ಕೃಷಿಕರ ಮೇಲೆತ್ತಿದೋರೂ, ಕೃಷಿಕರಿಂಗೆ ಕೈ ಎತ್ತಿದೋರೂ…..

ಬೈಲಿಗೆ ಆರನೇ ಒರಿಶ ಸುರು ಆತು ಹೇಳ್ತ ಕೊಶಿ ಒಂದು ಹೊಡೆಲಿ. ಗುರು ಅನುಗ್ರಹಾಶೀರ್ವಾದದ  ಹೆಗ್ಗಳಿಕೆ ಇನ್ನೊಂದು ಹೊಡೆಲಿ. ಶಾಲೆಗೆ ಹೋಗಿಂಡು ಬರೇಕು ಹೇಳ್ತ ಹೆದರಿಕೆ ಮತ್ತೊಂದು ಹೊಡೆಲಿ. ಇದೆಲ್ಲದರ ಎಡಕ್ಕಿಲಿಯೇ ಒಪ್ಪಣ್ಣಂಗೆ ಮತ್ತೊಂದು ಶುದ್ದಿ ಹೇಳ್ತ ವಾರ ಬಂದುಬಿಟ್ಟತ್ತು.

ಮೊನ್ನೆ ಸೂರಂಬೈಲಿಂದ ನೆಡಕ್ಕೊಂಡು ಬಪ್ಪಗ ಅಜ್ಜಕಾನ ಬಾವನ ಒಟ್ಟಿಂಗೇ ಬಂದ್ಸು. ಅವ° ಮಾತಾಡುವಾಗ ಒಂದು ಸಂಗತಿ ಹೇಳಿದ° – ಅದನ್ನೇ ಬೈಲಿಂಗೆ ಹೇಳಿಬಿಡ್ತೆ, ಅಕ್ಕಲ್ಲದೋ?
ಅವಂಗೆ ರಜಾ ಲೊಟ್ಟೆ ಇದ್ದು – ಹೇದು ಬೊಳುಂಬುಮಾವ° ಒಂದೊಂದರಿ ಹೇಳ್ತವು; ಆಯಿಪ್ಪಲೂ ಸಾಕು, ನವಗರಡಿಯ. ಹಾಂಗಾಗಿ ಹೇಳ್ತ ಶುದ್ದಿಯೂ ಲೊಟ್ಟೆ ಆಗಿಪ್ಪಲೂ ಸಾಕು, ಸತ್ಯವೇ ಆಗಿಪ್ಪಲೂ ಸಾಕು. ನಿಂಗೊ ಒಪ್ಪುತ್ತಿರೋ ಇಲ್ಲೆಯೋ, ಶುದ್ದಿಗೊಂದು ಒಪ್ಪ ಅಂತೂ ಕೊಟ್ಟಿಕ್ಕಿ. ಏ°?

~

ಇದು ನಮ್ಮ ಊರಿನ ಇಬ್ರು ಅಜ್ಜಂದ್ರ ಕತೆ. ಬೇರೆಬೇರೆ ಊರಿನ ಅಜ್ಜಂದ್ರು.

ಒಬ್ಬ ಅಜ್ಜನ ಶುದ್ದಿ ಹೀಂಗಿದ್ದು:

