Oppanna.com

ಬೈಲಿಂಗಿಡೀ ಮಂಗನ ಉಪದ್ರ

ಬರದೋರು :   ಒಪ್ಪಣ್ಣ    on   12/11/2010    50 ಒಪ್ಪಂಗೊ

ಅಬ, ಪುರುಸೋತಿಲಿ ಶುದ್ದಿ ಹೇಳೆಕ್ಕು ಗ್ರೇಶುದು, ಈ ನಮುನೆ ಬದ್ಕಾಣಲ್ಲಿ ಒಂದಲ್ಲಾ ಒಂದು ಒಯಿವಾಟುಗೊ, ಪುರುಸೊತ್ತೆಲ್ಲಿಂದ.!
ಒಯಿವಾಟು ನಮ್ಮ ಬೆಂಗುಳೂರಿನ ಪ್ರಕಾಶಮಾವನ ಹಾಂಗೆ ಕೋಟಿಗಟ್ಳೆದಲ್ಲ; ಒರಕ್ಕಿಲ್ಲದ್ದೆ ತಲೆತಿಂಬಂತಾದ್ದಲ್ಲ – ಹೊತ್ತು ತಿಂಬಂತಾದ್ದು.

ಬೈಲಿಲಿ ಬೆಳೆತ್ತವಂಗೆ ಹಾಂಗೆ ಅಲ್ಲದೋ – ಊರಿಲಿ ಇಪ್ಪ ಮನುಶ್ಶರತ್ರೆ ಮಾತಾಡುಸಿಗೊಳೆಕ್ಕು, ಹಟ್ಟಿಲಿಪ್ಪ ದನಗಳ ಮಾತಾಡುಸಿಗೊಳೆಕ್ಕು, ಮನೆಕಾಯ್ತ ನಾಯಿಯತ್ರೆ ಮಾತಾಡಿಗೊಳೆಕ್ಕು, ಪಾಡಿಗೆದ್ದೆ ಕರೆಲಿ ನೆಡಕ್ಕೊಂಡು ಹೋವುತ್ತ ಜೆನಂಗಳತ್ರೆ ಮಾತಾಡುಸಿಗೊಳೆಕ್ಕು, ಪೋನು ಮಾಡಿದ ಚೆಂಙಾಯಿಗಳತ್ರೆ ಮಾತಾಡಿಗೊಳೆಕ್ಕು – ಎಲ್ಲರತ್ರುದೇ ರಜ ರಜ ಮಾತಾಡಿಗೊಳೆಕ್ಕು!
ಇದರೆಡಕ್ಕಿಲಿ ಹೊಸತ್ತೊಂದಿದ್ದು – ತೋಟಕ್ಕೆ ಬತ್ತ ಮಂಗಂಗಳತ್ರೂ ಮಾತಾಡಿಗೊಳೆಕ್ಕು.
ಹ್ಮ್, ಅಪ್ಪೂಳಿ, ಈಗ ಅದೊಂದು ಹೊಸತ್ತು ಸುರುಆಯಿದು!

ಮೊನ್ನೆ ದೀಪಾವಳಿಗೆ ನಮ್ಮ ಬೈಲಿನ ಕೆಲವು ಮನೆಲಿ ಪಟಾಕಿ ರಜ ಜಾಸ್ತಿಯೇ ತಯಿಂದವು, ಕೆಲವು ಮನೆಲಿ ತರೆಕ್ಕಾಯಿದೇ ಇಲ್ಲೆ!
ಕೆಲವು ಮನೆಲಿ ತೋಟಲ್ಲೇ ಪಟಾಕಿ ಹೊಟ್ಟುಸಿದವು. ಕೆಲವು ಮನೆಲಿ ಪಟಾಕಿಯೇ ಹೊಟ್ಟುಸಿದ್ದವಿಲ್ಲೆ, ನಾಳ್ತಿಂಗೆ ಬೇಕು ಹೇಳಿ ಮಡಿಕ್ಕೊಂಡಿದವು.
ಕೆಲವು ದಿಕೆ ಬೊಬ್ಬೆ ಹೊಡಕ್ಕೊಂಡೇ ಪಟಾಕಿ ಹೊಟ್ಟುಸಿದವು, ಕೆಲವು ದಿಕೆ ಕೊಶಿಲಿ ಹೊಟ್ಟುಸಿದವು, ಕೆಲವು ದಿಕೆ ಬೆಶಿಲಿ ಪಟಾಕಿ ಹೊಟ್ಟುಸಿದವು.

ಅಂಬಗ ಎಂತ ಇವರ ಗವುಜಿ? ಅದುವೇ ಮಂಗನ ಉಪದ್ರ!
~
ಇದರೆಡಕ್ಕಿಲಿ ರಜ ಸಮೆಯ ಇತ್ತಿಲ್ಲೆ, ಈಗ ಪುನಾ ಸುರು ಆತು, ರಗಳೆ.
ತೋಟಂದ ಮನಗೆ ಎತ್ತಲೆ ಪುರುಸೊತ್ತಿಲ್ಲೆ, ಪುನಾ ಬಂತು, ಕೊಬೆಮನಾರ ಮಾಡಿಕ್ಕಿ ಹೋಪಲೆ, ಮಂಗಂಗೊ!
ಒಂದೋ ಕೆಂಪುಮೋರೆಯ ಮಂಗಂಗೊ, ಅಲ್ಲದ್ದರೆ ಕರಿಮೋರೆಯ ಮುಜುಗೊ!!

ಓಡುಸಿ-ಓಡುಸಿ ಈಚವನ ದೊಂಡೆ ಪಸೆ ಆರುದೊಂದೇ ಬಂತು, ಮಂಗಂಗೊ ಹೋಪಲೇ ಹೋಗವು!
ಒಂದು ವೇಳೆ ಹೋದಾಂಗೆ ಮಾಡಿರೂ, ಹೋಪದೆಲ್ಲಿಗೆ? – ಆಚವನ ತೋಟಕ್ಕೆ.  ಅವ° ಓಡುಸುವಗ ಇರುವಾರ ಇದೇ ತೋಟಕ್ಕೆ ಬಪ್ಪದಲ್ಲದೋ?!
ಮನುಶ್ಶರಿಂಗೆ ಗಡಿ ಇದ್ದು, ಮಂಗಂಗಿದ್ದೋ – ತೋಟಪೂರ ಒಂದೇ ಅದಕ್ಕೆ!!
ಆಚೀಚ ಮನೆಯೋರ ಎಡಕ್ಕಿಲಿ ವ್ಯಾಜ್ಯ ಬಾರದ್ದರೆ ಸಾಕು ಹೇಳಿ ಕಂಡು ಹೋಯಿದು ನಮ್ಮ ಗುರಿಕ್ಕಾರರಿಂಗೆ! 😉
~
ಮಂಗಂಗಳ ಕೊಲ್ಲುಲಾಗ ಹೇಳ್ತ ಮಾತಿದ್ದು ಊರಿಲಿ – ಸಾವಗ ಕೈ ಮುಗುದು ಸಾಯಿತ್ತಡ ಅಲ್ಲದೋ – ಹಾಂಗಾಗಿ. (ಆದರೂ ಕೆಲವು ಗೌಡುಗೊ ತಿಂತವಡ, ಪಂಜಚಿಕ್ಕಯ್ಯ ಹೇಳಿತ್ತಿದ್ದವು ಅಂದೊಂದರಿ. )
ಹಾಂಗೆ, ಅದರ ಕೊಲ್ಲಲಿಲ್ಲೆ, ಬರೇ ಓಡುಸೆಕ್ಕಷ್ಟೆ.
ಮಂಗನ ಓಡುಸುತ್ತದು ಹೇಳಿರೂ ಒಂದು ಗಮ್ಮತ್ತೇ ಇದಾ! ಓಡುಸುದು ಅಷ್ಟು ಸುಲಬ ಅಲ್ಲ, ಅವಕ್ಕುದೇ ಬುದ್ದಿ ಅರಡಿಗು!!
ಇಂದು ಮಾಡಿದ ತಪ್ಪಿನ ನಾಳೆ ಮಾಡವು. ನಾಳೆ ತಿಂದ ಪೆಟ್ಟಿನ ನಾಳ್ತಿಂಗೆ ನೆಂಪು ಮಡಿಕ್ಕೊಂಗು!
ಇಂದು ನೆಲಕ್ಕಲ್ಲಿ ನೆಡವಗ ಓಡುಸಲೆ ಬಂದರೆ ನಾಳೆ ಮರದ ಮೇಗೆಯೇ ನಿಂಗು! ನಾಳ್ತಿಂಗೆ ತೆಂಗಿನ ಕೊಬಳಿಲೇ ನಿಂಗು! ಕಾಂಬಲೂ ಸಿಕ್ಕವು!!
ಮಂಗಂಗೊ ಬುದ್ದಿವಂತರಾದ ಹಾಂಗೇ ಮಂಗನ ಓಡುಸುತ್ತವಂದೇ ಬುದ್ದಿ ಬೆಳೆಶಿಗೊಳೆಕ್ಕು ಇದಾ!

ಓಡುಸುತ್ತ ವಿಧಾನವೂ ಬದಲಾಗಿಂಡು ಬಯಿಂದು!
ಮೊದಲು ಮೊದಲಿಂಗೆ ಬರೇ ಬಾಯಿಲಿ ಬೊಬ್ಬೆ ಹೊಡದು ಓಡುಸಿಗೊಂಡಿತ್ತಿದ್ದವಡ್ಡ!
ಕ್ರಮೇಣ – ಜೆನಂಗಳ ಸ್ವರ ಗುರ್ತ ಆದ ಮೇಲೆ ಅದು ಕ್ಯಾರೇ ಇಲ್ಲೆ!
ಮತ್ತೆ ಕೆಲವು ಮನೆಲಿ ಜಯಗಂಟೆ! ಒಟ್ಟು ಬಡುದು ಶಬ್ದ ಮಾಡಿ ಓಡುಸಿದವು!
ಎಬೆ, ಅದೆಲ್ಲಿಗೆ ಸಾಕು – ಅದಕ್ಕೆ ಎಂತಾರು ನಾಟೇಕು ಹೇಳಿ ಆದರೆ ಕಲ್ಲಿಡ್ಕಲೆ ಸುರುಮಾಡಿದವು!
ಕೈಲಿ ಇಡ್ಕಿದ ಕಲ್ಲು ಕೊಟ್ಟೆಮರದ ಕೊಬಳಿಂಗೆ ಎತ್ತುಗೋ? ಎಲ್ಲಿಂದ!!
ಅದುದೆ ಪುಸ್ಕ ಹೇಳಿ ಗೊಂತಾದ ಮತ್ತೆ ಬೀಡಿ ಪಟಾಕಿ -ಗರ್ನಲು ಎಲ್ಲ ಹೊಟ್ಟುಸಿ ನೋಡಿದವು.
ಅದೆಲ್ಲ ಎಷ್ಟಾದರೂ ನೆಲಕ್ಕಲ್ಲೇ ಆತಷ್ಟೇ ಹೇಳಿ ಮಂಗಂಗೆ ಗೊಂತಾದ ಮತ್ತೆ ರಾಕೆಟ್ ಬಿಡ್ಲೇ ಸುರು ಮಾಡಿದವು.
ರಾಕೆಟ್ ದೇ ಗುರಿ ನೇರ್ಪಕ್ಕೆ ಸಿಕ್ಕುತ್ತಿಲ್ಲೆ ಹೇಳ್ತದು ಮಂಗಂಗೆ ಅರಡಿಗಾದ ಮೇಗೆ ಬೆಡಿ ತಪ್ಪಲೆ ಸುರು ಮಾಡಿದವು.
ಬೆಡಿ ಹೇಳಿರೆ ಅದು ಗಾಳಿಬೆಡಿ (Air Gun), ಬಟಾಟೆಯ ನಮುನೆದೋ ಏನೋ, ನವಗರಡಿಯ! 😉
ಬೆಡಿಯ ಅರ್ದ ಮುರುದು, ಗಾಳಿ ತುಂಬುಸಿಕ್ಕಿ, ನಳಿಗೆಒಳದಿಕ್ಕಂಗೆ ಒಂದು ಸೀಸದಚಿಲ್ಲು ಮಡಗಿ – ಗುರಿ ನೋಡಿ ಬಿಡುದು!
ಸಿಕ್ಕಿರೆ ಸಿಕ್ಕಿತ್ತು, ಇಲ್ಲದ್ರೆ ಇಲ್ಲೆ. ಬೀಡಿಪಟಾಕಿಯ ಶೆಬ್ದ ಒಂದು ಯೇವತ್ತಿಂಗೂ ಬಕ್ಕು, ಅದೊಂದು ಲಾಬ. 😉

ಆಚಬೈಲಿನ ತೋಟದ ಕರೆಲಿ ಮಂಗ!

