ದೀಪಾವಳಿ ದಿನ ಮಾತಾಡಿದ ‘ದೀಪಂಗಳ’ ಶುದ್ದಿ..

November 16, 2012 ರ 12:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅದಾಗಲೇ ದೀಪಾವಳಿಯೂ ಕಳಾತು.
ಬೆಣಚ್ಚಿನ ಹಬ್ಬಲ್ಲಿ ಹೊಸ ಜಗತ್ತಿನ ಎಲ್ಲೋರುದೇ ಕಂಡವು.
ಪ್ರಜಾವರ್ಗವ ಬಲಿಚಕ್ರವರ್ತಿ ಬಂದು ನೋಡುವ ಈ ಹಬ್ಬದ್ದಿನ ಎಲ್ಲೋರುದೇ ಕೊಶಿಲಿತ್ತಿದ್ದವು.
ಕೇರಳಲ್ಲಿ ಓ ಮೊನ್ನೆ ಓಣ ಹಬ್ಬಕ್ಕೇ ಬಂದು ಹೋಯಿದ°; ಪುನಾ ಬಲಿಬಪ್ಪಲೆ ಬಲಿಗೆ ಪುರ್ಸೊತ್ತಿರ! 😉
ಅದಿರಳಿ.

ಬೈಲಿಲಿಯೂ ದೀಪಾವಳಿಯ ಗವುಜಿ ಜೋರೇ.
ಜಾಣ ಎರಡುಪೆಕೆಟು ‘ಬೀಡಿ’ ಒಂದೇ ದಿನ ಮುಗುಶಿದ್ದನಾಡ, ಮೊನ್ನೆ ಸುಭಗಣ್ಣ ಕೊಶೀಲಿ ಹೇಳುಸ್ಸು ಕೇಳಿತ್ತು.
ಗುದ್ದು ಪಟಾಕಿ ತಾರದ್ದಕ್ಕೆ ದೊಡ್ಡಳಿಯ° ಮನೆಯ ಎಲ್ಲೋರಿಂಗೂ ಗುದ್ದಿದ್ದನಾಡ.
ಬೋಚಬಾವ° ಬೆದ್ರಹಿಂಡ್ಳು ಹೇದು ತಪ್ಪಿ ಗರ್ನಾಲು ಹೊಟ್ಟುಸಿ ಗುಂಯ್ ಶಬ್ದ ಇನ್ನೂ ಕೆಮಿಲಿ ಕೇಳಿಂಡೇ ಇದ್ದು.
ಹೊಸ ಮದುಮ್ಮಾಯಂದ್ರೆಲ್ಲ ಗಳುಗಳ ಕಂಡಿಕ್ಕಿ ಬೆರಳು ತುಂಬುಸೆಂಡು ಬಪ್ಪ ಸಮೆಯ.
ಅಂತೂ –ಎಲ್ಲೋರಿಂಗೂ ಗವುಜಿಯೇ.

ಆಚಮನೆ ದೊಡ್ಡಪ್ಪನಲ್ಲಿ ಹಬ್ಬದ ಅಮಾಸೆಗೇ ತಿತಿ.
ಹಬ್ಬದ್ದಿನವೇ ದೊಡ್ಡಜ್ಜ° ತೀರಿ ಹೋಗಿಪ್ಪಾಗ ಆ ಮನೆಲಿ ಪರಿಸ್ಥಿತಿ ಹೇಂಗಾದಿಕ್ಕು, ಅಪ್ಪೋ!? ಈಗ ಅದರ ನೆಂಪುಮಾಡಿ ಕೂಗಲೆ ಆರೂ ಸಣ್ಣ ಅಲ್ಲ ಹೇಳುವೊ°.
ಮುನ್ನಾಣದಿನವೇ ನೆರೆಕರೆ ಹೇಳಿಕೆ ಹೇಳುಸ್ಸು ಮರಿಯಾದಿ, ಹಾಂಗೆ ಅಮಾಸೆ ಮುನ್ನಾಣ ದಿನ – ನರಕ ಚತುರ್ದಶಿ ಗವುಜಿ ಎಡೆಲಿ ದೊಡ್ಡಪ್ಪ° ಹೇಳಿಕೆ ಮಾಡಿದವು.
ಹೇಳಿಕೆ ಮಾಡ್ಳೇದು ಮುನ್ನಾದಿನ ಇರುಳು ತೋಟಲ್ಲೇ ಬಪ್ಪಾಗ – ಪಕ್ಕನೆ ಆರು ಬಂದದು ಹೇಳಿಯೇ ಗೊಂತಾಗ. ಏಕೆ?
~
ದೊಡ್ಡಪ್ಪಂಗೆ ಅವರದ್ದೇ ಆದ ಮೂರುಬೆಟ್ರಿ ಲೈಟು ಒಂದಿದ್ದು.
ಅದರ -ಪೇಲೆ ತಲೆ ಕಡೆ ಹಿಡಿ- ಎಲ್ಲ ಹಳತ್ತಾಗಿ, ಹೆರಾಣ ಷ್ಟೀಲಿನ ಬಣ್ಣ ಹೋಗಿ ಒಳಾಣ ಹಿತ್ತಾಳಿ ಬಣ್ಣ ಕಾಣ್ತು. ಆದರೂ ದೊಡ್ಡಪ್ಪ° ಹಿಡಿಸ್ಸು ಅದೇ ಲೈಟಿನ. ಹಾಂಗಾಗಿ ಅವು ತೋಟಲ್ಲಿ ಬಪ್ಪಗಳೇ ಕೆಂಪು ನಮುನೆ ಬೆಣಚ್ಚು ಕಂಡು ಗೊಂತಕ್ಕು – ಹೋ, ಇದು ಆಚಮನೆ ದೊಡ್ಡಪ್ಪನೇ ಹೇದು. ಆದರೆ ನಿನ್ನೆ ಬಪ್ಪಗ ತಂದದು ಭಯಂಕರ– ದೊಡ್ಡಬಾವನ ಬೈಕ್ಕಿಂದಲೂ ಜಾಸ್ತಿದೋ ಏನೋ – ಪ್ರಕಾಶಮಾನ ಲೈಟು. ಜಾಲಿಂಗೆತ್ತುವನ್ನಾರ ದೊಡ್ಡಪ್ಪ° ಹೇದು ಅಂದಾಜಿಯೇ ಆತಿಲ್ಲೆ ಇದಾ! ಕೈಲಿ ನೋಡಿರೆ- ಸಾಲಿಗ್ರಾಮದ ನಮುನೆ ಕರಿಬಣ್ಣದ ಸಪೂರ ಲೈಟು. ಲೈಟು ಸಣ್ಣದೇ ಆಗಿರಳಿ, ಎಂತಾ ಬೆಣಚ್ಚು, ಹು!!
ಬಂದು ಎಲೆತಿಂಬಗ ಮೆಲ್ಲಂಗೆ ಕೇಳಿದೆ – “ಬೇರೆ ಲೈಟು ತೆಕ್ಕೊಂಡಿರೋ ದೊಡ್ಡಪ್ಪ°” ಹೇದು. ಅಮೇರಿಕಂದ ಮಾಷ್ಟ್ರುಮಾವನ ಮಗ° ತಂದದೂ– ಹೇಳಿದವು.
“ಹೋ ಹೋ, ಅಪ್ಪೋ” ಬೆಣಚ್ಚು ಒಳ್ಳೆತ ಇದ್ದು – ಮದಲಾಣ ಲೈಟಿನ ಹಾಂಗಲ್ಲಪ್ಪೋ!
ಮದಲಾಣದ್ದು ಹೇದರೆ ಯೇವದು? “ಮೂರುಬೆಟ್ರಿಲೈಟು ಇತ್ತಲ್ಲದೋ ದೊಡ್ಡಪ್ಪ°, ಅದು”.
ಹ್ಮ್, ಅದರಿಂದಲೂ ಮದಲಿಂಗೆ ಲಾಟ್ಣು ಇದ್ದತ್ತು, ಅದು ಇನ್ನೂ ಕಮ್ಮಿ ಬೆಣಚ್ಚಿಂದು – ಹ್ಹ ಹ್ಹ! ಹೇಳಿದವು.
~

ಕಾಲ ಹೋದ ಹಾಂಗೆ ದೀಪಂಗಳೂ ಬದಲಾಯಿದಲ್ಲದೋ?
ಆಚಮನೆ ದೊಡ್ಡಪ್ಪನ ಹತ್ತರೆ ಮಾತಾಡುವಗ ಹಲವು ದೀಪಂಗೊ, ಬೆಣಚ್ಚುಗೊ ನೆಂಪಾತು.
ಬದಲಾದ ಪರಿಸ್ಥಿತಿಲಿ ಒಂದರಿ ಹಳತ್ತರ ನೆಂಪು ಮಾಡುವೊ°, ಎಂತ ಹೇಳ್ತಿ?

ಕಾಲ ಯೇವದೇ ಇರಳಿ, ಜ್ಯೋತಿ ನಿರಂತರ

ದೀಪನ ಶುದ್ದಿ ಮಾತಾಡ್ಸು ಹೇಳುವಗ ಚೂರಿಬೈಲು ದೀಪಕ್ಕನೋ ಹೇದು ಸಂಶಯ ಬಕ್ಕು; ಅಲ್ಲ ದೊಡ್ಡಮಾಣಿ ದೊಡ್ಡಕ್ಕನೋ ಹೇದು ಇನ್ನು ಕೆಲವು ಜೆನ ಗ್ರೇಶುಗು. ಅವರ ಶುದ್ದಿ ನಾವು ಮಾತಾಡಿರೆ ಅವರ ಮನೆಯೋರು ಬಡಿಗೆ ತೆಗೆಯವೋ!?
ಅದಲ್ಲ, ಬೆಣಚ್ಚಿಂಗಿರ್ತ ಸಾಧನಂಗಳ ಬಗ್ಗೆ ಮಾಂತ್ರ. ಆತೋ!

~

ಕಿಚ್ಚು:

ನಾಗರಿಕತೆ ಆರಂಭ ಕಾಲಲ್ಲೇ ಕಿಚ್ಚು ಕಂಡು ಹಿಡುದ್ದವು.
ಕಂಡು ಹಿಡುದ್ದವು ಹೇಳುದರಿಂದಲೂ – ಕಿಚ್ಚಿನ ಉಪಯೋಗುಸಲೆ ಅರಡಿಗಾಗಿಂಡಿದ್ದತ್ತು. ಕಿಚ್ಚು ಅರಡಿಗಾದ ಮತ್ತೆಯೇ “ನಾಗರಿಕತೆ ಆರಂಭ” ಆತು ಹೇಳಿರೂ ತಪ್ಪಲ್ಲ. ಕಿಚ್ಚಿನ ಕಂಡು ಹಿಡಿಯಲೆ ಎಂತ ಇದ್ದು, ಅಲ್ಲದೋ?
ಜಿಂಕೆಯೋ, ಮೊಲವೋ ಗಾಬೆರಿಲಿ ಓಡುವಗಳೋ ಮತ್ತೊ ಬೆಣಚ್ಚುಕಲ್ಲು ಒಂದಕ್ಕೊಂದು ತಿಕ್ಕಿ ಕಿಚ್ಚಿನ ಕಿಡಿ ಎದ್ದು ಒಣಕ್ಕು ಬಜಕ್ಕರೆಗೆ ತಾಗಿ ಕಿಚ್ಚು ಹಿಡುದ್ದು ಮಡಿಕ್ಕೊಳಿ – ಇಡೀ ಕಾಡಿಂಗೆ ಕಾಡೇ ಕಾಳ್ಗಿಚ್ಚಿಂಗೆ ಹೊತ್ತಿ ಹೋಮ ಆಗಿ ಹೋಕು!
ಅತವಾ – ಉಲ್ಕೆಯೋ, ಅಗ್ನಿಪರ್ವತವೋ ಮಣ್ಣ ಇದ್ದರೆ ಇನ್ನೂ ದೊಡ್ಡ ಕಿಚ್ಚು ಇಕ್ಕು.
ಈ ಕಿಚ್ಚು ಒಂದರಿಯೇ ಹೊತ್ತಿ ಮುಗುಸ್ಸರ ಬದಲು, ಹಿಡುದು, ಒಳಿಶಿಂಬದು ಹೇಂಗೆ ಹೇಳ್ತರ ಮನುಷ್ಯ ಅರ್ತಪ್ಪಗಳೇ ಅವ° ನಾಗರಿಕ ಆದ° – ಹೇದು ಮಾಷ್ಟ್ರುಮಾವ° ಒಂದೊಂದರಿ ಹೇಳುಲಿದ್ದು.
ಅವ° ಹೇದರೆ ಆರು? ಆರೋ ಒಬ್ಬ° ಅಲ್ಲ, ನಾವೇ, ನಮ್ಮ ಪೂರ್ವಜರೇ!

ಕಿಚ್ಚಿನ ಕೊಳ್ಳಿಯ ನಂದದ್ದ ಹಾಂಗೆ ಸೌದಿ ಹಾಕಿ ನೋಡಿಗೊಂಬಲೆ ಸುರು ಮಾಡಿದ್ದು ದೀಪದ ಪ್ರಥಮ ಹೆಜ್ಜೆ.
ಛಳಿಕಾಸಲೆ, ಬೆಂದಿ ಬೇಶಲೆ, ಎದುರಾಳಿ ಓಡುಸಲೆ, ಕಾಡುಪ್ರಾಣಿಗಳಿಂದ ರಕ್ಷಿಸೆಂಬಲೆ – ಎಲ್ಲದಕ್ಕೂ ಕಿಚ್ಚೇ ಮೊದಲ ಅಸ್ತ್ರ.

ಎಣ್ಣೆ ದೀಪ:

ಕಿಚ್ಚಿನ ಸೌದಿಲೇ ಮಡಗುಸ್ಸು ಕಲ್ತ ಮತ್ತೆ, ಒಂದೊಂದೇ ಹಂತ ಮೇಗೆ ಏರಿತ್ತು. ಸೌದಿಯೇ ಆಯೇಕು ಹೇದು ಇಲ್ಲೆ, ಎಂತ ಹಾಕಿರೂ ಹೊತ್ತುತ್ತು. ಹಾಂಗಾರೆ “ಎಂತದೂ” ಹೊತ್ತಲೆ ಎಂತ ಕಾರಣ? “ಕೊಬ್ಬಿನಂಶ”.
ಹಾಲಿಂದ, ಮೊಸರಿಂದ, ದನಗಳ ಮೈಂದ ತೆಗದ ತುಪ್ಪವ ಸೌದಿಗೆ ಎರದವು – ಬುರೂನೆ ಹೊತ್ತಿತ್ತು. ಹಾಂಗಾಗಿ ಸಸ್ಯಜನ್ಯ / ಪ್ರಾಣಿಜನ್ಯ ಕೊಬ್ಬು ಕಿಚ್ಚಿನ ಆಕರ್ಷಿಸುತ್ತು ಹೇದು ಅಜ್ಜಂದ್ರಿಂಗೆ ಬೇಗ ಗೊಂತಾತು.
ಸುಲಾಭಲ್ಲಿ ಸಿಕ್ಕುತ್ತ ಧಾನ್ಯ – ಎಳ್ಳಿನ ಬೀಜಲ್ಲಿ ತುಂಬ ಎಣ್ಣೆ ಇದ್ದು ಹೇಳುಸ್ಸು ಕಂಡುಗೊಂಡವು. ಎಳ್ಳಿಂಗೆ ಸಂಸ್ಕೃತಲ್ಲಿ ತಿಲ ಹೇಳ್ತ ಕಾರಣ, ಎಳ್ಳಿಂದ ತೆಗದ “ತೈಲ” ಕಿಚ್ಚಿಂಗೆ ಭಾರೀ ಕೊಶಿ ಹೇಳ್ತದೂ ಅವಕ್ಕೆ ಗೊಂತಾತು.
ಒಂದು ಸಣ್ಣ ಹತ್ತಿ ಉಂಡೆಯ ಎಣ್ಣಗೆ ಮಡಗಿರೆ, ಅದರ ಕೊಡಿಯಂಗೆ ಕಿಚ್ಚುಕೊಟ್ಟರೆ, ಬೇಕಾದಷ್ಟೇ ಹೊತ್ತಿಂಡು ತುಂಬ ಹೊರ್ತು ಒಟ್ಟಿಂಗಿರ್ತು ಹೇಳ್ತದರ ಕಂಡುಹಿಡುದವು.
ಆರು? ಉಮ್ಮಪ್ಪ, ಈಗಾಣೋರ ಹಾಂಗೆ ಕಂಡುಹಿಡಿದವರು – ಇಂತವರು ಹೇದು ಹೆಸರು ಬರೆತ್ತ ಕ್ರಮ ಅವಕ್ಕಿತ್ತಿಲ್ಲೆ!

ಮಿಂಚು – ಗುಡುಗು ಮಳೆ-ಗಾಳಿ ಕಸ್ತಲೆ-ಬೆಣಚ್ಚು ಇವೆಲ್ಲದರನ್ನೂ ಯೇವದೋ ಒಂದು ಅಗೋಚರ ಶೆಗ್ತಿ ನಿಯಂತ್ರಣ ಮಾಡ್ತಾ ಇದ್ದು ಹೇಳ್ತರ ನೆಂಬಿಂಡವು ಅಜ್ಜಂದ್ರು. ಆ ಅಗೋಚರ ಶೆಗ್ತಿಯ ಪ್ರತಿರೂಪ ಆಗಿಂಡು ಈ ಒಂದು “ಜ್ಯೋತಿ”ಯ ಹೊತ್ತುಸಿ ಮಡಗುಸ್ಸು ಅವರ ಪ್ರತೀತಿ ಆತು.
ಆದಿಕಾಲಲ್ಲಿ ಆರಂಭ ಆದ ಈ ಕ್ರಮ ಇಂದಿಂಗೂ ನೆಡೆತ್ತಾ ಇದ್ದು. ದೇವರ ಪೂಜೆ ಮಾಡ್ತರೆ ಮದಾಲು ಒಂದು ದೇವರ ದೀಪ ಹೊತ್ತುಸಲೆ ಹೇಳುಗು ಬಟ್ಟಮಾವ°. ಹೋಮ ಮಾಡ್ತರೆ ಅಂತೂ – ಕಿಚ್ಚಿಂಗೇ ಪೂಜೆ!

~

ಎಳ್ಳೆಣ್ಣೆ ಹಾಕುತ್ತ ಕಾಲುದೀಪಕ್ಕೆ ದೇವರದೀಪ ಹೇಳಿಯೇ ಹೇಳ್ತದು ಪರಿಭಾಷೆ ಆಯಿದು. ಅದೇ ದೇವರದೀಪದ ಬಟ್ಳಿನ ಸಂಕೊಲೆಲಿ ಕಟ್ಟಿ ನೇಲ್ಸಿರೆ ಅದು ನಂದಾದೀಪ ಆತು. ಇಷ್ಟುದ್ದ ಲೋಹತುಂಡಿಲಿ ಹೊತ್ತುಸಿರೆ ಆರತಿ ಆತು.
ಮಣ್ಣಿಲಿಯೋ- ಬರಣಿ ತುಂಡಿಲಿಯೋ ಮಣ್ಣ ಗುಂಡಿ ಮಾಡಿ ಅದಕ್ಕೆ ಎಳ್ಳೆಣ್ಣೆ ಎರದು ಬತ್ತಿ ಮಡಗಿ ಹೊತ್ತುಸಿರೆ ಅದು ಹಣತೆ / ತಿಬಲೆ ಆತು. ಅದೇ ಎಣ್ಣೆ, ಅದೇ ಬತ್ತಿ, ಅದೇ ಜ್ಯೋತಿ, ಆದರೆ ಹೆಸರು ಮಾಂತ್ರ ಬೇರೆ.
ಅದೇ ಎಣ್ಣೆ ಹೇದೆ ಅಲ್ಲದೋ – ಅಪ್ಪು; ಸಾಮಾನ್ಯವಾಗಿ ಎಳ್ಳೆಣ್ಣೆದೇ ದೀಪ ಮಾಡ್ಸು.
ಅದಲ್ಲದ್ದೆ ತೆಂಗಿನ ಕಾಯಿಂದ ತೆಗದ ತೆಂಗಿನೆಣ್ಣೆ, ದನದ ಹಾಲಿಂದ ಪರಿಷ್ಕಾರ ಮಾಡಿದ ಕೊಬ್ಬು “ತುಪ್ಪ” – ಹೀಂಗಿರ್ಸ ಬೇರೆಬೇರೆ ನಮುನೆ ಎಣ್ಣೆಗಳನ್ನೂ ಹಾಕುಲಕ್ಕು ದೇವರಿಂಗೆ.

~

ದೇವರಿಂಗೆ ಅಲ್ಲದ್ದೆ ನಮ್ಮ ನಿತ್ಯ ಬಳಕ್ಕೆಗೆ ಇನ್ನೂ ಹಲವು ಎಣ್ಣೆಗೊ ತೆಗಕ್ಕೊಂಡು ಇತ್ತವಾಡ ಮದಲಿಂಗೆ.
ಅದೆಂತೆಲ್ಲ? ಪೊನ್ನೆ ಕಾಯಿಯ ಪೊನ್ನೆಣ್ಣೆ (ಹೊನ್ನೆಣ್ಣೆ), ಹತ್ತಿ ಬಿತ್ತಿನ ಹತ್ತಿ ಎಣ್ಣೆ, ಹರಳೆಣ್ಣೆ, ನೆಲಕಡ್ಳೆ, ಸೂರ್ಯಕಾಂತಿ, ಸಾಸಮೆ – ಇತ್ಯಾದಿಗಳಿಂದ ತೆಗದ ಬಿತ್ತಿನ ಎಣ್ಣೆಗೊ – ಎಲ್ಲವುದೇ ನಮ್ಮ ನಿತ್ಯ ಬಳಕ್ಕೆಗೆ ಅಕ್ಕಿದಾ.
ಅದೆಲ್ಲವೂ ಎಣ್ಣೆದೀಪಂಗೊಕ್ಕೆ ಬಿದ್ದು ಬೆಣಚ್ಚು ಕೊಟ್ಟುಗೊಂಡಿತ್ತು ನಮ್ಮ ಮನೆಗಳಲ್ಲಿ; ಮೊನ್ನೆ ಮೊನ್ನೆ ಒರೆಂಗೂ.

ಬತ್ತಿ ದೀಪ:

ಎಣ್ಣೆದೀಪವ ನಾವೆಲ್ಲೋರುದೇ ಕಂಡಿದು. ಆದರೆ – ಬತ್ತಿದೀಪವ ಕಂಡಿದಿರೋ? ಸಂಶಯ.
ಆಚಮನೆ ದೊಡ್ಡಪ್ಪ° ಹೇಳುವನ್ನಾರ ಒಪ್ಪಣ್ಣಂಗೂ ಗೊಂತಿತ್ತಿಲ್ಲೆ!
ಅದೆಂತರ ಬತ್ತಿ ದೀಪ ಹೇದರೆ?

ಎಳ್ಳು, ತೆಂಗಿನಕಾಯಿಗಳಲ್ಲಿ ಧಾರಾಳ ಎಣ್ಣೆ ಇದ್ದು; ಹಿಂಡಿರೆ ಅರಿವಷ್ಟು; ಆದರೆ ಕೆಲವು ಬಿತ್ತುಗಳಲ್ಲಿ ತೆಗವಷ್ಟು ಎಣ್ಣೆ ಇಲ್ಲೆ.
ರಜಾ ಪಸೆ ಮಾಂತ್ರ ಇಪ್ಪದು. ಅಂತದ್ದರನ್ನೇ ಬಳಸಿಗೊಂಡು ಬೆಣಚ್ಚು ಮಾಡ್ತದು ನಮ್ಮ ಅಜ್ಜಂದ್ರಿಂಗೆ ಗೊಂತಿತ್ತು.
ಪುಂಡಿಕಾಯಿ” ಹೇದು ಒಂದು ಜಾತಿ ಕಾಯಿ ಇದ್ದಲ್ಲದೋ – ಆ ನಮುನೆದರ ಬಳಸುತ್ತ ಬಗೆ. ಹೇಂಗೆ?

ಪುಂಡಿಕಾಯಿ ಬಿತ್ತಿನ ಮನಾರಕ್ಕೆ ಹೆರ್ಕಿ, ಒಲೆಕಿಚ್ಚಿಲಿ ಚೆಂದಕೆ ಹೊರುದತ್ತು. ಕರಂಚುವಷ್ಟಲ್ಲ, ಹದಾ ಹಸಿ ಕರಿವನ್ನಾರ.
ಮತ್ತೆ ಅದರ ಚೆಂದಕೆ ಗುದ್ದಿ ಹೊಡಿ ಮಾಡ್ತದು. ಅಷ್ಟಪ್ಪಗ ಅದರ್ಲಿಪ್ಪ ಎಣ್ಣೆ ಅಂಶ ಚೆಂದಕೆ ಬಿಟ್ಟು ಪಸೆಪಸೆ ಅಕ್ಕು. ಇದರ?
ಗುಡ್ಡೆಲಿ ಧಾರಾಳ ಮುಳಿಹುಲ್ಲು ಇಕ್ಕಪ್ಪೋ – ಅದರ ಬೇಕಾದಷ್ಟುದ್ದಕ್ಕೆ ತುಂಡುಸಿ ಲಾಯ್ಕಕ್ಕೆ ಒಣಗುಸೇಕು.
ಆ ಮುಳಿಯ ಒಂದು ಹಿಡಿ ಹಿಡುದು ಈ ಹೊಡಿಮಾಡಿದ ಪುಂಡಿಕಾಯಿಯ ಮನಾರಕ್ಕೆ ಪೂಜೇಕು.
ಮೂರುಬೆರಳಷ್ಟು ತೋರಕೆ ಮುಳಿಯ ಹಿಡುದು ಅದಕ್ಕೆ ಪುಂಡಿಕಾಯಿ ಹೊಡಿಯ ಮಿಶ್ರ ಮಾಡಿ ನೆಲಕ್ಕಲ್ಲಿ ಅರದರೆ – ಮುಳಿಯ ಎಡೆಡೆಂಗೆ ಪುಂಡಿಕಾಯಿ ಹೊಡಿ – ಎಣ್ಣೆಪಸೆ ಹೋಗಿ ಅಂಟುತ್ತು ಅಲ್ಲದೋ?
ಅಂಟಿದ ಮುಳಿಕಡ್ಡಿಗೊ ಒಟ್ಟಾಗಿ ಒಂದು “ಮುಳಿ ಬತ್ತಿ” ಆವುತ್ತು. ನಾಕು ಬೆಶಿಲು ಒಣಗುಸಿರೆ ಕೋಪೆ ಬಳ್ಳಿಯ ನಮುನೆ ಒಂದಕ್ಕೊಂದು ಹಿಡುದು ನಿಲ್ಲುತ್ತು. ಈ ನಮುನೆ ಮುಳಿಬತ್ತಿಯ ಬೇಸಗೆಲಿ ಮಾಡಿ ಸೌದಿ ಕೊಟ್ಟಗೆ ಅಟ್ಟಲ್ಲಿ ಮಡಿಕ್ಕೊಂಡ್ರೆ ಮಳೆಗಾಲಕ್ಕೆ ಹೊತ್ತುಸಲಾತು.

ಒಂದು ಅಡಿ ಉದ್ದದ ಈ ಬತ್ತಿಯ ಬುಡ ರಜ್ಜ ಅಗಲ ಮಾಡಿರೆ ನೆಲಕ್ಕಲ್ಲಿ ಕುತ್ತ ಮಡುಗುಲಾವುತ್ತಿದಾ.
ಹಾಂಗೆ ಕುತ್ತ ನಿಲ್ಲುಸಿ ಒಂದು ಕೊಡಿಯಂಗೆ ಕಿಚ್ಚು ಕೊಟ್ರೆ, ರಜರಜವೇ ಹೊತ್ತಿಂಡು ಕೆಳ ಬಕ್ಕು. ಮನೆಗಳಲ್ಲಿ ಇರುಳಾಣ ಊಟದ ಹಂತಿಗೆಲ್ಲ ಈ ಮುಳಿಬತ್ತಿಗೊ ಹದಾ. ಹಂತಿ ಮುಗಿವಗ ಬತ್ತಿಯೂ ಮುಗಿತ್ತು. ಒಂದುವೇಳೆ ಬತ್ತಿ ಮುಗಿಯದ್ದರೆ ಮರದಿನಕ್ಕಾತು!

ಹಳಬ್ಬರಿಂಗೆ ಈ ನಮುನೆದು ಕಂಡು ನೆಂಪಿದ್ದೋ ಏನೋ; ಆಚಮನೆ ದೊಡ್ಡಪ್ಪ° ಕೊಟ್ಟ ಚಿತ್ರಣವೇ ಬೈಲಿಂಗೆ ಹೇಳ್ತಾಇಪ್ಪದು. ಈ ಸರ್ತಿ ಪುಂಡಿಕಾಯಿ ಸಿಕ್ಕಿರೆ ನಾಕು ಮುಳಿಬತ್ತಿ ಮಾಡೇಕು ನವಗೆ; ಕರೆಂಟು ಹೋಗಿಪ್ಪಾಗ ಹೊತ್ತುಸಲೆ ಅಕ್ಕಿದಾ!
ಪುಂಡಿಕಾಯಿ ಸಿಕ್ಕದ್ದರೆ ನಾಣಿಲು ಬಿತ್ತುದೇ ಆವುತ್ತು ಹೇಳಿದವು ದೊಡ್ಡಪ್ಪ°.

~

ಸೂಟೆ:

ಮನೆಯೊಳವೇ ಇಪ್ಪಗ ಎಣ್ಣೆದೀಪ, ಬತ್ತಿದೀಪ ಏವದಾದರೂ ಅಕ್ಕು; ಆದರೆ ಒಂದಿಕ್ಕಂದ ಇನ್ನೊಂದಿಕ್ಕಂಗೆ ಹೋಯೇಕಾರೆ?
ಸೂಟೆಯೇ ಆಯೆಕ್ಕಟ್ಟೆ. ರಟ್ಟೆಯಷ್ಟು ತೋರಕ್ಕೆ ಮಡಲಕಟ್ಟ ಕಟ್ಟಿರೆ ಸೂಟೆ ತೆಯಾರು. ಹೆರಡ್ಳಪ್ಪಗ ಸೂಟೆ ಕಟ್ಟಿ ಒಲೆಂದ ಕಿಚ್ಚು ಹೊತ್ತುಸೆಂಡರೆ ಸೂಟೆಬೀಸಿಗೊಂಡೇ ಮದಲಿಂಗೆ ಎಷ್ಟೂ ದೂರವೂ ನೆಡಗು.
ಸೂಟೆಲಿ ನೆಡವದಕ್ಕೂ, ಲೈಟಿಲಿ ನೆಡವದಕ್ಕೂ ವಿತ್ಯಾಸ ಇದ್ದು. ಸೂಟೆಲಿ ಮಿಣ್ಣಿ ರಟ್ಟದ್ದ ಹಾಂಗೆ ಜಾಗ್ರತೆ ಮಾಡೇಕಿದಾ! ಸೂಟೆಯ ಕಿಚ್ಚು ಕಮ್ಮಿ ಅಪ್ಪಗ ಒಂದರಿ ಜೋರು ಬೀಸುದು – ಅಷ್ಟಪ್ಪಗ ಗಾಳಿಗೆ ಪುನಾ ಹೊತ್ತುಗು! ಒಂದು ಸೂಟೆಲಿ ಹತ್ತರತ್ತರೆ ಮೂರು ಮೈಲು ನೆಡವಲಕ್ಕಾಡ- ದೊಡ್ಡಪ್ಪ° ಒಂದು ಕಣ್ಣಂದಾಜಿ ಹೇಳಿದವು.
ಅದರಿಂದಲೂ ದೂರ ಹೋಯೇಕಾರೆ “ಸಲಕ್ಕೆ ಸೂಟೆ” ಆಯೆಕ್ಕಡ.
ಅಡಕ್ಕೆ ಮರದ ಸಲಕ್ಕೆಯ ಸಪೂರಕ್ಕೆ ತುಂಡುಸಿ ಕಟ್ಟ ಕಟ್ಟಿ ತೆಯಾರು ಮಾಡಿ ಮಡಗ್ಗು ಮದಲಿಂಗೆ. ಹೀಂಗಿರ್ತ ಸೂಟೆಗೊ ಸೌದಿ ಕೊಟ್ಟಗೆಲಿ ತೆಯಾರಿಕ್ಕು. ಆರಾರು ಪಕ್ಕನೆ ಅಂಬೆರ್ಪಿಂಗೆ ಹೆರಡ್ತರೆ ಹೇದು ಮಡಗಿದ್ದು. ಹೆರಡ್ಳಪ್ಪಗ ರಪಕ್ಕ ಒಂದು ಸೂಟೆಯ ಹೊತ್ತುಸೆಂಡು ಹೆರಡುದೇ. ಹೋಯೇಕಾದ ಪ್ರಯಾಣ ತುಂಬ ದೂರಕೆ ಇದ್ದರೆ ಇನ್ನೊಂದೆರಡು ಸೂಟೆ ಕೈಲಿ ಹಿಡ್ಕೊಂಗು; ಒಂದು ಮುಗುದ ಮತ್ತೆ ಇನ್ನೊಂದು ಹೊತ್ತುಸೆಂಬಲೆ. ಎಡಕ್ಕಿಲಿ ಕಿಚ್ಚು ನಂದುಲಾಗ ಇದಾ; ಕಿಚ್ಚಿನ ಪೆಟ್ಟಿಗೆ ಇಲ್ಲದ್ದ ಕಾಲ ಅದು!

ಹಾಂ – ಮುಳಿ ಒಣಗಿದ ಕಾಲಲ್ಲಿ ಸಾಮಾನ್ಯವಾಗಿ ಸೂಟೆ ಹಿಡಿಯವು ಆರುದೇ. ಎಂತಗೆ? ಮುಳಿಗುಡ್ಡೆಲೆ ಹೋಪಗ ಒಂದು ಮಿಣ್ಣಿರಟ್ಟಿ ಕಿಚ್ಚು ಹತ್ತಿಗೊಂಡ್ರೆ, ಇರುಳಿಂದಿರುಳೇ ಎಕ್ರೆಗಟ್ಳೆ ಹೊತ್ತಿಹೋಕು; ಹತ್ತರಾಣ ಜನಂಗೊಕ್ಕೂ ಹೆದರಿಕೆಯೇ! ಹಾಂಗಾಗಿ ಸೂಟೆಪ್ರಯಾಣ ಮುಳಿಒಣಗಿದ ಕಾಲಲ್ಲಿ ನಿಷಿದ್ಧ!
ಜೋರಿನ ಕೂಚಕ್ಕಂಗೊ ಅತ್ತಿತ್ತೆ ಬೈವಗ ಮಾಂತ್ರ ಈ ಶಬ್ದ ಕೇಳುಗಟ್ಟೆ ಈಗ! 😉
~

ಇದು ತುಂಬಾ ಹಿಂದಾಣ ಕತೆ. ಕಿಚ್ಚಿನಪೆಟ್ಟಿಗೆ ಬಂದ ಮತ್ತೆ “ಬೇಕಪ್ಪಗ ಹೊತ್ತುಸುತ್ತ” ಸೌಕರ್ಯ ಬಂತು.
ನಂದಾದೀಪದ ಅವಲಂಬನೆ ಕಮ್ಮಿ ಆತು. ಮರವ ತಿಕ್ಕಿ ಕಿಚ್ಚು ಮಾಡೇಕಾದ ಬಂಙ ಇಲ್ಲದ್ದೆ ಆತು. ಎಣ್ಣೆ ಎರಕ್ಕೊಂಡೇ ಇರೆಕ್ಕಾದ ಅನಿವಾರ್ಯತೆ ಇಲ್ಲದ್ದೆ ಆತು.
ಚಿಮ್ಣೆಣ್ಣೆಯ ಹಾಂಗಿರ್ತ ಹೊಸ ಎಣ್ಣೆಗೊ ಬಪ್ಪಲೆ ಸುರು ಆದ ಮತ್ತೆ – ಆಗ ಹೇಳಿದ ಎಣ್ಣೆಗೊ ಕಮ್ಮಿ ಅಪ್ಪಲೆ ಸುರು ಆತು.
ಪುಂಡಿಕಾಯಿಯ ಒಣಗುಸಿ ಹೊರುದು ಗುದ್ದಿ ಎಣ್ಣೆತೆಗದು ಮುಳಿಬತ್ತಿ ಮಾಡ್ತ ಅಸಲಿಂದ ಕಮ್ಮಿ ಅಸಲಿಂಗೆ ಮೇಣದ ಬತ್ತಿ ಸಿಕ್ಕಲೆ ಸುರು ಆತು. ದೈಹಿಕ ಬಚ್ಚಲಿಂದಲೂ ಪೈಶೆಗೆ ಬೆಲೆ ಕಮ್ಮಿ ಅಪ್ಪ ಕಾಲಲ್ಲಿ ಇಂತದ್ದರ ಕಿಚ್ಚೇ ಹೆಚ್ಚು ಧಾರಾಳ ಆತು.

ಚಿಮ್ಣೆಣ್ಣೆ ಹಾಂಗಿರ್ತ ಮಣ್ಣಿಂದ ತೆಗದ ಮಣ್ಣೆಣ್ಣೆ ಬಂದ ಮತ್ತೆ ದೀಪಂಗಳ ಆಕಾರ ಬದಲಿತ್ತು. ದೇವರದೀಪದ ಹಾಂಗೆ ಬಿಡ್ಸಾಡಿ ದೀಪಕ್ಕೆ ಹಾಕಿರೆ ಪೂರ್ತಿ ಕಿಚ್ಚು ಹಿಡಿಗಿದಾ; ಹಾಂಗಾಗಿ ಎಣ್ಣೆ ಇಡೀ ಮುಚ್ಚಿರೇಕು; ಒಂದು ಬತ್ತಿಲಿ ಆಗಿ ಮಾಂತ್ರ ಬರೇಕು! ಮದಲಾಣ ಹಾಂಗೆ ಕಿಚ್ಚಿನ ಪರಿಮ್ಮಳ ಇಲ್ಲೆ; ಕರಿ ಮಸಿ ಹಿಡಿತ್ತ ವಾಸನೆ!!
ಚಿಮ್ಣೆಣ್ಣೆ ದೀಪದ ಹಿಂದಂದಲೇ ಬೆಳಿಬೆಣಚ್ಚಿನ ಗೇಸು ಲೈಟು ಬಂತು.

ಓಟೆ:

ಚಿಮ್ಣೆಣ್ಣೆ ಬಂದ ಮತ್ತೆ ಎಲ್ಲದಕ್ಕೂ ಅದನ್ನೇ ಅಳವಡುಸಲೆ ಸುರುಮಾಡಿದವು ಹಳಬ್ಬರು.
ಸೂಟೆ ಹೊತ್ತುಸಿ ಬಂಙ ಬಪ್ಪದರಿಂದ ಸುಲಭಲ್ಲಿ ಚಿಮ್ಣೆಣ್ಣೆ ಉಪಯೋಗುಸಿ ಏರ್ಪಾಡು ಮಾಡಿದವು. ಹೇಂಗೆ?
ಅದು ಸೂಟೆ ಅಲ್ಲ, ಓಟೆಲಿ.

ಹೆರಡ್ಳಪ್ಪಗ – ಓಟೆಬೆದುರಿನ ಒಂದು ಗೆಂಟಿಂದ ಉದ್ದಕ್ಕೆ ಕಡುದತ್ತು. ಒಂದು ಹೊಡೆಲಿ ಗೆಂಟೇ ಇಪ್ಪ ಕಾರಣ ಊ-ದ್ದದ ಗ್ಲಾಸಿನ ಹಾಂಗಿರ್ತಿದಾ – ಅದರ ಒಳಂಗೆ ಚಿಮ್ಣೆಣ್ಣೆ ತುಂಬುಸುದು.
ಆ ಚಿಮ್ಣೆಣ್ಣೆಗೆ ಲಾಯಿಕಂಗೆ ಒಂದು ಬತ್ತಿ ಹಾಕಿ – ಅದಕ್ಕೆ ಕಿಚ್ಚು ಕೊಡುದು. ಹಸಿ ಓಟೆ ಆದ ಕಾರಣ ಅಷ್ಟು ಪಕ್ಕಕ್ಕೆ ಕಿಚ್ಚು ಹಿಡಿಯ. ಹಾಂಗೆ – ಅದರ ಹಿಡ್ಕೊಂಡು ಚಿಮ್ಣೆಣ್ಣೆ ಕಿಚ್ಚಿಲಿ ದೂ-ರಕ್ಕೆ ಹೋವುಸ್ಸು ಕೆಲವು ದಿಕ್ಕಾಣ ಕ್ರಮ ಆತು.
ಸುಬ್ರಮಣ್ಯ ಹೊಡೆಲಿ ಬೆದುರ ಓಟೆ ಧಾರಾಳ; ಆದರೆ ಅದು ಕಮ್ಮಿ ಇಪ್ಪಲ್ಲಿ ಎಂತ ಮಾಡುಸ್ಸು?
ಅಲ್ಲಿಗೆ ಬಪ್ಪಂಗಾಯಿ ಓಟೆಯೇ ಆಯೇಕಟ್ಟೆ. ಒಂದು ಎಲೆ ಓಟೆಯ ಬುಡಂದ ಮುರುದತ್ತು, ಅದರೊಳಂಗೆ ಚಿಮ್ಣೆಣ್ಣೆ ತುಂಬುಸಿತ್ತು – ಬತ್ತಿ ಹಾಕಿತ್ತು – ಕಿಚ್ಚುಕೊಟ್ಟತ್ತು – ದಾರಿ ನೆಡದತ್ತು!
ಇಂತಾ ದೀಪಂಗಳ, ದೊಂದಿಗಳ ಹಿಡುದು ಮದಲಾಣೋರು ಬೇಟೆಗೆ, ಯುದ್ಧಕ್ಕೆ, ತಿರುಗಾಟಕ್ಕೆ ಹೋಗಿಂಡಿತ್ತವು ಹೇದರೆ ನಂಬಲೇ ಎಡಿಯ.

ಮುಂದೆ “ಬೆಟ್ರಿ” ಬಂತು; ಹಿಂದಂದಲೇ “ಬೆಟ್ರಿ ಲೈಟು” ಬಂತು.
ಎರಡು ಬೆಟ್ರಿದು, ಮೂರು ಬೆಟ್ರಿದು, ಐದು ಬೆಟ್ರಿದು – ಇತ್ಯಾದಿ ಹೆಚ್ಚೆಚ್ಚು ಬೆಣಚ್ಚಿನ ಲೈಟುಗೊ ಬಂತು, ದಾರಿನೆಡವ ಸಂಗತಿ ಸುಲಬ ಆತು.

~

ಅಂದ್ರಾಣ ಕೆಂಪು ಬೆಣಚ್ಚಿಂಗೆ ಹೋಲುಸಿರೆ ಈಗ ತುಂಬ ಸುಲಬ ಆಯಿದು.
ಕೈಲಿ ಪಳಪಳ ಹೊಳೆತ್ತ ಕರಿ ಲೈಟು ಬಂದಮತ್ತೆ ಇಷ್ಟೆಲ್ಲ ಸಂಗತಿಗೊ ಮಾತಾಡುವಗ ಏನೋ ಒಂದು ದೊಡ್ಡ ಇತಿಹಾಸ ಮಾತಾಡಿದ ಹಾಂಗಾವುತ್ತು.
ಬೆಣಚ್ಚಿನ ಬದಲಾವಣೆಗಳ ಮಾತಾಡಿಗೊಂಬಲೆ ದೀಪಾವಳಿ ಸಮೆಯಂದ ಒಳ್ಳೆದಿನ ಇದ್ದೋ?
ತಿತಿಹೇಳಿಕೆ ಹೇಳಿ ದೊಡ್ಡಪ್ಪ° ಹೆರಟವು.

ಒಂದೊಪ್ಪ: ಕಾಲ ಬದಲಾದ ಹಾಂಗೇ ದೀಪ ಬದಲುಗು – ಆದರೆ ಜ್ಯೋತಿ ಒಂದೇ ಅಲ್ಲದೋ!?

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಬೊಳುಂಬು ಮಾವ°ವಾಣಿ ಚಿಕ್ಕಮ್ಮಶಾ...ರೀಶಾಂತತ್ತೆಚೂರಿಬೈಲು ದೀಪಕ್ಕಶರ್ಮಪ್ಪಚ್ಚಿಬಂಡಾಡಿ ಅಜ್ಜಿದೀಪಿಕಾಪುಣಚ ಡಾಕ್ಟ್ರುಮಾಷ್ಟ್ರುಮಾವ°ವೇಣಿಯಕ್ಕ°ವಿದ್ವಾನಣ್ಣಅನುಶ್ರೀ ಬಂಡಾಡಿvreddhiಪುತ್ತೂರಿನ ಪುಟ್ಟಕ್ಕನೀರ್ಕಜೆ ಮಹೇಶದೇವಸ್ಯ ಮಾಣಿಪವನಜಮಾವಯೇನಂಕೂಡ್ಳು ಅಣ್ಣಅಕ್ಷರದಣ್ಣಕಜೆವಸಂತ°ಜಯಗೌರಿ ಅಕ್ಕ°ವಸಂತರಾಜ್ ಹಳೆಮನೆದೊಡ್ಡಭಾವಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