Oppanna.com

ಬೆತ್ತದ ಪೆಟ್ಟು ತಿಂಬಲಾಗದ್ದ ಗೋಣಂಗೊ ಕತ್ತಿಪೆಟ್ಟು ತಿಂಬಲಕ್ಕೋ?

ಬರದೋರು :   ಒಪ್ಪಣ್ಣ    on   28/11/2014    6 ಒಪ್ಪಂಗೊ

ಎಲ್ಲ ಗ್ರೇಶಿದಾಂಗೆ ಆಗಿದ್ದರೆ ಒಪ್ಪಣ್ಣಂಗೆ ಕಂಬ್ಳ ನೋಡ್ಳೆ ಸಿಕ್ಕುತಿತ್ತು ಈ ಒರಿಶ. ತರವಾಡುಮನೆ ಶಾಂಬಾವನ ಕಾರಿಲಿ ಒಪ್ಪಣ್ಣಂದೇ ಈಚಕರೆ ಪುಟ್ಟಂದೇ ಈ ಒರಿಶ ಕಂಬ್ಳಕ್ಕೆ ಹೋವುಸ್ಸು ಹೇದು ಕಳುದೊರಿಶವೇ ತೀರ್ಮಾನ ಆಗಿದ್ದತ್ತು. ಒಂದೊರಿಶ ಮದಲೇ ತೀರ್ಮಾನ ಆದ್ಸು ಎಂತ್ಸಕೇ ಕೇಳುವಿ ನಿಂಗೊ, ಆದರೆ – ಹಲವಾರು ಒರಿಶ ಆತು, ಹೋಯೇಕು ಗ್ರೇಶುಸ್ಸು, ಪ್ರತಿ ಒರಿಶವೂ ಅದು ಕಳುದ ಮತ್ತೆಯೇ ಗೊಂತಪ್ಪದು ಇದಾ. ಚೇ, ಮದಲೇ ಗೊಂತಾಗಿದ್ದಿದ್ದರೆ ಹೋತಿಕ್ಕಲಾವುತಿತು – ಹೇಳುದೇ ಆತು ಒರಿಶಂಪ್ರತಿ.

ಕಳುದೊರಿಶ ಕಂಬುಳ ಕಳುದ ಮರದಿನ ಪೇಪರಿಲಿ ಶುದ್ದಿ ಬಂದಿತ್ತಲ್ಲದೋ – ಅದರ ಒಪ್ಪಣ್ಣ ಓದುವಾಗ ಶಾಂಬಾವನ ಕಾರಿಲಿ ಹೋಯ್ಕೊಂಡು ಇತ್ತಿದ್ದೆ. ಒಟ್ಟಿಂಗೆ ಈಚಕರೆ ಪುಟ್ಟಂದೇ. ಬೈಲಿನ ಯೇವದೋ ಜೆಂಬ್ರಕ್ಕೆ ಹೋಗಿ, ಅಲ್ಲಿಂದ ಬಪ್ಪಗ ಆದ ಕತೆ ಇದು.
ಅಷ್ಟಪ್ಪಾಗಳೇ ತೀರ್ಮಾನ ಮಾಡಿತ್ತಿದ್ದು – ಇನ್ನಾಣ ಕಂಬ್ಳ ಬಿಡ್ಳಿಲ್ಲೆ ಹೇದು. ಇನ್ನಾಣ ಒರಿಶದ ಕಂಬ್ಳಕ್ಕೆ ಇದೇ ಮೂರು ಜೆನ, ಇದೇ ಕಾರಿಲಿ ಹೋಪೊ – ಹೇದು ಶಾಂಬಾವನೇ ಅಷ್ಟಪ್ಪಗ ಆಶೆಬರುಸಿದ್ದು.

ಆದರೆಂತ ಮಾಡುಸ್ಸು, ಒಪ್ಪಣ್ಣ ಕೊದಿ ಬಿಟ್ಟದು ಆ ದೇವರಿಂಗೆ ಕೇಳಿತ್ತೋ ಏನೋ, ಅಲ್ಲ ಜಡ್ಜಂಗೆ ಕೇಳಿತ್ತೋ; ಉಮ್ಮಪ್ಪ. ಅಂತೂ ಇಂತೂ, ಆರಿಂಗೋ ಒಬ್ಬಂಗೆ ಕೇಳಿದ್ದು. ತಣ್ಣೀರು ಎರದು ಬಿಟ್ಟಿದವು ಅದಕ್ಕೆ. ಫೋ!

