Oppanna.com

ಬೆಶಿ ಬೇಸಗೆಲಿ ಬೆಶಿಲನ್ನೂ ಹಾಳುಮಾಡವು…

ಬರದೋರು :   ಒಪ್ಪಣ್ಣ    on   12/04/2013    13 ಒಪ್ಪಂಗೊ

ಉರಿಬೆಶಿಲು! ನೀರು ಕುಡುದಷ್ಟೂ ಸಾಲ್ತಿಲ್ಲೆ.
ಒರಿಶ ಹೋದ ಹಾಂಗೇ ಉರಿ ಹೆಚ್ಚಪ್ಪದೋ – ಅಲ್ಲ, ಕಳುದೊರಿಶದ ಉರಿಯ ಪ್ರಭಾವ ನವಗೆ ಮರವದೋ?
ಉಮ್ಮಪ್ಪ, ಎರಡೂ ಆಗಿಕ್ಕು – ನವಗರಡಿಯ.

ಈಗ ಎಂತದೇ ಬೆಶಿಲು ಬಂದರೂ ಹೆದರದ್ದ ಹಾಂಗೆ ಏಸಿ, ಪೇನು, ಕೂಲರು – ಹಲವು ಹತ್ಯಾರುಗೊ ಇದ್ದು. ಆದರೆ ಮದಲು – ಎಲ್ಲವನ್ನೂ ಕಾಲಕಾಲಕ್ಕೆ ಅನುಭವಿಸೆಂಡೇ ಇದ್ದದಿದಾ. ಅದರೊಟ್ಟಿಂಗೆ ಸ್ವಾಭಾವಿಕವಾದ ತಡೆಗೊ. ಚಳಿಗಾಲಕ್ಕೆ ಕಂಬುಳಿಯ ಚಳಿ, ಮಳೆಗಾಲಕ್ಕೆ ಕಿಡಿಂಜೆಲು, ಬೇಸಗೆಲಿ ಬೀಸಾಳೆ.
ಈಗ ಮೂರನ್ನೂ ಕಾಂಬಲಿಲ್ಲೆ, ಕಾಲ ಬದಲಿದ್ದು. ಅದಿರಳಿ.

ಮದಲು ಸ್ವಾಭಾವಿಕವಾಗಿ ಜೀವನ ಮಾಡಿಂಡಿದ್ದವು, ಆ ಸಮೆಯಲ್ಲಿ ದೇವರು ನಿಸರ್ಗದತ್ತವಾಗಿ ಕೊಟ್ಟ ಎಲ್ಲವನ್ನೂ ಬಳಸಿಗೊಂಗು.
ಸದುಪಯೋಗಲ್ಲಿ ಮುಂದುವರುಸುಗು. ದೇವರು ಒದಗುಸಿದ್ದರಲ್ಲಿ ತನಗೆಷ್ಟು ಬೇಕೋ – ಅಷ್ಟರ ಮಾಂತ್ರ ಉಪಯೋಗುಸಿ, ಒಳುದ್ದರ ಪ್ರಕೃತಿಗೇ ಬಿಟ್ಟು ಬಿಡುಗು.
ದೇವರು ಕೊಡ್ತ ಯೇವದನ್ನೂ ಹಾಳು ಮಾಡವು. ಬೆಶಿಲನ್ನೂ ಸೇರ್ಸಿ.

~
ಬೆಶಿಲಿನ ಹಾಳು ಮಾಡುದೋ? ಅದೆಂತರ?
ಬೆಶಿಲಿನ ಸದುಪಯೋಗ ಮಾಡ್ತದು, ಅದರ ಉರಿಯ ಸದ್ವಿನಿಯೋಗ ಮಾಡ್ತದೇ ಬೆಶಿಲಿನ “ಹಾಳು ಮಾಡದ್ದೆ” ಇಪ್ಪದು. ಅಲ್ಲದೋ?
ಈ ಬೆಶಿಲಿನ ಸಮೆಯಲ್ಲಿ ಅದರ ಬಗ್ಗೆಯೇ ಒಂದರಿ ಮಾತಾಡುವೊ°. ಎಂತ?
~

ದೊಡ್ಡಮಾವನ ಕಾರ್ಯಕ್ರಮಂಗಳ ಮುಗುಶಿ, ಒಂದರಿಯಾಣ ಬಚ್ಚಲು ತಣಿಯಲೆ ಹೇದು ಡೀಕೆಶಾಂಬಾವನ ಮನೆ ಜೆಗಿಲಿಲಿ ಕಾಲುನೀಡಿ ಕೂದಿದ್ದತ್ತು ಓ ಮನ್ನೆ.
ಅಪುರೂಪದ ಎಡಪ್ಪಾಡಿ ಭಾವ, ಅಂಬೆರ್ಪಿನ ಸುಭಗಣ್ಣ, ಬೆಟ್ಟುಕಜೆ ಮಾಣಿ, ಅಜ್ಜಕಾನ ಭಾವ, ಎಯ್ಯೂರು ಭಾವ° – ಎಲ್ಲೋರುದೇ.
ನಾಕು ದಿನ ಇರುಳು ಹಗಲು ಕೆಲಸ ಮಾಡಿದ್ದಕ್ಕೆ ಸಣ್ಣದೊಂದು ವಿಶ್ರಾಂತಿ.
ಎಡಪ್ಪಾಡಿ ಬಾವ ಅಂತೂ – ಸ್ವಂತದ ಪೀಶಕತ್ತಿ ತಂದು ಬೆಂದಿಗೆ ಕೊರದ ಬಚ್ಚಲೂ ಇದ್ದತ್ತು. ಈ ಎಲ್ಲ ಬಚ್ಚಲಿನ ಒಟ್ಟಿಂಗೆ ದೊಡ್ಡಮಾವನ ಅಗಲಿಕೆಯ ಸಂತಾಪವೂ!
ಹೊತ್ತೋಪಗಾಣ ಹೊತ್ತಿಂಗೂ ಬೆಶಿಲ ಗಾವು ಕಮ್ಮಿ ಆಗದ್ದಕ್ಕೆ ಜೆಗಿಲಿಲಿ ಹಾಂಗೇ ತಂಪಿಂಗೆ ಕಾಲುನೀಡಿಗೊಂಡದು.
ಎಷ್ಟು ಹೊತ್ತಾದರೂ ತಂಪುದು ಕಾಣದ್ದೆ ಅಪ್ಪಗ ತಂಪುತಂಪು ಶರ್ಬತ್ತು ಆಶಕ್ಕ ತಂದು ಕೊಟ್ಟವು. ತಂಪು ತಲಗೇರಿರೆ ಹೇದು ಬೆಶಿನೀರುದೇ ಒಟ್ಟಿಂಗೆ.
~

ತಂಪು ಜ್ಯೂಸು ಕುಡುದು – ಒಂದರಿಯಾಣ ಬೆಶಿ ಇಳುದಮತ್ತೆ ಎಡಪ್ಪಾಡಿಭಾವಂಗೆ ಎಂತ ತೋರಿತ್ತೋ – ಅಲ್ಲಿಂದಲೇ ಚಕ್ಕನಕಟ್ಟಿಂಡು – “ಹು, ಬೆಶಿಲು ಅಂತೇ ಹಾಳಾವುತ್ತು ಬಾವಾ” – ಹೇಯಿದ°. ಎಯ್ಯೂರುಭಾವಂಗೆ ಬೆಶಿ ಇನ್ನೂ ತಣುದಿತ್ತಿಲ್ಲೆ – “ಇದೊಳ್ಳೆ ಕತೆ, ಹೋಗಿ ಬೆಶಿಲಿಲೇ ನಿಂದುಗೊ ಹಾಂಗಾರೆ” ಬೀಸಾಳೆಲಿ ಗಾಳಿ ಹಾಕಿಂಡೇ ಹೇಳಿದವು.
ಎಲ್ಲೋರಿಂಗೂ ನೆಗೆ ಬಂದಪ್ಪಗ ಇನ್ನೂ ರಜ ತಂಪಿತ್ತು.
ಎಡಪ್ಪಾಡಿ ಬಾವಂಗೆ ಬೆಶಿ ಆತೋ ಸಂಶಯ, “ಬೆಶಿಲು ಹಾಳಾತು” ಹೇಳಿದ್ಸು ಎಂತಗೆ, ಅದರ ಅರ್ಥ ಎಂತರ – ಇತ್ಯಾದಿಗಳ ವಿವರ್ಸಿ ಮಾತಾಡ್ಳೆ ಸುರುಮಾಡಿದ°.
ಒಂದರಿ ನೆಗೆ ಮಾಡಿರೂ – ಎಲ್ಲೋರುದೇ ಆ ಮಾತುಕತೆಲಿ ಸೇರಿಂಡ ಕಾರಣ ಅದೊಂದು ಶುದ್ದಿ ಹೇಳುಲಕ್ಕಾದ ಮಾತುಕತೆ ಆಗಿ ಹೋತು.
ಬೆಶಿಲಿನ ಹಾಳುಮಾಡದ್ದೆ, ಜಾಲುತುಂಬ ಎಂತಾರು ಸುವಸ್ತುಗಳ ಮಡಗಿ ಒಣಗುಸೆಂಡಿದ್ದ ದಿನ ನೆಂಪಾತು. ಎಡಪ್ಪಾಡಿಭಾವನ ಪಟ್ಟಿಲಿ ನೆಂಪಿದ್ದಷ್ಟು ಹೇಳಿಕ್ಕುತ್ತೆ, ಬಿಟ್ಟು ಹೋದ್ಸರ ನಿಂಗೊ ಸೇರ್ಸಿಕ್ಕಿ.
ಆತೋ?
~

ಹುಳಿ ಒಣಗುಸುದು:
ಈ ಸಮೆಯಲ್ಲಿ ಮದಲಿಂಗೆ ಬಂಡಾಡಿಅಜ್ಜಿಗೆ ಒಂದು ದೊಡ್ಡ ಕೆಲಸ ಇದ್ದತ್ತು. ಹುಳಿ ಒಣಗುಸುದು.
ಗೇಟಿನ ಬುಡಲ್ಲಿ ಇರ್ತ ಓಟೆಹುಳಿ ಮರಲ್ಲಿ ರಣ ಇದ್ದು ಹೇದರೂ ಕೇಳದ್ದೆ ದಿನಕ್ಕೆ ಮೂರು ಸರ್ತಿ ಹುಳಿ ಹೆರ್ಕುಗು. ಬಲ್ಲೆ ಎಡೆಂಗೆ ಬಿದ್ದು ಪಕ್ಕನೆ ಕಾಣದ್ದೆ ಆದರೆ ಹೇದು ಬುಡ ಉಡುಗಿ ಮನಾರ ಮಾಡ್ಳೂ ಇದ್ದು. ಅಡಕ್ಕೆ ಕೊಯಿವಲೆ ಇಲ್ಲದ್ದ ಕಾರಣ ಬಾಬು ಬಂದರೂ ಬಂತು; ಹಾಂಗೆ ಬಂದು ಕೊಯಿದರೆ ಸುಲಾಬ ಆತನ್ನೆ.
ಎಲ್ಲ ಹುಳಿ ಓಡಿನ ಒಡದು ಲಾಯಿಕಕ್ಕೆ ಚೋಲಿ, ಬಿತ್ತು, ನಾರು ಎಲ್ಲ ಬಲುಗಿ – ಹುಳಿಹಿಟ್ಟಿನ ತೆಗದು ಉಂಡೆಉಂಡೆ ಮಾಡಿ, ಮೇಗಂಗೆ ರಜಾ ಉಪ್ಪು ಬಿಕ್ಕುಸ್ಸು.
ಈ ಉಂಡೆಯ ನಾಕು ಬೆಶಿಲು ಒಣಗುಸಿರೆ – ಒರಿಶಾನುಗಟ್ಳೆ ಒಳಿತ್ತ ಹುಳಿ ತಯಾರು.
ಪುಳ್ಯಕ್ಕಳ ಮನೆಗೆ, ಅತ್ತೆಕ್ಕಳ ಮನೆಗೆಲ್ಲ ಈ ಹುಳಿ ಉಂಡೆ ಕೊಡುಸ್ಸೇ ಒಂದು ಸಂಭ್ರಮ.
~

ಹುಳಿಬಿತ್ತು:
ಹುಳಿಂದ ತೆಗದ ಹುಳಿಬಿತ್ತಿನ ಇಡ್ಕುದೋ? ಅಲ್ಲಪ್ಪಾ.
ಅದರ ಒಂದರಿ ತೊಳದತ್ತು, ಒಂದರಿ ಬೆಶಿಲಿಲಿ ಒಣಗುಸಿತ್ತು.
ಮತ್ತೆ ಸಣ್ಣ ಕಿಚ್ಚಿಲಿ – ದೊಡ್ಡ ಬಾಣಲೆಲಿ ಹೊರುದತ್ತು. ಹಲ್ಲು ಗಟ್ಟಿ ಇಪ್ಪೋರು ತಿಂಬಲಕ್ಕು. ಬಟ್ಯನ ಹೆಣ್ಣು ಸೀತುಗೆ ಈ ಪುಳಿಂಕೊಟೆ ಹೇದರೆ ಭಾರೀ ಕೊದಿ; ಹಲ್ಲಿಲ್ಲದ್ದರೂ – ಕಲ್ಲಿಲಿ ಗುದ್ದಿ ತಿಂಬಷ್ಟು.

~

ಪುನರ್ಪುಳಿ:
ಚೂರಿಬೈಲು ದೀಪಕ್ಕನ ಮನೆ ಎದುರು – ಓ ಆ ಪಳ್ಳದ ಕರೆಲಿ ಇರ್ತ ಪುನರ್ಪುಳಿ ಗೆಡುವಿಲಿ ಗೆಜ್ಜೆ ಕಟ್ಟಿದ ಹಾಂಗೆ ಪುನರ್ಪುಳಿ ಆವುತ್ತ ಕ್ರಮ ಇದ್ದು.
ದಶಂಬ್ರಲ್ಲಿ ರೋಸಮ್ಮ ಮರಕ್ಕೆ ಕೆಂಪು ಬಲ್ಬು ಕಟ್ಟುತ್ತಲ್ಲದೋ –ಅದೇ ನಮುನೆ ಕಾಂಬಲಿದ್ದು ಒಂದೊಂದರಿ.
ಹಾಂಗೆ ಆದ ಪುನರ್ಪುಳಿಯ ಅಂತೇ ಬಿದ್ದು ಹಾಳಪ್ಪಲೆ ಬಿಡ್ತಿಲ್ಲೆ ದೀಪಕ್ಕ. ಅವರ ಮನೆ ಕಾಯಾಂ ಕೆಲಸದ ಅಂದುಂಞಿಯ ಹತ್ತರೆ ಕೊಯಿವಲೆ ಹೇಳುಗು.
ಕೊಕ್ಕೆಲಿ ಎಳದು ಕೊಯಿತ್ತ ಕಾರಣ ಅರ್ದಕ್ಕರ್ದ ಪುನರ್ಪುಳಿಗೆ ಕೊಕ್ಕೆ ಗಾಯವೋ – ಬಿದ್ದು ಒಡವದೋ – ಎಂತಾರು ಅಕ್ಕು.
ಇದರ ಒಣಗುಸಿ ಸಾರೋ ಮಣ್ಣ ಮಾಡಿ ಮುಗುಶುಗು.

ಪೆಟ್ಟಾಗದ್ದ ಪುನರ್ಪುಳಿಯ ಜಾಗ್ರತೆಗೆ ಕೊರದು, ಒಳಾಣ ಬಿತ್ತು ತೆಗದು, ಬಿತ್ತಿನ ಜಾಗೆಗೆ ಶೆಕ್ಕರೆ ಹಾಕಿ, ಒಂದು ದೊಡಾ ಪಾತ್ರಲ್ಲಿ ಮನಾರಕ್ಕೆ ಮೊಗಚ್ಚಿ ಅಟ್ಟಿ ಮಡಗ್ಗು.
ಈ ಪಾತ್ರದ ಬಾಯಿಗೆ ಒಂದು ಒಸ್ತ್ರ ಕಟ್ಟಿ ಬೆಶಿಲಿಂಗೆ ಮಡಗ್ಗು. ಶೆಕ್ಕರೆಯ ಕಡ್ಪಕ್ಕೆ ಪುನರ್ಪುಳಿಯ ಓಡಿಲಿ ಇರ್ತ ನೀರೆಲ್ಲ ಹೆರ ಬಂದು, ಶೆಕ್ಕರೆಲಿ ಕರಗಿ, ಮಂದದ ಪುನರ್ಪುಳಿ ಎಸರು ತಯಾರಾವುತ್ತು. ಕುಪ್ಪಿಲಿ ತುಂಬುಸಿ ಮಡಗಿರೆ ಒರಿಶಾನುಗಟ್ಳೆ ಎಂತ ಆಗ ಇದಾ.

ಆರಾರು ಬಂದಿಪ್ಪಗ – ರಜಾ ಶೆಕ್ಕರೆ ನೀರುಮಾಡಿ, ಈ ಪುನರ್ಪುಳಿ ಎಸರು ಎರದರೆ “ಪುನರ್ಪುಳಿ ಶರ್ಬತ್ತು” ತಯಾರು.
ರಜಾ ನೀರು ಕೊದಿಶಿ ಉಪ್ಪು-ಬೆಲ್ಲ ಹಾಕಿ ಈ ಎಸರು ಹಾಕಿಕ್ಕಿ, ಬೆಳ್ಳುಳ್ಳಿ ಒಗ್ಗರಣೆ ಕೊಟ್ರೆ “ಪುನರ್ಪುಳಿ ಸಾರು”ದೇ ತಯಾರು.
ಈಗೀಗ ಮಳಿಭಾವ ಮಾಡ್ತವನ್ನೇದು ನಮ್ಮ ಅತ್ತೆಕ್ಕೊ ಎಲ್ಲೋರುದೇ ಉದಾಸನ ಮಾಡಿದ್ದವೋ ಸಂಶಯ.
ರೂಪತ್ತೆಗೆ ಅಂತೂ – ಮದಲಿಂಗೇ ಈ ಪುನರ್ಪುಳಿ ಕೆಲಸ ಮಾಡ್ಳೆ ಉದಾಸ್ನ, ಅಂದೊಂದರಿ ಮಾಡಿಪ್ಪಗ ಅದರ ಪಟ್ಟೆಸೀರೆಗೆ ಎಸರು ರಟ್ಟಿ ಕೆಂಪು ಕಲೆ ಆಯಿದಾಡ; ಹಾಂಗಾಗಿ. 😉
ಅದಿರಳಿ. ಈ ವಾರ ಬಪ್ಪ ವಾರಲ್ಲಿ ಚೂರಿಬೈಲಿಂಗೆ ಹೋದರೆ ಕುಂಞಿಕುಪ್ಪಿಲಿ ಪುನರ್ಪುಳಿ ಎಸರು ತುಂಬುಸಿ ತಪ್ಪಲಕ್ಕು. ಬತ್ತಿರೋ?
~

ಹಪ್ಪಳ:
ಹಪ್ಪಳ ಮಾಡ್ತರ ಬಗ್ಗೆ ನಾವು ಬೈಲಿಲಿ ಅದಾಗಲೇ ಮಾತಾಡಿದ್ದು. ಆದರೆ ಹಂತಿಲಿ ಹಪ್ಪಳ ಬಿಟ್ಟುಹೋದರೇ ನೆಂಪುಮಾಡ್ತ ಎಡಪ್ಪಾಡಿಭಾವಂಗೆ, ಬೆಶಿಲಿಲಿ ಒಣಗುಸುತ್ತ ಶುದ್ದಿ ಬಪ್ಪಗ ಬಿಟ್ಟು ಹೋಕೋ? ಹೋಗ.
ಹಾಂಗೆ ಹಪ್ಪಳದ ವಿಷಯ ಮಾತಾಡಿ ಆತು. ಕಾಯಿ ಹಪ್ಪಳ / ಹಣ್ಣಪ್ಪಳ – ಹೇದು ಎರಡು ನಮುನೆ. ಪುಳ್ಯಕ್ಕೊ ಬಂದಿಪ್ಪಾಗ ಅಜ್ಜನ ಮನೆಗಳಲ್ಲಿ ಸಂಭ್ರಮವೇ ಸಂಭ್ರಮ.
ಹೋ ಹೋ – ಒಪ್ಪಣ್ಣಂಗೆ ಕಾಂಬು ಅಜ್ಜಿಯ ಸಂಭ್ರಮ ಕಂಡು ಹೋವುತ್ತು.
ಹಲಸಿನ ಕಾಯಿ ಕೊಯಿವದು; ಕೊರವದು; ಬೇಶುದು; ಕಡವದು; ಉಂಡೆಮಾಡುದು; ಒತ್ತುದು; ಹಸೆಗೆ ಹಸ್ಸುದು – ಎಲ್ಲದರ್ಲ್ಯೂ ಕಾಂಬು ಅಜ್ಜಿಯ ಉಸ್ತುವಾರಿ!
ಇದಾಗಿ? ಬೆಶಿಲಿಲಿ ಒಣಗುಸುದು. ಮನಾರಕ್ಕೆ ಒಣಗಿದ ಹಪ್ಪಳವ ತಣಿಲಿಲಿ ಮಡಗಿ ಞಾಣಿದ ಮತ್ತೆ ಇಪ್ಪತ್ತೈದರ ಕಟ್ಟ ಕಟ್ಟಿ ಪುಳ್ಯಕ್ಕಳ ಮನೆಗೆ ಕಳುಸುದು.

~
ಶಾಂತಾಣಿ:
ಹಪ್ಪಳಕ್ಕೆ ಕೊರದ ಹಲಸಿನ ಕಾಯಿಲಿ ಬೇಳೆ ಇರ್ತಿಲ್ಲೆಯೋ? ಅದರ ಅಂತೇ ಇಡ್ಕಲೆ ಅಜ್ಯಕ್ಕೊಗೆ ಮನಸ್ಸಾರೂ ಬಕ್ಕೋ?
ಮಣ್ಣಳಗೆಗೆ ನೀರೆರದು ಈ ಬೇಳೆಯ ಉಪ್ಪಾಕಿ ಬೇಶುಗು. ನಾಕು ಬೆಶಿಲು ಒಣಗುಸಿರೆ ಇದುವೇ ಅಲ್ಲದೋ ಶಾಂತಾಣಿ?
ಹೆಸರಿಂಗೆ ದಕ್ಕಿತ ನಾಲ್ಕಾದರೂ ಶಾಂತಾಣಿ ಮಾಡದ್ದರೆ ಶಾಂತಕ್ಕಂಗೆ ಸಮದಾನ ಆಗ – ಹೇದು ಮಾಲಚಿಕ್ಕಮ್ಮ ಒಂದೊಂದರಿ ನೆಗೆಮಾಡ್ಳಿದ್ದು

~

ಸೆಂಡಗೆ:
ಹಪ್ಪಳದ ನಮುನೆಲಿಯೇ ಸೆಂಡಗೆ ಇದ್ದನ್ನೇ. ಸಾಬಕ್ಕಿಯೋ, ಮೆಣಸಿಂದೋ – ಸೆಂಡಗೆ ಮಾಡಿ ಹಪ್ಪಳದ ರಾಶಿಯ ಒತ್ತಕೇ ಮಡಗಿ ಬೆಶಿಲ್ಲಿ ಒಣಗುಸುಗು.
ಈಗೀಗ ನೀರುಳ್ಳಿ, ಬೆಳ್ಳುಳ್ಳಿ – ಹೀಂಗಿರ್ತ ಸೆಂಡಗೆಗಳೂ ಬಯಿಂದಾಡ; ಪಾರುಅತ್ತೆ ಹೇಳಿತ್ತಿದ್ದವು.
ಒಣಗುವಲ್ಲಿ ಜೊತೆಯಾದ ಹಪ್ಪಳ-ಸೆಂಡಗೆ ಹೊರುದು, ಬಾಳೆಗೆತ್ತುವನ್ನಾರವೂ ಜೊತೆಯೇ!
~

ಏನಂಕೂಡ್ಳು ಜಾಲಿಲಿ ಬೆಶಿಲಿಂಗೆ ಒಣಗುತ್ತಾ ಇಪ್ಪ ಹಪ್ಪಳ!!
ಏನಂಕೂಡ್ಳು ಜಾಲಿಲಿ ಬೆಶಿಲಿಂಗೆ ಒಣಗುತ್ತಾ ಇಪ್ಪ ಹಪ್ಪಳ!!

ಮಣ್ಣಿ ಹೊಡಿ:
ಸಾರಡಿ ತೋಡ ಕರೆಲಿ ಕೂವೆ ಗೆಂಡೆಗೊ ಧಾರಾಳ.
ಒಂದು ಕುರುವೆ ಹಿಡ್ಕೊಂಡು ಹೋದರೆ ಬೇಕಾಷ್ಟು ಕೂವೆಗೆಂಡೆ ಪೊರ್ಪಿ ತಪ್ಪಲಕ್ಕು. ತಂದ ಕೂವೆಗೆಂಡೆಯ ಮನಾರಕ್ಕೆ ತೊಳದು, ಕಡವಕಲ್ಲಿಲಿ ಕಡಗು.
ಕೂವೆಗೆಂಡೆಯ ಕದದಪ್ಪಗ ಮಂದದ ಬೆಳಿ ಎಸರು ಬತ್ತಲ್ಲದೋ – ಅದರ ಒಸ್ತ್ರಲ್ಲಿ ಅರಿಶಿ ಒಣಗುಸುಗು. ಲಾಯಿಕಕ್ಕೆ ಹನ್ನೆರಡು ಬೆಶಿಲು ಒಣಗಿದ ಮತ್ತೆ ಹಿಟ್ಟು ಒಣಗಿ ಹೊಡಿ ಸಿಕ್ಕುತ್ತು.
ಮದಲಿಂಗೆ ಮಕ್ಕೊಗೆ ಕೊಡ್ಳೆಯೋ, ಹಾಲುಬಾಯಿ ಮಾಡ್ಳೋ – ಈ ಮಣ್ಣಿ ಹೊಡಿ ಮನೆಲಿ ತಯಾರಿಕ್ಕು.

~
ಸೇಡಿಹೊಡಿ:
ಬಟ್ಯನಲ್ಲಿ ಒರಿಶಾವಧಿ ಪೂಜಗೆ ಗೆರೆಬರವಲೆ ಸೇಡಿಹೊಡಿ ಬೇಡದೋ?
ವಿಶೇಷ ದಿನ ರಂಗೋಲಿ ಹಾಕಲೆ ರಂಗೋಲಿಹೊಡಿ ಬೇಡದೋ?
ಬಾವಿಕೆಲಸ ಮಾಡಿದ ಮಣ್ಣ ರಾಶಿಲಿ ರಜ ಬೆಳಿಬೆಳಿ ಮಣ್ಣಿದ್ದದರ ತಂದು, ನೀರಿಲಿ ಕರಡುಸಿ, ಒಸ್ತ್ರಲ್ಲಿ ಅರಿಶಿ – ಕೂವೆಹೊಡಿಯ ಹಾಂಗೆ ಬೆಶಿಲಿಲಿ ಒಣಗುಸಿರೆ ಸರಿ.
ಬೆಳಿಬೆಳಿ ಸೇಡಿಹೊಡಿ ತಯಾರು. ಈಗೀಗ ರಂಗೋಲಿ ಅಪುರೂಪ ಆದರೂ, ಬಟ್ಟಮಾವಂಗೆ ಮಂಡ್ಳ ಬರವಲೆ ಇದಿಲ್ಲದ್ದೆ ಕಳಿಯ.

