Oppanna.com

ಮನೆಕೊಟ್ಟು ಕೂರ್ಸಿದ ದಣಿಗಳ ನುಂಗುಲೆ ಹೆರಟ ಶುದ್ದಿ..!

ಬರದೋರು :   ಒಪ್ಪಣ್ಣ    on   20/11/2015    2 ಒಪ್ಪಂಗೊ

ಪಳ್ಳತಡ್ಕ ದೊಡ್ಡಪ್ಪ ಹೇದರೆ ಮಹಾ ಸಾತ್ವಿಕರು. ಸದಾ ನೆಗೆಮೋರೆಲಿ ಇರ್ಸು. ತುಂಬಾ ಪರೋಪಕಾರಿ ಹೇದು ಊರಿಲಿ ಹೆಸರಿದ್ದು.
ದೊಡಾ ಮನೆಯ ಎಜಮಾನಿಕೆ ಮಾಡುವಾಗ ಬೈಯದ್ದೆ, ಪರಂಚದ್ದೆ ಮುನ್ನಡೆಶುದ್ದು ಹೇದರೆ ಸುಲಭದ ಮಾತಲ್ಲ ಬಿಡಿ; ಅಂದರೂ – ಅವು ಕೋಪ ಮಾಡಿದ್ದರ ಕಂಡೋರಿಲ್ಲೆ.
ಆರಿಂಗೂ ಒಂದಕ್ಷರ ಬೈದೋರಲ್ಲ, ಬೇನೆ ಮಾಡಿದೋರಲ್ಲ.
ಎಲೆ ತಿಂಬಲೆ ಅಡಕ್ಕೋಳಿಂಗೆ ಬಡಿವಗಳೂ – ಎಲ್ಲಿ ಬೇನೆ ಅಕ್ಕೋ ಪಾಪ – ಹೇದು ಜಾಗ್ರತೆ ಮಾಡಿಗೊಳ್ತವು. ಪುಗೆರೆಗೆ ಚೂಂಟುವಗಳೂ ಹಾಂಗೇ! 😉
ಈಗ ಅವಕ್ಕೆ ಪ್ರಾಯ ಆತು ಬಿಡಿ, ಮದಲೂ ಹಾಂಗೇ – ಅವರ ಏರು ಜವ್ವನಲ್ಲಿ, ಬೆಶಿ ನೆತ್ತರಿನ ಕಾಲಲ್ಲಿಯೂ ತುಂಬಾ ಸಮದಾನಿ.
~

ಅವರ ಹೆರಿಯೋರಿಂದ ಬಂದ ದೊಡಾ ಜಾಗೆಲಿ ಅವು ಮಾಂತ್ರ ಉದ್ಧಾರ ಅಪ್ಪದಲ್ಲದ್ದೆ, ಅದರೊಟ್ಟಿಂಗೆ ಹತ್ತು ಹನ್ನೆರಡು ಒಕ್ಕಲು ಮನೆಗಳೂ ಇದ್ದತ್ತು.
ಜಾಗೆಲಿ ದುಡುದ್ದಕ್ಕೆದಕ್ಕಿತ ಗೇಣಿ ಕೊಡ್ತ ವ್ಯವಹಾರ ಮಾಂತ್ರ ಅಲ್ಲ, ಧಣಿಗೊ ಹೇದರೆ ಸಾಕ್ಶಾತ್ ದೇವರು – ಹೇಳ್ತಾಂಗೇ ನೋಡುಗು.
ದೊಡ್ಡಪ್ಪನೂ ಹಾಂಗೇ ಅಂಬಗಂಬಗ ಅವರ ವಿಚಾರ್ಸಿಗೊಂಡು ಎಂತಾರು ತೊಂದರೆ ಇತ್ಯಾದಿಗೊ ಇದ್ದೋ ಹೇದು ಕೇಟೊಂಡು ಇತ್ತಿದವಾಡ.

ಮುಂದೆ ಒಕ್ಕಲು ಹಕ್ಕು ಕಾನೂನು ಬಪ್ಪಗ ದೊಡ್ಡಪ್ಪನೇ ಸ್ವತಹ ಒಕ್ಕಲುಗೊಕ್ಕೆಲ್ಲ ಜಾಗೆ ಕರೆಲಿ ಒಂದೊಂದು ಮನೆ ಕಟ್ಟಿ ವೆವಸ್ತೆ ಮಾಡಿ ಕೊಟ್ಟವಾಡ. ಇಂದಿಂಗೂ ದೊಡ್ಡಪ್ಪನ ಜಾಗೆ ಕರೆಲಿ ಕೆಲವು ಮನೆಗೊ ಇದ್ದು, ಅವು ಸರ್ವತಂತ್ರ ಸ್ವತಂತ್ರ ಆದರೂ – ದೊಡ್ಡಪ್ಪನ ’ದನಿಕ್ಕುಳು’ ಹೇಳಿಯೇ ಹೇಳುದು; ಬಟ್ಯ ಮಾಷ್ಟ್ರುಮಾವನ ಹೇಳ್ತ ಹಾಂಗೆ.
~

ಎಲ್ಲವೂ ಚೆಂದಲ್ಲಿ ನೆಡಕ್ಕೊಂಡು ಇದ್ದತ್ತು. ದೊಡ್ಡಪ್ಪನ ಜಾಗೆಲಿ ಒಕ್ಕಲಾಗಿ ನಿಂದರೆ ಬರ್ಖತ್ತು ಆವುತ್ತು – ಹೇದು ಅಂದು ಪ್ರಚಾರ ಇದ್ದಿದ್ದ ಕಾಲ ಅದು.
ಆ ಸಮೆಯಲ್ಲಿ ಆರೋ – ಎಲ್ಯಾಣದ್ದೋ ಒಂದು ಜೆನ ದೂರದೂರಿಂದ ಬಂದು ದಮ್ಮಯ ದಕ್ಕಯ ಹಾಕಿ ದೊಡ್ಡಪ್ಪನ ಕೈಕ್ಕಾಲು ಹಿಡುದು ಬೇಡಿತ್ತಾಡ.
ಹನ್ನೊಂದು ಸಂಸಾರ ಇದ್ದು, ಇನ್ನೊಂದು ಸಂಸಾರ ನಮ್ಮ ಜಾಗೆಲಿ ಇದ್ದರೆ ತೊಂದರೆ ಆಗಪ್ಪ – ಹೇದು ದೊಡ್ಡಪ್ಪ ನಿಗಂಟು ಮಾಡಿದವು.
ದೊಡ್ಡಪ್ಪನ ಜಾಗೆಲೇ ಬೈಲಕರೆ ಹೊಳೆ ಹೋಪದಿದಾ, ಆ ಜಾಗೆಯ ಆಚ ಹೊಡೆಲಿ ದೊಡ್ಡಪ್ಪನ ದರ್ಖಾಸು ಇದ್ದು, ಆ ದರ್ಖಾಸಿನ ಒತ್ತಕ್ಕೆ ಆ ಜೆನಕ್ಕೆ ಇಪ್ಪಲೆ ಅವಕಾಶ ಕೊಟ್ಟವು.
ಮನೆ ಕಟ್ಟಿ, ಸಂಸಾರ ಸಹಿತ ಬದ್ಕುಲೂ ಸುರು ಮಾಡಿತ್ತು.

ಆ ಜೆನಕ್ಕೆ ಆಚಾರಿ ಕೆಲಸ ಅರಡಿವದಿದಾ; ಒಳುದೋರ ಹಾಂಗೆ ತೋಟಲ್ಲಿ ದುಡಿವ ಅಭ್ಯಾಸ ಇಲ್ಲೆ.
ಸರಿ ಹಾಂಗಾರೆ, ಎಂಗಳ ಮನೆಂದಲೇ ಕೆಲಸ ಸುರು ಆಗಲಿ – ಹೇದು ದೊಡ್ಡಪ್ಪ ಕೆಲಸವೂ ಕೊಟ್ಟವು. ಹೇಂಗೂ ಊರಿನ ಕೊಗ್ಗು ಆಚಾರಿಗೆ ಕಣ್ಣಿನ ಪೊರೆ ಬಂದು ಗೀಟು ಓರೆ ಆವುತ್ತು – ಹೇದು ಕೆಲಸಕ್ಕೆ ಹೋವುಸ್ಸರ ನಿಲ್ಲುಸಿತ್ತಿದ್ದು.
ಜಾಲಕರೆಲಿ ಇದ್ದ ದನಗಳ ಹಟ್ಟಿಯೂ, ಅದರಿಂದ ಆಚ ಹೊಡೆಲಿ ಇದ್ದ ಎಮ್ಮೆಗಳ ಹಟ್ಟಿಯೂ – ಮುರುದು ಹೊಸತ್ತು ಕಟ್ಟಿ ಆತು.
’ಇದಾ, ಎಂಗಳ ಪರಮು ಆಚಾರಿಯ ಮಾಡು – ಲಾಯ್ಕಾಯಿದು. ನಿಂಗಳಲ್ಲಿಯೂ ಏನಾರು ಕೆಲಸ ಇದ್ದರೆ ಹೇಳಿ’ – ಹೇದು ಬಂದ ನೆರೆಕರೆಯೋರ ಹತ್ತರೆ ಹೊಸ ಹಟ್ಟಿಮಾಡು ತೋರ್ಸಿ ಹೇಳಿದವು.
ಕ್ರಮೇಣ ಪರಮು ಆಚರಿ ಹೇದರೆ ಊರಿಲಿ ಒಂದು ಎಲ್ಲೋರಿಂಗೂ ಅರಡಿವ ಜೆನ ಆತು.

ಆಚಾರಿ ಕೆಲಸ ನಾಜೂಕಿಂದು ಆದ ಕಾರಣ ಊರಿಲಿ ಎಲ್ಲೋರಿಂಗೂ ಮೀಸುಲೂ ಎಡಿಗಾಯಿದಿಲ್ಲೆ. ಮೇಗಂದ ಪಳ್ಳತಡ್ಕ ದೊಡ್ಡಪ್ಪನ ಶಿಪಾರಸೂ ಇದ್ದ ಕಾರಣ ಪರಮು ಆಚಾರಿ ರೈಸಿದ್ದೇ ರೈಸಿತ್ತು.
ಕೈತುಂಬಾ ಕೆಲಸ. ಕೈತುಂಬಾ ಸಂಬಳ.
~
ಕೈಲಿ ರಜಾ ಪೈಶೆ ತಿರುಗುತ್ತು; ರಜಾ ಅನುಕ್ಕೂಲವೂ ಆವುತ್ತಾ ಇದ್ದು.
ಒಳುದ ಒಕ್ಕಲುಗೊಕ್ಕೆ ಸೋಗೆಮನೆ, ಮುಳಿಮನೆಯೇ ಇಪ್ಪಗಳೇ ಇದಕ್ಕೆ ಹಂಚಿನ ಮಾಡು ಬಂತು.
ಪಕ್ಕನೆ ಪೈಶೆ ಬಂದರೆ ಖರ್ಚಿಂಗೆ ದಾರಿ ಕಡಮ್ಮೆಯೋ, ಇಸ್ಪೇಟು ಇತ್ಯಾದಿಗೊ ಒಳ್ಳೆತ ಅಭ್ಯಾಸವೂ ಇದ್ದು. ಮಾಡಿದ್ದರ ಪೂರ ಕಳವ ದಡ್ಡ ಅಲ್ಲ ಅದು; ಆಯ-ಅಂಗುಲ ಲೆಕ್ಕ ಹಾಕಿಯೇ ಇಸ್ಪೇಟು ಕೂಟಲ್ಲಿ ಸೇರಿಗೊಂಡು ಇತ್ತದು. ಅಲ್ಲಿಯೂ ಒಂದಷ್ಟು ಮಿತ್ರವರ್ಗ ಸಿಕ್ಕಿತ್ತು ಅದಕ್ಕೆ.
ಒಳುದ ಒಕ್ಕಲುಗಳಿಂದ ದೂರವೂ, ಭಿನ್ನವೂ ಆಗಿ ಮುಂದುವರುದತ್ತು.
ಕ್ರಮೇಣ ದೊಡ್ಡಪ್ಪನ ಒಕ್ಕಲು ಹೇಳಿಗೊಂಬಲೆ ರಜಾ ನಾಮೂಸು ಅಪ್ಪಲೆ ಸುರು ಆತು.
ಇರಳಿ.
~

ಮುಂದೆ, ಒಕ್ಕಲು ಮಸೂದೆ ಕಾನೂನು ಬಪ್ಪಾಗ ದೊಡ್ಡಪ್ಪನೇ ಸ್ವತಃಅ ಮನೆಕಟ್ಟಿ ಕೊಟ್ಟಿದವು ಹೇದೆ ಅಲ್ದೋ – ಅಷ್ಟಪ್ಪಗ ಇದಕ್ಕೆ ಅನುಕ್ಕೂಲದ ಮನೆ ಇದ್ದ ಕಾರಣ ಇದಕ್ಕೆ ರಜ ಜಾಗೆಯನ್ನೇ ಕೊಟ್ಟವು.
ಅದುವೇ ಕೇಳಿತ್ತಾಡ; ಎಂಕ್ ಇತ್ತೆ ಇಲ್ಲ್ ಬೋಡ್ಚಿ ಹೇದು – ಹಾಂಗೆ ಜಾಗೆಯೇ ಕೊಟ್ಟವು.
ಆಗಳೇ ಹೇಳಿದ್ದೆ ಆನು – ದೊಡ್ಡಪ್ಪನ ಜಾಗೆಲಿ ಬಪ್ಪ ಹಳ್ಳಂದ ಆಚ ಹೊಡೆಲಿ ಇದ್ದ ದರ್ಖಾಸಿನ ಕರೆಲಿ ಈ ಜೆನ ಇದ್ದದು ಹೇದು.
ಹಾಂಗೆ ಆ ದರ್ಖಾಸಿನ ರಜಾ ಜಾಗೆ ಅಳದು ಕೊಟ್ಟವು; ಅದರ ಬದ್ಕಾಣಕ್ಕೆ ಧಾರಾಳ ಸಾಕು.
ಎರಡು ಆಣುಗೊ ಬೆಳೆತ್ತಾ ಇದ್ದವು. ಒಂದು ಮಗಳ ಮದುವೆ ಅದಾಗಲೇ ಮಾಡಿ ಆಯಿದು.
ಎಲ್ಲ ಸರಿ ಇದ್ದತ್ತು.
~

ರಜಾ ಸಮಯ ಕಳುದಪ್ಪಾಗ ಅಕ್ರಮ-ಸಕ್ರಮ ಹೇದು ಒಂದು ಕಾನೂನು ಬಂತು ಇದಾ.
ಅಕ್ರಮವಾಗಿ ನಾವು ಕೃಷಿ ಆರಂಭ ಮಾಡಿದ್ದರೆ ಅದರ ಸಕ್ರಮ ಮಾಡಿ ಆ ಜಾಗೆಯ ನಮ್ಮದು ಮಾಡಿಗೊಂಬಲೆ ಸಹಕಾರಿ ಹೇದು ಆ ಕಾನೂನು ಬಂದದು.
ಈ ಪರಮುಗೆ ಎಲ್ಲಿಂದ ಬುದ್ಧಿ ಬಂತೋ, ಆರು ಕುತ್ತಿ ಕೊಟ್ಟವೋ – ದೊಡ್ಡಪ್ಪನ ದರ್ಖಾಸಿನ ಒಳುದ ಅಂಶದ ಮೇಗೆ ಕಣ್ಣು ಬಿದ್ದತ್ತು.
ಒಂದು ದಿನ ಸೀದ ಸುದ್ದಿಲ್ಲದ್ದೆ ತಾಲೂಕಾಪೀಸಿಂಗೆ ಹೋಗಿ ಆರಾರದ್ದೋ ಕೈ ಬೆಶಿ ಮಾಡಿ ಇದರ ಫೈಲು ತಯಾರು ಮಾಡಿತ್ತು.
ಸಿಟ್ಟಿಂಗು, ಮೀಟಿಂಗು ಎಲ್ಲ ಅಪ್ಪಗ ಬೇಕುಬೇಕಾದ ಹಾಂಗೆ ಹೋತು.
ಇಷ್ಟೆಲ್ಲ ಅಪ್ಪನ್ನಾರವೂ ಸತ್ಯಾದಿಗ ದೊಡ್ಡಪ್ಪಂಗೆ ಗೊಂತೇ ಆಯ್ದಿಲ್ಲೆ.
ಒಂದು ದಿನ ಅಳತ್ತೆಗೆ ಬಂದವು.
ಸರ್ಕಾರದ ವತಿಂದ ಜಾಗೆ ಅಳವದು ಹೇಳಿಯೂ ಆತು.
ಅಕ್ರಮ ಸಕ್ರಮ ಆಯೇಕಾರೆ ಅದರ್ಲಿ ಕೃಷಿ ಇರೆಕ್ಕಿದಾ – ಹಾಂಗೆ ಕೃಷಿಯೂ ಇದ್ದತ್ತು; ಸರಿ ಹೇಯಿದವು ಅಳತ್ತೆಗೆ ಬಂದೋರು.
ಕೃಷಿ ಮಾಡಿದ್ದು ದೊಡ್ಡಪ್ಪನೇ ಹೊರತು ಪರಮು ಅಲ್ಲ ಇದಾ.
ಅಂತೂ ಇಂತೂ – ಅಳತ್ತೆ ಮುಗಾತು.
~
ಅಷ್ಟಪ್ಪಾಗಳೇ ಪಳ್ಳತಡ್ಕ ದೊಡ್ಡಪ್ಪಂಗೆ ಗೊಂತಾದ್ಸು.
ಸುರುವಿಂಗೆ ನಂಬಲೇ ಎಡಿಗಾಗ ದೊಡ್ಡಪ್ಪಂಗೆ – “ಚೇ, ಪರಮು ಹಾಂಗೆ ಮಾಡಿತ್ತೋ” – ಹೇದು ಮನೆಲಿ ಒಟ್ಟು ಬೇಜಾರಲ್ಲಿ ಇತ್ತಿದ್ದವಾಡ.
ಒಳುದ ಒಕ್ಕಲಿನೋರೆಲ್ಲ – ಆಯೆಗ್ ನಾಲ್ ಪಾಡ್ಕೊ – ಹೇದು ಪಿಸುರಿಲಿ ಹೆರಡ್ಲೆ ನೋಡಿದವು; ದೊಡ್ಡಪ್ಪನೇ ಸಮದಾನ ಮಾಡ್ಸಿ ಕೂರ್ಸಿದವು.
ಇದರ ಸರಿ ಮಾಡೆಕ್ಕಾರೆ ’ಪೋಲೀಸು ಕಂಪ್ಲೇಂಟು ಕೊಡ್ಬೇಕು ಭಟ್ರೇ’ – ಹೇದು ಹಿತೈಶಿಗೊ ಹೇಳಿದವು.
ಊಟೋಪಚಾರ, ಪೂಜೋಪಚಾರಂಗೊ ಯೇವದರ್ಲಿಯೂ ಸರಿ ಮನಸ್ಸು ಇಲ್ಲದ್ದೆ, ಇಷ್ಟನ್ನಾರ ಕೋರ್ಟು – ಪೋಲೀಸು ಹೇದು ತಿರುಗದ್ದೋನುದೇ ಈಗ ಹೋಯೇಕಾಗಿ ಬತ್ತನ್ನೇ’ದು ಬೇಜಾರಲ್ಲಿ ಇತ್ತಿದ್ದವಾಡ.
ಛೇ!
~
ಅಷ್ಟಪ್ಪಗ ಇನ್ನೂ ವಿಚಿತ್ರ ಆತು.
ಪರಮು ಆಚಾರಿ ತನ್ನ ರಕ್ಷಣೆಗೆ ಒಳ್ಳೆದಕ್ಕು ಹೇದು – ’ಭಟ್ರು ನನಿಗೆ ಹೊಡೀಲಿಕ್ಕೆ ಬಂದಿದ್ದಾರೆ, ರಕ್ಷಣೆ ಕೊಡಿ’ – ಹೇದು ಕಂಪ್ಲೇಂಟು ಕೊಟ್ಟತ್ತು.
ಅರೆಯ್! ಜೀವನಲ್ಲಿ ಒಂದರಿಯೂ ಆರಿಂಗೂ ಬೈಯದ್ದ ಪಳ್ಳತಡ್ಕ ದೊಡ್ಡಪ್ಪನ ಮೇಗೆ ಕಂಪ್ಲೇಂಟೋ – ಅಷ್ಟಪ್ಪಗ ಊರಿಂಗೆ ಊರೇ ಎದ್ದು ನಿಂದತ್ತು.
ಊರಿಲಿ ಆರೂ ಆ ಪರಮುವ ಸಂಪರ್ಕ ಮಡಿಕ್ಕೊಂಡಿದವಿಲ್ಲೆ; ಒಂದೆರಡು ಮನೆ ಬಿಟ್ಟು. ದೊಡ್ಡಪ್ಪ ಹೇಳಿ ಬಿಟ್ಟದಲ್ಲ, ಸ್ವ-ಪ್ರೇರಣೆಂದ ಎಲ್ಲೋರುದೇ ದೂರ ಮಡಗಿದ್ದು.
~
ದಿನಾ ಪೋಲೀಸು ಷ್ಟೇಶನಿಂಗೆ ಹೋಪದು, ಎಂತಾರು ಹೊಸ ತಕರಾರು ಮಾಡುದು, ಹೊತ್ತೋಪಗ ಬಪ್ಪದು.
ಕೈ ಖಾಲಿ ಆಗಿಂಡು ಬಂತು. ಹೋಪಲೆ ಕೆಲಸದ ಮನೆಗಳೂ ಇಲ್ಲೆ; ಊರಿಲಿ ಕೆಲಸವೂ ಇಲ್ಲೆ. ಆರಿಂಗೂ ಬೇಡದ್ದ ಜೆನ ಆಗಿ ಹೋತು.
ಅನ್ಯಾಯ ಮಾಡಿದ ಮನುಷ್ಯ ಪೈಸೆ ಕರಗಿಪ್ಪದ್ದೇ ಹಾಂಕಾರವೂ ಇಳುಕ್ಕೊಂಡು ಬಂತು.
~
ಕ್ರಮೇಣ ಪೋಲೀಸು ವಿಚಾರಣೆ ಆಗಿ, ಸತ್ಯ ಗೊಂತಾತು.
ಭಟ್ರು ತುಂಬ ಸಾತ್ವಿಕ – ಹೇದು ಅರಡಿಗಾತು.
ಕೋರ್ಟಿಲಿ ಹೋರಾಡಿ ದೊಡ್ಡಪ್ಪನೂ ಗೆದ್ದವು; ಅವರ ಹಳೆ ದರ್ಖಾಸು ಜಾಗೆ ದೊಡ್ಡಪ್ಪಂಗೇ ಒಪಾಸು ಸಿಕ್ಕಿತ್ತು.
ಎಲ್ಲವೂ ಸುಖಾಂತ್ಯ ಆತು.
~

ಇದೆಲ್ಲ ಈಗ ಎಂತಗೆ ನೆಂಪಾತು ಹೇದರೆ – ಫ್ರಾನ್ಸಿನ ಕತೆ ನೋಡಿ ಅಪ್ಪಾಗ.
ಐಸಿಸ್ ನ ಬಗ್ಗೆ ನಾವು ಮಾತಾಡಿದ್ದು. ಮಧ್ಯ ರಾಷ್ಟ್ರಂಗಳಿಂದ ಲಕ್ಷಾಂತರ ಜೆನಂಗೊ ಬದ್ಕುಲೆ ದಿಕ್ಕಿಲ್ಲದ್ದೆ ಊರೂರು ತಿರುಗುತ್ತಾ ಇದ್ದವು.
ಹಾಂಗೆ ಊರಿಲ್ಲದ್ದ ಹಲವೂ ನಿರಾಶಿರತರಾಗಿ ಬಂದೋರ ಎಲ್ಲ ಸೇರಿಸ್ಗೊಂಡು ಮನೆ ಕೊಟ್ಟವು.
ಇಪ್ಪಲೆ ಮನೆ, ಉಂಬಲೆ ಊಟ, ಮಾಡ್ಳೆ ಕೆಲಸ – ಎಲ್ಲವನ್ನೂ ಕೊಟ್ಟವು.
ಆದರೆ?
ಹಾಂಗೆ ನಿರಾಶ್ರಿತರ ಹಾಂಗೆ ಬಂದೋರು ಮಾಡಿದ್ದೆಂತರ? ಭಯೋತ್ಪಾದಕ ಚಟುವಟಿಕೆ.

ಕಳುದ ಒರಿಶ ಒಂದರಿ ವ್ಯಂಗ್ಯಚಿತ್ರ ಬರದ ಪತ್ರಿಕೆ ಮೇಲೆ ಗುಂಡು ಬಿಟ್ಟಿದವು.
ಈ ಸರ್ತಿ ನಾಲ್ಕೈದು ಹೋಟ್ಳು, ನಾಟಕ ಅಪ್ಪಲ್ಲಿಗೆ – ಹೀಂಗಿರ್ಸ ಸಾಮಾನ್ಯ ಮನುಶ್ಯರು ಇಪ್ಪಲ್ಲಿಗೆ ಬಂದು ಗುಂಡು ಬಿಟ್ಟದು.
ನೂರಾರು ಜೆನ ಪಾಪದೋರು ತೀರಿಗೊಂಡವು. ಎಂತ ಸಿಕ್ಕಿತ್ತು?
~
ಪರಮು ಆಚಾರಿಯ ಹಾಂಗೇ ಜಾಗೆ ಬೇಡಿ ಬಂದದಲ್ಲದೋ ಅವು?
ಅಕೇರಿಗೆ ಜಾಗೆ ಕೊಟ್ಟೋರಿಂಗೇ ಬತ್ತಿ ಮಡಗಿದ್ದಲ್ಲದೋ?
ನ್ಯಾಯ ದೇವತೆ ಆರನ್ನೂ ಬಿಡ್ತಿಲ್ಲೆ. ಅನ್ಯಾಯ ಮಾಡಿರೆ ಒಪಾಸು ಸಿಕ್ಕಿಯೇ ಸಿಕ್ಕುತ್ತು.

ಆದರೆ, ಅಷ್ಟು ಸಮಯ ಪಾಪದೋರು ಬಂಙ ಬರೆಕ್ಕು ಅಲ್ದೋ – ಅದು ಕಾಂಬಗ ಬೇಜಾರಾವುತ್ತು.

ಒಂದೊಪ್ಪ: ನ್ಯಾಯಗಾರರು ಅನ್ಯಾಯವಾಗಿ ಬಂಙ ಬರೆಕ್ಕಾವುತ್ತು; ಅನ್ಯಾಯಗಾರು ನ್ಯಾಯವಾಗಿಯೇ ನರಕ್ಕ ಬತ್ತವು.

2 thoughts on “ಮನೆಕೊಟ್ಟು ಕೂರ್ಸಿದ ದಣಿಗಳ ನುಂಗುಲೆ ಹೆರಟ ಶುದ್ದಿ..!

  1. ಪರಮೇಶ್ವರ ಆಚಾರಿಯ ಕತೆಯ ಮೂಲಕ ಉಗ್ರಗಾಮಿಗಳ ತೋರುಸಿದ್ದದು ಸರಿಯಾಯಿದು. ಪರಮು ಆಚಾರಿಯ ಹಾಂಗೆ ಎಲ್ಲೋರ ಸಹಕಾರಂದ ಉಗ್ರಗಾಮಿಗಳು ನಿರ್ನಾಮ ಆಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×