~

ಅಪ್ಪು, ಓ ಮನ್ನೆ, ರಜ ಸಮಯ ಹಿಂದೆ ಜೋಯಿಶಪ್ಪಚ್ಚಿಯಲ್ಲಿಗೆ ಹೋಗಿತ್ತಿದ್ದೆ. ಅಂತೇ ಹೋದ್ಸಲ್ಲ, ಅವರ ಮನೆಲಿ ಪಾಚದೂಟ ಇದ್ದ ಕಾರಣವೇ ಹೋದ್ಸು. ಹೋದ ಕೂಡ್ಳೆ ಬಳುಸವು, ಕೋಡಿಹೋಮ ಆಗಿ, ಕಲಶಸ್ನಾನ ಆಗಿ, ಮದುಮ್ಮಾಯರಿಂಗೆ ಮುಂಡಾಸು ಕಟ್ಟುಸಿ, ಒಸಗೆ ಆಗಿ, ಮಂಗಳಾರತಿ ಆದ ಮತ್ತೆಯೇ ಊಟ. ಅಷ್ಟು ಹೊತ್ತು ಒಪ್ಪಣಂಗೆ ಪುರುಸೊತ್ತು ಇಪ್ಪ ಕಾರಣ ಪೇಪರು ಬಿಡುಸಿಂಡು ಕೂದ್ಸು. ಆ ದಿನವೇ ಪೇಪರಿಲಿ ಗುಸುಗುಸು ಇದ್ದತ್ತು – ಕಂಬ್ಳಕ್ಕೆ ನಿಷೇಧ ಭೀತಿ – ಹೇದು. ಪೇಪರಿಲಿ ಬಂದ್ಸು ಪೂರ ನಂಬಿರಾಗ. ಅವು ಒಂದೊಂದರಿ ಎಲಿ ಹೋದಲ್ಲಿ ಹುಲಿ ಹೋತು ಹೇಳ್ತಾವು. ಹಾಂಗೆ ಇದುದೇ ಒಂದು ಹುರಿಕ್ಕೆ ಶುದ್ದಿ ಹೇದು ಸುಮ್ಮನೆ ಕೂದೆ. ಆದರೆ ಮನಾಸಿಲಿಯೇ ರಜಾ ಎಂತದೋ ಬೇಜಾರವೋ, ಅನ್ಯಾಯದ ಭಾವನೆಯೋ ಆಗಿಂಡಿದ್ದತ್ತು. ಚೇ, ಹೀಂಗೊಂದು ಆಗಿ ಹೋಪಲಾಗನ್ನೇ-ದು. ನೋಡುವೊ, ಎಲ್ಲವೂ ಒಂದೊಂದು ಕಾಲ – ಹಾಂಗೆ ಇದುದೇ ಸಮ ಅಕ್ಕು – ಹೇದು ಗ್ರೇಶಿಂಡು ಸುಮ್ಮನಾದೆ.
ಆ ದಿನ ಪಾಚ ಉಂಡಿಕ್ಕಿ ಬಂದಾಗಿತ್ತು. ಪಾಚದ ಲೆಕ್ಕದ ಚೀಪೆಶುದ್ದಿ ಕಳುದ ವಾರ ಕೇಳಿಯೂ ಆತು ಬಿಡಿ. ಜೋಯಿಷಪ್ಪಚ್ಚಿ ಅಜ್ಜ ಆದವು ಹೇದು ಶುದ್ದಿ ಬಪ್ಪಲ್ಯಂಗೆ ಉಂಡ ಪಾಚದ ಚೀಪೆ ಮತ್ತೂ ರುಚಿ ಆಗಿದ್ದತ್ತು ಒಪ್ಪಣ್ಣಂಗೆ.
ಆದರೆ? ಆ ದಿನ ಓದಿದ ಶುದ್ದಿ??!

~

ಅಪ್ಪು, ಕಂಬಳಕ್ಕೆ ನಿಷೇಧ – ಹೇದು ಓ ಮನ್ನೇಣ ಪೇಪರಿಲಿ ದಪ್ಪಕ್ಷರಲ್ಲಿ ಬರದು ತೋರ್ಸಿತ್ತಿದ್ದವು.  ಒಪ್ಪಣ್ಣಂಗೆ ಒಂದರಿ ತೆಗಲೆಯೇ ನಿಂದಾಂಗೆ ಆತು. ಎಂತ ಆವುತ್ತಾ ಇದ್ದಪ್ಪಾ ನಮ್ಮ ಲೋಕಲ್ಲಿ – ಹೇಳ್ತ ದೊಡ್ಡ ಆಶ್ಚರ್ಯ.
ಇಷ್ಟನ್ನಾರವೂ ಗ್ರೇಶದ್ದ ಒಂದು ಸಂಗತಿ ಅದು. ಕಂಬಳದಂತಹಾ ಒಂದು ಜಾನಪದ ಕ್ರೀಡೆಯ ನಿಲ್ಲುಸುತ್ತವು – ಹೇದು ಒಪ್ಪಣ್ಣ ನಿಜವಾಗಿಯೂ ಗ್ರೇಶದ್ದ ಸಂಗತಿಯೇ.

~

ಮದಲಾಣ ಕಾಲದ ತುಳುನಾಡಿನ ಸ್ಥಳೀಯವಾದ ನಾಗರೀಕತೆ ತುಂಬಾ ವಿತ್ಯಾಸ. ದೂರದ ಉಡುಪಿಂದ ಕಾಸ್ರೋಡಿನ ವರೆಂಗೆ ಇಪ್ಪ ಕರಾವಳೀ ಭೂಪ್ರದೇಶವ ತೋರಮಟ್ಟಿಂಗೆ ತುಳುನಾಡು ಹೇಳ್ತವು. ಸುಮಾರು ತುಳು ರಾಜಂಗೊ, ಬಲ್ಲಾಳಕ್ಕೊ ಈ ರಾಜ್ಯವ ಆಳಿದ ಕುರುಹುಗೊ ವಾರ್ಣಾಶಿ ಅಕ್ಕಂಗೆ ಹುಡ್ಕಿರೆ ಸಿಕ್ಕುಗು. ಅದಾಗಲೇ ಹುಡ್ಕಿದ್ದವೋ ಗೊಂತಿಲ್ಲೆ, ಹುಡ್ಕಿದ್ದಿದ್ದರೆ ಬೈಲಿಂಗೆ ಹೇಳುಗು. ಅದಿರಳಿ. ಅಂತೂ, ತುಳುನಾಡು ಅದರದ್ದೇ ಆದ ಪ್ರತ್ಯೇಕ ವಾತಾವರಣವನ್ನೂ, ಜೀವನೋತ್ಸಾಹವನ್ನೂ, ನಾಗರೀಕತೆಯ ಶೈಲಿಯನ್ನೂ ಒಳುಶಿಗೊಂಡು ಬಂದಿದ್ದತ್ತು.

ಭಾಷೆಯೂ-ಸಂಸ್ಕೃತಿಯೂ ಒಂದಕ್ಕೊಂದು ಹೊಂದಿದ, ಒಂದೇ ಪಾವಲಿಯ ಎರಡು ಮೋರೆಗೊ – ಹೇಳುಗು ಮಾಷ್ಟ್ರುಮಾವ. ತುಳುನಾಡಿನ ಇಡೀ ಸಮಷ್ಟಿ ಅದರ ಭಾಷೆಲಿ ಇದ್ದತ್ತು. ಭಾಷೆಲಿಯೇ ಅದರ ಸಂಸ್ಕೃತಿಯೂ ಇದ್ದತ್ತು. ಇಲ್ಯಾಣ ಬೂತಕೋಲಂಗೊ, ಪರಕ್ಕೆಗೊ, ಪಾಡ್ದನಂಗೊ, ಬಿಸುಪರ್ಬಂಗೊ, ಬಲೀಂದ್ರಂಗೊ, ಕೋರ್ತಕಟ್ಟಂಗೊ, ಕಂಡತಕೋರಿಗೊ, ಕೆಡ್ಡೊಸಂಗೊ, ಕೆಂಡತಡ್ಯೆಗೊ – ಇದರೆಲ್ಲ ಹೆರಾಣೋರಿಂಗೆ ಅರ್ಥ ಮಾಡುಸುಸ್ಸು ಕಷ್ಟವೇ. ಅದರ ಆಪ್ತತೆ, ಗಾಂಭೀರ್ಯತೆ ಎಲ್ಲವೂ ಇಲ್ಲಿ ಇದ್ದೋರಿಂಗೇ ಅರಡಿಗಷ್ಟೆ. ಅಲ್ಲಿ ಬೆಳದೋರಿಂಗೇ ಅರಡಿಗಷ್ಟೆ. ಹಾಂಗೇ, ಆ ಆಚರಣೆಗಳಲ್ಲಿ ಒಂದು – ಕಂಬಳ.

~

ಉದ್ದದ ಕೆಸರು ಗೆದ್ದೆಲಿ ಗಟ್ಟಿ ಗೋಣಂಗಳ ಎಳಗುಸಿ ಓಡುಸುವ ಆಟವೇ ಕಂಬಳ. ಅಷ್ಟಪ್ಪಗ ಇಪ್ಪ ಕುತೂಹಲವೇ ಈ ಆಟದ ತಿರುಳು. ಈ ಆಟಲ್ಲಿ ಎಂತರ ವಿಶೇಷ ಇದ್ದು? ಎಷ್ಟು ಕುತೂಹಲ ಇಕ್ಕು – ಗ್ರೇಶುವಿ ನಿಂಗೊ. ಅದರ್ಲೇ ಇಪ್ಪದು ಗಮ್ಮತ್ತು.

ಎರಡು ಗೋಣಂಗೊ ಹೆಚ್ಚುಕಮ್ಮಿ ಒಂದೇ ತೂಕದ್ದು, ಒಂದೇ ಶಕ್ತಿದು, ಒಂದೇ ಪ್ರಾಯದ್ದರ – ಒಂದು ಜೊತೆ ಹೇಳುಗು. “ಕುಳ್ಕುಂದಕ್ಕೆ ಹೋಯೆಕ್ಕು ಹೀಂಗಿರ್ಸ ಜೊತೆ ಸಿಕ್ಕೇಕಾರೆ” – ಹೇದು ಹಳೇ ಮಾತು ಇದ್ದತ್ತಲ್ಲದೋ, ಆ ನಮುನೆ ಜೊತೆ. ಕುಳ್ಕುಂದಲ್ಲಿ ಆದರೂ ಎಳ್ಕಟೆ ಗೋಣಂಗೊ ಇಕ್ಕು, ಆದರೆ ಕಂಬ್ಳದ ಗೋಣಂಗೊ ಅಷ್ಟು ಎಳಬ್ಬೆ ಇಪ್ಪಲೆ ಇಲ್ಲೆ. ಮಹಾನ್ ಶಕ್ತಿಶಾಲಿ, ಗಟ್ಟಿಗ, ಒಂದರ್ಥಲ್ಲಿ ಮಹಿಷಾಸುರಂಗೊ – ಆಗಿರ್ತವು. ಅದರ ಸಾಂಕಾಣಕ್ಕೇ ವಿಶೇಷ ಜೆನಂಗೊ ಇರ್ತವು. ನಿತ್ಯವೂ ಅವಕ್ಕೆ ಬೇಕಾದ ಸಕಲ ಸೌಭಾಗ್ಯವನ್ನೂ ಕರುಣಿಸಿ, ಬೇಕಾದ ಊಟ ತಿಂಡಿ ಎಮ್ಮೆಗಳ ಕೊಟ್ಟು ಕುಷಿಪಡುಸುತ್ತವು. ಎಲ್ಲಾ ಸೌಕರ್ಯವ ಅನುಭವಿಸಿ ಅತ್ಯಂತ ಕುಷಿಲಿ ಬೆಳದಿರ್ತವು. ಹೀಂಗಿಪ್ಪ ಗೋಣಂಗಳ ಅಂಗಸೌಷ್ಠವವೇ ಅವರವರ ಎಜಮಾನನ “ಹೆಮ್ಮೆ” ಆಗಿರ್ತು! ಒಂದೊಂದು ಗೋಣಂಗೊ ಕ್ವಿಂಟಾಲುಗಟ್ಟಲೆ ತೂಗುಗು. ನೊಂಪಾದ ಪಳಪಳನೆ ಹೊಳವ ಮೈಕಟ್ಟು ಹೊಂದಿಂಡು ಮದುಮಕ್ಕಳ ಹಾಂಗೆ ಆಗಿರ್ತವು. ಹೂಡ್ಳೆ ಇಪ್ಪ ಎತ್ತುಗಳ ಎಷ್ಟು ಕಾಳಜಿಲಿ ಸಾಂಕುತ್ತವೋ, ತೋಟನೋಡ್ಳೆ ಇಪ್ಪ ನಾಯಿಗಳ ಎಷ್ಟು ಪ್ರೀತಿಲಿ ಸಾಂಕುತ್ತವೋ, ಶುಭತ್ತೆ ಎಷ್ಟು ಲಾಯ್ಕಲ್ಲಿ ರೋಸಿಯ ನೋಡಿಗೊಳ್ತೋ, ಅದರಿಂದಲೂ ಒಂದಂಶ ಹೆಚ್ಚೇ ಪ್ರೀತಿಲಿ ಈ ಕಂಬುಳದ ಗೋಣಂಗಳ ಸಾಂಕುತ್ತ ಪರಿಪಾಠ ಇತ್ತಾದ.

ಹೀಂಗೆ ಗೋಣಂಗಳ ಸಾಂಕುದೇ ಕೆಲವು ಕುಟುಂಬಕ್ಕೆ ಇಪ್ಪ ಹಿರಿಮೆ. ಊರೊಳ ಹೇಳ್ತರೆ ಕೆಲವು “ಗುತ್ತಿನ ಮನೆ”ಗೊ ಇರ್ತು, ಹಾಂಗಿರ್ತ ಮನೆಗೊ ಕಂಬಳದ ಗೋಣಂಗಳ ಸಾಂಕುತ್ತ ತಲೆಮಾರುಗೊ.

ಒಂದು ಕುಟ್ಟುದು ಬಿಡಿ, ಜೋರು ಸುಮುದರೇ – ಪಾಪದವ ಹೆದರಿ ಹಾರಿ ಹೋಕು. ಅಷ್ಟೂ ಬಲಿಷ್ಠರಾಗಿ ಇದ್ದರೂ – ಎಜಮಾನ್ರ ಪ್ರೀತಿಂದಾಗಿಯೇ ಅವು ಹಿಡಿತಲ್ಲಿ ಇಪ್ಪದು ಹೇಳುಸ್ಸು ಮಾಂತ್ರ ಸತ್ಯಸಂಗತಿ. ಅಷ್ಟೂ ಹಿಡಿತಲ್ಲಿ ಇರೆಕ್ಕಾರೆ ಎಜಮಾನನ ಪ್ರೀತಿಯ ಸಾಂಕಾಣವೇ ಕಾರಣ. ಅಲ್ಲದೋ?

~

ಅದಿರಳಿ, ಈ ಗೋಣಂಗಳ ಎಂತ ಮಾಡ್ತವು?
ಉದ್ದಕ್ಕಿಪ್ಪ ಒಂದು ಕೆಸರು ಗೆದ್ದೆ. ಅದರ್ಲಿ ಅತ್ಯಂತ ನೊಂಪಾದ ಕೆಸರು, ಒಂದೇ ಒಂದು ಕಸವಿಲ್ಲದ್ದು. ಆ ಗೆದ್ದೆಯ ಮಧ್ಯಲ್ಲಿ ಕಟ್ಟಪುಣಿ, ಆಚ ಈಚ ಹೊಡೆಲಿ ಒಂದೊಂದು – ಸಾರಡಿ ತೋಡಿನಷ್ಟಗಲದ ಹೆದ್ದಾರಿ. ಆ ಎರಡು ದಾರಿಲಿ ಓಡ್ಳೆ ಎರಡು ಪ್ರತಿ ಗೋಣಂಗೊ, ನೊಗ ಹೊತ್ತು ನಿಂದಿದವು. ಆಯೋಜಕ ಬಿಗಿಲು ಉರುಗುವಾಗಳೇ ಓಡ್ಳೆ ತಯಾರು. ಆಚ ಹೊಡೆಲಿ ಒಬ್ಬನ ಸಾಂಕಾಣದ ಗೋಣಂಗೊ, ಈಚ ಹೊಡೆಲಿ ಇನ್ನೊಬ್ಬನ ಸಾಂಕಾಣದ ಗೋಣಂಗೊ. ಎರಡನ್ನೂ ಒಟ್ಟಾಗಿ ಓಡ್ಳೆ ನೋಡುವ ಸೌಭಾಗ್ಯ ಸೇರಿದ ಜೆನಂಗಳದ್ದು. ಅದೆರಡ್ರಲ್ಲಿ ಯೇವದು ಸುರೂವಿಂಗೆ ಗೆದ್ದೆಯ ಆಚ ಹೊಡೆ ಎತ್ತುತ್ತೋ – ಅದೇ ಕುತೂಹಲ. ಬಂದ ಗೋಣಂಗಳ ಪೂರ್ತ ಓಡುಸಿ, ಅದರ್ಲಿ ಅತೀ ಬೇಗ ಓಡಿದ ಎರಡ್ರ ಅಂತಿಮ ಸುತ್ತಿಂಗೆ ಓಡುಸುತ್ತ ಕ್ರಮ.
ಅದರ್ಲಿ ಗೆದ್ದ ಗೋಣಂಗೊ – ವಿಜಯೀ ಮಹಿಷಂಗೊ!!

ಆದರೆ ಗೋಣಂಗೊಕ್ಕೆ ಮಾಮೂಲಿನ ಅನ್ನಾಹಾರ ಮಾಂತ್ರ, ಪ್ರೈಸು ಅದರ ಸಾಂಕಿದೋರಿಂಗೆ! ಹ್ಹು! 😉

~

ಬರೇ ಗೋಣಂಗೊ ಅವರಷ್ಟಕ್ಕೇ ಓಡುದಲ್ಲ. ಅದರ ಓಡುಸಲೆ ಒಂದು ಜೆನ ಇದ್ದು. ಆನೆಗೆ ಮಾವುತ ಇಪ್ಪ ಹಾಂಗೆ ಆ ಗೋಣಂಗೊಕ್ಕೆ ಆ ಜೆನ – ಅವಿನಾಭಾವ ಸಂಬಂಧ. ಒಂದು ಜೊತೆ ಗೋಣಂಗೆ ಒಂದು ಜೆನ ಚಾಕ್ರಿದು ಹೇದರೆ, ಅದು ಜನ್ಮಾಂತರದ ಸಂಬಂಧದ ಹಾಂಗೆ. ಅದು ಬದಲಪ್ಪಲಿಲ್ಲೆ. ಅದೇ ಜೆನ ಅಕ್ಕಚ್ಚುಕೊಡುದು, ಮೀಶುದು, ತಿಂಡಿ ಕೊಡುದು, ಗುಡ್ಡಗೆ ಕರಕ್ಕೊಂಡು ಹೋಪದು, ಗೆದ್ದೆಗೆ ಇಳುಶುದು, ಕಂಬಳಲ್ಲಿ ಓಡುಸುದು.

ಆದರೆ ಈಗ ಆದ್ಸು ಎಂತರ?
ಆ ಜೆನ ಕಂಬಳಲ್ಲಿ ಓಡುಸುತ್ತದರ ಮಾಂತ್ರ ನೋಡಿಂಡು ಕೋರ್ಟು ತೀರ್ಪು ಕೊಟ್ಟತ್ತು.
ಎಂತರ? ಕಂಬಳಲ್ಲಿ ಗೋಣಂಗೆ ಬಡಿತ್ತವು. ಅಲ್ಲಿ ಪ್ರಾಣಿ ಹಿಂಸೆ ನಡೆತ್ತು. ಹಾಂಗಾಗಿ ಕಂಬಳವ ನಿಲ್ಲುಸೇಕು – ಹೇದು.

~

ಕೋರ್ಟು ಹೇಳಿದ ಮತ್ತೆ ಅಪೀಲು ಇದ್ದೋ? ಇಲ್ಲೆ.
ಹಾಂಗಾಗಿ ಅನಿವಾರ್ಯವಾಗಿ ಎಲ್ಲಾ ಊರಿನ ಎಲ್ಲಾ ಕಂಬಳ ಆಯೋಜನೆಗೊ ರದ್ದಾತು.
ಛೇ

ಕಂಬಳದ ಹಿನ್ನೆಲೆ, ಅದರ ಒಳ ಇಪ್ಪ ಆಂತರಿಕ ಮೌಲ್ಯಂಗೊ, ಅದು ಕೊಡುವ ಸಂತೋಷಂಗೊ, ಅದು ಉಂಟುಮಾಡುವ ಸಾಮಾಜಿಕ ಘನತೆಗೊ – ಎಲ್ಲವನ್ನೂ ಪರಿಗಣುಸಿ ಈ ತೀರ್ಪಿನ ಸತ್ಯಾಸತ್ಯತೆಯ ಇನ್ನೊಂದರಿ ಅವಲೋಕನ ಮಾಡೇಕು – ಹೇಳ್ತದು ತುಳುನಾಡಿನ ಎಲ್ಲ ತುಳುವರ, ಕಂಬಳಾಭಿಮಾನಿಗಳ ಹಾರೈಕೆ ಈಗ.

ಗೆದ್ದೆಯ ಈಚ ಹೊಡೆಂದ ಆಚ ಹೊಡೆಂಗೆ ಓಡುವ ಒಂದು ನಿಮಿಷದ ಬಡಿಯಾಣವನ್ನೇ ಕಾರಣ ಮಡಗಿ ರದ್ದು ಮಾಡಿರೆ, ಅಂಬಗ ಗೆದ್ದೆ ಹೂಡುವಾಗ, ಗಾಡಿ ಎಳವಾಗ – ಇದರಿಂದ ಹೆಚ್ಚು ಪೆಟ್ಟು ಬಡಿತ್ತನ್ನೇ?
ಅದನ್ನೂ ರದ್ದು ಮಾಡೆಡದೋ? ಕತ್ತೆಯ ಕೈಲಿ ಬಾಧಿ ಹೊರುಸುವಾಗ ಅಭ್ಯಾಸ ಮಾಡ್ಳೆ ನಾಕು ಹೊಳಿಪ್ಪುತ್ತಿಲ್ಲೆಯೋ? ಅಂಬಗ ಅದನ್ನೂ ರದ್ದು ಮಾಡೆಡದೋ? ಪೋಲೀಸುಗೊ ನಾಯಿಯ ಕೈಲಿ ಕೆಲಸ ಕಲಿಶುವಾಗ ಬಿಗಿತ್ತವಿಲ್ಲೆಯೋ? ಅಂಬಗ ಅದನ್ನೂ ರದ್ದು ಮಾಡೆಡದೋ?

ಎಲ್ಲದಕ್ಕಿಂತ ಹೆಚ್ಚಾಗಿ, ಕಸಾಯಿ ಖಾನೆಗೊ – ಈ ಇದೇ ನಮುನೆ ಗೋಣಂಗಳ ಕೊರಳಿಂಗೆ ಇಷ್ಟುದ್ದದ ಕತ್ತಿಲಿ ಹಿಡುದು ಕಡಿತ್ತವು. ನೆತ್ತರು ಕಾರಿಂಡು, ಅಮ್ಮಾ – ಹೇದು ಬೊಬ್ಬೆ ಹೊಡಕ್ಕೊಂಡು ನೆಲಕ್ಕೆ ಬಿದ್ದು ಹತ್ತಾರು ನಿಮಿಷ ಒದ್ದಾಡಿ ಕೊನೆಗೆ ಪ್ರಾಣ ಬಿಡ್ತವು. ಈ ಅಗಾಧ ಹಿಂಸಾ ಪ್ರವೃತ್ತಿ ತುಂಬಿದ ಕಸಾಯಿಗೊ ರದ್ದು ಆಗೆಡದೋ?

ಕಂಬಳಲ್ಲಿ ಒಂದೇ ನಿಮಿಷದ ಹಿಂಸೆ – ಅದೂ ನಾಗರ ಬೆತ್ತಲ್ಲಿ ಪೆಟ್ಟು ಕೊಡ್ತವು ಅಷ್ಟೇ. ಅದೂ – ಮನುಷ್ಯರ ಪೆಟ್ಟು ಗೋಣಚರ್ಮಕ್ಕೆ ಎಷ್ಟು ತಾಗುಗು?
ಅದರ ಮೇಗೆ, ಆ ಪೆಟ್ಟು ಕೊಡ್ತ ಮನುಷ್ಯ ಪ್ರೀತಿ ಇಪ್ಪವನೇ. ಮರದಿನ ಅದೇ ಪೆಟ್ಟುಕೊಟ್ಟವನೇ ಆ ಗೋಣಂಗಳ ಮೈಗೆ ಎಣ್ಣೆಕಿಟ್ಟಿ ಬೆಶಿನೀರಿಲಿ ಮೀಶಿ ಬೆಳುಲಿಲಿ ಮೈ ಉದ್ದಿ ಪೋಚಕಾನ ಮಾಡ್ತೋನೇ.
ಆದರೆ, ಆಟಲ್ಲಿಪ್ಪ ಪೆಟ್ಟಿನ ಕಂಡು ರದ್ದುಮಾಡ್ಳಾಗ. ಅದರ ಹಿಂದೆ ಮುಂದೆ ಆಲೋಚನೆ ಮಾಡೇಕು – ಹೇಳ್ತದು ಬೈಲಿನ ಕಂಬ್ಳ ಆಸಕ್ತರ ಕೋರಿಕೆ. ಅಲ್ಲದೋ?
~

ಹೇಂಗೆ? ಈ ಒರಿಶ ಒಪ್ಪಣ್ಣಂಗೆ ಕಂಬಳ ನೋಡ್ಳೆ ಸಿಕ್ಕುಗೋ? ಸಿಕ್ಕಿರೆ ಶಾಂಬಾವಂದೇ ಈಚಕರೆ ಪುಟ್ಟಂದೇ ತಯಾರು. ನಿಂಗಳೂ ಬತ್ತಿರೋ?

~
ಒಂದೊಪ್ಪ: ಓಡುಸುವ ಆಟಲ್ಲಿ ಕುಶೀಲಿ ಭಾಗವಹಿಸುವ ಗೋಣಂಗೊಕ್ಕೆ ಕಸಾಯಿಖಾನೆಲಿ ಭಾಗವಹಿಸುಲೆ ಕುಶಿ ಆಗ. ಅಲ್ಲದೋ?

6 thoughts on “ಬೆತ್ತದ ಪೆಟ್ಟು ತಿಂಬಲಾಗದ್ದ ಗೋಣಂಗೊ ಕತ್ತಿಪೆಟ್ಟು ತಿಂಬಲಕ್ಕೋ?

  1. ಕಂಬಳಲ್ಲಿ ಗೋಣ, ಗಾಡಿಲಿ ಎತ್ತು,ಕೊಣಿಶುವವರ ಕೈಲಿ ಮಂಗ , ಎಬ್ಬುವವರ ಕೈಲಿ ಹಸು -ಪೆಟ್ಟು ತಿಂತು ನಿಜ. ಆದರೆ ಅವು ಆ ಪ್ರಾಣಿಗಳ ಚೆಂದಲ್ಲಿ ಸಾಂಕುತ್ತವು. ಕೊಲ್ಲುತ್ತವಿಲ್ಲೆ. ಕೋಳಿ ಕಟ್ಟಲ್ಲಿ ಪ್ರಾಣ ಹಾನಿ ಇಪ್ಪ ಹಾಂಗೆ ಕಂಬಳಲ್ಲಿ ಪ್ರಾಣ ಹಾನಿ ಇಲ್ಲೇ. ಸ್ಪಾಯಿನಿನ ಗೂಳಿ ಕಾಳಗದ ಹಾಂಗೆ ಅಲ್ಲ ಇದು, ಇದೆಲ್ಲಾ ನ್ಯಾಯಾಲಯಕ್ಕೆ ಸರಿಯಾಗಿ ಅರಿಕೆ ಮಾಡಿದರೆ ಕಂಬಳ ನಿಷೇಧ ಆಗ.
    ಹೇಳಿದ ಹಾಂಗೆ- ಕ್ರಿಕೆಟ್ ಆಟಲ್ಲಿ ಚೆಂಡು ಬಿದ್ದು ಒಬ್ಬ ಜವ್ವನಿಗ ಆಟಗಾರನ ಪ್ರಾಣ ಹೋತು . ಕ್ರಿಕೆಟ್ ನಿಷೇಧ ಅಕ್ಕೋ ?

  2. ಹರೇರಾಮ ಬಾಲಣ್ಣ, ದನದ ಹಾಲು ಕರವದು, ಅದರ ಕಂಜಿ ಅಬ್ಬೆಯ ಮಲೆ ತಿಂಬದು ಇದೆಲ್ಲ ವಿಪರೀತ ಪ್ರಾಣಿಹಿಂಸೆ!. ಆದರೆ ಅದೇ ದನವ ಕಸಾಯಿಗೆ ಕೊಡುವದು ಸಾರದ್ದಲ್ಲ!!! ಎಂತ ಹೇಳ್ತಿ?

    1. ನಮ್ಮ ಹತ್ತರಾಣ ರಾಜ್ಯದ ಒಬ್ಬ ಮಂತ್ರಿ ಹೇಳಿದ್ದೆಂತರ ಗೊಂತಿದ್ದ ವಿಜಯಕ್ಕ ,ಗೋ ಪೂಜೆ ಮಾಡುತ್ತದರ ಆರುದೇ ವಿರೋಧುಸುತ್ತವಿಲ್ಲೆನ್ನೇ ಹಾಂಗೆ ಗೋವಧೆಯನ್ನುದೇ ಆರೂ ವಿರೋಧುಸಲೆ ಆಗ ಹೇಳಿ .ಓ ಮನ್ನೆ ಪೇಪರಿಲಿ ಇತ್ತಲ್ಲದೋ. ಇದಕ್ಕೆಂತರ ಹೇಳುತ್ಸು ? ಆ ಜನದ ತಲೇಲಿ ಇಪ್ಪದು ಎಂತದು ಗೊಂತಿಲ್ಲೆ .

  3. ಕಂಬಳ ನಿಷೇಧ ದ ಹಾಂಗೇ ಇನ್ನೂ ಕೆಲವು ಬಕ್ಕು ,ಎತ್ತಿನ ಗಾಡಿ ,ಹೂಟೆ ಇತ್ಯಾದಿ .ದನ ದ ಹಾಲು ಕರವದು ಪ್ರಾಣಿ ಹಿಂಸೆ ಲಿ ಬತ್ತೋ ? ಉಮ್ಮಪ್ಪಾ ನವಗರಡಿಯ , ಆ ಜಡ್ಜಿ ಯೇ ಹೇಳೆಕ್ಕಷ್ಟೇ .

  4. ಹರೇರಾಮ , ಒಪ್ಪಣ್ಣನ ಕಂಬಳದ ಗೋಣಂಗಳ ಕತೆ ಓದಿ ಎನಗೂ ಅವನೊಟ್ಟಿಂಗೆ ಒಂದಾರಿ ಕಂಬಳ ನೋಡ್ಳೆ ಹೋದರಕ್ಕು ಹೇಳಿ ಆಶೆ ಮೂಡಿತ್ತನ್ನೆ! ಕಂಬಳದ ಶುದ್ದಿ ಹೀಂಗೇ ಹೆರಿಯೊವು ಹೇಳುಸ್ಸು ಕೇಟು ಪೇಪರಿನ ಚಿತ್ರ ನೋಡಿ ಅಷ್ಟೇ ಉಳ್ಳೊ ಗೊಂತು ಮತ್ತೆ ಆಶೆ ಹುಟ್ಟಿತ್ತಿದ . ಕೋರ್ಟಿನ ತೀರ್ಪಿನ; ಮೇಗೆ ಕೂದವರ ಆಲೋಚನೆಯ ಮಾದರಿ ಉದಾಹರಣೆ , ಮೇಡ್-ಮಡೆಸ್ನಾನವೂ ಹೀಂಗೇ ಇರುಸ್ಸು.ಎಷ್ಟೋ ಜೆನ ಅವರವರ ಬದುಕ್ಕಿಲ್ಲಿ ಈಡೇರದ್ದ ವಿಷಯಂಗೊಕ್ಕೆ ಬೇಕಾಗಿ ಅವರವರ ಮನಸ್ಸರ್ತು ದೇವರಿಂಗೆ ಮಾಡುವ ಹರಕ್ಕೆಯ ಏವದೋ ಮೂಢಂಗೊ ನಿಷೇಧ ಮಾಡಿರೆ ಹರಕ್ಕೆ ಹೊತ್ತವರ ಮನಸ್ಸಿಂಗೆಷ್ಟು ಬೇನೆ ಅವುತ್ತು!. ಈ ಬೇನೆ ಕಮ್ಮಿ ತೂಕದ್ದೊ!. ಆರೂ ಒತ್ತಾಯ ಪೂರ್ವಕ ಹೇರುವ ಕಾರ್ರ್ಯ್ ಅಲ್ಳನ್ನೇ ಇದು. ಹೀಂಗಿದ್ದೆಲ್ಲ ಆಲೋಚನೆ ಬಪ್ಪದು ಏವದು ಸರಿ, ಏವದು ತಪ್ಪು ಹೇದು ತೂಗಿ ನೋಡ್ಳೆ ಗೊಂತಿಲ್ಲದ್ದ ಪರಿಸ್ಥಿತಿಗಲ್ಲೋ!? !?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×