Oppanna.com

ಜ್ವರದ ಮಾರಿ ಹೋಯೇಕಾರೆ ಕೆಪ್ಪೆ ಬಲಿಕೊಡುದರ ನಿಲ್ಲುಸೇಕಡ!

ಬರದೋರು :   ಒಪ್ಪಣ್ಣ    on   05/08/2016    4 ಒಪ್ಪಂಗೊ

ಆಚಮೆನೆ ಕುಂಞಣ್ಣಂಗೆ ಓ ಮೊನ್ನೆ ಇರುಳು ರಜಾ ಮೈಬೆಶಿ ಇದ್ದತ್ತು.
ಹೊತ್ತು ಕಂತಿದ ಹಾಂಗೇ ಜ್ವರ ಸರೀ ಎಳಗಿತ್ತು.
ಇರುಳು ಉಂಬಲೂ ಮೆಚ್ಚ.
ಮರದಿನ ಉದಿಯಪ್ಪಗ ಜ್ವರದ ನಿತ್ರಾಣ ಮೈ ಇಡೀಕ ಇದ್ದು. ಹೊತ್ತೋಪಗ – ಊಟ ತಿಂಡಿ ನೋಡಿರೇ ವಾಂತಿ ಬಪ್ಪಲೆ ಸುರು ಆತು.
ಮತ್ತಾಣ ದಿನ ಅಂತೂ – ಮೈಲೆಲ್ಲ ದಡಿಕ್ಕೆ ಎದ್ದ ಹಾಂಗಾಗಿ ತೊರಿಕ್ಕೆ ಸುರು ಆಗಿದ್ದತ್ತು.
ಇನ್ನು ತಡವು ಮಾಡಿರಾಗ – ಹೇದು ಸೀತ ಬಬ್ಬುಮಾವನಲ್ಲಿಗೆ ಹೋದ°.
ಬಬ್ಬುಮಾವಂಗೆ ನೋಡುವಾಗಳೇ ಅಂದಾಜಾತೋ ಏನೊ – ರಕ್ತಪರೀಕ್ಷೆಗೆ ಬರದವು. ಧನ್ವಂತರಿ ಲೇಬಿಂಗೆ ಹೋಗಿ ನೆತ್ತರು ಕೊಟ್ಟು ಪರೀಕ್ಷೆ ಮಾಡಿಯೂ ಆತು.
ನೋಡಿರೆ – ಅದುವೇ.
~
ಅದುವೇ ಹೇದರೆ ಯೇವದು? – ಅದು ಡೆಂಗ್ಯೂ ಜ್ವರ.
ನಮ್ಮ ಬೈಲಿಲಿ ಸುಮಾರು ಸಮೆಯಂದ ತಿರುಗುತ್ತಾ ಇದ್ದು ಅದು.
ಪಳ್ಳದಕರೆ ಬಾಳಪ್ಪಗೌಡಂಗೆ ಮೊದಾಲು ಬಂದದಡ ನಮ್ಮ ಊರಿಲಿ.
ಜ್ವರ ಬಪ್ಪಂದ ಹತ್ತು-ಹದಿನೈದು ದಿನ ಮೊದಲು ಕಂಪದ ಹೊಡೆಂಗೆ ಎಲ್ಲಿಗೋ ಅದರ ಹೆಂಡತ್ತಿಯ ಅಣ್ಣನ ಮನೆಒಕ್ಕಲಿಂಗೆ ಹೋಗಿಪ್ಪಾಗ ನುಸಿಕಚ್ಚಿದ್ದದಾಗಿಕ್ಕು – ಹೇದು ಅವು ಅಂದಾಜಿಮಾಡಿಗೊಂಡವು. ಆ ಹೊಡೆಲಿ ಅಂಬಗಳೇ ಇದ್ದತ್ತಾಡ ಆ ಜ್ವರ.
ಅದು ಮಾಮೂಲಿ ಜ್ವರ ಆಗಿಕ್ಕೋದು ಸುರುವಿಂಗೆ ಅಂದಾಜಿ ಮಾಡಿ ಮನೆಲೇ ಕೂದತ್ತು.
ನೋಡಿರೆ, ಕ್ಷೀಣಕ್ಷೀಣ ಆಗಿ ಉಂಬಲೆ ತಿಂಬಲೆ ಎಡಿಯದ್ದೆ, ಮೈಮೇಲೆ ಬಿದ್ದ ಹಾಂಗಾಗಿ ಮತ್ತೆ ಎಡ್ಮಿಟ್ ಮಾಡಿದವು. ರಕ್ತಪರೀಕ್ಷೆಲಿ ಗೊಂತಪ್ಪಗ ಡಾಗುಟ್ರು ಹೇಳಿದವಾಡ – ಇನ್ನು ಒಂದು ದಿನ ತಡವಾಗಿದ್ದರೆ ಜೀವಕ್ಕೇ ಅಪಾಯ ಇತ್ತು ಹೇದು.
ಅಲ್ಲಿಂದ ಮತ್ತೆ ಊರವಕ್ಕೆ ಆ ರೋಗದ ಪರಿಚಯ ಆತು. ಹೇದರೆ, ರೋಗ ಇದ್ದು ಹೇಳಿಯೂ ಗೊಂತಾತು, ರೋಗವೂ ಬಂತು!
~
ಬಾಳಪ್ಪ ಗೌಡರಿಂದ ಮತ್ತೆ ಅವರ ಮನೆಯೋರಿಂಗೆಲ್ಲ ಆಗಿ,  ಗೌಡುಗಳ ಮನೆಂದ ಇತ್ಲಾಗಿಪ್ಪ ಪೂಜಾರಿಗಳ ಮನೆಗೆ ಬಂತು ಈ ಮಾರಿ.
ಅಲ್ಲಿ ಸಂಕಪ್ಪು, ಕಾಂತಪ್ಪುಗಳ ಮನೆಲಿ ಸುಮಾರು ಜೆನ ಮನುಗಿದವು. ಅಲ್ಲಿಂದ ಆಚೊಡೆಲಿಪ್ಪ ನಾಯ್ಕಂಗಳ ಮನೆಗೆ ಎತ್ತಿತ್ತು ಅಷ್ಟಪ್ಪಗ.
ಅದಾಗಿ ಅಗಳುದಾಂಟಿ ಆಚಕರೆ ತರವಾಡುಮನೆಗೆ ಎತ್ತಿತ್ತು. ಅಲ್ಲಿಂದ ಮೇಗೆ ಸೋಜಂಗಳ ಮನೆಗೆ ಬಂತು. ಅದಾಗಿ ಒಪಾಸು ಈಚಕರೆ ಪುಟ್ಟಭಾವನ ಮನೆಗೆ ಬಂತು.
ಅದಾಗಿ ಪುನಾ ಆಚಕರೆ ಪೂಜಾರಿಗಳ ಮನೆಗೆ!
ಅಂತೂ – ಯೇವದೇ ಜಾತಿ ಲೆಕ್ಕ ಇಲ್ಲದ್ದ ನಿಜವಾದ ಜಾತ್ಯತೀತ ಶೆಗ್ತಿಆಗಿ ನಮ್ಮ ಬೈಲಿಲಿ ಇಡೀ ತಿರುಗುತ್ತಾ ಇದ್ದು ಈ ಮಾರಿ – ಡೆಂಗ್ಯೂ!
~
ಸರಿಯಾಗಿ ಚಿಕಿತ್ಸೆ ಆದರೆ ತಲೆಬೆಶಿಯ ರೋಗ ಅಲ್ಲಾಡ ಇದು. ಬೇಗ ಗುಣ ಆವುತ್ತು.
ಜ್ವರ ಬಪ್ಪದಾಡ, ಆಹಾರ ಮೆಚ್ಚದ್ದೆ ಅಪ್ಪದಾಡ, ನೆತ್ತರಿಲಿ ಪ್ಲೆಟ್-ಲೆಟ್ ಅಂಶ ಕಡಮ್ಮೆ ಅಪ್ಪದಾಡ, ತುಂಬ ಕಡಮ್ಮೆ ಆದರೆ ನೆತ್ತರು ಕಟ್ಟದ್ದೆ ಅಪ್ಪದಾಡ.
ಸರಿಯಾದ ಸಮೆಯಲ್ಲಿ ಮದ್ದು ಮಾಡಿರೆ ಏನೂ ತೊಂದರಿಲ್ಲದ್ದೆ ಗುಣ ಆವುತ್ತು – ಹೇಳ್ತದು ಬಬ್ಬುಮಾವನ ಅಭಿಪ್ರಾಯ.
~
ಈ ಜ್ವರ ಹರಡುದು ಒಂದು ಜಾತಿಯ ನುಸಿಂದಾಗಿ ಅಡ.
ಜ್ವರ ಇದ್ದವಂಗೆ ಕಚ್ಚಿಕ್ಕಿ ನವಗೆ ಕಚ್ಚಿರೆ ನಮ್ಮ ನೆತ್ತರಿಂಗೆ ಆ ವೈರಾಣು ಸೇರಿರೆ, ನಮ್ಮ ದೇಹದ ಒಟ್ಟಿಂಗೆ ಜಗಳ ಅಪ್ಪಗ ನವಗೆ ಜ್ವರ ಬಪ್ಪದಾಡ.
ಅಷ್ಟಪ್ಪಗಳೇ ಅಡ – ನಮ್ಮ ಪ್ಲೇಟ್-ಲೆಟ್ ಕಡಮ್ಮೆ ಅಪ್ಪದು. ಬಪ್ಪಂಕಾಯಿ ಎಲೆಯ ಎಸರು ಕುಡುದರೆ ಒಳ್ಳೆದಾವುತ್ತು – ಹೇಳ್ತವು ಕೆಲವು ವೈದ್ಯರು.
ನಾಲ್ಕೈದು ದಿನಲ್ಲಿ ಈ ಜಗಳ ಒಂದು ಹಂತಕ್ಕೆ ಬಂದು ಪ್ಲೇಟ್-ಲೆಟ್ ಪುನಃ ಒಂದು ಹಂತಕ್ಕೆ ಬತ್ತಾಡ.
ಹಾಂಗಾಗಿ, ಸರಿಯಾದ ಚಿಕಿತ್ಸೆ ತೆಕ್ಕೊಂಡ್ರೆ ಸಮಸ್ಯೆ ಇಲ್ಲೆ – ಹೇದು.
~
ಅಷ್ಟೆಲ್ಲಪ್ಪು. ಈ ನುಸಿ ಹೀಂಗೊಂದು ಹರಡ್ಳೆ ಕಾರಣ ಎಂತರ?
ಅದಕ್ಕೇ ಕಾನಾವು ಡಾಗುಟ್ರು ಹೇಳಿದ್ದು – ಕೆಪ್ಪೆಗಳ ಸಂಖ್ಯೆ ಕಡಮ್ಮೆ ಆದ್ಸು – ಹೇದು.
ಅಪ್ಪಡ, ಈಗೀಗ ಅಂತೂ ಕೆಪ್ಪೆಯ – ಅದರ್ಲೂ ಹೆಣ್ಣು ಕೆಪ್ಪೆಯ ಹಿಡುದು ತಿಂಬ ಜನಸಂಖ್ಯೆ ತುಂಬ ಜಾಸ್ತಿ ಅಡ.
ಅದು ಕಾಂಬಲೆ ರಜ್ಜ ದೊಡ್ಡಕ್ಕೆ ಇಪ್ಪ ಕಾರಣವೋ ಎಂತೋ!
ನೀರಿಲಿ ಇಪ್ಪ ಕುಂಞಿಕೆಪ್ಪೆಗೊಕ್ಕೆ ನೀರಿಲಿ ಇಪ್ಪ ನುಸಿಗಳ ಮೊಟ್ಟೆ, ಮರಿಗೊ ಆಹಾರ ಅಡ – ಕೆಪ್ಪೆ ಕಡಮ್ಮೆ ಆಗಿ ಕೆಪ್ಪೆಕುಂಞಿಗೊ ಕಡಮ್ಮೆ.
ಕೆಪ್ಪೆ ಕುಂಞಿಗೊ ಕಡಮ್ಮೆ ಆಗಿ ನುಸಿಹುಳುಗಳ ಹಿಡಿವೋರು ಇಲ್ಲೆ – ಹೇದು ಆಯಿದಾಡ.
~
ಎಲ್ಲವೂ ಪರಸ್ಪರ ಒಂದು ಸಂಕೊಲೆಲಿ ನಡವಗ, ಒಂದು ಕೊಳಿಕ್ಕೆಯ ನಾವು ತಪ್ಪುಸಿದರೆ, ಒಳುದ್ದದು ಉರುಳಾಗಿ ಪರಿಣಮಿಸುತ್ತು – ಹೇದು ಇದರಿಂದ ಗೊಂತಾವುತ್ತು.
ಪ್ರಕೃತಿಲಿ ಎಲ್ಲವೂ ಸಮತೋಲನಲ್ಲಿ ಇದ್ದರೆ ಎಲ್ಲವೂ ಸಮ ಇಕ್ಕು.
ನುಸಿಗೊ ಎಂತಕೆ ಇದ್ದವು ಲೋಕಲ್ಲಿ ಹೇಳಿ ನಾವು ಆಲೋಚನೆ ಮಾಡ್ಲೆ ಎಡಿಯ.
ಭಗವಂತನ ಸೃಷ್ಟಿಲಿ ಎಲ್ಲದಕ್ಕೂ ಒಂದೊಂದು ಕಾರ್ಯ ಇದ್ದು.
ಎಲ್ಲವೂ ಅವರವರ ಕೆಲಸಲ್ಲಿ ಸರಿಯಾಗಿ ಹೊಂದಾಣಿಕೆಲಿ ಇದ್ದರೆ ಇಡೀ ಜೀವರಾಶಿ ಸರಿ ಇಕ್ಕು. ಅಲ್ಲದಾ?
ಮನುಷ್ಯ ಅತಿಮೀರಿ ಎಲ್ಲವನ್ನೂ ಮಾಡುದೇ ಈಗಾಣ ಅಸಮತೋಲನಕ್ಕೆ ದಾರಿ ಆದ್ದದು.
ಪ್ರಾಣಿಗಳನ್ನೂ ಬಲಿ ತೆಕ್ಕೊಂಡರೆ ಬೇರೆ ರೀತಿಲಿ ನಮ್ಮ ಪ್ರಾಣವೂ ಮಾರಿ ಬಲಿ ತೆಕ್ಕೊಂಗು ಅಲ್ಲದಾ?
~
ಒಂದೊಪ್ಪ: ಅಷ್ಟು ಸಣ್ಣ ಕೆಪ್ಪೆ ಕಡಮ್ಮೆ ಆದರೇ ಇಷ್ಟು ಸಮಸ್ಯೆ ಬತ್ತರೆ, ಇನ್ನು ದೊಡ್ಡ ದನ ಕಡಮ್ಮೆ ಆದರೆ?

4 thoughts on “ಜ್ವರದ ಮಾರಿ ಹೋಯೇಕಾರೆ ಕೆಪ್ಪೆ ಬಲಿಕೊಡುದರ ನಿಲ್ಲುಸೇಕಡ!

  1. ಒಂದೊಪ್ಪ ಒಪ್ಪಣ್ಣ ಹೇಳಿದ್ದು ನೂರಕ್ಕೆ ನೂರು ನಿಜ.ಬರೇ ಸಣ್ಣ ಜೀವ ಜಂತು ಕೆಪ್ಪೆನಾಶ ಆದರೆ ಅದರ ಪೆಟ್ಟು ಮನುಷ್ಯರಿಂಗೆ ಬಡಿತ್ತರೆ!; ಇನ್ನು ಹತ್ತಕ್ಕತ್ತು ಜೀವ ಒಳಿಶುತ್ತ ಹಟ್ಟಿಯಬ್ಬೆ ನಾಶಆವುತ್ತಾ ಬಂದರೆ; ಕ್ರಮೇಣ ಹೇಂಗಾಗಿ ಹೋಕು!!?

  2. ಆಹಾರ ಸಂಕೋಲೆ ಕಡುದರೆ ಆ ಸಂಕೋಲೆ ಮನುಷ್ಯನ ಕೊರಳಿಂಗೇ ಬೀಳುಗು. ನಿಜವಾಗಿ ಆಲೋಚನೆ ಮಾಡೆಕಾದ ವಿಷಯ. ಪರಿಸರ ಮಾಲಿನ್ಯ, ವನ ನಶೀಕರಣ ಎಲ್ಲವನ್ನುದೆ ಸುಲಾಬಲ್ಲಿ ಅರ್ಥ ಆವ್ತ ಹಾಂಗೆ ಹೇಳಿದ ಒಪ್ಪಣ್ಣಂಗೆ ಧನ್ಯವಾದ. ಕಡೇಣ ಒಪ್ಪವುದೆ ಒಪ್ಪ ಇದ್ದು.

  3. ಕೆಪ್ಪೆ ಮಾಂತ್ರ ಅಲ್ಲ… ಗೋಡೆ ಮೇಲಿಪ್ಪ ಹಲ್ಲಿ, ಬಲೆ ಕಟ್ಟುತ್ತ ಜೇಡ… ಮನೆಯೊಳ ಹಾರುವ ಎಲೆ ಬಾವಲಿ… ನೀರಿಲಿ ಇಪ್ಪ ಮೀನುಗೊ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×