ಜಾಲು ಕೆರಸುವಗ ನೆಂಪಾದ ಜಾಲಬಾಗಿಲ ಶುದ್ದಿಗೊ..

December 7, 2012 ರ 12:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶತಮಾನದ ಅಭೂತಪೂರ್ವ ಕಾರ್ಯಕ್ರಮ ಶತಾವಧಾನ ಕಳುದತ್ತು.
ಮೂರೂದಿನ ಹೋಗಿ ನೋಡ್ಳೆ ಅವಕಾಶ ಆಗದ್ಸಕ್ಕೆ ಮಾಷ್ಟ್ರುಮಾವನ ಮನೆಲಿ ಕಂಪ್ಲೀಟ್ರು ಬುಡಲ್ಲಿ ಕೂದು ನೋಡಿದ್ದೂ ಆತು.
ಒಂದು ದಿನ ನಮ್ಮ ಬೈಲಕರೆ ಮದುವೆ ಇದ್ದ ಕಾರಣ ಅಲ್ಲೇ ಅವಧಾನ ಮಾಡಿದ್ದೂ ಆತು. ಮದುವೆ ಮರದಿನ ಸಟ್ಟುಮುಡಿಗೆ ಮಾಣಿಮನೆಗೆ ಹೋದ್ದೂ ಆತು. ಕಾಡೂರು ಬಾವನ ಮನೆಲಿ ಮೈಸೂರುಪಾಕು ತಿಂದದೂ ಆತು.
ಒಂದರಿಯಾಣ ಬೆಶಿ ಕಳುಶಿ ಒಪಾಸು ಮನೆಲೇ ಸ್ವಸ್ಥ ಕೂದುಗೊಂಡು ಒರಕ್ಕು ತೂಗಿದ್ದೂ ಆತು.
ಇನ್ನೆಂತರ?
~
ಹಬ್ಬ ಕಳುದಪ್ಪದ್ದೇ ’ಚೋಲು’ ಬದಲುತ್ತ ಸಂಗತಿ ಗೊಂತಿಪ್ಪದೇ.
ಇಷ್ಟನ್ನಾರ ಅಟ್ಟಲ್ಲಿದ್ದ ಅಡಕ್ಕೆ ಈಗ ’ಚೋಲು’ ಅಡಕ್ಕೆ ಆತು, ಕಳುದೊರಿಶವೇ ಅಟ್ಟಲ್ಲಿದ್ದ ಅಡಕ್ಕೆ “ಡಬ್ಬಲ್ ಚೋಲುದೇ” ಆಗಿಬಿಟ್ಟತ್ತು.
ಇನ್ನು ತೋಟಲ್ಲಿ ಸಿಕ್ಕುತ್ತ ಅಡಕ್ಕೆ “ಹೊಸ ಅಡಕ್ಕೆ” ಆತಿದಾ.
ನಮ್ಮ ಬೈಲಿಲಿಯೂ ಹಾಂಗೇ – ಹೊಸ ಶುದ್ದಿಗೊ ಬಂದಪ್ಪದ್ದೇ – ಪ್ರತಿನಿತ್ಯ ಹಬ್ಬ.
ಹಾಂಗಾಗಿ ಶುದ್ದಿಗಳ ಪ್ರತಿನಿತ್ಯವೂ ಚೋಲು-ಡಬ್ಬಲ್ ಚೋಲು ಹೇದು ಹೇಮಾರ್ಸಿ ಮಡಗುತ್ತು. ಅಪ್ಪೋಲ್ಲದೋ!? ಅದಿರಳಿ.

ಈ ಒರಿಶದ ಅಡಕ್ಕೆಯ ಹೊಸ ಅಡಕ್ಕೆ ಹೇಳಿರೆ ಸಾಕೋ? ಕೊಯಿದು ತಂದು ಒಣಗುಸೆಡದೋ?
ಒಣಗಿದ ಮತ್ತೆ ಅಂಬೆರ್ಪಿನ ಭಾವಯ್ಯಂದ್ರು ಸೊಲುದು ಮಾರೆಡದೋ? ಪುರ್ಸೋತಿನೋರು ಅಟ್ಟಲ್ಲಿ ಹೇಮಾರ್ಸಿ ಮಡಗೆಡದೋ?
ಈಗಂತೂ – ಅಡಕ್ಕೆ ಕೊಯಿವದು ಹೇದರೆ ಭಯಂಕರ ಬಂಙದ ಏರ್ಪಾಡು ಆಗಿ ಹೋತು. ಬತ್ತೆ ಹೇಳಿದ ದಿನ ಬಾರವು; ತಿಂಡಿಕಾಪಿಗೆ ಬೇಶಿ ಮಡಗಿರೆ ಮತ್ತೆ ನಾವೇ ತಿಂದು ಮುಗುಶೇಕಟ್ಟೆ. ಅವ° ಇವ° ಹೇಳಿಲ್ಲೆ, ಜಾಲ ಸುರುವಾಣ ಸುಂದರನೂ ಅಷ್ಟೇ; ಬೈಲ ಕರೆಯ ಬಾಬುದೇ ಅಷ್ಟೆ – ಹೇಳಿದ ದಿನ ಬಾರವು!
ಅಡಕ್ಕೆ ತೆಗವಲೆ ಬಾರದ್ದೆ ಸುಂದರ ಹೀಂಗೂ ಬಂಙ ಬರುಸಿರೆ ಕೊಗ್ಗು ಆಚಾರಿಯ ಕೈಲಿ ಹೇಳಿ ಒಂದು ಏಣಿ ಮಾಡ್ಸೆಕ್ಕಟ್ಟೆಯೋದು ಸುಭಗಣ್ಣ ಆಲೋಚನೆ ಮಾಡಿಗೊಂಡಿದ್ದವು ಒಂದು ಹೊಡೆಲಿ. ಮರ ಹತ್ತುವ ಮಿಶನು ತರುಸಿರೆ ಅಕ್ಕೋದು ನೆಕ್ರಾಜೆ ಅಪ್ಪಚ್ಚಿ ಆಲೋಚನೆಮಾಡ್ತದು ಇನ್ನೊಂದು ಹೊಡೆಲಿ. ಅದೇನೇ ಆಗಲಿ, ಹಣ್ಣಾದ ಅಡಕ್ಕೆಯ ಕೊಯ್ಯದ್ದೆ ಉಪಾಯ ಇಲ್ಲೆ ಮಾಂತ್ರ.
