Oppanna.com

ಮಾಲಿಂಗ ಭಾವ ಕಣಿಯಾರಪೇಟೆಲಿ ಕಂಡು ಎಂತರ ಮಾತಾಡಿದವು..!?

ಬರದೋರು :   ಒಪ್ಪಣ್ಣ    on   16/03/2012    18 ಒಪ್ಪಂಗೊ

ಸಮಯ ನವಗೆ ಬೇಕಾಗಿ ಕಾವದು ಹೇಳಿರೆ ಆರಾರು ನಂಬುಗೋ?
ಅದು ಕಾಯಲೇ ಕಾಯ!

ಜನನಂದ ಮರಣ ಒರೆಂಗೂ ಒಂದೊಂದು ಕಾರಣ ತೆಗದು ದಿನ ನೂಕುದು ನಾವು, ನಿಜಜೀವನದೊಳವೂ ಹಾಂಗೇ – ಬೈಲಿಲಿಯೂ ಹಾಂಗೇ!
ಒಂದೊಂದು ವಾರವೂ ಒಂದೊಂದು ವಿಶಯ ಮಾತಾಡಿರೆ ಹೀಂಗೆ ವಾರ – ಸಮೆಯ ಕಳಿವದು ಗೊಂತೇ ಆಗ ನವಗೆ!
– ಹೀಂಗೇ ನೇರಂಪೋಕು ಮಾತಾಡಿರೆ ಬೈಲಿಂಗೊಂದು ಆಹಾರವೂ ಆತು; ಬೈಲಿನೋರಿಂಗೆ ಮಾತಾಡಿಂಬಲೆ ವಿಶಯವೂ ಆತು!
ಅದೇನೇ ಇರಳಿ, ವೇದಾಂತ ಮಾತಾಡಲೆ ಇದು ಸಮಯವೋ ಹೇದು ನಿಂಗೊ ಕೇಳುವಿ. 🙂

ಸಂಗತಿ ಎಂತ ಹೇದರೆ – ಕಣಿಯಾರಪೇಟೆಲಿ ಕಳುದವಾರ ಹೀಂಗೇ ನೆಡದು ಹೋಪಗ ಮಾಲಿಂಗಭಾವ ಎದುರಾಗಿ ಮಾತಾಡಿದವು. ಅಂಬಗಳೂ ನವಗೊಂದು ವಿಶೇಷ ಸಂಗತಿ ಅರಡಿಗಾತು!
ಅದೆಂತರ? ಆ ಸಂಗತಿಯ ಈ ವಾರ ಮಾತಾಡುವನೋದು!
~
ಪಾಡಿ ಮಾಲಿಂಗ ಭಾವನ ನಿಂಗೊಗೆ ಅರಡಿಗೋ?
ಬೈಲಿಲಿ ಅವರ ವಿಚಾರ ಮಾತಾಡಿಗೊಂಡದು ಬಹು ಅಪುರೂಪವೇ ಸರಿ!
ಭಾರೀ ಪಾಪದ ಗುಣದೋನು; ಈ ಭಾವಂಗೆ ಕೋಪ ಬಂದದರ ಒಂದೇಒಂದರಿಯೂ ನಾವು ಕಂಡದಿರ! ನವಗೇ ಎಂತಕೆ – ಆರಿಂಗೂ ಕಂಡ ನೆಂಪಿರ; ಅವರ ಮನೆಯೋರಿಂಗೂ ಸೇರಿ!
ಬರೇ ಸಾಧು ಜೆನ! ಸಿರಿವಂತ ಕುಳವಾರುದೇ.
ಮನೆಲಿ ಧಾರಾಳ ಅಲಫಲಂಗೊ, ಜಾಗೆ ತೋಟಂಗೊ ದೇವರು ಒದಗಿಸಿದರೂ – ಎಂತ ಜಾತಕ ದೋಷವೋ, ಎಂತದೋ – ನವಗರಡಿಯ – ಒರಿಶ ಸುಮಾರು ಆದರೂ, – ಒಂದೇ ಒಂದು ಜಾತಕವೂ ಕೂಡಿದ ಹಾಂಗೆ ಕಾಣ!
ಮದುವೆ ಒರಿಶ ಕಳಾತು ಹೇಳಿಗೊಂಡು ಅವರಮನೆಯ ಹೆರಿಯೋರಿಂದ ಹಿಡುದು, ನಾಕೊರಿಶ ಹಿಂದೆ ಮದುವೆ ಆದ – ಇವರಿಂದಲೂ ಕಿರಿಯ ತಂಗೆಯವರೆಂಗೆ – ತಲೆಬೆಶಿ ಬೇಜಾರು ಚಿಂತೆ ಮಾಡಿಗೊಂಡಿದವು.
ಸುಮಾರು ಒರಿಶ ಆತು ಜಾತಕ ನೋಡುದು, ಒಂದಾರೂ ಕೂಡಿ ಬಂದು ಗವುಜಿ ಎಳಗುಸುಲೆ; ಏಯ್!
ಮದುವೆ ಆಯೇಕಾದ ಸಮೆಯ ಕಳಾತು, ವಿವಾಹ ಯೋಗ ಒಂದು ಒದಗಿ ಬರೆಕಾತು – ಹೇಳಿಗೊಂಡು ಒಂದು ಬೇಜಾರು ಅವರ ಮೋರೆಲಿ ದೂರಂದಲೇ ಕಾಂಗು.
ಈಗೀಗಂತೂ – ನಾವು ಹುಲುಮಾನವಂಗೊ ಹೇಳಿದ ಹಾಂಗೆ ಆಗ; ಪೂರ ಆ ಮೇಗಾಣೋನಿಂದ ನೆಡೆವದು – ಹೇಳುವ ಅಭಾವದ ವಿರಾಗಿ ಈ ಮಾಲಿಂಗಭಾವ ಈಗ!
ಛೇ, ಎಂತಾ ಬೇಜಾರು, ಪಾಪ!

ಮಾಲಿಂಗ ಹೀಂಗೆ ಭಾವಂಗೆ ಮದುವೆ ಕೂಡುವ ವಿಚಾರವಾಗಿ – ನಾವು ಮನಸಿಲೇ ಆಲೋಚನೆ ಮಾಡಿರೆ – ಅವರ ಒಂದು ಒಳಾಣ ಸಂಗತಿ ನೆಂಪಿಂಗೆ ಬಂದು ನಿಂಗು.
ಬಂದ ಸಂಧಾನಂಗೊ ಹಿಂದೆ ಹಿಂದೆಯೇ ಒಳಿಯಲೆಈ ಒಂದು ಸಂಗತಿಯೂ ಕಾರಣವೇ!
ಅದೆಂತದು, ನಿಂಗೊಗೆ ಅರಡಿಗೊ?
~

ಅದೆಂತರ ಹೇದರೆ, ಮಾಲಿಂಗ ಬಾವಂಗೆ ಮಾತಾಡುವಗ ತಡವರುಸುದು.

ಅದೂ ವಿಶೇಷವಾಗಿ, ಒಂದು ಲಿಪಿಯ ಅಡಿಲಿ ಎರಡನೇ ಲಿಪಿ ಬಂತು ಹೇದರೆ, ಅಂತಾ ಜಾಗೆಲಿ ತಡವರುಸುದು!
ಒಂದೊಂದೇ ಲಿಪಿಗೊ ಆದರೆ ಮಾತಾಡಲೆ ಬಂಙ ಏನಾಗ; ಆದರೆ ಎರಡೆರಡು ಮೇಗಂದಮೇಗೆ, ಒಂದರ ಅಡಿಲಿ ಎರಡನೇದು – ಬಂದರೆ ಮೋಸವೇ!
ಅಂತಾಜಾಗೆಲಿ ಗ-ಗ-ಗ ಹೇದು ರಜಾ ಡಂಕಿ, ಬಾಯಿ ಒಡಾದು, ನಾಲಗೆ ಮಡೂಸಿ, ಸಮಯ ಹಿಡುದು.. – ಹೋ, ಹೇಳಲೆ ಭಾರೀ ಬಂಙ ಆಗಿ ಹೋಕು, ಪಾಪ!
ಆ ತಡವರುಸುವ ಸಂಗತಿಯ ಅವೇನೂ ಬೇಕೂಳಿ ಮಾಡಿಗೊಂಡದೋ?  ಉಹೂಂ, ಕುಂಞಿಮಾಣಿಗೇ ಹಾಂಗೇಡ.
~

ಪಾಡಿಭಾವಂಗೆ ಮಾತಾಡುವಗ ಒತ್ತಕ್ಷರವೇ ನಿಷಿದ್ಧ! 🙂

ಈ ಸಂಗತಿ ರಜರಜ ಪೀಡೆ ಕೊಡುಗಾದರೂ, ಭಯಂಕರದ ಹಾನಿ ನೆಡವಲಾಗ ಹೇಳಿಗೊಂಡು, ಮಾಲಿಂಗ ಭಾವಂಗೆ ಒಂದು ಕೆಣಿ ಅರಡಿಗು!
ಅದೆಂತರ?
ಬಿಡಿಬಿಡಿ ಆಗಿ, ಒಂದೊಂದೇ ಲಿಪಿ ಒಳಗೊಂಡ ಮಾತುಗೊ;
ಎರಡನೇದರ ಸೇರುಸೇಕಾದ ಬಗೆ ಬೇಡ – ಹೇಳುವ ನಮುನೆದರ ತುಂಬುಸಿ ತುಂಬುಸಿ;
ಹೇಳಲೆ ಸುಲಭ ಅನುಸುವ ಹಾಂಗೆ –
ಮಾತುಗಳ ಜೋಡುಸಿಗೊಂಡು ಹೋಪದಡ.

ದೇವರು ಯೇವದಾರು ಒಂದು ವಿಶಯವ ಊನ ಮಾಡಿರೆ, ಒಳುದ ಸಂಗತಿಗಳ ತುಂಬಾ ಅಧಿಕ ಮಾಡುದಡ – ಒಂದೊಂದರಿ ಬೈಲಕರೆ ಗಣೇಶಮಾವ ಹೇಳುಗು.
ಹಾಂಗೆಯೇ, ಮಾಲಿಂಗಬಾವಂಗೆ ಮಾತಾಡುವಗ ಇಂತಾ ಮಾತುಗಳೇ ಸೇರುಸಿ ಹೇಳುವ ಚಾಲಾಕಿತನವ ದೇವರೇ ಒದಗುಸುದಡ.

ನವಗೆ ಎಡಿಗೋ! ಯೋಪ!! ಅದಿರಳಿ
~

ಹೇಳಿದಾಂಗೆ, ಮಾಲಿಂಗಬಾವ ಎದುರು ಕಂಡು ಹಾಂಗೇ ಸೀತ ಹೋಗವು – ಕಂಡಕೂಡಲೆ ನಿಂದು, ರಜ ಮಾತಾಡಿಯೇ ಹೋಪದು ಅವು.
ಕಳುದವಾರ ಕಂಡು ಹಾಂಗೇ ಆತುದೇ.

ಓಯ್, ಒಂದು ಕಾಪಿಯೋ – ಎಂತಾರು ಆಸರಿಂಗೆ ಕುಡಿವನೋ ಎಂತ? ಕೇಳಿದವು.
ನವಗೆ ಈಗ – ಮನೆಂದ ಹೆರಡುವಗ ಒಂದರಿ ಆತಿದಾ, ಹಾಂಗೆ ಈಗ ಪುನಾ ಬೇಡ ಭಾವಾ – ಹೇದೆ.
ಹಾಂಗೆ, ಪೇಟೆಕರೇಲೇ ನಿಂದೊಂಡು ಮಾತು ಸುರು ಆತು.
ನವಗೂ ಅಂತಾ ಸಂಗತಿಗಳೇ ರಜ ಒಲವು ಆದ ಕಾರಣ, ನಾವುದೇ ತುಂಬಾ ಕೊಶಿಲಿ ಮಾತಾಡಿಗೊಂಡು ನಿಂದಿದು ಇದಾ!

ಅವರ ಮನೆಯ ಸಂಗತಿಂದ ಹಿಡುದು, ಆ ಊರ ನೆರೆಕರೆಯೋರು ಆರು ಎಂತ ಮಾಡಿಗೊಂಡು – ನೆರೆಕರೆಲಿ ಸಾದಾರಣ ಮಾತಾಡಿಗೊಂಬ ಹಲವು ಕೆಲವು ಸಂಗತಿಗೊ, ಸಮಾಚಾರಂಗೊ ಬಂತು.
ಅಂದು ಮಾತಾಡಿದ ಹಲವು ಸಂಗತಿಗಳ ಪೈಕಿ ಪೂರ ನೆಂಪಿರ;
ಒಂದು ಸಂಗತಿಂದ ಎರಡನೇದರ ಒಳ ವಿಶೇಷ ಸಂಬಂಧ ಇರ; ಆದರೂ – ನೆಂಪಾದ ಕೆಲವು ಸಂಗತಿಗಳ ಹೇಳುವೆ!
ಕೇಳಿ ಆತೋ:
~

  • ಕಳುದ ವಾರವೇ ಅವರ ತೋಟದ ತೆಂಗಿನಕಾಯಿ ತೆಗದು ಆಯಿದಡ; ತೆಗವಲೆ ಬಾಬುವೇ ಬಂದದಡ. ಒಂದರಿ ಬರೆಕಾರೆ ಹದಿಮೂರು ದಿನ ಮನಗೆ ಹೋಗಿ ಕಾಲು ಹಿಡಿಯೇಕಡ! 😉
  • ಬಾಬುವಿನ ಸಂಬಳ ಒರಿಶಂದ ಒರಿಶ ಕಳುದ ಹಾಂಗೇ ವಿಷದ ಹಾಂಗೆ – ಏರುದಡ; ಬೇಜಾರದ ನೆಗೆಲಿ ಹೇಳಿದವು.
  • ಏನೇ ದುಡಿಯಲಿ, ಬಾಬುವಿನ ಸಂಪಾದನೆಲಿ ರಜವೂ ಒಳಿಯ – ಪೂರ ಗಡಂಗಿಂಗೇ ಎರದು ಮುಗುಶುಗು – ಹೇಳಿಗೊಂಡು ಬೇಜಾರು ಹೇಳಿದವು.
  • ಬಾಬುವಿನ ಮಗ ನಾರಾಯಣಂದೇ ಈಗ ತೆಂಗಿನ ಕಾಯಿ ಕೊಯಿವದರ ಕಲಿಯಲೆ ಸೇರಿಗೊಂಡಿದಡ. ಹಾಂಗಾಗಿ, ನಾವು ಸಂಬಳ ಎರಡು ಆಳಿಂದು ಕೊಡೆಕಡ!
  • ಅದಿರಳಿ, ಅವರ ತರಕಾರಿ ಕೃಷಿ ಹೇಂಗಾಯಿದು ಕೇಳಿರೆ, ಒಂದರಿಯಾಣ ತರಕಾರಿ ಗೆಡುಗೊ ಪೂರ ಒಣಗಿ ಕೈದು ಆತಡ, ಈಗ ಇರುವಾರ ಸೆಸಿ ಮಾಡಿದವಡ.
  • ಈ ವಾರಿ ಮಾಡುವಗ ದಾರಳೆಯೂ, ಪಟಕಿಲವೂ, ರಜ ಸೌತೆಯೂ, ನಾಕು ಸಾಲು ಗೆಣಂಗೂ  ಮಾಡಿದವಡ.
  • ಬಾಳೆಕಾಯಿ ಕೃಷಿಯ ರಜ ವಿಶೇಷವಾಗಿ ಮಾಡುದಡ ಈ ಒರಿಶ. ಕಳುದ ಲೋಡು – ಲೋರಿಲಿ ತೆಂಕಲಾಗಿ ಕಳುಗಿ ತುಂಬ ಬೇಡಿಕೆ ಬಂತಡ.
  • ಕಳುದ ಮಳೆಗಾಲ ಸಾರಡಿ ತೋಡಕರೆ ಜೆರುದು, ಬೇಲಿ ರಜ ಹಾಳಾಗಿ ಹೋತಡ!
    ಹಾಂಗಾಗಿ – ಪಾಡಿ ಜಾಗಗೆ ಈ ಒರಿಶ ಪುನಾ ಬೇಲಿ ಸರಿ ಮಾಡುದಡ.
    ಸರಿಮಾಡಿದ ಬೇಲಿಗೆ ರಜ ದಾಸನಗೆಡುವೋ, ಆಡುಸೋಗೆಯೋ – ಎಂತಾರು ತುಂಬುಸಿರೆ ಮಳೆಗಾಲ ಚೆಂದಕೆ ಚಿಗುರಿ ಬೇಲಿಗೂ ಆಧಾರ ಇದಾ – ಹೇಳಿದವು.
  • ತೋಟದ ಕೆಲಸ, ಬೇಲಿಕೆಲಸ – ಪೂರ ಒಂದೇ ಸಮಯ ಮೇಗಂದಮೇಗೆ ಬಂದ ಕಾರಣ, ಈಗ ಕೆಲಸದೋರು ಜೆನಂಗೊ ತುಂಬ ಅಡ.
  • ಕೆಲಸದೋರ ಚಾಕಿರಿ, ಬೇಶಿ ಬಳುಸುಲೇ ಬಂಙ ಆಗಿ ಹೋಪದಡ;
    ಹಾಂಗಾಗಿ ಸುಂದರಿಯ ಬರುಸುದಡ – ಆಳುಗಳ ಅಡಿಗೆಗೆ!
  • ವಾರದ ಒಂದಿನ ಅದು ಸುಭಗಬಾವನ ಜಾಲುಡುಗಲೆ ಹೋಪದಡ; ಆ ದಿನ ಅಂತೂ ಭಾರೀ ಬಂಙ ಅಡ!
  • ಈಗ ಅಂತೂ ಅವರ ಮನೆಲಿ ಒಳ-ಹೆರಾಣ ಕೆಲಸ ಮಾಡಿಗೊಂಬಲೆ ಬಂಙ ಆಗಿ
    – ಒಂದೊಂದರಿ ಅನಿವಾರ್ಯ ಆದರೂ ಪೇಟಗೆ ಬಂದುಗೊಂಬಲೆ ಬಂಙ ಬಂದುಬಿಡುದಡ.
  • ಅದರ ಮೇಗಂದ, ಮಾಲಿಂಗ ಭಾವನ ಸೋದರಮಾವ ಕಳುದೊರಿಶ ತೀರಿಗೊಂಡ ಮೇಗೆ, ಆ ಎಂಟೆಕರೆ ಜಾಗೆಯ ನೋಡಿಗೊಂಬ ಜೆಬಾದಾರಿ ಕೆಲಸವೂ ಇವರ ಹೆಗಲಿಂಗೇ ಬಯಿಂದಡ.
  • ಮಾಲಿಂಗಭಾವನ ಮನೆಲಿ – ಕೇಶವಮಾವಂಗೆ ಈಗ ಗೆಂಟುಬೇನೆ ಜೋರು ಅಡ;
    ನೆಡವಲೇ ಬಂಙ – ಅಂತೂ ತಿರುಗಾಟ ಮಾಡೇಕಾಗಿ ಬಂದರೆ ಕಾರಿಲೇ ಹೋಪದಡ.
  • ಅವರ ತಂಗೆ ಇಂದಿರೆ ಈಗ ಇರುವಾರ ಬಾಳಂತಿ ಅಡ
    – ಇಂದಿಂಗೆ ಹದಿನಾರು ದಿನ ಆತಡ – ಮಾಣಿ ಶಿಶು ಅಡ.
  • ತಂಗೆಯ ಸುರುವಾಣ ಮಗಳು ಶಾಲಗೆ ಹೋಪಲೆ ಸುರು ಮಾಡಿಗೊಂಡಿದಡ, ಕಳುದ ಒರಿಶವೇ ಕೇಜಿ ಶಾಲಗೆ ಹೋಯಿದಡ.
    ಈ ಒರಿಶ ಕಿಂಟುವಾಲು ಶಾಲೆಯೋ ಏನೋ! 😉
  • ಹಾಂ, ಅದಿರಳಿ, ಮಾಲಿಂಗ ಬಾವ ಒಂದು ಕೊಶಿಯ ಸಂಗತಿಯೂ ಹೇಳಿದವು
    – ಒಂದು ಸಂಧಾನ ಸೇರುವ ಅಂದಾಜಿ ಅಡ, ನಂಬೂದಿರಿಗಳ ಕೂಸಡ
    – ಋಣಾನುಬಂಧ ರೂಪೇಣ – ಹೇಳಿಗೊಂಡವು.
    ಆಗಲಿ, ಚೆಂದ ಆಗಲಿ – ಹೇದೆ.

~
ನೋಡಿ ಭಾವ, ನಿಂಗಳೇ ನೋಡಿ!  ಯೋ..ಪ!
ಮಾಲಿಂಗಭಾವ ಹೇಳಿದ ಸಂಗತಿಗಳ ಗಮನುಸಿ ನೋಡಿರೆ, ಒಂದೇ ಒಂದು ಗೆರೆಲಿಯೂ ಭಾವಂಗೆ ತಡವರುಸುವ ನಮುನೆ ಕಾಣ.

ಯೇವದೇ ಒಂದು ಮಾತಿನ ಹೇಳೇಕಾರೆ ಮದಲೇ ಸರಿಯಾಗಿ ಆಲೋಚನೆ ಮಾಡಿ, ಮಾತಾಡುಗು.
ಅವು ಯೇಚನೆ ಮಾಡುದು ಒಂದರಿಯೋ? ಉಹುಂ; ಎರಡೆರಡು ವಾರಿ!
– ಒಂದರಿ ಆಡುವ ಮಾತಿನ ಬಗೆಗೆ,
– ಇರುವಾರ ಅದರೊಳ ಅಡಕ ಆಗಿ ನಿಂದ ಲಿಪಿಗಳ ಬಗೆಗೆ!
ಈ ಬಗೆಲಿ ಎರಡೆರಡು ಆಲೋಚನೆ ಮಾಡಿರೂ – ಮಾತಾಡುವ ಒಂದು ರಜವೂ ತಡವಾಗ!
ಬೇಗ ಕೇಳಿರೆ ಬೇಗ ಹೇಳುಗು.
ತಡವರುಸುದರ ತೊಂದರೆಯ ಉಪಾಯಂದ ಹಾರುಸಿ, ಚೆಂದಕೆ, ಸಲೀಸಿಂಗೆ ಮಾತಾಡೂವ ಮಾಲಿಂಗಭಾವನ ಉಪಾಯ ನಿಜವಾಗಿಯೂ ನಾವು ಗೌರವಿಸುದೇ!
~

ಇದು ನವಗುದೇ ಆದರ್ಶವೇ ಆಗಿರಳಿ!
ನಾವುದೇ ಹಾಂಗೇ – ಒಂದು ಮಾತಾಡುವ ಮದಲು ಮಾಲಿಂಗಭಾವನ ಹಾಂಗೇ ಎರಡೆರಡು ಬಾರಿ ಯೋಚನೆ ಮಾಡಿಗೊಂಡರೆ,
– ಮಾತಾಡುವಗ ಸರಿಯಾದ ಮಾತುಗಳೇ ತುಂಬಿರೆ;
ಆರ ಕೈಲಿ ಮಾತಾಡವಗಳೂ – ಜಗಳಂಗಳೇ ಆಗ ಇದಾ!
ಈ ನಮುನೆ ನೋಡಿಗೊಂಬಲೆ ಬಹು ಸುಲಭ.

ನಿಂಗಳ ಅಭಿಪ್ರಾಯ ಅನಿಸಿಕೆ?

~
ಒಂದೊಪ್ಪ: ಮಾತು ತಡವರುಸುದು ದೇವರು ಮಾಡುದು; ಆದರೆ ಅದರ ಮೀರುಸಿ ಮಾತುಗಳ ರಚನೆಮಾಡುದು ಮಾಲಿಂಗಭಾವನ ಸಾಮರ್ತಿಗೆ.

ಸೂ:

  • ಮಾಲಿಂಗಭಾವ ಹೇಳಿದ ಮಾತುಗಳ ರೀತಿಲೇ, ಈ ಶುದ್ದಿಲಿ ಎಲ್ಲಿಯೂ ಒತ್ತಕ್ಷರ ಇಲ್ಲೆ ಅಪ್ಪೋ! 🙂
  • ಎರಡೆರಡು ಲಿಪಿ = ಒತ್ತಕ್ಷರ (ಲಿಪಿ ಹೇಳಿದ್ದು ಅಕ್ಷರವ ಆತೋ!)
  • ಮಾಲಿಂಭಾವನ ಹೆಸರು ಹಾಂಗಲ್ಲ; ತಡವರುಸುದು ಅವರ ದೌರ್ಬಲ್ಯವೂ ಅಲ್ಲ!

18 thoughts on “ಮಾಲಿಂಗ ಭಾವ ಕಣಿಯಾರಪೇಟೆಲಿ ಕಂಡು ಎಂತರ ಮಾತಾಡಿದವು..!?

  1. “ಈ ಶುದ್ದಿಲಿ ಎಲ್ಲಿಯೂ ಒತ್ತಕ್ಷರ ಇಲ್ಲೆ ಅಪ್ಪೋ!” ಹೇದ° ಒಪ್ಪಣ್ಣ°.
    ಅಲ್ಲ. ಬಂಙವ ಬರೆಯೆಕ್ಕಾದ್ದದು ಹಾಂಗಲ್ಲ. ಅದು “ಬಙ್ಙ”. ಅಲ್ಲಿ ಒತ್ತಕ್ಷರ ಬತ್ತು. ಇದು ಒಗ್ಗರಣೆ. 🙂
    ಪಾಡಿ ಮಾಲಿಂಗ ಭಾವನ ವಿಷತ ಮಾತಾಡಿದ ಕಾರಣ, ಮಾಲಿಂಗ ಭಾವಂಗೆ ಬಾರದ್ದಿಪ್ಪ ಹಾಂಗೆ ಒಪ್ಪಣ್ಣಂಗೂ ಕೋಪ ಬಾರನ್ನೆ..

  2. ಗುರುಗಳ ಮಾಣಿ,
    ಮಾಲಿಂಗ ಭಾವ ಅವರ ತೊಂದರೆಯ ಮೀರಿ ಬೆಳದು ನಿಂದದರ ಬರದ ರೀತಿ ತುಂಬಾ ಚೆಂದ ಆಯಿದು. ನವಗೆ ದೇವರು ಸಕಲವೂ ಒದಗಿಸಿದರೂ, ಅಥವಾ ಯೇವುದಾದರೂ ಕುಂದು ಕರುಣಿಸಿದರೂ ಕೂಡಾ ಅದರ ಉಪಯೋಗ ಮಾಡುವಾಗ ಯೋಚನೆ ಮಾಡಿ ಮಾತಾಡುವ, ಕೆಲಸ ಮಾಡುವ ಬಗೆ ಹೇಂಗೆ ಹೇಳುದರ ಮಾಲಿಂಗ ಭಾವ ಅವರ ಜೀವನದಾರಿಲಿ ಅನುಭವಿಸಿ, ಉದಾಹರಿಸಿ ತೋರ್ಸಿದವು. ಇದು ಸರ್ವರಿಂಗೂ ಜೀವನದ ಪಾಠ ಆಗಿರಲಿ. ಈ ಜೀವ ಭೂಮಿಗೆ ಬೀಳುವ ಸಮಯ ನವಗೆ ಒದಗುವ ಯೋಗದ ಫಲ ಜೀವನಪೂರ್ತಿ ಇರ್ತು. ಅದು ಒಳಿತಿನ ಕೊಡುಗೋ, ಕೆಡುಕಿನ ಕೊಡುಗೋ ಹೇಳುವ ಯೋಚನೆ ಕರೇಲಿ ಮಡಗಿ ಬಂದದರ ಬಂದ ಹಾಂಗೆ ಎದುರಿಸಿ ಸಾರ್ಥಕ ಜೀವನ ನಡೆಶಿಗೊಂಡು ಸಮಾಜದ ಬಂಧುಗೊಕ್ಕೆ ಮಾದರಿ ಆಗಿ ಜೀವನ ಮಾಡಿ ತೋರ್ಸುದು ಹೇಂಗೆ ಹೇಳಿ ಪಾಡಿ ಭಾವನ ಉದಾಹರಣೆಯ ಮೂಲಕ ಗೊಂತಾತು.
    ಸರ್ವರಿಂಗೂ ಅವರವರ ಜೀವ-ಜೀವನದ ಕೊರತೆಗಳ ಮೇಲೆ ಜೀವನ ಸಾಧಿಸುವ ಛಲ, ಬಲ ದೊರಕಲಿ..
    ಪಾಡಿ ಮಾಲಿಂಗ ಭಾವನ ಆದರ್ಶ ಹಲವಾರು ಅಳುಕು ಮನವ ತಲುಪಿ ಅವರ ಬಾಳಿಲಿ ಸುಂದರ ಹೊಸತನ ಕೊಡಲಿ..

    ಸೂ: ಮೊನ್ನೆ ರಾಮಕಥೆಲಿ ಮಾಲಿಂಗ ಭಾವ ಸಿಕ್ಕಿದ್ದವು. ಕಳುದ ವಾರ ಗುರುಗಳ ಮಾಣಿ ಮಾತಾಡಿದ ಕಣಿಯಾರ ಪೇಟೇಲಿ ಹೇಳಿ ಅಪ್ಪಗ ಒಪ್ಪಣ್ಣ ಸಿಕ್ಕಿದ್ದು ಹೇಳಿ ಅಂದಾಜು ಆತು! ಅವು ಮಾಷ್ಟ್ರು ಮಾವನ ಗುರುಗೋ ಹೇಳುದು, ಒಪ್ಪಣ್ಣನ ಅವು ಗುರುಗಳ ಮಾಣಿ ಹೇಳುದಲ್ಲದಾ? ಮಾಷ್ಟ್ರು ಮಾವಂಗೆ ಹತ್ತರೆ ಆದ ಕಾರಣವೋ ಏನೋ!! 😉

  3. ಒಪ್ಪಣ್ಣಾ,
    ನಮ್ಮ ಭಾಷೆಲಿ ‘ಕೊಕ್ಕಳಿಕೆ’ ಹೇಳುಗು,ಅಲ್ಲದೋ?.ಆ ಕೊರತೆಯ ದೂರ ಮಾಡುಲೆ ಮಾಲಿ೦ಗ ಭಾವ ಮಾಡಿದ ಬುದ್ಧಿವ೦ತಿಗೆ ಮೆಚ್ಚೆಕ್ಕಾದ್ದು.ಕಡೇ೦ಗೆ ಸೂಚನೆ ಕ೦ಡಪ್ಪಗ ಇಡೀ ಶುದ್ದಿಯ ತಿರುಗಿ ಓದಿ ಆನ೦ದವೂ ಆತು.ಒಳ್ಳೆ ಸ೦ದೇಶದ ಒಟ್ಟಿ೦ಗೆ ಕೊಶಿ ಕೊಟ್ಟತ್ತು ಈ ಪ್ರಯತ್ನ.

  4. ಒಪ್ಪಣ್ನನ ಈ ವಿಶಿಷ್ಠ ಶೈಲಿಯ ಬರವಣಿಗೆ ನೋಡೀ ಸಂತೋಷ ಆತು 🙂 ಕಷ್ಟದ ಕೆಲಸವೇ ಅಪ್ಪು ಇದು.
    ಈ ಶುದ್ದಿ ಬರವ ಮೂಲಕ ಎರಡು ವಿಷಯಂಗಳ ತಿಳುಶಿದ್ದುದೇ ಲಾಯ್ಕಾಯ್ದು, ಒಂದು-ಹೀಂಗಿದ್ದ ಹೊಸ ಪ್ರಯೋಗ ಮಾಡ್ಲಾವ್ತು ಹೇಳುದರ ತೋರ್ಸಿಕೊಟ್ತದು . ಎರಡು- ನಾವು ಮಾತಾಡೂವಗ ಆಲೊಚನೆ ಮಾಡಿ ಮಾತಾಡೆಕು ಹೇಲಿ.
    ಒಪ್ಪಣ್ನನ ಹೊಸ ಹೊಸ ಪ್ರಯೋಗಂಗೊ ಹೀಂಗೇ ನಡೆಯಲಿ 🙂

  5. ‘ಮಾತು ಬಲ್ಲವನಿಗೆ ಜಗಳವಿಲ್ಲ’, ಮಾತನಾಡುವ ಮೊದಲು ಎರಡೆರಡು ಸರ್ತಿ ಆಲೋಚನೆ ಮಾಡಿ ಮಾತನಾಡಿ ಹೇಳುವ ಸಂದೇಶ ನೀಡುವ ಲೇಖನ ಲಾಯಕ ಆಯಿದು…

    ಮಾತಾಡುವಗ ತಡವರುಸುವ ಮಾಲಿಂಗ ಭಾವನಾಗಿ ತನ್ನ ತಾ ಕಲ್ಪಿಸಿಗೊಂಡು ಇಷ್ಟು ದೊಡ್ಡ ಸಂಭಾಷಣೆಯ ರಚಿಸಿದ್ದದು ಒಪ್ಪಣ್ಣನ ಅಸಾಧಾರಣ ಪ್ರತಿಭೆಗೆ ಇನ್ನೊಂದು ಸಾಕ್ಷಿ…

  6. ಮಾತು ಆಡಿದರೆ ಹೋತು ಮುತ್ತು ಒಡದರೆ ಹೋತು ಹೇಳುವ ಮಾತಿದ್ದು. ಅದರ ಅರ್ಥ ನಾವು ಮಾತಾಡೆಕ್ಕಾದರೆ ಮದಲು ಅಲೋಚನೆ ಮಾಡೆಕ್ಕು ಹೇಳಿ.
    ಹಾಂಗೆ ಒಪ್ಪಣ್ಣ ಈ ಶುದ್ದಿ ಹೇಳುಗ ಅದೇ ಅರ್ಥವ ಮಡುಗಿದ ರೀತಿ ನೋಡಿ ಖುಷಿ ಆತು.

    ಹೀಗೂ ಉಂಟೇ…..?

  7. ಒತ್ತಕ್ಷರ ಇಲ್ಲದ್ದೆ ಮಾತಾಡುದೂ, ಬರವದೂ ಸುಲಭದ ಕೆಲಸ ಅಲ್ಲ. ಈ ಹೊಸ ಪ್ರಯೋಗ ಮೆಚ್ಚೆಕ್ಕಾದ್ದೆ.

  8. ಹರೇ ರಾಮ ಒಪ್ಪಣ್ಣ…………..ಲೇಖನ ಭಾರೀ ಲಯ್ಕ ಆಯ್ದಿದ…..ಬೈಲಿ೦ಗೆ ಬಾರದ್ದೆ ಸುಮಾರು ದಿನವೇ ಆತು……..
    ಬೈಲಿನವರೆಲ್ಲ ನೋಡಿ ಭಾರೀ ಕೊಶಿ ಆತು ಒಪ್ಪಣ್ಣ………..

  9. ಒಪ್ಪಣ್ಣಾ,
    [ದೇವರು ಯೇವದಾರು ಒಂದು ವಿಶಯವ ಊನ ಮಾಡಿರೆ, ಒಳುದ ಸಂಗತಿಗಳ ತುಂಬಾ ಅಧಿಕ ಮಾಡುದಡ]-ಸತ್ಯವಾದ ಮಾತು.
    ಒತ್ತಕ್ಷರ ಇಲ್ಲದ್ದೆ ಬರದ ಲೇಖನ, ಲೇಖನಕ್ಕೆ ಬೇಕಾಗಿ ಆಗದ್ದೆ ವಿಶಯವನ್ನೂ ಸೇರಿಸಿಗೊಂಡು ಲಾಯಿಕ ಆಯಿದು.
    ಮಾತಾಡುವ ಮೊದಲು ಎರಡೆರಡು ಸರ್ತಿ ಆಲೋಚನೆ ಮಾಡಿಕ್ಕುವದು ಒಳ್ಳೆದು. ಮಾತು ಹೆರ ಬಿದ್ದ ಮತ್ತೆ ಹಿಂದೆ ತೆಕ್ಕೊಂಬಲೆ ಎಡಿಯ ಅಲ್ಲದಾ? ಒಂದು ವೇಳೆ ಹಿಂದೆ ತೆಕ್ಕೊಳ್ತೆ ಹೇಳಿ ಹೇಳಿರು ಅದು ಮಾಡ್ತ ಗಾಯ ಮಾಡಿಯೇ ಇರ್ತು.

  10. ಎನಗೆ ಸಿಕ್ಕಿತ್ತು…. ಎನಗೆ ಸಿಕ್ಕಿತ್ತು…. ಲಾಷ್ಟಿನ ವಾಕ್ಯದ ಲಾಷ್ಟಿನ ಶೆಬ್ದಲ್ಲಿ ಒತ್ತಕ್ಶರ ಇದ್ದು…….

    @ ಈ ನಮುನೆ ನೋಡಿಗೊಂಬಲೆ ಬಹು ಸುಲಭ.
    ನಿಂಗಳ ಅಭಿಪ್ರಾಯ?

    1. ಯೋ..ಪ!
      ನಿನ್ನ ಬೋದಾಳ ಹೇಳಿದ್ದಾರಪ್ಪಾ?

      ಇದಾ, ಈಗ ನೋಡಿಕ್ಕು – ಸಮಾದಾನ ಆತೋ?
      ಅಭಿಪ್ರಾಯ ಹೇದರೆ ಅನಿಸಿಕೆಯೇ ಅಲ್ಲದೋ? 😉

      1. @- ಒಂದು ಸಂಧಾನ ಸೇರುವ ಅಂದಾಜಿ ಅಡ, ನಂಬೂದಿರಿಗಳ ಕೂಸಡ
        – ಋಣಾನುಬಂಧ ರೂಪೇಣ – ಹೇಳಿಗೊಂಡವು.

        ಇಷ್ಟು ಮಾತ್ರ ಹೇಳಿದ್ದೋ ಅಲ್ಲ ಪೂರ್ತಿ ಮಾಡಿದ್ದವೋ????

  11. ವಿನೂತನ ಪ್ರಯೋಗದ ಒಪ್ಪಣ್ಣನ ಲೇಖನ ಲಾಯಕಾತು. ಒತ್ತು ಬಂದದು ಸೂಚನೆಗಪ್ಪಗ ಮಾಂತ್ರ. ಅದು ಹೇಂಗೆ ಒತ್ತಕ್ಷರ ಇಲ್ಲದ್ದೆ ಬರವಲಾವ್ತು ಹೇಳಿ. ನವಗಿನ್ನು ಪ್ರಯತ್ನ ಮಾಡೆಕಷ್ಟೆ ! ನಿಜವಾಗಿಯೂ ಮಾಲಿಂಗ ಭಾವನ/ಒಪ್ಪಣ್ಣನ ಚಾಣಾಕ್ಷತನವ ಮೆಚ್ಚೆಕಾದ್ದೆ. ಮಾತು ಹೀಂಗಿಪ್ಪವಕ್ಕೆ, ಮಾಲಿಂಗ ಭಾವನ ಕೆಣಿಯ ಖಂಡಿತಾ ಅಳವಡಿಸೆಂಬಲಕ್ಕು.

    ಮಾತಾಡ್ಳೆ ಗೊಂತಿದ್ದವಂಗೆ ಆರತ್ರವೂ ಜಗಳ ಇಲ್ಲೆ ಆಡ. ಎರಡೆರಡು ಸರ್ತಿ ಆಲೋಚನೆ ಮಾಡಿ ಮಾತಾಡೆಕು ಹೇಳ್ತದುದೆ ಸರಿಯಾಗಿಯೇ ಇದ್ದು.

    ಮಾಲಿಂಗಂಗೆ ನಂಬೂದಿರಿ ಕೂಸಾದರೂ ಸರಿ, ಒಂದು ಶುಭಕಾರ್ಯ ನೆಡೆಯಲಿ ಹೇಳ್ತ ಹಾರೈಕೆ.

  12. ಮಾಲಿಂಗಭಾವನ ಸಾಮರ್ತಿಗೆ ಮೆಚ್ಚೆಕ್ಕಾದ್ದೆ.
    ತಡವರುಸುವವಕ್ಕೆ ತಡವರುಸದ್ದ ಹಾಂಗೆ ಬರದ ಶುದ್ದಿ ಶುದ್ಧವಾಗಿ ಬೈಂದು.

  13. ಯೋಪ ಕೆಣಿಯೇ!! ಮೇಗೆ ಸುರುವಿಂಗೆ ತಡವರುಸುವದು ಹೇಳಿ ನೋಡಿ ಇಂದು ಸುಮಾರು ಇರೇಕು ಹೇಳಿ ತೋರಿಹೋತು. ಅಕೇರಿವರೇಗೆ ಓದಿ ಪುನಃ ಸುರುವಿಂದ ನೋಡಿದೆ ಅಂದರೂ ‘ಈ ಶುದ್ದಿಲಿ ಎಲ್ಲಿಯೂ ಒತ್ತಕ್ಷರ ಇಲ್ಲೆ’ !!! ಈಗ ಎಂತರ ಬರವದು ಹೇದು ಎನಗೇ ತಡವರುಸುವ ಹಾಂಗೆ ಆತೋಳಿ. ಏನೇ ಆಗಲಿ ‘ಸುರುವಿಂದ ಅಕೇರಿವರೇಗೆ ವಿವರಿಸಿದ ರೀತಿ ಲಾಯಕ ಆಯಿದು’ ಹೇದು ಒತ್ತಿ ಹೇಳಿತ್ತು- ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×