Oppanna.com

ಗುರುವಿನಾನುಗ್ರಹವೆ ಒಲುದರೆ ಕಾರ್ಯ ಸಿದ್ಧಿಸುಗು..!

ಬರದೋರು :   ಒಪ್ಪಣ್ಣ    on   17/05/2013    7 ಒಪ್ಪಂಗೊ

ಒಂದು ಹೊಡೆಲಿ ಶಂಕರ ಜಯಂತಿ ಅಂಬೆರ್ಪು; ಇನ್ನೊಂದು ಹೊಡೆಲಿ ದೊಡ್ಡಮಾಣಿಲಿ ಕುಂಞಿಮಾಣಿಯ ಉಪ್ನಾನದ ಅಂಬೆರ್ಪು, ಮತ್ತೊಂದು ಹೊಡೆಲಿ ಟೀಕೆಬಾವನ ಉಪ್ನಾನದ ಅಂಬೆರ್ಪು, ಮತ್ತೊಂದು ಹೊಡೆಲಿ ಪಂಚಮಾರಿಷ್ಟದ ಅಂಬೆರ್ಪು, ಅಡಿಗೆ ಸತ್ಯಣ್ಣನ ಮಗಳಿಂಗೆ ಕೋಲೇಜಿನ ಅಂಬೆರ್ಪು – ಎಲ್ಲವನ್ನೂ ಮುಗುಶಿಗೊಂಡು ಚಾವಡಿಯೋರು ರಜ ಉಸುಲು ತೆಕ್ಕೊಂಬ ಹೇದು ಕೂದರೆ.. ಪುತ್ತೂರು ಬ್ರಹ್ಮಕಲಶ ತೆಯಾರಾಗಿ ಬಂತಿದಾ.
ಇದರಿಂದ ಮದಲೇ ಪುತ್ತೂರು ಮಾಲಿಂಗೇಶ್ವರನ ಶುದ್ದಿ ಹಲವು ಸರ್ತಿ ಮಾತಾಡಿದ್ದು ನಾವು.
ಜಾತ್ರೆಯ ಹತ್ತೂ ದಿನ ಹೇಂಗೆ ವೈವಿಧ್ಯಂದ ಕೂಡಿರ್ತು ಹೇಳ್ತರಿಂದ ತೊಡಗಿ, ಮಾಲಿಂಗೇಶ್ವರಂಗೆ ಬೈಲಿನೋರು ಸೇರಿ ಕರಸೇವೆ ಮಾಡಿದ ಸಂದರ್ಭ, ಬ್ರಹ್ಮಕಲಶದ ತಯಾರಿ – ಎಲ್ಲವನ್ನೂ ನಾವು ಮಾತಾಡಿಗೊಂಡಿದು.
ಈಗ ಆ ಗೌಜಿ ಬಂತೇ ಬಂತು, ಬ್ರಹ್ಮಕಲಶೋತ್ಸವ..!
~

ನಾವು ಉಪಾಯಲ್ಲಿ ಬ್ರಮ್ಮಕಲಶ ಹೇದರೂ, ಕುಂಟಾರು ತಂತ್ರಿಗೊ ಅದರ “ನವೀಕರಣ ಬ್ರಹ್ಮಕಲಶೋತ್ಸವ” ಹೇಳುಗು.
ಹೇದರೆ, ದೇವಸ್ಥಾನ ಪುನರ್ ಸೃಷ್ಠಿ ಆಗಿ ಶುದ್ಧಕಲಶ ಆಗಿ ಬ್ರಹ್ಮಕಲಶ ಮಾಡಿ ದೇವರಿಂಗೆ ಎರೆಸ್ಸು.
ಸಂಪೂರ್ಣವಾಗಿ ರಚಿತವಾದ ದೇವಸ್ಥಾನವ ಶಾಸ್ತ್ರೀಯವಾಗಿ ಮುರುದು, ತೆಗದು, ಕ್ರಮಪ್ರಕಾರ ಮತ್ತೊಂದರಿ ಹಾಂಗೇ ಕಟ್ಟಿ ದೇವರ ಕೂರ್ಸುತ್ತ ಕಾರ್ಯ.

ದೇವಸ್ಥಾನದ ರಚನೆಗೆ ಬೇಕಾದ ಮರಮಟ್ಟು-ಹೊಸದಾದ ಪರಿಕರಂಗಳ ಮದಾಲು ಜೋಡಣೆ ಮಾಡುಸ್ಸಡ. ಅದಾದ ಮತ್ತೆಯೇ ಮುರಿಯಲೆ ಸುರುಮಾಡುದಾಡ.
ತಾಮ್ರದ ಹೊದಕ್ಕೆ ತುಂಬಿದ ಮರದ ಮಾಡು, ಗಜಪೃಷ್ಠ ಆಯದ ದಪ್ಪ ಗೋಡೆ, ಅದರ ಕಲ್ಲುಗೊ, ಗೋಪುರ, ಅಡಿಯಾಣ ಮಣ್ಣು – ಎಲ್ಲವನ್ನೂ ತೆಗದು ದೂ-ರಕ್ಕೆ ಸಾಗುಸುತ್ತು ಎರಡ್ಣೇ ಕೆಲಸ.
ಕೊನೆಗೆ, ಅದಾಗಲೇ ಸಿದ್ಧಮಾಡಿ ಮಡಗಿದ ಹೊಸತ್ತರ ಜೋಡಣೆ ಮಾಡುಸ್ಸು – ಮೂರ್ನೇ ಕೆಲಸ.
ಈಗಾಣ ಜೆನ ಸಿಕ್ಕದ್ದ ಕಾಲಲ್ಲಿ ಒಂದು ಕೊಟ್ಟಗೆ ಮುರಿವಲೇ ರಂಗಮಾವಂಗೆ ಒಂದು ವಾರ ಬೇಕು, ಅಷ್ಟರಲ್ಲಿ ಪುತ್ತೂರಿನ ಹಾಂಗಿರ್ತ ದೇವಸ್ಥಾನವ ಮುರಿಸ್ಸು ಸುಲಬವೋ?
ಎಷ್ಟು ಸಮೆಯ ಬೇಕು? ಮುರುದ ಮತ್ತೆ ಜೋಡಣೆಗೆ ಇನ್ನೆಷ್ಟು ಸಮೆಯ ಬೇಕು? ಜಾಸ್ತಿ ಬೇಡ ಇದಾ! ಅದುವೇ ಇಂದ್ರಾಣ ಶುದ್ದಿ.

ಪುತ್ತೂರಿನ ಹಾಂಗಿರ್ತ ಪುತ್ತೂರು ದೇವಸ್ಥಾನವ ಮುರುದು, ಸಂಪೂರ್ಣ ನವೀಕರುಸಿ, ಮೊದಲಾಣ ಹಾಂಗೇ ಚೆಂದಕೆ ಕಟ್ಟುತ್ತ ಕಾರ್ಯಕ್ಕೆ ತೆಕ್ಕೊಂಡದು ಬರೇ ಹತ್ತು ತಿಂಗಳು!
ಕಳುದೊರಿಶದ ಜಾತ್ರೆ ಆದ ಮತ್ತೆ ಜೋಯಿಶಜ್ಜ ಕೂದು ಅಷ್ಟಮಂಗಲ ಮಡಗಿ ದಿನ ನೋಡಿದ್ದು. ಒಂದಿನ ಆಚಾರಿಗೊ ಬಂದು ಮುರಿಯಲೆ ಸುರುಮಾಡಿದವು; ಅಲ್ಲಿಂದ ಕಾರ್ಯ ಸುರು ಆತು.
ಅಲ್ಲಿಂದ ಮತ್ತೆ ದಿನಾಗುಳೂ ಇಪ್ಪತ್ತನಾಕು ಗಂಟೆ ಹೇಳ್ತಾಂಗೆ ಕಾರ್ಯ ಸಾಗಿತ್ತಾಡ. ಅದರ್ಲಿ ರೈಸಿದ್ದು “ಕರಸೇವೆ” ಹೇಳ್ತ ಹೊಸನಮುನೆಯ ಯೋಚನೆ.
ಊರೂರಿನ ಹಲವು ಸಂಘಟನೆಯೋರು ಬಂದು, ಒಟ್ಟಾಗಿ ಮಹಾಲಿಂಗೇಶ್ವರನ ಸನ್ನಿಧಿಲಿ ಎಂತ ಕೆಲಸ ಆಯೇಕೋ – ಅದರ ಮಾಡುಸ್ಸು.
ಉದಿಯಾಂದ ಹೊತ್ತೋಪಗ ಒರೆಂಗೆ ಕೆಲಸ ಮಾಡಿ – ಇದೆಲ್ಲವೂ ಮಾಲಿಂಗೇಶ್ವರಂಗೆ ಅರ್ಪಣೆ ಹೇದು ಅಡ್ಡಬೀಳುಸ್ಸು ಒಂದು.
ಈ ಸೇವೆ ಒಂದರಿಮಾಡಿದೋನು ಇನ್ನೊಂದರಿಂಗೆ ಅವನ ಪೈಕಿಯೋರನ್ನೂ ಪ್ರೇರೇಪಣೆ ಮಾಡಿ ಎಲ್ಲೋರನ್ನೂ ಬರುಸುತ್ತ ಹೇಳ್ತದು ಇನ್ನೊಂದು.
ಅಷ್ಟಪ್ಪಗ ಸಂಘಟನೆಯೂ ಬೆಳದತ್ತು, ಕೆಲಸವೂ ಸಾಗಿತ್ತು – ಇದು ಮಹಾಲಿಂಗೇಶ್ವರನ ಮಹಿಮೆ!

ಇಷ್ಟು ಜೆನರ ಒಟ್ಟುಸೇರ್ಸಿ ಬೇಕಾದ ಹಾಂಗೆ ಕೆಲಸ ಸಾಗುಸಿಗೊಂಡು ಹೋವುಸ್ಸು ಆ ಮಹಾಲಿಂಗೇಶ್ವರನ ಗುರುತ್ವ ಶೆಗ್ತಿಗೆ ಸಾಕ್ಷಿ ಅಲ್ಲದೋ?
ಅದಿರಳಿ, ತತ್ಸಂಬಂಧವಾದ ಎಲ್ಲಾ ಕೆಲಸಂಗೊ – ಮಣ್ಣಿಂದು, ಕಲ್ಲಿಂದು, ತಾಮ್ರದ್ದು, ಸಿಮೆಂಟಿಂದು, ಗರುಡಗಂಬದ್ದು, ಲೈಟಿಂದು, – ಎಲ್ಲಾ ಕೆಲಸ ಪರಿಪೂರ್ಣವಾಗಿ ಸಾಗಿ ಮೊನ್ನೆ ಬ್ರಹ್ಮಕಲಶಕ್ಕಪ್ಪಗ ಸರ್ವಾನುಸುಂದರವಾಗಿ ಎದ್ದು ನಿಂದಿದು ಮಾಲಿಂಗೇಶ್ವರನ ಹೊಸ ದೇವಸ್ಥಾನ. ಇದಕ್ಕೆ ಕಾರಣ ಅವನ ಶಿಷ್ಯರ ಒಟ್ಟುಸೇರ್ಸಿ ಕೆಲಸ ಮಾಡುಸಿದ ಆ ಪ್ರೇರೇಪಣೆಯೇ.
ಮೊನ್ನೆ ಐನ್ನೇ ತಾರೀಕಿಂಗೆ ಸುರು ಆಗಿ, ಹದ್ನಾರ್ನೇ ತಾರೀಕು ಮುಟ್ಟ ಬ್ರಹ್ಮಕಲಶವೂ, ಅದರಿಂದ ಮತ್ತೆ ಹದ್ನೇಳ್ರಿಂದ ತೊಡಗಿ ಇಪ್ಪತ್ತೊಂದರ ಒರೆಂಗೆ ಜಾತ್ರೆ. ಹಾಂಗೆ, ಹತ್ತಿಪ್ಪತ್ತು ದಿನ ಪುತ್ತೂರಿಂಗೆ ಪುತ್ತೂರೇ ರೈಸುತ್ತು.
ಲಕ್ಷಗಟ್ಳೆ ಜೆನರ ವೆವಸ್ತೆ, ಕೋಟಿಗಟ್ಳೆ ಸಂಗ್ರಹ ಆಗಿ ಆಯೇಕಾದ ಕಾರ್ಯ ಅಲ್ಲದೋ ಅದು; ಕಾರ್ಯಕರ್ತರೇ ಮಾಡಿದ ಗೌಜಿ. ಅಲ್ಲ, ಕಾರ್ಯಕರ್ತರಿಂಗೆ ಗುರುಅನುಗ್ರಹ ಕೊಟ್ಟು, ಆ ಮೂಲಕ ಮಹಾಲಿಂಗೇಶ್ವರನೇ ಮಾಡುಸುವ ಗೌಜಿ.
~

ಸರ್ವ ಸುಂದರ, ನವನವೀನ ಪುತ್ತೂರು ಕ್ಷೇತ್ರ!
ಸರ್ವ ಸುಂದರ, ನವನವೀನ ಪುತ್ತೂರು ಕ್ಷೇತ್ರ!

ಕಳುದೊರಿಶ ಗುರಿಕ್ಕಾರ್ರು ಸಿಕ್ಕಿಪ್ಪಗ ಒಂದು ಶುದ್ದಿ ಹೇಳಿತ್ತಿದ್ದವು.
ಬಪ್ಪೊರಿಶದ ಚಾತುರ್ಮಾಸ್ಯ ನಮ್ಮ ಊರಿಲೇ ಅಪ್ಪ ಅಂದಾಜಿದ್ದು ಒಪ್ಪಣ್ಣೋ – ಮಾಣಿ ಮಠಲ್ಲಿ; ಆದರೆ ಈಗ ಇಪ್ಪ ವೆವಸ್ಥೆ ಸಾಕಾಗ ಹೇಳ್ತ ಊರೋರ ಅಭಿಪ್ರಾಯಲ್ಲಿ ಹೊಸತ್ತೊಂದು ಕಟ್ಟೋಣ ಅಪ್ಪಲಿದ್ದು” ಹೇದು. ಹೊಸ ಕಟ್ಟೋಣವೋ? ಆಗಲಿ, ಒಳ್ಳೆದೇ ಆತು. ಆದರೆ ಬಪ್ಪ ಚಾತುರ್ಮಾಸ್ಯಕ್ಕೆ ಇನ್ನೆಷ್ಟು ಪುರುಸೊತ್ತಿದ್ದು? ಹೇದರೆ ಇನ್ನು ಏಳು ತಿಂಗಳೂ ಇರ; ಅದರ್ಲಿ ಒಂದು ಹೊಸ ಕೆಲಸ ಮಾಡಿ ಮುಗುಶುದೋ? ಅದೂ- ಚಾತುರ್ಮಾಸ್ಯಕ್ಕೆ ಬೇಕಪ್ಪ ವೆವಸ್ಥೆ ದೊಡ್ಡ ಮಟ್ಟಿಂದು?!
ಕಣ್ಣೋಣ ಸಣ್ಣ ಮಟ್ಟಿಂದೋ – ದೊಡ್ಡದೋ ಕೇಟೆ.
“ದೊಡ್ಡದೇ ಇದಾ, ಇಂತಿಷ್ಟು ಚದರ ಅಡಿ, ಮೂರು ಮಾಳಿಗೆ, ಸಭಾ ಮಂದಿರ, ವಾಸ್ತವ್ಯ ಎಲ್ಲವೂ ಅಪ್ಪ ಹಾಂಗೆ – ದೊಡ್ಡ ನಮುನೆದು” – ಹೇಳಿದವು.
ಅಷ್ಟು ಬೇಗ ಆಗೆಡದೋ, ಪುತ್ತೂರು ದೇವಸ್ಥಾನದ ಹಾಂಗೆ – ಕೇಟೆ.
“ಅಪ್ಪಪ್ಪು, ಗುರುಬಲ ಇದ್ದರೆ ಎಡಿಯದ್ದಿದ್ದೋ ಒಪ್ಪಣ್ಣಾ?” ಹೇದವು.

ಈಗ ನೋಡಿರೆ, ಹಾಂಗೇ ಆತುದೇ.
ಗುರುಗಳ ಅನುಮತಿ ತೆಕ್ಕೊಂಡು ಕೆಲಸ ಸುರುಮಾಡುವಗಳೇ – ಸಭಾಮಂದಿರಕ್ಕೆ ಬೇಕಾದ ಧನಸಂಗ್ರಹಣೆ, ಸಂಪತ್ತು ಕ್ರೋಢೀಕರಣ, ಸಿಮೆಂಟು, ಜಲ್ಲಿ, ಕಲ್ಲು, ಅದ ಇದು – ಎಲ್ಲವುದೇ ಬಂದು ಬಿದ್ದತ್ತಾಡ; ಗುರುಗಳ ಪಾದಕ್ಕೆ ಶಿಷ್ಯರು ಬಂದು ಬೀಳ್ತ ನಮುನೆಲಿ! ಕೆಲಸವೂ ಹಾಂಗೇ – ಒಳ್ಳೆ ಬಲಲ್ಲಿ ಸಾಗಿತ್ತುದೇ.
ನೋಡ್ತಾ ನೋಡ್ತಾ, ಪಿಲ್ಲರು ಕಂಬಂಗೊ, ಟಯರೀಸಿಂಗೆ ಇರ್ತ ಹಲಗೆಗೊ ಎಲ್ಲ ಎದ್ದತ್ತು, ಒಂದು ಹಂತ ಆತು, ಇನ್ನೊಂದು ಹಂತ ಆತು.
ಇಂಜಿನಿಯರುಗೊ, ಕೆಲಸದವು, ಹೇದು ಬೇಧ ಇಲ್ಲದ್ದೆ ಎಲ್ಲೋರುದೇ ಗುರುಸೇವೆಲಿ ತೊಡಗುಸಿಗೊಂಡಿದವಾಡ, ಕಾಡೂರ ಭಾವ ಮೊನ್ನೆ ಹೇಳಿದವು.
ಈಗ ಭಾನ್ಕುಳಿಲಿ ಶಂಕರ ಪಂಚಮಿ ಗವುಜಿ ಇದ್ದನ್ನೇ, ಅದು ಕಳಿಶಿಗೊಂಡು ಗುರುಗೊ ಸೀತ ಮಾಣಿಮಠಕ್ಕೇ ಬಪ್ಪದಾಡ.
ಈ ಸಭಾಮಂದಿರವ ಲೋಕಾರ್ಪಣೆ ಮಾಡುಸ್ಸು!

ಎಷ್ಟೇ ಬಂಙದ ಕಾರ್ಯ ಆಗಲಿ, ಎಷ್ಟೇ ಕೋಟಿಗಟ್ಳೆಯ ವೆವಸ್ಥೆ ಆಗಲಿ, ಗುರು ಅನುಗ್ರಹ ಇದ್ದರೆ ನೆಡದೇ ನೆಡೆತ್ತು ಹೇಳ್ತದಕ್ಕೆ ಇದುದೇ ಪ್ರತ್ಯಕ್ಷ ಸಾಕ್ಷಿ – ಹೇದು ಗುರಿಕ್ಕಾರ್ರು ಮೊನ್ನೆ ಸಿಕ್ಕಿ ಪುನಾ ನೆಂಪುಮಾಡಿದವು.
~
ಇದೆಲ್ಲ ಮಾತಾಡುವಾಗ ರಾಮಸೇವಕರು ಲಂಕೆಗೆ ಸಂಕ ಕಟ್ಟಿದ ಶುದ್ದಿ ನೆಂಪಪ್ಪಲಿದ್ದು.
ಸೀತೆ ಲಂಕೆಲಿದ್ದು ಹೇಳ್ತದು ಗೊಂತಪ್ಪದ್ದೇ, ಅಲ್ಲಿಗೆ ಹೋಗಿ ಯುದ್ಧ ಮಾಡೇಕು. ಹೋಯೇಕಾರೆ ಭರತ ಖಂಡಂದ ದಾರಿ ಹೇಂಗೆ?
ಸಮುದ್ರವೇ ಇಪ್ಪದಿದಾ. ಯೆತಾರ್ತಲ್ಲಿ ರಾಮಂಗೆ ಸಂಕದ ಅಗತ್ಯ ಇಲ್ಲದ್ದರೂ, ಅವನ ಸೇವಕರಿಂಗೆ ಬೇಕಾವುತ್ತು ಅಲ್ಲದೋ! ಹಾಂಗಾಗಿ ಸಂಕ ಕಟ್ಳೆ ಸುರುಮಾಡಿದ್ದು.
ಸಂಕ ಕಟ್ಳೆ ತೀರ್ಮಾನ ಆದ್ಸು ಎಲ್ಲಿ? ಸಮುದ್ರದ ಕರೆಲಿ. “ನಿಂಗಳ ರಾಮ ಯೇವ ಸೀಮೆಯ ಇಂಜಿನಿಯರು” ಹೇದು ಕರುಣಾನಿಧಿ ಕೇಳಿದ್ದಾಡ; ಅಲ್ಲದ್ದರುದೇ – ಅವ ಇಂಜಿನಿಯರೇ ಅಲ್ಲ. ಇಂಜಿನಿಯರು ಆಗಿದ್ದಿದ್ದರೆ ಪೇಪರು ಪೆನ್ನು, ಕೈವಾರ, ಪ್ಲೇನು – ಎಲ್ಲ ಬೇಕಾವುತ್ತು. ಇವಂಗೆ ಅದೇವದೂ ಬೇಡ- ಸಂಕಲ್ಪ ಮಾಂತ್ರ ಸಾಕಾವುತ್ತು!
ಇಂಜಿನಿಯರಿಂದಲೂ ಮೇಗೆ ಆ ದೇವರು ಹೇದು ಕರುಣಾನಿಧಿಯ ಕನ್ನಡ್ಕಕ್ಕೆ ಕಾಣ್ತಿಲ್ಲೆ ಇದಾ! ಅದಿರಳಿ.

ಸಂಕದ ಕೆಲಸ ಸುರು ಆತು. ಕರಸೇವಕರು ಎಂತೋರು? ಮಂಗಂಗೊ. ನೇರ್ಪಕ್ಕೆ ಬೊಂಡ ಚೊಲ್ಲುಲೂ ಅರಾಡಿಯದ್ದೋರು ಅಲ್ಲಿ ಸಂಕ ಕಟ್ಳೆ ಹೆರಟದಾಡ!
ಮರದ ತುಂಡು, ಬಳ್ಳಿ, ಪೋರೋಟು, ಹಲಗೆ – ಇತ್ಯಾದಿಗೊ ಇದ್ದೋ? ಅದೂ ಇಲ್ಲೆ. ಬರೇ ಕಲ್ಲುಗೊ ಸಿಕ್ಕುಗಷ್ಟೇ. ಪ್ರತಿ ಕಲ್ಲಿನ ಮೇಗೆಯೂ “ಶ್ರೀರಾಮ”ನಾಮವ ಬರದತ್ತು, ನೀರಿಂಗೆ ಇಡ್ಕಿತ್ತು. ಎಂತ ಪವಾಡವೋ, ಕಲ್ಲುಗೊ ನೀರಿಲಿ ಮುಳುಗುತ್ತ ಬದಲು ತೇಲಿ ದಾರಿಮಾಡಿಗೊಂಡಿತ್ತವು!
ಮಂಗಂಗಳ ಕಾರ್ಯಕ್ಕೆ ಗುರುಬಲ ಇದ್ದತ್ತು. ಶ್ರೀರಾಮನೇ ಆ ಕಾರ್ಯಕ್ಕೆ ಗುರು. ಗುರುಬಲ ಇದ್ದ ಕಾರಣವೇ ಭರತಖಂಡಂದ ಲಂಕೆಗೆ ಸಂಕ ಆತು, ಸೀತೆಯ ತಂದೂ ಆತು.
ಗುರು ಅನುಗ್ರಹಂದಾಗಿ ಅಸಾಧ್ಯಕಾರ್ಯ ಅತಿವೇಗಲ್ಲಿ ಆದ್ಸಕ್ಕೆ ಪೌರಾಣಿಕ ನಿದರ್ಶನ ಆಡ ಇದು, ಅಂದೊಂದರಿ ರಾಮಕಥೆಲಿ ಗುರುಗೊ ಹೇಳಿತ್ತಿದ್ದವು.
~

ಶಿವಗುರು-ಆರ್ಯಾಂಬೆಯ ಮಗ ಶಂಕರ ಸಣ್ಣ ಇಪ್ಪಾಗಳೇ “ಅಸಾಧಾರಣ” ವೆಗ್ತಿತ್ವ ಹೇಳ್ತದು ಅವರ ಅಪ್ಪಮ್ಮಂಗೆ ಗೊಂತಾಯಿದು.
ಅದರೊಟ್ಟಿಂಗೇ – ಆಯುಷ್ಯ ಕಮ್ಮಿ ಹೇಳ್ತದೂ ಅರಡಿಗಾಯಿದು!
ಹಾಂಗಾಗಿ, ಐದನೇ ಒರಿಶಕ್ಕೇ ಉಪ್ನಾನ ಮಾಡ್ತ ಏರ್ಪಾಡುದೇ ಆತು. ಗ್ರೇಶಿದ ಹಾಂಗೇ ಐದೊರಿಶಲ್ಲಿ ಉಪ್ನಾನ ಕಳಾತು.
ಉಪ್ನಾನ ಆದ ಮತ್ತೆಂತರ – ಬ್ರಹ್ಮಚರ್ಯ, ವಿದ್ಯಾರ್ಜನೆ. ವಿದ್ಯಾಭ್ಯಾಸವೂ ಆತು.

ನಮ್ಮ ಭಟ್ಟಮಾವ ಕುಂಭಕೋಣಕ್ಕೆ ಹೋಗಿ ಮಂತ್ರ ಕಲ್ತುಗೊಂಡು ಬಯಿಂದವಲ್ಲದೋ? – ಹನ್ನೆರಡೊರಿಶ ಕೂದು ಕಲ್ತು ಯಜುರ್ವೇದ ಘನಾಂತ ಮಾಡುಸಿಗೊಂಡು ಬಂದವು.
ಹೇದರೆ – ಒಂದು ವೇದಕ್ಕೇ ಹನ್ನೆರಡೊರಿಶ.
ಅದೂ – ಆ ವೇದವ ಬಾಯಿಪಾಟ ಹೇಳುಲೆ ಮಾಂತ್ರ!
ಅದರ ಗೂಡಾರ್ಥ; ಒಳಾರ್ಥ; ಟೀಕೆ; ವಿವರಣೆ – ಇತ್ಯಾದಿಗೊ ಕಲಿತ್ತರೆ ಒಂದು ಜೀವಮಾನವೇ ಬೇಕೋ ಏನೋ!

ಶಂಕರಂಗೆ ಹಾಂಗಲ್ಲ; ಸ್ವತಃ ಗುರು ಆದ ಆ ಶಿವನ ಅನುಗ್ರಹ ಇತ್ತಲ್ಲದೋ; ವಿದ್ಯಾರ್ಜನೆ ಭಾರೀ ವೇಗಲ್ಲಿ ಆತು.
ಎಂಥಾ ವೇಗ?

  • ಐದ್ನೇ ವರ್ಷಲ್ಲಿ ಋಗ್ವೇದ ಪಕ್ವ,
  • ಆರ್ನೇ ಒರಿಶಲ್ಲಿ ಯಜುರ್ವೇದ,
  • ಏಳ್ನೇ ಒರಿಶಲ್ಲಿ ಸಾಮ,
  • ಎಂಟನೇ ಒರಿಶಲ್ಲಿ ಅಥರ್ವ!!

ಹು! ಎಂಟೊರಿಶದ ಮಾಣಿ.
ಈಗಾಣ ಮಕ್ಕೊ ಕೀಟ್ಳೆ, ಲೂಟಿ, ಬಿಂಗಿ, ಅಥರ್ವ ಮಾಡಿಗೊಂಡು ಇಪ್ಪ ಪ್ರಾಯಲ್ಲಿ ಶಂಕರಂಗೆ ಅಥರ್ವ ವೇದವೇ ಕಲ್ತಾಗಿತ್ತು!
ಎಂಥಾ ವೇಗ!!
ನಮ್ಮ ಗುರುಗೊ ಒಂದೊಂದರಿ ಅಭಿಮಾನಲ್ಲಿ ಹೇಳುಲಿದ್ದು – ಅವು ಹೊಸತ್ತಾಗಿ ಕಲ್ತದಲ್ಲ; ಅವರ ಒಳವೇ ಇದ್ದತ್ತು, ಒಂದರಿ ನೆಂಪು ಮಾಡಿಗೊಂಡದಷ್ಟೇ – ಹೇದು!!
ಅದೂ ಅಲ್ಲದ್ದಲ್ಲ.
~

ಮೊನ್ನೆ ಶಂಕರ ಜಯಂತಿಯ ಸಂದರ್ಭಲ್ಲಿ ಈ ಶುದ್ದಿಗೊ ಎಲ್ಲ ನೆಂಪಾತು.

  • ಮಹಾಲಿಂಗೇಶ್ವರ ದೇವಸ್ಥಾನವ ಮುರುದು, ಪುನಾ ಬುಡಂದ ಕಟ್ಟುವ ಕಾಯಕ ನೆಡತ್ತು.
    ಕಾರ್ಯಕರ್ತರಿಂಗೆ ಗುರು ಅನುಗ್ರಹ ಸಿಕ್ಕಿದ್ದತ್ತು. ಸ್ವತಃ ಮಹಾಲಿಂಗೇಶ್ವರ ದೇವರೇ ಗುರುಗೊ ಆಗಿ ಅನುಗ್ರಹಿಸಿದವು; ಕೆಲಸ ಬೇಗ ಸಾಗಿತ್ತು.
    ಕಳುದ ಜಾತ್ರೆ ಹಳೆ ದೇವಸ್ಥಾನಲ್ಲಿ, ಈ ಒರಿಶದ ಜಾತ್ರೆ ಸಂಪೂರ್ಣ ಹೊಸ ದೇವಸ್ಥಾನಲ್ಲಿ.
  • ಮಾಣಿಮಠದ ಸಭಾಭವನದ ಕಾರ್ಯವ ಆಲೋಚನೆ, ಆರಂಭ ಮಾಡಿದ್ದು ಕಳುದೊರಿಶದ ಚಾತುರ್ಮಾಸ್ಯ ಕಳುದ ಮತ್ತೆ.
    ಈ ಒರಿಶದ ಚಾತುರ್ಮಾಸ್ಯ ವ್ರತವ ಗುರುಗೊ ಮಾಣಿಮಠಲ್ಲೇ ಮಾಡ್ತವು. ಆಶ್ಚರ್ಯಕರ ವೇಗಲ್ಲಿ ಆ ಸಭಾಭವನ ಆಯಿದು ಹೇಳ್ತರಲ್ಲಿ ಸಂಶಯವೇ ಇಲ್ಲೆ.
    ನಮ್ಮ ಗುರುಗೊ ಗುರುಅನುಗ್ರಹ ಕೊಟ್ಟ ಕಾರಣ ಅದರ ಸಮಿತಿಯೋರಿಂಗೆ, ಕಾರ್ಯಕರ್ತರಿಂಗೆ ಆನೆಬಲ ಬಂದು, ಒಂದೊರಿಶದ ಒಳ ಕಾರ್ಯ ಮುಗುಶಿಗೊಂಡವು.
  • ರಾಮ ಸೀತೆಯ ಕರಕ್ಕೊಂಡು ಬಪ್ಪಲೆ ಹೋಯೇಕಾಗಿದ್ದ ಸಂಕದ ನಿರ್ಮಾಣವ ಮಂಗಂಗೊ ಮಾಡಿದ್ದು.
    ಅದೂ ಇಟ್ಟಿಗೆ, ಸಿಮೆಂಟು, ಮರ, ಬಳ್ಳಿ ಇಲ್ಲದ್ದೆ- ಬರೇ ಕಲ್ಲಿನ ಜೋಡುಸಿಗೊಂಡು.
    ರಾಮನ ಆಶೀರ್ವಾದ ಗುರು ಅನುಗ್ರಹ ಆಗಿ ಅವಕ್ಕೆ ಸಿಕ್ಕಿದ ಕಾರಣ ಅಷ್ಟು ವೇಗಲ್ಲಿ ಆತು ಹೇಳ್ತದು ಅಲ್ಲಿಪ್ಪ ಸಂಗತಿ.
  • ಶಂಕರಾಚಾರ್ಯರ ವಿದ್ಯಾಭ್ಯಾಸಕ್ಕೆ ಸ್ವತಃ ಶಿವನ ಗುರುಅನುಗ್ರಹ ಇದ್ದದೇ ಕಾರಣ.
    ವಿದ್ಯಾಭ್ಯಾಸ ಮಾಂತ್ರ ಅಲ್ಲ, ಅದರಿಂದ ಮುಂದೆ ಇಡೀ ಭಾರತ ಸುತ್ತಿ, ಸಾವಿರಾರು ಶ್ಲೋಕಂಗಳ ರಚಿಸಿ, ಜೆನರ ಸನಾತನೆಯ ಕಡೆಂಗೆ ಪ್ರೇರೇಪಿಸಿ, ಪಂಚಾಯತನ ಪೂಜೆಯ ಹಾಂಗಿರ್ತ ಹೊಸತನವ ಮಾಡಿ – ಆಯುಷ್ಯ ಕಳದು ಹೋಗಿಯೂ ಆಯಿದು. ಎಷ್ಟೂ – ಬರೇ ಮೂವತ್ತೆರಡು ಒರಿಶಲ್ಲಿ.
    ಈ ಕಾಲಲ್ಲೇ ಆಗಲಿ – ಒಂದು ಸಂಸ್ಥೆಯೇ ಆಗಲಿ- ನೂರಿನ್ನೂರು ಒರಿಶ ತೆಕ್ಕೊಂಡ್ರೂ ಮುಗಿಶಲೆ ಎಡಿಯದ್ದ ಕಾರ್ಯವ, ಸಾವಿರ ಒರಿಶ ಮದಲೇ, ಒಬ್ಬ ವೆಗ್ತಿ ಆಗಿ ಸಾಧನೆ ಮಾಡಿದ್ದವು.
    ಆಚಾರ್ಯ ಶಂಕರರಿಂಗೆ ದೇವರು ಶಂಕರನ ಗುರು ಅನುಗ್ರಹ ಇದ್ದತ್ತು.

ಅಂತಾ ಶಂಕರಾಚಾರ್ಯರ ಜಯಂತಿ; “ಶಂಕರ ಜಯಂತಿ”ಯ ನಾವೆಲ್ಲೋರುದೇ ಆಚರಣೆ ಮಾಡೇಕು.
ಅವರ ಕಾರ್ಯಂಗಳ ಬಗ್ಗೆ ಒಂದರಿ ಮೆಲುಕು ಹಾಕೇಕು.
ಭಾನ್ಕುಳಿ ಮಠಲ್ಲಿ ನಮ್ಮ ಗುರುಗೊ “ಶಂಕರ ಗುರು ಕಥಾ” ಹೇಳ್ತ ಕಾರ್ಯಕ್ರಮಲ್ಲಿ ಸವಿವರವಾಗಿ ಹೇಳ್ತರ ಕೇಳಿರೂ ಸಾಕು, ಶಂಕರಾಚಾರ್ಯರ ಹಿರಿಮೆ ನವಗೆ ಅರ್ಥ ಅಕ್ಕು.
ಗುರು ಅನುಗ್ರಹ ಇದ್ದರೆ ಎಲ್ಲ ಮನೋಭೀಷ್ಟೆಗಳೂ ಬೇಗಲ್ಲೇ ಆವುತ್ತು.
ದೇವ ಶಂಕರರ, ಆಚಾರ್ಯ ಶಂಕರರ, ನಮ್ಮೆಲ್ಲ ಗುರುಗಳ ಆಶೀರ್ವಾದ ನಮ್ಮ ಮೇಲಿರಳಿ.
ಎಲ್ಲೋರಿಂಗೂ ಒಳ್ಳೆದಾಗಲಿ. ಒಂದು ಸಣ್ಣ ವಿರಾಮ.
~
ಒಂದೊಪ್ಪ: ಗುರುಬಲ ಇದ್ದರೆ ಉಗುರಿಂಗೂ ಆನೆಬಲ ಬಕ್ಕು!

7 thoughts on “ಗುರುವಿನಾನುಗ್ರಹವೆ ಒಲುದರೆ ಕಾರ್ಯ ಸಿದ್ಧಿಸುಗು..!

  1. ನಮ್ಮ ಶ್ರೀ ಗುರುಗೊ ಏವತ್ತೂ ಹೇಳುಗು ‘ನಿಂಗಳ ಗುರಿಮುಂದೆ ಗುರುಗೊ ಹಿಂದೆ’ ಹೇಳಿ ಯಾವಗಳು ಅಸ್ಟೆ ನಮ್ಮ ಉದ್ದೇಶಿತ ಕಾರ್ಯ ಮಾಡಿಯೊಂಡು ಗುರು, ದೇವರುಗಳತ್ರೆ ಪ್ರಾರ್ಥನೆ ಅಲ್ಲೊ?

  2. ಶರ್ಮಭಾವ ಹೇಳುವದು ಸರಿ ಶಂಕರಾಚಾರ್ಯರು ಕಿರುವಯಸ್ಸಿಲ್ಲಿ ಮಾಡಿದ ಸಾಧ ನೆ ತಿಳ್ಕೊಂಬಲೆ ನಮ್ಮ ಹಿರೀ ವಯಸ್ಸು ಸಾಲ . ಆದರೆ ಅವರಿಂದ ಆಗಿಹೋದ ಪವಾಡಂಗಳ ,ಸಾಧನೆಗಳ ತಿಳ್ಕೊಂಡು ಜನ್ಮ ಸಾರ್ಥಕ ಮಾಡಿಗೊಂಬಲೆ ಸಿಕ್ಕುವದು ನಮ್ಮಯೋಗ

  3. ಸಂಬಳ ಕೊಟ್ಟು ಕೆಲಸ ಮಾಡಿಸಿರೆ, ಕೆಲಸ ಮುಗಿಗು.
    ಆದರೆ ಸಂತೋಷ, ದೇವರ ಸೇವೆ ಮಾಡಿದೆ ಹೇಳ್ತ ಆತ್ಮ ತೃಪ್ತಿ ಎಲ್ಲವೂ ಸಿಕ್ಕುವದು ಕರ ಸೇವೆಲಿ ಮಾತ್ರ. ಒಂದು ಸಂಘಟನೆ ಬೆಳವಲೆ ಕೂಡಾ ಕರಸೇವೆ ಸಹಕಾರಿ ಆವ್ತು. ಪುತ್ತೂರಿಲ್ಲಿ ಆದ ಕೆಲಸ ಇದಕ್ಕೆ ಸಾಕ್ಷಿ
    ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಹೇಳಿ ದಾಸರು ಹಾಡಿದ್ದು, ಆ ಗುರುವಿನ ಅನುಗ್ರಹದ ಮಹತ್ವವ ತಿಳುಶಿ ಕೊಡ್ತು.
    ಶಂಕರಾಚಾರ್ಯರು ಅಷ್ಟು ಸಣ್ಣ ಸಮಯಲ್ಲಿ ಮಾಡಿದ ಸಾಧನೆಗಳ ತಿಳಿವಲೇ ನಮ್ಮ ಒಂದು ಜನ್ಮ ಸಾಕಾಗ.

  4. ಗುರು ನಿಲ ಇಲ್ಲಾಂಗಿಲ್ ಒರು ನಿಲ ಇಲ್ಲ[ಗುರುವಿನ ಸ್ಥಿತಿ ಇಲ್ಲದಿದ್ದರೆ,ಅಂದರೆ ದೈವ ಬಲ ಇಲ್ಲದಿದ್ದರೆ ಒಂದು ನೆಲೆಯೂ ಇಲ್ಲೆ]-ಈ ಮಾತು ನೆಂಪಾತು.

  5. ಚೆಂದದ ಕಡೇಣ ಒಪ್ಪದೊಟ್ಟಿಂಗೆ ಒಪ್ಪ ಲೇಖನ. ಜೆನಬಲದೊಟ್ಟಿಂಗೆ ಗುರು ಬಲವೂ ಸೇರಿ ಅಪ್ಪಗ ಕೆಲಸಂಗೊ ಹಗುರ ಅಪ್ಪದು ನಿಜವಾಗಿಯೂ ಅಪ್ಪು.

  6. ಹರೇರಾಮ ಒಪ್ಪಣ್ಣ.
    ಲೇಖನ ಭಾರೀ ಲಾಯ್ಕ ಆಯ್ದು..
    ಪುತ್ತೂರಿನ ಪುಟ್ಟಕ್ಕ೦ಗೆ ಪುತ್ತೂರು ದೇವಸ್ಥಾನದ ಬ್ರಹ್ಮಕಲಶಕ್ಕೆ ಬಪ್ಪಲೆ ಎಡಿತ್ತಿಲ್ಲೆ ಹೇಳಿ ರಜ್ಜ ಬೇಜಾರ ಇತ್ತು…ಆದರೆ ನಿ೦ಗಳ ಲೇಖನ೦ದ ಸುಮಾರು ಮಹಿತಿಗ ಸಿಕ್ಕುತ್ತಾ ಇದ್ದು…ಹಾ೦ಗೆಯೇ ನೇರಪ್ರಸಾರ ನೋಡುವ ಭಾಗ್ಯ ದೊರಕಿಸಿದ್ದಕ್ಕೆ ತು೦ಬಾ ಧನ್ಯವಾದ೦ಗೊ…
    ಹರೇರಾಮ ಒಪ್ಪಣ್ಣ..

  7. ಹರೇ ರಾಮ. ಒಪ್ಪ ಶುದ್ದಿ. ಇಡೀ ಶುದ್ದಿಯ ಒಂದೊಪ್ಪ ಲಾಯಕ ಸಂಕ್ಷಿಪ್ತಗೊಳಿಸಿದ್ದು ಮತ್ತಷ್ಟು ಲಾಯಕ ಆಯ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×