ಇದರೆಡಕ್ಕಿಲಿ ಒಂದು ನೆಗೆ ನೆಂಪಾತು; ಅಜ್ಜಕಾನಬಾವ ಬೆಡಿಬಿಟ್ಟದು!:
ಮಾಷ್ಟ್ರುಮಾವನಲ್ಲಿಗೆ ಗಾಳಿಬೆಡಿ ತಂದ ಸಮೆಯ.
ಒಂದರಿ ಮಂಗನೂ, ಅಜ್ಜಕಾನಬಾವನೂ ಮಾಷ್ಟ್ರುಮಾವನಲ್ಲಿಗೆ ಒಟ್ಟಿಂಗೆ ಬಂದವಿದಾ!
ಮಾಷ್ಟ್ರಮನೆ ಅತ್ತೆ ಇವನತ್ರೆ ಹೇಳಿದವೋ ಕಾಣ್ತು, ಒಂದರಿ ಓಡುಸಿಕ್ಕು ಈ ಅಳತ್ತೊಂಡೆಬಳ್ಳಿಗೆ ಬಂದ ಮಂಗಂಗಳ – ಹೇಳಿಗೊಂಡು!
ಬೆಡಿ ಹಿಡುದ ಸುರೂವಾಣ ಅನುಬವ! ಅವಂಗೂ, ಮಂಗಂಗೂ!
ಕುದುರೆ ಹೇಂಗೆ ಎಳೆತ್ತದು ಹೇಳಿ ಅವಂಗೆ ಗೊಂತಿಲ್ಲೆ! ಈ ಕೆಂಪುಕೊದಂಟಿ ಎಂತರ ಹೇಳಿ ಮಂಗಂಗೆ ಗೊಂತಿತ್ತಿಲ್ಲೆ!
ಇವ° ಗುರಿ ನೋಡಿದ°, ಮಂಗ ಬಗ್ಗಿ ನೋಡಿತ್ತು! ಸಿನೆಮಲ್ಲಿ ರಾಜುಕುಮಾರ್-ವಜ್ರಮುನಿ ನೋಡಿಗೊಂಡ ಹಾಂಗೆ ಇಬ್ರುದೇ ನೋಡಿಗೊಂಡವು ರಜ ಹೊತ್ತು!
ಅಜ್ಜಕಾನಬಾವ ಕುದುರೆ ಎಳದೇ ಎಳದ°!!
ಹತ್ತುಮಾರು ದೂರಲ್ಲಿ ಮಡಗಿದ ಮಾಷ್ಟ್ರುಮಾವನ ನೀರಡಕ್ಕೆಯ ಮಣ್ಣಳಗೆ ಬುಡಂದ ಪಟಕ್ಕ – ಹೇಳಿ ಕೇಳಿತ್ತು.
ಮಂಗ ಹೆದರಿ ಓಡಿತ್ತು!!! – ಹೇಂಗೂ, ಮಂಗನ ಓಡುಸಲೇ ಅಲ್ಲಿಗೆ ಬೆಡಿ ತಂದದಿದಾ! 😉
– ಒಪ್ಪಕ್ಕಂಗೆ ಈಗಳೂ ಇದರ ನೆಂಪಪ್ಪದಿದ್ದು, ಅಂಬಗಂಬಗ!
~
ಕೆಲವು ದಿಕೆ ಆಚ ಬೆಡಿಯನ್ನೂ ಉಪಯೋಗುಸುತ್ತವು.
ಅದಕ್ಕೆ ಲೈಸನ್ಸು ಬೇಕಡ. ತೋಟೆದೋ, ಕೇಪಿಂದೋ ಮಣ್ಣ ಬೆಡಿಗೆ ಈಡುಮಾಡಿ ಮಂಗನ ಹಿಂಡು ಇಪ್ಪಲ್ಲಿಗೆ ಒಂದು ಬಿಟ್ರೆ, ಅದರ ಚಿಳ್ಳುಗೊ ಗುಂಡಿನ ಮಳೆಯಾಗಿ ಮಂಗಂಗಳ ಮೇಗಂಗೆ ಬೀಳುಗು.
ಅರೆಬರೆ ಬೇನೆ ಆದ ಮಂಗಂಗೊ ಕುಯ್ಯೋ-ಮುರ್ರೋ ಹೇಳಿಗೊಂಡು ಓಡುದೇ ಅವಕ್ಕೆ ಗುಂಡುಬಿದ್ದದಕ್ಕೆ ಸಾಕ್ಷಿ. ಮಂಗಂಗೊ ಹತ್ತರೆ ಸಿಕ್ಕಿರೆ ಸತ್ತೇ ಹೋಕಿದಾ! ಪಾಪ!
ಕೆಲವು ದಿಕೆ ಬಾಳೆಕಾಯಿಯ ಎಡಕ್ಕಿಲಿ ವಿಶ ಮಡಗಿ ಎಲ್ಲ ಕೊಲ್ಲುತ್ತವಡ.
– ಹಾಂಗೆ ಮಂಗನ ಕೊಲ್ಲುದು ಒಳ್ಳೆದಲ್ಲ ಹೇಳ್ತದು ಶಂಬಜ್ಜನ ಅಭಿಪ್ರಾಯ.
ಆದರೆ ಹಿಡುಶುತ್ತ ಕಾರ್ಯ ಇದ್ದೇ ಇದ್ದು!

~

ಮಯಿಸೂರಿನ ಪೇಟೆನೆಡುಕೆದೇ ಮಂಗಂಗಳೇ ತುಂಬಿದ್ದವಡ - ಕೊಳಚಿಪ್ಪು ಭಾವಯ್ಯ ಮೊನ್ನೆ ಹೇಳಿದ°

ಮಂಗನ ಹಿಡಿವೋರ ಉಪದ್ರಂದಾಗಿಯೇ ಮಂಗನ ಉಪದ್ರ ಜೋರಪ್ಪದು ಹೇಳಿ ಪಾರೆಮಗುಮಾವನ ಅನಿಸಿಕೆ!
ಮಂಗನ ಉಪದ್ರ ಜೋರಾದಷ್ಟು ಮಂಗನ ಹಿಡಿವೋರ ಉಪದ್ರವೂ ಜೋರಾವುತ್ತು!
ಅದು ಹೇಂಗೆ ಹೇಳ್ತದು ಅರಡಿಯೇಕಾರೆ ನಮ್ಮ ಊರಿನ ಒಂದು ಗುಟ್ಟಿನ ಸಂಗತಿ ನಿಂಗೊಗೆ ಅರಡಿಯೇಕು!
ಅದ್ರಾಮನೂ ಇಬ್ರಾಯಿಯೂ ಬಾವ-ಬಾವಂದ್ರು. ಹೇಂಗೆ ಬಾವ ಹೇಳ್ತದು ಒಪ್ಪಣ್ಣಂಗರಡಿಯ! 😉
ಇಬ್ರಿಂಗೂ ಒಂದೇ ಉದ್ಯೋಗ, ಮಂಗನ ಹಿಡಿತ್ತದು! ಹಿಡುದು ಬಿಡ್ತದು!
ಬಿಡುದೆಲ್ಲಿಗೆ? ಶಿರಾಡಿ ಘಾಟಿಗೆ ಅಡ!!

ಜೋರು ಮಂಗನ ಉಪದ್ರ ಯೇವ ಬೈಲಿಲಿ ಇದ್ದು ಹೇಳ್ತದರ ತಿಳ್ಕೊಂಡು ಅವೆರಡ್ರಲ್ಲಿ ಯೇವದಾರು ಒಂದು – ಇಬ್ರಾಯಿ – ಬಂದು ಮಾತಾಡುದಡ.
ಅಲ್ಯಾಣ ಎಲ್ಲೋರ ಸೇರುಸಿಗೊಂಡು – ಎಂಗ ಮಂಗನ ಹಿಡುದು ಶಿರಾಡಿ ಘಾಟಿಲಿ ಬಿಟ್ಟಿಕ್ಕಿ ಬತ್ತೆಯೊ – ಒಂದು ಮಂಗಂಗೆ ಇಂತಿಷ್ಟು – ಹೇಳಿ ಒಪ್ಪಿಗೊಳ್ತಡ.
ಒಂದರಿ ಮಂಗನ ಪೀಡೆ ತೊಲಗಲಿ – ಹೇಳಿ ನಮ್ಮೋರು ಒಪ್ಪಿ, ಊರವೆಲ್ಲಾ ಪೈಸೆ ಹಾಕಿ ಗೂಡುಕಟ್ಟಿ, ತಿಂಬಲೆ ಬಾಳೆಹಣ್ಣು ಮಡಗಿ ಗೂಡಿಂಗೆ ಹಾಕುಸುದಡ.
ಎಲ್ಲಾ ಮಂಗಂಗಳ ಊರವರ ಎದುರೇ ಗೋಣಿಲಿ ತುಂಬುಸಿ, ಜೀಪಿಂಗೆ ಹಾಕಿ ಶಿರಾಡಿಹೊಡೆಂಗೆ ತಿರುಗುಸಿ ಜೀಪು ಶ್ಟಾರ್ಟು ಮಾಡ್ತಡ!
ಅಲ್ಲಿಗೆ ಆ ಬೈಲಿನವರ ತಲೆಬೆಶಿ ಮುಗಿತ್ತು!
ಶಿರಾಡಿ ಹೊಡೆಂಗೆ ತಿರುಗಿದ ಜೀಪಿಂಗೆ ಶ್ಟಯರಿಂಗು ಇಲ್ಲೆಯೋ – ಈ ಬೈಲು ಕಾಣದ್ದಷ್ಟು ದೂರ ಹೋತೋ – ಅಲ್ಲೇ ಇಪ್ಪ ಇನ್ನೊಂದು ಬೈಲಿಂಗೆ ತಿರುಗುಸಿತ್ತು ಜೀಪಿನ!
ಅಲ್ಲೇ ಗೋಣಿಬಿಚ್ಚಿ ಬಿಟ್ಟತ್ತು ಆ ಮಂಗಂಗಳ!

ಇನ್ನು ಆ ಬೈಲಿಂಗೆ ಮಂಗನ ಉಪದ್ರ! – ಅಲ್ಲಿಗೆ ಅದ್ರಾಮ ಹೋತು, ಇಬ್ರಾಯಿ ಆಚಬೈಲಿಂಗೆ ಹೇಳಿದ ಅದೇ ಮಾತುಗಳ ಹೇಳಿಗೊಂಡು!
ಹಾಂಗೆ ಒಂದರಿ ಅದ್ರಾಮ ಜೀಪುಬಿಡುದು, ಇನ್ನೊಂದರಿ ಇಬ್ರಾಯಿ ಜೀಪು ಬಿಡುದು!
ಬಾವಬಾವ ಸೇರಿ ಈಗ ಜೀಪು ಮತ್ತೆರಡು ತೆಗದವು!! 🙁
ಈ ಬೈಲಿನವು ಹಿಡಿಶಿ ಆಚ ಬೈಲಿಂಗೆ ಬಿಡುದು, ಅವು ಮತ್ತೊಂದು ಬೈಲಿಂಗೆ ಬಿಡುದು.
ನಾವು ಮಂಗನ ಹಿಡುಶುದೇ ಆತು, ಅವು ಹೊಸ ಜೀಪು ತೆಗವದೇ ಆತು! ಇದೇ ಕತೆ!!
~

ಮಂಗಂಗೆ ಈ ನಮುನೆ ಗುಡ್ಡೆ ಸಿಕ್ಕಿರೆ ಮತ್ತೆಂತದೂ ಬೇಡ! ಸಿಕ್ಕದ್ದರೆ ತೋಟ ಬಿಟ್ಟು ಬೇರೇವದೂ ಬೇಡ!!

ಹಾಂಗೆ ನೋಡಿರೆ ಮಂಗನ ಉಪದ್ರ ಇಂದು ನಿನ್ನೇಣದ್ದೋ?
ಮಂಗಂಗೊಕ್ಕೂ ನವಗೂ ಪೌರಾಣಿಕವಾಗಿಪ್ಪ ಸಂಮ್ಮಂದ ಮಂಗನೇ!
ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಿತು ಹೇಳಿ ಗಟ್ಟದಮೇಗೆ ಒಂದು ಗಾದೆಯೇ ಇದ್ದಡ – ದೊಡ್ಡಮಾವಂಗೆ ಅರಡಿಗು.
ಹನುಮಂತ ಸುಮ್ಮನೆ ಕೂಪದು ಬಿಟ್ಟು ಇಡೀ ಲಂಕೆಗೆ ಕಿಚ್ಚುಕೊಟ್ಟಿಕ್ಕಿ ಬಂದ ಕತೆಯನ್ನೇ ಹಾಂಗೆ ಗಾದೆಮಾತು ಮಾಡಿದ್ದಡ.
ಅಪ್ಪು, ಚೆಂದಕ್ಕೆ ಹೆಸರು ಹೋದ ಅಶೋಕವನಲ್ಲಿಪ್ಪ ಎಲ್ಲಾ ಮರಂಗಳನ್ನೂ ಮುರುದು ಬೀಲಲ್ಲಿದ್ದ ಕಿಚ್ಚಿನ ಇಡೀ ಲಂಕಗೆ ಮುಟ್ಟುಸಿಗೊಂಡು ಹಾರಿ, ಆರ ಕೈಗೂ ಹಿಡಿವಲೆ ಸಿಕ್ಕದ್ದ ಆ ಮಂಗನ ಎಂತರ ಮಾಡುತ್ಸು!
ಚೆಂದದ ಉದ್ಯಾನ ನಗರಿಯ ಮರಂಗಳ ಈಂದುಗುಳಿಯ ಈಂದಿನಮರದ ಹಾಂಗೆ ಕಪ್ಪುಕಪ್ಪು ಮಾಡಿರೆ ಆರಿಂಗಾರು ಪಿಸುರು ಬಾರದ!!
ಹಾಂಗೆ ರಾಮಾಯಣದ ಕಲ್ಪನೆ!
– ದೊಡ್ಡಮಾವಂಗೆ ಈಗೀಗ ರಾಮಾಯಣದ ಮೇಗೆ ಬಯಬಗ್ತಿ ಜಾಸ್ತಿಆಯಿದೋ ತೋರುತ್ತು; ಮನೆಲೇ ಒಬ್ಬ ಕುಂಞಿರಾಮ ಹುಟ್ಟಿದಮೇಗೆ ಜೋರು ರಾಮಾಯಣದ ಸೂಕ್ಷ್ಮಂಗೊ ತಲಗೆ ಬಪ್ಪದು!! 🙂
~
ಪುರಾಣದ ಸಂಸ್ಕೃತದಷ್ಟು ಹಳೆಕಾಲಕ್ಕೆ ಹೋಗೆಡಿ!
ಓ ಮೊನ್ನೆ – ಹನ್ನೆರಡು-ಹದಿಮೂರನೇ ಶತಮಾನಲ್ಲಿ  ಮಂಗನ ಉಪದ್ರ ಇತ್ತು – ಹೇಳಿಗೊಂಡು ಮಾಷ್ಟ್ರುಮಾವನ ಸಣ್ಣದೊಂದು ನೆಗೆ ಇದ್ದು, ಈ ವಿಷಯಲ್ಲಿ!

ಆಂಡಯ್ಯ ಹೇಳಿ ಒಬ್ಬ ಕವಿ ಇದ್ದಿದ್ದನಾಡ. ಸಂಸ್ಕೃತವೇ ಬೇಡ, ಶುದ್ದ ಕನ್ನಡಲ್ಲಿ ಕಾವ (ಕಾವ್ಯದ ತದ್ಭವ) ಬರೆತ್ತೆ – ಹೇಳಿಗೊಂಡು – ಕಬ್ಬಿಗರ ಕಾವ – ಹೇಳಿ ಬರದ್ದನಾಡ.
– ಅದರ್ಲಿಯೂ ಮಂಗನ ಉಪದ್ರವ ಸೂಕ್ಷ್ಮವಾಗಿ ಹೇಳಿದ್ದನಡ!
ಕಬ್ಬಿಗರಕಾವಲ್ಲಿ ಕರ್ನಾಟಕದ ವಿವರಣೆ ಬತ್ತಡ – ಕರ್ನಾಟಕ ಹೇಂಗಿರ್ತದು, ಅಲ್ಲಿಪ್ಪ ಕೆರೆಗೊ,ಕಲ್ಲುಗೊ ಹೇಂಗಿದ್ದು – ಹೇಳ್ತದರ ಬಗ್ಗೆ ಕಂದಪದ್ಯ ಹೀಂಗಿದ್ದಡ:
ಅಡರ್ದೇರಿ ಕೋಡಗಂಗಳ್
ಕಡುಪಿಂದೀಡಾಡೆ ಘಳಿಲನೊಡೆದೆಳಗಾಯಿಂ- |
ದೆಡೆಬಿಡದೊಸರುವೆಳನೀರ್ಗಳ್
ಮಡುಗೊಂಡೋವುತ್ತಮಿರ್ಪವಾ ನಾಡೊಳ್! ||
[ಅಡರ್ದು ಏರಿ ಕೋಡಗಂಗಳ್ ಕಡುಪಿಂದ ಈಡಾಡೆ ಘಳಿಲನೆ ಒಡೆದ ಎಳಗಾಯಿಂದ ಎಡೆಬಿಡದೆ ಒಸರುವ ಎಳನೀರುಗಳ್ ಮಡುಗೊಂಡು ಓವುತ್ತಮ್ ಇರ್ಪವು ಆ ನಾಡೊಳ್ ] – ಇಷ್ಟರ ಹೇಳಿಕ್ಕಿ ಮಾಷ್ಟ್ರುಮಾವ° ಅರ್ತ ವಿವರುಸಿದವು.
ಪೋಲಿ ಬಂದ ಮಂಗಂಗೊ ಎಳದು ಹಾಕಿದ ಬೊಂಡಂಗೊ ಒಡದು ತುಂಬಿದ ನೀರೋ – ಹೇಳಿ ಕಾಂಬಷ್ಟು ರುಚಿಯ ನೀರಿನ ಕೆರೆಗೊ ಇದ್ದು ಕರ್ನಾಟಕಲ್ಲಿ – ಹೇಳಿ ಆಂಡಯ್ಯಕವಿ ಹೇಳಿದ್ದನಡ.
ಆ ಕಾಲಲ್ಲಿಯೂ ಬೊಂಡ ಎಳದು ಹಾಕುತ್ತ ಮಂಗಂಗಳ ಉಪದ್ರ ದಾರಾಳ ಇದ್ದಿಕ್ಕಿದಾ, ಅಲ್ಲದ್ದರೆ ಅವ ಹಾಂಗೆ ಬರೆತ್ತಿತನಿಲ್ಲೆ! 😉
ಕೆರೆತುಂಬುವಷ್ಟಲ್ಲದ್ದರೂ, ಕಿಲೆ ಕಾಲಿ ಅಪ್ಪಷ್ಟು ಎಳದು ಹಾಕುತ್ತವು ಈಗಳೂ- ಹೇಳಿ ಮಾಷ್ಟ್ರುಮಾವ° ಹೇಳಿದವು!

ಮೊನ್ನೆ ದೀಪಾವಳಿಗೆ ಆಚಮನೆಂದ “ಢಂ” ಹೇಳ್ತ ಶೆಬ್ದ ಕೇಳಿತ್ತಿದಾ..
ಹಬ್ಬಕ್ಕೋ, ಮಂಗಂಗೋ – ಅರಡಿಯದ್ದೆ ನೆಡಕ್ಕೊಂಡು ಹೋದೆ, ಮಾಷ್ಟ್ರುಮಾವನ ಮನೆ ಜಾಲಿಲೆ ಆಗಿ – ಅಷ್ಟಪ್ಪಗ ಮಾಷ್ಟ್ರುಮಾವನ ಮಾತಿಲಿ ಬಂದ ಶುದ್ದಿ ಇದು!
ಮಾಷ್ಟ್ರುಮಾವ ಎಂತಾರು ಕುಶಾಲುಮಾಡ್ತರೂ ಕಲಿವದಿರ್ತು, ಅದರೆಡಕ್ಕಿಲಿ!
~

ಈಗ ಅಪುರೂಪ ಆದರೂ, ಅಜ್ಜನ ಕಾಲಲ್ಲಿ ಮುಜುವಿಂದೇ ಉಪದ್ರ

ಹಾಂಗೆನೋಡಿರೆ ನಮ್ಮ ಬೈಲಿಲಿ ಮದಲಿಂಗೆ ಇಷ್ಟೆಲ್ಲ ಮಂಗನ ಉಪದ್ರ ಇತ್ತಿಲ್ಲೆಡ.
ಎಲ್ಲ ಇತ್ತೀಚೆಗೆ ಜೋರಾದ್ಸು.
ಎಂತದನ್ನೂ ಮಾಡ್ಳೆಬಿಡ, ಕೃಷಿಕರಿಂಗೆ ದೊಡಾ ಉಪದ್ರ!! – ಹೇಳಿ ಎಲ್ಲೋರುದೇ ಬೈವಲೆ ಸುರುಮಾಡಿದ್ದವು.

ಅಪ್ಪು,  ಮಂಗಂಗೊ ನಮ್ಮ ಕೃಷಿಯ ಹಾಳುಮಾಡಿ, ನಾವು ನೆಟ್ಟ ಹಸಿತರಕಾರಿ, ಅಡಕ್ಕೆ, ಬೊಂಡ – ಎಲ್ಲವನ್ನುದೇ ಹಾಳುಮಾಡಿ ಹಾಕುತ್ತವು.
ಉಪದ್ರವೇ ಕೊಡ್ತವು!
ಆದರೆ ಅದಕ್ಕೆ ಕಾರಣ ಆರು ಭಾವಯ್ಯಾ?
ಮೊದಲು ನೆಮ್ಮದಿಲಿ ಕಾಡಿಲಿ ಕೂದಂಡು ಇತ್ತಿದ್ದವು.
ಗೆಣಂಗು, ಚಿಟ್ಕನ ಗೆಂಡೆಯ ಹಾಂಗಿರ್ತ ಕಾಟು ಗೆಂಡೆಗೊ, ಕುಂಟಾಂಗಿಲ – ಸರಳಿ – ಚೇರೆಯ ಹಾಂಗಿರ್ತ ಕಾಟು ಹಣ್ಣುಗೊ, ಕಾಟುಬಾಳೆಯ ಹಾಂಗ್ರುತ್ತ ಸೆಸಿಗೊ, ಎಲೆಗೊ, ಎಲ್ಲ ಅವರಷ್ಟಕ್ಕೇ ತಿಂದುಗೊಂಡು ಆರಾಮಲ್ಲಿ ಇದ್ದಿದ್ದವು.
ಅಪುರೂಪಲ್ಲಿ ಒಂದೊಂದರಿ ಅಡಕ್ಕೆಯ ಚೀಪೆಚೋಲಿ ಚೀಪುಲೆ ಬಂದುಗೊಂಡಿತ್ತಿದ್ದವು, ಅಷ್ಟೇ.
ಈಗ ಆ ಕಾಡುಗೊ ಎಲ್ಲಿದ್ದು? – ಎಲ್ಲ ಬೋಳುಗುಡ್ಡೆ.

ಕಾಡು ಕಡುದು ಮರ ಮಾರಿದವು, ಆ ಪೈಸೆಲಿ ತಟ್ಟು ಮಾಡಿ ರಬ್ಬರು ಹಾಕಿದವು!
ರಬ್ಬರಿನ ಮಂಗಂಗೆ ತಿಂಬಲರಡಿಗೋ – ಮಂಗಂಗೊ ಅಡಕ್ಕೆ ತೋಟಕ್ಕೆ ಬಂದವು, ಪಾಪ!!
ನಮ್ಮಂದಾಗಿಯೇ ಮಂಗಂಗೊಕ್ಕೆ ಈ ಅವಸ್ಥೆ ಬಂದದು.
ಮಂಗಳಿಂದಾಗಿಯೇ ನವಗೆ ಈ ಅವಸ್ಥೆ ಬಂದದು!!
ನಾವೇ ನವಗೇ ಮಂಗಂಗೊ ಆಗಿ ಉಪದ್ರ ಕೊಟ್ಟೊಂಡದು!
~
ಮೊದಲು ಮಕ್ಕೊಗೆ ಪಟಾಕಿ ತಾರದ್ದೋರುದೇ ಈಗ ಮಂಗಂಗೊಕ್ಕೆ ತಂದುಮಡಗುತ್ತವು – ಹೇಳ್ತದು ಆಚಮನೆದೊಡ್ಡಣ್ಣನ ಕುಶಾಲು.
ಮಂಗಂಗಳನ್ನೂ ಮಕ್ಕಳ ಹಾಂಗೇ ನೋಡಿರೆ ಪಟಾಕಿಯೇ ಬೇಕಾಗ, ಅಲ್ಲದೋ?!
ಎಷ್ಟಾದರೂ ಮಂಗಂಗೊ ನಮ್ಮ ಪೂರ್ವಜರು, ಅಲ್ಲದೋ?

ಒಂದೊಪ್ಪ
: ನಮ್ಮ ಬೆಳೆಶಿದ ಮಂಗಂಗಳ ನಾವು ಒಳಿಶೆಕಾರೆ, ಪ್ರಕೃತಿ ಬೆಳೆಶಿದ ಕಾಡಿನ ನಾವು ಒಳಿಶೇಕು.

50 thoughts on “ಬೈಲಿಂಗಿಡೀ ಮಂಗನ ಉಪದ್ರ

  1. ಲೇಖನ ಒಳ್ಳೆದಾಯಿದು….

    ಎಂಗಳ ಹತ್ರಾಣ ಮನೆಲಿ ಮಂಗಂಗಳ ಓಡುಸಲೆ ಇನ್ನೊಂದು ಉಪಾಯ ಮಾಡಿದ್ದವು:

    ಒಂದು ಕುಪ್ಪಿಲಿ ಸತ್ತ ನಾಲ್ಕು ಮೀನುಗಳ ಹಾಕಿ ಅದಕ್ಕೆ ಒಂದು ಸರಿಗೆ ಕಟ್ಟಿ ತೆಂಗಿನ ಮರಲ್ಲಿ ತೂಗುಸುದು…. 😀

    ಅದರ ವಾಸನೆಗೆ ಮಂಗಂಗೋ ಬತ್ತವಿಲ್ಲೆದ……!!! 😉

    ಈ ಐಡಿಯಾ ನವಗಾಗ ಅಲ್ಲದೋ……??!! 🙁

    1. ನೆಗೆಭಾವ ಮತ್ತೆ ಬೋಸಬಾವನ ಓಡ್ಸೆಕ್ಕಾರೆ ಆನು ಹಾಂಗೆ ಮಾಡ್ತದು ಏವತ್ತು! 😉

  2. ಹ ಹ,
    ಅಜ್ಜಕಾನಬಾವನ ಒಯಿವಾಟು ಕಂಡು ನೆಗೆತಡೆಯ.
    ಅಂತೂ ನೀರಡಕ್ಕೆ ಪೂರ ಕಾಲಿಯೋ……………………………
    ಅದರ ವಾಸನೆಗೆ ಬೋಸಂದೇ ಓಡಿಕ್ಕನ್ನೆ ಅಂಬಗ, ಅಲ್ಲದೋ? 😉

  3. ಒಪ್ಪಣ್ಣೋ,,,ಲೇಖನ ಲಾಯಿಕ ಆಯಿದು..ಆದರೆ ಅದ್ರಲ್ಲಿ ಎನಗೆ ಒಂದು ಸಂಶಯ ಇದ್ದು…ಎಂತ ಕೇಳಿದ್ರೆ,,ಅಂಡಯ್ಯ ಬರದ್ದು ಕಬ್ಬಿಗರ ಕಾವ ಹೇಳಿ ಅಪ್ಪು………ಆದ್ರೆ ಕಾವ್ಯದ ತದ್ಭವ ರೂಪ ಕಾವ ಅಲ್ಲ……ಕಬ್ಬ ಆಯೆಕು….ಹಾಂಗಾಗಿ ಕಬ್ಬಿಗರು ಹೇಳಿದ್ರೆ ಕಬ್ಬವ ಬರವವು ಅಲ್ಲದ…ಒಟ್ಟಿಲಿ ಕಬ್ಬಿಗರ ಕಾವ ಹೇಳಿದ್ರೆ ಕವಿಗಳ ಕಾಯುವವು ಹೇಳಿಯೇ ಅರ್ಥ…..ಕಾವ ಹೇಳಿರೆ ಕಾಯುವ ಹೇಳುವ ಅರ್ಥ,,,,,,,,,

    1. ಯಬ್ಬ!
      ಆನು ಆಚಮನೆ ತೋಟಕ್ಕೆ ಹೋವುತ್ತ ಗವುಜಿಲಿ ಇಪ್ಪಗ ಮಾಷ್ಟ್ರುಮಾವ° ಹೇಳಿದ್ದದು..
      ಎನಗೆ ಸರಿಯಾಗಿ ಕೇಳುವಷ್ಟು ತಾಳ್ಮೆ ಇತ್ತಿಲ್ಲೆ.
      ಇಂದು ಇನ್ನೊಂದರಿ ಕೇಳಿ, ಸರಿಮಾಡಿಗೊಂಡು ಬರೆತ್ತೆ! ಆತೋ?

      ನೀ ಹೇಳಿಕೊಟ್ಟದು ಕೊಶಿ ಆತು.
      ಇಷ್ಟು ಅಪುರೂಪ ಆಗೆಡ ಮಾಣೀ, ಬತ್ತಾ ಇರು ಬೈಲಿಂಗೆ. 🙂

  4. opanno……lekhana laika aaydu baraddadu…….aadre………..alli ondu sanna tiddupadi iddoo heli samshaya aatu,,,, kavi andayyana nenapisigondu heliddada ……..(KAAVA KAAVYADA TADBHAVA ROOPA ALLA) KAAVYADA TADBHAVA ROOPA KABBA……HAANGAGI AVA KABBIGARA KAAVA HELI HELIDDU…….)

  5. ಒಪ್ಪಣ್ಣ, ಹೊತ್ತು ತಿಂಬ ಒಯಿವಾಟಿನ ಎಡೆಲಿಯೂ ಬೈಲಿನ ಎಲ್ಲೋರಿಂಗೂ ಆವುತ್ತಾ ಇಪ್ಪ ದೊಡ್ಡ ಉಪದ್ರದ ಬಗ್ಗೆ ಬರದ್ದದು ಲಾಯ್ಕಾಯಿದು.
    ಅದಪ್ಪು, ಹೆಚ್ಚಿನ ಮನೆಗಳಲ್ಲಿ ಪಟಾಕಿ ಮಂಗಂಗೊಕ್ಕೆ ಹೇಳಿಯೇ ತಪ್ಪದು.. ಮಕ್ಕೊ ಪಾಪ ಆಸೆಲಿ ಕೂದ್ದದೇ ಬತ್ತು..:-(
    ಮಂಗಂಗಳ ಹಿಡಿವದು ಒಂದು ವ್ಯಾಪಾರವೇ ಆಯಿದು ಈಗ!!! ಒಂದರಿ ಮಂಗಂಗಳ ಹಿಡಿಶಿ ಆತು ಹೇಳಿ ನಾವು ನಿರಾಳ ಆಯೆಕ್ಕಾದರೆ ಇನ್ನೊಂದು ಹೊಡೆಂದ ಎಂಗೊ ಬಂದೆಯಾ° ಹೇಳ್ತವಿದಾ. ಅಂಬಗ ಸಂಶಯ ಬಾರದ್ದಿಕ್ಕಾ? ಎಂತ ಮಾಡುಸ್ಸು? ನವಗೆ ಹಿಡಿವಲೆ ಅರಡಿತ್ತಿಲ್ಲೆನ್ನೇ!! ಸೊತ್ತು ಹಾಳಪ್ಪಗ ಒಂದರಿ ಮಂಗಂಗಳ ತೆಕ್ಕೊಂಡು ಹೋಗಲಿ ಹೇಳಿ ಕಾಂಬದು..
    ಒಪ್ಪಣ್ಣ, ಮಂಗಂಗೊಕ್ಕೆ ಕಲ್ಲು ಇಡುಕ್ಕಿ ಕಲಿಶಿದ್ದಕ್ಕೆ ಈಗ ಮಂಗಂಗ, ಅವರ ಓಡುಸುಲೆ ಹೋದೋರ ಮೇಲೆ ಬೊಂಡ ಇಡುಕ್ಕುಲೇ ಸುರು ಮಾಡಿದ್ದವಡ್ಡ. 🙁 ಮೊನ್ನೆ ಒಂದು ಜೆನಕ್ಕೆ ಮಂಗನ ಓಡ್ಸುಲೆ ಹೋದ್ದದಕ್ಕೆ ಮಂಗ ಮರಂದ ಬೊಂಡ ಇಡ್ಕಿ ಅದು ಆಸ್ಪತ್ರೆಗೆ ಸೇರಿದ್ದತ್ತು. ಅದರ ಮೇಲಂಗೆ ಇಡ್ಕಿದ ಬೊಂಡ ಕಣ್ಣ ಕರೆಂಗೆ ತಾಗಿದ್ದು.. ಪುಣ್ಯ ಕಣ್ಣಿಂಗೆ ಎಂತೂ ಆಯಿದಿಲ್ಲೇ.. ಇಡ್ಕುಲೆ ನಾವೇ ಕಲಿಶಿದ್ದು, ಈಗ ನವಗೆ ತಿರುಮಂತ್ರ!!!!
    ಮಾಷ್ಟ್ರು ಮಾವ ಹೇಳಿದ್ದೂ ಸರಿಯೇ ಅಲ್ಲದಾ? ಆದರೆ ನಾವು ಸುಮ್ಮನಿದ್ದರೆ ಕೆರೆ ತುಂಬುವಷ್ಟುದೆ ಎಳದು ಹಾಕುಗು!!! ಅದು ಎಂತಕ್ಕೆ ಹೇಳಿ ನೀನೆ ವಿವರ್ಸಿದ್ದೆನ್ನೇ ಚೆಂದಲ್ಲಿ ಅದರಿಂದ ಮೊದಲಾಣ ಪಾರಾಲ್ಲಿ 🙂 ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಿತು ಹೇಳಿ !!
    ನೀನು ಅಕೇರಿಗೆ ವಿವರ್ಸಿದ ವಿಷಯ ಅಪ್ಪಾದ್ದೆ ಅಲ್ಲದಾ? ನಾವೇ ಅವರ ಜಾಗೆಯ ಅಗತ್ಯ ಇಲ್ಲದ್ದೆಯೂ ಆಕ್ರಮಿಸಿತ್ತು. ಅಂಬಗ ಅವು ಅವರ ಹೊಟ್ಟೆ ತುಂಬುಸುಲೇ ನಮ್ಮ ಜಾಗೆಗೆ ಬಾರದ್ದೆ ಇಕ್ಕೋ?
    ನವಗೆ ಪೈಸೆ ಅಗತ್ಯಂದ ಇನ್ನೂ ಹೆಚ್ಚು ಮಾಡುವ ಆಸೆ.. ಕಾಡು, ಗುಡ್ಡೆ ಬೋಳುಸಿ..
    ಮಂಗಂಗೆ ಅದರ ಹಶು ಅಡಗುಸುಲೆ ಎಂತ ಸಿಕ್ಕುತ್ತು ಹೇಳಿ ನೋಡುವ ಆಸೆ.. ಕಿಲೆ ಬೋಳುಸಿ..
    ಆಚಮನೆ ದೊಡ್ಡಣ್ಣ ಕುಶಾಲಿಂಗೆ ಆದರೂ ಹೇಳಿದ ಮಾತು ಸತ್ಯವೇ ಅಲ್ಲದಾ?
    {ಮಂಗಂಗಳನ್ನೂ ಮಕ್ಕಳ ಹಾಂಗೇ ನೋಡಿರೆ ಪಟಾಕಿಯೇ ಬೇಕಾಗ, ಅಲ್ಲದೋ?!}
    ಇದುದೇ ಅಪ್ಪಾದ ಮಾತೇ ಅಲ್ಲದಾ ಒಪ್ಪಣ್ಣ?
    ನಾವು ನಮ್ಮ ತೋಟದ, ಗುಡ್ಡೆಯ ಕರೆ ಕರೆಲಿ ಹಣ್ಣು ಬಿಡ್ತ ಮರಂಗಳ ನೆಟ್ಟು, ಮಂಗಂಗ ಹೊಟ್ಟೆ ತುಂಬುಸುಲೇ ವ್ಯವಸ್ಥೆ ಮಾಡಿದರೆ, ಅವುದೆ ನಾವು ಬೆಳದ ಬೆಳೆಗಳ ಮುಟ್ಟುಲೆ ಬಾರವು ಅಲ್ಲದಾ?
    ನವಗೆ ಉಪದ್ರ ಮಾಡೆಕ್ಕು, ನುಕ್ಸಾನು ಮಾಡೆಕ್ಕು ಹೇಳ್ತದು ಮಂಗನ ಉದ್ದೇಶ ಅಲ್ಲನ್ನೇ!!! ನವಗೆ ಅದರಿಂದ ನಷ್ಟ ಇದ್ದು ಹೇಳಿ ಗೊಂತಾದರೆ ನಾಳೆ ಅದನ್ನೂ ಕಲ್ತು, ನವಗೆ ನಷ್ಟ ಮಾಡುವ ದಾರಿ ಹುಡ್ಕುಗೋ ಎಂತೋ?
    ಒಂದೊಪ್ಪ ಲಾಯ್ಕಾಯಿದು.
    ಪ್ರಕೃತಿಯ ಒಳಿಶುವ°, ಎಲ್ಲೋರೂ ಬೆಳವ° ಅಲ್ಲದಾ?

    1. ಅಕ್ಕಾ..
      ಒಪ್ಪವ ಒಪ್ಪಿದ ಒಪ್ಪ ಲಾಯಿಕಾಯಿದು.

      ಅದಕ್ಕೇ ಎನಗೆ ಈಗೀಗ ಬೋಸಬಾವನ ಕಂಡ್ರೆ ಪಿಸುರೇ ಬಾರ!!

  6. ಮಂಗಂಗಳ ಉಪದ್ರವ ಬಾರೀ ಲಾಯಿಕಲ್ಲಿ ವಿವರುಸಿದ್ದೆ ಒಪ್ಪಣ್ಣೊ… ಬಂಡಾಡಿ ತೋಟಲ್ಲಿಯುದೇ ಹೀಂಗೇ ಮಂಗಂಗಳ ಉಪದ್ರ ತಡವಲೆಡಿಯ… ಮೊನ್ನೆ ಒಂದೇ ದಿನಲ್ಲಿ ಇಪ್ಪತ್ತು ಬೊಂಡ ಹಾಳುಮಾಡಿಹಾಕಿದ್ದವು… ಇನ್ನು ಅಂಬಟೆ ಮರವನ್ನುದೇ ಸಪಾಯಿ ಮಾಡುತ್ತವೋಳಿ… ಎಂತರ ಮಾಡುದೊ ಗೊಂತಾವುತ್ತಿಲ್ಲೆ…
    ಓಡುಸಲೆ ಬೊಬ್ಬೆ ಹೊಡದರೆ ಮೋರಗೇ ನೋಡುಗು… ಈ ಅಜ್ಜಿಗಾದರೂ ಎಷ್ಟು ಬೊಬ್ಬೆ ಹೊಡವಲೆಡಿಗು… ಅಲ್ಲದೋ…
    ಹ್ಮ್.. ಎಲ್ಲ ನಮ್ಮಂದಾಗಿಯೇ ಆದ್ದದು ಹೇಳುವ… ಮರಂಗೊಕ್ಕೆ ಉಳಿಗಾಲ ಇಲ್ಲದ್ದಾಂಗೆ ಕಡುದತ್ತು.. ಈಗ ನವಗೇ ಉಳಿಗಾಲ ಇಲ್ಲದ್ದೇ ಆತು….

    1. { ಓಡುಸಲೆ ಬೊಬ್ಬೆ ಹೊಡದರೆ ಮೋರಗೇ ನೋಡುಗು }
      ಯೆಬೇ, ಈ ಅಜ್ಜಿಗೆ ಕಣ್ಣು ಕಾಣದ್ದೆ ಆದ ಅವಸ್ತೆ ಹೇಳಿ ಸುಕ ಇಲ್ಲೆ..
      ಆ ದಿನ ನಿಂಗೊ ಬೈದ್ದು ನಿಂಗಳ ಜಾಲಕೊಡಿಲಿ ಇದ್ದ ಬೋಸಬಾವಂಗೆ..
      ಬೆಣಚ್ಚು ಕಮ್ಮಿ ಆಗಿ ನಿಂಗೊಗೆ ಕಾಣದ್ದದು, ಅಷ್ಟೇ!! 😉

      1. ಅಪ್ಪೋ… ಅಂಬಗ ಎನಗೆ ಕಂಡಿದಿಲ್ಲೆ ಆಯಿಕ್ಕು… ತೋಟಕ್ಕೆ ಹೋಪಾಗೆಲ್ಲ ಕನ್ನಡುಕ ಹಾಕುತ್ತಿಲ್ಲೆ ಇದಾ…

  7. ದೀಪಾವಳಿ ಮುಗುದಪ್ಪಗ ಬಂದ ಒಪ್ಪಣ್ಣನ ಲೇಖನ ಬಾರಿ ಲೈಕಾಯಿದು. ಇದು ಒಬ್ಬ ಪರಿಸರ ಕಾಳಜಿ ಇಪ್ಪಂತ ವ್ಯಕ್ತಿಯ ಅಭಿಮತ ಹೇಳುದು ಎನ್ನ ಸಹಮತ . ಮನುಷ್ಯಂಗೆ ಎಷ್ಟು ಸೌಕರ್ಯ ಇದ್ದರು ಸಾಕವುತಿಲೆ. ಆದರೆ ಪ್ರಾಣಿಗೊಕ್ಕೆ ಹಂಗಲ್ಲ, ಅವಕ್ಕೆ ಹೂಟ್ಟೇ ತುಂಬಿಸಿದರೆ ಅವರ ಕೆಲಸ ಅತು.ನಾವು ನಮ್ಮ ಬಗ್ಗೆ ಪ್ರಾಮುಕ್ಯತೆ ಕೊಡ್ತು ಹೊರತು ಬೇರೆ ಎಂಥ ಅದ್ರು ನವಗೆ ಅದರ ಗೊಡವೆಯೇ ಇಲ್ಲೆ.ಹಿಂಗೆ ಅಭಿವೃದ್ದಿ ಆದರೆ ೨೦೦-೨೫೦ ವೆರ್ಷ ಕಳುದ ಮತ್ತೆ ಬರಿ ಮನುಷ್ಯ ಮಾತ್ರ ಒಳಿವದ ಹೇಳಿ ಎನಗೆ ಅನುಸುತ್ತ ಇದ್ದು.(ಪ್ರಕೃತಿ ವಿಕೋಪ ಆಗದ್ದರೆ )
    ಲೇಖನಲ್ಲಿಪ್ಪ ಸಂದೇಶ ಮನಸ್ಸಿನ್ಗೆ ನಾಟುವ ಹಂಗೆ ಇದ್ದು. ಯೆಲ್ಲರಿಂಗು ಹಿಂಗೆ ಪರಿಸರ ಕಾಳಜಿ ಮೂಡಲಿ ಹೇಳುದು ಎನ್ನ ಆಶಯ .

    1. ಒಳ್ಳೆ ಒಪ್ಪ, ರಾಜಬಾವಾ..
      ಗಂಭೀರ ಮಾತುಗಳಲ್ಲಿ ಇಪ್ಪ ಒಪ್ಪ ಕಂಡು ಕೊಶಿ ಆತು, ಒಪ್ಪಿದೆ ನಿಂಗಳ ಮಾತಿಂಗೆ..

  8. ಮನುಶ್ಯನ ಸ್ವಾರ್ಥಕ್ಕೆ ಎಲ್ಲಾ ಜೀವಿಗಳೂ ಬಲಿ ಆದಿಪ್ಪಗ ಮಂಗಂಗ ಯಾವ ಲೆಕ್ಕ?ಅವಕ್ಕೂ ಬದುಕ್ಕೆಕ್ಕಲ್ಲದ?ಮಂಗಂಗಳ ಉಪದ್ರ ನೋಡಿದರೆ ಒಂದು ತಿಂದರೆ ಹತ್ತು ಹಾಳು ಮಾಡುತ್ತವು…ಹಂದಿ ಹಿಡಿವಲೆ(ಕೊಲ್ಲುಲೆ…ಕೊಂದು ತಿಂಬಲೆ)ಎಂಗಳಲ್ಲಿ ಇಪ್ಪ ಲೋರಿ ಪೊರ್ಬ್ಬು ಹುಶಾರಿ ಇದ್ದು…ಕಳುಸೆಕ್ಕಾ????ಒಪ್ಪಣ್ಣ ಬರದ್ದು ಬಾರೀ ಪಸ್ಟಾಯಿದು ಒಂದು ದೊಡ್ಡ ಒಪ್ಪ….

    1. { ಲೋರಿ ಪೊರ್ಬ್ಬು ಹುಶಾರಿ ಇದ್ದು…?? }
      ಅಷ್ಟು ದೊಡ್ಡದು ಬೇಡ; ಸಣ್ಣದು ಸಾಕಕ್ಕು! 😉
      ಕಾರು ಪೊರ್ಬೋ, ಜೀಪು ಪೊರ್ಬೋ ಇದ್ದರೆ ಕಳುಸಿ ಮಾವಾ°…

  9. ಮೊನ್ನೆ ಮೊನ್ನೆ ಮುಗುದ ಕಾಮನ್ ವೆಲ್ತ್ ಕ್ರೀಡಾಕೂಟಲ್ಲಿ ಸುರಕ್ಷಾ ಸೇನೆಲಿ ಕೂಡಾ ಮ೦ಗ೦ಗೊ ಇತ್ತಿದ್ದವು ಹೇಳಿ ಟಿ ವಿ ವಾರ್ತೆಲಿ ತೋರಿಸಿಗೊ೦ಡು ಇತ್ತಿದ್ದವು!!!

    1. { ಕಾಮನ್ ವೆಲ್ತ್ ಕ್ರೀಡಾಕೂಟಲ್ಲಿ ಸುರಕ್ಷಾ }
      ನಮ್ಮ ವೆಲ್ತ್ ಅನ್ನುದೇ ಅವ್ವೇ ಸುರಕ್ಷೆ ಮಾಡ್ತವಡ, ಪಾರೆ ಮಗುಮಾವ ನೆಗೆಮಾಡುಗು… 😉

  10. ಸುಮಾರು ೨-೩ ವರ್ಷಗಳ ಹಿಂದೆ ಎಂಗಳಲ್ಲಿಯೂ ಭಯಂಕರ ಉಪದ್ರ ಇತ್ತು (ಹತ್ತಿಪ್ಪತ್ತು ಮುಜುಗಳುದೆ ಅದರ ಒಟ್ಟಿಂಗೆ ಒಂದು ಮಂಗ). ಈಗ ಮರಂಗಳ ಕಡಿದೂ ಕಡಿದೂ ಗುಡ್ಡೆಗ ಎಲ್ಲಾ ಬೋಳು ಆಯಿದು. ಹಾಂಗಾಗಿ ಅವಕ್ಕೆ ಹಾರುಲೆ ಮರಂಗಳೇ ಇಲ್ಲದ್ದರಿಂದ ಕೆಲವು ಸಮಯಂದಿತ್ಲಾಗಿ ಬತ್ತವಿಲ್ಲೆ. ಆದರೂ ಸುಮಾರು ೨ ತಿಂಗಳಿಗೊಂದರಿ visit ಕೊಟ್ಟಿಕ್ಕಿ ಹೋವ್ತವು. ಅವು ಕಮ್ಮಿ ಆದಪ್ಪಗ ಭಯಂಕರ ಹಂದಿ ಉಪದ್ರ ಶುರು ಆಯಿದು. ಈಗ ಹಂದಿಗಳದ್ದೆ ಕಾರುಬಾರು. ಹಂದಿಗಳ ಹಿಡಿವಲೆ ಯಾವುದಾದರು ಜೆನ ಇದ್ದವ??? 🙂

    1. { ಹಂದಿಗಳ ಹಿಡಿವಲೆ ಯಾವುದಾದರು ಜೆನ ಇದ್ದವ?? }
      ಇಬ್ರಾಯಿಯ ತಮ್ಮ ಒಂದಿದ್ದು, ಅಸ್ರಾಪು..
      ಅದು ಹಂದಿಯ ಹಿಡಿತ್ತೋ ಏನೋ..
      ಕಾಂಬಲೂ ಹಾಂಗೇ ಇದ್ದುದೇ! 😉

      1. ಎಂಗಳ ತೋಟಲ್ಲಿ ಈಗ ವರ್ಶಾಲು ಆಳುಗಳ ದಿಂಗೇಳಿ ಅಗತೆ ಮಾಡುವ ಪದ್ಧತಿಯ ಬಿಟ್ಟಿದೆಯಾ°. ಈಗ ಪ್ರತೀ ಇರ್ಲು ಕಾಡುಹಂದಿಗಳೇ ಆ ಕೆಲ್ಸವ ಲಾಯ್ಕಲ್ಲಿ ಮಾಡ್ತವು. ಈ ವರ್ಶ ತೆಂಗಿನಕಾಯಿ ಬಿದ್ದದನ್ನೂ ಅವ್ವೇ ಸೊಲುದು ಮಡುಗಿದ್ದವು, ಬಪ್ಪ ವರ್ಶ ಅಡಕ್ಕೆ ತೆಗವಲೂ ಮದ್ದು ಬಿಡ್ಲೂ ಸುರು ಮಾಡುಗೋ ಏನೋ!! 😉 ಅಂತೂ ಆಳುಗಳ ಸಂಬಳ ಒಳುದತ್ತು, ಅಲ್ಲದ್ದೆ ಇರ್ಲು ಅಡಕ್ಕೆ ಮರಂದ ಅಡಕ್ಕೆಗೊನೆ ಕದ್ದುವವುದೆ ಹಂದಿಗಳ ಹೆದರಿಕೆಂದಾಗಿ ಬತ್ತವಿಲ್ಲೆ ಇದಾ 🙂 ಒಳ್ಳೆ ಒಗ್ಗಟ್ಟಿದ್ದು ಕಾಡುಹಂದಿಗಳಲ್ಲಿ, ಹತ್ತರಿಂದ ಕಮ್ಮಿ ಇರ್ತವಿಲ್ಲೆ ತೋಟಕ್ಕೆ ಬಪ್ಪಾಗ, ದಿನ ಉದಿಯಾಯೆಕ್ಕರೆ ಅಗತೆ ಮಾಡಿ ಬುಡ ಬಿಡುಸಿ ಮಡುಗುತ್ತವು. ಗೊಬ್ಬರ ಇದ್ದರೆ ಹೊತ್ತು ಹಾಕ್ಸುದು ಮಾತ್ರ ಬಾಕಿ ನಾವಗೆ 🙂

        ಹಂದಿ ಹಿಡಿವಲೆ ತಯಾರಪ್ಪುವು ಸುಮಾರು ಜೆನ ಇದ್ದವು. ಇರ್ಲು ಕಾಡುಹಂದಿಯ ತಂಡ ಕಂಡಪ್ಪದ್ದೆ ಅಸ್ರಾಪು ಇಲ್ಲೆ, ಇಬ್ರಾಯಿಯು ಇಲ್ಲೆ, ಅವರ ಜೀಪು ಇಲ್ಲೆ.. ! 🙂 ಕಾಣದಂತೆ ಮಾಯಾವಾದರೋ ಹೇಳಿ ಪದ್ಯ ಹೇಳೆಕ್ಕಷ್ಟ 😉

  11. ಒಪ್ಪಣ್ಣ,
    ತಮಾಶೆ ಬೆರೆಸಿ ವಾಸ್ತವದ ಚಿತ್ರಣ ಭಾರೀ ಲಾಯಿಕ ಆಯಿದು.
    ಮಂಗನ ಬುದ್ಧಿಯೊಟ್ಟಿಂಗೆ ಮಾಪ್ಳೆಗಳ ಟೊಪ್ಪಿ ಹಾಕುವ ಬುದ್ಧಿಯನ್ನೂ ನೆಂಪು ಮಾಡಿ ಕೊಟ್ಟೆ.
    ಮಂಗಂಗಳ ಜಾಗೆಯ ನಾವು ಆಕ್ರಮಿಸಿದರೆ ನಮ್ಮ ಜಾಗೆ ಅವು ಆಕ್ರಮಿಸೆಕ್ಕಷ್ಟೆ. ಬೇರೆ ಎಲ್ಲಿಗೆ ಹೋಕು ಅವು?
    ಅಜ್ಜಕಾನ ಭಾವ ಬೆಡಿ ಬಿಟ್ಟ ಪ್ರಸಂಗ ಓದುವಾಗ ನೆಗೆ ಮಾಡಿ ಸಾಕಾತು. ಆ ವಿವರಂಗೊ ಸಹಜವಾಗಿ ಬಯಿಂದು.
    ಒಂದೊಪ್ಪ ಲಾಯಿಕ ಆಯಿದು
    ಧನ್ಯವಾದಂಗೊ

    1. { ಅಜ್ಜಕಾನ ಭಾವ ಬೆಡಿ ಬಿಟ್ಟ ಪ್ರಸಂಗ ಓದುವಾಗ ನೆಗೆ ಮಾಡಿ ಸಾಕಾತು. ಆ ವಿವರಂಗೊ ಸಹಜವಾಗಿ ಬಯಿಂದು. }
      ಅಂದು, ಆ ದಿನ ಅವಂಗೂ ಬೇಜಾರಾಯಿದು!
      ಮತ್ತೆ ಅವನೂ ನೆಗೆಮಾಡಿಗೊಂಡೇ ಇತ್ತಿದ್ದ°..
      ಮಾಷ್ಟ್ರಮನೆ ಅತ್ತಗೆ ಒಳ್ಳೆತ ಬೇಜಾರ ಇದ್ದು ಆ ವಿಶಯಲ್ಲಿ, ಪಾಪ!! 😉

  12. “ನಮ್ಮ ಬೆಳೆಶಿದ ಮಂಗಂಗಳ ನಾವು ಒಳಿಶೆಕಾರೆ, ಪ್ರಕೃತಿ ಬೆಳೆಶಿದ ಕಾಡಿನ ನಾವು ಒಳಿಶೇಕು.”
    ಇದು ಆರಾದರೂ ಒಪ್ಪೆಕ್ಕಾದ ಮಾತು ಒಪ್ಪಣ್ಣ. ಕಾಡುಪ್ರಾಣಿಗಳ ನಿಸರ್ಗದತ್ತ ಆವಾಸಸ್ಥಾನಂಗಳ ಮಾಯಕ ಮಾಡಿರೆ ಅಪ್ಪದು ಹಾಂಗೇ. ಮಂಗಂಗೆ ಬೊಂಡವೇ ಬೇಕೋ? ಬೇಕಾದ್ದು ಸಿಕ್ಕದ್ದರೆ ತಮ್ಮದಾದ ಆವಾಸಸ್ಥಾನಂಗಳ ಕಾಡುಪ್ರಾಣಿಗೊ ಹುಡುಕ್ಕಿಗೊಳ್ತವು.

  13. ಯಾವಾಗ ಭೂಲೋಕಲ್ಲಿ ಮನುಷ್ಯ ಎನಗೆ ಮಾ೦ತ್ರ ಹಕ್ಕು ಹೇಳಿ ತಿಳುಕ್ಕೊ೦ಡನೋ ಅ೦ದಿ೦ದಲೇ ಈ ಎಲ್ಲಾಸಮಸ್ಯಗೊ.ಪ್ರಾಣಿಗಳ ಜಾಗೆಯ ಮನುಷ್ಯ ಆಕ್ರಮಿಸೀರೆ ಅವು ಎಲ್ಲಿಗೆ ಹೋಯೇಕು ಪಾಪ.ಅನಿವಾರ್ಯ ತೋಟವೋ ಗೆದ್ದೆಯೋ ಅವ್ವುದೆ ಹೊಟ್ಟೆ ತು೦ಬುಸಲೆ ಕಷ್ಟ ಪಡ್ತದು.ಇನ್ನು ಅವರ ಪಾಡು ಮನುಷ್ಯರಿ೦ಗೆ ಬ೦ದೀದ್ರೆ ಒಪರೇಷನ್ ಕಮಲಲ್ಲಿ ಕೂಡ ಸರಿ ಮಾಡ್ಲೆ ಎಡಿತ್ತಿತಿಲ್ಲೆ.ಒಪ್ಪ೦ಗಳೊಟ್ಟಿ೦ಗೆ

    1. { ಒಪರೇಷನ್ ಕಮಲಲ್ಲಿ ಕೂಡ ಸರಿ ಮಾಡ್ಲೆ ಎಡಿತ್ತಿತಿಲ್ಲೆ }
      ಸರಿಯಾಗಿ ಹೇಳಿದಿ.
      ಮಂಗಂಗೊ ನಿಜವಾಗಿ ಓಪ್ರೇಶನ್ ಮಾಡುಸಿಗೊಂಡರೆ ಈ ತೊಂದರೆ ಇರ ಹೇಳೀ ಗುಣಾಜೆಮಾಣಿ ಎಡ್ಯೂರಪ್ಪನ ಪೀಯೆಯ ಹತ್ರೆ ಮಾತಾಡಿಗೊಂಡಿತ್ತಿದ್ದನಡ..!!

  14. ಪಾಪದ ಮ೦ಗ೦ಗೊ.. ಹನುಮ೦ತನ ರೂಪ.. ಅವರ ಹೇಳಿ ಸುಖ ಇಲ್ಲೆ… 😀

    {.. ಮನುಶ್ಶರಿಂಗೆ ಗಡಿ ಇದ್ದು, ಮಂಗಂಗಿದ್ದೋ – ತೋಟಪೂರ ಒಂದೇ ಅದಕ್ಕೆ!!}

    ಮನುಷ್ಯಾರಿ೦ಗೆ ಗಡಿ ಇದ್ದೊ ಭಾವ??? 🙂 ಗಡಿ ಇಲ್ಲದಕ್ಕೆ ನಿ೦ಗೊ ಹೇಳಿದ ಹಾ೦ಗೆ, ರಬ್ಬರು ತೋಟ ಮಾಡ್ಲೆ ಕಾಡು ಕಡುದ್ದು.. 😉
    ಕಾಡು ಕಡುದು “ ತೋಟ, ಸೈಟು” ಹೀಗೆಲ್ಲಾ ಜಾಸ್ತೆಯಾಗಿ ಅಲ್ಲದೊ ಪ್ರಾಣಿಗೊ “ ಹಳ್ಳಿ, ಪೇಟೆ “ ಹತ್ತಿದ್ದು… 😀

    ಇ೦ದು ಮನುಷ್ಯ- ಹಳ್ಳಿ, ಪೇಟೆ ಬಿಟ್ಟು- ಪಟ್ಟಣ, ವಿದೆಷ ಹತ್ತುತು.. ಅದೇ ರೀತೆ, ಮ೦ಗ೦ಹೊಗೆ- “ ಪ್ರಮೊಷನ್” ಸಿಕ್ಕಿದ್ದು.. 😀
    ಇದು ಬರೇ , ಮ೦ಗ ಮಾತ್ರ ಅಲ್ಲ.. ಕಾಡು ಕಮ್ಮಿಯಾವುತ್ತಾ೦ಗೆ ಆನೆ, ಹುಲಿ, ಚಿರತೆ.. ಬಾಕಿದ್ದು ಬಕ್ಕು.. ಇನ್ನು.. ಬೈ೦ದುದೆ.. 😮

    {..ಅದಕ್ಕೆ ಎಂತಾರು ನಾಟೇಕು ಹೇಳಿ ಆದರೆ ಕಲ್ಲಿಡ್ಕಲೆ ಸುರುಮಾಡಿದವು!|}

    ಆನು ಸಣ್ಣಾಗಿಪ್ಪಗ ಒ೦ದು ಕತೆ ಹೇಳುಗು- ಮರದಡಿ ಒರಗಿ೦ಡಿದ್ದ ಟೊಪ್ಪಿ ಮಾರ್ತ ಜನದ, ಟೊಪ್ಪಿಗೊ ಎಲ್ಲ ಮರಲ್ಲಿ ಕೂದ ಮ೦ಗ೦ಗೋ ಕದ್ದದು.. ಮತ್ತೆ ಆ ಜೆನ.. ತಾನು ಹಾಕಿದ ಟೊಪ್ಪಿ ಇಡುಕ್ಕಿಯಪ್ಪಗಾ, ಮ೦ಗ೦ಗೊ ಎಲ್ಲಾ ಕದ್ದಟೊಪ್ಪಿ ಕೆಳ ಇಡುಕಿದ್ದು..
    ನಾವು ಕಲ್ಲು ಇಡುಕ್ಕುತ್ತು ನೋಡಿ ಮರಲ್ಲಿಪ್ಪ ಮ೦ಗನೂ, ಅಡಕ್ಕೆಯೊ, ಬೊ೦ಡವೊ ನವಗೆ ಇಡುಕ್ಕದ್ದೆ…!! ಎ೦ತ ಹೇಳ್ತೀ?? 😀 😉

    1. {…ನಾವು ಕಲ್ಲು ಇಡುಕ್ಕುತ್ತು ನೋಡಿ ಮರಲ್ಲಿಪ್ಪ ಮ೦ಗನೂ, ಅಡಕ್ಕೆಯೊ, ಬೊ೦ಡವೊ ನವಗೆ ಇಡುಕ್ಕದ್ದೆ…!!}
      ಹಾಂಗೆ ಇಡುಕ್ಕಿದರೆ ನಮಗೇ ಲಾಭ. ಎಂತಗೆ ಹೇಳಿದರೆ ಅಡಕ್ಕೆ, ತೆಂಗು ಎಲ್ಲಾ ಕೊಯ್ವಲೆ ಜೆನವೇ ಸಿಕ್ಕುತ್ತವಿಲ್ಲೆ ಇದಾ.. ಸಿಕ್ಕಿದರೂ ಭಯಂಕರ ಡಿಮ್ಯಾಂಡು ಮಾಡ್ತವು. ಮಂಗಂಗ ಆದರೆ free ಆಗಿ ಮಾಡ್ತವನ್ನೆ.. 🙂

        1. { ಒರಗಿ೦ಡಿದ್ದ ಟೊಪ್ಪಿ ಮಾರ್ತ ಜನದ }
          ಈಗ ಅದೇ ಟೊಪ್ಪಿ ಮಾರ್ತ ಜೆನ ಟೊಪ್ಪಿ ಹಾಕಲೆ ಮಂಗನ ಹಿಡಿವೋರ ರೂಪಲ್ಲಿ ಬಯಿಂದವು ಭಾವಾ!! 🙁

  15. ರಜ ಪುರುಸೋತ್ತಿಲಿ ಓದಿದೆ ,ಒಪ್ಪಣ್ಣ ಭಾವನ ಅದ್ಭುತ ಲೇಖನ.
    ಅಜ್ಜಕಾನ ಭಾವ x ಮಂಗನ ಮುಖಾಮುಖಿ ಪ್ರಸಂಗವ ಕಲ್ಪನೆ ಮಾಡಿದೆ,ನೆಗೆ ತಡವಲೆಡಿಯ.
    ಓದುಸಿಗೊಂದು ಹೋಪ ಗುರಿಕ್ಕಾರನ ಮನದ ತುಮುಲ ,ಮಂಗಂಗಳ ಓಡುಸುವ ವಿವಿಧ ವಿಧಾನಂಗೋ ,ಅದ್ರಾಮನ ಕಥೆ , ಮನಸ್ಸಿಂಗೆ ತಟ್ಟಿತ್ತು. ಅಲ್ಲಿಂದ ಲಂಕೆಗೆ ಹೋದ ಮಂಗನ ಕಥೆ ಎಡೆಲಿ ಸ್ವರ್ಗವನ್ನೂ ಬಿಟ್ಟಿದಿಲ್ಲೆ.ಆಂಡಯ್ಯನ ವಿಷಯವೂ ಮುರಲಿಭಾವ ಸರಿಸಮಯಕ್ಕೆ ಕೊಟ್ಟ ಕೊಂಡಿಯೂ ಒಳ್ಳೆ ವಿಷಯ ಸಿಕ್ಕುವ ಹಾಂಗಾತು.
    ಕಡೆಯ ಮಾತುಗೊ ವಿಷಯದ ಗಂಭೀರತೆಯ ತಂದತ್ತು.ನಾವು ನಮ್ಮ ಸ್ವಾರ್ಥಕ್ಕೆ ಬೇಕಾಗಿ ಎಷ್ಟು ಜೀವಿಗೊಕ್ಕೆ ಕಷ್ಟ ಕೊಡುತ್ತು.ಈ ಭೂಮಿಲಿ ಒಂದು ಸರ್ತಿ ಬದುಕುವ ಅವಕಾಶವನ್ನೇ ಇಲ್ಲದ್ದ ಹಾಂಗೆ ಮಾಡುತ್ತಾ ಇದ್ದು. ಸುತ್ತಲಿನ ಮರ ಸೆಸಿ ಬಳ್ಳಿಗಳಲ್ಲಿ ಹಕ್ಕಿಗೊ,ಕುಂಡೆಚ್ಚ೦ಗೋ ಇಪ್ಪ ದೃಶ್ಯ ಎಷ್ಟು ಸುಂದರ ಅಲ್ಲದೋ?.ಇಂದು ಗುಬ್ಬಿ ಹಕ್ಕಿಗಳ ಕಾ೦ಬದೇ ಅಪರೂಪ ಆಯಿದು.ಇನ್ನು ಅದರ ನೋಡುಲೆ ಮೃಗಾಲಯಕ್ಕೆ ಹೊಯೆಕ್ಕಕ್ಕೋ?
    ಮನಕ್ಕೆ ಮುಟ್ಟಿತ್ತು ಒಪ್ಪಣ್ಣ ಭಾವ,ಧನ್ಯವಾದ.

    1. ಮುಳಿಯಭಾವಾ. ಒಪ್ಪುವಒಪ್ಪಕ್ಕ ಒಪ್ಪಂಗೊ.
      ಇದರ ನೋಡುವಗ ಭಾಮಿನಿಯ ಅಂದ ನೆಂಪಾತು.. 😉
      ಇನ್ನೂ ಇನ್ನೂ ಬರಳಿ..

  16. ಅದಿರಳಿ, ಒಪ್ಪಣ್ಣೋ! ಲೇಖನ ಪಷ್ಟಾಯಿದು, ರಜ ಹಾಸ್ಯ-ವಿನೋದ ಇದ್ದರುದೆ ಕೊನೆಲಿ ನಾವು ಯೋಚನೆ ಮಾಡೆಕ್ಕಾದ ಗಹನವಾದ ವಿಚಾರವ ಬರದ್ದೆ.. ಪ್ರಕೃತಿ ಯಾವತ್ತೂ ಸಮತೋಲನ ಕಾಯ್ತು, ನಾವು ಹಾಳು ಮಾಡಿರೆ, ನವಗೇ ತೊಂದರೆ ಅಪ್ಪದರಲ್ಲಿ ಸಂಶಯವೇ ಇಲ್ಲೆ ಇದಾ..
    ಒಂದೊಪ್ಪ ಒಪ್ಪ ಆಯಿದು!

    [ಮಂಗನೂ, ಅಜ್ಜಕಾನಬಾವನೂ ಮಾಷ್ಟ್ರುಮಾವನಲ್ಲಿಗೆ ಒಟ್ಟಿಂಗೆ ಬಂದವಿದಾ!]
    ಕೈ-ಕೈ ಹಿಡ್ಕೊಂಡು ಬಂದದ ಅಲ್ಲ ಹೆಗಲಿಂಗೆ ಕೈ ಹಾಯ್ಕೊಂಡೋ? ಅಂತೂ ಅಜ್ಜಕಾನ ಭಾವಂದೆ ಮಂಗಂದೆ ಹತ್ತರತ್ರೆ ಹೇಳಿ ಎನಗೆ ಈಗ ನಂಬಿಕೆ ಆತು!! 🙂 “ಅಜ್ಜಕಾನ ಭಾವ° ಮಂಗಂಗೆ ಬೆಡಿಹಿಡಿದ ಹಾಂಗೆ” ಹೇಳಿ ಎನ್ನತ್ರಿಪ್ಪ ಹವ್ಯಕ ಗಾದೆಗಳ ಪುಸ್ತಕಲ್ಲೆ ಒಂದು ಸಾಲು ಸೇರ್ಸುಲಕ್ಕೋ ಹೇಳಿ, ಅರ್ತಿಕಜೆ ಅಜ್ಜನತ್ರೆ ಕೇಳೆಕ್ಕು.. 😉 ಅಜ್ಜಕಾನ ಭಾವ° ಪಟಾಕಿಬಿಡುದರ್ಲಿ ಉಶಾರಿ ಹೇಳಿ ಗೊಂತಿತ್ತು! ಬೆಡಿಯೂ ಬಿಡ್ತನೋ°! ಭಲೆ ಭಲೆ!!! ಮೆಚ್ಚಿದೆನಯ್ಯಾ ಭಾವ ನಿನ್ನ ಪರಾಕ್ರಮವ!!
    😀

    1. ಹೆ ಹೆ …..ಅಜ್ಜಕಾನ ಭಾವ ಬಿಟ್ಟದ್ದು ಪಟಾಕಿಯೇ…..ಶಬ್ಧ ಮಾತ್ರ ಬೆಡಿದು……

      1. { ಕೈ-ಕೈ ಹಿಡ್ಕೊಂಡು ಬಂದದ ಅಲ್ಲ ಹೆಗಲಿಂಗೆ ಕೈ ಹಾಯ್ಕೊಂಡೋ? }
        ಅಜ್ಜಕಾನ ಬಾವನೂ ಬಲ್ನಾಡುಮಾಣಿಯೂ ಹೆಗಲಿಂಗೆ ಕೈ ಹಾಕಿಗೊಂಡು ಹೋವುತ್ತದು ಗ್ರೇಶಿಹೋತು ಒಂದರಿ! 😉
        ಅಲ್ಲದೋ, ಶೇಡಿಗುಮ್ಮೆ ಬಾವಾ?

        1. ಮಂಗನೂ ಮಂಗನ ಕೊಣುಶುತ್ತವನೂ ಒಟ್ಟಿಂಗೆ ಬಂದ ಹಾಂಗೆ ಆತಾಯಿಕ್ಕು ಅಲ್ಲದಾ !!!

  17. ಪರಿಸರ ರಕ್ಷಣೆಯ ಕಳಕಳಿ, ಲೇಖನಲ್ಲಿ ವ್ಯಕ್ತ ಆವ್ತು… ಭಾರೀ ಲಾಯ್ಕಾಯ್ದು ಲೇಖನ!!
    ಅಜ್ಜಕಾನ ಭಾವ ಬೇಡಿ ಬಿಟ್ಟ ಕತೆ ಓದಿ ನೆಗೆ ಬಂತು!! 😀 😀

    1. { ಬೆಡಿ ಬಿಟ್ಟ ಕತೆ ಓದಿ }
      ಕತೆ ಅಲ್ಲ ಪುಟ್ಟಬಾವಾಅ.. ಕತೆ ಅಲ್ಲ..!!
      ಬೇಕಾರೆ ಮಾಷ್ಟ್ರುಮಾವನ ಮಗನತ್ರೆ ಕೇಳಿ, ಅವಂದೇ ಅಲ್ಲೇ ನಿಂದುಗೊಂಡು ಇತ್ತಿದ್ದ°… 😉

    1. ಭಾವಯ್ಯ, ಬೇಕಾರೆ ಎಂಗಳ ಬೈಲಿಂದ ನಿಂಗಳಲ್ಲಿಗೆ ಕಳುಸಿ ಕೊಡ್ಳಕ್ಕು. ಬೇಕೋ ?

    2. ಶಾಂಬಾವನ ಒಪ್ಪವೂ, ಬೊಳುಂಬುಮಾವನ ಪ್ರಶ್ನೆಯೂ – ಎರಡೂ ಪಷ್ಟಾಯಿದು!
      ಒಪ್ಪಣ್ಣ ಎಡೆಲಿ ಬಾಯಿ ಹಾಕಿರೆ ಮಂಗ ಅಕ್ಕು, ಅಲ್ಲದೋ? 😉

  18. ಒಪ್ಪಣ್ಣಂಗೆ ಪುರುಸೊತ್ತು ಇಲದ್ದೆ ಅಪ್ಪಲೆ ಸುರುವಾತದ, ಎಂಗಳ ಹಾಂಗೆ ! ಸಂಸಾರ ತಾಪತ್ರಯ ಹೇಳಿರೆ ಹಾಂಗೆ ! ಇರಳಿ. ಎಲ್ಲವೂ ಬೇಕು. ಮಂಗನ ಪೊದ್ರದ ಬಗ್ಗೆ ಕಥೆ ಸಮೇತ ಲಾಯಕಿಲ್ಲಿ ವರ್ಣಿಸಿದ್ದ ಒಪ್ಪಣ್ಣ. ಸಣ್ಣ ಇಪ್ಪಗ ಅಪ್ಪನೊಟ್ಟಿಂಗೆ ತೋಟೆ ಬೆಡಿ ಹಿಡುಕ್ಕೊಂಡು ತೋಟಕ್ಕೆ ಹೋಗೆಂಡಿದ್ದದು ನೆಂಪಾತು. ಎನ್ನ ಅಪ್ಪ ಮುಜು ಒಂದಕ್ಕೆ ಬೆಡಿ ಬಿಟ್ಟು ಅದು ನೆತ್ತರು ಹರಿಶೆಂಡು ಬಿದ್ದು ಕಾಲು ಎಳಕ್ಕೊಂಡು ಓಡಿದ್ದದು ಈಗಲೂ ಕಣ್ಣಿಂಗೆ ಕಾಣುತ್ತು. ಅಜ್ಜಕಾನಭಾವನುದೆ, ಮಂಗನುದೆ, ರಾಜಕುಮಾರ್, ವಜ್ರಮುನಿಯ ಹಾಂಗೆ ಮೋರೆ ನೋಡಿದ್ದದು ಕೇಳಿ ನೆಗೆ ಬಂತು.

    ಅದ್ರಾಮನೂ ಇಬ್ರಾಯಿಯೂ ಮಂಗನ ಹಿಡುದು ಬಿಡುತ್ತ ಕಿತಾಪತಿ ನಿಜವೇ ಆಯ್ಕು ಹೇಳಿ ಕಾಣ್ತು. ಹೊಟ್ಟೆ ಪಾಡಿಂಗೆ ಮನುಷ್ಯ ಎಂತೂ ಮಾಡುಗು ಅಲ್ಲದೊ ? ಈ ವಿಷಯ ಕೇಳುವಗ ಕಂಪ್ಯೂಟರಿನ ವೈರಸಿನ ನೆಂಪು ಆವುತ್ತು. ಕೆಲವು ಕಂಪೆನಿಯವು ಹಾಂಗೆ ಮಾಡುತ್ತವಾಡ. ಹೊಸ ಹೊಸ ವೈರಸುಗಳ ಸೃಷ್ಟಿ ಮಾಡಿ ಲೋಕಕ್ಕೆಲ್ಲ ಹಬ್ಬುಸಿ, ಮತ್ತೆ ಅದಕ್ಕೆ ಅವೇ ಮದ್ದು ಕಂಡು ಹುಡುಕ್ಕಿದ ಹಾಂಗೆ ಮಾಡಿ ಎಲ್ಲೋರಿಂಗು ಕೊಡುತ್ತವಾಡ. ಅಪ್ಪೊ ಮಕ್ಕಳೆ ? ನಿಂಗಳೇ ಹೇಳೆಕಷ್ಟೆ. ಎಂಗೊಗೆ ಅರಡಿಯ.

    ಕರ್ನಾಟಕದ ಕೆರೆಲಿ ಎಲ್ಲ ಬೊಂಡದ ನೀರಿನ ರುಚಿಯ ನೀರು ಅಂದ್ರಾಣ ಕಾಲಲ್ಲಿತ್ತು. ಈಗಾಣ ಕಾಲಲ್ಲಿ ಅದಕ್ಕೆಲ್ಲ ನಾವು ಇದ್ದ ಕುರೆಗಳ ಎಲ್ಲ ಸೇರುಸಿ ಗಬ್ಬು ನಾಥ ಬತ್ತ ಹಾಂಗೆ ಮಾಡಿ ಬಿಟ್ಟಿದು. ಆ ನೀರು ಕುಡುದರೆ ಎಂತೆಂತದೋ ರೋಗಂಗಳು ಬಕ್ಕು. ಶರ್ಮಪ್ಪಚ್ಚಿ ಎಷ್ಟು ಆಲಂ, ಬ್ಲೀಚಿಂಗು ಪೌಡರು ಹಾಕಿದರೂ ಶುದ್ದ ಆಗ !

    1. ಯೇವತ್ತಿನಂತೆ ಬೊಳುಂಬುಮಾವನ ಪ್ರೀತಿಯ ಒಪ್ಪಕ್ಕೆ ನಮಸ್ಕಾರಂಗೊ.
      ಮಂಗನ ಹಿಡುದ ಕತೆ ನಿಜವೇ! ಒಪ್ಪಣ್ಣಂಗೆ ಲೊಟ್ಟೆ ಅರಡಿಯ ಇದಾ!! 😉

      { ಅಪ್ಪೊ ಮಕ್ಕಳೆ ? ನಿಂಗಳೇ ಹೇಳೆಕಷ್ಟೆ }
      ಅಪ್ಪಡ, ಪೆರ್ಲದಣ್ಣ ಮೊನ್ನೆಯೇ ತಲೆ ಆಡುಸಿತ್ತಿದ್ದ° !
      ಸಣ್ಣ ಸಣ್ಣ ವೈರಸ್ಸು ಅವಂಗೇ ಮಾಡ್ಳೆ ಅರಡಿಗಡ. 🙂
      ಅವ° ಮದಲಿಂಗೇ ಹಾಂಗ್ರುತ್ತದರ್ಲಿ ಉಶಾರಿ ಮಾಣಿ..

      { ಶರ್ಮಪ್ಪಚ್ಚಿ ಎಷ್ಟು ಆಲಂ, ಬ್ಲೀಚಿಂಗು ಪೌಡರು ಹಾಕಿದರೂ ಶುದ್ದ ಆಗ }
      ಆಂಡಯ್ಯ ಕವಿಯ ಬದಲು ಆಲಮ್ಮ ಕವಿ ಬರೆಕ್ಕಷ್ಟೇಯೋ ಬೊಳುಂಬು ಮಾವಾ°?

  19. hanumanthane ashokavana halumaadudu,baki mangango ayodhyege bappaga madhuvanava halumadudu ramayanalli batthu.Innondu tamashe kathe iddu ;valmikiramayanalli illaddu.Ramana pattabhishekakke banda mangango tumba dina ayodhyeli iddiddavu.ondu dina ootada samaya ondu sanna bingiya manga karandedo,nellido uppinakai timbaga ondu bittu pakkane ettarakke chimmithu.ee manga ‘nee enta dodda,ninnanda ettarakke aanu harthe nodu’heli haritu.Tekkoli,innondu adakkinta ettara harittu!heenge ellavoo harle suru madidavu. avakke Ramadevara aramaneli iddadu maradatthada!Hanumantanoo,Sugreevanoo kooda haridavada.Bhojanashale ella chondrana!Ramange dooru hothu.Ava bandappaga ella summane koodavada!EE kathe Swathathryapoorvada ondu Kannada pathapusthakalli ittu.Enna appa kalivaga iddidda pusthaka,anu sannagippagaloo engalalli ittu.Eega ille.

    1. ನಿಂಗೊ ತಿಳಿಸಿಕೊಟ್ಟ ಕಥೆ ಒಪ್ಪಣ್ಣನ ಲೇಖನಕ್ಕೆ ಪೂರಕವಾಗಿದ್ದು, ತಮಾಷೆ ಇದ್ದು. ಮಂಗನ ಬುದ್ದಿ ಎಲ್ಲಿ ಹೋದರೂ ಬಿಡ ಅದು ಅಲ್ದೊ ? ಒಪ್ಪಕ್ಕೆ ಧನ್ಯವಾದಂಗೊ.

    2. ಭಾವ,
      ಆಹಾ,ಎನ್ನ ಬಾಲ್ಯಲ್ಲಿ ಅಜ್ಜಿ ಹೇಳಿಗೊಂಡಿದ್ದ ರೋಚಕ ಕಥೆಗಳಲ್ಲಿ ಇದೂ ಒಂದು.ಮರದು ಹೋದ ಆ ಕ್ಷಣ೦ಗಳ ನೆಂಪು ಮಾಡಿದ್ದಿ.ಧನ್ಯವಾದ.

    3. ಕತೆ ಪಷ್ಟಿದ್ದು!
      ಒಪ್ಪವೂ ಲಾಯಿಕಿದ್ದು. ತುಂಬಾ ಕೊಶಿ ಆತು ಗೋಪಾಲಭಾವಾ..!!
      ನಿಂಗೊ ಕಳುಸಿಕೊಟ್ಟ ಚೆಂದ ಚೆಂದದ ಚೋದ್ಯಂಗೊ ಸದ್ಯಲ್ಲೇ ಬೈಲಿಂಗೆ ಬತ್ತು.
      ಒಪ್ಪಂಗೊ ಬತ್ತಾ ಇರಳಿ, ಹರೇರಾಮ…

  20. ಬರದ್ದು ಭಾರಿ ಲಾಯ್ಕಾಯಿದು. ಆಂಡಯ್ಯನ ಬಗ್ಗೆ ನೆಂಪು ಮಾಡಿಕೊಟ್ಟದು ಒಳ್ಳೆದಾತು.
    ಒಂದು ಒಳ್ಳೆ ಲೇಖನ ಇದ್ದು ಇಂಟರ್‍ನೆಟ್ಟಿಲಿ ಆಂಡಯ್ಯನ ಬಗ್ಗೆ. ಇಲ್ಲಿದ್ದು:
    http://sampada.net/article/5523

    ಎಂಗಳೂ ಸಣ್ಣ ಆಗಿಪ್ಪಗ ಮಂಗನ ಓಡ್ಸಿಯೊಂಡು ಇತ್ತಿದ್ದೆಯೊ,( ಅಥವಾ, ಓಡ್ಸಿದೆಯೊ ಹೇಳಿ ಗ್ರೇಶಿಯೊಂಡು ಇತ್ತಿದ್ದೆಯೊ).ಎನ್ನ ತಮ್ಮ ಭಾರಿ ಉಷಾರು ಮಂಗನ ಓಡ್ಸುಲೆ. ಅವನ ದೊಂಡೆ ಎಂಗಳಿಂದ ಎಲ್ಲ ರಜ್ಜ ಗಟ್ಟಿ 🙂 :).

    ಮುರಳಿ

    1. ಯೇ ಮುರಳಿ ಅಣ್ಣೋ..
      ಬೈಲಿಂಗೆ ಮಂಗನ ಉಪದ್ರ ಇಪ್ಪಗ ನಿಂಗೊ ಆಂಡಯ್ಯನ ಶುದ್ದಿ ಓದಿಗೊಂಡು ಕೂದ್ದದೋ..
      ಮಾಷ್ಟ್ರಮನೆ ಅತ್ತೆ ನಿಂಗೊಗೆ ಬೈಗು, ಓಡುಸಲೆ ಸೇರದ್ರೆ 🙂

      { ಅವನ ದೊಂಡೆ ಎಂಗಳಿಂದ ಎಲ್ಲ ರಜ್ಜ ಗಟ್ಟಿ }
      ಏನೇ ಆದರೂ ಅಜ್ಜಕಾನಬಾವನ ಹಾಂಗೆ ಉಪಾಯಲ್ಲಿ ಓಡುಸುತ್ತದು ಅರಡಿಯ ಅವಂಗೆ!! 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×