Oppanna.com

ಬಲೀಂದ್ರಾ..ಬಲೀಂದ್ರಾ… ಹರಿಯೋ ಹರಿ..!!!

ಬರದೋರು :   ಒಪ್ಪಣ್ಣ    on   16/10/2009    12 ಒಪ್ಪಂಗೊ

ಒಪ್ಪಣ್ಣನ ಶುಕ್ರವಾರಕ್ಕೊಂದು ಶುದ್ದಿ ಹೇಳುಲಪ್ಪಗ ಹಬ್ಬವೋ, ಆಚರಣೆಯೋ ಬಪ್ಪದಿದ್ದರೆ ಒಂದೊಂದರಿ ಅದನ್ನುದೇ ಮಾತಾಡಿದ್ದಿದ್ದು. ಈ ಸರ್ತಿ ಇನ್ನೊಂದು.

ನಮ್ಮ ಊರಿಲಿ ಎಷ್ಟು ಹಬ್ಬಂಗೊ ಇದ್ದರೂ ’ಹಬ್ಬ’ ಹೇಳಿ ಮಾಂತ್ರವೇ ಹೇಳ್ತರೆ ಅದು ದೀಪಾವಳಿಗೆ. ಒಳುದ ಎಲ್ಲಾ ಹಬ್ಬಂದಲೂ ಹೆಚ್ಚು ಪ್ರಾಮುಖ್ಯವಾದ್ದು, ಎಲ್ಲೊರಿಂಗೂ ಆಪ್ತವಾದ್ದು ದೀಪಾವಳಿ ಆದ ಕಾರಣವೋ ಏನೋ. ಮನೆಲಿಪ್ಪ ಎಲ್ಲೊರಿಂಗೂ ಗೌಜಿ ಇದ್ದು ಹಾಂಗಾಗಿ ಇದಕ್ಕೆ ಒಲವು ಜಾಸ್ತಿ.
ಮದಲಿಂಗೆ ಯಾವರೀತಿ ಪತ್ತನಾಜೆ ಒಂದು ಪರ್ವದಿನವೋ, ಅದೇ ರೀತಿ ಈ ಹಬ್ಬ ಎಷ್ಟೋ ವಿಶಯಕ್ಕೆ ಪರ್ವದಿನ.

ಈ ಹಬ್ಬದ ಬಗ್ಗೆ ಎಲ್ಲ ನಿನ್ನೆ ಮಾಷ್ಟ್ರುಮಾವನ ಹತ್ರೆ ಮಾತಾಡಿದೆ. ಸುಮಾರೆಲ್ಲ ವಿಶಯ ಸಿಕ್ಕಿತ್ತು. ಮತ್ತೆ ರಜರಜ ಒಪ್ಪಣ್ಣಂಗೇ ಗೊಂತಿಪ್ಪದರ ಎಲ್ಲ ಜೋಡುಸಿ, ಸೇರುಸಿ ಈ ಸರ್ತಿಯಾಣ ಹಬ್ಬದ ಶುದ್ದಿ.
~~~~~
ಹಿಂದೆ ವಿಷ್ಣುಭಕ್ತ° ಪ್ರಹ್ಲಾದನ ವಂಶಲ್ಲಿ ’ಬಲಿ’ ಹೇಳಿ ಒಬ್ಬ° ಚಕ್ರವರ್ತಿ ಇತ್ತಿದ್ದನಡ. ಭಾರೀ ದಾನಿ-ಧರ್ಮಿಷ್ಠ ಅಡ. ಪ್ರಜೆಗಳ ಎಲ್ಲ ತುಂಬ ಸಮೃದ್ಧಿಲಿ ನೋಡಿಗೊಂಗು.
ಆದರೆ ಒಂದೇ ಒಂದು ದುರಾಸೆ, ಇಂದ್ರಪದವಿ ಬೇಕು ಹೇಳಿಗೊಂಡು. ನೂರು ಅಶ್ವಮೇಧ ಆದರೆ ಇಂದ್ರ ಆತಿದಾ. ತೊಂಬತ್ತೊಂಬತ್ತಪ್ಪಗ ದೇವಲೋಕಲ್ಲಿರ್ತ ಇಂದ್ರಂಗೆ ಬೆಶಿ ಮುಟ್ಟಿ, ವಿಷ್ಣುವಿನ ಹತ್ತರೆ ಓಡಿ ಕೈಕ್ಕಾಲು ಹಿಡುದು ದಮ್ಮಯದಕ್ಕಯ ಹಾಕಿ ’ರಜ್ಜ ನೋಡಿಗೊಳ್ಳಿ ಭಾವ’ ಹೇಳಿದ°, ರೂಪತ್ತೆ ಮಗಳಿಂಗೆ ಸುಳ್ಯಲ್ಲಿ ಸೀಟಿಂಗೆ ರೂಪತ್ತೆ ತಮ್ಮ ಹೊಣದ ಹಾಂಗೆ. ಅಂಬಗಳೇ ವಿಷ್ಣು ತನ್ನ ದಶಾವತಾರಲ್ಲಿ ಒಂದಾದ ’ವಾಮನ’ ಅವತಾರ ಎತ್ತಿದ್ದು. ಬೇಡಿಗೊಂಡು ಬಲಿಯ ಹತ್ತರೆ ಬಂದು ’ಮೂರು ಪಾದ ಜಾಗೆ ಬೇಕು’ ಹೇಳಿ ಕೇಳಿದನಡ ಆ ಜೆನಿವಾರದ ವಟು. ಚಕ್ರವರ್ತಿ ಆದ ಸೊಕ್ಕು ಬೇರೆ. ಕರೆಲಿ ಕೂದ ಆಸ್ಥಾನ ಪುರೋಹಿತ ಶುಕ್ರಾಚಾರ್ಯ ಹೇದನಡ, ’ಇದಾ ಬೇಡ. ಒಪ್ಪಿ ಕೆಣಿಯೆಡ’ ಹೇಳಿ.
ಏಯ್, ಹಾಂಗೆಲ್ಲ ಎಂತ ಆಗ, ನಿಂಗೊ ತಲೆಬೆಶಿ ಮಾಡೆಡಿ ಹೇಳಿ ಒಪ್ಪಿದ. ಇಷ್ಟೆತ್ತರದ ಮಾಣಿಗೆ ಕೊಡ್ತಷ್ಟು ಆ ರಾಜನತ್ರೆ ಇಲ್ಲೆಯೊ!

ದಾನ ಪರಿಗ್ರಹದ ಕಾರ್ಯ ಆವುತ್ತಾ ಇಪ್ಪಗ ಕೊಂಬುಗಿಂಡಿಂದ ನೀರು ಬಾರದ್ದ ಹಾಂಗೆ ಸ್ವತಃ ಶುಕ್ರಾಚಾರ್ಯನೇ ಕೆಪ್ಪೆ ಆಗಿ ಹೋಗಿ ಕೂದನಡ, ರಾಜನ ಒಳುಶಿಗೊಂಬಲೆ. ಆದರೆ ನೀರೇಕೆ ಬತ್ತಿಲ್ಲೆ ಹೇಳಿ ದರ್ಬೆ ಹಾಕಿ ಒತ್ತಿದ್ದರ್ಲಿ ಶುಕ್ರಾಚಾರ್ಯನ ಒಂದು ಕಣ್ಣೇ ಹೋತತ್ಲಾಗಿ.
ಪಾದ ಲೆಕ್ಕ ಹಾಕುಲೆ ಸುರು. ಅಷ್ಟಪ್ಪಗಳೇ ಅದಾ- ಜೆನಿವಾರದ ವಟು ಆಗಿದ್ದವ ಬ್ರಹ್ಮಾಂಡಗಾತ್ರ ಆಗಿ ಗೋಚರುಸಲೆ ಸುರು ಆದ°. ಇಷ್ಟೆತ್ತರದ ವಾಮನ ಅಷ್ಟೆತ್ತರದ ತ್ರಿವಿಕ್ರಮ ಆದ°. ಒಂದು ಪಾದ ಇಡೀ ಭೂಮಿಗೇ ವ್ಯಾಪಿಸಿತ್ತು. ಭೂಮಿಲಿಪ್ಪ ಸಕಲ ಜೀವಿ ಜಲಚರ ಸ್ಥಿರ ಆಸ್ತಿಯೂ ವಾಮನಂಗೆ ಆತು. ಇನ್ನೊಂದು ಪಾದ ಇಡೀ ಆಕಾಶಕ್ಕೇ ವ್ಯಾಪಿಸಿತ್ತು. ಆಕಾಶಲ್ಲಿಪ್ಪ ನಕ್ಷತ್ರಾದಿಯಾಗಿ ಸಮಸ್ತವೂ ಬಲಿಂದ ದೂರ ಆತು.
ಎರಡಾತು. ಇನ್ನೊಂದು ಪಾದ ಎಲ್ಲಿ?
ಎಲ್ಲ ಭೋಗ್ಯ ವಸ್ತುಗಳನ್ನೂ ಕಳಕ್ಕೊಂಡ ಬಲಿಯ ಸ್ವಂತದ್ದು ಹೇಳಿ ಇದ್ದದು ಅವನ ದೇಹ ಮಾಂತ್ರ. ದಾನಿ ಬಲಿ ತನ್ನ ತಲೆಯನ್ನೇ ತೋರುಸಿ ’ಇದಾ. ಇಲ್ಲಿ ಮಡಗು ಮೂರನೇ ಹೆಜ್ಜೆ’ ಹೇಳಿದನಡ. ಬಲಿ ಕೂದುಗೊಂಡ, ವಾಮನ ಬಲಿಯ ತಲೆಲಿ ಕಾಲು ಮಡಗಿದ°, ಒಂದು ಒತ್ತಿದ°. ಬಲಿ ಸೀದ ಪಾತಾಳಕ್ಕೆ ಲೋಕಕ್ಕೆ ಹೋದ°. ಇಂದ್ರಂಗೆ ನೆಮ್ಮದಿ ಆತು.

ಪ್ರಜಾಪರಿಪಾಲಕ ಆಗಿ ಇದ್ದೊಂಡು ಹೀಂಗೆ ಏಕಾಏಕಿಯಾಗಿ ಪ್ರಜೆಗಳ ಬಿಟ್ಟು ಹೋಪದರ ಬಗೆಗೆ ವಿಷ್ಣುವಿನ ಹತ್ರೆ ಹೇಳಿ ಬೇಜಾರು ಮಾಡಿಗೊಂಡನಡ.
ಮಹಾ ವಿಷ್ಣುಭಕ್ತನಾಗಿದ್ದ ಬಲಿಗೆ ಅಂಬಗಳೇ ವರ ಸಿಕ್ಕಿದ್ದು: ’ಒರಿಷಕ್ಕೊಂದರಿ ಇಡೀ ಲೋಕದ ನಿನ್ನ ಪ್ರಜೆಗಳ ನೋಡಿಗೊಂಡು ಬಪ್ಪಲೆ ಅವಕಾಶ ಕೊಡ್ತೆ’ ಹೇಳಿ.
ಹಾಂಗೆ ಒರಿಶಕ್ಕೊಂದರಿ ಅವ° ಬತ್ತ°. ಬಪ್ಪ ದಿನ ರಾಜ್ಯ ಇಡೀ ಎಲ್ಲ ಶುಭ್ರವಾಗಿ, ಅಲಂಕೃತವಾಗಿ, ಸಮೃದ್ಧವಾಗಿ ಕಾಣೆಕ್ಕು ಹೇಳಿ ಪ್ರಜೆಗೊ ನಾವೆಲ್ಲ ಗೌಜಿ ಮಾಡುದಡ. ’ಸ್ಟಡಿ ಪಿರಿಡಿಲಿ ಮಾಷ್ಟ್ರ° ನೆಡಕ್ಕೊಂಡು ಬಪ್ಪಗ ಮಕ್ಕೊ ಮಾಡ್ತಹಾಂಗೆ’ ಹೇಳಿ ಮಾಷ್ಟ್ರುಮಾವ° ನೆಗೆಮಾಡಿದವು. ಅವಕ್ಕೆ ಅವರ ಮಕ್ಕಳ ನೆಂಪಾತೋ ಏನೋ! 😉
~~~~~

