Oppanna.com

ಬುದ್ದಿವಂತ ಮಗನೂ, ಪ್ರೀತಿಯ ಗೆಂಡನೂ…!

ಬರದೋರು :   ಒಪ್ಪಣ್ಣ    on   19/03/2010    19 ಒಪ್ಪಂಗೊ

ಬೇಂಕಿನ ಶಿವಮಾವ° ಹೇಳಿ ಒಬ್ಬ ಇದ್ದವು, ನಿಂಗೊಗೆ ಗೊಂತಿಕ್ಕೋ ಏನೋ!
ಶಿವಪ್ರಸಾದ° ಹೇಳಿ ಹೆಸರು, ವಿಟ್ಳ ಹೊಡೆಲಿ ಅವರ ಮೂಲ.
ಅಂದೇ ಊರು ಬಿಟ್ಟಿದ್ದರೂ, ಅವರ ಸಂಪರ್ಕ ಕಡುದ್ದಿಲ್ಲೆ.
ಹಾಂಗಾಗಿ ಒಪ್ಪಣ್ಣಂಗೂ ನೋಡಿ ಗೊಂತಿದ್ದು – ಚೆಂಬರ್ಪು ಅಣ್ಣನ ಮನೆಗೋ, ನೀರ್ಕಜೆ ಅಪ್ಪಚ್ಚಿ ಮನೆಗೋ ಮಣ್ಣ ಜೆಂಬ್ರಕ್ಕೆ ಹೋಗಿಪ್ಪಗ. ಅವಕ್ಕೆ ನೆರೆಕರೆ ಇದಾ.!

ಅಗಲ ಫ್ರೇಮಿನ ಕನ್ನಡ್ಕ ಮಡಗಿ, ಬಂಬಲ ಕ್ರೋಪು ಮಾಡಿ, ಉದ್ದಕೈ ಅಂಗಿ ಹಾಯ್ಕೊಂಡು ವಿಟ್ಳ ಶಾಲಗೆ ಹೋಯ್ಕೊಂಡು ಇತ್ತಿದ್ದವಡ – ಈಗಳೂ ಕೆಲಾವು ಜೆನ ಗುರ್ತ ಹೇಳುಗು!
ಕ್ಲಾಸಿಂಗೆ ಪಷ್ಟು ಬಂದುಗೊಂಡು ಇದ್ದ ಜೆನ ಅಡ. ಅವರ ಮನೆಲಿ ಎಲ್ಲೊರೂ ಹಾಂಗೇ – ಕಲಿವದರ್ಲಿ ಬಾರೀ ಉಶಾರಿ.
ಓದುದು ಹೇಳಿತ್ತುಕಂಡ್ರೆ ಓದುದೇ. ಓದಿಗೊಂಡಿಪ್ಪಗ ಕಾಲಮೇಗೆ ಕೇರೆ ಹೋದರೂ ಗೊಂತಾಗ ಹೇಳಿ ಅವರ ಕ್ಲಾಸಿಲಿ ನೆಗೆ ಮಾಡುಗಡ.

ಮುಂದೆ ಕಲ್ತಾದ ಕೂಡ್ಳೆ ಕರ್ನಾಟಕ ಬೇಂಕಿಲಿ ಕೆಲಸ ಆತು. ದೂರದ ಗುಲುಬರ್ಗಲ್ಲಿ ಇತ್ತಿದ್ದವು. ಗುಲ್ಬರ್ಗಲ್ಲಿಪ್ಪಗಳೇ ಮದುವೆ ಆದ್ದು ಅವಕ್ಕೆ.
ಶಿವಮಾವಂಗೆ ಮದುವೆ ಆದ್ದುದೇ – ಅವ್ವೇ ನೋಡಿದ ಕೂಸು – ನಿರ್ಮಲತ್ತೆ – ಒಪ್ಪಿಗೊಂಡು ಮದುವೆ ಆದ್ದು.
ಶಿವಮಾವಂಗೆ ನಿರ್ಮಲತ್ತೆಯ ಪರಿಚಯ ಆತು, ಪರಸ್ಪರ ವಿಶ್ವಾಸ ಬಂತು, ಧಾರಾಳ ಮಾತಾಡಿಗೊಂಡವು, ಎಷ್ಟೋ ಕನಸಿನ ಹಂಚಿಗೊಂಡವು, ಒಂದೇ ಕುಟುಂಬಕ್ಕೆ ಸೇರಿಗೊಂಡವು.
ಕೂಸಿನ ಮನೆಯೋರು ಮದುವೆ ಅಂತೂ ಮಾಡಿ ಕಳುಸಿದವು, ಅವಕ್ಕೆ ಅಷ್ಟು ಹಿತ ಇತ್ತಿಲ್ಲೆಡ – ಮತ್ತೆ ಕಣ್ಣೆತ್ತಿ ನೋಡಿದ್ದವಿಲ್ಲೆ. ಅದು ತುಂಬ ಹಳೇ ಕತೆ..
ಈಗ ಒಬ್ಬನೇ ಒಬ್ಬನೇ ಮಗ° ಅವಕ್ಕೆ, ಮಯಿಸೂರಿಲಿ ಇಂಜಿನಿಯರು ಕಲ್ತಾತು.
ಕೆಲಸ ಹುಡ್ಕಲೆ ಹೇಳಿಗೊಂಡು ಬೆಂಗ್ಳೂರಿಂಗೆ ಹೋಯಿದ°, ಉಶಾರಿ ಮಾಣಿ – ಖಂಡಿತಾ ಕೆಲಸ ಸಿಕ್ಕುಗಡ ಅವಂಗೆ, ಪೆರ್ಲದಣ್ಣ ಹೇಳಿದ°..!
~

ಇಷ್ಟು ಶುದ್ದಿ ಆರಿಂಗೆ ಗೊಂತಿಲ್ಲೆ? ಇದರ ಹೇಳಿ ಗುಣ ಇಲ್ಲೆ, ಹಳೇ ಶುದ್ದಿ ಆದರೆ ಕೆಲಾವು ಜೆನಕ್ಕೆ ಮಾಂತ್ರ ಗೊಂತಿಕ್ಕಷ್ಟೆ. ಅದರ ಹೇಳ್ತೆ..

ತುಂಬ ಬುದ್ದಿವಂತ ಗೆಂಡ° ಇಪ್ಪಗ ಹೆಂಡತ್ತಿಗೆ ಹೆಮ್ಮೆಯೇ ಅಲ್ದೋ!
‘ನಿಂಗಳ ಗೆಂಡ°?’ ಹೇಳುವ ಮೊದಲೇ ‘ಅವು ಬೇಂಕಿಲಿ!’ ಹೇಳುಗು ಈ ನಿರ್ಮಲತ್ತೆ.
ಈಗಾಣ ಮಕ್ಕೊ ಸಾಪ್ಟುವೇರು ಹೇಳಿಗೊಂಡು ಹೇಳ್ತವಡಲ್ದೋ, ಆ ಕಾಲಲ್ಲಿ ಬೇಂಕು ಹೇಳ್ತದು ಅದೇ ಬೆಲೆದು – ಆಚಕರೆಮಾಣಿ ಯೇವತ್ತೂ ಹೇಳುಗು, ಬೇಂಕಿನ ಪ್ರಸಾದ°ನ ಬಗ್ಗೆ ಹೇಳುವಗ!
ಅಂಬೆರ್ಪಿಲೇ ನಿರ್ಮಲತ್ತೆಯ ಮದುವೆ ಆಗಿ ಬಿಟ್ಟದು, ತೂಷ್ಣಿಲಿ!

ಅಂತೂ ಬೇಂಕಿನ ಶಿವಮಾವ° ನಿರ್ಮಲತ್ತೆಯ ಕರಕ್ಕೋಂಡು ಗುಲ್ಬರ್ಗಕ್ಕೆ ಹೋಗಿಯೇ ಬಿಟ್ಟವು.
ನಿರ್ಮಲತ್ತೆಗೂ ರಜ ಸಮಯಲ್ಲೇ ಊರು ಪರಿಚಯ ಆತು, ಗುಲುಬರ್ಗ ಪೇಟೆ – ಆಸು ಪಾಸು, ಅಲ್ಯಾಣ ಬಾಶೆ, ಅಲ್ಯಾಣ ಅಂಗುಡಿಗೊ, ಎಲ್ಲ..
ತುಂಬಾ ಹೊಂದಾಣಿಕೆ ಇರ್ತ ಜೆನ ಅಲ್ಲದೋ – ಈ ನಿರ್ಮಲತ್ತೆ – ಪೇಟಗೆ ಹೊಂದುದು ಕಷ್ಟ ಆತಿಲ್ಲೆ.
ಆದರೆ ಉಶಾರಿ ಕೂಸು ಒಂದಕ್ಕೇ ಹಗಲಿಡೀ ಮನೆಲಿ ಕೂಬದು ಕಷ್ಟ ಆತು!

ಉದಾಸ್ನ ಅಪ್ಪದಕ್ಕೆ ಕೆಲಸಕ್ಕೆ ಹೋಪಲೆ ಸುರು ಮಾಡಿತ್ತು.
ಟ್ಯೂಶನುಕ್ಲಾಸಿಂಗೆ ಪಾಟ ಮಾಡ್ಲೆ – ಹೇಂಗೂ ವಿಟ್ಳ ಕೋಲೇಜಿಲಿ ಇಂಗ್ಲೀಶು ಕಲ್ತು ಆಯಿದನ್ನೆ ಅತ್ತೆಗೆ, ಗುಲ್ಬರ್ಗದ ಗೌಡುಗೊಕ್ಕೆ ಇವ್ವೇ ಟೀಚರು,ಪ್ರೊಪೆಸರು ಎಲ್ಲವುದೇ 😉
ಒಳ್ಳೆ ಹೆಸರುದೇ ಬಂತು.
ಆದರೆ, ಕಲುಶಿಗೊಂಡೇ ಇದ್ದರೆ ಸ್ವಂತಕ್ಕೆ ಎಂತದೂ ಅಭಿವೃದ್ಧಿ ಆವುತ್ತಿಲ್ಲೆ ಹೇಳಿಗೊಂಡು- ಹೊತ್ತೊಪಗ ಒಂದು ಅಜ್ಜಿ ಕೈಲಿ ಸಂಗೀತ ಕಲಿವಲೆ ಹೋವುತ್ತವು.
ಕುಡ್ಪಲ್ತಡ್ಕಬಾವ° ಹಾಡ್ತ ದಕ್ಷಿಣಾದಿ ಸಂಗೀತ ಅಲ್ಲ, ಅಲ್ಲಿದ್ದ ಗಂಗಜ್ಜಿ – ಈಗ ಇಲ್ಲೆ ಅದು – ಆ ಗಂಗಜ್ಜಿ ಹೇಳ್ತ ನಮುನೆಯ ಉತ್ತರಾದಿಯ.
~

ರಜ ಸಮಯಲ್ಲಿ ಮಾವನ ಬುದ್ದಿವಂತಿಕೆ ನೋಡಿ ಕೆಲಸಲ್ಲಿ ಪ್ರೊಮೋಶನು ಕೊಟ್ಟವು.
ಅದೇ ಬೇಂಕಿಲಿ ಅಡ –  ಕೆಲಸ ಏನೂ ಹೆಚ್ಚಪ್ಪಲೆ ಇಲ್ಲೆ, ಸಂಬಳ ಮಾಂತ್ರ – ಹೇಳಿ ಮಾವ° ನೆಗೆಮಾಡುಗಡ..!
ಎಂತಕೇಳಿರೆ, ಕೆಲಸ ಸುರುವಿಂದಲೇ ವಿಪರೀತ ಇತ್ತು!!
~

ಪೇಟೆ ಹತ್ತರೆ ಒಂದು ಸಣ್ಣ ಬಾಡಿಗೆ ಮನೆ. ಬೇಂಕು ಇದ್ದದು ಗುಲುಬರ್ಗ ಪೇಟೆಂದ ಐದಾರು ಕಿಲೋಮೀಟರು ಹೆರ.

ಶಿವಮಾವನ ಬೇಂಕು
ಶಿವಮಾವನ ಬೇಂಕು

ದಿನಾಗುಳೂ ಹೋಗಿ ಬಂದು ಮಾಡುದು, ಎಷ್ಟು – ಕಾಲು ಗಂಟೆಯೂ ಬೇಡ, ಬೈಕ್ಕು ತೆಗದ ಮತ್ತೆ.
ಬೈಕ್ಕು ಹೇಳಿರೆ, ಹೆಮ್ಮಕ್ಕೊಗೂ ಬಿಡ್ಳಾವುತ್ತ ಹಾಂಗಿಪ್ಪದು ಬತ್ತಲ್ದ- ಅದಾ ನೆಕ್ರಾಜೆಲಿ ಇದ್ದು ಈಗ, ಅದೇ ನಮುನೆದು.
ಅತ್ತೆಗೂ ಬಿಡ್ಳಕ್ಕನ್ನೇ, ಹಾಂಗೆ ಅದರ ತೆಗದ್ದು.
ಹಗಲೊತ್ತು ಬೇಂಕಿಂಗೆ ಹೋಗಿ ಬಪ್ಪದು. ಅತ್ತೆಯ ಟ್ಯೂಷನುಕ್ಲಾಸು ಹೇಂಗೂ ಪೇಟೆಲೇ ಅಲ್ದೋ – ನೆಡಕ್ಕೊಂಡು ಹೋವುತ್ತ ದಾರಿ!

ಕೆಲಸದ ಒತ್ತಡ ಮುಗುದಮತ್ತೆ, ಹೊತ್ತಪ್ಪಗ ಈ ಮಾವ° – ಅತ್ತೆಯ ಕೂರುಸಿಗೊಂಡು ಬೈಕ್ಕು ಕಲುಶುಲೆ ಹೇಳಿಗೊಂಡು ಪೇಟೆ ತಿರುಗ್ಗು, ಮನೆಗೆ ಎತ್ತುಲಪ್ಪಗ ಒಂದೊಳ್ಳೆ ಹೋಟ್ಳಿಂಗೆ ಹೋಗಿ – ಇರುಳಿನ ಊಟಕ್ಕೆ ರಜ್ಜ ಜಾಗೆ ಮಡಿಕ್ಕೊಂಡು ತಿಂದುಗೊಂಡು ಬಕ್ಕು- ಭವಿಶ್ಯದ ಕನಸಿನ ಮಾತಾಡಿಗೊಂಡು. ಎಷ್ಟು ಮಾತಾಡಿರೂ ವಿಶಯ ಮುಗಿತ್ತೇ ಇಲ್ಲೆ ಅವಕ್ಕೆ.
ಜೀವನ ಮತ್ತೂ ಕುಶಿ ಅಪ್ಪಲೆ ಸುರು ಆತು.
~

ಹೀಂಗೇ ಹೋಗಿಯೊಂಡು ಇತ್ತು ಜೀವನ.
ಮನೆಯ ಭದ್ರ ಬುನಾದಿಗೆ ಬೇಕಾದ ಸಂಪಾದನೆ ಇಪ್ಪ ಕೆಲಸ, ಹೊತ್ತೋಪಲೆ ಹೋಪ ನೆಮ್ಮದಿಯ ಕೆಲಸದ ಹೆಂಡತ್ತಿ, ಸುಖೀ ಅಪ್ಪನ ಮನೆ, ಊರಿಲಿ, ನೆಮ್ಮದಿಯ ಮನೆ, ಕೈಲಿ ಒಂದು ವಾಹನ, ಮಧುರ ದಾಂಪತ್ಯ..! ಇನ್ನೆಂತ ಬೇಕು?
ಹಾಂಗೇ ಒಂದೊರಿಶ ಕಳಾತು!
ಅದೇ ಸಮಯಲ್ಲಿ ಮಧುರ ದಾಂಪತ್ಯಕ್ಕೆ ಒಂದು ಶುಬಸುದ್ದಿಯೂ ಬಂತು.
ಬೈಕ್ಕು ತೆಗದ ಕುಶಿ ಬೇರೆ, ಮನೆಗೆ ಹೊಸ ಅತಿತಿ ಬಪ್ಪ ಕುಶಿ ಬೇರೆ, ಪ್ರೊಮೋಶನಿನ ಕುಶಿ ಬೇರೆ, ಅಂತೂ ಅವರ ಹಿಡುದು ನಿಲ್ಲುಸುವವು ಆರೂ ಇಲ್ಲೆ!!! ಜೀವನದ ಅತ್ಯಂತ ಕುಶಿಯ ಸಮಯ ಅದು!
ಗ್ರೇಶಿದ್ದೆಲ್ಲ ಗ್ರೇಶಿದಾಂಗೆ ಅಪ್ಪಲೆ ಸುರು ಆತು. ಅಲ್ಲೆ ಅತ್ಲಾಗಿ, ಎರಡು ಪರ್ಲಾಂಗು ಮುಂದೆ ರಜ ಒಳ್ಳೆ ಮನೆಗೆ ಪಗರಿದವು.
ಪೇಟೆ ಕರೆಲಿ ಒಂದೊಳ್ಳೆ ಸಣ್ಣ ಜಾಗೆದೇ ಬರೆಶಿಗೊಂಡವು.
ಊರಿನ ಮನೆಲಿಪ್ಪ ಹೆರಿಯೋರ ಸಂಪರ್ಕ ಒಳ್ಳೆತ ಮಡಿಕ್ಕೊಂಡಿತ್ತಿದ್ದವು. ಊರಿಂಗೆ ಬೇಕಾದ ಸಾಮನೆಲ್ಲ ಬಂದು ಬಂದು ಸೇರಿತ್ತು.
ಅಣ್ಣನ ಮಕ್ಕೊಗೆ ವಿದ್ಯಾಭಾಸಕ್ಕೆ ಸಕಾಯ ಎಲ್ಲ ಮಾಡಿದವು.

~
ಬಸರಿ ಆಗಿಪ್ಪ ಸಮಯಲ್ಲಿ ಅಪ್ಪಮ್ಮನ ಜೋರು ನೆಂಪಾಗಿಯೊಂಡಿತ್ತು ಅತ್ತೆಗೆ.
ಹಾಂಗೆಡ ಅಲ್ದೋ, ಮೊದಲು ಹೇಂಗೇ ಇದ್ದರೂ – ಅಮ್ಮ ಅಪ್ಪಲಪ್ಪಗ ಅಮ್ಮನ ಜೋರು ನೆಂಪಪ್ಪದಡ, ಅಪ್ಪ ಅಪ್ಪಲಪ್ಪಗ ಅಪ್ಪನ ನೆಂಪಪ್ಪದಡ. (ಕುಮಾರಸ್ವಾಮಿಗೆ ’ಮಾಜಿ’ ಅಪ್ಪಲಪ್ಪಗ ಮಾಜಿ ಪ್ರಧಾನಿಯ ನೆಂಪಾದ ಹಾಂಗೆ! 😉 )
ಆದರೆಂತ ಮಾಡೊದು, ಅತ್ತೆಯ ದಿನಿಗೆಳಿದ್ದವೇ ಇಲ್ಲೆ ಅದರ ಅಪ್ಪನ ಮನೆಯೋರು!
ದಿನಿಗೆಳುವಷ್ಟು ಕಾಯಿಸಿದ್ದವೂ ಇಲ್ಲೆ ಶಿವಮಾವ°. ಅವರ ಮನೆಲೇ – ಕೋಡಪದವಿನ ಹತ್ರೆ – ಅಲ್ಲೇ ವೆವಸ್ತೆ ಮಾಡಿದವು.
ಮದುವೆ ಆಗಿ ಬಂದ ಮೇಗೆ ಗೆಂಡನ ಮನೆಯೇ ಎಲ್ಲವೂ..!

ಗುಲ್ಬರ್ಗಂದ ಸಹಜ ಬೇಜಾರಲ್ಲೇ ಹೆರ್ಲೆ ಕಳುಸಿದವು ಮಾವ. ಊರಿನ ಮನೆಲಿ ಊಟ, ತಿಂಡಿ, ನಿದ್ರೆಗೆ ಬೇಕಾದ ವೆವಸ್ತೆ, ಡಾಗುಟ್ರು ಬಂದು ನೋಡಿಗೊಂಡು ಹೋವುತ್ತ ವೆವಸ್ತೆ ಮಾಡಿದವು.
ಒಂದೊಳ್ಳೆ ಗ್ರಹಗತಿಲಿ ಒಬ್ಬ ಮುದ್ದಾದ ಆರೋಗ್ಯವಂತ ಮಾಣಿಯೂ ಹುಟ್ಟಿದ. ಮನೆ ಅಜ್ಜಜ್ಜಿಗೆ ಕುಶಿಯೇ ಕುಶಿ.
ಕುಂಞಿ ಮಾಣಿಗೆ ಬಯಂಕರ ಅರ್ಗೆಂಟು – ಅವನ ಅಪ್ಪನ ಹಾಂಗೇಡ, ಅಜ್ಜಿ ನೆರೆಕರೆಲಿ ಹೇಳಿ ಹೇಳಿ, ಮಾವಂಗೆ ಊರಿಂಗೆ ಬಪ್ಪಲೇ ನಾಚಿಕೆ ಮಾಡಿ ಹಾಕಿತ್ತು ಆ ಅಜ್ಜಿ! ಸಣ್ಣ ಪ್ರಾಯಲ್ಲಿ ಕೂಗೆಕ್ಕಡ, ಕೂಗದ್ರೆ ಅಮ್ಮ-ಮಗು – ಇಬ್ರುದೇ ಚುರುಕ್ಕು ಆಗವು ಹೇಳಿ ಮಜಲುಕೆರೆಅಜ್ಜಿ ಹೇಳುಗು.

ಮಾವಂಗೆ ಬೇಂಕಿಲಿ ಕೂದು ದಿನವೇ ಹೋಗ. ಹೆತ್ತಿದ್ದು ಬಪ್ಪಲೆ ದಿನ ಎಷ್ಟು ಬಾಕಿ ಇದ್ದು ಹೇಳಿ ದಿನಕ್ಕೆ ಹತ್ತು ಸರ್ತಿ ಲೆಕ್ಕ ಮಾಡುಗು. ಬೇಂಕಿಲಿಪ್ಪವಕ್ಕೆ ಲೆಕ್ಕ ಮಾಡುದು ಒಂದು ಮರುಳಲ್ದೋ ಹೇಳಿ ಆಚಕರೆಮಾಣಿ ನೆಗೆಮಾಡುಗು.
ಇಡೀ ಕುಟುಂಬಕ್ಕೆ ಕೊಶಿಯೋ ಕೊಶಿ!!!!
~

ಇವು ಇಷ್ಟು ಕುಶಿಲಿ ಇಪ್ಪದು ನೋಡಿ ಬ್ರಹ್ಮಂಗೆ ಹೊಟ್ಟೆಕಿಚ್ಚು ಆತೋ ಏನೋ! 🙁
ಒಂದು ದಿನ ಶಿವಮಾವ ಬೈಕ್ಕಿಲಿ ಬೇಂಕಿಂದ ಮನೆಗೆ ಹೋಪಗ ಹಿಂದಂದ ಒಂದು ಲೋರಿ – ಲೋರಿಯೋ, ಜೀಪೋ ಸರೀ ಅರಡಿಯ – ಗುದ್ದಿತ್ತಡ. ಪುಣ್ಯ, ಅಡಿಂಗೆ ಬಿದ್ದಿದವಿಲ್ಲೆ. ಹೆಟ್ಟಿಕ್ಕಿ ಆ ಲೋರಿಯ ಜೆನ ಓಡಿದ್ದು – ಎರೆಪ್ಪು.
ಬೈಕ್ಕು ಮಾರ್ಗದ ಕರೆಂಗೆ ರಟ್ಟಿತ್ತು, ಹಾಂಗಾಗಿ ಮೈ-ಕೈ ಸಣ್ಣ ಸಣ್ಣ ಗಾಯಲ್ಲಿ ಒಳುಕ್ಕೊಂಡವು. ಬೈಕ್ಕಿಂದ ಬಿದ್ದ ಶಿವಮಾವ° ಬೋದ ಇಲ್ಲದ್ದೆ ತುಂಬ ಹೊತ್ತು ಅಲ್ಲೇ ಇತ್ತಿದ್ದವು.
ಜೆನವಸತಿ ಕಮ್ಮಿ ಆದ ಕಾರಣ ಆರುದೇ ಅಷ್ಟು ಗಮನುಸುಲೆ ಬಯಿಂದವಿಲ್ಲೆ. ಮತ್ತೆ ಆರಿಂಗೋ ಗೊಂತಾಗಿ, ಆಸ್ಪತ್ರೆ ಬೆಳಿ ವೇನು ಬಂದು ಎತ್ತಿಗೊಂಡು ಹೋದವಡ.

ಯೇಕ್ಸಿಡೆಂಟಾಗಿ ಆಸ್ಪತ್ರೆಗೆ ಯೆಡ್ಮಿಟ್ಟು ಮಾಡಿದ ಶುದ್ದಿ ಮನೆಗೆ ಎತ್ತಿಸಿದವು. ಛೆ, ಹಸಿ ಬಾಳಂತಿಗೆ ಮಗನ ಕುಶಿಯೊಟ್ಟಿಂಗೆ ಈ ಶುದ್ದಿಯೋ?! ಅತ್ತೆಗೆ ಹೋಯೆಕ್ಕು ಹೇಳಿ ಜೋರು ಮನಸ್ಸಾತು.
ಶಿವಮಾವನ ಅಣ್ಣ ಶಿವರಾಮ್ಮಾವ ಹೋಗಿ ’ಗಾಬರಿ ಎಂತ ಇಲ್ಲೆ’ ಹೇಳ್ತ ಶುದ್ದಿ ಎತ್ತುಸಿದವು.
ಮೈ-ಕೈ, ಮಣಿಕ್ಕಟ್ಟಿಂಗೆ ರಜ್ಜ ಹರುಂಕಿದ ಹಾಂಗೆ ಆಯಿದಡ.
ತಲೆಯ ಹಿಂದಂಗೂ ರಜಾ ಪೆಟ್ಟಾಯಿದಡ. ಅಷ್ಟೆ. ಬೋದ ಇನ್ನುದೇ ಬಯಿಂದಿಲ್ಲೆ ಬಿಟ್ರೆ, ದೈಹಿಕವಾಗಿ ಪೂರ್ತಿ ಗುಣಮುಖ ಆಯಿದವೂಳಿ ಹೇಳಿದವು.

ಅಂತೂ  ಅತ್ತೆ ಹಸೆಮಡುಸಿ ಹೋಪ ದಿನ ( ಹೆತ್ತಿದ್ದು 41 ನೇ ದಿನ ಮಾಡ್ತ ಕ್ರಮ) ಹೋಗಿಯೇ ಬಿಟ್ಟತ್ತು, ಇಷ್ಟು ಬೇಗ ಹೋಗೆಡ ಹೇಳಿ ಮನೆಲಿ ಹೇಳಿರೂ ಕೇಳದ್ದೆ.
ಗೆಂಡನ ವಿಶಯಕ್ಕಪ್ಪಗ ಆರ ಮಾತುದೇ ಕೇಳ ಅದು. ಬಯಸಿ ಮದುವೆ ಆದ್ದಲ್ದೋ, ಹಾಂಗೆ.
ಎನ್ನ ಮಗನ ಚೆಂದಕೆ ನೋಡಿಗೊಳ್ತು ಹೇಳಿ ಅದರ ಅತ್ಯೋರಿಂಗೆ ಹೆಮ್ಮೆ ಬಂತು. ಅವುದೇ ಬಂದವು ಒಟ್ಟಿಂಗೇ – ಗುಲ್ಬರ್ಗಕ್ಕೆ, ರೈಲಿಲಿ.
~

ಗುಲ್ಬರ್ಗಕ್ಕೆ ಎತ್ತಿದ ಕೂಡ್ಳೆ ಮಗನ, ಗೆಂಡನ ಚಾಕ್ರಿ ಸುರು ಆತು.
ಎಷ್ಟೆಡಿಗೋ – ಅಷ್ಟು!
ಮುಂದೆ ರಜ ದಿನಲ್ಲಿ ಅತ್ಯೋರು ಊರಿಂಗೆ ಹೋದವು- ಮಾವನೋರಿಂಗೆ ಆರೋಗ್ಯ ಇಲ್ಲೆ ಹೇಳ್ತ ಲೆಕ್ಕಲ್ಲಿ.
ಬಾವನೋರು – ಶಿವರಾಮ್ಮಾವ ಇನ್ನೂ ಇದ್ದವು ರಜ ಸಮೆಯ.
ಈ ನಿರ್ಮಲತ್ತೆಗೆ ಆಸ್ಪತ್ರೆಂದ ಮನೆಗೆ ಒಂದು ಪರ್ಲಾಂಗು ಇದ್ದ ಕಾರಣ – ಮಗನನ್ನೂ, ಗೆಂಡನನ್ನೂ -ಇಬ್ರನ್ನೂ ನೋಡಿಗೊಂಬಲೆ ಎಡಿಗಾಗಿಯೊಂಡಿತ್ತು.
ಶಿವಮಾವನ ಆರೋಗ್ಯ ಸುದಾರ್ಸುದು ಕಂಡುಗೊಂಡು ಇತ್ತು.
ಅತ್ತೆ ಬಂದು ಒಂದು ವಾರಲ್ಲಿ ಮೆಲ್ಲಂಗೆ ಬೋದ ಬಂತು, ಇನ್ನು ಮದ್ದಿಲೇ ಗುಣಮುಖ ಅಕ್ಕು ಹೇಳ್ತ ಲೆಕ್ಕಲ್ಲಿ ಆಸ್ಪತ್ರೆಂದ ಡಿಶ್ಚಾರ್ಜು ಮಾಡಿದವು. ತೋರ್ತ ಮಟ್ಟಿಂಗೆ ಎಂತೂ ಗಾಯ ಇತ್ತಿಲ್ಲೆ ಇದಾ.
ಶಿವಮಾವ° ಮನೆಗೆ ಬಂದವು! ’ಇನ್ನು ಹೆರಡ್ಳಕ್ಕಲ್ದಾ’ ಹೇಳಿ ಕಂಡತ್ತು ಶಿವರಾಮ್ಮಾವಂಗೆ. ಊರಿನ ಮನೆ ನಿಭಾಯಿಸೆಡದೋ..
ಹೇಂಗೂ ಇನ್ನೊಂದು ವಾರಲ್ಲಿ ಪೂರ್ತಿ ಕಮ್ಮಿ ಅಕ್ಕು- ಬತ್ತೆ ಇನ್ನೊಂದರಿ ಹೇಳಿಕ್ಕಿ ಒಂದಿರುಳು ಅಲ್ಲಿಂದ ಊರಿಂಗೆ ಹೆರಟೇ ಬಿಟ್ಟವು.
~

ಕ್ರಮೇಣ ಮಾವಂಗೆ ಸರಿಯಾಗಿ ಬೋದ ಬಂತು!
ಎದುರಿಪ್ಪದರ ನೋಡುಗು, ಆದರೆ ಮಾತಾಡವು. ಕೈ ಸರೀ ಇದ್ದು – ಆದರೆ ಹಂದುಸವು. ಕಾಲು ಸರೀ ಇದ್ದು, ಆದರೆ ನೆಡೆಯವು, ಬಾಯಿ ಒಡದರೆ ಮುಚ್ಚವು, ಮುಚ್ಚಿರೆ ಒಡೆಯವು.
ತೋರುಸಿದ್ದರ ನೋಡುಗು, ಕೊಟ್ಟದರ ಹಿಡ್ಕೊಂಗು! ಮೀಶಿರೆ ಮೀಗು, ಮನುಗುಸಿರೆ ಮನುಗ್ಗು!
ಮಾವಂಗೆ ಡಿಶ್ಚಾರ್ಜು ಆಗಿದೇ ಹತ್ತರತ್ತರೆ ಎರಡು ತಿಂಗಳಾತು.
ಆರೋಗ್ಯ ಎಲ್ಲ ಸರೀ ಇತ್ತು, ಆದರೂ ಎಲ್ಲವನ್ನೂ ಮರದು ಬಿಟ್ಟ ಹಾಂಗೆ ಅಪ್ಪದು! ದೇಹದ ಯಾವುದೇ ಭಾಗದ ಉಪಯೋಗ ಎಂತರ ಹೇಳಿ ಮರದು ಹೋದ್ದು ಅವಕ್ಕೆ – ಹೇಳಿ ಅತ್ತೆಗೆ ಅರ್ತ ಆತು!
ಇದು ಹೀಂಗೆ ಹೇಳಿ ನಿರ್ಮಲತ್ತೆಗೆ ಅರ್ತ ಅಪ್ಪಲೆ ಮೂರು ದಿನವೇ ಬೇಕಾತು.

ಬೇಂಕಿಲಿ ಒಟ್ಟಿಂಗೆ ಕೆಲಸ ಮಾಡಿಗೊಂಡಿದ್ದವು ಎಲ್ಲ ಮನಗೆ ಬಂದವು, ನೋಡಿಗೊಂಡು ಹೋದವು, ಮಾತಾಡುಸುಲೆ ಪ್ರಯತ್ನ ಪಟ್ಟವು, ಇನ್ನೊಂದರಿ ಬತ್ತೆಯೊ° ಹೇಳಿಕ್ಕಿ ಹೆರಟವು.
ಮಗಂಗೆ ಎರಡು ತಿಂಗಳಾತು, ಜೋರು ಬೊಬ್ಬೆ. ಮನೆ ಪೂರ ಒಂದೇ ಮಾಡುಗು. ಅಂತೇ ಅರ್ಗೆಂಟು.
ಹಶು ಅಪ್ಪಗ ಜೋರು. ಹೊಟ್ಟೆ ತುಂಬಿದ ಕೂಡ್ಳೆ ಒರಗಿದ. ಎಷ್ಟು ಆರಾಮ ಆ ಜೀವನ, ಅಲ್ದೋ! :-), ‘ಚುರುಕ್ಕು ಇದ್ದ° ಆ ಮಾಣಿ!’ ಹೇಳಿ ಮಾವನ ನೋಡ್ಳೆ ಬಂದ ಎಲ್ಲೊರೂ ಮಾಣಿಯ ನೋಡಿ ಹೇಳುಗು!
~

ಮಾವನ ಈ ಪರಿಸ್ಥಿತಿ ಅರ್ತ ಆದ ಅಜ್ಜಜ್ಜಿಗೆ ಕರುಳೇ ಹಿಂಡಿದ ಹಾಂಗೆ ಆತು, ಪುಳ್ಳಿ ಬಂದ ಕೊಶಿಯ ಎಡಕ್ಕಿಲಿದೇ! ಚೆ, ಅಷ್ಟು ಉಶಾರಿ – ಎಂತಾತಪ್ಪ ಇವಂಗೆ – ಹೇಳಿ ಅರಡಿಯ.
ಒಂದರಿ ಮಗನ ನೋಡೆಕ್ಕು ಹೇಳಿ ಕಂಡತ್ತು ಅವಕ್ಕೆ.
ಅವರ ಶಿವರಾಮ್ಮಾವ ಪುನಾ ಕರಕ್ಕೊಂಡು ಬಂದು ಬಿಟ್ಟಿಕ್ಕಿ ಹೋದವು.
ಅಜ್ಜಜ್ಜಿ ಇಲ್ಲೇ ನಿಂದವು. ಅತ್ತೆಮಾವ ಬಂದದು ಆ ಪೇಟೆ ಜೀವನಕ್ಕೆ ಆನೆಬಲ ಬಂದ ಹಾಂಗೆ ಆತು ನಿರ್ಮಲತ್ತೆಗೆ.
ಮನೆಕೆಲಸ, ಪೇಟೆಕೆಲಸ ಎಲ್ಲ ಮಾಡ್ಳೆ ಅತ್ತೆಮಾವ ಇದ್ದವನ್ನೇ! ಹಾಂಗಾಗಿ ಅದೊಂದು ನೆಮ್ಮದಿ.

ಹೆಂಡತ್ತಿಯ ಚಾಕುರಿಯ ಒಟ್ಟಿಂಗೆ ಅಪ್ಪಮ್ಮನ ಪ್ರೀತಿಯುದೇ ಸುರು ಆತು.
ಮಗಂಗೆ ಎಂಟು ತಿಂಗಳಾದರೂ ಪ್ರಸಾದಮಾವಂಗೆ ಎಂತದೂ ನೆಂಪು ಬಯಿಂದಿಲ್ಲೆ.
‘ಇದಾ.., ನಿಂಗಳ ಮಗ ಮಾತಾಡ್ತ ನಿಂಗಳತ್ರೇ’ ಹೇಳಿ ವಿದ್ಯತ್ತೆ ಅಂಬಗಂಬಗ ಹೇಳುಗು.

ಅತ್ತೆಗೆ ಅಂತೂ ಇಬ್ರು ಮಕ್ಕಳ ನೋಡಿದ ಅನುಭವ ಆಯ್ಕೊಂಡು ಇತ್ತು.
ಮಾಣಿಗೆ ಸುರುವಿಂಗೆ ಉಣುಶಿ ಮಾವಂಗೆ ಉಣುಶುದು- ಮಾಣಿಯ ಒರಗುಸಿ ಮಾವನ ಒರಗುಸುದು.
ಮಾಣಿಯ ಮೀಶಿ ಮಾವನ ಮೀಶುದು – ಮಾವಂದೇ ಶುದ್ದ ಮಗುವಿನ ಹಾಂಗೇ!

ಮಾವನ ಕ್ರಮಲ್ಲಿ ಪ್ರಗತಿ ಕಂಡುಗೊಂಡು ಇತ್ತು – ಅದೊಂದೇ ಅತ್ತಗೆ ಇದ್ದ ಆಶಾಭಾವ.
ಮಾವಂಗೆ ತನ್ನ ಅಮ್ಮ, ಅಪ್ಪ, ಹೆಂಡತ್ತಿ, ಮಗ, ಮನೆ,ಕೆಲಸ ಜೀವನ – ಎಲ್ಲ ಮರದರೂ ಭಾಶೆ ಮರದ್ದಿಲ್ಲೆ!
ಅದೊಂದು ವಿಶೇಷ.
~

“ಹತ್ತು ತಿಂಗಳಿಲಿ ಹತ್ತೆಜ್ಜೆ ನೆಡದರೆ ಉಶಾರಿ ಮಾಣಿ” ಹೇಳಿ ಮಜಲುಕೆರೆ ಅಜ್ಜಿ ಹೇಳುಗು.
ಹತ್ತರಲ್ಲಿ ಅಲ್ಲದ್ರೂ ಹನ್ನೊಂದು ಹಿಡಿವಗ ತಟುಪುಟು ನೆಡವಲೆ ಸುರು ಮಾಡಿದ° ಆ ಉಶಾರಿಮಾಣಿ!
ಮಾವನಲ್ಲಿಯೂ ಸುಧಾರಣೆ ಕಂಡುಗೊಂಡಿತ್ತು. ಹೇಳಿಕೊಟ್ಟದು ಅರ್ತ ಅಪ್ಪಲೆ ಸುರು ಆತು – ನೆಂಪು ಒಳಿಯದ್ರೂ!
ಮರದಿನ ಮತ್ತೆ ಹೇಳಿಕೊಡೆಕ್ಕು – “ಇದಾ, ಇದು ಮೀತ್ತ ಚೆಂಬು, ನೀರಿನ ತಲಗೆ ಎರಕ್ಕೊಳೆಕ್ಕು”, “ಇನ್ನು ಮೈ ಉದ್ದಿಗೊಳೆಕ್ಕು”, “ಬಟ್ಳಿಂದ ಹೀಂಗೆ ತಿನ್ನೆಕ್ಕು”, “ಕೈ ಹೀಂಗೆ ತೊಳಕ್ಕೊಳೆಕ್ಕು”, “ಹೀಂಗೆ ಅಂಗಿ ಹಾಯ್ಕೊಳೆಕ್ಕು” ಹೇಳಿ ಎಲ್ಲ ಹೇಳಿಕೊಡ್ಳೆ ಸುರು ಮಾಡಿತ್ತು ಅತ್ತೆ.
ಸುರುಸುರುವಿಂಗೆ ನೆಂಪೊಳಿಯದ್ರೂ – ಕ್ರಮೇಣ ಹೇಳಿಕೂಟ್ರೆ ನೆಂಪೊಳಿವಲೆ ಸುರು ಆತು.ಪುಳ್ಳಿ ಮಾಣಿಯ ಹಾಂಗೆ ಕಲಿತ್ತ ಕೆಲಸ ಇಲ್ಲೆನ್ನೆ, ಸಣ್ಣ ಇಪ್ಪಗ ಕಲ್ತದರ ಒಂದರಿ ನೋಡಿಗೊಂಡ್ರೆ ಆತು.

ಮಾಣಿ ಗುರ್ತ ನೋಡ°! ರಜ್ಜ ದೊಡ್ಡ ಅಪ್ಪಗ ಅಜ್ಜಜ್ಜಿಯ ಹತ್ತರೆ ನಿಂಬಲೆ ಕೇಳಗೊಂಡಿತ್ತಿದ್ದ.
ಅಮ್ಮನೇ ಆಯೆಕ್ಕು ಹೇಳಿ ಎಂತ ಇಲ್ಲೆ ಅವಂಗೆ. ಮಾವಂದೇ ಗುರ್ತ ನೋಡವು.
ಆರು ಉಣುಶಿರೂ ಆವುತ್ತು. ಅಬ್ಬೆಯೂ ಅಕ್ಕು, ಮಗನ ಅಬ್ಬೆಯೂ ಅಕ್ಕು – ಎಂತದೂ ಅರ್ತವೇ ಆಗ!
ಉಣುಶಿದಷ್ಟೂ ಉಂಗು!
~
ಇಷ್ಟೆಲ್ಲ ಅಪ್ಪಗಳೂ ಅವು ರಜೆಲೇ ಇತ್ತಿದ್ದವು.
ಒಂದೊರಿಷ ಆತು ಹತ್ತರತ್ತರೆ. ರಜೆ ಪೂರ ಮುಗುತ್ತು. ಊರವು ಪರಂಚಲೆ ಸುರು ಮಾಡಿದವು – ಆ ನಿರ್ಮಲಂಗೆ ಊರಿಲಿ ಬಂದು ಕೂಪಲಾಗದೋ, ಗೆಂಡನ ಆ ಪೇಟೆಲಿ ಕಟ್ಟಿಗೊಂಡು ಎಂತರ ಮಾಡುದಪ್ಪಾ – ಹೇಳಿಗೊಂಡು!
ಇಪ್ಪ ಈ ಕೆಲಸವನ್ನುದೇ ಬಿಟ್ರೆ ಮತ್ತೆ ಜೀವನಕ್ಕೆ ಬೇರೆಂತ ಇದ್ದು ಬೇಕೇ?!
ಅತ್ತೆಗೆ ಅದುವೇ ದೊಡ್ಡ ಚೋದ್ಯ ಆತು. ಎಂತ ಮಾಡುದು ಅರಡಿಗಾಯಿದಿಲ್ಲೆ.
ಅದೇ ತಲೆಬೆಶಿಲಿ ಮಾವನ ಮಾನಸಿಕ ಸುಧಾರಣೆ ನಿರೀಕ್ಷೆಮಾಡಿಗೊಂಡು ಇತ್ತು. ನೆಂಪಪ್ಪ ದೇವರಿಂಗೆ ಎಲ್ಲ ಹರಕ್ಕೆ ಹೊತ್ತೊಂಡತ್ತು.
ನೋಡೊ-ದೇವರು ನಮ್ಮ ಕೈ ಬಿಡ ನಿರ್ಮಲೆ – ಅತ್ತೆ ನಿತ್ಯವೂ ಹೇಳುಗು.

ಮಾನಸಿಕವಾಗಿ ರಜ್ಜ ದೋಷ ಇದ್ದು ಹೇಳ್ತ ದೊಡ್ಡಕಾರಣಂದಾಗಿ ರಜ ದೊಡ್ಡ ನಮುನೆಯ ರಜೆ ಕೊಟ್ಟಿತ್ತಿದವಡ.
ಬೇಂಕಿನ ಹೆಡ್ಡಾಪೀಸಿಲಿ ಆರೋ ಕೈ ಇದ್ದವಡ -ಶಿವರಾಮ್ಮಾವನ ಗುರ್ತಲ್ಲಿ. ಅವು ಮಾತಾಡಿ ಹಾಂಗೊಂದು ಅವಕಾಶ ಸಿಕ್ಕಿತ್ತಡ. ಅದೊಂದು ನೆಮ್ಮದಿ ಆತು ಅತ್ತೆಗೆ.

~
ಹತ್ತರತ್ತರೆ ಎರಡೊರಿಷ ಆತು.
ಮಾಣಿ ಮಾತಾಡ್ಳೆ ಸುರುಮಾಡಿದ. ಕೆಲವೆಲ್ಲ ಅರಡಿತ್ತು ಅವಂಗೆ.
ಒಂದೊಂದೇ ಗೆರೆ ಮಾತಾಡ್ತ. ಗುರ್ತ ಹಿಡಿವಷ್ಟು ತಿಳ್ಕೊಳ್ತ. ಎಲ್ಲ ಗೊಂತಕ್ಕು ಅವಂಗೆ.
ಮಾವಂಗೆ ಈಗ ರಜ್ಜ ಸುಧಾರಣೆ ಇದ್ದು. ಕೆಲವೆಲ್ಲ ಕೆಲಸಂಗೊ ಅರಡಿಗು. ಅಂಗಿ ಅವ್ವೇ ಹಾಯ್ಕೊಂಗು.
ಹೆಂಡತ್ತಿಯ ಬೇರೆ, ಮಗನ ಬೇರೆ, ಅಬ್ಬೆಯ ಬೇರೆ ಬೇರೆ ಗುರ್ತ ಹಿಡಿಗು. ಎಂತದೋ ಮಾತಾಡ್ಳೆ ಸುರು ಮಾಡುಗು. ಅರ್ದಲ್ಲಿ ಮರದ ಹಾಂಗೆ ಆಗಿ ನಿಲ್ಲುಸುಗು.
ಮಾವನ ಗ್ರೇಶಿ ಬೇಜಾರಾದರೂ, ಮಾಣಿಯ ಗ್ರೇಶಿ ಕುಶಿಪಟ್ಟೊಂಗು ಈ ನಿರ್ಮಲತ್ತೆ.!

ಬೆಂಗುಳೂರಿನ ದೊಡ್ಡಾಸ್ಪತ್ರೆಲಿ ಮನಸ್ಸಿನ ಶೆಗ್ತಿಗೆ ಬೇಕಾದ ಆರಯಿಕೆಯನ್ನುದೇ ತೆಕ್ಕೊಂಬಲೆ ಸುರು ಮಾಡಿದವಡ- ಪೆರ್ಲದಣ್ಣನ ಅಪ್ಪಚ್ಚಿಯ ಪೈಕಿ ಆರೋ ಬೆಂಗುಳೂರಿಲಿ ವೆವಸ್ತೆ ಮಾಡಿ ಕೊಟ್ಟಿತ್ತಿದ್ದವಡ.

ಬೇಂಕಿನ ಕೆಲಸ ಒಂದುಬಗೆ ಹೋಯಿದಿಲ್ಲೆ.
~

ರಜರಜವೇ ಅವರ ಚರ್ಯೆಲಿ ಅಭಿವೃದ್ಧಿ ಕಾಂಬಲೆ ಸುರು ಆತು. ಪರಿಸರಕ್ಕೆ ಹೊಂದಿಗೊಂಡು ಬದುಕ್ಕುವ ಕಲೆ ಅರಡಿಗಾತು. ವಸ್ತುಗಳ ಗೊಂತಪ್ಪಲೆ ಸುರು ಆತು.
ಮನೆಲೇ ಕೂಪದೆಂತಕೆ – ಮೆಲ್ಲಂಗೆ ಹೆರ ರಜ ನೆಡವಲೆ, ಅಲ್ಲೇ ಪಾರ್ಕಿನ ಕರೆಲಿ ಸುತ್ತಲೆ ಅಬ್ಯಾಸ ಮಾಡುಸಿದವು.
ಕೈ ಹಿಡ್ಕೊಂಡು ಹೋಪಲೆ ಅಬ್ಯಾಸಮಾಡಿಗೊಂಡವು.

ಅಂದು ಅದೇ ಪಾರ್ಕಿಲಿ ಒಟ್ಟಿಂಗೆ ನೆಡಕ್ಕೊಂಡು, ಜಗಳ ಮಾಡಿಗೊಂಡು, ಕೋಪ ಮಾಡಿಗೊಂಡು, ಮಾತಾಡಿಗೊಂಡು, ಪ್ರೀತಿಮಾಡಿಗೊಂಡು ಹೋದ್ದದು ನೆಂಪು ಬತ್ತೋ ಏನೋ – ಹೇಳಿ ಒಂದು ಆಶೆ ಇತ್ತು ನಿರ್ಮಲತ್ತೆಗೆ.
~
ರಜ್ಜ ಸಮೆಯ ಕಳುದಪ್ಪಗ – ಬೇಂಕಿಂಗೆ ಕರಕ್ಕೊಂಡು ಹೋದರೆ ಹೇಂಗೆ? ಹೇಳಿ ಯೋಚನೆ ಬಂತು ನಿರ್ಮಲತ್ತೆಗೆ.
ಬೇಂಕಿನ ಜೆನಂಗಳತ್ರೆ ಹೋಗಿ ಮಾತಾಡಿತ್ತು ಅತ್ತೆ ಒಂದರಿ. ಎಲ್ಲೊರುದೇ ಅಣ್ಣ-ತಮ್ಮಂದ್ರ ಹಾಂಗೆ, ಒಂದೇ ಮನೆಯೋರಂತೆ ಅನುಸಿತ್ತು ನಿರ್ಮಲತ್ತೆಗೆ.
ಬೇಂಕಿಂಗೆ ಕರಕ್ಕೊಂಡು ಬಪ್ಪಗ ಆದರೂ ಹಳೆಮರಪ್ಪು ನೆಂಪಾವುತ್ತೋ – ಏನೋ ಹೇಳಿ ಯೋಚನೆ ಬಂತು ಅತ್ತೆಗೆ.

ದಿನಾ ಉದಿಯಪ್ಪಗ ರಿಕ್ಷ ಒಂದರ ಬಪ್ಪಲೆ ಮಾಡಿ, ಅದರ್ಲಿ ಮಾವನ ಕೂರುಸಿಗೊಂಡು ದಿನಾಗುಳೂ ಹೋಪ ವಿಲೇವಾರಿ ಮಾತಾಡಿಗೊಂಡತ್ತು.
ಮಾವ ಬೇಂಕಿಂಗೆ ಹೋಪಲೆ ಸುರು ಮಾಡಿದವು! ಅಂದು ಕೂದುಗೊಂಡಿದ್ದ ಜಾಗೆಯೇ ಕೊಡುಸಿದವು ಅವಕ್ಕೆ. ಅತ್ತೆಯುದೇ ಹೋಗಿ ಹತ್ತರೆ ಕೂದುಗೊಂಡತ್ತು.
ಅಂದ್ರಾಣ ಕೆಲವು ಜೆನಂಗೊ ಇತ್ತಿದ್ದವು. ಮತ್ತೆ ಕೆಲವು ಟ್ರಾನ್ಸುವರು ತೆಕ್ಕೊಂಡು ಹೋಯಿದವು.

~
ದಿನವೂ ಬೇಂಕಿಂಗೆ ಹೋಪದು, ರಿಕ್ಷಲ್ಲಿ. ಮಾವನೂ – ಅತ್ತೆಯೂ.
ಮದ್ಯಾನಕ್ಕೆ ಬುತ್ತಿ. ಅಲ್ಲೇ ಬೇಂಕಿನ ಕರೆಲಿ ಒಂದು ಕೋಣೆಲಿ ಅತ್ತೆ ಉಣುಸುದು. ಮಾವ ಉಂಬದು.
ಒಳುದ ಹೊತ್ತಿಲಿ ಮಾವನ ಕುರ್ಶಿಲಿ ಕೂಪದು. ಹೀಂಗೇ ಸುರು ಆತು ವೆವಸ್ತೆ. ಒಳುದವುದೇ ಒಳ್ಳೆತ ಸಹಕಾರ ಕೊಟ್ಟವು.

ಎಡೆಹೊತ್ತಿಲಿ ಒಂದೊಂದೇ ಪೈಲಿನ ತೆಗದು ತೆಗದು ಅತ್ತೆ ತೋರುಸುಲೆ ಸುರು ಮಾಡಿತ್ತು. ಅಂತೇ – ಮಕ್ಕೊ ನೋಡಿದ ಹಾಂಗೆ ನೋಡ್ಳೆ ಸುರು ಮಾಡಿದವು. ಜೆನಂಗೊ ಮಾತಾಡುಸಿರೆ ಮಾತಾಡ್ಳೆ, ಮೋರೆನೋಡಿ ನೆಗೆಮಾಡ್ಳೆ ಸುರುಮಾಡಿದವು.
ಅನಾರೋಗ್ಯ ಕಾರಣಂದ ಟ್ರಾನ್ಸುವರು ಬೇಡ ಹೇಳಿತ್ತಿದ್ದವು. ಹಾಂಗಾಗಿ ಬೇರೆದಿಕಂಗೆ ಹೋಪಲೆ ಎಡೆ ಇಲ್ಲೆ ಇದಾ..
~

ಮಾಣಿಗೆ ನಾಲ್ಕೊರಿಶ.
ಇದರೆಡಕ್ಕಿಲಿ ಒಂದರಿ ಊರಿಂಗೆ ಬಂದಿಪ್ಪಗ ಬಟ್ಟಮಾವನಕೈಲಿ ಸರಸ್ವತಿ ಪೂಜೆ ಮಾಡುಸಿ ವಿದ್ಯಾಭ್ಯಾಸ ಆರಂಭ ಮಾಡಿದವು. ಮಾಣಿ ಬಾರೀ ಚುರುಕ್ಕು. ಕಪ್ಪು ಸ್ಲೇಟು ಒಂದರ ತೆಗದು ಬರವಲೆ ಕಲುಶುಲೆ ಸುರುಮಾಡಿದವು ಮನೆಯೋರು.
ಅ ಹೇಳಿ ಬರದ್ದರ ಮೇಗೆ ಬರದು ಬರದು ಬರದು – ಬೆಳೀ ಚಕ್ಕುಲಿಯ ಹಾಂಗೆ ಮಾಡಿ ತಂದು ಅಮ್ಮಂಗೆ ತೋರುಸುಗು.
ಆ – ಬರದುಕೊಡ್ಳೆ ಅಂಬೆರ್ಪು ಮಾಡುಗು. ಸಣ್ಣ ಇಪ್ಪಗ ಕಲಿವದರ್ಲಿ ಭಾರೀ ಆಸಕ್ತಿ, ಅವನ ಅಪ್ಪನ ಹಾಂಗೇಡ.

ಮಾವ° ಈಸಿಚಯರಿಲಿ ಕೂದುಗೊಂಡಿದವು. ಕೈಲಿ ಒಂದು ಪೇಪರುದೇ ಪೆನ್ನುದೇ ಕೊಟ್ಟಿದು ಅತ್ತೆ. ಎಂತಾರು ನೆಂಪಪ್ಪದರ ಬರೆಯಲಿ ಹೇಳಿಗೊಂಡು. ಸುಮಾರು ದಿನ ಎಂತದೂ ಬರದ್ದವಿಲ್ಲೆ.
ಮತ್ತೆ ಮತ್ತೆ ಎಂತೆಂತದೋ ಬರವಲೆ ಗೊಂತಪ್ಪಷ್ಟು ಆತು.
ಪೆನ್ನು ಪೇಪರಿನ ಉಪಯೋಗ ಎಂತರ ಹೇಳಿ ಗೊಂತಪ್ಪಲೆ ಸುರು ಆತು.

ಆದರೆ ಕಲಿವ ವಿಶಯಲ್ಲಿ ಮಗನೇ ಅಪ್ಪನಿಂದ ಉಶಾರಿ!!!
ಎಷ್ಟೋ ಸರ್ತಿ ಹೊಸತ್ತರ ಹೇಳಿಕೊಟ್ರೆ ಅಪ್ಪಂಗೆ ಗೊಂತಪ್ಪ ಮೊದಲೇ ಮಗಂಗೆ ಗೊಂತಾಗಿದ್ದುಗೊಂಡಿತ್ತು.
~
ಮಾಣಿಗೆ ಐದೊರಿಶ.
ಅಕ್ಷರಮಾಲೆ,ಒಂದೆರಡು – ಎಲ್ಲ ಬರವಲೆ ಕಲ್ತುಗೊಂಡ. ತುಂಬಾ ತುಂಬಾ ಚುರುಕ್ಕು.
ಅದೇ ಸಮೆಯಲ್ಲಿ ಮಾವಂಗುದೇ ಅಕ್ಷರಾಭ್ಯಾಸ ನೆಡಕ್ಕೊಂಡು ಇತ್ತು. ಮಾವಂಗುದೇ ಏಬೀಸೀಡಿಯೋ, ಎಂತೆಲ್ಲ ಬರವಲೆ ಹೇಳಿಗೊಂಡು ಇತ್ತು ಅತ್ತೆ.
~

ಇದೆಲ್ಲ ನೆಡಕ್ಕೊಂಡು ಇಪ್ಪಗಳೇ, ಮಾವಂಗೆ ಮದ್ದು ಇತ್ತಿದಾ..
ಮಾನಸಿಕ ಶೆಗ್ತಿ ಜಾಸ್ತಿ ಅಪ್ಪಲೆ ಬೆಂಗುಳೂರಿಂದ. ಅದರ ನಿಲ್ಲುಸಿದ್ದವೇ ಇಲ್ಲೆ.
ಅದರ ಗುಣ ಕಾಂಬಲೆ ಸುರು ಆತೋ ಏನೋ- ರಜರಜ ಅಭಿವೃದ್ಧಿ ಕಂಡುಗೊಂಡು ಹೋತು.
ನಿತ್ಯ ಬೇಂಕಿಂಗೆ ಹೋದಿಪ್ಪಗ ಹತ್ತರೆ ಕೂದವಕ್ಕೆ ನಮಸ್ಕಾರ ಮಾಡುದು, ಏವದೋ ಒಂದು ಪೈಲಿನ ಓದುದು, ಚಪ್ಪಲಿ ತೆಗದು ಮಡಗಿ ಕಾಲುನೀಡಿ ಕೂದುಗೊಂಬದು – ಅಂದು ಹಾಂಗೇ ಕೂದುಗೊಂಡು ಇದ್ದದಡ- ಹೀಂಗೆಲ್ಲ ಒಂದೊಂದೇ ಸ್ವಂತದ ನಿರ್ಧಾರಂಗಳ ತೋರುಸುವ ಕಾರ್ಯಂಗಳ ಮಾಡಿದವು.

ಅಮ್ಮನ ದಿನಿಗೆಳಿ ಮಾತಾಡುಸುಲೆ ಸುರುಮಾಡಿದವು. ಅಪ್ಪನ ಗುರ್ತ ಹಿಡಿವಲೆ ಸುರು ಮಾಡಿದವು.
ಹೆಂಡತ್ತಿ-ಮಗನ ಗುರ್ತವೇ ಇಲ್ಲದ್ದ ಹಾಂಗೆ ಇತ್ತಿದ್ದವು. ಅತ್ತೆಗೆ ರಜ ಬೇಜಾರ ಆದರೂ, ಹೊಸನೆಂಪುಗೊ ಬಯಿಂದಿಲ್ಲೆ – ಹೇಳಿ ಡಾಗುಟ್ರು ಹೇಳಿದ ಮತ್ತೆ ಸಮಾದಾನ ಮಾಡಿಗೊಂಡವು!
ಅತ್ತೆಯ ನಿರಂತರ ಚಾಕಿರಿಂದಾಗಿ ಮತ್ತಾಣ ನೆಂಪುದೇ ಬಪ್ಪಲೆ ಸುರು ಆತು.
ಒಂದು ಶುಭಗಳಿಗೆಲಿ ನಿರ್ಮಲಾ.. ಹೇಳಿ ಅತ್ತೆಯ ದಿನಿಗೆಳಿದವು.
ಎಂತರ, ಇನ್ನೊಂದರಿ ದಿನಿಗೆಳೀ…. ಹೇಳಿ ಓಡಿಗೊಂಡು ಬಂತು ನಿರ್ಮಲತ್ತೆ.
ಎಷ್ಟು ಒರಿಷ ಆತು ಹೀಂಗೆ ದಿನಿಗೆಳಿಸಿಯೊಳದ್ದೆ.!

ನೆಮ್ಮದಿಯ ಬದುಕ್ಕು ನಂಬಿಗೊಂಡು, ಸಂಸಾರ ಮಾಡುವ ಯೋಚನೆಯ ಮಡಿಕ್ಕೊಂಡು ಬಂದ ನಿರ್ಮಲತ್ತೆಗೆ, ತನ್ನ ಗಂಡಂಗೆ ಸ್ಮೃತಿ ಇಲ್ಲದ್ದೆ ಆದ್ದದರ ಬಗ್ಗೆ ರಜ ಬೇಜಾರು ಆಯಿದು – ಆದರೂ ತನ್ನ ಇಷ್ಟದವಂಗೇ ಈ ತರ ಆಗಿಪ್ಪಗ ಅದರ ಸರಿ ಮಾಡೆಕ್ಕು ಹೇಳುವ ಶ್ರಮ ತುಂಬಾ ಇತ್ತು.
ಇರುಳು ಹಗಲು ಅದೇ ಧ್ಯಾನ. ಸರಿ ಆವುತ್ತೋ ಇಲ್ಲೆಯೋ ಹೇಳಿಯೂ ಸರಿ ಭರವಸೆ ಇಲ್ಲೆ- ಆದರೂ ತನ್ನ ಪ್ರೀತಿಮಾಡಿದವ ಅಲ್ಲದೋ – ಅರ್ದಲ್ಲಿ ಕೈ ಬಿಡ್ಳಿಲ್ಲೆ ಹೇಳಿ ಗಟ್ಟಿ ಮಾಡಿಗೊಂಡಿತ್ತಿದ್ದು.
ಅದೊಂದರಿ ನಿರ್ಮಲಾ.. ಹೇಳಿ ದಿನಿಗೆಳುವಗ ಪರಮಾನಂದ ಆತು ಅತ್ತೆಗೆ.
ತನ್ನ ಪ್ರೀತಿ ಮತ್ತೊಂದರಿ ಸಿಕ್ಕಿದ ಹಾಂಗೆ ಆತು. ನೆಮ್ಮದಿ, ಕುಶಿ, ಬೇಜಾರು – ಎಲ್ಲವುದೇ ಒಟ್ಟಿಂಗೆ ಆತು.
ಸೀತ ಹೋಗಿ ಅದರ ಅತ್ತೆಯ ಸೆರಗಿಂಗೆ ಕೂಗಿಯೊಂಡತ್ತು. ಅತ್ತೆಯುದೇ ಇನ್ನೊಂದು ಹೆಮ್ಮಕ್ಕಳೇ ಅಲ್ಲದೋ – ಅವಕ್ಕೆ ಎಲ್ಲ ಅರ್ತ ಆವುತ್ತು.
ಎಷ್ಟೋ ಸರ್ತಿ ಇದರ ಪರಿಸ್ಥಿತಿಯ ಗ್ರೇಶಿ ’ಚೇ, ಕಷ್ಟ..’ ಹೇಳಿ ಬೇಜಾರು ಮಾಡಿಗೊಂಡಿತ್ತಿದ್ದವಡ.
~

ಅತ್ತೆಯ ಗುರ್ತ ಹಿಡಿವದರ ಒಟ್ಟಿಂಗೇ, ಹಳೆ ವಿದ್ಯಾಭ್ಯಾಸ, ಅಂಬಗಾಣ ಜೀವನ, ಕೆಲಸದ ಹುಡುಕಾಟ, ಸಂಸಾರ, ಕೆಲಸ, ಬೇಂಕು – ಎಲ್ಲವುದೇ ಗೊಂತಪ್ಪಲೆ ಸುರು ಆತು – ಮಗನ ಒಬ್ಬನ ಬಿಟ್ಟು. ಮಗ ತನ್ನ ಒಟ್ಟಿಂಗೆ ಸ್ಪರ್ಧೆಗೆ ಬೇಕಾಗಿ ಬಂದ ಒಬ್ಬಮಾಣಿ ಹೇಳಿ ಮಾವ ತಿಳ್ಕೊಂಡಿತ್ತಿದ್ದವೋ ಏನೋ – ಏವಾಗಳೂ ಮಗನ ಬಗ್ಗೆ ಪಿಸುರು.

ಬೇಂಕಿಲಿಯುದೇ ಹಾಂಗೆ – ಕ್ರಮೇಣ ಬೇಂಕಿನ ಅರ್ತ ಅಪ್ಪಲೆ ಸುರು ಆತು!
ಪೈಲುಗಳ ನೋಡುವಗ ಅದರ ಹಿಂದಾಣ ಒಂದೊಂದೇ ವಿಶಯಂಗೊ – ನಿರ್ಮಲತ್ತೆಗೆ ಪೋನು ಮಾಡಿಗೊಂಡಿದ್ದದು, ಮದುವೆ ಆದ್ದು, ಸಂಸಾರ ಮಾಡಿದ್ದು, ಹೊತ್ತಪ್ಪಗ ಹೋಟ್ಳಿಂಗೆ ಹೋದ್ದು, ಪಾರ್ಕಿಲಿ ಜಗಳ ಮಾಡಿದ್ದು, ಪ್ರೀತಿಲೇ ಜಗಳಮಾಡಿಗೊಂಡದು, ಶುಭಶುದ್ದಿ ಬಂದದು, ಹೆರ್ಲೆ ಕಳುಸಿದ್ದು, ಮಗ ಹುಟ್ಟಿದ್ದು – ಎಲ್ಲವುದೇ ನೆಂಪಾತು…!!!
ಕೂಡ್ಳೇ ಮಗನ ನೋಡೆಕ್ಕು ಹೇಳಿ ಕಂಡತ್ತು. ಮನೆಗೆ ಆ ದಿನ ಬೇಗ ಬಂದು ನೋಡಿದವು. ತುಂಬ ಮಾತಾಡಿದವು. ಮುದ್ದುಮುದ್ದು ಕೊಂಗಾಟಲ್ಲಿ.
ನಿನ್ನೆ ಒರೆಗೆ ಜಗಳಮಾಡಿದ ಈ ಅಪ್ಪ ಇಂದೆಂತ ಹೀಂಗೆ ಮಾತಾಡ್ತವಪ್ಪಾ -ಹೇಳಿ ಮಾಣಿಗೆ ಆಶ್ಚರ್ಯ ಅಪ್ಪಲೆ ಸುರು ಆತು.

ಹಳೇ ಗುರ್ತಂಗೊ ನೆಂಪಾತು. ಇದರೊಟ್ಟಿಂಗೆ ಹಳೆವೆವಹಾರಂಗೊ, ಜಾಗೆ ತೆಗದ್ದು,ಅಭಿವುರ್ದಿ ಮಾಡಿದ್ದು, ಅಣ್ಣ,ಮನೆ, ಸಂಬಂಧಿಕರು – ಎಲ್ಲೊರುದೇ ನೆಂಪಾದವು.
~
ಮೊದಲಾಣಷ್ಟು ಚುರುಕ್ಕು ಮತ್ತೆಂದಿಂಗೂ ಆಯಿದವೇ ಇಲ್ಲೆ. ಆದರೂ ಒಬ್ಬ ಸಾಮಾನ್ಯನ ಮಟ್ಟಕ್ಕೆ ಬಂದು ನಿಂದಿತ್ತಿದ್ದವು.
ರಜ್ಜ ಸಮಯಲ್ಲಿ ಊರಿಂಗೆ ಟ್ರಾನ್ಸುವರು ತೆಕ್ಕೊಂಡು ಬಂದು ಸೇರಿದವು. ನೆಮ್ಮದಿಲಿ ಬದುಕ್ಕಿದವು.
ಈಗ ಓ ಅಲ್ಲಿ ಬೆಳ್ತಂಗಡಿಲಿ ಮನೆ ಮಾಡಿ ಚೆಂದಕಿದ್ದವು. ಮಗಂಗೆ ಕೆಲಸ ಸಿಕ್ಕುತ್ತ ಏರ್ಪಾಡಿಲಿ ಇದ್ದವು.
ಅವರ ಹೆರಿಯೋರು ತೀರಿಗೊಂಡಿದವು. ಅದರ ಬೇಜಾರದ ಸಮೆಯಲ್ಲಿ ಕಿಲಿಕಿಲಿ ನೆಗೆಮಾಡಿ ಸಂಗಾತಿ ಆಗಿದ್ದ ಆ ಮಗ ಈಗ ಕೆಲಸಕ್ಕೆ ದೂರ ಹೋಪಗ ಬೇಜಾರಾವುತ್ತು. ಈಗ ಅತ್ತೆ-ಮಾವ ಇಬ್ರೇ ಇಪ್ಪದು ಮನೆಲಿ.
ನಿರ್ಮಲತ್ತೆ ಕುಶೀಲಿ ಹಳೆ ನೆಂಪುಗಳ ಮೆಲುಕು ಹಾಕುತ್ತು, ಒಬ್ಬನೇ ಇಪ್ಪಗ.
~

ಇಲ್ಲಿ ಮುಖ್ಯವಾಗಿ ಗಮನುಸೆಕ್ಕಾದ್ದು ಎಂತರ ಹೇಳಿರೆ, ನಿರ್ಮಲತ್ತೆಯ ನಿರ್ಮಲ ಮನಸ್ಸು.
ತನ್ನ ಒಂದು ಕಾಲಲ್ಲಿ ಪ್ರೀತಿಮಾಡಿಗೊಂಡಿತ್ತಿದ್ದವು – ಹೇಳ್ತ ಏಕೈಕ ಕಾರಣಲ್ಲಿ ಆ ಮಾವನ ತನ್ನ ಸ್ವಂತ ಮಗುವಿನ ಹಾಂಗೇ ಆರೈಕೆ ಮಾಡಿದ್ದಲ್ಲದೋ – ಅದರ ಮೆಚ್ಚೆಕ್ಕು.
ಮಾನಸಿಕವಾಗಿ ಎಂತದೂ ಸ್ಥಿಮಿತ ಇಲ್ಲದ್ದ ಆ ವೆಗ್ತಿಯ ಹೂಗಿನ ಹಾಂಗೆ ಬೆಳೆಶಿ, ಹಟಕಟ್ಟಿ ಮತ್ತೆ ಸಾಮಾನ್ಯ ಮನುಷ್ಯ ಆಗಿ ಮಾಡಿತ್ತಲ್ಲದೋ – ಅದರ ಮೆಚ್ಚೆಕ್ಕು.
ತಾನು ಆರ ಅವಲಂಬುಸಿದ್ದೋ, ಆ ವೆಗ್ತಿ ತನ್ನ ಅವಲಂಬುಸಿಪ್ಪಗ, ತನ್ನ ಅಷ್ಟೂ ಸುಖವ ಬಿಟ್ಟು ಮನೆಯ ನೆಡೆಶಿದ್ದಲ್ಲದೋ – ಅದರ ಮೆಚ್ಚೆಕ್ಕು.
ಗೆಂಡನೇ ಮಗು ಆಗಿ ಬಿಟ್ಟಪ್ಪಗ ಕೈಚೆಲ್ಲದ್ದೆ, ಎದುರು ನಿಂದು ಮನೆ ನಡೆಶಿತ್ತು. ಗೆಂಡಂಗೆ ಸರಿಯಾಗಿ ಶಕ್ತಿ ಬಂದಪ್ಪಗ ಮತ್ತೆ ಜೆವಾಬ್ದಾರಿ ಕೊಟ್ಟತ್ತು, ಈ ಸಾಂಸ್ಕೃತಿಕ ಮನಸ್ಸು – ನಿಜವಾಗಿಯೂ ಅದರ ಮೆಚ್ಚಲೇ ಬೇಕು.
~

ಮಾಷ್ಟ್ರುಮಾವನ ಮಗನ ಮದುವೆ ಸುದಾರಿಕೆಯ ಗೌಜಿ! ದಿಬ್ಬಣದ ವೇನಿಂಗೆ ಹತ್ತುತ್ತ ಗಡಿಬಿಡಿ.
ಆ ಸಂದರ್ಬಲ್ಲಿ ಕೊಳಚ್ಚಿಪ್ಪು ಬಾವ°, ಅಜ್ಜಕಾನ ಬಾವ° ಎಲ್ಲ ಇದ್ದುಗೊಂಡು ಮಾತಾಡುವಗ, ಕಾವೇರಿಕಾನದ ಗುರಿಕ್ಕಾರ ಮಾವಂಗೆ ಕಾದೊಂಡಿಪ್ಪಗ ಮಾತಾಡಿದ ಶುದ್ದಿ ಇದು!
ಮದಲಿಂಗೆ ಕಾಂಬುಅಜ್ಜಿ ಇತ್ತಿದ್ದವು. ಈಗ ಆರಿದ್ದವು ಹಾಂಗಿಪ್ಪವು? – ಹೇಳ್ತ ಮಾತು ಬಪ್ಪಗ ಈ ಶುದ್ದಿ ಬಂದದು. ಅಂದೂ ಕಾಣ್ತ, ಇಂದೂ ಕಾಣ್ತು, ಎಂದೆಂದಿಂಗೂ ಕಾಂಗು – ಕಾಂಬು ಅಜ್ಜಿಯಂತವರ – ಹೇಳಿ ಅಜ್ಜಕಾನಬಾವ° ಹೇಳಿದ°.
ಈಗ ನಾವು ಹೋಪ ಮದುವೆಲಿದೇ ಒಂದು ಕಾಂಬುವೇ ಬರಳಿ – ಹೇಳಿ ಕೊಳಚ್ಚಿಪ್ಪುಬಾವ ಹೇಳಿಕ್ಕಿ, ಒಂದು ಉಸುಲು ತೆಗದು ವೇನು ಹತ್ತಿದ°!

ಒಂದೊಪ್ಪ: ಬುದ್ಧಿ ಇದ್ದೋ ಇಲ್ಲೆಯೋ, ಪ್ರೀತಿ ಇಪ್ಪದು ಮುಖ್ಯ. ಎಂತ ಹೇಳ್ತಿ?
ಮನಸ್ಸಿನ ಸ್ಥಿಮಿತ ಕಳಕ್ಕೊಂಡರೂ ಪ್ರೀತಿಯ ಸೆಳೆತಲ್ಲಿ, ಆರಯಿಕೆಲಿ ಎಲ್ಲವೂ ಸಮಸ್ಥಿತಿಗೆ ಬಕ್ಕು.

ಸೂ: ಈ ನಿರ್ಮಲತ್ತೆಯೂ, ನಿಜವಾದ ನಿರ್ಮಲತ್ತೆಯೂ ಬೇರೆಬೇರೆ. ಶಿವಮಾವನೂ ಹಾಂಗೇ.! 🙂


cheap moncler jackets

19 thoughts on “ಬುದ್ದಿವಂತ ಮಗನೂ, ಪ್ರೀತಿಯ ಗೆಂಡನೂ…!

  1. ಅಬ್ಫಾ! ಒದುವಗ ಬೇಜಾರಾತು. ನಿಮ೯ಲತ್ತೆಯ ಹೃದಯ ನಿಮ೯ಲವಾಗಿದ್ದು. ಗ್ರೇಟ್!!

  2. ಭಾರಿ ಲಾಯಿಕದ ಕತೆ ಓದುವಗ ಮನಸ್ಸಿಂಗೆ ಬೇಜಾರ ಆದರೂ, ಸುಖಾಂತ್ಯ ಇದ್ದದು ಸಂತೋಷ ತಂದತ್ತು.
    ಒಪ್ಪಣ್ಣಂಗೆ ಕತೆದೆ ಬರವಲೆ ಬತ್ತು ಲಾಯಿಕಲ್ಲಿ ಹೇಳಿ ಗೊಂತಾತು.
    ~ಸುಮನಕ್ಕ.

  3. ಒಪ್ಪಣ್ಣ, ಈ ನಿರ್ಮಲತ್ತೆ ನಿಜವಾದ ಜೀವನಲ್ಲಿ ಇಪ್ಪ ಒಂದು ವೆಗ್ತಿಯೇ ಆಗಿದ್ದರೆ ಅವಕ್ಕೆ ಎನ್ನ ಕೋಟಿ ಕೋಟಿ ಪ್ರಣಾಮಂಗ…
    ಅವರ ಧೈರ್ಯ, ಶ್ರದ್ಧೆ, ತಾಳ್ಮೆ, ಎಲ್ಲಾ ನವಗೆ ಬೇಕಾದದ್ದೇ.. ಅಷ್ಟು ದೀರ್ಘ ಸಮಯಲ್ಲಿ ಅವಕ್ಕೆ ಸ್ಫೂರ್ತಿ ಕೊಟ್ಟು ಅವರ ಒಟ್ಟಿನ್ಗೆ ಇದ್ದದು ಆರು..?
    ಫಲಿತಾಂಶ ಕಾಣದ್ದ ಸಂದರ್ಭಲ್ಲಿ ಕೈ ಚೆಲ್ಲಿ ಕೂದು ಹೋವುತ್ತು.. ಸಾಲದ್ದಕ್ಕೆ ಜೆನಂಗಳ ಕಿರಿ ಕಿರಿ ಮಾತುಗಳುದೆ… ಆ ಹೊತ್ತಿಂಗೆ ತಾಂಗು ಕೊಡ್ಲೆ ಜೆನಂಗ ಬೇಕಾವುತ್ತು..
    ಆಗಲಿ..,ಅಷ್ಟು ವರ್ಷ ಅವು ಪಟ್ಟ ಕಷ್ಟ ಫಲ ಕಂಡದು ಕೊಶಿ ಆತು… ಲಾಯಕ ಆಯಿದು ಒಪ್ಪಣ್ಣ..

  4. ಎನ್ನ ಮೂಲ ವಳಕಟ್ಟೆ ಹೇಳಿ ವಿಟ್ಲದ ಹತ್ತರೆ (ಕೇಪು ಗ್ರಾಮ). ಈಗ ಇಪ್ಪದು ಅಮೆರಿಕಲ್ಲಿ, ಕೆಲಸದ ಮೇಲೆ ಬಂದದು. ಆನು ಇಲ್ಲಿಗೆ ಬಂದು ಸುಮಾರು ಹತ್ತು ವರ್ಷವೇ ಆತು.

  5. ಓದಿ ಎನಗೆ ಕಣ್ಣೀರೇ ಉಕ್ಕಿ ಬಂದತ್ತು. ಗಂಡ-ಹೆಂಡತಿ ಹೇಳಿರೆ ಹೀಂಗೇ ಇರೆಕ್ಕಾದ್ದು ಹೇಳುದಕ್ಕೆ ಇದಕ್ಕಿಂಥ ಬೇರೆ ಉದಾಹರಣೆ ಸಿಕ್ಕ ಗ್ಯಾರಂಟಿ. ಸಪ್ತಪದಿ ತುಳಿವಾಗ ಕೊಟ್ಟ ಭಾಷೆ ಎಲ್ಲ ರೀತಿಲ್ಲಿ ಲೋಪ ಇಲ್ಲದೆ ನಿರ್ವಹಿಸಿದ್ದವು ನಿರ್ಮಲತ್ತೆ.

    – ಉಷೈ.

    http://ushai.blogspot.com

    1. ಕೊಶೀ ಆತು ನಿಂಗಳ ಒಪ್ಪ ನೋಡಿ!
      ಅದಪ್ಪು,ನಿಂಗಳ ಬಗ್ಗೆ ಒಂದು ರಜ್ಜ ಹೇಳ್ತಿರೋ – ಬೈಲಿಂಗೆ ಗುರ್ತ ಆಗಲಿ ನಂಗಳ..

  6. ಈ ಕತೆಯ ಓದಿಯಪ್ಪಗ ಮನಸ್ಸಿಲ್ಲಿ ಬಪ್ಪ ಭಾವನೆಯನ್ನೇ ಕರುಣ ರಸದ ಅನುಭವ/ಅಭಿವ್ಯಕ್ತಿ ಹೇಳಿ ಹೇಳ್ಳಕ್ಕೋ?

  7. ಇದು ನಿಜವಾದ ಪ್ರೇಮ ಕತೆಯೇ ಸರಿ. ನಿರ್ಮಲತ್ತೆಗೆ ಗಂಡನ ಮೇಲಿನ ಪ್ರೇಮ ಬರೇ ದಾರೆ ಎರೆಶಿಗೊಂಬದರಲ್ಲಿ ಮುಗುದ್ದಿಲ್ಲೆ. ಸದಾ ಅವರ ಏಳಿಗೆಯನ್ನೇ ಬಯಸಿತ್ತು, ಅದಕ್ಕಾಗಿ ತನ್ನ ಎಲ್ಲಾ ಪ್ರೀತಿಯನ್ನೂ ದಾರೆ ಎರದತ್ತು.
    ಒಪ್ಪಣ್ಣನ ಬರಹ, ಬರೇ ಪ್ರೇಮ ಕತೆಯಾಗಿ ಮಾತ್ರ ಬಯಿಂದಿಲ್ಲೆ, ಒಂದು ಮನಃಶಾಸ್ತ್ರ ಕತೆಯಾಗಿಯೂ ಬಂತು. ಇಲ್ಲಿ ಶಿವ ಮಾವ ಹುಷಾರಪ್ಪಲೆ ನಿರ್ಮಲತ್ತೆಯ ಪ್ರೀತಿಯೇ ಕಾರಣ ಹೇಳಲೆ ಅಕ್ಕು. ಮಾವ ಹುಷಾರಿಲ್ಲದ್ದಿಪ್ಪಗ ಗಂಡನನ್ನೂ ಮಗುವಿನ ಹಾಂಗೆ ನೋಡಿಗೊಂಡು, ಎಲ್ಲಾ ಕಷ್ಟಂಗಳನ್ನೂ ಎದುರಿಸಿಗೊಂಡು, ಮಗನನ್ನೂ ಮೇಲಕ್ಕೆ ತಂದು, ತ್ಯಾಗ ಮೂರ್ತಿಯಾಗಿ, ಸತ್ಯವಾನನ ಸಾವಿತ್ರಿಯೇ ಆತು.

  8. ಒಪ್ಪಣ್ಣ, ಈ ಲೇಖನಕ್ಕೆ ಹೇಂಗೆ ಒಪ್ಪ ಕೊಡೆಕು ಹೇಳ್ತದು ಎನಗರಡಿತ್ತಿಲ್ಲೆ..
    ಆದರೆ ಒಂದು ಮಾತ್ರ ಹೇಳುವೆ… she (ನಿರ್ಮಲತ್ತೆ) is simply great…

  9. ಒಪ್ಪಣ್ಣಾ… ಅಬ್ಬಾ ಹಾರ್ಟ್ ಟಚ್ಚ್ಜಿಂಗ್.. ಕೆಲವೊಂದು ದಿಕ್ಕೆ ಬೇಜಾರಾತು.. 🙁 ಕೆಲ್ವೊಂದು ದಿಕ್ಕೆ.. ಖುಶಿ ಆತು.. 🙂
    ಒಟ್ಟಿಲಿ.. ಸೂಪರ್ ಕಥೆ…!!

  10. ಬಹಳ ಸಣ್ಣ ವಿಷಯಕ್ಕೆಲ್ಲ ಮದುವೆ ಸಂಬಂಧವನ್ನೆ ಕಳದು ಡೈವೊರ್ಸು ಕೊಡುತ್ತ ಈಗಾಣ ಜವ್ವನಿಗರು, ಜವ್ವನ್ತಿಗೊ ಅವಶ್ಯ ಓದೆಕಾದ ಉತ್ತಮ ಕಥೆ. ಇದು ಕಥೆ ಖಂಡಿತ ಅಲ್ಲ, ನಿಜವಾದ ಘಟನೆ. ಎಂಗಳ ಒಟ್ಟಿಂಗೆ ಕೆಲಸ ಮಾಡಿಯಂಡು ಇತ್ತಿದ್ದ ಒಬ್ಬ ಉತ್ತಮ ಮ್ಯಾನೇಜರು ಒಬ್ಬ ಇದೇ ರೀತಿ ಆಗಿ, ಹತ್ತು ವರ್ಶ ಆದರೂ ಈಗಲೂ ಹಾಂಗೆ ಇದ್ದ, ಹೆಂಡತ್ತಿಯನ್ನು ಗುರ್ತು ಹಿಡಿತ್ತ ಇಲ್ಲೆ. ಎಂತವಂಗೂ ಕಣ್ಣೀರು ಬರುಸುತ್ತ ಪ್ರಸಂಗ.

    ಐದು ಆರು ವರ್ಷಂಗಳ ನಂತರ ಶಿವ ಮಾವಂಗೆ ರಜ ಗುಣಆಗಿ ಅದೊಂದು ದಿನ ನಿರ್ಮಲತ್ತೆಯ ಹೆಸರು ಹೇಳಿ ದಿನಿಗೇಳಿದ ಸನ್ನಿವೇಶ ಮನ ಕಲಕಿತ್ತು. ಗ್ರಹಿಸಿ ಕಣ್ಣೀರು ಬಂತು. ……. “ನಿರ್ಮಲಾ. ಎಂತರ, ಇನ್ನೊಂದರಿ ದಿನಿಗೆಳೀ…. ಹೇಳಿ ಓಡಿಗೊಂಡು ಬಂತು ನಿರ್ಮಲತ್ತೆ. ಎಷ್ಟು ಒರಿಷ ಆತು ಹೀಂಗೆ ದಿನಿಗೆಳಿಸಿಯೊಳದ್ದೆ.!” …….
    ನಿರ್ಮಲತ್ತೆಗೆ ಆ ಕ್ಷಣ ಅದೆಷ್ಟು ಕೊಶಿ ಆಗಿಕ್ಕು ಅಲ್ಲದೋ ?

    ಒಪ್ಪಣ್ಣ , ಇದರ ಕಥಾ ಸ್ಪರ್ಧೆಗೆ ಕಳುಸು, ಖಂಡಿತ ಬಹುಮಾನ ಬಕ್ಕು.

    1. ಮಾವಾ..
      ನಿಂಗೊ ಇಷ್ಟು ಹೇಳಿದ್ದು ಅದುವೇ ಒಂದು ಬಹುಮಾನ..
      ಇದಕ್ಕಿಂತ ಹೆಚ್ಚು ಇನ್ನೆಂತ ಬೇಕು ಒಪ್ಪಣ್ಣಂಗೆ…???

      ಶುದ್ದಿ ಕೊಶಿ ಆತಾ?

  11. ಮಲಯಾಳಲ್ಲಿ ಒಂದು ಸಿನೆಮಾ ನೋಡಿದ್ದೆ ಆನು ‘ತನ್ಮಾತ್ರ’ ಹೇಳಿ. ಆ ಕಥೆಲಿ ಮೋಹನಲಾಲ್ ಹೀರೋ. ಕಾಲಕ್ರಮೇಣ ಮಗನ ಐ.ಎ.ಎಸ್ ಮಾಡುಸೆಕ್ಕು ಹೇಳಿ ಇದ್ದಿದ್ದ ಮೋಹನ್ ಲಾಲಿಂಗೆ ಅದೆಂಥದೋ ಮರತ್ತು ಹೋಪ ಕಾಯಿಲೆ ಅಡ ‘ಅಲ್ಜೀಮರ್ಸ್’ ಹಿಡಿತ್ತು. ಅದ್ಭುತ ಅಭಿನಯ. ಈ ಕಥೆ ಓದುವಗ ಎನಗೆ ಆ ಸಿನೆಮಾ ನೆಂಪಾತು.

  12. ಜೀವನದ ಏರಿಳಿತಂಗಳ ಲಾಯ್ಕ ವಿವರ್ಸಿದ್ದೆ ಒಪ್ಪನ್ನೋ…behind every successful man there is a women behind …ಹೇಳಿ ಇದ್ದಲ್ದೋ ಗಾದೆ ..
    at least ತುಂಬಾ ಕಷ್ಟದ ಸಮಯಲ್ಲಿದೇ ನಮ್ಮ ಬಿಡದ್ದೆ constant support ಕೊಡುವ ನಮ್ಮ ಜನಂಗಳ ಬಗ್ಗೆ ನವಗೆ ಹೆಮ್ಮೆ…ಅನ್ನಿಸುತ್ತು..
    hatts off…. olle topic…olle presentation….. 🙂

    1. ಗೀತತ್ತೇ..
      ನಿಂಗೊ ಇಂಗ್ಳೀಷಿಲಿ ಹೇಳಿದ್ದು ಸರಿ ಇದ್ದಡ, ಆಚಕರೆ ಮಾಣಿ ಹೇಳಿದ… 😉

      ಬೈಲಿಂಗೆ ಬಂದುಗೊಂಡು ಇರಿ…!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×