ಕಷ್ಟವ ಕಳೆಯಲಿ ಕೃಷ್ಣನ ಅಷ್ಟಮಿ

August 10, 2012 ರ 12:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಸಮಾಜದ ರಕ್ಷಣೆ ನಾವೇ ಮಾಡೇಕು ಹೇದು ಕಳುದವಾರ ಶುದ್ದಿ ಮಾತಾಡಿಗೊಂಡಿದು; ಅಲ್ಲದೋ?
ಅಷ್ಟಪ್ಪಗ ಒಂದು ಸಂದರ್ಭ ವಿವರಣೆ ಆಯಿದು – ದ್ರೌಪದಿ ವಸ್ತ್ರಾಪಹರಣದ್ದು.
ತುಂಬಿದ ಸಭೇಲಿ ದುರುಳ ದುಶ್ಯಾಸನ ದ್ರೌಪದಿಯ ಮರಿಯಾದಿ ಕಳವಲೆ ಹೆರಟದು; ಅಷ್ಟಪ್ಪಗ ಶ್ರೀಕೃಷ್ಣನ ಧೇನಿಸಿದ್ದು; ಕೃಷ್ಣ ವರವ ಅನುಗ್ರಹಿಸಿದ್ದು; ದ್ರೌಪದಿಯ ವಸ್ತ್ರ ಅಕ್ಷಯ ಆದ್ಸು – ಮನೋಹರವಾದ ಕತೆ ಇದು; ಮಹಾಭಾರತಲ್ಲಿ ಬಪ್ಪದು.
ಹಾಂಗೆ ನೋಡಿರೆ ಮಹಾಭಾರತದ ಇಡೀ ಸೂತ್ರ ಇಪ್ಪದೇ ಶ್ರೀಕೃಷ್ಣನ ಹತ್ತರೆ.
ಆರಾರು ಎಲ್ಲೆಲ್ಲಿ ಹೇಂಗೇಂಗೆ ಮಾಡೇಕು, ಎಲ್ಲಿಗೆ ಕೀಲು ಮಡುಗೇಕು, ಎಲ್ಲಿಗೆ ಬತ್ತಿ ಮಡುಗೇಕು – ಹೇಳ್ತದು ಪೂರ ಶ್ರೀಕೃಷ್ಣಂದೇ ಉಸ್ತುವಾರಿ! ಹಾಂಗಾಗಿಯೇ ದುರ್ಯೋಧನನ ಸಾಮ್ರಾಜ್ಯ ನಾಶ ಆದ್ದು; ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದ್ದು.
ಬಾಬೆ ಆಗಿಪ್ಪ ಬಾಲ್ಯಂದ ಹಿಡುದು ಅವತಾರದ ಕೊನೆ ಒರೆಂಗೂ ಹಲವು ಲೀಲೆಗಳ ತೋರುಸಿದ್ದ° ಕೃಷ್ಣ.
ಇಂತಾ ಶ್ರೀಕೃಷ್ಣಂಗೆ ಹಲವು ರೂಪಂಗೊ. “ವಿಶ್ವರೂಪ” ಹೇಳ್ತವು ಕೆಲವು ಜೆನ ಅದರ.
ದೈವಾಂಶದ ಲಕ್ಷಣ ಇಪ್ಪ ಮಹಾಮೂರ್ತಿಗೆ ವಿಶ್ವರೂಪ ಅನ್ವಯ ಮಾಡ್ತದು ಕಷ್ಟ ಏನಿಲ್ಲೆ.
ಅತ್ಯಂತ ಹೆಚ್ಚು ರೂಪಲ್ಲಿ ಚಿತ್ರಣ-ವರ್ಣನೆ ಆದ ಸನಾತನ ದೇವರು ಕೃಷ್ಣನೇ ಹೇಳ್ತರಲ್ಲಿ ಸಂಶಯವೇ ಇಲ್ಲೆ.
ಇಂತಾ ಕೃಷ್ಣ ಭೂಮಿಗೆ ಅವತಾರ ಆದ ದಿನವ ಕೃಷ್ಣ ಜನ್ಮಾಷ್ಟಮಿ – ಹೇಳಿ ಲೋಕ ಇಡೀ ಆಚರಣೆ ಮಾಡ್ತವು.
ಮನುಕುಲದ ಉದ್ಧಾರಕ್ಕಾಗಿ ಬಂದ ಈ ಅವತಾರ ಮೂರ್ತಿಯ ಜನ್ಮದಿನ ಒಂದು ಗಳಿಗೆ ಆದರೂ ಕೃಷ್ಣನ ಬಗ್ಗೆ ಶುದ್ದಿ ಮಾತಾಡದ್ದರೆ ಅಕ್ಕೋ?!
~

ಶಾಂತಿ ಸಮಯಲ್ಲಿ ಕೊಳಲು – ನವಿಲು ಗರಿ; ಧರ್ಮರಕ್ಷಣೆ ಸಮಯಲ್ಲಿ ಸುದರ್ಶನ ಚಕ್ರ!

ಅನುರೂಪವಾದ ವರ° ವಸುದೇವನ ಒಟ್ಟಿಂಗೆ ಉಗ್ರಸೇನನ ಮಗಳು ದೇವಕಿಯ ಮದುವೆ ಕಾರ್ಯ ನೆಡೆತ್ತಾ ಇದ್ದು.
ಸೇರಿದ ಅತಿಥಿಗೊಕ್ಕೆ, ಬಂದ ನೆಂಟ್ರಿಷ್ಟರಿಂಗೆ, ವಿಶೇಷವಾಗಿ ಕೂಸಿನ ಅಣ್ಣ ಕಂಸಂಗೆ – ಎಲ್ಲೋರಿಂಗೂ ಮದುವೆ ಗವುಜಿಯೇ.
ಈ ಗೌಜಿ ಎಡಕ್ಕಿಲಿಯೇ ಕಂಸಂಗೆ ಒಂದು ಆಕಾಶವಾಣಿ ಕೇಳ್ತು “ಇದೇ ದೇವಕಿಯ ಎಂಟನೇ ಮಗನಿಂದ ನಿನಗೆ ಮರಣ” ಹೇದು!

ಕಂಸಂಗೆ ಮರಣಕೊಡ್ಳೆ ದೇವತೆಗೊಕ್ಕೆ ಎಂತಗೆ ಅಂಬೆರ್ಪು ಕೇಳಿದಿರೋ? – ಅವ° ಮಹಾ ದುರಹಂಕಾರಿ, ದುರುಳ; ಅಷ್ಟೇ ಶೆಗ್ತಿಶಾಲಿ. ಅಪ್ಪ° ಉಗ್ರಸೇನನನ್ನೇ ಸೆರೆಮನೆಲಿ ಕೂಡಿ ಹಾಕಿ ಕಾರ್ಬಾರು ಕೈಗೆ ತೆಕ್ಕೊಂಡೋನು!
ಕಂಸನ ನಾಶ ಸುಲಭ ಇಲ್ಲೆ; ಅದಕ್ಕೆ ಮಹಾವಿಷ್ಣುವೇ ಅವತಾರ ಎತ್ತಿ ಬರೆಕ್ಕಷ್ಟೆ – ಹೇದು ದೇವತೆಗೊಕ್ಕೂ ಗೊಂತಿದ್ದತ್ತು.
ಕಂಸನ ಅನರ್ಥ ಕಾರ್ಯಂಗೊ ಬೆಳದ ಹಾಂಗೆ ವಿಷ್ಣುವಿನ ಅವತಾರಕ್ಕೆ ಸಮಯ ಕೂಡಿ ಬಂದುಗೊಂಡಿದ್ದತ್ತು. ಅದಕ್ಕಾಗಿ ಆಯ್ಕೆ ಮಾಡಿಂಡದು ದೇವಕಿಯ ಗರ್ಭ! ಎಂತಾ ಭಾಗ್ಯ ಈ ದೇವಕಿದು!!
ಆದರೆ ಕಂಸ ಬಿಡ್ತನೋ? ಅಧಿಕಾರ ಇದ್ದು; ಶೆಗ್ತಿ ಇದ್ದು.
ವಸುದೇವ° – ದೇವಕಿಯ ಗರ್ಭಲ್ಲಿ ಎಂಟನೇ ಮಗು – ಹೇದರೆ, ಮಗು ಹುಟ್ಟುಸ್ಸು ನಿಘಂಟು, ತಡವಲೆಡಿಯ.
ಎಂಟನೇದು ಲೆಕ್ಕ ಸಿಕ್ಕುದು ಹೇಂಗೆ? ಅದಕ್ಕೆ ತಂಗೆಯ ಸೆರೆಮನೆಲಿ ಕೂಡಿ ಹಾಕಿದನಾಡ.
ತನ್ನ ಅಧಿಕಾರಕ್ಕಾಗಿ ಅಪ್ಪನ ಸೆರೆಮನೆಲಿ ಹಾಕಿದೋನಿಂಗೆ ತನ್ನ ಜೀವ ಒಳಿಯಲೆ ತಂಗೆಯ ಜೈಲಿಂಗೆ ಹಾಕುಸ್ಸು ಬೇಜಾರದ ವಿಶಯವೋ?!
ಒಂದೊಂದೇ ಬಾಬೆ ಜನನ ಆದ ಹಾಂಗೆ, ಆ ಬಾಬೆಯ ಹಿಡುದು ಕಂಸನೇ ಮೋಕ್ಷಕ್ಕೆ ಕಳುಸಿಗೊಂಡಿತ್ತಿದ್ದ°.
ಒಂದು – ಎರಡು – ಮೂರು.. ಕಂಸಂದೇ ಲೆಕ್ಕ ಮಾಡಿಗೊಂಡಿದ್ದಿದ್ದ°.
ದೇವಕಿ ಆರು ಹೆತ್ತಾದ ಮತ್ತೆ; ಏಳನೇ ಗರ್ಭ ರೂಪ ಆಗಿ ಅಪ್ಪದ್ದೇ – ಒಂದು ದಿನ ಇದ್ದಕ್ಕಿದ್ದ ಹಾಂಗೇ – ಮಾಯಕಲ್ಲಿ ದೇವಕಿಯ ಹೊಟ್ಟೆಂದ ಕಾಣೆ ಆತು! ಎಲ್ಲಿಗೆ? ವಸುದೇವನ ಸುರೂವಾಣ ಹೆಂಡತ್ತಿ ರೋಹಿಣಿಯ ಗರ್ಭಕ್ಕೆ.
ಗರ್ಭ ಅಲ್ಲೇ ಬೆಳದತ್ತು; ಶಿಶುವಿನ ಜನನವೂ ಆತು. ಮಾಣಿ ಮಹಾ ಬಲಶಾಲಿ – ಇವನೇ ಬಲರಾಮ.
ಗರ್ಭ ಹೋತಾಯಿಕ್ಕು ಗ್ರೇಶಿ ಕಂಸನೂ ಸುಮ್ಮನೆ ಕೂದ°.
~
ಮತ್ತಾಣದ್ದೇ ಅಷ್ಟಮ ಗರ್ಭ – ಎಂಟನೇ ಮಗು.
ಈ ಗರ್ಭ ವಸುದೇವ-ದೇವಕಿಯರ ದಾಂಪತ್ಯಂದ ಆದ್ಸು ಅಲ್ಲ; ಬದಲಾಗಿ ಮಹಾವಿಷ್ಣುವೇ ಸೂಕ್ತ ಸಮಯ ಅರ್ತು ಅವತಾರ ಆಗಿಂಡದು. ವಸುದೇವಂಗೆ ಇದು ಅಂದಾಜಿ ಆತೋ ಏನೋ – ಈ ಶಿಶುವಿನ ರಕ್ಷಣೆ ಮಾಡೇಕು ಹೇದು; ಅಂಬಗಳೇ ಬೇಕಾದ ವೆವಸ್ತೆ ಏರ್ಪಾಡುಗಳ ಮಾಡಿದ°.
ಅಂತೂ, ಶ್ರಾವಣ ಮಾಸ ಕೃಷ್ಣಪಕ್ಷ ಅಷ್ಟಮಿಯ ದಿನ ಅವತಾರಪುರುಷನ ಜನನ ಆತು.
ಕಪ್ಪು ಬಣ್ಣದ ಮಾಣಿ ಆದಕಾರಣ “ಕೃಷ್ಣ” ಹೇಳಿಯೇ ಹೆಸರಾತು. ಕೃಷ್ಣ ಹುಟ್ಟಿದ ದಿನ ಕೃಷ್ಣಾಷ್ಟಮಿ ಆತು.
ದೇವಕಿಗೆ ಆ ಮಾಣಿಯ ಅಂದವ, ಚೆಂದವ, ಕೊಂಡಾಟವ, ಮಾತೃತ್ವವ ಅನುಭವಿಸುವಷ್ಟು ಪುರುಸೊತ್ತೇ ಇತ್ತಿಲ್ಲೆ; ಕಂಸಂಗೆ ಗೊಂತಪ್ಪ ಮದಲೇ ವಸುದೇವ° ಬೇಕಪ್ಪ ವೆವಸ್ತೆ ಸುರುಮಾಡಿದ°.

ಗೋಪಾಲಕರ ಗುರಿಕ್ಕಾರ° “ನಂದಗೋಪ” ಇದ್ದಿದ್ದ°; ವೃಂದಾವನಲ್ಲಿ.
ಮದಲೇ ಮಾತಾಡಿದ ನಮುನೆಲಿ, ದೇವಕಿ ಹೆತ್ತ ಕೂಡ್ಳೇ ಬಾಬೆಯ ತಂದು ನಂದಗೋಪನ ಹತ್ತರೆ ಕೊಡುದು; ನಂದಗೋಪನ ಮಗುವಿನ ದೇವಕಿಯ ಹತ್ತರೆ ಕೊಡುದು.
ಸರ್ವಶಕ್ತನಾದ ಭಗವಂತನ ಒಳಿಶಲೆ ಹುಲುಮಾನವರು ಮಾಡುವ ಅಲ್ಪ ಪ್ರಯತ್ನಂಗೊ! ಅಲ್ಲದೋ?
ಹಾಂಗೆ, ಕುಂಞಿ ಬಾಬೆಯ ಹೆಡಗೆಲಿ ಹೊತ್ತುಗೊಂಡು ಸೆರೆಮನೆಂದ ನೆಡದು, ಯಮುನಾ ನದಿ ದಾಂಟಿ ನಂದಗೋಪನ ಹತ್ತರೆ ಕೊಟ್ಟ°; ನಂದಗೋಪಂಗೆ ಹುಟ್ಟಿದ ಮಗಳ ಪುನಾ ಅದೇ ಹೆಡಗೆಲಿ ಹಾಕಿಂಡು ದೇವಕಿಯ ಹತ್ತರೆ ತಂದು ಕೊಟ್ಟ°. ಇರುಳಿಂದಿರುಳೇ ಇಷ್ಟು ಮಾಡಿ ಮಡಗಿ ಆಯಿದು! ಕಂಸಂಗೆ ಗೊಂತಪ್ಪಗ ಉದಿಯಾಗಿತ್ತು.
ಮರದಿನ ಉದಿಯಪ್ಪದ್ದೇ, ಶುದ್ದಿ ಗೊಂತಾತು – ತಂಗೆ ದೇವಕಿ ಎಂಟನೇದು ಹೆತ್ತಿದಾಡ – ಹೇದು.
ಇಷ್ಟೂ ಒರಿಶ ಕಾದ್ಸು ಅದಕ್ಕೇ; ಅದೇ ಆಯೇಕಾದ್ಸು ಇವಂಗೆ; ಸೀತ ಓಡಿದ°, ಸೆರೆಮನೆಗೆ. ದೇವಕಿ ಒಂದು ಕೂಸುಬಾಬೆಯ ಎತ್ತಿ ಆಳುಸಿಗೊಂಡಿದ್ದು. ಬಾಬೆಯ ಕಂಡಪ್ಪದ್ದೇ, ಎಳಕ್ಕೊಂಡ°.
ಇನ್ನೆಂ…ತ ಕೊಲ್ಲೇಕು ಹೇದು ಹೆರಡುವಗಳೇ, ಬಾಬೆ ಪುಸ್ಕನೆ ಕಾಣೆ ಆತು.ಅದು ಬಾಬೆ ಅಲ್ಲ; ಅದು ಮಾಯೆ ಅಡ.
ಮಾಯೆ ಮಾಯ ಆದಪ್ಪದ್ದೇ ಆಕಾಶವಾಣಿ ಮತ್ತೊಂದು ಕೇಳಿತ್ತು – ಅದು ದೇವಕಿಯ ಮಗು ಅಲ್ಲ; ದೇವಕಿಯ ಮಗ° ನಂದಗೋಕುಲಲ್ಲಿ ಆಡಿಗೊಂಡಿದ್ದ – ಹೇದು.
ಎಲ್ಲಿ? ಬಲಶಾಲಿ ನಂದಗೋಪನ ಹತ್ತರೆಯೋ! ಛೇ!! ಒಟ್ಟಾರೆ ಕಂಸಂಗೆ ನೆಮ್ಮದಿ ಇಲ್ಲೆ!
~
ದೂರದ ನಂದಗೋಕುಲಲ್ಲಿ ನಂದಗೋಪ°-ಯಶೋದೆಯರ ಸಾಂಕಾಣಲ್ಲಿ ಕೃಷ್ಣ ಚೆಂದಕೆ ಬೆಳಕ್ಕೊಂಡಿತ್ತಿದ್ದ.
ಹೆತ್ತಬ್ಬೆ ದೇವಕಿಯ ಕರ್ತವ್ಯವ ಸಾಂಕುವ ಅಬ್ಬೆ ಯೆಶೋದೆ ಮುಂದುವರುಸುತ್ತು.
ಮಾಣಿಗೆ ಕಂಡಾಬಟ್ಟೆ ಲೂಟಿ! ಕಂಜಿದನವ ನೂಕಿ ಅಬ್ಬೆದನಕ್ಕೆ ಗೊಂತಾಗದ್ದ ಹಾಂಗೆ ಹಾಲು ಕುಡಿಸ್ಸೋ, ಯಶೋದೆ ಕೂಡಿ ಮಡಗಿದ ಬೆಣ್ಣೆಯ ಕಳ್ಳುದೋ – ಹೀಂಗಿರ್ತ ಲೂಟಿಗೊ. ಅದೇ ನಂದಗೋಕುಲಲ್ಲಿ ಅಣ್ಣ ಬಲರಾಮನೂ ಸಿಕ್ಕಿದ ಕಾರಣ ಲೂಟಿಗೆ ಇನ್ನಷ್ಟು ಲೂಟಿ ಸೇರಿ ಹಿಡಿಯಲೆಡಿಯದ್ದಷ್ಟು ಬೆಳವು ತೋರುಸಿಂಡಿತ್ತವು.

ಆದರೆ, ಬೆಳವ ಬಾಬೆಯ ಹೇಂಗಾರು ಮಾಡಿ ಕೊಲ್ಲೇಕು ಹೇದು ಕ್ರೂರಿ ಕಂಸ ಏರ್ಪಾಡು ಮಾಡ್ತ°.
ಒಂದಲ್ಲ – ಎರಡಲ್ಲ, ಹಲವು ಪ್ರಯತ್ನಂಗೊ. ಎಲ್ಲವೂ ಕೃಷ್ಣನ ಎದುರು ನೀರಾಗಿ ಹೋವುತ್ತು.

ಒಂದು ದಿನ ಬಾಬೆ ಆಡಿಗೊಂಡಿಪ್ಪಗ ಒಂದು ಹೆಮ್ಮಕ್ಕೊ ಬಂದು “ನೋಡಿಗೊಳ್ತೆ” ಹೇದು ಮಗುವಿನ ಹಿಡ್ಕೊಂಡತ್ತಾಡ.
ಆ ಹೆಮ್ಮಕ್ಕಳ ನಂದಗೋಕುಲಲ್ಲಿ ಅಷ್ಟನ್ನಾರ ಆರೂ ಕಂಡದಿಲ್ಲೆ – ಬಾಬೆಯ ತೆಕ್ಕೊಂಡತ್ತು; ಕೊಂಗಾಟ ಮಾಡಿಂಡು ಮೆಲ್ಲಂಗೆ ಹಾಲುಣುಸಲೆ ಹೆರಟತ್ತು.
ಪೂತನಿ ಹೇಳ್ತ ರಕ್ಕಸಿಯ ಗೋಪಿಕೆಯ ಹಾಂಗಿಪ್ಪ ಹೆಮ್ಮಕ್ಕಳ ರೂಪಲ್ಲಿ ಹೋಗಿ ಆ ಬಾಬೆಗೆ ವಿಷದ ಹಾಲು ಉಣುಸುಲೆ ಕಂಸನೇ ಹೇಳಿದ್ದಡ.
ಅದೇನೇ ಇರಳಿ; ಬಾಬೆ ಆ ಹೆಮ್ಮಕ್ಕಳ ಮೈಂದ ಹಾಲು ಹೀರಿ-ಹೀರಿ-ಹೀರಿದ್ದರ್ಲಿ, ಅದರ ನೆತ್ತರು ಇಡೀ ಕಾಲಿ ಆಗಿ, ವೇದನೆ ತಡೆಯದ್ದೆ, ದೊಡಾ ಆರ್ಭಟೆ ಕೊಟ್ಟೊಂಡು ರಾಕ್ಷಸರೂಪಲ್ಲಿ ದೊಪ್ಪನೆ ಬಿದ್ದು ಸತ್ತತ್ತಾಡ!

ಶಕಟಾಸುರ ಹೇದು ಒಬ್ಬ ಗಾಡಿಯ ರೂಪಲ್ಲಿ ಬಂದು ಕೊಲ್ಲಲೆ ನೋಡಿದನಾಡ.
ಈ ಲೂಟಿಮಾಣಿ ಆ ಗಾಡಿಯ ಮೇಲೆ ಹತ್ತಿ ಹಾರಿದ್ದರ್ಲಿ ಗಾಡಿ ಲಗಾಡಿ!

ಒಂದಿನ ಅಂತೂ ಈ ಲೂಟಿಯ ಹಿಡುದು ಮಡಗಲೆ ಎಡಿತ್ತಿಲ್ಲೆ ಹೇದು ಕಡವಕಲ್ಲಿಂಗೆ ಕಟ್ಟಿರ್ತಾಡ.
ಯಶೋದೆ ಅತ್ಲಾಗಿ ಹೋಪದ್ದೇ, ಇವ° ಮೆಲ್ಲಂಗೆ ಆ ಕಲ್ಲನ್ನೇ ಪೊಕ್ಕುಸಿಂಡು ಹೆರ ನೆಡೆತ್ತ°.
ಜಾಲಕರೆಲಿ ಎರಡು ದೊಡಾ ಮರಂಗೊ ನಿಂದಿರ್ತು – ಮೆಲ್ಲಂಗೆ ಆ ಮರಂಗಳ ಎಡಕ್ಕಿಲೆ ನುರ್ಕಿ – ಒಂದು ಹೊಡೆಲಿ ಮಾಣಿ, ಇನ್ನೊಂದು ಹೊಡೆಲಿ ಕಲ್ಲು – ಜೋರು ಎಳೆತ್ತನಾಡ. ಚಟಚಟನೆ ತುಂಡಾಗಿ ಮರಂಗೊ ಕೆಳ ಉರುಳುತ್ತು. ಅವುದೇ ಎರಡು ರಾಕ್ಷಸರು ಆಡ; ಮರದ ರೂಪಲ್ಲಿ ಬಂದು ನಿಂದದು.
ಹೀಂಗಿರ್ತ ಲೂಟಿಗೊ!

ಮಾಣಿ ರಜಾ ದೊಡ್ಡ ಆದಪ್ಪದ್ದೇ ಕೀಟಲೆಗಳೂ ದೊಡ್ಡ ಆತಾಡ.
ಮೀವಲೆ ಇಳುದ ಗೋಪಿಕಾಸ್ತ್ರೀಯರ ಸೀರೆ ಹುಗ್ಗುಸಿ ಮಡಗುದೋ – ಹೀಂಗಿರ್ತ ಪೋಕ್ರಿ ಲೂಟಿಗೊ.
ಏನೇ ಇದ್ದರೂ ನಂದಗೋಕುಲಲ್ಲಿ ಗೋಪಿಕೆಯರೆಲ್ಲೋರುದೇ ಈ ಮಾಣಿಯ ಕೊಂಗಾಟ ಮಾಡುವೋರೇ!
ಕೃಷ್ಣ ಎಲ್ಲೋರಿಂಗೂ ಬೇಕು; ಕೃಷ್ಣಂಗೂ ಎಲ್ಲೋರುದೇ ಬೇಕು.
~
ಬಾಲ್ಯಲೀಲೆಗಳ ಮುಗುಶಿದ ಅವತಾರಿ ಗಂಭೀರ ಆವುತ್ತ°.
ವಿಷಪೂರಿತ ಯಮುನಾ ನೀರಿಂದಾಗಿ ಹಲವು ಗೋವುಗೊ, ಗೋಪಾಲಕರು ಗತಪ್ರಾಣರಾದವಡ.
ಯಮುನಾ ನದಿಗೆ ಕಾಳಿಂಗ ಸರ್ಪ° ವಿಷ ಸೇರುಸುತ್ತಾ ಇದ್ದ° ಹೇದು ಗೊಂತಾಗಿ ಕೃಷ್ಣ ಕಾಳಿಂಗನ ಬೀಲ ಹಿಡುದು, ತಲೆಯ ಮೇಗೆ ನರ್ತನ ಮಾಡಿ “ಹದ” ಮಾಡ್ತನಡ. ಇದರಿಂದಾಗಿ ಕಾಳಿಂಗನ ಮದ ನಾಶ ಆಗಿ, ಅವನ ಉಪದ್ರ ನಿಂದತ್ತಾಡ.
ಇಂದ್ರಂಗೆ ಒಂದರಿ ಗೋಪಾಲಕರ ಮೇಗೆ ಕೋಪ ಬಂದು ವರುಣನ ಮೂಲಕ ಭರೋ..ನೆ ಮಳೆ ಬರುಸುತ್ತನಾಡ.
ಎಂತಾ ಮಳೆ – ಊರಿಂಗೆ ಊರೇ ಮುಳುಗುತ್ತ ನಮುನೆದು. ದನಗೊಕ್ಕೆ, ಗೋಪಾಲಕರಿಂಗೆ, ಅವರ ಸಂಸಾರಕ್ಕೆ ಹೋಪಲಾದರೂ ಜಾಗೆ ಎಲ್ಲಿದ್ದು? ಒಳ್ಕೊಂಬಲಾದರೂ ಅವಕಾಶ ಎಲ್ಲಿದ್ದು? ಎಲ್ಲೋರುದೇ ಬಂದು ಸರ್ವಶಕ್ತ° ಕೃಷ್ಣಂಗೆ ದೂರು ಕೊಟ್ಟವಾಡ.
ಇಡೀ ಗುಡ್ಡೆ ಒಂದರ ನೇಚಿ, ಕೈ ಬೆರಳಿಲಿ ನೆಗ್ಗಿ ಹಿಡ್ಕೊಂಡು ಇಡೀ ಗೋಸಂಕುಲ, ಗೋಪಾಲಕರನ್ನೇ ಒಳುಶಿದನಾಡ.
ಇದೆಲ್ಲ ಕೆಲಸಂಗಳಿಂದ ಕೃಷ್ಣ ಆ ಊರಿಂಗೆ ತುಂಬ ಬೇಕಾದೋನು ಆಗಿ ಹೋದನಾಡ.

ಇದರೆಡಕ್ಕಿಲಿ, ಒಂದು ದಿನ “ಕಂಸ ಬಿಲ್ಲುಹಬ್ಬ ಏರ್ಪಾಡು ಮಾಡಿದ್ದ, ನಿಂಗೊ ಬರೆಕಡ” ಹೇದು ಕೃಷ್ಣ-ಬಲರಾಮರಿಂಗೆ ಆಹ್ವಾನ ಬತ್ತು. ಹೋಗೆಡಿ ಹೋಗೆಡಿ ಹೇದು ಆರು ಎಷ್ಟು ಹೇಳಿರೂ ಕೇಳದ್ದೆ ಇಬ್ರು ಪುಳ್ಳರುಗೊ ಹೆರಟೇ ಬಿಡ್ತವು ಕಂಸನ ಆಸ್ಥಾನಕ್ಕೆ.
ಯಥಾರ್ಥಕ್ಕೂ ಕೃಷ್ಣನ ಕೊಲ್ಲಲೆ ಕಂಸನೇ ಮಾಡಿದ ಏರ್ಪಾಡು ಅದು. ಆದರೆ ಅದು ಕೈಗೂಡದ್ದೆ, ಕೃಷ್ಣನೇ ಪಾಪಿ ಸೋದರಮಾವ° ಕಂಸನ ನಾಶ ಮಾಡಿಬಿಡ್ತ°. ಸೆರೆಮನೆಲಿ ಇದ್ದಿದ್ದ ಕಂಸನ ಅಪ್ಪ° ಉಗ್ರಸೇನ ಮಹಾರಾಜಂಗೆ ಪಟ್ಟಕಟ್ಟಿ, ದೇಶದ ಜನತೆಗೆ ನೆಮ್ಮದಿ ಕೊಡ್ತ°. ದೇವಕಿ-ವಸುದೇವರ ಬಿಡುಗಡೆ ಮಾಡ್ತನಾಡ.
ದೂರದ ದ್ವಾರಕೆಗೆ ಹೋಗಿ ಯಾದವರ ಸಾಮ್ರಾಜ್ಯ ಸ್ಥಾಪನೆ ಮಾಡ್ತನಾಡ.
ನಂದಗೋಪ-ಯಶೋದೆ, ದೇವಕಿ ವಸುದೇವ – ಇಬ್ರಿಬ್ರು ಅಪ್ಪಮ್ಮಂದ್ರ ಕೊಂಗಾಟದ ಮಗ° ಲೋಕಪ್ರಿಯ ಆವುತ್ತ°.
~
ಯೇವದೋ ರಾಕ್ಷಸರಾಜ ನಾಡಿಂಗೆ ದಾಳಿಮಾಡಿ ಹೆಣ್ಣುಮಕ್ಕಳ ಪೂರ ಅಪಹರಣ ಮಾಡಿದ್ದತ್ತಾಡ.
ಕೃಷ್ಣಂಗೆ ದೂರು ಕೊಟ್ಟಪ್ಪಾಗ ರಾಕ್ಷಸನ ಕೊಂದು ಆ ಹೆಣ್ಣುಮಕ್ಕಳ ಬಿಡುಸಿ ರಕ್ಷಿಸೆಂಡು ಬತ್ತನಾಡ. ಆದರೆ, ರಾಕ್ಷಸರ ಅಪಹರಣಕ್ಕೆ ಒಳಗಾದ ಆ ಹೆಂಗಸರ ಊರಿಲಿ ಆರುದೇ ಸೇರ್ಸಿಗೊಂಬಲೆ ಇಷ್ಟಪಡ್ತವಿಲ್ಲೆ.
ಚೆ, ಅವರದ್ದಲ್ಲದ್ದ ತಪ್ಪಿಂಗೆ ನಮ್ಮ ಸಾವಿರಾರು ಹೆಣ್ಣುಮಕ್ಕೊ ಜಾತಿಭ್ರಷ್ಟ ಆವುತ್ತವು ಹೇದು ಗೊಂತಪ್ಪದ್ದೇ – ಕೃಷ್ಣ ಎದುರು ಬಂದು – “ಎಲ್ಲೋರನ್ನೂ ಆನು ಮದುವೆ ಆವುತ್ತೆ” ಹೇಳ್ತನಾಡ.
ಕೃಷ್ಣನ ಹೆಂಡತ್ತಿ ಹೇಳಿ ಆದರೆ ಆ ಕೂಸುಗೊಕ್ಕೆ, ಹೆಮ್ಮಕ್ಕೊಗೆ ಇನ್ನೆಂತ ಗುರುತಿನ ಚೀಟಿ ಬೇಕು! ಅಲ್ಲದೋ?
ಕೃಷ್ಣಂಗೆ ಹದ್ನಾರು ಸಾವಿರ ಹೆಂಡತ್ತಿಯಕ್ಕೊ ಆದ ಕತೆ ಇದು ಅಡ.
ಒಂದರಿ ಪೇಟೆಮಾಣಿ ಒಬ್ಬ ಎಡಪ್ಪಾಡಿಬಾವನ ಹತ್ತರೆ ಮಾತಾಡುವಗ “ಎನಗೆ ಕೃಷ್ಣನ ಹಾಂಗೆ ತುಂಬ ಹೆಂಡತ್ತಿಯಕ್ಕೊ ಇದ್ದರೆ ಒಳ್ಳೆದು” ಹೇಳಿದನಾಡ. ಅದಕ್ಕೆ ಎಡಪ್ಪಾಡಿಬಾವ “ಕೃಷ್ಣನ ಹಾಂಗೆ ಆಯೇಕಾರೆ ಬಾಲ್ಯಂದಲೇ ಸುರುಮಾಡೇಕು, ಪೂತನಿಯ ವಿಷದ ಹಾಲು ಕರಗುಸಿದಲ್ಲಿಂದಲೇ ಸುರುಮಾಡು” ಹೇಳಿದನಾಡ! ಎಡಪ್ಪಾಡಿಬಾವಂಗೆ ಆರಾರು ನಮ್ಮ ನಂಬಿಕೆಗಳ ನೆಗೆಮಾಡಿರೆ ಕೋಪವೇ ಬಪ್ಪದು!
~
ಸಾವಿರಾರು ಹೆಂಡತ್ತಿಯಕ್ಕೊ ಇದ್ದರೂ, ರುಕ್ಮಿಣಿ – ಸತ್ಯಭಾಮೆ ಇಬ್ರು ಪ್ರಧಾನ. ಅದಿರಳಿ.
ಪುರಾಣಲ್ಲಿ ಕತೆ ಹೀಂಗೆ ಬಂದರೂ, ಜಾನಪದಲ್ಲಿ ರಜಾ ವಿತ್ಯಾಸ ಬತ್ತು.
ಕೃಷ್ಣಂಗೆ ರಾಧೆ ಹೇದು ಒಂದು ಪ್ರಿಯತಮೆ ಇರ್ತಾಡ. ರಾಧಾ-ಕೃಷ್ಣರ ಪ್ರೀತಿ ಪ್ರಣಯಂಗೊ ಮಹಾಕಾವ್ಯಂಗೊ ಆಗಿ ಹರಿದಾಡಿ ದೊಡಾ ಜಾನಪದ ಕ್ರಾಂತಿಯೇ ಆಗಿದ್ದತ್ತಾಡ.
ಅಂದೊಂದರಿ ಜಯದೇವನ ಗೀತೆಗೋವಿಂದದ ಬಗ್ಗೆ ನಾವು ಶುದ್ದಿ ಮಾತಾಡುವಗ ಈ ಸಂಗತಿ ಹೇಳಿದ್ದಲ್ಲದೋ, ನೆಂಪಿದ್ದೋ?
ಈಗಳೂ ಸಿನೆಮಂಗಳಲ್ಲಿ ಪ್ರೀತಿಯ ತೋರ್ಸೇಕಾದರೆ ರಾಧಾ-ಕೃಷ್ಣರ ನೆಂಪು ಮಾಡಿಗೊಳ್ತವಾಡ.
~
ಮುಂದೆ ಮಹಾಭಾರತ ಕಾಲಲ್ಲಿ ಪಾಂಡವರ ಪಕ್ಷಲ್ಲಿ ಪ್ರಧಾನ ಪಾತ್ರಲ್ಲಿರ್ತ ಶ್ರೀಕೃಷ್ಣ.
ಯುದ್ಧಾರಂಭದ ಸನ್ನಿವೇಶ, ಸಂಧಾನ, ಮಾರ್ಗದರ್ಶನಂಗೊ ಮಾಂತ್ರ ಅಲ್ಲದ್ದೆ, ಯುದ್ಧಂದ ವಿಮುಖನಾದ ಅರ್ಜುನಂಗೆ ತತ್ವಬೋಧವನ್ನೂ ಮಾಡ್ತ°. ಇದುವೇ ಮುಂದೆ ನವಗೆ ಭಗವದ್ಗೀತೆ ಆಗಿ ಸಿಕ್ಕಿದ್ದು.
(ಚೆನ್ನೈಭಾವ° ಈ ಭಗವದ್ಗೀತೆಯ ನಮ್ಮ ಬೈಲಿಂಗೆ ಹೇಳ್ತಾ ಇದ್ದವು. ಗೊಂತಿದ್ದನ್ನೇ?)
ಸನಾತನ ಧರ್ಮದ ಶ್ರೇಷ್ಠ ರಚನೆಗಳಲ್ಲಿ ಒಂದಾದ ಮಹಾಭಾರತದ ಅತ್ಯುತ್ಕೃಷ್ಟ ಭಾಗ ಆಡ.
ಜೀವಾತ್ಮ ಪರಮಾತ್ಮಂಗಳ ಸೂಕ್ಷ್ಮಂಗಳ, ಅರ್ಜುನನ ಸಮಸ್ಯೆಗೊಕ್ಕೆ ಸಾವಧಾನವಾಗಿ ವಿವರವಾಗಿ ಪರಿಹಾರ ಕೊಟ್ಟೊಂಡು, ತತ್ವಾದರ್ಶಂಗಳ ವಿಮರ್ಶೆಮಾಡುವ ಮಹಾ ಮೇಧಾವಿ ಆಗಿ ಕಾಣ್ತ ಈ ಕೃಷ್ಣ. ಬಾಲ್ಯಕಾಲಲ್ಲಿ ಪೀಕ್ಲಾಟಲ್ಲಿ ಹೇಂಗೆ ಉಶಾರಿಯೋ, ಯುದ್ಧಸಂದರ್ಭಲ್ಲಿ ರಾಜಕೀಯಲ್ಲಿಯೂ ಅಷ್ಟೇ ಉಶಾರಿ ಹೇದು ತೋರ್ಸುತ್ತ°.
ಅರ್ಜುನ ಯುದ್ಧಮಾಡಿ, ಕೌರವ ಸೇನೆಯ ನಾಶ ಮಾಡ್ತ°, ಭೀಮ -ದುರ್ಯೋಧನನ ನಾಶಮಾಡ್ತ°, ಧರ್ಮವಿಜಯ ಆವುತ್ತು.
ಎಲ್ಲದಕ್ಕೂ ಕೃಷ್ಣನ ಮಾರ್ಗದರ್ಶನವೇ ಕಾರಣ ಹೇದು ಮಹಾಭಾರತ ಓದಿದ ಎಲ್ಲೋರುದೇ ಒಪ್ಪುತ್ತವು.
~
ಯಾದವ ರಾಜ್ಯ ಸ್ಥಾಪನೆ ಆಗಿ, ಕೃಷ್ಣನ ಆಡಳ್ತೆಲಿ ಉತ್ತುಂಗಲ್ಲಿದ್ದರೂ, ಮುಂದೆ ಅವರೊಳವೇ ಕಲಹ ಗಲಾಟೆಗೊ ಬೆಳದು ನಾಶ ಆವುತ್ತವು. ಕುಟುಂಬದ ಒಳವೇ ಜಗಳ ಮಾಡ್ತದರ “ಯಾದವೀ ಕಲಹ” ಹೇಳಿಯೂ ಹೇಳ್ತವಾಡ.
ಅಷ್ಟಾಗಲೇ ತಾನು ಬಂದ ಕಾರ್ಯಂಗಳ ಸಂಪೂರ್ಣ ಮಾಡಿದ್ದ ಕೃಷ್ಣಂಗೆ ಈ ಕಲಹವ ನೋಡಿ ರೋಸಿ ಹೋಗಿರ್ತು.
ಒಂದಿನ ಮರದಡಿಲಿ ನೆರಳಿಂಗೆ ಕಾಲುನೀಡಿ ಮನುಗಿ ವಿಶ್ರಾಂತಿ ತೆಕ್ಕೊಂಡಿರ್ತ°. ಕಪ್ಪು ಕಾಲಬೆರಳಿನ ಮಾಂತ್ರ – ದೂರಂದ ಕಂಡ ಒಬ್ಬ ಬೇಟೆಗಾರ° – ಇದು ಯೇವದೋ ಪ್ರಾಣಿ – ಹೇಳಿ ಗ್ರೇಶಿ ಬಾಣ ಬಿಡ್ತ°.
ಬಂದು ನೋಡುವಗ ಅದು ಭಗವಾನ್ ಶ್ರೀಕೃಷ್ಣ.
ಅಯ್ಯಯ್ಯೋ ತಪ್ಪಾತು – ಹೇದು ಮದ್ದರವಲೆ ಹೆರಡ್ತ ಆ ಬೇಡ°.
“ತಪ್ಪೇನಿಲ್ಲೆ, ಕಳುದ ಅವತಾರಲ್ಲಿ ಆನು ರಾಮ ಆಗಿಪ್ಪಾಗ ನೀನು ವಾಲಿ ಆಗಿದ್ದಿದ್ದೆ. ಆನು ನಿನ್ನ ಬಾಣಬಿಟ್ಟು ಮೋಕ್ಷಕ್ಕೆ ಕಳುಸಿದ್ದೆ. ಈಗ ನೀನು ಎನಗೆ ಅದನ್ನೇ ಕೊಟ್ಟದು” ಹೇಳಿದನಾಡ.
ಸರ್ವಶಕ್ತ ಸುದರ್ಶನಚಕ್ರ ಮಡಿಕ್ಕೊಂಡು ಇಡೀ ಲೋಕವನ್ನೇ ಆಳಿದ ಭಗವಂತಂಗೆ – ಕೇವಲ ಕಾಲ ಹೆಬ್ಬೆರಳಿಂಗೆ ಗಾಯ ಆದ್ದರ್ಲಿ ಎಂತಕ್ಕು!?
ಅವತಾರ ಸಮಾಪ್ತಿ ಅಪ್ಪಲೆ ಅದು ಸಾಕಾಯಿದು.
ಲೋಕಕ್ಕೊಂದರಿ ದೊಡ್ಡ ಬೆಣಚ್ಚಿನ ಕೊಟ್ಟು, ಆ ಪ್ರಖರ ತೇಜಸ್ಸಿನ ಒಟ್ಟಿಂಗೇ ಶ್ರೀಕೃಷ್ಣ ಪುನಾ ಮೂಲ ಸ್ವರೂಪಕ್ಕೆ ಬಂದು, ವೈಕುಂಠಕ್ಕೆ ಹೋಗಿ ಅವತಾರ ಮುಗುಶಿದ°.
~
ಕೃಷ್ಣನ ಅವತಾರ ಆದ್ಸರ ಲೋಕ ಇಡೀ ನೆಂಪು ಮಾಡಿಗೊಳ್ತವು.
ನಮ್ಮ ಊರಿಲಿಯೂ ಹಲವು ರೀತಿಲಿ ಕೃಷ್ಣನ ಜಯಂತಿ ಆಚರಣೆ ಮಾಡ್ತವು. ಇರುಳಾಣ ನಿತ್ಯಪೂಜೆಗೆ ರಂಗಮಾವ° ಬೆಣ್ಣೆ ನೈವೇದ್ಯ ಮಾಡ್ಳೆ ಮರೆಯವು. ಹಾಂಗೇ ಪೂಜೆಗೆ ಹೂಗು ಹಾಕುವಗ ರಜ ವಿಷ್ಣುಕ್ರಾಂತಿ ಪುಷ್ಪವ (ಎಲೆಯ) ಸೇರುಸಿ ಹಾಕುಗು.
ಮುನ್ನಾಣದಿನವೇ ಸೊಲುದುಮಡಗಿದ ತೆಂಗಿನಕಾಯಿಯ ಸಂಕು ಕೊಂಡೋಗಿ ಬೈಲಕರೆಲಿ “ಕಾಯಿಕುಟ್ಟುಗು”.
ಎಡಿಗಾದೋರು ಎಣ್ಣೆಕಿಟ್ಟಿದ ಜಾರುಕಂಬ ಹತ್ತುಗು.
ಕಣ್ಣಿಂಗೆ ಒಸ್ತ್ರ ಕಟ್ಟಿರೂ ಹೋಗಿ “ಮಸರು ತುಂಬಿದ ಮಣ್ಣಳಗೆ” ಒಡಗು.
ಈಗೀಗ ಕುಂಞಿ ಬಾಬೆಗೊಕ್ಕೆ ಕೃಷ್ಣಚಾಮಿಯ ವೇಶ ಹಾಕುಸುಗು. ಉತ್ತರ ಭಾರತಲ್ಲಿ ಗುಂಪುಗುಂಪು ಜೆನಂಗೊ ಪಿರಮಿಡ್ಡು ಮಾಡಿ ಎತ್ತರಲ್ಲಿ ಕಟ್ಟಿದ ಮಣ್ಣಳಗೆಯ ಒಡಗು.
ಅಂತೂ, ಕೃಷ್ಣ ಮಾಡಿದ ಕೀಟ್ಳೆಗಳ ನೆಂಪುಮಾಡುವ ಹಾಂಗೆ ಹಲವು ಸ್ಪರ್ಧೆಗಳ ಆಚರಿಸುಗು.
ಧರ್ಮಕ್ಕೆ ಯೇವಯೇವಗ ಚ್ಯುತಿ ಬತ್ತೋ, ಅಂಬಗ ಎಲ್ಲ ಅವತಾರ ಎತ್ತಿ ಬತ್ತೆ- ಹೇಳಿ ಕೃಷ್ಣ ಅರ್ಜುನಂಗೆ ಹೇಳಿದ್ದನಾಡ.
ಪ್ರತಿ ಒರಿಶ ಶ್ರಾವಣ ಕೃಷ್ಣಪಕ್ಷ ಅಷ್ಟಮಿ ಬಪ್ಪಗ ಅವ° ಹೇಳಿದ ಮಾತುಗೊ ನೆಂಪಾವುತ್ತು.
ಅದರೊಟ್ಟಿಂಗೆ ಅವನ ಬಾಲ್ಯ ಲೀಲೆಗೊ, ಲೂಟಿಗೊ, ಅವನ ತತ್ವಂಗೊ, ಆದರ್ಶಂಗೊ ಎಲ್ಲವೂ ನೆಂಪಾವುತ್ತು.
ಅಲ್ಲದೋ?
ಒಂದೊಪ್ಪ: ನಂದನ ವೃಂದಾವನ ನಂದನವನ ಆದ ಹಾಂಗೇ, ಕಷ್ಟದ ಬದ್ಕುಗಳ ಕೃಷ್ಣ ಯೇವತ್ತೂ ಬೆಳಗಲಿ.

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಚೆನ್ನೈ ಬಾವ°

  ಕೃಷ್ಣೋ ರಕ್ಷತು ನೋ ಚರಾಚರಗುರುಃ
  ಕೃಷ್ಣಂ ನಮಸ್ಯಾಸ್ಮ್ಯಹಂ ।
  ಕೃಷ್ಣೇನಾಮರಶತ್ರುವೋ ವಿನಿಹತಾಃ
  ಕೃಷ್ಣಾಯ ತಸ್ಮೈ ನಮಃ ॥
  ಕೃಷ್ಣಾದೇವ ಸಮುತ್ಥಿತಂ ಜಗದಿದಂ
  ಕೃಷ್ಣಸ್ಯ ದಾಸೋಸ್ಮ್ಯಹಂ ॥
  ಕೃಷ್ಣೇ ಭಕ್ತಿರಚಂಚಲಾಸ್ತು ಭಗವನ್
  ಹೇ ಕೃಷ್ಣ ತುಭ್ಯಂ ನಮಃ ॥

  [Reply]

  VN:F [1.9.22_1171]
  Rating: +2 (from 2 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಕೃಷ್ಣನ ಜೀವನ ಎಲ್ಲರಿಂಗೂ ಆಸಕ್ತಿಯ ವಿಷಯ.ಅದೇ ರೀತಿ ವಾದ ವಿವಾದದ ವಿಷಯ.
  ಕೃಷ್ಣ ಧರ್ಮವ ಎತ್ತಿ ಹಿಡಿದ.ಧರ್ಮವ ಆಚರಣೆಲಿ ತಾರದ್ದವಕ್ಕೆ ಧರ್ಮವೂ ಅಗತ್ಯಕ್ಕೆ ರಕ್ಷಣೆ ಕೊಡ ಹೇಳಿ ಕರ್ಣಾವಸಾನಲ್ಲಿ ಸಾರಿದ್ದ.ನಮ್ಮಲ್ಲಿ ಎಂತಾ ಅನ್ಯಾಯ ಮಾಡಿದವಕ್ಕೂ ಕಾನೂನಿನ ಬಲ ಇದ್ದು-ಮಾನವ ಹಕ್ಕುಗಳ ರಕ್ಷಣೆ ಹೇಳುವ ಒಂದು ವಿಚಾರ ಇದ್ದು.ಇದು ಕೃಷ್ಣ ಹೇಳುವ ಧರ್ಮ ಪ್ರತಿಷ್ಠಾಪನೆಗೆ ಅಡ್ಡಿಯೇ ಸರಿ.
  ಮಹಾಭಾರತಲ್ಲಿ ತೊಡೆ ಮುರಿದ ಕೌರವನ ಕೃಷ್ಣನೆ ಮೊದಲಾಗಿ ಎಲ್ಲರೂ ಬಿದ್ದಲ್ಲೇ ಬಿಟ್ಟು ಹೋವುತ್ತವು.ಅವ ಸುಮಾರು ಹೊತ್ತು ಕಳೆದು ಇರುಳು ಪ್ರಾಣ ಬಿಡುತ್ತ.ಅಲ್ಲಿ ಅವನ ಕರ್ಮ ಅವಂಗೆ ಹೇಳುವ ನಿರ್ಭಾವುಕ ಭಾವ ಇದ್ದು ಅಲ್ಲದೊ?
  ಕೃಷ್ಣನ ಒಂದೊಂದು ನಡೆ ವಿಶಿಷ್ಟ-ಅಧ್ಯಯನಯೋಗ್ಯ.

  [Reply]

  VA:F [1.9.22_1171]
  Rating: +2 (from 2 votes)
 3. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಕೃಷ್ಣ ಚಾಮಿಯ ಕಥೆಯ ಒಪ್ಪಣ್ಣನ ಭಾಷೆಲಿ ಅಷ್ಟಮಿಯ ಸಮೆಲಿ ಓದಿ ಕೊಶೀ ಆತು.
  “ಕಷ್ಟವ ಕಳೆಯಲಿ ಕೃಷ್ಣನ ಅಷ್ಟಮಿ” – ಶುದ್ದಿಯ ತಲೆಬರಹವೇ ಅಷ್ಟು ಲಾಯಕಿತ್ತು. ಓದುತ್ತಿದ್ದ ಹಾಂಗೇ ಬೈಲಿನ ಸಮಸ್ಯಾ ಪೂರಣವುದೆ ನೆಂಪಾತು. ಮನ್ನೆ ಕೊಟ್ಟ ಸಮಸ್ಯೆಗೆ ಮತ್ತೊಂದು ಪದ್ಯ ಬರವೋ ಹೇಳಿ ಕಂಡತ್ತು.

  ಚಿಣ್ಣರ ಮೆಚ್ಚಿನ ಚಾಮಿಯು ಇವನೇ
  ಬೆಣ್ಣೆಯ ತಿಂದಾ ಕಳ್ಳನು ಅವನೇ
  ಹೆಣ್ಣುಗಳೆಲ್ಲರ ಮನಸಿನ ಕದ್ದಾ ಕೊಂಗಾಟದ ಮಾಣೀ ।

  “ಕಣ್ಣ”ನ ಹೆಸರಲಿ ಎಲ್ಲಾ ದುರುಳರ
  ಕಣ್ಣಿನ ಒಡಶೀ ಹರಸಿದ ಹುಡುಗಾ
  ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು ॥

  [Reply]

  VA:F [1.9.22_1171]
  Rating: +1 (from 1 vote)
 4. ಮುಳಿಯ ಭಾವ
  ರಘು ಮುಳಿಯ

  ಶ್ರೀ ಕೃಷ್ಣ ಕಮಲಾನಾಥೋ ವಾಸುದೇವ ಸನಾತನ.. ಲೀಲಾಮಾನುಷ ವಿಗ್ರಹನ ಲೀಲೆಗಳ ಓದಿದಷ್ಟೂ ಸರ್ತಿ ಮನಸ್ಸು ಹರುಷಲ್ಲಿ ಕೊಣಿತ್ತು.
  ಗೋಪಾಲಣ್ಣ ಹೇಳಿದ ಹಾ೦ಗೆ ಕೃಷ್ಣನ ಪ್ರತಿ ಯೋಚನೆ-ಯೋಜನೆಯೂ ವಿಶಿಷ್ಟವೇ.

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಹಿ

  ಕೃಷ್ಣಾಷ್ಟಮಿ ಸಮಯಲ್ಲಿ ಕೃಷ್ಣನ ಸಂದೇಶಂಗಳ ಕೊಟ್ಟ ಶುದ್ದಿ ಲಾಯಿಕ ಆಯಿದು.
  ಕೃಷ್ಣನ ಬಗ್ಗೆ ಎಷ್ಟು ಬರದರೂ ಮಾತಾಡಿದರೂ ಮುಗಿಯ. ಅಲೋಚನೆಗೆ ಸಿಕ್ಕದ್ದವ. ಭಗವದ್ಗೀತೆಯ ಕೊಟ್ಟ ದೇವೋತ್ತಮ.
  ಅವನ ಬಾಲ್ಯದ ಆಟಂಗೊ, ಮುಂದೆ ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಣೆ, ಅಧರ್ಮ ಇಪ್ಪಲ್ಲಿ ಧರ್ಮದ ಸ್ಥಾಪನೆ, ಮಹಾಭಾರತ ಯುದ್ಧ ಸಮಯಲ್ಲಿ ಅರ್ಜುನಂಗೆ ಗೀತೋಪದೇಶದ ಮೂಲಕ ಅವನ ಕರ್ತವ್ಯ ತಿಳಿಶಿ ಕೊಟ್ಟು ಧೈರ್ಯ ತುಂಬುವದು, ಎಲ್ಲವನ್ನೂ ಒಂದೇ ಲೇಖನಲ್ಲಿ ನಿರೂಪಿಸಿದ್ದು, ಓದುವವಕ್ಕೆ ಒಂದೊಂದೇ ಘಟನೆಗೊ ಕಣ್ಣ ಮುಂದೆ ಹೋವ್ತ ಹಾಂಗೆ ಮಾಡಿತ್ತು.

  [Reply]

  VA:F [1.9.22_1171]
  Rating: 0 (from 0 votes)
 6. ಸುವರ್ಣಿನೀ ಕೊಣಲೆ
  Suvarnini Konale

  ಹರೇ ಕೃಷ್ಣ ಹರೇ ಕೃಷ್ನ
  ಕೃಷ್ಣ ಕೃಷ್ಣ ಹರೇ ಹರೇ

  [Reply]

  VA:F [1.9.22_1171]
  Rating: 0 (from 0 votes)
 7. shyamaraj.d.k

  krishnam vande jagadgurum..

  [Reply]

  VA:F [1.9.22_1171]
  Rating: 0 (from 0 votes)
 8. ಜಯಶ್ರೀ ನೀರಮೂಲೆ
  jayashree.neeramoole

  ಹರೇ ರಾಮ

  [Reply]

  VA:F [1.9.22_1171]
  Rating: 0 (from 0 votes)
 9. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ರಾಮನ ನಡೆ ಕೃಷ್ನನ ನುಡಿ ಜೀವನಕ್ಕೆ ಆದರ್ಶ..ಶುದ್ಧಿಗೆ ಒಂದು ಒಪ್ಪ..ಕೃಷ್ಣಾಯ ತುಭ್ಯಂ ನಮಃ…

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಬೊಳುಂಬು ಮಾವ°ಪೆಂಗಣ್ಣ°ಬೋಸ ಬಾವದೊಡ್ಮನೆ ಭಾವಸಂಪಾದಕ°ಚುಬ್ಬಣ್ಣಚೆನ್ನಬೆಟ್ಟಣ್ಣಅಜ್ಜಕಾನ ಭಾವಕೆದೂರು ಡಾಕ್ಟ್ರುಬಾವ°ಪುಟ್ಟಬಾವ°ಪ್ರಕಾಶಪ್ಪಚ್ಚಿಅನುಶ್ರೀ ಬಂಡಾಡಿಪೆರ್ಲದಣ್ಣಕೊಳಚ್ಚಿಪ್ಪು ಬಾವಶಾ...ರೀಮುಳಿಯ ಭಾವವೇಣಿಯಕ್ಕ°ಜಯಶ್ರೀ ನೀರಮೂಲೆಸರ್ಪಮಲೆ ಮಾವ°ಕೇಜಿಮಾವ°ಶ್ಯಾಮಣ್ಣಪಟಿಕಲ್ಲಪ್ಪಚ್ಚಿಶ್ರೀಅಕ್ಕ°ಡಾಗುಟ್ರಕ್ಕ°ಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