~

ನೊರೆಕ್ಕಾಯಿ:
ಹೆಮ್ಮಕ್ಕೊಗೆ ಚಿನ್ನ ಹೇದರೆ ಜೀವ. ಅಂಗುಡಿಂದ ತೆಗವಲೆ ಮಾಂತ್ರ ಅಲ್ಲ, ಪ್ರತಿ ಒರಿಶವೂ ಅದರ ಅಂಗುಡಿಂದ ತೆಗವಗ ಇದ್ದ ಹಾಂಗೇ ಮಾಡ್ತ ಆಶೆ.
ಅದಕ್ಕೆ ತೊಳೆಸ್ಸು ಎಂತರಲ್ಲಿ? ಈಗಾಣ ನಮುನೆ ಸಾಬೊನು ಹೊಡಿಲಿ ಅಲ್ಲ; ನೊರೆಕ್ಕಾಯಿಲಿ.
ಬೇಲಿಕರೆಲಿ ಇಪ್ಪ ನೊರೆಕ್ಕಾಯಿ ಮರಂದ ಕಾಯಿ ಕೊಯಿದು, ಬೆಶಿಲಿ ಒಣಗುಸಿ ಮಡಗಿರೆ ಮಳೆಗಾಲ ಬೇಸಗೆ, ಚಳಿಗಾಯ – ಯೇವಗ ಬೇಕಾರೂ – ಜೆಂಬ್ರದ ಮುನ್ನಾಣದಿನ ಚೈನು ತೊಳವಲೆ ಅಕ್ಕಿದಾ.
~

ಉಪ್ಪಿನಕಾಯಿ:
ಹೇಳೇಕು ಹೇದು ಇಲ್ಲೆ, ಬೇಸಗೆ ಬಂದರೆ ಉಪ್ಪಿನಕಾಯಿಯ ತಲೆಬೆಶಿ ಸುರು.
ಬೆಶಿಲಿನ ಬೇಗೆ ಸಾಲದ್ದಕ್ಕೆ ಹೆಮ್ಮಕ್ಕೊಗೆ ಮೆಣಸು-ಸಾಸಮೆಯ ಬೇಗೆ. ಮಾವಿನ ಮೆಡಿಯೋ, ಅಪ್ಪೆಮೆಡಿಯೋ, ಕರಂಡೆಯೋ – ಎಂತದೂ ಅಕ್ಕು; ಸಿಕ್ಕಿದ ಮೆಡಿಯ ಹಸಿಕರಿಶಿ ಹೊರಡಿ ಬೆರುಸಿ ಬರಣಿಲಿ ತುಂಬುಸಿ ಮಡಗಿರೆ ಬೆಶ್ಚಂಗೆ ಕೂರುಗು, ಅಡಿಗೆಮನೆ ಹೊಗೆಅಟ್ಟಲ್ಲಿ. ಗಟ್ಟದ ಮೇಗೆ ಕೆಲವು ಬಾಗಂಗಳ ಬೇಶಿ, ಬೆಶಿಲಿಲಿ ಒಣಗುಸಿ – ಸೌತ್ತೆಕಾಯಿಯೋ ಇತ್ಯಾದಿ – ಉಪ್ಪಿನಕಾಯಿ ಹಾಕುತ್ತ ಕ್ರಮ ಇದ್ದಾಡ. ಚೂರಿಬೈಲು ದೀಪಕ್ಕ ಹೇಳಿತ್ತಿದ್ದವು.
~

ಕೊಡಗಸನ ಹೂಗಿನ ಹಾಂಗಿರ್ತ ತಂಬುಳಿಗಿರ್ತದು; ಸೊರೆಕ್ಕಾಯಿ, ಅಳತ್ತೊಂಡೆ ಬಿತ್ತಿನ ತರಕಾರಿಗೊ – ಇದೆಲ್ಲವೂ ಬೆಶಿಲಿನ ಬಾಯಿಗೆ ಬಿದ್ದು ಒಂದು ವಾರ ಆದರೂ ಒಣಗದ್ದೆ ಇರ ಮದಲಿಂಗೆ.
ಎಡಪ್ಪಾಡಿ ಭಾವನ ಪಟ್ಟೆ ಬೆಳಕ್ಕೊಂಡೇ ಹೋತು. ಎಯ್ಯೂರು ಭಾವಂಗೆ ಒರಕ್ಕು ಹಿಡಿವನ್ನಾರವೂ.

ಹೋ, ಕಾಲುನೀಡಿ ಕೂದು ಪಟ್ಟಿಮಾಡಿರೆ ಎಷ್ಟೂ ಇದ್ದಪ್ಪೋ.
ಮೊನ್ನೆ ಅಂಬೆರ್ಪಿಂಗೆ ಮಾತಾಡಿದ್ದರ್ಲಿ ಒಪ್ಪಣ್ಣಂಗೆ ನೆಂಪಿಪ್ಪದು ಇಷ್ಟೇ. ಮತ್ತೆ ಬೆಶಿಲಿಂಗೆ ಮರದೇ ಹೋತು.
ಇದೆಲ್ಲವೂ ಉರಿಯ ಬೇಸಗೆಲಿ ಬೆಶಿಲನ್ನೂ ಹಾಳುಮಾಡದ್ದೆ ಉಪಯೋಗುಸಿಂಡಿದ್ದ ಅಜ್ಜಿಯಕ್ಕಳ ಕಾರ್ಯಂಗೊ.
ಈಗ ಇದರಲ್ಲಿ ಎಲ್ಲವೂ ಕಾಂಬಲೆ ಸಿಕ್ಕ, ಕೆಲವು ಮನೆಗಳಲ್ಲಿ ಕೆಲವು ಇಕ್ಕು. ಅಲ್ಲದೋ?
ಬೆಶಿಲಿಂಗೆ ಒಣಗುಸಿ ಮಡಗುತ್ತದು ಬೇರೆಂತ ಇದ್ದು? ನಿಂಗೊಗೆ ನೆಂಪಿದ್ದದಿದ್ದರೆ ತಿಳಿಶಿಕ್ಕಿ. ಆತೋ?

~
ಒಂದೊಪ್ಪ: ಧಾರಾಳದ ಉರಿ ಬೆಶಿಲನ್ನುದೇ ಹಾಳುಮಾಡದ್ದೆ ಉಪಯೋಗುಸುವಷ್ಟು ಜಾಗ್ರತೆ ಅಜ್ಜಿಯಕ್ಕೊಗೆ ಇತ್ತು.

13 thoughts on “ಬೆಶಿ ಬೇಸಗೆಲಿ ಬೆಶಿಲನ್ನೂ ಹಾಳುಮಾಡವು…

  1. ಹರೇರಾಮ, ಬೆಶಿಲಿಲಿ ಒಣಗುಸುವ ಸುದ್ದಿ ಒಣ ಒಣ ಶುದ್ದಿ ಆಗದ್ದೆ ಹಸಿ ಹಸಿ ಆಗಿ ಲಾಯಿಕ ಆಯಿದು

  2. ಹಾಂ.. ನಮ್ಮನ್ನೇ ಬೆಶಿಲಿಲಿ ಒಣಗಿಸಿದರೆ ಹೇಂಗೆ?..೧೫ ನಿಮಿಷ ಉದಿಯಪ್ಪಾಗಣ ಬೆಶಿಲಿಲಿ ಕೂದರೆ ನಮ್ಮ ಶರೀರಕ್ಕೆ ಬೇಕಪ್ಪ ವಿಟಮಿನ್ ‘ಡಿ’ ಸಿಕ್ಕುತ್ತಡ… ಖಂದಿತಾ ಬೆಶಿಲಿನ ಹಾಳು ಮಾಡೆಡಿ…!!!
    ಒಪ್ಪಣ್ಣಾ.. ಎನ್ನ ಬಾಲ್ಯಕಾಲವ … ಅಮ್ಮ ಅಜ್ಜಿಯರೊಟ್ಟಿಂಗೆ ಹಪ್ಪಳ ಸೆಂಡಗೆ ಮಾಂಬಳ ಒಣಗಿಸಿದ್ದರ …ತೋಟಕ್ಕೆ ಹೋಗಿ ಹಾಳೆ ಎಳಕ್ಕೊಂಡು ಬಂದದರ …ನೆನಪಿಸಿದ್ದಕ್ಕೆ ಥ್ಯಾಂಕ್ಸ್.

  3. ಈ ಸರ್ತ್ಯಾಣ ಶುದ್ದಿಯುದೆ ಲಾಯಕಾತು. ಬೆಶಿಲಿನ ಪವರಿಲ್ಲಿ ಎಲ್ಲ ವಸ್ತುಗಳ ಒಣಗುಸುತ್ತ ಹಾಂಗೆಯೇ, ಕರೆಂಟೂ ಮಾಡ್ಳಾವ್ತು. ಸೋಲಾರ್ ಪವರ್ ಉಪಯೋಗಿಸಿರೆ, ಕರೆಂಟಿನ ಬಿಲ್ಲಿಲ್ಲಿ ಕಡಿತ ಮಾಡ್ತವು. ಎಲ್ಲಾಕಡೆ ಸೋಲಾರ್ ನೀರು ಬೆಶಿ ಮಾಡ್ತ ಉಪಕರಣ ಭಾರೀ ಹೆಸರು ಪಡಕ್ಕೊಂಡಿದು. ಆನು ಕಳುದ ಹನ್ನೆರಡು ವರ್ಷಂದ ಸೋಲಾರ್ ಬೆಶಿ ನೀರೇ ಉಪಯೋಗಿಸ್ದ್ತಾ ಇದ್ದೆ. ಕರೆಂಟಿನ ಬಿಲ್ಲಿಲ್ಲಿಯೂ ಡಿಸ್ಕೌಂಟು. ಬೆಶಿನೀರಿಂಗೆ ಕಿಚ್ಚು ಹಾಕುವಗ ಕಣ್ಣಿಂಗೆ ಮೂಗಿಂಗೆ ಹೊಗೆ ಹೋಪಲಿಲ್ಲೆ.

