Oppanna.com

ಮಗನ ತಪ್ಪು ಕಂಡಪ್ಪಗ ಅಪ್ಪನ ಆದರ್ಶ ನೆಂಪಾತಡ!

ಬರದೋರು :   ಒಪ್ಪಣ್ಣ    on   14/10/2011    45 ಒಪ್ಪಂಗೊ

ಎರಡೆರಡು ಗೆರೆಯ ಶುದ್ದಿ ಕೇಳಿದಿರೋ? ಎರಡು ತಟ್ಟುವೊ° – ಹೇದು ಕಂಡಿದಿಲ್ಲೇನೆ?
ಅಂಗಿಚಡ್ಡಿಂದ ಹಿಡುದು ಶುದ್ದಿ ಒರೆಂಗೆ ಎಲ್ಲವೂ ಸಣ್ಣ ಆತು – ಹೇಳಿಗೊಂಡು ಬೊಳುಂಬುಮಾವನ ಅಜ್ಜ° ಬೇಜಾರುಮಾಡಿಗೊಂಡದೇ ಬಂತು. ಬೈಲಿಲಿ ಶುದ್ದಿ ಹೇಳಿಯೂ, ಕೇಳಿಯೂ ಕಳಾತು!

ಎಲ್ಲವೂ ಸಣ್ಣ ಆವುತ್ತಾ ಇದ್ದು.
ನಮ್ಮ ಆಚಾರ-ವಿಚಾರ-ಚಿಂತನೆಗಳುದೇ. ನಮ್ಮ ಹಳೆ ಕ್ರಮಂಗಳುದೇ.
ಈ ಬಗೆಲಿ ಹೆಚ್ಚಿನ ಶುದ್ದಿಗಳನ್ನೂ ಮಾತಾಡಿಗೊಂಡಿದು ಬೈಲಿಲಿ.
ಅಂಬಗ ಇನ್ನು ಮಾತಾಡ್ಳೇ ಶುದ್ದಿ ಇಲ್ಲೆಯೋ – ಹೇದು ಪೆಂಗಣ್ಣ ತಲಗೆ ಕೈ ಮಡಿಕ್ಕೊಂಡು ಕೇಳುಗು.
ಎಬೆ, ಹಾಂಗೆಂತ ಇಲ್ಲೇಪ.  ಹೊತ್ತುಗೊತ್ತಿಂಗೆ ಹೊಟ್ಟಗೆ ಬೇಕಾದ ಉಂಬತಿಂಬ ಶುದ್ದಿಯನ್ನಾದರೂ ಮಾತಾಡ್ಳಕ್ಕು ನವಗೆ!
~
ಕಾಲ ಬದಲಾದ ಹಾಂಗೆ ಮದುವೆ-ಸಟ್ಟುಮುಡಿ ಇತ್ಯಾದಿ ಜೆಂಬ್ರದ ಅಡಿಗೆಲಿಯುದೇ ಸುಮಾರು ಬದಲಾವಣೆಗೊ ಆಯಿದು.
ಮೊದಲ ಕಡದು ಹಾಕಿದ ಸಾರೋ, ಶುಂಟಿಸಾರೋ, ಕೊದಿಲೋ, ಪಾಯಿಸವೋ, ಮೇಲಾರವೋ, ಮಜ್ಜಿಗೆಯೋ – ಇಷ್ಟೇ ಇಕ್ಕಷ್ಟೆ.
ಈಗ ಮಾಂತ್ರ ಪಲಾವು, ಗೀರೈಸು, ಫ್ರುಟ್‌ಸಲಾಡು, ಅದು ಇದು – ಹೇಳಿಗೊಂಡು ಹೊಸ ನಮುನೆಯ ವೈವಿದ್ಯಂಗೊ ಸುರು ಆಯಿದು.
ಮಾಷ್ಟ್ರುಮಾವ° ಚೆಂದಲ್ಲಿ ವಿವರುಸುಗು ಅದರ. ಅಡಿಗೆ ಉದಯಣ್ಣಂಗೆ ಇದೆಲ್ಲ ಕಲಿಯದ್ರೆ ಪೋಕಿಲ್ಲೆ!
ಊರಿಲಿಲ್ಲದ್ದ ಹೊಸತ್ತೊಸತ್ತು ಮಾಡಿದಾಂಗೆ ಗತ್ತು ಗಮ್ಮತ್ತು ಹೆಚ್ಚಪ್ಪದು ಹೇಳ್ತದರ ರೂಪತ್ತೆ ನಂಬಿಗೊಂಡಿದು.
ಅಪ್ಪೋ.. ಉಮ್ಮಪ್ಪ ನವಗರಡಿಯ ಅದೆಲ್ಲ!
ಅದಿರಳಿ.

ಅಂಬಗ, ಜೆಂಬ್ರಂಗಳ ಅಡಿಗೆಲಿ ಮಾಂತ್ರ ಬದಲಾವಣೆ ಆದ್ದೋ? ಅಲ್ಲ, ನಮ್ಮ ನಿತ್ಯಜೀವನಲ್ಲಿಯುದೇ ಸುಮಾರು ಆಯಿದು!
ಶುಬತ್ತೆ ಮಕ್ಕೊಗಂತೂ ಕಾಂಬುಅಜ್ಜಿ ಕಾಲದ – ಸೆಕೆಗೆರದ್ದು, ತೆಳ್ಳವು, ಉಂಡೆ, ಕೊಟ್ಟಿಗೆ, ಸಜ್ಜಿಗೆ-ಅವಲಕ್ಕಿ ಇತ್ಯಾದಿ ತಿಂಡಿಗಳ ಹೆಸರು ಕೇದರೇ ಮೋರೆಪೀಂಟುಸುಗಡ!
ಎಂತರ ಹೊಟ್ಟೆತುಂಬುಗು – ಹೇಳಿ ಮಾಷ್ಟ್ರಮನೆಅತ್ತೆ ಪರಂಚುಗು, ಟೀವಿ ನೋಡಿಗೊಂಡು.
ಪೇಟೆಮಕ್ಕೊ!! ಮೇಗಿಯೊ, ವರ್ಮಿಸೇಲಿಯೋ ಮತ್ತೊ ಇದ್ದರೆ ಕೊಶೀಲಿ ಹೊಟ್ಟೆತುಂಬ ತಿಂಗಡ.
ಆ ಪೆಕೆಟುಗಳಲ್ಲಿ ಇಪ್ಪದು ಎರಡೇ ಎರಡು ಚಮುಚ್ಚ ಆದರೂ, ಟೀವಿಲಿ ಮಾತ್ರ ಭರ್ತಿ ಅರ್ದಗಂಟೆ ಅಗಿವದರ ಎಡ್ವಟೇಸು ಕೊಡುಗಡ!
ಅದರ ಬದಲು ಹೊಟ್ಟೆತುಂಬ ತೆಳಿ ಆದರೂ ಕುಡಿವಲಾಗದೋ – ಹೇಳಿ ಕಾಂಗು ಹಳಬ್ಬರಿಂಗೆ.
~

ಮಕ್ಕೊ ಹೀಂಗಪ್ಪಲೆ ಕಾರಣ ದೊಡ್ಡವರ ಮನಸ್ಥಿತಿಯೂ ಬದಲಾವುತ್ತಾ ಇಪ್ಪದು.
ಉಂಡೆ, ಸೇಮಗೆ ಮಾಡ್ಳೆ ಆರಿಂಗೆ ಪುರುಸೊತ್ತಿದ್ದು ಬೇಕೇ?! ಅಂಬೆರ್ಪಿಲಿ ಅಡಿಗೆಮಾಡಿಕ್ಕಿ, ಮಕ್ಕಳ ಬುತ್ತಿಗೆ ತುಂಬುಸಿಕ್ಕಿ ಓಡೆಕ್ಕಿದಾ – ಕೆಲಸಕ್ಕೆ.
ಕಾಂಬುಅಜ್ಜಿಯ ನಮುನೆ ಉದೆಕಾಲಕ್ಕೆ ಎದ್ದರೆ – ಪಿತ್ತ ಕೆದರುಗು ಶುಬತ್ತೆಗೆ.
ಬೇಗ ಎದ್ದು ಕಡವಕಲ್ಲು ತಿರುಗುಸಿರೆ ಕೈ ಸೆಳಿವದಕ್ಕೆ ಬಬ್ಬುಮಾವ° ಮನೆಗೇ ಬರೆಕ್ಕಷ್ಟೆ!
ಹಾಂಗೆ – ಎಡ್ವಟೇಸಿಲಿ ಬತ್ತ ನಮುನೆಯ ಸುಲಾಬಲ್ಲಿ ಅಪ್ಪ ಬಣ್ಣದ ತಿಂಡಿಗಳನ್ನೇ ಮಾಡುಗು ಕಾಪಿಗೆ!

ಮೊನ್ನೆ ಮಾಷ್ಟ್ರುಮಾವನ ಮನೆಲಿ ಈ ‘ಬದಲಾವಣೆ’ಗಳ ಶುದ್ದಿ ಮಾತಾಡಿಯೊಂಡಿಪ್ಪಗ ಕುಮಾರಮಾವನ ನೆಂಪಾತು.
ಕುಮಾರಮಾವನ ಗುರ್ತ ಆಯಿದೋ?
ನಮ್ಮ ಪಂಜಚಿಕ್ಕಯ್ಯಂಗೆ ಸೋದರಲ್ಲಿ ಭಾವ° ಆಯೆಕ್ಕು. ಸಂದ್ಯತ್ತೆಯ ಯೆಜಮಾನ್ರು!

ಹತ್ತನೇಕ್ಳಾಸಿನ ಒರೆಂಗೆ ಕಾಸ್ರೋಡಿಲೇ ಕಲ್ತದು.
ಮತ್ತೆ ದೊಡ್ಡದರ ಎಂತದರನ್ನೋ ಕಲಿವಲೆ ಕೊಡೆಯಾಲಕ್ಕೆ ಹೋಗಿ, ಅಲ್ಲೇ ಬಾಕಿ ಆದವು!
ದೂರದ ಮೇಡ್ರಾಸಿಲಿ ಮೊನ್ನೆಮೊನ್ನೆ ಒರೆಂಗೆ ಕೆಲಸಲ್ಲಿದ್ದವು, ಈಗ ಕೊಡೆಯಾಲಕ್ಕೆ ಟ್ರಾನ್ಸುವರು ಆಯಿದು! ಸಂದ್ಯತ್ತೆ ಮನೆಲೇ ಇಪ್ಪದು.
ಕುಮಾರಮಾವ° ಉದಿಯಪ್ಪಗ ಎಂಟು ಗಂಟೆಗೆ ಮನೆ ಬಿಟ್ರೆ ಒಪಾಸು ಹೊತ್ತೊಪ್ಪಗ ಏಳು ಗಂಟೆಗೆ ಬಪ್ಪದಡ.
ಒಂದೊಂದರಿ ಎಂಟು – ಒಂಬತ್ತು ಗಂಟೆ ಅಪ್ಪದೂ ಇದ್ದಡ!
ದೊಡ್ಡ ಕೆಲಸ ಹೇದರೆ ಹಾಂಗೇ ಅಲ್ಲದೋ – ಅವು ಹೇಳಿದಲ್ಲಿ, ಹೇಳಿದಾಂಗೆ ಗೆಯ್ಯೆಕ್ಕು!

ಒಳ್ಳೆತ ಅಡಕ್ಕೆ ಅಪ್ಪ ತೋಟ ಇದ್ದು ಊರಿಲಿ!
ಭೀಮಜ್ಜ° – ಕುಮಾರಮಾವನ ಅಪ್ಪ°- ಭಟ್ಟತ್ತಿಕೆಗೂ ಹೋಗಿಯೊಂಡು, ಪಿತ್ರಾರ್ಜಿತ ತೋಟವನ್ನೂ ಚೆಂದಲ್ಲಿ ನೋಡಿಗೊಂಡು ಇತ್ತಿದ್ದವು.
ಅಜ್ಜಿ ಅವಕ್ಕೆ ನಿಜಾರ್ಥದ ‘ಸಹಧರ್ಮಿಣಿ’ಯಾಗಿ ಇತ್ತಿದವು. ಒಳ್ಳೆ ಸಂಸ್ಕಾರದ, ಆಡಂಬರ ಇಲ್ಲದ್ದ ಜೀವನ. ಯೇವತ್ತೂ ಸಾತ್ವಿಕ, ಸರಳ ಆಹಾರ.

ಕುಮಾರ ಮಾವನೂ ಸೇರಿ ಮೂರು ಜೆನ ಮಕ್ಕೊ ಅವಕ್ಕೆ.
ಹಿರಿಯ ಪರಮೇಶ್ವರಮಾವ° ಊರಿಲೆ ತೋಟ ನೋಡಿಗೊಂಡು ಇಪ್ಪದು.
ಮತ್ತಾಣ ಶ್ಯಾಮಲಚಿಕ್ಕಮ್ಮ ವಿಟ್ಳ ಹೊಡೆಣ ಆರೋ ಮಾಷ್ಟ್ರನ ಮದುವೆ ಆಗಿ ಆರಾಮಲ್ಲಿದ್ದವು.
ಮೂರ್ನೇವು ಈ ಕುಮಾರಮಾವ°.
ಬಾಲ್ಯಲ್ಲಿ ಮೂರೂ ಜನವೂ ಒಳ್ಳೆ ಸಂಸ್ಕಾರ, ಸಂಸ್ಕೃತಿಲಿ ಬೆಳದೋರು ಇದಾ.
ಎಲ್ಲೊರಿಂಗೂ ಭೀಮಜ್ಜನ ಹಾಂಗೇ ಸರಳ ಸಂಸ್ಕೃತಿ, ಅಜ್ಜಿಯ ಹಾಂಗೆ ಸಜ್ಜನ ಸ್ವಭಾವ.
~

ಕೊಡೆಯಾಲದ ಕೋಲೇಜಿಲಿ ಕಲ್ತ ಮೇಗೆಯೇ ಕುಮಾರಮಾವನ ವೆಗ್ತಿತ್ವಲ್ಲಿ ರಜಾ ‘ಬದಲಾವಣೆ’ ಸುರು ಆದ್ದು!
ಇಷ್ಟು ಕಲ್ತಿಕ್ಕಿ ಅಡಕ್ಕೆ ಹೆರ್ಕಲೆ ಎನ್ನಂದಾಗ ಹೇಳಿ ಯೇವದೋ ದೊಡ್ಡ ಕೆಲಸಕ್ಕೆ ಸೇರಿದವು. ಸಂದ್ಯತ್ತೆಯ ನೋಡಿ ಮದುವೆ ಆದವು.
ಮೆಡ್ರಾಸಿಂಗೆ ಟ್ರಾನ್ಸುವರು ಆತು, ಕಲ್ಕತ್ತಕ್ಕೆ, ಪಂಜಾಬಿಂಗೆ ಆತು, ಕೇರಳಕ್ಕೆ – ಮೊನ್ನೆ ಮೊನ್ನೆ ಕೊಡೆಯಾಲಕ್ಕೆ ಆತು.
ಕೊಡೆಯಾಲಕ್ಕೆ ಬಂದ ಕೂಡ್ಳೇ ಮನೆಕಟ್ಳೆ ಹೆರಟಿದವಡ, ಪೈಶೆ ತಾಪತ್ರೆ ಬಪ್ಪಗ ಊರಿಂಗೆ ಬಂದು ಪಿತ್ರಾರ್ಜಿತ ಪಾಲು ತೆಕ್ಕಂಡವಡ.
ಅಂತೂ, ಒರಿಷಾವಧಿ ಪೂಜಗೋ ಮತ್ತೊ ಬಂದರೆ ಅಣ್ಣ-ಅತ್ತಿಗೆಯ ಕಂಡು ಮಾತಾಡುಸಿಕ್ಕಿ ಹೆರಡುಗು.
ಇರುಳಿಂಗೆ ನಿಂಬಲೆ ಮಾಂತ್ರ ಪುರುಸೊತ್ತೇ ಸಿಕ್ಕದ್ದೆ  ಎಷ್ಟೋ ಒರಿಶ ಆತು!
~

ವಿದ್ಯಾಭ್ಯಾಸ ಸಿಕ್ಕತ್ತು, ಒಳ್ಳೆ ಕೆಲಸ ಸಿಕ್ಕಿತ್ತು. ಮದುವೆ ಆತು. ಸೊಂತ ಮನೆ ಕಟ್ಟಿ ಆತು.
ಆರಾಮದ ಜೀವನ.
ಕುಮಾರಮಾವಂಗಂತೂ, ಕೈಲಿ ಪೈಸೆ ಜಾಸ್ತಿ ಆದ ಹಾಂಗೆ ಚೆಂಙಾಯಿಗಳೂ ಜಾಸ್ತಿ ಆದವು.
ಆ ಸಮೆಯಲ್ಲಿ ಅವರ ಹಿಡುದು ನಿಲ್ಲುಸುವೋರೇ ಇಲ್ಲೆ! ಪಾಪ ಸಂದ್ಯತ್ತೆ ಆದರೂ ಎಂತ ಮಾಡುದು, ಹೇಳಿದ್ದರ ಕೇಳದ್ರೆ!!
ಕ್ಲಬ್ಬೋ – ಮತ್ತೊಂದೋ ವೆವಹಾರಂಗ ಜಾಸ್ತಿ ಆತು. ಉದೆಕಾಲಕ್ಕೆ ಆಪೀಸಿಂಗೆ ಹೆರಟ್ರೆ ನೆಡಿರುಳು ಬಂದುಗೊಂಡಿದ್ದದು.
ಶುದ್ದ ಶಾಕಾಹಾರದ ಕುಮಾರಮಾವ° ನಿದಾನಕ್ಕೆ ಜೀವನ ಪದ್ಧತಿಯೇ ‘ಬದಲಪ್ಪಲೆ’ ಸುರು ಮಾಡಿಗೊಂಡವು.
~

ಈಗ ಕುಮಾರಮಾವ° ಕೊಡೆಯಾಲಲ್ಲಿದ್ದವು!
ತೇಜಸ್ವಿ – ಕುಮಾರಮಾವನ ದೊಡ್ಡ ಮಗ° – ಕೊಡೆಯಾಲದ ದೊಡ್ಡ ಕೋಲೇಜಿಲಿ ಪಷ್ಟು ಪೀಯೂಸಿ ಕಲ್ತುಗೊಂಡಿದ್ದ°.
ಉದಿಯಪ್ಪಗ ಹೆರಟ್ರೆ ಇಬ್ರಿಂಗೂ ಬುತ್ತಿ ಬೇಡ. ಅಪ್ಪ°-ಮಗ° ಇಬ್ರುದೇ ಅವರವರ ಕೇಂಟೀನಿಲಿ ಉಂಬ ಕ್ರಮ ಏವಗಳೂ.
ಸಂಧ್ಯತ್ತೆ ಎಷ್ಟೇ ಪ್ರಯತ್ನ ಮಾಡಿರೂ ಅವರ ಕೈಗೆ ಬುತ್ತಿ ಹಿಡಿಶುಲೆ ಆಯಿದೇ ಇಲ್ಲೆಡ!
ಬುತ್ತಿ ತೆಕ್ಕೊಂಡರೆ ಅದು ಚರ್ಬಿಂಗೆ ಕಮ್ಮಿ ಅಡ!
~

ದೊಡ್ಡೋರು ಗಮ್ಮತ್ತು ಮಾಡ್ತ ದೊಡ್ಡೋರ ಹೋಟ್ಳು. ಕುಮಾರಮಾವನೂ ಇಲ್ಲಿಗೇ ಹೋದ್ಸೋ ಎಂತೊ

ಇಷ್ಟೆಲ್ಲ ಜಾತಕ ಎಂತ್ಸಕೆ ಮಾತಾಡುತ್ಸು?!
ಓ ಮೊನ್ನೆ ಒಂದು ದಿನ, ಕುಮಾರಮಾವ° ಎಂದಿನ ಹಾಂಗೆ ಆಪೀಸಿಂಗೆ ಹೋಯಿದವು.
ತೇಜಸ್ವಿಯುದೇ ಕೋಲೇಜಿಂಗೆ ಹೇಳಿಗೊಂಡು ಹೆರಟಿದ°..
ಮದ್ಯಾನ ಹನ್ನೆರಡು ಗಂಟೆ ಹೊತ್ತು – ಗುಣಾಜೆ ಕುಂಞಿ ಸರಿಯಾಗಿ ಬಟ್ಳಿನ ಬುಡಲ್ಲಿ ಕೂಪ ಸಮೆಯ – ಉದಿಯಪ್ಪಗಣ ಕಾಪಿ-ತಿಂಡಿ ಕರಗಿ ಹೊಟ್ಟೆತಾಳ ಹಾಕುತ್ತ ಹೊತ್ತು.

ಇಂದು ಕುಮಾರಮಾವನ ಚೆಂಙಾಯಿಗೊ ಎಲ್ಲ ಸೇರಿ “ಗಮ್ಮತ್ತು” ಮಾಡುವ° ಹೇಳಿ ಹೇಳಿದವಡ. ಅಪುರೂಪಕ್ಕೊಂದರಿ ಹೀಂಗಿದ್ದ “ಗಮ್ಮತ್ತು” ಇದ್ದದೇಡ!
ಗಮ್ಮತ್ತು? ಅದೆಂತರ? ಎಲ್ಲಿ?
ನೈಸು ನೈಸು ನೆಲದ ಶುದ್ಧ ಮಾಂಸಾಹಾರಿ ಏಸಿ ಹೋಟ್ಳಿಲಿ!! ಮಂದಕೆಂಪು ಬೆಣಚ್ಚಿನ ಚೌಕಚೌಕ ಮೇಜುಗಳಲ್ಲಿ!
ಎಂದಿನ ಹಾಂಗೆ ಕುಮಾರಮಾವ ಅವರದ್ದೇ ಆದ ‘ವಿಚಾರ-ಮಂಥನ’ ಮಾಡಿಗೊಂಡು ಹೋಟ್ಳಿನ ಒಳ ನುಗ್ಗಿದವು.
ಇಲ್ಲಿ ಆದ “ಗಮ್ಮತ್ತು” ಬೇರೆಯೇ!

ಅದೇ ಹೋಟ್ಳಿಲಿ ತೇಜಸ್ವಿ ಅವನ ಚೆಂಙಾಯಿಗಳೊಟ್ಟಿಂಗೆ ಪಟ್ಟಾಂಗ ಹೊಡಕ್ಕೊಂಡು ಎಂತದೋ ತುಂಡು ತಿಂತಾ ಇದ್ದ°!
ಇಪ್ಪಲಾಗದ್ದ ಜಾಗೆಲಿ ಇಪ್ಪದರ ಕಂಡು ಇಬ್ರಿಂಗೂ ಬಾಯೊಡದತ್ತು!
ಅಪ್ಪನ ನೋಡಿದ ಮಗಂಗೆ, ಮಗನ ನೋಡಿದ ಅಪ್ಪಂಗೆ ಗಾಬೆರಿಯೋ ಗಾಬೆರಿ!
ಇಬ್ರಿಂಗೂ ಆ ಚಳಿ ಏಸಿಲಿಯೂ ಬೆಗರು ಬಿಚ್ಚಿತ್ತೋ? ಉಮ್ಮಪ್ಪ!
~

ಗುಟ್ಟಿಲಿ ಕೆಟ್ಟ ಬಾಯಿ ಚಪಲ ತೀರುಸಿಗೊಂಡಿದ್ದದು ಆರಿಂಗೂ ಗೊಂತಿಲ್ಲೆ – ಹೇಳ್ತದು ಕುಮಾರಮಾವನ ಲೆಕ್ಕಾಚಾರ ಆಗಿತ್ತು – ಶುಬತ್ತೆ ಪುಚ್ಚೆ ಹಾಲು ಕುಡುದ ಹಾಂಗೆ!
ಈ ಲೆಕ್ಕಾಚಾರ ಸುಮಾರು ಒರಿಶಂದಲೇ ನೆಡಕ್ಕೊಂಡು ಬಂದೊಂಡಿತ್ತು!
ಈಗ ತನ್ನದೇ ಸೊಂತಮಗನ ಎದುರು ಮರಿಯಾದಿ ಹೋದ ಹಾಂಗೆ ಆತಿದಾ!

ತೇಜಸ್ವಿ ಮೇಲೆ ವಿಪರೀತ ಪಿಸುರು ಬಂತು ಮಾವಂಗೆ. ಇಷ್ಟು ಸಮೆಯಲ್ಲಿ ಬಾರದ್ದ ಬ್ರಾಹ್ಮಣಿಕೆ ಅವರ ಬೆಗರು ಬೆಗರಿಲಿ ಅರುದತ್ತು!
ಆನು ಬಂಙ ಬಂದು ಕೋಲೇಜಿಂಗೆ ಕಳುಸಿರೆ ಹೀಂಗೆ ಬೇಡಂಗಟ್ಟೆ ಮಾಡ್ತಾ ಇದ್ದೆಯಾ ನೀನೂ – ಹೇಳಿಗೊಂಡು, ಎರಾಡು ಬೈದವಿದಾ..
ಅಷ್ಟಪ್ಪಗ ಮಗಂಗುದೇ ಚೆಂಙಾಯಿಗಳೆಡೆಲಿ ಮರಿಯಾದಿ ಹೋದ ಅನುಭವ! “ನಿಂಗೊ ಎಂತ ಮಾಡುದಪ್ಪಾ, ಇಲ್ಲಿ..?” ಕೇಳಿದ°!
ಉತ್ತರ ಎಂತ ಹೇಳೆಕ್ಕು ಹೇಳಿ ಅಂದಾಜಿಯೇ ಆಯಿದಿಲ್ಲೆ ಕುಮಾರಮಾವಂಗೆ.
ನಾವು ಮಾಡಿದ ಕರ್ಮ ನವಗೇ ತಿರುಗುತ್ತು ಹೇಳಿ ಬೀಮಜ್ಜ° ಹೇಳಿದ್ದು ನೆಂಪಾತೋ – ಏನೋ!
~

ಹಿರಿಯೋರ ನೋಡಿ ಮಕ್ಕೊ ಕಲಿವದು, ಅನುಕರಣೆ ಮಾಡುದು ಮದಲಿಂಗೇ ಇಪ್ಪದೇ!
ಬದಲಾದ್ದದು ಎಂತರ ಅಂಬಗ? – ಕೆಲವು ಕುಮಾರಮಾವನ ಹಾಂಗಿರ್ತ ಹೆರಿಯೋರು ಅನುಸಿಗೊಂಡವರ ನೀತಿ- ನಡವಳಿಕೆ ಮಾಂತ್ರ.

ಅಂಬಗ ಭೀಮಜ್ಜನ ಗುಣ ಕುಮಾರಮಾವಂಗೆ ಬೈಂದಿಲ್ಲಿಯೋ- ಹೇಳಿರೆ, ಅದು ಬಯಿಂದಪ್ಪಾ!.
ಆದರೆ ಮನೆಯ ವಾತಾವರಣಂದ ಪೂರ್ತಿ ದೂರ ಆಗಿ ಪೇಟೆಲಿಪ್ಪಲೆ ಶುರು ಆದ ಮತ್ತೆ, ರೆಜಾ ಅಡ್ಡದಾರಿ ತೋರುಸುವ ಚೆಂಙಾಯಿಗೊ ಬೇಕಾದಷ್ಟು ಸಿಕ್ಕಿದವು.
ಅಲ್ಲೇ ಮಿಷ್ಟಿಂಗು (mistake) ಆದ್ದು!
(ನಮ್ಮ ಬೈಲಿಲಿ ಇಪ್ಪ ನಮುನೆಯ ಒಳ್ಳೆ ಚೆಂಙಾಯಿಗಳೂ ಇರ್ತವು. ಅಂತವ್ವು ಸಿಕ್ಕಿರೆ ಅದೃಷ್ಟ ಬೇಕು, ಅಲ್ಲದೋ? )
ಸುಲಾಬಲ್ಲಿ ‘ಮೋಹ’ಕ್ಕೆ ಮರುಳಪ್ಪ ಪ್ರಾಯ.
ಒಂದರಿ ಅತ್ಲಾಗಿ ಮಾಲಿರೆ ಮುಗಾತು.
ಅಂದು ಕುಮಾರಮಾವನದ್ದು ಇದೇ ಕತೆ.
ಈಗ ಅವರ ಮಗನದ್ದುದೇ!
~

ಕುಮಾರಮಾವಂಗೆ ಈಗ ಅವರ ಮಗನ ಒಯಿವಾಟುಗೊ ಕಂಡ ಮತ್ತೆ, ಅವರ ಅಪ್ಪನನ್ನೇ ನೆಂಪಪ್ಪಲೆ ಸುರು ಆತಡ.
ಶುದ್ದಲ್ಲಿ ಮಿಂದು, ಜಪ ಇತ್ಯಾದಿ ಅನುಷ್ಟಾನ ಮಾಡಿಗೊಂಡು, ಪೌರೋಹಿತ್ಯವ ಎಷ್ಟು ಚೆಂದಲ್ಲಿ ನಿರ್ವಹಿಸಿದ್ದವು!
ಎಷ್ಟೊಳ್ಳೆ ಹೆಸರಿತ್ತು!
ದೊಡ್ಡ ಕೆಲಸ ಹೇಳಿ ಮನೆಂದ ದೂರ ಇದ್ದದೇ ತನ್ನ ಮಕ್ಕೊಗೆ ಆ ಸಂಸ್ಕಾರ ಸಿಕ್ಕದ್ದೆ ಇಪ್ಪಲೆ ಕಾರಣವೋ – ಹೇಳಿ ಕುಮಾರಮಾವಂಗೆ ಅನುಸುಲೆ ಸುರು ಆತು!

ಸುರೆ-ಮಾಂಸಾದಿಗೊ ಸಂಪೂರ್ಣ ನಿಷಿದ್ಧ, ಅದರ ಕಣ್ಣಿಂದ ಕಂಡ್ರೂ ಮಿಂದಿಕ್ಕಿ ಬಕ್ಕು, ಶಂಬಜ್ಜ°.
ಸರಳ ಸಸ್ಯಾಹಾರವೇ ನವಗೆ ಶೋಭೆ. ಮನುಷ್ಯಂಗೆ ಬದುಕ್ಕಲೆ ಅದುವೇ ಧಾರಾಳ ಸಾಕಲ್ಲದಾ?
ಈ ಕುಮಾರಮಾವನ ಹಾಂಗಿರ್ತ ಮಾವಂದ್ರು, ಭಾವಂದ್ರು ಸುಮಾರು ಜನ ಇದ್ದವೀಗ.
ನಿಂಗಳ ಗಮನಕ್ಕೂ ಬಂದಿಕ್ಕು. ಅಲ್ಲದೋ?
~

ಸುರೂವಿಂಗೆ – ‘ಮೊಟ್ಟೆ ಸಸ್ಯಾಹಾರವೇ ಭಾವಾ! –  ಹೇಳಿಗೊಂಡು ಶುರು ಮಾಡುದಡ.
ಕ್ರಮೇಣ – ತಿಂದದೆಲ್ಲವೂ ಹೊಟ್ಟೆಗೆ ಹೋಪದನ್ನೇ, ಯೇವದಾದರೆಂತ, ಬಾಯಿ ರುಚಿ ಇದ್ದರಾತು’ ಹೇಳಿ ಮುಂದುವರಿಗಡ.
ಮೊಟ್ಟೆ ತಿಂದವಂಗೆ ಅದನ್ನೇ ಕೋಳಿಮಾಡಿ ತಿಂಬದೆಂತ, ಕಷ್ಟವೋ?
ಇನ್ನೂ ಮುಂದರುದರೆ ಕುಡಿತ್ತ ಅಬ್ಯಾಸವುದೇ ಮಾಡ್ತವೋ ಏನೊ ಉಮ್ಮಪ್ಪ.
ಸಂಕಪ್ಪು ಕಳ್ಳುಕುಡುದರೆ ಬೈತ್ತು ನಾವು, ನಮ್ಮ ಭಾವಯ್ಯಂದ್ರು ಕುಪ್ಪಿ ಬಗ್ಗುಸಿರೆ ಅರಾಡಿಯದ್ದ ಹಾಂಗೆ ಕಣ್ಣುಮುಚ್ಚುತ್ತು!
ಬೇಂಕಿನ ಪ್ರಸಾದಬಾವನ ಕೊಲೀಗು ಒಬ್ಬ° ಹೀಂಗೇ ಆಯಿದನಡ – ಬೇಜಾರಲ್ಲಿ ಹೇಳುಗು ಅವ° ಒಂದೊಂದರಿ!
ಪೇಟೆಮಕ್ಕೊ ಜಾಲಿಲಿ ಕೋಳಿಕುಂಞಿ ಕಂಡ್ರೆ, ಹಿಡುದು ತಂದು ಹೊರಿವಲೆ ಹೇಳ್ತ ಕಾಲ ಸದ್ಯಲ್ಲೇ ಬಕ್ಕು ಅಲ್ದಾ ಬಾವ? – ಕೇಳಿದ ನಮ್ಮ ಅಜ್ಜಕಾನಬಾವ°!
~

ಎಲ್ಲಿಂದ ಎಲ್ಲಿಗೆ ಎತ್ತಿತ್ತು ನಮ್ಮ ಅವಸ್ಥೆ!
ಬಾಳೆಕಾಯಿ – ಗೆಣಂಗು ಬೇಶಿದ್ದದೋ, ಹಲಸಿನ ಹಣ್ಣೋ, ಮಾವಿನ ಹಣ್ಣೋ ಮತ್ತೊ ಎಂತಾರು ಸಾತ್ವಿಕ ಆಹಾರ ತಿಂದೊಂಡು ನಿಷ್ಠೆಲಿ ಜೀವನ ಮಾಡಿಗೊಂಡು ಇದ್ದಿದ್ದವು ನಮ್ಮ ಅಜ್ಜಂದ್ರು.
ಸಮಾಜಲ್ಲಿ ಅವಕ್ಕೊಂದು ವಿಶೇಷ ಗೌರವ ಇತ್ತು.
ಆದರೆ ನಾವು ಎಂತ ಮಾಡ್ತು ಇಂದು?
ನಾಕು ಜನ ನಮ್ಮ ನೋಡಿ ನೆಗೆ ಮಾಡುವ ಹಾಂಗಾಗದ್ರೆ ಸಾಕು, ಈಗ ಅಲ್ಲದಾ?

ನಮ್ಮ ಸಂಸ್ಕೃತಿಗೆ ವಿರುದ್ಧವಾಗಿ ಬೇಕಾಬಿಟ್ಟಿ ಬದುಕ್ಕುವೋರು ಸನಾತನಿ ಆವುತ್ತವೋ? – ಓ ಮೊನ್ನೆ ಮಾಷ್ಟ್ರುಮಾವ° ಕೇಳಿದ ಪ್ರಶ್ನೆ ಇಂದು ತಲೆಲಿ ಕೊರಕ್ಕೊಂಡಿದ್ದು…

ಒಂದೊಪ್ಪ: ಸುರೂವಿಂದಲೇ ಮಗನ ಕಂಡಪ್ಪಗ ಅಪ್ಪನ ನೆಂಪಾಗಿದ್ದರೆ ಆ ಮನೆಯ ಸಂಸ್ಕೃತಿ ಒಳಿತ್ತಿತು. ಅಲ್ಲದೋ?

45 thoughts on “ಮಗನ ತಪ್ಪು ಕಂಡಪ್ಪಗ ಅಪ್ಪನ ಆದರ್ಶ ನೆಂಪಾತಡ!

  1. ಇದಾ ಭಾವಂದ್ರಿಂಗೆ ನಮಸ್ಕಾರಂಗೊ..ಎನ್ನ ಹೆಸರು “ರವಿಕುಮಾರ ಕಡುಮನೆ” ಹೇಳಿ.ಕಾಸರಗೋಡಿನ ಮುೞೇರಿಯದ ಹತ್ತರೆ.. ಆನು ಇಲ್ಲಿಗೆ ಹೊಸಬ್ಬಂ..ಪಾಸ್ ವರ್ಡ್ ಹಾಕುಲೇ ೪ ಸರ್ತಿ ಫೈಲ್ ಆದೆ..!!!
    ಅಂತೂ ಇಂತೂ ದಾರಿ ತಪ್ಪಿ ಬೈಲು ಕರೆ,ಎಲ್ಲಾ ಹುಡುಕಿ ಇಲ್ಲಿಗೆ ಲಾಗ ಹಾಕಿದೆ. ಎನ್ನ ಬೀಳದ್ದ ಹಾಂಗೆ ಹಿಡ್ಕೊಳಿ….! ಆತಾ… ಒಂದರಿ ಗೊಂತಿಪ್ಪವು ಎನಗೆ ದಾರಿ ತೋರ್ಸಿ ಆತಾ….

    1. ಓಯಿ., ಭಾವಯ್ಯ, ಬನ್ನಿ ಹೇಳಿತ್ತು ಇದಾ. ಬಂದಾತಿಲ್ಯೋ… ಇನ್ನು ಇದು ನಿಂಗಳದ್ದೇ ಹೇಳಿ ತಿಳ್ಕೊಂಡ್ರೆ ಆತು. ನಿಂಗೊಗೆ ಎಂತ ಆಯೇಕು ಹೇಳಿ., ಇಲ್ಲಿ ಎಲ್ಲೋರು ಇದ್ದವು ಮಿನಿಯಾ°. ನಿಂಗೊ ಇನ್ನು ಸುರುಮಾಡ್ಳಕ್ಕು ಲಾಯಕ ಲಾಯಕ ಶುದ್ದಿ ಹೇಳ್ಳೆ. ಓದಲೆ, ಓದಿಕ್ಕಿ ಹೇಂಗೆ ಆಯ್ದು ಹೇಳಿ ಚಂದಕ್ಕೆ ಒಪ್ಪ ಕೊಡ್ತದು ಎಂಗೊಗೆ ಬಿಟ್ಟಿಕ್ಕಿ.

  2. “ಯಥಾ ರಾಜಾ, ತಥಾ ಪ್ರಜಾ” ಹೇಳಿ ಸುಮ್ಮನೆ ಹೇಳಿದ್ದವಾ ನಮ್ಮ ಹಿರಿಯರು, ಒಪ್ಪಣ್ಣಾ?
    ಸ್ಟೇಟಸ್ ಮಡುಗೆಕ್ಕಾರೆ, ಅವರೊಟ್ಟಿ೦ಗೆ ನಾವೂ… ಬೇಕನ್ನೇ…
    ಬರಹ ಅ೦ತೂ, ನಾಟುವ ಹಾ೦ಗಿದ್ದು. ಒಳ್ಳೇದಾಗಲಿ..

      1. ನೋಡುತ್ತೆಲ್ಲಾ ಅಪ್ಪು….. ಈ ಸಂಕೊಲೆ ಅಮರ್ಸಿಯಪ್ಪಗ ಇಲ್ಲ್ಯೇ ಬಿಡಿಸಿಗೊಳ್ತನ್ನೇ?! ಅದು ಬೇಡ. ಇದರ ಅಮರ್ಸಿಯಪ್ಪಗ ಆಚ ಬೇರೆ ಇನ್ನೊಂದು ಪುಟಲ್ಲಿ ಎದ್ದು ಕಾಂಬಾಂಗೆ ಮಾಡಿಕ್ಕಲೆಡಿಗೊ ಹಳೆಮನೆ ಭಾವ? ಅಲ್ಲಾ, ಬಲತ್ತು ಮಾಡಿ ಎಡತ್ತು ಮಾಡಿ ಒತ್ತಿಗೋ ಹೇಳ್ತೀರೋ?!

        ಮತ್ತೆ ಇದಾ, ನಿಂಗಳ ಆ ಪುಟವ ಕೂದೊಂಡು ಆನು ರಜಾ ನೋಡಿದೆ ಆತಾ. ಲಾಯಕ್ಕಿದ್ದು ಹೇಳುತ್ತು ನಾವು ಇತ್ಲಾಗಿಂದ.

          1. ಆತಂಬಗ.

            ಬೇಡ., ಓಪನ್ ವಿತ್ ನ್ಯೂ ವಿಂಡೋ ಹೇಳಿಯೇ ಎನ್ನ ಸೌಕರ್ಯಕ್ಕೆ ಅಮರ್ಸಿಗೊಳ್ಳುತ್ತೆ. ಧನ್ಯವಾದ ಭಾವಂಗೆ.

          2. ಇದಾ ದಣೀಯ ಹರ್ಟೆ ಮಾಡ್ತೆ ಹೇಳಿ ಗ್ರೇಶೆಡಿ. ಪುಟ ಬಿಡುಸುತ್ತರಲ್ಲಿ ಕಷ್ಟವೂ ಸಮಸ್ಯೆಯೂ ಅಲ್ಲಾ. ಆನು ಹೇಳುವದು… ಈ ಲಿಂಕ್ ಒತ್ತಿಯಪ್ಪಗ (ಹವ್ಯಕ ಹವ್ಯಕ ಕ್ಲಿಕ್ಕಿಸಿದರೂ) ಈ ವೆಬ್ ಪುಟ ಮುಚ್ಚಿ ಆ ಪುಟ ಓಪನ್ ಆವ್ತಾ ಇಪ್ಪದ್ರ ಬದಲು ಲಿಂಕ್ ಒತ್ತಿಯಪ್ಪಗ ಲಿಂಕ್ ಪುಟ ಬೇರೆ ವಿಂಡೋಲಿ ಓಪನ್ ಆವ್ತಾಂಗೆ.

            ಇರ್ಲಿ ಬಿಡಿ ದೊಡ್ಡ ತಲೆಹರಟೆ ಸಮಸ್ಯೆ ಅಲ್ಲಾ ಹೇಂಗೂ ಇದು. ಓಪನ್ ವಿತ್ ನ್ಯೂ ವಿಂಡೋ ಕೊಟ್ರೆ ಆತು.

            ಧನ್ಯವಾದಂಗೊ.

          3. ಹವ್ಯಕ ಹವ್ಯಕ

            ಹಾ೦ಗಲ್ಲ ಭಾವಯ್ಯ, ಇಲ್ಲಿ ಅದಕ್ಕಿಪ್ಪ ಸಿ೦ಟೆಕ್ಸ್ ಕೆಲಸ ಮಾಡಿದ್ದಿಲ್ಲೆ. ಮತ್ತೆ ಗೊ೦ತಾತಷ್ಟೆ. ಎ೦ತಕೆ ಹೇಳಿ ರಜ ಕಲಿಯೆಕ್ಕಷ್ಟೆ!

  3. ಒದಿಯಪ್ಪಗ ಬೆಜಾರತು. ವಿಷಯ ಗಂಭೀರ. ಎಲ್ಲ ಸುರು ಅಪ್ಪದು ತಮಾಶಗೆ. ಹೀಂಗಿಪ್ಪ ವಿಷಯಲ್ಲಿ ಕುಟುಂಬದ ಹಿರಿಯೊರು ಕಟ್ಟುನಿಟ್ಟಿಲಿ ಇದ್ದರೆ ಮಕ್ಕಳೂ ಹಾಂಗೆ ಇರ್ತವು. ಇದು ಹವ್ಯಕ ಹೇಳಿ ಅಲ್ಲ ಇಡೀ ಬ್ರಾಹ್ಮಣ ಸಮುದಾಯಲ್ಲಿ ಇಪ್ಪ ಸಮಸ್ಯೆ. ನಮ್ಮಲ್ಲಿ ಹೆಚ್ಹಿನವುದೆ ಆಹಾರ ಕ್ರಮ ಬದಲಿಸಿದ್ದವಿಲ್ಲೆ ಆದರೆ ಹೀಂಗಿಪ್ಪ ಕೆಲವು ಜೆನರಿಂದಾಗಿ ಎಲ್ಲರಿಂಗೂ ಕೆಟ್ಟ ಹೆಸರು.
    ಕಡ್ಡಿ ತುಂಡು ಮಾಡಿದ ಹಾಂಗೆ ಹೆಳ್ತ ನೇರವಂತಿಕೆಯ ನಮ್ಮವು ಬೆಳೆಶಿಗೊಳ್ಲೆಕ್ಕು. ಈಗ ಕೇಕ್ ವಿಷಯ ತೆಕ್ಕೊಂಬ. ಇದು ಮೊಟ್ಟೆ ಹಾಕಿದ ಕೇಕ್ ಆದರೆ ನಾವು ತಿಂತಿಲ್ಲೆ ಹೇಳಿ ಖಡಾಖಂಡಿತವಗಿ ಹೆಳೆಕ್ಕು. ಮೊಟ್ಟೆ ಹಾಕಿದ ಕೇಕ್ ತಿಂದವಕ್ಕೆ ನಡ್ತಿಂಗೆ ಮೊಟ್ಟೆ ತಿಂಬದು ಕಷ್ಟ ಅಲ್ಲ.
    ಹೀಂಗಿಪ್ಪವಕ್ಕೆ ನಾವು ಜಾತಿ ಬಹಿಷ್ಕಾರ ಹಾಕೆಕ್ಕು. ಇಲ್ಲದ್ದರೆ ನಾವುದೆ ಕೊಂಕಣಿಗಳ ಹಾಂಗೆ ಅಕ್ಕು.
    ಈ ಕೊಂಕಣಿಗಳಿಂದಾಗಿ ಮಂಗಳೂರು ಬ್ರಾಹ್ಮಣರು ಹೇಳಿರೆ ಮೀನು ತಿಂತವು ಹೇಳಿ ಎಲ್ಲರೂ ಹೇಳ್ತ ಹಾಂಗೆ ಆಯಿದು.

    ಎಷ್ಟೊ ಜನ್ಮಂಗಳ ಪುಣ್ಯದ ಸಂಚಯ ಈ ಬ್ರಾಹ್ಮಣ ಜನ್ಮ. ಈ ಜನ್ಮವ ಸಾರ್ಥಕ ಪಡಿಸಿಗೊಂಬ.

    1. ಕೊಡೆಯಾಲದ ಬ್ರಾಮಣರು ಮೀನು ತಿಂತವು – ಹೇದು ಜೆನಂಗೊ ಕೇಳ್ತದು ಅಪ್ಪಾದ ವಿಶಯವೇ.
      ಮದಲೇ ಅವು ಹೆರ ಹೋಗಿ, ಹಾಂಗೊಂದು ಒರ್ತಮಾನ ಹಬ್ಬುಸಿ ಬಿಟ್ಟಿದವಿದಾ, ಚೆಚೆ!

      ಆಗಲಿ, ನಾವು ಸರಿಯಾದ ದಾರಿಲಿ ನೆಡದರೆ ನಮ್ಮಂದಾಗಿ ಮುಂದಾಣೋರಿಂಗೆ ಆದರ್ಶ ಗೊಂತಕ್ಕು. ಎಂತ ಹೇಳ್ತಿ?

  4. ಲಾಯ್ಕಾಯ್ದು ಬರದ್ದು. ಈಗ ನಮ್ಮ ಸಮಾಜಲ್ಲಿ ನಡೆತ್ತಾ ಇಪ್ಪದರ ಸ್ವಚ್ಚ ಪ್ರತಿಬಿಂಬ.
    ನಮ್ಮವ್ವು ಹೀಂಗೆ ಮಾಡ್ತಾ ಇಪ್ಪದರಿಂದಾಗಿ, ಬ್ರಾಹ್ಮಣರಿಂಗೆ ಇಪ್ಪ ಗೌರವ ಪೂರ ಮಣ್ಣುಪಾಲಾಯಿದು. “ಬ್ರಾಮಿನ್ಸ್ ಎಲ್ಲ ತಿಂತಾರೆಯ ಈಗ..” ಹೇಳಿ ಹಂಗುಸಿ, ಉದಾಹರಣೆ ಸಹಿತ ವಿವರ್ಸುವವ್ವು ಎನ್ನ ಕ್ಲಾಸಿಲಿಯೇ ಇತ್ತಿದವು.

    1. ಬ್ರಾಮಿನ್ಸ್ ಎಲ್ಲ ತಿಂತಾರೆ – ಹೇದು ಅವಕ್ಕೆ ಉದಾಹರಣೆಗೆ ಸಿಕ್ಕಿದ್ದು ನಮ್ಮ ದೌರ್ಭಾಗ್ಯ.
      ಅಲ್ಲದೋ? 🙁

  5. {ಕುಮಾರಮಾವಂಗಂತೂ, ಕೈಲಿ ಪೈಸೆ ಜಾಸ್ತಿ ಆದ ಹಾಂಗೆ ಚೆಂಙಾಯಿಗಳೂ ಜಾಸ್ತಿ ಆದವು.} .. ಈ ಪರಿಸ್ತಿತಿ ಮದಲಿಂಗೂ ಇತ್ತು ಈಗಳೂ ಇದ್ದು, ಮುಂದಂಗೂ ಇಕ್ಕು. ಅದು ಚೆಂಙಾಯಿಗಳ ದೋಷ ಅಲ್ಲನ್ನೆ. ಅಂಬಗ ತಪ್ಪಿದ್ದು ಎಲ್ಲಿ ?
    {ಒರಿಷಾವಧಿ ಪೂಜಗೋ ಮತ್ತೊ ಬಂದರೆ ಅಣ್ಣ-ಅತ್ತಿಗೆಯ ಕಂಡು ಮಾತಾಡುಸಿಕ್ಕಿ ಹೆರಡುಗು.
    ಇರುಳಿಂಗೆ ನಿಂಬಲೆ ಮಾಂತ್ರ ಪುರುಸೊತ್ತೇ ಸಿಕ್ಕದ್ದೆ ಎಷ್ಟೋ ಒರಿಶ ಆತು!} …ಕೆಲಸ ವ್ಯೆವಹಾರ ಹೇಳಿಗೊಂಡು ನಾವು ಊರು ಬಿಟ್ರೂ, ಮನೆ, ಮನೆಯೆವರ ಬಿಟ್ರೆ ಅಕ್ಕೋ..? ನಮ್ಮ ಮಕ್ಕೊಗೆ ಹೆರಿಯೋರ ಸಂಸ್ಕಾರವ ಕಲುಶೆಕ್ಕಾರೆ ಹೆರಿಯೊರೊಟ್ಟಿಂಗೆ ಎರಡು ದಿನ ಆದರೂ ಇರೆಡದೋ.?
    ಊರು ಬಿಟ್ಟು ಒಬ್ಬಂಟಿಯಾಗಿ ಜೇವನ ನಡೆಶುವ ಅನಿವಾರ್ಯ ಇಪ್ಪಗ, ಊರಿಲಿಪ್ಪ ಹೆರಿಯೋರು, ಅಣ್ಣ ತಮ್ಮಂದಿರು, ಅಕ್ಕ ತಂಗೆ, ಅವರ ಮಕ್ಕೊ,ನಮ್ಮ ಕುಟುಂಬದೋರು- ಎಲ್ಲೋರ ಒಟ್ಟಿಂಗೆ ಸಂಬಂಧ ಮಡಿಕ್ಕೊಂಡರೆ ಈ ಹೆರಾಣ ಚೆಂಙಾಯಿಗಳ “ಪ್ರಭಾವ” ಶೂನ್ಯ ಅಕ್ಕು.

    1. ವೋಯ್, ಶುದ್ದಿಲಿ ಬಂದ ಕುಮಾರ ಮಾವಂದುದೇ – ನಿಂಗಳದ್ದುದೇ ಹೆಸರು ಒಂದೇ ಇದ್ದಪ್ಪೋ!
      ಅದಕ್ಕೆಂತರ ಮಾಡ್ತದು – ಒಪ್ಪಣ್ಣ ಹೇದು ಸುಮಾರು ಜೆನ ಇಲ್ಲೆಯೋ! ಅಲ್ದೋ? 🙂

      ಹೆರಿಯೋರ ಒಟ್ಟಿಂಗೆ ಒರಿಶಕ್ಕೆ ಅಂಬಗಂಬಗ ಆದರೂ ಸೇರಿಗೊಂಡು ಇಲ್ಲದ್ದರೆ ಹಳತ್ತು ಹೊಸ ತಲಗೆ ಎತ್ತ. ಪೇಟೆಲಿದ್ದೊಂಡು ಇದರ ಪಾಲುಸುತ್ತ ನಿಂಗಳ ಆ ವಿಶಯಲ್ಲಿ ಮೆಚ್ಚಲೇಬೇಕು ಮಾವ!

  6. ಆನು ನೋಡಿದ ಹಾಂಗೆ ನಮ್ಫ್ಮ ಸಮಾಜದ ಈಗಿನ ಯುವ ಜನತೆಲಿ ಹೆಚ್ಚಿನವುದೆ ಒಳ್ಲೆಯ ಕ್ಫ್ರಮಲ್ಫ್ಲಿ ಇದ್ದವು. ಪ್ಫ್ರಾಯಶಃ ನಮ್ಮ ಗುರುಗಳ ಪ್ಫ್ರಭಾವ ಇಕ್ಕು.

    1. ಮರುವಳಮಾವ ಹೇಳಿದ್ದು ನಿಜವೇ. ಗುರುಗಳ ಪ್ರಭಾವ ಖಂಡಿತಾ ಕೆಲಸ ಮಾಡ್ತು.
      ಆದರೂ – ಕೆಲವು ಜೆನ ಆ ಪ್ರಭಾವಳಿಯ ಹೆರವೇ ಇದ್ದವಿದಾ, ಅದು ಬೇಜಾರಪ್ಪದು.

  7. ಅಪ್ಪು ಒಪ್ಪಣೋ, ಈ ಕುಡಿತ್ತ ಸಂಗತಿ ಹೇಳುವಗ ನೆಂಪಾತು , ಆಚಕರೆ ಮನೆಲಿ ಕೂಸುನೋಡ್ಲೆ ಬಂದ ಮಾಣಿಗೆ ಅಭ್ಯಾಸಂಗೊ ಎಂತೆಲ್ಲ ಇದ್ದು ಹೇಳಿಯಾರೋ ಕರಕ್ಕೊಂಡು ಬಂದವನಹತ್ತರೆ ಕೇಳಿಯಪ್ಪಗ ಅವ ಹೇಳಿದನಡ , ಅಭ್ಯಾಸ ಹೇಳಿ ಎಂತದೂ ಇಲ್ಲೆ ಆದರೆ ಅಂಬಗಂಬಗ ಜೀರಿಗೆ ಅಗಿತ್ತ ಅಷ್ಟೇ ಹೇಳಿ , ಹಾಂ .. ಅದೆಂತ ಜೀರಿಗೆ ಅಗಿವದು ಹೇಳಿ ಕೇಳಿರೆ , ಅದೂ……. ಈಕಮ್ಮಿ ಕ್ರಯದ ಕುಪ್ಪಿಗೊ ಯೆಲ್ಲ ವಾಸನೆ ಬತ್ತಿದಾ ಹಾಂಗಾಗಿ ವಾಸನೆ ಬಾರದ್ದಹಾಂಗೆ ಅಷ್ಟೇ , ಹಾಂಗಾರೆ ಕುಡಿವ ಅಭ್ಯಾಸವೂ ಇದ್ದೋ ಹೇಳಿ ಕೇಳಿರೆ ,ಇಲ್ಲೆಪ್ಪಾ ಮಂಗಳ ವಾರ ಬೆಂಗಳೂರಿಲಿ ರೇಸು ಇರ್ತಿದಾ ಅಲ್ಲಿಗೆ ಹೋಗಿಬಂದಪ್ಪಗ ತಲೆ ಬೆಶಿ ಆವುತ್ತಿದಾ, ಹಾಂಗಾಗಿ ಅಷ್ಟೇ … ಹಾಂಗಾರೆ ರೇಸಿಂಗೂ ಹೋಪಲಿದ್ದೋ….. ಇಲ್ಲೆಪ್ಪಾ ಎಲ್ಲಿಯಾರು ಇಸ್ಪೇಟಿಲಿ ಪೈಸೆ ಬಂದರೆ ಮಾತ್ರಾ ಇಲ್ಲದ್ದರೆ ಇಲ್ಲೆ .. ಹಾಂಗಾರೆ ಇಸ್ಪೇಟೂದೇ ಇದ್ದೋ ಇಲ್ಲೆಪ್ಪಾ ಅಪ್ಪ ಒಂದೊಂದಾರಿ ಹೋಪಗ ಮಗನುದೇ ಒಟ್ಟಿಂಗೆ ಹೋಪದು ಅಪರೂಪಕ್ಕೊಂದಾರಿ ಮಾತ್ರ ಯಾವಾಗಳುದೇ ಇಲ್ಲೆ ಆದರುದೇ ಮಾಣಿಗೆ ಅಬ್ಯಾಸ ಹೇಳಿ ಎಂತದೂ ಇಲ್ಲೆ ಮತ್ತೆ ಈ ಮೊಟ್ಟೆದೋಸೆ ಯೆಲ್ಲಾ ಪೇಟೆಲಿ ಇಪ್ಪವಕ್ಕೆ ಸಾಮಾನ್ಯ ಇದಾ ಕೆಲಾವುಸರ್ತಿ ತಲೆದು , ಕಾಲಿಂದು ಹೇಳಿ ತಿಂಬಲಿದ್ದು ಹೇಳಿ ಹೇಳಿದವಡ.
    ಇಲ್ಲಿಗೊರೆಗೆ ಎತ್ತಿತ್ತಾ …………?

    1. ಪ್ರಸಾದಣ್ಣೋ,
      ಹ ಹ ಹ!!
      ಎಷ್ಟು ಚೆಂದದ ಒಪ್ಪ ಕೊಟ್ಟೆ.

      ಒಂದರಿಂದ ಒಂದಕ್ಕೆ ಸಂಕೊಲೆ. ಅಂತೂ ವಿಷಯ ಸಂಕೊಲೆ ಬೆಳದು ಬೆಳದು ಆ ಮನಿಶ್ಶನ ಸಮಗ್ರ ಚಿತ್ರಣ ಬಂದುಬಿಟ್ಟತ್ತು!
      ಾಯಿಕಾಯಿದು.
      ಅಯ್ಯಂಗಾರಿ ಒಬ್ಬ ಉಪವಾಸ ಮಾಡಿದ ಕತೆನೆಂಪಾತು ಒಂದರಿ!! 😉

  8. ಯಾವುದರ ಒಪ್ಪೆಕ್ಕು, ಯಾವುದರ ಬಿಡೆಕ್ಕು ಹೇಳಿಯೇ ಕೆಲವೊಂದು ಸರ್ತಿ ಗೊಂತಾವ್ತಿಲ್ಲೆ.
    ಮದುವೆ, ಆಹಾರದ ವಿಚಾರಲ್ಲಿ ನಮ್ಮಲ್ಲಿ ಹೆಚ್ಚಿನ ಬದಲಾವಣೆಗಳೂ ಬಂದದು.
    ಅಲ್ಲದೋ…?
    ನಮ್ಮೋರ ಸ್ವಾತಂತ್ರ್ಯದ ಪರಾಕಾಷ್ಟೆಯೋ ತೋರುತ್ತು.
    ಮೋರೆಪುಟಲ್ಲಿ ಒಬ್ಬ ಪ್ರಶ್ನೆ ಕೇಳ್ತ…
    “ಇಲ್ಲಿ ಇಪ್ಪ ಹವ್ಯಕರಲ್ಲಿ ಎಷ್ಟು ಜೆನ ಮಾಂಸಾಹಾರಿಗೊ ಇದ್ದವು…?”
    ಎರಡು ದಿನಲ್ಲಿ ಅದಕ್ಕೆ ಬಂದ 181 ಕಮೆಂಟುಗಳ ನೋಡಿ ಎನ್ನ ತಲೆಗೆ ಗಿರ್ಮೀಟು ಹಿಡುದತ್ತು.
    ನಾವು ಎಲ್ಲಿಗೆ ಎತ್ತಿತ್ತು…?
    ಹೆರಜ್ಜಾತಿಯೋರ ನೋಡಿ ಕಲಿಯೆಕ್ಕಕ್ಕೋ…?

    1. ದೊಡ್ಡಬಾವ ಹೇಳದ್ದು ಸರಿ ಇದ್ದು.
      ಹಾಂಗಿರ್ತ ಪ್ರಶ್ನೆಗಳ ಆನುದೇ ನೋಡಿದೆ. ಇದಕ್ಕೆ ಆರುದೇ ಎಂತದೂ ಬರೆಯವು – ಹೇದು ಗ್ರೇಶಿತ್ತಿದ್ದೆ.
      ಆದರೆ, ನಾವು ತಪ್ಪಿತ್ತು!

      ಎಷ್ಟು ಜೆನ – ತಿಂಬದು ಬೇರೆ, ಅದರೆ ದಾರಿಲಿ ನಿಂದುಗೊಂಡು ಹೇಳ್ತದು ಬೇರೆ!
      ಗೋಪಾಲಣ್ಣ ಹೇಳಿದ ಹಾಂಗೆ, ಅರ್ಧಂಬರ್ಧ ಪುರಾಣ ಜ್ಞಾನ ಇದ್ದ ಕಾರಣವೇ ಅವರ ಹತ್ರೆ ಮಾತಾಡ್ಳೆ ಕಷ್ಟ ಆದ್ಸು!!

      1. ಒಪ್ಪಣ್ಣೋ…
        ಇದು ಕಷ್ಟ ಆತಾನೆ… 😉
        {ದೊಡ್ಡಬಾವ ಹೇಳದ್ದು ಸರಿ ಇದ್ದು.}
        ಹಾಂಗೆ ಹೇಂಇರೆ ಎಂತರ ಅರ್ಥ…?

  9. ಬಳ್ಳಿ ಬಿಟ್ಟ ಕಂಜಿಯ ಹಾಂಗೆ, ಮನೆಂದ ಹೆರ ಹೋದ ಮಕ್ಕೊ ಪೆರ್ಚಿ ಗಟ್ಟಿ ಎಂತ ಮಾಡೆಕ್ಕು ಗೊಂತಾಗದ್ದೆ, ಅವರ ಗೆಳೆಯರ ಸಹವಾಸಲ್ಲಿ, ಕೆಲವೊಂದು ದುರಭ್ಯಾಸಂಗಳ ಸುರು ಮಾಡ್ತವು.
    “ನಿನ್ನ ಗೆಳೆಯ ಆರು ಹೇಳಿರೆ ನಿನ್ನ ಸ್ವಭಾವ ಆನು ಹೇಳುವೆ” ಹೇಳ್ತ ಒಂದು ಮಾತು ಇದ್ದು.
    ಪರಿಚಯ, ಸ್ನೇಹ, ಪ್ರೀತಿ ಹೇಳುವದು ಮನುಷ್ಯ ಮನುಷ್ಯ ಸಂಬಂಧಕ್ಕೆ ಮಾತ್ರ ಅಲ್ಲ. ಹೀಂಗಿಪ್ಪ ದುರಭ್ಯಾಸಂಗೊಕ್ಕೂ ಅನ್ವಯ ಆವ್ತು.
    ಸುರುವಿಂಗೆ ಕಂಪೆನಿ ಕೊಡ್ಲೆ ಹೇಳಿ ಸುರುಮಾಡುವದು, ಮತ್ತೆ ಅದು ಒಳ್ಳೆ ಅನುಭವ ಕೊಡ್ತು ಹೇಳಿ ಕಾಂಬದು, ಮತ್ತೆ ಅದರ ಬಿಡ್ಲೆ ಎಡಿಯದ್ದೆ ಅಪ್ಪದು.
    ಯಾವದೇ ಶುದ್ದ ವಸ್ತು, ಅಶುದ್ದ ಅಪ್ಪದು ಸುಲಾಭಲ್ಲಿ ಆವ್ತು. ಅಶುದ್ಧ ಆದ್ದರ ಶುದ್ಧ ಮಾಡ್ಲೆ ಮಾತ್ರ ಭಾರೀ ಕಷ್ಟ ಇದ್ದು. ದುರಭ್ಯಾಸಂಗೊ ಇದಕ್ಕೆ ಹೊರತಲ್ಲ. ಹಿಡ್ಕೊಂಬಲೆ ಸುಲಾಭ, ಬಿಡ್ಲೆ ಕಷ್ಟ.
    ಚಂಚಲ ಮನಸ್ಸಿನ ಜೌವನಿಗರು ಇದರ ಸರಿಯಾಗಿ ಅರ್ಥ ಮಾಡಿಗೊಳ್ಳೆಕ್ಕು.
    ಲೇಖನ ಎಲ್ಲವನ್ನೂ ವಿಶದವಾಗಿ ತಿಳಿಸಿದ್ದು. ಅಪ್ಪಂಗೆ ಮಗ ದಾರಿ ತಪ್ಪಿದ್ದ ಹೇಳಿ ಗೊಂತಪ್ಪಗ, ತಾನು ಕೂಡಾ ಮಾಡಿದ್ದು ಇದೇ ತಪ್ಪುಹೇಳಿ ಅರ್ಥ ಆದ್ದು ಮಾತ್ರ ಅಲ್ಲದ್ದೆ ತನ್ನ ಅಪ್ಪನ ದಾರಿಲಿ ತಾನು ನೆಡಕ್ಕೊಂಡಿದ್ದರೆ, ಮಗ ಈ ದಾರಿ ಹಿಡ್ತಿತ್ತಾ ಇಲ್ಲೆ ಹೇಳಿ ಕಂಡದು ಆಗದ್ದೆ ಇಲ್ಲೆ.
    ಮಗ ದಾರಿ ತಪ್ಪಲಾಗ ಹೇಳ್ತ ಕಾಳಜಿ ಇವಂಗೆ ಇದ್ದರೆ, ಇವನ ಅಪ್ಪಂಗೂ ಅದೇ ಅಭಿಪ್ರಾಯ ಇದ್ದಿರ್ತು ಹೇಳ್ತದು ಅರ್ಥ ಆದರೆ ಸಾಕು.
    ಒಪ್ಪಣ್ಣಾ, ಚಿಂತನೆಗೆ ಹಚ್ಚುವ ಒಳ್ಳೆ ಲೇಖನ.

    1. ಶರ್ಮಪ್ಪಚ್ಚಿ,
      ಕಂಜಿ ಬಳ್ಳಿಲೇ ಇದ್ದರೆ ನವಗೆ ಅದರ ಮೇಗೆ ಹಿಡಿತ ಇರ್ತು. ಒಂದರಿ ಅದು ಕೈ ಬಿಟ್ಟು ಹೆರಟ್ರೆ, ಮತ್ತೆ ನಮ್ಮ ಕೈಲಿಲ್ಲೆ.
      ನಾವುದೇ ಹಾಂಗೆ, ತಪ್ಪಲೆ ಸಾವಿರ ದಾರಿಗೊ ಇದ್ದು. ಒಂದರಿ ತಪ್ಪಿರೆ, ಪುನಾ ಮದಲಾಣ ದಾರಿ ಹಿಡಿಯಲೆ ಸರ್ವಥಾ ಎಡಿಯ. ಅತಿಮೀರಿ ಬಂದರೂ – ಅದು ಮದಲಾಣ ದಾರಿ ಆಗಿರ.
      ನಿಂಗೊಗೆ ಇಂತ ಸುಮಾರು ಜೆನರ ನೆಡುಗಾಣ ಒಡನಾಟ ಆಗಿಕ್ಕು ಹೇಳ್ತದು ಒಪ್ಪಣ್ಣನ ಅನಿಸಿಕೆ.

  10. ಕಲಿವಲೆ, ಕೆಲಸಕ್ಕೆ ಹೇಳಿ ಊರು ಬಿಟ್ಟು ಬರೆಕಪ್ಪದು, ಹಿರಿಯರ ದಿನಾ ಕಾಂಬಲೆ ಎಡಿಯದ್ದೆ ಇಪ್ಪದೆಲ್ಲ ಅನಿವಾರ್ಯ.
    ಆದರೆ ನಮ್ಮ ಕ್ರಮಂಗಳ ನಾವು ಒಳುಶಿಗೊಂಬದು ನಮ್ಮ ಕೈಲೆ ಇದ್ದು.
    ಅದರ ನಾವು ಪಾಲಿಸಿರೆ ನಮ್ಮ ಮಕ್ಕಳೂ ಚೆಂದಕ್ಕೆ ಕಲಿತ್ತವು.
    [ಒಂದರಿ ಅತ್ಲಾಗಿ ಮಾಲಿರೆ ಮುಗಾತು.] – ಎಂಗೊ ಇಲ್ಲಿ ಅನುಭವಿಸಿದ ಮಾತು.
    ಇವು ಇಲ್ಲಿಗೆ ಬಂದ ಸುರುವಿಂಗೆ ಅದೆಲ್ಲ ಎನಗೆ ಬೇಡ ಹೇಳಿ ಗಟ್ಟಿಗೆ ನಿಂದ ಕಾರಣ ಇವರ ದೋಸ್ತಿಗೊ ಇವಕ್ಕೆ ಅದಕ್ಕೆಲ್ಲ ಒತ್ತಾಯವೆ ಮಾಡ್ತವಿಲ್ಲೆ.
    ಆನು ಟೈಮ್ ಪಾಸ್ಂಗೆ ಹೇಳಿ ರಜ್ಜ ಸಮಯ ಕೆಲ್ಸಕ್ಕೆ ಹೋದಿಪ್ಪಗ, ಸುರುವಿಂಗೆ ನಮ್ಮ ಸಸ್ಯಾಹಾರದ ಬಗ್ಗೆ ಇಲ್ಲಿಯಾಣವಕ್ಕೆ ವಿವರ್ಸುಲೆ ಕಷ್ಟ ಆದರೂ ಮತ್ತೆ ಅವು ಅರ್ಥ ಮಾಡಿಗೊಳ್ತವು, ನಮ್ಮ ಕ್ರಮ ನಾವು ಪಾಲಿಸುಲೆ ಸಹಕರಿಸುತ್ತವು.
    ಮಾಂಸಾಹರ, ಅಮಲು ದ್ರವ್ಯ ಸೇವನೆ ನವಗೆ ಬೇಡ ಹೇಳಿ ನಮ್ಮ ಮನಸಿಲ್ಲಿ ಗಟ್ಟಿ ಇದ್ದರೆ ಆತು, ಹೇಳುವ ಸಂದೇಶ ಇಪ್ಪ ಶುದ್ಧಿ ತುಂಬಾ ಒಪ್ಪ ಆಯಿದು ಒಪ್ಪಣ್ಣಾ…
    ಇನ್ನಂಬಗ ಇನ್ನಾಣ ವಾರಕ್ಕೆ ಒಪ್ಪಣ್ಣನ ಶುದ್ಧಿಗೆ ಕಾಯಿವದಲ್ಲದಾ? ಆದರೆ ಈಗ ಬೇರೆಯವರ ಒಪ್ಪ ಶುದ್ಧಿಗೊ ದಿನಾ ಇಪ್ಪ ಕಾರಣ ಓದುಲೆ ತುಂಬ ಸಿಕ್ಕುತ್ತು ಹೇಳಿ ಖುಶಿ.
    ~ಸುಮನಕ್ಕ…

  11. ಕಲಿವಲೆ, ಕೆಲಸಕ್ಕೆ ಹೇಳಿ ಊರು ಬಿಟ್ಟು ಬರೆಕಪ್ಪದು, ಹಿರಿಯರ ದಿನಾ ಕಾಂಬಲೆ ಎಡಿಯದ್ದೆ ಇಪ್ಪದೆಲ್ಲ ಅನಿವಾರ್ಯ.
    ಆದರೆ ನಮ್ಮ ಕ್ರಮಂಗಳ ನಾವು ಒಳುಶಿಗೊಂಬದು ನಮ್ಮ ಕೈಲೆ ಇದ್ದು.
    ಅದರ ನಾವು ಪಾಲಿಸಿರೆ ನಮ್ಮ ಮಕ್ಕಳೂ ಚೆಂದಕ್ಕೆ ಕಲಿತ್ತವು.
    [ಒಂದರಿ ಅತ್ಲಾಗಿ ಮಾಲಿರೆ ಮುಗಾತು.] – ಎಂಗೊ ಇಲ್ಲಿ ಅನುಭವಿಸಿದ ಮಾತು.
    ಇವು ಬಂದ ಸುರುವಿಂಗೆ ಅದೆಲ್ಲ ಎನಗೆ ಬೇಡ ಹೇಳಿ ಗಟ್ಟಿಗೆ ನಿಂದ ಕಾರಣ ಇವರ ದೋಸ್ತಿಗೊ ಇವಕ್ಕೆ ಅದಕ್ಕೆಲ್ಲ ಒತ್ತಾಯವೆ ಮಾಡ್ತವಿಲ್ಲೆ.
    ಆನು ಟೈಮ್ ಪಾಸ್ಂಗೆ ಹೇಳಿ ರಜ್ಜ ಸಮಯ ಕೆಲ್ಸಕ್ಕೆ ಹೋದಿಪ್ಪಗ, ಸುರುವಿಂಗೆ ನಮ್ಮ ಸಸ್ಯಾಹಾರದ ಬಗ್ಗೆ ಇಲ್ಲಿಯಾಣವಕ್ಕೆ ವಿವರ್ಸುಲೆ ಕಷ್ಟ ಆದರೂ ಮತ್ತೆ ಅವು ಅರ್ಥ ಮಾಡಿಗೊಳ್ತವು, ನಮ್ಮ ಕ್ರಮ ನಾವು ಪಾಲಿಸುಲೆ ಸಹಕರಿಸುತ್ತವು.
    ಮಾಂಸಾಹರ, ಅಮಲು ದ್ರವ್ಯ ಸೇವನೆ ನವಗೆ ಬೇಡ ಹೇಳಿ ನಮ್ಮ ಮನಸಿಲ್ಲಿ ಗಟ್ಟಿ ಇದ್ದರೆ ಆತು, ಹೇಳುವ ಸಂದೇಶ ಇಪ್ಪ ಶುದ್ಧಿ ತುಂಬಾ ಒಪ್ಪ ಆಯಿದು ಒಪ್ಪಣ್ಣಾ…
    ಇನ್ನಂಬಗ ಇನ್ನಾಣ ವಾರಕ್ಕೆ ಒಪ್ಪಣ್ಣನ ಶುದ್ಧಿಗೆ ಕಾಯಿವದಲ್ಲದಾ? ಆದರೆ ಈಗ ಬೇರೆಯವರ ಒಪ್ಪ ಶುದ್ಧಿಗೊ ದಿನಾ ಇಪ್ಪ ಕಾರಣ ಓದುಲೆ ತುಂಬ ಸಿಕ್ಕುತ್ತು ಹೇಳಿ ಖುಶಿ.
    ~ಸುಮನಕ್ಕ…

    1. ಸುಮನಕ್ಕಾ,
      { ಅದೆಲ್ಲ ಎನಗೆ ಬೇಡ ಹೇಳಿ ಗಟ್ಟಿಗೆ ನಿಂದ ಕಾರಣ }
      ಈ ಗೆರೆ ನೋಡಿ ಅಭಿಮಾನ ಬಂತು ಒಪ್ಪಣ್ಣಂಗೆ. ನಿಜವಾಗಿಯೂ ದೊಡ್ಡ ಸಾಧನೆ ಇದು.

      ಅಂದೇ ಅಮೇರಿಕಕ್ಕೆ ಹೋದ ಲೆಕ್ಕಲ್ಲಿ ಎಲ್ಲದಕ್ಕೂ ಅವಕಾಶ ಇತ್ತು. ಆದರೆ ಹವ್ಯಕತನವ ಒಳಿಶಿ, ಬೆಳೆಶಿಗೊಂಡು ಬಂದದರ ನಿಜವಾಗಿಯೂ ಮೆಚ್ಚೇಕು.
      🙂

  12. (ಶುಬತ್ತೆ ಪುಚ್ಚೆ ಹಾಲು ಕುಡುದ ಹಾಂಗೆ!)
    ಪುಚ್ಚೆ ಹಾಲು ಕುಡಿವಲೆ ಸಿಕ್ಕುತ್ತಾ?…

  13. ಸಂಗ್ರಹ ಯೋಗ್ಯ ಲೇಖನಂಗಳಲ್ಲಿ ಒಂದು ಒಪ್ಪಣ್ಣಾ..

    {ಒಳ್ಳೆ ಸಂಸ್ಕಾರದ, ಆಡಂಬರ ಇಲ್ಲದ್ದ ಜೀವನ. ಯೇವತ್ತೂ ಸಾತ್ವಿಕ, ಸರಳ ಆಹಾರ. ಸರಳ ಸಂಸ್ಕೃತಿ, ಸಜ್ಜನ ಸ್ವಭಾವ. }- ಇದೇ ಅಲ್ಲದಾ ನಮ್ಮ ನಿಜವಾದ ಪರಿಚಯ ಹೇಳಿರೆ? ತುಂಬ ಚೆಂದಕೆ ಹೇಳಿದ್ದೆ.. ಸಣ್ಣ ಸಣ್ಣ ಶಬ್ದಂಗಳಲ್ಲಿ ತುಂಬ ದೊಡ್ಡ ಮಾತು. ಪಾಲಿಸುಲೂ ಅಷ್ಟೇ ಕಷ್ಟದ್ದು.

    ಆಪೀಸಿಲ್ಲಿ ಎಲ್ಲರೂ ತಿಂಬವ್ವೇ ಇಪ್ಪಗ “ಸಸ್ಯಾಹಾರಿಗೊ ಹೇಳಿರೆ – ಯಾವುದಕ್ಕೆ ಪ್ರತಿಭಟಿಸುವ ಶಕ್ತಿ ಇರ್ತಿಲ್ಲೆಯೋ ಅದರ ತಿಂಬವ್ವು” ಹೇಳಿ ನೆಗೆ ಮಾಡಿ ಅಪ್ಪಗ ಕುಮಾರ ಮಾವಂಗೆ ತಿಂದು ಹೋತೋ ಏನೋ? ಒಂದರಿ ರುಚಿ ಸಿಕ್ಕಿರೆ ಬಿಡುಲೆಡಿತ್ತೋ?

    ಸಸ್ಯಹಾರವ ಸಂತ ಇಛ್ಚೆಲಿ, ಎಂತಕೆ ಒಳ್ಳೆದು ಹೇಳಿ ತಿಳುದು, ಮನಸ್ಸಿಟ್ಟು ಮಾಡಿರೆ ಮಾತ್ರ ಅಕ್ಕಷ್ಟೇ ಅಲ್ಲದ್ದೆ, ಮನೆಲಿ ಎಲ್ಲೋರೂ ಮಾಡ್ತವು ಹೇಳಿ ಮಾಡ್ಲೆಡಿಗೋ? ಒಂದಲ್ಲಾ ಒಂದು ಕಾಲಕ್ಕೆ ಮನದಟ್ಟಾಗಿಯೇ ಆವುತ್ತು..
    ಮನುಷ್ಯನ ದೇಹ ಮಾಂಸಾಹಾರಕ್ಕೆ ಹೇಳಿದ್ದಲ್ಲ, ಮತ್ತೆ ಅದರ ತಿಂದರೆ ಮಾನಸಿಕವಾಗಿಯೂ ಸ್ವಾಸ್ಠ್ಯ ಒಳಿತ್ತಿಲ್ಲೆ ಹೇಳಿ ಅವಕ್ಕವಕ್ಕೇ ಗೊಂತಾಯೆಕಷ್ಟೆ..!!

    1. ಮಾಂಸಂ ಮಾಂಸೇನ ವರ್ಧತೇ – ಹೇದು ಗಣೇಶಮಾವ ಒಂದು ಶ್ಲೋಕ ಹೇಳುಗು ಯೇವತ್ತೂ.
      ಹೇಳಿರೆ, ತೋರ ಬೆಳೇಕಾರೆ ಮಾಂಸ ತಿನ್ನೇಕಡ.

      ಕೆಲವು ಜೆನಕ್ಕೆ ಬೇಗ ತೋರ, ಗಟ್ಟಿ ಬೆಳೇಕು ಕಾಂಬದಿದಾ – ಕ್ಲಾಸಿನವರ ಹಾಂಗೆ! 🙁

      1. ಅಪ್ಪು ಗಣೇಶ ಮಾವ ಹೇಳಿಂಡಿತ್ತಿದ್ದವು.
        {ಕೆಲವು ಜೆನಕ್ಕೆ ಬೇಗ ತೋರ, ಗಟ್ಟಿ ಬೆಳೇಕು ಕಾಂಬದಿದಾ – ಕ್ಲಾಸಿನವರ ಹಾಂಗೆ! } ಅಪ್ಪು.. ಮಾಂಸ ಮಾತ್ರ ಬೆಳದರೆ ಸಾಲ ಹೇಳಿ ಕಾಣಾದ್ದದು ದೌರ್ಭಾಗ್ಯ..:(

  14. ಎರಡೆರಡು ಗೆರೆಯ ಶುದ್ದಿ ಕೇಳಿದಿರೋ? ಎರಡು ತಟ್ಟುವೊ° – ಹೇದು ಕಂಡಿದಿಲ್ಲೇನೆ?
    ಕಂಡತ್ತು ಒಪ್ಪಣ್ಣಾ.. ಅದು ನಿನ್ನ ಬೆನ್ನಿಂಗೆ, ಮೆಚ್ಚುಗೆಲಿ, ಭೇಶ್, ಭೇಶ್ ಹೇಳಿ.
    ದೊಡ್ಡ ಕೆಲಸ ಹೇದರೆ ಹಾಂಗೇ ಅಲ್ಲದೋ – ಅವು ಹೇಳಿದಲ್ಲಿ, ಹೇಳಿದಾಂಗೆ ಗೆಯ್ಯೆಕ್ಕು! ಇದು ಅನುಭವದ ಮಾತು ನೋಡು.
    ಅಂತೂ ಅಪ್ಪನೂ ಮಗನುದೆ “ಕೆಂಪು ಕೆಂಪು” ಕೈಲಿ ಸಿಕ್ಕಿ ಹಾಕೆಂಡವು ಅಲ್ಲದೊ ! ಬದಲಾದ ಅಪ್ಪನ ಬುದ್ದಿ ಮಗಂಗೆ ಬಾರದ್ದೆ ಇಕ್ಕೊ ? ಹಿರಿಯರೇ ಮಕ್ಕೊಗೆ ದಾರಿ ದೀಪ ಹೇಳ್ತವು. ಮಾದರಿ ಹೇಳ್ತವು. ಕೆಟ್ಟದರ ಕಲಿವಲೆ ಸುಲಾಬಲ್ಲಿ ಎಡಿತ್ತು. ಒಳ್ಳೆದರ ಕಲಿಯೇಕಾರೆ, ಸಂಸ್ಕಾರವೂ ಬೇಕು. ಮನಸ್ಸುದೆ ನಮ್ಮ ಕೈಲಿ ಬೇಕು. ನಮ್ಮ ಸಂಸ್ಕೃತಿ, ಕ್ರಮವ ಎಲ್ಲ ಬಿಟ್ಟು ಆಧುನೀಕರಣ ಹೇಳ್ತ ಕಾರಣ ಕೊಟ್ಟು ಹಾಳಾವ್ತಾ ಇಪ್ಪ ನಮ್ಮ ಸಮಾಜದ ಕೆಲವು ಜೆನ ಬುದ್ದಿ ಜೀವಿಗಳ ಕುಟುಕಿದ ಲೇಖನ, ಲಾಯಕಿತ್ತು.
    ಮಗನ ಕಂಡಪ್ಪಗಳೆ ಅಪ್ಪಂಗೆ ಬುದ್ದಿ ಬಂದದು ಮನಸ್ಸಿಂಗೆ ತಟ್ಟಿತ್ತು.

    1. { ತಟ್ಟುವೊ ಕಂಡತ್ತು ಒಪ್ಪಣ್ಣಾ.. ಅದು ನಿನ್ನ ಬೆನ್ನಿಂಗೆ }
      ಅದಾ, ನಿಂಗೊ ತಟ್ಟುದು ರಜ ಜೋರಾತು ಕಂಡ್ರೆ ಅದು ಮತ್ತೆ ನೆಗಗು! ಹು ಹು!!

      ಕೆಂಪು ಕೆಂಪು – ಪದಪ್ರಯೋಗ ಲಾಯಿಕಾಯಿದು. ಅವರವರ ಮೋರೆ ಕೆಂಪು ಆಗಿಕ್ಕೋ ಹೇದು! ಅಲ್ಲದೋ? :-೦

  15. ಉತ್ತಮ ಸ೦ದೇಶ ಇಪ್ಪ ಲೇಖನ ಒಪ್ಪಣ್ಣ, ಆದರೆ ಬೆಕ್ಕಿನ ಕೊರಳಿ೦ಗೆ ಗ೦ಟೆ ಕಟ್ಟುದು ಆರು!?

    1. ಹರೀಶಣ್ಣಾ,
      ನಮ್ಮ ಮನೆಯ ಪುಚ್ಚಗೆ ನಾವೇ ಗಂಟೆ ಕಟ್ಟುದು.
      ಎಲ್ಲೋರುದೇ ಹಾಂಗೆ ಮಾಡಿರೆ, ಮತ್ತೆ ಎಲ್ಲಾ ಪುಚ್ಚೆಯ ಕೊರಳಿಲಿಯೂ ಗಂಟೆ ಕಟ್ಟಿರ್ತು ಇದಾ!!!
      ಅಲ್ಲದೋ? 🙂

  16. ಒಳ್ಳೆ ಶುದ್ದಿ ಒಪ್ಪಣ್ಣೋ………

    ನಮ್ಮ ಮಕ್ಕಳ ತಿದ್ದೆಕ್ಕಾದರೆ ಮೊದಲು ನಾವು ಸರಿ ಇದ್ದಾ ಹೇಳಿ ಆಲೋಚನೆ ಮಾಡೆಕ್ಕಿದ.

    ನಮ್ಮ ಬಾಳೆಲಿ ಹೆಗ್ಗಣ ಬಿದ್ದಿಪ್ಪಗ ಇನ್ನೊಬ್ಬನ ಬಾಳೆಲಿ ಇಪ್ಪ ನೆಳವಿನ ಬಗ್ಗೆ ಮಾತಾಡುದು ಸರಿ ಅಲ್ಲ………….

    1. ಅನುಪಮಕ್ಕಾ,
      ಪ್ರತಿಭಾವಂತ ಮಾಣಿಯ ಅಮ್ಮ ಆಗಿ ಹೀಂಗೆ ಒಪ್ಪ ಬರದ್ದು ನೋಡಿ ಸಂತೋಷ ಆತು.
      ನಮ್ಮ ಮನೆಂದಲೇ ಜಾಗ್ರತೆ ಸುರು ಮಾಡಿರೆ ಇಡೀ ಸಮಾಜ ಜಾಗೃತ ಆವುತ್ತು. ಅಲ್ಲದೋ?

  17. ಹೇಳಿದರೆ ಕೆಲವರು ಋಷಿಮುನಿಗಳ ಕಾಲಲ್ಲಿ ಬ್ರಾಹ್ಮಣರು ಮಾಂಸ ತಿಂದುಕೊಂಡಿತ್ತಿದ್ದವು ಹೇಳಿ ವಾದ ಮಾಡುತ್ತವು.ಯಾವದಾದರೂ ವಿಷಯವ ಸಾಧಿಸಿ ತೋರ್ಸಲೆ ಪುರಾಣಲ್ಲಿ ಎಷ್ಟೋ ಉದಾಹರಣೆಗೊ ಸಿಕ್ಕುಗು.. ಆದರೆ ಒಳ್ಳೆವಿಚಾರಕ್ಕೆ ಅವಕ್ಕೆ ಪುರಾಣ ಬೇಡ!.ಅಂತವಕ್ಕೆ ಹೇಳಿ ಪ್ರಯೋಜನ ಇಲ್ಲೆ.
    ಹಿರಿಯರು ತಪ್ಪಿ ನಡೆದರೆ ಸಣ್ಣವಕ್ಕೆ ಬುದ್ಧಿ ಹೇಳ್ತದು ಹೇಂಗೆ?
    ನಮ್ಮ ಸಮಾಜದ ವಿಶೇಷ ಮರ್ಯಾದೆ ಕ್ರಮಂಗೊ ನಾಶ ಆವುತ್ತ ಈ ಕಾಲಲ್ಲಿ ಉತ್ತಮ ಲೇಖನ.
    [ಎ.ಸಿ.ರೂಮಿಲಿ ಬೆಗರಿತ್ತು]
    ನೀರೊಳಗಿರ್ದು ಬೆಮರ್ತನುರಗಪತಾಕಂ….ಹೇಳಿದ ಹಾಂಗೆ…ಹ..ಹ..

    1. ಗೋಪಾಲಣ್ಣ ಸರಿಯಾಗಿ ಹೇಳಿದಿ.
      ಕೆಟ್ಟದಕ್ಕೆ ಅಪ್ಪಗ ’ಮನುಸ್ಮೃತಿಲಿ’ ಹಾಂಗಿದ್ದು – ಹೇಳ್ತವು. ಆದರೆ ಒಳ್ಳೆದಕ್ಕೆ ಮನುಸ್ಮೃತಿಯ ಶ್ಲೋಕ ನೆಂಪಾವುತ್ತಿಲ್ಲೆಯೋ ಅವಕ್ಕೇ!

  18. ಕಷ್ಟ, ಕಷ್ಟ.. ಎ೦ತ ಮಾಡುವದು ಒಪ್ಪಣ್ಣಾ.. ಹೀ೦ಗಿಪ್ಪ ಹಲವು ಒಪ್ಪಣ್ಣ೦ದ್ರ ಎನಗೆ ಇಲ್ಲಿ ಕಾ೦ಬಲೆ ಸಿಕ್ಕುತ್ತು. ಹಾ೦ಗೆ ಹೇಳಿ ಇಲ್ಲಿಯುದೆ ೧೦೦% ಶಾಕಾಹಾರ ಮಾ೦ತ್ರ ತೆಕ್ಕೊ೦ಬವುದೆ ಇದ್ದವು. ಮನೆಯವರ, ಹಿತೈಷಿಗಳ ಕಣ್ಣೆತ್ತುತ್ತಿಲ್ಲೆ ಹೇಳಿ ಧೈರ್ಯ ಬ೦ದಪ್ಪಗ ಎ೦ತ ಮಾಡಿರೂ ಆರಿ೦ಗುದೆ ಗೊ೦ತಾಗ ಹೇಳ್ತ ನ೦ಬಿಕೆಯೋ ಏನೋ ಇದಕ್ಕೆಲ್ಲ ಕಾರಣ…
    ಹಲವು ಒಪ್ಪಣ್ಣ೦ದ್ರ ಹತ್ರೆ ಈ ವಿಷಯಲ್ಲಿ ಆನು ವಿರೋಧವಾಗಿ ಮಾತಾಡಿ ಸುಮಾರು ವಾದ ಚರ್ಚೆ ಎಲ್ಲ ಮಾಡಿ ನೋಡಿದ್ದೆ. ಎ೦ತ ಪ್ರಯೋಜನ? ಎಲ್ಲ ಅವರವರ ಮನಸ್ಸಿಲ್ಲೇ ತೋರಡದೋ?..
    ಆದರುದೆ ಒ೦ದು ವಿಷಯ ಇದ್ದು ಒಪ್ಪಣ್ಣಾ.. ನಮ್ಮ ರೀತಿ, ರಿವಾಜುಗೊ, ಸಾತ್ವಿಕತೆ ಇದರ ಎಲ್ಲ ಉಳಿಸಿಗೊ೦ಡರೆ, ಬಾಕಿ ಇಪ್ಪವು ಕೊಡ್ತ ಮರ್ಯಾದೆ ಅನುಭವಿಸಿಯೇ ತಿಳಿಯೆಕಷ್ಟೆ.
    ಒಪ್ಪ೦ಗೊ…

    1. ಪೆರುವದಣ್ಣಾ,
      ನಿಂಗೊ ಹೇಳಿದ ವಿಶಯ ಸರಿ.

      ಮೋರೆಪುಟಲ್ಲಿ ಕೆಲವು ಸಮಯ ಹಿಂದೆ ಒಂದು ಚರ್ಚೆ ಆಯಿದು – ಆರೆಲ್ಲ ಮೊಟ್ಟೆ ತಿಂತೀ? – ಹೇದು ಒಬ್ಬ ಕೇಳುಲೆ, ಹದ್ನೈದು ಜೆನ ಅದರ ’ಲಾಇಕಿದ್ದು’ ಹೇದು ಒತ್ತಲೆ!

      ಚೆ, ಬೇಜಾರಾವುತ್ತು ಒಂದೊಂದರಿ..

  19. ಎಲ್ಲಿಂದ ಎಲ್ಲಿಗೆ ಎತ್ತಿತ್ತು ನಮ್ಮ ಅವಸ್ಥೆ! – ಅಪ್ಪಪ್ಪು!!.

    ಶುದ್ದಿ ಪಷ್ಟಾಯಿದು ಭಾವ. ಕೂದಲ್ಯಂಗೇ ತಲೆ ತಿರುಗುವದು ಹೇಳಿರೆ ಹೀಂಗೆ ಇದಾ.!!

    1. ಚೆನ್ನೈಭಾವಾ..
      ನಮ್ಮ ಹತ್ತರಾಣೋರುದೇ ಹೀಂಗೆ ಮಾಡ್ತವು ಹೇದು ಗೊಂತಪ್ಪಗ ಹೊಟ್ಟೆ ಬೇಯುವದು ಜಾಸ್ತಿ ಅಲ್ಲದೋ?
      ಹಾಂಗೇ ಆದ್ಸು, ಒಪ್ಪಣ್ಣಂಗೂ 🙁

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×