ಮಳೆಗಾಲ ಎಲ್ಲ ಕಳುದು ಬತ್ತ ಸುರೂವಾಣ ಹಬ್ಬ ಇದಾ, ತೋಟ, ಗೆದ್ದೆಯುದೇ ಫಲಸಮೃದ್ಧಿಯಾಗಿ ತುಂಬಿರ್ತು.
ಹೆಚ್ಚಿನ ಮೆನೆಲಿದೇ ಮಕ್ಕೊಗೆ ಹೊಸ ಒಸ್ತ್ರ ಎಂತಾರು ತೆಗವ ಕ್ರಮ ಇದ್ದು. ಎಡಿಗಾದವು ಸಣ್ಣ ಚಿನ್ನವುದೇ ಮಾಡುಸುಗು. ಅಂತೂ ಇಂತೂ ಹಬ್ಬ ಬಂದೇ ಬಂತು.
ಆಟದವೆಲ್ಲ ಮತ್ತೊಂದರಿ ಗೆಜ್ಜೆ ಕಟ್ಟುತ್ತ ದಿನ. ಆಟ ಮಾಂತ್ರ ಹೇಳಿ ಏನಲ್ಲ – ನಮ್ಮ ಊರಿನ ಎಲ್ಲಾ ಜಾನಪದ ಕಲೆಗೊಕ್ಕೆ ವರ್ಷಾರಂಭ ಪರ್ವ.
ಬೂತಂಗೊ ಮೆಲ್ಲಂಗೆ ಎದ್ದು ನಿಂಬಲೆ ಸುರು ಮಾಡಿದವು.
ಕಳುದ ಬೇಸಗೆಯ ಪತ್ತನಾಜೆಲಿ ಕೈದು ಆದ ಬೂತಕಟ್ಟುತ್ತವು, ಮಳೆಗಾಲ ಬೇಡುಲೆ ಹೇಳಿ ಊರೂರು ತಿರುಗಿ- Günstige Replica Uhren ಈಗ ಮತ್ತೆ ಬೂತ ಕಟ್ಟುಲೆ ಹೆರಡ್ತವು.
ಬೂತಕಟ್ಟುವವರ ಮನೆಲಿದೇ ಗೌಜಿ ಸುರು. ಗೆಂಡು ನಲಿಕ್ಕೆ ಅಭ್ಯಾಸ ಮಾಡಿರೆ ಹೆಣ್ಣು ಸಂದಿ ಹೇಳುದರ ಅಭ್ಯಾಸ ಮಾಡುಗು. ಇರುಳಾಣ ಹೊತ್ತಿಲೆ ಓ ಆ ಕೋಟಿಯ ಮನೆ ಹೊಡೆಂಗೆ ನೆಡಕ್ಕೊಂಡು ಹೋದರೆ ಗೌಜಿಯೇ ಗೌಜಿ. ಬೇಂಡು ಬಾರುಸುವ ಓಲಗದವರ ಮನೆಲಿದೇ ಗೌಜಿ. ಬೂತಕ್ಕೆ ಬೇಕನ್ನೆ?!
ಕಳ್ಳು ಕುಡುದು ಅಕಲೇ ಇರ್ತಿಲ್ಲೆ. ಆರಿಂಗುದೇ.

ದೀಪಾವಳಿಲಿ ಮೂರು ದಿನದ ಗೌಜಿ.

ನರಕ ಚತುರ್ದಶಿ:
ಲೋಕಕ್ಕೇ ಕಂಟಪುಚ್ಚೆಯ ಹಾಂಗೆ ಕಂಟಕ ಆಗಿದ್ದಿದ್ದ ನರಕಾಸುರನ ಕೃಷ್ಣ ಸಂಹಾರ ಮಾಡಿದ ಚತುರ್ದಶಿಗೆ ನರಕ ಚತುರ್ದಶಿ ಹೇಳ್ತದು. ಯುದ್ಧದ ಬಚ್ಚಲು ಹೋಪಲೆ, ಮೈಯುದೇ ಶುಭ್ರ ಅಪ್ಪಲೆ ಹೇಳಿ ಮನಗೆ ಬಂದು ಎಣ್ಣೆ ಕಿಟ್ಟಿ ಮಿಂದನಡ ಕೃಷ್ಣ. ಆ ನೆಂಪಿಂಗೆ ಎಲ್ಲೊರುದೇ (ಆಚಕರೆ ಮಾಣಿಯ ಬಿಟ್ಟು) ಈ ದಿನ ಎಣ್ಣೆ ಕಿಟ್ಟಿ, ಬೆಶಿ ಬೆಶಿ ನೀರಿಲಿ ಮಿಂದು ಶುಭ್ರ ಅಪ್ಪದು. (ಆಳುಗಳಲ್ಲಿ ಎಲ್ಲ ಮುನ್ನಾಣದಿನವೇ ಆಚರಣೆ ಸುರು ಆವುತ್ತು. ಮುನ್ನಾದಿನ ಇರುಳು ಬೆಶಿನೀರ ಹಂಡಗೆ ಸಣ್ಣ ಅಲಂಕಾರ ಮಾಡಿ, ಮನೆಯೋರೆಲ್ಲೊರೂ ಸೇರಿ ನೀರು ತುಂಬುಸುತ್ತ ಗೌಜಿ ಬೇರೆಯೇ.) ಈಗಳೂ ಮೀವ ಆಚರಣೆ ಇದ್ದರೂ, ಸಣ್ಣ ಇಪ್ಪಗಾಣ ನೆಂಪೇ ಚೆಂದ. ಚೆ!
ದೊಡ್ಡೋರು ಉದೆಕಾಲಕ್ಕೆದ್ದು ಬೆಶಿನೀರ ಒಲಗೆ ಕಿಚ್ಚಾಕಿ, ಕೊದಿಪ್ಪ ಕೊದಿಪ್ಪ ನೀರು ಮಾಡಿ, ಸಣ್ಣ ಮಕ್ಕಳ ಹಾಸಿಗೆಯ ಜೇನೊರಕ್ಕಿಂದ ಏಳುಸಿ, ಅಂಗಿ ಚಡ್ಡಿ ಬಿಚ್ಚುಸಿ, ಚಳಿಚಳಿ ಇಪ್ಪ ಎಣ್ಣೆಯ ಮೈ ಇಡೀ ಕಿಟ್ಟಿ, ಬೇನೆ ಅಪ್ಪ ಹಾಂಗೆ ಉದ್ದಿ, ಬೆಶಿನೀರ ಗುಳಿಲಿ ಇಳುಶುತ್ತದು. ಎಲ್ಲಿದ್ದು, ಎಂತ ಆವುತ್ತಾ ಇದ್ದುಹೇಳಿ ಗೊಂತಪ್ಪ ಮೊದಲೇ ರಪರಪನೆ ಕೊದಿಪ್ಪ ನೀರು ತಲೆ-ಮೋರೆ-ಬಾಯಿಗೆ. ಪಾಪ. ಮಕ್ಕೊ ಕೂಗುಲೆ ಸುರು ಮಾಡಿರೂ ಅಮ್ಮ ನಿಲ್ಲುಸ ನೀರೆರವದು. ನೀರೆರವಗ ಕೂಗುವ ರಾಗ ನಿಂಗು. ಇನ್ನೊಂದು ಚೆಂಬು ತೋಡುವಗ ಕೂಗುದು ಮುಂದುವರಿಗು. ಕೂಗುವ ರಾಗ ನೀರೆರವ ತಾಳಕ್ಕೆ ಸರಿಯಾಗಿ ಹೋಕು. ಎಣ್ಣೆಪಸೆ ಪೂರ ಹೋಪನ್ನಾರ ಬೆಶಿನೀರು ಕಾಲಿ ಆಗ! ಎಣ್ಣೆಪಸೆ ಹೋಪಗ ಮಕ್ಕಳ ಮೋರೆ, ಕೆಮಿ ಎಲ್ಲ ಕೆಂಪು ಕೆಂಪು – ಶುಬತ್ತೆಯ ಮಗಳ ತೊಡಿಯ ಹಾಂಗೆ. ದೋಂದ ಮಾಡಿ ಆದ ಮತ್ತೆ ಮೈ ಉದ್ದುದು. ಅದುದೇ ಅಷ್ಟೇ ಬೇನೆ ಅಪ್ಪ ಇನ್ನೊಂದು ಕೆಲಸ. ಅಮ್ಮನ ಅಪ್ಪಿ ನಿಂಬದು. ಅಮ್ಮ ತಲೆ ತಿಕ್ಕುದು, ಚೆಂಡಿಹರ್ಕಿಲಿ. ತಲೆಕಸವು ಪೂರ ಕಿತ್ತು ಚೆಂಡಿಹರ್ಕಿಲೇ ಬಂತೋ ಹೇಳಿ ಒಂದು ಕನುಪ್ಯೂಸು ಬಪ್ಪದು ಮಕ್ಕೊಗೆ. ಅಮ್ಮನ ಕೈಂದ ಚೆಂಡಿಹೋಪನ್ನಾರವೂ ಚೆಂಡಿ ತೆಗವದೇ. ಸಣ್ಣೋರದ್ದು, ದೊಡ್ಡೋರದ್ದು ಎಲ್ಲೊರ ದೋಂದ ಆದ ಮತ್ತೆ ಉದಿಯಪ್ಪಗಾಣ ತಿಂಡಿ. ಕೊಟ್ಟಿಗೆಯೋ ಎಂತಾರು ಉದ್ದಿಂದು ಮಾಡಿಕ್ಕು, ಗಮ್ಮತ್ತು ಹೊಟ್ಟೆ ತುಂಬುಸಿತ್ತು. ಹಾಂಗೆ ಮಕ್ಕಳ ಹಬ್ಬ ಸುರು!!! ಆ ಒರಿಶದ ಹಬ್ಬ ಆರಂಭ.

ಮಕ್ಕೊಗಪ್ಪ ಪಟಾಕಿ ಎಲ್ಲ ತಂದು ಮಡಗ್ಗು ಮೊದಲೇ.
ಕುಂಞಿಮಕ್ಕೊ ಗುದ್ದು ಪಟಾಕಿಯ ಮನೆ ಹೆರಾಣ ಚಿಟ್ಟೆಲಿ ಮಡಗಿ ’ಪಿಟಿಪಿಟಿ’ ಹೊಟ್ಟುಸುದು, ರಜ ದೊಡ್ಡ ಪ್ರಾಯ ಆದ ಹಾಂಗೆ, ನಾಲ್ಕೈದರ ಒಟ್ಟೊಟ್ಟಿಂಗೆ ಮಡಗಿ ಹೊಟ್ಟುಸುದು, ಕೆಲಾವು ಮನೆಲಿ ಮಕ್ಕೊಗೆ ಪಿಸ್ತೂಲುದೇ ತಂದು ಕೊಡುಗು, ಹೆಚ್ಚು safe ಹೇಳಿಗೊಂಡು. ಗುದ್ದು ಪಟಾಕಿಯ ಹಾಂಗೇ ಇಪ್ಪ ಪೆಕೆಟಿಲಿ ಅದರ ರೀಲುಪಟಾಕಿ. ಅಪ್ಪನೇ ಲೋಡುಮಾಡಿ ಕೊಟ್ಟ ಆ ಪಿಸ್ತೂಲಿನ ಅಪ್ಪಂಗೆ, ಅಜ್ಜಂಗೆ, ಉದೆಕಾಲಕ್ಕೆ ಮೀಶಿದ ಅಮ್ಮಂಗೆ – ಎಲ್ಲರಿಂಗೂ ತೋರುಸಿ ಅವರ ಏಳು ಕೂರು ಮಾಡಿ, ಇಡೀ ಹರಟೆ ಮಾಡಿರೂ ಅವು ಬೈಯವು – ಮಕ್ಕಳ ಹಬ್ಬ ಅಲ್ದ ಇಂದು?! ಹಾಂಗೆ.
ಇರುಳಿಂಗೆ ರಜ ರಜ ಪಟಾಕಿದೇ ಹೊಟ್ಟುಸುಗು. ಅಪ್ಪಮ್ಮ ಸುರುಸುರು ಕಡ್ಡಿ ಹೊತ್ತುಸಿ ಮಕ್ಕಳ ಕೈಗೆ ಕೊಡುಗು. ಮಕ್ಕೊ ಅದರ ಹೆದರಿ ಹೆದರಿಯೇ ಆಡಿಗೊಂಡು – ಬೀಸಿಗೊಂಡು – ಅಪ್ಪಮ್ಮಂಗೆ ಸಂತೋಷಕೊಡ್ತವು. ರಜ್ಜ ದೊಡ್ಡ ಮಕ್ಕೊ ಆದರೆ ಬೆದ್ರಹಿಂಡ್ಳೋ, ಓಲೆ ಪಟಾಕಿಯೋ, ಆನೆಪಟಾಕಿ (ಬೀಡಿಪಟಾಕಿ)ಯೋ ಎಂತಾರು ಹಿಡ್ಕೊಂಡು ಹೆರಡ್ತವು. ಜಾಗ್ರತೆ ಮಗಾ° – ಹೇಳಿ ಒಳಾಂದ ಅಮ್ಮ ಬೊಬ್ಬೆಹೊಡಕ್ಕೊಂಡೇ ಬಾಕಿ.
ಇನ್ನೂ ರಜ್ಜ ಕಾರ್ಬಾರಿನ ಮಕ್ಕೊ ಆದರೆ, ದೊಡ್ಡವು ಹೊಟ್ಟುಸುತ್ತ ಪಟಾಕಿಗೊ ಇದ್ದಲ್ದ,  ಲಕ್ಷ್ಮೀ ಪಟಾಕಿಯೋ, ಗರ್ನಾಲೋ, ದೊಡ್ಡ ಬೆದ್ರಹಿಂಡ್ಳೋ ಎಂತಾರಿದ್ದರೆ ಅದಕ್ಕೂ ಕೈ ಹಾಕುಗು. ಅಂಬಗ ಎಲ್ಲ ಗರ್ನಲಿನ ಬತ್ತಿಯ ಅರ್ದ ಬಿಡುಸಿ, ಅದಕ್ಕೆ ಕಾಗತ ಸುರುಟಿ, ಎತ್ತರಲ್ಲಿ ಮಡಗಿ, ಮಡ್ಳಿಲಿ ಕಾಗತಕ್ಕೆ ಕಿಚ್ಚು ಮುಟ್ಟುಸಿ, ಓಡಿ ಒಪಾಸ್ ಬಂದು ಗಟ್ಟಿಗ° ಹೇಳಿ ಅನಿಸಿಗೊಂಬ ಒಂದು ಸಂಗತಿಯೇ ಬೇರೆ. ಎಂತ ಹೇಳ್ತಿ? ಕಿಚ್ಚುದೇ ಸಮಗಟ್ಟು ಹಿಡಿಯದ್ದೆ, ಹೋಪಲೂ ದೈರ್ಯ ಸಾಲದ್ದೆ ಅರ್ದಗಂಟೆಹೊತ್ತು ಈಗ ಹೊಟ್ಟುತ್ತು ಈಗ ಹೊಟ್ಟುತ್ತು ಹೇಳಿ ಕಾವದು ಅದು ಇನ್ನೊಂದು ಗೌಜಿ.
ಸುರುವಾಣ ದಿನವೇ ಪೂರ ಮುಗುಶುದೆಂತಕೆ? ಹೇಳಿ ಅಮ್ಮ ಪರಂಚಿರೂ ಗುಮನ ಇಲ್ಲೆ. ಏನಾರು ಗುರುಟಿಗೊಂಡು ಜಾಲಿಲೇ ಬಾಕಿ. ಹಬ್ಬ ಅಲ್ದಾ? ಬಾಕಿ ಸಾಮಾನ್ಯ ದಿನ ಅಲ್ಲನ್ನೆ. ದೊಡ್ಡವಕ್ಕೆಂತ, ಸುಮ್ಮನೆ!!
ಇಡೀ ದಿನ ಪಟಾಕಿ ಹೊಟ್ಟುಸಿದ ಕುಶಿಲಿ ಉದೆಕಾಲದ ಮೀಯಾಣ ಗೌಣ ಆಗಿ ಹೋವುತ್ತು ಮಕ್ಕೊಗೆ. ಬಚ್ಚಿ ಬಚ್ಚಿ ಒರಕ್ಕು ತೂಗುತ್ತು. ಇರುಳು ಉಂಡ್ರೂ ಆತು, ಇಲ್ಲದ್ರೂ ಆತು.

