Oppanna.com

ಮನೆ ನೆಡೆಶುತ್ತ ಹೆಮ್ಮಕ್ಕೊ ’ಹೇಮಾರ್ಸಿ’ ಮಡಗುದು..

ಬರದೋರು :   ಒಪ್ಪಣ್ಣ    on   10/06/2011    70 ಒಪ್ಪಂಗೊ

ನೂರಾರು ನಮುನೆಯ ಮರಂಗಳ ಬಗ್ಗೆ ಕಳುದ ವಾರ ಮಾತಾಡಿತ್ತು.
ತೊಟ್ಟೆಲಿ ಸಿಕ್ಕುತ್ತ ಯೇವದೋ ಹಸುರು ಕಾಟು ಸೆಸಿಯ ಬದಲಿಂಗೆ ನಮ್ಮಲ್ಲೇ, ನಮ್ಮ ಕಾಡುಗಳಲ್ಲೇ ಇದ್ದಿದ್ದ ’ಕಾಡುಮರಂಗಳ’ ಒಳಿಶಿ ಬೆಳೆಶೇಕು – ಹೇಳ್ತರ ಎಲ್ಲೋರುದೇ ಹೇಳಿಗೊಂಡಿದವು.

ಮದಲಿಂಗೆ ಕಾಲಕಾಲಕ್ಕೆ ಚಳಿ-ಮಳೆ-ಸೆಕೆ ಅಕ್ಕು. ಮಳೆಗಾಲ- ಚಳಿಗಾಲ –ಸೆಕೆಗಾಲ ಚಕ್ರ ಸರಿಯಾಗಿ ತಿರುಗಿಂಡಿದ್ದತ್ತು.
ಮಳೆಗಾಲ ಹೇಳಿತ್ತುಕಂಡ್ರೆ – ಪತ್ನಾಜೆ ಹೊತ್ತಿಂಗೆ ಹಿಡುದರೆ ದೀಪಾವಳೆ ಒರೆಂಗೂ ಇಕ್ಕು. ಒಂದರಿ ಹಿಡುದ ಮಳೆ ಹತ್ತು-ಹದ್ನೈದು ದಿನ ಆದರೂ ಬಿಡ.
ಹನಿ ಕಡಿಯದ್ದೆ ಬಂದುಗೊಂಡೇ ಇದ್ದತ್ತಡ.
ಅಂಬಗ ಕಾಡು ಧಾರಾಳ ಇದ್ದದೇ ಅದಕ್ಕೆ ಕಾರಣ – ಹೇಳುಗು ಮಾಷ್ಟ್ರುಮಾವ°.

~

ಯೇನಂಕೂಡ್ಳಿಲಿ ಮಾಡಿದ ಹಪ್ಪಳ. ಈ ಸರ್ತಿ ಹೇಮಾರ್ಸಿ ಮಡಗಿದ್ದವಡ. ಆಟಿಲಿ ಹೋಪನೋ? 🙂

ಕಳುದವಾರ ಶುದ್ದಿ ಮಾತಾಡುವಗ ಬೈಲಿಲಿ ಬೆಶಿಲಿತ್ತು! ಈಗ ನೋಡಿಗೊಂಡಿದ್ದ ಹಾಂಗೇ ಮಳೆಗಾಲ ಬಂದೂ ಬಿಟ್ಟತ್ತು.
ಧಾರಾಧಾರೆಯಾಗಿ ಮಳೆ ಜೆಪ್ಪುತ್ತರಲ್ಲಿ ಹೊತ್ತುಕಂತಿರೆ ಕರೆಂಟಿರ!
’ಶೋಬಕ್ಕ° ಸಮಗಟ್ಟು ಕರೆಂಟು ಕೊಡ್ತಿಲ್ಲೆ’ ಹೇಳಿ ಅಜ್ಜಕಾನಬಾವ ಗುಣಾಜೆಕುಂಞಿಯ ಹತ್ತರೆ ದೂರುಕೊಟ್ಟಿದನಾಡ. ಎಂತಾವುತ್ತು ನೋಡೇಕಟ್ಟೆ! 😉
ಅದಿರಳಿ.
~
ನಮ್ಮೋರ ಮನೆಗಳಲ್ಲಿ – ರೂಪತ್ತೆಯ ಮನೆಯ ಹಾಂಗಿಪ್ಪ ಒಂದೊಂದರ ಬಿಟ್ಟು – ಬಾಕಿ ಎಲ್ಲ ದಿಕ್ಕೆಯುದೇ ಅಡಿಗೆ ಕಾರ್ಯ ಎಲ್ಲ ಹೆಮ್ಮಕ್ಕಳದ್ದೇ!
ಹೇಳಿರೆ – ಬೇಶಿ ಬಳುಸುದು ಮಾಂತ್ರ ಅಲ್ಲ, ಒಳಾಣ ಸಮಗ್ರ ಜೆಬಾಬ್ದಾರಿದೇ ಬತ್ತು.

ಇಂತಾ ದಿನ ಅಕ್ಕಿ ತಂದದು – ಇನ್ನು ಇಂತಿಷ್ಟು ಮೆಣಸು ಇದ್ದು – ಉದ್ದಿನಬೇಳೆ ಇನ್ನಾಣ ಸರ್ತಿಗೆ ದಕ್ಕಿತ ಇಪ್ಪದಷ್ಟೇ – ಇಂದು ಮೇಲಾರ ಮಾಡಿದ ಲೆಕ್ಕಲ್ಲಿ ನಾಳೆ ಬೋಳು ಕೊದಿಲು – ಬಪ್ಪ ಶೆನಿವಾರಕ್ಕೆ ತುಪ್ಪ ಕಾಸಲಕ್ಕು – ಎರಡುಕಟ್ಟ ಹಪ್ಪಳ ನೆರಕರೆಅಕ್ಕಂಗೆ ಕೊಡೆಕ್ಕು – ಕೆಲಸದ ಹೆಣ್ಣಿನತ್ರೆ ಗೊಂಪಿನ ಸೊಪ್ಪು ತಪ್ಪಲೆ ಹೇಳೆಕ್ಕು – ಬಳ್ಳಿಲಿ ಅಳತ್ತೊಂಡೆ ಮೇಲಾರಕ್ಕೆ ದಕ್ಕಿತ ಇಲ್ಲೆ, ಕೊದಿಲು ಮಾಡ್ಳಕ್ಕಷ್ಟೆ – ನಾಳ್ದು ಪುಳ್ಳಿ ಬತ್ತ, ಅವ ಹಾಲುಂಬದು – ಹೀಂಗಿಪ್ಪ ಸಣ್ಣ ಸಣ್ಣ ಎಷ್ಟೋ ಗಮನಂಗೊ ಮನೆ ಹೆಮ್ಮಕ್ಕೊಗೆ ಇರೆಕ್ಕು, ಸ್ವಾಭಾವಿಕವಾಗಿ ಇರ್ತು.
ಅಂಬಗ ಇದರ ಎಲ್ಲ ಮನಸ್ಸಿಲಿ ಮಡಿಕ್ಕೊಳೆಕ್ಕಾರೆ ಒಂದು ನಿರ್ದಿಷ್ಟ ವೆವಸ್ತೆ ಬೇಡದೋ? ಆ ವೆವಸ್ತೆ ನಮ್ಮ ಹೆಮ್ಮಕ್ಕಳ ನೆತ್ತರಿಲಿ ಇರ್ತು.
ಅಪ್ಪು, ಅದೆಲ್ಲ ಅಭ್ಯಾಸ ಆಗಿ ಬಪ್ಪದು ಮನೆ ಸಂಸ್ಕಾರಲ್ಲಿ.

ಹಾಂಗೆ ನೋಡಿತ್ತುಕಂಡ್ರೆ “ಮನೆಹೆಮ್ಮಕ್ಕೊ” ಹೇಳಿ ಆಯೆಕ್ಕಾರೆ ಇದೆಲ್ಲ ಗೊಂತಿರೆಕ್ಕಷ್ಟೆ!
~
ಈಗಾಣ ಬೆಶಿಲು ಕಾಲ ಹೋಗಿ ಮಳೆಗಾಲ ಸುರು ಆವುತ್ತ ಸಮೆಯಲ್ಲಿ – ಬೈಲಿಲಿ ಮನೆಹೆಮ್ಮಕ್ಕೊ ಬಯಂಕರ ಅಂಬೇರ್ಪು.
ಹಳ್ಳಿಮನೆಗಳಲ್ಲಿ ಮನೆಹೆಮ್ಮಕ್ಕೊಗೆ ಈ ಸಮೆಯಲ್ಲಿ ಎಂತಕೂ ಪುರುಸೋತಿರ!
ಅದೇ ನೋಡಿ ನಿಂಗೊ – ಇಷ್ಟೆಲ್ಲ ಜೆಂಬ್ರಂಗೊ ಇದ್ದರೂ ಪಾತಿ ಅತ್ತೆಯ ಜಾಸ್ತಿ ಕಂಡಿದೇ ಇಲ್ಲೆ. ಅಪುರೂಪಕ್ಕೆ, ಕಳೀಯಬಾರದ್ದ ಜೆಂಬ್ರಕ್ಕೆ ಹೋದ್ದು ಬಿಟ್ರೆ, ಒಳುದಲ್ಲಿಂಗೆ ರಂಗಮಾವನನ್ನೇ ಕಳುಸಿ ಸುದಾರುಸಿದ್ದವು, ಅಲ್ಲದೋ?
ಮಳೆಗಾಲ ಎದುರು ಬಂತಲ್ಲದೋ – ಹೇಮಾರ್ಸಿ ಮಡುಗುದರ್ಲಿ ಎಲ್ಲೋರುದೇ ಅಂಬೆರ್ಪು! ಹೇಮಾರ್ಸುದೋ – ಹಾಂಗೆ ಹೇಳಿತ್ತುಕಂಡ್ರೆ ಎಂತರ?
~

ಹೇಮಾರ್ಸುದು – ಹೇಳಿರೆ ಆರುಸಿ ಮಡುಗುತ್ತದು ಹೇಳಿ ಅರ್ತವೋ ಏನೋ, ಉಮ್ಮಪ್ಪ.
ಶಬ್ದಾರ್ಥ ಒಪ್ಪಣ್ಣಂಗೆ ಸರೀ ಅರಡಿಯ, ಧ್ವನ್ಯಾರ್ಥ ಗೊಂತಕ್ಕಷ್ಟೆ! – ಸಂಗ್ರಹಮಾಡ್ತದು ಹೇಳ್ತ ಅರ್ತಲ್ಲಿ ಹಾಂಗೆ ಹೇಳುಗು.
ಮಳೆಗಾಲಕ್ಕೆ ಬೇಕಾದ ಆಹಾರವಸ್ತುಗೊ, ನೆಟ್ಟಿಬಿತ್ತುಗೊ, ಹಪ್ಪಳ-ಉಪ್ಪಿನಕಾಯಿಗೊ, ತಂಬುಳಿಗಿಪ್ಪದರ ಎಲ್ಲ ಮಳೆಹಿಡಿವ ಮದಲೇ ಸಂಗ್ರಹಮಾಡಿ ಮಡಗುತ್ತದರ “ಹೇಮಾರ್ಸಿ ಮಡುಗುದು” ಹೇಳುಗು.

ಹೇಮಾರ್ಸಿ ಮಡಗುತ್ತದಕ್ಕೂ ನಿರ್ದಿಷ್ಟ ಕ್ರಮಾಚಾರಂಗೊ ಇತ್ತು.
ಮದಲಾಣ ಕಾಲಲ್ಲಿ, ತಿಂಗಳುಗಟ್ಳೆ ಮಳೆಗಾಲ ಇಕ್ಕು, ಅಲ್ಲದೋ? ಹಾಳಪ್ಪಲಾಗ, ಸುರಿವಲಾಗ, ಕೊಳವಲಾಗ!
ಬೇಸಗೆ ಸುರು ಆದರೆ ಸರಿ, ಹೇಮಾರ್ಸಿ ಮಡುಗಾಣ ಸುರು. ದೀರ್ಘಕಾಲ ಹಾಳಾಗದ್ದೆ ಒಳಿಯೇಕಾರೆ ಬಂದವಸ್ತಿಲಿ ಇರೇಕು.
ಬೇರೆಬೇರೆ ವಸ್ತುಗಳ ಬೇರೆಬೇರೆ ವಿಧಾನಲ್ಲಿ ಹೇಮಾರ್ಸು ಮಡಗ್ಗು.  ಮುಖ್ಯವಾಗಿ ಮಡಗುತ್ತ ವಸ್ತುಗಳ, ವಿಧಾನಂಗಳ ಬಗ್ಗೆ ರಜ್ಜ ಮಾತಾಡುವನೋ?
~

ಮಾಷ್ಟ್ರುಮಾವಂಗೆ ಎಲೆತಿನ್ನದ್ದೆ ಕಳೀಯ.
ಅದು ಮಳೆಗಾಲ ಆಗಲಿ, ಸೆಕೆಗಾಲ ಆಗಲಿ, ಹರಿವಾಣ ಹತ್ತರೆ ಬೇಕೇಬೇಕು!
ನೆಡುಮಳೆಗಾಲ ಎಲೆತಿನ್ನೇಕಾರೆ ಅಡಕ್ಕೆ ಎಲ್ಲಿಂದ? ಹಾಂ, ಅದಕ್ಕೂ ಪಿರಿ ಇದ್ದು
– ಲಾಯಿಕದ ಹಣ್ಣಡಕ್ಕೆಗಳ ಒಂದು ಮಣ್ಣಳಗೆಲಿ ಹಾಕಿ, ಬಾಯಿಪೂಜ ನೀರು ಹಾಕಿ ಮಡಗ್ಗು!
ನೀರಿಲಿ ಇರ್ತ ಅಡಕ್ಕೆಗೆ – ನೀರಡಕ್ಕೆ ಹೇಳುಗು.
ಕೆಂಪು ಹಣ್ಣಡಕ್ಕೆಯ ಹೆರಾಣ ಚೋಲಿ ಒಂದರಿಯಾಣದ್ದು ಕೊಳದಪ್ಪಗ ಬಯಾನಕದ ವಾಸನೆ ಬಕ್ಕು.
ನೆಡುಮಳೆಗಾಲ ಅದರ್ಲಿ ನುಸಿ ಮೊಟ್ಟೆಮಡಗಿ, ಹುಳುಗಳೂ ಇರ್ತು.  ಸಣ್ಣ ಇಪ್ಪಗ – ಆ ಹುಳುಗಳ ಚುರ್ಕುತನವ ಕಂಡು ಕೊಶಿಪಡುದೇ ಒಂದು ಆಟ!
ಇಷ್ಟೆಲ್ಲ ಆದರೂ, ಒಳಾಣ ಅಡಕ್ಕಗೆ ಎಂತದೂ ಆಗಿರ್ತಿಲ್ಲೇಡ. ಸ್ವಾಭಾವಿಕವಾಗಿ ಆ ರಕ್ಷಣೆ ಅಡಕ್ಕೆಲೇ ಇರ್ತಿದಾ!
~

ಬೇಸಗೆಲಿ ಗೊನೆ ಕಡುದ ಬಾಳೆಸೆಸಿ ಇಲ್ಲೆಯೋ, ಆ ಇಡೀ ಸೆಸಿಯ ಚೊಲ್ಲಿ (ಸೊಲುದು) ಜಾಲಿಲಿಡೀ ಮಡಗ್ಗು.
ಬಿಂಗಿಮಕ್ಕೊ ಅದರ ದಂಡಿನ ಹಿಡುದು ಟ್ಯೂಬುಲೈಟು – ಹೇಳಿಗೊಂಡು ಆಟ ಆಡುಗಿದಾ!
ಎರಡುವಾರದ ಕಾರಬೆಶಿಲಿಂಗೆ ಬಾಳೆಚೋಲಿಗೊ ಲಾಯಿಕಂಗೆ ಒಣಗಿ ಹಗೂರದ ನಾರು ಅಕ್ಕು.
ಅದರ ಸಪೂರಕ್ಕೆ ಬಿಡುಸಿರೆ ಅದುವೇ “ಬಾಳೆಬಳ್ಳಿ”.ಬಂಡಾಡಿಅಜ್ಜಿ ಇದನ್ನೇ ಕಟ್ಟಕಟ್ಟಿ ಮಡಗ್ಗು, ಮಳೆಗಾಲಲ್ಲಿ ಎಂತಾರು ಕಟ್ಳೆ ಬೇಕಾವುತ್ತು – ಹೇಳಿಗೊಂಡು.
~
ಅಡಕ್ಕೆತೋಟಲ್ಲಿ ಬೀಳ್ತ ಸೋಗೆ ಇದ್ದಲ್ಲದೋ – ಅದರ ಅಂತೇ ಬಿಡವು.
ಗೆನಾ ಸೋಗೆಗಳ ತಂದು ಒಂದೊಂದೇ ಕಡ್ಡಿಗಳ ಬಿಡುಸುಗು ಅಜ್ಯಕ್ಕೊ.
ಕಡ್ಡಿಕಡ್ಡಿ ಸೇರಿಪ್ಪಗ ಆತಿಲ್ಯೋ ಹಿಡಿಸುಡೀ – ನೆಗೆಮಾಣಿಯ ಪದ್ಯ ಒಂದಿದ್ದು.
ಹಾಂಗೆ ಹಿಡಿಸುಡಿಗಳ ಕಟ್ಟಕಟ್ಟಿ ಅಟ್ಟಲ್ಲಿ ಮಡಗಿರೆ ಅಗತ್ಯಕ್ಕಪ್ಪಗ ಒಂದೊಂದೇ ಹೆರಬಕ್ಕು.
~
ಸೋಗೆಲಿರ್ತ ಹಾಳೆಗೊಕ್ಕೆ ಎಂತ ಗೆತಿ?
ಗೆನಾ ಹಾಳೆಗಳ ನಾರಿಗೆ ತೆಗದು, ಹದಾಕೆ ಒಣಗುಸಿ, ಕಟ್ಟ ಕಟ್ಟಿ ಮಡಗಿರೆ – ನಾನಾ ನಮುನೆ ಅಗತ್ಯಕ್ಕೆ ಬೇಕಾವುತ್ತು.
ಅಡಕ್ಕೆ ಹಾಳೆಯ ಬಹು ಉಪಯೋಗಂಗಳ ಬಗ್ಗೆಯೇ ಒಂದು ಶುದ್ದಿ ಮಾತಾಡಿದ್ದು ನಾವು, ಗೊಂತಿದ್ದನ್ನೇ?
~

ಬೇಸಗೆಲಿ ಅಡಕ್ಕೆ ಕೊಟ್ಟಿದವಲ್ಲದೋ, ಮಾವ – ಆ ಅಡಕ್ಕೆಯ ಚೋಲಿಯ ಅಂತೇ ಇಡ್ಕಲಿಲ್ಲೆ.
ಒಟ್ಟೆ ಗೋಣಿಲಿ ತುಂಬುಸಿ, ಸೌದಿ ಕೊಟ್ಟಗೆಲಿ ಮಡಗ್ಗು. ಆಟಿಲಿ ನುಸಿಉಪದ್ರ ಜೋರಪ್ಪಗ ಬಾಯಡೆಗೆ ಕೆಂಡಹಾಕಿ, ಹೊಗೆ ಹಾಕಲೆ ಬೇಕು- ಹೇಳಿಗೊಂಡು.
ತೆಂಗಿನಚೋಲಿಯೂ ಹಾಂಗೇ, ಗೋಣಿಲಿ ಕಟ್ಟಿ ಮಡಗಿದ್ದರ್ಲಿ, ಮಳೆಗಾಲ ಬೆಶಿನೀರಿಂಗೆ ಕಿಚ್ಚಾಕಲೆ ಹೇಳಿಮಾಡುಸಿದ್ದು.

ತೆಂಗಿನ ಸರ್ವಾಂಗವೂ ಉಪಕಾರಿಯೇ.
ಹಾಂಗಾಗಿ, ನಾರು, ಸಾಲಿಗ, ಕೊತ್ತಳಿಂಗೆ ಎಲ್ಲವನ್ನೂ ಒಯಿಶಿ ಮಡುಗಲೂ ಇದ್ದಿದಾ.
ಮಸಿಪಾತ್ರ ತಿಕ್ಕಲೆ ಕಾಯಿಸುಗುಡು ಬೇಕೇಬೇಕು.
~
ಕೊತ್ತಳಿಂಗೆ ಒಯಿಶಿ ಮಡುಗುತ್ತಲ್ಲೇ ಸೌದಿಯೂ ಓಯಿಶುಗು. ಅದುವೇ ಸೌದಿ ಕೊಟ್ಟಗೆ.
ಸೌದಿ ಅಡಿಲಿ ಎಲಿ ಓಡಿಂಡಿಕ್ಕು. ಎಲಿ ತಿಂಬಲೆ ಜಂತುಗೊ, ಕೇರೆಗೊ ಬಂದೇ ಬಕ್ಕು. ಹಾಂಗಾಗಿ ಸೌದಿಕೊಟ್ಟಗೆಯ ಮನೆಂದ ರಜ ದೂರಲ್ಲೇ ಕಟ್ಟುಗು.
~

ಬೆದುರೋ, ಓಟೆಬೆದ್ರೋ ಮಣ್ಣ ಇದ್ದರೆ ಅದರ ಎರಡು ಗೆಂಟಿನ ಉದ್ದಕೆ ತುಂಡುಮಾಡುಗು.
ಕಡೆಗಿಂಟಿನ ಹಿಡುದು, ಇನ್ನೊಂದು ಗೆಂಟಿನ ಹತ್ತರೆ ತುಂಡುಮಾಡಿರೆ ಬುತ್ತಿಪಾತ್ರದ ಹಾಂಗೆ ಮಾಡ್ಳಾವುತ್ತು. ಕೊಡಿಗೆಂಟನ್ನೇ ಮುಚ್ಚಲು ಮಾಡ್ಳೆ ಬೈಲಿನ ಮಾವಂದ್ರಿಂಗೆ ಅರಡಿಗು.
ಓಪಾಸನದ ಅಂಡೆ ನೋಡಿ ಗುರ್ತ ಇದ್ದಲ್ಲದೋ? ಅದೇ ನಮುನೆಗೆ. ಈ ನಮುನೆ ಓಟೆಗೊ ಬೇರೆಬೇರೆ ವಸ್ತುಗಳ ಬೆಶ್ಚಂಗೆ ತುಂಬುಸಿ ಮಡಗಲೆ ಉಪಯೋಗಿ.
~
ಒರಿಶಲ್ಲಿ ಎರಡು ಸರ್ತಿ ನೆಟ್ಟಿಕಾಯಿ ಮಾಡ್ಳಾವುತ್ತು.
ಮಳೆಗಾಲ ಕನ್ನೆತಿಂಗಳಿಲಿ –  ಒಂದರಿ, ಬೇಸಗೆಲಿ  ಒಂದರಿ.
ಒಂದರಿ ಮಾಡಿದರೆ ಅದರ ಬಿತ್ತುಗಳ ತೆಗದು ಮಡುಗೇಕು, ಮತ್ತಾಣದ್ದಕ್ಕೆ.
ಬೆಂಡೆಸಾಲಿನ ಗೆನಾಸೆಸಿಲಿ ಆದ ಗೆನಾ ಕಾಯಿಯ ಕೊಯ್ಯದ್ದೇ ಬೆಳದು ಒಣಗುಲೆ ಬಿಡುಗು.
ಒಣಗಿದ ಬೆಂಡೆಯ ಕೊಯಿದು, ಬೆಳಿನೂಲಿನ ಲಾಯಿಕಕ್ಕೆ ಸುಂದಿ, ನಾಕು ಬೆಶಿಲಿಂಗೆ ಒಣಗುಸಿ ತೆಗದು ಮಡಗ್ಗು.
ಸೌತ್ತೆ, ಚೆಕ್ಕರ್ಪೆ, ಕುಂಬ್ಳ, ಚೀನಿ, ಹರುವೆ,  – ಹೀಂಗಿರ್ತ ನೆಟ್ಟಿಬಿತ್ತುಗಳ – ಆಗ ಹೇಳಿದ ಬೆದುರುಪಾತ್ರೆಲಿ ಬೆಶ್ಚಂಗೆ ಮಡಗ್ಗು.
ಈಗೀಗ ತೊಟ್ಟೆಲಿ ಬೆಶ್ಚಂಗೆ ಕಟ್ಟಿ ಷ್ಟೀಲಿಂದೋ, ಕೀಜಿದೋ ಪಾತ್ರಲ್ಲಿ ಮುಚ್ಚಲು ಹಾಕಿ ಮಡಗ್ಗು.
ಬೇಕಪ್ಪಗ ತೆಗದು, ಬಿತ್ತು ಹಾಕುಗು.
ಪ್ರತಿ ಬೆಳೆಲಿಯೂ, ಇನ್ನಾಣ ಸರ್ತಿಯಾಣ ಬೆಳಗಿಪ್ಪ ಬಿತ್ತಿನ ತೆಗದು ಮಡುಗಲೆ ಮರೆಯವು.
~

ಮುಖ್ಯ ಆಹಾರ ಆದ “ಭತ್ತ”ವ ಮದಲಿಂಗೆ ಮುಡಿಕಟ್ಟಿ ಮಡಗ್ಗು.
ನಲುವತ್ತೆರಡು ಸೇರು ಬತ್ತವ ಬೆಳುಲಿನ ಬಳ್ಳಿಲಿ ಸುಂದಿಸುಂದಿ – ಗಾಳಿಯೂ ಹೋಗದ್ದ ಹಾಂಗೆ ಕಟ್ಟುತ್ತವಲ್ಲದೋ – ಅದು ನಿಜವಾಗಿಯೂ ಮೆಚ್ಚೇಕಾದ್ದೇ.
ಈಗಾಣೋರಿಂಗೆ ಈ ಕಲೆ ಅರಡಿಗೋ?

~

ಹಪ್ಪಳ ಮಾಡಿ ಮಡುಗುತ್ತದು ಗೊಂತಿದ್ದನ್ನೇ?
ಹಲಸಿನ ಕಾಯಿ ಬೆಳದ್ದರ ಕೊರದು – ಸೆಕೆಗೆಬೇಶಿ – ಕಡದು – ಉಂಡೆಮಾಡಿ – ಉರೂಟಿಂಗೆ ಒತ್ತಿ – ಹುಲ್ಲಸೆಲಿ ಒಸ್ಸಿ – ಬೆಶಿಲಿಂಗೆ ಒಣಗುಸುಗು.
ಒಂದು ವಾರದ ಪಷ್ಟ್ಳಾಸು ಬೆಶಿಲು ಸಿಕ್ಕಿರೆ ಹಲಸಿನ ಹಪ್ಪಳ ಒಣಗಿ ತೆಯಾರು!
ಕಡವಗ ರಜ್ಜ ಮೆಣಸೋ – ಕೊತ್ತಂಬರಿಯೋ ಮಣ್ಣ ಸೇರುಸಿರೆ ಕಾರ-ಮಸಾಲೆಯ ಹಪ್ಪಳವೂ ಮಾಡ್ಳಾವುತ್ತು.
ಸಮಕ್ಕೆ ಒಣಗಿದ್ದರ ಒಂದು ಇರುಳು ತಂಪಿಂಗೆ ದೇವರೊಳ ಮಡಗಿರೆ ಕಟ್ಟಕಟ್ಳೆ ರಜ್ಜ ಞಾಣಿ ಸಿಕ್ಕುಗಿದಾ.
ಇಪ್ಪತ್ತೈದು-ಇಪ್ಪತ್ತೈದು ಹಪ್ಪಳವ ಲೆಕ್ಕಮಾಡಿ, ಬಾಳೆಬಳ್ಳಿಲಿ ಕಟ್ಟಕಟ್ಟಿ ಮಡಗಿರೆ, ಹಂಚುತ್ತೋರಿಂಗೆಲ್ಲ ಹಂಚಿ, ಒಳುದ್ದರ ತೆಗದು ಮಡಗ್ಗು.
ಆಟಿ ತಿಂಗಳ ಮಳಗೆ ಒಂದೊಂದೇ ಕಟ್ಟ ಬಿಡುಸಿ ಹೊರುದು, ಕಾಯಿಸುಳಿಯ ಒಟ್ಟಿಂಗೆ ಕೊಟ್ರೆ, ಮುಗುದ್ದೇ ಗೊಂತಾಗ!
~

ಹೀಂಗೆ ಹಲಸಿನಕಾಯಿ ಕೊರವಗ ಸಿಕ್ಕುತ್ತ ಬೇಳೆಗೊ ಇಲ್ಲೆಯೋ – ಇದನ್ನೂ ಅಂತೇ ಬಿಡವು.
ಉಪ್ಪುನೀರು ಕೊಟ್ಟು , ಬೇಶಿ ಶಾಂತಾಣಿ ಮಾಡುಗು, ಶಾಂತತ್ತೆ! 🙂
ಅಷ್ಟೇ ಅಲ್ಲದ್ದೆ, ಹಸಿಬೇಳೆಯನ್ನೂ ತೆಗದು ಮಡಗ್ಗು. ಅಂತೇ ಮಡಗಿರೆ ಒಂದೋ ಹುಟ್ಟುಗು, ಅಲ್ಲದ್ದರೆ ಒಳ ಹಾಳಕ್ಕು.
ಅದಕ್ಕೆ, ಬೇಳಗೆ ಮಣ್ಣು ಉದ್ದಿ ಮಡಗ್ಗು. ಹಸಿ ಕೆಂಪುಮಣ್ಣು ರಜ ಉದ್ದಿಯಪ್ಪಗ ಸಣ್ಣ ಬೇಳೆಯೂ ದೊಡ್ಡ ಕಾಂಗಲ್ಲದೋ – ಹಾಂಗೆ, ಬೈಲಿಲಿ ಆರಾರು ತೋರ ಆದರೆ “ಬೇಳಗೆ ಮಣ್ಣುದ್ದಿದ ಹಾಂಗೆ ಆಯಿದ” ಹೇಳುಗು!
ನಿಂಗೊಗೂ ಆರಾರು ಹೇಳಿದ್ದವೋ? ಹು ಹು! 😉
~
ಹಲಸಿನ ಕಾಯಿ ಸೊಳೆಯ ಹಾಂಗೇ ಉಪ್ಪಿಲಿ ಹಾಕಿ ಮಡಗ್ಗು.
ಉಪ್ಪುನೀರಿಲಿ ಇರ್ತ ಸೊಳಗೆ “ನೀರುಸೊಳೆ” ಅತವಾ “ಉಪ್ಪಿನಸೊಳೆ” ಹೇಳಿಯೂ ಹೇಳುಗು.
ಇದು ನೆಡುಮಳೆಗಾಲಲ್ಲಿ ಸೊಳೆಬೆಂದಿಗೋ, ಉಂಡ್ಳಕಾಳಿಂಗೋ ಮಣ್ಣ ಬೇಕೇ ಬೇಕು.
ಹಾಂ, ಉಂಡ್ಳಕಾಳಿನ ಬಗ್ಗೆ ಬಂಡಾಡಿಅಜ್ಜಿ  ಹೇಳಿದ ಶುದ್ದಿ ಕೇಳಿದ್ದಿರಲ್ಲದೋ? (ಸಂಕೊಲೆ)

~
ಹಲಸಿನ ಸೊಳೆಯ ಹಾಕಿ ತೆಗದು ಮಡಗಿದ ನಮುನೆಲೇ – ನೆಕ್ಕರೆ ಮಾವಿನಕಾಯಿಯನ್ನೂ ತೆಗದು ಮಡಗ್ಗು.
ನೀರುಮಾವಿನಕಾಯಿ” ಹೇಳುಗು.
ನೀರುಮಾವಿನಕಾಯಿ ಗೊಜ್ಜಿಯ ರುಚಿ ಗೊಂತಿದ್ದವಂಗೆ ಬಾಯಿಲಿ ನೀರು ಬಾರದ್ದೆ ಇಕ್ಕೋ? 🙂

~
ಕಾಟುಮಾವಿನ ಮೆಡಿಯ ಸಾಸಮೆ-ಮೆಣಸಿನ ಅರಪ್ಪಿಲಿ ಅದ್ದಿ “ಉಪ್ಪಿನಕಾಯಿ” ಹಾಕುದರ ಗೊಂತಿಪ್ಪಲೇ ಬೇಕು.
ಎಲ್ಲವನ್ನೂ ಹೇಳುವಗ ಅದೊಂದು ಬಿಟ್ಟುಹೋಗದ್ದೆ ಹೇಳಿದ್ದಷ್ಟೆ. ಉಪ್ಪಿನಕಾಯಿ ಗುರ್ತ ಇಲ್ಲದ್ದೋನು ಬೈಲಿಲಿ ಇರವು! 🙂
ಕಾಟುಮಾವಿನ ಮೆಡಿಯ ಹಾಂಗೇ ಸುಮಾರು ಬಗೆ ಇದ್ದು, ಉಪ್ಪಿನಕಾಯಿ ಹಾಕಲೆ.
ಮುಂಡಿಂದ ಹಿಡುದು, ಬೇಶಿದ ಕೆತ್ತೆ, ನಿಂಬೆಹುಳಿ, ಕರಂಡೆ, ಅಂಬಟೆ, ಬೀಂಪುಳಿ – ಇತ್ಯಾದಿ ಹಲವಾರು ತರಕಾರಿ ವೈವಿಧ್ಯಂಗೊ. ಯೇವದಾರು ಒಂದು ಸಿಕ್ಕದ್ದರೂ, ’ಚೆ – ಈ ಒರಿಶ ಅದೊಂದು ಸಿಕ್ಕಿದ್ದೇ ಇಲ್ಲೆ’ ಹೇಳಿ ಬಪ್ಪೊರಿಶ ಒರೆಂಗೊ ಬೇಜಾರ ಇದ್ದೇ ಇಕ್ಕು, ಬಂಡಾಡಿ ಅಜ್ಜಿಗೆ!
ಚೂರಿಬೈಲು ದೀಪಕ್ಕನ ಹತ್ತರೆಕೇಳಿರೆ ಚೀಪೆಉಪ್ಪಿನಕಾಯಿ ಹಾಕುತ್ಸು ಹೇಂಗೆ-  ಹೇಳಿಯೂ ಹೇಳುಗು. ಅದಿರಳಿ.
~

ಮಾವಿನ ಹಣ್ಣಿನ ಗೊಜ್ಜಿ ಬೇಸಗೆಲಿ ಸರ್ವೇಸಾಮಾನ್ಯ.
ಆದರೆ, ಮಳೆಗಾಲವೂ ಗೊಜ್ಜಿ ಬೇಕು ಹೇಳಿ ಹಟಮಾಡಿರೆ ಹೆಮ್ಮಕ್ಕೊ ಎಲ್ಲಿಗೆ ಹೋಪದು?
ಅದಕ್ಕೇ “ಮಾಂಬಳ” ಇಪ್ಪದು.
ಬೇಸಗೆಲಿ ಬೀಳ್ತ ಕಾಟುಮಾವಿನಣ್ಣಿನ ಹೆರ್ಕಿ, ಮನಾರಕ್ಕೆ ಚೋಲಿಬಿಡುಸಿ, ಕಡದು, ಬತ್ತ ಎಸರಿನ ಕೆರಿಶಿಲಿ ಹಾಕಿದ ಬೆಳಿಒಸ್ತ್ರದ ಮೇಗೆ ಎರಗು.
ಉದಿಯಪ್ಪಗಳೇ ಇದರ ಮಾಡಿಕ್ಕಿ ಹಗಲಿನ ಬೆಶಿಲಿಂಗೆ ಒಣಗಲೆ ಮಡಗ್ಗು.
ಲೂಟಿಮಕ್ಕೊ ಹತ್ತರೆ ಇದ್ದರೆ ಒಣಗುಸುವಗ ರಜ್ಜ ನೋಡಿಗೊಳೇಕಾವುತ್ತು! 😉
ದಿನಾಗುಳೂ ಹಣ್ಣಿನ ಎಸರು ಸೇರುಸಿಗೊಂಡು, ಒಣಗುಸುಗು.  ಸರಾಗ ಮಾಡಿ ಒಂತಿಂಗಳಪ್ಪಗ ಇದೊಂದು ದಪ್ಪದ ಪದರ ಆವುತ್ತಿದಾ!
ಹಣ್ಣಿಂಗೊಂದು ರುಚಿ ಆದರೆ, ಹಣ್ಣಿನ ಎಸರು ಒಣಗಿಪ್ಪಗ ಇದಕ್ಕೊಂದು ಬೇರೆಯೇ ಪರಿಮ್ಮಳ-ರುಚಿ ಬಂದಿರ್ತು.
ಮಾಂಬಳವ ತಗಡಿನ ಹಾಂಗೆ ತುಂಡುಸಿ, ಹಾಳೆಪಾತ್ರಲ್ಲಿ ಕಟ್ಟಿ ಜೆಂಗಲ್ಲಿ ಮಡಗ್ಗು ಪಾತಿಅತ್ತೆ.
ಲಾಯಿಕ ಕ್ರಮಲ್ಲಿ ಮಾಡಿದ ಮಾಂಬುಳ ಎಷ್ಟು ಸಮೆಯ ಆದರೂ ಹಾಳಾಗ!

ಬಂಡಾಡಿಅಜ್ಜಿ ಮೊನ್ನೆ ಮಾಂಬುಳದ ಬಗ್ಗೆ ವಿವರವಾದ ಶುದ್ದಿ ಹೇಳಿದ್ದವು, ಇಲ್ಲಿದ್ದು.
ಹೇಳಿದಾಂಗೆ, ಕೇಜಿಮಾವನ ಗುರ್ತಲ್ಲಿ ಮಾಂಬುಳ ಕೊಡುದು ಇದ್ದಡ, ಬೈಲಿನೋರಿಂಗೆ ಬೇಕಾರೆ ಅವಕ್ಕೆ ಮಾತಾಡಿ. ಆತೋ?
~
ತಂಬುಳಿಗಳ ಉಂಡ್ರೆ ಆರೋಗ್ಯಕ್ಕೆ ಭಾರೀ ಒಳ್ಳೆದು.
ನಾನಾನಮುನೆ ತಂಬುಳಿಗೊ ಬೈಲಿಲಿ ಗೊಂತಿದ್ದು. ಆದರೆ ತಂಬುಳಿಗೆ ಬೇಕಾದ ಹತ್ಯಾರುಗೊ ಎಲ್ಲ ಕಾಲಲ್ಲಿಯೂ ಸಿಕ್ಕ.
ಕೊಡಗಸನ ತಂಬುಳಿ – ಹೇಳಿ ಒಂದಿದ್ದಲ್ಲದೋ. ಪಾತಿಅತ್ತೆ ಮಳೆಗಾಲವೂ ಇದರ ಮಾಡುಗು.
ಹೇಂಗೆ? – ಕೊಡಗಸನ ಹೂಗಿನ ಲಾಯಿಕಂಗೆ ಒಣಗುಸಿ, ಹಾಳೆಪಾತ್ರಲ್ಲಿ ಹಾಕಿ ಮಡಗ್ಗು.
ಬೇಕಪ್ಪಗ ತೆಗದು, ತುಪ್ಪಲ್ಲಿ ಹೊರುದು, ತಂಬುಳಿ ಮಾಡುಗು. ಯೇವ ಕಾಲಲ್ಲಿಯೂ ಅದರ ರುಚಿ ಹಾಂಗೇ ಇಕ್ಕು!

~

ನೆಲ್ಲಿಕಾಯಿಯ ಸೆಕೆಬರುಸಿ, ಬಿತ್ತುತೆಗದು, ಉಪ್ಪಾಕಿ ಕಡದು, ಒಡೆಯ ಹಾಂಗೆ ಹಸ್ಸಿ, ಬೆಶಿಲಿಂಗೆ ಒಣಗುಸಿರೆ “ನೆಲ್ಲಿಹಿಂಡಿ” ಆತು.
ಹಿಂಡಿ ಹೇಳಿದ ಕೂಡ್ಳೆ ಮೋರೆ ತಿರುಗುಸೇಡಿ, ಹಾಂ! ಎಳ್ಳಿಂಡಿ ಮೋಳಮ್ಮ ತಿಂಬಲಿಪ್ಪದು, ನೆಲ್ಲಿಂಡಿ ನವಗಿಪ್ಪದು. 🙂
ನೆಲ್ಲಿಕಾಯಿ ಇಲ್ಲದ್ದಕಾಲಲ್ಲಿಯೂ, ಇದು ಇರ್ತು; ತಂಬುಳಿ ಇತ್ಯಾದಿಗೊಕ್ಕೆ ಭಾರೀ ಪಷ್ಟಾವುತ್ತು.
ಹೊಟ್ಟೆ ವಿತ್ಯಾಸ ಆದಪ್ಪಗ ಮದ್ದಿಂಗೂ ಆವುತ್ತಡ, ಮಾಷ್ಟ್ರಮನೆಅತ್ತೆಗೆ ಅರಡಿಗು.

~
ಕಂಚುಳಿ ಇದ್ದಲ್ಲದೋ? – ಕಂಚುಹುಳಿ. ಅದರ ಚೋಲಿ ತಂಬುಳಿಗಾವುತ್ತು, ಗೊಂತಿದ್ದೋ?
ಕಂಚುಹುಳಿಯ ಚೋಲಿಯ ಲಾಯಿಕಂಗೆ ಒಣಗುಸಿ “ಕಂಚುಸಟ್ಟು” ಮಾಡಿ ತೆಗದು ಮಡಗ್ಗು.
ಮಳೆಗಾಲಲ್ಲಿ ಬೇಕಪ್ಪಗ ಉಪಯೋಗಕ್ಕೆ.
~
ಉಂಡೆಹುಳಿಯ ತೆಳ್ಳಂಗೆ ಚಕ್ರದ ನಮುನೆಲಿ ಉರುಟಿಂಗೆ ಕೊರದು ಒಣಗುಸಿ ಮಡಗಿರೆ, ಅದುದೇ ತಂಬುಳಿಗಾವುತ್ತು.
ಹೀಂಗಿರ್ತದರ ತೆಗದು ಮಡುಗೇಕಾರೆ ಬಿಂಗಿಮಾಣಿಯ ಕೈಗೆ ಸಿಕ್ಕಿರೂ ಸಾರ ಇಲ್ಲೆ, ತಿಂದು ಕಾಲಿ ಆಗ ಇದಾ! 😉
~

ಬೆಂದಿಗೆ ಹುಳಿ – ಬೇಕಲ್ಲದೋ?
ಬೇಸಗೆಲಿ ಮರಂದ ಬೀಳ್ತ ಓಟೆಹುಳಿಯ ಲಾಯಿಕಕ್ಕೆ ಹೆರ್ಕಿ, ಹುಳಿಬಿತ್ತಿನನ್ನೂ, ನಾರನ್ನೂ ಆದು ತೆಗದು, ರಜ ಉಪ್ಪುದೇ ಹಾಕಿ, ಉಂಡೆಕಟ್ಟುಗು.
ಈ ಹುಳಿ ಉಂಡೆಯ ಲಾಯಿಕಂಗೆ ಬೆಶಿಲಿಂಗೆ ಒಣಗುಸಿರೆ ಕರಿಬಣ್ಣದ ’ಹುಳಿ’ ಶೇಖರಣೆಮಾಡ್ಳೆ ತೆಯಾರು.
ಅಜ್ಯಕ್ಕೊಗೆ ಉಂಡೆಗಳ ನೆಂಟ್ರುಗೊಕ್ಕೆ ಹಂಚಿಹಂಚಿ ಮುಗಿಯ ಇದಾ!

ಹುಳಿ ದೊಡ್ಡವಕ್ಕೆ ಬೇಕು ಸರಿ. ಆದರೆ ಹುಳಿಬಿತ್ತು?
ಅದು ಮಕ್ಕೊಗೆ ಶಾಲೆಸುರುಅಪ್ಪಗ ತೆಕ್ಕೊಂಡು ಹೋಪಲೆ! 🙂
ಹುಳಿಬಿತ್ತಿನ ಹೊರುದು “ಪುಳಿಂಕೊಟೆ” ಆದ ಕೂಡ್ಳೇ ಆ ನಮುನೆ ಪರಿಮ್ಮಳದ ರುಚಿ ಬತ್ತು ಹೇಳಿ ಕಂಡುಹಿಡುದ ಮಹಾತ್ಮ ಆರಪ್ಪಾ?

~

ಗುಡ್ಡೆಲಿ ರಜ (ಗೇರು)ಬೀಜದ ಸೆಸಿ ಇದ್ದರೆ ಕೇಳೆಡ, ರಜ ಬೀಜವ ಲಾಯಿಕಕ್ಕೆ ಒಣಗುಸಿ ತೆಗದು ಮಡಗ್ಗು, ಮಳೆಗಾಲದ ಜಡಿಮಳೆಗೆ ಸುಟ್ಟಾಕಲೆ.
ತರವಾಡುಮನೆಲಿ ಸುಂದರಿಯ ಕೈಲಿ ಒಂದರಿ ಬೀಜ ಸುಟ್ಟಾಕುಸುಗು, ಆ ಸಮೆಯಲ್ಲಿ ಪರಿಮ್ಮಳ ಕೇಳಿ ನಮ್ಮ ಬೋಚಬಾವ ಓಡ್ಳಿದ್ದು ಪಾಪ!
ಕೆಲವು ಮನೆಲಿ ಸುಟ್ಟಾಕಿಯೇ ಮಡಗುತ್ತವು. ಹೀಂಗೆ ಮಡುಗುತ್ತರೆ ನೆಗೆಮಾಣಿಯ ಸಿಕ್ಕದ್ದ ನಮುನೆ ಎತ್ತರಲ್ಲಿ ಮಡಗೆಕ್ಕು.
ಪಾಚಕ್ಕೆಂತಾರು ಇದರ ಹಾಕಿರೆ ಮುಲಾಜಿಲ್ಲದ್ದೆ ಎರಡು ಸೌಟು ಜಾಸ್ತಿಯೇ ಹೊಡಗು ಸುಬಗಣ್ಣ!

~

ವಳಚ್ಚಲಿಲಿ ಒಂದು ಪುನರ್ಪುಳಿ ಸಿಸಿ ಇರದೋ?
ಅದರ್ಲಿ ಆವುತ್ತ ಪುನರ್ಪುಳಿಯ ಲಾಯ್ಕಲ್ಲಿ ಬಾಗಮಾಡಿ, ಬಿತ್ತು ತೆಗದು, ಓಡಿನೊಳಂಗೆ ರಜ ಸಕ್ಕರೆ ತುಂಬುಸಿ ಮಡಗಿ, ಬೆಶಿಲಿಲಿ ಒಣಗುಸುಗು.
ಹತ್ತು ಬೆಶಿಲು ಸಿಕ್ಕಿದ್ದೇ – ಜೇನದ ನಮುನೆ ಮಂದಕೆ ಜ್ಯೂಸು ಬಿಡುಗು.
ಇದು ಶರ್ಬತ್ತಿಂಗೋ, ಸಾರಿಂಗೋ – ಮಣ್ಣ ಅಕ್ಕಿದಾ.
ಆ ಓಡನ್ನೂ ತೆಗದು ಮಡಗ್ಗು. ಮಾಷ್ಟ್ರುಮಾವನ ಮಗಳು ಪುನರ್ಪುಳಿ ಓಡಿನ ಸಾರು ಮಾಡುಗು, ಹಂಡೆಹಂಡೆ! 🙂
~
ಪರಂಗಿಚೆಕ್ಕೆ ನಮ್ಮ ಊರಿಂಗೆ ತಂದದೇ ಪರೆಂಗಿಗೊ ಅಡ, ಮಾಷ್ಟ್ರುಮಾವ ಹೇಳುಗು.
ಆದರೆ ಈಗ ಅದು ಇದ್ದರೆ ಬಿಡವು ಬೈಲಿಲಿ!
ಅನನಾಸು ಒಂದು ಸಿಕ್ಕಿರೆ, ಲಾಯಿಕಲ್ಲಿ ಕೊರದು, ಸಕ್ಕರೆ ಹಾಕಿ ಕಾಸುಗು.
ಶುಬತ್ತೆ ಅದರನ್ನೇ “ಜೇಮು” ಹೇಳ್ತದಡ. ದೋಸಗೆ ಕೂಡಿ ಉಂಬಲೆ ಪಷ್ಟಾವುತ್ತು. ಅಲ್ದೋ?
~

ನೊರೆಕ್ಕಾಯಿ ಅಪ್ಪ ಕಾಲಲ್ಲಿ ಅದನ್ನೂ ಒಣಗುಸಿ ಮಡಿಕ್ಕೊಂಗು.
ನೀರಿಂಗೆ ಹಾಕಿ ತಿಕ್ಕಿರೆ ಲಾಇಕ ಒಸ್ತ್ರದ ನಮುನೆ ಅಕ್ಕಿದಾ – ಅದಕ್ಕೆ ಆ ಹೆಸರು.
ಮದಲಿಂಗೆ ಒಸ್ತ್ರ ಒಗವಗ ಸಾಬೊನಿನ ಬದಲಿಂಗೆ ಇದುವೇ ಆಗೆಡದೋ. ಅಷ್ಟು ಮಾಂತ್ರ ಅಲ್ಲ, ಜೆಂಬ್ರಕ್ಕೆ ಹೋಪ ಮದಲು ಚಿನ್ನ ತೊಳವಲೂ ಇದೇ ನೊರೆಕ್ಕಾಯಿ.
~
ಗೆಣಮೆಣಸು ತೋಟಲ್ಲೇ ಇದ್ದರೆ ಮನೆಯೋರಿಂಗೆ ಶೀತ ಬಾರಲೇ ಬಾರ!
ಕೇಜಿಗಟ್ಳೆ ಗೆಣೆಮೆಣಸಿನ ಪೇಟಗೆ ಕೊಟ್ರೂ, ಒಂದು ಸೇರು ತೆಗದು ಮಡಗಿಯೇ ಮಡಗ್ಗು. ದೊಂಡೆಬೇನೆ, ಮಳೆಗಾಲದ ಶೀತ – ಎಂತ ಇದ್ದರೂ, ಒಂದೊಂದು ಮುಷ್ಠಿ ಗುದ್ದಿ – ಕಷಾಯ ಮಾಡುಗಿದಾ!
ಇದರೊಟ್ಟಿಂಗೆ ಲವಂಗವನ್ನೂ, ಜಾಯಿಕಾಯಿಯನ್ನೂ – ತೆಗದು ಮಡಗ್ಗು.
ಎಂತಾರು ವಿಶಯಕ್ಕೆ ಬೇಕಾವುತ್ತು – ಹೇಳಿಗೊಂಡು.
ಜಾಯಿಕಾಯಿಯ ಚೋಲಿ ಪತ್ರೆಯ ಮಾಷ್ಟ್ರುಮಾವನ ಎಲೆತಟ್ಟಿಲಿ ರಜರಜವೇ ಕಾಂಬಲೆ ಸಿಕ್ಕುಗು!
ಇದರೊಟ್ಟಿಂಗೆ ಶುಂಟಿ, ಅರುಶಿನ ಕೊಂಬು – ಎಲ್ಲವನ್ನೂ ತೆಗದುಮಡಗಿರೆ ಮದ್ದಿಂಗಕ್ಕು – ಹೇಳುಗು ಬಂಡಾಡಿ ಅಜ್ಜಿ.
~
ಬಾಳೆಹಣ್ಣು ಅಪ್ಪ ಕಾಲಲ್ಲಿ ಬೆಶಿಲಿಂಗೆ ಒಣಗುಸುಗು.
ಪೇಟೆಲಿ ಸಿಕ್ಕುತ್ತ ಒಣದ್ರಾಕ್ಷೆಯ ನಮುನೆ ಅಕ್ಕಿದು ತಿಂಬಲೆ.
ಚೂರಿಬೈಲು ದೀಪಕ್ಕಂಗೆ ಇದರ ಮಾಡಿ ಹೋದವಕ್ಕೆ ಕೊಡುದು ಹೇಳಿರೆ ಭಾರೀ ಕೊಶಿ!

~

ಸಾರಡಿತೋಡಕರೆಲಿ ಕೂವೆಗೆಂಡೆ ಧಾರಾಳ.
ಹಾಂಗಾಗಿ,  ಕೂವೆಸೆಸಿ ಪೊರ್ಪಿ, ಗೆಂಡೆಯ ಕಡದು, ನೀರಿನ ಅರುಶಿ – ಒಣಗುಸಿ ಕೂವೆಹೊಡಿ ತೆಗದು ಮಡಗ್ಗು.
ಅದು ದೇಹಕ್ಕೂ ತಂಪು, ಹೊಟ್ಟೆಗೂ ಒಳ್ಳೆದು. ಮನೆಲಿ ಕುಂಞಿ ಮಕ್ಕೊ ಇದ್ದರೆ ಮಣ್ಣಿಗೂ ಅಕ್ಕಿದಾ!

ಯೇವದಾರು ಮದ್ದಿನ ಗೆಡು ಸಿಕ್ಕಿರೆ ಕೇಳುದೇ ಬೇಡ, ಅದರ ಬೇರಿನ ತೆಗದು ಮಡಗ್ಗು – ಎಂತಾರು ಆರೋಗ್ಯ ವಿತ್ಯಾಸ ಬಂದಿಪ್ಪಗ ಬಳಕೆಗೆ ಅಕ್ಕು – ಹೇಳಿಗೊಂಡು.
~

ಅಷ್ಟೇ ಅಲ್ಲ, ಬಹುಮುಖ್ಯವಾಗಿ,
ಪೇಟಗೆ ಹೋಪಗ ಕೊಟ್ಟ ಪೈಸೆಲಿ ಉಳಿಕೆಯ ಸಾಸಮೆ ಡಬ್ಬಿಯೊಳದಿಕ್ಕೆಯೋ, ಬಿತ್ತಿನ ಕರಡಿಗೆಒಳವೋ – ಮಣ್ಣ ಭದ್ರವಾಗಿ ಎತ್ತಿ ಮಡಿಕ್ಕೊಂಗು.
“ಅದು ಅದರ್ಲೇ ಬೇಕು, ಮತ್ತೆ ಕಷ್ಟಕಾಲಕ್ಕೆ ಆಗಿಬಪ್ಪ ಪೈಸೆ ಅದು” ಹೇಳುಗು ಕೇಳಿರೆ.
ಯೆಜಮಾನ್ರ ಆಪತ್ಕಾಲಲ್ಲಿ ಉಪಕಾರಕ್ಕೆ ಅಪ್ಪಲೆ ಅಳಿಲ ಸೇವೆ, ಮನೆಹೆಮ್ಮಕ್ಕಳದ್ದು.
~

ಹ್ಮ್, ಮದಲಿಂಗೆ – ಹೆಮ್ಮಕ್ಕ ಹೆರಾಂಗೆ ಕೆಲಸಕ್ಕೆ ಹೋಪದು ರೆಜಾ ಕಮ್ಮಿ. ಅಷ್ಟಪ್ಪಗ ಹೆಮ್ಮಕ್ಕೊಗೆ ’ಮನೆಗೆಲಸ’ ಹೇಳ್ತದೂ ಒಂದು ಕೆಲಸವೇ.
ಈಗ ಹೆರ ಎಂತಾರು ಚಾಕ್ರಿಗೆ ಹೋದರೆ ಮಾಂತ್ರ ಅದಕ್ಕೆ ’ಕೆಲಸ’ ಹೇಳುಸ್ಸು; ಮನೆಲೇ ಇದ್ದರೆ ’ಕೆಲಸ ಇಲ್ಲೆ’ ಹೇಳಿ ಅರ್ತ. ಅದಿರಳಿ.

ಗೆಂಡುಮಕ್ಕೊ ತಂದದರ ಹೆಮ್ಮಕ್ಕೊ ಒಳುಶುಗು, ಬೆಳಶುಗು, ಬೇಶಿ ಬಳುಸುಗು!
ಮನೆಗೆ ಬೇಕಾದ್ದರ ತಪ್ಪದು ಗೆಂಡನ ಜೆವಾಬ್ದಾರಿ. ತಂದ ಎಲ್ಲ ಸಂಪತ್ತಿನ ರೂಡಿಗೆ ತಪ್ಪದು ಹೆಂಡತ್ತಿಯ ಜೆವಾಬ್ದಾರಿ.
ಎರಡು ಚಕ್ರ ಸರಿ ತಿರುಗಿರೇ ಗಾಡಿ ಸಮಗಟ್ಟು ಹೋಕಷ್ಟೆ. ಅಲ್ದೋ?

ಅಲ್ಲ, ಗೆಂಡ ಸಮಾಜಲ್ಲಿ ಕೆಲಸಮಾಡ್ತದು ಮನೆಒಳದಿಕ್ಕೆ ಇಪ್ಪ ಹೆಮ್ಮಕ್ಕೊಗೆ ಬೇಕಾಗಿಯೇ ಅಲ್ಲದೋ?
ಪೈಶಕ್ಕೆ ರಜಾ ಕಷ್ಟ ಇದ್ದ ಕಾಲಲ್ಲಿ  ‘ಇದಾ, ಎನ್ನ ಚಿನ್ನದ ಸರ ಇದ್ದು, ಬೇಂಕಿಲಿ ಮಡಗಿರೆ ಕೃಷಿಸಾಲ ಕಂತು ಕಟ್ಳೆ ಸಾಕು’, ಹೇಳುಗು ಮನೆಹೆಮ್ಮಕ್ಕೊ!

ಇಷ್ಟೆಲ್ಲವನ್ನೂ ಪರಂಪರಾಗತವಾಗಿ ಕಲ್ತು, ಮನೆನೆಡೆಶುತ್ತ ಎಷ್ಟೋ ಪಾತಿಅತ್ತೆಕ್ಕಳ ಕಂಡ್ರೆ ಒಪ್ಪಣ್ಣಂಗೆ ಹೆಮ್ಮೆ ಅನುಸುತ್ತು.

ಈಗಾಣ ಕಾಲಲ್ಲಿ ಸಾವಿರಗಟ್ಳೆ ಸುರುದು ’ಮನೆ ನಿಬಾಯಿಸುದು ಹೇಂಗೆ?’ ಪಾಟ ಹೇಳುಸಿಗೊಂಡು ಬತ್ತವಡ.
ನಮ್ಮ ಅಜ್ಜಿಯಕ್ಕೊ ಕೆಲವೆಲ್ಲ ಕಲೆಗಳ ತನ್ನ ನೆತ್ತರಿಲಿಯೇ ಪಡಕ್ಕೊಂಡು ಬಯಿಂದವು ಅಲ್ಲದೋ, ಅದರ ಬಗೆಗೆ ಈ ವಾರ ಒಂದು ಶುದ್ದಿ.
ಅದಿರಳಿ.
~

ಹೇಳಿದಾಂಗೆ, ಈಗ ಶುಬತ್ತೆ ಮನೆಲಿ ಯೇವದನ್ನೂ ತೆಗದು ಮಡುಗಲಿಲ್ಲೆ, ತೆಗದು ಮಡುಗಲೆ ಜಾಗೆಯೂ ಇಲ್ಲೆ.
ತೆಗದು ಮಡುಗೇಕಾದ ಅಗತ್ಯವೂ ಇಲ್ಲೆ ಇದಾ!
ಎಂತ ಬೇಕಾರೂ ಪೇಟೆಲಿ ಸಿಕ್ಕುತ್ತು. ಒಂದರಿ ಹೋಗಿ ತುಂಬುಸೆಂಡು ಬಂದರೆ ಆತು! ಅಷ್ಟೇ.
ಈಗಾಣದ್ದು ಹೇಂಗೇ ಇರಳಿ, ಮದಲಿಂದಲೇ ಮನೆ ನೆಡೆಶಿ, ಮನೆ ಒಳುದು ಬೆಳವಲೆ ಕಾರಣ ಆದ / ಅಪ್ಪ ಹೆಮ್ಮಕ್ಕಳ ಅಂಬೆರ್ಪಿನ ಸಮೆಯಲ್ಲಿ “ಹೇಮಾರುಸಿ ಮಡುಗುತ್ತದರ” ನೆಂಪು ಮಾಡುವೊ.

ಒಂದೊಪ್ಪ: ಹೇಮಾರುಸಿ ಮಡುಗಿದ ವಸ್ತುಗೊ ಆಪತ್ಕಾಲಕ್ಕೆ ಉಪಕಾರಕ್ಕೆ ಸಿಕ್ಕಿರೆ, ಅದುವೇ ಹೇಮ-ರಜತಂದ ಹೆಚ್ಚು. ಅಲ್ಲದೋ?

70 thoughts on “ಮನೆ ನೆಡೆಶುತ್ತ ಹೆಮ್ಮಕ್ಕೊ ’ಹೇಮಾರ್ಸಿ’ ಮಡಗುದು..

  1. ಒಪ್ಪಣ್ಣ,
    ಸುದ್ದಿ ಬಾರಿ ಲಾಯಿಕ ಆಯಿದು….
    ಸಂಗ್ರಹಯೋಗ್ಯ ಬರಹ….
    ಎನ್ನ ಬಾಲ್ಯ ನೆಂಪಾತು…
    ಎಂಗಳ ಮನೆಲಿ ಈಗ ಸೊಳೆ ಹಾಕುವ ಗವುಜಿ ಅಡ… 🙂

  2. ಒಪ್ಪಣ್ಣನ ಉತ್ತರ ನೋಡಿ ತುಂಬಾ ಖುಶಿ ಆತು.
    ಆನು ರಜ್ಜ ಅಪರೂಪ ಆದ್ದು ಅಪ್ಪು ಬೈಲುಂಗೆ.
    ಆದರೆ ಅದು ಅನಿವಾರ್ಯಂದಾಗಿ ಹೊರತು ಬೇಕು ಹೇಳಿ ಅಲ್ಲ ಅತಾ ಒಪ್ಪಣ್ಣ?
    ಬೇಜಾರ ಮಾಡಿಕ್ಕೆಡ ಮಿನಿಯಾ?
    ಮಗ ಒರಗಿಪ್ಪಗ ಮಾತ್ರ ಇದಾ ಎನಗೆ ನೋಡ್ಲೆ ಅಪ್ಪದು. ಹಾಂಗೆ ಬಾಕಿ ಬಾಕಿಯೆ ಅತು ಮತ್ತೆ.
    ಮೊನ್ನೆ ಪುರುಸೊತ್ತು ಮಾಡಿ ಬಂದೆ, ಈಗ ಎನಗೆ ಎಷ್ಟೆಲ್ಲ ಬಾಕಿ ಇಪ್ಪದರ ಓದುದೇ ಆಯಿದು ಈಗ.
    ಭಾವನ ಹತ್ರೆ ಹೇಳಿದೆ ಹಾಂಗೆ ಸಮಾರು ಇದ್ದು ಓದುಲೆ ಇಲ್ಲಿ ಹೇಳಿ.
    ನಿನ್ನ ಅಳಿಯ ಇದ್ದಪ್ಪ ಹೇಮರ್ಸಿ ಮಡಿಗಿದ್ದರ ತೆಗವಲೆ ನೋಡ್ತ.
    ಅಲ್ಲಿ ಎನ್ನ ಹೊಸ ಅತ್ತಿಗೆ ಎಂತ ಮಾಡ್ತು?

    ಅಪ್ಪು ಹರಿಯೊಲ್ಮೆ ಲಿ ಕಳುದ ಬಾಲ್ಯದ ನೆನಪು ಇಂದಿಂಗು ಹರಸಿರೆನ್ನ ಮನಸಿಲ್ಲಿ.
    ಶಾಂತತ್ತೆ, ಮಾಷ್ಟ್ರು ಮಾವ, ಒಪ್ಪಕ್ಕಂಗೆ ಎನ್ನ ನಮಸ್ಕಾರಂಗೊ.
    ಪ್ರೀತಿಂದ,
    ಸುಮನಕ್ಕ.

  3. ಒಪ್ಪಣ್ಣೋ ಎನ್ನ ಬೆನ್ನು ರಜ ಪ್ರಾಯ ಆದ್ದದದ ಹಾ೦ಗಾಗಿ ರಜ ಜಾಗ್ರತೆ ಹೆಚ್ಹು ಮಾಡೇಕಾವುತ್ತು.ದೊಡ್ಡಕೆ ತಾ೦ಗಲೆ ಶಕ್ತಿ ಇಲ್ಲೆ ಅದ ಎಲ್ಲಿಯಾರು ಈಗಾಣ ಕೂಸುಗೊ ತೊ೦ಡ೦ಗೆ ಹಾ೦ಕಾರ ಎ೦ತರ ನೋಡುವೊ೦ ಹೇಳಿ ಹೆರತ್ಎ ನಾವು ಕ೦ಗಾಲಾಯೇಕಷ್ಟೆ.ಒಪ್ಪ೦ಗಳೊಟ್ಟಿ೦ಗೆ

  4. laikaidu shuddi.
    namma nitya jeevanalli mukhyavagi beke beku.
    hidisoodinda suruvaagi dhana, dhanya sampattu ellavu namma agatyatege
    bekastu naavu hemarsekaste.
    yavadu navage beda heli avuttille.
    alladre “odaari kudu haakida hange”helida gaadeya hange akkaste.
    hemarsudu navage hiriyarinda banda krama.
    adara munduvarsuva oppanno.

    hallili hemarsi maduguva vastugo ella pete manegalalli ediya
    bechhange oliyekkada vastugo irtanne.

    1. ಹೇಮಾರ್ಸಿ ಮಡಗಿ ಆತೋ? ಒಂದರಿಯಾಣ ಅಂಬೆರ್ಪು ಕಳಾತೋ? 🙂
      ಹೇಮಾರ್ಸುದು ನವಗೆ ಹಿರಿಯರಿಂದ ಬಂದ ಸಂಪತ್ತು, ಅದರ ಮುಂದುವರುಸುವೊ – ಹೇಳಿಗೊಂಡು, ಸ್ವತಃ ಹೇಮಾರ್ಸುತ್ತ ನಿಂಗಳ ಕಂಡ್ರೆ ಕೊಶಿ ಅಪ್ಪದಿದಾ..

      ಒಪ್ಪ ಕೊಟ್ಟದು ಕೊಶಿ ಆತು.

  5. ಮತ್ತೆ ಚೆನ್ನೈಭಾವ ಹೇಳಿದಾಂಗಿರ್ತ ‘ಅಡರು ಮಡಲು ಕರಟ ಕೊತ್ತಳಿಕೆ’ಗಳ ಹೇಮಾರ್ಸ್ಸುವ ಕೆಲಸವ ಮನೆ ಹೆಮ್ಮಕ್ಕೊ ಸ್ವತಃ ಮಾಡ್ಲೆ ಎಡಿಯದ್ರೆ ಗೆಂಡುಮಕ್ಕಳ ಕೈಲಿಯಾದರೂ ಮಾಡ್ಸದ್ದೆ ಬಿಡವಪ್ಪ! 🙁

  6. ಊಟಕ್ಕೆ ದೆನಿಗೇಳಿತ್ತು ಎಜಮಾಂತಿ. ಹೋಗಿ ಕೂದೆ. ತಾಳು ಉಪ್ಪಿನಕಾಯಿ ಅಶನ ಬಳುಸಿತ್ತು. ಊಟ ಸುರುಮಾಡ್ಲೆ ಏವತ್ರಾಣಾಂಗೆ ತುಪ್ಪ ಬಳುಸಿಯಾಗಲಿ ಹೇಳಿ ಕಾದೆ. ಗಿರಾಕಿ ಸುಮ್ಮನೆ ಕುತ್ತ ನಿಂದಿದು!
    “ಎಂತ?” ಕೇಳಿದೆ.
    “ಈಗ ಕರವು ಒಂದೊತ್ತ ಆಯಿದು. ಇನ್ನು ತುಪ್ಪ ನಿತ್ಯಕ್ಕೆ ತೆಗವಲೆ ಇಲ್ಲೆ. ಮಾವನೋರ ತಿತಿಗೆ ಇನ್ನು ಹದ್ನೈದು ದಿನ ಇದ್ದಷ್ಟೆ. ಈಗಳೆ ರಜಾ ಹೇಮಾರ್ಸಿ ಮಡುಗದ್ರೆ ಮತ್ತೆ ಆರತ್ರಾರು ಬೇಡ್ಲೆ ಹೋಯೆಕ್ಕಕ್ಕು, ಹ್ಹು!” ಹೇಳಿ ಕಡ್ಡಿ ತುಂಡುಮಾಡಿದಾಂಗೆ ಹೇಳಿತ್ತು.
    ಎನಗೆ ಒಂದು ಕ್ಷಣ ಪಿತ್ಥ ಏರಿರೂ ರಜ ಸಾವಕಾಶ ಅಲೋಚನೆ ಮಾಡಿಯಪ್ಪಗ ‘ಸಂಗತಿ ಅಪ್ಪಾದ್ದೇ’ ಹೇಳಿ ತೋರಿತ್ತು.
    ನಾವು ಗೆಂಡುಮಕ್ಕೊ ಮನೆಲಿ ಜೆಂಬ್ರ ಇದ್ದರೆ ಮುನ್ನಾಣದಿನ ಪೇಟೆಗೆ ಹೋಗಿ ಪೈಸೆ ಸೊರುಗಿ ಸಾಮಾನು ತಂದು ದೊಡ್ಡಜೆನರ ಹಾಂಗೆ ಪೋಸು ಕೊಡ್ತು. ಆದರೆ ಸಾಕಷ್ಟು ಮದಲೇ ಮುಂದಾಲೋಚನೆ ಮಾಡಿ ಹೀಂಗಿಪ್ಪ ಸೂಕ್ಷ್ಮ ವಿಷಯಂಗಳ ಸಲೀಸಾಗಿ ನಿಭಾಯಿಸುತ್ತ ಜಾಣ್ಮೆ, ಕಲೆಗಾರಿಕೆ ಇಪ್ಪದು ಮನೆ ಹೆಮ್ಮಕ್ಕೊಗೇ.
    ‘ಹೇಮ ಸದೃಶ’ ವಿಶಯವ ಹೃದ್ಯವಾಗಿ ನಿರೂಪಿಸಿದ ಒಪ್ಪಣ್ಣಂಗೂ ಮನೆ ನೆಡಶುವ ಹೆಮ್ಮಕ್ಕೊಗೂ ಅಭಿನಂದನೆಗೊ 🙂

    1. ಸುಬಗಣ್ಣೋ..
      ಒಪ್ಪ ಕಂಡು ತುಂಬಾ ಕೊಶಿ ಆತು.
      ಪಕ್ಕನೆ ಮನೆದೇವರ ಬೈದ್ದದೋ ಗ್ರೇಶಿದೆ. ನೋಡಿರೆ ಅಲ್ಲ! ಒಳ್ಳೆ ಶುದ್ದಿಯನ್ನೇ ಹೇಳಿದಿ.
      ಹರೇರಾಮ

  7. ಇಡೀ ಶುದ್ದಿಲಿ ಅಮ್ಮನನ್ನೇ ನೆಂಪುಮಾಡಿಗೊಂಡು ಓದುವಾಂಗಾತು. 🙂
    ಬಾಳೆಬಳ್ಳಿ, ಹಿಡಿಸುಡಿ, ಅಡಕ್ಕೆ ಹಾಳೆ, ನೆಟ್ಟಿಬಿತ್ತುಗ, ಶಾಂತಾಣಿ, ಹಸಿಬೇಳೆ, ಉಪ್ಪಿನಸೊಳೆ, ನೀರುಮಾವಿನಕಾಯಿ, ಉಪ್ಪಿನಕಾಯಿ, ಮಾಂಬಳ, ಕೊಡಗಸನ ಹೂಗು, ನೆಲ್ಲಿಹಿಂಡಿ, ಕಂಚುಸಟ್ಟು, ಹುಳಿ, ಪುಳಿಂಕೊಟೆ, ಬೀಜ ಸುಟ್ಟಾಕಿದ್ದು, ಪುನರ್ಪುಳಿ ಓಡು, ಬಾಳೆಹಣ್ಣು ಒಣಗುಸಿದ್ದು, ಕೂವೆಹೊಡಿ – ಆಹಾ ಅಮ್ಮನ ಅಪೂರ್ವ ಖಜಾನೆಲಿಪ್ಪ ಈ ಎಲ್ಲಾ ಅಮೂಲ್ಯ ಸಂಪತ್ತುಗಳ ನೆಂಪುಮಾಡಿಕೊಟ್ಟದಕ್ಕೆ ಧನ್ಯವಾದಂಗೊ.

    1. ಬಂಡಾಡಿಪುಳ್ಳಿಗೆ ಅಮ್ಮನ ನೆಂಪಾದ್ದು ಕಂಡು ಕೊಶೀ ಆತು.
      ನಿಂಗೊಗೆ ಜೋರು ಅಮ್ಮನ ನೆಂಪಾಗಿ, ಅಮ್ಮ ಹೇಮಾರ್ಸಿ ಮಡಗಿದ್ದರ ತೆಗವ ದಿನ ಬೈಲಿನೋರ ದಿನಿಗೆಳ್ತಿರಲ್ಲದೋ? 🙂

      ಹರೇರಾಮ

  8. ಒಪ್ಪಣ್ಣ,
    ಶುದ್ದಿಯ ತಲೆಬರಹ ಓದಿ ಅಪ್ಪಗ ನಮ್ಮ ಸಣ್ಣ(ತಮ್ಮ)ಮಾವನ ಮನೆದೇವರ ವಿಷಯ ಎಂತಪ್ಪಾ ಒಪ್ಪಣ್ಣ ತೆಗದ° ಹೇಳಿ ಗ್ರೇಶಿದೆ. ಮತ್ತೆ ಓದಿ ಅಪ್ಪಗ ಗೊಂತಾತು, ಇದು ನಮ್ಮ ಎಲ್ಲಾ ಮನೆದೇವರುಗಳ ವಿಷಯ ಹೇಳಿ!!! 😉 😉

    ಒಪ್ಪಣ್ಣ, ತುಂಬಾ ಲಾಯ್ಕದ ಸಂಗ್ರಹ ಯೋಗ್ಯ ಶುದ್ದಿ. ನಮ್ಮ ಅಜ್ಜಿ, ಅಮ್ಮಂದ್ರು ಎಷ್ಟು ಚೆಂದಲ್ಲಿ ಮನೆ ನಡೆಶಿಗೊಂಡು ಬಯಿಂದವು ಹೇಳಿ ಗೊಂತಾವುತ್ತು, ಈ ಶುದ್ದಿಯ ಮೂಲಕ ಹಿಂದೆ ತಿರುಗಿ ನೋಡಿದರೆ!! ಅಲ್ಲದ್ದರೂ ಮನೆ ನಡೆಶುತ್ತ ಕಾರ್ಯವ ಹೆಮ್ಮಕ್ಕಳೇ ಲಾಯ್ಕಲ್ಲಿ ಮಾಡುಗಷ್ಟೇ. ನೀನು ಹೇಳಿದ ಹಾಂಗೆ ಅದು ನೆತ್ತರಿಲೆ ಇಪ್ಪದು. ಆ ಶಕ್ತಿ ಇಪ್ಪದು ಹೆಮ್ಮಕ್ಕೊಗೇ. ಮೊದಲಾಣ ಕಾಲಲ್ಲಿ ಹೆಮ್ಮಕ್ಕೋ ಮನೆಂದ ಹೆರ ಹೋಪದು ಕಡಮ್ಮೆ ಆಗಿದ್ದತ್ತು. ಅವಕ್ಕೆ ಮನೆಯ ಏಳಿಗೆಯ ಯೋಚನೆ ಮಾಂತ್ರವೇ ಇದ್ದದು. ಈಗಾಣ ಕಾಲಲ್ಲಿ ಹೆಮ್ಮಕ್ಕ ಮನೆಯ ಒಳ, ಹೆರ ಎರಡನ್ನೂ ನಿಭಾಯಿಸುತ್ತವು. ಈಗೀಗ ಹೇಮಾರ್ಸಿ ಮಡಗುತ್ತ ಕಾರ್ಯ ರಜ್ಜ ತರವಾಡು ಮನೆಗೊಕ್ಕೆ ಮಾಂತ್ರವೇ ಸೀಮಿತ ಆದ ಹಾಂಗೆ ಇದ್ದು. ಆದರೂ ಆ ನೆನಪುಗ ಮಾತ್ರ ಹಸುರೇ ಆಗಿದ್ದು ಸಣ್ಣ ಆದಿಪ್ಪಗ ಕಂಡದು.

    ಹೆಮ್ಮಕ್ಕ ಯಾವ ವಿಷಯಲ್ಲಿ ಶ್ರದ್ಧೆ ತೋರ್ಸುತ್ತವೋ ಆ ಕೆಲಸ ಪೂರ್ತಿ ಆಗಿಯೇ ಆವುತ್ತು. ಮೊದಲಾಣವ್ವು ಮನೆ ಕೆಲಸಕ್ಕೆ ಮಳೆಗಾಲಲ್ಲಿ ಅನುಕೂಲ ಅಪ್ಪ ಹಾಂಗೆ ಪ್ರಕೃತಿಂದ ಸಿಕ್ಕುದರ, ನಮ್ಮಲ್ಲೇ ಬೆಳವದರ ಉಪಯೋಗ ಮಾಡಿ, ಅದರ ಹೆಚ್ಚು ಸಮಯ ಒಳಿತ್ತ ಹಾಂಗೆ ಅವರವರ ಅಡುಗೆ ಕೋಣೆಲಿಯೇ ಪ್ರಯೋಗ ಮಾಡಿ ಹೇಮಾರ್ಸಿ ಮಡಗುತ್ತ ಕ್ರಮವ ಒಳಿಶಿ ಬೆಳೆಶಿಗೊಂಡು ಬಂದವು. ಬಹುಶ ಈಗಾಣವಕ್ಕೆ ಎಲ್ಲವೂ ಪೇಟೇಲಿ ಪೈಸೆ ಕೊಟ್ರೆ ಸಿಕ್ಕುತ್ತು ಹೇಳ್ತ ಕಾರಣಲ್ಲಿಯೋ, ಅವರವರ ತೆರಕ್ಕಿನ ಸಂಗತಿಲೋ ಈ ವಿಷಯ ರಜ್ಜ ಮುಂದರಿವದು ಕಡಮ್ಮೆ ಆಯಿದು. ಒಪ್ಪಣ್ಣನ ಬೈಲಿನ ಪ್ರೇರಣೆಲಿ ಆದರೂ ಈ ಹೇಮಾರ್ಸಿ ಮಡಗುತ್ತದು ಎಲ್ಲೋರೂ ಅವರವರ ಮನಸ್ಸಿಲಿ ಹೇಮಾರ್ಸಿ ಮಡಗಿಕ್ಕಿ ಮುಂದಂಗೆ ಅವರ ಮನೆಲಿಯೂ ಎಲ್ಲವನ್ನೂ ಹೇಮಾರ್ಸಿ ಮಡಗುತ್ತ ಹಾಂಗೆ ಆಗಲಿ ಹೇಳಿ ಹಾರಯಿಕೆ.

    ಒಂದೊಪ್ಪ ಲಾಯ್ಕಾಯಿದು.

    1. ಶ್ರೀಅಕ್ಕಾ..
      ಚೆಂದಕೆ ಬರದ್ದಿ.
      {ತಮ್ಮಮಾವನ ಮನೆದೇವರ ವಿಷಯ } ಯಬ್ಬಾ!
      ಹೇಮಾರ್ಸುದು ಹೇಳುವಗ ಹೇಮತ್ತೆಯ ನೆಂಪಾದ್ದೇ! ಅತ್ತೆಯ ಹಿಡುದು ಆಡುಸಿದರೆ ತಮ್ಮಮಾವ ಸುಮ್ಮನೆ ಬಿಡುಗೋ?

      { ಬೈಲಿನ ಪ್ರೇರಣೆಲಿ ಆದರೂ ಈ ಹೇಮಾರ್ಸಿ ಮಡಗುತ್ತದು ಎಲ್ಲೋರೂ ಅವರವರ ಮನಸ್ಸಿಲಿ ಹೇಮಾರ್ಸಿ ಮಡಗಿಕ್ಕಿ ಮುಂದಂಗೆ ಅವರ ಮನೆಲಿಯೂ ಎಲ್ಲವನ್ನೂ ಹೇಮಾರ್ಸಿ ಮಡಗುತ್ತ ಹಾಂಗೆ ಆಗಲಿ ಹೇಳಿ ಹಾರಯಿಕೆ. }
      ಈ ಗೆರೆ ಪಷ್ಟಾಯಿದು.

  9. ಲಾಯಿಕ್ಕಯಿದು…..ಒಪ್ಪಣ್ಣೋ….!
    ..ಈ ವಿಷಯಂಗಳ ಹೀಂಗೆ ಹೇಮಾರ್ಸಿ ಮಾಡಗಿದರೆ ಮಾತ್ರ ಮುಂದಾಣ ತಲೆಮಾರೆನವಕ್ಕೆ ಹಿಂದೆ ಹೀಂಗೆಲ್ಲಾ ಇದಾತ್ತಡ ಹೇಳಿ ಗೊಂತಕಷ್ಟೇ…

    1. ಗೋಪಾಲಮಾವಾ..
      ಪಷ್ಟಾಯಿದು ನಿಂಗಳ ಒಪ್ಪ! ಈ ಒಪ್ಪವನ್ನೂ ಹೇಮಾರ್ಸಿ ಮಡುಗುತ್ತೆ ಆತೋ?
      ಕೊಶೀ ಆತು. 🙂

  10. ನಮ್ಮ ಹಿರಿಯರು ಮಾಡೆ೦ಡಿದ್ದ “ಹೇಮಾರ್ಸವ ”.. ಪದ್ದತಿಯ ಒ೦ದೂ ಬಿಡದ್ದೆ ಎಲ್ಲವನ್ನು ಬಾರಿಲಾಯಕಲಿ ಬರೆದ್ದೆ ಭಾವ..ಕೊಶಿಯಾತು ಓದಿ..
    ಎನ್ನ ಅಜ್ಜಿ ಹೀ೦ಗೆಲ್ಲಾ ಮಾಡೆ೦ಡು ಇತ್ತಿದ್ದವು.. ಓದಿಯಪ್ಪಗ ಎಲ್ಲಾ ಒ೦ದಾರಿ ಕಣ್ಣೆದುರು ಬ೦ದಾ೦ಗೆ ಆತು.. 🙂

    ಹೇಮಾರ್ಸವ ಪದ್ದತಿ, ಹಲವಾರು ಪ್ರಾಣಿಗೊ,ಹುಳುಗೋ ಅವರದ್ದೇ ಆದರಿತಿಲಿ ಎಲ್ಲಾ ಮಾದ್ತವು.. ಅದರಲ್ಲಿ ನವಗೆ ಕಾ೦ಬದು ದು೦ಭಿ, ಜೇನು ನೊಣ, ಎರುಗು ಮಾಡ್ತು, ಅದು ಕೂಡ ಹಾ೦ಗೆ ಇಡಿ ಬೇಸಗೆಲಿ ಆಹಾರವ ಮಳೆಗಾಲಕ್ಕೆ ಶೇಕರಣೆ ಮಡುಗುತ್ತವು..

    ಹೇಮಾರ್ಸುತ್ತದು ನಮ್ಮ ಹಿರಿಯರು ಕ೦ಡುಹಿಡುದ ಒ೦ದು ಅದ್ಭುತ invention ಹೇಳಕ್ಕು. ವಿಪರ್ಯಾಸ ಹೇಳಿರೆ ಇದು ಇ೦ದ್ರಾಣ ಮೂಲ ತಪ್ಪಿತಸ್ತ- “ ಆಧುನೆಕತೆ “, ಈ ನಮ್ಮ ಪದ್ದತಿಯ ಕಮ್ಮಿ ಮಾಡ್ತು.. ಎ೦ತಗೆ ಕೇಳಿರೋ??
    ಎಲ್ಲಾ ಈ ಸೂಪರ್ ಮಾರ್ಕೆಟ್ ಲಿ ಹೋದರೆ ಸಾಕು.. ಏನು ಬೇಕಾರು ಸಿಕ್ಕುತ್ತು.. ನಮ್ಮ ಕೆ.ಜಿ ಮಾವ, ಮುಳಿಯ ಭಾವ ಹೇಳಿದಾ೦ಗೆ ದೋಸೆ ಹಿಟ್ಟು, ಕೊರದು ಮಡುಗಿದ ತರಕಾರಿ.. ಮತ್ತೆ ಇನ್ನು ಮು೦ದೆ ಹೊಯಿದು ಮಡಗಿದ ದೋಸೆ, ಇಡ್ಲಿ ಸಾನು ಸಿಕ್ಕುಗು.. ಅಲ್ಲದೋ??

    ಆದರೆ, ಆಧುನಿಕರಣ೦ದ ಪದಾರ್ತ೦ಗಳ ಮೇಲೆ ಅಪ್ಪ ಇಫೆಕ್ಟ್ (effects) ಎ೦ತಪ್ಪಾ ಹೇಳಿದರೆ ಹೇಮಾರ್ಸುವ ಕೆಣಿಯ ನಾವು ಮರೆತ್ತು..ಅದೂ ಅಲ್ಲದೆ ಈ ಪೇಟೆಲಿ ಪೇಕೇಟಿಲ್ಲಿ ರಾಸಾಯನೀಕವಾಗಿ ಪ್ರೋಸೆಸುಮಾಡಿ ಹೇಮಾರ್ಸಿ ಸಿಕ್ಕುವ ಪಧಾರ್ತ೦ಗೆಳೇ ಹೆಚ್ಚು..ಇದ ಎಷ್ಟು ಒಳ್ಳೆದೂ ಹೇಳ್ತದು ಪ್ರಶ್ನೆ??

    {..ಇನ್ನಾಣ ಸರ್ತಿಯಾಣ ಬೆಳಗಿಪ್ಪ ಬಿತ್ತಿನ ತೆಗದು ಮಡುಗಲೆ ಮರೆಯವು}
    ಭಾವ ಈ ವಾಕ್ಯ ಓದಿಯಪ್ಪಗ ಒ೦ದಾರಿಯ೦ಗೆ “ಜುಮ್ಮ್” ಆತು..!!
    ಎ೦ತ ಕೇಳಿರೆ.. ಇದರಲ್ಲಿ ಅಡಗಿಪ್ಪ ಒ೦ದು ಕಠೋರ ಸತ್ಯ..!! ಇದು ಬರೀ ಬೆಳೆ ಸೀಮಿತ ಅಲ್ಲ..! ನಮ್ಮ ಒ೦ದು ಮು೦ದಾಣ ಪೀಳಿಗೆಯನ್ನೂ ಬಿ೦ಬಿಸುತ್ತು…

    ಒಪ್ಪಣ್ಣ ಭಾವ ನೀನು ಹೇಳಿದಾ೦ಗೆ.. ಇವೆಲ್ಲರ ಮೂಲ ನೋಡಿತ್ತುಕ೦ಡ್ರೆ, ನಾಳ೦ಗೆ ಎ೦ತ ಅಪ್ಪಲಾಗ.. ಕಷ್ಟಕಾಲಕ್ಕೆ ಉಪಯೋಗ ಬಕ್ಕು ಹೇಳುವ ಮು೦ದಾಲೋಚನೆ ಎದ್ದ ಕಾಣ್ತು.

    1. ಈಗಳೇ ಇಲ್ಲಿ ಸುಪರ್ ಮಾರ್ಕೆಟುಗಳಲ್ಲಿ ಬೇಶಿದ ಇಡ್ಲಿ, ಸೇಮಗೆ, ದೋಸೆ, ಚಪಾತಿ, ಸಮೋಸ ಹೀ೦ಗಿರ್ತ ಹಲವು ತಿ೦ಡಿಗೊ ಸಿಕ್ಕುತ್ತು. ಫ್ರೀಜ್ ಆಗಿರ್ತು. ಮನೆಗೆ ತೆಕ್ಕೋ೦ಡು ಹೋಗಿ ಥಾ (thaw) (ಬೆಶಿ ಮಾಡ್ತ ಒ೦ದು ವಿಧಾನ) ಮಾಡೆಕು ಅಷ್ಟೆ. ಬಾಯಿಗೆ ಮಡುಗಲೆ ಮೆಚ್ಚ. ಸುರುವಿ೦ಗೆ ಒ೦ದರಿ ಮೆಚ್ಚಿರುದೆ ಎರಡ್ನೇ ಸರ್ತಿ ತಿ೦ದಿಕ್ಕಲೆಡಿಯ, ತಿ೦ದರೆ ಆರೋಗ್ಯವೂ ಒಳಿಯ.
      ಸುಪರ್ ಮಾರ್ಕೆಟುಗಳಲ್ಲಿ, ಅಕ್ಕಿ, ಉದ್ದಿನ ಬೇಳೆ, ರೆಡಿಮೇಡು ಹಿಟ್ಟು, ರೆಡಿಮೇಡು ದೋಸೆ ಎಲ್ಲವೂ ಸಿಕ್ಕುಗು. ನಾವು ಎ೦ತ ಬೇಕು ಹೇಳಿ ಆಯ್ಕೆ ಮಾಡ್ಯೊ೦ಬದು ನಮ್ಮ ಕೈಲಿದ್ದು ಅಷ್ಟೆ.

      1. ಚುಬ್ಬಣ್ಣೋ..
        ಜೇನುಹುಳುವಿನ ಉಪಮೆ ಭಾರೀ ಕೊಶಿ ಆತು.
        ರಾಸಾಯನಿಕವಾಗಿ ಮಾರ್ಪಾಡಾದ ವಸ್ತುಗಳ ತಿಂದರೆ ಆರೋಗ್ಯವೂ ಹಾಳು, ನಮ್ಮ ಹಳೆ ಪದ್ಧತಿಗಳೂ ಹಾಳು.
        ಒಪ್ಪ ಒಪ್ಪಕ್ಕೆ ಇಬ್ರಿಂಗೂ ಧನ್ಯವಾದಂಗೊ. 🙂

  11. ಈಗ ಮದುವೆ ಆದವಕ್ಕೆ ಹೇಮಾರ್ಸಿ ಮಡಗಲೆ ಬೋಸಭಾವ೦ ಹೇಳಿದ ಪೆಟ್ಟಿಗೆ ಮಾ೦ತ್ರ ಗೊ೦ತು.ಇನ್ನು ಹೆಚ್ಹು ಹೇಮಾರ್ಸಿ ನಮಡಗಲೆ ಹೇಳೀರೆ ನಿ೦ಗಳನ್ನೆ ಒ೦ದು ಕಡೆ ಹೇಮಾರ್ಸಿ ಮಡಗ್ಗು.ಅಕ್ಕ೦ದ್ರೆ ಕೋಪ್ಸೇಡಿ ತಮಾಷಗೆ ಹೇಳಿದ್ದು ಆತೊ.(ಬೆನ್ನು ಒಳಿಯೇಡದೊ ಅಪ್ಪ)ಒಪ್ಪ೦ಗಳೊಟ್ಟಿ೦ಗೆ.

    1. ಮೋಹನಮಾವಾ..
      ಹೇಳುದು ಹೇಳಿ ಆತು, ಇನ್ನು ಬೆನ್ನಿನ ಬಗ್ಗೆ ಜಾಗ್ರತೆ ಮಾಡಿಗೊಂಬದು ಬಾಕಿ ಒಳುದ್ದು. ಅಲ್ಲದೋ? ಹು ಹು!! 🙂

  12. ಈ ಪೇಟೆಲಿ ಹೇಮಾರುಸಿ ಇ೦ದಿ೦ಗೂ ಮಡುಗುತ್ತವೂ.. ಆದರೆ ಉಪ್ಪು ಮಣ್ಣಿಲ್ಲಿ ಅಲ್ಲಾ..!! 😀
    ಅದು ಎ೦ತದೋ ಕಪಾಟಿನಾ೦ಗಿದ್ದರ ಒಳ ಅಡ.. 😛
    ಮೊದಲಿ೦ಗೆ ಕೊದಿಲೂ, ಅಶನಾ, ಇತ್ಯಾದಿಗಳ ಎರಡೆರಡು ದಿನ ಬೆಶಿ ಮಾಡಿ ತಿ೦ಗಡ ಅಜ್ಜ೦ದ್ರು.. 🙂
    ಈಗ ಹಾ೦ಗಲ್ಲ, ಕಪಾಟಿಲಿ ಹಾಕಿ ಮುಚ್ಚು ಮಡುಗುದು.. ಅಷ್ಟೆ…!! ಮತ್ತೆ ಮರುದಿನ ಅದಾಕೆ ಬೆಶಿ ಮಡಿ ತಿನ್ನುಸ್ಸು..!! 😉

    {..ಧ್ವನ್ಯಾರ್ಥ ಗೊಂತಕ್ಕಷ್ಟೆ! }
    ಯೋ..!! ಎನಗೆ ಒ೦ದು ಅರ್ಥವ ನೆ೦ಪ್ಪು ಮಡುಗುದೇ ಕಷ್ಟಾ ಭಾವ..!! 😉
    ಈ ಎರಡೆರಡು ಹೇ೦ಗೆ ನೆ೦ಪ್ಪು ಮಡುಗುಸ್ಸು?? 🙂

    1. ಪೇಟೆಲಿ ಈಗಾಣವು ಕೆಲಸಂದ ಮನಗೆ ಬಪ್ಪಗ ದೋಸೆ ಹಿಟ್ಟು ತಂದು ಮರ ದಿನಕ್ಕೆ ತಯಾರಪ್ಪದಡ.ದೋಸೆ ಹಿಟ್ಟು ಮಾಡಿ ಮಾರ್ತವೇ ಇದ್ದವಡ.ಹೇಮಾರ್ಸುವ ಮಾತೇ ಇಲ್ಲೆ.

      1. ಅಪ್ಪು ಮಾವಾ,ದೋಸೆ ಹಿಟ್ಟು ಸುಮಾರು ಜಾಗೆಲಿ ಸಿಕ್ಕುತ್ತು.ತರಕಾರಿ ತು೦ಡು ಮಾಡಿ ಮಡಗಿದ್ದದೂ ಸಿಕ್ಕುತ್ತು. ಈಗ ಎಲ್ಲ ಮ೦ತ್ರಿ ಮಾಲ್, ರಿಲಯನ್ಸ್ ಮಾಲ್ ನವ್ವು ಹೆಮಾರ್ಸಿ ಮಡುಗುತ್ತವಿಲ್ಲೆಯೋ ಹೇಳುಗು,ಅಲ್ಲದೊ?..

        1. ಪೇಕೇಟಿಲ್ಲಿ ಸಿಕ್ಕುವ ಸಾಂಬಾರೋ,ತಾಳೋ ತಂದರೆ ಬೆಷಿ ಮಾಡಿರಾತುಕೇಳುವಾಗ ಎಂಗೊಗೆ ತಲೆ ಬೆಶಿ ಆವುತ್ತಷ್ಟೆ.

          1. ಬೋಚಬಾವೋ..
            {ಮೊದಲಿ೦ಗೆ ಕೊದಿಲೂ, ಅಶನಾ, ಇತ್ಯಾದಿಗಳ ಎರಡೆರಡು ದಿನ ಬೆಶಿ ಮಾಡಿ ತಿ೦ಗಡ }
            ಆ ನಮುನೆ ಹೇಮಾರುಸುದನ್ನೇ ನಿನಗೆ ಕಾಂಗಷ್ಟೆ. ಅದಲ್ಲದ್ದೆ ಬೇರೆ ಸುಮಾರು ವಿಶಯ ಮಾತಾಡಿದ್ದು ಬೈಲಿಲಿ. ಒಂದಾದರೂ ಕಂಡಿದೋ? 🙂

            @ ಮುಳಿಯಭಾವ, ಕೇಜಿ ಮಾವ:
            ಒಳ್ಳೆ ವಿಮರ್ಶೆ ಆತು.
            ಪೇಟೆಲಿದ್ದ ಹಳಸಲು ತಿಂದರೆ ಮತ್ತೆ ಕೇಜಿಮಾವನ ಕಾಂಬಲೇ ಹೋಯೆಕ್ಕಟ್ಟೆ! ಅಲ್ಲದೋ?

  13. ಈ ಒಪ್ಪಣ್ಣ ಹೇಳ್ತ ಒಂದೊಂದು ಶುದ್ದಿಗಳನ್ನು ಓದಿಕ್ಕಿ ಹೇಮಾರ್ಸಿ ಮಡುಗೆಕ್ಕು. ಇನ್ನೊಂದು ಸರ್ತಿ ಓದಲೆ. ಇದುವರೆಗೆ ಓದದ್ದವಕ್ಕೆ ಓದಿ ತಿಳ್ಕೊಂಬ ವಿಶಯಂಗೊ ತುಂಬಾ ಇರ್ತು.
    ಹೇಮಾರ್ಸ್ತುವದು ಹೇಳುವಾಗ ಕೆಲವೊಂದು ವಿಶಯಂಗೊ ನೆಂಪಿಂಗೆ ಬಂತು:
    ಒಳ್ಳೆ ಕ್ರಯ ಸಿಕ್ಕುವ ವಾಣಿಜ್ಯ ಬೆಳೆ ಗೆಣಮೆಣಸು. ಇದರ ಜಾಗ್ರತೆಲಿ ಹೇಮಾರ್ಸಿ ಮಡುಗಿರೆ ಹಲವಾರು ವರ್ಶ ಎಂತ ಆವ್ತಿಲ್ಲೆ. ಅನ್ವಾರಾಪತ್ತಿಂಗೆ ಮಾರಿ ಪೈಸೆ ಹೊಂದಿಸಿಗೊಂಬಲೆ ಆವ್ತು.
    ಹೆಮ್ಮಕ್ಕೊ ಗೆನಾ ಸೀರೆ, ಮಕ್ಕಳ ಡ್ರೆಸ್ ಗಳ, ಹಳೆ ವಸ್ತ್ರಲ್ಲಿ ಸುಂದಿ ಪೆಟ್ಟಿಗೆಲಿ ಹೇಮಾರ್ಸಿ ಮಡುಗ್ಗು-ಹಾಳಾಗದ್ದ ಹಾಂಗೆ

    1. ಅಪ್ಪಚ್ಚೀ..
      ಹಳೆಒಸ್ತ್ರ ಮಡಗುತ್ತ ಕಾರ್ಯವ ನೆಂಪುಮಾಡಿದ್ದು ಕೊಶಿ ಆತು.
      ತರವಾಡುಮನೆ ಅಟ್ಟಲ್ಲಿದ್ದ ಗೆಣಮೆಣಸು ಗೋಣಿಯ ಒಟ್ಟೆಮಾಡಿದ ಬೋಚಬಾವ ಪೊಳಿತಿಂದ ಕತೆ ಗೊಂತಿದ್ದಲ್ಲದೋ? 🙂

      { ಅನ್ವಾರಾಪತ್ತಿಂಗೆ } ಎಲ್ಲಿಂದ ಸಿಕ್ಕುತ್ತಪ್ಪಾ, ಶಬ್ದಂಗೊ!! 🙂

  14. ಓದಿ ಮುಗಿಶಿಯಪ್ಪಗ ಒಂದು ದೀರ್ಘ ನಿಟ್ತುಸಿರು ಬಂತು. ಸಣ್ಣಾಗಿಪ್ಪಗ ಮಾಡಿಯೊಂಡಿದ್ದ ಬಿಂಗಿ, ಲೂಟಿ ಎಲ್ಲ ನೆಂಪಾತು. ಹಪ್ಪಳ ಮಾಡುವಗ ಉಂಡೆ ಮಾಡುದು ಹೇಳಿ ಹಿಟ್ತು ತಿಂಬದೆ ಹೆಚ್ಹು. ಹಸಿ ಹಪ್ಪಳ ತಿಂಬದು ಇನ್ನೊಂದು ಗವುಜಿ.

    ಮಳೆಗಾಲಲ್ಲಿ ಸೌತೆ, ಕುಂಬಳಕಾಯಿ ಹೀಂಗಿಪ್ಪ ತರಕಾರಿ ಕೂಡ ಕಟ್ತಿ ಮಡುಗ್ಗು.

    ಮಳೆಗಾಲಲ್ಲಿ ಅಬ್ಬೆಕ್ಕೊಗೆ ಕೆಲಸ ಮಾಡಿದಷ್ತೂ ಮುಗಿಯ. ಎಲ್ಲ ಮಡಿದ ಅವಕ್ಕೆ ತಿಂಬಲೆ ಎಂತದೂ ಬೇಡ. ಮಕ್ಕೊ ತಿಂದರೆ ಸಾಕು

    1. ನಂದಣ್ಣಾ..
      { ಎಲ್ಲ ಮಡಿದ ಅವಕ್ಕೆ ತಿಂಬಲೆ ಎಂತದೂ ಬೇಡ. ಮಕ್ಕೊ ತಿಂದರೆ ಸಾಕು }
      ಈ ಮಾತು ಒಪ್ಪಣ್ಣಂಗೆ ತುಂಬಾ ತುಂಬಾ ಕೊಶಿ ಆತು.
      ಇಷ್ಟೆಲ್ಲ ಹೇಮಾರುಸಿ ಮಡಗುತ್ತದು ಅವಕ್ಕಾಗಿ ಅಲ್ಲ. ಬದಲಾಗಿ ಮನೆಯೋರಿಂಗೆ, ಮಕ್ಕೊಗೆ. ಅದರ್ಲೇ ಅವರ ನೆಮ್ಮದಿ. ಅಲ್ಲದೋ? 🙂

  15. ಹೀಂಗೆ ಹೇಮಾರ್ಸಿ ಮಡಗಿದ ಕಾರಣ ನಮಗೆ ಮಳೆಕಾಲಲ್ಲಿ ಮಳೆ ಬಪ್ಪಗ ಬೆಚ್ಹಂಗೆ ಕೂದೊಂಡು ತಿಂಬಲೆ ಇಡಿತ್ತಿದೋ…….

    1. ಪ್ರಮೋದಣ್ಣ,
      ಬೈಲಿನೋರು ಯೇವಗ ಬಪ್ಪದು ನಿಂಗಳಲ್ಲಿಗೆ?
      ಉಂಡ್ಳಕಾಳು, ಹಪ್ಪಳ-ಕಾಯಿಸುಳಿ, ಪುಳಿಂಕೊಟೆ… ಎಲ್ಲ ತಯಾರಾಗಿಪ್ಪಗ ಒಂದು ಮಾತು ಹೇಳಿಕಳುಸಿ.
      ಎಲ್ಲೋರುದೇ ಬಂದು ಬೆಚ್ಚಂಗೆ ಕೂದು ತಿಂಬೊ. ಆಗದೋ? 🙂

  16. ಆಹೇಮಾರ್ಸಿ ಮದಗಿದ್ದದಕ್ಕೆ ಇದ್ದಿದ್ದ ರುಚಿ ಈಗಾಣ ಇನ್ಸ್ಟೆ೦ಟು ಆಹಾರ೦ಓಕ್ಕೆ ಇದ್ದೊ.ಪೇಟೇ೦ದ ಬಪ್ಪವು ಅ೦ದೂ ಇ೦ದೂ ಅದರ ಖ್೦ಡಿತಾ ಇಷ್ಟ ಪಡುತ್ತವು.ಹೇಮಾರ್ಸುವವು ಹೞಿಲಿ ಕೂಡಾ ಇಲ್ಲದ್ದೆ ಆಯಿದವು.ಒಪ್ಪ೦ಗಳೊಟ್ಟಿ೦ಗೆ.

    1. ಮೋಹನ ಮಾವಾ..
      ದೊಡ್ಡ ದೊಡ್ಡ ಅಂಗುಡಿಯೋರು ಕೈಗೆ ಸಿಕ್ಕುತ್ತ ನಮುನಲಿ ಈಗ ಹೇಮಾರುಸುತ್ತವಡ.
      ಬೇಕಾದ್ದರ ಹೋಗಿ ಗಾಡಿಲಿ ಎಳಕ್ಕೊಂಡು ಬಂದರೆ ಮುಗಾತಡ.

      ಬೆಂಗುಳೂರಿಲಿರ್ತ ಪೆರ್ಲದಣ್ಣ ಹೇಳಿತ್ತಿದ್ದ. ಅಪ್ಪೋ ಅದು?

  17. ಸದ್ಯ ಮದುವೆ ಆದ ಹೆಮ್ಮಕ್ಕೊ ಈ ಲೇಖನವ ಖಡ್ಡಾಯವಾಗಿ ಓದೆಕ್ಕು. ಅವಕ್ಕೆ ಮಳೆಕಾಲಲ್ಲಿ ಎಂತೆಲ್ಲ ಹೇರ್ಮಾಸಿ ಮಡುಗೆಕ್ಕು ಹೇಳಿ ಗೊಂತಾಯೆಕ್ಕನ್ನೆ 😉
    ಒಪ್ಪಂಗಳೊಟ್ಟಿಂಗೆ… 🙂

    1. ಪ್ರದೀಪಣ್ಣೋ, ಸರಿಯಾಗಿ ಹೇಳಿದಿ 🙂 🙂
      ಸದ್ಯ ಮದುವೆ ಅಪ್ಪಲಿಪ್ಪೋರುದೇ ಖಡ್ಡಾಯವಾಗಿ ಓದೇಕು.
      ಮದುವೆ ಆದೋರುದೇ ಓದೇಕಲ್ಲದೋ? 🙂

  18. ’ಶೋಬಕ್ಕ° ಸಮಗಟ್ಟು ಕರೆಂಟು ಕೊಡ್ತಿಲ್ಲೆ’ ಹೇಳಿ ಅಜ್ಜಕಾನಬಾವ ಗುಣಾಜೆಕುಂಞಿಯ ಹತ್ತರೆ ದೂರುಕೊಟ್ಟದೋ?
    ಅಂಬಗ ಈ ‘ಪೊಳಿಟ್ರಿಕ್ಕುಗೊ’ ಎಲ್ಲ ಸರಿಗಟ್ಟು ಅರಡಿವದು ಗುಣಾಜೆಕುಂಞಿಗೋ? 🙂

  19. ’ಶೋಬಕ್ಕ° ಸಮಗಟ್ಟು ಕರೆಂಟು ಕೊಡ್ತಿಲ್ಲೆ’ ಹೇಳಿ ಅಜ್ಜಕಾನಬಾವ ಗುಣಾಜೆಕುಂಞಿಯ ಹತ್ತರೆ ದೂರುಕೊಟ್ಟಿದೋ?
    ಅಂಬಗ ಈ ‘ಪೊಳಿಟ್ರಿಕ್ಕುಗೊ’ ಎಲ್ಲ ಸರಿಗಟ್ಟು ಅರಡಿವದು ಗುಣಾಜೆಕುಂಞಿಗೋ? 🙂

    1. {‘ಪೊಳಿಟ್ರಿಕ್ಕುಗೊ’ ಎಲ್ಲ ಸರಿಗಟ್ಟು ಅರಡಿವದು ಗುಣಾಜೆಕುಂಞಿಗೋ?}
      ಅಯ್ಯಯ್ಯೋ, ಇದರ ಪೊಳಿಟ್ರಿಕ್ಕು ಹೇಳಿರೆ ನಿಂಗೊಗೆ ಪೊಳಿ ಬೀಳುಗು.

      ಗುಣಾಜೆಕುಂಞಿ ಕಾಂಬಲೆ ಮಾಂತ್ರ ಸಣ್ಣ, ಅವನ ಪ್ರಭಾವಳಿ ಎಡಿಯೂರಪ್ಪನಿಂದಲೂ ದೊಡ್ಡ! 🙂 🙂 🙂

  20. ಲೀಖನ ಲಾಯಕ ಆಯಿದು ಒಪ್ಪಣ್ಣಾ.ಓದಿ ಖುಶಿ ಆತು.ಯಾವ ಯಾವ ವಸ್ತುಗಳ ಸ೦ಗ್ರಹಿಸಿಯೊ೦ಡು ಇತ್ತವು ಹೇಳೀ ಗೊ೦ತಾತು.

    1. ಡಾಗುಟ್ರು ಬರವದು ರಜ್ಜ, ಆದರೆ ಓದಿದೋರಿಂಗೆ ಅದರ ಆಳ-ವಿಸ್ತಾರ ಎಂತರ ಹೇಳಿ ಗೊಂತಕ್ಕು – ಹೇಳ್ತವು ಮೆಡಿಕಲು ಶೋಪಿನ ಶಂಕರಭಾವ!
      ಇಲ್ಲಿಯೂ ಹಾಂಗೇ ಆತಿದಾ! 😉

      ಡಾಗುಟ್ರೇ, ಶುದ್ದಿ ಹೇಳ್ತಿರೋ ಬೈಲಿಂಗೆ?

  21. neeru mavinakayi gojji, undlakaLu hesarugo baayili neeru tharsitthu.

  22. OppaNNa, thumba thumba thumba layikada lekhana. bhari layikalli odisigondu hothu. eshto samayada mele oppaNNa na visit madi ee lekhana full odide. hange maga looti madtharoo rappa comment bareyadde manassu keLiddille. ella hemmakko maduva kelasava bhari layikalli vivarsidde.. enagede enna ajji, abbe, chikkammandru madiddu/madudu nempathu. eega menli atthe, maidunana hendathide madtha ippadara phone li keLthe suddi. kaLuda varsha happala, nellisattu madle serle edigayidu. ee samayalli oorilli itthiddeyo. ottare layikada lekhana. innu hinge bega odule try madthe.

    1. ಸುಮನಕ್ಕಾ..
      “ಅಪುರೂಪಲ್ಲಿ ಬಂದೋರ ಕಂಡು ಕುಶಿಅಪ್ಪದು” ಹೇಳಿರೆ ಹೀಂಗೇ ಅಲ್ಲದಾ?
      ಒಪ್ಪಣ್ಣನ ಬೈಲು ಹುಟ್ಟಿ-ಬೆಳವಗಳೇ ನಿಂಗೊ ಇತ್ತಿದ್ದಿ ಒಟ್ಟಿಂಗೆ. ಮತ್ತೆ ಎಲ್ಲಿಗೆ ಹೋದೀ?
      ಶಾಂತತ್ತೆ ಅಂಬಗಂಬಗ ಕೇಳಿಗೊಂಡಿತ್ತಿದ್ದವು. ಆಗಲಿ, ಸೂಕ್ತ ಶುದ್ದಿಗೆ ಒಪ್ಪ ಕೊಟ್ಟು ಪುನಾ ಬಂದಿರನ್ನೇ. ಇಷ್ಟು ಅಪುರೂಪ ಆಗೇಡಿ, ಆತಾ?

      ಈಗ ನಿಂಗೊ ಹೇಮಾರ್ಸಿ ಮಡಗಿದ್ದರ ಅಳಿಯದೇವರು ಅರಟುತ್ತನೋ? 🙂
      ಹರಿಯೊಲ್ಮೆಯ ಹಳೆಕತೆಗಳ ನಿಂಗೊ ಬರವಲೆ ಹೆರಟ್ರೆ ಬೌಶ್ಷ ಅದುವೇ ಒಂದು ಶುದ್ದಿ ಅಕ್ಕೋ ಏನೋ! ಹೇಮಾರ್ಸಿ ಮಡಗಿದ ಅಡಕ್ಕೆ ಕಂಬಲ್ಲೇ ಅಲ್ಲದೋ, ಜೆಂಬ್ರದ ಮುನ್ನಾಣದಿನ ಕಂಬಾಟ ಆಡಿದ್ದು?

  23. ಕೊರಸ್ಗಾಯಿ, ನೀರ್ಗಾಯಿ, ಉಂಡ್ಳೆಕಾಳು, ನೀರ್ಸೊಳೆ, ಮಾಯ್ನಹಪ್ಳ ಇದೆಲ್ಲ ಹೆಂಗಸರು ಮಳೆಗಾಲಕ್ಕೆ ಹೇಳಿ ಮಾಡಿ ಮಡುಗುವ ಕಾಲ ಕಳೇದೇ ಹೋಯ್ದು, ” ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು ” ಹೇಳ್ತ ಕವಿವಾಣಿ ನೆನಪಾಗ್ತು ಭಾವಾ !!

    1. ಕಾಂತಣ್ಣಾ.
      ಅಪುರೂಪಲ್ಲಿ ಬೈಲಿಂಗೆ ಬಂದಿರಾ? ತುಂಬಾ ಕೊಶಿ ಆತು.
      ಬನ್ನಿ, ಬೈಲಿಂಗೊಂದು ಶುದ್ದಿ ಹೇಳಿ. ಆತಾ?

      ಉಂಡ್ಳಕಾಳು, ನೀರ್ಸೊಳೆಗಳ ನೆಂಪುಮಾಡಿ ಬಾಯಿಲಿ ನೀರು ಬರುಸಿದಿ ನಿಂಗೊ. ಅಲ್ದಾ?

  24. ತು೦ಬಾ ಲಾಇಕಾಯಿದು…ಆನು ಸಣ್ಣ ಇಪ್ಪಗ ಎನ್ನ ಅಮ್ಮ ಹಪ್ಪಳ ಮಾದುವಾಗ ಅಮ್ಮ೦ಗೆ ಚೆರೆ ಚೆರೆ ಹೆಳಿಗೊನ್ದು ಹಪ್ಪಳ ಕೆಲಸಕ್ಕೆ ಸೆರಿಗೊನ್ದು ಇತ್ತದು;….ಮ೦ಗ್ರಳೂರಿನ್ದ ತನ್ದ ಉಳಾಲ ಬೆಲ್ಲವ ಬೆಶಿಲಿಲಿ ಮದುಗಿ ದೊದ್ದ ಅಳಗೆಲಿ ಹಾಕಿ ಅಟ್ಟಲ್ಲಿ ಮದುಗುದು ಎಲ್ಲ ನೆನಪ್ಪತು.. ಆ ಮದುರ ನೆನಪುಗಳ ನೆನಪಿಸುವ ಹಾನ್ಗೆ ಮಾದಿದ ಒಪ್ಪಣ್ಣ೦ಗೆ ಧನ್ಯವಾದ೦ಗ..

    1. ವಿನಯತ್ತೆ,
      ನಿಂಗಳ ಮನಸ್ಸಿಲಿ ’ಹೇಮಾರ್ಸಿ’ ಮಡಗಿದ್ದ ಕೆಲವು ನೆಂಪುಗಳ ಬಿಚ್ಚಿದ್ದು ಕಂಡು ತುಂಬ ಕೊಶಿ ಆತು.

      ಹರೇರಾಮ..

  25. ಭಾರಿ ಲಾಯಕ್ಕ ಆಯಿದು.ಓದಿ ಖುಷಿ ಆತು
    ಹಳೇ ನೆನಪು ಆತು

    ಹರೇ ರಾಮ

  26. ಮಳೆಗಾಲಲ್ಲಿ ಉಪಯೋಗಿಸಲೆ ಬೇಕಾಗಿ ಕಟ್ಟಿ ಮಡಗುವ ಹೆಮ್ಮಕ್ಕಳ ಕೌಶಲ್ಯ, ಆ ಸಾಮಾನುಗಳ ಬಗೆಲಿ ಚೆಂದಕೆ ಒಪ್ಪಣ್ಣ ವರ್ಣಿಸಿದ್ದ. ಏವ ವಿಷಯವನ್ನುದೆ ಬಿಟ್ಟಿದ ಇಲ್ಲೆ. ಅಟ್ಟದ ಮಂಡಗೆಂದ ನೀರಡಕೆ ತೆಕ್ಕಂಡು ಬಾ ಹೇಳಿ ದೊಡ್ಡವು ಮಕ್ಕಳ ಹತ್ರೆ ಹೇಳಿರೆ ಮೆಲ್ಲಂಗೆ ಜಾರುತ್ತವೇ ಹೆಚ್ಚಿನವು. ಕೈ ಹಾಕಿರೆ, ಕೈ ಇಡೀ ವಾಸನೆ. ಒಪ್ಪಣ್ಣ ಹೇಳಿದ ಹಾಂಗೆ ಅಡಕ್ಕೆ ಮಂಡಗೆಯ ಒಳಾಣ ಹುಳದ ಸರ್ಕಸ್ಸಿನ ನೋಡ್ಳೆ ಚೆಂದ. ಜಾಲಿಲ್ಲಿ ಹಪ್ಪಳ ಒಣಗಲೆ ಹಾಕಿದ್ದದು ಹಾರಿ ಹೋವ್ತಕ್ಕೆ ಬೇಕಾಗಿ, ಮಡ್ಳಿನ ಕಟ್ಟಿ ರಂಗಸ್ಥಳದ ಹಾಂಗೆ ಮಾಡೆಂಡಿದ್ದಿದ್ದವು. ಅದರ ಮೂಲಗೆ ಬಾಳೆದಿಂಡಿನ ಟ್ಯೂಬ್ ಲೈಟು ಕಟ್ಟಿ ಎಂಗೊ ಎಲ್ಲ ಸೇರಿ ಯಕ್ಷಗಾನದ ಕುಣಿತ ಮಾಡೆಂಡಿದ್ದಿದ್ದು ನೆಂಪಾತು. ಮನೆ ನೆಡಶುತ್ತ ವಿಷಯಲ್ಲಿ ಹೆಮ್ಮಕ್ಕಗೆ, ಹೆಮ್ಮಕ್ಕಳೆ ಸಾಟಿ. ಕಡೆಣ ಒಪ್ಪವುದೆ ಲಾಯಕ್ಲಾಯಿದು. ಹೇಮಾರುಸಿ ಮಡಗಿದ್ದದು, ಮಡಗಿದವಕ್ಕೆ ಬೇಕಪ್ಪಗ ಖಂಡಿತಾ ಸಿಕ್ಕುಗು.

    1. {ನೀರಡಕೆ ತೆಕ್ಕಂಡು ಬಾ ಹೇಳಿ ದೊಡ್ಡವು ಮಕ್ಕಳ ಹತ್ರೆ ಹೇಳಿರೆ ಮೆಲ್ಲಂಗೆ ಜಾರುತ್ತವೇ ಹೆಚ್ಚಿನವು}
      ಬೊಳುಂಬುಮಾವಾ..
      ನಿಂಗ ಹೇಳಿದ ರೀತಿ ಕೇಳಿ ಒಪ್ಪಣ್ಣಂಗೆ ನೆಗೆಬಂತು. 🙂
      ಅಲ್ಲದ್ದರೂ ಅಪ್ಪಾದ್ದೇ – ಅಣ್ಣ, ನೀನು ತಾ – ತಂಗೇ ನೀನು ತಾ; ಹೇಳಿ ಪೀಂಕದ್ದ ಮಕ್ಕೊ ಇಕ್ಕೋ? 😉

      ಒಪ್ಪ ಒಪ್ಪಕ್ಕೆ ಒಪ್ಪಂಗೊ.

  27. ಒಪ್ಪಣ್ಣ
    ನಿ೦ಗಳ ಹೆಸರಿನ ಹಾ೦ಗೆ ನಿ೦ಗಳ ಬರವಣಿಗೆ. ಒಪ್ಪ ಆಯಿದು. ಇದಕ್ಕೆ ಪ್ರತಿಕ್ರಿಯೆ ಕೊಟ್ತ ಒಬ್ಬರಿ೦ಗೆ ಅನಿಸಿದ ಹಾ೦ಗೆ ಎನಗೂ ಎನ್ನ ಬಾಲ್ಯ ಒ೦ದರಿ ನೆ೦ಪಾತು.
    ಮೆಳಗಾಲಕ್ಕೆ ಮಾಡಿಗೊ೦ದಿದ್ದ ಸಿದ್ದತೆ. ಹಣ್ಣು ಸೌತೆಗಳ ಒ೦ದು ಕ೦ಬಕ್ಕೆ ಕಟ್ಟಿಗೊ೦ಡಿದ್ದದು. ಮತ್ತು ಮಳೆಗಾಲಕ್ಕೆ ಪ್ರತಿ ದಿನವೂ ಆ ಸೌತೆಗ ಉಪಯೊಗ ಅಯಿಕ್ಕೊ೦ಡಿದ್ದದು ಎ೦ಗೊಗೆಲ್ಲ ಆ ಸೌತೆಗಳ ಮೇಲೆ ಕೋಪ ಬ೦ದೊ೦ಡಿದ್ದದು ಎಲ್ಲ ನೆ೦ಪಾತು.
    ಬಹುಶ ಈಗ ಆ ನಮೂನೆ ಸಿದ್ದತೆಗ ಅಪ್ಪ ಮನಗ ಕಡಮ್ಮೆ. ನೆಲವನ್ನೂ ಕ್ರುಶಿ ಯನ್ನೂ ಪ್ರೀತಿಸುವ ಜನ೦ಗಳೂ ರಜ್ಜ ಕಡಮ್ಮೆಯೆ.

    ನಿ೦ಗ ಕೊಟ್ಟ ಶೀರ್ಶಿಕೆ ಸತ್ಯ. ಮನೆ ನೆಡೆಶುದು ಹೆಮ್ಮಕ್ಕಳೆ. ಅವರ ಸಹನೆ, ಬುದ್ದಿಶಕ್ತಿ, ಮು೦ದಾಲೊಚನೆ ಎಲ್ಲ ಗ್ರೇಟ್!

    1. ಅದಾ, ಸೌತ್ತೆಯ ಬಗ್ಗೆ ಶುದ್ದಿ ಹೇಳೇಕು ಗ್ರೇಶಿದ್ದು – ಬಿಟ್ಟೇ ಹೋತು ಮತ್ತೆ.
      ನಿಂಗೊ ಸೇರುಸಿ ಪಟ್ಟಿಯ ದೊಡ್ಡಮಾಡಿದಿ. ಕೊಶೀ ಆತು.

      ಈಗಾಣ ಸೌತ್ತೆ ಹೇಮಾರ್ಸುಲೆ ದಕ್ಕಿತ ಒಳಿಯ, ಇಂದು ತಂದರೆ ನಾಳೆ ಕೊರೆಯಲೇ ಬೇಕು.ಅಲ್ಲದ್ದರೆ ನಾಳ್ತಿಂಗೆ ದನಗೊಕ್ಕೆ ಅಕ್ಕಟ್ಟೆ. ಅಲ್ಲದೋ? 🙂

  28. ಬಾರಿ ಲಾಯಕ್ಕ ಆಯಿದು. ಹಳೇ ನೆಮ್ಪು ಆತು . ಊರಿಲಿ ಸಣ್ಣಾಗಿಪ್ಪಗ ಮಾಡಿದ ಲೂಟಿಗೊ… ಹಾಂಗೆ ಕಲ್ಥ ವಿಚಾರಂಗೊ ಎಲ್ಲ ಒಂದ್ಸರ್ತಿ ಫ್ಲಾಶ್ ಬೇಕಿಲಿ ನೋಡಿದ ಕೋಶಿ .

    1. ಮೊಳೆಯಾರ ಭಾವಂಗೆ ನಮಸ್ಕಾರ ಇದ್ದು.
      ನಿಂಗಳ ಹಳೆನೆಂಪಿಲಿ – ಪ್ಲೇಶ್-ಬೇಕಿಲಿ ಬಂದ ಸುಂದರ ಘಟನೆಗೊ ಇದ್ದರೆ ಚೆಂದಕೆ ಶುದ್ದಿ ಮಾಡಿ ಬೈಲಿಲಿ ಹೇಳ್ತಿರೋ?

  29. ಸಣ್ಣಾಗಿಪ್ಪಗ ಅಜ್ಜನ ಮನೆಲಿ ನೋಡಿದ್ದು ಒಂದರಿಯಂಗೆ ನೆಂಪಾತು. ಈಗ ಎಲ್ಲ ದಿಕ್ಕೆ ನೋಡ್ಲೆ ಸಿಕ್ಕ. ಮುಂದಂಗೆ ‘ಹೇಮಾರ್ಸಿ ಮಡುಗಿದ ಹಾಂಗೆ’ ಹೇಳುದು “ಆಡುಮಾತು”(ಗಾದೆಮಾತು) ಆಗಿ ಮಾತ್ರ ಒಳಿಗಷ್ಟೆ.

    1. ತೆಕ್ಕುಂಜೆ ಅಪ್ಪಚ್ಚಿಯ ಒಪ್ಪ ಕಂಡು ಕೊಶಿ ಆತು.
      ಮುಂದಾಣೋರು ’ಪೈಶೆ’ ಒಂದರ ಹೇಮಾರ್ಸಿ ಮಡಗ್ಗು – ಹೇಳಿ ಅಜ್ಜಕಾನಬಾವ ಬಿಂಗಿ ಮಾತಾಡ್ತ°.

  30. ಒಪ್ಪಣ್ಣಾ,ಲಾಯ್ಕಾಯಿದು ಲೇಖನ.
    ನಮ್ಮ ಅಜ್ಜಿಯಕ್ಕಳ ಮನಸ್ಸು,ಮನೆ ನಡೆಶುವ ಕಲೆ ಲಕ್ಷ ಸೊರುಗಿರೂ ಸಿಕ್ಕ ಹೇಳುವ ಮಾತು ನಿಜ..
    {ಕೊಡಗಾಸನ ತ೦ಬುಳಿಯ ರುಚಿ ಹಾಂಗೇ ಇಕ್ಕು} ಯಬೋ ಕೈಕ್ಕೆಯೇ..

    1. ಒಪ್ಪ ಒಪ್ಪಕ್ಕೆ ಒಪ್ಪಂಗೊ.
      ತಂಬುಳಿಗೊ ಹುಳಿಯೋ, ಕೈಕ್ಕೆಯೋ ಇಪ್ಪದು ಅಲ್ಲದೋ ಮುಳಿಯಭಾವಾ?
      ಜೀರ್ಣಕ್ಕೆ ಒಳ್ಳೆದಾಡ, ಬಂಡಾಡಿಅಜ್ಜಿ ಹೇಳುಗು! 😉

  31. ಆನು ಸಣ್ಣಾಗಿಪ್ಪಗ ಮಳೆಗಾಲಕ್ಕೆ ಬೇಕಾದ ಸಾಮಾನಿನ ಒಣಗ್ಸುದು ,ಉದಾಹರಣೆಗೆ,ಬೆಲ್ಲ,ಎಂಗೊಗೆ ಒಂದು ಹಬ್ಬವೇ.ಅಂಬಗ ಶಕ್ಕರೆ ಸಿಕ್ಕ.ಪೇತೆಂದ ಯೇವದೇ ಸಾಮಾನು ಬೇಕಾರೂ ಬೇಸಗೆ ಬೆಶಿಲಿಪ್ಪಗಳೇ ತಂದು ಹೇಮಾರ್ಸಿ ಮಡಗೆಕ್ಕಿತ್ತು.ಹಾಂಗೆ ಹೇಳಿ ಈಗ ಅದೆಲ್ಲದರ ಅಗತ್ಯವೂ ಇಲ್ಲೆ.ಇಂದು ಬಾಳೆ ನಾರಿನ ಉಪಯೋಗ ಹೂಗು ಕಟ್ಟಲೂ ಇಲ್ಲೆ ,ಮುಡಿ ಕಟ್ಟುದು ಬಿಡಿ……….
    ಮತ್ತಿನ್ನು ಒಪ್ಪಣ್ಣನ ಕಲ್ಪನೆಯ ಬಗ್ಗೆ ಅಥವಾ ಹಿರಿಯರು ಹೇಳಿದ್ದಾರ ನೆಂಪು ಮಡಿಕ್ಕೊಂಬದರ ಬಗ್ಗೆ”prodigious”

    1. ಕೇಜಿಮಾವಾ..
      ಬೆಲ್ಲದ ಶುದ್ದಿ ತೆಗವಲೆ ಒಪ್ಪಣ್ಣಂಗೆ ಬಿಟ್ಟು ಹೋಗಿತ್ತು. ನಿಂಗೊ ಸೇರುಸಿದಿ. ಒಳ್ಳೆದಾತು.
      ಹೆರಿಯೋರು ಮಾಡಿಗೊಂಡಿದ್ದದರ ಕಲ್ಪನೆ ಮಾಡೇಕಾಗಿ ಬಯಿಂದು ಹೇಳಿರೆ ಅದೆಂತರ, nostalgiaವೋ? ಒಪ್ಪಣ್ಣಂಗರಡಿಯ! 🙂

      1. algia ಹೇಳಿರೆ ಬೇನೆ ಹೇಳಿ ನವಗೆ ಗೊಂತಿದ್ದು.nosta ಎಂತ ಕೇಳಿರೆ ನವಗರಡಿಯ

  32. [ಇಂತಾ ದಿನ ಅಕ್ಕಿ ತಂದದು – ಇನ್ನು ಇಂತಿಷ್ಟು ಮೆಣಸು ಇದ್ದು – ………ಗಮನಂಗೊ ಮನೆ ಹೆಮ್ಮಕ್ಕೊಗೆ ಇರೆಕ್ಕು, ಸ್ವಾಭಾವಿಕವಾಗಿ ಇರ್ತು.] – ಇಲ್ಲದ್ದವಂತೂ ಈಗ ತಿಳಿವಲೇ ಬೇಕು. ಒಪ್ಪಣ್ಣಂಗಂತೂ ಬಾಯಿಪಾಠ ಆಯ್ದು.

    ಸಭಗಣ್ಣಂಗೆ ನೆಗೆ ತಡೆತ್ತಿಲ್ಲೆ. “ಆನು ಮುಂಡಾಸು ಕಟ್ಟಿ ಮೇಗಂದ ಮುಟ್ಟಾಳೆ ಮಡುಗಿ ಅಗತ್ಯ ಇಲ್ಲದ್ರೂ ಬೇಕಾವ್ತು ಹೇಳಿ ಮೊಬೈಲ್ ಸೊಂಟಲ್ಲಿ ಸುರ್ಕೊಂಡು ಬಲದ ಕೈಲಿ ಕತ್ತಿ ಹಿಡ್ಕೊಂಡು ಚೆರ್ಪು ಸುರ್ಕೊಂಡು ತೋಟ ಗುಡ್ಡೆ ಸುತ್ತಿ ಜೆಂಬಾರದ ಪುರುಸೊತ್ತಿಲ್ಲದ್ದ ಎಡೆಲಿಯೂ ಹಾಳೆ ಬಾಳೆ ಕುಂಬಾಳೆ, ತಪ್ಪು ಕಣಕ್ಕ್ ಪಂತಿ ಬಜಕ್ಕಿರೆ, ಕಾಯಿಸೊಪ್ಪು ಕರಟ ಕೊತ್ತಳಿಕೆ, ಅಡರು ಮಡಲು ಸೂಟೆ,,ಕಟ್ಟಿ ಮಡುಗಿದ್ದು ಚೆಲ ಇವಂಗೆ ಹೇಂಗೆ ಕಂಡತ್ತು?!!”

    ಅಲ್ಲಾ ಒಪ್ಪಣ್ಣ ಭಾವ, ನಿಂಗೊ ಏವ ಡಿಕ್ಷೆನೇರಿ ಬಾಯಿಪಾಠ ಮಾಡಿದ್ದು?!

    ಒಪ್ಪಣ್ಣನ “ಮುಂಗಾರಿನ ಎದುರುಗೊಂಬಲೆ ನಮ್ಮ ಸಿದ್ಧತೆ” ಒಪ್ಪ ಆಯ್ದು ಹೇಳಿ ಇಲ್ಲಿಂದಲೂ ಒಪ್ಪ .

    ಅಲ್ಲಾ ಒಪ್ಪಣ್ಣ ಭಾವ, ನಿಂಗೊ ಏವ ಡಿಕ್ಷೆನೇರಿ ಬಾಯಿಪಾಠ ಮಾಡಿದ್ದು?!

    ಒಪ್ಪಣ್ಣನ “ಮುಂಗಾರಿನ ಎದುರುಗೊಂಬಲೆ ನಮ್ಮ ಸಿದ್ಧತೆ” ಒಪ್ಪ ಆಯ್ದು ಹೇಳಿಯೂ ‘ಹೇಮ-ರಜತ’ ವರ್ಣನೆಗೆ ಇಲ್ಲಿಂದಲೂ ಒಪ್ಪ .

    1. ಚೆನ್ನೈಭಾವಾ,
      ನೆಡಿರುಳು ಶುದ್ದಿ ಹೇಳಿಕ್ಕಿ, ದಿನ ಉದಿ ಆಯೇಕಾರೇ ಒಪ್ಪ ಕೊಟ್ಟಿರ್ತಿ ನಿಂಗೊ. ಅದರ ಕಂಡ್ರೆ ಕೊಶಿಯೋ ಕೊಶಿ ಒಪ್ಪಣ್ಣಂಗೆ!

      ’ಹೇಮಾರ್ಸಿ’ ಮಡಗುತ್ತ ಪಟ್ಟಿಲಿ ಒಪ್ಪಣ್ಣ ಹೇಳ್ಳೆ ಬಿಟ್ಟು ಹೋದ ಕೆಲವು ವಸ್ತುಗಳನ್ನೂ ಸೇರುಸಿ, ಚೆಂದಮಾಡಿದ ನಿಂಗೊಗೊಂದೊಪ್ಪ!

      ಸುಬಗಣ್ಣನ ವೆಗ್ತಿ ಚಿತ್ರಣ ಪಷ್ಟಾಯಿದು! 🙂

  33. ಒಳ್ಳೆದಾಯಿದು.. ಒಪ್ಪ೦ಗೊ ಒಪ್ಪಣ್ಣಾ..
    ಸುಮ್ಮನೆ ಅಲ್ಲ ಅಲ್ದೊ ಮೊದಲಾಣವು ‘ಗೃಹಿಣೀ ಗೃಹಮುಚ್ಯತೇ’ ಹೇಳಿ ಹೇಳಿದ್ದು..
    ಆನು ಈ ಸರ್ತಿ ಬಪ್ಪಗ ಹೀ೦ಗೆ ಹೇಮಾರ್ಸಿ ಮಡುಗಿದ ಸುಮಾರು ಉಪ್ಪಿನಕಾಯಿ, ಚಟ್ನಿಹೊಡಿ, ಬಾಳಕ್ಕು ಮೆಣಸು, ಮೆಣಸಿನ ಒಡೆ, ಪುನರ್ಪುಳಿ ಓಡು, ನೆಲ್ಲಿ೦ಡಿ ಎಲ್ಲ ಅಬ್ಬೆ ಕಟ್ಟಿಕೊಟ್ಟದರ ತೆಕ್ಕೊ೦ಡು ಬಯಿ೦ದೆ. ಈಗ ಅಡಿಗೆ ಎಷ್ಟು ಸುಲಭ ಆವ್ತು ಗೊ೦ತಿದ್ದಾ..
    ಒಪ್ಪಣ್ಣನ ಒಪ್ಪ ಲೇಖನಕ್ಕೆ ಮತ್ತೊ೦ದಾರಿ ಒಪ್ಪ೦ಗೊ..

    1. […..ಎಲ್ಲ ಅಬ್ಬೆ ಕಟ್ಟಿಕೊಟ್ಟದರ ತೆಕ್ಕೊ೦ಡು ಬಯಿ೦ದೆ . ಈಗ ಅಡಿಗೆ ಎಷ್ಟು ಸುಲಭ ಆವ್ತು ಗೊ೦ತಿದ್ದಾ..] – ಎಲ್ಲಾ ಒಂದೇ ದಿನವೋ ಗಣೇಶಣ್ಣ?! ಮಾಡಿದ್ದರ ಒಬ್ಬಂಗೇ ಮುಗುಷಲೆ ಕಷ್ಟ ಆವ್ತಿಲ್ಯೋ ಒಂದೇ ದಿನ?!!.

      1. ಪೆರುವದಣ್ಣಾ..
        ಶುದ್ದಿಗೆ ಮೊದಾಲಾಣ ಒಪ್ಪ ಕೊಟ್ಟದಕ್ಕೆ ಮೊದಲೊಂದೊಪ್ಪ.

        ನಿಂಗಳ ಮನೆಲಿಯೂ ’ಹೇಮಾರ್ಸಿ’ಮಡಗಿದ ವಸ್ತುಗಳ ನಿಂಗೊ ದೂರಕ್ಕೆ ಹೋಪಗ ತೆಕ್ಕೊಂಡು ಹೋಗಿ, ನಿಂಗೊಗೆ ಅದು ಉಪಯೋಗ ಆವುತ್ತಾ ಇಪ್ಪದರ ಬೈಲಿಲಿ ನೆಂಪುಮಾಡಿದ್ದು ಕಂಡು ಕೊಶೀ ಆತು.

        ಅಲ್ಯಾಣ ಒರ್ತಮಾನ ಎಂತರ? ಬೈಲಿಂಗೆ ಹೇಳ್ತಿರೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×