Oppanna.com

ಮಾಷ್ಟ್ರುಮಾವನ ಮಗಳು ಸಣ್ಣ ಇಪ್ಪಾಗ ‘ಚೆಸ್ ಆಡಿದ’ ಶುದ್ದಿ..!

ಬರದೋರು :   ಒಪ್ಪಣ್ಣ    on   23/12/2011    49 ಒಪ್ಪಂಗೊ

ಪ್ರಾಯ, ಜಾತಿ, ವೃತ್ತಿ ಇವುಗಳ ಮೀರಿ ಚದುರಂಗ(ಚೆಸ್ಸು) ಹೇಳ್ತದು ಎಲ್ಲೋರಿಂಗೂ ಅರಡಿಗಾದ-ಎಡಿಗಾದ ಆಟ.

ಬೈಲಿಲಿಯೂ ಆಡ್ತೋರ ಚೆಸ್ಸು ಸಂಕೆ ಧಾರಾಳ ಇದ್ದು!
ದೊಡ್ಡಬಾವಂದೇ-ದೊಡ್ಡಮಾವಂದೇ ಚೆಸ್ ಆಡುಗು ಧಾರಾಳ.
ಅಪುರೂಪಕ್ಕೆ ಮೂಡುಬಂತು ಕಂಡ್ರೆ ಕರೆಂಟು ಹೋದರೂ, ಕರೆಂಟು ಬಂದರೂ – ಆರಾರೊಬ್ಬ ಸೋಲುವನ್ನಾರ ನಿಲ್ಲ.
ಒಂದೊಂದರಿ ದೊಡ್ಡಕ್ಕ°-ದೊಡ್ಡತ್ತೆ ಪರಂಚಲೆ ಸುರುಮಾಡಿರೆ ಮಾಂತ್ರ ಇವಿಬ್ರೂ ಸೋತು ಆಟ ನಿಂಬದೂ ಇದ್ದು! 😉
ಅದಿರಳಿ.
ಮಣಿಮುಂಡಮಾಣಿ ಕೋಲೇಜಿಂಗೆ ಹೋಗಿಂಡಿದ್ದಿಪ್ಪಾಗ ಚೆಸ್ ಆಡಿ ಎಷ್ಟು ಪ್ರೈಸು ಬಾಚಿದ್ದನೋ, ಅವನ ಕ್ಳಾಸಿಲಿದ್ದಿದ್ದ ಕೇವಳದಣ್ಣಂಗೂ ಈಗ ನೆಂಪಿರ.
ಎಷ್ಟಾರೂ ಅದು ನಮ್ಮ ದೇಶದ್ದೇ ಅಲ್ಲದೋ – ಹಾಂಗಾಗಿ, ನಮ್ಮ ನೆತ್ತರಿಲೇ ಇರ್ತು ಆ ಆಟದ ಬಗ್ಗೆ ಆಸಗ್ತಿ.
~
ಈ ಚೆಸ್ಸು ಹೇಳುವಗ ಬೈಲಿಲೇ ನೆಡದ ಒಂದು ಬಾಲ್ಯದ ಘಟನೆ ನೆಂಪಾವುತ್ತು ಒಪ್ಪಣ್ಣಂಗೆ.
ಈ ವಾರ ಅದನ್ನೇ ಹೇಳುವೊ° ಕಂಡತ್ತು; ಆಗದೋ?
ಇದೆಂತ ಭಾರೀ ಅಪುರೂಪದ, ಭಯಂಕರ ವಿಶೇಷದ ಶುದ್ದಿ ಏನಲ್ಲ.
ಎಲ್ಲ ಮನೆಲಿಯೂ, ಎಲ್ಲ ದಿಕ್ಕೆಯೂ ಆಗಿಂಡಿದ್ದತ್ತು ಮದಲಿಂಗೆ; ಈಗೀಗ ಕಾಂಬಲೆ ರಜ ಅಪುರೂಪ ಹೇಳ್ತದು ಸಂಗತಿ ಅಷ್ಟೆ.

ಅಂದೊಂದರಿ ಅರ್ಗೆಂಟಿನ ಒಪ್ಪಕ್ಕ° ಚಿಕ್ಕು ಹಂಚಿದ ಶುದ್ದಿಯ ಬೈಲಿಲಿ ನಾವು ಮಾತಾಡಿದ್ದು ನೆಂಪಿದ್ದೋ?
ಇಲ್ಲದ್ದರೆ ಒಂದರಿ ನೆಂಪುಮಾಡಿಕ್ಕಿ (ಸಂಕೊಲೆ)
ಆ ಶುದ್ದಿ ನೆಂಪಪ್ಪಗ ಒಪ್ಪಣ್ಣಂಗೆ ಈ ಶುದ್ದಿಯೂ ನೆಂಪಪ್ಪಲಿದ್ದು.
ಎಂತ್ಸಕೇ ಹೇಳಿತ್ತುಕಂಡ್ರೆ – ಎರಡುದೇ ಸಾದಾರ್ಣ ಒಂದೇ ಕಾಲಘಟ್ಟಲ್ಲಿ ಆದ್ಸು, ಎರಡುದೇ ಹತ್ತರತ್ತರೆ ಒಂದೇ ನಮುನೆ ವಿಶಯಂಗೊ!
~
ಸುಮಾರೊರಿಶ ಮದಲಾಣ ಸಂಗತಿ, ಮಾಷ್ಟ್ರುಮಾವನ ಮಗಳು ಸಣ್ಣ ಕೂಸು.
ಈಗ ಅದು ಈಷ್ಟೆತ್ತರ ಆಗಿ ರಾಮಜ್ಜನ ಕೋಲೇಜಿಂಗೆ ಹೋವುತ್ಸು; ಅದಿರಳಿ.
ಮದಲಿಂಗೆ – ಸಣ್ಣ ಇಪ್ಪಗ ಮಹಾ ಗೆಂಟು. ಗೆಂಟು ಅಲ್ಲ, ಘೆಂಟು!  ಘೆಂಟು ಮಾಂತ್ರ ಅಲ್ಲ, ಅರ್ಗೆಂಟುದೇ!!

ಅರ್ಗೆಂಟಿಂಗೆ ಉದಾಹರಣೆ ಬೇಕಾದಷ್ಟಿದ್ದು. ಸಾಮಾನ್ಯ ಎಲ್ಲೋರಿಂಗೂ ಒಂದಲ್ಲ ಒಂದು ಕತೆ ನೆಂಪಿಕ್ಕು.

ಸರೀ ಆಡಿರೆ ಹದಿನಾರೇ ಸರ್ತಿಲಿ ಎದುರಾಣ ಎಲ್ಲಾ ಕಾಲಾಳುಗಳ ಕಡಿಗು ಆ ಕೂಸು!

ಒಪ್ಪಣ್ಣಂಗೆ ಪಕ್ಕನೆ ನೆಂಪಪ್ಪದೊಂದಿದ್ದು, ಬುತ್ತಿಯ ಸಂಗತಿ!
ಇದಾ, ಶಾಲಗೆ ಹೋಪಲೆ ಇನ್ನೂ ಸುರುಮಾಡಿದ್ದಿಲ್ಲೆ ಅದು, ಸಣ್ಣ ಪ್ರಾಯ ಹೇಳಿಗೊಂಡು.
ಆದರೆ, ಅದರ ಇಬ್ರು ಅಣ್ಣಂದ್ರಿಂಗೆ ಶಾಲಗೆ ಹೋಗದ್ದೆ ಕಳಿಯ. ಶಾಲೆಲಿ ಉಣ್ಣದ್ದೆಯೂ ಕಳಿಯ.
ಹಾಂಗೆ, ಶಾಲಗೆ ಕೊಂಡೋಪಲೆ ಒಂದೊಂದು ಬುತ್ತಿಪಾತ್ರ ಇದ್ದತ್ತಿದಾ, ಅವರದ್ದು ಹೇಳಿಗೊಂಡು.
ಅದೆಂತಕೆ ಉಪಯೋಗ -ಹೇಳ್ತದು ಗೊಂತಪ್ಪಲೂ ಪುರುಸೊತ್ತಿಲ್ಲೆ, “ಎನಗೂ ಒಂದು ಬುತ್ತಿ ಆಯೇಕು” ಹಟ ಮಾಡಿದ್ದತ್ತು.
ಇದರ ಬೊಬ್ಬೆ ತಡೆಯದ್ದೆ ಮತ್ತಾಣ ಸರ್ತಿ ಪೇಟಗೆ ಹೋಗಿ ಬಪ್ಪಗ ಚೆಂದದ ಸಣ್ಣ ಬುತ್ತಿ ಅದಕ್ಕೂ ತಂದುಕೊಟ್ಟಿದವು ಮಾಷ್ಟ್ರುಮಾವ°!
ಮಧ್ಯಾನ್ನದ ಊಟವ ಆ ಕುಂಞಿ ಬುತ್ತಿಲಿ ತುಂಬುಸಿಗೊಂಡು – ಹಟ್ಟಿ ಬೈಪ್ಪಾಣೆಲಿ ಕೂದು ತಣ್ಕಟೆ ಉಂಡಿಕ್ಕಿ ಬಕ್ಕು ಅದು. ಹಾಂಗಿದ್ದ ಘೆಂಟು!
ಈಗ ಬುತ್ತಿ ಊಟ ಕೊಟ್ರೂ ಬೇಡ ಅದಕ್ಕೆ! 😉
– ಈ ನಮುನೆ ಉದಾಹರಣೆ ರಾಶಿಗೊ ಅದರ ಅರಡಿವೋರು ನೆಂಪುಮಾಡಿಕೊಡುಗು ಬೇಕಾರೆ.
~

ಮಾಷ್ಟ್ರುಮಾವನ ಇಬ್ರು ದೊಡ್ಡ ಮಕ್ಕೊಗೆ ಹೋಲುಸಿರೆ ಪ್ರಾಯಲ್ಲಿ ಈ ಕೂಸು ತುಂಬ ಸಣ್ಣ.
ಇಬ್ರು ಮಕ್ಕಳೂ ಶಾಲೆಂದ ಬಂದು ಓದಿಬರೆತ್ಸು ಮುಗುದ ಮತ್ತೆಯೋ – ರಜೆಯ ಎಡೆ ಹೊತ್ತಿಲಿಯೋ – ಚೆಸ್ಸು ಆಡಿಗೊಂಡಿತ್ತವು.
ಒಂದೋ ಅವಿಬ್ರೇ ಆಡಿಂಗು, ಅಲ್ಲದ್ದರೆ ಮಾಷ್ಟ್ರಮನೆಅತ್ತೆಯ ಹತ್ತರೆಯೋ, ಈಚಮನೆ ಬಾವನ ಹತ್ತರೆಯೋ, ಆಚಮನೆ ದೊಡ್ಡಣ್ಣನ ಹತ್ತರೆಯೋ – ಅಂತೂ ಚೆಸ್ಸು ಆಡುಗು.

