Oppanna.com

ದೊಡ್ಡ ಅರ್ದ ಎನಗೆ: ಅರ್ಗೆಂಟಿನ ಒಪ್ಪಕ್ಕ ಹಣ್ಣು ಹಂಚಿದ ದಿನಂಗೊ. . .

ಬರದೋರು :   ಒಪ್ಪಣ್ಣ    on   24/07/2009    23 ಒಪ್ಪಂಗೊ

ಕುಂಬ್ಳೆ ಅಜ್ಜಿ ಮನೆಲಿ ಚಿಕ್ಕು ಧಾರಾಳ.
ಅಲ್ಲಿ ತಿಂಬೋರು ಆರೂ ಇಲ್ಲದ್ರೂ ’ಮರಲ್ಲೇ ಹಾಳು ಮಾಡುಸ್ಸು ಎಂತಕೆ?’ ಹೇಳಿಗೊಂಡು ಅಜ್ಜ ಕೊಯಿಗು. ಬಾವಲಿ ಕೆರದೋ, ಹುಳು ತಿಂದೋ ಮತ್ತೊ ಉದುರಿರೆ ಹೋತು, ಕೊಕ್ಕಗೆ ಎತ್ತುತ್ತದರ ಎಡಿಗಾದಷ್ಟು ಕೊಯ್ವದು. ಅವರ ಮನೆಲಿಪ್ಪ ಎಲ್ಲರು ಕೂದು ತಿಂದರೂ ಮುಗಿಯ, ಅಲ್ಲಿಪ್ಪ ಅತ್ತೆಕ್ಕೊ ಕೋಲೇಜಿಂಗೆ ಹೋವುತ್ತ ನಮುನೆಯವಲ್ದ, ರಜ್ಜ ಜಾಸ್ತಿ ತಿಂದರೆ ತೋರ ಆವುತ್ತಡ, ರುಚಿಗೆ ತಕ್ಕ ತಿಂಬದು – ಪತ್ಯದವರ ಹಾಂಗೆ! ಹೆಡಗೆ ಹೆಡಗೆ ಚಿಕ್ಕಿನ ಮಾಡುದಾರೂ ಎಂತರ ಬೇಕೇ? ಹಾಂಗಾಗಿ ಎಲ್ಲ ಹಂಚಿ ಹಂಚಿಯೇ ಮುಗುಶುಗು.
ಅಜ್ಜಂಗೆ ಕೊಯ್ವದೇ ಕೆಲಸ, ಅಜ್ಜಿಗೆ ಕೊಯ್ದರ ಹಂಚುದೇ ಕೆಲಸ.

ಚಿಕ್ಕುದೇ ಹಾಂಗೆ- ಏಕ ಗಾತ್ರದ ದೊಡ್ಡ ದೊಡ್ಡ ಚಿಕ್ಕುಗೊ. ಸಕ್ಕರೆ ಸೀವು, ಕಡುಕಂದು ಬಣ್ಣ, ರಂಗಮಾವನ ಹಾಂಗೆ 😉 . ನಮ್ಮ ಊರಿಲಿ ಬೇರೆ ಎಲ್ಲಿಯೂ ಇಲ್ಲೆಡ, ಎಂತದೋ ಒಂದು ವಿಶೇಷ ಜಾತಿ ಚಿಕ್ಕು ಅಡ ಅದು. ನೀಲೇಶ್ವರ ಹೊಡೆಂದ ತಂದದು. ಅಜ್ಜನ ಆಸಕ್ತಿಂದಾಗಿ ನಮ್ಮ ಊರಿಂಗೆ ಎತ್ತಿದ್ದು ಆ ಸೆಸಿ.
ಈಗ ಅದರ ಸುಮಾರು ಗೆಡು ಆಯಿದು. ಒಪ್ಪಣ್ಣ ಒಂದರಿ ಆಟಿ ತಿಂಗಳಿಲಿ ಹೋಗಿ ’ಚಿಕ್ಕಿದ್ದಾ ಅಜ್ಜಿ?’ ಕೇಳಿದ್ದಕ್ಕೆ ’ಇದಾ ಈ ಸೆಸಿ ಕೊಂಡೋಗಿ ನೆಡು, ಐದೊರಿಶಲ್ಲಿ ಆವುತ್ತು ಮಿನಿಯಾ’ ಹೇಳಿದವು. ಐದು ನಿಮಿಶಲ್ಲಿ ತಿಂಬ ಆಶೆಗೆ ಐದೊರಿಶ ಕಾವದೋ ಹೇಳಿ ನೆಗೆ ಬಂತು ಒಪ್ಪಣ್ಣಂಗೆ. ಅಂತೂ ಸೆಸಿ ಇದ್ದು ವಳಚ್ಚಲಿಲಿ, ವರಕ್ಕು ತೂಗಿಯೋಂಡು. ;-(

ಕುಂಬ್ಳೆ ಅಜ್ಜಿಗೆ ಎಲ್ಲೊರು ಬೇಕು, ಸಣ್ಣ ಮಕ್ಕೋ ಹೇಳಿರೆ ಅಂತೂ ತುಂಬ ಇಷ್ಟ. ನಮ್ಮ ಒಪ್ಪಕ್ಕ ಹೇಳಿರೆ ಬಾರೀ ಪ್ರೀತಿ. ಸಣ್ಣ ಇಪ್ಪಗಳೇ ಹಾಂಗೆ. ಚಿಕ್ಕಿನ ಸಮಯಲ್ಲಿ ಒಪ್ಪಕ್ಕಂಗೆ ಹೇಳಿ ಒಂದು ಕಟ್ಟು ಆದರೂ ಖಂಡಿತ! ಅಲ್ಲಿಗೆ ಹೋಗಿಪ್ಪಗಳೋ, ಅಜ್ಜಿ ಮನೆಯವು ಎಂಗಳ ಬೈಲಿಂಗೆ ಬಂದಿಪ್ಪಗಳೋ ಮತ್ತೊ ಚಿಕ್ಕಿನ ಕಟ್ಟು ಕೊಡುಗು. ಅತಿ ಮೀರಿ ಬಪ್ಪಲೇ ಎಡಿಗಾಗದ್ರೆ ಕೊಟ್ಟು ಕಳುಸುಗು, ಆಚಕರೆ ಮಾಣಿ ಬಾವನತ್ರೋ, ಅಜ್ಜಕಾನ ಬಾವನತ್ರೋ ಮತ್ತೊ. ದಾರಿಲಿ ರಜ್ಜ ಕಾಲಿ ಆದರೂ, ಮನೆಗೆ ಎತ್ತುಗು ಆ ಚಿಕ್ಕಿನ ಕಟ್ಟು. ಪೇಟೆಲಿ ಮಾಪ್ಳೆ ಕೊಡ್ತ ಹಾಂಗಿಪ್ಪ ಸಣ್ಣ ಕಟ್ಟು ಅಲ್ಲ, ದೊಡ್ಡ ದೊಡ್ಡ ಹಣ್ಣುಗೊ ಇಪ್ಪ ದೊಡ್ಡ ಕಟ್ಟು. ಬೇರೆ ಬೇರೆ ದಿನ ಹಣ್ಣಪ್ಪ ನಮುನೆದು ನೋಡಿ ತುಂಬುಸುಗು ಅಜ್ಜಿ.

ಇಂದ್ರಾಣ ಶುದ್ದಿ ಆ ಚಿಕ್ಕು ಮನೆಗೆ ಎತ್ತಿದ ಮತ್ತಾಣದ್ದು:
ಚಿಕ್ಕಿನ ಕಟ್ಟ ಎತ್ತಿದ ದಿನಂದಲೇ ಒಪ್ಪಕ್ಕಂಗೆ ನವರಾತ್ರಿಯ ಹಾಂಗೆ ಹಬ್ಬ ಸುರು. ಮುಗಿವನ್ನಾರ ಗೌಜಿ ಅಲ್ದೋ!

ದಿನಕ್ಕೆ ಎರಡು ದೊಡ್ಡ ಚಿಕ್ಕಾರೂ ಹಣ್ಣಕ್ಕು. ಕಡಮ್ಮೆಲಿ ಒಂದು! ಹಾಂಗಿಪ್ಪಗ ಒಪ್ಪಕ್ಕಂಗೆ ಕುಶಿ ಆಗದ್ದೆ ಎಲ್ಲಿಗೆ? 🙂
ಒಳ್ಳೆತ ಹಣ್ಣಾದ್ದರ ನೋಡಿ ಅಮ್ಮ ತಂದು ಒಪ್ಪಕ್ಕನತ್ರೆ ಕೊಡುಗು. ಇದ ಒಪ್ಪಕ್ಕೊ, ಒಂದು ಚಿಕ್ಕು ಹಣ್ಣಾಯಿದು, ತಿನ್ನಿ – ಹೇಳಿಗೊಂಡು.
ಸ್ಲೇಟಿಲಿ ಆನೆ ಚಿತ್ರ ಬಿಡುಸಿಗೊಂಡು ಕೂದ ಒಪ್ಪಕ್ಕನ ಕೈಗೆ ಚಿಕ್ಕು ಎತ್ತಿದ ಕೂಡ್ಳೆ ಸ್ಲೇಟು ಒಂದು ಮೂಲಗೆ ಎತ್ತಿತ್ತು. ಕೇಳುವೋರೇ ಇಲ್ಲೆ ಅದರ, ಪಾಪ! 😉
ಆ ದೊಡ್ಡ ಚಿಕ್ಕಿನ ಎಲ್ಲೊರಿಂಗೆ ಬಪ್ಪ ಹಾಂಗೆ ಹಂಚುವ ಕೆಲಸ ಒಪ್ಪಕ್ಕಂಗೆ ಇದ್ದನ್ನೆ, ಅಷ್ಟು ಜೆವಾಬ್ದಾರಿಯ ದೊಡ್ಡ ಕೆಲಸ ಇಪ್ಪಗ ಸಣ್ಣ ಆನೆ ಚಿತ್ರ ಆದರೂ ಎಂತ ಲೆಕ್ಕ!

ಒಪ್ಪಣ್ಣನ ಮನೆಲಿ ಐದು ಜೆನ – ನಿಂಗೊಗೆ ಗೊಂತಿಪ್ಪದೇ. ಅಪ್ಪ-ಅಮ್ಮ-ದೊಡ್ಡಣ್ಣ-ಒಪ್ಪಣ್ಣ-ಒಪ್ಪಕ್ಕ. ಸಣ್ಣ ಜೆನ ಹಂಚುದು.
ಚಿಕ್ಕಿನ ಐದು ತುಂಡು ಮಾಡುದು ಕಷ್ಟ ಅಲ್ದೋ, ಹಾಂಗೆ ಸುಲಬ ಅಪ್ಪಲೆ ಸಮಸಂಕೆ – ಆರು ತುಂಡು ಮಾಡುಸ್ಸು.

  • ಆರಾದರೆ ಒಂದು ತುಂಡು ಜಾಸ್ತಿ ಬಂತನ್ನೆ, ಅದಾರಿಂಗೆ? 😉
  • ಅಮ್ಮಂಗೆ ಹೇಳಿ ಒಂದು ತುಂಡು, ಇಪ್ಪದರಲ್ಲಿ ದೊಡ್ಡದು. ಎಂತಕೇಳಿರೆ, ಅಮ್ಮ ಚಿಕ್ಕು ತಿಂಬದು ಕಮ್ಮಿ. (ಕೊಟ್ರೆ ತಿಂಗೋ ಏನೋ, ಕೊಟ್ರಲ್ದೋ.!) ಹಾಂಗಾಗಿ ಅಮ್ಮಂಗೆ ಹೇಳಿ ಮಡಗಿದ ಚಿಕ್ಕಿನ ತುಂಡು ಆರಿಂಗೆ?
  • ದೊಡ್ಡಣ್ಣಂಗೆ ಹೇಳಿ ಇಪ್ಪ ತುಂಡಿಲಿ ಅರ್ದ ಮಾಂತ್ರ ಅವಂಗೆ ಸಿಕ್ಕುದು. ಒಳುದ ಅರ್ದ, ಅದಾರಿಂಗೆ?
  • ಅಪ್ಪನ ಮೇಲೆ ತುಂಬ ಪ್ರೀತಿ, ಗೌರವ. ಆದ ಕಾರಣ ಅಪ್ಪಂಗೆ ಹೇಳಿ ಇಪ್ಪ ತುಂಡಿನ ಅರ್ದ ಅಪ್ಪಂಗೇ ಕೊಡುಗು, ಒಳುದ ಅರ್ದ, ಅದಿನ್ನಾರಿಂಗೆ?
  • ಒಪ್ಪಣ್ಣನ ಮೇಲೆ ತುಂಬ ಕೋಪ, ಎಂತಕೇಳಿರೆ ಒಪ್ಪಣ್ಣ ಒಂದೇ ಒಂದು ತುಂಡು ಬಿಡ° ಇದಾ! ಬಜ್ಜಿ ಬಜ್ಜಿ ಆದ ಹೊಡೆಣ ತುಂಡು ಇಡೀ ಒಪ್ಪಣ್ಣಂಗೆ ಕೊಡುಗು, ಪಿಸುರಿನ ಸಂತೋಶಲ್ಲಿ. 😉

ಅಂತೂ, ತಿಂಬಲೆ ಸುರು ಮಾಡುವ ಮದಲು ಎಲ್ಲೊರಿಂಗೆ ರಜ ರಜ ಆದರೂ ಕೊಟ್ಟೇ ಕೊಡುಗು. 🙂

ಒಪ್ಪಣ್ಣಂಗೆ ಬೇಗ ತಿಂದಕ್ಕಿದಾ, ಒರಿಶಗಟ್ಳೆ ಆದ ಸರ್ವೀಸು ಅದೊಂದೇ ಅಲ್ದೋ , ಹಾಂಗೆ! ಒಪ್ಪಣ್ಣನ ಕೈಲಿ ಇಪ್ಪದು ಕಾಲಿ ಆದ ಕೂಡ್ಳೆ ಒಪ್ಪಕ್ಕಂದು ಸುರು ಆತು.
“ಎನ್ನ ಕೈಲಿ ಮೂರು ಚಿಕ್ಕಿನ ತುಂಡು ಇದ್ದು, ನಿನ್ನ ಕೈಲಿ ಒಂದೂ ಇಲ್ಲೆ, ಲಲ್ಲಲಾ!” ಹೇಳಿ. ’ಕೈತೊರುಸುವವ ಕುಡೆಲಿಪ್ಪದರ ಏಳುಸುತ್ತ’ ಕೆಲಸ ಈ ಒಪ್ಪಕ್ಕಂದು.

ಒಂದೆರಡು ಸರ್ತಿ ಮಾತಾಡದ್ದೆ ಕೂದರೂ, ಮೂರನೇ ಸರ್ತಿ ಒಪ್ಪಣ್ಣ ಬಾಯಿಬಿಟ್ಟು ಕೇಳುದು ಒಪ್ಪಕ್ಕನತ್ರೆ- ಎನಗೊಂದು ಕೊಡ್ತೆಯಾ?. ಹಾಂಗೆ ಕೇಳುವನ್ನಾರವೂ ಒಪ್ಪಕ್ಕಂಗೆ ಸಮಾದಾನ ಆಗ ಇದಾ! ಕೇಳಿದ ಕೂಡ್ಳೆ ’ನಿನಗೆ ಕೊಡೆ, ದೊಡ್ಡಣ್ಣಂಗೆ ಆದರೆ ಕೊಡುವೆ’ ಹೇಳುಗು. ಹತ್ತರೆ ಕೂದ ದೊಡ್ಡಣ್ಣಂಗೆ ಹೆದರಿ ಮಾತಾಡದ್ದೆ ಇದ್ದರೂ ಪಿಸುರು ಎಳಗಿ ಎಳಗಿ ಬಕ್ಕು ಒಪ್ಪಣ್ಣಂಗೆ. 🙂 😡
ಒಪ್ಪಣ್ಣ-ಒಪ್ಪಕ್ಕನ ಚಿರಿಪಿರಿಯ ಜಗಳ ಹೀಂಗೇ ಮುಂದುವರಿವಗ ತಲೆಬೆಶೀ ಅಪ್ಪದು ಅಮ್ಮಂಗೆ, ’ಒಳ ಇನ್ನೊಂದು ಚಿಕ್ಕು ಇದ್ದು ಹೇಳಿ ಕಾಣ್ತು, ಕೊರದು ತಿಂಬಲಾಗದೋ?, ಒಪ್ಪಕ್ಕನತ್ರೆ ಜಗಳ ಮಾಡ್ತದಕ್ಕೆ’ ಹೇಳುಗು ಅಮ್ಮ.
ರಪಕ್ಕ ಹೋಗಿ ಒಳ ಹರಗಿ ಮಡಗಿದ ಚಿಕ್ಕಿಲಿ ಹಣ್ಣು ಇದ್ದಾ ಹೇಳಿ ನೋಡ್ತ ಕೆಲಸ. ಹಾಂಗೆ ನೋಡಿ ನೋಡಿಯೇ ಎಂತ ಕಾಯಿ ಇದ್ದರೂ ಹಣ್ಣಕ್ಕು, ಹ್ಹೆ ಹ್ಹೆ. ಅಂತೂ ನಿಜವಾಗಿ ಹಣ್ಣಾದ ಇನ್ನೊಂದರ ಹಿಡ್ಕೊಂಡು ಬಂದಪ್ಪಗ ’ಅಮ್ಮ, ಅವನತ್ರೆ…. ಅದರ ಎನಗೆ ಕೊಡ್ಳೆ ಹೇಳೂ…’ ಹೇಳಿ ಒಪ್ಪಕ್ಕಂದು ರಾಗ.
’ಕೊಡೆ ನಿನಗೆ, ಇದು ಎನಗೆ ಮಾಂತ್ರ’ ಹೇಳಿ ಹೇಳುದು ಒಪ್ಪಣ್ಣ, ಒಪ್ಪಕ್ಕನ ಎಳಗುಸುಲೆ.

ಎಳಗುಸಿದಷ್ಟೂ ಎಳಗುಗು ಒಪ್ಪಕ್ಕಂಗೆ, ಕೊಡ್ಳೇ ಬೇಕು ಹೇಳಿ ಗೆಂಟು ಮಾಡುಗು ಅಮ್ಮನತ್ರೆ. ಆತಪ್ಪ, ಅರ್ದ ಒಪ್ಪಕ್ಕಂಗೆ ಕೊಡ್ಳಾಗದಾ, ಹೇಳಿ ಅಮ್ಮಂದು ಮದ್ಯಸ್ತಿಕೆ.
ಅಂತೂ ಇಂತೂ ಆ ಚಿಕ್ಕು ಒಪ್ಪಣ್ಣ-ಒಪ್ಪಕ್ಕಂಗೆ ಅರ್ದರ್ದ ಹೇಳಿ ಪಂಚಾತಿಗೆ ಆತು. ಒಪ್ಪಣ್ಣ ತುಂಡು ಮಾಡಿಯುದೇ ಆತು. ಅಷ್ಟಪ್ಪಗ ಒಪ್ಪಕ್ಕಂದು ಬೇರೆಯೆ.
’ದೊಡ್ಡರ್ದ ಎನಗೆ’!!! 😉
ಅರ್ದ ಹೇಳಿದ ಮೇಲೆ ದೊಡ್ಡದು ಸಣ್ಣದು ಹೇಳಿ ಇಲ್ಲೆನ್ನೆ, ಎರಡು ಅರ್ದವೂ ಒಂದೇ ನಮುನೆ, ಎರಡರ್ದ ಸೇರಿ ’ಒಂದು’ ಅಪ್ಪದು ಹೇಳಿ ದೊಡ್ಡಣ್ಣ ಗಣಿತದ ಸೂತ್ರ ಹಿಡುದು ಹೇಳಿದ. ಬಹುಮುಖ್ಯವಾದ ಈ ಚಿಕ್ಕಿನ ಜಗಳದ ಹೊತ್ತಿಲಿ ಅವಂಗೂ, ಗಣಿತದ ನೆಕ್ಕರೆ ಪಂಡಿತರಿಂಗೂ ಅದು ಹಿತ ಆವುತ್ತೋ ಏನೊ, ಒಪ್ಪಕ್ಕಂಗೆ ಅದು ಕುಶಿ ಅಪ್ಪಲೆ ಸಾದ್ಯವೇ ಇಲ್ಲೆ. ಒಪ್ಪಕ್ಕನ ಭಾಶೆಲಿ ಅರ್ದ ಹೇಳಿರೆ ’ತುಂಡು’ ಹೇಳಿ ಅರ್ಥ. ಅದಕ್ಕೆ ಒಂದು ಹಣ್ಣಿನ ಸುಮಾರು ಅರ್ದ ಮಾಡ್ಳೆ ಅರಡಿಗು, ಶಾಲೆಗೆ ಹೋವುತ್ತ ದೊಡ್ಡಣ್ಣಂಗೆ ಅದು ಅರಡಿಯ ಇದಾ! 😉
ಅಂತೂ ಈ ಚಿಕ್ಕಿಲಿಯೂ ದೊಡ್ಡ ತುಂಡು(ಅರ್ದ) ತೆಕ್ಕೊಂಡು ಮಡುಗಿತ್ತು. ಮೊದಲಾಣ ತುಂಡುಗಳೂ, ಈಗಾಣ ದೊಡ್ಡರ್ದವನ್ನೂ ಅರ್ದ ಗಂಟೆ ಕೈಲಿ ಹಿಡ್ಕೊಂಡು ತಿರುಗ್ಗು. ರಜ್ಜ ಹೊತ್ತು ಜಗಳ ಮಾಡ್ಳೆ ಅವಕಾಶ ಸಿಕ್ಕುತ್ತೋ ನೋಡುಗು, ಒಪ್ಪಣ್ಣ ಎಂತಾರು ಉತ್ತರ ಕೊಡ್ಳೆ ಹೋದರೆ ’ದೊಡ್ಡಣ್ಣ, ಒಪ್ಪಣ್ಣ ಎಳಗುಸುತ್ತಾ’ ಹೇಳಿ ದೂರು ಕೊಡುಗು. ಒಂದೋ ರಜ್ಜ ತಿಂದರೂ ತಿಂದತ್ತು, ಬಚ್ಚಿ ಬೊಡುದ ಮತ್ತೆ ಆ ಚಿಕ್ಕಿನ ಅಮ್ಮನ ಕೈಲಿ ಕೊಟ್ಟತ್ತು. ಅಲ್ಲಿಗೆ ಚಿಕ್ಕಿನ ತಿಂತ ವೈವಾಟು ಮುಗುತ್ತು.
ಅಂತೂ ಚಿಕ್ಕಿಂಗೆ ಅದರ ನಿಜವಾದ ಸೀವು ಬಪ್ಪದು ಆ ಜಗಳ ಆದರೆ ಮಾಂತ್ರ.

ಇದು ಕುಂಬ್ಳೆ ಅಜ್ಜಿ ಕೊಡ್ತ ಚಿಕ್ಕು ಮಾಂತ್ರ ಅಲ್ಲ, ಆಚಮನೆ ದೊಡ್ಡಣ್ಣ ತಂದ ನಕ್ಷತ್ರ ಹಣ್ಣಾದರೂ ಅದೇ ಕತೆ, ಪೇಟೆಂದ ಅಪ್ಪ ತಂದ ಮಾವು, ಯೇಪುಲಿಂಗೂ(apple) ಅದೇ ಕತೆ, ಜಗಳ ಮಾಡಿ, ರುಚಿ ಬರುಸಿ ಹಂಚುದು, ತಿನ್ನದ್ರೂ ಅತು ಅಕೆರಿಗೆ.

ಮೊನ್ನೆ ಪುತ್ತೂರತ್ತಿಗೆ ಮನೆಗೆ ಹೋಗಿತ್ತಿದ್ದೆ.
ಒಂದೇ ಮಗಳು ಅವಕ್ಕೆ, ಒಂದು ಮಗಳು ಮಾಂತ್ರ. ವಿಕ್ಟರ್ಸಿಂಗೆ ಹೋಪದು. ಬಯಂಕರ ಕೊಂಗಾಟಲ್ಲಿ ಬೆಳೆತ್ತಾ ಇದ್ದು. ಶಾಲಗೆ ಬೊಟ್ಟು ಬಳೆ ಹಾಕಲಾಗ ಇದಾ, ಹಾಂಗೆ ಕಷ್ಟ ಅಪ್ಪದು ಬೇಡಾಳಿ ಮನೆಲಿದೆ ಹಾಕಿ ಅಬ್ಯಾಸ ಮಾಡ್ಸಿದ್ದಿಲ್ಲೆ ಈ ಅತ್ತಿಗೆ. ಅಣ್ಣಂದೇ ಹಾಂಗೆ, ಕೊಂಗಾಟಲ್ಲಿ ಸಾಂಕುತ್ತಾ ಇದ್ದವು. ಕೇಳಿದ್ದರ, ಕೇಳದ್ದರ ಎಲ್ಲ ತಂದು ಕೊಡ್ತವು. ಮೊನ್ನೆ ಹೋಗಿಪ್ಪಗ ಪೇಟೆಂದ ತಂದ ಚಿಕ್ಕು ಇತ್ತು. ಒಂದೇ, ಎರಡೇ ಹೇಳಿ ಎಂತ ಇಲ್ಲೆ – ಬೇಕಾದಷ್ಟು. ಹೊಟ್ಟೆ ಬಿರಿಯಪ್ಪ.

ಚೆಂದಕೆ ತೊಳದು, ತುಂಡುಸಿ, ಕುಪ್ಪಿಯ ಕರಟಲ್ಲಿ ತುಂಬುಸಿಗೊಂಡು ತಂದುಕೊಟ್ಟತ್ತು, ಆ ಪುಟ್ಟಿ. ಒಳಂದ ಅತ್ತಿಗೆ ಕೊಟ್ಟು ಕಳುಸಿದ್ದು. ಒಂದು ಇಸುಮುಳ್ಳು (fork)ದೇ ಮಡಿಕ್ಕೊಂಡು. ಇಸುಮುಳ್ಳಿಲಿ ಕುತ್ತಿ ಕುತ್ತಿ ಟೀವಿ ನೋಡಿಗೊಂಡು ತಿನ್ನೆಕ್ಕು ಅದರ. ಅತ್ತಿತ್ತೆ ಮಾತಾಡ್ಳೂ ಇಲ್ಲೆ ಸಮಗಟ್ಟು. ಒಪ್ಪಣ್ಣ ಮಾತಾಡ್ಸುಲೆ ಹೆರಡುವಗ ’ಸಲೆನ್ಸ್’ ಹೇಳಿತ್ತು ಆ ಕೂಸು. ’ಇಲ್ವರ್ಸು ಪಂಪಿಲಿಪ್ಪದು ಅದು’ ಹೇಳಿಕ್ಕಿ ಒಪ್ಪಣ್ಣ ಸುಮ್ಮನೆ ಕೂದ. ಎಲಿ-ಪುಚ್ಚೆ ಜಗಳದ ಕಾರ್ಟೂನು ಬಂದುಗೊಂಡು ಇತ್ತು. ಆ ಪುಚ್ಚಗೆ ಎಲಿಯ ಹಿಡಿವಲೇ ಎಡಿಗಾಯಿದಿಲ್ಲೆಡ. ಹಾಂಗೆ ಬಾರೀ ಕುಶಿ ಆ ಕೂಸಿಂಗೆ. ಆ ಎಲಿ ಪುಚ್ಚೆಯ ಬೊಂಬೆ ಚಿತ್ರಂಗಳೇ ಅದರ ಪ್ರೆಂಡುಗೊ, ಅದರೊಟ್ಟಿಂಗೇ ಭಾವನೆಗೊ. ನಿಜವಾದ ಮನುಶ್ಯರ ಬೊಂಬೆಗಳೊಟ್ಟಿಂಗೆ ಭಾವನೆ ಹಂಚಿಯೇ ಗೊಂತಿಲ್ಲೆ ಅದಕ್ಕೆ.
ನೀಟಾಗಿ ತಿಂದಾತು, ತಿಂದು ಕುಪ್ಪಿ ಕರಟವ ಕರೆಲಿ ಮಡಗಿ ಆತು. ಹತ್ತು-ಹದಿನೈದು ತುಂಡು ಕಾಲಿ. ರುಚಿಯೇ ಬಯಿಂದಿಲ್ಲೆ, ಎಂತ? ಜಗಳವೇ ಮಾಡಿದ್ದಿಲ್ಲೆ. ಚೆ!
ಆ ಪುಟ್ಟು ಕೂಸಿಂಗೆ ಇಂದಿನ ವರೆಗೆ ಅಂತಾ ಜಗಳದ ಅವಕಾಶವೇ ಸಿಕ್ಕಿದ್ದಿಲ್ಲೆ. ಹಂಚಿ ತಿಂಬ ಅವಕಾಶವೇ ಇಲ್ಲೆ,
ದೊಡ್ಡ ಆದ ಮತ್ತೆ ಹೇಂಗಿಕ್ಕು ಅದರ ಮನಸ್ತಿತಿ? ಎಂತದನ್ನೂ ಹಂಚುಲೆ ಅವಕಾಶವೇ ಇಲ್ಲೆ. ಒಬ್ಬನೇ ಮಗು ಆದ ಮನೆಲಿ ಇದ್ದೋ ಆ ಆನಂದ?

ಅಂದು ಅಷ್ಟು ಜಗಳ ಮಾಡಿದ್ದ ಒಪ್ಪಕ್ಕ ಈಗಳೂ ಹಾಂಗೆ ಹೇಳಿ ಗ್ರೇಶೆಡಿ ನಿಂಗೊ, ಈಗ ಒಂದು ಹೆಡಗೆ ಚಿಕ್ಕು ತೆಕೊಂಡೋಗಿ ಕೊಟ್ರೂ ’ಯೇ ಅಣ್ಣ, ಎನಗೆಂತಕೆ ಇಷ್ಟೆಲ್ಲ!!’ ಹೇಳುಗು. ಅದೇ ಅಂದ್ರಾಣಷ್ಟೇ – ಆ ಮೂರೂವರೆ ತುಂಡು ಕೊಟ್ರೆ ಅರೆವಾಶಿ ವಾಪಾಸ್ ಕೊಡುಗು. 😉
ಸಣ್ಣ ಇಪ್ಪಗ ಜಗಳ ಮಾಡಿ ಮಾಡಿ ಬೆಳದು ಈಗ ಜಗಳವೇ ಆಗದ್ದಷ್ಟು ಹತ್ತರೆ ಆಗಿ ಬಿಡ್ತವು, ಮನೆ ಮಕ್ಕೊ. ಅಲ್ದಾ?

ಒಂದೊಪ್ಪ: ಹಂಚುಲೆ ಅರಡಿಯದ್ದವಂಗೆ ಹೊಂದಿಗೊಂಬಲೆ ಅರಡಿಗೋ?

23 thoughts on “ದೊಡ್ಡ ಅರ್ದ ಎನಗೆ: ಅರ್ಗೆಂಟಿನ ಒಪ್ಪಕ್ಕ ಹಣ್ಣು ಹಂಚಿದ ದಿನಂಗೊ. . .

  1. ವಾವ್!!!! ಪಷ್ಟು ಕ್ಲಾಸಾಯಿದು ಒಪ್ಪಣ್ಣಾ… ಒಪ್ಪಣ್ಣ೦ಗೆ ಒಪ್ಪಣ್ಣನೇ ಸಾಟಿ!!!!
    ಇಲ್ಲಿ ಕೂದ೦ಡು ಇದರ ಓದುವಗ ಒ೦ದರಿ ಮನಸ್ಸು ೨೦-೨೨ ವರ್ಷ ಹಿ೦ದ೦ಗೆ ಹೋತು. ಅ೦ಬಗ ಹ೦ಚಿ ತಿ೦ದುಗೊ೦ಡಿದ್ದ ತಮ್ಮ ಈಗ ಇಲ್ಲಿ ಎನ್ನ ರೂಮಿಲ್ಲಿ ಮೋರೆಪೂರ್ತಿ ಹೊದಕ್ಕೆ ಹೊದದು ಮಲುಗಿ ಒರಗುತ್ತಾ ಇದ್ದ.. 🙂
    ಶುದ್ದಿ ಭಾರೀ ಲಾಯ್ಕಿದ್ದು ಒಪ್ಪಣ್ಣಾ.. ಎನ್ನ ಕಣ್ಣಿ೦ಗೆ ಇಷ್ಟರ ವರೇಗುದೆ ಈ ಶುದ್ದಿ ಬಿದ್ದಿದಿಲ್ಲೆನ್ನೇ!!!!

  2. bhaari laayika iddhu lekhana..ottinge baayili nirude banthu..matthe hange chikku hannina chitra thorsi vivarsuvaga niru baaraddhe ikka..
    oppakkana sannadippagana argentu ella gonthathu.. hi..hi..

    dooddadho,sannadho,halasiddho,alla guddhidha jaagedho..enthdho ondhu.. oppakkange sannadippagale elloringu kottu thimba abhyasa itthalla..kushi athu enage..
    oppakkanathre chikku ippaga enagu thappale helekku.. innu enage hengippadhu sikkuttho…..!
    ille oppakkana e josthige laayikaddhe kodugu..

  3. Kumbleya chikkina sesi elyadkalli belethha idda? Adare adara orakku thugule bidada… Hange adaralli hannagi koyvale appaga engala dinugelu appacchi… Marayada.
    -Muliyala Appacchi

  4. ಹ್ಮ್ಮ್. ಕೋಪ ಬಂದಿತ್ತು. ಎಷ್ಟು ಸರಿ ಟೈಪು ಮಾಡಿರೂ ಡಿಲಿಟ್ ಅಪ್ಪದರ ನೋಡಿ.ಆದರೂ ಒಪ್ಪನ್ನಂಗೆ ಕಾಮೆಂಟ್ ಹಾಕದ್ದರೆ ಅಕ್ಕಾ? ಅದಕ್ಕೆ ಇನ್ನೊದು ಒಪ್ಪ ಕೊಡುವ ಮೊದಲು ಹಾಕುವಾ ಹೇಳಿ.
    ಎನಗೆ ಎನ್ನ ತಮ್ಮನೊತ್ಟಿನ್ಗೆ ಆಯಿಕ್ಕೊಂಡಿದ್ದ ಜಗಳ ನೆನಪಾವ್ತು . ದ್ರಾಕ್ಷೆಗೆ ಜೆಗಳ ಮಾಡುದಿದ. ಹಾಂಗಾಗಿ ಅಪ್ಪ ಲೆಕ್ಕ ಹಾಕಿ ಹಂಚುಗು. ಅದರಲ್ಲೂ ಬಡುಕ್ಕೊಂಬದೂ ಇರ್ತಿತ್ತು. ಮತ್ತೆ ಅಪ್ಪನ ಕೈಯ್ಯಿಂದ ಪೊಳಿ ಬಿದ್ದಪ್ಪಾಗ ಕೂಗಿಕೊಂಡು, ಬೇಧ ಮಾಡುದು ಹೇಳಿ ಪರನ್ಚಿಕೊನ್ದೋ ಸುಮ್ಮನಪ್ಪದು. ಕಾಡಿಸಿರೆ ಇನ್ನು ಜೋರು.! ಉರಿಗಿದಾ..ಹಾಂಗಾಗಿ. ಕೇಡ್ಬರಿ ಚೋಕಲೇಟಿನ್ಗೋ ಜೋರು ಜಗಳ ಅದ..ಈಗ ನೆನಪು ಮಾಡಿರೆ ನೆಗೆ ಬತ್ತು. ಈಗ ಕೊಟ್ಟರೂ ಬೇಡ. 'ಇದ. ತೆಕ್ಕೋ.' ಹೇಳಿ ದಾಟುಸುದು, ಇಲ್ಲದ್ರೆ ಯಾರದ್ರೂ ಒಬ್ಬ ಜಾಸ್ತಿಯೇ ಪಾಲು ಕೊಡುಗು . ಆದರೆ ಅಪ್ಪಂಗೆ ಎಷ್ಟು ಅಂದ್ರಣ ಕ್ರಮ ಅಭ್ಯಾಸ ಆಯಿದು ಹೇಳಿರೆ ಸೊಳೆ, ದ್ರಾಕ್ಷೆ ಕೊಡೆಕ್ಕಾರೆ ಇನ್ದಿಂಗೂ ಲೆಕ್ಕ ಹಾಕಿಯೇ ಹಂಚುತ್ತವು..!!!!!

  5. ಎನಗೂ ಎನ್ನ ತಂಗೆ ಸವಿತಾ ಕೆಲವು ಸರ್ತಿ ಈ ಘಟನೆ ಮಾಡಿಗೊಂದಿದೆಯ.ಎಂಥ ಮಾಡುವದು. ಪುಳ್ಲರ ಪಣಿ,,,,,,,,

  6. oh.elyadkkalli innu chikku thimbaga raja aalochane maadekku.neenoo enage haange maaduveya?

  7. ಓದುವಾಗ ತಡವಾತು…. ಭಾರೀ ಲಾಯ್ಕ ಆಯ್ದು …

  8. ಒಪ್ಪಣ್ಣನ ಉತ್ತರ ಭಾರಿ ಲಾಯಕ್ಕಾಯಿದು. ಅವ ಒಂದು ಕಮೆಂಟು ಹಾಕಿದ್ದರಲ್ಲಿ ನಮ್ಮ ಸುಮ್ಮನೆ ಕೂರುಸುತ್ತ, ಅಲ್ಲದೋ… ಹೇಳಿದ ಹಾಂಗೆ ಎನ್ನ ಅಪ್ಪ, ಪುನಾ ಏವಾಗ ಬತ್ತೋ ಶುಕ್ರವಾರ ಹೇಳಿ ಕಾಯ್ತಾ ಇದ್ದವು. ತಪ್ಪುಸಿಕ್ಕೆಡಿ ಆತಾ…

  9. Doddannana makkogappagaru aaa chikkina sesi dodda akko thundinge jagala madule.

  10. @ Ravishankar Doddamani,
    ಏ ದೊಡ್ಡ(ಮಾಣಿ) ಬಾವ, ಹಾಂಗೆಂತೂ ಇಲ್ಲೆನ್ನೆಪ್ಪಾ!
    ಒಪ್ಪಣ್ಣ ಹೇಳುವಗ ಎಲ್ಲಾ ಊರಿನ ಶುದ್ದಿ ಬತ್ತನ್ನೇ! ಸೂರಂಬೈಲು, ಎಡನ್ನಾಡು ಬೈಲು ಮಾಂತ್ರ ಅಲ್ಲ.

    ಒಪ್ಪಣ್ಣಂಗೆ ಕುಂಬ್ಳೆ ನೀರ್ಚಾಲು ಬದಿಯಡ್ಕ – ಪಂಜ ಬೆಳ್ಳಾರೆ ಕಲ್ಮಡ್ಕ ಎಲ್ಲ ಒಂದೇ. ಅಡೂರು, ಮಧೂರು, ಕಾವು, ಕಣ್ಯಾರ ಅಲ್ಲದ್ದೆ ಕಾಸ್ರೋಡು, ನೀಲೇಶ್ವರ, ಕೊಡೆಯಾಲ, ಪಳ್ಳತಡ್ಕ, ವಿಟ್ಳ, ಚೆಂಬರ್ಪು, ಕೋಡಪದವು, ಪುತ್ತೂರು, ಪಂಜ, ಬೆಳ್ತಂಗಡಿ – ಎಲ್ಲ ಬತ್ತನ್ನೇ!. ಇಡೀ ಮಂಗ್ಳೂರು ಹೋಬಳಿ ಶುದ್ದಿ ಹೇಳ್ತ ಒಪ್ಪಣ್ಣ. ಮಾಂತ್ರ ಅಲ್ಲದ್ದೇ ಬೆಂಗ್ಳೂರಿನ ಶುದ್ದಿಯೂ ಬೈಂದು.

    ಸರೀ ಗೊಂತಿಪ್ಪ ನಮ್ಮದೇ ಊರಿನ ಶುದ್ದಿ ಆದರೆ ಕಣ್ಣಿಂಗೆ ಕಟ್ಟಿದ ಹಾಂಗೆ ಹೇಳುಲಕ್ಕು, ಹಾಂಗೆ ನಮ್ಮ ಊರಿಂದು ಸುರುವಿಂಗೆ ಮುಗುಶಿಗೊಂಬ ಹೇಳಿ ರಜ್ಜ ಜಾಸ್ತಿ ಹೇಳಿದ್ದು. 🙂
    ಕೇಳ್ತವ° ಇದ್ದರೆ ಚಂದ್ರ ಲೋಕದ್ದುದೇ ಹೇಳುಗು 😉

    ದೊಡ್ಡಮಾವ° ಒಪ್ಪಣ್ಣಂಗೆ ಪರಂಚದ್ದೆ, ನೋಡಿಗೊಳ್ಳಿ …! ಏ°? 😉

  11. ಚಿಕ್ಕಿನ ಸೆಸಿಯ ಸಂಗತಿ ರಜ ರಜ ಗೊಂತಾಯಿದು ಭಾವ ಎನಗೆ…. ಮನೆಗೆ ಚಿಕ್ಕಿನ ಸೆಸಿ ತಂದ ಸಂಗತಿಯೂ ಒಂದು ಚೂರು ಗೊಂತಾಯಿದು. ನೀನೆ ಹೇಳಿತ್ತಿದ್ದೆ ಅಲ್ದಾ , ಅದರ ಹಿಂದೆ ಒಂದು ದೊಡ್ಡ ಕಥೆ ಇದ್ದು ಹೇಳಿ? ಆ ಕತೆಯ ಬಿಟ್ಟು ಬೇರೆ ಎಲ್ಲಾ ಬರದ್ದೆ ನೀನು. ಹೂಂ…. ತೊಂದರೆ ಇಲ್ಲೇ ಮತ್ತೆ ಯಾವಾಗಾದರೂ ನಿಧಾನಕ್ಕೆ ಹೇಳು ಎನಗೆ ಮಾತ್ರ ಗೊಂತಪ್ಪ ಹಾಂಗೆ, ಗುಟ್ಟಿಲಿ…. ಆತಾ ?
    ನಿಂಗಳ ಮನೆಲಿಯೇ ಕೂದೊಂಡು ಬರೆತ್ತಾ ಇದ್ದೆ ಈಗ…. ನೀನು ಬದಿಯಡ್ಕಕ್ಕೆ ಹೋಇದೆ ಹೇಳಿದವು ಮಾವ, ಎಂಥ ? ಕೆಮ್ಕಕ್ಕೆ ಹೋದ್ದಾ ಹೆಂಗೆ? ಎಷ್ಟು ಸಿಕ್ಕಿತ್ತು ಭಾವ ರೇಟು ? ಯಡ್ಡ್ಯೂರಪ್ಪನ ಗೊರ್ಮೆಂಟು ಅದೆಂತದೋ ಬಂಬಲು ಬಂಬಲು ಹೇಳಿಗೊಂಡಿತ್ತಿದ್ದವು ಭಾವ , ನೀ ಅರ್ಜೆಂಟು ಮಾಡೆದ ಆತೋ?

  12. oppanno, laikaydatoooooooooooo. modalana engala balyada dinangala nenapatu….ajjakana rama anu avanatamma ella ottinge kadle hanchigondittidda aa dinango…..beejabondu kodvaga ningala pretiya pulligeee jasti kodti heli jagala madudu ella nenapathu…………..

  13. ಭಾರೀ ಲಾಯ್ಕ ಆಯ್ದು ಮಹೇಶಣ್ಣ…ಇಶ್ಟು ಲಾಯ್ಕದ ಚಿಕ್ಕಿಂದು ಪಟ ಮಾಂತ್ರವಾ ಅಲ್ಲ ಈ ತಂಗೆಗುದೆ "ದೊಡ್ಡರ್ಧ" ಸಿಕ್ಕುಗೋ?:)

    ಎಶ್ಟು ಖುಶಿ ಇರ್ತಲ್ಲದಾ ಹಾಂಗೆ ಜಗಳ ಮಾಡಿಗೊಂಡು ತಿಂಬಲೆ……??ನಿಜವಾಗಿ,ಚಿಕ್ಕಿಂದ ಜಾಸ್ತಿ ಆ ಹುಸಿಜಗಳಕ್ಕೇ ಕಾವ ಹಾಂಗೆ ಆವ್ತು:)

    ಈಗಾಣ ಸಣ್ಣ ಮಕ್ಕಳ ನೋಡಿರೆ ನಿಜವಾಗಿ 'ಅಯ್ಯೋ' ಅನಿಸುತ್ತು;ಕೆಲವು ಮಕ್ಕೊ mentaly disturb ಆವ್ತವಡ ಅಲ್ಲದಾ ಹೀಂಗೆ ಒಬ್ಬನೇ ಬೆಳದು..??(: ಪಾಪ……
    ಮತ್ತೆ ಇಬ್ರಿದ್ದರುದೆ ಅವು T.V. ರಿಮೋಟಿಂಗೆ ಜಗಳ ಮಾಡುಗಶ್ಟೇ ಬಿಟ್ರೆ ಅವಕ್ಕೆ laysನ ಎದುರೆ ಚಿಕ್ಕು ಎಲ್ಲ ಮೆಚ್ಚುಗೋ?

    so ಅವಕ್ಕೆ ಹಿಡುದು ಮಡುಗಿ ಚೂಂಟಿ ಚೋಲಿ ಎಳಕ್ಕುಸುದರ್ಲಿ , ಮತ್ತೆ 'ಸೋರಿ' ಹೇಳಿ ಮಂಕಾಡ್ಸುದರ್ಲಿ ಎಲ್ಲ ಇಪ್ಪ ಖುಶಿ ಗೊಂತಪ್ಪಲೆ ಚಾನ್ಸೇ ಇಲ್ಲೆ..ಅಲ್ಲದೋ ಒಪ್ಪಣ್ಣಾ…..????????:)

    ನೆಕ್ಸ್ಟ್ ಆರಿಂಗೆ ಬತ್ತಿ ಮಡುಗುಲಿದ್ದು?:)waiting ………………………………..

  14. hmmm chikkina photo nodi onderadu sarthi websitenge bandappaga summane kuude, eega innu comment bareyadde aaga heLi aathu enage, bhari ruchi ikkappa aa chikku, noduvagaLe gonthavthu.

  15. ಹೇಳಿದ ಹಾಂಗೆ ಆ ಪಟಂಗೊ ಭಾರೀ ಲಾಯ್ಕಿದ್ದು…. 😛 😛
    ಎನಗೊಂದರ್ದ ಚಿಕ್ಕು ಸಿಕ್ಕುಗೋ ಅಲ್ಲಿಂದ…. 😛 😛

  16. ಸೂಪ್ಪರ್ ಆಯಿದು….
    ಓದಿಗೊಂಡು ಹೋಪಾಗ ಎನ್ನ ತಂಗೆಯನ್ನುದೇ ನೆಂಪಾತು….ಅದುದೇ ಅಮ್ಮನ ಪಾಲು,ಅಪ್ಪನ ಪಾಲಿನ ಎಲ್ಲ ಮೆಲ್ಲಂಗೆ ಹಾರ್ಸುದು ಗಮ್ಮತ್ತಿರ್ತು…ಮತ್ತೆ ಅಕ್ಕನ ಮಂಕಡ್ಸಿ ತೆಕ್ಕೊಂಬದು ದೊಡ್ಡ ಕೆಲಸವೇ ಅಲ್ಲ ಅದಕ್ಕೆ… 😀
    ಇಷ್ಟಾಗಿಯೂ ತನಗೆ ಸಿಕ್ಕಿದ ಪಾಲಿನ ಚೂರ್ ಚೂರೇ ತಿಂಬದು…ಮತ್ತೆ ಅಕ್ಕಂಗೆ ಆಸೆ ಬರ್ಸುಲೇಳಿ… 🙁
    ಪಾಪದ ಅಣ್ಣ, ಅಕ್ಕಂದ್ರು ಇದ್ದರೆ ಹೀಂಗೇ ಅಲ್ದೋ ಅಂಬಾಗ… 😉

    ಎಷ್ಟೇ ಜಗಳ ಮಾಡಿರೂ ಅಲ್ಲಿಪ್ಪ ಪ್ರೀತಿ ಮಾತ್ರ ಎಂದಿಂಗೂ ಕಮ್ಮಿ ಆಗ, ಜಾಸ್ತಿಯೇ ಅಕ್ಕು ಒಪ್ಪಕ್ಕ ಹೇಳಿದ ಹಾಂಗೆ…
    ಒಳ್ಳೆ ಲೇಖನ….ಪ್ರಸ್ತುತ ಪರಿಸ್ಥಿತಿಯ ಪ್ರತಿಬಿಂಬ..
    ಮುಂದಾಣ ಸೂಪ್ಪರ್ ಶುದ್ದಿಯ ನಿರೀಕ್ಷೆಲಿ….

  17. ಭಟ್ರೆ , ಲಾಯಿಕಾತ್ನ್ ಯೇ ಬರೆತ್ನಾವು.

    ಈ ಸರ್ತಿಯ ಲೇಖನ ಓದಿ ಎನ್ನ ತಮ್ಮನೊಟ್ಟಿಂಗೆ ಜಗಳ ಮಾಡಿಯೊಂದಿದ್ದದ್ದು ನೆಂಪಾತು.

  18. ಹೇ ಹೇ ಪಾಲು ಮಾಡುದು ಗಮ್ಮತ್ತಿನ ವಿಷಯವೇ..
    ಆದರೂ ಹಳೆ ಕಾಲದೋರತ್ರೆ ಕೇಳಿರೆ ಮನೆ ತುಂಬಾ ಮಕ್ಕೋ ಇಪ್ಪ ಗಮ್ಮತ್ತೇ ಈಗಾನ ಮಕ್ಕೊಗೆ ಗೊಂತಿಲ್ಲೆ ಹೇಳ್ತವು ..
    ಮಕ್ಕೋ ಸಾಲಿಂಗೆ ನೆಲಲ್ಲಿ ಕೂದು ಉಂಬ ಕಥೆಯೇ ಇಲ್ಲೆ ಈಗ ಹೇಳ್ತವು ..ಈಗಣವು ಎರಡು,ಮೂರು ಜನ ಇಲ್ಲದ್ರೆ ಜಗಳಕ್ಕೆ ಜನ ಇಲ್ಲೆ ಹೇಳ್ತವು. . ಇನ್ನಣವು ಎಂತ ಹೇಳ್ತಾವೋ ಗೊಂತಿಲ್ಲೇ …ಅವು ಅವರ ಕಾಲಕ್ಕೆ ಸರಿ ಒಬ್ಬೊಬ್ಬನೇ ಇಪ್ಪದು ಒಳ್ಳೇದು ..ಇದುವೇ ಸುಖ ಹೇಳುಗು ಕಾಣ್ತು..
    ಎಲ್ಲ ಕಾಲಕ್ಕೆ ಸರಿ ಕೋಲ ಅಲ್ದೋ..!!!

  19. ಒಪ್ಪಣ್ಣನ ಕಥೆಗೊ ಎಲ್ಲ ಎಂಗಳ ಸೂರಂಬೈಲು, ಎಡನ್ನಾಡು ಬಯಲಿಲ್ಲೇ ಎಂತಕೆ ಸುತ್ತುತ್ತಾ ಇಪ್ಪದು ಹೇಳಿ ಕೇಳ್ತವು ಅಪ್ಪ. ಅಪ್ಪಂಗೆ ಕಂಪ್ಯೂಟರು ಎಲ್ಲ ಬತ್ತಿಲ್ಲೆ. ಪ್ರತೀ ಶುಕ್ರವಾರ ಆನು ಇದರ ಹೊತ್ತೊಂಡು ಹೋಪದು ಮನೆಗೆ. ಅಪ್ಪ ಭಾರೀ ಆಸಕ್ತಿಲಿ ಕೇಳ್ತವು. ಓದುಲೆ ಭಾರೀ ಖುಷಿ ಆವುತ್ತು, ಎನಗೂ… ಅಪ್ಪಂಗೂ…ಬಹುಶಃ ಎಲ್ಲೋರಿಂಗೂ. ಕೀಪ್ ಇಟ್ ಅಪ್… ಆಗದಾ…?

  20. ಭಾರೀ ಲಾಯ್ಕಿದ್ದು……ಇಂಥ topic ಇಕ್ಕು ಹೇಳಿ ಗ್ರೆಶಿದ್ದೆ ಇಲ್ಲೇ ……
    ನೆಗೆ ಮಾಡಿ ಸಾಕಾತು….
    ಚಿಕ್ಕಿನ ಅಮ್ಮಂಗೆ ಕೊಟ್ರೆ ಅದರ ಒಪ್ಪಣ್ಣನ್ಗೆ ಕೊಡ್ತು ಹೇಳಿ ಒಪ್ಪಕ್ಕಂಗೂ ಗೊಂತಿದ್ದು ಅತೋ???????? ಅದಕ್ಕೆ ಅಮ್ಮನ ಕೈಗೆ ಎತ್ತುತ್ತೆ ಇಲ್ಲೇ …. ಅಂಬಗ ಎನಗೆ ಹೊಟ್ಟೆ ಉರಿವಲೂ ಇಲ್ಲೆನ್ನೇ ….. !!!!!!!!!!!
    ರಜ ದೊಡ್ಡ ಆದ ಮೇಲೆ ಪೇರಲೆಯ ೩ ಪಾಲು ಮಾಡಿದ್ದು ನೆಂಪಿದ್ದ?????? ಅಂಬಗ ಜಗಳ ಎಂಥ ಆಯ್ದಿಲ್ಲೆ ಆದರೆ ಎನಗೆ ಮೂರು ಪಾಲು ಮಾಡುದು ಹೇಂಗೆ ಹೇಳಿಯೇ ಅರ್ಥ ಆಗಿತ್ತಿಲ್ಲೆ … ಎನಗೆ ಆ 1/3 concept ಅರ್ಥವೇ ಆಗ … ನೀನುದೆ ಅಣ್ಣನುದೆ ಸುಮಾರು ಸರ್ತಿ ಹೇಳಿ ಹೇಳಿ ಅಂತೂ ಅರ್ಥ ಆತು …. ಆದರೂ ತುಂಡು ಮಾಡುವಾಗ ಮೊದಲಾಣ ಹಾಂಗೆ …..
    ಅದರ್ಲಿಯುದೆ ದೊಡ್ಡ 'ಅರ್ಧ' ಎನಗೆ ಸಿಕ್ಕಿದ್ದು ,ಹದಾದ್ದು ದೊಡ್ಡಣ್ಣನ್ಗೆ , ಸಣ್ಣದು ನಿನಗೆ …… ಜಗಳ ಅಗದ್ರು ಎನಗೆ ದೊಡ್ಡ ತುಂಡು ಸಿಕ್ಕಿರೆ ರುಚಿ ಜಾಸ್ತಿ …. ಹ್ಹೆ ಹ್ಹೆ …..
    ಈಗ ಎಷ್ಟು ದೊಡ್ಡ ಚಿಕ್ಕು ಆದರೂ,ಪೇರಳೆ ಆದರೂ ಸರೀ ಪಾಲು ಮಾಡುಲೆ ಬತ್ತು ಆತೋ????????? 😉
    ಎಷ್ಟು ಜಗಳ ಆಗಲೀ ಕೋಪ ಆಗಲೀ ನಮ್ಮಲ್ಲಿ ಪ್ರೀತಿ ರಜವೂ ಕಮ್ಮಿ ಆಯ್ದಿಲ್ಲೆ… ಆವ್ತೂ ಇಲ್ಲೇ .. ಜಾಸ್ತಿಯೇ ಆವ್ತು ….
    ನಿಜವಾಗಿಯೂ ಆನು ಪುಣ್ಯ ಮಾಡಿದ್ದೆ ಈ ಮನೇಲಿ ಹುಟ್ಟುಲೇ , ಅದೂ ಸಣ್ಣವಳಾಗಿ…..
    ಇನ್ನಾಣ ವಾರ ಎಂತದಪ್ಪಾ ???????????????? ಕಾದೊಂಡಿರ್ತೆ….

  21. ha ha ha bhaaaaaaaaari laaaykidu barada lEkhana, barada suddi ellavude.
    Hmmmmmm chikkina ashtu vivarsuvaga rajja bekathanne thimbale hELi aathu. Aashe haakide heLi gresheda, anthe heLiddashte…
    SaNNa ippaga engaLuu hange jagaLa maadi beLaddu, eega adella nempappadu ella kaNNinge kattitthu.
    Aanu, thange, thamma, appacchi makko thumbu samsaaralli beLavaga hange ellavannu hanchi thindadu, aanu enage kottadara bega mugushi baakiyavarathre oongiyoniddadu, avu "matthe enthage ashtu bega thimbadu?" heLi paranchiruu kottondiddadu ella nampaathu.
    EegaNa kaalalli obbobba makko ippadu avakke antha avakaasha miss appadu ella sariye…
    Ottare bhari laykaayidu OppaNNa…
    Oppakka nge ee lEkhana odi negeyo, naachike yo akkallada?…. hangenu madeda kuse, adella ipapde life li, engaLuu hange aagiye beLaddu…OppaNna nge eshtu preethi nodu, thangeya nempu maadi lEkhanave barada…OPPANNA ava….
    InnaaNa lEkhanakke kaayva kelsa innu enage….

  22. indrana topic laikiddu.jagala madidaru hachhiyondu timba buddi iddanne oppannangu oppakkangu.ade mechhekkada vishaya.doddanna silent.hange tinda chikkuagali inyavude timba vastuve aagali adakke ruchi jasti allada oppanna.ondoppa noorakke nooru satya.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×