ಮೂಡಕರೆಲಿ ಬೆಳಗಿ ‘ಸಂಗೀತಾ’ ಬೆಳೆಶಿದ ಮಹಾ ಮಾಷ್ಟ್ರು

ಬೈಲಿಲಿ ಸಾರಡಿ ತೋಡು ಇರ್ಸು ನಿಂಗೊಗೆ ಗೊಂತಿದ್ದು.
ಆ ತೋಡಿಂಗೆ ತಲೇಂತಲೆಗೆ ಕಟ್ಟಂಗೊ ಇಪ್ಪದೂ ನಿಂಗೊಗೆ ಅರಡಿಗು.
ನೀರ ಹರಿಪ್ಪು ಜೀವನದ ಸಂಕೇತ ಆದರೆ, ಕಟ್ಟಂಗೊ ನಾಗರೀಕತೆ ಸಂಕೇತ – ಹೇದು ಮಾಷ್ಟ್ರುಮಾವ ಹೇಳುಗು.

ತೋಡಿಲೇ ಹಾಂಗೇ ರಜಾ ಮೂಡಂತಾಗಿ ಹೋದರೆ ಮೂಡಕರೆ ಹೇಳ್ತ ಜಾಗೆ ಸಿಕ್ಕುತ್ತು.
ಅಲ್ಲೇ ಬರೆಮೇಲ್ಕಟೆ ಆಗಿ ಯೇವದೋ ಕಾಲಲ್ಲಿ ಒಬ್ಬ ಹರಿಯಪ್ಪಜ್ಜ ಇತ್ತಿದ್ದವಾಯಿಕ್ಕು, ಹಾಂಗಾಗಿ ಹರಿಯಪ್ಪನ ಮೂಡಕರೆ ಹೇಳಿಯೂ ಹೇಳ್ತವು ಅಲ್ಲಿಗೆ. ಅಲ್ಲಿ ಇದ್ದಿದ್ದ ಮನೆಗೆ ಎಲ್ಲೋರುದೇ ಹರಿಯಪ್ಪನ ಮೂಡಕರೆ ಮನೆ ಹೇಳಿಯೇ ಹೇಳುಗು. ಆದರೆ, ಮಾಷ್ಟ್ರುಮಾವ ಮಾಂತ್ರ ಕಟ್ಟದತ್ರಾಣ ಕುಂಞಿಮಾವ – ಹೇಳಿಗೊಂಡಿದ್ದದು. ಏಕೇದರೆ, ಮಾಷ್ಟ್ರುಮಾವಂಗೆ ಹರಿಯಪ್ಪಜ್ಜನಿಂದಲೂ ಕುಂಞಿಮಾವನೇ ಹತ್ತರೆ! 🙂
~

ನಾರಾಯಣ ಭಟ್ರು ಹೇದು ಕುಂಞಿಮಾವನ ನಿಜನಾಮ.
ಅವಕ್ಕೆ ಬರವಣಿಗೆ ಇದ್ದತ್ತು. ಇದ್ದತ್ತು ಹೇದರೆ, ಬರೇ ಹೆಸರು ಬರವಲೆ ತಕ್ಕ ಇದ್ದ ಬರವಣಿಗೆ ಅಲ್ಲ, ಪ್ರಬುದ್ಧ ಲೇಖನ, ವರದಿಗಾರಿಕೆ, ಸಾಹಿತ್ಯ ವಿಮರ್ಶೆ ಇತ್ಯಾದಿ ಇದ್ದತ್ತು. ಈಗಾಣ ಉದಯವಾಣಿ, ವಿಜಯವಾಣಿ ಹೇದು ಕನ್ನಡ ಪೇಪರುಗೊ ಇಲ್ಲೆಯೋ – ಆ ಕಾಲಲ್ಲಿ ನವಭಾರತ ಹೇದು ಕೊಡೆಯಾಲಂದ ಬಂದುಗೊಂಡಿದ್ದದು.
ಆ ಪ್ರಸಿದ್ಧ ನವಭಾರತ ಪತ್ರಿಕೆಗೆ ವರದಿ, ಲೇಖನಂಗೊ ಬರೆತ್ತಷ್ಟೂ ಪ್ರಬುದ್ಧತೆಯ ಬರವಣಿಗೆ. ಅವರ ಸಾಹಿತ್ಯಾಭಿರುಚಿ ಮನೆಲಿ ಪೂರಕ ವಾತಾವರಣವ ಕೊಟ್ಟ ಕಾರಣ ಮಕ್ಕೊಗೂ ಮಾತುಗಾರಿಕೆ, ಬರವಣಿಗೆ, ಸಂಗೀತ-ಸಾಹಿತ್ಯಾಸಕ್ತಿ ಎಲ್ಲವೂ ಬಂದುಸೇರುಲೆ ಅವಕಾಶ ಆತು.
ಹಾಂಗೆ ಪಳಗಿದ ಮಕ್ಕಳಲ್ಲಿ ಒಬ್ಬರೇ ಇಂದ್ರಾಣ ಶುದ್ದಿಗೆ ಕಾರಣೀಭೂತರು. ನಾಯಕರು.

~

ನಾರಾಯಣ ಭಟ್ರ ಮಕ್ಕಳ ಪೈಕಿ ಎಲ್ಲೋರುದೇ ಒಬ್ಬರಿಂದ ಒಬ್ಬ ಉಶಾರಿಯೇ – ಹೇಳುಗು ನೆಕ್ರಾಜೆ ಅಪ್ಪಚ್ಚಿ.
ಅವರ ಮಕ್ಕಳ ಪೈಕಿ ಒಬ್ಬರು, ಮಾಲಿಂಗ ಮಾವ ಇದ್ದವಲ್ಲದೋ – ಅವರ ಬಗ್ಗೆಯೇ ಮೊನ್ನೆ ನೆಕ್ರಾಜೆಅಪ್ಪಚ್ಚಿಯ ಹತ್ತರೆ ಮಾತಾಡಿದ್ದು. ಮಾಲಿಂಗಮಾವನ ಬಗ್ಗೆ ನೆಕ್ರಾಜೆಅಪ್ಪಚ್ಚಿ ಎಂತ ಹೇಯಿದವು?
ಸಣ್ಣಾಗಿಪ್ಪಗಳೇ ನವಜೀವನಲ್ಲಿ ಕಲ್ತು, ನವಜೀವನವ ಕಂಡುಗೊಂಡವು. ಸಾಹಿತ್ಯ, ನಾಟಕ, ಚಲಚ್ಚಿತ್ರ ಪದ್ಯಂಗಳ ಹಾಡುಸ್ಸರಲ್ಲಿ ವಿಶೇಷ ಆಸಕ್ತಿ ಇತ್ತಾಡ ಅವಕ್ಕೆ. ಆ ಆಸಕ್ತಿಂದಾಗಿ ವಿಶೇಷ ಸಾಧನೆಯೂ ಒದಗಿ ಬಂತು.
ಸಿನೆಮ ಪದ್ಯಂಗಳ ಸಿನೆಮಲ್ಲಿ ಬತ್ತ ಹಾಂಗೇ, ಅದೇ ಲಯಲ್ಲಿ, ಅದೇ ಇಂಪಿಲಿ ಹಾಡುಸ್ಸು ಅಂಬಗಳೇ ಸಿದ್ಧಿ ಆಗಿದ್ದತ್ತಾಡ.
ಮುಖೇಶ್ ಗಾಯನದ ಹಿಂದಿ ಹಾಡುಗಳ ಅದೇ ರಾಗ-ಸ್ವರಲ್ಲಿ ಹಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸ್ಯೊಂಬದು ಮಾಲಿಂಗಮಾವನ ಅಂದ್ರಾಣ ವಿಶೇಷಡ.
ಮುಂದೆ ಕೊಡೆಯಾಲಲ್ಲಿ ಕಲಿವಾಗ ಅಂತೂ, ಈ ಕಲೆಗೆ ಇನ್ನೂ ಪ್ರೋತ್ಸಾಹ ಸಿಕ್ಕಿತ್ತು. ಸ್ಪರ್ಧೆಗಳಲ್ಲಿ ಸೇರುದು, ಬಾಗವಹಿಸುದು ಎಷ್ಟು ಮಾಮೂಲು ವಿಷಯವೋ, ಬಹುಮಾನ ಸಿಕ್ಕುದೂ ಅಷ್ಟೇ ಮಾಮೂಲು ಆಗಿ ಹೋತು.
ಪದ್ಯ ಹೇಳಿಂಡೇ ಹೊತ್ತು ಕಳೆತ್ತ ನಮುನೆ ಅಲ್ಲ, ಕಲಿಸ್ಸರಲ್ಲೂ ವಿಶೇಷ ಸಾಧನೆ ಇದ್ದತ್ತು – ಹೇಳುಗು ನೆಕ್ರಾಜೆಅಪ್ಪಚ್ಚಿ.

~

ಕಲಿಯುವಿಕೆ ಮುಗಿವ ಸಮೆಯಲ್ಲಿ ಕೊಡೆಯಾಲಲ್ಲಿ ಸುರು ಆತು, ಪೈಮಾಮನ ಉದಯವಾಣಿ.
ಉಷಾರಿನ ಯುವ ಪ್ರತಿಭೆಗಳ ಅನ್ವೇಷಣೆಲಿ ಇದ್ದಿದ್ದವು. ಹೊಸತ್ತು ಹೇದರೆ ಯೇವಗಳೂ ಹಾಂಗೇ ಅಲ್ಲದೋ – ಹೊಸ ಪ್ರತಿಭೆಗಳನ್ನೇ ಹುಡ್ಕುಸ್ಸು. ಹಾಂಗೆ ಸೇರಿದ ಯುವ ಪ್ರತಿಭೆಗಳಲ್ಲಿ ಈ ಮಾಲಿಂಗಮಾವನೂ ಒಬ್ಬರು. ಅಲ್ಲಿಂದ ಅವರ ಜೀವನದ ದೆಸೆ ರೂಪುಗೊಂಡತ್ತು ಹೇಳುಲಕ್ಕು!

ಪತ್ರಿಕೆಗೆ ಒಂದು ಲೇಖನ ಬರೇಕಾರೆ ಪೂರ್ವತಯಾರಿ ಬೇಕಾವುತ್ತು. ಲೇಖನ ಮಾಲಿಕೆ ಬರೇಕಾರೆ ಪೂರ್ವತಯಾರಿಯ ಗುಡ್ಡೆಯೇ ಬೇಕಾವುತ್ತು. ಅದರ್ಲಿಯೂ, ಚಲನಚಿತ್ರಕ್ಕೆ ಸಮ್ಮಂದಪಟ್ಟ ವರದಿಗಾರಿಕೆಗಳ ಬರೇಕಾರೆ ಎಷ್ಟು ತಯಾರಿ ಬೇಡ!
ಪರದೆಯ ಮೇಗೆ ರಾಜ-ನಾಯಕ ಆಗಿ ಮಿಂಚುವವರ, ಪರದೆಯ ಹಿಂದೆ ನಿಂದುಗೊಂಡು ಕೆಲಸ ಮಾಡಿದ ನಿರ್ಮಾಪಕ-ನಿರ್ದೇಶಕರ, ಚಲಚ್ಚಿತ್ರಕ್ಕೆ ಸಂಗೀತ ಕೊಟ್ಟು ಇಂಪಾಗುಸಿದ ಸಂಗೀತ ನಿರ್ದೇಶಕರ – ಎಲ್ಲೋರನ್ನೂ ಭೇಟಿ ಆಯೇಕಾವುತ್ತು. ಹಾಂಗೆ, ಇವುದೇ ಭೇಟಿ ಆದವು. ಆ ಕಾಲದ ಪ್ರಸಿದ್ಧ ಹಲವೂ ಜೆನರ ಭೇಟಿ ಆಗಿ, ಅವರ ಸಂಪರ್ಕ ಸಿದ್ಧಿಸುಲೆ ಈ ಪತ್ರಿಕಾ ಕಾರ್ಯ ಸಹಕಾರಿ ಆತು ಹೇದರೆ ತಪ್ಪಲ್ಲ – ಹೇಳ್ತದು ನೆಕ್ರಾಜೆಅಪ್ಪಚ್ಚಿಯ ಅಭಿಪ್ರಾಯ.

ಇದರೊಟ್ಟಿಂಗೆ ಬೆಳೇಕು, ಸಾಧನೆ ಮಾಡೇಕು – ಹೇದು ಮಹದಾಶೆ ಇದ್ದತ್ತಲ್ಲದೋ, ಹಾಂಗಾಗಿ, ಅಂಬಗಾಣ ಪ್ರೋತ್ಸಾಹಕ ನಗರ ಮೆಡ್ರಾಸಿಂಗೆ ಹೋದವು.
ಅಲ್ಲಿಯೂ ಹಲವು ಜೆನರ ಸಿನೆಮದೋರ ಸಂಪರ್ಕ ಸಿಕ್ಕಿತ್ತು.
ಅದು ಅವಕ್ಕೆ ಪೇಪರು ಶುದ್ದಿ ಬರವಲೂ ಅನುಕ್ಕೂಲ ಆತು, ಅವರ ವೈಯಕ್ತಿಕ ಬೆಳವಣಿಗೆಗೂ ಸಹಕಾರಿ ಆತು.

~

ಅಂಬಗ ಬೆಳದ ಕೆಲವು ಸಂಪರ್ಕಂಗೊ ಮತ್ತಾಣ ಜೀವನ ರಚನೆಲಿ ತುಂಬಾ ಪಾತ್ರವಹಿಸಿತ್ತಾಡ. ಚಿ.ಉದಯಶಂಕರ್ ಹೇಳ್ತ ಮಹಾನ್ ವೆಗ್ತಿ ಈ ಮಾಲಿಂಗ ಮಾವಂಗೆ ದಾರಿದೀಪ ಆದವಾಡ.
ಮಹಾಲಿಂಗ ಭಟ್ರಿಂಗೆ ಹೊಸನಮುನೆ ಹೆಸರು ಮಹೇಶ ಹೇದು – ಆರಾಧ್ಯಗುರು ಮುಖೇಶ್‍ರ ನೆಂಪಿಂಗೂ ಆತು ಹೇದು ಅವ್ವೇ ಮಾಡಿದವು ಹೇದು ನೆಕ್ರಾಜೆಅಪ್ಪಚ್ಚಿ ಒಂದೊಂದರಿ ಹೇಳುಲಿದ್ದು.
ಊರ ಹೆಸರಿನ ಎರಡು ಇಂಗ್ಳೀಶು ಸ್ಪೆಲ್ಲಿಂಗುದೇ, ಈ ಹೊಸ ಹೆಸರುದೇ – ಎಚ್ಚೆಮ್ ಮಹೇಶ್ ಹೇಳ್ತ ನಾಮಲ್ಲಿ ಮುಂದಾಣ ಜೀವನ ಬೆಳಗಿತ್ತು.

ಅದೇ ಸಮೆಯಲ್ಲಿ ಕೊಲಂಬಿಯಾ ಹೇಳ್ತ ಸಂಸ್ಥೆ ಸರಸ್ವತಿ ಸ್ಟೋರ್ಸ್ ಹೇಳ್ತ ಹೆಸರಿಲಿ ಕರಿದೋಸೆ ಹಾಂಗಿರ್ತ ರೆಕಾರ್‍ಡುಗಳ ಮಾಡಿಂಡು ಮಿಂಚಿಗೊಂಡಿತ್ತಾಡ.
ಎಲ್ಲಿ? ದೂರದ ಚೆನ್ನೈಲಿ. ಬೇರೆಲ್ಲ ಭಾಶೆಯೂ ಚೆಂದಕ್ಕೆ ನೆಡಕ್ಕೊಂಡಿದ್ದರೂ, ಕನ್ನಡಕ್ಕೆ ಆ ಕಂಪೆನಿಲಿ ಪ್ರೋತ್ಸಾಹ ಇಲ್ಲದ್ದೆ ಆತು.
ಏಕೆ? ಬರ್ಖತ್ತಿಂಗೆ ಕನ್ನಡ ಅರಡಿತ್ತೋರು ಆರೂ ಇಲ್ಲೆ. ಕರ್ನಾಟಕದ, ಕನ್ನಡದ ಹಿರಿಮೆಯ ಬಗ್ಗೆ ಜ್ಞಾನ ಆರಿಂಗೂ ಇದ್ದತ್ತಿಲ್ಲೆ.
ಕೆಸೆಟ್ಟಿನ ಕವರಿಲಿ ಅವು ಬರದ್ದದೇ ಕನ್ನಡ. ತಪ್ಪಾದರೆ ತಪ್ಪು, ಸರಿ ಆದರೆ ಸರಿ. ಕೊಂಬಿದ್ದರೆ ಪ್ರಾಣ, ಪ್ರಾಣ ಇದ್ದರೆ ಕೊಂಬಿಲ್ಲೆ – ಹೀಂಗೆಲ್ಲ ಏನೇನಾರು ಆಗಿಂಡಿತ್ತಾಡ.
ಆ ಸಮೆಯಲ್ಲೇ ಇದಾ – ಕನ್ನಡ ಅರಡಿತ್ತೋರು ನಿಂಗೊಗೆ ಬೇಕು ಹೇದು ಚಿ. ಉದಯಶಂಕರ್ -ಎಚ್ಚೆಮ್ ಮಾವನ ಅಲ್ಲಿಗೆ ಗುರ್ತ ಮಾಡುಸಿ ಕೊಟ್ಟದು!
ಅಲ್ಲಿಗೆ ಎಚ್ಚೆಮ್ ಮಾವನ ಜೀವನ ಇನ್ನೊಂದು ಹೊಡೆಂಗೆ ಬೆಳಗಲೆ ಸುರು ಆತು.

ಅಂಬಗ ಎಲ್ಲ ಗ್ರಾಮಾಫೋನು ರೆಕಾರ್ಡುಗೊ ಇದಾ. ಆ ಕಾವಲಿಗೆಯಷ್ಟು ದೊಡ್ಡ ಕರಿದೋಸೆ ರೆಕಾರ್ಡುಗಳ ವ್ಯವಹಾರ, ಅವುಗಳ ಮಾರಾಟ ನಿರ್ವಹಣೆ – ಹೀಂಗಿರ್ಸ ಜೆಬಾದಾರಿಕೆಯ ವಹಿಸಿಗೊಂಡವು ಎಚ್ಚೆಮ್ ಮಾವ. ದೂರದ ಮೆಡ್ರಾಸಿಲೇ ಇರಳಿ, ಕನ್ನಡದ ಮನಸ್ಸು ಒಟ್ಟಿಂಗೇ ಇರ್ತನ್ನೇ! ಹಾಂಗೆ ಸಂಸ್ಥೆಲಿ ಅವ್ವೇ ಜೆಬಾದಾರಿ, ಧೈರ್ಯ ತೆಕ್ಕೊಂಡು ಕೆಲವೆಲ್ಲ ರೆಕಾರ್‍ಡು ಪ್ಲೇಟುಗಳ ಮಾರುಕಟ್ಟೆಗೆ ಮಾಡಿದವಾಡ.
ಕರಿದೋಸೆ ಪ್ಲೇಟುಗೊ ಕನ್ನಡಲ್ಲಿ ತಯಾರಾತು. ತಪ್ಪಿಲ್ಲದ್ದ ಕನ್ನಡದ ಕವರುಗೊ ಅದಕ್ಕೆ. ಕಾರಣ ಆರು? ನಮ್ಮ ಎಚ್ಚೆಮ್ ಮಾವನ ಪ್ರೂಪು ತಿದ್ದಾಣ.
ಕನ್ನಡ ಪ್ಲೇಟುಗೊ ಕರ್ನಾಟಕದ ಮೂಲೆ ಮೂಲೆಗೆ ಎತ್ತಿತ್ತು. ಕಾರಣ ಆರು? ಎಚ್ಚೆಮ್ ಮಾವನ ಮಾರ್ಕೇಟು ಬುದ್ಧಿವಂತಿಕೆ.
ಹೊಸ ಹೊಸ ಪ್ರಯೋಗಂಗೊ ಬಂತು. ಕಾರಣ ಆರು? ಎಚ್ಚೆಮ್ ಮಾವನ ಚಿಂತನೆಗೊ.
ಅಂಬಗ ಬಂದ ಕೆಲವು ಪ್ಲೇಟುಗೊ ಈಗಳೂ ನಮ್ಮೂರಿನ ಚೌತಿಲಿ ತಿರುಗುತ್ತು – ಗಜಮುಖನೇ ಗಣಪತಿಯೇ ನಿನಗೆ ವಂದನೇ – ಹೇಳ್ತ ಇಂಪುರಾಗದ ಪ್ಲೇಟುಗೊ ಇವರ ಯೋಜನೆಲಿ ಹುಟ್ಟಿದ್ದು – ಹೇದು ನೆಕ್ರಾಜೆಅಪ್ಪಚ್ಚಿ ವಿವರ್ಸುವಾಗ ಮೈ ಜುಂ ಹೇಳಿತ್ತೊಂದರಿ.

~
ಹೊಸತನಕ್ಕೆ ಮುನ್ನುಡಿ ಬರದ ಹಾಂಗೆ ಎಚ್ಚೆಮ್ ಮಾವಂಗೆ ಯೇವತ್ತೂ ಹೊಸ ಆಲೋಚನೆಗಳೇ ಬಕ್ಕಷ್ಟೆ.
ಮತ್ತೆ ಕಾವಲಿಗೆಯಷ್ಟು ದೊಡ್ಡ ಕರಿದೋಸೆ ಹೋಗಿ ಕಿಸೆಲಿ ಹಿಡಿತ್ತ ಕೇಸೆಟ್ಟು ಬಪ್ಪ ಕಾಲ ಅದು. ಹಾಂಗಾಗಿ, ಕನ್ನಡ ಕೇಸೆಟ್ಟುಗಳ ಧಾರಾಳವಾಗಿ ಮಾಡೇಕು, ಮಾರುಕಟ್ಟೆಗೆ ಬಿಡೇಕು. ಬಾಕಿ ಭಾಷೆದರ ನಾಲ್ಕು ನಾಲ್ಕು ಅವ್ವು ಮಾಡ್ಳೆ ಮುಂದಾದಪ್ಪಗ ಕನ್ನಡದ್ದೂ ಒಂದೆರೆಡು ಕೇಸೆಟ್ಟು ಮಾಡೆಕು – ಹೇಳ್ತ ಬಹುಮನಸ್ಸು ಅವರದ್ದಾತು.
ಹಾಂಗೆ, ಹೊಸ ಹೊಸ ಸಲಹೆಗೊ, ಸೂಚನೆಗೊ ಕೊಟ್ಟವು ಕಂಪೆನಿಗೆ. ಏಯ್, ಅದೆಲ್ಲ ಮಾಡ್ಳೆಡಿಯ – ಹೇದು ತಿರಸ್ಕರುಸಿ ಬಿಟ್ಟವು ಈ ಮಾವನ ಸಲಹೆಗಳ, ಯೋಜನೆಗಳ.
ಯೋಜನೆಯ ಮಾಂತ್ರ ತಿರಸ್ಕರಿಸಿದವು, ಯೋಚನೆಯ ಅಲ್ಲನ್ನೇ!
ಇನ್ನೊಂದು ಸಂಸ್ಥೆಲಿ ತನ್ನ ಮನಸ್ಸಿನ ಯೋಜನೆಗಳ ಸಮಗಟ್ಟು ಕಾರ್ಯರೂಪಕ್ಕೆ ಇಳುಸುಲೆ ತುಂಬ ಸಮಯ ಹಿಡಿಗು.
ಕನ್ನಡಮ್ಮನ ಕೆಲಸ ಮಾಡುವೊ ಹೇದರೆ ತೆಮುಳಂಗೊ ಒಪ್ಪುಗೋ? ಪೈಶೆ ಕಟ್ಟ ಕಾಣದ್ದೆ ಒಪ್ಪವು.
ಹಾಂಗೆ, ಕನ್ನಡ ಸೇವೆಯೂ ಆತು, ಹೊಸತ್ತೊಂದು ಸಾಧನೆಯೂ ಆತು ಹೇಳ್ತ ಕೆಲಸ ಮಾಡಿಕ್ಕುವೊ – ಹೇದು ಆಲೋಚನೆ ಬಂತವಕ್ಕೆ.
ಅದಕ್ಕೆಂತ ಮಾಡುಸ್ಸು – ಸ್ವಂತದ ಸಂಸ್ಥೆಯನ್ನೇ ಹುಟ್ಟುಹಾಕುಸ್ಸು!
ಆಗದ್ದೆ ಇಲ್ಲೆ, ಆದರೆ ಅಷ್ಟು ಬಂಡ್ವಾಳ, ಪ್ರೋತ್ಸಾಹ, ಸಂಪರ್ಕ ಇದೆಲ್ಲವೂ ಬೇಡದೋ? ಆ ತೆಮುಳಂಗಳ ಎಡಕ್ಕಿಲಿ ಇದ್ದು ಜೈಸುಲೆಡಿಗೋ? ಅವರ ಲೋಬಿಗೊ, ಅವರ ಒಗ್ಗಟ್ಟುಗೊ ನವಗೆ ಮೀಸುಲೆಡಿಗೋ?
ಎಡಿಗೋ ಕೇಳಿರೆ ಎಡಿಗು, ಎಡಿಯದೋ ಕೇಳಿರೆ ಎಡಿಯ! ಛಲ ಇದ್ದರೆ ಮಾಂತ್ರ ಇದೆಲ್ಲ ಎಡಿಗಷ್ಟೆ ಇದಾ.
ಹಾಂಗೆ, ಹೊಸ ಸಂಸ್ಥೆಯ ಹುಟ್ಟುಹಾಕಿಯೇ ಬಿಟ್ಟವು ಎಚ್ಚೆಮ್ ಮಾವ!
ಅದಕ್ಕೊಂದು ಚೆಂದದ ಹೆಸರಾಗೆಡದೋ? “ಮಾಷ್ಟರ್ ರೆಕಾರ್ಡಿಂಗ್ ಕಂಪೆನಿ” ಹೇದು ಹೆಸರು ಮಡಗಿದವು.
ಉದಯಶಂಕರರ ಸಹಕಾರಲ್ಲೇ ಬೆಳದ ಇದಕ್ಕೆ “ಸಂಗೀತಾ” ಹೇಳ್ತ ಹೆಸರುದೇ ಕೊಟ್ಟು ಹೆಗಲು ತಟ್ಟಿದವು.
ಉದಯಶಂಕರರ ಆತ್ಮೀಯ ಒಡನಾಟಂದ ರಾಜ್ಕುಮಾರಣ್ಣನ ಗುರ್ತ ಸ್ನೇಹ ಆತ್ಮೀಯ ಬಾಂಧವ್ಯವೂ ಸಿಕ್ಕ್ಯೊಂಡತ್ತು.

ಹಾಂಗೆ, ಇಂಪಾದ ಸಂಗೀತವೂ ಆತು, ಶಿಸ್ತಿನ ಮಾಷ್ಟ್ರುದೇ ಆತು ಆ ಸಂಸ್ಥೆ.
ಅಪ್ಪು, ಎಷ್ಟೋ ಜೆನ ಯುವ ಗಾಯಕರ, ಯುವ ಸಾಧಕರ, ಯುವ ಪದ್ಯಕಾರರ ಬೆಳೆಶಿದ ಶಾಲೆ ಆತಾಡ ಅದು. ಆ ಶಿಸ್ತಿನ ಶಾಲೆಗೆ ಇವ್ವೇ ಮಾಷ್ಟ್ರು!!
ಬಾಲಮುರಳಿ, ರಾಜ್ಕುಮಾರಿನ ಹಾಂಗಿರ್ತ ಘಟಾನುಘಟಿಗಳೇ ಇವರ ಅಷ್ಟೊಂದು ಗೌರವಲ್ಲಿ ಕಂಡುಗೊಂಡಿತ್ತವು ಹೇದರೆ, ನಿಂಗೊ ಆಲೋಚನೆ ಮಾಡಿ!!

ಸಿನೆಮಪದ್ಯ ಮಾಂತ್ರ ಗ್ರೇಶಿದಿರೋ ನಿಂಗೊ?
ಭಕ್ತಿಗೀತೆ, ಹರಿಕಥೆ, ಯಕ್ಷಗಾನ, ನಾಟಕಂಗೊ, ಸುಗಮ ಸಂಗೀತ, ಜಾನಪದಗೀತೆ, ಶಿಶುನಾಳ ಶರೀಫ ಗೀತೆ – ಇತ್ಯಾದಿ ಹಲವಾರು ಪ್ರಾಕಾರಂಗೊಕ್ಕೆ ಜೀವಕೊಟ್ಟವು. ಮಾರುಕಟ್ಟೆ ಕೊಟ್ಟವು. ಅನೇಕ ಕಲಾವಿದರಿಂಗೆ ಜೀವನದ  ಅಭಿವೃದ್ಧಿಯ ಒಂದು  ಹಂತ ಇವರಿಂದ ಸಿಕ್ಕ್ಯೊಂಡತ್ತು. ಅಂಬಗ ಅವು ಮಾಡಿದ ಆ ಪರಿಶ್ರಮಂಗೊ ಇನ್ನು ಅನಂತ ಕಾಲ ಒರೆಂಗೂ ಅಕ್ಷಯ ಗಣಿಯಾಗಿ ನಿಂಗು – ಹೇಳ್ತವು ನೆಕ್ರಾಜೆಅಪ್ಪಚ್ಚಿ.

~

ಮೊನ್ನೆ ಇತ್ಲಾಗಿ ಬೆಂಗ್ಳೂರಿಲಿ ‘ಸಂಗೀತಯಾನ’ ಹೇಳ್ತ ಪುಸ್ತಕ ಬಿಡುಗಡೆ ಆತಾಡ. ನೆಕ್ರಾಜೆಅಪ್ಪಚ್ಚಿಗೆ ಬಪ್ಪಲಾಯಿದಿಲ್ಲೆ, ಹಾಂಗಾಗಿ ಅವರ ಮಗಳ ಕಳುಸಿತ್ತಿದ್ದವು ಆ ಕಾರ್ಯಕ್ರಮಕ್ಕೆ. ಈ ಸಂಗೀತಮಾಷ್ಟ್ರ ಜೀವನ ಕತೆ ಅಡ ಅದು. ಆರಂಭಂದ ಇಂದಿನ ಒರೆಂಗೆ ಹೇಂಗೆ ಹೋರಾಡಿದವು, ಇಂದಿನ ಒರೆಂಗೆ ಹೇಂಗೆ ಕಟ್ಟಿ ಬೆಳೆಶಿದವು – ಹೇಳ್ಸರ ಬಗ್ಗೆ ಚೆಂದಕೆ ಬರದ್ದವಡ ಆ ಜೀವನಕತೆಲಿ ಲೇಖಕಿ ಜಯಶ್ರೀ ಅರವಿಂದತ್ತೆ. ಅಂಕಿತಾ ಪುಸ್ತಕದ ಅಂಗುಡಿಯೋರು ಪ್ರಕಾಶನ ಮಾಡಿದ್ದವಾಡ, ಈಗ ಎಲ್ಲಾ ಪ್ರಸಿದ್ಧ ಪುಸ್ತಕ ಅಂಗುಡಿಲಿಯೂ ಸಿಕ್ಕುಗಾಡ. ಜೀವನಲ್ಲಿ ಬೆಳಗಲೆ ಶಿಸ್ತಿನ ಸಿಪಾಯಿ ಆಗಿಯೂ, ಪಕ್ಕಾ ವ್ಯವಹಾರಸ್ಥ ಕಾರ್ಯಶೈಲಿಯೂ ಬೇಕಾವುತ್ತು – ಹೇಳ್ತದು ಆ ಪುಸ್ತಕ ಓದಿರೆ ಅರಡಿಗಾಡ.01 Untitled-1

ಬರೇ ತನ್ನ ಸಂಸ್ಥೆ ಹೇದು ಮಾಂತ್ರ ಅಲ್ಲ, ತನ್ನ ಒಡಹುಟ್ಟಿದೋರನ್ನೂ ಈ ಸಂಸ್ಥೆಲಿ ಸೇರ್ಸ್ಯೊಂಡು, ಎಡಬಲಲ್ಲಿ ಅವರನ್ನೂ ಕೂರ್ಸ್ಯೊಂಡು  ಮನೆಯ ಹೆರಿಯಣ್ಣನಾಗಿ ಅವು ಮುಂದುವರ್ಕೊಂಡು ಬಂದ ಜೀವನಗಾಥೆ ನಿಜಕ್ಕೂ ಅಭಿನಂದನೀಯ. ಸುರುಲಾಗಾಯ್ತು ಇವಕ್ಕೆ ಹುರುಪು ಉತ್ಸಾಹವ ಕೊಟ್ಟು ಧೈರ್ಯವ ತುಂಬಿಸಿ ಮುಂದೆ ನಡವಲೆ ಸ್ಪೂರ್ತಿಯಾಗಿತ್ತೋರ ಪಟ್ಟಿಯೇ ದೊಡ್ಡಕೆ ಇದ್ದು. ಅವೆಲ್ಲೋರ ಬಗ್ಗೆಯೂ ಈ ಸಂಗೀತಯಾನ ಪುಸ್ತಕಲ್ಲಿ ಸಂಸ್ಮರಿಸಿಗೊಂಡಿದವಡ. ಶ್ರೀಗುರುಹಿರಿಯರ ನಂಬಿಗೊಂಡು, ವೊಯಿವಾಟು ಹೇಳ್ಸು ಬರೇ ವ್ಯಾಪಾರೀಕರಣ ಅಲ್ಲ, ಅದರ್ಲಿ ಸೇವಾಮನೋಭಾವ, ಸಮಾಜಹಿತದೃಷ್ಟಿಯೂ ಬೇಕು ಹೇಳ್ತ ತತ್ವವ ರೂಢಿಸ್ಯೊಂಡು, ವ್ಯವಹಾರವ ತನ್ನ ಕರ್ತವ್ಯ ಹೇಳ್ತ ದೃಷ್ಟಿಕೋನಂದ ಜೀವನ ಸಾಹಸವ ನಡೆಶುವ ಇವಕ್ಕೆ ಇವರ ತಮ್ಮ ಶ್ರೀಕೃಷ್ಣಮಾವ ಬಹುದೊಡ್ಡ ಬೆನ್ನೆಲುಬು. ಆಪೀಸಿನ ಒಳಕೂದೊಂಡು ವ್ಯವಹಾರ ನಡೆಶುವ ಅವ್ವು ಅಣ್ಣನ ಪ್ರತಿಯೊಂದು ಕನಸ್ಸನ್ನೂ ಸಾಕಾರಗೊಳುಸುಲೆ ದೈವಸಕಾಯವಾಗಿ ಇಪ್ಪ ಒಂದು ಶೆಗ್ತಿ ಹೇದೇ ಹೇಳೆಕ್ಕಷ್ಟೆ.

ಹೇಳಿದಾಂಗೆ, ಇವರ ಆಪೀಸಿಲೇ ಇದಾ – ನಮ್ಮ ಚೆನ್ನೈಭಾವ ಇಪ್ಪದು.
ದೂರದ ಚೆನ್ನೈಲಿ ಇದ್ದರೂ, ಈ ಎಚ್ಚೆಮ್ ಮಾವಂಗೆ ಹೆಗಲು ಕೊಟ್ಟು ಬೆಳೆಶೇಕಾರೆ ನಮ್ಮ ಊರವೇ, ಉತ್ತಮ ಸಂಸ್ಕಾರವಂತರೇ ಆಯೇಕು – ಹೇಳ್ತ ಅನಿಸಿಕೆ ಇದ್ದತ್ತು. ಹಾಂಗೆ ಹೆರ್ಕುವಾಗ ಸಿಕ್ಕಿದ ಮುತ್ತು ನಮ್ಮ ಚೆನ್ನೈಭಾವ. ಸಂಸ್ಥೆಯ ಆಗುಹೋಗುಗಳ ನೋಡ್ಯೊಂಬಲೆ ಒಂದೊಂದು ವಿಭಾಗಲ್ಲಿ ಒಬ್ಬೊಬ್ಬ ತಮ್ಮಂದ್ರು ಇಪ್ಪ ಒಟ್ಟಿಂಗೆ ಎಚ್ಚೆಮ್ಮ್ ಮಾವನ ಹೆಗಲಿಂಗೆ ಹೆಗಲು ಕೊಟ್ಟು, ಅವರ ಉಪಸ್ಥಿತಿಲಿ, ಅನುಪಸ್ಥಿತಿಲಿ ಯಥಾ ಸಾಧ್ಯ ಕೆಲಸ ಮಾಡಿ, ಆ ಸಂಸ್ಥೆಯ ಕಾರ್ಯ ಚೆಂದಕೆ ನೆಡವಲೆ ಸಹಕಾರ್ಯರಾಗಿ ಇದ್ದವಾಡ ಚೆನ್ನೈಭಾವ. ಇದು ನೆಕ್ರಾಜೆಅಪ್ಪಚ್ಚಿ ಮಾಂತ್ರ ಹೇಳಿದ್ದಲ್ಲ, ಸ್ವತಃ ಎಚ್ಚೆಮ್ ಮಾವನ ಪುಸ್ತಕಲ್ಲಿ ಎಚ್ಚೆಮ್ ಮಾವನೇ ಹೇಳಿದ ಅನುಭವದ ಮಾತುಗೊ. ಪೂರ್ತ ಓದೇಕಾರೆ ಆ ಪುಸ್ತಕವನ್ನೇ ತೆಗದು ಪುಟ ಬಿಡುಸಿ ನೋಡಿ ಬೇಕಾರೆ!
ಇಂಥಾ ಸಾಧಕರ ಸಾಧನೆಗೆ ಹೆಗಲಾಗಿ ನಮ್ಮ ಬೈಲಿನ ಆಪ್ತ ನೆಂಟ್ರು ಇದ್ದವು ಹೇಳ್ತದು ಬೈಲಿಂಗೂ ಒಂದು ಹಿರಿಮೆಯೇ ಇದಾ!

~

ಹಾಂಗೆ, ನಮ್ಮ ಬೈಲಿನ ಮೂಡಕರೆಲಿ ಹುಟ್ಟಿ, ಬೆಳದು – ಭಾರತದ ಮೂಡಕರೆ ಮೆಡ್ರಾಸಿಂಗೆ ಹೋಗಿ ಬೆಳಗಿದವು. ಸ್ವಂತ ಸಾಧನೆ ಮಾಡಿ ಮಾಷ್ಟರ್ ರೆಕಾರ್ಡಿಂಗ್ ಕಂಪೆನಿ ಕಟ್ಟಿದವು.
ಅನೇಕಾನೇಕ ‘ಸಂಗೀತಾ’ ಕೇಸೆಟ್ಟುಗಳ ಹೆರತಂದವು. ಕಲಾವಿದರಿಂಗೆ ದಾರಿದೀಪ ಆದವು. ಕಲೆಗೆ ಪ್ರೋತ್ಸಾಹಕರಾದವು.
ದಾರಿಯೇ ಇಲ್ಲದ್ದಲ್ಲಿ ದಾರಿ ಮಾಡಿಗೊಂಡವು, ಮತ್ತಾಣೋರಿಂಗೆ ಮಾರ್ಗ ಕಡುದು ಕೊಟ್ಟವಾಡ.
ಒಂದು ಕಾಲಲ್ಲಿ ಎಕ್ಸೈಸ್ ಸುಂಕ ಹೇಳ್ತ ಮಹಾಭೂತ ಈ ಕೇಸೆಟ್ಟು ಉತ್ಪಾದನೆ ಮೇಗೆ ಬಂದು ಇನ್ನೆಂತ ವ್ಯವಹಾರ ಮಾಡಿಕ್ಕಲೇ ಎಡಿಯ ಹೇಳ್ತ ಪರಿಸ್ಥಿತಿ ಬಂದಪ್ಪಗ ರಾಜ್ಕುಮಾರಣ್ಣನ ಒಟ್ಟಿಂಗೆ ಡೆಲ್ಲಿ ಒರೆಂಗೆ ಹೋಗಿ ರಾಜೀವ ಗಾಂಧಿಯತ್ರೆ ಮುಖಾತ ಮಾತ್ನಾಡಿ ಆ ಸುಂಕದ ಸಂಕಂದ ಪಾರಾದ್ದು ಒಂದು ದೊಡ್ಡ ಹೋರಾಟ ಕತೆಯೇಡ.
ಭಾಷಾ ಅಲ್ಪಸಂಖ್ಯಾತರಾಗಿದ್ದುಗೊಂಡು ಕನ್ನಡಕ್ಕಾಗಿ ಹಲವು ಹೋರಾಟಂಗಳ ಮಾಡಿದ್ದವಾಡ. ಹಾಂಗೇ ಪದ್ಯಕಳ್ಳುತ್ತೋರಿಂಗೆ ಮದ್ದುದೇ ಅರದ್ದವಾಡ.
ಇವರ ಎಲ್ಲ ಪರಿಶ್ರಮಕ್ಕೆ ಕರ್ನಾಟಕ ಸರಕಾರ ಇವಕ್ಕೆ ‘ರಾಜ್ಯೋತ್ಸವ ಪ್ರಶಸ್ತಿ’ ಕೊಟ್ಟು ತನ್ನ ಗೌರವ ಮಡಿಕ್ಕೊಂಡಿದಾಡ.
ತೆಮಿಳುನಾಡಿಲ್ಲಿ ಇದ್ದುಗೊಂಡು ಕನ್ನಡ ಸೇವೆಮಾಡಿ ಕೀರ್ತಿಗಳಿಸ್ಯೊಂಡ ಇವರ ಅಲ್ಯಾಣ ಮೈನಾರಿಟಿ ಕಮಿಶನ್ ಸದಸ್ಯನಾಗಿಯೂ ನೇಮಕ ಮಾಡಿತ್ತಿದ್ದವಡ ಅಲ್ಲದೆ ಇನ್ನೂ ಸುಮಾರು ಸಂಸ್ಥೆಗೊಕ್ಕೆ ಇವರ ಸದಸ್ಯರಾಗಿ ಗೌರವಿಸಿ ಇವರ ಸಲಹೆಗಳ ತೆಕ್ಕೊಂಡಿದ್ದವಡ.

ಶಿಸ್ತಿನ ಜೀವನ, ನಿಯತ್ತಿನ ವ್ಯವಹಾರ, ನಿರಾಡಂಭರ ಪ್ರೇಮಿ.. ಇಂಥಾ ಹಿರಿಯರ ಬಗ್ಗೆ ಶುದ್ದಿ ಹೇಳುಲೆ, ಅವರ ಬಗ್ಗೆ ಮಾತಾಡ್ಳೆ ಬೈಲಿಂಗೂ, ಒಪ್ಪಣ್ಣಂಗೂ ಹೆಮ್ಮೆ ಅನುಸುತ್ತು.
ಇನ್ನೂ ನೂರಾರು ಒರಿಶ ನಮ್ಮೊಟ್ಟಿಂಗೆ’ಸಂಗೀತ’ದ ಮಾಷ್ಟ್ರಾಗಿ ಇದ್ದು, ಹಲವು ಕಲಾವಿದರಿಂಗೆ ದಾರಿದೀಪ ಆಯೇಕು, ಕಲಾ ಸರಸ್ವತಿಗೆ ಇನ್ನಷ್ಟು ಸೇವೆ ಇವರಿಂದ ಆಯೇಕು – ಹೇಳ್ತದು ಬೈಲ ಪರವಾಗಿ ನಮ್ಮ ಆಶಯ.
ಅಲ್ಲದೋ?
~
ಒಂದೊಪ್ಪ: ಪಡುಕರೆಲಿ ಹುಟ್ಟಿ ಮೂಡುಕರೆಲಿ ಬೆಳಗುವ ಈ ಸಂಗೀತ ಸೂರ್ಯ ಅನಂತಕಾಲ ಪ್ರಕಾಶಿಸಲಿ.

 

~'ಸಂಗೀತಯಾನ' ಪುಸ್ತಕಬಿಡುಗಡೆಲಿ ವೇದಿಕೆಲಿಪ್ಪ ಗಣ್ಯರುಗೊ.

ಡಾ||ಬಾಲಮುರಳೀಕೃಷ್ಣ 'ಸಂಗೀತಯಾನ' ಪುಸ್ತಕ ಬಿಡುಗಡೆ ಮಾಡಿದ್ಸು.

ಒಪ್ಪಣ್ಣ

   

You may also like...

9 Responses

 1. GOPALANNA says:

  ಎಚ್ ಎಂ ಮಹೇಶರ ಸಾಧನೆ ಲಾಯಕ ಮೂಡಿ ಬಯಿಂದು .

 2. ಚೆನ್ನೈ ಭಾವ says:

  ಹರೇ ರಾಮ. ಹೆಚ್ಚೆಮ್ ಮಾವನ ಸಂಗೀತಯಾನ ಶುದ್ದಿ ಇಲ್ಲಿ ಒಪ್ಪಣ್ಣ ಭಾವ ತಂದದು ಓದಿ ಕೊಶಿಆತು.

  ಏವುದೇ ಆದರೂ ಬೇಡ, ಎಡಿಯ ಹೇಳ್ಳೆ ಹಲವಾರು ಕಾರಣಂಗೊ ಸಿಕ್ಕುಗು, ಬೇಕು ಹೇಳ್ಳೆ ಒಂದೇ ಒಂದು ಕಾರಣ ಸಾಕಾವ್ತು. ಧ್ಯೇಯ ಗೆಟ್ಟಿಮಾಡಿಗೊಂಡು ಪರಿಶ್ರಮದೊಟ್ಟಿಂಗೆ ಕರ್ತವ್ಯಲ್ಲಿ ಮುಂದುವರುದರೆ ಯಶಸ್ಸು ನಿಶ್ಚಿತ ಹೇಳ್ತದಕ್ಕೆ ಇದೊಂದು ಉದಾಹರಣೆ. ಸಂಸ್ಥೆ-ಸಂಬಂಧವ ಎಂದೂ ತನ್ನದು ಹೇಳಿಗೊಳ್ಳದ್ದೆ ಏವತ್ತೂ ನಮ್ಮದು-ನಮ್ಮವು ಹೇದು ಅಭಿಮಾನಂದ ಕಾಂಬ, ಎನ್ನ ಜೀವನಕ್ಕೊಂದು ಆಧಾರವ ಕೊಟ್ಟ, ನಿಯತ್ತಿನ ಜೀವನಕ್ಕೆ ಅನುಕರಣೀಯವಾಗಿಪ್ಪ, ಹೆಚ್ಚೆಮ್ ಮಾವನ ಸೋದರರೊಟ್ಟಿಂಗೆ ಆನಿದ್ದೆ ಹೇಳ್ವದು ಆನು ಕಂಡುಕೊಂಡ ಅತಿದೊಡ್ಡ ತೃಪ್ತಿ. ಬೈಲಿನೊಟ್ಟಿಂಗೆ ದೀರ್ಘಯಶಸ್ಸು ಕೊರುವೊ.

 3. ಶ್ರೀಕೃಷ್ಣ ಶರ್ಮ says:

  ಹೆಚ್ಚೆಮ್ ಮಾವನ ಸಾಧನೆ ನೋಡಿ ಕೊಶೀ ಆತು. ಯುವಕರಿಂಗೆ ಇವರ ಸಾಧನೆ ಸ್ಪೂರ್ತಿದಾಯಕ.
  ಒಂದು ಕಾಲಲ್ಲಿ “ರೇಡಿಯೋ ಸಿಲೋನ್ ” ಇಲ್ಲಿಂದ ಕನ್ನಡ ಹಾಡುಗಳ ಪ್ರಸಾರ ಮಾಡಲೇ ಇವರ ಪ್ರಯತ್ನೆವೇ ಕಾರಣ.
  ಹಾಂಗೆ ತುಳು ಸಿನೆಮಕ್ಕಾಗಿ “ಪಕ್ಕಿಲು ಮೂಜಿ ಒಂಜೇ ಗೂಡುಡು ಬದುಕೊನ್ದುಂಡುಗೆ ” ಪದ್ಯವ ಇವು ಹಾಡಿದ್ದು ಹೇಳಿ ಎನ್ನ ನೆಂಪು.
  ದೇವರು ಅವಕ್ಕೆ ಆಯುರಾರೋಗ್ಯ ಕೊಟ್ಟು ನೂರ್ಕಾಲ ಬಾಳಲಿ ಹೇಳಿ ಹಾರೈಸುತ್ತೇ

 4. ಬಾಲಣ್ಣ (ಬಾಲಮಧುರಕಾನನ) says:

  ನವಜೀವನ ಪ್ರೌಢ ಶಾಲೆಯ ಬೆಳ್ಳಿ ಹಬ್ಬದ ಸಮಾರಂಭ(ಆಗಿರೆಕು)ಲ್ಲಿ ಮಹೇಶ ಮಾವ ಹಾಡಿದ ಮುಖೇಶನ ಪ್ರಸಿದ್ದ ಹಾಡು’ ಚಲ್ ಅಕೇಲಾ ‘ ಇನ್ನುದೆ ಕೆಮಿಗೆ ಕೇಳುತ್ತಾ ಇದ್ದು .

  * ಅವರ ಜೀವನದ ಸಾಧನೆ ಎಲ್ಲೋರಿಂಗುದೆ ಸ್ಪೂರ್ತಿ ನೀಡಲಿ ಹೇಳಿ ಹಾರೈಕೆ . ಶುಭವಾಗಲಿ

 5. ಬೊಳುಂಬು ಗೋಪಾಲ says:

  ಎಚ್ಯಂ ಮಾವನ ಸಂಗೀತ ಯಾನ ನಮ್ಮ ಬೈಲಿಲ್ಲಿ ಕಂಡು ತುಂಬಾ ಕೊಶಿ ಆತು. ಅವರ ಸಾಧನೆ ನಿಜವಾಗಿಯೂ ಎಲ್ಲೋರಿಂಗು ಮಾದರಿ. ಎಚ್ಯಂ ಮಹೇಶ ಮಾವನ ಕಂಡು ಪರಿಚಯ ಇಲ್ಲದ್ರೂ, ಅವರ ತಮ್ಮ ಗಣಪತಿ ಎನ್ನ ಕ್ಲಾಸು ಮೇಟು, ದೋಸ್ತಿ. ಎಂಗಳ ಕ್ಲಾಸಿನವಕ್ಕೆಲ್ಲ ಅವನೇ ಎಚ್ಯಂ. ಒಳ್ಳೆ ಮಾತುಗಾರ. ಅವರ ಮನಗೆಹೋಗಿ ಹಿರಿಯರಾದ ಎಚ್ಯಂ ನಾರಾಯಣ ಮಾವನ ಹತ್ರೆ ಕೊಶಿ ಕೊಶಿಲಿ ಮಾತಾಡಿ ಅವರ ಆತಿಥ್ಯವ ಸವಿದವ ಆನೂ ಒಬ್ಬ ಹೇಳ್ಲೆ ಹೆಮ್ಮೆ ಆವ್ತಾ ಇದ್ದು. ನಮ್ಮ ಬೈಲಿನ ಮಹೇಶನ ಮೂಲಕ ಎಚ್ಯಂ ಮಹೇಶನ ಪರಿಚಯ ಆದ್ಸು, ತುಂಬಾ ಸಂತೋಷ ಆತು. ನಮ್ಮ ಹವ್ಯಕ ಸಮಾಜಕ್ಕೆ ಹೆಸರು ತಂದು ಕೊಟ್ಟ ಎಚ್ಯಂ ಕುಟುಂಬಕ್ಕೆ ಅಭಿನಂದನೆಗೊ.

 6. ಹರೇರಾಮ, ಎಚ್.ಎಮ್.ಮಹೇಶ ಎಂಗಳ ಕುಟುಂಬದೋನು(ಕಾನ ಮೂಡಕರೆ). ಎನಗೆ ಬಾವನೋರ ಮಗ. ಅವನ ಪ್ರತಿಭೆ ನಮ್ಮ ಬಯಲಿಲ್ಲಿ ಬೆಣ್ಚಿಗೆ ಬಂದದು ಬಹು ಕೊಶಿ ಆತು. ಅವಂಗೆ ಧೀರ್ಘಾಯುಷ್ಯ ಸಿಕ್ಕಿ ಅವನ ಮುಂದಾಣ ಇಷ್ಟಾರ್ಥಂಗೊ ಸಿಕ್ಕಲಿ ಹೇಳಿ ಪ್ರಾರ್ಥನೆ.

 7. ಸುಭಗ says:

  ಎಚ್.ಎಂ. ಮಹೇಶಣ್ಣನ ಅತ್ಯದ್ಭುತ ಸಾಧನೆಗೆ ಮನ:ಪೂರ್ವಕ ನಮನಂಗೊ.
  ಇಂಜಿನಿಯರೋ ಡಾಕುಟ್ರೋ ಅಧಿಕಾರಿಯೋ ಆಗಿ ಹೆಸರುಹೋದವು ನಮ್ಮ ಸಮಾಜಲ್ಲಿ ಹಲವು ಜೆನ ಇಕ್ಕು. ಆದರೆ ಅತಿ ವಿರಳದ, ಗರಿಷ್ಠ ಸವಾಲಿನ ಈ ಉದ್ಯಮಕ್ಕೆ ಕೈಹಾಕಿ ಜಯಿಸಿದವು ಇವು ಮಾಂತ್ರ.
  ಎಚ್ಚೆಂ ಮಹೇಶಣ್ಣ ಹಲವಾರು ಜನಪ್ರಿಯ ತುಳು ಸಿನೆಮಾ ಪದಂಗಳ ಹಾಡಿದ್ದವು.
  ಸಾದಿಗ್ ಬರ್ಪಾನಾ ಅತ್ತ್ ಗುದ್ದ್ ತಿನ್ಪಾನಾ? ಹೀಂಗಿರ್ತ ಕೆಲವು ಪದಂಗಳ ಆನು ಸಣ್ಣಾಗಿಪ್ಪಗ ಕೇಳಿಯೊಂಡು ಇತ್ತಿದ್ದೆ.
  ಹೇಳಿದಾಂಗೆ ಈ ಮಹೇಶಣ್ಣನ ಮದುವೆಗೆ ಆನೂ ಹೋಯಿದೆ ಇದಾ…!
  ಇವು ಎನ್ನ ದೊಡ್ಡಬ್ಬೆಗೆ ನೆಂಟ್ರು. ಅವರೊಟ್ಟಿಂಗೆ ಆನುದೆ ಹೋದ್ದು. ಮಧೂರು ದೇವಸ್ಥಾನಲ್ಲಿ ಮದುವೆ. ಮಹೇಶಣ್ಣನ ಸಂಗೀತದ ’ಮರ್ಲು’ ಮದುವೆಲಿಯೂ ಕಂಡಿದು. ಅಂಬಗಾಣ ಕಾಲಲ್ಲಿ ಸಿನೆಮಂಗಳಲ್ಲಿ ಮಾಂತ್ರ ಕಂಡೊಂಡಿದ್ದ ಹಲವು ನಮುನೆ ಹೆಟ್ಟುತ್ತ, ಬಾರ್ಸುತ್ತ ವಾದ್ಯಂಗೊ ಇದ್ದ ಸಂಗೀತ ರಸಮಂಜರಿ ಕಾರ್ಯಕ್ರಮ ಇತ್ತು. ಹಾಂಗೆ ಅವರ ಗೌ..ಜಿ ಮದುವೆಗೆ ಹೋದ್ದು ಈಗಳೂ ನೆಂಪಾವ್ತು.

 8. ಎಚ್.ಎಂ ಮಹೇಶ್ says:

  ಒಪ್ಪಣ್ಣ ಎಲ್ಯೋ ಮೂಲೆಲ್ಲಿಪ್ಪ ನಮ್ಮ ಗುರುತಿಸಿ ಶುದ್ದಿಯ ಬರದ್ದು ನೋಡಿ ತುಂಬಾ ಕೊಶಿ ಆತು. ಧನ್ಯವಾದಂಗೊ. ಪ್ರೀತ್ಯಾದರ ಅಭಿಮಾನದ ಒಪ್ಪಂಗಳ ಕೂಡ ಓದಿ ಕೊಶಿ ಆತು. ಎಲ್ಲರಿಂಗೂ ಪ್ರಪ್ರತ್ಯೇಕ ಧನ್ಯವಾದಂಗೊ,

  ಒಪ್ಪಣ್ಣ ಬೈಲಿನ ಕೆಲವು ಸಮಯಂದ ಕಣ್ಣಾಡ್ಯೊಸಿಂಡಿದ್ದೆ. ಹಲವು ಶುದ್ದಿಗಳನ್ನೂ ಅನುಭವಿಸಿ ಓದಿದ್ದೆ. ಬೈಲ ಬಂಧುಗಳ ಉತ್ಸಾಹ, ಬರವ ಶುದ್ದಿಗೊ ತುಂಬ ಲಾಯಕಕ್ಕೆ ಮೂಡಿ ಬತ್ತಾ ಇದ್ದು ಹೇಳಿ ಹೆಮ್ಮೆಂದ ಹೇಳ್ಳೆ ಸಂತೋಷ ಆವ್ತು. ಭಾಷಾ ತಾಜತನಂದ ಹವ್ಯಕ ಸಾಹಿತ್ಯ ಸೇವೆಯ ಮಾಡ್ಯೊಂಡು ಬಪ್ಪ ಬೈಲ ಎಲ್ಲ ಬಂಧುಗೊಕ್ಕೂ ನಮಸ್ಕಾರ. ಒಪ್ಪಣ್ಣ ಬರವ ಶುದ್ದಿಯ ಶೈಲಿ, ವಿಷಯ ಗಾಂಭೀರ್ಯ ಒಳ್ಳೆ ಚಿಂತನೆಂದ ಕೂಡಿ ಗಮನಾರ್ಹವಾಗಿದ್ದು.

  ನಮ್ಮ ಅಬ್ಬೆ ಭಾಷೆಯ ಉಳಿಶಿ ಬೆಳೆಶಿ ಪ್ರೋತ್ಸಾಹಿಸಿಗೊಂಡು ಬಪ್ಪ ಒಪ್ಪಣ್ಣ ಬೈಲಿಂಗೆ ಧನ್ಯವಾದ ಸಹಿತ ಸದಾ ಸಹಕಾರ ನಮ್ಮ ಕಡೆಂದಲೂ ಇದ್ದು. ಒಪ್ಪಣ್ಣ ಬೈಲು ಬೆಳೆಯಲಿ, ಕೀರ್ತಿಗಳಿಸಲಿ ಹೇಳಿ ಧನ್ಯತಾಪೂರ್ವಕವಾಗಿ ಆಶಿಸುತ್ತೆ.

 9. ರಘುಮುಳಿಯ says:

  “ಸಂಗೀತಾ” ಹೇಳಿಯಪ್ಪಗ ನೆಂಪಪ್ಪದು “ಭರತಾಗಮನ”,” ಶೂರ್ಪಣಖಾ ಮಾನಭಂಗ, “ವಾಲಿಮೋಕ್ಷ” “ಕರ್ಣಭೇದನ” ತಾಳಮದ್ದಲೆ ಕ್ಯಾಸೆಟ್ಟುಗೊ. ತಾಳಮದ್ದಲೆ ಕ್ಷೇತ್ರದ ಪರಿಚಯ ಪರವೂರುಗೊಕ್ಕೂ ಅಪ್ಪಲೆ “ಸ೦ಗೀತಾ” ಮುಖ್ಯ ಕಾರಣ ಹೇಳಿರೆ ತಪ್ಪಲ್ಲ.ತನ್ನ ಕಾರ್ಯಕ್ಷೇತ್ರಲ್ಲಿ ಸದಾ ಪರಿಶ್ರಮ ಪಟ್ಟ ಕರ್ಮಯೋಗಿಯ ಪರಿಚಯ ಬೈಲಿಲಿ ಓದಿ ಕೊಶಿಯಾತು.
  ನಮ್ಮ ಚೆನ್ನೈಭಾವನ ಕಾರ್ಯಕ್ಷೇತ್ರವೂ ಇಲ್ಲಿಯೇ ಹೇಳ್ತದು ಅಭಿಮಾನದ ವಿಷಯ.ಕೆಲವು ತಿ೦ಗಳು ಮದಲು ಒ೦ದು ಕ್ಷಣ “ಸ೦ಗೀತಾ” ಲ್ಲಿ ಚೆನ್ನೈಭಾವನನ್ನೂ ಶ್ರೀಕೃಷ್ಣ ಮಾವನನ್ನೂ ಆತ್ಮೀಯವಾಗಿ ಭೇಟಿ ಮಾಡಿ ಮಾತಾಡಿ ಚಾಯ ಕುಡುದ್ದದು ಸವಿನೆನಪು.
  ಶರ್ಮಪ್ಪಚ್ಚಿ , “ಪಕ್ಕಿಲು ಮೂಜಿ ಒಂಜೇ ಗೂಡುಡು..” ಬಾಲ್ಯಲ್ಲಿ ಕೇಳಿದ ಪ್ರಸಿದ್ಧ ಪದ್ಯ . ಎಚ್ ಎಂ ಮಾವ ಹಾಡಿದ್ದದೋ? ಈಗ ಆ ಪದ್ಯಂಗೊ ಎಲ್ಲಿಯಾರು ಸಿಕ್ಕುಗೋ ?!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *