೇ – ಅದರ ತೆಗದು ಓದಲೆ ಸುರುಮಾಡೇಕು, ಅಮ್ಮ ಬೇರೆ ಕೆಲಸ ಹೇಳದ್ರೆ – ಹೇದು ಆಲೋಚನೆ ಮಾಡಿಗೊಂಡು ಮನೆಗೆತ್ತಿದೆ.
~
ಒಂದೊಪ್ಪ: ತಾಳಿ! ತಾಳೆಗರಿ ಪುಸ್ತಕಂಗಳ ಓದೇಕಾರೂ ತಾಳ್ಮೆ ಬೇಕು, ಒಳಿಶೇಕಾರೂ ತಾಳ್ಮೆ ಬೇಕು.

ಒಪ್ಪಣ್ಣ

   

You may also like...

15 Responses

  1. ಈಗಾಣ ಕಾಲಲ್ಲಿ ಓಲೆಗರಿ ಕಾಂಬಲೇ ಅಪರೂಪ. ಇದ್ದರೂ ಅದರ ಒಳುಶುವವೂ ಅಪರೂಪ. ಅಂತಹದ್ದರಲ್ಲಿ ರಂಗಮಾವನ ಕೆಲಸ ಮೆಚ್ಚೆಕ್ಕಾದ್ದೆ.
    ಎಂಗಳ ಮನೆಯ ಅಟ್ಟಲ್ಲಿ ಓಲೆಗರಿ ಕಟ್ಟ ಇದ್ದಾ ಹೇಳಿ ಗೊಂತಿಲ್ಲೆ. ಹುಡುಕಿ ನೋಡೆಕ್ಕಷ್ಟೆ..

  2. ಮುಣ್ಚಿಕಾನ ಭಾವಂಗೆ ಹರೇರಾಮ . ದಯಮಾಡಿ ನಿಂಗಳ ಅಟ್ಟಲ್ಲಿ ಸರೀ ಹುಡ್ಕಿನೋಡಿ . ಇದ್ದರೆ ಮುಜುಂಗಾವಿಲ್ಲಿದ್ದ ಶ್ರೀಭಾರತೀ ಗ್ರಂಥಾಲಯಕ್ಕೆ ಕೊಡಿ. ನಿಂಗಳ ಹೆಸರಿಲ್ಲಿ ಶ್ರೀಗುರು ಸಂಸ್ಟೆಲಿ ಹೇಮಾರಿಕೆ ಮಾಡಿ ಮಡಗುತ್ತಿಯೊಂ

  3. ಒಪ್ಪಣ್ಣಾ..
    ಒಳ್ಳೇ ಶುದ್ದಿ. ಈಗ ತಾಳೆಗರಿ ಅಲ್ಲ, ಪುಸ್ತಕವೂ ಕಮ್ಮಿಯೇ – ಎಂತ ಇದ್ದರೂ ಕಂಪ್ಯೂಟರಿಲ್ಲಿ ತಟಪಟನೆ ಕುಟ್ಟಿ ಇಡುಕ್ಕುದು…
    ಈ E-Bookಕ್ಕಿನ ಕಾಲಲ್ಲಿಯೂ ಹಾಂಗಿಪ್ಪ ಹಳತ್ತಳತ್ತರ ಎಲ್ಲ ಹೇಮಾರ್ಸಿ ಮಡುಗುತ್ತವು ಹೇಳುದು ಹೆಮ್ಮೆಯ ಸಂಗತಿ 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *