Oppanna.com

ಧನುರ್ಮಾಸದ ಚಳಿಲಿಯೂ ಧನುಪೂಜೆಯ ಬೆಶಿ..!

ಬರದೋರು :   ಒಪ್ಪಣ್ಣ    on   07/01/2011    46 ಒಪ್ಪಂಗೊ

ಒರಕ್ಕಿಂಗೂ ಚಳಿಗೂ ಸೋದರ ಸಮ್ಮಂದ.
– ಹಾಂಗೊಂದು ಸಂಶಯ ಬಯಿಂದು ಒಪ್ಪಣ್ಣಂಗೆ.
ಅದಕ್ಕೆ ಕಾರಣ ಇಲ್ಲದ್ದೆ ಅಲ್ಲ – ಚಳಿ ಜೋರಾದ ಹಾಂಗೇ ಒರಕ್ಕುದೇ ಜೋರು!
ಉದೆಕಾಲ ಆರು ಗಂಟಗೆ ಏಳುವ ಜವ್ವನಿಗರು – ಈಗ ಗಡಿಯಾರವೂ ಏಳು ಹೇಳಿದ ಮೇಗೆಯೇ ಏಳುದಿದಾ!
ನೆಗೆಮಾಣಿ ಅಂತೂ ಹತ್ತು ಗಂಟೆ ಆದರೂ ಏಳ° ಹೇಳಿ ಬಂಡಾಡಿಅಜ್ಜಿ ನೆಗೆಮಾಡಿಗೊಂಡು ಪರಂಚುಗು –
ಅಜ್ಜಿಗೆ ಈಗ ಪ್ರಾಯ ಆಗಿ ಒರಕ್ಕು ಕಮ್ಮಿ ಆಯಿದು; ಛಳಿ ಇರಲಿ, ಮಳೆ ಇರಲಿ – ನಾಕು ಗಂಟಗೆ ಎದ್ದು ಕೂದೊಂಗು..!
ಅದು ಬೇರೆ ಸಂಗತಿ!
~
ಚಳಿಗಾಲ ಹೇಳಿದ ಮತ್ತೆ ಎಷ್ಟು ಜಾಗ್ರತೆ ಇದ್ದರೂ ಸಾಲ ಇದಾ!
ಎಲ್ಯಾರು ಪಕ್ಕನೆ ಕೈಗೋ – ಕಾಲಿಂಗೋ ಮಣ್ಣ ಡಂಕಿ ಹೋದರೆ ಬ್ರಹ್ಮಾಂಡಕ್ಕೇ ಬೇನೆ ತಟ್ಟಿದ ನಮುನೆ ಆಗಿ ಹೋಕು!
ಹಾಂಗಾಗಿ ಬೈಲಿಲಿ ನೆಡವಗ ಜಾಗ್ರತೆ ಬೇಕು! ಏ°? 😉
~
ಚಳಿಗಾಲ ಹೇದರೆ ಮತ್ತೆ ಗಮ್ಮತ್ತೇ ಅಲ್ಲದೋ?
ಹೊತ್ತೋಪಗ ಬೇಗ ಮನೆ ಒಳ ಹೊಗ್ಗಿಗೊಂಡರೆ, ಮಿಂದಿಕ್ಕಿ ಒಂದು ಶಾಲು ಹೊದಕ್ಕೊಂಗು ರಂಗಮಾವ°.
ಇರುಳು ಮನುಗುವಗ ಯೇವತ್ತಿನ ಒಂದು ಹೊದಕ್ಕೆಯ ಒಟ್ಟಿಂಗೆ ಈ ಶಾಲುದೇ ಆತು – ದಪ್ಪಕೆ.
ಮರದಿನ ಉದಿಯಪ್ಪಗ ತೋಟಕ್ಕೆ ಹೋಪಗಳೂ ಹೊದಕ್ಕೊಂಗು ಅದನ್ನೇ – ತಲಗೂ ಒಂದು ಸುತ್ತು ಬತ್ತ ನಮುನೆಗೆ – ಮೈಂದು ಬೀಳದ್ದ ಹಾಂಗೆ!
ದೂರಂದ ಅವರ ನೋಡಿರೆ ನಮ್ಮ ಬೋಸಬಾವಂಗೆಲ್ಲ ಗುರ್ತವೇ ಸಿಕ್ಕ – ಕಿಡಿಂಜೆಲೋ, ಪೆಂಗುವಿನ್ನೋ – ಎಂತದೋ ಹೇಳಿ ಗ್ರೇಶುಗು ಅವ°! 😉
ಅದಿರಳಿ, ರಂಗಮಾವ° ಮತ್ತೆ ಮನಗೆ ಬಂದು, ಮೀವನ್ನಾರ ಆ ಶಾಲು ಇಕ್ಕು, ಅವರ ಮೈಗೆ ಬೆಶಿ ಕೊಟ್ಟೋಂಡು!
ಮಿಂದ ಮತ್ತೆ ಪೂಜೆ ಮುಗುಶಿ ಬಪ್ಪಗಳೇ ಅವರ ಛಳಿಬಿಟ್ಟದು ಗೊಂತಪ್ಪದು ಮನೆಯೋರಿಂಗೆ! 🙂
ಮತ್ತೆ ಹೇಂಗುದೇ ಒಂದು ಬೆಶಿ ಛಾಯ ಇದ್ದನ್ನೇ, ಚಳಿ ಪೂರ್ತ ಓಡುಸಲೆ!
~
ಇಷ್ಟೆಲ್ಲ ಛಳಿ ಇದ್ದರೂ, ಈಗ ರಜ ಸಮೆಯಂದ ರಂಗಮಾವಂಗೆ ಛಳಿ ಇಲ್ಲೆ!
ಅದೆಂತರ – ಅದುವೇ ಇಂದ್ರಾಣ ಶುದ್ದಿ..!!
~
ಮೊನ್ನೆ ಒಂದಿನ ಎಂತಾತು ಗೊಂತಿದ್ದೋ – ಉದಿಯಪ್ಪಗ ಪಕ್ಕನೆ ಎಚ್ಚರಿಗೆ ಆತು ಒಪ್ಪಣ್ಣಂಗೆ!
ಎಚ್ಚರಿಗೆ ಅಪ್ಪಲೂ ಒಂದು ಕಾರಣ ಇದ್ದು!
ಇಡೀ ಮೈಮೇಗಂಗೆ – ಚಳಿಗೆ ಹೊದದು ಮಡಗಿದ ಕಂಬುಳಿ ಎಡಕ್ಕಿಲಿ ಆಗಿ ಒಂದು ಶಬ್ದ ಕೇಳಿತ್ತು – ಸಾರಡಿತೋಡು ದಾಂಟುವಗ ಅಪ್ಪ ಶಬ್ದ!
ಉದೆಕಾಲ – ಇನ್ನುದೇ ಉದಿ ಬೆಣ್ಚಾಯಿದಿಲ್ಲೆ, ಅಲ್ಲ – ಬೆಳ್ಳಿಯೂ ಮೂಡಿದ್ದಿಲ್ಲೆ.
ಇದೆಂತರ ಈ ಹೊತ್ತಿಂಗೆ ತೋಡಿಲಿ – ಬೈಲಿನ ಆರದ್ದಾರು ದನವೋ, ಕಂಜಿಯೋ ಮಣ್ಣ ಬಿಡುಸಿಗೊಂಡು ಬಂತೋ..
– ಹೇಳಿ ಮನುಗಿದಲ್ಲಿಂದಲೇ ಒಂದರಿ ತಲೆನೆಗ್ಗಿ ದಳಿ ಎಡಕ್ಕಿಲೆ ನೋಡಿದೆ –
ಅಷ್ಟಪ್ಪಗ ಸೆಮ್ಮುದು ಕೇಳಿತ್ತು..
ಅರೆ! ತರವಾಡುಮನೆ ರಂಗಮಾವನೋ.. ಸರಿ ಕಾಣ್ತೂ ಇಲ್ಲೆ ಬೆಣಚ್ಚು ಸಾಕಾಗದ್ದೆ!
ಅಪ್ಪು, ರಂಗಮಾವನೇ..
ಚೆಲಾ – ಎಲ್ಲಿಯೋ ಜೆಂಬ್ರಕ್ಕೆ ಹೆರಟ ಹಾಂಗಿದ್ದು? ಈ ಉದೆಕಾಲಕ್ಕೆ ಎದ್ದು ತೋಡು ದಾಂಟಿ, ಗೆದ್ದೆಪ್ಪುಣಿ ಹತ್ತಿ, ಬೈಲಕರೆ ಹೊಡೆಂಗೆ ನೆಡಕ್ಕೊಂಡು ಹೋವುತ್ತಾ ಇದ್ದವನ್ನೇ!

ಕೈಲಿ ಶಾಂಬಾವ° ತಂದ ಮೂರುಬೆಟ್ರಿಲೈಟು!
ಎಲ್ಲಿಯೋ ಜೆಂಬ್ರ ಇಕ್ಕು, ಪುತ್ತೂರು ಹೊಡೆಲಿಯೋ ಮಣ್ಣ; ದಿಬ್ಬಣ ಎದುರುಗೊಂಬ ಹೊತ್ತಿಂಗೆ ಎತ್ತುದಾಯಿಕ್ಕು – ಹೇಳಿ ಗ್ರೇಶಿಗೊಂಡು ಪುನಾ ತಲೆ ಅಡ್ಡ ಹಾಕಿದೆ.cheap Ray-Ban sunglasses uk

ಒಪ್ಪಣ್ಣಂಗೆ ಇನ್ನೂ ಒಂದು ಒರಕ್ಕು ಬಾಕಿ ಇತ್ತು! 😉
ಚಳಿಗೆ ಚುರುಂಟಿ ಮನುಗಿತ್ತು!!
~

ಉದೆಕಾಲದ ಬೆಣಚ್ಚಿನ ಹೊತ್ತಿಂಗೆ ಧನುಪೂಜೆ ಮುಗುದಿರ್ತು!

ಒಪ್ಪಣ್ಣಂಗೆ ಉದಿ ಅಪ್ಪಗ ಕೋಳಿಗೆ ಒರಕ್ಕು ಸುರು ಆಗಿರ್ತು! ಅದು ಬೇಗ ಎದ್ದಿರ್ತಿದಾ, ಪಾಪ! 😉
ಹದಾಕೆ ಎದ್ದು, ಮೋರೆ ತೊಳದು, ಉದಿಯಪ್ಪಗಾಣ ಕಾಪಿ ಕುಡುದು –

ಬೈಲಿನೋರ ಒಂದರಿ ಮಾತಾಡುಸಿಕ್ಕಿ, ಎಂತಾರು ಶುದ್ದಿ ಇದ್ದೋ ನೋಡಿಕ್ಕಿ ಬಪ್ಪೊ° – ಹೇಳಿಗೊಂಡು ಹೆರಟೆ!
ಸಾರಡಿತೋಡು ದಾಂಟಿ ತರವಾಡುಮನೆ ತೋಟದ ಕರೆಲಿ ಹೋಪಗ –
ಚೆಲಾ, ರಂಗಮಾವ ಇದ್ದವು!ಅಂಬಗ ಆಗ ಉದೆಕಾಲಕ್ಕೆ ಹೋದ್ದು? – ಕೇಳೆಕ್ಕು ಜಾನುಸಿದೆ ಒಂದರಿ!
ಹೋದ್ದು ಆರು? ಯೇವಗ? ಆಗಿರದೋ ಅಂಬಗ? ಹ್ಹೆ, ಕನಸಾಯಿಕ್ಕು ಒಪ್ಪಣ್ಣಂಗೆ; ಕೇಳಿ ಮರಿಯಾದಿ ಹೋಪದು ಬೇಡ ಹೇಳಿ ಮಾತಾಡಿದ್ದಿಲ್ಲೆ.
ಎದುರು ಕಂಡ ರಂಗಮಾವನತ್ರೆ ಏನು-ಒಳ್ಳೆದು ಮಾತಾಡಿಕ್ಕಿ ಮುಂದೆ ಹೋದೆ.
~
ಸೀತ ಹೋಗಿ ಎತ್ತಿದ್ದು ನಮ್ಮ ಬೈಲಕರೆ ಗಣೇಶಮಾವನಲ್ಲಿಗೆ.
ಒಪ್ಪಣ್ಣಾ – ಚಳಿ ಬಿಟ್ಟತ್ತೋ – ಹೇಳಿ ಬೈಲಕರೆ ಗಣೇಶಮಾವ° ನೆಗೆಮಾಡಿಂಡು ಕೇಳಿದವು.
’ಬೆಶಿಗೆ ಎಂತ ಕುಡಿತ್ತೆ – ಕಷಾಯ ಅಕ್ಕೋ’ ಕೇಳಿದವು. ಹಾಂಗೆ ಕಷಾಯ ಅಪ್ಪಷ್ಟೊತ್ತು ಅಲ್ಲೇ ಪಂಚಾಂಗಲ್ಲಿ ಕೂದಂಡು ಪಟ್ಟಾಂಗ ಹೊಡದೆಯೊ°.
ವೃಶ್ಚಿಕೇ ಶೀತಮಾರಂಭಃ ಧನುಶೀ ಧನುರಾಕೃತಿಃ | – ಹೇಳಿ ಒಂದು ಸಂಸ್ಕೃತಲ್ಲಿ ತಮಾಶೆ ಇದ್ದಡ ಹೇಳಿಕ್ಕಿ ನೆಗೆಮಾಡಿದವು.
ವೃಶ್ಚಿಕಲ್ಲಿ ಚಳಿ ಸುರು ಆವುತ್ತಡ, ಧನುರ್ಮಾಸಲ್ಲಿ ಮನುಷ್ಯರೆಲ್ಲ ಮನುಗುವಗ ಚುರುಂಟಿ ಧನುಸ್ಸಿನ (ಬಿಲ್ಲಿನ) ಹಾಂಗೆ ಆವುತ್ತವಡ – ಹೇಳಿದವು.
ಒಪ್ಪಣ್ಣಂಗೂ ನೆಗೆಬಂತು, ಜೋರು! 🙂
ಈಗ ಆ ಧನು ತಿಂಗಳಡ ಇದಾ!
ಬೆಶಿ ಬೆಶಿ ಕಶಾಯ ಕುಡುದಿಕ್ಕಿ ಅಲ್ಲಿಂದ ಹೆರಟೆ.
~
ಶಾರದ ಕೆಲೆಂಡರಿಲಿ ಹೊಸ ತಿಂಗಳು ಸುರು ಆತಿದಾ, ಷ್ಟೋರಿಲಿ ಈ ತಿಂಗಳಿನ ಸಾಮಾನುಗೊ ಬಯಿಂದೋ ನೋಡಿಕ್ಕಿ ಬಂದೆ.
ಮತ್ತೆ ಬೈಲಿಲೇ ಅತ್ಲಾಗಿತ್ಲಾಗಿ ತಾಂಟಿ ಆ ದಿನ ಮುಗುಶಿತ್ತು!
ಛಳಿಗೆ ಒರಕ್ಕು ಮೊದಲೇ ಜಾಸ್ತಿ – ಮನಗೆತ್ತಿ ಬೇಗ ಉಂಡಿಕ್ಕಿ ಒರಗಿದೆ.
~
ಮರದಿನ ಉದೆಕಾಲಕ್ಕೆ!
ನಿನ್ನೇಣ ಅದೇ ಹೊತ್ತಿಂಗೆ, ಸಾರಡಿತೋಡಿಲಿ ದಳುಂಬುಳುಂ – ರಂಗಮಾವ° – ಲೈಟಿನ ಬೆಣಚ್ಚು – ಜೆಂಬ್ರಕ್ಕೆ ಹೆರಟೋರ ಹಾಂಗೆ…!
ಈ ಸರ್ತಿ ನೋಡಿಕ್ಕಿ ಮನುಗಿರೂ ಒರಕ್ಕೇ ಬಾರ!
ಗೋಪಾಲಣ್ಣ ಹೇಳಿದ ಬೂತದ ಶುದ್ದಿಯೇ ತಲೆಲಿ ತಿರುಗುಲೆ ಸುರು ಆತು!
ಎಂತ ಕತೆ ಅಂಬಗ? ರಂಗಮಾವ° ನಿನ್ನೆಯೂ ಹೋಯಿದವು, ಆದರೆ ಮತ್ತೆ ಒಪಾಸು ಬಂದವೋ?
ಅಲ್ಲ, ಹೆರಟಮತ್ತೆ ಮದುವೆ ದಿನ ಲೆಕ್ಕ ತಪ್ಪಿತ್ತೋ..?
ಪುಚ್ಚೆ ಅಡ್ಡ ಸಿಕ್ಕಿತ್ತೋ? ಅಲ್ಲ ಎಂತಾರು ಮರದತ್ತೋ.. – ಉಮ್ಮಪ್ಪ!! ಮದಲೇ ಅವಕ್ಕೆ ಶಕುನಂಗೊ ಜಾಸ್ತಿ.
ಮತ್ತೆ ಸಿಕ್ಕಿಪ್ಪಗಳೂ ಎಂತ ಹೇಳಿದ್ದವಿಲ್ಲೆ, ಏನಾರು ಆಗಿದ್ದರೆ ಹೇಳ್ತಿತವಿದಾ!
ಇದರೆಲ್ಲ ಗ್ರೇಶಿಗೊಂಡಿದ್ದ ಹಾಂಗೆಯೇ..
ನಿಧಾನಕ್ಕೆ ಆದರೂ ಒರಕ್ಕು ತೂಗಿ ತೂಗಿ ಬಂತು, ಚುರುಂಟಿ ಮನುಗಿ ಅಪ್ಪಗ!
~
ಹದಾಕೆ ಎದ್ದು, ತಿಂಡಿಕಾಪಿ ಎಲ್ಲ ಆಗಿ ಒಂದರಿ ಬೈಲಿಲೇ ನೆಡಕ್ಕೊಂಡು ಹೋದೆ.
ಇಂದುದೇ ರಂಗಮಾವ° ಇದ್ದವೋ – ಹೇಳಿ ನೋಡಿದ ಹಾಂಗುದೇ ಆತು – ಹೇಳಿಗೊಂಡು ತರವಾಡುಮನೆ ತೋಟದ ಕರೇಲೇ ಹೋದೆ.
ಚೆಲ – ಎಂತದೂ ಆಯಿದಿಲ್ಲೆ ಹೇಳುವ ಹಾಂಗೆ ತೋರ್ತು(ಸಣ್ಣ ಒಸ್ತ್ರ) ಸುತ್ತಿಗೊಂಡು ಕೊತ್ತಳಿಂಗೆ ಕಡ್ಕೊಂಡು ಇತ್ತಿದ್ದವು ರಂಗಮಾವ° – ಯೇವತ್ತಿನಂತೆ!
ಒಪ್ಪಣ್ಣಂಗೆ ಕುತೂಹಲ ತಡದತ್ತಿಲ್ಲೆ.
ನಿನ್ನೆ ಆದರೆ ಕನಸಾಯಿಕ್ಕು – ಇಂದುದೇ ಹಾಂಗೆ ಆದ್ಸು ಎಂತರ ಅಂಬಗ!
ಮೆಲ್ಲಂಗೆ ಕೇಳಿಯೇ ಬಿಟ್ಟೆ – ದೊಡಾ ಗುಟ್ಟು ಹಿಡುದೋನ ಹಾಂಗೆ –
ರಂಗಮಾವಾ° – ಇಂದು ಉದೆಕಾಲಕ್ಕೆ ಶಾಲು ಹಾಕಿಂಡು ಎಲ್ಲಿಗೋ ಹೋದ ಹಾಂಗಾತು, ನಿಂಗಳೇಯೋ?..
ಅಪ್ಪೋ°, ಬೈಲಕರೆ ಉದನೇಶ್ವರ ದೇವಸ್ಥಾನಲ್ಲಿ ಧನುಪೂಜಗೋ°! – ಹೇಳಿಕ್ಕಿ ಕೊತ್ತಳಿಂಗೆ ಕಡಿವದರ ಮುಂದುವರುಸಿದವು.
ಓಹೋ, ಸರಿ – ಹೇಳಿಕ್ಕಿ, ಬೇರೆಂತೂ ಮಾತಾಡದ್ದೆ ಅಲ್ಲಿಂದ ಮುಂದೆಬಂದೆ. 😉
~
ಧನುಪೂಜೆಯೋ?
ಅಪ್ಪು, ಅಲ್ಲಲ್ಲಿ ಬೋರ್ಡು ಕಂಡಿದು ನಾವು! ಮದಲು ಅಷ್ಟಾಗಿ ಇಲ್ಲದ್ದರೂ – ಈಗೀಗ ಜೋರು!
ಅಂಬಗ ಅದೆಂತರ?
ದೀಪಪೂಜೆ, ದ್ವಾರಪಾಲ ಪೂಜೆ, ಪೀಠಪೂಜೆ, ನವಶೆಗ್ತಿ ಪೂಜೆ – ಎಲ್ಲ ಬಟ್ಟಮಾವ ಹೇಳುದರ ಕೇಳಿ ಅರಡಿಗು..
ದುರ್ಗಾಪೂಜೆ, ಗೆಣವತಿಪೂಜೆ, ಹೂಗಿನ ಪೂಜೆ, ರಂಗಪೂಜೆ – ಎಲ್ಲ ದೇವಸ್ಥಾನಂಗಳಲ್ಲಿ ಕೇಳಿ ಅರಡಿಗು..
ಧನುಪೂಜೆ ಹೇಂಗಿರ್ತದು? – ನೋಡೆಕ್ಕಟ್ಟೆ, ಹೇಳಿ ತಲೆಲಿ ಯೋಚನೆ ಮಾಡಿಗೊಂಡು ನೆಡಕ್ಕೊಂಡೇ ಹೋದೆ ಬೈಲಕರೆ ಹೊಡೆಂಗೆ..
.. ರಜ ಹೊತ್ತಿಲಿ ಜೋಯಿಶಪ್ಪಚ್ಚಿ ಮನೆಗೆ ಎತ್ತಿತ್ತು.
~

ಬ್ರಾಹ್ಮಿಯ ಕಸ್ತಲೆಯ ಕಪ್ಪಿಂಗೆ ಕಪ್ಪಿನ ಶಿವನ ದರ್ಶನ!!

ಗಣೇಶಮಾವ ಎಂತದೇ ಶ್ಲೋಕ ಹೇಳಲಿ, ಬೈಲಕರೆ ಜೋಯಿಶಪ್ಪಚ್ಚಿಗೆ ಮಾಂತ್ರ ಧನುತಿಂಗಳುದೇ ಛಳಿ ಇಲ್ಲೆ.
ಯೇವತ್ತಿನ ಹೊತ್ತಿಂಗೇ ಎದ್ದು – ಅಶುದ್ಧಲ್ಲಿ ಮಿಂದು – ಶುದ್ಧಲ್ಲಿ ಭಸ್ಮ ಎಳೆತ್ತದರೆ ಕಂಡ್ರೆ ಯೇವ ಛಳಿಯೂ ಒಂದರಿ ಹೆದರಿಕ್ಕುಗು..
ಚಳಿಗಾಲದ ತಣ್ಣೀರೇ ನಾಟ ಅವಕ್ಕೆ..!
ಒಪ್ಪಣ್ಣ ಅಲ್ಲಿಗೆ ಎತ್ತುದೂ, ಜೋಯಿಶಪ್ಪಚ್ಚಿ “ಮೂರ್ತಿತ್ವೇ ಪರಿಕಲ್ಪಿತಶ್ಶಶಭೃತೋ…” ನಿತ್ಯರಾಶಿ ನೋಡಿಕ್ಕಿ ಏಳುದೂ ಸರೀ ಆತು.
ಮಾಮೂಲಿನ ಯೆಂತವೊಪ್ಪಣ್ಣ – ಹೇಳಿದವು ಒಂದರಿ ಅಲ್ಲಿಂದಲೇ.
~

ಕವುಡೆ ಚೀಲ ಎಲ್ಲ ಕರೆಲಿ ಮಡಗಿ, ಆಗ್ನೇಯದ ಅಡಿಗೆಕೋಣೆ ಹೊಡೆಂಗೆ ತಿರುಗಿ ’ಛಾಯ ಕೊಂಡ, ಒಪ್ಪಣ್ಣಂದೇ ಇದ್ದ°’ ಹೇಳಿಕ್ಕಿ ಮಾತು ಸುರು ಮಾಡಿದವು. ಚಿಕ್ಕಮ್ಮನ ಹತ್ತರೆ ಹಾಂಗೇ ಮಾತಾಡುಗು ಅವು.
ರಜ ಹೊತ್ತು ಚಳಿಯ ಶುದ್ದಿ ಎಲ್ಲ ಮಾತಾಡಿಕ್ಕಿ ಮೆಲ್ಲಂಗೆ..
ಧನುಪೂಜೆಯ ಗವುಜಿ ಜೋರಲ್ಲದೋ ಅಪ್ಪಚ್ಚಿ ಈಗ, ಅದರದ್ದೆಂತರ ಸಂಗತಿ? – ಹೇಳಿ ಕೇಳಿದೆ, ಎಂತ ಕತೆ ಹೇಳಿ ತಿಳುಕ್ಕೊಂಬೊ ಹೇಳಿಗೊಂಡು.
~
ಜೋಯಿಶಪ್ಪಚ್ಚಿ ಎಲ್ಲವನ್ನೂ ಚೆಂದಲ್ಲಿ ವಿವರುಸಿದವು.

ಪ್ರಾತಃಕಾಲ ಹೇಳಿತ್ತುಕಂಡ್ರೆ ಶಿವ° ಪ್ರಸನ್ನ ಆಗಿಪ್ಪ ಸಮೆಯ ಅಡ.
ಹೇಮಂತ ಋತುವಿನ ಈ ಸಮೆಯಲ್ಲಿ ಶಿವ° ಅತ್ಯಂತ ಪ್ರಸನ್ನರಾಗಿಪ್ಪದಡ.
ಹಾಂಗೆ, ಧನುರ್ಮಾಸಲ್ಲಿ ಪ್ರಾತಃಕಾಲಕ್ಕೆ ಮಂಗಳಾರತಿ ಅಪ್ಪ ಹಾಂಗೆ, ಬ್ರಾಹ್ಮೀಮೂರ್ತಕ್ಕೆ ಪೂಜೆ ಸುರುಮಾಡಿ, ಸೂರ್ಯೋದಯಕ್ಕೆ ಮುಗುಶುತ್ತ ಪೂಜೆಯೇ ಈ ಧನುಪೂಜೆ ಹೇಳಿದವು.
ಬ್ರಾಹ್ಮೀ ಮೂರ್ತಲ್ಲೇ ಪೂಜೆ ಸುರುಮಾಡಿ, ಆವಾಹನೆ, ಅಭಿಶೇಕ, ಅರ್ಚನೆ, ನೈವೇದ್ಯ, ಮಂಗಳಾರತಿ – ಕೊಟ್ಟು, ಪ್ರಸನ್ನನಾದ ಶಿವನ ಸುಪ್ರಸನ್ನ ಮಾಡ್ತ ಕಾರ್ಯ ಈ ಧನುಪೂಜೆಯ ಉದ್ದೇಶ ಅಡ.
ನೈವೇದ್ಯಕ್ಕೆ ವಿಶೇಷವಾಗಿ ಹುಗ್ಗಿ – ಹೇಳ್ತ ಪಾಕ ಮಾಡುಗಡ. ಹಸರ ಬೇಳೆ, ಅಕ್ಕಿ, ಬೆಲ್ಲ – ಎಲ್ಲ ಹಾಕಿ ಬೇಶಿ – ಒಂದು ನಮೂನೆ ಪಾಯಿಸದ ಹಾಂಗೆ.
ಉಡುಪಿಲಿಯೂ ಇದರ ಮಾಡ್ತವಡ ಧನುಪೂಜೆಗೆ.
ಮಾಷ್ಟ್ರುಮಾವನೊಟ್ಟಿಂಗೆ ಅಂದೊಂದರಿ ಉಡುಪಿಗೆ ಹೋಗಿಪ್ಪಗ ಈ ಧನುಪೂಜೆ ಪ್ರಸಾದದ ರುಚಿನೋಡಿದ್ದವಡ.ಧನುಪೂಜೆ ಮುಗುದ ಕೂಡ್ಳೇ ನೈರ್ಮಾಲ್ಯ ತೆಗದು ಮತ್ತೆ ಪ್ರಾತಃಪೂಜೆ ಸುರು ಅಡ! – ಯೇವತ್ತಿನಂತೆ.
ಒರಿಶದ ಉಳುದ ಸಮೆಯಂದ ಒಂದು ಪೂಜೆ ಜಾಸ್ತಿ ಆ ಸಮೆಯಲ್ಲಿ.ಪುತ್ತೂರು ಮಾಲಿಂಗೇಶ್ವರಂಗೆ ಅನಾದಿಕಾಲಂದಲೇ ಧನುಪೂಜೆ ವಿಶೇಷ ಅಡ್ಡ.
– ಊರೂರಿಂದ ಮುನ್ನಾದಿನವೇ ಬಂದು ಕಾದುನಿಂಗು – ಹೇಳಿದವು ಮಾತಾಡುವಗ.

ಶಿವನ ದೇವಸ್ಥಾನಲ್ಲಿ ಸರಿ, ಹಾಂಗಾರೆ ಬೇರೆ ದೇವಸ್ಥಾನಂಗಳಲ್ಲಿ ಧನುಪೂಜೆ ಎಂತರ? ಕೇಳಿದೆ.
ಉಮ್ಮ, ಅದೆಲ್ಲ ನವಗರಡಿಯ.
ಮದಲಿಂಗೆ ಅದೆಲ್ಲ ಹದಾಕೆ ಇತ್ತದು, ಈಗ ನೋಡಿರೆ ಎಲ್ಲ ದಿಕ್ಕುದೇ, ಎಲ್ಲ ದೇವಸ್ಥಾನಲ್ಲಿದೇ ಇದ್ದು – ಹೇಳಿದವು ರಪ್ಪನೆ.
ಕ್ರಮಲ್ಲಿ ನೋಡಿರೆ ಶಿವಂಗೆ ಮಾಂತ್ರ ಧನುಪೂಜೆ ಮಾಡ್ತ ಮರಿಯಾದಿ ಇದ್ದದು.
ಕಾಲಕ್ರಮೇಣ ಎಲ್ಲಾ ದೇವರಿಂಗೂ ಸುರು ಆಯಿದು.
ದೇವರ ಪೂಜೆ ಅಲ್ಲದೋ – ಬೈವಲಿಲ್ಲೆ- ಹೇಳಿದವು ಮತ್ತೆ.
ಚಾಯ ಬಂತು, ಕುಡುದೆಯೊ°. ಜೋಯಿಶಪ್ಪಚ್ಚಿಗೆ ಉದಿಯಪ್ಪಗ ಒಂದು ಚಾಯ ಆಗದ್ರೆ ತಲೆಸೆಳಿತ್ತಡ ಮತ್ತೆ!
ಚಿಕ್ಕಮ್ಮಂಗೆ ಒಪ್ಪಣ್ಣ ಅಪುರೂಪ ಆಗಿ ಗುರ್ತವೇ ಸಿಕ್ಕಿದ್ದಿಲ್ಲೆಡ – ಕೋಂಗಿಮಾಡಿದವೊಂದರಿ!
ಚಾಯದ ಗ್ಳಾಸು ಕಾಲಿ ಆದಕೂಡ್ಳೇ ಒಳ್ಳೆ ಗಳಿಗೆ ನೋಡಿ ಮೆಲ್ಲಂಗೆ ಹೆರಟೆ ಅಲ್ಲಿಂದ. 😉
~

ಉದಿಯಾತು, ಯೇವತ್ತಿನಂತೆ ನಿತ್ಯದ ಕಾರ್ಯಂಗಳೂ…

ಅಂತೂ, ಅಲ್ಲಿಂದ ಬಪ್ಪಗ ಒಂದು ಶುದ್ದಿ ಸಿಕ್ಕಿತ್ತು ಒಪ್ಪಣ್ಣಂಗೆ.
ಎಷ್ಟು ವಿಶೇಷ ಅಲ್ದೋ – ಧನುತಿಂಗಳಿನ ಕಾಲಲ್ಲಿ!
ಹೊತ್ತುಮೂಡೇಕಾರೆ ಮದಲೇ ಒಂದು ಪೂಜೆ.
ಅದಕ್ಕೆ ಊರಿನ ಆಸ್ತಿಕರೆಲ್ಲ ಹೋಗಿ ಸೇರಿಗೊಂಬದು – ಅಷ್ಟಪ್ಪಗ ಅವರ ದೈವಭಕ್ತಿಯ ಎದುರು ಯೇವ ಛಳಿಯೂ ಲೆಕ್ಕಕ್ಕಿಲ್ಲೆ!
ಈಗೀಗ ಹೇಂಗೂ ಶಬರಿಮಲೆಯ ಅಯ್ಯಪ್ಪಂಗೊ ಇರ್ತವಲ್ಲದೋ – ಭಕ್ತಿಪಂಥದೋರು!
ಸೂರ್ಯ° ಏಳುವ ಮೊದಲೇ ದೇವರಿಂಗೆ ಒಂದು ಪೂಜೆ ಮಂಗಳಾರತಿ.

ಧನುಪೂಜೆ ಗವುಜಿ ಮುಗುದ ಮತ್ತೆ ಯೇವತ್ತಿನಂತೇ ನಿತ್ಯಜೀವನ!
ಪೂಜೆ ತೆಕ್ಕೊಂಡ ದೇವರಿಂಗೂ, ಪೂಜೆ ಮಾಡಿದ ಬಟ್ರಿಂಗೂ, ಪೂಜಗೆ ಹೋದ ಆಸ್ತಿಕರಿಂಗೂ ಈ ಮಾತು ಅನ್ವಯಿಸುತ್ತು.
ಧನುಪೂಜೆ ಕಳಿಶಿ ಮನಗೆ ಬಂದ ರಂಗಮಾವಂಗೂ! 🙂
ಅಪ್ಪು, ಅವರ ನಿತ್ಯ ದಿನಚರಿಯ ಯೇವತ್ತಿನ ಹಾಂಗೇ ಮಾಡಿಗೊಂಡಿದವು, ಅದರೆಡಕ್ಕಿಲಿ ಒಂದು ಈ ಧನುಪೂಜೆ – ವಿಶೇಷದ್ದು.

~
ಎಷ್ಟು ಚೆಂದದ ಕಲ್ಪನೆ ಅಲ್ಲದೋ?
ನಮ್ಮ ಜೀವನಪದ್ಧತಿಗೆ ತಕ್ಕುದಾದ ಪೂಜಾಪದ್ಧತಿ.
ಸುಂದರ ಋತುವಿನ ಪ್ರಾತಃಕಾಲದ ಸುಂದರ ಸಮಯಲ್ಲಿ ದೇವರ ಪೂಜೆ ಮಾಡಿ,
ಅದೇ ಗುಂಗಿಲಿ ಇಡೀ ದಿನ ದೇವರ ಸ್ಮರಣೆಲೇ,
ಉದಿಯಾಂದ ನೆಡೆತ್ತ ಜೀವನಕ್ಕೆ ಹೊಂದಿಗೊಂಡು,
ಧಾರ್ಮಿಕವಾಗಿ ಜೀವನ ನೆಡೆಶುತ್ತದು..
~
ಶಿವನ ದೇವಸ್ಥಾನಂಗಳಲ್ಲಿ ಅಂತೂ ಈ ಧನುಪೂಜೆ ಕ್ರಮಾಗತವಾಗಿ ನೆಡೆತ್ತು.
ಒಳುದ ದೇವಸ್ಥಾನಂಗಳಲ್ಲೂ ಈಗೀಗ ಸುರು ಆಯಿದಡ..

ಆಗಲಿ, ಆ ಲೆಕ್ಕಲ್ಲಿ ಆದರೂ ನಮ್ಮ ಜಡ ರಜ ಬಿಡ್ತನ್ನೇ.
ಉದೇಕಾಲಕ್ಕೇ ಎದ್ದು ಮಿಂದು, ಭಕ್ತೀಲಿ ದೇವಸ್ಥಾನಕ್ಕೆ ಹೋಗಿ ಪೂಜೆ ನೋಡ್ತನ್ನೇ.
ಒಂದೊಂದರಿ ಹೊಸತ್ತೊಸತ್ತು ಕ್ರಮಂಗೊ ಸುರು ಆದ್ದದುದೇ ನಮ್ಮ ಶ್ರದ್ಧೆ ಹೆಚ್ಚಪ್ಪಲೆ ಕಾರಣ ಆವುತ್ತಿದಾ.
ಅದು ಕೊಶಿಯ ಸಂಗತಿಯೇ.
~
ಎಡಿಗಾರೆ ನಾಳಂಗೆ ರಂಗಮಾವ ಹೋಪ ಹೊತ್ತಿಂಗೆ ಹೆರಟು ನಿಲ್ಲೆಕ್ಕು ಹೇಳಿ ಇದ್ದು..

ಒಂದೇ ಲೈಟು ಸಾಕನ್ನೇ ಇಬ್ರಿಂಗೆ.
– ಹಾಂಗೆ ಗ್ರೇಶುದೇ ಎರಡುಮೂರು ದಿನ ಆತು, ಚಳಿ ಏಳುಲೂ ಬಿಡ್ತಿಲ್ಲೆ! 😉
ನೋಡೊ°, ಇನ್ನೊಂದು ವಾರ ಸಮೆಯ ಇದ್ದು – ಎಡಿಗಾದ ದಿನ ಹೋಗಿ ಸೇರಿಗೊಳೆಕ್ಕು, ದೇವರೆತ್ತುಸಿರೆ.
~
ಬನ್ನಿ,
ಸಾಧ್ಯ ಆದರೆ, ಸಾಧ್ಯ ಆದಲ್ಲಿ ಒಂದರಿ ಧನುಪೂಜೆ ನೋಡಿಕ್ಕುವೊ°…
ಶಿವನ, ಅವನ ಧನುಸ್ಸಿನ, ಹೇಮಂತ ಋತುವಿನ, ಧನುರ್ಮಾಸದ ಒಲುಮೆ ನವಗಿರಳಿ…
ಚಳಿ ಬಿಟ್ಟು ಬೇಗ ಹೋದರೆ ಶಿವನ ಪೂಜೆ ಸಿಕ್ಕುಗು; ಶಿವನ ಒಲುಮೆ ಸಿಕ್ಕಿರೆ ಜೀವನದ ಛಳಿ ಬಿಡುಗು!
ಅಲ್ಲದೋ?

ಒಂದೊಪ್ಪ: ಧನು ತಿಂಗಳಿನ ಶಿವಪೂಜೆ ನೋಡಿಕ್ಕಿ ಶಿವಧನುಸ್ಸಿನ ಹಾಂಗೆ ಗಟ್ಟಿ ಅಪ್ಪೊ°!

ಸೂ: ಪಟ ಇಂಟರುನೆಟ್ಟಿಂದ ಸಿಕ್ಕಿದ್ದು.

46 thoughts on “ಧನುರ್ಮಾಸದ ಚಳಿಲಿಯೂ ಧನುಪೂಜೆಯ ಬೆಶಿ..!

  1. ಸುಬ್ಬಯಣ್ಣೋ ಜ್ಯೋತಿಷ್ಯಯಲ್ಲಿ ಯಾವ ಗ್ರಹಕ್ಕೆ ಯಾವ ದೇವರು ಆರದ್ಯ ದೇವರು ಹೇಳಿ ಒಳ್ಳೆ ವಿವರಣೆ ಕೊಟ್ಟಿ ಹಾ೦ಗೆ ಇನ್ನು ಈ ಗ್ರಹ ದೋಷ೦ಗೋಕ್ಕೆ ಮಾಡೇಕಾದ ಪರಿಹಾರ೦ಗಳ ಬಗ್ಯೆ ಕೂಡಾ ಬಯಲಿನೋರಿ೦ಗೆ ಉಪಕಾರ ಆವುತ್ತ ಹಾ೦ಗೆ ಒ೦ದು ಲೇಖನ ಬರದರಕ್ಕೋ ಹೇಳಿ.ಹಾ೦ಗೆ ಸಣ್ಣಕೆ ಒ೦ದು ಜ್ಯೋತಿಷ್ಯ ಪಾಠ ಸುರು ಮಾಡೀರೆ೦ತ?(ಪ೦ಚಾ೦ಗ ಓದುತ್ತಷ್ಟದರು)ಈಗಣವಕ್ಕೆ ಗೊ೦ತಿರ್ತಿಲ್ಲೆದ.ಒಪ್ಪ೦ಗಳೊಟ್ಟಿ೦ಗೆ

    1. @mohananna,
      ಜ್ಯೊತಿಷ್ಯದ ಬಗ್ಗೆ ಬರೆಕಾರೆ ಸರಿಯಾಗಿ ಸಾಂಪ್ರದಾಯಿಕವಾಗಿ ರಜಾರೂ ಕಲ್ತಿರೆಕ್ಕಷ್ಟೆ. ಆನು ಹಾಂಗೆ ಕಲ್ತಿದಿಲ್ಲೆ. ಆಸಕ್ತಿಂದ ಮತ್ತೆ ಎನ್ನ “ವಾಸ್ತು, ಶಕ್ತಿವಿಜ್ಞಾನ”ದ ಬಗ್ಗೆ ಅಧ್ಯಯನಕ್ಕೆ ಪೂರಕವಾಗಿ ರಜ್ಜ ರಜ್ಜ ಅಲ್ಲಲ್ಲಿ ಕಲ್ತದಷ್ಟೆ. ಅಲ್ಲಲ್ಲಿ ಸಂದರ್ಭ ಬಪ್ಪಗ ಗೊಂತಿಪ್ದದರ ಎಲ್ಲೋರಹಾಂಗೆ ಬರೆತ್ತೆ. ಜ್ಯೋತಿಷ್ಯ(ಪಂಚಾಂಗದ ಬಗ್ಗೆ) ರಜ ಸರಳ ಸಂಗ್ರಹ ಇದ್ದು; ಪ್ರಯತ್ನ ಮಾಡುತ್ತೆ. ತಪ್ಪು ಹೇಳ್ಳಾಗನ್ನೆ.

  2. dhanu poojeya bagge barada shuddi laikaidu.
    oppakkanu doddannanu dhanu poojage hoidavada oppanna.
    bandikki shuddi heluva goujiye gouji.
    chali iddu heli udaseena madiddilleda.
    ondoppa tumba laikaidu oppanna.

  3. ಒಪ್ಪಣ್ಣ, ಧನುರ್ಮಾಸದ ಚಳಿಲಿ ನಡವ ಧನು ಪೂಜೆಯ ಬಗ್ಗೆ ಶುದ್ದಿ ಬರದ್ದದು ಲಾಯಕ ಆಯಿದು. ಚಳಿಗಾಲದ ವಿವರಣೆ ತುಂಬಾ ಲಾಯ್ಕಲ್ಲಿ ಬಯಿಂದು.. 😉
    ಆನು ಕಳುದ ಎಂಟು ವರ್ಷಂದ ಧನು ಪೂಜೆ ನೋಡ್ಲೆ ಈ ವರ್ಷ ಹೋಯೆಕ್ಕು ಹೇಳಿ ಪ್ರತಿ ವರ್ಷ ಗ್ರೆಶುದು.. ಮತ್ತೆ ನಿನ್ನ ಹಾಂಗೆ, ದೇವರೆತ್ತುಸಿದರೆ ಹೋಪದು ಬಪ್ಪ ವರ್ಷ ಹೇಳಿ ಕೂದು, ಕಳುದತ್ತು ವರ್ಷಂಗ.. ಇಂದು ದೇವರು ಎತ್ತುಸಿದವದಾ.. ಉದೆಕಾಲಕ್ಕೆ ಪುತ್ತೂರು ಮಹಾಲಿಂಗೇಶ್ವರನ ಧನು ಪೂಜೆಯ ಗೌಜಿಯ ನೋಡ್ಲೆ.. ನಿಜವಾಗಿಯೂ ಅದ್ಭುತ ಅನುಭವ!!!!
    ನಿತ್ಯ ಪೂಜೆಗೂ ಸೇರದ್ದ ಜೆನಂಗ ಧನು ಪೂಜೆಗೆ ಸೇರ್ತವು.. ಅಂಗಣ ಭರ್ತಿ ಜೆನಂಗ.. ಎಲ್ಲೋರ ಮನಸ್ಸು ಆ ಸುಸಮಯಲ್ಲಿ ಏಕಾಗ್ರವಾಗಿ ದೇವರ ಧ್ಯಾನಲ್ಲಿ ಇಪ್ಪದು ನೋಡ್ಲೆ, ಅನುಭವಿಸುಲೇ ಕೊಶಿ. ನಮ್ಮೋರ ರುದ್ರ ಪಠಣ ಚೆಂದಲ್ಲಿ ನಡೆತ್ತು ಅಲ್ಲಿ ಧನು ಮಾಸಲ್ಲಿ.. ಎಷ್ಟು ಚೆಂದ ಅದರ ಕೇಳುಲುದೇ!!!
    ದೇವರ ಬಲಿ ಆಗಿ, ಒಳ ದೇವರು ಹೋಗಿ ಅಪ್ಪಗ ಪ್ರಸಾದ ತೆಕ್ಕೊಂಡು ನೋಡಿದರೆ ಅಂಗಣ ಕಾಲಿ… ಜೆನಂಗೋ ಆರೂ ಇತ್ತಿದ್ದವಿಲ್ಲೆಯೋ ಹೇಳ್ತಷ್ಟರ ಮಟ್ಟಿನ್ಗೆ!!! ಅಷ್ಟು ಜೆನಂಗಳ ಕಂಡದು ಕನಸಾ ಅನುಸೆಕ್ಕು ..!!!!! ಆ ಉದೆಕಾಲಕ್ಕೆ ಜೆನಂಗ ಎಲ್ಲಿಂದ ಬಂದವೋ? ಎಲ್ಲಿ ಹೋದವೋ ಹೇಳ್ತ ಹಾಂಗೆ ಆವುತ್ತು… !!!!

    ನಮ್ಮ ಹಿರಿಯೋರು ಧನು ಪೂಜೆಯ ಕ್ರಮ ಎಂತಕ್ಕೆ ಮಡಿಗಿದವು ಅರಡಿಯ.. ಬಹುಶ ಧನು ಕಳುದು ಬಪ್ಪ ಮಕರ ಮಾಸದ ಮತ್ತೆ, ಉತ್ತರಾಯಣದ ಆಗಮನದ ಪೂರ್ವ ತಯಾರಿ ಆದಿಕ್ಕೋ? ನಮ್ಮ ಮನಸ್ಸಿನ ಧನು ಮಾಸದ ಬ್ರಾಹ್ಮೀ ಮುಹೂರ್ತಲ್ಲಿ ಏಕಾಗ್ರ ಮಾಡಿ, ಲೋಕ ರಕ್ಷಕನಾದ ಶಿವನ ದಿವ್ಯ ಪ್ರಸನ್ನತೆಯ ನಮ್ಮೊಳ ಸ್ವಾಗತ ಮಾಡಿ, ಉತ್ತರಾಯಣಲ್ಲಿ ಬಪ್ಪ ಎಲ್ಲಾ ದೇವರ ಕಾರ್ಯಂಗೊಕ್ಕೆ ನಾವು ಅಣಿ ಅಪ್ಪಲೆ ಇಪ್ಪ ಒಂದು ಅಟ್ಟಣೆಯೋ? ಮಾಷ್ಟ್ರುಮಾವನೇ ಹೇಳೆಕ್ಕಷ್ಟೇ!!! 🙂

    ಒಪ್ಪಣ್ಣ, ನೀನು ಹೇಳಿದ ಹಾಂಗೆ ಧನು ಪೂಜೆ ನಮ್ಮ ಜೀವನ ಪದ್ಧತಿಗೆ ಹೊಂದುತ್ತ ಒಂದು ಪೂಜಾ ಪದ್ಧತಿ. ಪ್ರಾತಃ ಕಾಲಲ್ಲಿ ದೇವರ ನೋಡಿ ಬಂದ ಗುಂಗು ಇಡೀ ದಿನ ಇರ್ತು ಹೇಳುದರಲ್ಲಿ ಸಂಶಯ ಇಲ್ಲೆ.. ಒಂದರಿ ಹೋದರೆ ದಿನಾ ಹೋಪ° ಹೇಳ್ತ ಭಾವನೆ.. ಬಹುಶ ಈ ಗುಂಗು ಮತ್ತಾಣ ವರ್ಷದ ಧನು ಪೂಜೆಯ ಕಾಯ್ತಾ ಕಾಣ್ತು..

    ಒಪ್ಪಣ್ಣ, [ಚಳಿ ಬಿಟ್ಟು ಬೇಗ ಹೋದರೆ ಶಿವನ ಪೂಜೆ ಸಿಕ್ಕುಗು; ಶಿವನ ಒಲುಮೆ ಸಿಕ್ಕಿರೆ ಜೀವನದ ಛಳಿ ಬಿಡುಗು!]
    ಸತ್ಯವಾದ ಮಾತು.. ಜೀವನದ ಚಳಿ ಬಿಡೆಕ್ಕಾದರೆ ಶಿವನ ಅನುಗ್ರಹದ ಬೆಚ್ಚಂಗೆ ಬೇಕು.. ಅದು ಸಿಕ್ಕೆಕ್ಕಾದರೆ ಪ್ರಕೃತಿಯ ಚಳಿ ಮರದು, ಶಿವನ ಕಾಣೆಕ್ಕು… !!!!

    ಒಂದೊಪ್ಪ ಲಾಯಕಾಯಿದು.. ಎಲ್ಲೋರೂ ಶಿವ ಧನುಸ್ಸಿನ ಹಾಂಗೆ ಗಟ್ಟಿ ಆಗಲಿ ಅಲ್ಲದೋ? ಜೀವನದ ಕಷ್ಟಂಗಳ ಎದುರುಸುವ ಶೆಗುತಿ ಸಿಕ್ಕಲಿ ಅಲ್ಲದೋ?

    1. ಶ್ರೀ ಅಕ್ಕಾ..
      ಶುದ್ದಿಯ ತುಂಬ ಆಳವಾಗಿ ಓದಿದ ವಿಚಾರ ನಿಂಗಳ ಒಪ್ಪ ನೋಡುವಗ ಗೊಂತಾವುತ್ತು.
      ಕೊಶೀ ಆತು… 🙂

      { ಇಂದು ದೇವರು ಎತ್ತುಸಿದವದಾ.. ಉದೆಕಾಲಕ್ಕೆ ಪುತ್ತೂರು ಮಹಾಲಿಂಗೇಶ್ವರನ ಧನು ಪೂಜೆಯ ಗೌಜಿಯ ನೋಡ್ಲೆ.. }
      ಗವುಜಿ ಹೇಂಗಿತ್ತು? ಬೈಲಿಂಗೆ ಹೇಳ್ತಿರಾ? 🙂

  4. Sharmappacchi, namma belada kumaramangala devasthanalli nadettha iddu. ee dhanupooje.. 14 kke udyappaga last ada andu makara sankramana ida.. 13kke irulinge namma hosanagara melada devi mahathme aatavu iddada…lekhana laykaydu oppanna

  5. ಧನು ಪೂಜೆಯ ವಿಶೇಷತೆ ಬಗ್ಗೆ ಮಾಹಿತಿ ಕೊಟ್ಟ ಒಳ್ಳೆ ಲೇಖನ. ಒಪ್ಪಣ್ಣಂಗೆ ಛಳಿ ಇಲ್ಲದ್ದ ಮಂಗಳೂರಿಂದ ಧನ್ಯವಾದಂಗೊ
    ಈ ಪೂಜೆ, ಎಂಗಳ ಪರಿಸರಲ್ಲಿ ಅಶ್ಟೊಂದು ಪ್ರಚಲಿತಲ್ಲಿ ಇಲ್ಲೆ. ಒಂದರಿ ನೋಡೆಕ್ಕು ಹೇಳಿ ನಿಶ್ಚಯ ಮಾಡಿ, ನಿನ್ನೆ ಒಂದು ಶಿವ ದೇವಸ್ಥಾನಲ್ಲಿ ಕೇಳಿಪ್ಪಗ, ಅದು ನಮ್ಮಲ್ಲಿ ಇಲ್ಲ ಹೇಳ್ತ ಉತ್ತರ ಸಿಕ್ಕಿತ್ತು.
    ಇದೇ ರೀತಿ ಪ್ರದೋಷದಂದು ಇರುಳು ರುದ್ರ ಹೇಳಿ ಶಿವಂಗೆ ಅಭಿಷೇಕ ಮಾಡ್ತವು. ಇರುಳಾಣ ರುದ್ರಾಭಿಷೇಕ ಪ್ರದೋಷ ದಿನ ಮಾತ್ರ. ಇದರ ಬಗ್ಗೆ ಮಾಹಿತಿ ಇದ್ದರೆ ತಿಳುಶಿಕ್ಕು

    1. ಪ್ರದೋಷವೋ?
      ನಮ್ಮ ಶಂಬಜ್ಜ ಮಾಡ್ತದರ ಕಂಡು ಗೊಂತಿದ್ದು.
      ಬೈಲಿಲಿ ನಿಧಾನಕ್ಕೆ ಆ ಶುದ್ದಿ ಹೇಳುವೊ.

      ಮೊದಲೇ ಆರಾರು ಹೇಳ್ತರೆ ಸ್ವಾಗತವೇ.. 🙂

    2. ಪ್ರದೋಷ ಕಾಲ ಹೇಳಿದರೆ ಸೂರ್ಯಾಸ್ತ ಆದ ಕೂಡಲೇ ಹೇಳಿ ಕಾಣ್ತು ಅಪ್ಪಚ್ಚಿ, ರಾತ್ರೆ ಅಲ್ಲ. ಜೊಇಶರ ಮಗನ ಹತ್ರೆ ಕೇಳ್ಳಕ್ಕು.
      ಪ್ರದೋಷಂಗಳಲ್ಲಿ-
      ೧) ಸೋಮಪ್ರದೋಷ =ಸೋಮವಾರ ಪ್ರದೋಷ ಬಂದರೆ
      ೨) ಶನಿಪ್ರದೋಷ = ಶನಿವಾರ ಪ್ರದೋಷ ಬಂದರೆ
      ಎರಡು ವಿಶೇಷ.
      ಶಿವ ಪೂಜೆಗೆ ವಿಶೇಷ.
      ಪ್ರದೋಷ ಸೋಮವಾರ ದುರ್ಗೆಯ ಮತ್ತೆ ಶಿವನ ಪ್ರೀತ್ಯರ್ಥ ಶಿವಪೂಜೆ.
      ಪ್ರದೋಷ ಶನಿವಾರಲ್ಲಿ ಶನಿದೋಷ ನಿವಾರಣಾರ್ಥ ಶಿವಪೂಜೆ.
      ಅಮಾಸೆ ಎದುರ್ಪಾಗಿಪ್ಪ (ಕೃಷ್ಣ ಪಕ್ಷ); ಹುಣ್ಣಿಮೆ ಎದುರ್ಪಾಗಿಪ್ಪ (ಶುಕ್ಲ ಪಕ್ಷ) ಎರಡೂ ತ್ರಯೋದಶಿ ತಿಥಿ ಸಾಯಂಕಾಲ ಸೂರ್ಯಾಸ್ತದ ನಂತ್ರ ಸಿಕ್ಕಿದರೆ ಅದು ಎರಡೂ “ಪ್ರದೋಷಂಗೊ”.

  6. ಒರಕ್ಕಿಂಗೂ ಚಳಿಗೂ ಸೋದರ ಸಂಬಂಧ,ಎಲ.ಲೇಖನ ಶುರು ಮಾಡಿದ ರೀತಿಯೇ ರೈಸಿದ್ದು.
    ಚಳಿಗೂ ಉದಾಸೀನಕ್ಕೂ ಭಾರಿ ಹತ್ತರೆ ನೆಂಟಸ್ತನ ಆಗಿ ಒಪ್ಪ ಬರವಗ ರಜ ತಡ ಆತದ.ಒಳ್ಳೆ ಮಾಹಿತಿ ಧನುರ್ಮಾಸದ ಪೂಜೆಯ ಬಗ್ಗೆ.ಉದಿಯಪ್ಪಗ ನೋಡಿರೆ ಸೂರ್ಯ ಮೂಡುವ ಜಾಗೆಯೇ ವೆತ್ಯಾಸ ಇದ್ದು. ಮಕರ ಸಂಕ್ರಮಣ ಕಳುದು ಬದಲುಗು ಅಲ್ಲದೋ?ಬೋಸ ನೋಡಿದ್ದನೋ ಇಲ್ಲೆಯೋ ಸಂಶಯ !!

    1. ಮುಳಿಯಬಾವಾ..
      ಒಪ್ಪ ತುಂಬ ಲಾಯಿಕಾಯಿದು.

      { ಬೋಸ ನೋಡಿದ್ದನೋ ಇಲ್ಲೆಯೋ ಸಂಶಯ }
      ಸಂಕ್ರಮಣ ಹೇಳಿರೆ ಯೇವ ರಾಮಣ್ಣ – ಕೇಳುವು ಬೋಸಬಾವ..
      ಅವಂಗೆ ಕಳ್ಳು ಕುಡಿತ್ತ ಸಂಕುವಿನ ಮಾಂತ್ರ ಗುರ್ತ ಇದಾ . . . 😉

  7. ಧನುಪೂಜೆಯ ವಿಶೇಷ, ಅದರ ವಿವರಣೆಯ ಸುರುಮಾಡಿದ ರೀತಿ ಅದ್ಭುತ ಆಯಿದು. ಒಳ್ಳೆ ಟಿ.ಕೆ. ರಾಮರಾವ್ ನ ಕಥೆ ಓದೆಂಡು ಹೋದ ಹಾಂಗೆ ಆತು ! ರಂಗಮಾವನ ಪ್ರಯಾಣ ಒಳ್ಳೆ ಸಸ್ಪೆನ್ಸ್ ಲ್ಲಿ ಇತ್ತು . ಎನಗುದೆ ಒಪ್ಪಣ್ಣನದ್ದೇ ಅನುಭವ ಆಯಿದು. ಎಂಗಳ ಮನೆ ಹತ್ರೆ, ಕಾವು ಬೈಲು ಪಂಚಲಿಂಗೇಶ್ವರ ದೇವಸ್ಥಾನ. ಹತ್ತು ವರ್ಷ ಹಿಂದೆ ಕೋಟಿ ಗಾಯತ್ರಿ ಯಾಗ ಆದ ಜಾಗೆ. ಅಲ್ಲಿಗೆ ಊರಿನವೆಲ್ಲ ಉದೇ ಕಾಲಕ್ಕೆ, ಎಂಗಳ ಮನೆ ಕರೆಲಿ ನೆಡಕ್ಕೊಂಡು ಹೋಪಗ, ಅವು ಮಾತಾಡುತ್ತ ಶಬ್ದ ಕೇಳುವಗ, ಧನು ಮಾಸ ಬಂತು ಹೇಳಿ ಗೊಂತಾವುತ್ತು. ಕೆಲವೊಂದಾರಿ ಆನುದೆ ಹೋದ್ದದು ಇದ್ದು. ಹೋದರೆ ಮನಸ್ಸಿಂಗೆ ಒಳ್ಳೆ ಕೊಶೀ ಆವುತ್ತು. ಈ ಸರ್ತಿ ಹೋಪಲೆ ಆಯಿದೆಲ್ಲೆ. ಒಪ್ಪಣ್ಣ ಹೇಳಿದ ಹಾಂಗೆ, ಚಳಿಗೆ ಬಿಲ್ಲಿನ ಹಾಂಗೆ ಚುರುಟಿ ಮನುಗಲೆ ಲಾಯಕಾವುತ್ತು !

    1. { ಚಳಿಗೆ ಬಿಲ್ಲಿನ ಹಾಂಗೆ ಚುರುಟಿ ಮನುಗಲೆ ಲಾಯಕಾವುತ್ತು }
      ಅಪ್ಪು ಮಾವಾ, ರಜ ಚುರುಟೇಕು, ಚಳಿಯ ರುಚಿ ಸಿಕ್ಕೇಕಾರೆ.
      ಅಲ್ಲದ್ದರೆ ಮತ್ತೆ ’ನಗದು’ ಹೋಗಿ ’ಬಗ್ಗದು’ ಅಕ್ಕು.. ಅಲ್ಲದೋ? 😉

  8. =
    ದೇವಸ್ತಾನ ಹತ್ರೆ ಇಲ್ಲದ್ದವು ಉದಿಯಪ್ಪಗ ಬೆಣಚ್ಚಿ ಅಪ್ಪ ಮದಲೇ ೧೦೦೮ ಪಂಚಾಕ್ಷರಿ ಜೆಪ ಮನೆಲೇ ಮಾಡಿಕ್ಕಿ.
    ಗುರು ಜೆಪ, ದಕ್ಷಿಣಾಮೂರ್ತಿ ಜೆಪ, ದತ್ತಾತ್ರೇಯ ಜೆಪ ಎಲ್ಲಾ ಬ್ರಾಹ್ಮಿಲೇ ಮಾಡುಲೆ ಒಳ್ಳೇ ಸಮಯ.

    1. ವರ್ಮುಡಿ ಭಾವ° , ಒಳ್ಳೇ ಮಾಹಿತಿ ಕೊಟ್ಟಿ.. ವಾಸ್ತು ಶಾಸ್ತ್ರ ಮತ್ತೆ Energy Handling ಲಿ ಒಳ್ಳೆ ಅನುಭವ ಇಪ್ಪ ನಿಂಗೊ ಬೈಲಿಂಗೆ ಇಳುದು ಪ್ರೋತ್ಸಾಹ ಮಾಡ್ತದು ತುಂಬಾ ಕೊಶಿ ಆತು.. ಧನ್ಯವಾದಂಗೋ… ಅಂಬಗಂಬಗ ಬತ್ತಾ ಇರಿ, ಒಪ್ಪ ಕೊಡಿ.. ಆತೋ! ಹರೇರಾಮ!

  9. ದೇವಸ್ತಾನ ಹತ್ರೆ ಇಲ್ಲದ್ದವು ಉದಿಯಪ್ಪಗ ಬೆಣಚ್ಚಿ ಅಪ್ಪ ಮದಲೇ ೧೦೦೮ ಪಂಚಾಕ್ಷರಿ ಜೆಪ ಮನೆಲೇ ಮಾಡಿಕ್ಕಿ.
    ಗುರು ಜೆಪ, ದಕ್ಷಿಣಾಮೂರ್ತಿ ಜೆಪ, ದತ್ತಾತ್ರೇಯ ಜೆಪ ಎಲ್ಲಾ ಬ್ರಾಹ್ಮಿಲೇ ಮಾಡುಲೆ ಒಳ್ಳೇ ಸಮಯ.

  10. ಹಾಂಗೆಯೇ ಮಕರಸಂಕ್ರಮಣದ ದಿನ ರವಿ ಮಕರರಾಶಿಗೆ ದಾಂಟುವ ದಿನ. ಮಕರ ರಾಶಿ ಶನಿಯರಾಶಿ. ಶಿವ(ರವಿ)ನ ಬೆನ್ನು ಶಾಸ್ತ°=ಅಯ್ಯಪ್ಪ°(ಶನಿ). ಹಾಂಗಾಗಿ ಮಕರಸಂಕ್ರಮಣ ಅಯ್ಯಪ್ಪಂಗೆ ವಿಶೇಷ. ಶನಿಗೆ ಕಪ್ಪು ವೊಸ್ತ್ರ ಹೇಳ್ತವು. ಹಾಂಗಾಗಿ ಅಯ್ಯಪ್ಪ ವ್ರತದವಕ್ಕೆ ಕಪ್ಪು ವೊಸ್ತ್ರ. ಶನಿ ದೋಶಕ್ಕೆ ಅಯ್ಯಪ್ಪ° ಪರಿಹಾರ.

    1. ಅತ್ಯುತ್ತಮ ಮಾಹಿತಿಗೆ ಧನ್ಯವಾದ.
      ಬೈಲಿಲಿ ಜ್ಯೋತಿಷ್ಯದ ಅಲೆ ಸುರು ಆವುತ್ತ ಲಕ್ಷಣ ಕಾಣ್ತಾ ಇದ್ದು.
      ಆರೂಢಲ್ಲಿ ಒರುಂಬುಡಿಬಾವ ನಿಂದರೆ ಸರೀ ಅಕ್ಕಿದಾ..

      ಎಂತ ಹೇಳ್ತಿ?

      1. ಎನ್ನದು ದೃಷ್ಟಿ ಮಾಂತ್ರ

    2. (ಶಾಸ್ತ°=ಅಯ್ಯಪ್ಪ°(ಶನಿ))
      ಅಯ್ಯಪ್ಪ° ಹೇಳಿರೆ ಶನಿ ಹೇಳ್ತದು ಆನು ಪಷ್ಟು ಕೇಳ್ತದು… ಇದರ ಬಗ್ಗೆ ಎಂತಾರು ಕತೆ ಮಣ್ಣ ಇದ್ದೋ?

      1. ಕತೆ ಎಂತದೂ ಗೊಂತಿಲ್ಲೆ. ಆದರೆ =
        ೧) ರವಿ, ಗುರು ವಿಂಗೆ ಅಧಿದೇವತೋಪಾಸನೆಯಾಗಿ ಶಿವ°.
        ೨) ಚಂದ್ರ, ಶುಕ್ರ ರಿಂಗೆ ಅಧಿದೇವತೋಪಾಸನೆಯಾಗಿ ದುರ್ಗೆ.
        ೩) ಕುಜಂಗೆ(ಮಂಗಳ) ಅಧಿದೇವತೋಪಾಸನೆಯಾಗಿ ಸುಬ್ರಹ್ಮಣ್ಯ. ಸೂ: ಕೆಲವು ಸರ್ತಿ ದುರ್ಗೆ.
        ೪) ಬುಧಂಗೆ ಅಧಿದೇವತೋಪಾಸನೆಯಾಗಿ ವಿಷ್ಣು. (ರಾಮ / ಕೃಷ್ಣ / ವೆಂಕಟ್ರಮಣ / ನರಸಿಂಹ …)
        ೫) ಶನಿಗೆ ಅಧಿದೇವತೋಪಾಸನೆಯಾಗಿ ಶಾಸ್ತ°. ಸೂ: ಕೆಲವು ಸರ್ತಿ ಹನುಮಂತ, ಶಿವ°.
        ೬) ರಾಹುಗೆ ಅಧಿದೇವತೋಪಾಸನೆಯಾಗಿ ಸುಬ್ರಹ್ಮಣ್ಯ. ಸೂ: ಕೆಲವು ಸರ್ತಿ ನಾಗ°.
        ೭) ಕೇತುಗೆ ಅಧಿದೇವತೋಪಾಸನೆಯಾಗಿ ಗಣಪತಿ.
        = ಹೀಂಗೆ ಜ್ಯೋತಿಷ್ಯಲ್ಲಿ ಬಳಕೆ ಇದ್ದು.
        ಶಾಸ್ತ° = ಅಯ್ಯಪ್ಪ° ಎರಡೂ ಒಂದೇ. ಶಬರಿಮಲೆಲಿ ಮೂರ್ತಿ ರೂಪಲ್ಲಿ ಇಪ್ಪದು. ಬಾಕಿ ಹೆಚ್ಚಿನ ಎಲ್ಲಾ ಕಡೆಲಿ ಒತ್ತೆ ಅಥವಾ ಮೂರು ಲಿಂಗ ರೂಪಲ್ಲಿ ಆರಾಧನೆ ಇಪ್ಪದು. ಶಾಸ್ತ° ಹೇಳುತ್ತದು ಕೇರಳೀಯ ಆರಾಧನೆ. ತಂತ್ರಮುಚ್ಚಯಲ್ಲಿ ಇಪ್ಪ ೭ ದೇವತಾರಧನೆಗಳಲ್ಲಿ ಶಾಸ್ತ°ನೂ ಒಂದು.
        ಶಾಸ್ತ° ಹೇಳಿರೆ ಶನಿ ಅಲ್ಲ, ರವಿ ಹೇಳಿರೆ ಶಿವ° ಅಲ್ಲ; ಆಯಾ ಗ್ರಹರಿಂಗೆ ಸಂಬಂಧಪಟ್ಟ ದೇವತೆಗೊ.

  11. ಧನು ತಿಂಗಳು ಹೇಳಿರೆ ಸೂರ್ಯ° ಧನು ರಾಶಿಲಿ ಇಪ್ಪ ತಿಂಗಳದ. ಗುರುವಿನ ಸ್ವರಾಶಿಲಿ ರವಿ ಇಪ್ಪ ತಿಂಗಳು. ಗುರುವಿನ ರಾಶಿಲಿ ರವಿ ಇಪ್ಪ ತಿಂಗಳಿಲಿ ಶಿವಪೂಜೆ ವಿಶೇಷ. ಜೋಇಷ ಮಾವನ ಹತ್ರೆ ಕೇಳಿದರೆ ಗೊಂತಕ್ಕು.

  12. ಧನು ಪೂಜೆ ಎಂಗಳ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಲ್ಲಿಯೂ ಭಾರೀ ಗೌಜಿ. ಅಷ್ಟು ಉದಿಯಪ್ಪಾಗ ಒಂದು ಸಾವಿರಕ್ಕತ್ರೆ ಜೇನ ಆವುತ್ತಡ. ಎಂತಾರು ಭಾರೀ ವಿಷೇಷ.

    1. ವಿಟ್ಳಲ್ಲಿಯೂ ಗವುಜಿ ಇಪ್ಪದು ಕೇಳಿ ಕೊಶಿ ಆತು.
      ಎಂತ ಇದ್ದು ವಿಶೇಷ? ಜೆನ ಎಷ್ಟಕ್ಕು? ಎಲ್ಲ ಉತ್ತರ ಬರೆಯಿ, ಆತೋ? 🙂

  13. ಒಳ್ಳೆ ಲೇಖನ ಒಪ್ಪಣ್ಣೊ ಧನು ಪೂಜೆ ಈಗೀಗ ನೀನು ಹೇಳಿದ ಹಾ೦ಗೆ ಎಲ್ಲಾ ದೇವಸ್ಥಾನ೦ಗಳಲ್ಲಿಯೂ ಸುರುವಾಯಿದು.ಅದೊ೦ದು ದೇವಸ್ಥಾನ೦ಗೋಕ್ಕೆ ಪೈಸೆ ಮಾಡುವ ಕಾರ್ಯಕ್ರಮವೂ ಆಯಿದು ಕೆಲವುಕಡೆ.ಇರಳಿ ನೀನ೦ತು ಸರಿಯಾಗಿ ವಿವರ್ಸಿದ್ದೆ.ನಿನಗೊ೦ದು ಒಪ್ಪ ಜಾಸ್ತಿ.ಒಪ್ಪ೦ಗಳೊಟ್ಟಿ೦ಗೆ.

    1. ಮೋಹನಮಾವಂಗೆ ನಮಸ್ಕಾರ.
      { ದೇವಸ್ಥಾನ೦ಗೋಕ್ಕೆ ಪೈಸೆ ಮಾಡುವ ಕಾರ್ಯಕ್ರಮವೂ ಆಯಿದು }
      ನೂರಕ್ಕೆ ನೂರು ಸರಿಯಾದ ಮಾತು. ಆದರೆ ಕೆಲವು ದಿಕ್ಕೆ ಕ್ರಮಾಗತವಾಗಿ ನೆಡೆತ್ತಿದಾ..
      ಅದು ಕೊಶಿಯ ವಿಚಾರವೇ.

  14. ಎನಗೆಂತ ಕಾಣ್ತು ಹೇಳಿರೆ… ಒಳುದ ತಿಂಗಳಿಲಿ ಹೇಂಗಾರೂ ಬೇಗ ಏಳ್ತು… ಧನು ತಿಂಗಳಿಲಿ ಚಳಿಂದಾಗಿ ಏಳ್ಲೆ ಮನಸ್ಸು ಬತ್ತಿಲ್ಲೆ ಅಲ್ಲದ? ಅದಕ್ಕೆ ಬೇಗ ಏಳ್ಲೆ ಒಂದು ಹೆಳೆ ಬೇಕನ್ನೆ… ಹಾಂಗೆ ಹಿರಿಯರು ಹೀಂಗಿಪ್ಪ ಒಂದು ಕ್ರಮ ತಂದವೋ ಹೇಳಿ ಸಂಶಯ. ಎಂತ ಹೇಳ್ತಿ?

  15. Olle lekhana bhava.

    Yenage Dhanu pooje heli ondu iddu heli eegale gonthaddu :(.

    Kelekku yengala oorili ippa shiva devasthanalliyo Dhanu pooje madthava heli.

    Hingippa amulya mahithige dhanyavada.

    1. ಧನುಪೂಜಗೆ ಹೋದೆಯೋ ಮಾಣೀ..
      ಉದಿಯಪ್ಪಗಾಣ ಧನುಪೂಜೆ ನೋಡಿರೆ ಜೀವನವೇ ನಂದನವನ ಅಕ್ಕು! 🙂

    1. ಕೇವಳ ಭಾವಂಗೆ ನಮಸ್ಕಾರ..
      ಮಾಪುಳೆ ಊರಿಲಿದ್ದೋಂಡು ನಮ್ಮ ಸಂಸ್ಕೃತಿಯ ಬಗ್ಗೆ ಆಸಗ್ತಿ ಕಂಡು ತುಂಬಾ ಕೊಶಿ ಆತು.

      ಅಪುರೂಪಲ್ಲಿ ಶುದ್ದಿ ಓದಿ ಒಪ್ಪಕೊಟ್ಟದು ಕೊಶಿ ಆತು.
      ಬಂದೊಂಡಿರಿ ಬೈಲಿಂಗೆ… 🙂

      1. ನಮಸ್ಕಾರ ಒಪ್ಪಣ್ಣ, ಖ೦ಡಿತಾ ಬಯಲಿ೦ಗೆ ಬತ್ತಾ ಇರ್ತೆ..ಉತ್ತಮ ಮಾಹಿತಿ ಕೊಡ್ತಾ ಇಪ್ಪ ಒಪ್ಪಣ್ಣ.ಕಾಮ್ ಗೆ ದನ್ಯವಾದಗಳು..

  16. ಪುತ್ತೂರಿಲಿ ಜೋರಿನ(!?) ಚಳಿ ಸುಮಾರು ಜೆನಕ್ಕೆ ತಟ್ಟಿದ್ದೇ ಇಲ್ಲೆ ಒಪ್ಪಣ್ಣೋ! ಮಾಲಿಂಗೇಶ್ವರ ದೇವಸ್ಥಾನಲ್ಲಿ ಧನು ಪೂಜೆಯ ಗೌಜಿ ಅಲ್ಲದೋ.. ಇದರೆಡಕ್ಕಿಲಿ ಆನುದೆ ಒಂದೆರಡು ಸತ್ತಿ ಹೋಯ್ದೆ! ಜೆನವೋ ಜೆನ,, ಉದಿಯಪ್ಪಗಳೇ ರುದ್ರ ಹೇಳುಲೆ ಸುಮಾರು ಜೆನ ಬತ್ತವು… ರುದ್ರಪಠನ ಕೇಳುಲೆ ತುಂಬಾ ಕೊಶಿ ಆವ್ತು.. ಎನಗೆ ಅಷ್ಟುದಿಯಪ್ಪಗ ಚಳಿ ಬಿಡೆಕ್ಕೇ, ರಜ ಮುರುಂಟಿ ಮನುಗುತ್ತದೇ ಜಾಸ್ತಿ.. ಆದರೆ ಧನುಪೂಜೆಯ ವಿಷಯಂಗ ಇಷ್ಟೆಲ್ಲಾ ಇದ್ದು ಹೇಳಿ ಜೋಯಿಶಪ್ಪಚ್ಚಿಯ ವಿವರಣೆ ನಿನ್ನ ಮುಖಾಂತರ ಕೇಳಿಯೇ ಗೊಂತಾತಿದಾ.. ಸಾಂದರ್ಭಿಕ ಲೇಖನ ಒಪ್ಪಣ್ಣೋ! ಒಂದೊಪ್ಪವುದೆ ಸೂಪರಾಯ್ದು! 🙂

    1. ಯೇ ಬಲ್ನಾಡುಮಾಣೀ..
      ಒಪ್ಪಕುಂಞಿಯ ಹಾಂಗೆ ನೆಡುಮದ್ಯಾನ್ನ ಒರೆಂಗೆ ಒರಗಿರೆ ಎಂತದೂ ಗೊಂತಾಗ ಇದಾ!
      ಬೇಗಬೇಗ ಎದ್ದರೆ ಹೀಂಗೆಲ್ಲ ಇದ್ದು ಹೇಳ್ತದು ಗೊಂತಾವುತ್ತು 🙂

      ಹ್ಮ್, ಒಪ್ಪ ಲಾಯಿಕಾಯಿದು ಮಾಣೀ..

  17. ಧನು ಮಾಸದ ವಿಷಯ ಬರದ್ದು ಸಂತೋಷ .

  18. ‘ಧನು ಮಕರ ಘೋರಯೋಃ’ ಹೇಳಿ ಅಪ್ಪ° ಹೇಳುಗು. ಧನು ಮಕರ ತಿಂಗಳಿಲ್ಲಿ ಚಳಿ ಜೋರಡ. ಕಳುದ ವರ್ಷ ಚಳಿ ಒಟ್ಟಾರೆ ಇತ್ತಿದ್ದವು ನಾಲ್ಕೇ ದಿನ. ಹಾಂಗೆ ಹೇಳಿ ಈ ವರ್ಷ ಮಾಷ್ಟ್ರು ಮಾವ°ನ ಸಣ್ಣ ಮಗನ ಸಟ್ಟುಮುಡಿ ಕಳುದರೂ ಮಳೆ ನಿಂದಿದಿಲ್ಲೆ. ಈ ವರ್ಷ ಚಳಿಯೂ ರಜ್ಜ ಹೆಚ್ಚು ಇದ್ದು. ಮಳೆಗಾಲ ಹೇಂಗಿರ್ತು ಗೊಂತಿಲ್ಲೆ ಇನ್ನಾಣ ವರ್ಷ.

    ಧನು ಪೂಜೆಯ ಬಗ್ಗೆ ಒಪ್ಪಣ್ಣ ಬರದ್ಸು ಕೊಶಿ ಆತು. ನಮ್ಮ ಬೈಲಿನ ಕೆಲಾವು ದೇವಸ್ಥಾನಂಗಳಲ್ಲಿ ಈ ಉಷಃಕಾಲದ ಪೂಜೆ ನಡೆತ್ತು. ಅದರ ಮಹತ್ವದ ಬಗ್ಗೆ ಗೊಂತಿತ್ತಿಲ್ಲೆ. ಧನ್ಯವಾದಂಗೊ ಒಪ್ಪಣ್ಣ.

    1. ಹಳೆಮನೆ ಅಣ್ಣಂಗೆ ನಮಸ್ಕಾರ ಇದ್ದು..
      ಚೆಂದದ ಒಪ್ಪಕ್ಕೆ ತುಂಬ ವಂದನೆಗೊ.

      {ನಮ್ಮ ಬೈಲಿನ ಕೆಲಾವು ದೇವಸ್ಥಾನಂಗಳಲ್ಲಿ ಈ ಉಷಃಕಾಲದ ಪೂಜೆ ನಡೆತ್ತು}
      ಪಟವೋ ಮಣ್ಣ ತೆಗದ್ದಿರೋ?
      ಉದೆಕಾಲ ಏಳುಲೆ ಉದಾಸಿನ ಮಾಡ್ತ ನಮ್ಮ ನೆಗೆಮಾಣಿಗೆ ತೋರುಸಲೆ ಕೇಳಿದ್ದು.
      ಪಟ ಇದ್ದರೆ ಬೈಲಿಂಗೆ ಹಾಕಿಕ್ಕಿ, ಆತೋ?
      🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×