ಕೊಯ್ದ ಅಡಕ್ಕೆಯ ಒಣಗುಸದ್ದೆ ಉಪಾಯ ಇದ್ದೋ? ಅದೂ ಇಲ್ಲೆ. ಒಣಗುಸುತ್ತದು ಎಲ್ಲಿ?
ಜಾಲಿಲಿ!
~

ತರವಾಡುಮನೆ ಜಾಲು – ಕೆರಸಿ ಆತು, ಇನ್ನು ಅಡಕ್ಕೆ ಕೊಯಿಲು ಹರಗುದೇ!

ಈಗ ಜಾಲು ಕೆರಸುವ ಸಮಯ ಇದಾ.
ಮದುವೆ ಬೆಶಿ ಎಲ್ಲ ಕಳುಶಿ ಮನೆಗೆತ್ತಿಯಪ್ಪದ್ದೇ ಜಾಲು ಕೆರಸುವ ಏರ್ಪಾಡು ಸುರು ಆತು.
ಹಾಂಗೆ, ಇದೇ ಸಂದರ್ಭ ನೋಡಿಂಡು ಜಾಲಿನ ಬಗ್ಗೆ, ಜಾಲು ಕೆರಸುತ್ತರ ಬಗ್ಗೆ ರಜಾ ಶುದ್ದಿ ಮಾತಾಡಿರೆ ಎಂತ ಹೇದು ಅನುಸಿತ್ತು.
ಅಕ್ಕಲ್ಲದೋ?
~
ಮನೆ ಎದುರು ಜಾಲಿಪ್ಪದು ಹಳ್ಳಿ ಮನೆಗಳ ಕ್ರಮ. ಎದುರು ಮಾಂತ್ರ ಅಲ್ಲ, ಮನೆ ಸುತ್ತಲೂ ಜಾಲಿಕ್ಕು ಸಾಮಾನ್ಯವಾಗಿ.
ಒಂದು ಆನೆ ಸುತ್ತ ಬಪ್ಪಷ್ಟು ಅಗಲದ ಜಾಲು ಮನೆಸುತ್ತವೂ ಇರೆಕು ಹೇದು ಒಂದು ವಾಡಿಕೆ.
ನೆಲಕ್ಕಂದ ಮನೆ ಕೊಬಳಿಂಗೆ ಎಷ್ಟು ಎತ್ತರ ಇದ್ದೋ – ಅಷ್ಟು ಉದ್ದದ ಜಾಲು ಮನೆಯ ಒಂದೊಡೆಲಿ ಆದರೂ ಇರೇಕು ಹೇದು ಜೋಯಿಶಪ್ಪಚ್ಚಿ ಅಂದೊಂದರಿ ಹೇಳಿದ ನೆಂಪು. ಎಲ್ಲ ಮನೆಗಳಲ್ಲಿ ಅಷ್ಟು ದೊಡ್ಡ ಜಾಲು ಇಕ್ಕು ಹೇಳುಲೆಡಿಯ, ಅತವಾ ಹೆಚ್ಚಿಗೆಯೇ ಇಪ್ಪಲೂ ಸಾಕು. ಜಾಲು ಇಪ್ಪಷ್ಟೇ ಮುಖ್ಯ, ಆ ಜಾಲಿನ ಪೋಚಕಾನ ಮಾಡ್ಸುದೇ.
ಜಾಲಿಂಗೂ ಪೋಚಕಾನ ಇದ್ದೋ? ಅಪ್ಪು; ಮಳೆಗಾಲ ಬೇಸಗೆ – ಒರಿಶಲ್ಲಿ ಕನಿಷ್ಠ ಎರಡು ಸರ್ತಿ ಜಾಲಿನ ಕೆಲಸ ಮಾಡ್ತದು ನವಗೆಲ್ಲ ಗೊಂತಿಪ್ಪದೇ.
~

ಪತ್ತನಾಜೆ ಕಳುದ ಮತ್ತೆ ಮಳೆಗಾಲ ಬಪ್ಪದಿದಾ ಮದಲಿಂಗೆ.
ಮಳೆಗಾಲ ಬಪ್ಪ ಮದಲೇ ಸೌದಿ, ಕೊತ್ತಳಿಂಗೆ ಇತ್ಯಾದಿಗಳ ಏರ್ಪಾಡು ಮಾಡುಸ್ಸು ನವಗರಡಿಗು. ಆ ‘ಮಳೆಗಾಲದ ಅಟ್ಟಣೆಯ’  ಸಮಯಲ್ಲಿ ಬೈಲಿಲಿ ಆ ಶುದ್ದಿಯನ್ನೂ ಮಾತಾಡಿದ್ದು ನೆಂಪಿದ್ದಲ್ಲದೋ? (http://oppanna.com/oppa/malegala-roodi-atta-kottage)
ಮಳೆಗಾಲದ ಅಟ್ಟಣೆಲಿ ಸೌದಿ ಒಯಿಶುದು ಮಾಂತ್ರ ಅಲ್ಲ, ಜಾಲಿಂಗೆ ಕಸವಾಕುದೂ ಒಂದು ಕೆಲಸ!
ಕಸವೋ? ಅಪ್ಪು. ಬಾಕಿದಿನ ಹಾಕಿರೆ ಹೆಮ್ಮಕ್ಕೊ ಬೈಗು; ಆ ದಿನ ಮಾಂತ್ರ ಮಾಪು. ಕಸವುದೇ ಕರುಕುರೆ, ಲೇಸು ತಿಂದ ಕಸವಲ್ಲ ಭಾವಾ; ತೋಟಲ್ಲಿ ಸಿಕ್ಕುತ್ತ ಸೋಗೆ-ಮಡ್ಳಿನ ಕಸವುಗಳ ತಂದು ಮನಾರಕ್ಕೆ ಹರಗಿ ಮಡಗುಸ್ಸು – ಜಾಲಿಡೀಕ.
ಅಂಬಗ ಹೇಂಗೂ ಒಂದರಿಯಾಣ ಅಡಕ್ಕೆ ಎಲ್ಲ ಒಣಗಿ ಜಾಲುಕಾಲಿ ಆಗಿರ್ತಿದಾ, ಹಾಂಗಾಗಿ ಕಾಲಿ ಇದ್ದ ಜಾಲಿಲಿ ಇಡೀ ಸೋಗೆ-ಮಡ್ಳು.

ತೋಟಲ್ಲಿ ಸೋಗೆ ಜಾಸ್ತಿ ಆಯಿದು ಹೇದು ತಂದು ಹಾಕುಸ್ಸಲ್ಲ; ಒಂದು ಕಾರಣ ಇದ್ದು. ಮಳೆಗಾಲ ಸ್ವಾಭಾವಿಕವಾಗಿ ಎಲ್ಲ ದಿಕ್ಕೂ ಜೀವ ಚಿಗುರುವ ಸಂದರ್ಭ. ಜಾಲಿಲಿಯೂ ಸೇರಿ ನಿಂದಿಪ್ಪ ಸಹಸ್ರಾರು ಹುಲ್ಲಿನ ಬಿತ್ತುಗಳಲ್ಲಿಯೂ ಜೀವ ಕೂಡಿ ಸೆಸಿ ಅಕ್ಕು. ಈ ಕಾಟು ಹುಲ್ಲು ಜಾಲಿಡೀ ತುಂಬಿರೆ, ಮಳೆಗಾಲ ಆಗಿ ಹಬ್ಬ ಕಳುದ ಮತ್ತೆ ಅಡಕ್ಕೆ ಹಾಕುಲಪ್ಪಗ ಹುಲ್ಲಿನ ತೆಗೆಸ್ಸೇ ಒಂದು ಕೆಲಸ.
ಅದಕ್ಕೆ, ಮಳೆಗಾಲ ಹಿಡಿವ ಮದಲೇ ಕಸವು ಬಿಕ್ಕಿ ಮಡಗಿರೆ, ಹುಲ್ಲು, ಕಾಟು ಸೆಸಿಗೊ ಪೂರ ಈ ಕಸವಿನ ಮೇಗೆಯೇ ಹುಟ್ಟುತ್ತು, ಚೆಂದಕೆ ಬೆಳೆತ್ತು. ಮಳೆ ಬಿಟ್ಟಮತ್ತೆ ಈ ಕಸವಿನ ಬಾಚಿ ತೆಗದರಾತು. ಕುಂಬು ಸೋಗೆ ಹೊಡಿಗಳ ತೆಗೆಸ್ಸು ಕಾಟುಹುಲ್ಲಿನ ಪೊರ್ಪಿ ತೆಗೆತ್ತಷ್ಟು ಕಷ್ಟದ ಕಾರ್ಯ ಅಲ್ಲ, ಕೊಟ್ಟಿಲಿ ಕೆರಸಿರೆ ಪೂರ ಬತ್ತು ಇದಾ!
ಹಾಂಗೆ, ಮಳೆಗಾಲಂದ ಮದಲು ಹಾಕಿದ ಸೋಗೆ ಮಡ್ಳುಗಳ ಜಾಲಿಂದ ತೆಗದು ಪುನಾ ಮದಲಾಣ ಹಾಂಗೆ ಮಾಡುಸ್ಸೇ ಈಗಾಣ ಕಾಲದ ಕೆಲಸ.
~
ಜಾಲಿನ ಒಂದು ಹೊಡೇಂದ ಸುರು ಮಾಡಿ ಕೊಟ್ಟಿಲಿ ರಜರಜವೇ ಕಸವಿನ ಕೆರಸಿಂಡು ಮನಾರ ಮಾಡುದು.
ಅಲ್ಲಲ್ಲಿ ಒಂದು ಹೆಡಗ್ಗಪ್ಪಷ್ಟು ರಾಶಿ ಕೂಡುದು. ಮತ್ತೆ ಅಕೇರಿಗೆ ಒಟ್ಟಿಂಗೆ ಆ ಕಸವಿನ ಹೊರ್ತದು – ಇದು ಸಾಮಾನ್ಯ ಇಪ್ಪ ಕ್ರಮ. ಹಾಂಗೇ ಆತು ಮೊನ್ನೆಯೂ. ಅಣ್ಣುವಿನ ಮಗ ಸುಕುಮಾರ ಕೆಲಸಕ್ಕೆ ಬಂದಿದ್ದ ಕಾರಣ ಕೆಲಸ ಬೇಗ ಬೇಗ ಸಾಗಿತ್ತು. ಒಂದರಿ ರಾಶಿ ಕೂಡಿಂಡು ಇದ್ದ ಹಾಂಗೇ, ಹೊರ್ಲೂ ಆತು.
ಹೊತ್ತ ಕಸವು ಎಲ್ಲಿಗಿಪ್ಪದು – ಸೂಟುಮಣ್ಣು ಮಾಡ್ಳಿಪ್ಪದು.
ಅದರ ಮೇಗೆ ಹೊಸ ಮಣ್ಣುದೇ ಹಾಕಿ, ಒಂದು ಅಂಗಾರೆ ದಿನ ನೋಡಿ ಕಿಚ್ಚು ಕೊಡುದು!
ಕಸವಿಂದ ತುಂಬಿದ ಜಾಲು ಮತ್ತೆ ಪುನಾ ಮನಾರ ಆತು. ಈ ಕಾರ್ಯಕ್ಕೆ “ಜಾಲು ಕೆರಸುದು” ಹೇಳ್ತವು.
~
ಜಾಲು ಕೆರಸಿ ಅಪ್ಪಗ ನೋಡಿರೆ ಕಳುದೊರಿಶದ ಹಾಂಗೇ ಇಕ್ಕೋ? ಇರ, ರಜ ವಿತ್ಯಾಸ ಇಕ್ಕು.
ಮಳೆಗಾಲಲ್ಲಿ ರಜ ಮಣ್ಣು ಹೋಗಿಕ್ಕು; ಅತವಾ – ಕೆರಸುವಗಳೂ ಹೋಗಿಕ್ಕು.
ಅಂಬಗ ಪುನಾ ಮದಲಾಣ ಹಾಂಗೇ ಮಾಡೆಡದೋ – ಅದಕ್ಕೇ “ಜಾಲು ಗುದ್ದುದು”. ಹೊಳಿವದು ಹೇಳಿಯೂ ಹೇಳ್ತವು.
ಹೊಳಿವಲೆ ಹೊಳಿಮಣೆ, ಗುದ್ದುಲೆ ಮುಟ್ಟಿ – ಎರಡು ನಮುನೆ ಸಲಕ್ಕರಣೆಗೊ ಇರ್ತು ತರವಾಡುಮನೆಲಿ. ಕೆಲಸ ಇಪ್ಪಗ ಮಾಂತ್ರ ಹೆರ ಬಕ್ಕಷ್ಟೆ, ಒಳುದ ದಿನ ಸೌದಿಕೊಟ್ಟಗೆಲಿ ಒರಗಿಂಡಿಕ್ಕು ಅದು.
ಮದಲಿಂಗೆ ಜಾಲು ಗುದ್ದುದು ಹೇದರೆ ಅದುವೇ ಒಂದು ಕಾರ್ಯ. ಪಡಿಗೆಲಿ ರಜ ಹಸಿಮಣ್ಣು ಹಿಡ್ಕೊಂಡು ತಗ್ಗಿದಲ್ಲಿ ಮೆತ್ತಿ, ಉಬ್ಬಿದಲ್ಲಿ ಕೆತ್ತಿ ಜಾಲು ಮನಾರ ಮಾಡ್ತದು ಕೆಲಸ. ಬಟ್ಯಂಗಂತೂ ಎರಡು ಮೂರು ದಿನ ಬೇಕಾಗಿಂಡಿತ್ತು, ತರವಾಡುಮನೆ ಜಾಲು ಪೂರ ಸರಿ ಅಪ್ಪಲೆ.
ಇದಾದಪ್ಪದ್ದೇ ಸಗಣ ಉಡುಗುಸ್ಸು. ಹಟ್ಟಿಂದ ಹೆಡಗೆಲಿ ತಂದ ಸಗಣವ ಕರಡಿ ಹೊಳುದ ಜಾಲಿಂಗೆ ಉಡುಗಿಂಡು ಹೋಪದು. ಮತ್ತೆ ಅದು ಜೆಗಿಲಿಯ ಮುಂದುವರಿಕೆಯಷ್ಟೂ ಮನಾರ ಆವುತ್ತು.
ಅಂತೂ – ಜಾಲು ಸರೀ ಆತು.
~
ಜಾಲುಕೆರಸಿ ಆದ ಮತ್ತೆ ಮನೆಹೆಮ್ಮಕ್ಕಳ ದಿನಚರಿಯೇ ಬದಲುತ್ತು.
ಜಾಲಿಂಗಿಡೀ ಸಗಣ ಉಡುಗಿ ಇನ್ನೂ ಮನಾರ ಮಾಡುಗು. ನಿತ್ಯವೂ ಉಡುಗಿ ರಜವೂ ಕುರೆ ಕಸವು ಎಂತದೂ ಇಲ್ಲದ್ದ ಹಾಂಗೆ ಮಾಡುಗು. ಮನೆ ಜೆಗಿಲಿಯ ಮುಂದುವರುದ ಭಾಗದ ಹಾಂಗೆ ಚೆಂದಕೆ ಮಡಿಕ್ಕೊಂಗು.
ಗಟ್ಟದ ಮೇಗೆ ಅಂತೂ – ರಂಗೋಲಿ, ಬಣ್ಣ ಎಲ್ಲ ಹಾಕಿ ದಿನಾಗುಳೂ ಮದಿಮ್ಮಾಳು ಮಾಡುಗು.
~
ಸಗಣ ಉಡುಗಿದ ಜಾಲಿಲಿ ಮತ್ತೆ ಮಣ್ಣ ಹೊಡಿ ಇಲ್ಲೆ ಇದಾ.
ದೀಪಾವಳಿ ಹಬ್ಬಂದ ಮದಲೇ ಜಾಲು ಕೆರಸಿ ಮಡಗ್ಗು – ಬಲೀಂದ್ರನ ಹಾಕೆಕ್ಕಲ್ಲದೋ?
ಮದಲಿಂಗೆ “ಗೆದ್ದೆ ಕೊಯಿಲು” ಅಪ್ಪನ್ನ ಮದಲೇ ಇಷ್ಟು ಮಾಡಿ ಮಡಗ್ಗು. ಗೆದ್ದೆಂದ ತಂದ ಕೊರಳಿನ (ಕದುರಿನ) ಬಡುದು ಭತ್ತ ಒಣಗುಸೇಕಾರೆ ಜಾಲಿಲಿ ಮಣ್ಣು-ಕಸವಿಪ್ಪಲಾಗ.
ಜಾಲಿಲಿ ಭತ್ತ ಇದ್ದು ಹೇದು ಆದರೆ ಮದಲಿಂಗೆ ಮೆಟ್ಟಿನಜೋಡು ಹಾಕಿಂಡು ಬಾರವು. ಧಾನ್ಯಲಕ್ಷ್ಮಿ ಅಲ್ಲದೋ ಆ ಬತ್ತ.
ಮನೆಯೋರು ಮಾಂತ್ರ ಅಲ್ಲದ್ದೆ – ಆ ಜಾಲಿಲೆ ಆಗಿ ಆರಾರು ಅಪರಿಚಿತರು ಹೋವುತ್ತರೂ – ಅವುದೇ ಮೆಟ್ಟಿನಜೋಡಿನ ಕೈಲಿ ಹಿಡ್ಕೊಂಡು ಜಾಲು ದಾಂಟಿಕ್ಕಿ ಮತ್ತೆ ಪುನಾ ಜೋಡು ಹಾಕಿಂಗು. ಅಪರಿಚಿತರಾದರೂ ಅನಾಗರಿಕರಲ್ಲ ಇದಾ!
ಭತ್ತ ಮದಲಿಂಗಾತು, ಈಗ ಗೆದ್ದೆ ಎಲ್ಲಿದ್ದು ಹೇದು ದುರ್ಬೀನು ಹಾಕಿ ಹುಡ್ಕೇಕಟ್ಟೆ. ಈಗ ಏನಿದ್ದರೂ – ಅಡಕ್ಕೆ ಸುರೂವಾಣ ಕೊಯಿಲು. ಅಡಕ್ಕಗಪ್ಪಗ ತೀರಾ ಭತ್ತ ಒಣಗುಸಲೆ ಮಾಡುವಷ್ಟು ಮನಾರ ಮಾಡೇಕಾದ್ಸಿಲ್ಲೆ.
ಅಲ್ಲದ್ದೇ ಜೆನವೂ ಸಮಗಟ್ಟು ಸಿಕ್ಕುತ್ತವಿಲ್ಲೆ – ಹಾಂಗಾಗಿ ಜಾಲು ಹೊಳಿವದರ ಈಗ ಕಾಂಬಲೇ ಸಿಕ್ಕಪ್ಪೋ!
ಅಪುರೂಪಲ್ಲಿ ಒಂದೊಂದಿಕ್ಕೆ ಇದ್ದೋ ಏನೋ!
ಈಗ ಭತ್ತದ ಬದಲು ಅಡಕ್ಕೆ ಒಣಗ್ಗು. ಅಲ್ಲದ್ದರೆ, ಒಸ್ತ್ರವೋ, ಕಾರೋ – ಬೈಕ್ಕೋ ಎಂತ ಇದ್ದೋ ಅದು ಒಣಗ್ಗು! :-)
ಕೆಲವು ಮನೆಗಳಲ್ಲಿ ಅಡಕ್ಕೆ ಜಾಲು ಹೇದು ಬೇರೆಯೇ ಇರ್ತು; ಎತ್ತರ- ಬೆಶಿಲ ಮೋರೆಗೆ. ಮನೆ ಎದುರಾಣ ಜಾಲಿನಷ್ಟು ಮನಾರ ಇರ ಅದು. ಜಾಲು ನೋಡಿಯೇ “ಅಡಕ್ಕೆಷ್ಟಕ್ಕು” ಹೇದು ಅಂದಾಜಿ ಮಾಡ್ತೋರು ಇದ್ದವು. ಹೆಚ್ಚು ಅನುಕ್ಕೂಲ ಇಪ್ಪೋರ ಜಾಲು ದೊಡ್ಡ ಇಕ್ಕು ಹೇಳ್ತದು ವಾಡಿಕೆ.
~
ಇಡೀ ಜಾಲು ಸರಿಮಾಡದ್ದರೂ – ಮನೆ ಮೆಟ್ಟುಕಲ್ಲಿನ ಬುಡಲ್ಲಿ ರಜ್ಜ ಜಾಗೆ ಸರಿ ಮಾಡುಗು ಈಗಳೂ.
ಮೆಟ್ಟು ಕಲ್ಲಿಂದ ತೊಳಶಿಕಟ್ಟೆ ಬುಡ ಒರೆಂಗೆ ರಜಾ ಜಾಗೆ ಆದರೂ – ಮನಾರ ಮಾಡಿ ಮಡಿಕ್ಕೊಂಗು. ತಿತಿ ಕೈನ್ನೀರಿಂಗೆ ಪಾದ ತೊಳೆಶಲೆ, ಭಜನೆ – ಬಲೀಂದ್ರನ ನಿಲ್ಲುಸಲೆ – ಇತ್ಯಾದಿಗೊಕ್ಕೆ ಜಾಲಬಾಗಿಲು ಬೇಕಿದಾ.
ಹಾಂ – ಮೆಟ್ಟುಕಲ್ಲಿನ ಹತ್ತರಾಣ ಜಾಗೆಗೆ “ಜಾಲಬಾಗಿಲು” ಹೇಳಿಯೇ ಹೇಳ್ತದು ಮದಲಿಂಗೆ.
~
ಹೀಂಗೆ ಸುರು ಆದ ಜಾಲಿನ ಕತೆ ಮತ್ತಾಣ ಬೇಸಗೆ ಅಕೇರಿ ಒರೆಂಗೂ ಹಲವು ಕಾರ್ಯಕ್ಕೆ ಬಳಕ್ಕೆ ಆವುತ್ತು.
ವಾಸದ ಮನೆ ಮತ್ತೆ ಸಮಾಜದ ಸಂಪರ್ಕ ಸೇತು ಈ ಜಾಲೇ ಇದಾ. ಯೇವ ಅಪರಿಚಿತರು, ಮನೆ ಒಳಂಗೆ ಬಾರದ್ದೋರ ಹತ್ತರೆ ಮದಲಿಂಗೆ ಜಾಲಿಲೇ ಮಾತಾಡುಸುಗಷ್ಟೆ. ಕುಂಞಿ ಮಕ್ಕೊ ನೆಡವಲೆ ಸುರುಮಾಡಿದ ಮತ್ತೆ ಓಡ್ಳೆ ಸುರುಮಾಡ್ತವಲ್ಲದೋ –ಹಾಂಗೆ ಸುರೂವಾಣ ಓಟಂಗೊ ಈ ಜಾಲಿಲೇ ಅಪ್ಪದು. ನಾಕು ಸರ್ತಿ ಬಿದ್ದು, ಎರಡು ಸರ್ತಿ ಗರ್ಪುಸಿಗೊಂಡು – ಎಲ್ಲವೂ ಮನೆಜಾಲಿಲೇ.
ಕಂಜಿಗಳೂ ಹಂಗೇ – ಪೆರ್ಚಿಗಟ್ಟಿ ಓಡೇಕಾರೆ ಜಾಲೇ ಆಯೆಕ್ಕಟ್ಟೆ. ನಾಯಿಗೊಕ್ಕೆ ಇದುವೇ ಸಾಮ್ರಾಜ್ಯ ಅಲ್ಲದೋ?
~
ಒಳ್ಳೆ ಬೇಸಗೆ ಬಂದ ಮತ್ತೆ ಹಲಸಿನ ಕಾಯಿಯ ಕಾಲ ಸುರು ಆತಿದಾ. ಆ ಸಮಯಲ್ಲಿ ಹಪ್ಪಳ ಮಾಡದ್ದೆ ಕಳೀಯ. ಹಪ್ಪಳ ಒಣಗುಸೇಕಾರೆ ಇದೇ ಜಾಲೇ ಆಯೇಕಟ್ಟೆ. ಹಸೆ ಮೇಲೆ ಹಸ್ಸಿ ಚೆಂದಕೆ ಹತ್ತು ಬೆಶಿಲು ಕೊಟ್ರೆ ಹಪ್ಪಳ ತಯಾರು.
ತೆಂಙಿನ ಕಾಯಿ ಒಡದು ಗೋಟುಕಾಯಿ-ಕೊಪ್ಪರ ಒಣಗುಸುದೂ ಇಲ್ಲಿಯೇ. ಕೊಪ್ಪರ ಕಾವ ನೆಪಲ್ಲಿ ತರವಾಡುಮನೆ ದಾಸುವಿಂಗೆ ಆ ಹದ್ನೈದು ದಿನ ಹಬ್ಬ! ಕಳ್ಳ. ರಂಗಮಾವಂಗೆ ಗೊಂತೇ ಇಲ್ಲೆ ಹೇದು ಗ್ರೇಶಿಂಡಿದ್ದು ಅದು. ರಂಗಮಾವಂಗೆ ಗೊಂತಿದ್ದು; ಕಾಕೆ ತಿಂಬ ಬದಲು ದಾಸು ತಿನ್ನಲಿ ಹೇದು ಸುಮ್ಮನೆ ಕೂದ್ದು ಅಷ್ಟೆ! :-)
ಅದಿರಳಿ.
~
ಎಡಕ್ಕಿಲಿ ಮನೆಲಿ ಜೆಂಬ್ರ ಬಂದರೆ ಇದೇ ಜಾಲೇ ಆಯೆಕ್ಕಟ್ಟೆ ಇದಾ.
ಒಂದು ಸಣ್ಣ ಚೆಪ್ಪರ ಹಾಕಿತ್ತು, ಒಂದು ಮರೆ ಕಟ್ಟಿತ್ತು. ಊಟದ ಹಂತಿ ಜಾಲಿಲಿಯೇ. ಮರದಿನ ಅಲ್ಲಿ ಕೊಟ್ರೂ ಬೇಡ; ಆ ದಿನ ಜಾಲಿಲಿ ಉಂಬಲೂ ಸಂಗತಿ ಅಲ್ಲ ಇದಾ!
ಚೆಪ್ಪರ ಹೇಳುವಗ ನೆಂಪಾತು, ಜೆಂಬ್ರ ಇಲ್ಲದ್ದರೂ ಒಳ್ಳೆ ಬೇಸಗೆಲಿ ಸಣ್ಣ ಚೆಪ್ಪರ ಹಾಕಿ ಜಾಲಿಲೇ ಮನುಗ್ಗಡ ಮದಲಿಂಗೆ. ಮನೆ ಒಳ ಸೆಕೆ ಹೇಳಿಗೊಂಡು.  ಚೆಪ್ಪರ ಎಂತಕೆ – ಆಕಾಶ ನೋಡಿಂಡು ಮನುಗುಲಾಗ ಹೇದು ಕ್ರಮವೇ ಇಲ್ಲೆಯೋ – ಅದಕ್ಕೆ ಒಂದು ನೆಪಮಾತ್ರದ ಚೆಪ್ಪರ. ತಂಪು ಗಾಳಿ ಬರೆಕಾದ್ದು ಮುಖ್ಯ. ಈಗ “ಕೋಟ್ಯಧಿಪತಿಗೊ” ಹೇಳಿ ಗ್ರೇಶಿಂಡ ಕಾರಣ ಭದ್ರತೆಯ ಕಾರಣಂದಾಗಿ ಈ ಸಾಹಸ ಕೆಲವುಜೆನ ಮಾಡ್ತವಿಲ್ಲೆ!
~
ಅಂತೂ – ಒಂದರಿಯಾಣ ಬೇಸಗೆ ಬೆಶಿಲು ಎಲ್ಲ ಮುಗುದ ಮತ್ತೆ ಎಂತರ?
ಪುನಾ ಮಳೆಗಾಲ. ಕಾಲಚಕ್ರ ಹೇದರೆ ಇದುವೇ ಅಲ್ಲದೋ?
ಹಾಂಗೆ, ಮತ್ತಾಣ ಮಳೆಗಾಲಕ್ಕಪ್ಪಗ ಪುನಾ ಕಸವು ಹಾಕಿ ಜಾಲಿನ ಮಣ್ಣಿನ ಒಳಿಶಿಗೊಂಬದು.
ಅಂತೇ ಕಸವು ಬಿಕ್ಕಿ ಬೋಚಬಾವನ ಹಾಂಗೆ ಆಗವು, ಬದಲಾಗಿ ರಜ ಸೂಟುಮಣ್ಣನ್ನೂ ಹಾಕಿ, ಉಪಾಯಲ್ಲಿ ಸಾಲು ಮಾಡುಗು. ಬೆಂಡೆ ಬದನೆ ಚೆಕ್ಕರ್ಪೆ ಅಳತ್ತೊಂಡೆಯ ಹಾಂಗಿರ್ತದು ಜಾಲಿಲೇ ಮಾಡುಗು. ಕೆಲವು ಮನೆಗಳಲ್ಲಿ ಉದ್ದು, ಹಸರು ಇತ್ಯಾದಿ ಧಾನ್ಯಂಗಳನ್ನೂ ಮಾಡಿಂಗು.
~
ಚೂರಿಬೈಲು ದೀಪಕ್ಕನಲ್ಲಿ ಜಾಲಿಂಗೆ ಗೋಡೆ ಇಲ್ಲೆ – ಹೂಗಿನ ಸೆಸಿಗಳೇ ಗೋಡೆ.
ಒರಿಶ ಹೋದಾಂಗೆ ಈ ಹೂಗಿನ ಸೆಸಿ ಸಾಲುಗೊ ಒಳಂತಾಗಿ ಬಂದು ಬಂದು ಈಗ ಜಾಲು ತುಂಬ ಸಣ್ಣ ಆಯಿದಾಡ. ಕೊಯಿಲಿನ ಅಡಕ್ಕೆ ಹಾಕಲೇ ಜಾಗೆ ಇಲ್ಲೆ ಹೇದು ಡಾಗುಟ್ರುಬಾವ° ಒಂದೊಂದರಿ ತಲೆಬೆಶಿ ಮಾಡಿಗೊಳ್ತವು ಪಾಪ!
~
ತರವಾಡು ಮನೆಲಿಯೂ ಮನ್ನೆ ಹೀಂಗೇ ಜಾಲು ಕೆರಸಿದವು. ದಾಸು ನಾಯಿಗೆ ಕುಶಿಯೋ ಕುಶಿ – ಅದರ ಸಾಮ್ರಾಜ್ಯ ದೊಡ್ಡ ಆತು ಹೇದು. ಮದಲು ಈ ಕಸವಿಲೆ ಹೋಪಲೆ ಅದಕ್ಕೆ ಮನಸ್ಸೇ ಕೇಳಿಗೊಂಡಿತ್ತಿಲ್ಲೆ – ಹೋಯೇಕನ್ನೇ ಹೇದು ಹೋಗಿಂಡಿದ್ದದು. ಈಗ ಆರಾಮಲ್ಲಿ ನೆಡಕ್ಕೊಂಡು ಹೋಗಿ ಎಲ್ಲಿ ಬೇಕಾರೂ ಮನಿಕ್ಕೊಂಬಲಕ್ಕಿದಾ!
ತರವಾಡು ಮನೆಲಿ ಮಾಂತ್ರ ಅಲ್ಲ, ಒಪ್ಪಣ್ಣನ ಮನೆಲಿ ಮಾಂತ್ರ ಅಲ್ಲ – ಹಳ್ಳಿಯ ಎಲ್ಲ ಮನೆಗಳಲ್ಲಿಯೂ ಈಗ ಜಾಲು ಕೆರಸಿ ಮನಾರ ಮಾಡ್ತ ಕಾಲ. ಮಳೆಗಾಲದ ಕಸವಿನ, ಮುಗುದ ತರಕಾರಿ ಬಳ್ಳಿಗಳ ಎಲ್ಲ ತೆಗದು ಮತ್ತೆ ಮನೆ ಎದುರಾಣ ಜಾಲಿನ ಉಪಯೋಗಕ್ಕೆ ಮಡಿಕ್ಕೊಂಬದು ಸಾಮಾನ್ಯ ದೃಶ್ಯ.
~
ಈಗಾಣ ಕಾಲಲ್ಲಿ ಅಂತೂ – ಜಾಲುಗಳೇ ಇಲ್ಲೆ.
ಪೇಟೆ ಮನೆಗಳಲ್ಲಿ ಮನೆಯ ಹೊಸ್ತಿಲು ದಾಂಟಿರೆ ಮಾರ್ಗವೇ! ಜಾಲು ಹೇದರೆ ಜಾಗೆ ದೆಂಡ ಹೇದು ಗ್ರೇಶಿದ ಕಾರಣವೇ ಹೀಂಗಾದಿಕ್ಕೋ? ಅಲ್ಲ ಜಾಗೆಯ ಅಭಾವಂದಲೇ ಹೀಂಗಾದಿಕ್ಕೋ ಹೇದು ಅಜ್ಜಕಾನಭಾವಂಗೆ ತಲಗೇ ಹೋವುತ್ತಿಲ್ಲೆ.
ಅದೆಲ್ಲ ಇರಳಿ.
~
ನಿಂಗಳಲ್ಲಿ ಜಾಲು ಕೆರಸಿ ಆತೋ ಭಾವಾ?
~
ಒಂದೊಪ್ಪ: ಮನೆ – ಜಾಲು ದೊಡ್ಡ, ಮನಾರ ಇದ್ದರೆ ಸಾಕೋ; ಮನಸ್ಸೂ ಹಾಂಗೇ ಇರೇಕು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಶ್ರೀಅಕ್ಕ°

  ಒಪ್ಪಣ್ಣೋ..,
  ಮನೆಜೆಗಿಲಿಲಿಯೇ ಕಾಲುನೀಡಿ ಕೂದು ಜಾಲುಕೆರಸುವದರ ನೋಡಿದ ಹಾಂಗೇ ಆತು ನೀನು ಶುದ್ದಿ ಹೇಳಿದ್ದದು. ಯೇವತ್ರಾಣ ಹಾಂಗೇ ಸಣ್ಣ ಸಣ್ಣ ವಿಷಯಂಗಳ ವಿಸ್ತಾರವಾಗಿ ತುಂಬಿಗೊಂಡು ತುಂಬಾ ಲಾಯ್ಕ ಆಯಿದು.
  ನಮ್ಮಲ್ಲಿ ಮನೆಗೆ, ಮನೆ ಹೊಸ್ತಿಲಿಂಗೆ ಎಷ್ಟು ಪ್ರಾಮುಖ್ಯತೆ ಇದ್ದೋ ಅಷ್ಟೇ ಪ್ರಾಮುಖ್ಯತೆಯ ಮನೆಜಾಲಿಂಗೂ ಕೊಟ್ಟಿದವು ನಮ್ಮ ಹೆರಿಯೋರು. ಮನೆಯ ಎದುರು ದೊಡ್ಡ ಜಾಲು ಇದ್ದರೆ ಆ ಮನಗೆ ಒಳ್ಳೆ ಕಳೆ ಬತ್ತು.
  ಒಪ್ಪಣ್ಣ,
  ಮಳೆಗಾಲ ಕಳುದು ಜಾಲು ಕೆರಸಿ ಚೆಂದ ಮಾಡಿ, ಅಡಕ್ಕೆ, ಬತ್ತ ಕೊಯ್ಲುಗಳ ತಂದು ಹಾಕಿ, ಒಣಗಿಸಿ ನಮ್ಮ ಕಣಜ ತುಂಬುಸುವ ಹಾಂಗೇಯೇ, ಕಾಲಕಾಲಕ್ಕೆ ನೆಡವ ಹೋಮ, ಪೂಜೆ, ಉಪ್ನಾನ, ಮದುವೆ ಇತ್ಯಾದಿ ಮನೆಯ ಸಂಭ್ರಮಕ್ಕೂ ಜಾಲೇ ಆಯೆಕ್ಕು. ನಮ್ಮ ಮನೆಯ ಎಲ್ಲಾ ಕೊಶಿಯ, ಬೇಜಾರದ ಎಲ್ಲಾ ಸಂಗತಿಗೊಕ್ಕುದೇ ಮನೆಜಾಲೇ ಸಾಕ್ಷಿಯಾಗಿರ್ತು. ಒಂದು ರೀತಿಲಿ, ನಾವು ಜಾಲಿಲಿ ಒಂದು ಕ್ಷಣ ನಿಂದು ಆಲೋಚನೆ ಮಾಡಿದರೆ ಹಲವು ವಿಚಾರಂಗ ನಮ್ಮ ಕಣ್ಣೆದುರು ಬತ್ತು ಅಲ್ಲದಾ?

  ಒಪ್ಪಣ್ಣ,
  [ಅಣ್ಣುವಿನ ಮಗ ಸುಕುಮಾರ ಕೆಲಸಕ್ಕೆ ಬಂದಿದ್ದ ಕಾರಣ ಕೆಲಸ ಬೇಗ ಬೇಗ ಸಾಗಿತ್ತು.]

  ಅಣ್ಣುವಿಂಗೆ ಉಶಾರಿಲ್ಲೆ ಹೇಳಿ ನಾಕು ದಿನ ರಜೆ ಮಾಡಿ, ‘ಎಲ್ಲೆ ಬರ್ಪೆ’ ಹೇಳಿದ ಜೆನ ನಾಕು ದಿನ ಕಳುದೇ ಬಂದದು ಎಂತಕ್ಕೆ ಹೇಳಿ ಈಗ ಅಂದಾಜು ಆತಿದಾ!!! ಅಡಕ್ಕೆ ಕೊಯ್ಲಿಂಗೆ ಅಪ್ಪಗ ಹೇಂಗಾರು ಬತ್ತನ್ನೆ! ಅಂಬಗ ವಿಚಾರ್ಸುತ್ತೆ!! 😉

  ಒಪ್ಪಣ್ಣೋ,
  [ಮನೆ – ಜಾಲು ದೊಡ್ಡ, ಮನಾರ ಇದ್ದರೆ ಸಾಕೋ; ಮನಸ್ಸೂ ಹಾಂಗೇ ಇರೇಕು.]

  ಒಂದೊಪ್ಪಲ್ಲಿ ನೀನು ಹೇಳಿದ್ದದು ಮುತ್ತಿನ ಹಾಂಗಿದ್ದ ಮಾತು!
  ಮನೆ, ಜಾಲು ಎಷ್ಟು ದೊಡ್ಡ ಇದ್ದರೂ…, ಜಾಲು ತುಂಬಾ ಬೆಳೆಗ ಇದ್ದರೂ.., ಮನೆಯೂ, ಜಾಲು ಮನಾರ ಮಡಿಕ್ಕೊಂಡು ಇದ್ದರೂ… ಮನಸ್ಸು ಸರಿ ಇಲ್ಲದ್ದರೆ ಎಲ್ಲವೂ ಶೂನ್ಯವೇ!!
  ಈಗಾಣ ಕಾಲಲ್ಲಿ ಮನೆ ದೊಡ್ಡ ಆವುತ್ತಾ ಇದ್ದು, ಜಾಲು ಸಣ್ಣ ಆವುತ್ತಾ ಇದ್ದು.
  ನಮ್ಮ ಬೈಲಿನ ಎಲ್ಲಾ ಮನೆಲಿಯೂ ಮನೆ, ಮನಸ್ಸು, ಜಾಲು, ಬೆಳೆ ಎಲ್ಲವೂ ದೊಡ್ಡದೇ ಆಗಿರಲಿ..
  ಎಲ್ಲವೂ ಬೆಳದು ವಿಸ್ತರಿಸಲಿ…
  ಹರೇರಾಮ.

  [Reply]

  VN:F [1.9.22_1171]
  Rating: +1 (from 1 vote)
 2. ವಿಜಯತ್ತೆ
  vijayasubrahmana

  ಒಪ್ಪಣ್ಣಾ, ಹರೇರಾಮ, ಮದಲಾಣವು ಕೂಸಿನ ಕೊಡ್ತ ಮನಗೆ ಮಹತ್ವ ಕೊ ಡುವ ಬದಲು ಅವರ ತೋಟಕ್ಕೂ ಜಾಲಿಂಗೂ ಕೊಡುಗಾಡ ಜಾಲಿನ ಪ್ರಾಧಾನ್ಯತೆ ಹಾಂಗಿದ್ದತ್ತದ ಈ ಲೇಖನಕ್ಕೊಂದು ಒಪ್ಪ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣಶುದ್ದಿಕ್ಕಾರ°ಕೆದೂರು ಡಾಕ್ಟ್ರುಬಾವ°ನೆಗೆಗಾರ°ಅನಿತಾ ನರೇಶ್, ಮಂಚಿಶ್ರೀಅಕ್ಕ°ಕೇಜಿಮಾವ°ಜಯಶ್ರೀ ನೀರಮೂಲೆಪುಣಚ ಡಾಕ್ಟ್ರುಅಕ್ಷರ°ವೆಂಕಟ್ ಕೋಟೂರುಬಂಡಾಡಿ ಅಜ್ಜಿಅಕ್ಷರದಣ್ಣಯೇನಂಕೂಡ್ಳು ಅಣ್ಣಅನು ಉಡುಪುಮೂಲೆದೊಡ್ಡಮಾವ°ಶರ್ಮಪ್ಪಚ್ಚಿದೊಡ್ಡಭಾವಸುಭಗಪಟಿಕಲ್ಲಪ್ಪಚ್ಚಿಗೋಪಾಲಣ್ಣಶೇಡಿಗುಮ್ಮೆ ಪುಳ್ಳಿಹಳೆಮನೆ ಅಣ್ಣಪೆಂಗಣ್ಣ°ಪುತ್ತೂರುಬಾವನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