ಹಬ್ಬದ ಅಮವಾಸೆ
ಕೃಷ್ಣಚತುರ್ದಶಿಯ ಮರದಿನ ಬತ್ತದು ಅಮವಾಸೆ. ಇಂದು ಹಬ್ಬದ ನೆಡೂ ದಿನ. ತುಳುವರೆಲ್ಲ ’ನಡುಪರ್ಬೊ’ ಹೇಳ್ತವು ಈ ದಿನವ.
ಶೂದ್ರುಗೊ ಎಲ್ಲ ಅವರ ಪಿತೃಗೊಕ್ಕೆ ತಿತಿ ಮಾಡ್ತ ಕ್ರಮ ಇಲ್ಲೆ ಇದಾ. ಹಾಂಗಾಗಿ ಇಂದು ಅವರ ಹಿರಿಯರಿಂಗೆ ಬಳುಸುವ ಕಾರ್ಯ, ’ಬಳಸ್ಸುನೆ’ ಹೇಳುಗು ಬಟ್ಯನಾಯ್ಕ.
ತಿತಿಗೆ ಮಾಡ್ತ ಹಾಂಗೆ ಅಡಿಗೆ ಮಾಡಿ ಹಿರಿಯರ ಸಮಾದಿಮಾಡಿದಲ್ಲಿಗೆ (ತುಳುವಿಲಿ ದೂಪೆ ಹೇಳುದು ಅಲ್ಲಿಗೆ) ತೆಕ್ಕೊಂಡು ಹೋಗಿ, ಒಂದು ಬಾಳೆಲಿ ಅದಕ್ಕೆ ಬಳುಸಿ, ಪ್ರೇತಂಗಳ ಆವಾಹನೆ ಮಾಡಿ (ಆರಾರೊಬ್ಬನ ಮೈಗೆ ಬಪ್ಪದೂ ಇದ್ದು ಕೆಲವು ಸರ್ತಿ) ಅವರ ಸಂತೃಪ್ತಿ ಮಾಡುಸಿ ತಾವುದೇ ನೆಮ್ಮದಿ ಅಪ್ಪ ಸಂದರ್ಬ. ಹಬ್ಬದಮಾಸೆ ಹೇಳಿ ಸುಮಾರು ವಿಶಯಂಗೊಕ್ಕೆ ಗುರುತಿನ ದಿನ.
ಗುರಟಾಣದ ಮಕ್ಕೊಗೆ ಕೆಲಸವೋ ಕೆಲಸ.
ನಿನ್ನೆ ಇರುಳು ಗಡಿಬಿಡಿಲಿ ಇಡ್ಕಿದ ಪಟಾಕಿಯೋ ಮತ್ತೊ – ಹೊಟ್ಟದ್ದೆ ಒಳುದ್ದು ಇದ್ದಾ ಹೇಳಿ ನೋಡುದು ಜಾಲಿಡೀಕ. ಸಿಕ್ಕಿದ್ದರ ಎಲ್ಲವನ್ನುದೇ ಒಂದು ಕಾಗತಲ್ಲಿ ಹಾಕಿ,
ಒಂದೊಂದೇ ಪಟಾಕಿಯ ಬಿಡುಸಿ, ಅದರ ಒಳಾಣ ಹೊಡಿಯ ಒಟ್ಟುಮಾಡಿ, ಒಂದೇ ಸರ್ತಿ ಕಿಚ್ಚುಕೊಡುವ ಆಟ. ಎಷ್ಟೋ ಸರ್ತಿ ಕೈಗೆ ಬೆಶಿತಾಗುದುದೇ ಇದ್ದು. ಇಲ್ಲಿ ಬೆಶಿತಾಗಿದ ಶುದ್ದಿ ಅಮ್ಮಂಗೆ ಹೇಳುಲೆ ಗೊಂತಿಲ್ಲೆ ಇದಾ, ಹೇಳಿರೆ ಅಮ್ಮನದ್ದುದೇ ಬೆಶಿತಾಗುತ್ತು – ಬೆನ್ನಿಂಗೆರಡು.

ನಿನ್ನೇಣ ಹಾಂಗೇ ಇಂದುದೇ ಹಬ್ಬದ ಗೌಜಿ. ಎಲ್ಲ ಆಗಿ ಮನುಗುದು.
ಇರುಳು ಸಜ್ಜಿಲೆ ದೀಪಂಗಳ ಹೊತ್ತುಸುಗು. ಅಮಾಸೆ ಅಲ್ದ, ಹಾಂಗೆ ಅಜ್ಜಂದ್ರು ಸುರು ಮಾಡಿದ್ದಾಯಿಕ್ಕು – ಹೇಳಿ ಆಚಕರೆಮಾಣಿಯ ಜೋಕು.
ಬಲೀಂದ್ರ:
ಬಲಿಚಕ್ರವರ್ತಿ ಭೂಮಿಯ ಪ್ರಜೆಗಳ ನೋಡ್ಳೆ ಹೇಳಿಗೊಂಡು ಈ ಹಬ್ಬದ ಸಮಯಲ್ಲಿ ಬತ್ತನಡ. ಬತ್ತ, ಆದರೆ ಎಲ್ಲಿಗೆ ಬಪ್ಪದು?! ಪ್ರಜೆಗೊ ಆವಾಹನೆ ಮಾಡೆಕ್ಕನ್ನೆ.
ದೇಹ, ಕೈ-ಕಾಲು ಎಲ್ಲ ಇಪ್ಪ ಮಾದರಿ ರಚನೆ ಒಂದರ ನಿಲ್ಲುಸುತ್ತ ಕ್ರಮ ನಮ್ಮೋರ ಮನೆಗಳಲ್ಲಿ ಇದ್ದು. ಅದಕ್ಕೆ ಹೆಸರೇ ’ಬಲೀಂದ್ರ’ ಹೇಳಿಗೊಂಡು. ನಮ್ಮ ಊರಿಲಿ ಅದರ ಬಲಿವೆಂದ್ರ°, ಬಲಿಯೆಂದ್ರ° ಹೇಳಿಯೂ ಹೇಳ್ತವು.

ಒಂದು ಬಾಳೆದಂಡಿನ ಕಡುದು, ಹೆರಾಣ ಒಣಗಿದ ಚೋಲಿ ಎಲ್ಲ ತೆಗದು, ಜಾಲಿಲಿ ಗುಂಡಿ ಮಾಡಿ ನೆಡುದು. ಚೆಂದಕೆ ಗೀಸಿದ ಅಡಕ್ಕೆಮರದ ಸಲಕ್ಕೆಯ ಎರಡು ಅಡ್ಡಕ್ಕೆ ಕುತ್ತುದು. ಆತಿಲ್ಲೆಯೋ ಸುಲಭದ ಮನುಷ್ಯನ ಮಾದರಿಯ ರಚನೆ (Model). ಶೂದ್ರುಗೊ ಹಾಲೆ(ಬಲೀಂದ್ರ ಪಾಲೆ) ಮರವನ್ನೇ ನೆಡ್ತವು ಬಾಳೆದಂಡಿನ ಬದಲಾಗಿ.
ಈ ಸಮಯಲ್ಲಿ ಊರಿಡೀಕ ಪಾರೆಕಲ್ಲಿನ ಮೇಲೆ ಬೆಳಕ್ಕೊಂಡು ಇಪ್ಪ ಪಾರೆಹೂಗಿನ ಎರಡುಮುಷ್ಟಿ ಅಪ್ಪಷ್ಟು ಕೊಯಿದು ಉಪಾಯಕ್ಕೆ ಒಂದು ಮಾಲೆಮಾಡಿ ಈ ಬಲಿಯೆಂದ್ರಂಗೆ ಹಾಕುದು, ಕೊರಳಿನ ಆಭರಣ.
ಮೂರು ದಿನ ಪೂಜೆ ಮಾಡಿ ವಿಸರ್ಜನೆ ಮಾಡುಗು ಈ ಬಲಿಯೆಂದ್ರನ. ಇಂದು ಸುರು.

ಮನೆ ಯೆಜಮಾನ° ಈ ಬಲಿಯೆಂದ್ರನ ಬುಡಲ್ಲಿ ಕೂದುಗೊಂಡು ತೂಷ್ಣಿಲಿ ಒಂದು ವಿಷ್ಣುಪೂಜೆ ಮಾಡುಗು. ಬಲಿ ಹೇಳಿರೆ ವಿಷ್ಣುಭಕ್ತ° ಅಲ್ಲದೋ, ಹಾಂಗೆ ಬಟ್ಟಮಾವಂದು ಪೂಜೆ ವಿಷ್ಣುವಿಂಗೆ. ಅಡ್ಡಡ್ಡ ಇಪ್ಪ ಕೈಗಳಲ್ಲಿ ಹಣತೆ (ಇಲ್ಲದ್ರೆ ಕಾಲಿ ನೆಣೆ) ಮಡುಗ್ಗು.
ಪೂಜೆ ಆದ ಮೇಲೆ ಮನೆಯೋರು ಎಲ್ಲೊರು ನಿಂದುಗೊಂಡು ದೊಡ್ಡ ಸ್ವರಲ್ಲಿ ಹೇಳುಗು:

. . . ಬಲಿಯೆಂದ್ರಾ.. ಬಲಿಯೆಂದ್ರಾ… ಹರಿಯೋ ಹರಿ ||
. . . ಬಲಿಯೆಂದ್ರಾ.. ಬಲಿಯೆಂದ್ರಾ… ಹರಿಯೋ ಹರಿ ||
. . . ಬಲಿಯೆಂದ್ರಾ.. ಬಲಿಯೆಂದ್ರಾ… ಹರಿಯೋ ಹರಿ ||

ಹಳೆಕಾಲಲ್ಲಿ ಪ್ರತಿ ಮನೆಮನೆಗಳಲ್ಲಿ ಈ ಕ್ರಮ ನೆಡಕ್ಕೊಂಡು ಇತ್ತು. ಕೆಲವುದಿಕ್ಕೆ ಈಗಳೂ ಇದ್ದು, ಮೆಚ್ಚೆಕ್ಕಾದ್ದೆ.
(ಮಾಪಳೆ ಪಳ್ಳಿಲಿ ಬೊಬ್ಬೆ ಹೊಡದು ದಿನಿಗೆಳುದುದೇ ಇದೇ ನಮುನೆ ಹೇಳಿ ಡೈಮಂಡುಬಾವನ ತಿಳುವಳಿಕೆ. ಆದರೆ ಅದು ಬೇರೆ ನಮುನೆ.)

ಬಲಿಪಾಡ್ಯಮಿ
ಕಾರ್ತಿಕಮಾಸದ ಶುಕ್ಲಪಕ್ಷದ ಪಾಡ್ಯಕ್ಕೆ ಬಲಿಪಾಡ್ಯಮಿ ಹೇಳುದು.
ಶುಕ್ಲಪಕ್ಷ, ಅಭಿವೃದ್ಧಿಯ ಸಂಕೇತ. ಕಸ್ತಲೆ ಅಮವಾಸೆ ಕಳುದು ಸುರೂವಾಣ ತಿತಿ,ಪ್ರಥಮಿ. ಚಿಗುರಿದ ಪರಿಸರಲ್ಲಿ ಎಲ್ಲವೂ ಹೊಸ ಹೊಸತ್ತು. ಗೌಜಿಯೇ.
ಇಂದು ಎಂತದಕ್ಕುದೇ ಮೂರ್ತ ನೋಡೆಕ್ಕು ಹೇಳಿ ಇಲ್ಲೆ ಹೇಳಿ ಒಂದು ವಾಡಿಕೆ.
ಕೃಷಿ ವಿಷಯಂಗೊಕ್ಕೆ ಎಲ್ಲ ಇಂದು ಅತ್ಯುತ್ತಮ ದಿನ ಹೇಳಿ ಲೆಕ್ಕ. ಅಂಗುಡಿಲಿ ಎಲ್ಲ ಬಟ್ಟಮಾವನ ದಿನಿಗೆಳಿ ಲಕ್ಷ್ಮೀಪೂಜೆ ಮಾಡುಸುಗು. ಕೃಷಿಮನೆಯ ಹಟ್ಟಿಲಿಪ್ಪ ದನಗಳ ಮೀಶುತ್ತ ಕ್ರಮವೂ ಇದ್ದು. ಜಾಲಿಂಗೆ -ತೊಳಶಿಕಟ್ಟೆ ಇರ್ತಲ್ಲಿಂಗೆ ಸಗಣ ಉಡುಗ್ಗು, ಮದ್ಯಾನ್ನವೇ.
ಇರುಳಿಂಗೆ ವಿಶೇಷ ಪೂಜೆಗೊ ನಡೆತ್ತು.

ತೊಳಶಿ ಪೂಜೆ:
ನಿತ್ಯಪೂಜೆ ಆದಮತ್ತೆ ವಿಶೇಷವಾಗಿ ತೊಳಶಿಪೂಜೆ.
ಇರುಳಾಣ ನಿತ್ಯ ಪೂಜೆ ಆದ ಮತ್ತೆ, ಮನೆಯೋರೆಲ್ಲರೂ ಜಾಲಿಂಗೆ ಬಪ್ಪದು. ನೀರಪಾತ್ರ, ಹರಿವಾಣ, ಹೂಗು, ನೈವೇದ್ಯಕ್ಕೆ ಇಪ್ಪದು (ಅವಲಕ್ಕಿಯೋ ಎಂತಾರು- ಶುದ್ದಲ್ಲಿ ಮಾಡಿದ್ದು), ಆರತಿ ಮಣಿ ಎಲ್ಲ ಮಡಿಕ್ಕೊಂಡು ತೊಳಶಿಕಟ್ಟೆಯ ಬುಡಲ್ಲಿ ಮಣೆಮಡಿಕ್ಕೊಂಡು ಕೂದೊಂಗು, ಮನೆ ಎಜಮಾನ.
ಪಟಾಕಿ ಹೊಟ್ಟುಸುದು ಎಲ್ಲ ರಜ್ಜ ಹೊತ್ತಿಂಗೆ ಕೈದು.
ವಿಷ್ಣುದೇವರಿಂಗೆ ಪರಮಾಪ್ತವಾದ ತೊಳಶಿಗೆ ವಿಷ್ಣುಪೂಜೆಯನ್ನೇ ಮಾಡುದು. ತೂಷ್ಣಿಲಿ ಪ್ರೋಕ್ಷಣಾಬಿಶೇಕ, ಅರ್ಚನೆ ಎಲ್ಲ ಆದಮತ್ತೆ ನೈವೇದ್ಯ. ಮತ್ತೆ ಮಂಗಳಾರತಿ.
ಮಂತ್ರಪುಷ್ಪಕ್ಕಪ್ಪಗ ಮನೆಯೋರೆಲ್ಲರುದೇ ಬಂದು, ಹೂಗು ತೆಕ್ಕೊಂಡು, ತೊಳಶಿಕಟ್ಟಗೆ ಸುತ್ತು ಬಪ್ಪದು, ಒಂದು ಅದ್ಭುತ ಕ್ರಮ. ಮನೆ ಯೆಜಮಾನ ಅಪ್ಪ ಎದುರು ನಿಂದುಗೊಂಡು, ಅಮ್ಮ ಅವರ ಹಿಂದಂದ, ಅವರ ಮತ್ತೆ ಮಕ್ಕೊ – ಏಕ ಧ್ಯಾನಲ್ಲಿ ‘ಹರಿನಾರಾಯಣ ಹರಿನಾರಾಯಣ ಹರಿನಾರಾಯಣ – ಗೋವಿಂದಾ!’ ಹೇಳಿ ಪಠನ ಮಾಡಿಯೋಂಡು ಮೂರು ಸುತ್ತು ಬಪ್ಪದು ನೋಡ್ಳೇ ಒಂದು ಕೊಶಿ.
ಮೂರು ಸುತ್ತುದೇ ಆದ ಮತ್ತೆ ನಮಸ್ಕಾರ ಮಾಡುದು. ಅಲ್ಲಿಗೆ ತೊಳಶಿಪೂಜೆ ಮುಗುತ್ತು.

ಬಲೀಂದ್ರ ಪೂಜೆ
ನಿನ್ನೆ ಮಾಡಿದ ಹಾಂಗೇ ಇಂದುದೇ ಬಲಿಯೆಂದ್ರ ಪೂಜೆ ಇದ್ದು. ಅದೇ ಕ್ರಮ, ಅದೇ ರೀತಿ ದಿನಿಗೆಳುದು. ನಮಸ್ಕಾರ ಮಾಡುದು.
ನೈವೇದ್ಯಕ್ಕೆ ಹೇಳಿ ಮಾಡಿದ್ದರ ಒಂದು ಒಸ್ತ್ರಲ್ಲಿ ಕಟ್ಟಿ ಬಲೀಂದ್ರಂಗೆ ನೇಲುಸುತ್ತ ಕ್ರಮ ಇದ್ದು. ಅದೊಂದು ನಮುನೆ ನೈವೇದ್ಯ ಮಾಡ್ತ ಕ್ರಮ.
ಇದಾದ ಮತ್ತೆ ಹಟ್ಟಿಯಹೊಡೆಂಗೆ ಹೋಪದು.

ಗೋಪೂಜೆ:

ಹರಿವಾಣಲ್ಲಿ ಹೂಗು-ನೀರಪಾತ್ರ, ಕುಂಕುಮ, ಆರತಿ, ಮಣಿ ಎಲ್ಲ ತೆಕ್ಕೊಂಡು ಹಟ್ಟಿ ಬೈಪ್ಪಾಣೆಲಿ ಮಡುಗ್ಗು. ನಾಯಿ ಮೂಸುತ್ತರೆ ಕಟ್ಟಿಹಾಕುದು.
ಮುಳ್ಳುಸೌತ್ತೆ ದೋಸೆಯೋ, ಸೆಕೆಗೆರದ್ದೋ ಎಂತಾರು ಅಕ್ಕಿಕಡದುಮಾಡಿದ್ದು ಇಕ್ಕು, ಗೋಪೂಜೆಗೂ ಆತು ಹೇಳಿ ನವಗೆ ಮಾಡ್ತದನ್ನೇ ಜಾಸ್ತಿ ಮಾಡಿದ್ದು. ಒಂದು ತಟ್ಟೆಗೆ ಹಾಕಿಯೊಂಡು ಹೆಮ್ಮಕ್ಕಳೂ ಬಕ್ಕು ಹಿಂದಂದ.
ಒಂದೊಂದೇ ಗೋವಿಂಗೆ ಪ್ರೋಕ್ಷಣೆಮಾಡಿ, ಎರಡು ಹೂಗು ತಲಗೆ ಹಾಕುದು. ಆಚದನ ಅದರ ತಿಂದರೂ ತೊಂದರೆ ಇಲ್ಲೆ. ’ಇದಾ, ಮೋಳಮ್ಮಂಗೆ ಬೊಟ್ಟು! ಎಷ್ಟು ಚೆಂದ ಕಾಣ್ತೆ ನೀನು!ಆಹಾ…!!’ ಹೇಳಿ ಮಾತಾಡಿಗೊಂಡೇ ಮೋರೆಗೆ ಉದ್ದಕ್ಕೆ ಕುಂಕುಮ ನಾಮ ಎಳವದು. ಒಂದು ಆರತಿ ಮಾಡುದು. ಮಣಿಯ ಇಂಪಿಂಗೆ ತಲೆದೂಗಿಯೋಂಡು ಆರತಿಯ ಚಲನೆಯ ಶ್ರದ್ಧೆಲಿ ನೋಡ್ತವು ಅಭ್ಯಾಸ ಇಪ್ಪ ಹಳ್ಳಿದನಗೊ. ರೂಪತ್ತೆಯ ಜರ್ಸಿದನ ಪೆರ್ಚಿಗಟ್ಟಿ ಮಾವಂಗೆ ತೊಳುದ್ದರ್ಲಿ, ಅನಿವಾರ್ಯವಾಗಿ ಅತ್ತೆ ಕರೇಕಾಗಿ ಬಯಿಂದು ಕಳುದೊರಿಷ. ಈ ಸರ್ತಿ ಹಾಂಗಪ್ಪದು ಬೇಡ ಹೇಳಿ ಬಟ್ಟಮಾವನ ದಿನಿಗೆಳಿದ್ದವಡ ಪೂಜಗೆ. ಪಾಪ!
ಇದಾದ ಕೂಡ್ಳೆ ಅಮ್ಮ ದೋಸೆದೇ ಬೆಲ್ಲತುಂಡುದೇ ಕೊಡುದು. ಒಂದೇ ಸರ್ತಿಗೆ ಇಡೀ ದೋಸೆಯ ತಿಂದು ’ಇನ್ನೂ ಕೊಡು ಇನ್ನೂ ಕೊಡು’ ಹೇಳಿ ಬಪ್ಪನ್ನಾರವೂ ಮೋಳಮ್ಮ ಪರಂಚುಗು ಅಮ್ಮಂಗೆ. ಎಲ್ಲ ಗೋವುಗೊಕ್ಕೂ ಪೂಜೆ ಆದಮೇಲೆ ಮನೆ ಒಳಂಗೆ ವಾಪಾಸು.
ಒಳುದ ಅರ್ದ ತುಂಡು ದೋಸೆ ನಾಯಿಗೆ ಬೋನಸು.

ಹಬ್ಬದ ಪಟಾಕಿ

ಇದರ ಒಟ್ಟೊಟ್ಟಿಂಗೇ, ಊರಿಡೀಕ ಒಂದು ಸ್ಪರ್ಧೆ. ಆರ ಪಟಾಕಿ ಹೆಚ್ಚು ಶಬ್ದ ಕೊಡುದು, ಆರ ದುರ್ಸು ಹೆಚ್ಚು ಕಾಂಬದು ಹೇಳಿಗೊಂಡು. ಒಪ್ಪಣ್ಣನ ಬೈಲಿನ ಆಕಾಶಲ್ಲಿ ಇಡೀ ಬೊಬ್ಬೆಯೇ ಬೊಬ್ಬೆ. ಧನಾತ್ಮಕ ಸ್ಪರ್ಧೆ, ಒಳ್ಳೆದೇ-ಅಲ್ದೋ?
ಈ ಸರ್ತಿ ಆಚಕರೆಮಾಣಿ ಅಜ್ಜಕಾನಬಾವನ ಮನೆಮೇಲಂಗೇ ರೋಕೆಟ್ಟು ದುರ್ಸು ಬಿಡ್ತನಡ, ಡೈಮಂಡು ಬಾವ° ಹೇಳಿದ್ದು. ಓ ಮೊನ್ನೆ ದೊಡ್ಡಬಾವ° ಗರ್ನಲು ತೆಕ್ಕೊಂಡುಬಪ್ಪಗ ಸೂರಂಬೈಲಿಲಿ ಸಿಕ್ಕಿದ ಗುಣಾಜೆಮಾಣಿ, ಹಟಲ್ಲಿ ಬೈಕ್ಕು ತಿರುಗಿಸಿ ಸೀದಾ ಪಟಾಕಿ ಅಂಗುಡಿಗೆ ಹೋದನಡ, ಗರ್ನಲಿಂದ ದೊಡ್ಡದು ಯೇವದಿದ್ದು ನೋಡ್ಳೆ. ಕದಿನ ತಂದನೋ ಏನೋ ಇನ್ನು – ನೋಡೆಕ್ಕಷ್ಟೆ, ‘ಅವನಿಂದಲೂ ದೊಡ್ಡ ಪಟಾಕಿ ಯೇವದು’ ಹೇಳಿ ದೊಡ್ಡಬಾವಂಗೆ ಆಶ್ಚರ್ಯ. 😉

ಹಬ್ಬದ ಬಿದಿಗೆ:
ಈ ಒರಿಶದ ಬಲಿಯೇಂದ್ರಂಗೆ ಕರೆ ಕೊಡ್ತ ಅಕೇರಿಯಾಣ ದಿನ. ನಿನ್ನೆ-ಮೊನ್ನೆ ಮಾಡಿದ ಹಾಂಗೇ ಇಂದುದೇ ಪೂಜೆ ಮಾಡಿ, ವಿಸರ್ಜನೆ ಮಾಡಿಬಿಡುದು. ಬಲಿಚಕ್ರವರ್ತಿ ನಮ್ಮ ಎಲ್ಲರನ್ನುದೇ ನೋಡಿ ಸಂತೋಷಲ್ಲಿ ಪುನಾ ಪಾತಾಳಕ್ಕೆ ಹೋವುತ್ತ ದಿನ. ಸುಖ-ಶಾಂತಿ ಇನ್ನುದೇ ವೃದ್ಧಿ ಆಯೆಕ್ಕು ಹೇಳಿ ನಾವು ಬಯಸಿಗೊಂಬ ದಿನ.
ಈಗೀಗ ಈ ದಿನ ಹೆಚ್ಚೆಂತೂ ಆಚರಣೆ ಇಲ್ಲೆ ನಮ್ಮ ಊರಿಲಿ. ಬಲಿಯೆಂದ್ರನೇ ಇಲ್ಲೆ! ಹಾಂಗೆ. ಅಂತೂ ಕೆಲಾವು ಮನೆಗಳಲ್ಲಿ ಪಟಾಕಿ ಹೊಟ್ಟುಸತ್ತವು. ಬಲಿಯೆಂದ್ರ ಇದ್ದರೆ ವಿಸರ್ಜನೆ ಮಾಡ್ತವು. ಅಷ್ಟೆ.
*ಹಳೆಯ ಕ್ರಮದ ಬಲಿಯೆಂದ್ರನ ಆಚರಣೆ ತುಂಬ ನೆಂಪಾವುತ್ತಾ ಇದ್ದು. ನಿಂಗಳಲ್ಲಿ ಬಲಿಯೆಂದ್ರ ಹಾಕುತ್ತಾ? ಹಾಕುತ್ತರೆ ತಿಳಿಶಿ.
~~~

ಈಗಾಣ ಆಚರಣೆಯ ಈ ಒರಿಷದ ದೀಪಾವಳಿ ಇದರೊಟ್ಟಿಂಗೆ ಸಮಾಪ್ತಿ. ಲೆಕ್ಕದ ಮೂರು ದಿನದ ಆಚರಣೆ. ಜಾಸ್ತಿ ಪುರುಸೊತ್ತೆಲ್ಲಿದ್ದು ಬಾವ°? ಬೇಂಕಿನ ಪ್ರಸಾದಂಗೆ ರೈಲು ಕಾಯ್ತಾ ಇರ್ತು. ಪೆರ್ಲದಣ್ಣಂಗೆ ಬೆಂಗ್ಳೂರು ಬಸ್ಸು ಕಾಯ್ತಾ ಇದ್ದು. ದೊಡ್ಡಬಾವಂಗೆ ಶಾಲೆ ಕಾಯ್ತಾ ಇದ್ದು. ಎಡಪ್ಪಾಡಿ ಬಾವಂಗೆ ಇಡೀ ಊರಿನ ಪೋನುಗೊ ಕಾಯ್ತಾ ಇರ್ತು.
ಮದಲಿಂಗೆ ಹನ್ನೆರಡು ದಿನ ಆಚರಣೆ ಮಾಡಿಗೊಂಡು ಇತ್ತಿದ್ದವಡ. ಚತುರ್ದಶಿಂದ ಸುರು ಆಗಿ, ಇದೇ ಪಕ್ಷದ ದ್ವಾದಶಿ-ಹನ್ನೆರಡನೇ ದಿನ ಒರೆಂಗೆ. ಒಂದೊಂದು ದಿನವುದೇ ಖಾದ್ಯ, ಭೋಜ್ಯಂಗೊ. ಅಕೇರಿಯ ದ್ವಾದಶಿಯ ದಿನ ಉತ್ಥಾನ. ಅದಕ್ಕೆ ಉತ್ಥಾನ ದ್ವಾದಶಿ ಹೇಳಿ ಹೇಳುದು. ತುಳುವರು ಕೊಡಿಪರ್ಬೊ ಹೇಳುದು ಆ ದಿನವ.

ಈಗಳೂ ಸಾಂಪ್ರದಾಯಿಕ ಮನೆಗಳಲ್ಲಿ ಗೊಪೂಜೆಯನ್ನುದೇ ತೊಳಶೀಪೂಜೆಯನ್ನುದೇ ಉತ್ಥಾನ ದ್ವಾದಶಿಯ ದಿನಲ್ಲೇ ಮಾಡ್ತ ಕ್ರಮ ನೆಡಕ್ಕಂಡು ಬತ್ತಾ ಇದ್ದು.
ಈ ಒರಿಶಕ್ಕೆ ತಂದ ಪಟಾಕಿಗಳ ಎಲ್ಲ ಮುಗುಶುತ್ತ ದಿನ ಈ ಉತ್ಥಾನ. ‘ಮತ್ತೂ ಒಳುದರೆ ಅದು ತೋಟಕ್ಕೆ ಮಂಗಂಗೊ ಬಪ್ಪಗ ಹೊಟ್ಟುಸಲೆ ಆತು!’ ಹೇಳಿ ಆಚಮನೆ ದೊಡ್ಡಣ್ಣ ನೆಗೆಮಾಡಿದ°. ಈ ಸರ್ತಿಯಾಣ ದೀಪಾವಳಿ ಎಲ್ಲೊರಿಂಗೂ ಗೌಜಿ-ಗಮ್ಮತ್ತು ತರಳಿ, ಪಟಾಕಿ ಹೊಟ್ಟುಸುವಗ ದೂರ ನಿಂದುಗೊಳ್ಳಿ, ಜಾಗ್ರತೆಲಿ ದೀಪಾವಳಿ ಮಾಡಿ ಹೇಳಿ ಒಪ್ಪಣ್ಣನ ಕಳಕಳಿಯ ಹಾರಯಿಕೆ.
ಅಜ್ಜಂದ್ರ ಎಷ್ಟೋ ಹಳೆ ಕ್ರಮಂಗೊ ಇದ್ದು, ಮರದೇ ಹೋಪಂತದ್ದು. ಅದರ ನೆಂಪು ಮಡಿಕ್ಕೊಂಬ°, ಎಂತ ಹೇಳ್ತಿ?

ಒಂದೊಪ್ಪ: ಹೊಸ ಬೆಣಚ್ಚಿಂಗೆ ಹೋಪಗ ಹಳೆಯ ದೀಪವನ್ನೇ ಬಳಸುವ.  ಆಗದೋ? ಏ°?

12 thoughts on “ಬಲೀಂದ್ರಾ..ಬಲೀಂದ್ರಾ… ಹರಿಯೋ ಹರಿ..!!!

  1. ದೀಪಾವಳಿ ಹಬ್ಬದ ಪ್ರತಿಯೊಂದು ದಿನದ ಆಚರಣೆ ಮತ್ತೆ ಮಹತ್ವವ ತಿಳಿಶಿಕೊಟ್ಟ ಒಪ್ಪಣ್ಣಂಗೆ ಧನ್ಯವಾದಂಗೊ.
    ಪೇಟೆಯ ಜೀವನಲ್ಲಿ, ಹಳೆ ನೆನಪುಗಳ ಮತ್ತೆ ಮೆಲುಕು ಹಾಕುವ ಹಾಂಗೆ ಮಾಡಿತ್ತು.

  2. ಆನು ಗ್ರೇಶಿದಾಂಗೆ ಆತು ಒಪ್ಪಣ್ಣ.. ಈ ಸರ್ತಿ ನಿನ್ನ ಲೇಖನ ದೀಪಾವಳಿ ಹಬ್ಬದ ಕುರಿತೇ ಇರ್ತು ಹೇಳಿ ಗ್ರೇಶಿತ್ತೆ… ಇನ್ನೂ ಓದಿದಿಲ್ಲೆ ಪುರುಸೊತ್ತಿಲ್ಲಿ ಓದುತ್ತೆ ಆತಾ…

  3. ಲಾಯ್ಕ ಆಯಿದು ಲೇಖನ ಬರೆದ್ದು.
    ಅಂಬಗ ಒಪ್ಪಣ್ಣಂಗೆ ಈ ಸರ್ತಿಯಾಣ ವಿದ್ಯಾದಶಮಿಗೆ "ಪುಸ್ತಕ ಪೂಜೆ"ಯ ವಿಷಯ ಬರವಲೆ ಬಿಟ್ಟು ಹೋತ ಹೇಂಗೆ? ಶಾಲೆಗೆ ಹೋಗ್ಯೊಂಡು ಇಪ್ಪಗ ಇಪ್ಪ ಪುಸ್ತಕವ ಪೂರ ತಂದು ಪೂಜೆಗೆ ಮಡುಗ್ಗು. ಅಂಬಗ ಮೂರು ದಿನಕ್ಕೆ ಮತ್ತೆ ಓದೆಕ್ಕು ಹೇಳಿ ಇಲ್ಲೆದ.. ಹಾಂಗೆಲ್ಲ ಇಪ್ಪ ದೊಡ್ಡ ದೊಡ್ಡ ಕೆಣಿಗೊ, ಸಣ್ಣಾಗಿಪ್ಪಗ :-).

    -ಶೇಣಿ ಶ್ಯಾಮ.

  4. ಲಾಯ್ಕ ಬರದ್ದೆ……
    ಅಂದು ಆನು ಸುರುಸುರು ಕಡ್ಡಿ ಹೊತ್ತುಸುವಾಗ ನಿನ್ನ ಕೈಲಿದ್ದ ಪಟಾಕಿ ಹೊಟ್ಟಿ ಕೈ ಬೇನೆ ಆದ್ದು ನೆಮ್ಪಾತು 🙁 ಆದರುದೆ ಅದೇ ದಿನ ಬೈಕು ಬಿಟ್ಟುಗೊಂಡು ಪುತ್ತೂರಿಂಗೆ ಹೋಯ್ದೆ,ಅಣ್ಣನ ಬಿಡ್ಲೇ ಅಲ್ಲದ ????????? 🙁 🙁

    ಹ್ಮ್… ಅಮ್ಮ ದೋಂದ ಮಾಡ್ಸಿದ್ದೆಲ್ಲ ನೆಮ್ಪಾತು 🙂 ಎಂಥ ಅನುಭವನ್ಗೋ……. ನೆಮ್ಪುಗೋ……….. ಗ್ರೇಶುವಾಗ ಖುಶೀ ಆವ್ತು….
    ಇನ್ನಾಣ ಲೇಖನಕ್ಕೆ ಕಾಯ್ತಾ ಇದ್ದೆ ………

  5. lekhana layka aidu. engagondu samshaya.ee roopatheya magalu eega entha madtu. engala paiki maani obba koosu udkuttha idda, hange keliddota miniya…

    shambhajja.

  6. modalana gougiya greshiondu simple aagi habba acharsuva agadoo? Habbakke sundeepana ottare avutta iddu ata nodle batteyoo? mundina blogna neeriksheli………

  7. ಎಂಗೊ ಸಣ್ಣದಿಪ್ಪಾಗ ಅಪ್ಪ ತೊಳಶಿ ಕಟ್ಟೆಗೆ ಪೂಜೆ ಮಾಡುದರ ಸಂಭ್ರಮ ಇಂದಿಂಗೂ ನೆಂಪಾವ್ತು. ಈಗ ಪೇಟೆಗೆ ಬಂದಾದ ಮೇಲೆ ನೋಡಿರೆ, ಗೆಡು ಪಾಟಿಲಿ ಬೆಳಕ್ಕೊಂಡು ಇದ್ದು. ಪಾಟ್ಂಗೇ ಪೂಜೆ ಮಾಡುದು !
    ಎಂತ ಒಪ್ಪಣ್ಣ, ಕಳುದ ಸಲಾಣ ಬಾಕಿಯನ್ನೂ ಸೇರಿಸಿ ಬರದ್ದಾ ಹೇಂಗೆ? ಭಯಂಕರ ಮಾಹಿತಿ ಪ್ರಸಾರ ಕಾರ್ಯಕ್ರಮ ಸುರು ಆದ ಹಾಂಗಿದ್ದು ! ಹ್ಹೆ..ಹ್ಹೆ..
    ಓಯ್, ವೃಂದೆಯ ಕಥೆ ಮರತ್ತದ್ದಾ ಈ ನಡೂಕೇ ..! ಪಾಪ, ಹೆಮ್ಮಕ್ಕಳ ಕಥೆ ಹೇಳುವ ಪಂಚಾಯ್ತಿಕೆ ಬೇಡ ಹೇಳಿ ಮೂಲೆ ಪಾಲು ಮಾಡಿದ್ದಾ ? ಹುಂ..
    ಅಂದಹಾಂಗೆ ಆಚೆಕರೆ ಮಾಣಿ ಮೊನ್ನೆ ಕುದುರೆಮುಖಲ್ಲಿ ಗೆಡು ಹುಡುಕ್ಕುಲೆ ಹೋದ ಕಥೆ ಗೊಂತಿದ್ದನ್ನೆ ! ಅವನ ಬ್ಲೋಗಿಲಿ ಹಾಕಿದ್ದದ. ಗೆಡುಗಳ ಹಿಂದೆ ಗುಡಾನದಷ್ಟು ಕಥೆ ಇರ್ತು ಹೇಳಿ ಗೊಂತಾದ್ದೆ ಅಂಬಗ! ಹಾಂ.
    ಉತ್ತರಲ್ಲಿ ಬೆಳ್ಳ ಬಂದು ಕೊಚ್ಚಿ ಹೋಯ್ದಡ ಅಲ್ದಾ? ಬಲೀಂದ್ರ ಈ ಸಲ ಬಾರದ್ರೇ ಒಳ್ಳೆದಲ್ದಾ! ಹಾಂಗಾಗಿ ಬೆಳ್ಳಕ್ಕೆ ಹೋದವರ ಮನೆ ಬೆಳಗುವ ಜ್ಯೋತಿಯ ಕೆಲಸ ಎಲ್ಲರಂದ ಆಗಲಿ ಹೇಳಿಯೊಂಡು ಆನು ಈ ವರ್ಷ ಪಟಾಕಿ ಹೊಟ್ಟುಸುವ ಕಾರ್ಯಕ್ರಮಂದ ದೂರ ಸರುದ್ದೆ ..ಹಾಂಗಾಗಿ 'ಚಟ್ ಪಟಾಕಿ'ದೂ ಪಟಾಕಿ ಠುಸ್ಸಾಯ್ದು.ಹೇಂಗೆ ನಾವೆಲ್ಲಾ ಹಾಂಗೇ ಮಾಡುವನಾ?

  8. soooper aidu oppanna.aadinda antyavregu habbada bagge savivaravagi baradde.enta bodalangokku artha appa hange vivarane kottide kushi aatu.sannadippaga enne kitti mindadu nempata.pataki hottusuvaga jagrate irali kaili hottuseda aatoninna ondoppa odi kushi aatu.

  9. ಉತ್ತಮ ಮಾಹಿತಿ…. ನಮ್ಮ ಹಬ್ಬದ ಬಗ್ಗೆ ಇನ್ನಷ್ಟು ಗೌರವಭಾವನೆ ಬತ್ತು ಓದ್ತಾ ಹೋದ ಹಾಂಗೆ….
    ಲಾಯ್ಕಾಯಿದು ಬರದ್ದದು…. 'ಒಂದೊಪ್ಪ' ಅಂತೂ ತುಂಬಾ ಲಾಯ್ಕಾಯಿದು….

    ಒಪ್ಪಣ್ಣ ಮಾವಂಗೂ, ಇಲ್ಲಿಯಾಣ ಬಂಧುಗೊಕ್ಕೆಲ್ಲೊರಿಂಗೂ ಹಬ್ಬದ ಶುಭಾಶಯಂಗೊ… 🙂

  10. ಬೇಂಕಿನ ಪ್ರಸಾದ ಭಾವನ ಬಗ್ಗೆ ಇದ್ದ ಸಂಶಯ ರೆಜಾ ಪರಿಹಾರ ಆತು ಕಡೇಂಗೂ, ಈಗ ಹೊಸ ಸಂಶಯ, ಈ ಬ್ಲಾಗ್ ಓದಿ ಕಾಮೆಂಟು ಬರೆತ್ತವರಲ್ಲಿ ಸುಮನಾ ಸಂಕಬಿತ್ತಿಲು ಮಾಡಾವು ಹೇಳಿ ಒಂದು ಹೆಮ್ಮಕ್ಕೊ ಇದ್ದು. ಸುಮನ ಕೆ.ಎಚ್.ಭಟ್ ಹೇಳಿ ಕೊಪ್ಪಳಲ್ಲಿ ೨೦೦೨ರಲ್ಲಿ ನಡೆದ ವಿಜಯಕರ್ನಾಟಕ ಕಾರ್ಯಾಗಾರಲ್ಲಿ ಒಂದು ಕೂಸು ಭಾಗವಹಿಸಿದ್ದು. ಇದೇ ಊರಿನ ಕೂಸು ಅದು. ಆ ಜನವೂ, ಈ ಜನವೂ ಒಬ್ಬನೆಯಾ ಹೇಂಗೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×