  4. Shailajakka haaleli undare ruchi jaasti ada alda, aanude sannagippaga haaleli undide. Kelasada aalu ‘kutti’ umbashtu unneku heligondu !!:-D

  5. ಎಂಗೊ ಸಣ್ಣಾದಿಪ್ಪಗ ರಜೆಲಿ ತೋಟಲಿಪ್ಪ ಎಲ್ಲಾ ಹಾಳೆಗಳ ತಪ್ಪೆಯೊ…ಅಜ್ಜ ಲಾಯ್ಕಲ್ಲಿ ಉರುಟಾಗಿ ಕೊರಗು….. ಅಜ್ಜಿ ಅದರ ಬೆಶ್ಶಿಲ್ಲಿ ಒಣಗುಸುಗು,ಮಳೆಗಾಲಲ್ಲಿ ಉಂಬಲೆ ಸ್ಟೋಕು…. 🙂

  6. ಭಾರೀ ಲಾಯಿಕದ ಶುಧ್ಧಿ ಯಾವತ್ತಿನಂತೆ.
    ಎನಗೆ ಬರವಲೆ ಕೆಲವು ನೆಂಪಾತು ಅದರ ಅದಿತಿ ಅಕ್ಕ, ಸಂದೇಶ್ ಅಣ್ಣ ಬರದು ಆಯಿದು.
    ಇನ್ನು ನೆಂಪಪ್ಪದು ಎಂತರಪ್ಪಾ? ಹಾಂ, ಹಿಡಿಸೂಡಿ ಮಾಡಿ ಒಣಗುಲೆ ಹಾಕುದು ಸೇರ್ಸಿರೆ ಅಕ್ಕಾ?

  7. ಹಸಿ ಮಡ್ಳಿನ ಚೆಂದಕ್ಕೆ ಮಡದು ಬೆಶಿಲಿಂಗೆ ಹಾಕಿ ಒಣಗ್ಸಿರೆ ಮರೆ ರೆಡಿ.
    ಒಳ್ಳೆದಾಯ್ದು ಲೇಖನ.
    ಈ ಪುನಪು೯ಳಿ ಬಿರಿಂಡ ಇದ್ದನ್ನೇ ಅದರ ಹಾಂಗೇ ಕುಡುದರೆ ಎಂತಾರಕ್ಕ? ಅಮಲಿದ್ದ ಅದರಲ್ಲಿ?:-P

  8. ಇಡೀ ಬಾಳೆಗೊನೆಯೇ ಹಣ್ಣಾದರೆ, ಬೇಗನೆ ಮುಗಿಶುಲೂ ಎಡಿಯದ್ದಿಪ್ಪಗ ಬಾಳೆಹಣ್ಣಿನ ತೆಳುವಾಗಿ ಕೊರುದು ಬೆಶೆಲಿಲಿ ಒಣಗಿಸಿ ಮಡುಗುವ ಕ್ರಮ ಇದ್ದು. ಅದರ ಮತ್ತೆ ಬೇಕಪ್ಪಗ ಒಂದೊಂದೇ ಬಾಯಿಗೆ ಹಾಕಿರೆ ಆತು. 🙂
    ಮತ್ತೆ ತಂಬುಳಿಗೆ ಬೇಕಾದ ಕಂಚುಸೆಟ್ಟು, ದಾಳಿಂಬೆ ಓಡು, ನೆಲ್ಲಿಸೆಟ್ಟು ಇತ್ಯಾದಿಗಳ ಬೆಶೆಲಿಲಿ ಒಣಗಿಸಿ ಸಂಗ್ರಹ ಮಾಡ್ತವು.
    ಪುನರ್ಪುಳಿಯ ಸಿಪ್ಪೆಯನ್ನೂ ಒಣಗಿಸಿ ಮಡುಗುತ್ತವು. ಅದರ ರಜ್ಜ ಹೊತ್ತು ನೀರಿಲಿ ಬೊದುಲಿಸಿರೆ ಒಳ್ಳೆ ಎಸರು ಸಿಕ್ಕುತ್ತು. ಅದರಲ್ಲಿ ಪಾನಕವೋ, ಸಾರೋ ಮಾಡ್ಲಾವ್ತು.

  9. ಭಾರೀ ಲಾಯ್ಕ ಆಯ್ದು ಲೇಖನ. ಎನಗೆ ಕಾಂಬದು ಇಷ್ಟು ರುಚಿ ಇಪ್ಪ ಈ ಹಲಸಿನಕಾಯಿ ಹಪ್ಪಳವ ಅಂಗಡಿಗಳಲ್ಲಿ ಸಿಕ್ಕುತ್ತ ಹಾಂಗೆ ಮಾಡೆಕ್ಕು.

  10. ಬಾವಾ… ಬಜಂಟು. 😀

    ~
    ಮಾಂಬಳ..
    ಬಾಳ್ಕು……ಗಾಂಧಾರಿ ಮೆಣಸಿನ ಬಾಳ್ಕು, ಬಾಳ್ಕು ಮೆಣಸಿನ ಬಾಳ್ಕು, ಹಾಗಲಕಾಯಿ ಬಾಳ್ಕು
    ಮತ್ತೆ .. ಹಲಸಿನ ಹಣ್ಣ ಸೊಳೆ ಸಿಗುದು ಸಕ್ಕರೆ ಹಾಕಿ ಬೆಶಿಲ್ಲಿ ಮಡಿಗಿ ಎಂತದೋ ಮಾಡ್ತವನ್ನೇ.. ಅದೆಕ್ಕೆಂತರಪ್ಪ ಹೆಸರು ಮಡಿಗಿದ್ದು… ಉಮ್ಮ ನೆಂಪಾವ್ತಿಲ್ಲೆ. 🙁

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×