ಅವಕ್ಕೆ ಅಡ್ಡಹೆಸರು ಸಹಕಾರಿ ಅಜ್ಜ° – ಹೇದು. ಎಂತಗೆ?
ಒಂದು ಕಾಲಲ್ಲಿ ಅಡಕ್ಕೆ ಕೃಷಿಕರ ಸ್ಥಿತಿ ಚಿಂತಾಜನಕ ಆಗಿದ್ದತ್ತು. ಅಲ್ಲ, ಈಗಳೂ ಹಾಂಗೆಯೇ! ಆದರೂ –ಮದಲು ಇದರಿಂದಲೂ ಕಡೆ ಇದ್ದತ್ತು. ಒರಿಶ ಪೂರ್ತಿ ಕೃಷಿಕರು ಬಂಙ ಬಂದುಗೊಂಡು ಸೊಂಟಬಗ್ಗುಸಿ ಕೆಲಸ ಮಾಡುದು. ಅಡಕ್ಕೆ ಮರಕ್ಕೆ ನೀರು ಎರವದು, ಗೊಬ್ಬರ ಹಾಕುದು, ಮಣ್ಣು ಹಿಡುಶುದು, ಅಡಕ್ಕೆ ಕೊಯಿವದು, ಒಣಗುಸಿ ಸೊಲಿಶುದು, ಸೊಲುದ ಮತ್ತೆ ಹೆರ್ಕುದು, ಗೋಣಿಲಿ ಕಟ್ಟಿ ಬೆಶ್ಚಂಗೆ ಪೇಟೆಗೆ ತೆಕ್ಕೊಂಡು ಹೋಪದು. ಹೋಗಿ? ಕೆಲವು ಅಡಕ್ಕೆ ಸೇಟುಗೊಕ್ಕೆ ಕೊಟ್ಟು ಕೈ ಮುಗಿವದು.
ಅವು ಹೇಳಿದ್ದೇ ಕ್ರಯ, ಅವು ಮಾಡಿದ್ದೇ ವ್ಯಾಪಾರ. ಬಾಯಿಗೆ ಬಂದ ಕ್ರಯ ಕೊಟ್ಟವು. ಒರಿಶ ಪೂರ್ತಿ ದುಡುದ ಅಜ್ಜಂದ್ರಿಂಗೆ ಆ ಸೇಟು ಕೊಟ್ಟಷ್ಟೇ ಪೈಶೆ ಸಿಕ್ಕುಗಷ್ಟೆ. ಸೇಟು ಉಶಾರಿದ್ದು – ಐವತ್ತು ರುಪಾಯಿಗೆ ತೆಗದ ಅಡಕ್ಕೆಯ ಮೋದಿಯ ಊರಿಂಗೆ ಕಳುಸಿರೆ ಅದಕ್ಕೆ ಐನ್ನೂರು ರುಪಾಯಿ ಸಿಕ್ಕುತ್ತು. ಹಾಂಗೆ, ಎಡೆದಾರಿಲಿ ಇದ್ದ ಸೇಟುಗೊ ಒಳ್ಳೆತ ಪೈಶೆ ಮಾಡಿಗೊಂಡು, ಆರಾಮಲ್ಲಿ ಇದ್ದಿದ್ದವು.

ವ್ಯವಸ್ಥೆಯ ಬದಲು ಮಾಡೇಕಾರೆ ನಾವೇ ನೇರವಾಗಿ ವ್ಯವಸ್ಥೆಯೊಳ ಇಳಿಯೇಕು. ಈ ಅಡಕ್ಕೆ ದಳ್ಳಾಳಿ ವ್ಯವಸ್ಥೆ ಕಂಡ ಅಜ್ಜಂಗೆ “ಅಡಕ್ಕೆ ಕೃಷಿಕರಿಂಗೆ ಬಲ ಬರೇಕಾರೆ ಒಂದು ಸಹಕಾರಿ ಸಂಸ್ಥೆ ಬೇಕು – ಹೇದು ಕಂಡತ್ತಾಡ. ಅದು ಬರೇ ಇನ್ನೊಂದು ಅಡಕ್ಕೆ ಅಂಗುಡಿ ಆಗಿ ಹೋಪದಲ್ಲದ್ದೆ, ಕೃಷಿಕರಿಂದ – ನೇರವಾಗಿ – ಬಳಕೆದಾರರಿಂಗೆ ಎತ್ತುಸುವ ಸಹಕಾರಿ ಸಂಸ್ಥೆಯಾಗಿರೇಕು – ಹೇದು ಗ್ರೇಶಿದವಾಡ. ಅಡಕ್ಕೆ ಬರೇಕಾರೆ ಕೃಷಿಕರ ಸಂಪರ್ಕ ಇರೇಕು, ಅದರ ಮಾಡ್ಳಕ್ಕು. ಆದರೆ ಅಲ್ಲಿಂದ ಅಡಕ್ಕೆ ತೆಕ್ಕೊಳೇಕಾರೆ? ಅದಕ್ಕಾಗಿ, ಉತ್ತರ ಬಾರತದ ಹಲವು ದಿಕ್ಕೆ ಪ್ರವಾಸ ಮಾಡಿ, ಸಂಪರ್ಕಂಗಳ ಸಾಧುಸಿ ಬಂದವಾಡ. ಅಂತೂ ಇಂತೂ ಅವರ ಕನಸಿನ ಕೂಸಾಗಿ “ಸಹಕಾರಿ ಸಂಸ್ಥೆ” ಆರಂಭ ಆತಾಡ. ಹಾಂಗಾಗಿ ಅವಕ್ಕೆ ಅಡ್ಡಹೆಸರು – ಸಹಕಾರಿ ಅಜ್ಜ° – ಹೇದು.
ಇದಿಷ್ಟೇ ಅಲ್ಲದ್ದೆ, ಅಡಕ್ಕೆಯ ಬೇರೆಬೇರೆ ಉಪಯೋಗಂಗೊ, ಅದರಿಂದಪ್ಪ ಪ್ರಯೋಜನಂಗೊ – ಎಲ್ಲವನ್ನೂ ಸಂಶೋಧನೆ ಮಾಡ್ಸರ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಅದಕ್ಕೆ ಏರ್ಪಾಡು ಮಾಡಿದ್ದವಾಡ.

ಸಹಕಾರಿ ಹೇದರೆ, ಕೃಷಿಕರಿಂಗೆ ಉಪಕಾರಿ – ಹೇಳಿಯೂ ಅರ್ಥ ಆವುತ್ತಿದಾ. ಅಡಕ್ಕೆ ಕೃಷಿಕರ ಸ್ವಾಭಿಮಾನ, ಆರ್ಥಿಕ ಶೆಗ್ತಿ, ಆಧುನಿಕ ಚಿಂತನೆಗೊ – ಎಲ್ಲವನ್ನೂ ಎತ್ತಿ ಹಿಡಿಯಲೆ ಕಾರಣ ಆದ ಆ ಅಜ್ಜನ ಬಗ್ಗೆ ಎಲ್ಲೋರುದೇ ವಿಶೇಷವಾದ ಮಮಕಾರ, ಗೌರವಲ್ಲಿ ಕಂಡುಗೊಳ್ತವು ಕೃಷಿಕರು.

~

ಮೊನ್ನೆ ಚೆನ್ನಬೆಟ್ಟಣ್ಣ ಸಮೋಸ ಕಳುಗಿದನಾಡ, “ಸಹಕಾರಿ ಅಜ್ಜ ಹೋದವು” ಹೇದು. ಅಷ್ಟಪ್ಪಗ ಅಜ್ಜಕಾನ ಬಾವಂಗೆ ತುಂಬ ಬೇಜಾರಾತಡ. ಆ ಸಮೋಸವ ಉದ್ದಿ ಮೊಬಿಳಿಯ ಕಿಸಗೆ ಮಡುಗುವಷ್ಟೇ ಪುರುಸೊತ್ತು – ಇನ್ನೊಂದು ಸಮೋಸ ಬಂತಾಡ “ಸಮ್ಮೇಳನದ ಅಜ್ಜ° ಹೋದವು” – ಹೇದು.

ಅದಾರು ಈ ಅಜ್ಜ°? ಅದುವೇ ಇನ್ನೊಬ್ಬ° ಅಜ್ಜನ ಕತೆ, ಹೀಂಗಿದ್ದು:
~

ಅವಕ್ಕೆ ಅಡ್ಡಹೆಸರು ಸಮ್ಮೇಳನದ ಅಜ್ಜ° – ಹೇದು. ಎಂತಗೆ?
ಮದಲು ಒಂದು ಕಾಲಲ್ಲಿ ಕಾಸ್ರೋಡಿಲಿ ಅಡಕ್ಕೆ ವ್ಯಾಪಾರ ಮಾಡಿಗೊಂಡೋ, ಬೇರೆಂತೆಲ್ಲ ಕಚ್ಚೋಡ ಮಾಡಿಗೊಂಡು ಇತ್ತಿದ್ದವಾಡ ಈ ಅಜ್ಜ°. ಊರೊಳಂದ ಅಡಕ್ಕೆ ಸಂಪಾಲುಸಿ, ಉತ್ತರ ಭಾರತದ ಸೇಟುಗೊಕ್ಕೆ ಎತ್ತುಸುದು. ಎಡೆಲಿ ಸಿಕ್ಕಿದ ಪಸೆ ಪೈಶೆ ಅವರದ್ದು. ಇರಳಿ, ಒಳ್ಳೆದಾತು. ಆದರೆ, ಬೇರೆ ದಿಕ್ಕಂದ ಎರಡ್ರುಪಾಯಿ ಕಮ್ಮಿ ಕೊಟ್ಟುಗೊಂಡು ಲಾಭ ತುಂಬ ಮಾಡಿದ್ದವು – ಹೇದು ಅಭಾವನ ಅಭಿಪ್ರಾಯ.

ಅಡಕ್ಕೆ ವ್ಯಾಪಾರಲ್ಲಿ ಸಿಕ್ಕುತ್ತ ಲಾಭಾಂಶ ಸಾಲದ್ದೆ, ಒಂದರಿಯೇ ದೊಡ್ಡ ಆವುತ್ತೆ ಹೇದು ಕಂಡತ್ತೋ ಏನೋ – “ಅಡಕ್ಕೆ ಕೃಷಿಕರ ಸಮ್ಮೇಳನ ಮಾಡ್ತೇನೆ” – ಹೇದು ಹೆರಟವಾಡ. ಆಲೋಚನೆ ಒಳ್ಳೆದೇ – ಕೃಷಿಕರ ಕಷ್ಟನಷ್ಟಂಗೊ, ಚಿಂತನೆಗೊ ಇತ್ಯಾದಿಗಳ ವಿಮರ್ಶೆ ಮಾಡ್ಳಕ್ಕು; ಆದರೆ ತನಗೆ ಹೆಸರು ಬರಳಿ ಹೇದು ಆಲೋಚನೆ ಇದ್ದತ್ತೋ ಏನೋ – ಊರಿನ ದೊಡ್ಡ ಮನುಷ್ಯರ ಸಂಪರ್ಕ ಮಾಡಿಗೊಂಡವು. ಎಲ್ಲೋರ ಹತ್ತರಂದ ಎಡಿಗಾಷ್ಟು ದೇಣಿಗೆ ಸಂಗ್ರಹಿಸಿದವಾಡ. ದೇಣಿಗೆ ಕೊಡದ್ದೋರಿಂದ ಸಾಲ ತೆಕ್ಕೊಂಡವಾಡ.

ಅಡಕ್ಕೆ ಕೊಡ್ತ ಕೃಷಿಕರಿಂಗೆ ಪೈಶೆ ಕೊಡದ್ದೆ – ಸಮ್ಮೇಳನದ ಲೆಕ್ಕಲ್ಲಿ ರಜ ನಿಂಗಳ ದೇಣಿಗೆ ಇರಳಿ – ಒಳುದ್ದರ ಬಪ್ಪೊರಿಶ ಕೊಡ್ತೆ – ಹೇದು ಕೈ ಎತ್ತಿದವಾಡ.

ಅಂತೂ ಇಂತೂ ಒಂದು ದೊಡ್ಡ ಮೊತ್ತ ಕೈಗೆತ್ತಿತ್ತು. ದಿನ ನಿಘಂಟಾತು. ಬೈಲಕರೆಯ ಓ ಅತ್ಲಾಗಿ ಅದಕ್ಕೆ ಬೇಕಾದ ಜಾಗೆ ಸಮತಟ್ಟು ಮಾಡಿ ಆತು. ಹತ್ತು ಸಾವಿರ ಜೆನ ಏಕಕಾಲಕ್ಕೆ ಕೂಪ ಸಭೆ, ದೇಶದ ಬೇರೆಬೇರೆ ದಿಕ್ಕಂದ ಬಪ್ಪ ಜೆನಂಗೊ, ಹಲವಾರು ಮಂತ್ರಿ ಮಾಗಧರು – ವಿಷಯ ಊರಿಲಿ ಹೊರಳಿಗೊಂಡಿತ್ತು.

ಮತ್ತೆಂತಾತೋ ಅರಡಿಯ – ಸಮ್ಮೇಳನದ ದಿನ ಹತ್ತರ ಬಂದ ಹಾಂಗೇ – ಸಮ್ಮೇಳನ ಇಲ್ಲೇಡ – ಹೇದು ಒಂದು ಶುದ್ದಿ ಹಬ್ಬುಲೆ ಸುರು ಆತು. ಜಾಗೆ ತಟ್ಟು ಮಾಡ್ತ ಬುಳ್ಡೋಜರಿಂಗೆ ಪೈಶೆ ಕೊಡದ್ದಕ್ಕೆ ಅದು ಹೆರಟಿದಾಡ. ಶಾಮಿಯಾನ ಬೈಂದಿಲ್ಲೆಡ, ಸಮ್ಮೇಳನದ ದಿನ ಅಡಿಗೆ ಸತ್ಯಣ್ಣನ ಅಡಿಗೆ ಹೇದು ಶುದ್ದಿ ಇದ್ದತ್ತಲ್ಲದೋ – ಸತ್ಯಣ್ಣನ ಹತ್ತರೆ ಕೇಳಿರೆ ‘ಯೇಯ್ ಇಲ್ಲೆಪ್ಪ, ನವಗೆ ಕೋರಿಕ್ಕಾರಿನ ತಿಥಿ ಹೇಳಿಕೆ ಮಾಂತ್ರ ಬಂದ್ಸು’ – ಹೇಳಿದ್ದವು.

ಹಾಂಗಾಗಿ ಒಟ್ಟು ಎಲ್ಲವೂ ಕಾಮನ ಬಿಲ್ಲಿನ ಹಾಂಗೆ ತೋರಿಕೆಗೆ ಮಾಂತ್ರವೋದು!? ಉಮ್ಮಪ್ಪ.

~

ಸಮ್ಮೇಳನದ ದಿನವೇ ಎತ್ತಿತ್ತು. ಈ ಅಜ್ಜ° ಉತ್ತರಭಾರತ ಪ್ರವಾಸ ನಿಘಂಟು ಮಾಡಿಂಡು ಊರನ್ನೇ ಬಿಟ್ಟು ಹೋದವಾಡ. ಒಪಾಸು ಬಂದ್ಸು ಮತ್ತೆ ಒಂದೂವರೆ ತಿಂಗಳು ಕಳುದು.  ಅದರೊಳ ಊರಿನವಕ್ಕೆ “ಸಮ್ಮೇಳನದ ಅಜ್ಜ°” – ಹೇದು ಹೆಸರು ಮಡಗಿಯೂ ಆಯಿದು. ದೇಣಿಗೆ ಕೊಟ್ಟವು ಕೇಳುಲೆ ಹೋಯಿದವಿಲ್ಲೆ, ಸಾಲ ಕೊಟ್ಟವಕ್ಕೆ ಒಪಾಸು ಸಿಕ್ಕಿದ್ದಿಲ್ಲೆ. ಒಂದೆರಡು ಜೆನ ಸಾಲ ಕೊಟ್ಟವು ತಡವಲೆಡಿಯದ್ದೆ ಬಳ್ಳಿ ತೆಕ್ಕೊಂಡವು. ಆದರೂ, ಈ ಅಜ್ಜ° ಕಲ್ಲುಗುಂಡಿನ ಹಾಂಗೆ ಇತ್ತಿದ್ದವು.

ಇದೆಲ್ಲ ಆದ ಮತ್ತೆ ದೂರದ – ಕೊಡೆಯಾಲಂದ ಆಚಿಕೆ ಎಂತದೋ ಹೊಸ ಕಚ್ಚೋಡ ಆರಂಭ ಮಾಡಿದ್ದವು, ಅದಕ್ಕೆ ದೊಡ್ಡ ಬಂಡವಾಳ ಬೇಕಪ್ಪಂಥದ್ದು – ಹೇದು ಊರಿಲಿ ಮಾತಾಡಿಗೊಂಡಿತ್ತವು.

ಮೊನ್ನೆ, ಒಂದಿನ – ಪ್ರಾಯ ಆಗಿ ಆ ಅಜ್ಜ° ತೀರಿಗೊಂಡವಾಡ.

~

ಇಬ್ರು ಅಜ್ಜಂದ್ರು. ಬೈಲ ಆಚಕೊಡಿ, ಈಚ ಕೊಡಿ.
ಮಾಡಿದ ಕಾರ್ಯವೂ ಹಾಂಗೇ, ಒಂದು ಉತ್ತರ ಧ್ರುವ, ಇನ್ನೊಂದು ದಕ್ಷಿಣ.
ಒಬ್ಬರು ಪಾರದರ್ಶಕ ವ್ಯವಸ್ಥೆ ತಂದು ಅಡಕ್ಕೆ ಬೆಳೆಗಾರ ಕೈ ಹಿಡುದು ಮೇಲೆತ್ತಿದವು, ಆ ಮೂಲಕ ಸಾವಿರಾರು ಕೃಷಿ ಜೀವನಂಗಳ ಉದ್ಧರುಸಿದವು.
ಇನ್ನೊಬ್ಬರು ಅಡಕ್ಕೆ ಕೃಷಿಕರ ಸಂಪತ್ತಿನ ಸೇರ್ಸಿ ಎಲ್ಲೋರಿಂಗೂ ಕೈ ಎತ್ತಿದವು. ಸದ್ಯಕ್ಕೆ ಜೆನಂಗೊ ಇಬ್ರನ್ನೂ ಮರದ್ದವಿಲ್ಲೆ.
ಇನ್ನೂ ಹಲವು ತಲೆಮಾರು ಹೋದ ಮತ್ತೆ – ಸಹಕಾರಿ ಅಜ್ಜನ ನೆಂಪಿಕ್ಕು; ಸಮ್ಮೇಳನದ ಅಜ್ಜನ ಮರದೇ ಬಿಡುಗು. ಅಲ್ಲದೋ?

ಅದೇನೇ ಇರಳಿ, ಅಜ್ಜಂದ್ರು ಮೋಕ್ಷಕ್ಕೆ ಹೋಗಲಿ, ಚೆಂದಕಿರಳಿ.
ಸಹಕಾರಿ ಅಜ್ಜ° ಹೋಪಗಳೂಸಮಾಜಕ್ಕೆ ಅವರ ಕಾರ್ಯ ಮರದ್ದವಿಲ್ಲೆಡ. ದೂರದೃಷ್ಟಿಲಿ ಕೃಷಿಕರ ಜೀವನ ಸುಲಬ ಮಾಡಿದ ಅಜ್ಜ° ಅವರ ಕಣ್ಣಿನ ದಾನ ಮಾಡಿಕ್ಕಿ ದೃಷ್ಟಿಯನ್ನೂ ಭೂಮಿಲಿ ಅಗತ್ಯ ಇಪ್ಪವಕ್ಕೆ ಬದುಕ್ಕಿನ ಸುಲಾಬ ಮಾಡ್ಲೆ ಬಿಟ್ಟಿದವಡ.
ಇಪ್ಪಗಳೂ ಹೋಪಗಳೂ ಅವರ ಜೆಬಾದಾರಿಯ ಮರೆಯದ್ದೆ ಮಾಡಿದ್ದದು ಅವರ ಹಿರಿಮೆಗೆ ಇನ್ನೊಂದು ಸಾಕ್ಷಿ. ಅಂತ್ಯಕಾಲಕ್ಕೆ ಅವರ ಕಾಂಬಲೆ ಸೇರಿದವು ಸಹಸ್ರ ಸಹಸ್ರ ಜೆನಂಗೊ.
ಜೀವನಲ್ಲಿದ್ದು ಮಾಡಿದ ಕೆಲಸಂಗಳ ಫಲ ಜನಂಗಳ ಹೃದಯಲ್ಲಿ ಮಡಿಗಿ ಹೋದವು.

ಭೂಮಿಲಿ ನಮ್ಮ ಬದುಕ್ಕು ಇಪ್ಪದು ನಮ್ಮ ಕರ್ಮಫಲಕ್ಕೆ!
ಆರ ಉಸುಲು ಯಾವಾಗ ನಿಲ್ಲುತ್ತೋ, ಆರ ದಿನ ಯಾವಾಗ ಅಂತ್ಯ ಆವುತ್ತೋ ನವಗೆ ಅರಡಿಯ. ಆ ಇರುಳಿಂಗೆ ಉದಿ ಇಲ್ಲೆ..
ಇಲ್ಲಿ ಯೇವುದೂ ನಮ್ಮ ಕೈಲಿ ಇಲ್ಲೆ. ಅಕೇರಿಗೆ ಒಳಿವದು ನಮ್ಮ ಕರ್ಮದ ಫಲಂಗ ಮಾಂತ್ರ!

ಒಂದೊಪ್ಪ: ನಾವು ಮಾಡಿದ ಉಪಕಾರವೂ, ಅಪಚಾರವೂ ನಮ್ಮ ಬಿಟ್ಟು ಹೋವುತ್ತಿಲ್ಲೆ.

ಒಪ್ಪಣ್ಣ

   

You may also like...

8 Responses

 1. ಬೊಳುಂಬು ಗೋಪಾಲ says:

  ಎರಡು ಅಜ್ಜಂದ್ರ ಕತೆ ಹೇಳಿ, ಒಳ್ಳೆದು ಕೆಟ್ಟದರ ವಿಮರ್ಶೆ ಮಾಡಿದ ಒಪ್ಪಣ್ಣನ ಶೈಲಿ ಬಹು ಸುಂದರ. ಸಹಕಾರಿ ಅಜ್ಜನ ಹೆಸರು ಶಾಶ್ವತವಾಗಿ ಎಂದೆಂದಿಗೂ ಒಳಿಗು. ಸಮ್ಮೇಳನದ ಅಜ್ಜನಿಂದ ಸೋತು ಹೋದವು ಎಷ್ಟು ಶಾಪ ಹಾಕಿಕ್ಕೊ ದೇವರೇ ಬಲ್ಲ.

 2. ಹರೇ ರಾಮ, ಲೊಟ್ಟೆ-ಸತ್ಯ! ಒಪ್ಪಣ್ಣನ ಈ ಸರ್ತಿಯ ಪೀಠಿಕೆ ಕೊಶಿ ಇದ್ದು. ‘ವರಹ ಸತ್ಯಕ್ಕೆ ಚಿಕ್ಕಾಸಿನ ಲೊಟ್ಟೆ ಮೆರುಗು’ ಹೇಳ್ತವು. ಅದು ಸರಿಯೇ!

 3. ರಘುಮುಳಿಯ says:

  ನಿಜ ಒಪ್ಪಣ್ಣಾ.
  ಕಾಯಕವೇ ಕೈಲಾಸ.ಯಾವುದೇ ಫಲಾಪೇಕ್ಷೆ ಇಲ್ಲದ್ದೆ ದುಡಿವದು ನಮ್ಮ ಕರ್ಮ. ಸಮಾಜದ ಹಿರಿಯರ ಉದಾಹರಣೆಗಳ ಮೂಲಕ ಒಳ್ಳೆ ಸ೦ದೇಶ.

 4. ಬದುಕಿನ ಎರಡು ಮೋರೆಗಳಬಗ್ಗೆ ಅಜ್ಜಂದ್ರ ಉದಾಹರಣೆ ಮೂಲಕ ತಿಲಿಸಿಕ್ಕಿ ,ನಾವು ಸಾಗಕ್ಕಾದ ದಾರಿಯ ಬಗ್ಗೆ ಸಾಂಕೇತಿಕವಾಗಿ ತಿಳುವಳಿಕೆ ನೀಡಿದ ಬರಹ ಭಾರೀ ಲಾಯ್ಕ ಆಯಿದು ಒಪ್ಪಣ್ಣಾ
  ೨೫೦ ನೇ ಕಂತಿಲಿ ತುಂಬಾ ಒಳ್ಳೆ ವಿಚಾರ ಹೇಳಿದ್ದಿರಿ ಅಭಿನಂದನೆಗ

 5. ಶರ್ಮಪ್ಪಚ್ಚಿ says:

  ಸಹಕಾರಿ ಅಜ್ಜ°, ಸಮ್ಮೇಳನದ ಅಜ್ಜ°-ಎರಡು ವಿರುದ್ಧ ನಿಲುವಿನವರ ವ್ಯಕ್ತಿತ್ವದ ತುಲನೆ ಮಾಡಿ , ಒಂದೊಪ್ಪಲ್ಲಿ ಹೇಳಿದ ಹಾಂಗೆ “ನಾವು ಮಾಡಿದ ಉಪಕಾರವೂ, ಅಪಚಾರವೂ ನಮ್ಮ ಬಿಟ್ಟು ಹೋವುತ್ತಿಲ್ಲೆ.” ಹೇಳಿ ನಿರೂಪಿಸಿದ್ದು ಲಾಯಿಕ ಆಯಿದು.
  “ಅದೇನೇ ಇರಳಿ, ಅಜ್ಜಂದ್ರು ಮೋಕ್ಷಕ್ಕೆ ಹೋಗಲಿ, ಚೆಂದಕಿರಳಿ” ಈ ಹಾರೈಕೆ ಮಾತಿಲ್ಲಿ “ಅವವು ಮಾಡಿದ ಕರ್ಮ ಫಲ ಅವವೇ ಅನುಭವಿಸುತ್ತವು,ನಾವು ಅವರ ದೂರಲೆ ಆಗಲೀ ಅವಕ್ಕೆ ಶಾಪ ಹಾಕಲೆ ಆಗಲೀ ಇಲ್ಲೆ” ಹೇಳ್ತ ಒಳ್ಳೆ ಸಂದೇಶ ಕೊಟ್ಟತ್ತು.

 6. ಕೆ. ವೆಂಕಟರಮಣ ಭಟ್ಟ says:

  ಈ ಕಥೆ ಕೇಳುವಾಗ ನಮ್ಮ ಪುತ್ತೂರು ಹೊಡೆಯಾಣ ಅಣ್ಣ ತಮ್ಮಂದಿರ ನೆನಪಾವುತ್ತು. ೧೫ ವರ್ಷ ಹಿಂದೆ ಬೆಂಗಳೂರಿಲ್ಲಿ ಕಂಪ್ಯೂಟರ್ ಕಂಪೆನಿ ಮಾಡಿ ಊರಿಂದಲೂ, ಬೆಂಗಳೂರಿಂದಲೂ ಸಾಲ ಮಾಡಿ ಎಲ್ಲೋರಿಂಗೂ ಮೋಸ ಮಾಡಿಕ್ಕಿ ಹೋದವು ಈ ವರೆಗೂ ಬಯಿಂದವಿಲ್ಲೆ. ಅವರನ್ನೂ ಹಲವಾರು ಜೆನ ಇಂದಿಂಗೂ ಸ್ಮರಿಸುತ್ತವು !!!!!!!!!! ಹರೇ ರಾಮ.

 7. ಕೊನೆಗಾಲಲ್ಲಿ ನಮ್ಮ ಕೆಲಸಂಗೊ ಮಾತ್ರ ಜನಕ್ಕೆ ನೆಂಪಿಪ್ಪದು ಅಲ್ಲದಾ!
  ಒಳ್ಳೆ ಲೇಖನ ಒಪ್ಪಣ್ಣಾ 🙂

 8. ಶುದ್ದಿ ಲಾಯಕ ಆಯಿದು ಒಪ್ಪಣ್ಣಾ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *