Oppanna.com

ಕುಟುಂಬ, ವೇಷ, ಶಿಕ್ಷಣ, ಶಾಸ್ತ್ರ, ಔಷಧ –ಹೊಸತ್ತು ಬಂದರೂ ನಮ್ಮದಿರಳಿ!!

ಬರದೋರು :   ಒಪ್ಪಣ್ಣ    on   18/04/2014    3 ಒಪ್ಪಂಗೊ

ಅಂಬೆರ್ಪು ಎಷ್ಟೇ ಇದ್ದರೂ ಬೈಲಿಂಗೆ ಶುದ್ದಿ ಹೇಳುವಗ ಅದೆಲ್ಲ ಲಗಾವಿಲ್ಲೆ ಅಪ್ಪೋ.
ಹಾಂಗೆ ನೋಡಿರೆ, ಬೈಲಿನ ಎಲ್ಲೋರುದೇ ಅಂಬೆರ್ಪೇ! ಮುಳಿಯದ ಉಪ್ನಾನದ ಅಂಬೇರ್ಪು ಕಳುದ ಬೆನ್ನಿಂಗೆ ಬಂತು – ಓಟಿನ ಅಂಬೆರ್ಪು.
ಸಾರಡಿ ಪುಳ್ಳಿಯನ್ನೂ ಸೇರಿ ಕೆಲವು ಜೆನ ಕಳುದ ವಾರ ಓಟು ಹಾಕಿದ್ದವು; ಪಂಜಚಿಕ್ಕಯ್ಯನ ಪುಳ್ಳಿ ಈ ವಾರ ಓಟು ಹಾಕಿದವು.ಏನೇ ಆಗಲಿ, ಸಮಯ ಬಂದಪ್ಪಾಗ ಓಟು ಹಾಕಿಯೇ ಹಾಕುತ್ತವು ಬೈಲಿನೋರು; ಬಿಡ್ತವಿಲ್ಲೆ. ಅದಿರಳಿ.

~

ಮೊನ್ನೆ ಜೆಡ್ಡುಮಾವ° ಮನೆಗೆ ಬಂದಿತ್ತಿದ್ದವು.
ನೆಕ್ರಾಜೆ ಅಪ್ಪಚ್ಚಿಯಲ್ಲಿಗೆ ಹೋಪಗಳೋ, ಗಟ್ಟಿಗಾರು ಅತ್ತೆಮನೆಗೆ ಹೋಪಗಳೋ, ರಾಧಕ್ಕನ ಮನೆಗೆ ಹೋಪಗಳೋ – ಒಂದೊಂದರಿ ಎಡೆದಾರಿಲಿ ಕೂಟರು ನಿಲ್ಲುಸಿ ಮನೆಗೆ ಬಪ್ಪ ಕ್ರಮ ಇದ್ದು ಜೆಡ್ಡುಮಾವಂಗೆ.
ಅವು ಬಂದಿಪ್ಪಾಗ ಶೆಕ್ಕರೆ ಇಲ್ಲದ್ದೆ ಚಾಯ ಮಾಡಿ, ಕೂಡ್ಳೆ ಒಟ್ಟಿಂಗೆ ಏನಾರು ಬಗೆ ಚೀಪೆಯೂ ಇದ್ದರೆ ಆತು; ಸುಮಾರು ಹೊತ್ತು ಸುಖದುಃಖ ಪಟ್ಟಾಂಗ ಆಗಿಯೇ ಹೆರಡುಸ್ಸು.
ಯೇವತ್ತೂ ಒಪ್ಪಣ್ಣ ಇನ್ನೊಬ್ಬನ ಮನೆಗೆ ಹೋಗಿಪ್ಪಾಗ ಶುದ್ದಿ ಸಿಕ್ಕುತ್ತದೇ ಇರ್ಸು; ಈ ಸರ್ತಿ ಜೆಡ್ಡುಮಾವ° ಮನೆಗೆ ಬಂದಿಪ್ಪಾಗಳೇ ಸಿಕ್ಕಿದ ಶುದ್ದಿ ಇದಾ. ಅದೆಂತರ? ಅದುವೇ, ನಮ್ಮ ಭಾರತೀಯ ಪರಂಪರೆಯ ಬಗ್ಗೆ; ಅಜ್ಜಂದ್ರ ಕಾಲದ ಮೌಲ್ಯಂಗಳ ಬಗ್ಗೆ.
ಓಟಿನ ವಿಷಯಂದ ಸುರು ಆದ ಮಾತುಕತೆ ಹೊಡಚ್ಚಿ ಹೊಡಚ್ಚಿ, ಹೊರಳಿ ಹೊರಳಿ ಎತ್ತಿದ್ದು ಪುರಾತನ ಭಾರತಕ್ಕೆ.

~

ಈಗ ಸ್ವಾತಂತ್ರಾನಂತರ ಹೊಸ ಭಾರತವ ಕಟ್ಟುದು, ಮಾಡುದು, ಬೆಳೆಶುದು – ಹೇದು ರಾಜಕಾರಣಿಗೊ ಮಾತಾಡ್ತವಾನೇ, ಬೇರೆಬೇರೆ ದೇಶಂಗಳ ವ್ಯವಸ್ಥೆಗಳ ನೋಡಿ ನಮ್ಮ ದೇಶಕ್ಕೆ ಅಳವಡುಸುತ್ತರ ಬಗ್ಗೆ ಮಾತಾಡ್ತವಾನೇ, ಹಾಂಗೆ ಮಾಡ್ಳೆಂತ ಇದ್ದು? ನಮ್ಮ ಅಜ್ಜಂದ್ರೇ ಎಷ್ಟೋ ಒರಿಶದ ಅನುಭವಂದ ನಮ್ಮದೇ ಆದ್ಸರ ಕಟ್ಟಿದ್ದವನ್ನೇ, ಅದನ್ನೇ ಅನುಸರುಸುಲಾಗದೋ – ದು ಜೆಡ್ಡುಮಾವನ ಪ್ರಶ್ನೆ. ಬೇರೆಬೇರೆ ಆಯಾಮಂಗಳಲ್ಲಿ ಈ ವಿಚಾರ ವಿಮರ್ಶೆ ಆತು.

~

ಕುಟುಂಬ ಪದ್ಧತಿ:
ಪ್ರಾಚೀನ ಭಾರತಲ್ಲಿ ಒಂದು ಮನೆ ಹೇದರೆ ಒಂದು ಕೂಡುಕುಟುಂಬ. ಅಜ್ಜ ಪಿಜ್ಜಂದ್ರ ಲಾಗಾಯ್ತು ಅಣ್ಣತಮ್ಮಂದ್ರು ಒಟ್ಟಿಂಗೇ ಬಾಳಿ, ಬೆಳಗಿಂಡು; ಸಂಸಾರ ಮಾಡ್ತದು ನಮ್ಮ ಕ್ರಮ ಆಗಿದ್ದತ್ತು. ಇದರಿಂದಾಗಿ, ಹಳೆಕಾಲಲ್ಲಿ ಅನುಭವಿಸಿದ ಕಷ್ಟನಷ್ಟಂಗಳ ಮತ್ತಾಣ ತಲೆಮಾರಿನೋರು ತಿಳ್ಕೊಂಡು, ಅಂಬಗ ಆದ ತಪ್ಪುಗಳ ಮತ್ತಾಣ ತಲೆಮಾರಿನೋರು ತಿದ್ದಿಗೊಂಡು, ಹೊಸ ಚಿಗುರುಗಳ ಹಳೆ ಬೇರುಗೊ ಲಾಲನೆ – ಪೋಷಣೆ ಮಾಡಿಗೊಂಡು ಬೆಳವಲೆ ಅದು ಅನುಕ್ಕೂಲಕರ ವಾತಾವರಣ. ಒಂದಷ್ಟು ಜೆನ ಇಪ್ಪ ದೊಡಾ ಸಂಸಾರ, ಒಬ್ಬೊಬ್ಬರಿಂಗೆ ಒಂದೊಂದು ಕಲೆ-ಸಾಹಿತ್ಯ-ಸಂಪರ್ಕ-ಆತಿಥ್ಯ -ಕ್ರಮ-ಆಚರಣೆ-ದೇವರು-ಪಾರಾಯಣ; ಇದು ಭಾರತೀಯ ಕುಟುಂಬ. ವಿವಿಧತೆ, ಆದರೂ ಏಕತೆ – ಒಂದೇ ಮನೆ. ಒಂದೇ ಮನೆದೇವರು. ಒಂದೇ ಅಶನದಳಗೆ.

ಆದರೆ, ಈಗಾಣ ಆಧುನಿಕ ಕುಟುಂಬಪದ್ಧತಿ ನೋಡಿ ನಿಂಗೊ – ಗೆಂಡನೂ ಹೆಂಡತ್ತಿಯೂ ಒಟ್ಟಿಂಗೇ ಇದ್ದರೆ ಅದುವೇ ಕೂಡು ಕುಟುಂಬ – ಹೇದು ಜೆಡ್ಡುಮಾವ° ನೆಗೆಮಾಡಿದವು.
ಅವರ ನೆಗೆಯೊಳ ಇದ್ದ ಬೇಜಾರ ಒಪ್ಪಣ್ಣನ ಕಣ್ಣಿಂಗೆ ಪಕ್ಕನೆ ಕಂಡತ್ತು.
ಮಕ್ಕೊ ಒಟ್ಟಿಂಗಿದ್ದರೆ ಅದು ಭಾರೀ ವಿಶೇಷ. ಅಪ್ಪಮ್ಮ ಅವರೊಟ್ಟಿಂಗೇ ಬದ್ಕುತ್ತರೆ ಅದು ಇನ್ನೂ ವಿಶೇಷ; ಸಾವಿರಕ್ಕೊಂದು. ಅಜ್ಜಜ್ಜಿಯೂ ಅವರೊಟ್ಟಿಂಗೇ ಇದ್ದರೆ ಅದು ಇನ್ನೂ ಇನ್ನೂ ವಿಶೇಷ; ಲಕ್ಷಕ್ಕೊಂದು.
ಪ್ರಿಜ್ಜು, ಟೀವಿ ಕಂಪೆನಿಯೋರುದೇ ಈ ನಮುನೆ “ಸಣ್ಣ ಸಂಸಾರ”ವ ಓರೆಗೆ ಬೆಂಬಲ ಮಾಡ್ತವಾಡ; ಅವರ ವಸ್ತುಗೊ ಹೆಚ್ಚು ಮಾರಾಟ ಆಗಿ ಹೋಪಲೆ ಬೇಕಾಗಿ. ಒಟ್ಟಾಗಿ ನಮ್ಮ ಭಾರತೀಯ ಕುಟುಂಬ ವೆವಸ್ತೆ ಈಗ ಕಾಂಬಲೇ ಇಲ್ಲೆ – ಹೇದು ಬೇಜಾರು ಮಾಡಿಗೊಂಡವು.

~

ವೇಷ – ಭೂಷಣ:
ನಿಂಗೊಗೆ ನೆರಿಯದಜ್ಜನ ವೇಷಭೂಷಣ ನೆಂಪು ಬತ್ತೋ? ಒಂದು ಮುಂಡು ಸುತ್ತುಗು; ಒಂದು ತೋರ್ತು ಹೆಗಲಿಂಗೆ ಮಡಿಕ್ಕೊಂಗು. ಮೀವಲೆ ಹೋಪಗಳೂ ಹಾಂಗೇ, ಮಿಂದಿಕ್ಕಿ ಬಂದಪ್ಪಗಳೂ ಹಾಂಗೇ, ತೋಟಕ್ಕೆ ಹೋವುತ್ತರೂ ಹಾಂಗೇ, ಪೇಟಗೆ ಹೋವುತ್ತರೂ ಹಾಂಗೇ. ಅದು ನಮ್ಮೋರ ಹಳಬ್ಬರ ವೇಷಭೂಷಣ.
ಕೆಲವು ಜೆನ ಇದೇ ಮುಂಡು-ಚೆಂಡಿತುಂಡಿನ ಒಟ್ಟಿಂಗೆ ಒಂದು ಬೆಳಿ ಅಂಗಿಯನ್ನೂ ಹಾಕಿಗೊಂಗು; ಅಷ್ಟೇ.
ತುಂಬಾ ದೊಡ್ಡೋರಲ್ಲಿಗೆ ಹೋಪಗ ತಲಗೆ ಒಂದು ಮುಂಡಾಸೂ ಕಟ್ಟಿಗೊಂಗು. ಅದಲ್ಲದ್ದರೆ ಜೊಟ್ಟು ಬಿಟ್ಟುಗೊಂಡೇ ಹೋಕು.
ಮಾಣಿ ಆದರೂ, ಕೂಸು ಆದರೂ ಜೊಟ್ಟು ಜೊಟ್ಟೇ ಇದಾ! 🙂

ಈಗ, ಪಾಶ್ಚಾತ್ಯರ ಅನುಕರಣೆಂದಾಗಿ – ನವಗೂ ಪೇಂಟು – ಶರ್ಟು – ಕೋಟು – ಬೂಟು – ಟೈ – ಹೀಂಗಿರ್ಸು ಬಯಿಂದು. ಅವಕ್ಕೆ ಅಲ್ಲಿ ಛಳಿಯೂರು ಆದ ಕಾರಣ ಕೊರಳೊರಗೆ ಮುಚ್ಚಿಗೊಂಡು ಇರ್ತ ಅಂಗಿಯೂ, ಅದನ್ನೂ ಬಿಗುದು ಮಡುಗೇಕಾವುತ್ತು; ಹಾಂಗಾಗಿ ಒಂದು ಟೈ-ಟು ಕಟ್ಟುತ್ತ ಟೈ ಬಳ್ಳಿ. ಅಜ್ಜಿಯಕ್ಕಳ ಜೋಳಿಗೆ-ಸಂಚಿ ಹೋಗಿ ಈಗ ಬಂದದು ವೇನಿಟಿ ಬೇಗು. ರೂಪತ್ತೆಗೆ ಅದೊಂದು ಇಲ್ಲದ್ದರೆ ನೆರೆಕರೆ ಜೆಂಬ್ರಕ್ಕೆ ಹೋದ್ದದೂ ಹೋದ ಹಾಂಗಾವುತ್ತಿಲ್ಲೆ. ಅದಿರಳಿ. ರೂಪತ್ತೆಯ ಮಗಳಿಂಗೆ ಲಿಪ್-ಸ್ಟಿಕ್ಕು, ಐಬ್ರೋ ಎಲ್ಲ ಬೇಕಾವುತ್ತು  ಹೇದವು. ಜೆಡ್ಡುಮಾವಂಗೆ ಮಗಳಕ್ಕೊ, ಪುಳ್ಯಕ್ಕೊ ಎಲ್ಲ ಇಪ್ಪ ಕಾರಣ ಹೀಂಗಿರ್ತ ಶಬ್ದಂಗೊ ಅರಡಿಗಪ್ಪೋ. ಒಪ್ಪಣ್ಣಂಗೆ ಅದೆಲ್ಲ ಅರಡಿಯ.

~

ಶಿಕ್ಷಣ:
ಮದಲಿಂಗೆ ಭಾರತದ ಶಿಕ್ಷಣ ಪದ್ಧತಿ ಯೇವ ನಮುನೆ ಇದ್ದತ್ತು ಹೇದು ಅರಡಿಯೇಕಾರೆ ಹರಿಹರಪುರವೋ, ರಾಮಚಂದ್ರಾಪುರವೋ – ಮಣ್ಣ ಹೋಗಿಯೇ ತಿಳಿಯೇಕಟ್ಟೆ. ಒಂದು ಗುರುಕುಲ. ಅಲ್ಲಿ ಗುರುಗೊ, ಅವರೊಟ್ಟಿಂಗೆ ಶಿಷ್ಯಂದ್ರು. ಸಹಜೀವನ, ಸಹಭೋಜನ. ಗುರುಗಳ ಸೇವೆಲೇ ಮಕ್ಕೊ ಬದ್ಕುದು. ಅವು ರಾಜರ ಮಕ್ಕೊ ಆಗಿಕ್ಕು, ಆಳುಗಳ ಮಕ್ಕೊ ಆಗಿಕ್ಕು –ಗುರುಕುಲಲ್ಲಿ ಎಲ್ಲೋರುದೇ ಗುರು ಸೇವಕರೇ. ಆ ಗುರುಕುಲದ ಜೀವನಕ್ಕೆ ತಕ್ಕಿತ ಊರಿಲಿ ಭಿಕ್ಷೆ ಎತ್ತಿ, ಧನಧಾನ್ಯ ಸಂಗ್ರಹ ಮಾಡಿ ಗುರುಕುಲಕ್ಕೂ – ಗುರುಗೊಕ್ಕೂ ಹೊರೆ ಇಳುಸುದು. ಗುರುಕುಲಕ್ಕೆ ದಾನ ಮಾಡೇಕು ಹೇಳ್ತ ಬದ್ಧತೆ ಆ ಊರೋರಿಂಗೂ ಇದ್ದ ಕಾರಣ ವಂತಿಗೆ-ದೇಣಿಗೆ ಎತ್ತಲೆ ಹೋಪಗ ಇದ್ದ ತುಮುಲ ಈ ಮಕ್ಕೊಗೆ ಇರ್ತಿಲ್ಲೆ. ಏಳೋ-ಹನ್ನೆರಡೋ ಒರಿಶ ಹಾಂಗೆ ಕಲ್ತು ಹೆರ ಬಂದೋನು ಮತ್ತಾಣ ಜೀವನಕ್ಕೆ ತಯಾರಾಗಿರ್ತ°. ಅಲ್ಯಾಣ ಒಬ್ಬ° ಮಾಣಿ ಆಳುವ ರಾಜ°- ಬುದ್ಧಿಮತ್ತೆಯ ಮಂತ್ರಿ-ವ್ಯಾಪಾರದ ವೈಶ್ಯ- ಕ್ಷಾತ್ರದ ಕ್ಷತ್ರಿಯ-ದೈಹಿಕ ಕಾರ್ಯದ ಶೂದ್ರ – ಎಲ್ಲೋರುದೇ ಆಗಿರ್ತ°. ಹಾಂಗಿಪ್ಪ ವಿದ್ಯಾಭ್ಯಾಸ ನಮ್ಮೋರಿಂಗೆ ಬೇಕಪ್ಪದು. ಎಲ್ಲವುದೇ ಅರಡಿಯೇಕು.

ಆದರೆ ಈಗ?
ಪೊರ್ಬುಗಳ ಕೋನ್ವೆಂಟಿಲಿ ಕಲಿಯೇಕು. ಅವು ಹೇಳಿಕೊಟ್ಟದೇ ಪದ್ಯ. ಅವು ಹೇಳಿಕೊಟ್ಟದೇ ಕನ್ನಡ. ಅವು ಹೇಳಿಕೊಟ್ಟದೇ ಪ್ರಾರ್ಥನೆ. ಅದಾದ ಮತ್ತೆ ಅವರದ್ದೇ ಇಂಗ್ಳೀಶು; ಅವರದ್ದೇ ಪರೀಕ್ಷೆ; ಅವು ಕೊಟ್ಟದೇ ಮಾರ್ಕು.
ಇದೆಲ್ಲದರಿಂದಲೂ ಹೆಚ್ಚಿಗೆ – ಅವು ಹೇಳಿದ್ದದೇ ಪೀಸು!!
ಪೀಸು ಕೊಟ್ಟ ಬೆಶಿಗೆ ಅಬ್ಬೆಪ್ಪಂಗೆ ಮಗ° ಪಾಸಾದರೆ ಸಾಕು – ಹೇದು ಅನುಸುದು. ಶಾಲೆಯೋರಿಂಗೂ ಈ ಸಂಗತಿ ಅರಡಿಗು. ಮತ್ತೆಲ್ಲಿಗೆ ಮಾಣಿಗೆ ಕಲಿಯುವಿಕೆ ಅಪ್ಪದು?!

~

ಶಾಸ್ತ್ರ:
ವಿದ್ಯಾಭ್ಯಾಸ ಬದಲಿತ್ತು ಹೇಳುವಾಗಳೇ ನವಗೆ ಗೊಂತಾವುತ್ತು; ಶಾಸ್ತ್ರಂಗಳೂ ಬದಲಿತ್ತು  – ಹೇದು.
ಮದಲಿಂಗೆ ನಮ್ಮದೇ ಆದ ನ್ಯಾಯಶಾಸ್ತ್ರ, ಆರೋಗ್ಯ ಶಾಸ್ತ್ರ, ವೈದ್ಯ ಶಾಸ್ತ್ರ, ಸಂವಿಧಾನ ಶಾಸ್ತ್ರ ಪದ್ಧತಿಗೊ ಇದ್ದತ್ತು. ಅದೆಲ್ಲವೂ ಇಲ್ಯಾಣ ಜೀವನ ಪದ್ಧತಿಗೆ ಅನುಗುಣವಾಗಿದ್ದತ್ತು. ಬಹು ಹಿಂದೆಯೇ ಚಾಣಕ್ಯನ ಹಾಂಗಿರ್ಸ ಪಂಡಿತಕ್ಕೊ ಬರದ ಹಲವು ನಮುನೆಯ ಶಾಸ್ತ್ರಂಗಳ ನವಗೆ ಬಳುವಳಿ ಆಗಿ ಕೊಟ್ಟಿದವು.
ಆರಂಭಲ್ಲಿ ಇದ್ದ ವಸ್ತುಗೊ ಕ್ರಮೇಣ ಬದಲಾಗಿ, ಕಾಲದೊಟ್ಟಿಂಗೆ ಹೊಂದಿಗೊಂಡು ಬೇರೆಬೇರೆ ಶಾಸ್ತ್ರಂಗೊ ಬಂದು ಹೋಯಿದು. ಹಾಂಗೆ ಬದಲಾದಪ್ಪಗ ಎಲ್ಲವುದೇ ಹಳತ್ತರ ಒಳ್ಳೆದರ ತೆಕ್ಕೊಂಬಲೆ ಮರದ್ದವಿಲ್ಲೆ.

ಈಗ? ಹೊಸತ್ತಾದ ಒಂದು ಸಂವಿಧಾನ. ಅದು ಎಲ್ಲಿಂದ? ನಮ್ಮ ಊರಿಂದು ಅಲ್ಲ.
ಆಪ್ರಿಕಾ, ಯುರೋಪು, ಅಮೇರಿಕ – ಇತ್ಯಾದಿ ದೇಶಂಗಳ ನ್ಯಾಯ ಶಾಸ್ತ್ರಂಗಳ ಆಧರುಸಿ ಬರದ ಪುಸ್ತಕ. ಪುಸ್ತಕ ನೋಡಿ ತರವಾಡುಮನೆ ವಿನು ಕೋಪಿ ಬರದ ಹಾಂಗೆ. ಇರಳಿ.

ಸಂವಿಧಾನವ ಎಲ್ಲೋರುದೇ ಗೌರವಿಸುತ್ತು, ಖಂಡಿತ. ಆದರೆ, ನಮ್ಮ ಹಳತ್ತರ ಸಂಪೂರ್ಣವಾಗಿ ಮೂಲಗೆ ಮಡಗಿ ಹೊಸತ್ತರ ಮಾಡುವೊ° ಹೇದು ಎಲ್ಲೆಲ್ಲಿಂದ ಹೆರ್ಕಿದ ಸಂಗತಿ ಮಾಂತ್ರ ಒಪ್ಪಣ್ಣಂಗೆ ಹಿತ ಆಗದ್ದದು.

~

ಔಷಧ ವಿದ್ಯೆ:
ನವಗೆ ನಮ್ಮದೇ ಆದ ಒಂದು ಔಷಧ ವಿದ್ಯೆ ಇದ್ದತ್ತು; ಅಲ್ಲದೋ? ಆಯುರ್ವೇದ ಪದ್ಧತಿ ಹೇಳುಗದರ. ನಾರು-ಬೇರು-ಚೋರು-ಚೂರು-ಪಾರುಗಳ ಹಿಡುದು ಬಂದು ಕಷಾಯ-ಚೂರ್ಣ-ಆಸವ-ಅರಿಷ್ಠ ಹೇದು ಹಲವು ಬಗೆ ಸತ್ವ ತೆಗದು ಆ ಮೂಲಕ ದೇಹಕ್ಕೆ ಸ್ವೀಕಾರ ಮಾಡ್ತದು. ಹೆಚ್ಚಿಂದೂ ಸಸ್ಯಜನ್ಯವೇ ಆದ ಕಾರಣ ದೇಹಕ್ಕೇನೂ ಬಾಧೆ ಇಲ್ಲೆ ಇದಾ.
ಚೌಕ್ಕಾರುಮಾವಂಗೆ ಆಯುರ್ಪಂಡಿತರು ಹೇಳಿಯೂ ಹೇಳ್ತವು. ಅವು ಸ್ವತಃ ವೈದ್ಯರಾಗಿ ಮದ್ದುಗಳ ಬಗ್ಗೆ ಪರಿಣತಿ ಹೊಂದಿದ ಕಾರಣ.

ಈಗಾಣ ವೈದ್ಯವೃತ್ತಿ ಹೇದರೆ ಹೇಂಗೆ?
ಹೊಟ್ಟೆಬೇನೆ ಹೇದರೆ ಹೊಟ್ಟೆ ಕೊರದವು; ಕಾಲುಬೇನೆ ಹೇದರೆ ಕೀಲು ಬದಲುಸಿದವು. ಬೇನೆಯ ತಿದ್ದಿರೆ ಅಲ್ಲಿಗೆ ಕೆಲಸ ಮುಗುದತ್ತು ಹೇದು ಲೆಕ್ಕ. ಆ ಬೇನೆಗೆ ಮೂಲ ಕಾರಣ ಯೇವದು, ಆ ಕಾರಣವ ಹಿಡುದು ಕೆಲಸ ಮಾಡುದಲ್ಲ!!
ಆಯುರ್ವೇದಲ್ಲಿ ಹಾಂಗಲ್ಲ, ಆಸ್ಪತ್ರೆಗೆ ಬಂದ ಕೂಡ್ಳೇ “ಈ ವ್ಯಕ್ತಿಯ ರೋಗಕ್ಕೆ ದೇಹದ ಅಂದಗೆಡುಸದ್ದೇ ಮದ್ದಿದ್ದೋ?” ನೋಡುಸ್ಸು. ಅದೆಲ್ಲವೂ ಸಸ್ಯಜನ್ಯ ಆದ ಕಾರಣ ದೇಹಕ್ಕೇನೂ ತೊಂದರೆ ಇಲ್ಲೆ ಇದಾ

~

ಹಾಂಗೆ ನೋಡಿರೆ ಎಲ್ಲ ವಿಭಾಗಲ್ಲಿಯೂ, ವಿಷಯಲ್ಲಿಯೂ ನಮ್ಮತ್ವ ಬಿಟ್ಟು ಹೊಸತ್ತಕ್ಕೆ  ಹೋವುತ್ತಾ ಇದ್ದು. ನಮ್ಮದರ್ಲಿಯೂ ಪೂರ ಹಾಳಲ್ಲ, ಕೆಲವು ಅತ್ಯಂತ ಸರಿಯಾದ ವ್ಯವಸ್ಥೆಗಳೂ ಇದ್ದು. ಹಾಂಗೇ ಪಾಶ್ಚಾತ್ಯದ ವೆವಸ್ತೆ ಪೂರ ತಪ್ಪು ಹೇಳ್ಳೆಡಿಯ. ಅದೇ – ಆಗ ಹೇಳಿದಾಂಗೆ, ಅವರವರ ಆಚರಣೆಗೊ ಅವರವರ ಊರಿಂಗೆ ಅನುಕೂಲಕರ. ಹಾಂಗಾಗಿ, ಭಾರತಕ್ಕೆ ಭಾರತದ ಆಚರಣೆಯೇ ವಿಶೇಷ – ಹೇದು ಜೆಡ್ಡುಮಾವ° ಹೇಳಿದವು.

ಕೊತ್ತಂಬರಿ ಕಷಾಯ ಕುಡುದು, ಒಟ್ಟಿಂಗೆ ಒಂತುಂಡು ರಸ್ಕು ತಿಂದದು – ಅವರ “ಆಸಕ್ತಿಲಿ ಹಳತ್ತನ್ನೂ ಒಳಿಶಿಗೊಂಬ, ಅನುಕೂಲಕ್ಕೆ ಹೊಸತ್ತನ್ನೂ ಬಳಸಿಗೊಂಬೊ” – ಹೇಳ್ತ ಧ್ಯೇಯ ಎದ್ದು ಕಂಡತ್ತು.
~

ಅಂಬಗ, ಭಾರತವ ಭಾರತ ಆಗಿಯೇ ಸಾಂಕುತ್ತ ಜೆನವ ಓಟಿಲಿ ಆರುಸಿ ಕೊಡೇಕಾದ ಸಂದರ್ಭವೂ ಇದ್ದಪ್ಪೋ  ಹೇದು ಒಪ್ಪಣ್ಣಂಗೆ ಮತ್ತೊಂದರಿ ನೆಂಪಾತು.

~

ಒಂದೊಪ್ಪ: ಕಶಿ ಮಾವು ನೆಟ್ಟರೂ, ಕಾಟುಮಾವು ಕಡಿಯದ್ದೆ ಇದ್ದರೆ – ಅದು ಅತ್ಯುತ್ತಮ. ಅಲ್ಲದೋ?

3 thoughts on “ಕುಟುಂಬ, ವೇಷ, ಶಿಕ್ಷಣ, ಶಾಸ್ತ್ರ, ಔಷಧ –ಹೊಸತ್ತು ಬಂದರೂ ನಮ್ಮದಿರಳಿ!!

  1. ಸರಿಯಾಗಿ ಹೇಳಿದ್ದೆ ಒಪ್ಪಣ್ಣಾ ಃ)

  2. ಹೊಸತ್ತು ಬಂದರೂ ಹಳತ್ತರ ಮರವಲಾಗ. ಶುದ್ದಿಯ ಪೂರ್ತಿ ಸಾರವ ಕಡೇಣ ಒಂದೊಪ್ಪಲ್ಲಿ ಚೆಂದಕೆ ತಿಳುಸಿ ಕೊಟ್ಟಿದ ಒಪ್ಪಣ್ಣ.
    Z ಮಾವಂಗೆ ಶೆಕ್ಕರೆ ಇಲ್ಲದ್ದೆ ಚಾಯ, ಕೂಡ್ಳೆ ಒಟ್ಟಿಂಗೆ ಏನಾರು ಬಗೆ ಚೀಪೆಯೂ ಇದ್ದರೆ ಆತು – ಇದು ಸೂಪರ್ ಆಯಿದು ಒಪ್ಪಣ್ಣ.
    ಕೊತ್ತಂಬರಿ ಕಷಾಯ, ಒಟ್ಟಿಂಗೆ ರಸ್ಕು, ಇದುದೆ ರೈಸಿದ್ದಿದ. ಒಪ್ಪಣ್ಣನ ಉದಾಹರಣೆಯ ನೋಡಿರೆ ನವಗೆ ಎರಡು ಮಾತಿಲ್ಲೆ.

  3. ಕಶಿಮಾವು ರಸಾಯನಕ್ಕೆ-ಕಾಟುಮಾವು ಸಾರಿಂಗೆ ಲಾಯ್ಕ ಹೇಳಿ ತಿಳ್ಕೊಂಡರೆ ಎಲ್ಲಾ ವಿಷಯಕ್ಕೂ ಅನ್ವಯಿಸಲಕ್ಕು ಒಪ್ಪಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×