ಧನುರ್ಮಾಸದ ಚಳಿಲಿಯೂ ಧನುಪೂಜೆಯ ಬೆಶಿ..!

ಒರಕ್ಕಿಂಗೂ ಚಳಿಗೂ ಸೋದರ ಸಮ್ಮಂದ.
– ಹಾಂಗೊಂದು ಸಂಶಯ ಬಯಿಂದು ಒಪ್ಪಣ್ಣಂಗೆ.
ಅದಕ್ಕೆ ಕಾರಣ ಇಲ್ಲದ್ದೆ ಅಲ್ಲ – ಚಳಿ ಜೋರಾದ ಹಾಂಗೇ ಒರಕ್ಕುದೇ ಜೋರು!
ಉದೆಕಾಲ ಆರು ಗಂಟಗೆ ಏಳುವ ಜವ್ವನಿಗರು – ಈಗ ಗಡಿಯಾರವೂ ಏಳು ಹೇಳಿದ ಮೇಗೆಯೇ ಏಳುದಿದಾ!
ನೆಗೆಮಾಣಿ ಅಂತೂ ಹತ್ತು ಗಂಟೆ ಆದರೂ ಏಳ° ಹೇಳಿ ಬಂಡಾಡಿಅಜ್ಜಿ ನೆಗೆಮಾಡಿಗೊಂಡು ಪರಂಚುಗು –
ಅಜ್ಜಿಗೆ ಈಗ ಪ್ರಾಯ ಆಗಿ ಒರಕ್ಕು ಕಮ್ಮಿ ಆಯಿದು; ಛಳಿ ಇರಲಿ, ಮಳೆ ಇರಲಿ – ನಾಕು ಗಂಟಗೆ ಎದ್ದು ಕೂದೊಂಗು..!
ಅದು ಬೇರೆ ಸಂಗತಿ!
~
ಚಳಿಗಾಲ ಹೇಳಿದ ಮತ್ತೆ ಎಷ್ಟು ಜಾಗ್ರತೆ ಇದ್ದರೂ ಸಾಲ ಇದಾ!
ಎಲ್ಯಾರು ಪಕ್ಕನೆ ಕೈಗೋ – ಕಾಲಿಂಗೋ ಮಣ್ಣ ಡಂಕಿ ಹೋದರೆ ಬ್ರಹ್ಮಾಂಡಕ್ಕೇ ಬೇನೆ ತಟ್ಟಿದ ನಮುನೆ ಆಗಿ ಹೋಕು!
ಹಾಂಗಾಗಿ ಬೈಲಿಲಿ ನೆಡವಗ ಜಾಗ್ರತೆ ಬೇಕು! ಏ°? 😉
~
ಚಳಿಗಾಲ ಹೇದರೆ ಮತ್ತೆ ಗಮ್ಮತ್ತೇ ಅಲ್ಲದೋ?
ಹೊತ್ತೋಪಗ ಬೇಗ ಮನೆ ಒಳ ಹೊಗ್ಗಿಗೊಂಡರೆ, ಮಿಂದಿಕ್ಕಿ ಒಂದು ಶಾಲು ಹೊದಕ್ಕೊಂಗು ರಂಗಮಾವ°.
ಇರುಳು ಮನುಗುವಗ ಯೇವತ್ತಿನ ಒಂದು ಹೊದಕ್ಕೆಯ ಒಟ್ಟಿಂಗೆ ಈ ಶಾಲುದೇ ಆತು – ದಪ್ಪಕೆ.
ಮರದಿನ ಉದಿಯಪ್ಪಗ ತೋಟಕ್ಕೆ ಹೋಪಗಳೂ ಹೊದಕ್ಕೊಂಗು ಅದನ್ನೇ – ತಲಗೂ ಒಂದು ಸುತ್ತು ಬತ್ತ ನಮುನೆಗೆ – ಮೈಂದು ಬೀಳದ್ದ ಹಾಂಗೆ!
ದೂರಂದ ಅವರ ನೋಡಿರೆ ನಮ್ಮ ಬೋಸಬಾವಂಗೆಲ್ಲ ಗುರ್ತವೇ ಸಿಕ್ಕ – ಕಿಡಿಂಜೆಲೋ, ಪೆಂಗುವಿನ್ನೋ – ಎಂತದೋ ಹೇಳಿ ಗ್ರೇಶುಗು ಅವ°! 😉
ಅದಿರಳಿ, ರಂಗಮಾವ° ಮತ್ತೆ ಮನಗೆ ಬಂದು, ಮೀವನ್ನಾರ ಆ ಶಾಲು ಇಕ್ಕು, ಅವರ ಮೈಗೆ ಬೆಶಿ ಕೊಟ್ಟೋಂಡು!
ಮಿಂದ ಮತ್ತೆ ಪೂಜೆ ಮುಗುಶಿ ಬಪ್ಪಗಳೇ ಅವರ ಛಳಿಬಿಟ್ಟದು ಗೊಂತಪ್ಪದು ಮನೆಯೋರಿಂಗೆ! 🙂
ಮತ್ತೆ ಹೇಂಗುದೇ ಒಂದು ಬೆಶಿ ಛಾಯ ಇದ್ದನ್ನೇ, ಚಳಿ ಪೂರ್ತ ಓಡುಸಲೆ!
~
ಇಷ್ಟೆಲ್ಲ ಛಳಿ ಇದ್ದರೂ, ಈಗ ರಜ ಸಮೆಯಂದ ರಂಗಮಾವಂಗೆ ಛಳಿ ಇಲ್ಲೆ!
ಅದೆಂತರ – ಅದುವೇ ಇಂದ್ರಾಣ ಶುದ್ದಿ..!!
~
ಮೊನ್ನೆ ಒಂದಿನ ಎಂತಾತು ಗೊಂತಿದ್ದೋ – ಉದಿಯಪ್ಪಗ ಪಕ್ಕನೆ ಎಚ್ಚರಿಗೆ ಆತು ಒಪ್ಪಣ್ಣಂಗೆ!
ಎಚ್ಚರಿಗೆ ಅಪ್ಪಲೂ ಒಂದು ಕಾರಣ ಇದ್ದು!
ಇಡೀ ಮೈಮೇಗಂಗೆ – ಚಳಿಗೆ ಹೊದದು ಮಡಗಿದ ಕಂಬುಳಿ ಎಡಕ್ಕಿಲಿ ಆಗಿ ಒಂದು ಶಬ್ದ ಕೇಳಿತ್ತು – ಸಾರಡಿತೋಡು ದಾಂಟುವಗ ಅಪ್ಪ ಶಬ್ದ!
ಉದೆಕಾಲ – ಇನ್ನುದೇ ಉದಿ ಬೆಣ್ಚಾಯಿದಿಲ್ಲೆ, ಅಲ್ಲ – ಬೆಳ್ಳಿಯೂ ಮೂಡಿದ್ದಿಲ್ಲೆ.
ಇದೆಂತರ ಈ ಹೊತ್ತಿಂಗೆ ತೋಡಿಲಿ – ಬೈಲಿನ ಆರದ್ದಾರು ದನವೋ, ಕಂಜಿಯೋ ಮಣ್ಣ ಬಿಡುಸಿಗೊಂಡು ಬಂತೋ..
– ಹೇಳಿ ಮನುಗಿದಲ್ಲಿಂದಲೇ ಒಂದರಿ ತಲೆನೆಗ್ಗಿ ದಳಿ ಎಡಕ್ಕಿಲೆ ನೋಡಿದೆ –
ಅಷ್ಟಪ್ಪಗ ಸೆಮ್ಮುದು ಕೇಳಿತ್ತು..
ಅರೆ! ತರವಾಡುಮನೆ ರಂಗಮಾವನೋ.. ಸರಿ ಕಾಣ್ತೂ ಇಲ್ಲೆ ಬೆಣಚ್ಚು ಸಾಕಾಗದ್ದೆ!
ಅಪ್ಪು, ರಂಗಮಾವನೇ..
ಚೆಲಾ – ಎಲ್ಲಿಯೋ ಜೆಂಬ್ರಕ್ಕೆ ಹೆರಟ ಹಾಂಗಿದ್ದು? ಈ ಉದೆಕಾಲಕ್ಕೆ ಎದ್ದು ತೋಡು ದಾಂಟಿ, ಗೆದ್ದೆಪ್ಪುಣಿ ಹತ್ತಿ, ಬೈಲಕರೆ ಹೊಡೆಂಗೆ ನೆಡಕ್ಕೊಂಡು ಹೋವುತ್ತಾ ಇದ್ದವನ್ನೇ!

ಕೈಲಿ ಶಾಂಬಾವ° ತಂದ ಮೂರುಬೆಟ್ರಿಲೈಟು!
ಎಲ್ಲಿಯೋ ಜೆಂಬ್ರ ಇಕ್ಕು, ಪುತ್ತೂರು ಹೊಡೆಲಿಯೋ ಮಣ್ಣ; ದಿಬ್ಬಣ ಎದುರುಗೊಂಬ ಹೊತ್ತಿಂಗೆ ಎತ್ತುದಾಯಿಕ್ಕು – ಹೇಳಿ ಗ್ರೇಶಿಗೊಂಡು ಪುನಾ ತಲೆ ಅಡ್ಡ ಹಾಕಿದೆ.

ಒಪ್ಪಣ್ಣಂಗೆ ಇನ್ನೂ ಒಂದು ಒರಕ್ಕು ಬಾಕಿ ಇತ್ತು! 😉
ಚಳಿಗೆ ಚುರುಂಟಿ ಮನುಗಿತ್ತು!!
~

ಉದೆಕಾಲದ ಬೆಣಚ್ಚಿನ ಹೊತ್ತಿಂಗೆ ಧನುಪೂಜೆ ಮುಗುದಿರ್ತು!

ಒಪ್ಪಣ್ಣಂಗೆ ಉದಿ ಅಪ್ಪಗ ಕೋಳಿಗೆ ಒರಕ್ಕು ಸುರು ಆಗಿರ್ತು! ಅದು ಬೇಗ ಎದ್ದಿರ್ತಿದಾ, ಪಾಪ! 😉
ಹದಾಕೆ ಎದ್ದು, ಮೋರೆ ತೊಳದು, ಉದಿಯಪ್ಪಗಾಣ ಕಾಪಿ ಕುಡುದು –

ಬೈಲಿನೋರ ಒಂದರಿ ಮಾತಾಡುಸಿಕ್ಕಿ, ಎಂತಾರು ಶುದ್ದಿ ಇದ್ದೋ ನೋಡಿಕ್ಕಿ ಬಪ್ಪೊ° – ಹೇಳಿಗೊಂಡು ಹೆರಟೆ!
ಸಾರಡಿತೋಡು ದಾಂಟಿ ತರವಾಡುಮನೆ ತೋಟದ ಕರೆಲಿ ಹೋಪಗ –
ಚೆಲಾ, ರಂಗಮಾವ ಇದ್ದವು!ಅಂಬಗ ಆಗ ಉದೆಕಾಲಕ್ಕೆ ಹೋದ್ದು? – ಕೇಳೆಕ್ಕು ಜಾನುಸಿದೆ ಒಂದರಿ!
ಹೋದ್ದು ಆರು? ಯೇವಗ? ಆಗಿರದೋ ಅಂಬಗ? ಹ್ಹೆ, ಕನಸಾಯಿಕ್ಕು ಒಪ್ಪಣ್ಣಂಗೆ; ಕೇಳಿ ಮರಿಯಾದಿ ಹೋಪದು ಬೇಡ ಹೇಳಿ ಮಾತಾಡಿದ್ದಿಲ್ಲೆ.

ಎದುರು ಕಂಡ ರಂಗಮಾವನತ್ರೆ ಏನು-ಒಳ್ಳೆದು ಮಾತಾಡಿಕ್ಕಿ ಮುಂದೆ ಹೋದೆ.
~
ಸೀತ ಹೋಗಿ ಎತ್ತಿದ್ದು ನಮ್ಮ ಬೈಲಕರೆ ಗಣೇಶಮಾವನಲ್ಲಿಗೆ.
ಒಪ್ಪಣ್ಣಾ – ಚಳಿ ಬಿಟ್ಟತ್ತೋ – ಹೇಳಿ ಬೈಲಕರೆ ಗಣೇಶಮಾವ° ನೆಗೆಮಾಡಿಂಡು ಕೇಳಿದವು.
’ಬೆಶಿಗೆ ಎಂತ ಕುಡಿತ್ತೆ – ಕಷಾಯ ಅಕ್ಕೋ’ ಕೇಳಿದವು. ಹಾಂಗೆ ಕಷಾಯ ಅಪ್ಪಷ್ಟೊತ್ತು ಅಲ್ಲೇ ಪಂಚಾಂಗಲ್ಲಿ ಕೂದಂಡು ಪಟ್ಟಾಂಗ ಹೊಡದೆಯೊ°.
ವೃಶ್ಚಿಕೇ ಶೀತಮಾರಂಭಃ ಧನುಶೀ ಧನುರಾಕೃತಿಃ | – ಹೇಳಿ ಒಂದು ಸಂಸ್ಕೃತಲ್ಲಿ ತಮಾಶೆ ಇದ್ದಡ ಹೇಳಿಕ್ಕಿ ನೆಗೆಮಾಡಿದವು.
ವೃಶ್ಚಿಕಲ್ಲಿ ಚಳಿ ಸುರು ಆವುತ್ತಡ, ಧನುರ್ಮಾಸಲ್ಲಿ ಮನುಷ್ಯರೆಲ್ಲ ಮನುಗುವಗ ಚುರುಂಟಿ ಧನುಸ್ಸಿನ (ಬಿಲ್ಲಿನ) ಹಾಂಗೆ ಆವುತ್ತವಡ – ಹೇಳಿದವು.
ಒಪ್ಪಣ್ಣಂಗೂ ನೆಗೆಬಂತು, ಜೋರು! 🙂
ಈಗ ಆ ಧನು ತಿಂಗಳಡ ಇದಾ!
ಬೆಶಿ ಬೆಶಿ ಕಶಾಯ ಕುಡುದಿಕ್ಕಿ ಅಲ್ಲಿಂದ ಹೆರಟೆ.
~
ಶಾರದ ಕೆಲೆಂಡರಿಲಿ ಹೊಸ ತಿಂಗಳು ಸುರು ಆತಿದಾ, ಷ್ಟೋರಿಲಿ ಈ ತಿಂಗಳಿನ ಸಾಮಾನುಗೊ ಬಯಿಂದೋ ನೋಡಿಕ್ಕಿ ಬಂದೆ.
ಮತ್ತೆ ಬೈಲಿಲೇ ಅತ್ಲಾಗಿತ್ಲಾಗಿ ತಾಂಟಿ ಆ ದಿನ ಮುಗುಶಿತ್ತು!
ಛಳಿಗೆ ಒರಕ್ಕು ಮೊದಲೇ ಜಾಸ್ತಿ – ಮನಗೆತ್ತಿ ಬೇಗ ಉಂಡಿಕ್ಕಿ ಒರಗಿದೆ.
~
ಮರದಿನ ಉದೆಕಾಲಕ್ಕೆ!
ನಿನ್ನೇಣ ಅದೇ ಹೊತ್ತಿಂಗೆ, ಸಾರಡಿತೋಡಿಲಿ ದಳುಂಬುಳುಂ – ರಂಗಮಾವ° – ಲೈಟಿನ ಬೆಣಚ್ಚು – ಜೆಂಬ್ರಕ್ಕೆ ಹೆರಟೋರ ಹಾಂಗೆ…!
ಈ ಸರ್ತಿ ನೋಡಿಕ್ಕಿ ಮನುಗಿರೂ ಒರಕ್ಕೇ ಬಾರ!
ಗೋಪಾಲಣ್ಣ ಹೇಳಿದ ಬೂತದ ಶುದ್ದಿಯೇ ತಲೆಲಿ ತಿರುಗುಲೆ ಸುರು ಆತು!
ಎಂತ ಕತೆ ಅಂಬಗ? ರಂಗಮಾವ° ನಿನ್ನೆಯೂ ಹೋಯಿದವು, ಆದರೆ ಮತ್ತೆ ಒಪಾಸು ಬಂದವೋ?
ಅಲ್ಲ, ಹೆರಟಮತ್ತೆ ಮದುವೆ ದಿನ ಲೆಕ್ಕ ತಪ್ಪಿತ್ತೋ..?
ಪುಚ್ಚೆ ಅಡ್ಡ ಸಿಕ್ಕಿತ್ತೋ? ಅಲ್ಲ ಎಂತಾರು ಮರದತ್ತೋ.. – ಉಮ್ಮಪ್ಪ!! ಮದಲೇ ಅವಕ್ಕೆ ಶಕುನಂಗೊ ಜಾಸ್ತಿ.
ಮತ್ತೆ ಸಿಕ್ಕಿಪ್ಪಗಳೂ ಎಂತ ಹೇಳಿದ್ದವಿಲ್ಲೆ, ಏನಾರು ಆಗಿದ್ದರೆ ಹೇಳ್ತಿತವಿದಾ!
ಇದರೆಲ್ಲ ಗ್ರೇಶಿಗೊಂಡಿದ್ದ ಹಾಂಗೆಯೇ..
ನಿಧಾನಕ್ಕೆ ಆದರೂ ಒರಕ್ಕು ತೂಗಿ ತೂಗಿ ಬಂತು, ಚುರುಂಟಿ ಮನುಗಿ ಅಪ್ಪಗ!
~
ಹದಾಕೆ ಎದ್ದು, ತಿಂಡಿಕಾಪಿ ಎಲ್ಲ ಆಗಿ ಒಂದರಿ ಬೈಲಿಲೇ ನೆಡಕ್ಕೊಂಡು ಹೋದೆ.
ಇಂದುದೇ ರಂಗಮಾವ° ಇದ್ದವೋ – ಹೇಳಿ ನೋಡಿದ ಹಾಂಗುದೇ ಆತು – ಹೇಳಿಗೊಂಡು ತರವಾಡುಮನೆ ತೋಟದ ಕರೇಲೇ ಹೋದೆ.
ಚೆಲ – ಎಂತದೂ ಆಯಿದಿಲ್ಲೆ ಹೇಳುವ ಹಾಂಗೆ ತೋರ್ತು(ಸಣ್ಣ ಒಸ್ತ್ರ) ಸುತ್ತಿಗೊಂಡು ಕೊತ್ತಳಿಂಗೆ ಕಡ್ಕೊಂಡು ಇತ್ತಿದ್ದವು ರಂಗಮಾವ° – ಯೇವತ್ತಿನಂತೆ!
ಒಪ್ಪಣ್ಣಂಗೆ ಕುತೂಹಲ ತಡದತ್ತಿಲ್ಲೆ.
ನಿನ್ನೆ ಆದರೆ ಕನಸಾಯಿಕ್ಕು – ಇಂದುದೇ ಹಾಂಗೆ ಆದ್ಸು ಎಂತರ ಅಂಬಗ!
ಮೆಲ್ಲಂಗೆ ಕೇಳಿಯೇ ಬಿಟ್ಟೆ – ದೊಡಾ ಗುಟ್ಟು ಹಿಡುದೋನ ಹಾಂಗೆ –
ರಂಗಮಾವಾ° – ಇಂದು ಉದೆಕಾಲಕ್ಕೆ ಶಾಲು ಹಾಕಿಂಡು ಎಲ್ಲಿಗೋ ಹೋದ ಹಾಂಗಾತು, ನಿಂಗಳೇಯೋ?..
ಅಪ್ಪೋ°, ಬೈಲಕರೆ ಉದನೇಶ್ವರ ದೇವಸ್ಥಾನಲ್ಲಿ ಧನುಪೂಜಗೋ°! – ಹೇಳಿಕ್ಕಿ ಕೊತ್ತಳಿಂಗೆ ಕಡಿವದರ ಮುಂದುವರುಸಿದವು.
ಓಹೋ, ಸರಿ – ಹೇಳಿಕ್ಕಿ, ಬೇರೆಂತೂ ಮಾತಾಡದ್ದೆ ಅಲ್ಲಿಂದ ಮುಂದೆಬಂದೆ. 😉
~
ಧನುಪೂಜೆಯೋ?
ಅಪ್ಪು, ಅಲ್ಲಲ್ಲಿ ಬೋರ್ಡು ಕಂಡಿದು ನಾವು! ಮದಲು ಅಷ್ಟಾಗಿ ಇಲ್ಲದ್ದರೂ – ಈಗೀಗ ಜೋರು!
ಅಂಬಗ ಅದೆಂತರ?
ದೀಪಪೂಜೆ, ದ್ವಾರಪಾಲ ಪೂಜೆ, ಪೀಠಪೂಜೆ, ನವಶೆಗ್ತಿ ಪೂಜೆ – ಎಲ್ಲ ಬಟ್ಟಮಾವ ಹೇಳುದರ ಕೇಳಿ ಅರಡಿಗು..
ದುರ್ಗಾಪೂಜೆ, ಗೆಣವತಿಪೂಜೆ, ಹೂಗಿನ ಪೂಜೆ, ರಂಗಪೂಜೆ – ಎಲ್ಲ ದೇವಸ್ಥಾನಂಗಳಲ್ಲಿ ಕೇಳಿ ಅರಡಿಗು..
ಧನುಪೂಜೆ ಹೇಂಗಿರ್ತದು? – ನೋಡೆಕ್ಕಟ್ಟೆ, ಹೇಳಿ ತಲೆಲಿ ಯೋಚನೆ ಮಾಡಿಗೊಂಡು ನೆಡಕ್ಕೊಂಡೇ ಹೋದೆ ಬೈಲಕರೆ ಹೊಡೆಂಗೆ..
.. ರಜ ಹೊತ್ತಿಲಿ ಜೋಯಿಶಪ್ಪಚ್ಚಿ ಮನೆಗೆ ಎತ್ತಿತ್ತು.
~

ಬ್ರಾಹ್ಮಿಯ ಕಸ್ತಲೆಯ ಕಪ್ಪಿಂಗೆ ಕಪ್ಪಿನ ಶಿವನ ದರ್ಶನ!!

ಗಣೇಶಮಾವ ಎಂತದೇ ಶ್ಲೋಕ ಹೇಳಲಿ, ಬೈಲಕರೆ ಜೋಯಿಶಪ್ಪಚ್ಚಿಗೆ ಮಾಂತ್ರ ಧನುತಿಂಗಳುದೇ ಛಳಿ ಇಲ್ಲೆ.
ಯೇವತ್ತಿನ ಹೊತ್ತಿಂಗೇ ಎದ್ದು – ಅಶುದ್ಧಲ್ಲಿ ಮಿಂದು – ಶುದ್ಧಲ್ಲಿ ಭಸ್ಮ ಎಳೆತ್ತದರೆ ಕಂಡ್ರೆ ಯೇವ ಛಳಿಯೂ ಒಂದರಿ ಹೆದರಿಕ್ಕುಗು..
ಚಳಿಗಾಲದ ತಣ್ಣೀರೇ ನಾಟ ಅವಕ್ಕೆ..!
ಒಪ್ಪಣ್ಣ ಅಲ್ಲಿಗೆ ಎತ್ತುದೂ, ಜೋಯಿಶಪ್ಪಚ್ಚಿ “ಮೂರ್ತಿತ್ವೇ ಪರಿಕಲ್ಪಿತಶ್ಶಶಭೃತೋ…” ನಿತ್ಯರಾಶಿ ನೋಡಿಕ್ಕಿ ಏಳುದೂ ಸರೀ ಆತು.
ಮಾಮೂಲಿನ ಯೆಂತವೊಪ್ಪಣ್ಣ – ಹೇಳಿದವು ಒಂದರಿ ಅಲ್ಲಿಂದಲೇ.
~

ಕವುಡೆ ಚೀಲ ಎಲ್ಲ ಕರೆಲಿ ಮಡಗಿ, ಆಗ್ನೇಯದ ಅಡಿಗೆಕೋಣೆ ಹೊಡೆಂಗೆ ತಿರುಗಿ ’ಛಾಯ ಕೊಂಡ, ಒಪ್ಪಣ್ಣಂದೇ ಇದ್ದ°’ ಹೇಳಿಕ್ಕಿ ಮಾತು ಸುರು ಮಾಡಿದವು. ಚಿಕ್ಕಮ್ಮನ ಹತ್ತರೆ ಹಾಂಗೇ ಮಾತಾಡುಗು ಅವು.
ರಜ ಹೊತ್ತು ಚಳಿಯ ಶುದ್ದಿ ಎಲ್ಲ ಮಾತಾಡಿಕ್ಕಿ ಮೆಲ್ಲಂಗೆ..
ಧನುಪೂಜೆಯ ಗವುಜಿ ಜೋರಲ್ಲದೋ ಅಪ್ಪಚ್ಚಿ ಈಗ, ಅದರದ್ದೆಂತರ ಸಂಗತಿ? – ಹೇಳಿ ಕೇಳಿದೆ, ಎಂತ ಕತೆ ಹೇಳಿ ತಿಳುಕ್ಕೊಂಬೊ ಹೇಳಿಗೊಂಡು.
~
ಜೋಯಿಶಪ್ಪಚ್ಚಿ ಎಲ್ಲವನ್ನೂ ಚೆಂದಲ್ಲಿ ವಿವರುಸಿದವು.

ಪ್ರಾತಃಕಾಲ ಹೇಳಿತ್ತುಕಂಡ್ರೆ ಶಿವ° ಪ್ರಸನ್ನ ಆಗಿಪ್ಪ ಸಮೆಯ ಅಡ.
ಹೇಮಂತ ಋತುವಿನ ಈ ಸಮೆಯಲ್ಲಿ ಶಿವ° ಅತ್ಯಂತ ಪ್ರಸನ್ನರಾಗಿಪ್ಪದಡ.
ಹಾಂಗೆ, ಧನುರ್ಮಾಸಲ್ಲಿ ಪ್ರಾತಃಕಾಲಕ್ಕೆ ಮಂಗಳಾರತಿ ಅಪ್ಪ ಹಾಂಗೆ, ಬ್ರಾಹ್ಮೀಮೂರ್ತಕ್ಕೆ ಪೂಜೆ ಸುರುಮಾಡಿ, ಸೂರ್ಯೋದಯಕ್ಕೆ ಮುಗುಶುತ್ತ ಪೂಜೆಯೇ ಈ ಧನುಪೂಜೆ ಹೇಳಿದವು.
ಬ್ರಾಹ್ಮೀ ಮೂರ್ತಲ್ಲೇ ಪೂಜೆ ಸುರುಮಾಡಿ, ಆವಾಹನೆ, ಅಭಿಶೇಕ, ಅರ್ಚನೆ, ನೈವೇದ್ಯ, ಮಂಗಳಾರತಿ – ಕೊಟ್ಟು, ಪ್ರಸನ್ನನಾದ ಶಿವನ ಸುಪ್ರಸನ್ನ ಮಾಡ್ತ ಕಾರ್ಯ ಈ ಧನುಪೂಜೆಯ ಉದ್ದೇಶ ಅಡ.
ನೈವೇದ್ಯಕ್ಕೆ ವಿಶೇಷವಾಗಿ ಹುಗ್ಗಿ – ಹೇಳ್ತ ಪಾಕ ಮಾಡುಗಡ. ಹಸರ ಬೇಳೆ, ಅಕ್ಕಿ, ಬೆಲ್ಲ – ಎಲ್ಲ ಹಾಕಿ ಬೇಶಿ – ಒಂದು ನಮೂನೆ ಪಾಯಿಸದ ಹಾಂಗೆ.
ಉಡುಪಿಲಿಯೂ ಇದರ ಮಾಡ್ತವಡ ಧನುಪೂಜೆಗೆ.
ಮಾಷ್ಟ್ರುಮಾವನೊಟ್ಟಿಂಗೆ ಅಂದೊಂದರಿ ಉಡುಪಿಗೆ ಹೋಗಿಪ್ಪಗ ಈ ಧನುಪೂಜೆ ಪ್ರಸಾದದ ರುಚಿನೋಡಿದ್ದವಡ.ಧನುಪೂಜೆ ಮುಗುದ ಕೂಡ್ಳೇ ನೈರ್ಮಾಲ್ಯ ತೆಗದು ಮತ್ತೆ ಪ್ರಾತಃಪೂಜೆ ಸುರು ಅಡ! – ಯೇವತ್ತಿನಂತೆ.
ಒರಿಶದ ಉಳುದ ಸಮೆಯಂದ ಒಂದು ಪೂಜೆ ಜಾಸ್ತಿ ಆ ಸಮೆಯಲ್ಲಿ.

ಪುತ್ತೂರು ಮಾಲಿಂಗೇಶ್ವರಂಗೆ ಅನಾದಿಕಾಲಂದಲೇ ಧನುಪೂಜೆ ವಿಶೇಷ ಅಡ್ಡ.
– ಊರೂರಿಂದ ಮುನ್ನಾದಿನವೇ ಬಂದು ಕಾದುನಿಂಗು – ಹೇಳಿದವು ಮಾತಾಡುವಗ.

ಶಿವನ ದೇವಸ್ಥಾನಲ್ಲಿ ಸರಿ, ಹಾಂಗಾರೆ ಬೇರೆ ದೇವಸ್ಥಾನಂಗಳಲ್ಲಿ ಧನುಪೂಜೆ ಎಂತರ? ಕೇಳಿದೆ.
ಉಮ್ಮ, ಅದೆಲ್ಲ ನವಗರಡಿಯ.
ಮದಲಿಂಗೆ ಅದೆಲ್ಲ ಹದಾಕೆ ಇತ್ತದು, ಈಗ ನೋಡಿರೆ ಎಲ್ಲ ದಿಕ್ಕುದೇ, ಎಲ್ಲ ದೇವಸ್ಥಾನಲ್ಲಿದೇ ಇದ್ದು – ಹೇಳಿದವು ರಪ್ಪನೆ.
ಕ್ರಮಲ್ಲಿ ನೋಡಿರೆ ಶಿವಂಗೆ ಮಾಂತ್ರ ಧನುಪೂಜೆ ಮಾಡ್ತ ಮರಿಯಾದಿ ಇದ್ದದು.
ಕಾಲಕ್ರಮೇಣ ಎಲ್ಲಾ ದೇವರಿಂಗೂ ಸುರು ಆಯಿದು.
ದೇವರ ಪೂಜೆ ಅಲ್ಲದೋ – ಬೈವಲಿಲ್ಲೆ- ಹೇಳಿದವು ಮತ್ತೆ.
ಚಾಯ ಬಂತು, ಕುಡುದೆಯೊ°. ಜೋಯಿಶಪ್ಪಚ್ಚಿಗೆ ಉದಿಯಪ್ಪಗ ಒಂದು ಚಾಯ ಆಗದ್ರೆ ತಲೆಸೆಳಿತ್ತಡ ಮತ್ತೆ!
ಚಿಕ್ಕಮ್ಮಂಗೆ ಒಪ್ಪಣ್ಣ ಅಪುರೂಪ ಆಗಿ ಗುರ್ತವೇ ಸಿಕ್ಕಿದ್ದಿಲ್ಲೆಡ – ಕೋಂಗಿಮಾಡಿದವೊಂದರಿ!
ಚಾಯದ ಗ್ಳಾಸು ಕಾಲಿ ಆದಕೂಡ್ಳೇ ಒಳ್ಳೆ ಗಳಿಗೆ ನೋಡಿ ಮೆಲ್ಲಂಗೆ ಹೆರಟೆ ಅಲ್ಲಿಂದ. 😉
~

ಉದಿಯಾತು, ಯೇವತ್ತಿನಂತೆ ನಿತ್ಯದ ಕಾರ್ಯಂಗಳೂ...

ಅಂತೂ, ಅಲ್ಲಿಂದ ಬಪ್ಪಗ ಒಂದು ಶುದ್ದಿ ಸಿಕ್ಕಿತ್ತು ಒಪ್ಪಣ್ಣಂಗೆ.
ಎಷ್ಟು ವಿಶೇಷ ಅಲ್ದೋ – ಧನುತಿಂಗಳಿನ ಕಾಲಲ್ಲಿ!
ಹೊತ್ತುಮೂಡೇಕಾರೆ ಮದಲೇ ಒಂದು ಪೂಜೆ.
ಅದಕ್ಕೆ ಊರಿನ ಆಸ್ತಿಕರೆಲ್ಲ ಹೋಗಿ ಸೇರಿಗೊಂಬದು – ಅಷ್ಟಪ್ಪಗ ಅವರ ದೈವಭಕ್ತಿಯ ಎದುರು ಯೇವ ಛಳಿಯೂ ಲೆಕ್ಕಕ್ಕಿಲ್ಲೆ!
ಈಗೀಗ ಹೇಂಗೂ ಶಬರಿಮಲೆಯ ಅಯ್ಯಪ್ಪಂಗೊ ಇರ್ತವಲ್ಲದೋ – ಭಕ್ತಿಪಂಥದೋರು!
ಸೂರ್ಯ° ಏಳುವ ಮೊದಲೇ ದೇವರಿಂಗೆ ಒಂದು ಪೂಜೆ ಮಂಗಳಾರತಿ.

ಧನುಪೂಜೆ ಗವುಜಿ ಮುಗುದ ಮತ್ತೆ ಯೇವತ್ತಿನಂತೇ ನಿತ್ಯಜೀವನ!
ಪೂಜೆ ತೆಕ್ಕೊಂಡ ದೇವರಿಂಗೂ, ಪೂಜೆ ಮಾಡಿದ ಬಟ್ರಿಂಗೂ, ಪೂಜಗೆ ಹೋದ ಆಸ್ತಿಕರಿಂಗೂ ಈ ಮಾತು ಅನ್ವಯಿಸುತ್ತು.
ಧನುಪೂಜೆ ಕಳಿಶಿ ಮನಗೆ ಬಂದ ರಂಗಮಾವಂಗೂ! 🙂
ಅಪ್ಪು, ಅವರ ನಿತ್ಯ ದಿನಚರಿಯ ಯೇವತ್ತಿನ ಹಾಂಗೇ ಮಾಡಿಗೊಂಡಿದವು, ಅದರೆಡಕ್ಕಿಲಿ ಒಂದು ಈ ಧನುಪೂಜೆ – ವಿಶೇಷದ್ದು.

~
ಎಷ್ಟು ಚೆಂದದ ಕಲ್ಪನೆ ಅಲ್ಲದೋ?
ನಮ್ಮ ಜೀವನಪದ್ಧತಿಗೆ ತಕ್ಕುದಾದ ಪೂಜಾಪದ್ಧತಿ.
ಸುಂದರ ಋತುವಿನ ಪ್ರಾತಃಕಾಲದ ಸುಂದರ ಸಮಯಲ್ಲಿ ದೇವರ ಪೂಜೆ ಮಾಡಿ,
ಅದೇ ಗುಂಗಿಲಿ ಇಡೀ ದಿನ ದೇವರ ಸ್ಮರಣೆಲೇ,
ಉದಿಯಾಂದ ನೆಡೆತ್ತ ಜೀವನಕ್ಕೆ ಹೊಂದಿಗೊಂಡು,
ಧಾರ್ಮಿಕವಾಗಿ ಜೀವನ ನೆಡೆಶುತ್ತದು..
~
ಶಿವನ ದೇವಸ್ಥಾನಂಗಳಲ್ಲಿ ಅಂತೂ ಈ ಧನುಪೂಜೆ ಕ್ರಮಾಗತವಾಗಿ ನೆಡೆತ್ತು.
ಒಳುದ ದೇವಸ್ಥಾನಂಗಳಲ್ಲೂ ಈಗೀಗ ಸುರು ಆಯಿದಡ..

ಆಗಲಿ, ಆ ಲೆಕ್ಕಲ್ಲಿ ಆದರೂ ನಮ್ಮ ಜಡ ರಜ ಬಿಡ್ತನ್ನೇ.
ಉದೇಕಾಲಕ್ಕೇ ಎದ್ದು ಮಿಂದು, ಭಕ್ತೀಲಿ ದೇವಸ್ಥಾನಕ್ಕೆ ಹೋಗಿ ಪೂಜೆ ನೋಡ್ತನ್ನೇ.
ಒಂದೊಂದರಿ ಹೊಸತ್ತೊಸತ್ತು ಕ್ರಮಂಗೊ ಸುರು ಆದ್ದದುದೇ ನಮ್ಮ ಶ್ರದ್ಧೆ ಹೆಚ್ಚಪ್ಪಲೆ ಕಾರಣ ಆವುತ್ತಿದಾ.
ಅದು ಕೊಶಿಯ ಸಂಗತಿಯೇ.
~
ಎಡಿಗಾರೆ ನಾಳಂಗೆ ರಂಗಮಾವ ಹೋಪ ಹೊತ್ತಿಂಗೆ ಹೆರಟು ನಿಲ್ಲೆಕ್ಕು ಹೇಳಿ ಇದ್ದು..

ಒಂದೇ ಲೈಟು ಸಾಕನ್ನೇ ಇಬ್ರಿಂಗೆ.
– ಹಾಂಗೆ ಗ್ರೇಶುದೇ ಎರಡುಮೂರು ದಿನ ಆತು, ಚಳಿ ಏಳುಲೂ ಬಿಡ್ತಿಲ್ಲೆ! 😉
ನೋಡೊ°, ಇನ್ನೊಂದು ವಾರ ಸಮೆಯ ಇದ್ದು – ಎಡಿಗಾದ ದಿನ ಹೋಗಿ ಸೇರಿಗೊಳೆಕ್ಕು, ದೇವರೆತ್ತುಸಿರೆ.
~
ಬನ್ನಿ,
ಸಾಧ್ಯ ಆದರೆ, ಸಾಧ್ಯ ಆದಲ್ಲಿ ಒಂದರಿ ಧನುಪೂಜೆ ನೋಡಿಕ್ಕುವೊ°…
ಶಿವನ, ಅವನ ಧನುಸ್ಸಿನ, ಹೇಮಂತ ಋತುವಿನ, ಧನುರ್ಮಾಸದ ಒಲುಮೆ ನವಗಿರಳಿ…
ಚಳಿ ಬಿಟ್ಟು ಬೇಗ ಹೋದರೆ ಶಿವನ ಪೂಜೆ ಸಿಕ್ಕುಗು; ಶಿವನ ಒಲುಮೆ ಸಿಕ್ಕಿರೆ ಜೀವನದ ಛಳಿ ಬಿಡುಗು!
ಅಲ್ಲದೋ?

ಒಂದೊಪ್ಪ: ಧನು ತಿಂಗಳಿನ ಶಿವಪೂಜೆ ನೋಡಿಕ್ಕಿ ಶಿವಧನುಸ್ಸಿನ ಹಾಂಗೆ ಗಟ್ಟಿ ಅಪ್ಪೊ°!

ಸೂ: ಪಟ ಇಂಟರುನೆಟ್ಟಿಂದ ಸಿಕ್ಕಿದ್ದು.

ಒಪ್ಪಣ್ಣ

   

You may also like...

46 Responses

  1. ಶ್ಯಾಮಣ್ಣ says:

    ಇದಾ… ಧನುಪೂಜೆಯ ವಿಶಯಲ್ಲಿ ಇಲ್ಲೊಂದು ಸಂಕೋಲೆ ಸಿಕ್ಕಿತ್ತಿದ್ದಾ..

    http://thatskannada.oneindia.in/festivals/general/2009/1221-what-is-the-significance-of-dhanurmasa.html

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *