Oppanna.com

ಮಾತಿಂದ ಮಾತಿಂಗೆ ಹಾರುವ ಹಾತೆ – ಈ ’ಮಾತುಕತೆ’..!!

ಬರದೋರು :   ಒಪ್ಪಣ್ಣ    on   01/02/2013    11 ಒಪ್ಪಂಗೊ

ರೂಪತ್ತೆ ಸಿಕ್ಕದ್ದೆ ಸುಮಾರು ಸಮಯ ಆಗಿ ಆ ವಿಷಯ ಮಾತಾಡುದನ್ನೇ ಬಿಟ್ಟ ಹಾಂಗಾಗಿ ಹೋಯಿದು, ಅಪ್ಪೋ!
ಅಜ್ಜಕಾನ ಬಾವಂಗೆ ಒಪ್ಪಣ್ಣನ ಮೇಗೆ ಭಾರೀ ಬೇಜಾರ ಇಕ್ಕು ಆ ವಿಶಯಲ್ಲಿ. ಛೆ.
ಎಂತ ಮಾಡುದು! ನಮ್ಮೆದುರು ಕಾಣ್ತಾ ಇಪ್ಪ ವಿಶಯವನ್ನೇ ಅಲ್ಲದೋ ನಾವು ಮಾತಾಡಿಂಡಿಪ್ಪದು!
ದೂರಲ್ಲಿ – ಎಲ್ಲಿಯೋ ಇದ್ದವು ಹೇದರೆ- ವಾರಂದ ವಾರಕ್ಕೆ ನೆಂಪಾವುತ್ತೋ? ಇಲ್ಲೆ.
ಅಭಾವನ ಸಮದಾನ ಮಾಡ್ಳೆ ಸುಭಾವನೇ ಆಯೆಕಟ್ಟೆಯೋ ಏನೊ; ಅದಿರಳಿ.
~

ಮಾತಾಡುವಗ ಪಕ್ಕನೆ ನೆಂಪಪ್ಪ ಹಲವು ಚೊಕ್ಕ ಶುದ್ದಿಗಳ ಬಗ್ಗೆ ನಾವು ಅಂದೇ ಮಾತಾಡಿದ್ದು. ನೆಂಪಿದ್ದೋ?
(https://oppanna.com/oppa/pakka-chokka-shuddigo)
ಎಂತದೋ ವಿವರ್ಸೆಂಡು ಹೋಪಗ “ಹಾಂ.., ಹಾಂಗೆ ಹೇಳುವಗ ನೆಂಪಾತು..” – ಹೇಳಿಂಡು ವಿಶಯ ಬದಲುಸುತ್ತ ಸಂಗತಿಯೇ ಅದು.
ಮಾತಾಡಿಂಡಿಪ್ಪ ಸಂಗತಿಗೆ ಹೊಂದಿಗೊಂಡು ಇನ್ನೊಂದು ವಿಶಯ / ಶುದ್ದಿ / ಒರ್ತಮಾನ / ಸಂಗತಿಗಳ ವಿವರ್ಸಲೆ ಸುರುಮಾಡುದು – ಹಾಂಗೇ ಮಾತು ಮುಂದುವರುಸುದು ಕೆಲವರ ಕ್ರಮ.

ಮುತ್ತಿನಂಥಾ ಮಾತು - ಮೆಟ್ಳು ಮೆಟ್ಳಿಂದ ಹಾರುದು!! (ಪಟ: ಅಂತರ್ಜಾಲ)
ಮುತ್ತಿನಂಥಾ ಮಾತು – ಮೆಟ್ಳು ಮೆಟ್ಳಿಂದ ಹಾರುದು!! (ಪಟ: ಅಂತರ್ಜಾಲ)

ಅದೇ ನಮುನೆ ಇನ್ನೊಂದು ಕ್ರಮ ಇದ್ದು; ಅದೆಂತರ?
ಶುದ್ದಿ ಮಾತಾಡಿಗೊಂಡಿದ್ದ ಹಾಂಗೇ – ಉಪಶುದ್ದಿಯೊಂದರ ಸುರುಮಾಡಿ, ಅದರ ಪೂರ್ಣವಾಗಿ ಹೇಳಿಕ್ಕಿ, ಪುನಾ ಮದಲಾಣ ಶುದ್ದಿಗೆ ಬಪ್ಪ ಮಾತಿನ ಕ್ರಮ!
ಗಂಭೀರ ವಿಷಯಂಗಳ ಬರಕ್ಕೊಂಡು ಹೋಪಗ ಕೆಲವು ಮಾಹಿತಿಗಳ – (…) -ಬ್ರೆಕೆಟಿನ ಒಳದಿಕೆ ಬರದ ಹಾಂಗೆ – ಒಂದು ಸಂಗತಿ ಹೇಳಿಂಡು ಹೋಪಾಗ ಅದಕ್ಕೆ ಪೂರಕ, ಆದರೆ ಅಷ್ಟು ಮುಖ್ಯ ಅಲ್ಲದ್ದ ಸಂಗತಿಗಳ ಹೇಳಿಂಡು ಹೋವುತ್ಸು ಕೆಲವು ಜೆನರ ಕ್ರಮ.
ವಿಶಯ ಸಂಪೂರ್ಣವಾಗಿ ಹೇಳುದರಿಂದ ಮದಲೇ – ಪಾತರಗಿತ್ತಿ ಹಾತೆ ಹತ್ತು ಹಲವು ಹೂಗುಗೊಕ್ಕೆ ಹಾರಿ, ಹಲವುನಮುನೆ ಮಕರಂದ ಜೋಡುಸುತ್ತ ಹಾಂಗೆ – ಒಂದು ಶುದ್ದಿ ಸುರುಮಾಡಿ, ಅದರೊಟ್ಟಿಂಗೆ ಹಲವು ಉಪಶುದ್ದಿ ಹೇಳಿಗೊಂಡು – “ಹಾಂ, ಆನು ಎಲ್ಲಿತ್ತಿದ್ದೆ..?” –ಹೇದು ಒಪಾಸು ಮದಲಾಣ ಶುದ್ದಿಗೆ ಬಪ್ಪದು.
ಮೂಲಶುದ್ದಿ ಒಂದೇ ನಿಮಿಶದ್ದಾದರೂ – ಪೂರ್ತಿ ಮಾತುಕತೆ ಮುಗಿವಾಗ ಹತ್ತು ನಿಮಿಷ ಅಕ್ಕು! ಮಾತುಕತೆ ಪೂರ್ತಿ ಅಪ್ಪಾಗ ಹತ್ತು ಹಲವು ಶುದ್ದಿಗಳ ತಿಳ್ಕೊಂಬಲೆ ಎಡಿಗಕ್ಕು.
ರಜ ರಜ ಒಪ್ಪಣ್ಣಂಗೂ ಆ ಅಭ್ಯಾಸ ಇದ್ದೋದು!! ಉಮ್ಮ! 😉
ಮಾಷ್ಟ್ರುಮಾವನ ಹತ್ತರೆ ಕೇಳಿರೆ ಆ ಕ್ರಮಕ್ಕೇ ಒಂದು ನಿರ್ದಿಷ್ಟ ಹೆಸರೇ ಹೇಳುಗೋ – ನವಗರಡಿಯ.
ಆ ಕ್ರಮ ಎಂತ್ಸರ? ಅದರ ವಿವರವನ್ನೇ ಈ ವಾರ ಶುದ್ದಿಯಾಗಿ ಮಾತಾಡಿರೆ ಎಂತ? 🙂
~

ಪಾರೆ ಮಗುಮಾವನ ಮನೆ ದೊಡ್ಡಮಾರ್ಗದ ಬುಡಲ್ಲಿ ಆದ ಕಾರಣ ಪೇಟೆಗೂ ಹತ್ತರೆಯೇ. ಅಪುರೂಪಲ್ಲಿ ನಾವು ಪೇಟಗೆ ಹೋಗಿಪ್ಪಾಗ ಸಿಕ್ಕುಗು.
ಭರಣ್ಯಮಾವನ ಮನೆಒತ್ತಕ್ಕೇ ಈ ಮನೆಯೂ ಇಪ್ಪ ಕಾರಣ – ಇಬ್ರನ್ನೂ ಕಂಡಾಂಗೆ ಆತೂದು ನಾವುದೇ ಒಂದೊಂದರಿ ಹೋಪಲಿದ್ದು.
ಮೊನ್ನೆದೇ ಹಾಂಗೇ ಆತು. ಮದ್ಯಾಂತಿರುಗಿ ಬೆಶಿಲು ತಣುದಪ್ಪದ್ದೇ, ಪೇಟಗೆ ಹೋಗಿತ್ತಿದ್ದೆ; ಏನೋ ಅಗತ್ಯಕ್ಕೆ. ಮಗುಮಾವ ಕಾಸ್ರೋಡಿಂದ ಬತ್ತೋರು ಸಿಕ್ಕಿ ಮಾತಾಡಿದವು.

~

  • ಮಗುಮಾವ ಉದಿಯಪ್ಪಗಳೇ ಹೆರಟ ಕಾರಣ ಇನ್ನು ಮನೆಗೆ ಹೋಗಿ ಊಟ ಆಯೇಕಟ್ಟೆ ಇದಾ.
    ಬಸ್ಸಿಳುದು ಮಾರ್ಗ ದಾಂಟಿ ಮನೆ ಹೊಡೆಂಗೆ ಹೋಪಗಳೇ – ಒಪ್ಪಣ್ಣನ ಕಂಡ ಕಾರಣ ಊಟ ಆತೋ? ಹೇಳಿಯೇ ಮಾತು ಸುರುಮಾಡಿದವು.
    ಊಟವೋ? ಒಂದರಿ ಆತು ಮಾವಾ” – ಹೇಳಿ ಕೊಶಾಲಿಂಗೆ ನೆಗೆಮಾಡಿದೆ.

    • ಬೇಕಾರೆ “ಇರುವಾರ ಮಾಡ್ಳಕ್ಕು ಬೇಕಾರೆ, ಸೌತ್ತೆ ಬೋಳು ಇದ್ದು“; ಹೇದವು.
      ಹೋ, ಬೆಂದಿ ಯೇವದು ಹೇಳಿಯೂ ಗೊಂತಿದ್ದೋ ಮಾವಂಗೆ, ಮನೆಗೆ ಎತ್ತೇಕಾರೆ? ಕೇಟೆ.
      ನಿನ್ನೇಣದ್ದೋ°!” – ಹೇದವು.
      • ಅತ್ತೆ ನಿನ್ನೆಯೇ ಅಡಿಗೆ ಮಾಡಿದ್ದು. ಅದು ಮನೆಲಿಲ್ಲೆ ಈಗ,
        ಅದರ ಬಿಟ್ಟಿಕ್ಕಿಯೇ ಬಂದ್ಸು ಆನು. ಕಾಸ್ರೋಡಿಂದ ರೈಲು, ಕಣ್ಣನೂರು ಬಾವನಲ್ಲಿಗೆ ಹೆರಟದು ಅದು. ಅದರ ತಮ್ಮನೂ ಇತ್ತಿದ್ದ ಒಟ್ಟಿಂಗೆ.”
        “ಹೋ, ಆರು? ಮಾಲಿಂಗಪ್ಪಚ್ಚಿಯೋ?” ಅಪ್ಪು.
        ಮಾಲಿಂಗಪ್ಪಚ್ಚಿ ಹೇದರೆ ಪಾರೆ ಮಗುಅತ್ತೆಯ ತಮ್ಮನೇ, ರಜ ರಜ ಗುರ್ತ ಇದ್ದು.

        • “ಬಂದಡ್ಕಲ್ಲಿ ಮನೆ ಅಲ್ಲದೋ ಮಾವ ಅವರದ್ದು” ಕೇಟೆ.
          ಅಪ್ಪು; ಮದಲಿಂಗೆ ಬಂದಡ್ಕಲ್ಲಿ ಇದ್ದಿದ್ದು ಅಪ್ಪು; ಈಗ ಅದರ ಬಿಟ್ಟು ಮವ್ವಾರಿಲಿ ಇದ್ದವು – ಹೇಳಿದವು.
          ನವಗೆ ಆ ಸಂಗತಿ ಗೊಂತಿತ್ತಿಲ್ಲೆ, ಅವು ಬಂದಡ್ಕಲ್ಲೇ ಇದ್ದದೋ ಗ್ರೇಶಿದ್ದು; ನಮ್ಮ ಪಾಲಾರಣ್ಣನ ನೆರೆಕರೆಲಿ.
          ಈಗೀಗಾಣ ಒರ್ತಮಾನಂಗೊ ಒಪ್ಪಣ್ಣಂಗೆ ಗೊಂತಪ್ಪಗಳೇ ತಡವಾವುತ್ತು; ಅಪ್ಪೋ! “ಜಾಗೆ ಕೊಟ್ಟವೋ ಅಂಬಗ?” ಕೇಟೆ.
          ಹ್ಮ್, ಅಪ್ಪಡ.
          • ಜಾಗೆ ಕೊಟ್ಟದೆಂತಕೆ ಹೇದು ಬೇರೆ ಹೇಳೇಕೋ – ಎಲ್ಲೋರ ಹಾಂಗೇ, ಸುತ್ತುಮುತ್ತು ಪೂರ ಚೇಟಂಗೊ ತುಂಬಿದ್ದವು.
            – ನೆರೆಕರೆ ಒಳ್ಳಿದಿಲ್ಲೆ ಹೇದು” ಅಷ್ಟೇ – ಹೇದವು ಪಾರೆ ಮಗುಮಾವ.
            ಈಗ ಅಲ್ಲಿ ಹೋದರೆ ಕನ್ನಡ ಬಪ್ಪವೇ ಆರೂ ಇಲ್ಲೆ ಹೇಳಿ ಆಗಿ ಹೋಯಿದು.
            ನೆರೆಕರೆಲಿ ನಾಕು ಜೆನ ಆದರೂ ನಮ್ಮ ಅಬ್ಬೆ ಬಾಶೆ ಮಾತಾಡಿರೆ ಅಲ್ಲದೋ ನವಗೆ ಕೊಶಿ!
            ಬಾಯಿ ತೆಗದರೆ ಪರದೇಶಗೊ ಆದರೆ, ಕನ್ನಡ ಮಾತಾಡ್ಳೆ ಜೆನ ಆರಿದ್ದವು ಬೇಕೆ!! ಕೇಳಿದವು ಮಗುಮಾವ°. 🙁
            • ಅಲ್ಲ, ಕನ್ನಡ ಬಪ್ಪೋರುದೇ ಕನ್ನಡ ಮಾತಾಡ್ತವೋ!? ಬೇರೆ ಯೇವ ಭಾಶೆ ಬತ್ತೋ ಅದನ್ನೇ ಮಾತಾಡ್ತದು.
              ಕನ್ನಡಲ್ಲೇ ಮಾತಾಡ್ತೋನು ಬಾರೀ ಅಪುರೂಪ ಈಗ – ಹೇಳಿ ಬೇಜಾರು ಮಾಡಿಗೊಂಡವು.
              ಇಬ್ರು ಕನ್ನಡಲ್ಲೇ ಮಾತಾಡ್ತವು ಹೇದು ಆದರೆ ಅವಕ್ಕೆ ಬೇರೆ ಭಾಶೆ ಬತ್ತಿಲ್ಲೆ ಹೇದು ಗ್ರೇಶಲಕ್ಕು ಈಗ – ಹೇಳಿ ನೆಗೆಮಾಡಿದವು.
              • ಅಪ್ಪು, ಕನ್ನಡ ಮಾತಾಡದ್ದು ಇಲ್ಲಿ ಮಾಂತ್ರವೋ; ಬೆಂಗುಳೂರಿಲಿಯೇ ಹಾಂಗೇಡ – ಹೇಳಿದೆ.
                ಪೆರ್ಲದಣ್ಣ ಅಂದೊಂದರಿ ಹೇಳಿತ್ತಿದ್ದು ನವಗೆ ನೆಂಪಿತ್ತು.
                • ಎಲ್ಲೋರಿಂಗೂ ಅವರವರ ಭಾಷಾಭಿಮಾನ ಬೇಕು ಅಪ್ಪೋ – ಹೇಳಿಗೊಂಡವು ಮಗುಮಾವ°.
              • “ಬೆಂಗುಳೂರಿನ ಕತೆ ನವಗೆಂತಕೆ, ನಮ್ಮ ಊರಿಲಿ ಹಾಂಗಪ್ಪಗ ಬೆಶಿ ಅಪ್ಪದು; ಅಲ್ಲದೋ ಒಪ್ಪಣ್ಣ?
                ಅದಿರಳಿ, ಎಂತ ಮಾತಾಡಿಗೊಂಡಿತ್ತು ನಾವೂ..?” ಹೇದು ಅದರಿಂದ ಮದಲಾಣದ್ದರ ಆಲೋಚನೆ ಮಾಡಿಗೊಂಡವು.
                ಹೋ – ಜಾಗೆ ಕೊಡ್ಸರ ಬಗ್ಗೆ. ಅದೊಂದು ಸಾಂಕ್ರಾಮಿಕ ರೋಗ ಆಗಿ ಹೋಯಿದು ಈಗ.
                ಒಬ್ಬ ಕೊಡ್ಸರ ನೋಡಿ ಇನ್ನೊಬ್ಬ ಕೊಡ್ಸು. ಹಾಂಗೇ ಮಾಡಿರೆ ಮತ್ತೆ ಒಳ್ಳೆ ನೆರೆಕರೆ ಒಳಿಗೋ?
                ಮತ್ತೆ ನೆರೆಕರೆ ಒಳ್ಳೆದಿಲ್ಲೆ ಹೇದು ಬೈವದು ಎಂತಗೆ!? ಅಲ್ಲದೋ? ಕೇಟವು.
                ಅಪ್ಪು ಹೇಳುಲೂ ಪುರುಸೊತ್ತು ಕೊಡದ್ದೆ “ಹ್ಮ್.ಊರೋರ ತಿದ್ದಲೆ ನವಗೆಡಿಗೋ ಒಪ್ಪಣ್ಣಾ.
                ಅದಿರಳಿ. ನಾವು ಎಂತ ಮಾತಾಡಿಗೊಂಡಿತ್ತೂ…”
                “ಹಾಂ, ಬಂದಡ್ಕಂದ – ಇತ್ಲಾಗಿ ಬಂದದು.
          • ಈಗ ಬಂದು ಮೊವ್ವಾರು ಮಾಧವಬಟ್ರ ಜಾಗೆ ಮಾಡಿಗೊಂಡದಿದಾ!
            ಮಾದವ ಬಟ್ರು ಅದರ ಕೊಟ್ಟಿಕ್ಕಿಯೇ ಬೆಂಗುಳೂರಿಂಗೆ ಹೋದ್ಸು.
            ಇಬ್ರು ಮಕ್ಕಳೊಟ್ಟಿಂಗೆ ಅವು ಈಗ ಬೆಂಗುಳೂರಿಲಿದ್ದವು. ಜಾಗೆ ನೋಡಿಗೊಂಬಲೆಡಿತ್ತಿಲ್ಲೆ ಹೇದು ಜಾಗೆ ಕೊಟ್ಟದು.
            ಇಲ್ಲಿ ಹತ್ತೆಕ್ರೆ ಜಾಗೆ ಕೊಟ್ಟದಕ್ಕೆ ಅವಕ್ಕೆ ಬೆಂಗುಳೂರಿಲಿ ಒಂದು ಹಿತ್ತಿಲುಮನೆ ಸಿಕ್ಕಿತ್ತಷ್ಟೆ ಅಡ; ಮದಲಾಣ ಹಾಂಗೆ ಕೈಕ್ಕಾಲು ಆಡುಸಲೆ ಎಂತ ಮಾಡ್ತವೋ!
            ಇಲ್ಲಿಂದ ಹೆರಡುವಾಗ ಅದು ಚೆಂದ; ಅಲ್ಲಿಗೆತ್ತಿ ನೋಡುವಾಗ ಇದು ಚೆಂದ – ಕಾಂಬದು.
            ಅದಿರಳಿ, ನಾವು ಎಂತ ಮಾತಾಡಿಗೊಂಡಿತ್ತೂ…”
            ಅದರಿಂದ ಹಿಂದಾಣ ಶುದ್ದಿಗೆ ಹೊರಳಿದವು..
        • ಮಾಲಿಂಗಪ್ಪಚ್ಚಿಗೆ ಈಗ ಮೊವ್ವಾರು ಹಿಡುತ್ತಾಡ. ಮಕ್ಕೊ ಅಲ್ಲಿಗೇ ಶಾಲೆಗೆ ಹೋಪದಾಡ.
          ಅವರ ನೆರೆಕರೆಯ ಕನ್ನಡ ಶಾಲೆಗೆ. ಆ ಶಾಲೆಗೆ ಬಾರೀ ಬಂಙಲ್ಲಿ ಮಕ್ಕೊ ಬಪ್ಪದು.
          ಹಾಂಗಾಗಿ ಮಾಲಿಂಗಪ್ಪಚ್ಚಿ ಬಂದದರ್ಲಿ ಮತ್ತೆರಡು ಮಕ್ಕೊ ಸಿಕ್ಕಿದವು!
          ಕಾಸ್ರೋಡಿಲಿ ಮಲೆಯಾಳ ಮೀಡಿಯಮ್ಮಿಂಗೆ ಹೋವುತ್ತವು, ಒಳುದ ದಿಕ್ಕೆ ಇಂಗ್ಳೀಶು ಮೀಡಿಯಮ್ಮಿಂಗೆ ಹೋವುತ್ತವು.
          ಅಂತೂ – ಈಗ ಎಲ್ಲ ಕನ್ನಡ ಶಾಲೆಗೂ ಅದೇ ಅವಸ್ಥೆ! ಮುಂದಾಣ ಕತೆ ಗ್ರೇಶಿರೆ ಹೆದರಿಕೆ ಆವುತ್ತು.
          ಅದಿರಳಿ, ಎಂತ ಮಾತಾಡಿಗೊಂಡಿತ್ತು ನಾವೂ..?
      • ಹ್ಮ್, ಮಾಲಿಂಗಪ್ಪಚ್ಚಿ – ಅವ ಮೊವ್ವಾರಿಲಿ ಆದ ಕಾರಣ ಅಂಬಗಂಬಗ ಬತ್ತ°.
        ಕಾರ್ಯನಿಮಿತ್ತ ಕಣ್ಣನೂರಿಂಗೆ ಹೋಪೋರು ಮುನ್ನಾದಿನ ಮನಗೆ ಬಂದು ನಿಂಗು.
        ನಿನ್ನೆ ಇರುಳು ಬಂದು ಇಂದು ಉದಿಯಪ್ಪಗ ಹೆರಟದು.
        ಈ ಸರ್ತಿ ಕಣ್ಣನೂರಿಂಗೆ ಹೋಪಗ ನಿನ್ನ ಮಗುಅತ್ತೆಯನ್ನೂ ಕರಕ್ಕೊಂಡು ಹೋಯಿದ°!
        ಚೆಲ ಮಗುಮಾವಾ – “ನಿಂಗಳ ಒಬ್ಬನನ್ನೇ ಮಾಡಿ ಹೆರಟ ಕಾರಣವೋ ’ನಿನ್ನ ಮಗುಅತ್ತೆ’ ಹೇಳುಸ್ಸು ನಿಂಗೊ” – ಕೇಟೆ.
        ಅವರತ್ರೆ ಕುಶಾಲು ಮಾತಾಡಿ ಒಪ್ಪಣ್ಣಂಗೆ ಸರುವೀಸು ಇದ್ದು!
        ಹ ಹ, ಅದಿರಳಿ, ಎಂತ ಮಾತಾಡಿಗೊಂಡಿತ್ತು ನಾವೂ..? – ಕೇಟವು; ಒಂದು ವಿಷಯ ಹಿಂದಂತಾಗಿ ಬಂದವು.
    • ಹಾಂಗೆ, ಈ ಸರ್ತಿ ಹೆರಡುವಾಗ ಬಪ್ಪನ್ನಾರ ಸಾಕಪ್ಪಟ್ಟು ಬೆಂದಿ ಮಾಡಿಕ್ಕಿ ಹೋಯಿದು.
      ಸೌತ್ತೆ ಬೋಳು. ಬೆಳ್ಳುಳ್ಳಿ ಒಗ್ಗರಣೆ ಹಾಕದ್ದು. ಬೆಳ್ಳುಳ್ಳಿ ಹಾಕಿರೆ ಮರದಿನಕ್ಕೆ ಮೂರಿ ಬತ್ತಿದಾ!
      ಎರಡು ದಿನ ಒಳಿಯೇಕಾದ ಹಾಂಗೆ ಮಾಡಿದ್ದು.
      ಅದಿರಳಿ.
  • ಹಾಂಗೆ, ಮನಗೆ ಬತ್ತೆಯೋ – ಇರುವಾರ ಉಂಬಲಕ್ಕು; ಹೇದವು.
    “ಬೇಡ ಮಾವ, ಬೆಳ್ಳುಳ್ಳಿ ಹಾಕದ್ದ ಕಾರಣ ತೆಕ್ಕುಂಜೆ ಮಾವಂಗಾತು, ನವಗೆ ಬೇಡ”- ಹೇಳಿದೆ.
    ಹಲ್ಲುಕಾಣದ್ದೆ ನೆಗೆಮಾಡಿದವು.
    ತೆಕ್ಕುಂಜೆ ಮಾವಂಗೆ ಬೆಳ್ಳುಳ್ಳಿ ಆಗದ್ದ ಸಂಗತಿ ಪಾರೆಮಗುಮಾವಂಗೆ ಗೊಂತಿತ್ತೋ ಅಂಬಗ? ಉಮ್ಮಪ್ಪ. ಅದಿರಳಿ. 😉

~

ಗಮನುಸಿದಿರೋ – ಪಾರೆ ಮಗುಮಾವನ ಹತ್ತರೆ ಮಾತಾಡೇಕಾರೆ ಸುಮಾರು ವಿಶಯಂಗೊ ಸಂಗತಿಗೊ ಬಕ್ಕು.
ಇದೊಂದು ವಿಶಿಷ್ಟ ಕ್ರಮ. ಎಲ್ಲೋರಿಂಗೂ ಇದು ಅರಡಿಯ.
ಕೆಲವು ಜೆನಕ್ಕೆ ಮಾತಾಡಿಂಡಿದ್ದ ಹಾಂಗೆ – ಆಗ ಎಂತರ ಹೇಳಿದ್ದು ಹೇದು ಮರದೇ ಹೋಕು!
ಮರೆಯದ್ದೆ ಹಿಂದಾಣ ಸಂಗತಿ ನೆಂಪು ಮಡಗಿ ವಿವರ್ಸುತ್ತರೆ – ಅದೊಂದು ಅಪುರೂಪದ ಸಂಗತಿಯೇ!
ದೊಡ್ಡಜ್ಜನೂ ಸಂಗತಿಗಳ ವಿವರ್ಸೆಂಡಿದ್ದಿದ್ದು ಹಾಂಗೇಡ; ದೊಡ್ಡಬಾವ ಅಂದೊಂದರಿ ಹೇಳಿತ್ತಿದ್ದ°! 😉
ಒಂದು ಸಂಗತಿ ಹೇಳಿಂಡಿದ್ದ ಹಾಂಗೇ, ಅದಕ್ಕೆ ಸಮ್ಮಂದಪಟ್ಟ ವಿವರಣೆ – ಎಲ್ಲಿ, ಆರು, ಯೇವಗ, ಎಂತಗೆ – ಎಲ್ಲ ಸಂಗತಿಗಳೂ ಒಳಗೊಂಡು;
ಆ ವಿವರಣೆ ಮುಗುದ ಮತ್ತೆ – ಎಂತರ ಹೇಳಿಂಡಿತ್ತು ನಾವು – ಹೇದು ಪುನಾ ನೆಂಪುಮಾಡಿ – ಮುಖ್ಯಸಂಗತಿ ಮುಂದುವರಿಗಷ್ಟೇ!
ವಿವರಣೆ ಪೂರ ಮುಗುದಪ್ಪದ್ದೇ ಕೇಳ್ತೋನಿಂಗೆ – ಕತೆ ಉಪಕತೆ ಸಂದರ್ಭ ಸಂಧಿ ಸಮಾಸ – ಎಲ್ಲವೂ ಮನದಟ್ಟಾಗಿ – “ಇನ್ನು ಮರೆಯದ್ದ ಹಾಂಗಿಪ್ಪ” ಸ್ಪಷ್ಟ ಚಿತ್ರ ಮನಸ್ಸಿಲಿ ಬಂದಿರ್ತು. 🙂

~

ಕೆಲವು ಜೆನಕ್ಕೆ ಹಾಂಗೆ ಮಾತಾಡುದೇ ಕ್ರಮ ಆದರೆ, ಕೆಲವು ಜೆನಕ್ಕೆ ಅದೊಂದು ಸಿದ್ಧಿಸಿದ ಕಲೆ.
ಉದಾಹರಣೆಗೆ – ನಮ್ಮ ಗುರುಗೊ ಮಾತಾಡುವಾಗ:

  • ಆಶೀರ್ವಚನ ಕೊಟ್ಟೊಂಡಿದ್ದ ಹಾಂಗೇ –
    • ಒಂದು ಕತೆ
      • ಅದರೊಳ ಒಂದು ಉಪಕತೆ
        • ಅದರೊಳ ಒಂದು ನೀತಿ
          • ಆ ನೀತಿಗೆ ಹೊಂದುವ ಸುಭಾಷಿತ
          • ಸುಭಾಷಿತದ ಅರ್ಥ ಹೇಳಿಕ್ಕಿ –
        • ನೀತಿಯ ವಿವರುಸಿ –
      • ಉಪಕತೆ ಮುಗುಶಿ –
    • ಕತೆಯ ಮುಗುಶಿ –
  • ಪುನಾ ಆಶೀರ್ವಚನ ಮುಂದುವರುಸುತ್ತ ಹಾಂಗೆ!

ಅದೊಂದು ಸಿದ್ಧಿಸಿಗೊಂಡ ಸಿದ್ಧ ಕಲೆ – ಹೇದು ಮೊನ್ನೆ ಕೊಡೆಯಾಲಲ್ಲಿ ರಾಮಕತೆ ಕೇಳಿ ಬಂದ ಮರದಿನ ಎಡಪ್ಪಾಡಿಬಾವ ಹೇಳಿತ್ತಿದ್ದ°.
~

ಬೋಚಬಾವನೂ ಮಾತಾಡುವಗ – ಅರೆವಾಶಿ ಹಾಂಗೆಯೇ.
ಒಂದರಿಂದ ಹಾರಿ ಇನ್ನೊಂದಕ್ಕೆ ಹೋವುತ್ತು; ಅಲ್ಲಿಂದ ಹಾರಿ ಮತ್ತೊಂದಕ್ಕೆ ಹೋವುತ್ತು. ಆದರೆ, ಒಪಾಸು ಬಪ್ಪಲೆ ಅರಡಿತ್ತಿಲ್ಲೆ.
ಕಾಸ್ರೋಡಿಂದ ಹೆರಟದು ಬೀಸ್ರೋಡಿಂಗೆ ಎತ್ತುತ್ತು! ಹು!!

ಹಾಂಗಪ್ಪಲಾಗ ಇದಾ!
ಮಾತುಗೊ ಒಂದಕ್ಕೊಂದು ಸೇರಿಗೊಂಡೇ – ಸಂಕೊಲೆಯ ಹಾಂಗೆ ಇರೇಕು.
ಕೊಳಿಕ್ಕೆ ತಪ್ಪಲಾಗ ಇದಾ! ಕೊಳಿಕ್ಕೆ ತಪ್ಪಿರೆ ಮತ್ತೆ ರೈಲಿಂಗೆ ಮಾಡ್ತ ಹಾಂಗೆ ಚೈನು ಎಳೇಕಟ್ಟೆ!!
ರೂಪತ್ತೆ ಸಿಕ್ಕಿರೆ ಇದೇ ಸಮಸ್ಯೆ ಅಡ; ಅಭಾವ ಹೇಳುಲಿದ್ದು ಒಂದೊಂದರಿ – ಸುರು ಆವುತ್ತು; ಆದರೆ ಮುಗಿತ್ತಿಲ್ಲೆ.
ರೈಲಿಂಗಾದರೆ ಒಂದೇ ಚೈನು – ಯೇವದರ ಎಳೇಕಪ್ಪದು ಗೊಂತಾವುತ್ತು.
ಆದರೆ ರೂಪತ್ತೆ ಮೈಲಿ ಚಕ್ರ ಸರ, ಅವಲಕ್ಕಿ ಸರ, ಲಕ್ಷ್ಮಿ ಸರ, ರೇಡಿಯೊ ಚೈನು, ಆಚದು ಈಚದು – ಎಲ್ಲಾ ನಮುನೆ ಚೈನುಗಳೂ ಇಪ್ಪ ಕಾರಣ ಎದುರೆ ಕೂದ ಅಭಾವಂಗೂ ಕನುಪ್ಯೂಸು!! 😉
~
ಅದೇನೇ ಇರಳಿ,
ಕತೆಗಳ ಎಡೆಲಿ ಉಪಕತೆಗಳ ಕವಲು ಬೇಕು. ದಾರಿ ತಪ್ಪದ್ದರೆ ಆತು, ಅಲ್ಲದೋ?!

~

ಒಂದೊಪ್ಪ: ಮಾತುಗೊ ಪಾತರಗಿತ್ತಿಯ ಹಾಂಗೆ ಬೇರೆಬೇರೆ ಹೂಗಿಂಗೆ ಹಾರಿ ಕತೆ ತುಂಬುಸಿರೆ, ಜೇನಿನ ಹಾಂಗೆ ರುಚಿಯಿಕ್ಕು.

11 thoughts on “ಮಾತಿಂದ ಮಾತಿಂಗೆ ಹಾರುವ ಹಾತೆ – ಈ ’ಮಾತುಕತೆ’..!!

  1. ಹಾಂಗೇ ಮಾಡೆಕ್ಕಷ್ಟೆ ರಘು ಭಾವ.

  2. ಕೆಲವು ಜನ ಇಡೀ ದಿನ ಹೇಳಿದ್ದನ್ನೇ ಹೇಳ್ತವನ್ನೇ. ಇದಕ್ಕೆಂತ ಪರಿಹಾರ ಒಪ್ಪಣ್ಣಾ?

    1. ಅವರ ಬಾಯಿಗೆ ಪ್ಲಾಷ್ಟರ್ ಹಾಕೊದು,ಸಾಮರ್ಥ್ಯ ಇಲ್ಲದ್ರೆ ನಮ್ಮ ಕೆಮಿಗೆ ಹತ್ತಿ ಮಡಿಕ್ಕೊ೦ಬದು ,ಅಲ್ಲದೊ ವಿದ್ಯಕ್ಕಾ?

  3. ಕಾಸ್ರೋಡಿಂದ ಹೆರಟದು ಬೀಸ್ರೋಡಿಂಗೆ ಎತ್ತುತ್ತು! ಹಹ್ಹಹ್ಹಾ.. ಇದು ಅಪ್ಪು.. ಆನುದೆ ಮಾತಾಡುವಗ ಹೀಂಗೆ ಆವುತ್ತು. ಇದಕ್ಕೆ ಎಂತದೋ ರೋಗದ ಹೆಸರನ್ನೂ ಹೇಳ್ತವು ಒಪ್ಪಣ್ಣಾ ಈಗಾಣವು.(ನಿಜವಾದ ವಿಷ್ಯ ಮರತ್ತು ಹೋದರೆ).
    ಭಾರೀ ಲಾಯ್ಕಾಯ್ದು,. ಒಪ್ಪಂಗೊ

  4. hareraama.
    lekhana baari laykayidu miniya.
    opannana maathina kale avana lekhana kaleli eddu kanuthu.ondondari namma mathada bagge gurugala bagge mathadutha mathadutha eshto shuddigo bathu. mathe anu yenta mathaduthidde ? kelekkavuthu.
    kathego upakathego eddare harikatheyu layaka.pravachanavu mathashtu laika.hareraama.

  5. ಬೃಹತ್ಕಥಾ ಮಂಜರಿ ಹೇಳುವ ಕತೆಲೂ ಹೀಂಗೆ..ಮುಖ್ಯ ಕತೆ ಉಪಕತೆ ಇರುತ್ತು,ಪಂಚತಂತ್ರ,ಹಿತೋಪದೇಶ ,ಅರೇಬಿಯನ್ ನೈಟ್ಸ್ ಎಲ್ಲದರಲ್ಲೂ ಇದೇ ತಂತ್ರ….ಬಹುಶಃ ಒಂದು ಕಾಲದ ಜನಪ್ರಿಯ ಕಥನ ತಂತ್ರ ಆಗಿಪ್ಪ ಇದು ಈಗಲೂ ಒಳಿದ್ದು ಅದರಶಕ್ತಿಯ ದೃಷ್ಟಾಂತ.ಲೇಖನ ಲಾಯಿಕ ಆಯಿದು,ಒಪ್ಪಣ್ಣಾ.

  6. ಎರಟೆಕ್ಕಾಯರ ಅಪ್ಪಚ್ಚ್ಹಿ ಮಾತಾಡ್ವಾಗ ಹೇಳುಗು – “ನಣ್ಣುವ ನಳ° ದೇರಣ್ಣನ ಸೀತೆ ಹಸರು ಪಾಚ ಕೊರುಂಗು ಗೆದ್ದೆ ಆಟ ಪಷ್ಟಾಯ್ದು ಮಿನಿಯ”. ಎಂತರ ಇದು?! ಅರ್ಥ ಅಪ್ಪವಂಗೆ ಅರ್ಥ ಅಕ್ಕು ಅಲ್ದೊ.!

    ವಾಗ್ಮಯ ಕಲೆಯ ಬಗ್ಗೆ ಬೆಳಕು ಚೆಲ್ಲಿದ ಈ ಶುದ್ದಿ ಒಪ್ಪ ಆಯ್ದು ಹೇದು ಹೇಳಿತ್ತಿಲ್ಲಿಂದ.

    1. ಒಂದು ವಾಕ್ಯಲ್ಲೇ ಇಡೀ ವರದಿ ಲಾಯಕಾಯಿದು ಭಾವಯ್ಯ.

  7. ನಮ್ಮ ಒಪ್ಪಣ್ಣನದ್ದು ಮತ್ತೆಂತ, ಅವಂಗುದೆ ಈ ಮಾತುಕತೆಯ ಕಲೆ ಗೊಂತಿಪ್ಪ ಕಾರಣವೇ ಅಲ್ಲದೊ, ನಮ್ಮ ಬೈಲು ಇಷ್ಟೆಲ್ಲಾ ಬೆಳವಲೆ ಕಾರಣ. ಅವ° ಮಾತಾಡುವ ಶೈಲಿ, ಬರೆತ್ತ ಶೈಲಿಯುದೆ ಕೇಳ್ತವಂಗೆ/ಓದ್ತವಂಗೆ ಆಸಕ್ತಿ ಹುಟ್ಟುತ್ತ ಹಾಂಗೆ ಮಾಡುತ್ತು.
    ನಮ್ಮ ರೂಪತ್ತೆಯ ಹಾಂಗಿಪ್ಪವು ಮಾತಾಡ್ಳೆ ಹೆರಟು ಕೆಲವೊಂದರಿ ಉಪಕತೆಯೇ ಜಾಸ್ತಿಯಾಗಿ, ಹೇಳ್ಲೆ ಹೆರಟ ವಿಷಯದ ಪ್ರಸ್ತಾವನೆಯೇ ಇರ. ಮೊಬೈಲಿಲ್ಲಿ ಮಾತಾಡಿರೆ ಕರೆನ್ಸಿ ಮುಗುದ್ದೇ ಗೊಂತಾಗ.
    ಈಗಾಣ ಕಾಲದ ಮಕ್ಕೊಗೆ ಈ ವಿಷಯಲ್ಲಿ ಕಲಿಯಲೆ ತುಂಬಾ ಇದ್ದು. ಅವರ ಹತ್ರೆ ನಾವೊಂದು ಪ್ರಶ್ನೆ ಹಾಕಿರೆ, “ಹುಂ”, ಹಾಂ, ಹೇಳಿ ಒಂದು ವಾಕ್ಯಲ್ಲಿ ಉತ್ತರಿಸುತ್ತವು. ಈಗಾಣ ಪರೀಕ್ಷೆಲಿ ಉತ್ತರಿಸ್ಸೆಕಾದ್ದೂ ಹಾಂಗೇ ಅಲ್ಲದೊ ?. ಮಾತಾಡುವ ಅಭ್ಯಾಸ, ಅಭ್ಯಾಸಲ್ಲೇ ಬರೆಕಷ್ಟೆ.

    ಈ ವಾರದ ಶುದ್ದಿ ತುಂಬಾ ಲಾಯಕಾತು. ಧನ್ಯವಾದಂಗೊ.

  8. ನಿ೦ಗೊ ಹೇಳಿದ ಶುದ್ದಿ ಅಪ್ಪಾದ್ದೇ ಒಪ್ಪಣ್ಣಾ..
    ಇಲ್ಲಿ ದುಬಾಯಿಲಿ ಎ೦ಗೊ ಕೆಲಾ…ವು ಜನ ಸೇರ್ಯೊ೦ಡು ಪ್ರತೀ ವಾರಾ೦ತ್ಯಲ್ಲಿ ಗೀತಾ ಪ್ರವಚನ, ಅಧ್ಯಾತ್ಮಿಕ ಸಮಿತಿ, ಆಟಿ ತಿ೦ಗಳಿಲ್ಲಿ ದಿನಾಗಳೂ ರಾಮಾಯಣ ಓದುದು, ನವರಾತ್ರಿ ಸಮಯಲ್ಲಿ ಪ್ರತೀದಿನ ಕಶ್ತಲೆಪ್ಪಗ ಲಲಿತಾಸಹಸ್ರನಾಮ, ಪ್ರತೀ ಗುರುವಾರ ನಾರಾಯಣೀಯಮ್, ಪ್ರದೋಷದ್ದಿನ ರುದ್ರಾಭಿಶೇಕ, ತಿ೦ಗಳಿನ ಸುರೂವಾಣ ದಿನ ವಿಷ್ಣು ಸಹಸ್ರನಾಮ ಹೇಳಿಯೆಲ್ಲ ಮಾಡ್ಯೋಳ್ತ ಕ್ರಮ ಇದ್ದು.. ಈ ಎಲ್ಲಾದರಲ್ಲಿಯುದೆ / ಪ್ರವಚನ೦ಗಳಲ್ಲಿಯುದೆ ಹೀ೦ಗೆಯೇ, ಸುರುಮಾಡುವಗ ಒ೦ದು ವಿಷಯಲ್ಲಿ ಸುರುಮಾಡುದು, ಮತ್ತೆ ಎಡಕ್ಕಿಲ್ಲಿ ಪೂರಕವಾದ ಎಷ್ಟೋ ಉಪಕಥೆಗೊ ಬತ್ತೋ.. ಭಾರೀ ಲಾಯಿಕಾವುತ್ತು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×