ನಾವು ದನವ ಕಟ್ಟಿ ಹಾಕುದೋ, ದನವೇ ನಮ್ಮ ಕಟ್ಟಿ ಹಾಕುದೋ?

ತ್ರಿಕಾಲ ಪೂಜೆ ಹೇದರೆ ಮೂರೊತ್ತೂ ದೇವಿಯ ಆರಾಧನೆ. ಉದಿಯಪ್ಪಗ ಬಾಲಾತ್ರಿಪುರಸುಂದರಿ, ಮಧ್ಯಾಹ್ನ ವನದುರ್ಗೆ, ಇರುಳಿಂಗೆ ಸ್ವಯಂವರಪಾರ್ವತಿ – ಹೀಂಗೆ ದುರ್ಗೆಯ ಬೇರೆಬೇರೆ ರೂಪಂದ ಆರಾಧನೆ ಮಾಡಿ, ವಿಶೇಷ ಅಷ್ಟಾವಧಾನ ಸೇವೆ ಕೊಟ್ಟು ಮಂಗಳಾರತಿ ಮಾಡ್ತದು ತ್ರಿಕಾಲ ಪೂಜೆಯ ಗೌಜಿ. (ತ್ರಿಕಾಲಪೂಜೆಯ ಬಗ್ಗೆ ಈ ಮೊದಲು ಹೇಳಿದ ವಿವರವಾದ ಶುದ್ದಿ : ನೂರ್ಕಾಲ ಹರಸುವ ‘ತ್ರಿಕಾಲ ಪೂಜೆ’).

ದೊಡ್ಡಜ್ಜನ ಮನೆಲಿ ಕಳುದವಾರ ಗೌಜಿಯ ತ್ರಿಕಾಲಪೂಜೆ ಕಳಾತು. ನೆಂಟ್ರಿಷ್ಟ್ರು ಎಲ್ಲೋರುದೇ ಬಂದು ಚೆಪ್ಪರಗೌಜಿ ಸಾಲದ್ದೆ, ಇಂಗ್ರೋಜಿ ಹಬ್ಬವೂ ಇದ್ದ ಕಾರಣ ಶಾಲೆಗೆ ರಜೆ ಹೇದು- ಶಾಲೆಮಕ್ಕಳೂ ಸೊಕ್ಕಿ ಪೂಜೆಯ ಮನೆ ಇಡೀ ಗಲಗಲ ಆಗಿತ್ತು. ಮಜ್ಜಾನಕ್ಕೆ ಹೋಳಿಗೆ, ಇರುಳಿಂಗೆ ಲಾಡು. ಸತ್ಯಾರ್ಣಪೂಜೆ ಇದ್ದ ಕಾರಣ ಉಂಡೆ ಪ್ರಸಾದವೂ ಇದ್ದತ್ತು. ಒಟ್ಟಿಲಿ ಗೌಜಿಯ ಪೂಜೆದಿನ ಅದು.

ಎರಡ್ಣೆಹಂತಿಗೆ ಸುಧಾರಿಕೆ ಮಾಡ್ಳೇದು ಒಪ್ಪಣ್ಣ ಸುರುವಾಣ ಊಟದಕ್ಷಿಣೆ ಹಂತಿಲಿಯೇ ಕೂದ್ಸು. ಉಂಡ ಹಾಂಗೇ ಬೇಗ ಹೆರಡೆಕ್ಕು ಹೇದು ಪಾರೆಮಗುಮಾವನೂ ಸುರುವಾಣ ಹಂತಿಲಿ ಕೂದವು. ಬಟ್ಟಮಾವಂದ್ರು, ಗುರಿಕ್ಕಾರ್ರು, ಅಂಗಿತೆಗದು ಉಣ್ತ ಅಜ್ಜಂದ್ರು, ನೆರೆಕರೆ ನೆಂಟ್ರ ಹೆರಿಯೋರು – ಎಲ್ಲೋರುದೇ ಮಾತಾಡಿಗೊಂಡು, ಚೂರ್ಣಿಕೆ ಹೊಟ್ಟುಸಿಗೊಂಡು ಉಂಡದಾದರೂ, ಒಪ್ಪಣ್ಣಂಗೆ ಮಗುಮಾವನ ಹತ್ತರೆ ಪಟ್ಟಾಂಗಕ್ಕೆ ಸಮಸ್ಯೆ ಆಯಿದಿಲ್ಲೆ!
~
ಬೈಲಿನೊಳಾಣ ನೆಂಟ್ರೇ ಆದರೂ – ಅಪ್ರೂಪಲ್ಲಿ ಸಿಕ್ಕಿದ ಮಗುಮಾವನತ್ರೆ ಮಾತಾಡ್ಳೆ ಹಲವು ವಿಚಾರಂಗೊ ಇದ್ದತ್ತು. ಹಾಂಗಾರೆ, ಮಗು ಅತ್ತೆ ಬಯಿಂದವಿಲ್ಲೆಯೋ – ಎಡೆಲಿ ಒಂದರಿ ಕೇಳಿದೆ. “ಇಲ್ಲೆ ಒಪ್ಪಣ್ಣ, ಹೆರಡ್ಳೇಳಿ ಗ್ರೇಶುವಗ ಒಂದು ಗಡಸು ಕಂಜಿ ಹಾಕಿತ್ತು. ಹಾಂಗೆ ಅದು ನಿಂದತ್ತು” ಹೇದವು.
“ನಾವು ದನವ ಕಟ್ಟಿ ಸಾಂಕುದು ಹೇದು ಗ್ರೇಶುದು, ಆದರೆ ಯತಾರ್ಥಕ್ಕೆ ದನಗಳೇ ನಮ್ಮ ಕಟ್ಟಿ ಹಾಕುತ್ತವು; ಬಳ್ಳಿ ಇಲ್ಲದ್ದೇ ಕಟ್ಟಿ ಹಾಕುತ್ತವು” – ಹೇದವು ಮಗುಮಾವ!
ಅಪ್ಪನ್ನೇ ಕಂಡತ್ತು ಒಪ್ಪಣ್ಣಂಗೆ.

ಹುಟ್ಟಿದ ದನದ ಕಂಜಿ ಎದ್ದು ನಿಂದ ಕೂಡ್ಳೇ ಅದರ ಕೊರಳಿಂಗೊಂದು ಬಳ್ಳಿ ಹಾಕುತ್ತು ನಾವು. ದೊಡ್ಡ ಆದ ಹಾಂಗೇ ಕೊರಳಿನ ಬಳ್ಳಿಯೂ ದೊಡ್ಡ ಆವುತ್ತು. ದನಗೊ ಯಾವಗಳೂ ನಮ್ಮ ಅಂಕೆಲೇ ಇರೆಕ್ಕು, ನಮ್ಮ ಬಂಧನಲ್ಲೇ ಇರೆಕ್ಕು – ಹೇಳಿ ನಾವು ಗ್ರೇಶುದು.

ಆದರೆ, ನಿಜ ವಿಷಯ – ನಾವು ಅದರ ಬಂಧನಲ್ಲಿ ಇಪ್ಪದು.
ಹೇಂಗೆ? – ಮನೆಲಿ ಅರ್ಧಕ್ಕರ್ಧ ಕೆಲಸ ದನಕ್ಕೆ ಬೇಕಾಗಿಯೇ ಇಪ್ಪದು!
ಉದಿಯಾದರೆ ಅದಕ್ಕೆ ಅಕ್ಕಚ್ಚು ಕೊಡೆಕ್ಕು; ಅದರ ಕಂಜಿಯ ಬಿಡೆಕ್ಕು; ಅದಕ್ಕೆ ಕಾಲಾಡ್ಳೆ ಗುಡ್ಡೆಗೆ ಬಿಡೆಕ್ಕು; ಎಡೆ ಹೊತ್ತಿಲಿ ನೀರು ಕೊಡೆಕ್ಕು; ಅದಕ್ಕೆ ಹೊಟ್ಟೆ ತುಂಬಲೆ ಹಸಿಹುಲ್ಲು ಕೊಡೆಕ್ಕು; ಬಾಯಾಡುಸುಲೆ ಬೆಳುಲು ಕೊಡೆಕ್ಕು, ಹಶು ಅಡಗುಲೆ ಹಿಂಡಿ ಕೊಡೆಕ್ಕು; ಮಡ್ಡಿ ಬೇಶೆಕ್ಕು, ರೋಗ ಇತ್ಯಾದಿ ಬಾರದ್ದ ಹಾಂಗೆ ಬೇಕುಬೇಕಾದ ಉಪಚಾರಂಗೊ ಮಾಡೆಕ್ಕು.. ಇನ್ನೂ ಎಂತೆಂತೋ!

ಹೀಂಗಿಪ್ಪಗ ಹಟ್ಟಿಲಿ ದನ ಇದ್ದರೆ ಬಿಟ್ಟಿಕ್ಕಿ ನೆಂಟ್ರಮನೆಗೆ ಹೋತಿಕ್ಕಲೆ ಗೊಂತಿಲ್ಲೆ. ಎಲ್ಲಿಗೆ ಹೋದರೂ, ಹೊತ್ತಪ್ಪಗ ಕಂಜಿಬಿಡ್ಳೆ / ಕರವಲೆ / ಮಡ್ಡಿ ಮಡಗಲೆ ಎತ್ತಲೇ ಬೇಕಾವುತ್ತು. ಸಮಯಕ್ಕೆ ಸರಿಯಾಗಿ ಸಿಕ್ಕದ್ದರೆ ಹಟ್ಟಿಂದ ಉಂಬೆ ಅಬ್ಬೆಗೊ – “ಹೂಂ, ಬರಳೀ” – ಹೇದು ಕೇಳುಲೆ ಸುರು ಮಾಡ್ತವು.

ಎಂತಕೆ? ಅದುವೇ ನಮ್ಮ ಬಳ್ಳಿ ಇಲ್ಲದ್ದೆ ಕಟ್ಟಿ ಹಾಕಿದ ಬಂಧನ.

~
ಹಂತಿ ಊಟ ಮುಗುದಪ್ಪದ್ದೇ – ಹಾಲು ಕರದು ಡಿಪೋಕ್ಕೆ ಕೊಡ್ಳಿದ್ದು – ಹೇದು ಮಗುಮಾವ ಅಂಬೆರ್ಪಿಲಿ ಕೈ ಉದ್ದಿಗೊಂಡು ಹೆರಡುದು ಕಂಡತ್ತು.

ಒಂದೊಂದರಿ ನಾವು ಯೇವದರ ನಮ್ಮ ವಶಲ್ಲಿ ಮಡಗಿದ್ದು ಹೇದು ಗ್ರೇಶುತ್ತೋ – ನಿಜವಾಗಿ ನೋಡಿದರೆ ನಾವೇ ಅದರ ಕೈವಶ ಆಗಿರ್ತು – ಹೇದು ಮಗುಮಾವ ಹೇಳಿದ ವಿಚಾರ ಅಪ್ಪನ್ನೇ ಹೇದು ಆಲೋಚನೆಗೆ ಬಂತು.

ಮೊಬೈಲುದೇ ಹಾಂಗೇ – ನವಗೆ ಬೇಕಾದಪ್ಪಗ ಬಳಸುಲೆ ಇಪ್ಪದು, ಈಗ ಮೊಬೈಲು ಕಿಣಿ ಕಿಣಿ ಹೇಳಿಯಪ್ಪಗ ಬಾಯಿಮುಚ್ಚಿಗೊಂಡು ಅದಕ್ಕೆ ಬೇಕಾದ ಹಾಂಗೆ ಮಾಡ್ತದು ನಮ್ಮ ಕ್ರಮ ಆಯಿದು.

ಅಲ್ದೋ?
~
ಒಂದೊಪ್ಪ: ಪ್ರೀತಿ ತುಂಬಿದ ಬಂಧನವೇ ಜೀವನದ ಆನಂದಕ್ಕೆ ಕಾರಣ.

ಒಪ್ಪಣ್ಣ

   

You may also like...

1 Response

  1. ಬೊಳುಂಬು ಗೋಪಾಲ says:

    ಕರವಲಪ್ಪಗ ಮನಗೆ ಎತ್ತೆಕು ಹೇಳಿ ಎರಡ್ನೇ ಹಂತಿ ಉಂಡಪ್ಪಗಳೇ ಜಾರ್ತ, ಹತ್ರಾಣ ತುಂಬಾ ನೆಂಟರ ಕಂಡಿದೆ. ಒಪ್ಪಣ್ಣ ಹೇಳಿದ್ದು ನಿಜ. ನಮ್ಮ ಬಳ್ಳಿ ಇಲ್ಲದ್ದೇ ಕಟ್ಟಿ ಹಾಕುತ್ತು ದನ. ಕಡೇಣ ಒಂದೊಪ್ಪಲ್ಲಿ ಸಾವಿರ ಮಾತುಗೊ ಅಡಗಿದ್ದು. ಸಂಸಾರದ ಸಾರವ ಸಾರಿ ಹೇಳುತ್ತು ಆ ಮಾತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *