Oppanna.com

ಜಾತಿಯೂ ಬೇಕು, ಪದ್ಧತಿಯೂ ಬೇಕು..!!

ಬರದೋರು :   ಒಪ್ಪಣ್ಣ    on   21/01/2011    41 ಒಪ್ಪಂಗೊ

ಸಾಲಂಕೃತವಾಗಿಪ್ಪ ಶ್ರೀಗೋಪಾಲಕೃಷ್ಣ ಎಲ್ಲೋರಿಂಗೂ ಕಾಣ್ತಷ್ಟು ಎತ್ತರಲ್ಲಿ ವಿರಾಜಮಾನನಾಗಿದ್ದ°.
ಜಾತ್ರೆಯ ದಿನದ ಉತ್ಸವಮೂರ್ತಿಲಿ ಆವಾಹನೆ ಆಗಿಂಡು, ಸೇವೆ, ಸುತ್ತು, ಬಲಿಗಳ ಸ್ವೀಕರುಸುತ್ತದು ಗೋಪಾಲಕೃಷ್ಣನ ಮಹಿಮೆಗಳಲ್ಲಿ ಒಂದು.
ಚಿನ್ನರನ್ನಂಗಳಲ್ಲಿ ಆಭರಿಸಿದ,
ಮಲ್ಲಿಗೆ-ಗುಲಾಬಿ- ಸೇವಂತಿಗೆ ಇತ್ಯಾದಿ ಹೂಗುಗಳಲ್ಲಿ ಅಲಂಕರಿಸಿದ,
ಶುದ್ಧ ಪಟ್ಟೆಂದ ಹೊದದ ಅಟ್ಟೆಯ ಕಟ್ಟೆಲಿ ನೆಟ್ಟನೋಟದ ಕುಂಞಿ ಕಿಟ್ಟಣ್ಣ – ಲೋಕದ ಕಷ್ಟನಷ್ಟವ ತಿಳುದು ಆಶೀರ್ವಾದಿಸಿ ಉದ್ಧರಿಸುವ ಸುಂದರ ಸಂಭವ!
~
ಕುಂಬ್ಳೆ ಅಡಿಗಳು ಆ ಅಟ್ಟೆಯ ತನ್ನ ತಲೆಯ ಮೇಗೆ ಮಡಗಿ, ಬಲದ ಕೈಯ ಎರಡು ಬೆರಳುಗಳಲ್ಲಿ ರಜ್ಜವೇ ಹಿಡ್ಕೊಂಡಿದವು!
ಇನ್ನೆಂತೋ – ಒಂದೆರಡು ಕ್ಷಣಲ್ಲಿ ದರ್ಶನ ಬಂದೇ ಬಿಡ್ತು ಅವಕ್ಕೆ!
ತನ್ನ ಕುಲಾಧಿಪ, ಇಷ್ಟಾಧಿಪ, ಕ್ಷೇತ್ರಾಧಿಪ, ಸೀಮಾಧಿಪ ಆದ, ತನ್ನ ತಲೆಯ ಮೇಲಿಪ್ಪ, ಗೋಪಾಲಕೃಷ್ಣನ ಪಾದವನ್ನೇ ನೆಂಪುಮಾಡಿಂಡು,
ಮುಚ್ಚಿದ ಕಣ್ಣಿಲಿ ದೃಷ್ಟಿ ನೆಟ್ಟೊಂಡು,
ಏಕಾಗ್ರತೆಲಿಪ್ಪಗ..

ಅವರ ಎಡದಹೊಡೆಲಿ – ಹತ್ತರೆಯೇ ನಿಂದ ಮಯ್ಯಅಡಿಗಳು ಅಟ್ಟೆಯ ಬುಡವನ್ನೇ ನೋಡಿಗೊಂಡಿದ್ದವು,
ಎಲ್ಲವೂ ಸರಿಯಾಗಿದ್ದನ್ನೇ – ದರ್ಶನದ ಆವೇಶ ಬಂದು ಬಿಡುವ ಸನ್ನಿವೇಶಲ್ಲಿ ಎಲ್ಲವೂ ಸರಿಯಾಗಿರೇಕನ್ನೇ – ಎಂತದೂ ಅವಗಢ ಅಪ್ಪಲಾಗನ್ನೇ..
– ಹೇಳ್ತ ಉದ್ದೇಶಲ್ಲಿ ಬೇರೆಲ್ಲವನ್ನೂ ಮರದು, ಕೇವಲ ಉತ್ಸವಮೂರ್ತಿಯ ಅಟ್ಟೆಯ ಮಾಂತ್ರ ಏಕಾಗ್ರತೆಲಿ ನೋಡಿಗೊಂಡಿದ್ದವು..
ಇವರಿಬ್ರ ಹಿಂದಂತಾಗಿ ಅಡಿಗಳ ಸಮೂಹ, ಭಟ್ಟಕ್ಕಳ ಸಮೂಹ ತನ್ನೆರಡೂ ಕೈಗಳ ಮುಗುದು ನಿಂದಿದು!
~
ಎದುರಾಣ ಹೊಡೆಂದ ಆ ದೇವಸ್ಥಾನದ ಸ್ಥಾನಿಕ – ಅಟ್ಟೆಲಿಪ್ಪ ದೇವರಿಂಗೆ ಚಾಮರ ಬೀಸುತ್ತಾ ಇದ್ದು!
ಹುಲ್ಲಿಲಿ ಮಾಡಿದ ಚಾಮರವ ಕೈಲಿ ಹಿಡ್ಕೊಂಡು, ಕನ್ನಡದ ಹ ಬರದ ನಮುನೆ ಕೃಷ್ಣನ ಪಾದಾರವಿಂದಕ್ಕೆ ಗಾಳಿ ಹಾಕುತ್ತಾ ಇದ್ದು.
ಗಾಳಿ ಬೀಸಿದ ಹಾಂಗೇ ಅಡಿಗಳಿಂಗೆ ದೈವೀಕ ಶೆಗ್ತಿ ಏರಿ ಏರಿ ಬಕ್ಕು!
ದರ್ಶನದ ಹೊತ್ತು ಹತ್ತರೆ ಹತ್ತರೆ ಬತ್ತಾ ಇದ್ದು!
~
ಅದಕ್ಕೆ ಸರೀಯಾಗಿ ಅಲ್ಲೇ ಮುಂದೆ ಇಪ್ಪ ಮಾರಾರುಗಳ ಚೆಂಡೆ ಏರಿ ಏರಿ ಬಕ್ಕು!
ಆರು ಚೆಂಡೆಗೊಕ್ಕೆ ಎರಡು ಡೋಲು, ಎರಡು ಚಕ್ರತಾಳ; ಪೆಟ್ಟು ಬಲಲ್ಲಿ ಬೀಳ್ತಾ ಇದ್ದು!
ದರ್ಶನಬಲಿಯ ಈ ಮಂಗಳ ಕ್ಷಣಲ್ಲಿ ಅವರ ಉತ್ಸಾಹ ನೂರಾಯಿದು; ಆಗಂದ ಚೆಂಡೆ ಬಡುದಿದ್ದರೂ – ಅವರ ಮೋರೆಲಿ, ಕೈಲಿ ಬಚ್ಚಲು ಕಾಣ್ತಿಲ್ಲೆ!
ಏಕಚಿತ್ತಲ್ಲಿ, ಏಕನಾದಲ್ಲಿ, ಏಕಶೃತಿಲಿ, ಏಕಾಗ್ರತೆಲಿ, ಏಕತಾಳಲ್ಲಿ – ಚೆಂಡೆಪೆಟ್ಟು.
ಒಂದೇ ಚೆಂಡೆ, ಒಂದೇ ಡೋಲು, ಒಂದೇ ತಾಳ – ಇದ್ದ ಅನುಭವ! ಅಷ್ಟೊಂದು ಪಕ್ವತೆ, ಅಷ್ಟೊಂದು ಪರಿಪೂರ್ಣತೆ!
~
ದೇಲಂಪಾಡಿ ತಂತ್ರಿಗೊ ಯಥಾಪ್ರಕಾರ ಕ್ರಮಂಗಳಲ್ಲಿ ಆಗಳೇ ತಂತ್ರತೂಗಿ, ಚಾಮಿಗೆ ಎತ್ತುಸೇಕಾದ್ದರ ಎತ್ತುಸುತ್ತದು ಅನಾದಿಕಾಲಂದಲೂ ನೆಡಕ್ಕೊಂಡಿದ್ದು!
ಇಂದುದೇ ಹಾಂಗೇ –  ಇಡೀ ದೇವಸ್ಥಾನದ ಸುತ್ತ ಇಪ್ಪ ಬಲಿಕಲ್ಲುಗಳಲ್ಲಿ ಆವಾಹವಾದ ಗಣಂಗೊಕ್ಕೆ ಕೊಡ್ತದರ ಕೊಟ್ಟು ಸಮಾದಾನ ಆಗಳೇ ಮಾಡುಸಿದ್ದವು.
ಈಗ ಅದೆಲ್ಲ ಕಾರ್ಯ ಆಗಿ ಒಳ ನಮಸ್ಕಾರ ಮಂಟಪಲ್ಲಿ ಅಷ್ಟಾಕ್ಷರಿ ಮಾಡಿಗೊಂಡು ಕೂಯಿದವು!
ಅದಿರಳಿ!
~
ಅಡಿಗಳ ಉಸುಲು ಜೋರಾತು, ಚಾಮರ ಬೀಸುದುದೇ ಜೋರುಜೋರಾತು, ಚೆಂಡೆಪೆಟ್ಟುದೇ!
ಪಕ್ಕನೆ – ಒಂದೇ ಸರ್ತಿ ದೊಡ್ಡ ಉಸುಲಿನ ಬಲಲ್ಲಿ ಹೆರಬಿಟ್ಟವು, ದೇವರ ಹೊತ್ತ ಅಡಿಗಳು.
ಅದರೊಟ್ಟಿಂಗೇ, ಮುಚ್ಚಿದ ಕಣ್ಣು ಒಡದವು, ಅಟ್ಟೆಯ ಬುಡಲ್ಲಿ ಮಡಗಿದ ಕೈಯ ತೆಗದವು!
ಒಂದು ದೊಡ್ಡ ಅದುರುವಿಕೆಯ ಒಟ್ಟಿಂಗೆ ಗೋಪಾಲಕೃಷ್ಣನ ’ದರ್ಶನ’ದ ವಿಶ್ವರೂಪದರ್ಶನ ಸುರು ಆತು!
ಚಾಮರ ಬೀಸುತ್ತದು ನಿಂದಲ್ಲಿಂದಲೇ ಒಂದು ನಮಸ್ಕಾರ ಮಾಡಿ ಕರೆಂಗೆ ಹೋಗಿ ಜೆನಂಗಳ ಎಡೆಲಿ ಒಂದಾತು.
~

ಅಡಿಗಳು ದರ್ಶನಲ್ಲಿಯೇ ಐದಾರು ಹೆಜ್ಜೆ ಮುಂದೆ ಓಡಿದವು, ಅಷ್ಟಪ್ಪಗ ಚೆಂಡೆಪೆಟ್ಟು ತಾರಕಲ್ಲಿತ್ತು!
ಓಡಿ ಓಡಿ ಚೆಂಡೆಯವರ ಹತ್ತರೆ ಎತ್ತಿದವು, ಕೂಡ್ಳೇ ಹೆಜ್ಜೆಹೆಜ್ಜೆ ಹಾಕಿ ಮೆಲ್ಲಂಗೆ ಹಿಂದೆ ಬಂದವು, ಮಧ್ಯಮ ಗತಿಲಿ ಹಾಕಿದ ಚೆಂಡೆಪೆಟ್ಟಿನ ತಾಳಕ್ಕೆ ಸರೀಯಾಗಿ.
ಅಡಿಗಳ ಚಲನೆಗೆ ಸರಿಯಾಗಿ ಚೆಂಡೆಪೆಟ್ಟೋ – ಚೆಂಡೆಪೆಟ್ಟಿಂಗೆ ಸರಿಯಾಗಿ ದರ್ಶನದ ಚಲನೆಯೋ – ಹೇಳಿ ಕನುಪ್ಯೂಸು ಬಪ್ಪ ನಮುನೆ ಆವುತ್ತೊಂದರಿ!
ಅಷ್ಟುದೇ ಹೊಂದಾಣಿಕೆ, ಎಷ್ಟೋ ತಲೆಮಾರಿನ ಅನ್ಯೋನ್ಯತೆ ಅದು!

ಅಲ್ಲಿಗೆ ದರ್ಶನ ಬಲಿಯ ಸುತ್ತು ಸುರುಆತು.
~
ಅಡಿಗಳು ಪುನಾ ಏಳೆಂಟು ಹೆಜ್ಜೆ ಓಡಿದ ಹಾಂಗೆ ನೆಡದವು, ಚೆಂಡೆಪೆಟ್ಟು ಜೋರಿತ್ತು..
ಐದಾರು ಹೆಜ್ಜೆ ಹಿಂದಂತಾಗಿ ನೆಡಕ್ಕೊಂಡು ಬಂದವು, ಚೆಂಡೆಪೆಟ್ಟು ನೆಡವಲೆ ಸರಿಯಾಗಿ ಇತ್ತು!
ಹಿಂದೆ ಬರೆಕ್ಕಾರೆ ದಾರಿ ನೋಡ್ಳೇಡಿಯ ಇದಾ, ಹಾಂಗಾಗಿ ಅಡಿಗಳ ಪೈಕಿಯ ಜೆನಂಗೊ ಮೊದಲೇ ಅದಕ್ಕೆ ಬೇಕಾದ ವೆವಸ್ತೆ ಮಾಡಿತ್ತಿದ್ದವು, ಅಷ್ಟು ಹಿಂದೆಯೇ ನಿಂದುಗೊಂಡು.
ಅಡಿಗಳ ಹತ್ತರೆ ನಿಂದ ಮಯ್ಯ ಅಡಿಗಳು ಅಟ್ಟೆ ಸರಿಯಾಗಿ ನಿಂದಿದೋ – ಏನಾರು ವಿತ್ಯಾಸ ಆಯಿದೋ- ಹೇಳ್ತರ ಗಮನುಸಿಗೊಂಡು ಇತ್ತಿದ್ದವು.
~
ಹೋಪದು ಎಂಟು ಹೆಜ್ಜೆಯ ದೂರ, ಬಪ್ಪದು ಐದು ಹೆಜ್ಜೆಯ ದೂರ – ಅಷ್ಟಪ್ಪಗ ಮೂರು ಹೆಜ್ಜೆಯಷ್ಟು ಮುಂದೆ ಹೋತಿಲ್ಲೆಯೋ –
ಹ್ಮ್, ಅಲ್ಲಿದ್ದಿದ್ದ ಎಲ್ಲೊರುದೇ – ಇಡೀ ಭಕ್ತ ಸಮೂಹವೇ ಅಷ್ಟು ನೆಡದತ್ತು, ಒಟ್ಟಿಂಗೇ!
~
ಭಕ್ತ ಸಮೂಹವೋ –
ಅಪ್ಪು, ಅದರ್ಲಿ ಎಲ್ಲೋರುದೇ ಇತ್ತಿದ್ದವು..!
ಆರಾರು?
ದೇವರಿಂದಲೇ ಹಿಂದೆ ಕೊಡೆ ಹಿಡುದ ಜೆನ!
ಅವರ ಅತ್ತಿತ್ತೆ ಸುತ್ತುಮುತ್ತ ನಿಂದ ಬಟ್ಟಮಾವಂದ್ರು,
ಅವರಿಂದ ಹಿಂದೆ ಅಂಗಿತೆಗದು ನಿಂದ ಊರೋರು,
ಅವರಿಂದ ಹಿಂದೆ ಪೇಂಟಂಗಿ ಹಾಕಿದ್ದಿದ್ದ ಊರೋರು..

ದೇವರ ಎದುರೆ ದೀಪ ಹಿಡುದ ನಂಬೀಶಂಗೊ,
ಅವರಿಂದ ಎದುರೆ ದೀಟಿಗೆ(ದೀವಟಿಗೆ) ಹಿಡುದ ದೀಟಿಗೆಗಾರಂಗೊ,
ಅವರ ಎದುರಾಣ ಚೆಂಡೆಯ ಮಾರಾರುಗೊ,
ಅವರಿಂದಲೂ ಮುಂದೆ ಇರ್ತ ಬೇಂಡು ವಾಲಗದ ಶೇರಿಗಾರಂಗೊ,
ತುಂಬ ಎದೂರಂದ – ಬಣ್ಣಬಣ್ಣದ ಪತಾಕೆ ಹಿಡುದ ಮೀನುಗಾರಂಗೊ,
ದೇವರ ಕರೆಲಿ ನಿಂದೊಂಡು ಭಕ್ತರಿಂಗೆ ದಾರಿಬೆಣಚ್ಚಿಂಗೆ ಗೇಸುಲೈಟು ಹಿಡುದ ವೆಗ್ತಿಗೊ,
ಇದೆಲ್ಲವನ್ನೂ ವೀಡ್ಯ ರೆಕಾರ್ಡುಮಾಡಿ ಪೇಟೆ ಟೀವಿಗೆ ಕೊಡ್ತ ಕೆಮರದ ಮನಿಶ್ಶ!
– ಎಲ್ಲೋರುದೇ ದರ್ಶನದ ದೇವರ ಅನುಸರುಸಿಗೊಂಡು ಮುಂದೆ ಮುಂದೆ ಹೋದವು!

ಈ ರಶ್ಶಿಲಿ ಸುಮ್ಮನೇ ಎಂತಕೆ ಇನ್ನುದೇ ರಶ್ಶು ಮಾಡ್ತದು, ನಾವು ಕರೆಲಿ ನಿಂದುಗೊಂಬ ಹೇಳಿ ಕೆಲವು ಜೆನ ಬಲಿಕಲ್ಲಿನ ಒತ್ತಕೆ ನಿಂದುಗೊಂಡವು.
ಬೈಲಿನೋರುದೇ ಇತ್ತಿದ್ದವು ಅಲ್ಲಿ, ಸಾರಡಿಪುಳ್ಳಿ,  ಕುಂಬ್ಳೆಅಜ್ಜಿ, ಕೋಡಿಮೂಲೆದೊಡ್ಡಪ್ಪ, ಡೆಂಟಿಷ್ಟುಮಾವ, ದೇವಸ್ಯತ್ತೆ, ಯೆಯ್ಯೂರುಭಾವ, ಕುಂಬ್ಳೆಅಜ್ಜ – ಇನ್ನೂ…
ಪುರುಸೋತಿಲಿ ಎಂತದೋ ಒಯಿವಾಟು ಮಾತಾಡಿಗೊಂಡಿದ್ದೋರು – ಈಗ ಭಕ್ತಿಲಿ ದೇವರ ಚಲನೆಯ ನೋಡಿಗೊಂಡು ನಿಂದಿದವು!
~
ಚಲನೆ ಆವುತ್ತ ಗುಂಪಿಲಿ ಒಂದಾಗಿ ಮೆಲ್ಲಂಗೆ ಸೇರಿಗೊಂಡತ್ತು ನಾವುದೇ!
ದೊಡ್ಡಬಾವ ಒಟ್ಟಿಂಗಿದ್ದರೆ ನವಗೆಂತ ಹೆದರಿಕೆ, ಎಷ್ಟು ಜೆನ ಇದ್ದರೂ ಮುಂದೆ ಹೋಪಲೆಡಿಗು! 😉
ಅಪ್ಪು, ದೊಡ್ಡಬಾವಂದೇ ದರ್ಶನಬಲಿಯ ಗುಂಪಿಲಿ ಇದ್ದೊಂಡ!

ಇಡೀ ದೇವಸ್ಥಾನಲ್ಲಿ ಬರೇ ಚೆಂಡೆಪೆಟ್ಟಿಂದು ಮಾಂತ್ರ ಶೆಬ್ದವೋ ಹೇಳ್ತ ಅನುಭವ!
ಅದಕ್ಕೆ ಸರೀಯಾಗಿ ದರ್ಶನದ ಅಡಿಗಳ ಚಲನೆ – ಒಂದೊಂದೇ ಅಡಿ!
~

ಕಣಿಯಾರದ ದರ್ಶನಬಲಿ ವೀಡ್ಯ, ಅಜ್ಜಕಾನಬಾವಂಗೆ ಇಂಟರುನೆಟ್ಟಿಲಿ ಸಿಕ್ಕಿದ್ದು:

ದರ್ಶನಬಲಿಯ ವೀಡ್ಯ: ಒಪ್ಪಣ್ಣನ ವಿವರಣೆ ಅಂದಾಜು ಆಗದ್ದರೆ ಇದರ ನೋಡಿಕ್ಕಿ!

ಸಂಕೊಲೆ: http://www.youtube.com/watch?v=kDhnEnqTcLk

~
ಈ ಚೆಂಡೆಪೆಟ್ಟಿನ ಎಡಕ್ಕಿಲಿಯೂ ಪಕ್ಕನೆ ಒಂದರಿ ತಿರುಗಿ ದೊಡ್ಡಬಾವನತ್ರೆ ಸಣ್ಣ ಸೊರಲ್ಲಿ ಮಾತಾಡಿದೆ –
ಚೆ, ಎಷ್ಟು ಚೆಂದ ಅಲ್ಲದೋ – ಈ ವೆವಸ್ತೆ – ಹೇಳಿಗೊಂಡು..!
ಅಪ್ಪು – ಹೇಳ್ತ ಹಾಂಗೆ ತಲೆ ಆಡುಸಿಗೊಂಡು ನೆಗೆಮಾಡಿದ° – ಅವನ ಕೆಂಪು ಮೊಬೈಲಿನ ಬೆಣ್ಚಿ ಬಂದ ಹಾಂಗೆ ಆತು ಒಂದರಿ!
~
ಒಂದೊಂದೇ ಸುತ್ತಿಲಿ ವೇಗ ಜಾಸ್ತಿ ಜಾಸ್ತಿ ಮಾಡಿ ಮೂರ್ನೇ ಸುತ್ತಿಂಗೆ ದರ್ಶನಬಲಿ ಮುಗಾತು!
ಮತ್ತೆ ಒಂದು ನಿದಾನದ ಸುತ್ತಿಲಿ ಬಲಿ ಅಕೇರಿ ಆತು, ಅದರೊಟ್ಟಿಂಗೇ ದೇವರು ಒಳ ಹೋವುತ್ತ ಕಾರ್ಯ ಸುರು ಆತು.
~
ಇಷ್ಟು ಹೊತ್ತು ಹೆರ ವಿರಾಜಮಾನನಾಗಿದ್ದ ಗೋಪಾಲಕೃಷ್ಣ ಈಗ ದೇವಸ್ಥಾನದ ಒಳ ಹೋವುತ್ತ ಕಾರ್ಯ!
ಎದುರಾಣ ಮುಖ್ಯದ್ವಾರಲ್ಲೆ ಆಗಿ ಸೀತ ಒಳ ಹೋದವು, ದೇವರ ಹೊತ್ತ ಅಡಿಗಳು, ದೇವರೊಟ್ಟಿಂಗೇ.
ಒಳಾಣ ಅಂಗಣಕ್ಕೆ – ನಮಸ್ಕಾರ ಮಂಟಪದ ಬಲತ್ತಿಂಗೆ ಎತ್ತಿ ಅಪ್ಪಗ ಅಡಿಗಳ ಪೈಕಿ ಒಬ್ಬ ಮಾಣಿ ಬಂದು ಇವರ ಕಾಲಿಂಗೆ ಶುದ್ಧಕೆ ನೀರೆರದ!
– ಹೆರಾಣ ಧೂಳು, ಮಣ್ಣು, ಅಶುದ್ಧ ಎಲ್ಲ ಶುದ್ಧದ ಗರ್ಭಗುಡಿಗೆ ಹೋತಿಕ್ಕಲಾಗ ಇದಾ!
ಕಾಲು ತೊಳದ ಮತ್ತೆ ಇನ್ನೊಬ್ಬನ ಸಕಾಯಂದ ಈ ದೇವರ ಒಳ ಕೂರುಸಿದವು.
ಜಾತ್ರೆಯ ಉತ್ಸವಮೂರ್ತಿಯೂ, ನಿತ್ಯದ ಪ್ರತಿಷ್ಠಾಮೂರ್ತಿಯೂ ಒಟ್ಟಿಂಗೆ ಕೂರ್ತ ಅಪೂರ್ವ ಕ್ಷಣ!
ಎರಡೂ ಮೂರ್ತಿಲಿ ಇಪ್ಪದು ಒಬ್ಬನೇ ಗೋಪಾಲಕೃಷ್ಣ  – ಒಟ್ಟಿಂಗೇ ನೈವೇದ್ಯ, ಮಂಗಳಾರತಿ.
– ಅಲ್ಲಿಗೆ ಆ ದಿನದ ಜಾತ್ರೆಯ ಗವುಜಿ ಮುಗಾತು!
~
ಆಟ ಸುರು ಆತು, ಹೆರ – ಕಟೀಲಿನ ಐದನೇ ಮೇಳ ಅಡ.
ಹೊಸಾ ಮೇಳದ ಹೊಸಾ ಆಟ ಅಡ, ಎಂತಪ್ಪ – ವಿಷ್ಣುಪುರಾಣವೋ – ಎಂತದೋ ಹೇಳಿದವು ಅಲ್ಲಿ, ಒಪ್ಪಣ್ಣಂಗೆ ಹೊಸತ್ತೆಲ್ಲ ನೆಂಪೊಳಿಯ!
ಅಂಬಗ ರಜ ನೋಡಿಕ್ಕುವೊ – ಹೇಳಿ ಆತು. ದೊಡ್ಡಬಾವಂದೇ ಅಕ್ಕು ಹೇಳಿದ, ಹಾಂಗೆ ಸೀತ ಆಟ ನೋಡ್ಳೆ ಹೋಗಿಯೂ ಆತು.
ರಶ್ಶಾಗಿ ಕುರ್ಶಿ ಸಿಕ್ಕದ್ದೆ ಅಪ್ಪದು ಬೇಡ ಹೇಳಿ ಓಡಿದ್ದು, ನೋಡಿರೆ ಕುರ್ಶಿಯ ಅಟ್ಟಿ ಪೂರ ಹಾಂಗೇ ಬಿಡುಸದ್ದೆ, ಜೆನಂಗೊ ಇಲ್ಲದ್ದೆ ಕಾಲಿಕಾಲಿ ಕಂಡತ್ತು!
ಚೆ, ಬೇಜಾರಾತೊಂದರಿ!!
ಅಂತೂ ನಾವು ಕೂದುಗೊಂಡು ನೋಡ್ಳೆ ಸುರು ಆತು.
ರಂಗುರಂಗಿನ ರಂಗಮಂಟಪಲ್ಲಿ – ’ಕೇಳಿ’ಬಡಿವಲೆ ಸುರು ಮಾಡಿದವು.
ಅದಾದ ಮತ್ತೆ ಕತೆ ಸುರು ಆತು..
ಕೆಂಪು ಕೆಂಪು – ಸಾರಡಿಪುಳ್ಳಿಯ ಹೊಸಾ ಲೇಪ್ಟೋಪಿನ ಬಣ್ಣದ – ಶಾಲು ಹಾಯ್ಕೊಂಡು ವೇಷಂಗೊ ಬಂತು, ಕತೆ ಮುಂದರುದತ್ತು!
~

ಎಲ್ಲಾ ಜಾತಿಯನ್ನೂ-ವರ್ಣಂಗಳನ್ನೂ ಸಮನಾಗಿ ಕಾಣ್ತ ಕಣಿಪುರದ ಗೋಪಾಲಕೃಷ್ಣ!

ನಾವು ತುಂಬ ಹೊತ್ತು ಕೂದರಾಗ, ನಾಳಂಗೆ ಉಪ್ನಾನ ಊಟ ಇದ್ದು – ಹೇಳಿ ದೊಡ್ಡಬಾವ ನೆಂಪುಮಾಡಿದ!
ಮರದಿನ ಬೈಲಿಲೇ ಸುಮಾರು ಉಪ್ನಾನ ಇತ್ತು. ಒಂದಲ್ಲ, ಎರಡಲ್ಲ!!
ಸಾಇಮಂದಿರಲ್ಲಿ ಒಂದು, ಅನಂತಪುರಲ್ಲಿ ಒಂದು, ಪುತ್ತೂರಿಲಿ ಆರೆಚ್ಚುಬಾವ ಮಗಂದೊಂದು, ಪೋಳ್ಯಲ್ಲಿ ಕುಳ್ಳಾಜೆ ಅಣ್ಣಂದೊಂದು, ಕೋಳ್ಯೂರಿಲಿ ಒಂದಲ್ಲ- ಎರಡೆರಡು – ಅಪುರೂಪದ ಜೋಡುಪ್ನಾನ, ಚೊಕ್ಕಾಡಿಲಿ ಜೋಯಿಶರ ಪುಳ್ಳಿದೊಂದು.. ಇನ್ನೂ ಸುಮಾರಿದ್ದು!!
ಅಪ್ಪೂಳಿ, ಮೂರ್ತ ಇಪ್ಪದು ಲೋಕಕ್ಕೇ ಇದಾ! ಎಲ್ಲೋರುದೇ ಆ ಮೂರ್ತ ನೋಡಿ ಜೆಂಬ್ರಂಗೊ ಮಡಗುದು, ಆದರೆ ನವಗೆ ಹೋತಿಕ್ಕಲೆಡಿತ್ತೋ?
ಹೋಪಲೆಡಿತ್ತಿಲ್ಲೆ, ಹೋಗದ್ರೆ ಆವುತ್ತಿಲ್ಲೆ! 🙁

ಒಂದು ವೇಳೆ ಹೋದರೂ, ಎಂತ ಗುಣ? ಒಂಟೆಯ ನಮುನೆ ಒಂದರಿಯೇ ತುಂಬುಸಿಗೊಂಬ ಗ್ರೇಶಿರೆ – ಹಾಂಗೂ ಆವುತ್ತಿಲ್ಲೆ ಇದಾ!
ಹನ್ನೆರಡು ಹೋಳಿಗೆ ಹೊಡದರೆ ಆ ದಿನದ್ದು ಮುಗಾತು! ಮತ್ತೆ ಕಟ್ಟಿಯೇ ತರೆಕ್ಕಷ್ಟೆ! (ಹೋಳಿಗೆಯನ್ನೂ, ನಮ್ಮನ್ನೂ! 😉 )
ಆ ಕಷ್ಟ ಬೇಡ – ಹೇಳಿಗೊಂಡು ಮೆಲ್ಲಂಗೆ ನೆಡಕ್ಕೊಂಡೇ ಹೆರಟೆಯೊ.
ನೂರು ಮಾರು ನೆಡದಪ್ಪಗ ಕುಂಬ್ಳೆ ಅಜ್ಜಂದೇ ಸಿಕ್ಕಿದವು, ಟರ್ಕಿಶಾಲು ಹಾಯ್ಕೊಂಡು ಒಪಾಸು ಮನಗೆ ಹೆರಟೋರು!
~
ಆಗಾಣ ವಿಧವಿಧದ ವೆವಸ್ತೆಯೇ ಒಪ್ಪಣ್ಣನ ತಲೆಲಿ ತಿರುಗಲೆ ಸುರು ಆತು.
ದೊಡ್ಡಬಾವನತ್ರೆ ಆಗ ಮಾತಾಡಿದ್ದರನ್ನೇ ಪುನ ಒಂದರಿ ಮಾತಾಡ್ಳೆ ಸುರು ಮಾಡಿತ್ತು!
ಕುಂಬ್ಳೆ ಅಜ್ಜಂದೇ ಇದ್ದವನ್ನೇ ಒಟ್ಟಿಂಗೆ, ಅವಕ್ಕೆ ಕಣಿಯಾರ ದೇವಸ್ಥಾನದ ಬಗ್ಗೆ ಜಾಸ್ತಿ ಅರಡಿಗು.
ಮದಲಿಂಗೇ ದೇವಸ್ಥಾನದ ಒಳ-ಹೆರ ಸಂಪರ್ಕ ಇತ್ತು, ಹಾಂಗಾಗಿ ಒಂದು ತಲೆಮಾರಿನ ಹಿಂದಂದಲೇ ಬೆಳವಣಿಗೆಯ ಹತ್ತರಂದ ಕಂಡವು.
ಅಲ್ಯಾಣ ಪದ್ಧತಿಯ ಬಗ್ಗೆ ಮೆಲ್ಲಂಗೆ ಮಾತಾಡ್ಳೆ ಸುರು ಮಾಡಿದವು..
~
ಕುಂಬ್ಳೆ ದೇವಸ್ಥಾನದ ಮೋಕ್ತೇಸರಿಕೆ ತಲಾಂತರಂದ ಮಾಯಿಪ್ಪಾಡಿ ಅರಸುವಿನ ಕೈಲಿ ಇದ್ದದಡ. ಈಗ ಎಂಡೊಮೆಂಟು ಆದರೂ, ಹೆಸರಿಂಗಾದರೂ ಅದರ ಹೆಸರು ಹಾಕುತ್ತವಡ.
ಅಲ್ಯಾಣ ಪೂಜೆಹಕ್ಕು ಕುಂಬ್ಳೆ ಅಡಿಗಳ ಕೈಲಿ; ಎಷ್ಟೋ ಶತಮಾನಂದ ಹಾಂಗೆ ಬಯಿಂದಡ.
– ದೇವರ ಹೊರ್ತದು ಹೇಂಗೂ ಕುಂಬ್ಳೆಅಡಿಗಳೇ ತಾನೇ! ದೇವರ ಹೊರುವಗ ಕೊಡೆ ಹಿಡಿವಲುದೇ ಅದೇ ಪೈಕಿಯೋರು.
ಅಲ್ಲಿ ತಂತ್ರ ತೂಗುತ್ತದು ದೇಲಂಪಾಡಿ ತಂತ್ರಿಗೊ! ಅದುದೇ ಹಾಂಗೆ, ಅವ್ವೇ ಅಲ್ಲಿಗೆ ‘ಬ್ರಹ್ಮಶ್ರೀ’ ಅಡ.
ಕೊಡಿ ಏರುದರಿಂದ ಇಳುಶುತ್ತಲ್ಲಿ ಒರೆಗಾಣ ತಂತ್ರ ತೂಗುತ್ತದು ಅವ್ವೇ ಅಡ!
ಕೊಡಿಯ(ಧ್ವಜವ) ಕಟ್ಟುದು, ವೆವಸ್ತೆ ಮಾಡ್ತದು, ಏರುಸುತ್ತದು, ಇಳುಶುತ್ತದು – ಎಲ್ಲವುದೇ ಬಾಯಾರಿನ ನಂಬೀಶ ಅಡ.
ದೇವರಿಂಗೆ ಚಾಮರ ( ಬೀಸಾಳೆ) ಬೀಸುತ್ತದು ದೇವಸ್ಥಾನದ ಸ್ಥಾನಿಕನೇ ಅಡ. ಅದು ಅದರ ಮರಿಯಾದಿ!

ಆ ದೇವಸ್ತಾನಲ್ಲಿ ಪೂಜಗೆ / ನಿತ್ಯಬಲಿಗೆ ಡೋಲುಬಡಿತ್ತದು ದೇವಸ್ಥಾನದ ಮಾರಾರು ಅಡ.
ನಿತ್ಯ ದೇವಸ್ತಾನವ ಉಡುಗಿ ಮನಾರ ಮಾಡ್ತದು ಅಲ್ಲೇ ಹತ್ತರಾಣ ಚೆಟ್ಟಿಯಾರುಗೊ ಅಡ.
ನಿತ್ಯ ಭಜನೆ ಮಾಡ್ತದು ಆ ಪರಿಸರದ ಕೊಂಕಣಿಗೊ ಅಡ!
ನಿತ್ಯ ಅವಲಕ್ಕಿ ಮಾಡಿ ಹಂಚುತ್ತದು ಸ್ಥಾನಿಕಂಗೊ ಅಡ!

ಚೆಂಡಗೆ ತೆಂಕ್ಲಾಗಿಯಾಣ ಮಾರಾರುಗೊ ಬತ್ತವಲ್ಲದೋ – ಅದೆಲ್ಲರಿಂಗೂ ಗೊಂತಿಪ್ಪದೇ..
ಬೇತಾಳ ಪಾತ್ರಂಗೊ ಆಗಿಪ್ಪೋರು – ಅಲ್ಲೇ ಮಾಯಿಪ್ಪಾಡಿ ಹೊಡೆಣೋರು..cheap moncler jackets
ವಾದ್ಯಕ್ಕೆ ಆರಿಕ್ಕಾಡಿ ಹೊಡೇಣ ಯೇವತ್ತಿನ ಸೇವೆಯೋರು ಇದ್ದೇ ಇರ್ತವು!
ಮತ್ತೆ, ಧ್ವಜ-ಪತಾಕೆ ಹಿಡಿವಲೆ ಬೈಲಕರೆ ಮೊಗೇರಂಗೊ ಅಡ! ಅವು ಈಗ ಒಯಿವಾಟಿಲಿ ದೊಡ್ಡ ದೊಡ್ಡ ಆಗಿ ಬೊಂಬಾಯಿಗೆತ್ತಿರೂ, ರಜೆ ಮಾಡಿ ಬಕ್ಕಡ ಆ ದಿನಕ್ಕಪ್ಪಗ.
ದೇವರ ಎದುರು ಹಿಲಾಲು* ( = ದೀ(ವ)ಟಿಗೆ) ಹಿಡಿವಲೆ, ದೇವರ ಹತ್ತರೆ ಗೇಸುಲೈಟು ಹಿಡಿವಲುದೇ ಚೆಟ್ಟಿಯಾರು ಕುಟುಂಬದವಡ, ಅನಾದಿಕಾಲಂದಲೂ. (ಗೇಸುಲೈಟು ಪ್ರಾಕಿಲಿ ಇದ್ದಿರ, ಬದಲಾಗಿ ಮತ್ತೇವದೋ ಕಾಲಘಟ್ಟಲ್ಲಿ ಸೇರಿದ್ದಾಯಿಕ್ಕು! – ಹೇಳಿಗೊಂಡವು)

ಜಾತ್ರಗೆ ಚೆಪ್ಪರ ಹಾಕುತ್ತದು ಗಟ್ಟಿಗೊ ಅಡ! ಆ ಅಂಗಣಕ್ಕೆ ಇಡೀ ಚೆಪ್ಪರ ಹಾಕಿರೇ ಗೊಂತಾವುತ್ತು, ಅವು ಗಟ್ಟಿಗರು – ಹೇಳ್ತದು!
ಇಷ್ಟೇ ಅಲ್ಲ, ಬೆಡಿ ದಿನಕ್ಕಪ್ಪಗ ಬೆಡಿಕ್ಕಟ್ಟೆಯ ಮನಾರ ಮಾಡ್ತದು ಅಲ್ಲೇ ದೇವರ ಚಾಕಿರಿಗಾರಂಗಳ ಮರಿಯಾದಿ ಅಡ!
ಬೆಡಿ ಹೊಟ್ಟುಸುತ್ತದು ಆರಿಕ್ಕಾಡಿಯ (ಬೆಡಿಮಮ್ಮದೆಯ ಪೈಕಿ) ಮಾಪಳೆಗೊ, ಗೊಂತಿಪ್ಪದ್ದೇ!
ಮದಲಿಂಗೆ ಆ ಮಮ್ಮದೆ ಇಪ್ಪ ಕಾಲಲ್ಲಿ ಗೋಪುರಕ್ಕೇ ಬಂದು ಪ್ರಸಾದ ತೆಕ್ಕೊಂಡು ಹೋಕಡ, ಈಗಾಣವು ಆರುದೇ ಬಪ್ಪದು ಕಾಣ್ತಿಲ್ಲೆ! – ಹೇಳಿದವು. ಅದಿರಳಿ.
.. ಈ ನಮುನೆ ವೆವಸ್ತೆಗಳ ವಿವರಣೆ ಹೇಳಿಗೊಂಡೇ ಹೋದವು.
ಅವಕ್ಕೆ ಇನ್ನುದೇ ಅರಡಿಗು, ಒಪ್ಪಣ್ಣಂಗೆ ಈಗ ನೆಂಪಿಲ್ಲೆ! 🙁
ಅವು ಹೇಳಿದ್ದರ್ಲಿ ಆ ಪರಿಸರದ, ಸಮಾಜದ ಎಲ್ಲೋರದ್ದುದೇ ಜೆವಾಬ್ದಾರಿ ಗೊಂತಾಗಿಂಡು ಇತ್ತು!!
~

ಎಷ್ಟೋ ಒರಿಶ ಹಿಂದೆಯೇ ನಮ್ಮ ಸಮಾಜ ರಚನೆ ಆಯಿದು.
ಒಬ್ಬೊಬ್ಬಂಗೆ ಇಂತಿಂತಾ ಜೆವಾಬ್ದಾರಿ – ಹೇಳ್ತರ ಸಾವಿರ ಒರಿಶ ಮದಲೇ ಹೊಂದುಸಿ ಮಡಗಿ ಆಯಿದು.
ಅದಕ್ಕೆ ಕುಲಕಸುಬು – ಹೇಳ್ತದು.
ಮದಲಿಂಗೆ ಅದು ಸ್ವಾಭಿಮಾನದ, ಪ್ರತಿಷ್ಟೆಯ ಪ್ರಶ್ಣೆ! ಈಗ ಅದು ಮರಿಯಾದಿ ಪ್ರಶ್ಣೆ!!
ಹೇಳಿ ದೊಡ್ಡಬಾವ ಹೇಳಿಗೊಂಡಿದ್ದ ಹಾಂಗೇ ಬೈಲಿಂಗೆತ್ತಿತ್ತು!
ಮರದಿನದ ಊಟಂಗಳ ಮತ್ತೊಂದರಿ ಪಟ್ಟಿಮಾಡಿ – ನೆಂಪುಮಾಡಿಗೊಂಡು ಮನಗೆತ್ತಿ ಒರಗಿತ್ತು.
ತುಂಬ ಹೊತ್ತು ಚೆಂಡೆಪೆಟ್ಟೇ ತಲಗೆ ಬಿದ್ದುಗೊಂಡು ಇತ್ತು, ಎಷೊತ್ತಿಂಗೆ ನಿಂದು ಒರಕ್ಕು ಹಿಡುದತ್ತೋ – ಉಮ್ಮ…
~
ಮರದಿನ ಉದೀಯಪ್ಪಗ ಜೆಂಬ್ರಕ್ಕೆ ಹೆರಟು ಮಾರ್ಗದ ಕರೆಂಗೆ ಬಂದೆ!
ಮಾಷ್ಟ್ರುಮಾವಂದೇ, ಆಚಮನೆದೊಡ್ಡಪ್ಪಂದೇ ಇತ್ತಿದ್ದವು, ಬಸ್ಸಿಂಗೆ ಕಾವೋರು.
ಪೋಳ್ಯದ – ಕುಳ್ಳಾಜೆ ಉಪ್ನಾನಕ್ಕೆ ಹೆರಟೋರು.
ಮಾಷ್ಟ್ರುಮಾವನ ಹತ್ತರೆಯೇ ಸೀಟು ಸಿಕ್ಕಿತ್ತು, ಬಸ್ಸಿನ ಟಿಕೇಟಿನ ತಲೆಬೆಶಿ ಇಲ್ಲೆ ಇನ್ನು – ಹೇಳಿ ಒಂದರಿ ಸಮಾದಾನ ಆತು! 😉
ದೊಡ್ಡಪ್ಪಂಗೆ ಹಿಂದಾಣ ಸೀಟು 😉
ಹೀಂಗೇ ಮಾತಾಡುವಗ,
ನಿನ್ನೆಷ್ಟೇ ಗೊಂತಾದ ಜಾತಿ-ಪದ್ಧತಿಯ ವಿಷಯ ತೆಗದೆ.
ವಿವರವಾರು ವೆವಸ್ತೆಗಳ ನೆಂಪಾದಷ್ಟು ಹೇಳಿದೆ! – ಹೀಂಗೆಲ್ಲ ಇದ್ದಡ, ಹೇಳ್ತ ಕೌತುಕವ!
~
ದೂರಂದಲೇ ಕೇಳಿದ ಆಚಮನೆದೊಡ್ಡಪ್ಪ ಇನ್ನೊಂದು ವಿಶಯ ಹೇಳಿದವು:
ಕುಂಞಿಪ್ಪಕ್ಕಿ ಹೇಳಿ ಒಂದು ಮಾಪಳೆ ಇತ್ತಡ, ಮಾಯಿಪ್ಪಾಡಿಲಿ ಮಂತ್ರಿ ಆಗಿಂಡು.
ಕುಂಬ್ಳೆ ಜಾತ್ರೆಲಿ ದರ್ಶನಬಲಿ ಅದ ಮೇಗಾಣ ಗಂಧಪ್ರಸಾದವ ಅದರ ಕುಟುಂಬದವು ಈಗಳೂ ತೆಕ್ಕೊಳ್ತ ಪರಿವಾಡಿ ಇದ್ದಡ – ಹೇಳಿಗೊಂಡು!
ನಮ್ಮದೇ ಬೈಲಿನ ಧರ್ಮಸಾಹಿಷ್ಣುತೆ ಕಂಡು ಕೊಶೀ ಆತು ಒಂದರಿ.
~

ಮಾಷ್ಟ್ರುಮಾವ° ಒಂದರಿ ಎಲೆ ತಿಂಬಷ್ಟು ಪುರುಸೊತ್ತು ತೆಕ್ಕೊಂಡು ಮತ್ತೆ ಮಾತಾಡಿಗೊಂಡು ಹೋದವು!
ನಮ್ಮದು ವರ್ಣಾಶ್ರಮಧರ್ಮ.
ಚಾತುರ್ವರ್ಣ್ಯಂ ಮಯಾ ಸೃಷ್ಟ್ಯಾ…‘ ಹೇಳಿದ್ದನಡ ಇದೇ ಶ್ರೀಕೃಷ್ಣ, ಭಗವದ್ಗೀತೆಲಿ.
ವರ್ಣ – ಹೇಳಿರೆ ಸಮಾಜದ ನಾಕು ’ಪಾದಂಗೊ’. ಬ್ರಾಹ್ಮಣ – ವೈಶ್ಯ – ಕ್ಷತ್ರಿಯ – ಶೂದ್ರ.
– ಅವ್ವವು ಮಾಡ್ತ ಕಾರ್ಯದ ಮೇಗೆ ಅವರ ವರ್ಣ ನಿಗದಿ ಆಯ್ಕೊಂಡಿತ್ತಡ.
ಆಶ್ರಮ ಹೇಳಿರೆ ವೆಗ್ತಿಯ ನಾಕು ‘ಪಾದಂಗೊ’: ಬ್ರಹ್ಮಚರ್ಯ – ಗೃಹಸ್ಥ – ವಾನಪ್ರಸ್ಥ – ಸನ್ಯಾಸ.
ಮದಲಿಂಗೆ -ವೇದಕಾಲಲ್ಲಿ – ಆರು ಯೇವದರ ಬೇಕಾರುದೇ ಪಡಕ್ಕೊಂಬಲೆ ಸಾಧ್ಯ ಇತ್ತಡ.
ಅನುಲೋಮ, ವಿಲೋಮ – ಎಲ್ಲವುದೇ ಸಾಧ್ಯ ಆಯ್ಕೊಂಡು ಇತ್ತಡ.

ಕ್ರಮೇಣ ಪುರಾಣ ಕಾಲಲ್ಲಿ (ಸೋಜಂಗಳ ಯೇಸು ಹುಟ್ಟುತ್ತದಕ್ಕೆ ಎಂಟುನೂರೊರಿಶ ಮದಲೇ) ಅನುಲೋಮ ಸಾಧ್ಯ ಇತ್ತು, ಆದರೆ ವಿಲೋಮ ಅಸಾಧ್ಯ ಹೇಳಿ ಅಪ್ಪಲೆ ಸುರು ಆತಡ.
ಮತ್ತೆ ಇತಿಹಾಸ ಕಾಲಲ್ಲಿ ಇದುವೇ ಒಂದೊಂದು ಪಂಗಡಂಗೊ ಆಗಿ, ಸ್ಪಷ್ಟವಾದ ಚೌಕಟ್ಟು, ಬೇಲಿಗೊ ಬಪ್ಪಲೆ ಸುರು ಆತಡ.
ಜಾತಿ, ಪಂಗಡಂಗೊ, ಉಪಪಂಗಡಂಗೊ, ಉಪಜಾತಿಗೊ – ಇದೆಲ್ಲವುದೇ ಬಂದು ನಿಂದತ್ತಡ.

ಇಷ್ಟೆಲ್ಲ ಜಾತಿ ಇದ್ದರೂ ಏನೂ ತೊಂದರೆ ಆಯಿದಿಲ್ಲೆ, ಈಗಾಣ ಹಾಳು ರಾಜಕೀಯ ಬಪ್ಪನ್ನಾರವೂ!
ಒಂದೊಂದು ಜಾತಿಗೆ ಅದರದ್ದೇ ಆದ ವೈಶಿಷ್ಟ್ಯ ಇತ್ತು!
ಆಚಾರಿಯ ಮಗ ಸಣ್ಣ ಇಪ್ಪಗಳೇ ಕೆತ್ತನೆ ಕಲ್ತಿರುತ್ತು, ಅದರ ಏರುಜವ್ವನಲ್ಲಿ ಅದರ ಅಪ್ಪನಿಂದಲೂ ಮೇಗಾಣದ್ದರ ಸಾಧನೆ ಮಾಡ್ತು!
ಒಂದು ಮೀನು ಹಿಡಿತ್ತ ಕುಟುಂಬಲ್ಲಿ ಹುಟ್ಟಿದ ಆಣು(ಹುಡುಗ) ಅದು ಸಣ್ಣ ಇಪ್ಪಗಳೇ ಹಿಕ್ಮತ್ತುಗಳ ಕಲ್ತುಗೊಳ್ತು.
ಭಟ್ಟಮಾವನ ಮಗ ಸಣ್ಣ ಇಪ್ಪಗಳೇ ವೇದಮಂತ್ರಂಗಳ ಕಂಠಸ್ಥ ಮಾಡ್ತ!
ಕೊಂಕಣಿಯ ಮಗ ಸಣ್ಣ ಇಪ್ಪಗಳೇ ವ್ಯಾಪಾರದ ಸೂಕ್ಷ್ಮಂಗಳ ಅರ್ತು ಒಳ್ಳೆ ಕಚ್ಚೋಡ ಮಾಡ್ಳೆ ಸುರು ಮಾಡ್ತು..
ಇದೆಲ್ಲವುದೇ ಜಾತಿಪದ್ಧತಿಯ ಒಳಿತುಗೊ.
~
ಈಗ ಮಾಂತ್ರ ಜಾತಿ ಹೇಳಿರೆ ಬರೇ ಓಟು ಹೇಳಿ ಗ್ರೇಶುತ್ತವಡ.
ಮೇಗೆ ಹೋದಷ್ಟು ಮತ್ತುದೇ ಜಾಸ್ತಿ ಅಡ.
ಗೌಡ ಓಟಿಂಗೆ ನಿಂದರೆ ಗೌಡಂಗೆ ಮಾಂತ್ರ ಓಟು ಹಾಕೆಕ್ಕು, ಬ್ಯಾರಿಗೊ ಬ್ಯಾರಿಗೊಕ್ಕೆ ಮಾಂತ್ರ ಓಟಾಕೆಕ್ಕು, ಬಟ್ಟಕ್ಕೊ ಬಟ್ಟಕ್ಕೊಗೇ ಓಟು ಹಾಕೆಕ್ಕು
– ಹೀಂಗೆಲ್ಲ ಒಂದು ಅವ್ಯವಸ್ಥೆ ಮಾಡಿ ಮಡಗಿದ್ದವಡ, ಇದರಿಂದ ಮದಲಾಣ ರಾಜಕಾರಣಿಗೊ.
ಜಾತಿ ನಿರ್ಮೂಲನೆ ಮಾಡಿ, ಎಲ್ಲಾ ಜಾತಿಯುದೇ ಒಂದೇ ಹೇಳಿ ಯೋಚನೆ ಮಾಡ್ತ ಸರಕಾರ, ಅದರ ಅರ್ಜಿಗಳಲ್ಲಿ ‘ಜಾತಿ’ ಹೇಳಿ ಒಂದು ಕೊಲಮು ಮಡಗಿದ್ದಡ!
ಇರ್ತಲೆಮಂಡೆ ಹೇಳಿರೆ ಇದುವೇ ಅಲ್ಲದೋ?
ಪೋಳ್ಯಕ್ಕೆತ್ತುವನ್ನಾರವೂ ಇದೇ ವಿಶಯ ಮಾತಾಡಿಗೊಂಡಾತು…
~
ಒಪ್ಪಣ್ಣಂಗೆ ಎಂತೆಲ್ಲ ಅನುಸುಲೆ ಸುರು ಆತು!
ಜಾತಿ ಪದ್ಧತಿ ಇದ್ದರೇ ಒಳ್ಳೆದಲ್ಲದೋ?
ಒಂದೊಂದು ಜಾತಿಗೆ ಒಂದೊಂದು ವೈಶಿಷ್ಟ್ಯ – ವಿವಿಧತೆಯ ಸಂಸ್ಕಾರ.
ಎಲ್ಲ ಒಟ್ಟು ಸೇರಿರೇ ಸನಾತನ ಧರ್ಮ ಅಪ್ಪದು.

ಅಂಬಗ ಭೂಮಿಯ ಎಲ್ಲಿಗೇ ಹೋದರೂ ಸಮಾಜದ ವಿಭಾಗಂಗೊ ಇದ್ದೇ ಇರ್ತು.
ನಾವೀಗ ಇಪ್ಪದರ ಸಂಪೂರ್ಣ ಬಿಡ್ಳೆ ಹೆರಟ್ರೆ ಇನ್ನೊಂದು ಸುರು ಆಗಿಯೇ ಆವುತ್ತು, ಜಾತಿಬಿಟ್ಟವರಜಾತಿ – ಹೇಳಿ ಹೊಸತ್ತೊಂದು ಸುರು ಅಕ್ಕು.
ಅದರ ಬದಲು ಸಾವಿರಾರು ಒರಿಶದ್ದರ ಮಡಿಕ್ಕೊಂಬ° – ಹೇಳಿ ಕಂಡತ್ತು!
~
ಜಾತಿಯೂ – ಜಾತಿಗಿಪ್ಪ ಪದ್ಧತಿಯೂ ಒಂದಕ್ಕೊಂದು ಹೊಂದಿಗೊಂಡು ಇರ್ತದು.
ಒಂದರ ಆಗಿ ಬಿಡ್ಳೆಡಿಯ, ಬಿಟ್ರೆ ಎರಡುದೇ ಹೋಕು! ಅಲ್ಲದೋ?
ಎಂತ ಹೇಳ್ತಿ?

ಒಂದೊಪ್ಪ: ಜಾತಿಯನ್ನೂ – ಪದ್ಧತಿಯನ್ನೂ – ಎರಡನ್ನೂ ಬಿಟ್ರೆ ಮತ್ತೆ ಗೊಪಾಲಕೃಷ್ಣನನ್ನೂ ಬಿಡೆಕ್ಕಕ್ಕು, ಅಲ್ಲದೋ?

ಸೂ:

41 thoughts on “ಜಾತಿಯೂ ಬೇಕು, ಪದ್ಧತಿಯೂ ಬೇಕು..!!

  1. ಪ್ರತಿಯೊಂದು ಜಾತಿಗೂ ಅದರದ್ದೇ ಆದ ವೈಶಿಷ್ಟ್ಯತೆ ಇರುತ್ತು. ಎಲ್ಲೋರು ಒಟ್ಟಿಂಗೆ ಸೇರಿ ಊರ ಕಾರ್ಯಕ್ರಮವ ನೆಡಸುವಗ ಆವ್ತ ಕೊಶಿ ಬೇರೆಯೆ. ಪರಸ್ಪರ ಹೊಂದೆಂಡು, ಸೌಹಾರ್ದತೆಲಿ ಎಲ್ಲೋರು ಇಪ್ಪಲೆ ಇದು ಅನುವು ಮಾಡಿ ಕೊಡುತ್ತು. ಎಲ್ಲಾ ಜಾತಿಯವೂ ಒಟ್ಟು ಸೇರಿ ನೆಡಸುವ ಕುಂಬ್ಳೆ ಆಯನದ ವರ್ಣನೆ ಲಾಯಕಾಯಿದು. ಓದೆಂಡು ಹೋಪಗ ಆಯನದ ಗೌಜಿಯ ನೋಡಿದವಂಗೆ / ನೋಡದ್ದವಂಗುದೆ ಒಳ್ಳೆ ಕೊಶಿ ಕೊಡುಗು ಈ ಲೇಖನ. ಚೆಂಡೆ ಪೆಟ್ಟು ಬೀಳ್ತಾ ಇಪ್ಪಗ ಅಡಿಗಳು ಕೈಲಿ ಹಿಡಿಯದ್ದೆ ದೇವರ ಹೊತ್ತೊಂಡು, ಹಿಂದೆ ಮುಂದೆ ಬತ್ತದು, ಕೊಣಿವದು, ಸುತ್ತು ಬತ್ತದು ಎಲ್ಲವನ್ನೂ ನೆಂಪು ಮಾಡಿತ್ತು ಲೇಖನ. ಶಾಲೆಗೆ ಹೋಗೆಂಡಿಪ್ಪ ಪ್ರಾಯಲ್ಲಿ ಮಧೂರು ಬೆಡಿಗೆ ಹೋಗಿ ಬಂದು ಮರದಿನ ಎಂಗಳದ್ದೆ ದೇವರ ಬಲಿ ಆಗೆಂಡಿದ್ದದು ನೆಂಪಾತು.! ಚೆಂಡೆಗೆ ಒಂದು ಜೆನ. ದೇವರು ಹೊರ್ಲೆ ಒಂದು ಜೆನ ! ಮಕ್ಕೊ ಸಣ್ಣ ಇಪ್ಪಗ, ಅಪ್ಪಂಗುದೆ, ಮಕ್ಕಳ ದೇವರ ಹಾಂಗೆ ಕೆಲವೊಂದರಿ ಹೊತ್ತೊಂಡು ಹೋಯೆಕಾವ್ತು. ಅದರಲ್ಲೂ ಒಂದು ಮಜಾ ಇದ್ದು. ಮುಂದಂಗೆ ನೆಂಪಿರಲಿ ಒಪ್ಪಣ್ಣಾ !

  2. ಜಾತ್ರೆಯ ಹಿನ್ನೆಲೆಲಿ ಸಮಾಜ ಹಿಡುದ ದಾರಿಯ ಸೂಕ್ಷ್ಮಲ್ಲಿ ಚೆ೦ದಕ್ಕೆ ವಿಮರ್ಶೆ ಮಾಡಿದ್ದೆ ,ಒಪ್ಪಣ್ಣಾ.ಜಾತಿ ವೋಟಿನ ರಾಜಕಾರಣಕ್ಕೆ ಬಲಿ ಆದ್ದದು ನಮ್ಮ ದೇಶದ ದುರಾದೃಷ್ಟ.ಮೇಲು ಕೀಳು ಹೇಳುವ ಭೇದ ಇಲ್ಲದ್ದ ಜಾತಿಪದ್ಧತಿ,ಕಸುಬಿನ ವೆವಸ್ಥೆ ಇದ್ದಿದ್ದರೆ ಸಮಾಜ ಸ್ವಸ್ಥ ಇರ್ತಿತೋ ಏನೋ.. ಅಯಸ್ಕಾ೦ತದ ಹಾ೦ಗೆ ಸೆಳದು ಓದುಸುವ ಬರಹದ ಶೈಲಿ ಒಪ್ಪಣ್ಣ೦ದು.

  3. ಇಲ್ಲಿ ಒಂದು ಲೇಖನ (ಪ್ರಜಾವಾಣಿ) ಇದ್ದು ಜಾತಿ ಬಗ್ಗೆ ವಿವೇಕಾನಂದ ಎಂತ ಹೇಳಿತ್ತಿದವು ಹೇಳಿ. ಇದರಲ್ಲಿ ಮಲಬಾರಿನ ಜನರ (ಹೆಚ್ಚು ಕಮ್ಮಿ ನಮ್ಮ ಊರಿನ ಬಗ್ಗೆ) ಯೂ ಇದ್ದು :

    http://beta.prajavani.net/web/include/story.php?section=147&menuid=14

  4. ಜಾತಿ-ಪದ್ದತಿಗೊ ನಮ್ಮ ಸಾಮಾಜಿಕ ಮತ್ತೆ ಮಾನಸಿಕ ಸ್ವಾಸ್ಥ್ಯವ ಕೆಡುಸುವಷ್ಟರ ಮಟ್ಟಿಂಗೆ ನಾವು ಅದರ ಅಪಾರ್ಥ ಮಾಡಿಗೊಂಡಿದು ! ಅಥವಾ ರಾಜಕಾರಣಿಗಳೋ ಮತ್ತಾರೋ ತಮ್ಮ ಲಾಭಕ್ಕೆ ಮಾಡಿದ ಕೆಲಸ ಅಲ್ಲದಾ ಇದು? ದೇವರ ಕೃಪೆಂದಾಗಿ ಇನ್ನುಮೇಲಾದರೂ ಎಲ್ಲವೂ ಸರಿಯಾಗಿ ಜಾತಿ-ಪದ್ದತಿ-ನಂಬಿಕೆಗಳೊಟ್ಟಿಂಗೆ ಜನ ನೆಮದಿಲಿ ಬದುಕ್ಕುವ ಹಾಂಗಾಗಲಿ.

  5. ಏ ಒಪ್ಪಣ್ಣ,,
    ಆನುದೇ ನಿನ್ನ ಒಟ್ತಿನ್ಗೆ ಬತ್ತೆ ಹೇಳಿದ್ದೆ ಅಲ್ದಾ?ಮರದತ್ತಾ?ಇರಲಿ..ಶುದ್ದಿ ಓದಿ ಜಾತ್ರೆಗೆ ಹೋದ ಹಾನ್ಗೆ ಆತು…
    ಧನ್ಯವಾದ…

  6. oppanno laikaidu baraddu.
    jatrege kumble ajjana ottinge hoide heli gontathu..bhari raisidde allada..
    kumble mavana magalu kadle mitai tandu kottidu..
    oppannange bahusha maradu hoida heli kandattu…kumble mavana magalu jaatrenda adara attege kuppi bale 2dajanu tandu kottida..
    hange heludu kelidde.sikkippaga keluva..
    entade aagali jatre bhari koshi aathu oppannange…
    ondoppa sooper oppanno..

  7. ಒಪ್ಪಣ್ಣೋ ನೀನು ಹೇಳಿದ ವಿಚಾರ ಆಲೋಚನೆ ಮಾಡುತ್ತೆ.ಕು೦ಬ್ಳೆ ಸೀಮೆಯ ಚರಿತ್ರೆ ಹೇಳುತ್ತದು ಅಥವ ಮಾಯಿಪ್ಪಾಡಿ ರಾಜ೦ಗಳ ಚ್ರಿತ್ರೆ ಹೇಳುತ್ತದು ಒ೦ದಕ್ಕೊ೦ದು ಸೇರಿ ಇಪ್ಪದು.ಮಹಿ೦ದಾಣ ಮಾಯಿಪ್ಪಡಿ ರಾಜಕ್ಕೊ ನಮ್ಮ ಸೀಮಗೆ ನಾಲ್ಕು ಮುಕ್ಯ ದೇವಸ್ಥಾನ ಅಲ್ಲದ್ದೆ ಎ೦ಟು ಉಪ ದೇವಸ್ಥಾನ೦ಗೊ ಹಾ೦ಗೆ ಮೂವತ್ತೆರಡು ಭೂತ ಸ್ಥಾನ೦ಗಳನ್ನೂ ಕೊಟ್ಟಿದವು.ಇ೦ದು ಅವರತ್ರೆ ಏನೂಇಲ್ಲದ್ದೆ ಇಕ್ಕು ಅದರೆ ಇ೦ದ್ರಾಣ ರಾಜಕೀಯದವರ ಹಾ೦ಗೆ ಮಾಡದ್ದೆ ಸಮಾಜಕ್ಕೆ ರಜ ಆರು ಕೊಟ್ಟಿದವಾನೆ.ನವಗೆ ಈ ರೀತಿ ಶ್ರದ್ದಾ ಕೇ೦ದ್ರ೦ಗಳ ಕೊಟ್ಟದಕ್ಕೆ ನಾವು ಅವಕ್ಕೆ ಮನಸಿಲ್ಲಿ ಆರೂ ಕ್ರುತಜ್ನತೆ ಹೇಳುವೊ೦.ಹಾ೦ಗೇ ಎರಡನೇ ಮಹಾಯುದ್ದದ ಸಮಯಲ್ಲಿ ನಮ್ಮ ಕು೦ಬ್ಳೆಯ ಆಸು ಪಾಸಿನ ಕೆಲವು ಭಾಗ೦ಗಳ ಮಿಲಿಟ್ರಿ ಬ್ಲೋಕ್ ಮಾದಡಿಪ್ಪಾಗ ಮಾಯಿಪ್ಪಾಡಿ ಅರಮನೆಯವು ಎಷ್ಟೊ ಹವೀಕ ಕುತಟು೦ಬ೦ಗೋಕ್ಕೆ ಆಶ್ರಯ ಕೊಟ್ಟಿದವು.ಇದು ಗೊತಿದ್ದ ಕೆಲವು ಜೆನ೦ಗೊ ಆದರೂ ಈಗ ಇಕ್ಕು.ಹಾ೦ಗಾಗಿ ಹಿ೦ಗಿದ್ದ ವಿಷಯ೦ಗಳೊಟ್ಟಿ೦ಗೆ ಅದು ನವಗೆ ಸಿಕ್ಕಲೆ ಕಾರಣ ಕರ್ತರಾದವರನ್ನೂ ನೆ೦ಪುಮಾಡಿಯೊ೦ಬೊ೦.ಒಪ್ಪ೦ಗಳೊಟ್ಟಿ೦ಗೆ.

  8. ಒಪ್ಪಣ್ಣೊ! ಒ೦ದು ಸಲಹೆ–
    {ಉಪ್ನಾನ}
    ಮಾತಾಡುವದರ ಹಾ೦ಗೇ ಬರವದು ಕೊಶಿ ಕೊಡ್ತು. (ನಾವು ಸರೀ ಇದ್ದು ತಿಳ್ಕೊ೦ಡು ಮಾತಾಡುವ ಕೆಲ ಶಬ್ದ೦ಗ ಬರದರೆ ಹೇ೦ಗಿರ್ತು ಹೇಳಿ ಒಪ್ಪಣ್ಣ ಬರದ್ದು ನೋಡುವಗ ಗೊ೦ತಾವ್ತು!!)

    ಆದರೆ ಉಪನಯನ ಹೇಳುವ ಸ೦ಸ್ಕಾರದ ಶಬ್ದಕ್ಕೇ ವಿಕಾರ ಬ೦ದರೆ ಲಾಯಕ ಕಾಣ್ತಿಲ್ಲೆ. ಈಗ ಅದು ಕೆಲವರ ಬಾಯಿಲ್ಲಿ ರೂಢಿಲ್ಲಿ ಇದ್ದರುದೆ ಅದರ ಸರಿ ಮಾಡೆಕು ನಾವು ಅಲ್ಲದ? ಮ೦ತ್ರ ಹೇಳಿ ನಾಲಗೆ ಸರೀ ಹೊರಳುವ ಜಾತಿಯವು ಹೇಳಿ ನಮ್ಮ ಹೇಳುವಗ….
    ಹೀ೦ಗಿಪ್ಪದು ನಮ್ಮ ಅಕ್ಷಯಪದನಿಧಿಗೆ ಸೇರಿರೆ ಚೆ೦ದ ಕಾಣದೊ ಹೇಳಿ ಅನ್ಸುತ್ತು.

    1. ಅಕ್ಷಯಪದನಿಧಿಯ ಚಿಂತನೆಲೇ ಇಪ್ಪಗ ಈ ಒಪ್ಪ ಕಂಡು ಕೊಶಿ ಆತು.
      ಇದೊಂದು ರಜ ವಿಮರ್ಶೆ ಮಾಡೆಕ್ಕಾದ ವಿಚಾರವೇ ಡಾಮಹೇಶಣ್ಣ.

      ನಮ್ಮ ಹೆರಿಯೋರು ಎಲ್ಲಾ ಶಬ್ದವನ್ನೂ – ಸಂಸ್ಕೃತ – ಇಂಗ್ಳೀಶು – ಮಲೆಯಾಳ- ತುಳು – ತೆಲುಗು – ಇತ್ಯಾದಿ ಮೂಲಂದ ಹೆರ್ಕಿ ಅವರದ್ದೇ ಆದ ಒಂದು ಮೋಡಿಲಿ ಹೇಳಿ ಹವ್ಯಕ ಮಾಡಿಗೊಂಡು ಇತ್ತಿದ್ದವು, ಅಲ್ದೋ?

      ಅದು ನಮ್ಮ ಶಬ್ದ ಅಲ್ಲದ್ದರೂ, ನಮ್ಮದರ್ಲಿ ಇರ್ತ ಒಂದು ಬಳಕೆ – ಹೇಳಿ ಗಮನುಸಿಗೊಂಬದು ಒಳ್ಳೆದೋ ಹೇಳಿಗೊಂಡು, ಎಂತ ಹೇಳ್ತಿ?

      1. ಅವಶ್ಯವಾಗಿ, ಮೋಡಿ ಬಳಕೆಯ ನಾವು ಉಲ್ಲೇಖಿಸೆಕಾದ್ದದೆ ಒಪ್ಪಣ್ಣ ಹೇಳಿದ ಹಾ೦ಗೆ. ಆದರೆ ಕೆಲವು ವಿಶೇಷ ಅರ್ಥಘಟಿತ ಪದ೦ಗಳ ವಿರೂಪ ಆಗದ್ದ ಹಾ೦ಗೆ ನೋಡುವದೂ ಬೇಕಾದ್ದದೆ.
        ಇದು ನಮ್ಮ ಹಿರಿಯರು ಆಲೋಚನೆ ಮಾಡಿ ಉ೦ಟುಮಾಡಿದ ಶಬ್ದ ಆಗಿಕ್ಕು!
        ಮಾತಾಡಿದ್ದದೇ ಭಾಷೆ ಹೇಳಿ ಆದರುದೆ, ಕೆಲವು ಉಚ್ಚಾರಣೆಗೊಕ್ಕೆ ಸುಲಭಲ್ಲಿ ಒಪ್ಪಿಗೆಯ ಮುದ್ರೆ ಒತ್ತಲಾಗ. (ಭಾಷೆಯ ಘನತೆಯ, ಸ್ವರೂಪಸ೦ರಕ್ಷಣೆಯ ದೃಷ್ಟಿ೦ದ).

      2. ಒಂದರಿ ನೋಡಿಕ್ಕಿ-
        “ಹವ್ಯಕ ಪದಸಂಚಯ” – ಟಿ ಕೇಶವ ಭಟ್ಟ,
        ಹವ್ಯಕ ಉಪಭಾಷೆಯ ಶಬ್ದ ಕೋಶ- ಕಂದ ಪದ್ಯ ಸಟೀಕಾ
        ಮುದ್ರಣ- ೧೯೭೨, ೧೯೮೨
        ಚಿರಸಾಹಿತ್ಯ ಪ್ರಕಾಶನ
        ೭೪೪, ೧೫ ನೇ ಮುಖ್ಯ ರಸ್ತೆ,
        ಬನಶಂಕರಿ ೨ನೇ ಹಂತ,
        ಬೆಂಗಳೂರು ೭೦

    2. @ ಮಹೇಶಣ್ಣ, ಅಪ್ಪು ಈಗ ಕೆಲವು ಜನ ಸತ್ನಾರಾಯಣ ಪೂಜೆ ಹೇಳ್ತವು. ಇದರ ಬಿಡುಸಿ ಹೇಳಿರೆ “ಸತ್ತ ನಾರಾಯಣ ಪೂಜೆ” ಆವ್ತಿಲ್ಲ್ಯ?!!!!

  9. ಅನು ಒಪ್ಪ ಧಣಿಕ್ಕುಲ ಪಿರಾ ಹೋದ್ದು ಕಣ್ಯಾರಗು. ಆರೆನೊಟ್ಟುಗು ಪಿರ ಒರಿ ಇತ್ತವು ಅವ್ವು ಯಾರು?

  10. ಒಪ್ಪಣ್ಣೋ.., ಈ ವಾರದ ಶುದ್ದಿಲಿ ಗೋಪಾಲಕೃಷ್ಣ ದೇವರ ಜಾತ್ರಾ ವೈಭವದ ವಿಶ್ವರೂಪದರ್ಶನ ಮಾಡ್ಸಿದೆ.. ತುಂಬಾ ಚೆಂದ ಬಯಿಂದು ಆತಾ ಶುದ್ದಿ. ಉತ್ಸವದ ಪ್ರತಿಯೊಂದು ವಿಷಯವೂ ಬಯಿಂದು. ದೇವರು ಎತ್ತುಸಿದರೆ ಮುಂದೆ ಯಾವತ್ತಾದರೂ ಹೋಪಲೆ ಸಿಕ್ಕಿದರೆ ಅಲ್ಲಿ ಎಂತ ಆವುತ್ತಾ ಇದ್ದು ಹೇಳಿ ಅಂದಾಜು ಮಾಡ್ಲೆ ಅಕ್ಕು ಆ ರೀತಿ ಎಲ್ಲವನ್ನೂ ಬರದ್ದೆ.!!!! ಅಡಿಪ್ಪೊಳಿ ಶುದ್ದಿ..!!!ಅಲ್ಲಿಯೇ ಇದ್ದು ನೇರ ವಿವರಣೆ ಕೊಡ್ತವಂಗುದೇ ಇಷ್ಟು ಸೂಕ್ಷ್ಮ ವಿಷಯಂಗಳ ಹೇಳಿಗೊಂಬಲೆ ಎಡಿಯ.!!!

    ಕುಂಬಳೆ ದೇವಸ್ಥಾನ ಕರ್ನಾಟಕ, ಕೇರಳ ಗಡಿಲಿ ಇಪ್ಪ ಕಾರಣವೂ ಆದಿಕ್ಕು, ಸಮುದ್ರದ ಕರೆಲಿ ಇಪ್ಪದೂ ಆದಿಕ್ಕು, ನಮ್ಮೋರು, ಮಲಯಾಳಿ ಸಮುದಾಯದವ್ವು ಇಪ್ಪ ಕಾರಣವೂ ಆದಿಕ್ಕು ಅಲ್ಲದಾ ಅಲ್ಲಿಯಾಣ ದೇವಸ್ಥಾನಲ್ಲಿ ಇಷ್ಟು ಜಾತಿ ಪಂಗಡದ ಭಾಗವಹಿಸುವಿಕೆ ಕಾಂಬದು.
    ಮಾಯಿಪ್ಪಾಡಿ ಅರಸುಗೊ, ನಮ್ಮೋರು, ಕುಂಬ್ಳೆ ಅಡಿಗಳು, ದೇಲಂಪಾಡಿ ತಂತ್ರಿಗೋ, ಸ್ಥಾನಿಕಂಗೋ, ಮಾರಾರುಗೊ, ಚೆಟ್ಟಿಯಾರುಗೋ, ಕೊಂಕಣಿಗೊ, ಮೊಗೇರಂಗೋ, ಗಟ್ಟಿಗೋ, ಮಾಪ್ಳೆಗೋ ಇನ್ನೂ ಇಕ್ಕು ದೇವರ ಸೇವೆಗೆ ಒಳಪಟ್ಟವ್ವು ಅಲ್ಲದೋ!!!! ಅದಲ್ಲದ್ದೆ, ಭಕ್ತರ ತೆಕ್ಕೊಂಡರೆ ಪಟ್ಟಿ ಇನ್ನೂ ಉದ್ದ ಹೋಕದಾ… ಈಗಳೂ ಕಿಟ್ಟಪ್ಪನ ಕ್ಷೇತ್ರಲ್ಲಿ ಅವರವರ ಸಮಾಜದ ಜವಾಬ್ದಾರಿಯ ಘನತೆ, ಗೌರವಲ್ಲಿ ನಡೆಶಿಗೊಂಡು ಬತ್ತಾ ಇಪ್ಪದು ನಿಜವಾಗಿಯೂ ಸಂತೋಷದ ಸಂಗತಿ.

    ಒಪ್ಪಣ್ಣ ಹೇಳಿದ ಹಾಂಗೆ ಒಂದೊಂದು ಜಾತಿಗೆ ಒಂದೊಂದು ವೈಶಿಷ್ಟ್ಯ.. ವಿವಿಧತೆಯ ಸಂಸ್ಕಾರ!!! ಸನಾತನ ಧರ್ಮದ ಮೂಲ ಹೇಳಿ…!!! ಅವರವರ ಜಾತಿಯ ಬಗ್ಗೆ ಅಭಿಮಾನ ಬೇಕು ಅದರ ಒಟ್ಟಿಂಗೆ ಇನ್ನೊಂದು ಜಾತಿಯ ಬಗ್ಗೆ ಗೌರವವೂ ಬೇಕು. ಹಾಂಗಾದರೆ ಮಾತ್ರವೇ ನವಗೆ ಸಮುದಾಯಲ್ಲಿ ಚೆಂದಲ್ಲಿ ದೇವರ ಕಾರ್ಯಂಗಳ ನಡೆಶಿ ಕೊಡ್ಲೆ ಎಡಿಗು ಅಲ್ಲದಾ?
    ಈಗಾಣ ರಾಜಕೀಯದವರ ಪ್ರಭಾವಲ್ಲಿಯೇ ಅಲ್ಲದಾ ದೇವಸ್ಥಾನಂಗಳಲ್ಲಿ ಬ್ರಾಹ್ಮರಿಂಗೆ ಎಂತಕ್ಕೆ ಮೊದಾಲು ಹಸ್ತೋದಕ ಹಾಕೆಕ್ಕು? ಅವ್ವು ದೇವರ ಕಾರ್ಯಲ್ಲಿ ಎಂತಕ್ಕೆ ಮುಂದೆ ಇರೆಕ್ಕು ಹೇಳಿ ಎಲ್ಲ ಪ್ರಶ್ಣೆಗ ಜನಂಗೊ ಮಾಡ್ಲೆ ಸುರು ಮಾಡಿದ್ದದು.

    ನಮ್ಮ ನಮ್ಮ ಮನೆಗಳ ಕಾರ್ಯಕ್ರಮಂಗಳಲ್ಲಿಯೂ ಈ ಪದ್ಧತಿ ಇದ್ದನ್ನೆ!!! ನಮ್ಮಲ್ಲಿ ಬಟ್ಟಮಾವ° ಬರೆಕ್ಕು, ಅಡಿಗೆ ಅಣ್ಣ ಬರೆಕ್ಕು, ಗುರಿಕ್ಕಾರ್ರು ಬರೆಕ್ಕು, ಎಲ್ಲ ಮನೆ ಹಿರಿಯರು, ಬಂಧುಗೊ ಬರೆಕ್ಕು. ಹೆರಾಣವ್ವು ಬಂದು ಮಾಡುದು ಹೇಳಿ ಇಪ್ಪದು ಚಪ್ಪರದ ಕೆಲಸ. ಚಪ್ಪರದ ಅಡಿ ಭಾಗಕ್ಕೆ ಆಚ್ಚಾದಿಸುಲೆ ಇಪ್ಪ ಬೆಳಿವೇಷ್ಟಿ ಹಾಕುತ್ತ ಮರಿಯಾದಿ ಮಡಿವಾಳಂಗಳದ್ದು. ಅವಕ್ಕೆ ನಾವು ಹೇಳಿದರೆ ಕೊಶೀಲಿ ಬಂದು, ಅವರ ಕೆಲಸ ಮಾಡಿ ಒಂದು ಸೇರು ಅಕ್ಕಿ, ತೆಂಗಿನಕಾಯಿ ಒಂದು ಹೊಸಾ ವೇಷ್ಟಿ ಭಕ್ತೀಲಿ ತೆಕ್ಕೊಂಡು ಹೋಕು. ಮತ್ತೆ ಎಂತದನ್ನೂ ನಿರೀಕ್ಷಿಸುತ್ತವಿಲ್ಲೆ.
    ಗೋಪಾಲಕೃಷ್ಣ ಹೇಳಿದರೇ ಯಾವ ಬೇಧ ಇಲ್ಲದ್ದವ° ಅಲ್ಲದಾ? ಅವಂಗೆ ಮನುಷ್ಯರು ಮಾತ್ರ ಅಲ್ಲ ಪ್ರಾಣಿಗೊ, ಪಕ್ಷಿಗೋ, ಗಿಡಮರಂಗೋ ಎಲ್ಲವುದೇ ಪ್ರಿಯವೇ!!!! ಪ್ರಕೃತಿ ಪೂಜೆಗೆ ಒತ್ತು ಕೊಟ್ಟವ°.. ಎಲ್ಲ ಜೀವಂಗಳಲ್ಲಿದೇ ದೈವತ್ವವ ಸಾರಿದವ°.. ಅವನ ಜಾತ್ರೆ ಇದೇ ರೀತಿ ಯಾವ ಕಾಲಕ್ಕೆದೇ ಯಾವ ಬೇಧ ಇಲ್ಲದ್ದೆ ನಡೆಯಲಿ.. ಎಲ್ಲ ಮನುಷ್ಯರು ದೇವರ ಎದುರು ಭಕ್ತಿಲಿ ಒಂದೇ ಮನಸ್ಸಿಲಿ ಒಂದಾಗಿ, ಅವರವರ ಜಾತಿ ಧರ್ಮಕ್ಕೆ ಅನುಗುಣವಾದ ಕರ್ತವ್ಯಂಗಳ ನಿಭಾಯಿಸಲಿ..

    ಒಂದೊಪ್ಪಲ್ಲಿ ಒಪ್ಪಣ್ಣ ಹೇಳಿದ ಹಾಂಗೆ ಜಾತಿಯನ್ನೂ, ಪದ್ಧತಿಯನ್ನೂ ಎರಡನ್ನೂ ಬಿಟ್ಟರೆ ಮತ್ತೆ ಗೋಪಾಲಕೃಷ್ಣನನ್ನೂ ಬಿಡೆಕ್ಕಕ್ಕು ಹೇಳಿ.. ಈ ಜಾತಿಯೂ, ಪದ್ಧತಿಯೂ ಎರಡನ್ನೂ ಬಿಟ್ಟರೆ ಗೋಪಾಲಕೃಷ್ಣ ನಮ್ಮ ಬಿಟ್ಟಿಕ್ಕುಗೋ ಹೇಳಿ ಕಾಣ್ತು ಅಲ್ಲದಾ?

    1. { ಈ ಜಾತಿಯೂ, ಪದ್ಧತಿಯೂ ಎರಡನ್ನೂ ಬಿಟ್ಟರೆ ಗೋಪಾಲಕೃಷ್ಣ ನಮ್ಮ ಬಿಟ್ಟಿಕ್ಕುಗೋ }
      ಶ್ರೀ ಅಕ್ಕಾ,ಒಪ್ಪಣ್ಣಂಗೇ ಮನಸ್ಸಿಂಗೆ ಬಾರದ್ದ ಒಂದು ಚಿಂತನೆಯ, ಕಳಕಳಿಯ ತೋರುಸಿಕೊಟ್ಟಿದಿ.
      ತುಂಬಾ ಚೆಂದದ ಒಪ್ಪ ಬರದಿ, ಕೊಶೀ ಆತು.

      ಶುದ್ದಿಯಷ್ಟೇ ಗಾಂಭೀರ್ಯದ ಒಪ್ಪಕ್ಕೆ ವಂದನೆಗೊ..

  11. ಅಪ್ಪಪ್ಪು.. ಜಾತಿ ಇರಲಿ, ಜಾತೀವಾದ ಬೇಡ.. ಈಗ ಜಾತ್ಯತೀತ ಪಕ್ಷನ್ಗೊ ಎಲ್ಲ ಜಾತ್ಯತ್ಯಂತ ಪಕ್ಷ ಆಯ್ದು..
    वसुधैव कुटुम्बकम्।

    1. { ಈಗ ಜಾತ್ಯತೀತ ಪಕ್ಷನ್ಗೊ ಎಲ್ಲ ಜಾತ್ಯತ್ಯಂತ ಪಕ್ಷ ಆಯ್ದು }
      ಆಹ್! ಭಾರಿ ಲಾಯಿಕಲ್ಲಿ ಹೇಳಿದೆ ಉದಯಣ್ಣೋ..

      ಆದರೆ, ಈ ದೇವೇಗೌಡಂಗೆ ಜಾತ್ಯತೀತತೆ ತುಂಬಾ ಕೊಶಿ ಅಡ, ಅಲ್ದಾ?

  12. ಆನು ಈ ಸರ್ತಿ ಕುಂಬಳೆ ಜಾತ್ರೆಗೆ ಹೊಯಿದಿಲ್ಲೆ.ಈ ವಿವರಣೆಯ ಓದಿಯಪ್ಪಗ ಕುಂಬ್ಲೆ ಜಾತ್ರೆಗೆ ಹೋದಹಾಂಗಾತದ

    1. ಗಾಂಧಾರಿ ಮುಣ್ಚಿಯ ಹಾಂಗೆ – ಸಣ್ಣ – ಗಮನಾರ್ಹ ಒಪ್ಪ ಕೊಟ್ಟಿ.
      ಕೊಶಿ ಆತು ಪ್ರಮೋದಣ್ಣೋ..

  13. ಒಪ್ಪಣ್ಣಾ… ಪುನಃ ಒ೦ದು ಒಳ್ಳೇ ಲೇಖನ ಕೊಟ್ಟದಕ್ಕೆ ಧನ್ಯವಾದ೦ಗೊ..
    ಎನ್ನ ಅಭಿಪ್ರಾಯಲ್ಲಿ ಆರು ಎಷ್ಟು ಕರಣಕುತ್ತ ಲಾಗ ಹಾಕಿರೂ ಜಾತಿ ವ್ಯವಸ್ಥೆ ಅಷ್ಟು ಸುಲಭಲ್ಲಿ ಭಾರತ೦ದ ಅಳಿಸಿ ಹೋಗ, ಹೋಪಲೆ ರಾಜಕಾರಣಿಗಳೂ, ಸಮಯಸಾಧಕರೂ ಬಿಡವು.ಆದಕ್ಕಿ೦ತ ಎಷ್ಟೋ ಸುಲಭಲ್ಲಿ ಪಧ್ಧತಿಗೊ ಅಳಿಸಿಹೋಕು/ ಬದಲಕ್ಕು. ನಮ್ಮ ಬೈಲಿಲ್ಲಿ ಎಲ್ಲಾ ರೀತಿಯ ಜನ೦ಗಳುದೆ ಇದ್ದವು, ಎಲ್ಲಾ ರೀತಿಯ ಜನ೦ಗಳುದೆ ಬೇಕು ಹೇಳ್ತ ಹಾ೦ಗೆ, ಸಮಾಜಲ್ಲಿಯುದೆ ಎಲ್ಲರುದೆ ಬೇಕಲ್ಲದೊ? ಆದರೆ, ಎಲ್ಲರಿ೦ಗುದೆ ಅವರವರದ್ದೇ ಆದ ಬೆಲೆ ಇದ್ದು, ವ್ಯಕ್ತಿತ್ವ ಇದ್ದು, ಅದರ ಎಲ್ಲೋರುದೆ ಪರಸ್ಪರ ಗೌರವಿಸೆಕು ಹೇಳಿ ಅರ್ಥ ಮಾಡಿಯೊ೦ಡರೆ ಸಮಸ್ಯೆಯೇ ಇಲ್ಲೆ. ಆನು ಇನ್ನೊಬ್ಬನಿ೦ದ ಮೇಲು ಅಥವಾ ಕೀಳು ಹೇಳ್ತ ಭಾವನೆ ಹುಟ್ಟಿಗೊ೦ಡರೆ ಸಮಸ್ಯೆಗಳ ಆರ೦ಭ ಹೇಳಿ ಎನ್ನ ಅಭಿಪ್ರಾಯ.
    ಇಲ್ಲಿ ಆನು ಇಪ್ಪ ಊರಿಲ್ಲಿ, ಹಲವು ಜನ ‘ಬ್ರಾಹ್ಮಣಜಾತಿಯ’ ಜವ್ವನಿಗರಿ೦ಗೆ ಮೀನು, ಮಾ೦ಸ ಇಲ್ಲದ್ದೆ ಊಟ ಸೇರುತ್ತಿಲ್ಲೆ, ವಾರ೦ತ್ಯ೦ಗಳಲ್ಲಿ ಮದ್ಯಾಭಿಷೇಕ ಮಾಡಿಯೊ೦ಡು ಅದರ ಸಮರ್ಥನೆಯೂ ಮಾಡುವಗ ನಮ್ಮ ತಲೆಮಾರು ಎಲ್ಲಿಗೆ ಹೋವ್ತಾ ಇದ್ದು? ನಮ್ಮ ಮು೦ದಿನ ತಲೆಮಾರಿ೦ಗೆ ನಾವು ತೋರಿಸಿಕೊಡ್ತ ಆದರ್ಶ ಎ೦ತರ ಹೇಳಿ ಯೇಚನೆ ಆವ್ತು.., ಸ೦ಕಟ ಆವ್ತು. ಇದರ ಓದುತ್ತವಕ್ಕೆ ‘ಬಾಲಿಶ’ ಹೇಳಿ ತೋರಿದರೂ, ಇ೦ತಹ ಪರಿಸ್ಥಿತಿಗಳಲ್ಲಿ ಎಷ್ಟೋ ಸರ್ತಿ ಅವರ ತಿದ್ದಲೆ ಎನ್ನ ಶಕ್ತಿಮೀರಿ ಪ್ರಯತ್ನಿಸುವದು, ವಿಫಲ ಅಪ್ಪಗ ಎನ್ನ ರೂಮಿನ ಒಳ ಇಪ್ಪ ದೇವರ ಪಟದ ಎದುರು ನೆಣೆ ಹೊತ್ತಿಸಿ ಕೈ ಮುಗುದು ದೇವರ ಹತ್ರೆ ಪ್ರಾರ್ಥಿಸಿಯೊ೦ಬದು ಇದ್ದು.. 🙁 ಜನ್ಮತಃ ಇತರ ಜಾತಿಲಿ ಇಪ್ಪ ಹಲವು ಜವ್ವನಿಗರು ಸಸ್ಯಾಹಾರ, ಸಾತ್ವಿಕ ಜೀವನ ನಡೆಶುವದು, ಪುರಾಣ, ವೇದ, ಸ೦ಸ್ಕೃತ ಇತ್ಯಾದಿಗಳ ಸ್ವತಃ ಓದಿ ಕಲಿವಲೆ ಪ್ರಯತ್ನಿಸುವದು, ಎಲ್ಲ ನೋಡುವಗ ಮನಸ್ಸಿ೦ಗೆ ಚೂರಾದರೂ ಸಮಾಧಾನ ಸಿಕ್ಕುತ್ತು.

    ಮಹೇಶಣ್ಣ ಹೇಳಿದ ಹಾ೦ಗೆ ಜಾತಿ ವ್ಯವಸ್ಥೆಯ ಪ್ರಾಯೋಗಿಕತೆಯ ಪಾತ್ರ ದೊಡ್ಡದೇ.

    1. ಗಣೇಶಬಾವಾ..
      ನಿಂಗಳ ಒಪ್ಪ ಕಂಡು ಕೊಶೀಯೂ ಬೇಜಾರವೂ ಆತು.

      ಅಪ್ಪಡ, ಪೇಟೆಲಿ ಸುಮಾರು ಜೆನ ನಮ್ಮೋರು ಬೇಲಿ ದಾಂಟಿದ್ದವಡ.
      ತೋಟ ಮಡಗಿದ ಮೇಗೆ ಬೇಲಿ ಹಾಕುತ್ಸೋ? ತೋಟ ಮಡಗುತ್ತ ಮದಲೇ ಬೇಲಿ ಹಾಕುತ್ಸೋ?
      ಅದಕ್ಕೇ ಅನಾದಿಂದಲೇ ಜಾತಿ ವೆವಸ್ತೆ ಇಪ್ಪದು.

      ಅಲ್ಲದೋ? ಎಂತ ಹೇಳ್ತಿ?

  14. ಪದ್ದತಿ ಇರಲಿ, ಜಾತಿೂ ಬೇಕಾರೆ ಇರಲಿ, ಆದರೆ ಜಾತಿ ಬೇಧ ಇಪ್ಪದು ಬೇಡ.

  15. ಜಾತ್ರೆಗೆ ಹೋಗದ್ದವಕ್ಕು ಕೂಡಾ, ಹೋದ ಅನುಭವ ಕೊಡ್ತ ಹಾಂಗೆ ಬರದ್ದು ಲಾಯಿಕ ಆಯಿದು. ಹಲವಾರು ವರ್ಷ ಮೊದಲೇ ಅಲ್ಲಿ ಒಂದು management system ಇತ್ತಿದ್ದು ಹೇಳಿ ಗೊಂತಾವ್ತು. ಯಾವುದೇ ಕಾರ್ಯಕ್ರಮ ಮಾಡೆಕ್ಕಾರೆ, ಜವಾಬ್ದಾರಿಯ ಹಂಚೆಕ್ಕಾವುತ್ತು. ಅದರ ತುಂಬಾ ಚೆಂದಕೆ ಮೊದಲಾಣವು ಮಾಡಿ ಮಡುಗಿದ್ದವು. ಅದು ಸರಿಯಾಗಿ ಈಗಲೂ ನಡೆತ್ತಾ ಇದ್ದು. ಅಲ್ಲಿ ಕೆಲಸ ಮಾಡುವವಕ್ಕೆ ಅದು ದೇವರಿಂಗೆ ತಾನು ಮಾಡುವ ಸೇವೆ ಹೇಳ್ತ ಮನೋಭಾವ ಇದ್ದೇ ಹೊರತು, ಎನಗೆ ಆ ಜಾತಿ ಆದ ಕಾರಣ ಆ ಕೆಲಸ ಕೊಟ್ಟಿದವು ಹೇಳ್ತ ಭಾವನೆ ಇಲ್ಲೆ. ಕಣ್ಯಾರ ದೇವಸ್ಥಾನಲ್ಲಿ ನಿತ್ಯ ಕಾರ್ಯಕ್ರಮ ಕೂಡಾ ಇದೇ ಪದ್ಧತಿಲಿ ನೆಡಕ್ಕೊಂಡು ಬತ್ತಾ ಇದ್ದು.
    ಈ ಲೇಖನ ಓದಿ ಅಪ್ಪಗ ಹಳೆ ನೆನಪುಗೊ ಸುಮಾರು ಬತ್ತು.
    ಕೊಡಿ ದಿನ ಇರುಳಾಣ ರಂಗ ಪೂಜೆ ಭಾರೀ ವಿಶೇಷ. ಸ್ವರ್ಣಾಲಂಕಾರ, ಪುಷ್ಪಾಲಂಕಾರ ಮಾಡಿದ ದೇವರಿಂಗೆ ಮಾಡುವ ಈ ಪೂಜೆ ನೋಡ್ಲೆ ಎರಡು ಕಣ್ಣು ಸಾಲ.
    ಕೊಡಿ ಕಳುದ ಮತ್ತಾಣ ದಿನದ ಇರುಳಾಣ ಆಯನಕ್ಕೆ ಒಂದೊದ್ದು ಜಾತ್ರೆ (ಸಣ್ಣ ದೀಪ) ಹೇಳುಗು. ಹೆಚ್ಚು ಬಲಿ ಸುತ್ತು ಇಲ್ಲೆ. ಬೇಗ ಮುಗಿತ್ತುದೆ
    ಅದರ ಮರುದಿನದ ಜಾತ್ರೆಗೆ ಎರಡೊದ್ದು ಜಾತ್ರೆ (ನಡು ದೀಪ) ಹೇಳುಗು. ಜಾತ್ರೆ ಗೌಜಿ ಇರ್ತು. ಜೆನಂಗಳೂ ತುಂಬ ಸೇರುತ್ತವು. ದೇವರ ಹೊತ್ತುಗೊಂಡು ಬಲಿ ತುಂಬಾ ಹೊತ್ತು ಇರ್ತು. ಬೇರೆ ಬೇರೆ ನಮೂನೆಯ ಸುತ್ತುಗೊ ಆಗಿ ನೋಡ್ಲೆ ತುಂಬಾ ಕೊಶಿ ಕೊಡ್ತು. ಚಕ್ರ ಸುತ್ತು, ಓಡ ಬಲಿ ವಿಶೇಷವೇ ಸರಿ. ಮೊದಲಿಂಗೆ ಬಾಬು ಅಡಿಗಳು ದೇವರ ಹೊತ್ತು ನರ್ತನ ಮಾಡುವದರಲ್ಲಿ ಎತ್ತಿದ ಕೈ. ಹೆಚ್ಚಿನ ದೇವಸ್ಥಾನದವು ಅವರನ್ನೇ ದೆನುಗೊಳುಗು. ಅಷ್ಟು ಚೆಂದಕೆ ದೇವರ ಬಲಿ ನಡೆಶಿಕೊಡುಗು.
    ಕುಂಬಳೆ ಬೆಡಿ ಹೇಳಿರೆ ತುಂಬಾ ಪ್ರಸಿದ್ಧಿ. ಈ ಊರಿನವು ಎಲ್ಲಿ ಇದ್ದರೂ ಬಂದು ಸೇರುತ್ತ ದಿನ. ಈ ವರ್ಷ 2.5 ಲಕ್ಷ ರೂಪಾಯಿ ಬೆಡಿಗೆ ಹೇಳಿ ಸಂಗ್ರಹ ಆಯಿದಡ.
    ಬೆಡಿ ಮರುದಿನ, ಆರಾಟ. ಇರುಳು ದೇವಸ್ಥಾನಲ್ಲಿ ಸಣ್ಣಕೆ ಬಲಿ ಆಗಿ, ಅವಭೃತ ಸ್ನಾನ ಕ್ಕೆ ಶೇಡಿಗುಮ್ಮೆಗೆ ಹೋಕು. ಎಂಗಳ ಅಜ್ಜನ ಮನೆಯವರ ತೋಟಲ್ಲಿ ಒಂದು ದೇವರ ಕಟ್ಟೆ. ಅಲ್ಲಿ ಪೂಜೆ ಆಗಿ, ಅಲ್ಲೇ ಕೆಳ ಇಪ್ಪ ಕೆರೆಲಿ ದೇವರ ಮೀಯಾಣ.
    ದೇವರು ಹೋಪ ದಾರಿಲಿ, ಅದದು ಜಾಗೆಯ ಯಜಮಾನಕ್ಕೊ, ಅಲಂಕಾರ ಮಾಡುಗು, ಕಟ್ಟೆ ಪೂಜೆ ವೆವಸ್ಥೆಯೂ ಮಾಡುಗು. ಬ್ಯಾರಿಗಳ ಒಳಚ್ಚಾಲು ಹೊಕ್ಕು ಹೆರಡುತ್ತಲ್ಲಿ ಅವು ಕೂಡಾ ಕರೆಂಟಿನ ದೀಪ, ಮಾವಿನ ತೋರಣ ಹಾಕಿ ಅಲಂಕಾರ ಮಾಡುಗು.
    ಶೇಡಿಗುಮ್ಮೆ ಕೆರೆಲಿ ಸ್ನಾನ ಆಗಿ, ದೇವಸ್ಥಾನಕ್ಕೆ ಬಂದು, ಧ್ವಜ ಅವರೋಹಣ, ಪ್ರಸಾದ ವಿತರಣೆ ಕಾರ್ಯಕ್ರಮಂಗೊ.
    ಐದು ದಿನವೂದೆ ವಿಶೇಷವೇ. ದೇವಸ್ಥಾನಲ್ಲಿ ವಿಶೇಷ ಪೂಜೆಗೊ, ಸಾಂಸ್ಕೃತಿಕ ಕಾರ್ಯಕ್ರಮಂಗೊ ನಡೆತ್ತಾ ಇರ್ತು. ಗ್ರಾಮದ ಮನೆಗಳಲ್ಲಿ ಜಾತ್ರೆ ನೋಡ್ಲೆ ಹೇಳಿ ಸಂಬಂಧಿಕರು ಇದ್ದುಗೊಂಡು ಹಬ್ಬದ ವಾತಾವರಣ. ಮಕ್ಕೊಗೆ ಸಂತೆಲಿ ಕಂಡದರ ಕ್ರಯ ಮಾಡುವ ಗೌಜಿ ಅದರೆ ದೊಡ್ಡವು ಕೊಂಕಣಿ ಅಂಗಡಿಂದ ಕಡ್ಲೆ ಮಿಠಾಯಿ, ಶೆಟ್ಟಿ ಅಂಗಡಿಂದ ಖರ್ಜೂರ ತೆಕ್ಕೊಂಡು ಮನೆಗೆ ಹೋಕು.
    ಎಲ್ಲವನ್ನೂ ನೆನಪಿಂಗೆ ತಂದು ಕೊಟ್ಟ ಒಪ್ಪಣ್ಣಂಗೆ ಧನ್ಯವಾದಂಗೊ

    1. ಜಾತ್ರೆಯ ಆಂತರ್ಯದ ವಿಚಾರಂಗಳ ಒಪ್ಪಲ್ಲಿ ಸವಿವರವಾಗ ತಿಳುಶಿದ್ದಿ ಶರ್ಮಪ್ಪಚ್ಚೀ..
      ಹಳಬ್ಬರ ಗುರಿಕ್ಕಾರ್ತಿಕೆಯ ಕಂಡು ತಿಳುಶಿದ್ದು ಒಪ್ಪಣ್ಣಂಗೆ ತುಂಬಾ ಕೊಶೀ ಆತು.

      ಹರೇರಾಮ..

  16. ಲೇಖನ ಭಾರಿ ಲಾಯ್ಕ ಆಯಿದು. ಲೇಖನ ಓದಿದವಕ್ಕೆ ಕುಂಬ್ಳೆ ಜಾತ್ರೆಯ ಕಣ್ಣಾರೆ ನೋಡಿದ ಅನುಭವ ಅಕ್ಕು.

    1. ಪ್ರಶಾಂತಣ್ಣೋ..
      ಕುಂಬ್ಳೆಜಾತ್ರಗೆ ಹೋಪಲಾಯಿದೋ ಈ ಸರ್ತಿ?
      ಬೇರೆ ಅಂಬೆರ್ಪು ಎಂತಾರು ಇತ್ತೋ?

      1. ಹೋಪಲೆ ಆಯಿದಿಲ್ಲೆ. ಲೇಖನ ಓದಿಯಪ್ಪಗ ಹೋದ ಹಾಂಗೆ ಆತು.

  17. ಒಪ್ಪಣ್ಣೋ ಕು೦ಬ್ಳೆ ಜಾತ್ರೆ ಬಗ್ಯೆ ಒಳ್ಳೆ ವಿವರಣೆ ಕೊಟ್ಟಿದೆ.ಹಿ೦ದಾಣವು ಜಾತಿ ಪದ್ದತಿ ಹುಟ್ಟಿನ ಮೇಲ೦ದ ಮಾಡಿತ್ತಿದ್ದವಿಲ್ಲೆ ಕೆಲಸದ ಮೇಲಿ೦ದ ಮಾಡಿತ್ತಿದ್ದವು ಕ್ರಮೇಣ ಅದು ಹುಟ್ಟಿನ ಮೇಲ೦ಗೆ ತಿರುಗಿತ್ತು.ಅ೦ದು ಕೆಲಸ೦ಗೊ ಹಾ೦ಗಾಗಿ ವ್ಯವಸ್ತಿತವಾಗಿ ಹೋಗಿಯೊ೦ಡಿತ್ತು.ಕೆಲಸಲ್ಲಿ ಗೊ೦ದಲ ಇಲ್ಲೆ ಯಾವ ಕೆಲಸ ಆರು ಹೇಳುವದು ಪೂರ್ವ ನಿರ್ದರಿತ ಮು೦ದೆ ಮೇಲು ಕೀಳು ಹೇಳಿ ಸುರುವಾಗಿಯಪ್ಪಗ ತೊ೦ದರಗೊ ಸುರುವಾತು.ಇನ್ನು ಕು೦ಞಿಪಕ್ಕಿ ಮ೦ತ್ರಿ ಆಗಿ ಇತ್ತಿಲ್ಲೆ ಅದು ತು೦ಬಾ ಬಲ ಶಾಲಿ ಆಗಿ ಇತ್ತಡ ಕೈಲಿಯೇ ತೊ೦ಗಿನ ಕಾಯೀ೦ದ ಎಣ್ಣೆ ಹಿ೦ಡಿ ತೆಗಗಾಡ.ಮತ್ತೆ ಹಳೇ ಕಾಲಲ್ಲಿ ಅದರ ಪೂರ್ವಜರು ದೇವಸ್ಥಾನಲ್ಲಿ ಅದಿಕಾರ ಹೊ೦ದಿದ ಬ್ರಾಹ್ಮಣರಾಗಿತ್ತಿದ್ದವು ಕಾರಣ೦ತರ೦ದ ಅವ್ವು ಬ್ಯಾರಿಗೊ ಆಗಿ ಮತಾ೦ತರ ಆಗಿಯಪ್ಪಗಳೂ ಸ೦ಪ್ರದಾಯ ಬಿಡದ್ದೆ ಪ್ರಸಾದಕ್ಕೆ ಬ೦ದೊ೦ಡಿತ್ತಿದ್ದವು ಅವಕ್ಕೆ ಪ್ರಸಾದ ಸ೦ದೊ೦ಡಿತ್ತು.ಹಿ೦ದೆ ಎಲ್ಲಾ ರಾಜ೦ಗೊ ಅವಕ್ಕೆ ಕೊಶಿ ಆದರೆ ಬೇಕಾದ ಹಾ೦ಗೆ ಸ೦ಪ್ರದಾಯವ ತಿದ್ದಿಯೊ೦ಡಿತ್ತಿದ್ದವು ಬಾಕಿದ್ದವು ಎದುರುಸಿಯೊ೦ಡಿತ್ತಿದ್ದವಿಲ್ಲೆ(.ಆನು ಹಿ೦ದೆ ಒ೦ದಾರಿ ಹೇಳಿದ ಹಾ೦ಗೆ ಈಗ ನಿ೦ಗೊ ಕು೦ಬ್ಳಗೆ ಹೋಗಿ ನೋಡಿ ಪ್ಲಾಸ್ಟಿಕ್ಕಿಲ್ಲಿ ಇಡೀ ಪೇಟೆ ಮು೦ಗಿಕ್ಕು.)ಹಿ೦ದೆ ಈ ಜಾತ್ರಗೆ ಮಾಯಿಪ್ಪಡಿ೦ದ ರಾಜ೦ ಪರಿವಾರ ಸಮೇತ ಬತ್ತ ಕ್ರಮ ಇತ್ತು ಅವರ ಬೇ೦ಡು ಬಾಜ ಬಜ೦ತ್ರಿ ಹೇಳಿ ಎಲ್ಲಾ ಕ್ರಮ ಪ್ರಕಾರ ಎದುರು ಗೊಳ್ಳೇಕಿತ್ತು.ಇದು ಹೆಚ್ಹು ಕಡಮ್ಮೆ ಅರುವತ್ತರ ದಶಕ ವರೇ೦ಗೂ ಇತ್ತು.ಮು೦ದೆ ಈ ಹಿ೦ದಾಣ ರಾಜ೦ ಅದರಲ್ಲಿ ಆಸಕ್ತಿ ಕಳಕ್ಕೊ೦ಡಕಾರಣ ಅದು ನಿ೦ದು ಹೋತು.ಅಯ್ಯಯ್ಯೋ ಬರದೂ ಬರದು ಸುಮಾರು ಉದ್ದ ಆಗಿ ಹೋತಾನೆ ಇಲ್ಲಿಗೆ ನಿಲ್ಲುಸುವೊ೦.ಒಪ್ಪ೦ಗಳೊಟ್ಟಿ೦ಗೆ

    1. ಮೋಹನಮಾವಂಗೆ ನಮಸ್ಕಾರಂಗೊ!
      ಕುಂಞಿಪ್ಪಕ್ಕಯ ಬಗ್ಗೆ ವಿಶೇಷವಾದ ವಿಚಾರ ತಿಳುಸಿ ಒಪ್ಪಣ್ಣ ನ ಕುತೂಹಲ ಹೆಚ್ಚುಮಾಡಿದಿ.

      ಒಂದರಿ ಬೈಲಿಂಗೆ ಸವಿವರವಾಗಿ ತಿಳುಶುತ್ತಿರೋ ಅದರ/ಅಂತವರ ಬಗ್ಗೆ?
      { ಅಯ್ಯಯ್ಯೋ ಬರದೂ ಬರದು ಸುಮಾರು ಉದ್ದ ಆಗಿ ಹೋತಾನೆ ಇಲ್ಲಿಗೆ ನಿಲ್ಲುಸುವೊ }
      ಅಂತಾ ಅಂಬೆರ್ಪು ಎಂತ್ಸೂ ಮಾಡೆಡಿ ಮಾವ, ಬರೆತ್ತಷ್ಟು ಬರೆಯಿ, ಓದಲೆ ಎಂಗೊ ಇದ್ದೆಯಲ್ಲದೋ.. ? 🙂

  18. ಕಣ್ಯಾರ ಜಾತ್ರೆಗೆ ಇಂದಿಂಗೋರೇಗೆ ಹೋಪ ಅವಕಾಶ ಸಿಕ್ಕದ್ರೂ , ಕಣ್ಣಿಂಗೆ ಕಟ್ಸಿದಷ್ಟು ಚೆಂದಕ್ಕೆ ಒಪ್ಪಣ್ಣ ವಿವರಣೆ ಕೊಟ್ಟದರಲ್ಲಿ ಜಾತ್ರೆಲಿಯೇ ಇದ್ದ ಅನುಭವ ಆತು.. ಹಂತ ಹಂತವಾಗಿ ಪ್ರತಿಯೊಂದು ವಿಷಯವನ್ನೂ ವಿವರ್ಸಿದ ರೀತಿಗೆ ನಮೋನ್ನಮಃ.. ಆ ಚೆಂಡೆ ಪೆಟ್ಟು, ಚಕ್ರತಾಳದ ಶಬ್ದ ಎಲ್ಲ ಕೇಳುವ ಕೊಶಿಯೇ ಬೇರೆ..
    ಜಾತ್ರೆಯ ನಡುವೆ ನಮ್ಮ ವರ್ಣಾಶ್ರಮ ಪದ್ದತಿಯ ಬಗ್ಗೆ ಬೆಳಕು ಚೆಲ್ಲಿದ ರೀತಿ ತುಂಬಾ ಇಷ್ಟ ಆತು.. ಎಲ್ಲಾ ನಮೂನೆಯ ಕಲೆಗೊ, ಎಲ್ಲಾ ನಮೂನೆಯ ವೃತ್ತಿಗೋ ಬೆಳೇಕ್ಕು ಹೇಳ್ತ ದೃಷ್ಟಿಂದಲೇ ಅಲ್ಲದಾ ಜಾತಿ ಪದ್ದತಿ ಹುಟ್ಟಿದ್ದು.. ಆದರೆ ಇಂದು ಮಾತ್ರ ನೋಡ್ತ ಜೆನಂಗಳ ದೃಷ್ಟಿ ರಾಜಕೀಯದೋರ ಪ್ರಭಾವಂದಾಗಿ ಹಾಳಾಯ್ದು ಅಷ್ಟೆ. ನೀ ಹೇಳಿದಾಂಗೆ ನಮ್ಮದು ಜಾತ್ಯಾತೀತ ಸರ್ಕಾರ, ಆದರೆ ಸರ್ಕಾರಕ್ಕೆ ಸಂಬಂದಪಟ್ಟ ಯಾವುದೇ ಅರ್ಜಿ ತುಂಬ್ಸೆಕ್ಕಾರುದೆ ಅದರ್ಲಿ ಜಾತಿಯ ಕಾಲಂ ಇದ್ದೇ ಇರ್ತು ಹೇಳ್ತದು ವಿಪರ್ಯಾಸ! ದೌರ್ಭಾಗ್ಯ ಕೂಡ.. ಹಿಂದುಳಿದೋರಿಂಗೆ ಮೀಸಲಾತಿ ಕೊಟ್ರೆ ಅವು ಮುಂದೆ ಬಪ್ಪದು ಏವತ್ತು! ಅದಕ್ಕೇ ಬೌಷ ಇಂದು ಹಲವಾರು ಜಾತಿಗಳ ನಾಯಕರುಗೋ, ಹಿಂದುಳಿದೋರ ಪಟ್ಟಿಗೆ ಎಂಗಳನ್ನೂ ಸೇರ್ಸಿ, ಎಂಗಳುದೆ ಎಡಿಗಾಷ್ಟು ಹಿಂದುಳಿದೋರಾಗಿ ಸರ್ಕಾರಿ ಸವಲತ್ತುಗಳ ಪಡ್ಕೊಳ್ತೆಯ ಹೇಳುವ ಮಟ್ಟಕ್ಕಿಳುದ್ದವು! ಏವತ್ತು ನಮ್ಮ ದೇಶಲ್ಲಿ ಜಾತಿಪದ್ದತಿಯ ನಿಜವಾದ ಪ್ರಾಮುಖ್ಯತೆ ಜೆನಂಗೊಕ್ಕೆ ಗೊಂತಾವ್ತು ಹೇಳುದರ ಕಣ್ಯಾರದ ಕಿಟ್ಟಚಾಮಿಯೇ ಹೇಳೆಕ್ಕಷ್ಟೆ!
    ಒಟ್ಟಿನಮೇಲೆ, ಸುಂದರ ಬರಹ, ಒಟ್ಟಿಂಗೆ ಚಿಂತನೆಗೆ ಹಚ್ಚುವ ವಿಶಯವ ಸೇರ್ಸಿದ್ದೆ! ಹಿಂಗಿಪ್ಪ ಲೇಖನಂಗ ಇನ್ನುದೆ ಬರಳಿ,.
    ಹರೇರಾಮ! 🙂

    1. ಬಲ್ನಾಡುಮಾಣೀ..
      ಒಪ್ಪವಾದ ಒಪ್ಪ ಬರದೆ, ಕೊಶೀ ಆತು.

      ಕಣ್ಯಾರದ ಕಿಟ್ಟಚಾಮಿ ಎಲ್ಲೋರಿಂಗೂ ಒಳ್ಳೆದುಮಾಡ್ಳಿ..

  19. ಕುಂಬ್ಳೆ ಜಾತ್ರೆ ನೋಡಿ ತುಂಬ ಖುಷಿ ಆತು. ಆನು ಸಣ್ಣಗಿಪ್ಪಗ ಎಡನೀರ್, ಕುಂತಿಕಾನ, ಕೊಳ್ಯುರ್, ಕುಮಾರಮಂಗಲ, ಮಧೂರು, ಪುತ್ತೂರು, ಹತ್ತು ಊರಿನ ಜಾತ್ರೆ ನೋಡುವ ಭಾಗ್ಯ ಸಿಕ್ಕಿತ್ತು. ಈವಾಗ ಅವಕಾಶ ಕಮ್ಮಿ. ಆವಕಾಷ ಮಾಡಿಕೊತ್ತದಕ್ಕೆ ಧನ್ಯವದಂಗೋ

    1. ಸಿದ್ಧನಕೆರೆಬಾವಂಗೆ ನಮಸ್ಕಾರ!
      ಊರ ಜಾತ್ರೆಯ ನೆಂಪುಮಾಡಿಗೊಂಡು ಒಪ್ಪ ಕೊಟ್ಟು, ಶುದ್ದಿಯ ಚೆಂದವ ಹೆಚ್ಚುಸಿದ ನಿಂಗೊಗೆ ವಂದನೆಗೊ..

  20. ಒಪ್ಪಣ್ಣೊ!
    🙂 ಪೆಟ್ರೋಲಿ೦ಗೆ ಕ್ರಯ ಹೆಚ್ಚಾತು ಹೇಳಿ ಈ ವಿಶಯ ಹೇಳಿದ್ದದೊ? ಅದರಷ್ಟೇ ಅಗತ್ಯದ್ದೇ ಇದುದೆ!

    {ಆಭರಿಸಿದ}
    ಹೊಸ ಪ್ರಯೋಗದ ಹಾ೦ಗೆ ಕ೦ಡತ್ತು!

    ಜಾತಿ ಹೇಳುವದು ಪ್ರತ್ಯೇಕತೆಯ/ವಿಶಿಷ್ಟತೆಯ ಉಳುಸಿಗೊ೦ಬಲಿಪ್ಪ ವ್ಯವಸ್ಥೆ. ಯಾವುದೇ ಪ್ರತ್ಯೇಕತೆಯುದೆ ಸಮಾಜ೦ದ ನಮ್ಮ ತೀರಾ ಬೇರೆ ಮಾಡುವಷ್ಟು ಅಪ್ಪಲಾಗ. ಹಾ೦ಗಾಗಿ ಒ೦ದು ‘ಪದ್ಧತಿ’ಲ್ಲಿಪ್ಪ ಜಾತಿ ಬೇಕು ಹೇಳಿ ನವಗನುಸುತ್ತು.
    ಅದರ ಯಾವ್ಯಾವ ಸ೦ದರ್ಭಲ್ಲಿ ಎಲ್ಲಿಯವರೆಗೆ ಎಶ್ಟರವರೆಗೆ ಹೇ೦ಗೆ ವಿರೋಧ ಬಾರದ್ದ ಹಾ೦ಗೆ ಅದರ ಅನುಸರಿಸೆಕು (ಪ್ರೇಕ್ಟಿಕಲ್ ಆಗಿ) ಹೇಳುವದರಲ್ಲಿ ನವಗೆ ಗೊ೦ದಲ ಇದ್ದು.
    ಉದಾಹರಣೆಗೆ.. ವೈವಾಹಿಕ ಸ೦ಬ೦ಧಲ್ಲಿ, ಸಹಪ೦ಕ್ತಿ ಭೋಜನಲ್ಲಿ, ದೇವಸ್ಥಾನ ಪ್ರವೇಶಲ್ಲಿ, ಧಾರ್ಮಿಕ ಕಾರ್ಯ೦ಗಳಲ್ಲಿ ಭಾಗವಹಿಸುವಿಕೆಲ್ಲಿ (ಸಾರ್ವಜನಿಕ ಮತ್ತೆ ಕೌಟು೦ಬಿಕ), ಮನೆಗೆ ಬಪ್ಪಲೆ ಹೇಳುವದರಲ್ಲಿ, ಕೆಲವು ಕೆಲಸ/ವೃತ್ತಿಗಳ ಆಯ್ಕೆಲ್ಲಿ….

    1. { ಆಭರಿಸಿದ –
      ಹೊಸ ಪ್ರಯೋಗದ ಹಾ೦ಗೆ ಕ೦ಡತ್ತು!}
      ವಾಹ್! ಎಂತ ಸೂಕ್ಷ್ಮತೆಯ ಗಮನ, ಡಾಮಹೇಶಣ್ಣಂದು.
      ಅಂತೇ ಅಲ್ಲ, ನಿಂಗೊ ಡಾ ಆದ್ದು!

      ಶುದ್ದಿ ಹೇಳ್ತ ಮುನ್ನಾದಿನ ಮಾಷ್ಟ್ರುಮಾವನತ್ರೆ ಪ್ರತ್ಯೇಕವಾಗಿ ವಿಚಾರುಸಿದೆ, ಹೀಂಗೆ ಹೇಳಿರೆ ತಪ್ಪಕ್ಕೋ – ಹೇಳಿಗೊಂಡು.
      ಪೋನಿಸುವುದು, ಟೈಪಿಸುವುದು – ಹೇಳ್ತವಡ, ಆಭರಿಸಿದ ಹೇಳಿರೆ ಅಷ್ಟು ದೊಡ್ಡ ತಪ್ಪಾಗ ಹೇಳಿ ನೆಗೆಮಾಡಿದವು!
      ಕೊಶಿ ಆತು ನಿಂಗಳ ಗಮನ ಕಂಡು.
      ಒಳ್ಳೆ ಒಪ್ಪಕ್ಕೆ ವಂದನೆಗೊ.

    1. ಪಕಳಕುಂಜ ಮಾವಂಗೆ ನಮಸ್ಕಾರಂಗೊ..

      ನಿಂಗೊ ಬೈಲಿಂಗೆ ಬಂದದರ ಕಂಡು ಒಪ್ಪಣ್ಣಂಗೆ ಕೊಶಿ ಆತು..
      ನಿಂಗೊಗೆ ಜಾತ್ರೆಯ ಅನುಭವ ಸಿಕ್ಕಿದ್ದರ ನೋಡಿ ಇನ್ನೂ ಇನ್ನೂ ಕೊಶಿ ಆತು… 🙂
      ಹರೇರಾಮ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×