ಎದುರಾ ಎದುರು ಮೋರೆ ಹಾಕಿಂಡು, ಮವುನಲ್ಲಿ ಕೂದಂಡು ಏಕಾಗ್ರಚಿತ್ತಲ್ಲಿ ಕರಿಬೆಳಿ ಬೋರ್ಡಿಲಿ – ಇರ್ತ ಕಾಲಾಳುರಥಮಂತ್ರಿಗಳನ್ನೇ ಚಿಂತನೆ ಮಾಡ್ತ ಮನಸ್ಸಿನ ಆಟವೇ ಚದುರಂಗ ಅಲ್ಲದೋ.
ಹೊತ್ತಪ್ಪಗ ಕೆಲವು ಸರ್ತಿ ಬೈಲಿಲೇ ತಿರುಗಿ ಮಾಷ್ಟ್ರಮನಗೆ ಎತ್ತುವಗ ಹಾಂಗೆ ಕೂದುಗೊಂಡು ಆಡಿಗೊಂಡಿದ್ದದು ಒಪ್ಪಣ್ಣಂಗೆ ಕಂಡ ನೆಂಪಿದ್ದು.
ಆಟ ಆಡುಗು, ಕಡಿಗು, ಚೆಕ್ಕು ಕೊಡುಗು, ಆರಾರು ಒಬ್ಬ ಗೆಲ್ಲುಗು, ಅಲ್ಲದ್ದರೆ ಸೋಲುಗು – ಅದು ನಿಘಂಟೇ, ಗೆದ್ದೋನು ಸೋತೋನಿಂಗೆ ಹೇಂಗೆ ಆಡೇಕಾತು – ಹೇಳಿಕೊಡುಗು.
ಒಪ್ಪಣ್ಣ ಕೂದು ನೋಡಿಗೊಂಡಿದ್ದ ಆ ಆಟಂಗಳ, ಅಲ್ಯಾಣ ಕೂಸುದೇ ನೋಡಿಗೊಂಡಿತ್ತಲ್ಲದೋ – ಅದೇ ಇಂದ್ರಾಣ ಶುದ್ದಿಗೆ ಮೂಲ!
~

ಒಂದಿನ ಬೈಲಿಲೇ ತಿರುಗಿಂಡು ನಾವು ಅಲ್ಲಿಗೆತ್ತುವಗ – ಮಾಷ್ಟ್ರುಮಾವನ ಮಗಳದ್ದು ಗೆಂಟು ಸುರುವಾಗಿ – ಜೋರಾಗಿ – ಇಳ್ಕೊಂಡಿತ್ತು.
ಆ ದಿನ ಇನ್ನೂ ಸರೀ ನೆಂಪಿದ್ದು,
ಮಾಷ್ಟ್ರುಮಾವನ ದೊಡ್ಡಮಗ° ದೊಡ್ಡಶಾಲೆಗೆ ಹೋಪೋನಲ್ಲದೋ – ದೊಡ್ಡರಜೆಲಿ ದೊಡ್ಡಪುಸ್ತಕವ ದೊಡ್ಡಕೆ ಓದಿಗೊಂಡು ಇತ್ತಿದ್ದ°.
ಸಣ್ಣಮಗ° ಸಣ್ಣಶಾಲಗೆ ಹೋಪೋನು, ಸಣ್ಣ ಕೋಪಿಪುಸ್ತಕಲ್ಲಿ ಸಣ್ಣಸಣ್ಣಕೆ ಬರಕ್ಕೊಂಡಿದ್ದ°!
ಮಾಷ್ಟ್ರುಮಾವ° – ಮಕ್ಕಳ ಉತ್ತರಕಾಗತ (ಪೇಪರು) ತಿದ್ದಲೆ ಕೂದರೆ ಒಂದು ಕಟ್ಟ ಆದರೂ ಮುಗಿಯದ್ದೆ ಹಂದವು.
ಮಾಷ್ಟ್ರಮನೆ ಅತ್ತೆ ಅಟ್ಟುಂಬೊಳ ಕಾಯಿಕೆರೆತ್ತದೋ, ಬಾಗಬೇಶುತ್ತದೋ – ಎಂತದೋ ಅಡಿಗೆ ಕಾರ್ಯ ಮಾಡಿಗೊಂಡು ವಿಶ್ವನಾಥಾಷ್ಟಕವ ರಾಗಲ್ಲಿ ಹೇಳಿಗೊಂಡಿತ್ತವು.
ಈ ಕೂಸಿಂದು ಮಾಂತ್ರ “ಬೆರೇ°…” ಹೇದು ಬರೇ ಅರ್ಗೆಂಟುರಾಗ.
ದೊಡ್ಡ ಮಳೆ ಮುಗುದು ಹನಿಕ್ಕೊಟ್ಟು ಬಿದ್ದುಗೊಂಡಿದ್ದ ಹಾಂಗೆ, ಒಪ್ಪಣ್ಣ ಎತ್ತುವಗ ಕುಸ್ಕು – ಕುಸ್ಕು ಮಾಂತ್ರ ಕೇಳಿಗೊಂಡಿದ್ದತ್ತು.
~
‘ಈ ಗೆಂಟು ಸುರು ಆದ್ದೆಂತಕೆ? ಜೋರಾದ್ದೆಂತಕೆ? ಇಳುದ್ದೆಂತಕೆ’ – ಹೇಳಿ ವಿವರವಾಗಿ ಕೋಪಿಬರಕ್ಕೊಂಡಿದ್ದವನ ಹತ್ತರೆ ಕೇಳಿದೆ.
‘ಅದರ ಒಟ್ಟಿಂಗೆ ಚೆಸ್ ಆಡೆಕ್ಕಡ, ಅದಕ್ಕೆ ಅರಡಿತ್ತೂ ಇಲ್ಲೆ, ಎಂತದೂ ಇಲ್ಲೆ, ಆನು ಬತ್ತಿಲ್ಲೆ ಹೇಳಿದೆ, ಕೂಗುಲೆ ಸುರುಮಾಡಿತ್ತು’ – ಹೇಳಿದ° ಪಿಸುರಿಲಿ.
ಅದು? ಚೆಸ್ಸು ಆಡುದೋ? – ಕೇಳಿಕ್ಕಿದೆ.
ಅದರ ಪ್ರಾಯ ಚೆಸ್ಸು ಆಡ್ಳೆ ಅರಡಿವದರಿಂದಲೂ ಬರೇ ಸಣ್ಣ! ನೇರ್ಪಕ್ಕೆ ತಲೆಬಾಚಿ ಬೊಟ್ಟಾಕಲೆ ಅರಡಿಯದ್ದ ಪ್ರಾಯಲ್ಲಿ ಚೆಸ್ಸು ಆಡ್ತೋದು ನವಗೆ ಆಶ್ಚರ್ಯ ಆತು.

‘ಅದಕ್ಕೆ ಚೆಸ್ಸು ಬತ್ತಿಲ್ಲೆ, ಅಂತೇ ಅಂತೇ ಆಡುದು. ಅದೇ ಗೆಲ್ಲೆಕ್ಕು ಅಕೇರಿಗೆ; ಎನ ಪುರುಸೊತ್ತಿಲ್ಲೆ’ ಹೇಳಿ ಜೋರು ಹೇಳಿದ°!!
ಈ ಸಂಗತಿಯ ಗುಟ್ಟಿಲೇ ಹೇಳಿದ್ದರೆ ಆವುತಿತೋ ಏನೋ – ಈ ಮಾಣಿ ಇಡೀ ಮನೆಗೆ ಕೇಳ್ತ ನಮುನೆ ಹೇಳಿಕ್ಕಿದ°!
ಇದರ ಕೇಳಿದ ಕೂಡ್ಳೇ – ಮಂದ್ರಲ್ಲೇ ಇದ್ದಿದ್ದ ಕೂಸಿನ ಅರ್ಗೆಂಟುರಾಗ – ಮತ್ತೊಂದರಿ ಮಧ್ಯಮಕ್ಕೆ ಏರಿತ್ತು.
‘ಎಂತಕೆ ಮಗೋ ಅದರ ಎಳಗುಸುತ್ತೇ..’ – ಹೇಳಿ ಒಳಂದ ಅತ್ತೆ ಕೇಳುವಗ – ಸಪೋಲ್ಟು ಸಿಕ್ಕಿತ್ತಲ್ಲದೋ ಕೂಸಿಂಗೆ – ಮಧ್ಯಮಂದ ತಾರಕಕ್ಕೆ ಎತ್ತಿತ್ತು!!
ಬೆರೇ°…
ಮಾಷ್ಟ್ರುಮಾವಂಗೆ ಹರಟೆ ಆತೋ ಏನೋ – ಸೀತ ಪೇಪರುಕಟ್ಟ ಮಡಸಿ ಎದ್ದು ಬಂದವು.
ಎರಡುನಿಮಿಶ ಕಳುದು ಪುನಾ ಮಂದ್ರಕ್ಕೆ ಇಳಿಯಲೆ ಸುರು ಆತು.
~

ಅದಕ್ಕೆ ಏನೇನೂ ಚೆಸ್ಸು ಬತ್ತಿಲ್ಲೆ ಹೇಳ್ತದು ಅದರ ಅಣ್ಣನ ವಾದ. ಅಲ್ಲ, ಎನಗೆ ಚೆಸ್ಸು ಅರಡಿತ್ತು ಹೇಳ್ತದು ಅದರ ವಾದ.
ವಾದ ವಿವಾದಲ್ಲೇ ಒಯಿವಾಟು ನೆಡದರೆ ಜಗಳ ನಿಲ್ಲುತ್ಸು ಯೇವಗ?!

ದೊಡ್ಡಮಗ° ದೊಡ್ಡಪರೀಕ್ಷೆಗೆ ಓದಿಗೊಂಡಿದ್ದ ಕಾರಣ ಅವ ಆಡ್ತ ಹಾಂಗೆ ಇಲ್ಲೆ.
ಮಾಷ್ಟ್ರಮನೆ ಅತ್ತೆ ಆಡ್ಳೆ ಸುರುಮಾಡಿರೆ ಮಧ್ಯಾನ್ನಕ್ಕೆ ಊಟ ಸಿಕ್ಕ.

ಇನ್ನು ಕೋಪಿ ಬರೆತ್ತವನ ಹತ್ತರೆ ಹೇಳಿದರೆ ಅವ° ಅದರ ಎಳಗಿಸಿ ಸ್ವರವ ಮತ್ತೆ ಪುನಾ ತಾರಕಕ್ಕೆ ಮಾಡುಗು.

ಎಲ್ಲಿ ಇನ್ನು ಒಪ್ಪಣ್ಣನನ್ನೇ ಕೂರುಸಿಕ್ಕುತ್ತೋ ಹೇದು ಹೆದರಿಕೆ ಆದ್ಸಪ್ಪು!!
ಸರಿ, ಇನ್ನೆಂತರ ಮಾಡ್ತದು?
ಮನೆಲಿ ಆರಿಂಗೂ ಪುರುಸೊತ್ತಿಲ್ಲೆ ಹೇಳಿ ಆದರೆ ಅರ್ಗೆಂಟು ಮುಗಿಯಲೆ ಇದ್ದೋಪ್ಪ; ಹಾಂಗೆ ಮತ್ತೆ ಮಾಷ್ಟ್ರುಮಾವನೇ ಆಡ್ಳೆ ಕೂದವು, ಆ ಸಣ್ಣ ಮಗಳ ಒಟ್ಟಿಂಗೆ.
ಅಪ್ಪನೇ ಆಡ್ಳೆ ಬತ್ತೆ ಹೇಳುವಗ ಅರ್ಗೆಂಟು ನಿಂದು, ಒಂದು ನೆಗೆ ಬಂತು ಕೂಸಿಂಗೆ!
ನೀರು ತುಂಬಿದ ಕಣ್ಣಿನ ಉದ್ದಿಗೊಂಡು, ಅಂಗಿಯ ಕೋಲರಿನ ಬಾಯಿಗೆ ಹಾಕಿ ನೆಗೆಮಾಡಿತ್ತು.
~
ಮಾಷ್ಟ್ರುಮಾವ° ಚೆಸ್ ಆಡಿದವೋ? ಅಪ್ಪು. ದೊಡ್ಡವರ ಒಟ್ಟಿಂಗೆ ಆಡಿದ್ದು ಒಪ್ಪಣ್ಣಂಗೆ ನೆಂಪಿಲ್ಲೆ, ಆದರೆ ಅವರ ಮಗಳ ಒಟ್ಟಿಂಗೆ ಆಡಿದ್ದವು.
ಆಡಿದ್ದವು ಹೇದರೆ ಹೇಂಗೆ?
ಕಪ್ಪು ಕಾಯಿಗಳ ಹೆರ್ಕಿ ಒಂದು ಹೊಡೆಂಗೆ ಮಡಗಿ ಕೊಟ್ಟತ್ತು ಕೂಸು. ಬೆಳಿ ಕಾಯಿಗೊ ಯೇವತ್ತೂ ಅದಕ್ಕೇ ಅಲ್ಲದೋ – ಮಡಿಕ್ಕೊಂಡತ್ತು.
ಮಡಗುತ್ತ ಕ್ರಮ ಎಲ್ಲ ಆರಿಂಗೆ ಬೇಕು – ಒಟ್ಟು ಎಲ್ಲ ಕಾಯಿಗಳೂ ಆ ಬೋರ್ಡಿಲಿಲಿ ನಿಂದರೆ ಆತು.
– ಮಾಷ್ಟ್ರುಮಾವನೂ ಏನೂ ಮಾತಾಡ್ಲೆ ಹೋಗವು.
ಅವೆಂತಕೆ ಮಾತಾಡ್ತವು, ಕೈಲಿ ಪೇಪರುಕಟ್ಟ – ಒಂದೊಂದೇ ತೆಗದು, ಉತ್ತರಂಗಳ ತಿದ್ದಿ, ಮಾರ್ಕುಹಾಕಿ, ಕೂಡುಸಿ ಕಳದು – ತಿದ್ದಿಗೊಂಡು ಹೋವುತ್ತ ಬೆಶಿಯೇ ಧಾರಾಳ ಇದ್ದು.
ಹು!
~
ವಿಷಯ ಆದ್ದಿಷ್ಟೇ: ದೊಡ್ಡವು ಚೆಸ್ಸು ಆಡ್ತದು ಕೂಸಿಂಗೆ ಕಂಡು ಗೊಂತಿದ್ದು.
ಎಷ್ಟು ಗೊಂತಿದ್ದು?
ಒಂದು ಹೊಡೆಲಿ ಬೆಳಿ ಜೆನಂಗೊ, ಇನ್ನೊಂದು ಹೊಡೆಲಿ ಕಪ್ಪು ಜೆನಂಗೊ.
ಬೆಳಿ ಹೊಡೆ ಒಂದು ಪಾರ್ಟಿ, ಕಪ್ಪು ಇನ್ನೊಂದು ಪಾರ್ಟಿ.
ಈಚವ ಆಚವನ ಕಡಿವದು. ಕಡುದರೆ ಗಟ್ಟಿಗ° ಅಪ್ಪದು! ಹೆಚ್ಚು ಕಡುದೋನು ಅಕೇರಿಗೆ ಗೆಲ್ಲುದು.
ಇಷ್ಟೇ.

ಬೆಳಿ ಕಾಯಿ ಕೂಸಿಂಗಲ್ಲದೋ – ಆಟ ಸುರುಮಾಡೇಕಾದ್ಸು ಅದುವೇ. ಕೂಸಿಂಗೆ ಬೇಕಾದ್ಸೂ ಅದುವೇ!
– ಒಂದು ಮೂಲೆಲಿದ್ದ ಕಾಲಾಳು, ಸೀತ ಬಂದು ಮಾಷ್ಟ್ರುಮಾವನ ಕುದುರೆಯ ಕಡುದತ್ತು.
ಅದು ಹೇಂಗೆ ಕಡುದತ್ತು – ನಿಂಗೊ ಕೇಳುಲಾಗ!

‘ಹ್ಮ್, ಇನ್ನು ನಿಂಗೊ ಅಪ್ಪ’ – ಹೇಳಿ ದಿನಿಗೆಳುಗು.
ಪೇಪರು ತಿದ್ದುತ್ತರ ಎಡಕ್ಕಿಲಿ ಒಂದರಿ ಬೋರ್ಡಿನ ನೋಡುಗು. ಅಷ್ಟೇ ಪುರುಸೊತ್ತು.
’ನಿಂಗೊ ಇದರ ಆಡಿ ಅಪ್ಪ’ ಹೇಳಿ ಅದುವೇ ಪರವಾಗಿ ಆಡುಗು.
ಇನ್ನಾಣ ಸರ್ತಿಗೆ ಅದಕ್ಕೆ ಕಡಿವಲೆ ಯೇವದು ಮನಸ್ಸು ಬತ್ತೋ – ಅದರ ಎಲ್ಲಿ ಮಡಗಿರೆ ಅದಕ್ಕೆ ಕಡಿವಲೆ ಕೊಶಿ ಅಕ್ಕೋ – ಅಲ್ಲಿ ತಂದು ಮಡಗ್ಗು.
ಮಾಷ್ಟ್ರುಮಾವ° ಹಸ್ತಮುಟ್ಟಿಗೊಂಡ್ರೆ ಸಾಕು; ಅಲ್ಲ – ಅಂತೆ ನೋಡಿರೆ ಸಾಕು. ಅಷ್ಟೇ ಬೇಕಾದ್ಸು!

ಮತ್ತಾಣದ್ದು ಕೂಸಿನ ಸರದಿ.
ಇನ್ನೊಂದು ಮೂಲೆಲಿದ್ದ ಕುದುರೆ – ಸರೂತಕೆ ಹೋಗಿ ಆಗ ಮಡಗಿದ್ದರ ಕಡುದತ್ತು.
ಅಪ್ಪ, ಕಡುದೇ – ಹೇಳುಗು. ದೊಡ್ಡವು ಆಡುವಗ ಹೇಳ್ತವಲ್ಲದೋ – ಅದೇ ಕುಶಿ, ಅದೇ ಗಾಂಭೀರ್ಯಲ್ಲಿ!
ಕಡುದೆಯಾ ಮಗಳೇ..  – ಹೇದು ಪೇಪರಿನ ಎಡೆಂದಲೇ ಒಂದರಿ ಹೇಳಿಕ್ಕುಗು ಮಾಷ್ಟ್ರುಮಾವ°.
~
ಮಾಷ್ಟ್ರುಮಾವಂಗೂ ಗೊಂತಿದ್ದು, ಇದರ್ಲಿ ತನ್ನ ಕೈವಾಡ ಎಂತೂ ನೆಡೆತ್ತಿಲ್ಲೆ ಹೇದು.
ಅಂತೇ ಒಂದು ಕಾರಣಕ್ಕೆ ಎದುರು ಕೂದುಗೊಂಬದು.
ಪ್ರತಿ ನಡೆಲಿಯೂ ಒಂದೊಂದು ಕಾಯಿ ಕಡುದು, ರಜ್ಜ ಹೊತ್ತು ನೋಡುವಗ ಮಾಷ್ಟ್ರುಮಾವನ ಒಂದು ಕಾಲಾಳು ಮಾಂತ್ರ ಬಾಕಿ!
ಕೂಸಿಂಗೆ ಕೊಶಿಯೇ ಕೊಶಿ.
ಅದರ ಅರ್ಗೆಂಟು ನಿಂದ ಕೊಶಿ ಮಾಷ್ಟ್ರುಮಾವಂಗೆ!! ಹು ಹು!!
~
ಅಂಬಗ ರಾಜನ ಎಷ್ಟೊತ್ತಿಂಗೆ ಕಡುದ್ದು – ಕೇಳಿದ ಕೋಪಿ ಬರೆತ್ತ ಮಾಣಿ.
ಚೆಸ್ಸಿಲಿ ರಾಜನ ಕಡಿತ್ತ ಹಾಂಗಿಲ್ಲೆಡ – ಅದಕ್ಕೆ ಆಟ ಬತ್ತಿಲ್ಲೆ, ಎಬೇ – ಹೇಳಿ ನೆಗೆಮಾಡ್ಳೆ ಸುರುಮಾಡಿದ°.
ಆಟಗಾರ° ಕೂಸಿಂಗೂ, ಎದುರಾಳಿ ಮಾಷ್ಟ್ರುಮಾವಂಗೂ ಸೋಲುಗೆಲುವಿನ ಬಗ್ಗೆ ಒಪ್ಪಿಗೆ ಇದ್ದರೆ ಇವಂದೆಂತರ ಎಡೇಲಿ – ಹೇಳಿಗೊಂಡು ಆ ಕೂಸು ಗೆದ್ದ ಕೊಶಿಲೇ ಇದ್ದತ್ತು.

ಇವರಿಬ್ರ ಜಗಳಲ್ಲಿ ಆರಿಂಗೆ ಸಪೋಳ್ಟು ಕೊಟ್ರೂ, ನವಗೆ ಆಪತ್ತು ಹೇಳ್ತದು ಒಪ್ಪಣ್ಣಂಗೂ ಅರಡಿಗಾತು.
ಹಾಂಗಾಗಿ, ಊಟಕ್ಕೆ ನಿಲ್ಲು ಹೇಳಿ ಮಾಷ್ಟ್ರಮನೆ ಅತ್ತೆ ಹೇಳಿರೂ ಕೇಳದ್ದೆ, ಸೀತ ಹೆರಟು ಬಂದದೇ.
~

ಈ ಘಟನೆ ಇಂದು ನೋಡಿರೆ ತುಂಬ ವಿಶೇಷ ಕಾಂಬದಿದ್ದು ನವಗೆ.
ಆಟಕ್ಕೆ ದಿನಿಗೆಳಿ ಬಯಿಂದನಿಲ್ಲೆ – ಹೇದು ಆ ಜಗಳ ಸುರು ಆದ್ಸು!
ಆಟಕ್ಕೆ ಬಂದರೂ ಜಗಳ, ಬಾರದ್ರೂ ಜಗಳ – ಇಂತಾ ಸ್ಥಿತಿಗೊ ಈ ಕಂಪ್ಲೀಟ್ರು ಯುಗಲ್ಲಿ ಸಿಕ್ಕುಗೋ?
ಈಗಾಣ ಮಕ್ಕೊ ವೀಡ್ಯಗೇಮು ಹೇಳಿಗೊಂಡು ಒಬ್ಬೊಬ್ಬನೇ ಆಡ್ತವಲ್ಲದೋ, ಅವಕ್ಕೆ ಇನ್ನೊಬ್ಬ ಬೇಡ.
ಇನ್ನೊಬ್ಬ ಎಡೆಲಿ ಬಂದರೂ ಉಪದ್ರವೇ ಅಪ್ಪದು.
ಅಂಬಗ, ಹಲವು ಜೆನ ಒಟ್ಟಿಂಗೇ ಸೇರಿ ಆಡ್ತದು, ಅದಕ್ಕೆ ಮತ್ತೊಬ್ಬನ ದಿನಿಗೆಳುದು – ಇಂತಾ ಕ್ರಮಂಗೊ ಇನ್ನು ಸಿಕ್ಕದೋ?
~

ಮಕ್ಕೊ ಮಕ್ಕಳೇ ಇನ್ನೊಬ್ಬ ಬಾರದ್ದೆ ಇಪ್ಪಗ ಅಪ್ಪಮ್ಮನೇ ಮಕ್ಕೊ ಆಗಿ ಸೇರಿ ಸಮದಾನ ಮಾಡ್ತದು – ಇದುದೇ ಈಗಾಣ ಕಾಲಲ್ಲಿ ಅಪುರೂಪವೇ ಅಲ್ದೋ?
ಮಕ್ಕಳಿಂದ ಹೆಚ್ಚು ಅಂಬೆರ್ಪಿಲಿ ಅಪ್ಪಮ್ಮ ಇರ್ತವು; ಒಂದೈದು ನಿಮಿಷ ಕೂದು ಮಾತಾಡಿಕ್ಕಲೆ ಪುರುಸೊತ್ತಿರ್ತಿಲ್ಲೆ.
ಬೇಬಿ ಸಿಟ್ಟಿಂಗು ಹೇಳ್ತಲ್ಲಿಗೆ ಉದಿಯಪ್ಪಗ ಬಿಟ್ಟು, ಹೊತ್ತೋಪಗ ಕರಕ್ಕೊಂಡು ಬಪ್ಪಲೆ ಮಾಂತ್ರ ಪುರುಸೊತ್ತು.
ಅಪ್ಪಮ್ಮನೇ ಮಕ್ಕೊಗೆ ಸಮಯಕೊಟ್ಟು, ಆಟ ಆಡಿ-ಆಡುಸಿ, ಸೋತು- ಗೆದ್ದರೆ, ಮುಂದೆ ಮಕ್ಕೊ ದೊಡ್ಡ ಆದ ಮತ್ತೆ ಮಕ್ಕಳೂ ಸೋಲವು, ತಾನೂ ಸೋಲೇಕು ಹೇದು ಇಲ್ಲೆ.
ಅಪ್ಪೋಲ್ಲದೋ?
ಹೀಂಗೇ ಯೋಚನೆ ಮಾಡುವಗ ಈ ಸಂಗತಿ ತಲಗೆ ಬಂತು. ಮಾಷ್ಟ್ರುಮಾವನ ಮನೆ ಘಟನೆ ಒಂದು ಕಾರಣ ಅಷ್ಟೇ.
~
ಒಂದೊಪ್ಪ: ಮಕ್ಕೊ ಗೆಲ್ಲಲೆ ಬೇಕಾಗಿ ಅಪ್ಪಮ್ಮ ಸೋಲ್ತವು, ಇಂದಿಂಗೂ, ಎಂದೆಂದಿಂಗೂ.

ಸೂ
: ಮಾಷ್ಟ್ರುಮಾವನ ಮಗಳಿಂಗೆ ಈಗ ಅರ್ಗೆಂಟು ಇಲ್ಲೆ  – ಹೇಳ್ತದು ಬೈಲಿಲಿ ಎಲ್ಲೋರಿಂಗೂ ಅರಡಿಗು. ಒಪ್ಪಣ್ಣಂಗುದೇ! 😉

49 thoughts on “ಮಾಷ್ಟ್ರುಮಾವನ ಮಗಳು ಸಣ್ಣ ಇಪ್ಪಾಗ ‘ಚೆಸ್ ಆಡಿದ’ ಶುದ್ದಿ..!

  1. ವಾಹ್ ಭಾರೀ ಲಾಯ್ಕಾಯ್ದು ಬರದ್ದು..ಪ್ರತಿಯೊ೦ದು ವಾಕ್ಯವ ಓದುಲು ಭಾರಿ ಖುಶಿ ಆತು..
    ಆನುದೆ ಸಣ್ಣದಿಪ್ಪಗ ಅಪ್ಪನೊಟ್ಟಿ೦ಗೆ ಚೆಸ್ ಆಡಿಗೊ೦ಡಿತ್ತದು ನೆನಪ್ಪಾತು..
    ಮತ್ತೆ ಅಮ್ಮನೊಟ್ಟಿ೦ಗೆ ಹಾವೇಣಿ ಆಡಿಗೊ೦ಡಿದ್ದದರ ನೆನ್ನಪ್ಪಾಗಿ ನೆಗೆಯೂ ಬ೦ತು..ಎಲ್ಲ್ಯಾರು ಹಾವಿಪ್ಪ ಕೋಣೆಗೆ ಬ೦ದರೂ ಕೆಳ೦ಗೆ ಇಳಿವಲಿಲ್ಲೆ..ಒ೦ದು ಕೋಣೆ ಹಿ೦ದೆಯೋ ಮು೦ದೆಯೋ ಹೋಗಿ ಏಣಿಲಿ ಮೇಲೆ ಹತ್ತುದು ಮಾತ್ರ 🙂

  2. ಒಪ್ಪಣ್ಣ ಈಗಾಣ ಕ್ರಮಂದ ಮುಂದಿನ ಜನಾಂಗ ಹೇಂಗಕ್ಕು ಹೇಳ್ತದರ ಕೂಲಂಕುಷವಾಗಿ, ನಮ್ಮ ಗಮನಕ್ಕೆ ತೈಂದ.
    ಈಗಾಣ ಕಂಪ್ಯೂಟರ್ ಗೇಮ್ಸ್, ಇಂಟರ್ ನೆಟ್ [ಯುವ ಪೀಳಿಗೆಗೆ ಶೋಶಿಯಲ್ ನೆಟ್ ವರ್ಕ್(ಫೇಸ್ ಬುಕ್)] , ಮಾನಸಿಕ ಬೆಳವಣಿಗೆಗೆ ಒಳ್ಳೇದೊ, ಕೆಟ್ಟದ್ದೊ ಹೇಳಿ ಯೋಚನೆ ಮಾಡೆಕ್ಕಾದ ಪರಿಸ್ತಿತಿ ಬತ್ತಾ ಇದ್ದು. ಒಳ್ಳೇದಾದರೆ ಎಷ್ಟು? ಕೆಟ್ಟದ್ದಾದರೆ ಯಾವ ರೀತಿ? ಇದು ಅಗತ್ಯವಾಗಿ, ಆಳವಾಗಿ ಯೋಚನೆ ಮಾಡಿ, ಅದಕ್ಕೆ ನಾವು ಕೂಡಲೇ ಹೊಂದಿಗೊಂಬಲೆ ಮಾನಸಿಕ ಸಿದ್ದತೆ ಮಾಡಿಗೊಳ್ಳದ್ದರೆ, ಪರಿಸ್ತಿತಿ ಕೈಮೀರುಗು!

  3. ಬಾಲ್ಯದ ಸವಿನೆನಪುಗಳ ತುಂಬಾ ಚೆಂದಕೆ ಬರದ್ದೆ ಒಪ್ಪಣ್ಣಾ.

  4. ಮಾಷ್ಟ್ರ ಮಾವ ಫ್ರೀ ಇದ್ದವಾ… ಎನಗೂ ಚೆಸ್ ಆಡೆಕ್ಕು ….. 🙁 ಎನ್ನ ಆರುದೇ ಆಟಕ್ಕೆ ಸೇರ್ಸುತ್ತವಿಲ್ಲೆ… ಬೋದಾಳ ಹೇಳ್ತವು. ಅವಂಗೆ ಆಟ ಅರಡಿಯ ಹೇಳ್ತವು…… 🙁

    1. ಯೇ ಬೋದಾಳಣ್ಣೋ..
      ನಿನ್ನ ಒಟ್ಟಿಂಗೆ ಆಡ್ಳೆ ಮಾಷ್ಟ್ರುಮಾವ° ಎಂತಗೆ? ನಮ್ಮ ಬೈಲಿಲಿ ಬೋಚಬಾವ° ಇದ್ದ°!

      ಬೇಕಾದಷ್ಟು ಆಡಿಗೊ. ಬೇಕಾದ್ದರ ಕಡ್ಕೊ.
      ಕಡಿವಲೆ ಕತ್ತಿ – ಪೀಶಕತ್ತಿಯೋ – ಮೆಟ್ಟುಕತ್ತಿಯೋ ಮಣ್ಣ ಬೇಕಾರೆ ಕೊಡ್ಳಕ್ಕು.

      ಇಬ್ರೂ ಉಶಾರಿಯೇ ಇದಾ, ಹಾಂಗೆ ಬೇಕಪ್ಪಲೂ ಸಾಕು!! 😉

  5. ಆಡಬಾರದು ಚೆನ್ನೆ
    ನೊಡಬಾರದು ಪಗಡೆ
    ಆಡಿದರೊಂದಾಟ ಚದುರಂಗ………. ಹೇಳಿ ಎಲ್ಲಿಯೋ ಕೇಳಿದ ನೆಂಪು, ಹೆಚ್ಚು ಚೆನ್ನೆ ಆಡಿದರೆ ಬೈಗು ಮಕ್ಕಳ (ಎಂಗಳ), ಆದರೆ ಚೆಸ್ – ಚದುರಂಗ ಆಡಿದರೆ ಬೈಗಳಲ್ಲ …. ಎಲ್ಲಿಗೆ ಎತ್ತಿತ್ತು….. ಸಾಕೋ ಆಡಿದ್ದದು ಹೇಳುಗು ಎಂಗಳ ಮನೆಲಿ ಆಪ್ಪ (ಅಪ್ಪ ಮಾಷ್ಟ್ರು)

    1. ರಾಜಣ್ಣನ ಪದ್ಯ ಕೇಳಿ ಕೊಶಿ ಆತನ್ನೇ.
      ಅದರ ಮುಂದೆ – ಹಿಂದೆ ಎಂತರ? ತಿಳಿಶುತ್ತಿರೋ?

      ಈಗ ಎಲ್ಲಿಗೆ ಎತ್ತಿತ್ತು? ನಿಂಗೊ ಎಲ್ಲಿದ್ದಿ? ಎಂತ ಮಾಡ್ತಾ ಇದ್ದಿ?

  6. *ನಾವೆಲ್ಲರೂ ಇಂದಿನ ಕಾಲಲ್ಲಿ ಆಲೋಚನೆ ಮಾಡೆಕಾದ ಒಂದು ಮುಖ್ಯವಾದ ವಿಚಾರವ ತುಂಬಾ ಸರಳವಾಗಿ ಎಲ್ಲರ ಮನಸ್ಸಿಂಗೂ ತಟ್ಟುವ ಹಾಂಗೆ ಬರದ್ದ ನಮ್ಮ ಒಪ್ಪಣ್ಣ 🙂
    ಈ ವಿಷಯದ ದಿಶೆಲಿ ನಾವೆಲ್ಲರೂ ಆಲೋಚನೆ ಮಾಡೆಕು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹೇಳುದರ ನಾವೆಲ್ಲರೂ ಒಂದು ಕಾಲಲ್ಲಿ ಕಲ್ತಿದು[ಹೆಚ್ಚಿನವ್ವು ಅದರ ಅಲ್ಲಿಗೇ ಬಿಟ್ಟು ಬೈಂದು!!], ಅದು ನಮ್ಮ ಮುಂದಾಣ ಜನರೇಶನ್ನಿಲ್ಲಿ ಸತ್ಯ ಆಯಕಾರೆ ಒಪ್ಪಣ್ಣ ಹೇಳಿದ ಶುದ್ದಿಯ ಬಗ್ಗೆ ನಾವೆಲ್ಲ ಗಮನ ಕೊಡೆಕು…

    *ಮಾಷ್ಟ್ರುಮಾವನ ದೊಡ್ಡಮಗ° ದೊಡ್ಡಶಾಲೆಗೆ ಹೋಪೋನಲ್ಲದೋ – ದೊಡ್ಡರಜೆಲಿ ದೊಡ್ಡಪುಸ್ತಕವ ದೊಡ್ಡಕೆ ಓದಿಗೊಂಡು ಇತ್ತಿದ್ದ°.
    ಸಣ್ಣಮಗ° ಸಣ್ಣಶಾಲಗೆ ಹೋಪೋನು, ಸಣ್ಣ ಕೋಪಿಪುಸ್ತಕಲ್ಲಿ ಸಣ್ಣಸಣ್ಣಕೆ ಬರಕ್ಕೊಂಡಿದ್ದ°! – ಈ ವಾಕ್ಯ ಇಷ್ಟ ಆತು

    *ಪ್ರತಿಯೋಂದೂ ಸಾಲು ನೆಗೆ ಮಾಡ್ಸಿತ್ತು…ಅದರೊಟ್ಟಿಂಗೆ ನಾವು ಎಂತ ಕಳಕ್ಕೊಳ್ತಾ ಇದ್ದು ಹೇಳುದರ ಅರಿವೂ ಆತು

    1. ಸುವರ್ಣಿನಿ ಅಕ್ಕನ ಒಪ್ಪ ಕಂಡು ತುಂಬ ಕೊಶಿ ಆತು.
      ನಮ್ಮದರ ಒಳಿಶಿ ಮುಂದುವರುಸುತ್ತದರ್ಲಿ ನೀಂಗಳ ವೃತ್ತಿ ತುಂಬಾ ದೊಡ್ಡ ಕೆಲಸ ಅಕ್ಕ.

      { ಪ್ರತಿಯೋಂದೂ ಸಾಲು ನೆಗೆ ಮಾಡ್ಸಿತ್ತು} ಪಾಪ ಆ ಕೂಸಿನ ಅರ್ಗೆಂಟಿನ ಕಂಡು ನಿಂಗೊ ನೆಗೆಮಾಡುದೋ? ನಿಲ್ಲಿ, ಅದರ ಕೈಲಿ ಹೇಳ್ತೆ – ಮತ್ತೆ ನಿಂಗೊ ಅರ್ಗೆಂಟು ಮಾಡಿ – ಅದು ನೆಗೆಮಾಡುಗು!

  7. ಭಾರೀ ಲಾಯಕಾಯ್ದು ಒಪ್ಪಣ್ಣ.. ಎನಗೆ “ದೊಡ್ಡರಜೆಲಿ ದೊಡ್ಡಪುಸ್ತಕವ ದೊಡ್ಡಕೆ ಓದಿಗೊಂಡು ಇತ್ತಿದ್ದ°.
    ಸಣ್ಣಮಗ° ಸಣ್ಣಶಾಲಗೆ ಹೋಪೋನು, ಸಣ್ಣ ಕೋಪಿಪುಸ್ತಕಲ್ಲಿ ಸಣ್ಣಸಣ್ಣಕೆ ಬರಕ್ಕೊಂಡಿದ್ದ°! ತುಂಬಾ ಖುಷಿ ಆತು … ಓದುವಾಗ ಆ ಮನೆಯ ಚೆಸ್ ಆಡುವ ಚಿತ್ರದೆ ಕಣ್ಣಮುಂದೆ ಬಂದಾಂಗಾತು 🙂 🙂 🙂

    1. ಕಿರಣಣ್ಣಂಗೆ ಒಪ್ಪಂಗೊ.
      ಕೊಶಿ ಆದ್ಸರ ವಿವರುಸಿ ಹೇಳುವಗ ಒಪ್ಪಣ್ಣಂಗೂ ಕೊಶಿ ಆತು.

      ನಿಂಗಳೂ ಶುದ್ದಿಗಳ ಹೇಳಿ, ಎಂಗೊ ಕೇಳ್ತೆಯೊ, ಆತೋ? 🙂

  8. ಈ ಚದುರ೦ಗದಾಟ ಸುಮಾರು 5-6 ನೇ ಶತಮಾನಲ್ಲಿ ನಮ್ಮ ದೇಶಲ್ಲಿ ಹುಟ್ಟಿ, ಇಲ್ಲಿಯಾಣವ್ವು ಆಡೊ೦ಗೊ೦ಡು ಇತ್ತವು ಹೀಳಿ ಇತಿಹಾಸ ಹೇಳ್ತು. ನಮ್ಮ ದೇಶಲ್ಲಿ ಇದು ಬೆಳದೂ ಚೈನಾ,ಪರ್ಶಿಯ ಇತರ ದೇಶದವ್ವು ಇದರ ನೋಡಿಕ್ಕಿ, ಅವ್ವುದೆ ಅವರಲ್ತಾಗಿ ಹಬ್ಬುಸಿದವ್ವು.. ಹಾ೦ಗೆ ಇಡೀ ಲೋಕಲ್ಲಿ ಇ೦ದು ಬೆಳದು ಒ೦ದು ಬುದ್ದಿವ೦ತರ ಆಟ ಹೇಳಿಯೇ ಆಯಿದು.. ಮತ್ತೆ ನಮ್ಮ ಬೋಚ ಬಾವನ೦ತ್ತವಕೆ ಇದರ ಗ೦ಧವೂ ಇರ, ಮತ್ತೆ ತಲೆಗೂ ಹೋಗೆ ಪೋ.!!

    ಸ೦ಸ್ಕೃತಲ್ಲಿ – ಚದುರ೦ಗ ಹೇಳಿರೆ ನಾಲ್ಕು ಕಾಲು ಹೇಳಿ ಅಡಾ..!
    ಆನೆ,ಕುದುರೆ, ರಥ/ಒ೦ಟೆ, ಸೈನಿಕ.
    ಮತ್ತೆ ರಾಜ-ರಾಣಿ ಹೇ೦ಗು ಇದ್ದು ಹೇಳುವೊ… 😉 ಚದುರ೦ಗ ಆಡುದು 8×8 ಬೋರ್ಡಿಲ್ಲಿ – “ಅಷ್ಟಪದಾ” ಹೇಳುಗು.

    ಈ ಆಟವ ಎಲ್ಲಾ ಪ್ರಾಯದವ್ವು ಮೆಚ್ಚಿ ಆಡ್ಲೆ ಬಯಸುತ್ತವ್ವು. ಭಾರಿ ಒ೦ದು ಮು೦ದಾಲೋಚನೆ ಇದ್ದೆರೆ ಮತ್ತೊಬನ ಸೋಲುಸಲೆ ಅಕ್ಕು.ಏನೇ ಆಗಲ್ಲಿ, ನಮ್ಮ ವಿಷ್ವನಾಥನ್ ಆನ೦ದಾ ನಮ್ಮ ದೇಶದ ಗೌರವ ಕಾಪಾಡಿಯೊ೦ಡು ಬೈ೦ದಾ..!

    ಲಾಯಕೆ ಆಯಿದು ಭಾವ ಬರದ್ದು…ಇದರ ಓದಿಯಪ್ಪಗ ಸಣ್ಣದಿಪ್ಪಗ ಆಡಿ ಆಟ೦ಗೊ ನೆ೦ಪಾತು..

    1. ಚೆಲಾ ಚುಬ್ಬಣ್ಣಾ,
      ನಿನಗೆ ಇಷ್ಟೆಲ್ಲ ಗೊಂತಿತ್ತೋ ಚದುರಂಗದ ಬಗ್ಗೆ? ಅಂಬಗ ಶುದ್ದಿ ಹೇಳುವಗ ನಿನ್ನ ಕೈಲಿ ಕೇಳಿಯೇ ಹೇಳ್ತಿತೇ.
      ಒಳ್ಳೆದಾತು ಇಲ್ಲಿ ಹೇಳಿದ್ದು.

      ಚದುರಂಗ ಆಡಿರೆ ಮನಸ್ಸು ಚುರ್ಕು ಆವುತ್ತಡ, ಸಣ್ಣ ಇಪ್ಪಗ ಆಡಿರೆ ಮತ್ತೆ ದೊಡ್ಡ ಆದ ಮತ್ತೆ ಅವ° ಬೋಸ° ಆವುತ್ತನಿಲ್ಲೇಡ, ಅಪ್ಪೋ? 🙂

  9. ಲೇಖನ ತುಂಬಾ ಇಷ್ಟ ಆತು ಒಪ್ಪಣ್ಣಾ… ಮಾಷ್ಟ್ರು ಮಾವನ ಮಗಳ ಗೆಂಟಿನ ಬಗ್ಗೆ ಓದುವಾಗ ನಮ್ಮ ಬಾಲ್ಯವೂ ಒಂದರಿ ನೆನಪಾತು… ಆ ಅರ್ಗೆಂಟುಗಳ ನೆನೆಸಿಗೊಂಡರೆ ಈಗ ನಗು ಬತ್ತು… ಜೀವನ ಹೇಳುವ ಚದುರಂಗದಾಟಲ್ಲಿಯೂ ಹಾಂಗೆ… “ಹೊನ್ನು,ಹೆಣ್ಣು,ಹೆಸರು,ಕೀರ್ತಿಗೆ” ಬೇಕಾಗಿ ನಾವು ದೇವರ ಹತ್ರೆ ಮಾಡಿದ ಅರ್ಗೆಂಟುಗೋ ಎಲ್ಲ ಒಂದರಿ ಬೆಳದು ನಿಂದ ಮೇಲೆ ಅದರ ನೆನೆಸಿ ನೆಗೆ ಬತ್ತು…

    1. ನೀರಮೂಲೆ ಜಯಕ್ಕಂಗೆ ಹರೇರಾಮ.
      { ದೇವರ ಹತ್ರೆ ಮಾಡಿದ ಅರ್ಗೆಂಟುಗೋ } ಒಳ್ಳೆ ಮಾತು.
      ಅಲ್ಲದ್ದರೂ ನಾವು ದೇವರ ಎದುರು ಅರ್ಗೆಂಟೇ ಮಾಡುದಲ್ಲದೋ – ಸಂಕಟ ಬಂದಪ್ಪಗ.
      ಅಲ್ಲದ್ದರೆ ಅವನ ಯೇಚನೆಯೂ ಇರ್ತಿಲ್ಲೆ. ನಮ್ಮಷ್ಟಕ್ಕೇ ನಾವು.

      ಒಳ್ಳೆ ಒಪ್ಪಕ್ಕೆ ಧನ್ಯವಾದಂಗೊ..

  10. “ಅಪ್ಪ ನಿಂಗೊ ಇದರ ಕಡಿಯಿರಿ” ಹೇಳಿ ಅಪ್ಪನ ಪರವಾಗಿ ಆಡುದು ಇತ್ಯಾದಿ ತುಂಬಾ ನೈಜತೆಂದ ಕೂಡಿದ ಕಥೆ ..(ವಿಶ್ಲೇಶಣೆ ) ಓದಿಸಿಯೊಂಡು ಹೋವುತ್ತು.ಒಪ್ಪಣ್ಣ್ ಬರದ್ದು ಲಾಯಿಕ ಆಯಿದು. ನಮ್ಮ ಚದುರಂಗಕ್ಕೂ ವಿದೇಶಿ ಚೆಸ್ ಂಗೂ ಚೂರು ವ್ಯತ್ಯಾಸ ಇದ್ದಲ್ಲದೊ? ಈಗ ಆರೂ ಆ ಕ್ರಮಲ್ಲಿ ಆಡ್ತವಿಲ್ಲೆ. “ಶಾ ಕೊಡುದು” “ಪೇದೆ ಮಾಡುದು” “ಹೆಬ್ಬಾರ ಪೇದೆ ” ಹೇಳುವ ಹಳೆ ಶಬ್ದಂಗೊ ನೆಂಪಾತು. ಹ ಳೆ ಚದುರಂಗ ಆಟಲ್ಲಿ ಆಳಿಂಗೆ (ಪಾನ್ ಂಗೆ) ಸುರುವಿಂಗೆ ಒಂದೆ ಸ್ಟೆಪ್ ಹೋಪಲೆ ಎಡಿಗಶ್ಟೆ. ಹಾಂಗೆ ” ಪೇದೆ ಮಾಡುದು” ಹೇಳಿದರೆ ಅಖೇರಿಗೆ rAjana ಆಳಿಂದ ಶಾ (ಚೆಕ್ )ಕೊಟ್ಟು ಕಟ್ಟುದು.

    1. ಮಾವ, ನಿಂಗೊಗೆ ಹಳೇ ಕ್ರಮ ಗೊಂತಿದ್ದೋ! ಅದರ ಬಗ್ಗೆ ವಿವರವಾಗಿ ಇಲ್ಲಿ ಬರದರೆ ಎನ್ನ ಹಾಂಗಿಪ್ಪವಕ್ಕುದೆ ಗೊಂತಕ್ಕು. ರಜ ಪುರುಸೊತ್ತು ಮಾಡಿಕ್ಕಿ!
      ಇನ್ನು ಲೇಖನದ ಬಗ್ಗೆ ವಿವರುಸಲೆ ಎನ್ನ ಹತ್ತರೆ ಶಬ್ದಂಗಳೇ ಇಲ್ಲೆ! ಎನ್ನ ಬಾಲ್ಯದ ನೆಂಪುಗೊ ಎಲ್ಲ ಒಂದು ಕ್ಷಣ ಕಣ್ಣ ಮುಂದೆ ಬಂತು…

      1. ಪೆರುಮುಖ ಅಪ್ಪಚ್ಚಿಗೆ ನಮಸ್ಕಾರಂಗೊ.
        ದೊಡ್ಡ ಮಾಹಿತಿ ಇದ್ದು ನಿಂಗಳ ಒಪ್ಪಲ್ಲಿ. ಇದೊಂದು ಒಪ್ಪಣ್ಣಂಗೂ ಹೊಸತ್ತನ್ನೇಪ್ಪಾ!
        ವಿವರವಾಗಿ ಬೈಲಿಂಗೆ ಹೇಳುವಿರೋ?

        ಮಹೇಶಣ್ಣೋ, ಧನ್ಯವಾದಂಗೊ.
        ಪೆರುಮುಖ ಅಪ್ಪಚ್ಚಿ ಆ ಶುದ್ದಿಯ ಬೈಲಿಂಗೆ ಯೇವತ್ತು ಬಿಡ್ತವು ಕಾದೊಂಡಿಪ್ಪೊ, ಅಲ್ಲದೋ?

  11. ಪಷ್ಟಾಯಿದು ಒಪ್ಪಣ್ಣ ಶುದ್ಧಿ.
    ಎಂಗಳ ಬಾಲ್ಯಲ್ಲು ಹೀಂಗಿಪ್ಪ ಜಗಳಂಗೊ ಎಲ್ಲ ಸುಮಾರು ಆಯಿದು.
    ಶಾಲೆಗೆ ಬುತ್ತಿ ತೆಕ್ಕೊಂಡು ಹೋದ ದಿನ ಏನಾರು ಕಾರಣಕ್ಕೆ (ಹೆಚ್ಚಾಗಿ ಮಳೆಗೆ) ರಜೆ ಸಿಕ್ಕಿರೆ ಮನೆಗೆ ಬಂದು ಅದೇ ಬುತ್ತಿಂದ ಉಂಡದೆಲ್ಲ ನೆಂಪಾತು.

    ~ಸುಮನಕ್ಕ…

    1. ಶಾಲೆಂದ ತಂದ ತಣ್ಕಟೆ ಉಂಡದು ಒಪ್ಪಣ್ಣಂಗೂ ನೆಂಪಾತು ಸುಮನಕ್ಕ.
      ಅದುದೇ ಮಳಗೆ ಇನ್ನೂ ತಣುದು ಕೋಡಿರ್ತು. ಅಲ್ಲದೋ?

      ನಿಂಗಳ ಮನೆಲಿ ಇಬ್ರು ಅಕ್ಕಂದ್ರಿಂಗೆ ಒಬ್ಬ ತಮ್ಮ ಅಲ್ಲದೋ? ಒಪ್ಪಣ್ಣನ ಮನೆಯ ಸಮಾ ಉಳ್ಟ!
      ಹೀಂಗೇನಾರು ಗವುಜಿ ಗಮ್ಮತ್ತು ನೆಡದ್ದೋ? ಬೈಲಿಂಗೆ ಹೇಳಿಕ್ಕಿ!

  12. ಆ ಕಾಲವೊಂದಿತ್ತು,ದಿವ್ಯ ತಾನಾಗಿತ್ತು,ಬಾಲ್ಯವಾಗಿತ್ತು!
    ಈಗಾಣ ಮಕ್ಕಳೂ ಬಾಲ್ಯವ ಸಂತೋಷಲ್ಲೇ ಅನುಭವಿಸುತ್ತಾ ಇದ್ದವು,ಅವರ ಪರಿಸರಲ್ಲಿ!ಅವರ ಹವ್ಯಾಸಲ್ಲಿ,ಪಾಠಲ್ಲಿ!
    ನಾವು ದೊಡ್ಡವು ನಮ್ಮ ಬಾಲ್ಯಕ್ಕೆ ಹೋಲಿಸಿಕೊಂಡು ಆಗಾಣ ಹಾಂಗೆ ಈಗಾಣ ಮಕ್ಕೊಗೆ ಸಂತೋಷ ಇಲ್ಲೆ ಹೇಳಿ ಗ್ರೇಶುದೋ ಹೇಳಿ ಎನಗೆ ತೋರುತ್ತು.

    1. ಗೋಪಾಲಣ್ಣ,
      ನಿಂಗೊ ಹೇಳಿದ ವಿಶ್ಯವೂ ಅಲ್ಲದ್ದಲ್ಲ; ಅವರವರ ಬಾಲ್ಯ ಅವಕ್ಕವಕ್ಕೆ ಮಧುರವೇ.
      ಆದರೂ – ಎನಗೆ ಎಂತ ಅನುಸುದು ಹೇಳಿತ್ತುಕಂಡ್ರೆ, ಮದಲಾಣ “ಅಪ್ಪಮ್ಮಂದ್ರು” ಈಗಾಣ ಅಪ್ಪಮ್ಮಂದ್ರಷ್ಟು ಅಂಬೆರ್ಪಿಲಿ ಇದ್ದಿದ್ದವಿಲ್ಲೆ – ಹೇದು.

      ತಂತ್ರಜ್ಞಾನ ಮುಂದುವರುದರೂ ಸಂಸಾರದ ಸಮಯ ಹಾಂಗೇ ಇರೆಕ್ಕಲ್ಲದೋ!

  13. ಅಪ್ಪಮ್ಮನೇ ಮಕ್ಕೊಗೆ ಸಮಯಕೊಟ್ಟು, ಆಟ ಆಡಿ-ಆಡುಸಿ, ಸೋತು- ಗೆದ್ದರೆ, ಮುಂದೆ ಮಕ್ಕೊ ದೊಡ್ಡ ಆದ ಮತ್ತೆ ಮಕ್ಕಳೂ ಸೋಲವು, ತಾನೂ ಸೋಲೇಕು ಹೇದು ಇಲ್ಲೆ. – ಅಬ್ಬಾ ನೀನೇ…
    ಹೀಗೆಲ್ಲ ಬರೆಕಾರೆ ನೀನೆ ಆಯೆಕಷ್ಟೆ ಒಪ್ಪಣ್ಣ… ಸೂಪರ್…!!!

    1. ಮಂಗ್ಳೂರುಮಾಣಿಯ ಒಪ್ಪ ಕಂಡು ಕೊಶಿ ಆತು.

      ನಿನ್ನ ಶುದ್ದಿಗಳೂ ಅರ್ಥಪೂರ್ಣವಾಗಿ, ತೂಕ ಇರ್ತು.
      ಶುದ್ದಿಗೊ ಬತ್ತಾ ಇರಳಿ.
      ಹರೇರಾಮ

  14. ಸೂಪರ್ ಶುದ್ದಿ ಒಪ್ಪಣ್ಣ…ನೆಗೆ ಮಾಡಿ ಮಾಡಿ ಹೊಟ್ಟೆ ಬೇನೆ ಸುರು ಆತು… 🙂
    ಪ್ರತೀ ಗೆರೆಯುದೆ ಇಷ್ಟ ಆತು…ಪರೀಕ್ಷೆ ಮುಗುದ ಖುಷಿಗೆ ಈ ಶುದ್ದಿ ಮತ್ತೂ ಖುಷಿ ಕೊಟ್ಟತ್ತು….

    ಬಾಲ್ಯದ ದಿನಂಗೋ ಎಲ್ಲ ನೆಂಪಾತು…ಚೆಸ್ಸ್ ಆಡಿದ್ದು..ಶಾಲೆಗೆ ಹೆರಟದು ಎಲ್ಲವೂ…..ಆ ದಿನಂಗೋ ಪುನ ಸಿಕ್ಕುತಿತರೆ ಎಷ್ಟು ಚಂದ ಅಲ್ಲದ…?
    ಮನೆಲಿ ಸಣ್ಣವು ಆಗಿ ಹುಟ್ಟುಲೇ ಪುಣ್ಯ ಬೇಕು…. ದೊಡ್ಡವರ ಸಪೋರ್ಟ್ ಇರ್ತು ಯಾವಾಗಲೂ 😉 ಗೆಲ್ಲುದು ನಾವೇ ಹೇಳುವ ಧೈರ್ಯ… 😉
    ಅಪ್ಪು.. ದೊಡ್ಡವು ಮಕ್ಕಳ ಆಡುಸಿ ಗೆಲ್ಲುಸಿರೆ ಅದು ಅವರ ಆತ್ಮವಿಶ್ವಾಸವ ಹೆಚ್ಚುಸುತ್ತು…ಆದರೆ ಈಗಾಣ ಕಾಲಲ್ಲಿ ಹೆಚ್ಚಿನ ಮಕ್ಕೊಗೆ ಅಂತ ಅವಕಾಶವೇ ಇರ್ತಿಲ್ಲೆ….ಅಪ್ಪ-ಅಮ್ಮ ಯಾವಾಗಲೂ ಬ್ಯುಸಿ.. 🙁
    {“ಮಕ್ಕೊ ಗೆಲ್ಲಲೆ ಬೇಕಾಗಿ ಅಪ್ಪಮ್ಮ ಸೋಲ್ತವು, ಇಂದಿಂಗೂ, ಎಂದೆಂದಿಂಗೂ.”}-ಒಂದೊಪ್ಪಕ್ಕೆ ಎನ್ನದೊಂದೊಪ್ಪ….

    1. ಯೇ ಕೂಸೇ.. ಪರೀಕ್ಷೆ ಮುಗುದ ಕೂಡ್ಳೆ ಬೈಲಿಂಗೆ ಬಪ್ಪೆ ಹೇದು ಕಾದೊಂಡಿತ್ತಿದ್ದೆ.
      ನೀ ಹೇಳಿದ ವಿಶಯ ಅಪ್ಪು ಆತಾ.

      ನೀನು ಸಣ್ಣ ಇಪ್ಪಗ ಅಪ್ಪ ಸೋತಿದವು; ನೀನುದೇ ಒಂದು ದಿನ ಸೋಲುವೆ.
      ಬೆಂದಷ್ಟು ತಣಿಯೆಡ!

  15. {ಮಕ್ಕೊ ಗೆಲ್ಲಲೆ ಬೇಕಾಗಿ ಅಪ್ಪಮ್ಮ ಸೋಲ್ತವು, ಇಂದಿಂಗೂ, ಎಂದೆಂದಿಂಗೂ.} ಇದು ಸಾರ್ವಕಾಲಿಕ ಸತ್ಯ. ಇದೇ ಸತ್ಯವ ಡಿ.ವಿ.ಜಿ. ತಮ್ಮ ಕಗ್ಗಲ್ಲಿ ಅವರದೇ ರೀತಿಲಿ ವಿವರಿಸಿದ್ದವು –

    ತನಗೆ ಬಾರದ ಲಾಭ ತನಯಂಗೆ ಬಂದಾಗ
    ಜನಕನ್ ಅದು ತನದೆಂದು ಸಂತಸಿಪ ತೆರದಿ ॥
    ಜನದೊಳಾರ್ಗಾವ ಸೊಗಸಾದೊಡಂ ತನದೆನ್ನು –
    ತನುಭವಿಪನೋ ಜ್ಞಾನಿ ಮಂಕುತಿಮ್ಮ ॥

    1. ಟೀಕೆಮಾವಾ,
      ಮಂಕುತಿಮ್ಮನ ಮಾತುಗೊ ಎಷ್ಟು ಅರ್ಥಪೂರ್ಣ! ಅವರ ಪದಲಾಲಿತ್ಯ, ಅರ್ಥಗಾಂಭೀರ್ಯ – ಎಲ್ಲವೂ ಹಾಲುಜೇನು.
      ಮಾವಾ, ನಿಂಗೊ ಬೈಲಿಂಗೆ ಕಗ್ಗವ ಪರಿಚಯ ಮಾಡುವಿರೋ? ನಿಂಗೊಗೆ ಕೊಶಿಯಾದ ಕಗ್ಗಂಗಳ?
      ಹೇಂಗೂ ಪಾರುಅತ್ತೆಗೆ ಅರ್ಥ ಹೇಳ್ತಿರಲ್ಲದೋ? ಅವರ ಹತ್ತರೆ ಬರದು ಮಡಿಕ್ಕೊಂಬಲೆ ಹೇಳಿಕ್ಕಿ!

  16. ಒಪ್ಪಣ್ಣಾ,
    ಮುಗ್ಧತೆಲಿ ಕೂಡಾ ತಾನು, ದೊಡ್ಡವರ ಹಾಂಗೆ ಆಡೆಕ್ಕು, ಅವರಹಾಂಗೆ ಆಯೆಕ್ಕು, ಆಟಲ್ಲಿ ಗೆಲ್ಲೆಕ್ಕು ಹೇಳ್ತ ಮಕ್ಕಳ ಮನೋಭಾವ ತುಂಬಾ ನೈಜವಾಗಿ ಬಯಿಂದು. ಒಂದಕ್ಕಿಂತ ಹೆಚ್ಚು ಮಕ್ಕೊ ಇಪ್ಪ ಮನೆಗಳಲ್ಲಿ ನೆಡೆವ ಘ್ಹಟನೆಗಳ ನೆಂಪು ಮಾಡಿ ಕೊಡ್ತು.
    ಎನಗೆ ಇಲ್ಲೊಬ್ಬ ೪ ವರ್ಷದ ಪುಟ್ಟ ಇದ್ದ. ಅವಂಗೆ ಹಾಂಗೆ. ಹಾವು ಏಣಿ ಆಟ, ಲೂಡೋ ಎಲ್ಲಾ ಅಡೆಕ್ಕು ಹೇಳಿ ಹಟ. ಕಾಯಿ ಸಿಲೆಕ್ಷನ್ ಅವನದ್ದೆ. ದಾಳ ಉರುಳುಸುವಾಗ ಎಷ್ಟು ಬರೆಕೋ ಅಷ್ಟು ಬಾರದ್ದರೆ, ಅದರ ಕೈಲಿ ತಿರುಗಿಸಿ ಆದರೂ ಅಕ್ಕು.
    ಗೆಲ್ಲುವದು ತಾನೇ ಆಯೆಕ್ಕು. ಹತ್ರೆ ಒಬ್ಬ ಕೂದರೆ ಸಾಕು, ಇನ್ನೊಬ್ಬನ ಆಟವನ್ನು ಅವನೇ ಆಡ್ತ.

    1. ಅಪ್ಪಚ್ಚೀ..
      ಒಪ್ಪಕ್ಕೆ ಒಪ್ಪಂಗೊ.

      { ಎನಗೆ ಇಲ್ಲೊಬ್ಬ ೪ ವರ್ಷದ ಪುಟ್ಟ ಇದ್ದ} – ನಿಂಗಳ ಸೋಲುಸಿ ಸೋಲುಸಿ ಅವನೂ ಗೆಲ್ಲಲ್ಲಿ.
      ದೊಡ್ಡ ಆದ ಮತ್ತೆ ಗೆಲ್ಲುವಗ ಎಲ್ಲವೂ ನಿಂಗಳ ನೆಂಪು ಮಾಡಲಿ ಅಪ್ಪಚ್ಚಿ.

  17. ನಮ್ಮ ನೆಂಟ್ರ ಮನಗೆ ಹೋಪದು ಹೇಳಿ ಪೇಟೆ ತಿರುಗಲೆ ಹೆರಟಪ್ಪಗ…
    ವೀಡ್ಯ ಗೇಮು ಆಡಿಂಡು ಒಳ ಕೂದ ಮಕ್ಕೊ,
    ಆರು ಬಂದದಪ್ಪಾ ಹೇಳಿ ನೋಡ್ಳೆ ಕೂಡಾ ಹೆರ ಬಾರದ್ದ ಸಂದರ್ಭಂಗೊ
    ಎಷ್ಟು ಜೆನಂಗೊಕ್ಕೆ ಬೇಜಾರ ತತ್ತು ಅಲ್ಲದೋ…?

    1. ದೊಡ್ಡಬಾವಾ, ಸರಿಯಾಗಿ ಹೇಳಿದಿ.

      ರೂಪತ್ತೆಮನೆಲಿ ಅದರ ಮಗಳು ಕೋಣೆಂದಲೇ ಹೆರಬಾರ ಅಡ ಮದಲಿಂಗೆ – ಅಜ್ಜಕಾನಬಾವ ಹೇಳುಗು.
      ನವಗೂ ಅನುಭವ ಇದ್ದು.
      ಸುರುಸುರುವಿಂಗೆ ಒಪ್ಪಣ್ಣಂಗೆ ಬೇಜಾರ-ಪಿಸುರುಗಳೇ ಬಂದೊಂಡಿದ್ದಿದ್ದು.

      ಹೆರಬಂದು ಮಾತಾಡಿರೆ ಅಲ್ಲಿ ಕಾರು ಡಿಕ್ಕಿಹೊಡದು ಆಟ ಹಾಳಾವುತ್ತಲ್ಲದೋ…

  18. ಎಂತ್ ಬರದ್ರೂ ಸಾಮಾಜಿಕ ಕಳಕಳಿ, ಮರಿತಾ ಇರ ಪರಂಪರೆ, ಸಂಸ್ಕೃತಿ ಬಿಟ್ಟಿದ್ದು….. ಇದ್ನೆಲ್ಲ ಸೇರ್ಸಿ ಬರ್ಯ ಒಪ್ಪಣ್ಣನ ಸಾಮಥ್ಯ೯ಕ್ಕೆ ನಮಸ್ಕಾರ… ಎಂಗೆ ಎಂತ ಅನುಸ್ತು ಅಂದ್ರೆ – ಇದು ಎಲ್ಲರಿಗು ಸಿಕ್ಕಕಿತ್ತು…. ಕನ್ನಡದಲ್ಲಿ ಇಂತ ಪ್ರಯತ್ನ ಮಾಡ್ಲಕ್ಕಿತ್ತು ಒಪ್ಪಣ್ಣ….

    1. ವಿದ್ವಾನಣ್ಣಾ,
      ಆಶೀರ್ವಾದಕ್ಕೆ ವಂದನೆಗೊ. ಶುದ್ದಿಯ ಓದಿ ಮೆಚ್ಚಿದ್ದಕ್ಕೆ ಕೃತಜ್ಞತೆಗೊ.

      {ಕನ್ನಡದಲ್ಲಿ ಇಂತ ಪ್ರಯತ್ನ ಮಾಡ್ಲಕ್ಕಿತ್ತು }
      – ಒಪ್ಪಣ್ಣಂಗೆ ಕನ್ನಡ ಸಮಗಟ್ಟು ಬತ್ತಿಲ್ಲೆ. ಒಪ್ಪಣ್ಣಂಗೆ ಅರಡಿವದು ಹವ್ಯಕ ಮಾಂತ್ರ! ಛೇ..
      ಬೈಲಿಲಿ ಕನ್ನಡ ಅರಡಿವೋರು ತುಂಬ ಜೆನ ಇದ್ದವು; ವಿದ್ವಾನಣ್ಣನ ಹಾಂಗಿಪ್ಪೋರು.

      ನಿಂಗಳ ಶುದ್ದಿಗೊ ಕನ್ನಡಲ್ಲಿ ಬಂದರೆ ನಿಜವಾಗಿಯೂ ರಸಾಸ್ವಾದ.
      ಎಂತ ಹೇಳ್ತಿ?

  19. ಸಣ್ಣ ಮಕ್ಕಳೊಟ್ಟಿಂಗೆ ಆಟ ಆಡಿ ನಾವು ಸೋತು, ಅವರ ಗೆಲ್ಲುಸುತ್ತರಲ್ಲಿ ಅದೆಷ್ಟು ಕೊಶಿ. ಅವು ಗೆಲ್ಲಲೆ ಅವಕಾಶ ಮಾಡಿಕೊಟ್ಟು ನಾವು ಸೋತರೂ, ಗೆದ್ದ ಹಾಂಗೇ. ಮಾಷ್ಟ್ರುಮಾವನ ಮನೆಯ ಅಣ್ಣ ತಮ್ಮ ತಂಗೆಯರ ರಸ ನಿಮಿಷಂಗಳ ಕಲ್ಪನೆ ಮಾಡೆಂಡು ಮನಸ್ಸಿಲ್ಲೇ ಕೊಶಿ ಪಟ್ಟೆ.
    ಶ್ರೀಶಣ್ಣ ಮೆಚ್ಚೆಂಡ ಹಾಂಗೆ ಪ್ರತಿಯೊಂದು ಗೆರೆಯುದೆ ಕೊಶಿ ಕೊಟ್ಟತ್ತು. ಒಪ್ಪಣ್ಣ ಕೊಟ್ಟ ವಿವರಣೆ ನೋಡಿರೆ, ಅಪ್ಪದು, ಹೇಳಿ ಕಂಡತ್ತು. ಬೆಳಿಕಾಯಿಯೇ ಬೇಕು ಹೇಳ್ತದು, ಕುದುರೆಯ ಸರ್ತ ನೆಡೆಸಿದ್ದದು, ಕಡೇಂಗೆ ಕಾಲಾಳು ಮಾಂತ್ರ ಒಳುದ್ದದು ಎಲ್ಲವುದೆ ನೈಜವಾಗಿಯೇ ಬಯಿಂದು. ಚೆಸ್ಸಿಲ್ಲಿ ಕೆಲವೊಂದರಿ ಒಬ್ಬನ ರಾಜ ಮಾಂತ್ರ ಒಳುದು, ಇಡೀ ಬಯಲಿಲ್ಲಿ ಈಚವನ ಕೈಗೆ ಸಿಕ್ಕದ್ದೆ ಒತ್ತೆ ಕಣ್ಣ ಗುಳಿಗನ ಹಾಂಗೆ ರಾಜ ಓಡುತ್ತದುದೆ ಇದ್ದು !!! ಅಂತೂ ತುಂಟಿ ಒಪ್ಪಕ್ಕನ ಹಟಮಾರಿತನ ಎನಗೆ ತುಂಬಾ ಕೊಶಿ ಕೊಟ್ಟತ್ತು.

    ಒಪ್ಪಣ್ಣ ಹೇಳಿದ ಹಾಂಗೆ ಮುಗ್ದ ಮಕ್ಕಳ ಆಟಂಗೊ ಪಾಟಂಗೊ, ಅವರ ಮನ ಬಿಚ್ಚಿದ ನೆಗೆ ಎಲ್ಲವೂ ಈಗಾಣ ಕಂಪ್ಯೂಟರು, ಟಿವಿಯ ಮರುಳಿಲ್ಲಿ ಮಾಯ ಆಯಿದು. ಮಕ್ಕಳ ಗೆಲ್ಲುಸಿ ಅವು ಜೀವನಲ್ಲಿ ಏವತ್ತೂ ಗೆಲ್ಲುತ್ತ ಹಾಂಗೆ ಮಾಡುವೊ, ಅಲ್ಲದೊ ?

    1. { ಒತ್ತೆ ಕಣ್ಣ ಗುಳಿಗನ ಹಾಂಗೆ } ಈ ಉಪಮೆ ಕಾಣದ್ದೆ ಎಷ್ಟು ಕಾಲ ಆತಪ್ಪೋ! ಓಹ್ ಹೋ!
      ಬೊಳುಂಬುಮಾವನ ಒಪ್ಪ ಕಂಡ್ರೆ ಕೊಶಿಕೊಶಿಯೇ ಅಪ್ಪದು.

      ಮಕ್ಕೊಗೆ ಒಳ್ಳೆ ವಾತಾವರಣ ಸಿಕ್ಕೇಕಾರೆ ಪುರುಸೊತ್ತು ಸಿಕ್ಕುವ ಹಳ್ಳಿ ಮನೆಯೇ ಆಯೆಕ್ಕಟ್ಟೆ ಹೇಳ್ತದು ರಂಗಮಾವನ ಅಭಿಪ್ರಾಯ.
      ಕೊಶಿಕೊಶಿ ಒಪ್ಪಕ್ಕೆ ಒಪ್ಪಂಗೊ ಮಾವಾ..

  20. ಶುದ್ದಿ ಲಾಯ್ಕ ಆಯ್ದು.
    ಕಣ್ಣೆದುರೇ ಕೂಸು ಕೂಗಿ ಬೆರೇ° ಶಬ್ದ ಕೇಳಿದಾಂಗಾತು. ಒಂದೊಂದು ಪಾತ್ರಂಗಳ ವಿವರಣೆ ಎಷ್ಟು ಲಾಯ್ಕ ಆಯ್ದು ಹೇಳಿರೆ ಮಾಷ್ಟ್ರು ಮಾವ ತಿದ್ದಿಗೊಂಡು ಇದ್ದ ಉತ್ತರ ಕಾಗತಲ್ಲಿ ಕೆಂಪು ಶಾಯಿಯ ಮಾರ್ಕುಗಳೂ ಕಾಂಬ ಹಾಂಗೆ, ಅತ್ತೆ ಕಾಯಿ ಕೆರವ ಕ್ರವ್ ಕ್ರವ್ ಶಬ್ದವೂ ಕೆಮಿಗೆ ಬಡುದ ಹಾಂಗೆ ಆಯ್ದು.
    ಶುದ್ದಿ ಓದಿ ಮುಗಿಶಿ ಆಪ್ಪಗ ಒಂದು ಸಾಕ್ಷ್ಯಚಿತ್ರ ನೋಡಿದ ಅನುಭವ ಆತು.
    ಅಂದ್ರಾಣ ಮಕ್ಕಳ ಆಟದ ಮೈದಾನಕ್ಕೂ , ಇಂದ್ರಾಣ ಮಕ್ಕಳ ಆಟದ ಮೈದಾನಕ್ಕೂ ಬೆಟ್ಟದಷ್ಟು ವೆತ್ಯಾಸ ಇದ್ದಪ್ಪೋ… ಹೇಳಿ ಒಂದೊಪ್ಪ

    1. { ಕ್ರವ್ ಕ್ರವ್ ಶಬ್ದವೂ ಕೆಮಿಗೆ ಬಡುದ ಹಾಂಗೆ }
      ಶುದ್ದಿ ಓದುವದರ ಒಟ್ಟಿಂಗೆ ಅದರ ಸ್ವಾದವ ಅನುಭವಿಸಿದ್ದು ಕಂಡು ಒಪ್ಪಣ್ಣಂಗೆ ಕೊಶಿ ಆತು.
      ನಮ್ಮ ಬಾಲ್ಯವೇ ನವಗೆ ಮಧುರ ಪಾಠ ಶಾಲೆ, ಅಪ್ಪೋ.

      ನವಗೆ ಅದುಕೊಶಿ ಕೊಡ್ತು; ಯೇವಗ ನೆಂಪುಮಾಡಿರೂ ಕೊಶಿ ಕೊಶಿಯೇ.
      ನಿಂಗಳದ್ದೆಂತ ಇದ್ದು ಹೀಂಗಿರ್ಸು??

  21. ಒಪ್ಪಣ್ಣೋ ಒಪ್ಪ ಲಾಯಿಕಾಯಿದು ಹೇಳಿ ಒಂದೊಪ್ಪ ,
    ಸವಿಸವಿ ನೆನಪು ಸಾವಿರ ನೆನಪು ………………, ಹೀಂಗಿರ್ತ ಇನ್ನೂ ಎಷ್ಟೆಷ್ಟೋ ನೆನಪುಗೊ ಇಕ್ಕಲ್ಲಾ……..?
    ಅದೆಲ್ಲವೂ ಮತ್ತೆ ನೆನಪಾಗಲಿ , ಮತ್ತೆ ಮತ್ತೆ ಎಲ್ಲೋರಿಂಗೂ ಅವರವರ ಬಾಲ್ಯದ ಸವಿನೆನಪುಗೊ ಕಣ್ಣಮುಂದೆ ಕಾಂಬಾಂಗಾಗಲಿ ಹೀಳಿ ಇನ್ನೊಂದೊಪ್ಪ .

    1. ಷೇಡ್ಯಮ್ಮೆ ಪುಳ್ಳಿಯ ಒಪ್ಪ ಭಾರೀ ಕೊಶಿ ಆತನ್ನೇ!

      ಸಣ್ಣ ಇಪ್ಪಗಾಣ ಸಾವಿರ ನೆಂಪುಗೊ ಎಲ್ಲೋರಿಂಗೂ ಇರ್ತು. ಬೈಲಿಂಗೆ ಬಿಚ್ಚಿ ಮಡಗಿರೆ ಎಲ್ಲೋರುದೇ ಕೊಶಿಪಡವಲಕ್ಕು.
      ನಿನ್ನದೂ ಇದ್ದೋ ಹೇಂಗೆ? ಮಜಲುಕರೆಯ ಮಜಲಿಂದ ತೋಡಕರೆಂಗೆ ಹಾರಿದ್ದು?
      ಅಜ್ಜಕಾನ ಬಾವಂಗೆ ಪೀಟ್ರೋಲಿಲಿ ಚಳಿಕಾಸಿದ್ದು – ಹೀಂಗೆಂತಾರು? 😉
      ಇದ್ದರೆ ಹೇಳಿಕ್ಕು, ಅವಂಗೆ ಹೆದರೆಕ್ಕು ಹೇಳಿಲ್ಲೆ.. ಆತೋ? 😉

  22. ಒಪ್ಪಣ್ಣೋ.
    ಶುದ್ದಿ ಕೊಟ್ಟದು ಫಷ್ಟಾಯಿದು. ನೆಗೆ ಮಾಡಿ ಸಾಕತು. ಹತ್ರೆ ಆರೂ ಇತ್ತಿದ್ದವಿಲ್ಲೆ ಇದಾ 🙂
    ಆಟಲ್ಲಿ ಹೀಂಗಿಪ್ಪ ಕೊಶಿ ಸಿಕ್ಕೆಕ್ಕಾರೆ ಸಣ್ಣ ಮಕ್ಕಳೊಟ್ಟಿಂಗೆ ಆಡೆಕ್ಕು. ಅವಕ್ಕೆ ಗೆಲ್ಲುವದು ಮುಖ್ಯ.
    ಅದು ಅವರ ಆತ್ಮ ವಿಶ್ವಾಸ ಹೆಚ್ಚು ಅಪ್ಪಲೆ ಒಳ್ಳೆದಾವ್ತಲ್ಲದ.
    ಒಂದೊಪ್ಪ ಲಾಯಿಕ ಆಯಿದು -ಮಕ್ಕೊಗೆ ಬೇಕಾಗಿ ಅಬ್ಬೆ ಅಪ್ಪ ಆಟಲ್ಲಿ ಸೋಲೆಕ್ಕಾವ್ತೇ.
    ಎನಗೆ ಕೆಲವು ಸಾಲುಗೊ ತುಂಬಾ ಕೊಶೀ ಆತು:

    *ಮಧ್ಯಾನ್ನದ ಊಟವ ಆ ಕುಂಞಿ ಬುತ್ತಿಲಿ ತುಂಬುಸಿಗೊಂಡು – ಹಟ್ಟಿ ಬೈಪ್ಪಾಣೆಲಿ ಕೂದು ತಣ್ಕಟೆ ಉಂಡಿಕ್ಕಿ ಬಕ್ಕು ಅದು.
    “ಬೆರೇ°…” ಹೇದು ಬರೇ ಅರ್ಗೆಂಟುರಾಗ.
    *ದೊಡ್ಡ ಮಳೆ ಮುಗುದು ಹನಿಕ್ಕೊಟ್ಟು ಬಿದ್ದುಗೊಂಡಿದ್ದ ಹಾಂಗೆ, ಒಪ್ಪಣ್ಣ ಎತ್ತುವಗ ಕುಸ್ಕು – ಕುಸ್ಕು ಮಾಂತ್ರ ಕೇಳಿಗೊಂಡಿದ್ದತ್ತು.
    *ಇದರ ಕೇಳಿದ ಕೂಡ್ಳೇ – ಮಂದ್ರಲ್ಲೇ ಇದ್ದಿದ್ದ ಕೂಸಿನ ಅರ್ಗೆಂಟುರಾಗ – ಮತ್ತೊಂದರಿ ಮಧ್ಯಮಕ್ಕೆ ಏರಿತ್ತು.
    *‘ಎಂತಕೆ ಮಗೋ ಅದರ ಎಳಗುಸುತ್ತೇ..’ – ಹೇಳಿ ಒಳಂದ ಅತ್ತೆ ಕೇಳುವಗ – ಸಪೋಲ್ಟು ಸಿಕ್ಕಿತ್ತಲ್ಲದೋ ಕೂಸಿಂಗೆ – ಮಧ್ಯಮಂದ ತಾರಕ್ಕೆ ಎತ್ತಿತ್ತು!!
    *ನೀರು ತುಂಬಿದ ಕಣ್ಣಿನ ಉದ್ದಿಗೊಂಡು, ಅಂಗಿಯ ಕೋಲರಿನ ಬಾಯಿಗೆ ಹಾಕಿ ನೆಗೆಮಾಡಿತ್ತು.
    *ಪ್ರತಿ ನಡೆಲಿಯೂ ಒಂದೊಂದು ಕಾಯಿ ಕಡುದು, ರಜ್ಜ ಹೊತ್ತು ನೋಡುವಗ ಮಾಷ್ಟ್ರುಮಾವನ ಒಂದು ಕಾಲಾಳು ಮಾಂತ್ರ ಬಾಕಿ!ಕೂಸಿಂಗೆ ಕೊಶಿಯೇ ಕೊಶಿ.ಅದರ ಅರ್ಗೆಂಟು ನಿಂದ ಕೊಶಿ ಮಾಷ್ಟ್ರುಮಾವಂಗೆ

    1. ಶ್ರೀಶಣ್ಣ, ಬಯಂಕರ ಅಪುರೂಪ ಆಗಿ ಹೋದೆನ್ನೇಪ್ಪಾ!
      ಮೋರೆ ತೋರುಸಲೂ ಪುರುಸೊತ್ತಿಲ್ಲದ್ದೆ, ಆಚಹೊಡೆಂಗೆ ತಿರುಗಿಯೇ ಮಾತಾಡ್ತೆ. ಅಪ್ಪೋ!

      ಶುದ್ದಿಲಿ ಶ್ರೀಶಣ್ಣಂಗೆ ಕೆಲವು ಸಾಲುಗೊ ಇಷ್ಟ ಆದ್ಸರ ಕಂಡು ಒಪಣ್ಣಂಗೂ ಕೊಶಿ ಆತು.
      ಆತ್ಮವಿಶ್ವಾಸ ಜಾಸ್ತಿ ಮಾಡ್ಳೇ ಅಪ್ಪಮ್ಮ ಸೋಲ್ತದು ಹೇಳಿ ಮಾಷ್ಟ್ರುಮಾವನ ಮಗಳಿಂಗೆ ಈಗ ಗೊಂತಾಯಿದು!

    1. 🙂 🙂
      ಪೆರುವದಣ್ಣಂಗೆ ಭಾರೀ ನೆಗೆ ಬತ್ತನ್ನೇ!?
      ಎಂತಾರು ನೆಂಪಾತೋ – ಸಣ್ಣ ಇಪ್ಪಾಗ ತಮ್ಮನ ಎಳಗುಸಿ ಅಪ್ಪಮ್ಮನ ಕೈಂದ ಪೊಳಿ ತಿಂದದೋ ಮಣ್ಣ..?!
      ನೆಂಪಾದರೆ ಹೇಳಿಕ್ಕಿ ಬೈಲಿಂಗೆ.. ಆತೋ? 😉

  23. [ಸೇರಿ ಸಮದಾನ ಮಾಡ್ತದು ]- ನಿಜವಾದ ಪ್ರೀತಿ ಭಯ ಭಕ್ತಿ ಶಾಶ್ವತ ಉಳಿವದು ಇಲ್ಲಿಂದಲೇ.
    ಅಲ್ಲದ್ರೆ ಈಗಾಣ ಪೇಟೆ ಮಕ್ಕೊ, ಎಲ್.ಕೆ.ಜಿ. ಮಕ್ಕೊ ರೂಮಿಲ್ಲಿ ಬಾಗಿಲು ಹಾಕಿ ಬೋಲ್ಟ್ ಹಾಕಿ ಕಂಪ್ಯೂಟರ್ ಆನ್ ಮಾಡಿ ಪುಸ್ತಕ ಓದುತ್ತದು ! ಆ ಹೊತ್ತಿಂಗೆ ನಿಂಗೊ ಒಂದರಿ ಬಾಗಿಲು ತೆಗೆಯೋ° ಹೇಳಿ ನೋಡಿ!!!

    ಭಾವ, ‘ಮನಸ್ಸಿನ ಒಳ್ಳೆತ ಚಿಂತನೆಗೆ ಅವಕಾಶ ಕೊಡುವ ಶುದ್ದಿ’ ಹೇಳಿ ಒಪ್ಪಿತ್ತು -‘ಚೆನ್ನೈವಾಣಿ’

      1. ಓಹ್…. ಭಾರೀ ಅಪರೂಪದೋರು!

        ಇದಾ ಇಷ್ಟು ಅಪರೂಪ ಆಗಿಕ್ಕೇಡಿ . ಬಂದುಗೊಂಡಿರಿ. ಬರಕ್ಕೋಂಡಿರಿ ಬಂದ ಗುರ್ತಕ್ಕೆ.

        ಹೇಳಿದಾಂಗೆ, ನಾಡದು ಜನವರಿ ಒಂದಕ್ಕೆ ನಮ್ಮ ಚೆನ್ನೈ ಹವ್ಯಕದ ಒಂದು ಕಿರು ‘ಸೌಹಾರ್ದಕೂಟ’ ಮಾಡುದು ಹೇಳಿ ನಿಘಂಟು ಮಾಡಿದ್ದು. ನಿಂಗಳೂ , ನಿಂಗಳ ಹವ್ಯಕ ಬಂಧುಗಳನ್ನೂ ಕರಕ್ಕೊಂಡು ಬಂದು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳುಸೆಕು ಹೇಳಿ ಈ ಮೂಲಕ ನಿಂಗೊಗೂ ಬೈಲ ಹತ್ತು ಸಮಸ್ತರಿಂಗೂ ಆಮಂತ್ರಣ. ನಿಂಗಳ ಪೈಕಿ ಹವ್ಯಕರಿಂಗೂ ತಿಳಿಸಿಕ್ಕಿ.

        ದಿನಾಂಕ : ಜನವರಿ ೧ ೨೦೧೨
        ಸಮಯ : ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ತನಕ.
        ಸ್ಥಳ : SUNNYVALE,
        C Block, 6th Floor, Party Hall,
        351, Konnur High Road, Ayyanavaram,
        Chennai – 600 023.
        Ph: 044- 2674 7545, / 9500091720 (Mrs. Vidya Bhat)
        98401 22595 (Mr. Arunachalam)

        ಧನ್ಯವಾದಗಳು.

        1. ಚೆನ್ನೈಭಾವಾ, ಯೇವತ್ರಾಣ ಹಾಂಗೇ ಸುರೂವಿಂಗೆ ಒಪ್ಪ ಕೊಟ್ಟದು ಕೊಶಿ ಆತು.
          ಚೆನ್ನೈವಾಣಿ ಕೇಳಿಅಪ್ಪಗಳೇ ಸಮಾದಾನ ಆದ್ಸು!
          ಮಕ್ಕೊಗೆ ಈಗ ಸಂಘಜೀವನಂದಲೂ ಏಕಾಂತ ಜೀವನ ಇಷ್ಟ ಆವುತ್ತು, ಇದು ಒಳ್ಳೆದಲ್ಲ- ಹೇಳ್ತದು ಸಂಘಲ್ಲಿಪ್ಪ ಕುಡ್ಪಲ್ತಡ್ಕ ಭಾವನ ಅಭಿಪ್ರಾಯ.

          ಅದಾ, ಅದ್ವೈತಕೀಟ ಇಷ್ಟು ಸಮಯ ಎಲ್ಲಿತ್ತಂಬಗ!
          ಯೇವದಾರು ನುಸಿಬಲೆಯೋ ಮಣ್ಣ ಇತ್ತೋ ಹೇಂಗೆ? ಏ°??

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×