Oppanna.com

ಮನಸ್ಸಿನ ಕೈಲಾಸಕ್ಕೆ ಜೋಡುಸಲೆ ಕೈಲಾಸ ಮಾನಸ ಯಾತ್ರೆ

ಬರದೋರು :   ಒಪ್ಪಣ್ಣ    on   14/06/2013    11 ಒಪ್ಪಂಗೊ

ಎಡಪ್ಪಾಡಿ ಭಾವ ಓ ಮೊನ್ನೆ ಅಂಬರ್ಪಿಲಿ ಬಂದೋನು ಸಿಕ್ಕಿದ್ದದು ಬರೇ ಅರ್ಧವೇ ಗಂಟೆಗೆ.
ಟೀಕೆಪಿ ಭಾವನಲ್ಲಿ ಹಪ್ಪಳ ಯಥೇಷ್ಠ ಇದ್ದು – ಹೇದು ಗೊಂತಾದ ಕಾರಣ ಒಂದು ಕಟ್ಟ ತೆಕ್ಕೊಂಡು ಹೋಪಲೆ ಹೇದು ಊರಿಂಗೆ ಬಂದ್ಸು.
ಕಟ್ಟ ಚೀಲಕ್ಕೆ ತುಂಬುಸಿದ ಮತ್ತೆ ಊರಿಲಿ ಎಂತ ಕೆಲಸ ಅಲ್ಲದೊ?! ಹಾಂಗೆ ಒಪಾಸು ಹೆರಡ್ತ ಗೌಜಿಲಿಪ್ಪಾಗ ಒಪ್ಪಣ್ಣ ಅವರ ಮನೆಗೆತ್ತಿದ್ದು ಸರೀ ಆತು.
ಮಾತಾಡುವಾಗ ಎಡಕ್ಕಿಲಿ ಮಠಲ್ಲಿ ಎಲ್ಲ ಆರಾಮವೋ – ಕೇಟೆ.
“ಹ್ಮ್, ಎಲ್ಲ ಆರಾಮ – ಕೈಲಾಸ ಯಾತ್ರೆಯ ಬೆಶಿ ಜೋರಿದ್ದು ಮಾಂತ್ರ” ಹೇಳಿದ.
~
ಶ್ರೀಗುರುಗೊ ಪಟ್ಟದ ದೇವರ ಒಟ್ಟಿಂಗೇ ಕೈಲಾಸ ಪರಿಕ್ರಮ, ಮಾನಸ ಸರೋವರ ಯಾತ್ರೆಯ ಹಮ್ಮಿಗೊಂಡಿದವಾಡ.
ಶ್ರೀ ಪರಿವಾರ ಅಣ್ಣಂದ್ರು, ಶ್ರೀ ಶಿಷ್ಯವೃಂದದ ಅಣ್ಣಂದ್ರು, ಅಕ್ಕಂದ್ರು, ಅಪ್ಪಚ್ಚಿ-ಮಾವಂದ್ರು ಹಲವೂ ಶಿಷ್ಯರುಗೊ ಈ ಕಾರ್ಯಲ್ಲಿ ಗುರುಗಳ ಸೇರಿಗೊಳ್ತವಾಡ.
ಅವು ಇವು ಹೇಳಿ ಏನಿಲ್ಲೆ, ಆರು ಬೇಕಾರೂ ಸೇರಿಗೊಂಬಲಕ್ಕಾಡ- ಇದೇ ಈಗ ಮಠಲ್ಲಿ ದೊಡ್ಡ ಶುದ್ದಿ ಆಡ.
ನೀನು ಹೋವುತ್ತೆಯೋ, ನೀನು ಹೋಪಲಿದ್ದೋ – ಹೇದು ಅತ್ತಿತ್ತೆ ಎಲ್ಲೋರುದೇ ಕೇಳಿಗೊಂಡಿತ್ತದು ಕಾಣ್ತಾಡ.

ಬೈಲಿಂದ ಆರು ಹೋವುತ್ತವೋ? ಉಮ್ಮಪ್ಪ.
ಒಪ್ಪಣ್ಣಂಗೆ ಹೋಪಲೆ ಹೇದರೆ ರಜಾ ತಾಪತ್ರೆ – ಮಳೆ ಸುರು ಆಗಿ ಬೀಜದ ಸೆಸಿ ನೆಡ್ಳೆ ಮೋಂಟ° ಬತ್ತೆ ಹೇಳಿದ್ದು.
ಅಲ್ಲದ್ದರೆ ಒಂದು ಕೈ ನೋಡ್ಳಾವುತಿತು! ಅದಿರಳಿ.
~

ಗಣೇಶಮಾವಂಗೆ ಕಂಡ ಕೈಲಾಸ ಪರ್ವತ (ಚಿತ್ರ: ಅಂತರ್ಜಾಲ)
ಗಣೇಶಮಾವಂಗೆ ಕಂಡ ಕೈಲಾಸ ಪರ್ವತ (ಚಿತ್ರ: ಅಂತರ್ಜಾಲ)

ಮೊನ್ನೇಣ ದಿನ ಗುರುಗೊ ಆಶೀರ್ವಚನಲ್ಲಿಯೂ ಕೈಲಾಸ ಯಾತ್ರೆಯ ಬಗ್ಗೆಯೇ ಮಾತಾಡಿದ್ಸಾಡ.
ಕೈಲಾಸ ಯಾತ್ರೆ ಅದರ ಮಹತ್ವ ಎಂತ್ಸರ, ಅಲ್ಲಿಗೆ ಹೋದರೆ ಎಂತಾವುತ್ತು – ಇತ್ಯಾದಿಗಳ ಹೇಳಿದವಾಡ,
ಶಾರದತ್ತೆ ಅದರನ್ನೇ ಒಂದು ಶುದ್ದಿ ಮಾಡಿ ಹರೇರಾಮಲ್ಲಿ ಹೇಳಿಯೂ ಆಯಿದು.
ಅದಿರಳಿ.

ಬೈಲಿನ ಎಲ್ಲೋರುದೇ ಈ ಶುದ್ದಿಯೇ ಮಾತಾಡುವಾಗ, ನಾವುದೇ ಈ ವಾರ ಅದನ್ನೇ ಮಾತಾಡಿರೆಂತ, ಅಲ್ಲದೋ?
~

ಸೃಷ್ಟಿ – ಸ್ಥಿತಿ – ಲಯ ಹೇದು ಮೂರು ಕೆಲಸಂಗಳ ಆ ಆದಿಮಾತೆ ತ್ರಿಮೂರ್ತಿಗೊಕ್ಕೆ ಕೊಟ್ಟವಾಡ.
ಯೇವ ತ್ರಿಮೂರ್ತಿಗೊ? ಬೈಲಿನ ತ್ರಿಮೂರ್ತಿಗೊ ಅಲ್ಲ. ಬೈಲಿನ ತ್ರಿಮೂರ್ತಿಗೊ ಈಗ ಕಾಂಬಲೂ ಅಪುರೂಪ; ಅದಿರಳಿ.
ಇದು ಆ ತ್ರಿಮೂರ್ತಿಗೊ – ಬ್ರಹ್ಮ, ವಿಷ್ಣು, ಮಹೇಶ್ವರ.
ಬ್ರಹ್ಮಂಗೆ ಈ ಜಗತ್ತಿನ ಸೃಷ್ಟಿ ಕುರಿತಾದ ವಿಚಾರಂಗಳ ಜೆಬಾದಾರಿಕೆ.
ಒಂದು ಜೀವಿಯ ಎಲ್ಲಿ, ಹೇಂಗೆ ಸೃಷ್ಟಿಮಾಡೇಕು; ಆ ಜೀವಿಯ ಅಮ್ಮಪ್ಪ ಆರಾಗಿರೇಕು, ಜೀವಿ ಎಂತಾಗಿರೇಕು, ಪ್ರಾರಬ್ಧದ ಪ್ರಭೆ ಎಷ್ಟಿರೇಕು – ಎಲ್ಲವನ್ನುದೇ ಚಿಂತನೆ ಮಾಡಿಗೊಂಡು ಸೃಷ್ಟಿ ಮಾಡ್ತದು ಬ್ರಹ್ಮನ ಕೆಲಸ.
ಹುಟ್ಟುಸಿರೆ ಆತೋ? ಹುಲ್ಲು ಮೇಯಿಸೆಡದೋ?
ಹಾಂಗೆ, ಜೀವಿಗಳ ಜನನ ಆದ ಮತ್ತೆ ಆಜೀವ ಪರ್ಯಂತ ಎಲ್ಲಾ ವಿಷಯವನ್ನುದೇ ನೋಡಿಗೊಳ್ತದು, ಜೀವಿಯ ಸ್ಥಿತಿಯ, ಜೀವನದ ಬಗೆಗೆ ಮೇಲ್ತನಿಖೆ ಮಾಡಿಗೊಂಬದು ವಿಷ್ಣುವಿನ ಕೆಲಸ.
ಹುಟ್ಟಿದ ಜೀವಿಗೊ ಹಾಂಗೇ ಬದ್ಕಿದ್ದರೆ ಅಕ್ಕೋ? ಭೂಲೋಕಲ್ಲಿ ಎಷ್ಟು ಕೋಟಿಕೋಟಿ ಜೀವಿಗೊ ಇರ್ತಿತವು!?
ಅವರ ಜೀವನದ ಸಾರ್ಥಕ್ಯ ಆದ ಕೂಡ್ಳೇ ಅವರ ಇಲ್ಲಿಂದ ಕರಕ್ಕೊಂಡು ಹೋಯೇಕಾದ ಕಾರ್ಯ ಇದ್ದು. ಅದು “ಲಯ”ಕರ್ತನ ಕಾರ್ಯ.

ಆ ಲಯಕರ್ತನೇ ಶಿವ. ಅವನ ಆವಾಸವೇ ಕೈಲಾಸ.
ಹುಟ್ಟಿದ ಎಲ್ಲಾ ಜೀವಿಯೂ ಅವನ ಹತ್ತರಂಗೆ ಹೋವುತ್ತವೋ? ಇಲ್ಲೆ.
ಯೇವದೇ ಜೀವಿಯ ಲಯ ಮಾಡುವಾಗ, ಅವ ಬಂದ ಕಾರ್ಯ ಮುಗಾತೋ – ನೋಡ್ತನಾಡ ಕೈಲಾಸವಾಸಿ.
ಕಾರ್ಯಂಗೊ ಎಲ್ಲವೂ ಮುಗುದಿದ್ದರೆ, ಜೀವನಲ್ಲಿ ಪುಣ್ಯಂಗೊ ತುಂಬಿದ್ದರೆ ಸೀತಾ ಅವನ ಹತ್ತರೆಯೇ ಕರಕ್ಕೊಂಡು ಹೋವುಸ್ಸು.
ಹಾಂಗಲ್ಲದ್ದೇ, ಆತ್ಮಲ್ಲಿ ಪಾಪವೇ ತುಂಬಿದ್ದರೆ – ಪುನಾ ಬ್ರಹ್ಮನ ಕಾಲಬುಡಕ್ಕೆ ಬತ್ತಾಡ, ಮತ್ತೊಂದು ಜೀವಿ ಆಗಿ ಹುಟ್ಟುತ್ತ ಯೋಗಾಯೋಗ.
ನೇರವಾಗಿ ಶಿವನ ಹತ್ತರೆ ಹೋದರೆ ಅದಕ್ಕೇ “ಮೋಕ್ಷ” ಹೇಳುಸ್ಸು.
ಅವಂಗೆ ಮತ್ತೆ ಮರುಜನ್ಮ ಇಲ್ಲೆ – ಹೇಳ್ತು ನಮ್ಮ ಸಂಸ್ಕಾರ.
ಎಲ್ಲಾ ಜೀವಿಯೂ ಮೋಕ್ಷದ ಹೊಡೆಂಗೆ ಹೋಯೇಕು – ಹೇದು ಜ್ಞಾನಿಗೊ ಹೇಳುಗು.
ಹಾಂಗಾಗಿ, ಶಿವನ ವಾಸಸ್ಥಾನ ಆದ ಕೈಲಾಸಲ್ಲಿ ನಮ್ಮ ಹೆರಿಯೋರೂ ನೆಮ್ಮದಿಲಿ ಇದ್ದವು – ಹೇದು ನಂಬಿಕೆ.
~
ಈ ಸಂಗತಿಂದಾಗಿ, ಕೈಲಾಸ ಯಾತ್ರೆಗೆ ಎರಡು ಉದ್ದೇಶ ಇದ್ದು.
ಒಂದನೇದು – ಲಯಕಾರಕ ಶಿವನ ಹತ್ತರೆ ಹೋಗಿ ಪಾಪತ್ವ ತೊಳವಲೆ, ಎರಡ್ಣೇದು – ಹೆರಿಯೋರ ಆಶೀರ್ವಾದ ತೆಕ್ಕೊಂಡು ಪುಣ್ಯದಾರಿಲಿ ನೆಡವಲೆ.
~

ಕೈಲಾಸ ಹೇದರೆ ಒಂದು ದೊಡಾ ಪರ್ವತ. ಹಿಮಾಲಯದ ನೆಡು ಮಧ್ಯಲ್ಲಿ ಬಪ್ಪದು.
ಹಿಮಾಲಯ ಹೇಳಿದ ಮತ್ತೆ ಅಲ್ಲಿ ಮಣ್ಣು ಕಾಂಬಲೆ ಸಿಕ್ಕ. ಒಂದೋ ಕಲ್ಲು, ಅಲ್ಲದ್ದರೆ ಮಂಜು.
ಈ ಕೈಲಾಸವೂ ಹಾಂಗೇ – ಕಲ್ಲಿನ ಪರ್ವತ. ಕುಂಬ್ಳೆ ಕಡಲಿಂದ ತುಂಬ ಎತ್ತರಲ್ಲಿಪ್ಪ ಕಾರಣ – ಏವ ನೆಡು ಬೇಸಗೆ ಆದರೂ ಬೆಶಿಲಿನ ಬೆಶಿ ನಾಟುತ್ತಿಲ್ಲೇಡ.
ಅನಾದಿ ಕಾಲಂದಲೂ ಆ ಕಲ್ಲು ತಂಪಿಗೊಂಡೇ ಇಪ್ಪ ಕಾರಣ ಅದರ ಮೇಗೆ ಒಂದು ಮಂಜಿನ ಟೊಪ್ಪಿಯೂ ಕೂಯಿದು.
ಚಳಿಗಾಲ ಈ ಟೊಪ್ಪಿ ದೊಡ್ಡ ಅಕ್ಕು, ಬೇಸಗೆಲಿ ರಜಾ ಸಣ್ಣ ಅಪ್ಪಲೂ ಸಾಕು.
ಗಾಳಿ, ಬೆಶಿಲು, ಛಳಿ – ಎಂತ ಇದ್ದರೂ – ಕೈಲಾಸ ಪರ್ವತ ಮಾಂತ್ರ ಅಚಲ, ಅಟಲ, ಅಭೇದ್ಯ.
ಸ್ವತಃ ಶಿವನ ಹಾಂಗೇ.
~

ಶಿವ ಆ ಪರ್ವತಲ್ಲೇ ಇಪ್ಪದು ಹೇದು ನಮ್ಮ ನಂಬಿಕೆ.
ಶಿವನ ಒಟ್ಟಿಂಗೇ ಅವನ ಹೆಂಡತ್ತಿ ಪಾರ್ವತಿ. ವಾಹನ ನಂದಿ, ಅವನ ಗಣಂಗೊ.
ಒಟ್ಟಿಂಗೇ ಕೈಲಾಸವಾಸಿ ಕೋಟ್ಯಂತರ ಆತ್ಮಂಗೊ.
ಇದೆಲ್ಲ ತುಂಬಿದ ಪುಣ್ಯ ಸಂಗಮ, ಸ್ವತಃ ಆ ಕೈಲಾಸಕ್ಕೇ ಪ್ರದಕ್ಷಿಣೆ ಬಂದರೆ?! ಎಂತಾ ಪುಣ್ಯ, ಎಂತಾ ಭಾಗ್ಯ.
ಹಾಂಗಾಗಿ ಅಲ್ಲಿಗೆ ಹೋದೋರು ಆ ಪರ್ವತಕ್ಕೆ ಒಂದು ಸುತ್ತು ಬಪ್ಪದಾಡ.
~
ಅದಪ್ಪು, ನೀರು ನೆರಳಿಲ್ಲದ್ದಲ್ಲಿ ಹೋಗಿ ಶಿವ ಕೂಯಿದ ಹೇದು ಗ್ರೇಶಿದಿರೋ?
ಅಲ್ಲ! ಆ ಕೈಲಾಸ ಪರ್ವತದ ಬುಡಲ್ಲೇ, ಶಿವನ ಕಾಲು ತೊಳವಲ್ಲೇ ಮಾನಸ ಸರೋವರ ಇದ್ದು.
ಎಲ್ಲಿ ನೋಡಿರೂ ಮಂಜು, ಗಟ್ಟಿ, ಕಲ್ಲು – ಇದ್ದರೆ, ಇದೊಂದು ದೊಡಾ ಕೆರೆ.
ನೂರಾರು ಎಕ್ರೆ ವಿಸ್ತೀರ್ಣದ ದೊಡಾ ಸರೋವರ. ಶುಭ್ರ ತಿಳಿ ನೀರು – ಅದೂ – ನೀರಿಲ್ಲದ್ದ ಆ ಊರಿಲಿ.
ದೇವರು ಅವನ ಉಪಯೋಗಕ್ಕೂ, ಅವನ ಕಾಂಬಲೆ ಬಪ್ಪೊರ ಉಪಯೋಗಕ್ಕೂ ಆತು ಹೇದು ಸೃಷ್ಟಿ ಮಾಡಿ ಮಡಗಿದ್ದು.
ಆ ಮಾನಸ ಸರೋವರದ ತೀರ್ಥ ಒಂದರಿ ಕುಡುದು, ಮೈಗೆ ಪ್ರೋಕ್ಷಣೆ ಮಾಡಿರೆ ಜೀವಾತ್ಮವೇ ಶುದ್ಧ ಆಗಿ ಬಿಡ್ತಾಡ – ಗಣೇಶಮಾವ ಹೇಳಿಗೊಂಡಿತ್ತಿದ್ದವು.
ಹೇಳಿದಾಂಗೆ, ಗಣೇಶಮಾವ ಎರಡೊರಿಶ ಮದಲೇ ಕೈಲಾಸ-ಮಾನಸ ಯಾತ್ರೆ ಮಾಡಿಗೊಂಡು ಬಯಿಂದವಿದಾ!
~
ಮಾನಸ ಸರೋವರದ ನೀರಿಲಿ ಶುಭ್ರ ಆಗಿ, ಅಲ್ಲಿಂದ ಕೈಲಾಸ ಪರಿಕ್ರಮ.
ಆ ದೊಡಾ ಪರ್ವತಕ್ಕೆ ಒಂದು ಸುತ್ತು ಬಪ್ಪದು.
ಛಳಿ, ಹಶು, ಒರಕ್ಕಿಲ್ಲದ್ದ ದಿನಂಗಳಲ್ಲಿ, ಕಲ್ಲ ರಾಶಿಗಳ ಎಡೆಲಿ ನಾವು ನಮ್ಮೊಳವೇ ಒಬ್ಬಂಟಿ ಆಗಿ, ಏಕಚಿತ್ತಂದ ಅಷ್ಟು ನೆಡೆತ್ತು ಹೇಳುವಾಗಲೇ ಆಂತರ್ಯಲ್ಲೇ ಶಿವ ಸಾಕ್ಷಾತ್ಕಾರ ಆವುತ್ತಾಡ.
ನಮ್ಮ ಚಂಚಲ ಮನಸ್ಸಿನ ಆ ಕೈಲಾಸವಾಸಿ ಶಿವಂಗೆ ಜೋಡುಸಿರೆ ಅದೇ ದೊಡ್ಡ ಸಾಧನೆ.
ಸುತ್ತು ಹೇದರೆ ಹತ್ತು ನಲುವತ್ತು ಮೈಲು ಆವುತ್ತಾಡ; ಮೂರು ದಿನ ಬೇಕಾವುತ್ತಾಡ – ಗಣೇಶಮಾವ ಹೇಳುವಾಗಳೇ ಒಪ್ಪಣ್ಣಂಗೆ ಚಳಿ ಕೂದಿತ್ತಿದ್ದು.
ಅದಿರಳಿ.
~
ವೇದ – ಪುರಾಣ – ಇತಿಹಾಸ ಮೂರರಲ್ಲಿಯೂ ಅದು ಭಾರತದ ಅವಿಭಾಜ್ಯ ಅಂಗ ಆಗಿತ್ತು ನಿಜ.
ಆದರೆ ವರ್ತಮಾನಲ್ಲಿ? ಈಗ ಅದು ಚೀನಾ ದೇಶದ ಅವಿಭಾಜ್ಯ ಅಂಗ!!
ಕೈಲಾಸ ಯಾತ್ರೆ ಹೋಯೇಕಾರೆ ಚಿನಾದ ಅನುಮತಿ ಬೇಕು. ನಮ್ಮ ದೇವರ ಆವಾಸ ಇಪ್ಪದು ಅವರ ದೇಶಲ್ಲಿ.
ನಾವು ಕೈಲಾಸ ಪರ್ವತ ಹೇಳ್ತರೆ, ಅವು ಅದರ ಮಂಜಿನ ಗುಡ್ಡೆ ಹೇಳ್ತವು.
ನಾವು ತೀರ್ಥಯಾತ್ರೆ ಹೇಳ್ತರೆ ಅವು ಪ್ರವಾಸೀ ತಾಣ – ಹೇಳ್ತವು. ನಮ್ಮ ಪಾಸುಪೋರ್ಟು ಕೊಟ್ಟು, ಮೇಗಂದ ಒಂದು ಲಕ್ಷ ಕೊಟ್ರೆ ಒಂದರಿ ಹೋಪಲೆ ಅನುಮತಿ ವೀಸ ಕೊಡ್ತವಾಡ.
ಇದೆಲ್ಲ ಇಲ್ಲದ್ದೆ ಹೋಯೇಕಾರೆ “ಅಖೇರಿಗೇ” ಆತಷ್ಟೆ – ಹೇದು ರಂಗಮಾವ ಒಂದೊಂದರಿ ಬೇಜಾರು ಮಾಡಿಗೊಳ್ತವು.ಛೇ!
ಅದಿರಳಿ.
~

ಹಲವಾರು ಒರಿಶ ಮದಲೇ ನಮ್ಮ ಊರಿನ ಕುಮಾರ ಪರ್ವತ ಯಾತ್ರೆ ಮಾಡಿದ್ದವು ನಮ್ಮ ಗುರುಗೊ.
ಈಗ ಅದೇ ರೀತಿ – ಪುಣ್ಯಪ್ರದವೂ, ಪ್ರೇಕ್ಷಣೀಯವೂ ಆದ ಕೈಲಾಸ ಪರ್ವತವ ಕಂಡು ಸಮಸ್ತ ಶಿಷ್ಯ ಕೋಟಿಯ ಪರವಾಗಿ ಶಿವಾನುಗ್ರಹವ ಒಲುಸಿಗೊಂಡು ಬತ್ತವು.
ಇಂಥಾ ಅಭೂತಪೂರ್ವ ಯಾತ್ರೆಗೆ ನಮ್ಮ ಗುರುಗೊ ತೊಡಗಿದ್ದು ಅಮೋಘ ಸಂಗತಿಯೇ.
ಮಠವೊಂದರಲ್ಲಿ ಮುಖ್ಯಪಟ್ಟ ಸ್ಥಾನ, ಜೆಬಾದಾರಿಕೆ ವಹಿಸಿಗೊಂಡು, ಅದರೊಟ್ಟಿಂಗೇ ರಾಮಾಯಣದ ಹಾಂಗಿರ್ತ ಮಹಾ ಕಾವ್ಯಂಗಳ ವ್ಯವಸಾಯ ಮಾಡಿಗೊಂಡು, ಒಟ್ಟೊಟ್ಟಿಂಗೇ ಮಠದ ಸಮಗ್ರ ಆಡಳಿತವ ನಿರ್ವಹಣೆ ಮಾಡಿಗೊಂಡು, ಅದರೊಟ್ಟಿಂಗೇ ಇಡೀ ಭಾರತ ಪರಿಕ್ರಮ ಮಾಡಿಗೊಂಡು – ಅದರ ಒಟ್ಟಿಂಗೇ ಹೀಂಗಿಪ್ಪ ಅತಿವಿರಳ ಕಾರ್ಯಂಗೊ.
ಅದೆಷ್ಟು ಜೆನ ಪೀಠಾಧಿಪತಿಗೊ ಹೀಂಗಿಪ್ಪ ಯಾತ್ರೆಗೆ ಮನಸ್ಸು ಮಾಡಿದ್ದವು! ಅಲ್ಲದೊ?
ಅಂತಾದ್ದರಲ್ಲಿ ಸಮಾಜ ನಮ್ಮ ಗುರುಗಳ ವಿಶೇಷವಾಗಿ ಗುರುತುಸುತ್ತು – ಹೇಳಿ ಎಡಪ್ಪಾಡಿಭಾವನ ಅಭಿಮಾನದ ಮಾತುಗೊ.
ಹೋಪಲೆಡಿಗಾದ ನೂರಾರು ಶಿಷ್ಯರು ಅವರ ಒಟ್ಟಿಂಗೇ ಇರ್ತವು; ಹೋಪಲೆಡಿಯದ್ದ ಲಕ್ಷಾಂತರ ಶಿಷ್ಯರು ಅವರ ಹೃದಯಲ್ಲೇ ಇರ್ತವು.
ನಮ್ಮ ಗೌರವ, ಪ್ರೀತಿ, ಆದರ, ಭಯ, ಭಕ್ತಿಯ ಸಮಗ್ರ ಯಜಮಾನರಾಗಿ, ಶ್ರೀ ಪೀಠಾಲಂಕೃತ “ಸಂಸ್ಥಾನ”ರಾಗಿಪ್ಪ ಗುರುಗಳ ಕೈಲಾಸ ಯಾತ್ರೆ ಯಶಸ್ವಿಯಾಗಿ ನೆರವೇರಲಿ.
ಎಲ್ಲವೂ ಸಾಂಗವಾಗಿ ಸಾಗಿ, ಗುರುಗೊ, ಜೊತೆಗೂಡುವ ಪುಣ್ಯವಂದ ಶಿಷ್ಯವೃಂದ – ಎಲ್ಲರುದೇ ಜಾಗ್ರತೆಲಿ ಕೈಲಾಸಯಾತ್ರೆ ಮಾಡಿ ಊರಿಂಗೆ ಬಪ್ಪ ಹಾಂಗೆ, ಶಿವಾನುಗ್ರಹ ಆಗಲಿ ಹೇದು ಪ್ರಾರ್ಥನೆ.

~
ಒಂದೊಪ್ಪ: ಆ ಚೀನಾದ ಅನುಮತಿ ಇಲ್ಲದ್ದೆಯೇ ಕೈಲಾಸ ಪರ್ವತಕ್ಕೆ ಹೋಪಲೆಡಿವಷ್ಟು ಪುಣ್ಯವ ಜೀವಿತಕಾಲಲ್ಲೇ ಸಂಪಾದುಸುವೊ°. ಅಲ್ಲದೋ?

11 thoughts on “ಮನಸ್ಸಿನ ಕೈಲಾಸಕ್ಕೆ ಜೋಡುಸಲೆ ಕೈಲಾಸ ಮಾನಸ ಯಾತ್ರೆ

  1. ಗುರುಗಳ ಪ್ರಯಾಣಕ್ಕೆ ಪ್ರಕೃತಿವಿಕೋಪಂದಾಗಿ ಅಡ್ಡಿ ಬಂತೋ ಹೇಳಿ ತೋರ್ತು.

  2. ಶ್ರೀ ಗುರುಗಳ ಯಾತ್ರೆ ಯಶಸ್ವಿಯಾಗಲಿ.

    ಹರೇರಾಮ.

  3. ತುಂಬಾ ಅದ್ಭುತ, ರೋಮಾಂಚನ ಅಪ್ಪ ಹಾಂಗಿಪ್ಪ ಲಾಯಿಕದ ಶುಧ್ಧಿ ಒಪ್ಪಣ್ಣಾ.
    ಶ್ರೀ ಗುರುಗೊ, ಮತ್ತೆ ಒಟ್ಟಿಂಗೆ ಹೋಪ ಶಿಷ್ಯರು, ಎಲ್ಲೋರದ್ದು ಸುಖವಾದ ಪ್ರಯಾಣವಾಗಿರಲಿ.
    ಎಲ್ಲರಿಂಗೂ ಶುಭವಾಗಲಿ.
    ಹರೇ ರಾಮ.

  4. ಕೈಲಾಸ ಪರ್ವತ ಹೇಳಿ ಕೇಳಿ ಗೊ೦ತಿದ್ದು ಹೊರತು ಪರ್ವತದ ಬಗ್ಗೆ ಹೆಚ್ಹೆ೦ತ ಗೊ೦ತಿದ್ದತ್ತಿಲ್ಲೆ.ಅದರ ಸರ್ವ ಮಾಹಿತಿ ಸರಳ ಸು೦ದರವಾಗಿ
    ತಿಳಿಶಿ ಕೊಟ್ಟದಕ್ಕೆ ಧನ್ಯವಾದ೦ಗೊ.ಒಪ್ಪಣ್ಣ.

  5. ಹಿಮಾಲಯಕ್ಕೆ ಹೋಪೋರೆ ಪುಣ್ಯವಂತರು. ಇನ್ನು ಕೈಲಾಸಕ್ಕೆ ಹೋಪೋರು! ಎಲ್ಲರ ಯಾತ್ರೆ ಚಂದಕ್ಕಾಗಲಿ.

  6. Egrimentina vayide kalivadde egrimentina harudakutha shiva!
    Kailasakke hodange aathu!

  7. ಹರೇ ರಾಮ.ಶ್ರೀ ಗುರುಗಳ ಯಾತ್ರೆ ಯಶಸ್ವಿಯಾಗಲಿ.

  8. ಕೈಲಾಸ ಯಾತ್ರೆಯ ಶುದ್ದಿ ಲಾಯಕಾತು. ಶ್ರೀ ಗುರುಗಳ ಯಾತ್ರೆ ಯಶಸ್ವಿಯಾಗಿ ನೆರವೇರಲಿ, ಅವು ಕೈಲಾಸ ಪರ್ವತದ ಪರಿಸರಲ್ಲಿ ನಿಂದೊಂಡಿಪ್ಪ ಕಲ್ಪನೆ ಮಾಡಿಯೇ ಕೊಶಿ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×