ಮಾಷ್ಟ್ರುಮಾವನ ಮಗಳು ಸಣ್ಣ ಇಪ್ಪಾಗ ‘ಚೆಸ್ ಆಡಿದ’ ಶುದ್ದಿ..!

ಪ್ರಾಯ, ಜಾತಿ, ವೃತ್ತಿ ಇವುಗಳ ಮೀರಿ ಚದುರಂಗ(ಚೆಸ್ಸು) ಹೇಳ್ತದು ಎಲ್ಲೋರಿಂಗೂ ಅರಡಿಗಾದ-ಎಡಿಗಾದ ಆಟ.

ಬೈಲಿಲಿಯೂ ಆಡ್ತೋರ ಚೆಸ್ಸು ಸಂಕೆ ಧಾರಾಳ ಇದ್ದು!
ದೊಡ್ಡಬಾವಂದೇ-ದೊಡ್ಡಮಾವಂದೇ ಚೆಸ್ ಆಡುಗು ಧಾರಾಳ.
ಅಪುರೂಪಕ್ಕೆ ಮೂಡುಬಂತು ಕಂಡ್ರೆ ಕರೆಂಟು ಹೋದರೂ, ಕರೆಂಟು ಬಂದರೂ – ಆರಾರೊಬ್ಬ ಸೋಲುವನ್ನಾರ ನಿಲ್ಲ.
ಒಂದೊಂದರಿ ದೊಡ್ಡಕ್ಕ°-ದೊಡ್ಡತ್ತೆ ಪರಂಚಲೆ ಸುರುಮಾಡಿರೆ ಮಾಂತ್ರ ಇವಿಬ್ರೂ ಸೋತು ಆಟ ನಿಂಬದೂ ಇದ್ದು! 😉
ಅದಿರಳಿ.
ಮಣಿಮುಂಡಮಾಣಿ ಕೋಲೇಜಿಂಗೆ ಹೋಗಿಂಡಿದ್ದಿಪ್ಪಾಗ ಚೆಸ್ ಆಡಿ ಎಷ್ಟು ಪ್ರೈಸು ಬಾಚಿದ್ದನೋ, ಅವನ ಕ್ಳಾಸಿಲಿದ್ದಿದ್ದ ಕೇವಳದಣ್ಣಂಗೂ ಈಗ ನೆಂಪಿರ.
ಎಷ್ಟಾರೂ ಅದು ನಮ್ಮ ದೇಶದ್ದೇ ಅಲ್ಲದೋ – ಹಾಂಗಾಗಿ, ನಮ್ಮ ನೆತ್ತರಿಲೇ ಇರ್ತು ಆ ಆಟದ ಬಗ್ಗೆ ಆಸಗ್ತಿ.
~
ಈ ಚೆಸ್ಸು ಹೇಳುವಗ ಬೈಲಿಲೇ ನೆಡದ ಒಂದು ಬಾಲ್ಯದ ಘಟನೆ ನೆಂಪಾವುತ್ತು ಒಪ್ಪಣ್ಣಂಗೆ.
ಈ ವಾರ ಅದನ್ನೇ ಹೇಳುವೊ° ಕಂಡತ್ತು; ಆಗದೋ?
ಇದೆಂತ ಭಾರೀ ಅಪುರೂಪದ, ಭಯಂಕರ ವಿಶೇಷದ ಶುದ್ದಿ ಏನಲ್ಲ.
ಎಲ್ಲ ಮನೆಲಿಯೂ, ಎಲ್ಲ ದಿಕ್ಕೆಯೂ ಆಗಿಂಡಿದ್ದತ್ತು ಮದಲಿಂಗೆ; ಈಗೀಗ ಕಾಂಬಲೆ ರಜ ಅಪುರೂಪ ಹೇಳ್ತದು ಸಂಗತಿ ಅಷ್ಟೆ.

ಅಂದೊಂದರಿ ಅರ್ಗೆಂಟಿನ ಒಪ್ಪಕ್ಕ° ಚಿಕ್ಕು ಹಂಚಿದ ಶುದ್ದಿಯ ಬೈಲಿಲಿ ನಾವು ಮಾತಾಡಿದ್ದು ನೆಂಪಿದ್ದೋ?
ಇಲ್ಲದ್ದರೆ ಒಂದರಿ ನೆಂಪುಮಾಡಿಕ್ಕಿ (ಸಂಕೊಲೆ)
ಆ ಶುದ್ದಿ ನೆಂಪಪ್ಪಗ ಒಪ್ಪಣ್ಣಂಗೆ ಈ ಶುದ್ದಿಯೂ ನೆಂಪಪ್ಪಲಿದ್ದು.
ಎಂತ್ಸಕೇ ಹೇಳಿತ್ತುಕಂಡ್ರೆ – ಎರಡುದೇ ಸಾದಾರ್ಣ ಒಂದೇ ಕಾಲಘಟ್ಟಲ್ಲಿ ಆದ್ಸು, ಎರಡುದೇ ಹತ್ತರತ್ತರೆ ಒಂದೇ ನಮುನೆ ವಿಶಯಂಗೊ!
~
ಸುಮಾರೊರಿಶ ಮದಲಾಣ ಸಂಗತಿ, ಮಾಷ್ಟ್ರುಮಾವನ ಮಗಳು ಸಣ್ಣ ಕೂಸು.
ಈಗ ಅದು ಈಷ್ಟೆತ್ತರ ಆಗಿ ರಾಮಜ್ಜನ ಕೋಲೇಜಿಂಗೆ ಹೋವುತ್ಸು; ಅದಿರಳಿ.
ಮದಲಿಂಗೆ – ಸಣ್ಣ ಇಪ್ಪಗ ಮಹಾ ಗೆಂಟು. ಗೆಂಟು ಅಲ್ಲ, ಘೆಂಟು!  ಘೆಂಟು ಮಾಂತ್ರ ಅಲ್ಲ, ಅರ್ಗೆಂಟುದೇ!!

ಅರ್ಗೆಂಟಿಂಗೆ ಉದಾಹರಣೆ ಬೇಕಾದಷ್ಟಿದ್ದು. ಸಾಮಾನ್ಯ ಎಲ್ಲೋರಿಂಗೂ ಒಂದಲ್ಲ ಒಂದು ಕತೆ ನೆಂಪಿಕ್ಕು.

ಸರೀ ಆಡಿರೆ ಹದಿನಾರೇ ಸರ್ತಿಲಿ ಎದುರಾಣ ಎಲ್ಲಾ ಕಾಲಾಳುಗಳ ಕಡಿಗು ಆ ಕೂಸು!

ಒಪ್ಪಣ್ಣಂಗೆ ಪಕ್ಕನೆ ನೆಂಪಪ್ಪದೊಂದಿದ್ದು, ಬುತ್ತಿಯ ಸಂಗತಿ!
ಇದಾ, ಶಾಲಗೆ ಹೋಪಲೆ ಇನ್ನೂ ಸುರುಮಾಡಿದ್ದಿಲ್ಲೆ ಅದು, ಸಣ್ಣ ಪ್ರಾಯ ಹೇಳಿಗೊಂಡು.
ಆದರೆ, ಅದರ ಇಬ್ರು ಅಣ್ಣಂದ್ರಿಂಗೆ ಶಾಲಗೆ ಹೋಗದ್ದೆ ಕಳಿಯ. ಶಾಲೆಲಿ ಉಣ್ಣದ್ದೆಯೂ ಕಳಿಯ.
ಹಾಂಗೆ, ಶಾಲಗೆ ಕೊಂಡೋಪಲೆ ಒಂದೊಂದು ಬುತ್ತಿಪಾತ್ರ ಇದ್ದತ್ತಿದಾ, ಅವರದ್ದು ಹೇಳಿಗೊಂಡು.
ಅದೆಂತಕೆ ಉಪಯೋಗ -ಹೇಳ್ತದು ಗೊಂತಪ್ಪಲೂ ಪುರುಸೊತ್ತಿಲ್ಲೆ, “ಎನಗೂ ಒಂದು ಬುತ್ತಿ ಆಯೇಕು” ಹಟ ಮಾಡಿದ್ದತ್ತು.
ಇದರ ಬೊಬ್ಬೆ ತಡೆಯದ್ದೆ ಮತ್ತಾಣ ಸರ್ತಿ ಪೇಟಗೆ ಹೋಗಿ ಬಪ್ಪಗ ಚೆಂದದ ಸಣ್ಣ ಬುತ್ತಿ ಅದಕ್ಕೂ ತಂದುಕೊಟ್ಟಿದವು ಮಾಷ್ಟ್ರುಮಾವ°!
ಮಧ್ಯಾನ್ನದ ಊಟವ ಆ ಕುಂಞಿ ಬುತ್ತಿಲಿ ತುಂಬುಸಿಗೊಂಡು – ಹಟ್ಟಿ ಬೈಪ್ಪಾಣೆಲಿ ಕೂದು ತಣ್ಕಟೆ ಉಂಡಿಕ್ಕಿ ಬಕ್ಕು ಅದು. ಹಾಂಗಿದ್ದ ಘೆಂಟು!
ಈಗ ಬುತ್ತಿ ಊಟ ಕೊಟ್ರೂ ಬೇಡ ಅದಕ್ಕೆ! 😉
– ಈ ನಮುನೆ ಉದಾಹರಣೆ ರಾಶಿಗೊ ಅದರ ಅರಡಿವೋರು ನೆಂಪುಮಾಡಿಕೊಡುಗು ಬೇಕಾರೆ.
~

ಮಾಷ್ಟ್ರುಮಾವನ ಇಬ್ರು ದೊಡ್ಡ ಮಕ್ಕೊಗೆ ಹೋಲುಸಿರೆ ಪ್ರಾಯಲ್ಲಿ ಈ ಕೂಸು ತುಂಬ ಸಣ್ಣ.
ಇಬ್ರು ಮಕ್ಕಳೂ ಶಾಲೆಂದ ಬಂದು ಓದಿಬರೆತ್ಸು ಮುಗುದ ಮತ್ತೆಯೋ – ರಜೆಯ ಎಡೆ ಹೊತ್ತಿಲಿಯೋ – ಚೆಸ್ಸು ಆಡಿಗೊಂಡಿತ್ತವು.
ಒಂದೋ ಅವಿಬ್ರೇ ಆಡಿಂಗು, ಅಲ್ಲದ್ದರೆ ಮಾಷ್ಟ್ರಮನೆಅತ್ತೆಯ ಹತ್ತರೆಯೋ, ಈಚಮನೆ ಬಾವನ ಹತ್ತರೆಯೋ, ಆಚಮನೆ ದೊಡ್ಡಣ್ಣನ ಹತ್ತರೆಯೋ – ಅಂತೂ ಚೆಸ್ಸು ಆಡುಗು.

ಎದುರಾ ಎದುರು ಮೋರೆ ಹಾಕಿಂಡು, ಮವುನಲ್ಲಿ ಕೂದಂಡು ಏಕಾಗ್ರಚಿತ್ತಲ್ಲಿ ಕರಿಬೆಳಿ ಬೋರ್ಡಿಲಿ – ಇರ್ತ ಕಾಲಾಳುರಥಮಂತ್ರಿಗಳನ್ನೇ ಚಿಂತನೆ ಮಾಡ್ತ ಮನಸ್ಸಿನ ಆಟವೇ ಚದುರಂಗ ಅಲ್ಲದೋ.
ಹೊತ್ತಪ್ಪಗ ಕೆಲವು ಸರ್ತಿ ಬೈಲಿಲೇ ತಿರುಗಿ ಮಾಷ್ಟ್ರಮನಗೆ ಎತ್ತುವಗ ಹಾಂಗೆ ಕೂದುಗೊಂಡು ಆಡಿಗೊಂಡಿದ್ದದು ಒಪ್ಪಣ್ಣಂಗೆ ಕಂಡ ನೆಂಪಿದ್ದು.
ಆಟ ಆಡುಗು, ಕಡಿಗು, ಚೆಕ್ಕು ಕೊಡುಗು, ಆರಾರು ಒಬ್ಬ ಗೆಲ್ಲುಗು, ಅಲ್ಲದ್ದರೆ ಸೋಲುಗು – ಅದು ನಿಘಂಟೇ, ಗೆದ್ದೋನು ಸೋತೋನಿಂಗೆ ಹೇಂಗೆ ಆಡೇಕಾತು – ಹೇಳಿಕೊಡುಗು.
ಒಪ್ಪಣ್ಣ ಕೂದು ನೋಡಿಗೊಂಡಿದ್ದ ಆ ಆಟಂಗಳ, ಅಲ್ಯಾಣ ಕೂಸುದೇ ನೋಡಿಗೊಂಡಿತ್ತಲ್ಲದೋ – ಅದೇ ಇಂದ್ರಾಣ ಶುದ್ದಿಗೆ ಮೂಲ!
~

ಒಂದಿನ ಬೈಲಿಲೇ ತಿರುಗಿಂಡು ನಾವು ಅಲ್ಲಿಗೆತ್ತುವಗ – ಮಾಷ್ಟ್ರುಮಾವನ ಮಗಳದ್ದು ಗೆಂಟು ಸುರುವಾಗಿ – ಜೋರಾಗಿ – ಇಳ್ಕೊಂಡಿತ್ತು.
ಆ ದಿನ ಇನ್ನೂ ಸರೀ ನೆಂಪಿದ್ದು,
ಮಾಷ್ಟ್ರುಮಾವನ ದೊಡ್ಡಮಗ° ದೊಡ್ಡಶಾಲೆಗೆ ಹೋಪೋನಲ್ಲದೋ – ದೊಡ್ಡರಜೆಲಿ ದೊಡ್ಡಪುಸ್ತಕವ ದೊಡ್ಡಕೆ ಓದಿಗೊಂಡು ಇತ್ತಿದ್ದ°.
ಸಣ್ಣಮಗ° ಸಣ್ಣಶಾಲಗೆ ಹೋಪೋನು, ಸಣ್ಣ ಕೋಪಿಪುಸ್ತಕಲ್ಲಿ ಸಣ್ಣಸಣ್ಣಕೆ ಬರಕ್ಕೊಂಡಿದ್ದ°!
ಮಾಷ್ಟ್ರುಮಾವ° – ಮಕ್ಕಳ ಉತ್ತರಕಾಗತ (ಪೇಪರು) ತಿದ್ದಲೆ ಕೂದರೆ ಒಂದು ಕಟ್ಟ ಆದರೂ ಮುಗಿಯದ್ದೆ ಹಂದವು.
ಮಾಷ್ಟ್ರಮನೆ ಅತ್ತೆ ಅಟ್ಟುಂಬೊಳ ಕಾಯಿಕೆರೆತ್ತದೋ, ಬಾಗಬೇಶುತ್ತದೋ – ಎಂತದೋ ಅಡಿಗೆ ಕಾರ್ಯ ಮಾಡಿಗೊಂಡು ವಿಶ್ವನಾಥಾಷ್ಟಕವ ರಾಗಲ್ಲಿ ಹೇಳಿಗೊಂಡಿತ್ತವು.
ಈ ಕೂಸಿಂದು ಮಾಂತ್ರ “ಬೆರೇ°…” ಹೇದು ಬರೇ ಅರ್ಗೆಂಟುರಾಗ.
ದೊಡ್ಡ ಮಳೆ ಮುಗುದು ಹನಿಕ್ಕೊಟ್ಟು ಬಿದ್ದುಗೊಂಡಿದ್ದ ಹಾಂಗೆ, ಒಪ್ಪಣ್ಣ ಎತ್ತುವಗ ಕುಸ್ಕು – ಕುಸ್ಕು ಮಾಂತ್ರ ಕೇಳಿಗೊಂಡಿದ್ದತ್ತು.
~
‘ಈ ಗೆಂಟು ಸುರು ಆದ್ದೆಂತಕೆ? ಜೋರಾದ್ದೆಂತಕೆ? ಇಳುದ್ದೆಂತಕೆ’ – ಹೇಳಿ ವಿವರವಾಗಿ ಕೋಪಿಬರಕ್ಕೊಂಡಿದ್ದವನ ಹತ್ತರೆ ಕೇಳಿದೆ.
‘ಅದರ ಒಟ್ಟಿಂಗೆ ಚೆಸ್ ಆಡೆಕ್ಕಡ, ಅದಕ್ಕೆ ಅರಡಿತ್ತೂ ಇಲ್ಲೆ, ಎಂತದೂ ಇಲ್ಲೆ, ಆನು ಬತ್ತಿಲ್ಲೆ ಹೇಳಿದೆ, ಕೂಗುಲೆ ಸುರುಮಾಡಿತ್ತು’ – ಹೇಳಿದ° ಪಿಸುರಿಲಿ.
ಅದು? ಚೆಸ್ಸು ಆಡುದೋ? – ಕೇಳಿಕ್ಕಿದೆ.
ಅದರ ಪ್ರಾಯ ಚೆಸ್ಸು ಆಡ್ಳೆ ಅರಡಿವದರಿಂದಲೂ ಬರೇ ಸಣ್ಣ! ನೇರ್ಪಕ್ಕೆ ತಲೆಬಾಚಿ ಬೊಟ್ಟಾಕಲೆ ಅರಡಿಯದ್ದ ಪ್ರಾಯಲ್ಲಿ ಚೆಸ್ಸು ಆಡ್ತೋದು ನವಗೆ ಆಶ್ಚರ್ಯ ಆತು.

‘ಅದಕ್ಕೆ ಚೆಸ್ಸು ಬತ್ತಿಲ್ಲೆ, ಅಂತೇ ಅಂತೇ ಆಡುದು. ಅದೇ ಗೆಲ್ಲೆಕ್ಕು ಅಕೇರಿಗೆ; ಎನ ಪುರುಸೊತ್ತಿಲ್ಲೆ’ ಹೇಳಿ ಜೋರು ಹೇಳಿದ°!!
ಈ ಸಂಗತಿಯ ಗುಟ್ಟಿಲೇ ಹೇಳಿದ್ದರೆ ಆವುತಿತೋ ಏನೋ – ಈ ಮಾಣಿ ಇಡೀ ಮನೆಗೆ ಕೇಳ್ತ ನಮುನೆ ಹೇಳಿಕ್ಕಿದ°!
ಇದರ ಕೇಳಿದ ಕೂಡ್ಳೇ – ಮಂದ್ರಲ್ಲೇ ಇದ್ದಿದ್ದ ಕೂಸಿನ ಅರ್ಗೆಂಟುರಾಗ – ಮತ್ತೊಂದರಿ ಮಧ್ಯಮಕ್ಕೆ ಏರಿತ್ತು.
‘ಎಂತಕೆ ಮಗೋ ಅದರ ಎಳಗುಸುತ್ತೇ..’ – ಹೇಳಿ ಒಳಂದ ಅತ್ತೆ ಕೇಳುವಗ – ಸಪೋಲ್ಟು ಸಿಕ್ಕಿತ್ತಲ್ಲದೋ ಕೂಸಿಂಗೆ – ಮಧ್ಯಮಂದ ತಾರಕಕ್ಕೆ ಎತ್ತಿತ್ತು!!
ಬೆರೇ°…
ಮಾಷ್ಟ್ರುಮಾವಂಗೆ ಹರಟೆ ಆತೋ ಏನೋ – ಸೀತ ಪೇಪರುಕಟ್ಟ ಮಡಸಿ ಎದ್ದು ಬಂದವು.
ಎರಡುನಿಮಿಶ ಕಳುದು ಪುನಾ ಮಂದ್ರಕ್ಕೆ ಇಳಿಯಲೆ ಸುರು ಆತು.
~

ಅದಕ್ಕೆ ಏನೇನೂ ಚೆಸ್ಸು ಬತ್ತಿಲ್ಲೆ ಹೇಳ್ತದು ಅದರ ಅಣ್ಣನ ವಾದ. ಅಲ್ಲ, ಎನಗೆ ಚೆಸ್ಸು ಅರಡಿತ್ತು ಹೇಳ್ತದು ಅದರ ವಾದ.
ವಾದ ವಿವಾದಲ್ಲೇ ಒಯಿವಾಟು ನೆಡದರೆ ಜಗಳ ನಿಲ್ಲುತ್ಸು ಯೇವಗ?!

ದೊಡ್ಡಮಗ° ದೊಡ್ಡಪರೀಕ್ಷೆಗೆ ಓದಿಗೊಂಡಿದ್ದ ಕಾರಣ ಅವ ಆಡ್ತ ಹಾಂಗೆ ಇಲ್ಲೆ.
ಮಾಷ್ಟ್ರಮನೆ ಅತ್ತೆ ಆಡ್ಳೆ ಸುರುಮಾಡಿರೆ ಮಧ್ಯಾನ್ನಕ್ಕೆ ಊಟ ಸಿಕ್ಕ.

ಇನ್ನು ಕೋಪಿ ಬರೆತ್ತವನ ಹತ್ತರೆ ಹೇಳಿದರೆ ಅವ° ಅದರ ಎಳಗಿಸಿ ಸ್ವರವ ಮತ್ತೆ ಪುನಾ ತಾರಕಕ್ಕೆ ಮಾಡುಗು.

ಎಲ್ಲಿ ಇನ್ನು ಒಪ್ಪಣ್ಣನನ್ನೇ ಕೂರುಸಿಕ್ಕುತ್ತೋ ಹೇದು ಹೆದರಿಕೆ ಆದ್ಸಪ್ಪು!!
ಸರಿ, ಇನ್ನೆಂತರ ಮಾಡ್ತದು?
ಮನೆಲಿ ಆರಿಂಗೂ ಪುರುಸೊತ್ತಿಲ್ಲೆ ಹೇಳಿ ಆದರೆ ಅರ್ಗೆಂಟು ಮುಗಿಯಲೆ ಇದ್ದೋಪ್ಪ; ಹಾಂಗೆ ಮತ್ತೆ ಮಾಷ್ಟ್ರುಮಾವನೇ ಆಡ್ಳೆ ಕೂದವು, ಆ ಸಣ್ಣ ಮಗಳ ಒಟ್ಟಿಂಗೆ.
ಅಪ್ಪನೇ ಆಡ್ಳೆ ಬತ್ತೆ ಹೇಳುವಗ ಅರ್ಗೆಂಟು ನಿಂದು, ಒಂದು ನೆಗೆ ಬಂತು ಕೂಸಿಂಗೆ!
ನೀರು ತುಂಬಿದ ಕಣ್ಣಿನ ಉದ್ದಿಗೊಂಡು, ಅಂಗಿಯ ಕೋಲರಿನ ಬಾಯಿಗೆ ಹಾಕಿ ನೆಗೆಮಾಡಿತ್ತು.
~
ಮಾಷ್ಟ್ರುಮಾವ° ಚೆಸ್ ಆಡಿದವೋ? ಅಪ್ಪು. ದೊಡ್ಡವರ ಒಟ್ಟಿಂಗೆ ಆಡಿದ್ದು ಒಪ್ಪಣ್ಣಂಗೆ ನೆಂಪಿಲ್ಲೆ, ಆದರೆ ಅವರ ಮಗಳ ಒಟ್ಟಿಂಗೆ ಆಡಿದ್ದವು.
ಆಡಿದ್ದವು ಹೇದರೆ ಹೇಂಗೆ?
ಕಪ್ಪು ಕಾಯಿಗಳ ಹೆರ್ಕಿ ಒಂದು ಹೊಡೆಂಗೆ ಮಡಗಿ ಕೊಟ್ಟತ್ತು ಕೂಸು. ಬೆಳಿ ಕಾಯಿಗೊ ಯೇವತ್ತೂ ಅದಕ್ಕೇ ಅಲ್ಲದೋ – ಮಡಿಕ್ಕೊಂಡತ್ತು.
ಮಡಗುತ್ತ ಕ್ರಮ ಎಲ್ಲ ಆರಿಂಗೆ ಬೇಕು – ಒಟ್ಟು ಎಲ್ಲ ಕಾಯಿಗಳೂ ಆ ಬೋರ್ಡಿಲಿಲಿ ನಿಂದರೆ ಆತು.
– ಮಾಷ್ಟ್ರುಮಾವನೂ ಏನೂ ಮಾತಾಡ್ಲೆ ಹೋಗವು.
ಅವೆಂತಕೆ ಮಾತಾಡ್ತವು, ಕೈಲಿ ಪೇಪರುಕಟ್ಟ – ಒಂದೊಂದೇ ತೆಗದು, ಉತ್ತರಂಗಳ ತಿದ್ದಿ, ಮಾರ್ಕುಹಾಕಿ, ಕೂಡುಸಿ ಕಳದು – ತಿದ್ದಿಗೊಂಡು ಹೋವುತ್ತ ಬೆಶಿಯೇ ಧಾರಾಳ ಇದ್ದು.
ಹು!
~
ವಿಷಯ ಆದ್ದಿಷ್ಟೇ: ದೊಡ್ಡವು ಚೆಸ್ಸು ಆಡ್ತದು ಕೂಸಿಂಗೆ ಕಂಡು ಗೊಂತಿದ್ದು.
ಎಷ್ಟು ಗೊಂತಿದ್ದು?
ಒಂದು ಹೊಡೆಲಿ ಬೆಳಿ ಜೆನಂಗೊ, ಇನ್ನೊಂದು ಹೊಡೆಲಿ ಕಪ್ಪು ಜೆನಂಗೊ.
ಬೆಳಿ ಹೊಡೆ ಒಂದು ಪಾರ್ಟಿ, ಕಪ್ಪು ಇನ್ನೊಂದು ಪಾರ್ಟಿ.
ಈಚವ ಆಚವನ ಕಡಿವದು. ಕಡುದರೆ ಗಟ್ಟಿಗ° ಅಪ್ಪದು! ಹೆಚ್ಚು ಕಡುದೋನು ಅಕೇರಿಗೆ ಗೆಲ್ಲುದು.
ಇಷ್ಟೇ.

ಬೆಳಿ ಕಾಯಿ ಕೂಸಿಂಗಲ್ಲದೋ – ಆಟ ಸುರುಮಾಡೇಕಾದ್ಸು ಅದುವೇ. ಕೂಸಿಂಗೆ ಬೇಕಾದ್ಸೂ ಅದುವೇ!
– ಒಂದು ಮೂಲೆಲಿದ್ದ ಕಾಲಾಳು, ಸೀತ ಬಂದು ಮಾಷ್ಟ್ರುಮಾವನ ಕುದುರೆಯ ಕಡುದತ್ತು.
ಅದು ಹೇಂಗೆ ಕಡುದತ್ತು – ನಿಂಗೊ ಕೇಳುಲಾಗ!

‘ಹ್ಮ್, ಇನ್ನು ನಿಂಗೊ ಅಪ್ಪ’ – ಹೇಳಿ ದಿನಿಗೆಳುಗು.
ಪೇಪರು ತಿದ್ದುತ್ತರ ಎಡಕ್ಕಿಲಿ ಒಂದರಿ ಬೋರ್ಡಿನ ನೋಡುಗು. ಅಷ್ಟೇ ಪುರುಸೊತ್ತು.
’ನಿಂಗೊ ಇದರ ಆಡಿ ಅಪ್ಪ’ ಹೇಳಿ ಅದುವೇ ಪರವಾಗಿ ಆಡುಗು.
ಇನ್ನಾಣ ಸರ್ತಿಗೆ ಅದಕ್ಕೆ ಕಡಿವಲೆ ಯೇವದು ಮನಸ್ಸು ಬತ್ತೋ – ಅದರ ಎಲ್ಲಿ ಮಡಗಿರೆ ಅದಕ್ಕೆ ಕಡಿವಲೆ ಕೊಶಿ ಅಕ್ಕೋ – ಅಲ್ಲಿ ತಂದು ಮಡಗ್ಗು.
ಮಾಷ್ಟ್ರುಮಾವ° ಹಸ್ತಮುಟ್ಟಿಗೊಂಡ್ರೆ ಸಾಕು; ಅಲ್ಲ – ಅಂತೆ ನೋಡಿರೆ ಸಾಕು. ಅಷ್ಟೇ ಬೇಕಾದ್ಸು!

ಮತ್ತಾಣದ್ದು ಕೂಸಿನ ಸರದಿ.
ಇನ್ನೊಂದು ಮೂಲೆಲಿದ್ದ ಕುದುರೆ – ಸರೂತಕೆ ಹೋಗಿ ಆಗ ಮಡಗಿದ್ದರ ಕಡುದತ್ತು.
ಅಪ್ಪ, ಕಡುದೇ – ಹೇಳುಗು. ದೊಡ್ಡವು ಆಡುವಗ ಹೇಳ್ತವಲ್ಲದೋ – ಅದೇ ಕುಶಿ, ಅದೇ ಗಾಂಭೀರ್ಯಲ್ಲಿ!
ಕಡುದೆಯಾ ಮಗಳೇ..  – ಹೇದು ಪೇಪರಿನ ಎಡೆಂದಲೇ ಒಂದರಿ ಹೇಳಿಕ್ಕುಗು ಮಾಷ್ಟ್ರುಮಾವ°.
~
ಮಾಷ್ಟ್ರುಮಾವಂಗೂ ಗೊಂತಿದ್ದು, ಇದರ್ಲಿ ತನ್ನ ಕೈವಾಡ ಎಂತೂ ನೆಡೆತ್ತಿಲ್ಲೆ ಹೇದು.
ಅಂತೇ ಒಂದು ಕಾರಣಕ್ಕೆ ಎದುರು ಕೂದುಗೊಂಬದು.
ಪ್ರತಿ ನಡೆಲಿಯೂ ಒಂದೊಂದು ಕಾಯಿ ಕಡುದು, ರಜ್ಜ ಹೊತ್ತು ನೋಡುವಗ ಮಾಷ್ಟ್ರುಮಾವನ ಒಂದು ಕಾಲಾಳು ಮಾಂತ್ರ ಬಾಕಿ!
ಕೂಸಿಂಗೆ ಕೊಶಿಯೇ ಕೊಶಿ.
ಅದರ ಅರ್ಗೆಂಟು ನಿಂದ ಕೊಶಿ ಮಾಷ್ಟ್ರುಮಾವಂಗೆ!! ಹು ಹು!!
~
ಅಂಬಗ ರಾಜನ ಎಷ್ಟೊತ್ತಿಂಗೆ ಕಡುದ್ದು – ಕೇಳಿದ ಕೋಪಿ ಬರೆತ್ತ ಮಾಣಿ.
ಚೆಸ್ಸಿಲಿ ರಾಜನ ಕಡಿತ್ತ ಹಾಂಗಿಲ್ಲೆಡ – ಅದಕ್ಕೆ ಆಟ ಬತ್ತಿಲ್ಲೆ, ಎಬೇ – ಹೇಳಿ ನೆಗೆಮಾಡ್ಳೆ ಸುರುಮಾಡಿದ°.
ಆಟಗಾರ° ಕೂಸಿಂಗೂ, ಎದುರಾಳಿ ಮಾಷ್ಟ್ರುಮಾವಂಗೂ ಸೋಲುಗೆಲುವಿನ ಬಗ್ಗೆ ಒಪ್ಪಿಗೆ ಇದ್ದರೆ ಇವಂದೆಂತರ ಎಡೇಲಿ – ಹೇಳಿಗೊಂಡು ಆ ಕೂಸು ಗೆದ್ದ ಕೊಶಿಲೇ ಇದ್ದತ್ತು.

ಇವರಿಬ್ರ ಜಗಳಲ್ಲಿ ಆರಿಂಗೆ ಸಪೋಳ್ಟು ಕೊಟ್ರೂ, ನವಗೆ ಆಪತ್ತು ಹೇಳ್ತದು ಒಪ್ಪಣ್ಣಂಗೂ ಅರಡಿಗಾತು.
ಹಾಂಗಾಗಿ, ಊಟಕ್ಕೆ ನಿಲ್ಲು ಹೇಳಿ ಮಾಷ್ಟ್ರಮನೆ ಅತ್ತೆ ಹೇಳಿರೂ ಕೇಳದ್ದೆ, ಸೀತ ಹೆರಟು ಬಂದದೇ.
~

ಈ ಘಟನೆ ಇಂದು ನೋಡಿರೆ ತುಂಬ ವಿಶೇಷ ಕಾಂಬದಿದ್ದು ನವಗೆ.
ಆಟಕ್ಕೆ ದಿನಿಗೆಳಿ ಬಯಿಂದನಿಲ್ಲೆ – ಹೇದು ಆ ಜಗಳ ಸುರು ಆದ್ಸು!
ಆಟಕ್ಕೆ ಬಂದರೂ ಜಗಳ, ಬಾರದ್ರೂ ಜಗಳ – ಇಂತಾ ಸ್ಥಿತಿಗೊ ಈ ಕಂಪ್ಲೀಟ್ರು ಯುಗಲ್ಲಿ ಸಿಕ್ಕುಗೋ?
ಈಗಾಣ ಮಕ್ಕೊ ವೀಡ್ಯಗೇಮು ಹೇಳಿಗೊಂಡು ಒಬ್ಬೊಬ್ಬನೇ ಆಡ್ತವಲ್ಲದೋ, ಅವಕ್ಕೆ ಇನ್ನೊಬ್ಬ ಬೇಡ.
ಇನ್ನೊಬ್ಬ ಎಡೆಲಿ ಬಂದರೂ ಉಪದ್ರವೇ ಅಪ್ಪದು.
ಅಂಬಗ, ಹಲವು ಜೆನ ಒಟ್ಟಿಂಗೇ ಸೇರಿ ಆಡ್ತದು, ಅದಕ್ಕೆ ಮತ್ತೊಬ್ಬನ ದಿನಿಗೆಳುದು – ಇಂತಾ ಕ್ರಮಂಗೊ ಇನ್ನು ಸಿಕ್ಕದೋ?
~

ಮಕ್ಕೊ ಮಕ್ಕಳೇ ಇನ್ನೊಬ್ಬ ಬಾರದ್ದೆ ಇಪ್ಪಗ ಅಪ್ಪಮ್ಮನೇ ಮಕ್ಕೊ ಆಗಿ ಸೇರಿ ಸಮದಾನ ಮಾಡ್ತದು – ಇದುದೇ ಈಗಾಣ ಕಾಲಲ್ಲಿ ಅಪುರೂಪವೇ ಅಲ್ದೋ?
ಮಕ್ಕಳಿಂದ ಹೆಚ್ಚು ಅಂಬೆರ್ಪಿಲಿ ಅಪ್ಪಮ್ಮ ಇರ್ತವು; ಒಂದೈದು ನಿಮಿಷ ಕೂದು ಮಾತಾಡಿಕ್ಕಲೆ ಪುರುಸೊತ್ತಿರ್ತಿಲ್ಲೆ.
ಬೇಬಿ ಸಿಟ್ಟಿಂಗು ಹೇಳ್ತಲ್ಲಿಗೆ ಉದಿಯಪ್ಪಗ ಬಿಟ್ಟು, ಹೊತ್ತೋಪಗ ಕರಕ್ಕೊಂಡು ಬಪ್ಪಲೆ ಮಾಂತ್ರ ಪುರುಸೊತ್ತು.
ಅಪ್ಪಮ್ಮನೇ ಮಕ್ಕೊಗೆ ಸಮಯಕೊಟ್ಟು, ಆಟ ಆಡಿ-ಆಡುಸಿ, ಸೋತು- ಗೆದ್ದರೆ, ಮುಂದೆ ಮಕ್ಕೊ ದೊಡ್ಡ ಆದ ಮತ್ತೆ ಮಕ್ಕಳೂ ಸೋಲವು, ತಾನೂ ಸೋಲೇಕು ಹೇದು ಇಲ್ಲೆ.
ಅಪ್ಪೋಲ್ಲದೋ?
ಹೀಂಗೇ ಯೋಚನೆ ಮಾಡುವಗ ಈ ಸಂಗತಿ ತಲಗೆ ಬಂತು. ಮಾಷ್ಟ್ರುಮಾವನ ಮನೆ ಘಟನೆ ಒಂದು ಕಾರಣ ಅಷ್ಟೇ.
~
ಒಂದೊಪ್ಪ: ಮಕ್ಕೊ ಗೆಲ್ಲಲೆ ಬೇಕಾಗಿ ಅಪ್ಪಮ್ಮ ಸೋಲ್ತವು, ಇಂದಿಂಗೂ, ಎಂದೆಂದಿಂಗೂ.

ಸೂ
: ಮಾಷ್ಟ್ರುಮಾವನ ಮಗಳಿಂಗೆ ಈಗ ಅರ್ಗೆಂಟು ಇಲ್ಲೆ  – ಹೇಳ್ತದು ಬೈಲಿಲಿ ಎಲ್ಲೋರಿಂಗೂ ಅರಡಿಗು. ಒಪ್ಪಣ್ಣಂಗುದೇ! 😉

ಒಪ್ಪಣ್ಣ

   

You may also like...

49 Responses

 1. ಬೋದಾಳ says:

  ಮಾಷ್ಟ್ರ ಮಾವ ಫ್ರೀ ಇದ್ದವಾ… ಎನಗೂ ಚೆಸ್ ಆಡೆಕ್ಕು ….. 🙁 ಎನ್ನ ಆರುದೇ ಆಟಕ್ಕೆ ಸೇರ್ಸುತ್ತವಿಲ್ಲೆ… ಬೋದಾಳ ಹೇಳ್ತವು. ಅವಂಗೆ ಆಟ ಅರಡಿಯ ಹೇಳ್ತವು…… 🙁

  • ಯೇ ಬೋದಾಳಣ್ಣೋ..
   ನಿನ್ನ ಒಟ್ಟಿಂಗೆ ಆಡ್ಳೆ ಮಾಷ್ಟ್ರುಮಾವ° ಎಂತಗೆ? ನಮ್ಮ ಬೈಲಿಲಿ ಬೋಚಬಾವ° ಇದ್ದ°!

   ಬೇಕಾದಷ್ಟು ಆಡಿಗೊ. ಬೇಕಾದ್ದರ ಕಡ್ಕೊ.
   ಕಡಿವಲೆ ಕತ್ತಿ – ಪೀಶಕತ್ತಿಯೋ – ಮೆಟ್ಟುಕತ್ತಿಯೋ ಮಣ್ಣ ಬೇಕಾರೆ ಕೊಡ್ಳಕ್ಕು.

   ಇಬ್ರೂ ಉಶಾರಿಯೇ ಇದಾ, ಹಾಂಗೆ ಬೇಕಪ್ಪಲೂ ಸಾಕು!! 😉

 2. ವಿದ್ಯಾ ರವಿಶಂಕರ್ says:

  ಬಾಲ್ಯದ ಸವಿನೆನಪುಗಳ ತುಂಬಾ ಚೆಂದಕೆ ಬರದ್ದೆ ಒಪ್ಪಣ್ಣಾ.

 3. rhalemane says:

  ಒಪ್ಪಣ್ಣ ಈಗಾಣ ಕ್ರಮಂದ ಮುಂದಿನ ಜನಾಂಗ ಹೇಂಗಕ್ಕು ಹೇಳ್ತದರ ಕೂಲಂಕುಷವಾಗಿ, ನಮ್ಮ ಗಮನಕ್ಕೆ ತೈಂದ.
  ಈಗಾಣ ಕಂಪ್ಯೂಟರ್ ಗೇಮ್ಸ್, ಇಂಟರ್ ನೆಟ್ [ಯುವ ಪೀಳಿಗೆಗೆ ಶೋಶಿಯಲ್ ನೆಟ್ ವರ್ಕ್(ಫೇಸ್ ಬುಕ್)] , ಮಾನಸಿಕ ಬೆಳವಣಿಗೆಗೆ ಒಳ್ಳೇದೊ, ಕೆಟ್ಟದ್ದೊ ಹೇಳಿ ಯೋಚನೆ ಮಾಡೆಕ್ಕಾದ ಪರಿಸ್ತಿತಿ ಬತ್ತಾ ಇದ್ದು. ಒಳ್ಳೇದಾದರೆ ಎಷ್ಟು? ಕೆಟ್ಟದ್ದಾದರೆ ಯಾವ ರೀತಿ? ಇದು ಅಗತ್ಯವಾಗಿ, ಆಳವಾಗಿ ಯೋಚನೆ ಮಾಡಿ, ಅದಕ್ಕೆ ನಾವು ಕೂಡಲೇ ಹೊಂದಿಗೊಂಬಲೆ ಮಾನಸಿಕ ಸಿದ್ದತೆ ಮಾಡಿಗೊಳ್ಳದ್ದರೆ, ಪರಿಸ್ತಿತಿ ಕೈಮೀರುಗು!

 4. ದೀಪಿಕಾ says:

  ವಾಹ್ ಭಾರೀ ಲಾಯ್ಕಾಯ್ದು ಬರದ್ದು..ಪ್ರತಿಯೊ೦ದು ವಾಕ್ಯವ ಓದುಲು ಭಾರಿ ಖುಶಿ ಆತು..
  ಆನುದೆ ಸಣ್ಣದಿಪ್ಪಗ ಅಪ್ಪನೊಟ್ಟಿ೦ಗೆ ಚೆಸ್ ಆಡಿಗೊ೦ಡಿತ್ತದು ನೆನಪ್ಪಾತು..
  ಮತ್ತೆ ಅಮ್ಮನೊಟ್ಟಿ೦ಗೆ ಹಾವೇಣಿ ಆಡಿಗೊ೦ಡಿದ್ದದರ ನೆನ್ನಪ್ಪಾಗಿ ನೆಗೆಯೂ ಬ೦ತು..ಎಲ್ಲ್ಯಾರು ಹಾವಿಪ್ಪ ಕೋಣೆಗೆ ಬ೦ದರೂ ಕೆಳ೦ಗೆ ಇಳಿವಲಿಲ್ಲೆ..ಒ೦ದು ಕೋಣೆ ಹಿ೦ದೆಯೋ ಮು೦ದೆಯೋ ಹೋಗಿ ಏಣಿಲಿ ಮೇಲೆ ಹತ್ತುದು ಮಾತ್ರ 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *