“ಕುಂಬ್ಳೆಜ್ಜ°” – ಅಣ್ಣಂದ್ರಿಂಗೆ ಪುತ್ರರೂಪ, ತಮ್ಮಂದ್ರಿಂಗೆ ತೀರ್ಥರೂಪ..!

ಜೀವ ಹೇದರೆ ಅದು ನೀರಿನ ಗುಳ್ಳೆಯ ಹಾಂಗೆ.
ಈಗ ಇಲ್ಲಿ ಕಾಣ್ತು, ನೋಡಿಗೊಂಡಿಪ್ಪಾಗ ಹಾಂಗೆ – ಪುಸ್ಕನೆ ಇಲ್ಲದ್ದೆ ಆವುತ್ತು.
ವೇದ ಮಂತ್ರಂಗಳಲ್ಲಿ “ಉರ್ವಾರುಕಮಿವ ಬಂಧನಾತ್” ಹೇಳುಸ್ಸು ಅದಕ್ಕೇ. ಸೌತ್ತೆಕಾಯಿಯೋ, ಕುಂಬ್ಳಕಾಯಿಯೋ, ಚೀನಿಕಾಯಿಯೋ – ಇದೆಲ್ಲ ಬಳ್ಳಿಲಿ ಹೇಂಗೆ ನಿಂದಿರ್ತು? ಒಂದು ಸಣ್ಣ ತೊಟ್ಟಿಲಿ. ಅದು ಯೇವ ಸಂದರ್ಭಲ್ಲಿಯೂ  ಬೀಳುಗು.
ನಮ್ಮ ಮೇಗಾಣ ಮೃತ್ಯುವೂ ಹಾಂಗೆಯೇ.
ಸೌತ್ತೆಕಾಯಿಯ ಬಳ್ಳಿಲಿ ಬಂಧುಸಿಗೊಂಡಿಪ್ಪ ಹಾಂಗೇ, ಯೇವದೇ ಸಂದರ್ಭಲ್ಲಿ ಮೃತ್ಯು ಬಕ್ಕು – ಹೇಳ್ತದು ತಾತ್ಪರ್ಯ.
– ಹೇದು ನೀರ್ಚಾಲು ದೊಡ್ಡಪ್ಪ° ಸಮಾದಾನಲ್ಲಿ ಕೈಕರಣ ಮಾಡಿಂಡು ಹೇಳಿದವು; ಕುಂಬ್ಳೆಜ್ಜನ ಮನೆಜೆಗಿಲಿಲಿಪ್ಪ ಮರದ ಕುರುಶಿಲಿ ಕೂದುಗೊಂಡು.

~

ಅಪ್ಪು! ಬೈಲಿಂಗೊಂದು ಸೆಡ್ಳು ಬಡುದ ನಮುನೆ ಬಂದು ಉದುರಿದ ಶುದ್ದಿಯೇ – ಕುಂಬ್ಳೆಜ್ಜ° ನಮ್ಮ ಬಿಟ್ಟಿಕ್ಕಿ ಹೋದವು – ಹೇಳುಸ್ಸು.
ಆರು? ಯೇವ? ಅಪ್ಪೋ? ಅವಕ್ಕೆಂತಾಯಿದು? ಎನ್ನಂದಲೂ ಗಟ್ಟಿ ಇತ್ತಿದ್ದವನ್ನೇ! ಅವ್ವೆಯೋ, ಬೇರೆ ಆರಾರ ಹೇಳುದಲ್ಲನ್ನೇ? – ಈ ನಮುನೆ ಹಲವಾರು ಮಾತುಗೊ ಬೈಲಿನೊಳ ವಿಷಯ ತಿಳುಶುವಾಗ ಜೆನಂಗೊ ಕೇಳಿಗೊಂಡವು.
ನಂಬಲೆ ಕಷ್ಟ ಆದರೂ ನಂಬೇಕಾದ ಸಂಗತಿಯೇ ಇದು – ಕುಂಬ್ಳೆಜ್ಜ° ಇನ್ನಿಲ್ಲೆ!

~

ಓ ಮನ್ನೆ ಸೂರಂಬೈಲಿಂಗೆ ಹೋಗಿ ಮನಗೆತ್ತಿದ್ದಷ್ಟೇ, ಸುಭಗಣ್ಣನ ಪೋನು – “ಕುಂಬ್ಳೆಜ್ಜ° ನಮ್ಮ ಬಿಟ್ಟಿಕ್ಕಿ ಹೋದವಾಡ” – ಹೇದು.
ಒಪ್ಪಣ್ಣಂಗೆ ನಂಬಿಕೆ ಬಯಿಂದಿಲ್ಲೆ!
ಅಪ್ಪೋ..?
ಅಪ್ಪೋ…..….?
ಅಪ್ಪೋ…………? – ಮೂರು ಸರ್ತಿ ಸುಭಗಣ್ಣ “ಅಪ್ಪಪ್ಪಾ” ಹೇದ ಮತ್ತೆ ನಂಬೇಕಾತು.
ಸುತ್ತಿದ ಒಸ್ತ್ರಲ್ಲೇ ಹೆರಟು ಕುಂಬ್ಳೆ ಮನೆಗೆ ಹೋಗಿ ನೋಡಿರೆ – ಅವ್ವೇ ಕಟ್ಟಿದ ಅರಮನೆಲಿ, ನೆಮ್ಮದಿಯರಮನೆಲಿ – ನೆಮ್ಮದಿಯ ನೆಗೆಮಾಡಿಂಡು ಮನುಗಿದ್ದವು. ಅವು ಯೇವತ್ತೂ ಒರಗುದು ಹಾಂಗೇ. ಒರಕ್ಕಿಲೇ ಹೋದ್ಸು. ಸುಖಮರಣ.
ಅವಕ್ಕೆ ಸುಖ, ಆದರೆ ಹತ್ತರಾಣೋರಿಂಗೆ? ಸುತ್ತವೂ ಕಣ್ಣೀರು ಹಾಕಿಂಡು ಅವರ ಒಳ್ಳೆಗುಣಂಗಳ ನೆಂಪುಮಾಡಿಗೊಂಡಿದ್ದಿದ್ದವು ನೆರೆಕರೆ, ನೆಂಟ್ರುಗೊ.
ಅಂಬಗಳೇ ಇದಾ – ನೀರ್ಚಾಲು ದೊಡ್ಡಪ್ಪ° ಹೆರ ಕೂದುಗೊಂಡು ಮಾತಾಡಿಗೊಂಡಿದ್ದದು; ಹಿಳ್ಳೆಮನೆ ಮಾವ°, ಒಪ್ಪಣ್ಣ, ಪೊಸವಣಿಕೆ ಅಪ್ಪಚ್ಚಿ ಎಲ್ಲೋರು ಕಳಲ್ಲಿ ನಿಂದುಗೊಂಡಿಪ್ಪಾಗ.

~

ಒಂದು ಸಂವತ್ಸರ ಚಕ್ರ ದ ಮೇಗೆ ನಾಕೊರಿಶದ ಜೀವನ.
ತೀರಾ ತೀರಿಹೋಪಂಥಾ ಪ್ರಾಯ ಅಲ್ಲ. ಕಟ್ಟುಮಸ್ತಾದ ಗಟ್ಟಿ ಜೀವ. ಗಟ್ಟಿ ಕೆಲಸಂಗಳ ಮಾಡ್ತ ಚೈತನ್ಯ,  ಉತ್ಸಾಹ, ಶೆಗ್ತಿ – ಎಲ್ಲವೂ ಇತ್ತು. ಆದರೆಂತ ಮಾಡುಸ್ಸು, ದೇವರಿಂಗೆ ಅವ್ವೇ ಬೇಕು ಹೇಳಿ ಆಯಿದು. ದೇವರು ತೆಕ್ಕೊಂಡೋದವು.

ಮೂವತ್ತೊರಿಶಂದ ಮೇಗೆ ಕುಂಬ್ಳೆಜ್ಜಿಯ ಒಟ್ಟಿಂಗೆ ದಾಂಪತ್ಯ ನೆಡೆಶಿ, ಜೀವನ ಕಟ್ಟಿದವು. ಶಾಲೆದಿನಂಗಳಲ್ಲಿ ಶಾಲೆಲಿ ಕೆಲಸ, ರಜೆದಿನ ದೊಡ್ಡಜ್ಜನ ಮನೆಲಿ ಕೆಲಸಂಗೊ, ಬಿಡುವಿನ ಸಮೆಯಲ್ಲಿ ಸಮಾಜ ಸೇವಾಕಾರ್ಯಂಗೊ  – ಇದೆಲ್ಲವನ್ನೂ ಕೈಗೂಡುಸಿಗೊಂಡು ಮನೆ-ಮನ-ಸಮಾಜಕ್ಕೆ  ಬೇಕಾದವಾಗಿತ್ತಿದ್ದವು. ಮಕ್ಕೊಗೆ ವಿದ್ಯಾಬುದ್ಧಿ ಕೊಡುಸಿಕ್ಕಿ, ಜೆಬಾದಾರಿಕೆಗಳ ನಿರ್ವಹಿಸಲೆ ಹೇಳಿಕೊಟ್ಟಿದವು. ಇಬ್ರು ಮಗಳಕ್ಕಳ ಧಾರೆ ಎರದು, ಮೂರ್ನೇದರ ಇಂಜಿನಿಯರು ಮಾಡ್ಳೆ ದಾರಿ ತೋರ್ಸಿಕ್ಕಿಯೇ ಹೆರಟದು.
ಹೋಪ ಮದಲು ಪುಳ್ಳಿಯ ಕಂಡಿಕ್ಕಿಯೇ ಹೋದ್ದದೊಂದು ಸಮಾದಾನ – ಹೇದು ಕುಂಟಾಂಗಿಲ ಭಾವ° ಹೇಳಿದ°, ಬೇಜಾರಲ್ಲಿ ಉಗುರು ಕಚ್ಚಿಗೊಂಡು.

ತೀರಿಗೊಂಡದು ಬೇಜಾರದ ಸಂಗತಿಯೇ ಆದರೂ, ಬೇನೆ ಗೊಂತಾಗದ್ದೆ ತೀರಿಗೊಂಡದು ಒಂದು ಒಳ್ಳೆ ಸಂಗತಿಯೇ. ಅವಗುಣಲ್ಲಿ ಗುಣ  – ಹೇದು ನೇರಳೆ ಭಾವ° ಹೇಳಿದ°.

ಸುಮಾರು ಜೆನ ಹಾಸಿಗೆಲಿ ಮನುಗಿ, ನೆರಕ್ಕಿಂಡು ಹಲವೂ ಸಮೆಯಂದ ಇರ್ತವು, ಅಂತೋರಿಂಗೆ ಮೋಕ್ಷ ಕೊಡ್ತರ ಬದಲು ಹೀಂಗಿಪ್ಪವರ ಎಂತಕಪ್ಪಾ ಕರಕ್ಕೊಂಡು ಹೋದವು ದೇವರು – ಹೇದು ಮಾಷ್ಟ್ರಮನೆ ಅತ್ತೆ ಬೇಜಾರು ಹೇಳಿಗೊಂಡಿತ್ತವು. ದೇವರಿಂಗೂ ಒಳ್ಳೆಯವೇ ಬೇಕಾದ್ಸು – ಹೇದು ದೊಡ್ಡತ್ತೆ ಹೇಳಿದವು.

~

ಕುಂಬ್ಳೆಜ್ಜ ಗಂಗಾಸ್ನಾನ ಮಾಡಿ ಪುಣ್ಯ ಪಡಕ್ಕೊಂಡದು

ಕುಂಬ್ಳೆಜ್ಜ ಗಂಗಾಸ್ನಾನ ಮಾಡಿ ಪುಣ್ಯ ಪಡಕ್ಕೊಂಡದು | (ಚಿತ್ರಕೃಪೆ: ಚುಬ್ಬಣ್ಣ)

ಇವು ಬೈಲಿಂಗೆ ಹತ್ತರೆ.  ಏಕೇದರೆ –  ಇವಕ್ಕೆ ಬೈಲು ಹತ್ತರೆ.
ಬೈಲು ಹುಟ್ಟಿ ಬೆಳೆತ್ತ ಸಮೆಯಲ್ಲೇ ಇವಕ್ಕೆ ಅರಡಿಗು. ತರವಾಡು ಮನೆ, ಸೂರಂಬೈಲು ಪೇಟೆ, ಸಾರಡಿ ತೋಡು – ಇವೆಲ್ಲವನ್ನೂ ಸ್ವತಃ ಗುರ್ತ ಮಾಡಿಗೊಂಡಿತ್ತಿದ್ದವು. ಬೈಲಿನ ಎಲ್ಲೋರಿಂಗೂ ಇವರ ಅರಡಿಗು; ಬೈಲಿನ ಎಲ್ಲೋರನ್ನೂ ಇವಕ್ಕೆ ಅರಡಿಗು.
ಅಪುರೂಪಕ್ಕೆ ಒಪ್ಪಣ್ಣ ಕಾಂಬಲೆ ಸಿಕ್ಕಿರೆ –ಈ ವಾರ ಎಂತರ ಶುದ್ದಿ? – ಹೇದು ಕೊಂಗಾಟಲ್ಲಿ ಮಾತಾಡುಸುತ್ತ ಕ್ರಮ ಇದ್ದತ್ತು.
ಏನಂಕೂಡ್ಳು ಮನೆ ಜೆಗಿಲಿಲಿ ಬೈಲಿನ ಮಿಲನ ಆಗಿತ್ತಲ್ಲದೋ – ಮದಲಿಂಗೆ ಒಂದು ದಿನ – ಆ ಸಮೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನಮ್ಮೊಟ್ಟಿಂಗೆ ನೆಗೆ ಮಾಡಿತ್ತಿದ್ದವು. ಅದಾದ ಮತ್ತೆ ನೆಡದ ಎರಡು ಪುಸ್ತಕ ಬಿಡುಗಡೆ ಕಾರ್ಯಕ್ರಮಂಗೊಕ್ಕೆ ಬಂದು, ಬೈಲ ಮೇಗಾಣ ಪ್ರೀತಿಯ ತೋರ್ಸಿದ್ದವು. ಅಷ್ಟು ಮಾಂತ್ರ ಅಲ್ಲ, ಪುತ್ತೂರಿನ ಮಾಲಿಂಗೇಶ್ವರನ ಹೊಸಮನೆ ಕಟ್ಟುತ್ತ ಸಮೆಯಲ್ಲಿ ಬೈಲಿನ ಲೆಕ್ಕದ ಕರಸೇವೆಗೂ ನಮ್ಮ ಜವ್ವನಿಗರ ಒಟ್ಟಿಂಗೆ ಸೇವೆ ಮಾಡಿ ಮಾಲಿಂಗೇಶ್ವರನ ಅನುಗ್ರಹ ಪಡಕ್ಕೊಂಡಿದವು! ಬೈಲ ನೆಂಟ್ರತ್ರೆ ಬೈಲ ಸಮ್ಮಂದಲ್ಲೇ ಮಾತಾಡ್ಸಿಗೊಂಡಿತ್ತಿದ್ದವು. ಶರ್ಮಪ್ಪಚ್ಚಿಯ ಶರ್ಮಪ್ಪಚ್ಚಿ ಹೇಳಿಯೇ ಹೇಳುಗು, ಶ್ರೀಅಕ್ಕನ ಶ್ರೀಅಕ್ಕ° ಹೇಳಿಯೇ ಹೇಳುಗು – ಬೈಲ ಸಮ್ಮಂದಕ್ಕೆ ಪ್ರಾಯ ವಿತ್ಯಾಸ ನೋಡ್ಳಿಲ್ಲೆ ಇದಾ!
ಒಟ್ಟಿಲಿ, ಬೈಲು ಹೇದರೆ ಅವರ ಸ್ವಂತ ಮನಸ್ಸಿನ ಪ್ರತಿರೂಪ – ಹೇಳ್ಸರ ಕಂಡುಗೊಂಡಿದವು.

ಈ ಇಂಟರ್ನೆಟ್ಟು ಬೈಲು ಮಾಂತ್ರ ಅಲ್ಲ, ನೆರೆಕರೆಯ ನಿಜ ಜೀವನದ ಬೈಲುದೇ ಹಾಂಗೇ – ಈ ಕುಂಬ್ಳೆಜ್ಜಂಗೆ ತುಂಬಾ ಹತ್ತರೆಯೇ. ನೆರೆಕರೆಯ ನಮ್ಮ ಮನೆಗೊ, ಆಚೀಚಿಗೆ ಇಪ್ಪ ಸಮಾಜ – ಎಲ್ಲೋರಿಂಗೂ ಈ ಕುಂಬ್ಳೆಜ್ಜ° ಬೇಕು. ನೆರೆಕರೆಲಿ – ನೆಂಟ್ರಲ್ಲಿ ಜೆಂಬ್ರ ಸುದಾರಿಕೆ ಇಕ್ಕು,  ಮುಜುಂಗರೆಲಿ ಶ್ರಮದಾನ ಇಕ್ಕು, ಆರದ್ದಾರು ಸಂಗಾತಕ್ಕೆ ಹೋವುಸ್ಸು ಇಕ್ಕು – ಎಲ್ಲದಕ್ಕೂ ತಯಾರು.

ಮನೆಲಿಯೂ ಹಾಂಗೇ, ಹೋದಲ್ಲಿಯೂ ಹಾಂಗೇ, ಕುಂಬ್ಳೆಜ್ಜ° ಸುದಾರಿಕೆ ಮಾಡದ್ದಿಲ್ಲೆ. ತೀರುವ ನಾಕುದಿನ ಮದಲೆ ಇದ್ದಿದ್ದ ತ್ರಿಕಾಲಪೂಜೆಲಿ ಸಾರಿಂದ ಮಜ್ಜಿಗೆ ಒರೆಂಗೂ ಬಳುಸಿದ್ದವು – ಹೇದು ಓಟೆಅತ್ತಿಗೆ ಹೇಳಿ ಬೇಜಾರು ಮಾಡಿಗೊಂಡವು.
~

ಡೆಂಟಿಷ್ಟು ಮಾವಂಗೆ, ಕೋಡಿಮೂಲೆ ಮಾವಂಗೆ ಬೇಜಾರಲ್ಲಿ ಮಾತೇ ಹೆರಡ!
ದಿನಕ್ಕೆರಡು ಸರ್ತಿ ಕಂಡು ಮಾತಾಡ್ತ ಜೀವ ಅಲ್ಲದೋ – ಪೇಟೆಲಿ ಎಂತಾತು, ಹಳ್ಳಿಯೊಳ ಎಂತಾತು – ಹೇದು ಪರಸ್ಪರ ಗೊಂತಿಪ್ಪ ಶುದ್ದಿಗಳ ಮಾತಾಡಿಂಡೇ ಅವರ ದಿನ ಇರುಳಾಗಿಂಡಿದ್ದದು. ಹೆಚ್ಚುಕಮ್ಮಿ ಕೋಡಿಮೂಲೆಮಾವನ ಪ್ರಾಯವೇ ಈ ಕುಂಬ್ಳೆಜ್ಜಂಗೆ. ಆದರೂ – ಕುಂಬ್ಳೆಜ್ಜ° ಸೌದಿ ಒಡಕ್ಕೊಂಡೋ, ಪಿಕ್ಕಾಸಿಲಿ ಗರ್ಪಿಗೊಂಡೋ, ಟೇಂಕಿ ತೊಳಕ್ಕೊಂಡೋ – ಹೀಂಗಿರ್ಸ ಬಂಙದ ಕೆಲಸ ಮಾಡಿಗೊಂಡಿಪ್ಪದರ ಕಂಡು ಕೋಡಿಮೂಲೆ ಮಾವಂಗೆ ಪ್ರಾಯ ಜಾಸ್ತಿ ಆದ ಹಾಂಗೆ ಅನುಸಿಗೊಂಡಿತ್ತಾಡ.

ಇನ್ನೆಂತದೂ ಹೇಳುಲಿಲ್ಲೆ – ಹೇದು ಡೆಂಟಿಷ್ಟುಮಾವ° ಹೇಳುವಾಗ ದುಃಖ ದೊಂಡೆ ಒಳವೇ ತುಂಬಿಗೊಂಡದು ಗೊಂತಾಗಿಂಡು ಇದ್ದತ್ತು.

~

ಪ್ರತಿದಿನವೂ ಕೆಲಸ ಮಾಡಿಗೊಂಡಿದ್ದ ಗಟ್ಟಿ ದೇಹ ಅದು.
ಉದಾಸ್ನ ಹೇಳ್ತದು ಅವರ ಡಿಕಿಶ್ನರಿಲಿ ಇಲ್ಲೆ. ಉದಾಸ್ನ ಮಾಡ್ತೋರಿಂಗೂ ಉಪದೇಶ ಹೇಳುಗು ಬೇಕಾರೆ!
ಆಯೇಕಾದ ಕಾರ್ಯ ಅಂಬಗ, ಆ ಸಮೆಯಲ್ಲೇ ಆಯೇಕು. ಮುಂದೆ ಹಾಕಲೆ ನೋಡಿರೆ ತಾನೇ ಮಾಡಿ ಮುಗುಶುಗು!!
ಹಾಂಗಾಗಿ, ಅವರ ಮಕ್ಕೊಗೆ ಯೇವದನ್ನೂ “ಮತ್ತೆ ಮಾಡ್ತೆ” ಹೇಳಿಕ್ಕಲೆ ಗೊಂತಿಲ್ಲೆ ಪಾಪ!

ಕುಂಬ್ಳೆಜ್ಜಿ ಅಡಿಗೆ ಕೋಣೆಲಿ ಎಂತಾರು ಅಡಿಗೆ ಮಾಡುವಾಗ, ಕುಂಬ್ಳೆಜ್ಜಂದೇ ಹೋಕು.
ಕಾಯಿ ಕೆರವದೋ, ಬೆಂದಿಗೆ ಕೊರವದೋ ಎಂತಾರು ಮಾಡಿಗೊಂಡು.
ಉದಾಸ್ನ ಇಲ್ಲದ್ದವಕ್ಕೇ ಆ ದೇವರು ಉದಾಸ್ನ ಇಲ್ಲದ್ದವರ ದಂಪತಿಯಾಗಿ ಕೊಡುದೋ – ಹೇದು ಅನುಸಿಗೊಂಡಿತ್ತು ಒಪ್ಪಣ್ಣಂಗೆ ಇವರ ಇಬ್ರ ಕಾಂಬಗ! ಅದಿರಳಿ. ಅಲ್ಲಿ ಅಡಿಗೆ ಕೆಲಸ ಮಾಡುದರಿಂದಲೂ, ಮಾತಾಡುದಕ್ಕೇ ವಿಶೇಷ ಗಮನ.

ಅಲ್ಲಿ ಹಾಂಗಾತು, ಇಲ್ಲಿ ಹೀಂಗಾತು, ಕಾಪಿಗೆ ನಾಳಂಗೆಂತ ಮಾಡುದು, ಆ ಜೆಂಬ್ರಕ್ಕೆ ಆರು ಹೋಪದು, ದೊಡ್ಡಜ್ಜನ ಮನೆಲಿ ಎಂತಾತು, ಸಾರಡಿ ತೋಡಿಲಿ ಎಂತಾತು – ಎಲ್ಲವುದೇ ಅಂಬಗ ಮಾತುಕತೆ. ಅಜ್ಜ°-ಅಜ್ಜಿಯ ಆಪ್ತ ಮಾತುಕತೆ ಕಾಂಬಗ ಒಪ್ಪಣ್ಣಂಗೆ ಎಲ್ಲ ಮನೆಲಿಯೂ ಇಷ್ಟು ಅನ್ಯೋನ್ಯತೆಲಿ ಇದ್ದರೆ ಎಷ್ಟು ಚೆಂದಪ್ಪೋ – ಹೇದು ಅನುಸಿಗೊಂಡಿತ್ತು.

ಅಜ್ಜಂಗೂ ಅಜ್ಜಿಗೂ ಪ್ರೀತಿಲಿಯೇ ಒಂದೊಂದರಿ ಜಗಳ ಆಗಿಂಡಿತ್ತು! ಕುಶಾಲಿನ ಕೋಂಗಿಗೊ, ಅತ್ತಿತ್ತೆ!!
ಅಜ್ಜ ಬೆಂದಿಗೆ ಕೊರವಲೆ ಕೂದರೆ ಬೇಗ ಕೊರದಾಗ ಇದಾ.
ಪ್ರತಿ ಅಳತ್ತೊಂಡೆಯ ಪ್ರತೀ ಬಿತ್ತನ್ನೂ “ಒಳ್ಳೆದಿದ್ದನ್ನೇ” – ಹೇದು ನೋಡಿ ಕೊರಗಷ್ಟೆ.
ಪ್ರತಿ ಬಸಳೆಯ ಪ್ರತಿ ಎಲೆಯ ಎರಡೂ ಹೊಡೆ ನೋಡಿಕ್ಕಿ ಕೊರವದು; ಪೇಸೆಂಜರು ಬಂಡಿಯ ಹಾಂಗೆ ನಿಧಾನಕ್ಕೆ.
ಕುಂಬ್ಳೆಜ್ಜಿಗೂ ಮನಾರ ಬೇಕು, ಆದರೆ ಕೆಲಸ ತುಂಬಾ ಸ್ಪೀಡು, ಸೂಪರ್ ಫಾಸ್ಟಿನ ಹಾಂಗೆ.
ಅಜ್ಜಂಗೆ ಕೊರವದು ಇನ್ನೂ ಮುಗಿಯದ್ದರೆ ಒಂದೊಂದರಿ ಅಜ್ಜಿ ಇನ್ನೊಂದು ಪೀಶಕತ್ತಿ ಹಿಡ್ಕೊಂಡು ಬಂದು
“ಇದು ಇಂದು ಮದ್ಯಾನಕ್ಕೇ ಆಯೆಕ್ಕು, ನಾಳಂಗಿಪ್ಪದಲ್ಲ” – ಹೇದು ಸುರುಮಾಡುಗು.
ಕುಂಬ್ಳೆಜ್ಜ° ಕಣ್ಣರುಳಿಸಿ ನೆಗೆಮಾಡುಗು, ನಮ್ಮ ನೋಡಿಗೊಂಡು!!

ಹೀಂಗಿರ್ಸ ರಸನಿಮಿಶಂಗೊ ಹಲವಿದ್ದಪ್ಪೋ.

~

ದೊಡ್ಡಜ್ಜ° ಕಾಲ ಆದ ಮತ್ತೆ ದೊಡ್ಡಜ್ಜನ ಮನೆಯ ಸಂಪೂರ್ಣ ಒಯಿವಾಟು ಕುಂಬ್ಳೆಜ್ಜನ ಹೆಗಲಿಂಗೆ ಬಂತು.
ದೂರದ ಕುಂಬ್ಳೆಲಿ ಕೂದುಗೊಂಡು ದೊಡ್ಡಜ್ಜನ ಮನೆ ನಿರ್ವಹಣೆ ಮಾಡುಸ್ಸು ಸುಲಭದ ಕೆಲಸ ಏನಲ್ಲಪ್ಪಾ.
ಕುಂಟಾಂಗಿಲ ಬಾವ°, ನೇರಳೆ ಬಾವನ ಸಹಕಾರ ಇದ್ದರೂ –ಅದು ರಜಾದಿನಂಗಳಲ್ಲಿ. ಹಾಂಗಾಗಿ ಒಳುದ ದಿನ ಆದಷ್ಟೂ ತಾನೊಬ್ಬನೇ ನಿರ್ವಹಣೆ ಮಾಡೇಕಾದ್ಸು. ಅಡಕ್ಕೆ ತೆಗೆಶುದು, ಗೊಬ್ಬರ ಹಿಡಿಶುದು, ಬೀಜ ಕೊಯಿಶುದು, ಹಿಂಡಿ ತಪ್ಪದು, ತರಕಾರಿ ಬೆಳವದು – ಹೀಂಗಿರ್ಸ ಹಲವು ತಲೆಬೆಶಿಗೊ. ಕುಂಬ್ಳೆ ಮನೆದು ಬೇರೆಯೇ, ದೊಡ್ಡಜ್ಜನ ಮನೆದು ಬೇರೆಯೇ. ಹಾಂಗಾಗಿ ಎರಡೆರಡು ತಲೆಬೆಶಿಗೊ. ಒಂದೊಂದರಿ ತಲೆಬೆಶಿ ಜೋರಪ್ಪಗ “ನಿಂಗೊ ಅದೆಲ್ಲ ತಲೆಬೆಶಿ ಮಾಡೆಡಿ ಅಜ್ಜಾ°, ಎನ್ನ ತಲೆಬೆಶಿ ಮಾಂತ್ರ ಸಾಕು” – ಹೇಳಿಗೊಂಡಿತ್ತಿದ್ದನಾಡ, ಅವರ ಪುಳ್ಳಿ.

~

ದೊಡ್ಡಜ್ಜನ ಮನೆಲಿ ಬಾಲ್ಯವ ಕಳದು, ಕಾಸ್ರೋಡಿಲಿ ಕಲ್ತು, ಪಾರೆ ಅಜ್ಜಿಯ ಬುಡಲ್ಲಿಪ್ಪ ಶಾಲೆಲಿ ಕೆಲಸ ಮಾಡಿದವು.
ಕುಂಬ್ಳೆಜ್ಜಿಯ ಒಟ್ಟಿಂಗೆ ಸಂಸಾರಿಯಾಗಿ ಕುಂಬ್ಳೆಲಿ ನೆಲೆನಿಂದವು. ಆರಂಭಲ್ಲಿ ಬಾಡಿಗೆ ಮನೆ, ಮತ್ತೆ ಸ್ವಂತ ಮನೆ. ಕಷ್ಟವೋ ನಷ್ಟವೋ, ಬಂಙವೋ, ಸೌಕರ್ಯವೋ – ಕುಂಬ್ಳೆಜ್ಜಿ ಒಟ್ಟಿಂಗೇ ಇತ್ತಿದ್ದವು. ಇಬ್ರೂ ಕೈಹಿಡುದು ನೆಡಕ್ಕೊಂಡು ಹೋದ್ಸರಿಂದಾಗಿ ಜೀವನ ಸುಲಭ ಆತು. ಸ್ವಂತ ಮನೆಯ ತುಂಬ ಪ್ರೀತಿಲಿ ಕಟ್ಟಿದ್ದವು. ಸಾರಣೆ ಅಪ್ಪ ಸಮೆಯಲ್ಲಿ ಕೊಡಪ್ಪಾನಗಟ್ಳೆ ನೀರು ಎರದ ಸಂಗತಿಯ ಎಯ್ಯೂರುಬಾವ° ಈಗಳೂ ಹೇಳುಗು; ಭಾವನ ಕೈಗೆ ಒಂದೊಂದರಿ ಬೊಕ್ಕೆ ಬಂದ್ಸರ ನೆಂಪು ಮಾಡುಗು. 😉

ಮನೆ ಒಕ್ಕಲಾದ ಮತ್ತೆಯೂ ಹಾಂಗೇ – ಅದು ಪೇಟೆಕರೆಲಿ ಇರ್ತ ಮನೆ ಆದ ಕಾರಣ ಆ ದಾರಿಲಿ ಹೋಗಿಬಪ್ಪ ಆತ್ಮೀಯರಿಂಗೆ, ಆ ದಾರಿಲೆ ಇರುಳು ಬಂದು ಸಿಕ್ಕಿಬಿದ್ದ ನೆಂಟ್ರಿಂಗೆ, ಮರದಿನ ಅಲ್ಲಿಂದ ಪ್ರಯಾಣ ಮಾಡ್ತ ಆಪ್ತರಿಂಗೆ – ಎಲ್ಲೋರಿಂಗೂ ಅದೊಂದು ನಿಂಬ ಜಾಗೆ ಆಗಿದ್ದತ್ತು. ಅದೆಷ್ಟೋ ಸಾವಿರ ಜೆನಕ್ಕೆ ಅನ್ನದಾನ ಮಾಡಿದ್ದವು ಕುಂಬ್ಳೆಜ್ಜ° – ಹೇದು ಸುಭಗಣ್ಣ ಹೇದವು.

~

ಕುಂಬ್ಳೆಜ್ಜಂಗೆ ರಿಠೇರ್ಡು ಆದ ಮತ್ತೆ ಪುರುಸೊತ್ತಕ್ಕು – ಹೇದು ಗ್ರೇಶಿಗೊಂಡು ಹಲವು ಕಾರ್ಯಂಗಳ ಮಾಡ್ಳೆ ಗ್ರೇಶಿತ್ತಿದ್ದವಾಡ. ಕುಂಬ್ಳೆ ಮನೆಯ ಅಟ್ಟುಂಬೊಳ ರಿಪೇರಿಯೂ ಇದರ್ಲಿ ಒಂದು.  ಆದರೆ, ರಿಠೇರ್ಡು ಆದ ಮತ್ತೆ ಇಂದಿನ ಒರೆಂಗೂ ಧಾರಾಳ ಪುರುಸೊತ್ತು ಹೇಳಿ ಇತ್ತೇ ಇಲ್ಲೆ. ಪ್ರತಿ ದಿನ ಒಂದಲ್ಲ ಒಂದು ಕಾರ್ಯಂಗೊ. ಒಂದಲ್ಲ ಒಂದು ಕೆಲಸ ಇದ್ದತ್ತು. ಯೇವದೋ ಜೆಬಾದಾರಿಕೆಗೊ, ಹೇಳಿಕೆಗೊ, ತಲೆಬೆಶಿಗೊ – ಎಂತಾರು ಒಂದು. ಪಾತ್ರತೊಳೆತ್ತ ಬೇಸಿನು ತಂದದು ಕುಂಬ್ಳೆ ಮನೆಲಿ ಕಳುದ ಹಲವಾರು ಸಮೆಯಂದ ಹಾಂಗೇ ಇದ್ದಾಡ; ಸಾರಡಿಪುಳ್ಳಿ ಪರಂಚಿಗೊಂಡಿತ್ತು ಮದಲಿಂಗೆ. ಪುಳ್ಯಕ್ಕೊ ಪರಂಚುವಾಗ ಅಜ್ಜ° ನೆಗೆಮಾಡುಗು, ಅಷ್ಟೇ.

~

ಮೂರು ಜೆನ ಅಣ್ಣಂದ್ರು, ಮೂರು ಜೆನ ತಮ್ಮಂದ್ರು ಸೇರಿದ ದೊಡ್ಡ ಸಂಸಾರಲ್ಲಿ ನಿಜಮಧ್ಯಮ ಆಗಿ ಬೆಳದವು.
ಅಣ್ಣಂದ್ರಿಂಗೆ ತಮ್ಮ ಆಗಿ, ತಮ್ಮಂದ್ರಿಂಗೆ ಅಣ್ಣ ಆಗಿ ಒಟ್ಟೊಟ್ಟಿಂಗೆ ಬೆಳವದು ಕಷ್ಟದ ಕೆಲಸವೇ.
ಅಣ್ಣಂದ್ರು ಒಯಿವಾಟು ಮಾಡುವಾಗ ತಗ್ಗಿ-ಬಗ್ಗಿ ಅವರ ಮಗನ ಸ್ಥಾನಲ್ಲಿ ನಿಂದು ಸಕಾಯ ಮಾಡಿದವು. ಅವರ ಆಲೋಚನೆಗಳ ಸ್ವೀಕರುಸಿ ಅದರ ಅನ್ವಯ ಅಪ್ಪ ಹಾಂಗೆ ನೋಡಿಗೊಂಡವು. ಕಾಯಾ ವಾಚಾ ಮನಸಾ ವಹಿಸಿಗೊಂದು ಪಾಲುಸಿದವು; ತನು ಮನ ಧನಗಳ ಮೂಲಕ ಸಕಾಯ ಮಾಡಿದವು. ಅಣ್ಣಂದ್ರು ತೆಗದ ಜೆಂಬ್ರಂಗಳ ಗೆಲ್ಲುಸಿದವು.
ತಮ್ಮಂದ್ರ ಜೀವನಲ್ಲಿ ಸ್ವತಃ ಅಪ್ಪನ ಸ್ಥಾನಲ್ಲಿ ನಿಂದು ಬೇಕುಬೇಕಾದ ಹಾಂಗೆ ನಿರ್ವಹಣೆ ಮಾಡಿದವು. ತಮ್ಮಂದ್ರು, ತಮ್ಮಂದ್ರ ಮಕ್ಕಳ ಜೀವನಕ್ಕೆ ಬೇಕಾದ ಮಾರ್ಗದರ್ಶನ, ಸಹಕಾರ ಚೆಂದಕ್ಕೆ ಕೊಟ್ಟವು.
ಅದಲ್ಲದ್ದೇ, ಎಲ್ಲಾ ಅಕ್ಕಂದ್ರ ಮನೆಗೆ, ತಂಗೆಕ್ಕಳ ಮನೆಗೆ ಅತೀ ಹೆಚ್ಚು ಸರ್ತಿ ಹೋದೋರು ಅವ್ವೇಯೋ ಏನೋ. ಉಮ್ಮಪ್ಪ!
ಸ್ಥಾನಕ್ಕನುಸಾರವಾಗಿ – ಅಗತ್ಯ ಇಪ್ಪಲ್ಲಿ ತಗ್ಗಿ ಬಗ್ಗಿ ನೆಡವಲೂ, ಜೆಬಾದಾರಿಕೆ ಇಪ್ಪಲ್ಲಿ ನೇರ-ನಿಷ್ಠುರವಾಗಿ ನೆಡೆಶಲೂ – ಒಟ್ಟಿಂಗೇ ಸಾಧ್ಯ ಆವುತ್ತು – ಹೇಳ್ತದು ಕುಂಬ್ಳೆಜ್ಜನ ಜೀವನದ ಹೆಜ್ಜೆಗಳ ನೋಡಿರೆ ಅರ್ಥ ಆವುತ್ತು.

~

ಎಲ್ಲವೂ ಇಂದು ಇತಿಹಾಸ. ಕುಂಬ್ಳೆಜ್ಜ° ದೈಹಿಕವಾಗಿ ನಮ್ಮೊಟ್ಟಿಂಗಿಲ್ಲೆ.
ಎಲ್ಲಿಂದ ಬಯಿಂದವೋ – ಅಲ್ಲಿಗೇ ಹೋದವು.
ಒಂದು ದಿನ ನಾವೆಲ್ಲರೂ ಹೋವುತ್ತು ಆ ಜಾಗೆಗೆ. ಇನ್ನೂ ಹೋಯಿದಿಲ್ಲೆ, ನಮ್ಮ ಕಾಲ ಬಯಿಂದಿಲ್ಲೆ.
ಈ ಪುಣ್ಯಾತ್ಮರಿಂಗೆ ಬೇಗ ಬಂತು.
ಸೀತ ಎದ್ದಿಕ್ಕಿ ಹೋದ ಹಾಂಗೆ ಹೋದವು.
ಕುಂಬ್ಳೆಜ್ಜ° ಕಟ್ಟಿ ಬೆಳೆಶಿದ ಭವ್ಯ ಮನೆತನವ, ಅದರ ಹಿಂದಾಣ ಪ್ರೀತಿಯ, ಆರ್ದ್ರ ಸಂಬಂಧಂಗಳ ಮುಂದುವರಿಶುವ ಶೆಗ್ತಿಯ ಆ ದೇವರು ಕುಂಬ್ಳೆಜ್ಜಿಗೆ ಕೊಡ್ಳಿ. ಮುಂದಾಣ ದಿನಂಗಳಲ್ಲಿಯೂ ಯಥಾಶೆಗ್ತಿ ದೇವರ ಸೇವೆ, ಗುರುಸೇವೆಗೊ ಅವರ ಮನೆಂದ ಒದಗಿ ಬರಳಿ. ಆ ಮನೆಗೆ ಸುಖ, ಶಾಂತಿ ನೆಮ್ಮದಿಯ ಕರುಣಿಸಲಿ. ಕುಂಬ್ಳೆಜ್ಜನ ಆತ್ಮಕ್ಕೆ ಮನೆದೇವರೂ, ಕುಂಬ್ಳೆ ಗೋಪಾಲಕೃಷ್ಣನೂ , ಆ ಶ್ರೀರಾಮನೂ – ಅನುಗ್ರಹಿಸಲಿ. ಅಜ್ಜಿಯ ಮುಂದಾಣ ಜೀವನ ಆಯುರಾರೋಗ್ಯ ಆ ದೇವರು ಒದಗುಸಲಿ – ಹೇದು ನಮ್ಮೆಲ್ಲರ ಹಾರೈಕೆ.

~

ಕುಂಬ್ಳೆಜ್ಜಂಗೆ ಕಾಯಾ, ವಾಚಾ, ಮನಸಾ – ಶ್ರದ್ಧಾಂಜಲಿಗೊ.

~

ಶೂನ್ಯಕ್ಕೆ ಶೂನ್ಯ ಸೇರಿರೆ ಶೂನ್ಯವೇ ಸಿಕ್ಕುಗಟ್ಟೆ; ಶೂನ್ಯಂದ ಶೂನ್ಯವ ಕಳದರೆ ಶೂನ್ಯವೇ ಒಳಿಗಷ್ಟೆ. ಇಡಿಯ ಪ್ರಪಂಚವೇ ಶೂನ್ಯ. ಇದರ್ಲಿ ಹೆಚ್ಚಪ್ಪಲೂ ಇಲ್ಲೆ, ಕಮ್ಮಿ ಅಪ್ಪಲೂ ಇಲ್ಲೆ. ಸೇರುದು – ಕಳವದು ನಿತ್ಯವೂ ನೆಡೆತ್ತಾ ಇದ್ದರೂ ಜಗತ್ತಿಲಿ ಶೂನ್ಯವೇ ಇದ್ದಷ್ಟೆ – ಹೇದು ದೊಡ್ಡಜ್ಜ° ಇಲ್ಲದ್ದೆ ಆಗಿಪ್ಪಾಗ ಕುಂಬ್ಳೆಜ್ಜ° ಸಮಾದಾನ ಮಾಡಿದ್ದು ಜೋರು ನೆಂಪಾತು ಒಪ್ಪಣ್ಣಂಗೆ.

ಒಂದೊಪ್ಪ: ದೇವರು ನಮ್ಮೆಲ್ಲರ ಒಂದರಿ ಹತ್ತರೆ ಮಾಡುದೆಂತಕೆ? ಮತ್ತೊಂದರಿ ದೂರ ಮಾಡುದೆಂತಕೆ? 🙁

ಒಪ್ಪಣ್ಣ

   

You may also like...

10 Responses

 1. ಚೆನ್ನೈ ಭಾವ° says:

  ದೊಡ್ಡಜ್ಜನ ನಂತ್ರಕ್ಕೆ ಬೈಲಿಂಗೆ ಸ್ಫೂರ್ತಿಯಾಗಿತ್ತಿದ್ದ ಕುಂಬ್ಳೆಜ್ಜನ ಅಕಾಲ ಅಗಲಿಕೆ ತೀವ್ರ ಆಘಾತಕರವಾಗಿದ್ದು. ಎಲ್ಲೊರೊಟ್ಟಿಂಗೂ ಬೆರವ ಕುಂಬ್ಳೆಜ್ಜ° ಒಬ್ಬ° ಆದರ್ಶ ವ್ಯಕ್ತಿ ಹೇಳ್ತರ್ಲಿ ಎರಡು ಮಾತಿಲ್ಲೆ. ಕುಂಬ್ಳೆಜ್ಜನ ವಿವಿಧ ಭಂಙಿಯ ಶುದ್ದಿ ಚಿತ್ರಣ ಅವರ ವ್ಯಕ್ತಿತ್ವವ ಬೈಲಿಲ್ಲಿ ಅನಾವರಣಗೊಳಿಸಿತ್ತು ಹೇದೊಂಡು ಕುಂಬ್ಳೆಜ್ಜಂಗೆ ಭಾವಪೂರ್ಣ ಶ್ರದ್ಧಾಂಜಲಿ. ನಾರಾಯಣ ನಾರಾಯಣ.

 2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಗಣಪತಿ ಅಣ್ಣನ ಬಗ್ಗೆ ಬರೆದ್ದು ಲಾಯ್ಕ ಆಯಿದು. ಅಷ್ಟು ಜೀವನೋತ್ಸಾಹಲ್ಲಿ ಇದ್ದವು ಹೋದ್ದದು ಆಘಾತಕಾರಿ.ಆನೂ ಸುರುವಿಂಗೆ ಸುದ್ದಿಯ ನಂಬಿದ್ದಿಲ್ಲೆ.

 3. ತೆಕ್ಕುಂಜ ಕುಮಾರ ಮಾವ° says:

  ಕಳುದ ವರ್ಷ ಪುತ್ತೂರಿಲಿ ಮಹಲಿಂಗೇಶ್ವರನ ಸನ್ನಿಧಿಲಿ ಬೈಲ ನೆರೆಕರೆಯೊರು ಕರಸೇವೆ ಮಾಡ್ಲೆ ಹೆರಟಪ್ಪಗ ಕುಂಬ್ಲೆಜ್ಜ ಬಂದು ಮಾಡಿದ ಕೆಲಸ ನೋಡಿ ಎನಗೆ ನಾಚಿಕೆ ಆಯಿದು.ಅವರಷ್ಟು ಗೆಯ್ಮೆ ಎನ್ನಂದ ಎಡಿಗಾಯಿದಿಲ್ಲೆ ಹೇಳ್ತದು ಕಾರಣ.ಅವರ ನೆಗೆ ಮೋರೆಯ ಮರವಲೇ ಇಲ್ಲೆ.

 4. ಒಂದೊಪ್ಪಕ್ಕೆಃ ಉಮ್ಮ, ಅವರ ನೋಡಿ, ಆ ಒಳ್ಳೆ ಗುಣಂಗಳ ಮಾಣಿಯಂಗಲೂ ಜೀವನಲ್ಲಿ ಅಳವಡಿಸಿಯೊಳಲಿ ಹೇದೋ..? ಉಮ್ಮಪ್ಪ.
  ಕೇಳಿ ಬೇಜಾರಾತು. 🙁

 5. ಬೊಳುಂಬು ಗೋಪಾಲ says:

  ಕುಂಬ್ಳೆ ಅಜ್ಜನ ಹತ್ರಂದ ಗೊಂತಿಪ್ಪ ಒಪ್ಪಣ್ಣನಿಂದ ನುಡಿನಮನ ಸಕಾಲಿಕ. ಅವರ ಸುಖೀ ಸಂಸಾರದ ಹಲವು ಮಜಲುಗಳ ಪರಿಚಯ ಶುದ್ದಿಯ ಮೂಲಕ ಬೈಲಿಂಗುದೆ ಆತು. ನಮ್ಮ ಬೈಲಿನ ಸ್ಪೂರ್ತಿಯ ಚಿಲುಮೆ ಆಗೆಂಡಿದ್ದಿದ್ದ, ಆ ಹಿರಿಯ ಜೀವಕ್ಕೆ ಹೃದಯತುಂಬಿದ ಶ್ರದ್ಧಾಂಜಲಿ.

 6. Manjunatha prasad k says:

  Heartfelt condolence. may the great soul rest in peace.

 7. ವಿಜಯತ್ತೆ says:

  ಹರೇರಾಮ ಕುಂಬ್ಳೆ ಅಜ್ಜ ಪುೞಿ ರೂಪಲ್ಲಿ ಪ್ರಕಟ ಆಗಲಿ ಹೇಲಿ ಹಾರೈಸುತ್ತೆ

 8. shyamaraj.d.k says:

  ಮಾವ೦ಗೆ ಭಾವಪೂರ್ಣ ಶ್ರದ್ಧಾ೦ಜಲಿ….

 9. ಒಪ್ಪಣ್ಣ,
  ಕುಂಬ್ಳೆಜ್ಜನ ಒಟ್ಟಿಂಗೆ ನಿನ್ನ ಒಡನಾಟವೂ, ಅದರ ನೆನಪ್ಪುಗಳ ಹಂಚಿಗೊಂಡಪ್ಪಗ ಕುಂಬ್ಳೆಜ್ಜನ ಬಗ್ಗೆ ಇನ್ನೂ ಕೆಲವು ವಿಷಯಂಗ ಗೊಂತಾದ ಹಾಂಗಾತು.
  ಮನ್ನೆ ದೊಡ್ಡಜ್ಜನಲ್ಲಿ ಶಪುಂಡಿ ದಿನ ಸೇರಿದ ಜನಂಗಳ ಮನಸ್ಸಿಲಿ ಕುಂಬ್ಳೆಜ್ಜನ ಬಗ್ಗೆ ಸಾವಿರ ಮಾತುಗ ಇದ್ದತ್ತು. ಎಲ್ಲೋರ ಮನಸ್ಸಿಲಿ ಕುಂಬ್ಳೆಜ್ಜನ ಬಗ್ಗೆ ಇದ್ದ ಪ್ರೀತಿ ಗೌರವ ನೋಡಿ ಮನಸ್ಸು ತುಂಬಿತ್ತು. ಕುಂಬ್ಳೆಜ್ಜ ಇಲ್ಲದ್ದ ದಿನಂಗ ತುಂಬಾ ಕಷ್ಟ. ಅವರ ಹತ್ತರಾಣೋರಿಂಗೆ ಮಾಂತ್ರ ಅಲ್ಲ ಅವರ ಅರಡಿಗಾದವಕ್ಕೆ ಎಲ್ಲೋರಿಂಗೂ ಕೂಡಾ.
  ಕುಂಬ್ಳೆಜ್ಜನ ನೆಂಪು ಮಾಡಿ ಮಾತಾಡಿದ ಸಂಬಂಧದ ಲೆಕ್ಕಲ್ಲಿ ಭಾವ ಆಗಿ ಸಾರಡಿ ಅಪ್ಪಚ್ಚಿ, ಕುಂಬ್ಳೆಯ ನೆರೆಕರೆಯವ್ವು ಆಗಿ ಒಟ್ಟಿಂಗೇ ಇದ್ದ ಕೋಡಿಮೂಲೆ ಮಾವ ಮತ್ತೆ ಕುಂಬ್ಳೆಜ್ಜ ಸೇವೆ ಮಾಡಿದ ಶಾಲೆಯ ಹೆಡ್ಮಾಷ್ಟ್ರು ಆಗಿದ್ದ ಉಳುವಾನ ಮಾಷ್ಟ್ರು ಎಲ್ಲೋರೂ ಉಕ್ಕಿ ಬಪ್ಪ ದುಃಖದ ಎಡೆಲಿ ಕುಂಬ್ಳೆಜ್ಜನ ವೆಗ್ತಿತ್ವವ ಬಿಡುಸಿ ಮಡಗಿದವು. ಅವು ಹೇಳಿದ ವಿಷಯಂಗ ಒಪ್ಪಣ್ಣ ಬೈಲಿಂಗೆ ಹೇಳಿದ ಹಾಂಗೆ ನೂರನೇ ಒಂದು ಭಾಗ ಆಯಿದಷ್ಟೇ. ಇದ್ದಕ್ಕಿದ್ದ ಹಾಂಗೆ ಕಣ್ಮರೆ ಆದ ಕುಂಬ್ಳೆಜ್ಜನ ಬಗ್ಗೆ ಇನ್ನೂ ವಿಷಯಂಗ ಹೇಳುದಿತ್ತು, ಆದರೆ ದುಃಖದ ಭಾರ ಶಬ್ಧಂಗಳಲ್ಲಿ ಹೆರ ಬಪ್ಪದರ ತಡದತ್ತು. ಆದರೂ ಕುಂಬ್ಳೆಜ್ಜನ ವೆಗ್ತಿತ್ವವ ಇಪ್ಪ ಹಾಂಗೇ ನಮ್ಮೆದುರು ಮಡಗಿದವಕ್ಕೆ ಧನ್ಯವಾದಂಗ.

  ದೊಡ್ಡಜ್ಜನ ಮನೆಂದ ಕುಂಬ್ಳೆಜ್ಜನ ನೆನಪ್ಪಿಂಗೆ ಮಾಡಿದ ಕೆಲಸವೂ ಒಪ್ಪ ಆಯಿದು. ಕುಂಬ್ಳೆಜ್ಜ ಕೆಲಸ ಮಾಡಿದ ಶಾಲೆಗೆ ಮತ್ತೆ ನೆರೆಕರೆಯ ಶಾಲೆಗೆ ಕುಂಬ್ಳೆಜ್ಜನ ಸ್ಮರಣಾರ್ಥ ಒಂದು ನಿಧಿ ಸ್ಥಾಪನೆ ಮಾಡಿ ಅದರಂದ ವಿದ್ಯೆಕಲಿವ ಮಕ್ಕೊಗೆ ಅನುಕೂಲ ಅಪ್ಪ ಹಾಂಗೆ ಮಾಡಿದ್ದದು ಸಮಾಜಲ್ಲಿ ಒಂದು ಮಾದರಿ ಕೆಲಸ. ಕುಂಬ್ಳೆಜ್ಜನ ಶ್ರಮವ ಶಾಶ್ವತ ಮಾಡಿದ ಕುಟುಂಬದ ಎಲ್ಲಾ ಸದಸ್ಯರಿಂಗೆ ಕೂಡಾ ಬೈಲಿನ ಲೆಕ್ಕದ ಅಭಿನಂದನೆಗ.

  ಸಮಾಜದ ಸೇವೆಲಿಯೇ ತನ್ನ ಜೀವನ ಸಾರ್ಥಕ್ಯವ ಕಂಡ ಕುಂಬ್ಳೆಜ್ಜನ ಮರಣೋತ್ತರ ಜೀವನವೂ ಸಮಾಜಕ್ಕೆ ಅರ್ಪಣೆ ಆಗಲಿ..
  ಅವರ ಕೆಲಸಂಗ ನಮ್ಮವಕ್ಕೆ ಮಾದರಿ ಆಗಿ ನಮ್ಮಲ್ಲಿ ಸನ್ಮನಸ್ಸಿನ ಜೆನಂಗ ಹೆಚ್ಚಲಿ..
  ಕುಂಬ್ಳೆಜ್ಜನ ಪರಿವಾರದ ಎಲ್ಲೋರಿಂಗೂ ಅವರ ಇಲ್ಲದಿರುವಿಕೆಯ ಭಾರವ ತಡಕ್ಕೊಂಬ ಶೆಗುತಿ ಸಿಕ್ಕಲಿ ಹೇಳಿ ಹಾರಯಿಕೆ.

 10. ಕಳಾಯಿ ಗೀತತ್ತೆ says:

  nambule ..edittille.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *