Oppanna.com

ಒಗ್ಗಟ್ಟಿನ ಮಂಗಂಗಳ ಹಿಡಿವಲೂ ಸುಲಭ ಆಡ..!

ಬರದೋರು :   ಒಪ್ಪಣ್ಣ    on   14/12/2012    10 ಒಪ್ಪಂಗೊ

ಶುದ್ದಿ ಎಲ್ಲಿ ನಿಂದಿದು? ಹೋ – ಜಾಲು ಕೆರಸುತ್ತಲ್ಲಿ. ಅಪ್ಪೋ?
ಕಸವು ತುಂಬಿದ್ದ ಮಳೆಗಾಲದ ಕಾಡು ಜಾಲಿನ ಮನಾರ ಮಾಡಿ – ಬೇಸಗ್ಗೆ ಬೇಕಾದ ಹಾಂಗೆ ಕಳುದವಾರವೇ ಮಾಡಿ ಆಗಿದ್ದತ್ತು. ಅಲ್ಲದೋ?
ಜಾಲು ಮನಾರ ಅಪ್ಪಲೇ ಪುರುಸೊತ್ತಿಲ್ಲೆ, ಕೆಲವು ದಿಕ್ಕೆ ಅದಾಗಲೇ ಹಣ್ಣಡಕ್ಕೆ ರಾಶಿ ಬಂದು ಬಿದ್ದಿದು.
ಇನ್ನು ಕೆಲವು ದಿಕ್ಕೆ ಕೊಯಿವಲೆ ಜೆನ ಇಲ್ಲೆ, ಕೆಲವು ದಿಕ್ಕೆ ಕೊಯಿದ್ದರ ತಪ್ಪಲೆ ಜೆನ ಇಲ್ಲೆ, ಮತ್ತೆ ಕೆಲವು ದಿಕ್ಕೆ ಸೊರುಗಿದ್ದರ ಹರಗಲೆ ಜೆನ ಇಲ್ಲೆ- ಕೃಷಿ ಹೇದರೆ ಹೀಂಗೇ ಅಲ್ಲದೋ?
ಎಲ್ಲವನ್ನೂ ಒರ್ಮೈಶಿಗೊಂಡು ಹೋಪಗ ಒರಿಶ ಕಳಿತ್ತತ್ತೆ.
ಅದಕ್ಕೇ ಇದಾ – ವಿದ್ಯಕ್ಕಂಗೆ ಒಂದೊಂದರಿ ಕಾಂಬದು, ತನ್ನ ಗೆಂಡ ತರವಾಡುಮನೆ ಬಿಟ್ಟು ಸೋಪ್ಟುವೇರೋ ಮಣ್ಣ ಕಲ್ತಿದ್ದರೆ ಸುಲಾಭ ಆವುತ್ತಿತು ಹೇದು; ಅದಿರಳಿ.
~
ಈ ಹಣ್ಣಡಕ್ಕೆ ಜಾಲಿಂಗೆತ್ತುವ ಮದಲೇ, ಬಾಬು – ಸುಂದರನವು ಬಂದು ಕೊಯ್ವ ಮದಲೇ – ನಮ್ಮ ಊರಿಲಿ ಕೊಯ್ದು ಹಾಕುತ್ತ ಮರಿಯಾದಿ ಇದ್ದು. ಆರು?
ಮತ್ತಾರು – ಮಂಗಂಗಳೇ ಆಯೆಕ್ಕಟ್ಟೆ!
ಸಿಂಗಾರ ಬೆಳದು ಮಾಲೆಕ್ಕಾಯಿ ಅಪ್ಪಲೆ ಪುರುಸೊತ್ತಿಲ್ಲೆ – ಎಳದು ಚೊಲ್ಲಿ ಚೀಪಿ ಕೆಳ ಇಡ್ಕುತ್ತವು; ಕಿಲೆಲಿ ಅರ್ದಕ್ಕರ್ದ ಕಾಲಿ ಮಾಡಿ ಹಾಕುತ್ತವು ಹೇದು ಆಚಮನೆ ಪುಟ್ಟಣ್ಣಂಗೆ ಕೋಪ ಬಪ್ಪದು.
ಅಲ್ಲ, ಕೋಪ ಎಲ್ಲೋರಿಂಗೂ ಬತ್ತು; ಕೋಪಲ್ಲಿ ಎಂತ ಮಾಡ್ತು ಹೇಳ್ತದು ಪ್ರಶ್ನೆ ಇಪ್ಪದು.

ಊರ ಎಲ್ಲಾ ತೋಟಂದಲೂ ಅಡಕ್ಕೆ ಬಲುಗಿ ತಿಂತು ಮಂಗ. ಎಡಿಗಾಷ್ಟು ಜೆನ ಓಡುಸಿದವು – ಹಲವು ನಮುನೆಲಿ ಓಡುಸಿದವು.
ಸುರೂವಿಂಗೆ ಬಾಯಿಲಿ “ಹಿಡಿಯೋ..ಹಿಡಿಯೋ..” ಹೇದು ಹೆದರ್ಸಿರೆ ಓಡಿಗೊಂಡಿತ್ತು. ಕ್ರಮೇಣ ಅದು ಅಭ್ಯಾಸ ಆದ ಮತ್ತೆ ಕಲ್ಲಿಡ್ಕೇಕಾಗಿ ಬಂತು.
ಅದೂ ಅಭ್ಯಾಸ ಆದ ಮತ್ತೆ ಪಟಾಕಿ ಶೆಬ್ದ. ಅದೂ ಅರಡಿಗಾದ ಮತ್ತೆ ಬೆಡಿ – ಹೀಂಗೇ ಓಡುಸುತ್ತರಲ್ಲಿಯೂ ಹಲವು ವಿಧ ಬೆಳಕ್ಕೊಂಡು ಬಂತು.
ಇದರ ಬಗ್ಗೆ ನಾವು ಅಂದೊಂದರಿ ವಿವರಲ್ಲಿ ಮಾತಾಡಿದ್ದತ್ತು. ಬೈಲಿಂಗಿಡೀ ಮಂಗನ ಉಪದ್ರ ಹೇದು ಶುದ್ದಿ ಮಾತಾಡಿಗೊಂಡದು ನೆಂಪಿಕ್ಕೋ ಏನೋ ನಿಂಗೊಗೆ. ಉಮ್ಮ.
ಹಾಂಗೆ, ಮಂಗನ ಉಪದ್ರ ತಡವಲೆಡಿಯದ್ದೆ, “ಎಂತಾರು ಮಾಡೇಕು ನಾವು” ಹೇಳಿ ನೆರೆಕರೆಯ ಎಲ್ಲೋರುದೇ ಮಾತಾಡ್ಳೆ ಸುರುಮಾಡಿತ್ತಿದ್ದವು.
ಎಲ್ಲೋರುದೇ ಮಾತಾಡಿಗೊಂಡೇ ಕೂದರೆ ಎಂತಾರು ಆವುತ್ತೋ? “ಮಂತ್ರಕ್ಕೆ ಮಾವಿನ ಕಾಯಿ ಉದುರುಗೋ?” ಹೇದು.
~
ಹಾಂಗೆ ಮಂಗನ ಉಪದ್ರ ಪುನಾ ಎಳಗಿತ್ತು ಬೈಲಿಲಿ.
ಈ ಸರ್ತಿ ಆಚಮನೆ ಪುಟ್ಟಣ್ಣ ಅಂತೇ ಪಿಸುರು ಮಾಡಿಗೊಂಡು ಕೂಯಿದನಿಲ್ಲೆ. ಬದಲಾಗಿ “ಮಂಗನ ಹಿಡಿವೋರ” ಕರಕ್ಕೊಂಡು ಬಂದು ಹಿಡುಶಿಯೇ ಬಿಟ್ಟ°.
ಮಂಗಂಗೊ ಪೂರ ಗೂಡಿನೊಳ ಆದಪ್ಪದ್ದೇ ದೂರದ – ಗಟ್ಟದ ಬುಡಕ್ಕೆ ಕೊಂಡೋಗಿ ಬಿಟ್ಟಿಕ್ಕಿ ಬಂದ°.
ತನ್ನ ತೋಟಕ್ಕೆ ಮಾಂತ್ರ ಅಲ್ಲ, ಇಡೀ ಊರಿಂಗೇ ಉಪಕಾರ.
ಹಾಂಗೆ ನೋಡಿರೆ ಮಂಗಗೊಕ್ಕೂ ಉಪಕಾರವೇ – ತಿಂಬಲಿಲ್ಲದ್ದ ಈ ಬೈಲಿನೊಳಂದ- ಧಾರಾಳ ಊಟ ಇಪ್ಪ ಕಾಡಿಲಿ ಬಿಟ್ಟ ಕಾರಣ! 🙂

ನವಗೆ ಹೇಳುಲೆ ಸುಲಾಬ – ಮಂಗನ ಹಿಡಿವೋರು ಬಂದವು, ಮಂಗನ ಹಿಡುದವು ಹೇದು. ಆದರೆ ಅದರ ಹಿಂದಾಣ ಬೆಗರು ಎಷ್ಟು ಇದ್ದು ಹೇಳ್ತದು ಹಾಂಗೆ ಮಾತಾಡಿರೆ ಗೊಂತಾವುತ್ತೊ?
ಮಂಗನ ಹಿಡಿತ್ತ ಜೆನ ಪುಟ್ಟಣ್ಣನ ಚೆಂಙಾಯಿಯೇ ಆದ ಕಾರಣ ರಜಾ ಸಲಿಗೆ ಇದ್ದತ್ತು ಬೈಲಿನೋರಿಂಗೆ.
ಕಾರ್ಯಕ್ಕೆ ಸಮ್ಮಂದಪಟ್ಟ ಹಲವು ವಿಚಾರಂಗೊ ಮಾತಾಡಿಗೊಂಡಿತ್ತಿದ್ದೆಯೊ ಎಂಗೊ. ಕೆಲವು ಸಂಗತಿ ನೆಂಪಿದ್ದು; ಅದರ ಮಾತಾಡುವನೋ ಇಂದು?

ಮಂಗನ ಹಿಡಿಸ್ಸು ಸುಲಭದ ಕೆಲಸ ಅಲ್ಲ, ಆರಿಂಗಾರೂ ಅಂದಾಜಿ ಅಕ್ಕು.
ಹತ್ತು ಜೆನ ಮನುಷ್ಯರನ್ನೇ ಒಂದು ದಿಕ್ಕೆ ಮಾಡ್ಳೆ ಎಡಿಯದ್ದ ಈ ಕಾಲಲ್ಲಿ ಕಾಡಿನ ಮಂಗಂಗಳ ಪೂರ್ತ ಹಿಡುದು ತಂದು ಒಂದು ಪೆಟ್ಟಿಗೆಲಿ ತುಂಬುಸುಸ್ಸು ಹೇದರೆ!
ಅಂಬಗ ಅದಕ್ಕೆ ಅದರನ್ನೇ ಆದ ಇಕ್ನೀಸುಗೊ – ಲೋಟನುಗೊ – ಅದೆಂತರ? ಪುಟ್ಟಣ್ಣನ ಚೆಂಙಾಯಿ ಮಂಗನ ಹಿಡಿತ್ತ ಚಂದ್ರಂಗೆ ಅರಡಿಗು.

~

ಒಂದು ದಿನ ಉದಿಉದಿ ಅಪ್ಪಗಳೇ ಒಂದು ಜೀಪಿಲಿ ಸೀತ ಬಂತು, ಆಚಮನೆ ಜಾಲಿಂಗೆ.
ಜೀಪು ಬಂದದು ಗೊಂತಾದಪ್ಪದ್ದೇ – ಕುತೂಹಲ ಆತು ನವಗೆ. ಮಂಗನ ಹಿಡುದ ಮತ್ತೆ ಆದರೆ ಜೀಪು ಬೇಕು, ಈಗಳೇ ಎಂತಗೆ ಜೀಪು?
ಬಪ್ಪಗಳೇ ತಂತೋ ಹಾಂಗಾರೆ ಹಿಡಿಯಲಿಪ್ಪ ಮಂಗಂಗಳ – ಹೇದು ಕಂಡತ್ತು! 😉
ನಾವು ಆಚಮನೆ ಜಾಲಿಂಗೆತ್ತುವಗ ಜೀಪಿಂದ ಇಳುಶಿಗೊಂಡು ಇತ್ತವು. ಎಂತರ? ಕಿಟುಕಿ ನಮುನೆಯ ಕಬ್ಬಿಣದ ಬಲೆಗೊ. ಹಲವು ಗಾತ್ರದ್ದು. ಕೆಲವು ಉದ್ದ, ಕೆಲವು ಸಣ್ಣ.
ಈ ಬಲೆಹಲಗೆಗಳ ಸರಿಗೆಲಿ ಕಟ್ಟಿ ಪೆಟ್ಟಿಗೆ ಮಾಡ್ತದಡ – ಮಂಗನ ಹಿಡಿಸ್ಸು ಇದರ್ಲೇಡ.

ಜಾಲಿನೊರೆಂಗೆ ಜೀಪಿಲೇ ತಂದರೂ – ಜಾಲಿಂದ ತೋಟಕ್ಕೆ ಹೊತ್ತೊಂಡೇ ಹೋಯೇಕಟ್ಟೆ ಇದಾ; ಜೀಪಿಲಿ ಹೋಪಲೆಡಿಯ.
ಎಡಪ್ಪತ್ಯ ತೋಟಕ್ಕೆ ಜೀಪು ಹೋಕೋ ಏನೋ, ಆಚಮನೆ ತೋಟಕ್ಕೆ ಹೋಗ ಇದಾ! ಅದಿರಳಿ.
ಹಾಂಗೆ ತೋಟಕ್ಕೆ ಹೊತ್ತದು ಒಂದೊಂದೇ ತುಂಡುಗಳ.
ಪಾಪ, ಓಂಗಲೆ ಹೋದ ಒಪ್ಪಣ್ಣಂಗೂ ಆ ಕೆಲಸ ಸಿಕ್ಕಿತ್ತು! ಜಾಲ ತಲೆಂದ ತೋಟದ ತಲೆ ಒರೆಂಗೆ – ಹೋ, ಹೇಳುವಗಳೇ ಬಚ್ಚುತ್ತು ನವಗೆ – ಹೊತ್ತದು. :-
ನಾವು ಮಾಂತ್ರ ಅಲ್ಲ, ಚಂದ್ರ, ದೊಡ್ಡಣ್ಣ, ಪುಟ್ಟಣ್ಣ, ಕುಂಞಣ್ಣ – ಎಲ್ಲೋರುದೇ. ಗಾಯತ್ರಿಯೂ ಸೇರ್ತಿತೋ ಏನೊ; ಅದರ ತಂಗೆಯ ನೋಡಿಗೊಂಬಲಿದ್ದಿದಾ; ಹಾಂಗೆ ಪುರುಸೊತ್ತಿತ್ತಿಲ್ಲೆ!
ಅಂತೂ – ಗೂಡಿಂಗೆ ಬೇಕಾದ ಬಲೆಗೊ ಪೂರ ತೋಟಕ್ಕೆತ್ತಿತ್ತು.
~
ತೋಟಲ್ಲಿ ಮಂಗಂಗೊ ಇಲ್ಲದ್ದ ಹೊತ್ತು ನೋಡಿಗೊಂಡು ಈ ಗೂಡುಕಟ್ಟುವ ಕೆಲಸ ಸುರುಮಾಡಿತ್ತು, ಚಂದ್ರ.
ತರವಾಡುಮನೆ ಮಾಣಿ ವಿನು ಹಲವು ಇಸ್ಪೇಟು ಪಿಡಿಗಳ ಮಡಗಿ ಮನೆ ಕಟ್ಟುತ್ತನಿಲ್ಲೆಯೋ – ಅದೇ ನಮುನೆಲಿ – ಹಲವು ತುಂಡುಗಳ ಮಡಗಿ ಜೋಡುಸಿ ಒಂದು ದೊಡಾ ಗೂಡು ಮಾಡಿತ್ತು.
ಆ ಗೂಡಿಂಗೆ ಮೂಡಹೊಡೆಲಿಯೂ – ಪಡು ಹೊಡೆಲಿಯೂ ಎರಡು ಬಾಗಿಲುಗೊ. ಎಂತಗೆ?
ಮಂಗಂಗೊ ಹೋಪಲೆ. ಒಂದು ಹೋಪಲೆ – ಇನ್ನೊಂದು ಬಪ್ಪಲೆ ಹೇಳುಗು ಬೋಚಬಾವ°; ಆದರೆ ಇದು ಎರಡುದೇ ಹೋಪಲೇ ಇಪ್ಪದು.
ಒಂದೇ ಬಾಗಿಲಾದರೆ ಅವಕ್ಕೆ ಸಂಶಯ ಬತ್ತಾಡ, ಇದರ್ಲಿ ಎನ್ನಂದ ಮದಲಾಣ ಮಂಗ ಹೋಗಿ ಒಳ ಬಿದ್ದಿದು – ಹೇದು. ಹಾಂಗೆ, ಇದಲ್ಲದ್ದರೆ ಆಚದು – ಹೇದು ಎರಡು ಬಾಗಿಲು.

ಆ ದೊಡ್ಡ ಗೂಡಿನ ಒಳ ಮತ್ತೆರಡು ಬಲೆ ಮಡಗಿ ಸಣ್ಣದೊಂದು ವಿಭಾಗ ಮಾಡಿತ್ತು.
ದೊಡ್ಡ ಗೂಡಿನ ಒಳ ಒಂದು ಸಣ್ಣ ಕೋಣೆ – ಇದೆಂತಗೆ? – ಬಾಳೆಗೊನೆ ನೇಲುಸಲೆ!
ಗೂಡಿನ ಒಳಾಣ ಗೂಡಿನ ಒಳ ಬಾಳೆಗೊನೆ ಇಪ್ಪದು. ಆ ಬಾಳೆಹಣ್ಣಿನ ಆಶೆಗೆ ಹೆರಾಣ ಒಂದು ಗೇಟು ದಾಂಟಿಂಡು ಬಂದು, ಅದರೊಳ ಇಪ್ಪ ಇನ್ನೊಂದು ಗೂಡಿಂಗೆ ಮಂಗಂಗೊ ಬತ್ತವು.
ಎರಡೂ ಹೊಡೆಲಿ ಬಾಗಿಲಿಪ್ಪ ಕಾರಣ ಕೆಲವು ಈಚಹೊಡೆಲಿ, ಕೆಲವು ಆಚ ಹೊಡೆಲಿ – ಅವರವರ ಕೊಶಿಲಿ! 😉

ಗೂಡಿಂದ ಹತ್ತೈವತ್ತು ಮಾರು ದೂರಲ್ಲಿ ರಜ ಸೋಗೆ-ಮಡ್ಳುಗಳ ಕಟ್ಟಿ ಮರೆ ಮಾಡಿಗೊಂಡತ್ತು. ಶಾಸ್ತಾವು ಗುಡಿಯ ನಮುನೆ – ಸಣ್ಣದು.
ಒಂದು ಕುರ್ಶಿ ಮಡಗಿ ಕೂಪಷ್ಟೇ ಜಾಗೆ. ಹೆಸರೇ ಹೇಳ್ತ ಹಾಂಗೆ ಅದು ಮರೆ.
ಅಲ್ಲಿ ಹುಗ್ಗಿ ಕೂರ್ಸು. ಎಂತಗೆ ಹೇದು ಅಂದಾಜಿ ಆಯಿಕ್ಕಲ್ಲದೋ ಹೆದರಿ ಅಲ್ಲ; – ಮಂಗಂಗೊ ಆ ಗೂಡಿನ ಗೇಟು ದಾಂಟಿ ಒಳ ಹೋದಪ್ಪದ್ದೇ, ಈ ಮರೆಂದ ಗೇಟು ಹಾಕಲೆ.
ಗೇಟು ಹಾಕುಸ್ಸು ಹೇಂಗೆ – ಗೇಟಿಂಗೆ ಒಂದು ಸರಿಗೆಯ ಸಿಕ್ಕುಸಿ, ಈ ಮರೆ ಒರೆಂಗೆ ತಂದು ಮಡಗಲಿದ್ದು.
ಮಂಗ ಗೂಡಿನ ಒಳ ಹೋದಪ್ಪದ್ದೇ ಗೇಟು ಎಳದರೆ ಆ ಮಂಗಂಗೆ ಹೆರ ಬಪ್ಪಲೆ ಜಾಗೆ ಇಲ್ಲೆ. ಆದರೆ ಮತ್ತೂ ಒಳ ಹೋಗಿ – ಇನ್ನಾಣ ಗೂಡಿಲಿ – ಬಾಳೆಹಣ್ಣು ತಿಂಬಲೆ ಜಾಗೆ ಇದ್ದು ಇದಾ.
ಒಂದು ವೇಳೆ ಅದು ಹೋಗದ್ದರೆ ಈ ಚಂದ್ರನೇ ಹೋಗಿ ಆ ಮಂಗನ ಒಳಾಣ ಗೂಡಿಂಗೆ ಹೋಗುಸುದು.
ಒಳಾಣ ಗೂಡಿನ ಬಾಗಿಲು ಹಾಕಿತ್ತು; ಹೆರಾಣ ಗೇಟು ಮತ್ತೆ ತೆಗದತ್ತು – ಇನ್ನಾಣ ಮಂಗಂಗೆ ಬಪ್ಪಲೆ ಸ್ವಾಗತಮ್ ಹೇದು.
ಮತ್ತೆ ಬಂದು ಪುನಾ ಮರೆಲಿ ಕೂದುಗೊಂಬದು.

ಮರೆಲಿ ಕೂಪದುದೇ ಒಂದು ಮಹಾ ಬಂಙದ ಕೆಲಸವೇ. ಕೆಲಸ ಇದ್ದುಗೊಂಡು ಬಂಙ ಅಲ್ಲ; ಕೆಲಸ ಏನೂ ಇಲ್ಲದ್ದ ಬಂಙ.
ಒಂದು ಹಗಲು ಇಡೀ ಅಂತೇ ಕೂದುಗೊ ಹೇದರೆ ನಿಂಗಳಿಂದ ಎಡಿಗೋ?
ಉದಿ ಬೆಣ್ಚಿ ಆಯೇಕಾರೆ ಅದರ ಒಳದಿಕೆ ಹೋಗಿ ಕೂದುಗೊಂಡ್ರೆ, ಇರುಳು ಅಪ್ಪನ್ನಾರವೂ ಹಂದಲಾಗ.
ಮಂಗಂಗೊಕ್ಕೆ– ಅದಾ, ಆರೋ ಅಲ್ಲೆ ಬಪ್ಪದರ ಕಂಡಿದೆ – ಹೇದು ಗೊಂತಪ್ಪಲಾಗ.
ಹಾಂಗೆ ಅವರ ಒಯಿವಾಟು ಸುರು ಅಪ್ಪ ಮದಲೇ ಈ ಜೆನ ಹೋಯೇಕು; ಅವರ ತಿನ್ನಾಣ ಮುಗುದ ಮತ್ತೆಯೇ ಈ ಜೆನ ಅಲ್ಲಿಂದ ಹೆರಡೇಕಟ್ಟೆ.
ಎಡಕ್ಕಿಲಿ ಬಾಯಿ ಚೆಪ್ಪೆ ಆತುಕಂಡ್ರೆ ಬೀಡಿ ಎಳವಲೂ ಇಲ್ಲೆ! 😉
~
ಆತು, ಇದಿಷ್ಟೇ ಆದರೆ ಮಂಗನ ಹಿಡಿತ್ತ ಸ್ವಾರಸ್ಯ ಇರ್ತಿತಿಲ್ಲೆ. ಬೈಲಿಂಗೆ ಹೇಳೇಕಾದ ಅಗತ್ಯವೂ ಇರ್ತಿತಿಲ್ಲೆ!
ಚಂದ್ರ ಬಂತು, ಗೂಡು ಮಡಗಿತ್ತು, ಮಂಗಂಗೊ ಬಂದವು; ಬಂದಹಾಂಗೆ ಬಾಗಿಲು ಎಳದತ್ತು, ಗೂಡಿಲಿ ತುಂಬುಸಿತ್ತು, ತೆಕ್ಕೊಂಡು ಹೋತು – ಹೇದು ಒಂದೇ ಗೆರೆಲಿ ಮುಗಿಶಲಾವುತಿತು.
ಕುತೂಹಲ ಇಪ್ಪದು ಚಂದ್ರ° ಹೇಳಿದ ವಿವರ- ವಿಶಯಲ್ಲಿ!
~
ಇಷ್ಟನ್ನಾರ ಕಾಣದ್ದ ಹೊಸ ಬಲೆಬಲೆ ಮನೆಯ, ಅದರೊಳ ಧಾರಾಳಕ್ಕೆ ಮಡಗಿದ ಬಾಳೆಗೊನೆಯ ಕಂಡ ಮಂಗಂಗೊಕ್ಕೆ ಅದು ಅಭ್ಯಾಸ ಅಪ್ಪಲೇ ನಾಕೈದು ದಿನ ಹಿಡಿತ್ತಾಡ.
ಮಂಗಂಗೊ ಬಂದು ಒಳ ಹೋಗಿ, ಹೆರ ಬಂದು, ಗೂಡಿನ ಮೇಗೆ ಹತ್ತಿ, ಹಾರಿ, ಗಡಗಡ ಆಡುಸಿ – ಎಂತೆಲ್ಲ ರೀತಿಲಿ ಪರಿಚಯ ಮಾಡಿಗೊಂಬಲೆ ಎಡಿಗೋ ಅಷ್ಟೆಲ್ಲವನ್ನೂ ಮಾಡಿಗೊಳ್ತವು.
ಆ ಸಮೆಯಲ್ಲಿ ಬಾಗಿಲು ತಪ್ಪಿಯೂ ಎಳವಲಾಗ ಇದಾ – ಅಂತೇ ಬಿಡೇಕು.
ನಾಕೈದು ದಿನಲ್ಲಿ ಹತ್ತನ್ನೆರಡು ಬಾಳೆಗೊನೆ ಮುಗಿವಲೂ ಸಾಕು; ಆಶೆಮಾಡ್ಳಾಗ ನಾವು.
ಹಾಂಗೆ, ಹರೀಶನ ಗೂಡಂಗುಡಿಂದ ತಂದ ಬಾಳೆಗೊನೆಗೊ ಧಾರಾಳ ಇದ್ದತ್ತು ಅಷ್ಟಪ್ಪಗ ಆಚಮನೆಲಿ.
ಕೆಲವೆಲ್ಲ ಹೆಚ್ಚು ಹಣ್ಣಾಗಿ ಕಪ್ಪಾಗಿಂಡೂ ಇದ್ದತ್ತು; ಮರದಿನ ಗೂಡಿಲಿ ಕಟ್ಟಿ ಮುಗುಶಲೆ. ಮಾಷ್ಟ್ರಮನೆಲಿ ಆಗಿದ್ದರೆ ಅತ್ತೆ “ಛೇ, ಬಾಳೆಣ್ಣು ಅಂತೇ ಹಾಳಾವುತ್ತನ್ನೇ” ಹೇದು ಯೇವಾಗ ಬಾಳೆಣ್ಣು ಹಲುವ ಮಾಡಿ ಮುಗುಶುತಿತವು. ಅದಿರಳಿ.
ಉದಿ ಬೆಣ್ಚಿ ಅಪ್ಪ ಮದಲೇ ಬಾಳೆಗೊನೆ ಕಟ್ಟೇಕು. ಮುಗುದಾಂಗೆ ಇನ್ನೊಂದು ಗೊನೆ.
ಅಂತೂ ಮಂಗಂಗೊಕ್ಕೆ ಗೂಡಿನ ಪರಿಸರವ, ಅದರೊಳ ಬಾಳೆಣ್ಣಿಪ್ಪದರ ಅಭ್ಯಾಸ ಮಾಡುಸೇಕು.
~
ಹಾಂಗೆ ಒಂದರಿ ಅಭ್ಯಾಸ ಆದಮತ್ತೆ ಆ ಗೂಡಿನ ಅವರ ಸ್ವಂತ ಮನೆಯ ಹಾಂಗೇ ಕಾಣ್ತವಾಡ ಮಂಗಂಗೊ.
ಇಷ್ಟೆಲ್ಲ ಬಂಙಬಂದು ತೋಟ ಗುಡ್ಡೆ ಇಡೀ ಸುತ್ತುದೆಂತಗೆ, ನಮ್ಮ ಎಲ್ಲೋರಿಂಗೂ ಅಪ್ಪಷ್ಟು ಬಾಳೆಣ್ಣು ಇಲ್ಲೇ ಇದ್ದು – ಹೇದು ಕೊಶೀಲಿ ಸುರುಮಾಡ್ತವಾಡ.
ಹಾಂಗೆ ಅದರಿಂದ ಮತ್ತೆಯೇ ಮಂಗನ ಹಿಡಿತ್ತ ಕಾರ್ಯ ಸುರು.
ಹಿಡಿವಲೆ ಮಾಡಿದ ಮತ್ತೆ ಬಾಳೆಹಣ್ಣು ಮದಲಾಣಷ್ಟು ಧಾರಾಳ ಇಲ್ಲೆ ಇದಾ, ಹದಾಕೆ!

ಮಂಗನ ಕುಂಞಿಗೊಕ್ಕೆ ರಜ ಉತ್ಸಾಹ – ಕುತೂಹಲ ಜಾಸ್ತಿ ಇದಾ.
ಆಚಾರಿ ಮಡಗಿದ ಕೀಲು ತೆಗದ ಕತೆ – ನಿಂಗೊಗೆ ನೆಂಪಿಕ್ಕು, ಅಲ್ಲದೋ? ಅದಾ, ಬೀಲ ಚೆರಕ್ಕಿದ ಸಂಗತಿ ನೆಂಪಾಗಿ ಚೆನ್ನೈಭಾವಂಗೆ ನೆಗೆಬಂತು! 😀
ಹಾಂಗೆ, ಸುರೂವಿಂಗೆ ಕುಂಞಿ ಮಂಗಂಗಳೇ ಬತ್ತವಾಡ ಸಾಮಾನ್ಯವಾಗಿ. ಒಂದು ವೇಳೆ ದೊಡ್ಡ ಮಂಗಂಗೊ ಬಂದರೂ ಓಡುಸೇಕಡ.
ಈಗ ಎಷ್ಟೇ ಓಡುಸಿರೂ ದೂರ ಹೋವುತ್ತವಿಲ್ಲೆ, ಗೂಡು ಅವರದ್ದೇ ಹೇದು ಅವಕ್ಕೆ ನಿಘಂಟಾಯಿದಲ್ಲದೋ? ಅಲ್ಲೇ ಮರ ಹತ್ತಿ ಕೂರ್ತವು ಅಷ್ಟೇ.

ಕುಂಞಿಮಂಗಂಗೊ ಹೆಚ್ಚಿನವು ಗೂಡಿನೊಳದಿಕೆ ಆದಪ್ಪದ್ದೇ, ಹೆರಾಣ ಗೇಟಿನ ಟಪ್ಪನೆ ಹಾಕಿತ್ತು.
ಮರೆಂದ ಎದ್ದು ಗೇಟಿನ ಬುಡಕ್ಕೆ ಹೋಗಿ – ಗೂಡಿಲೇ ಹೆರಾಣ ಗೂಡಿಂದ ಒಳಾಣ ಕೋಣಗೆ – ಬಾಳೆಹಣ್ಣಿನ ಹತ್ತರಾಣದ್ದಕ್ಕೆ ಓಡುಸುದು.
ಎಲ್ಲ ಕುಂಞಿಗಳೂ ಬಾಳೆಹಣ್ಣಿನ ಹತ್ತರೆ ಇದ್ದವೀಗ. ಅಲ್ಲಿಂದ ಹೆರಾಣದ್ದಕ್ಕೆ ಬಾರದ್ದ ಹಾಂಗೆ ಕುಂಞಿಗೇಟಿನ ಹಾಕಿಕ್ಕಿ, ಹೆರಾಣ ಗೇಟಿನ ಪುನಾ ತೆಗದತ್ತು.
ಈಗ?

ಅಯ್ಯೋ – ಮಕ್ಕೊ ಪೂರಾ ಒಳ ಇದ್ದವು ಹೇದು ಹೆಣ್ಣು ಮಂಗಂಗೊ ಬತ್ತವಾಡ. ಅವು ಈಗ ಬಪ್ಪದು ಬಾಳೆಹಣ್ಣಿನ ಆಸೆಂದಲೂ ಹೆಚ್ಚು, ಮಕ್ಕಳ ಮೇಗಾಣ ಪ್ರೀತಿಲಿ.
ನೋಡಿ – ಮಂಗನ ಸಮಾಜಲ್ಲೇ ಆ ಬಂಧ – ಸಂಸ್ಕಾರ ಎಷ್ಟಿರ್ತು ಹೇದು!
ಹೆಣ್ಣು ಮಂಗಂಗೊ ಪೂರ ಗೇಟುದಾಂಟಿ ಗೂಡಿನೊಳ ಬಪ್ಪಾಗ ರಪಕ್ಕನೆ ಎರಡ್ಣೇ ಸರ್ತಿ ಗೇಟು ಹಾಕುದು.
ಪುನಾ, ಗೂಡಿನ ಬುಡಕ್ಕೆ ಹೋಗಿ ಹೆಣ್ಣುಮಂಗಂಗಳನ್ನೂ – ಬಾಳೆಹಣ್ಣಿಪ್ಪ ನೆಡುಕೋಣೆಗೆ – ಕುಂಞಿಮಂಗಂಗಳೊಟ್ಟಿಂಗೆ ಮಾಡುದು.
ಹಾ – ಈ ಸರ್ತಿ ಸೋತತ್ತು; ನಾವು ಗೂಡಿನೊಳ ಬಾಕಿ ಆತು – ಹೇದು ಗೊಂತಪ್ಪದ್ದೇ ಕ್ರಿಯೋ ಕ್ರಿಯೋ ಹೇದು ಬೊಬ್ಬೆ ಹೊಡೆತ್ತವಾಡ.

ಹೆಣ್ಣು ಮಂಗಂಗೊ ಒಳ ಬಾಕಿ ಆದವು ಹೇದು ಗೊಂತಪ್ಪದ್ದೇ, ಗೆಂಡುಮಂಗಂಗಳೂ ಬತ್ತವಾಡ. ಪೌರುಷ ತೋರ್ಸಿ ರೈಸಲೆ! 😉
ಒಂದೊಂದೇ ಬಂದು ಬಂದು ಹೆರಾಣ ಗೇಟು ದಾಂಟಿ ಅಪ್ಪಗ – ಮತ್ತೊಂದರಿ ಗೇಟು ಹಾಕುಸ್ಸು.
ಪುನಾ ಗೂಡಿನ ಹತ್ತರೆ ಹೋಗಿ ಅವರ ಒಳಾಣ ಗೂಡಿಂಗೆ ಸೇರ್ಸುತ್ತದು ಮತ್ತಾಣ ಕೆಲಸ.

ಸುರೂವಿಂಗೆ ಕುಂಞಿಮಂಗಂಗೊ, ಮತ್ತೆ ಹೆಣ್ಣು ಮಂಗಂಗೊ, ಅದಾದ ಮತ್ತೆ ಗೆಂಡುಮಂಗಂಗೊ – ಇವಿಷ್ಟೂ ಬಂದು ಗೂಡಿನೊಳ ಬಾಳೆಹಣ್ಣಿನ ಕೋಣೆಲಿ ಬಾಕಿ!
ಇನ್ನೆಂತರ – ಇನ್ನು ಎಜಮಾನ ಬಪ್ಪಲೆ ಬಾಕಿಪ್ಪದು.
ಪ್ರತಿ ಮಂಗನ ಪುಂಡಿಂಗೂ ಒಂದು ಎಜಮಾನ ಇರ್ತು.
ಅದು ಪ್ರಥಮ ಪ್ರಜೆ. ಒಳುದೋರು ಮರಿಯಾದಿ ಕೊಡ್ತವು, ಇದು ಮರಿಯಾದಿ ತೆಕ್ಕೊಳ್ತು.
ಇಷ್ಟೆಲ್ಲ ಅಪ್ಪಗಳೂ ಆ ಎಜಮಾನ ಗೂಡಿಂಗೆ ಬಂದಿರ್ತಿಲ್ಲೇಡ – ರಕ್ಷಣಾ ಹಿತ ದೃಷ್ಟಿಂದ ದೂರದ ಮರಲ್ಲಿ ನಿಂದು ನೋಡಿಗೊಂಡಿರ್ತಾಡ!
ತನ್ನ ಪುಂಡಿನ ಮಂಗಂಗೊ ಕಷ್ಟಲ್ಲಿದ್ದು ಹೇದು ಗೊಂತಪ್ಪಾಗ ಅನಿವಾರ್ಯವಾಗಿ ಎಜಮಾನ – ಆ ದೊಡ್ಡಮಂಗಂದೇ ಬಂದುಬಿಡ್ತು.
ಅದನ್ನೂ ನೂಕಿ ಮಧ್ಯದ ಕೋಣಗೆ ಮಾಡ್ತದು ಒಂದು ಹಂತ.

ಎಜಮಾನನೇ ಗೂಡಿನೊಳ ಆತು ಹೇದು ಆದರೆ, ಅಲ್ಲಿ ಇಲ್ಲಿ ಮರಲ್ಲಿ ಬಾಕಿ ಇದ್ದ ಚಿಲ್ಲಿಪಿಲ್ಲಿ ಮಂಗಂಗೊ ಪೂರ ಬಂದು ಸೇರ್ತವು.
ಮತ್ತೆ ಓಡುಸಿರೂ ಹೋಗವು – ಅವರ ಎಜಮಾನ ಇಪ್ಪಲ್ಲೇ ಅವಿಕ್ಕಷ್ಟೆ ಇದಾ.
ಹಾಂಗೆ, ಕೊನೆಯ ಸುತ್ತು ಆಗಿ ಅವರನ್ನೂ ಒಳ ಹಾಕಿಂಬದು ಕೊನೇಯ ಹಂತ.

  1. ಕುಂಞಿಗೊ,
  2. ಕುಂಞಿಗಳ ರಕ್ಷಣೆಗೆ ಮಾತೃ ಹೃದಯದ ಹೆಣ್ಣು ಮಂಗಂಗೊ,
  3. ಅವರ ರಕ್ಷಣೆಗೆ ಪೌರುಷದ ಗೆಂಡುಮಂಗಂಗೊ,
  4. ಅವರನ್ನೂ ಒಳಿಶಿಗೊಂಬಲೆ ಪುಂಡಿನ ಎಜಮಾನ.
  5. ಎಜಮಾನನ ಅಪಾಯ ಕಂಡ ಒಳುದ ಎಲ್ಲೋರುದೇ ಬಂದು ಬಿಡ್ತವು – ಮಂಗನ ಹಿಡಿತ್ತ ಕಲೆಯ ಗುಟ್ಟು ಇದುವೇ.

ಹೇಂಗೆ – ಮಂಗನ ಹಿಡಿತ್ತರಲ್ಲಿ ಎಂತಾ ಇಂಜಿನಿಯರು ಲೆಕ್ಕಾಚಾರ ಇದ್ದು ಅಪ್ಪೋ!?

~

ಹೀಂಗೆ ಇಡೀ ಪುಂಡೇ ಈ ಗೂಡಿನೊಳ ಆದ ಮತ್ತೆ – ತೆಕ್ಕೊಂಡು ಹೋಗಿ ದೂ..ರದ ಕಾಡಿಂಗೆ ಬಿಡೆಕ್ಕಪ್ಪೋ?
ಹೇಂಗೆ? ಈ ಗೂಡನ್ನೇ ಹೊರ್ಸೋ? ಅಲ್ಲ.
ಅದಕ್ಕೇದು ಸಣ್ಣ ಗೂಡಿದ್ದು. ಈಗ ಇಪ್ಪ ಹೂಡಿನ ಕಾಲಂಶವೂ ಇಲ್ಲೆ, ಅಷ್ಟು ಸಣ್ಣದು.
ಅದು ಗೂಡೇ – ಹಲಗೆಗಳ ಕಟ್ಟಿ ಮಾಡ್ತದು ಅಲ್ಲ, ಗೂಡಾಗಿಯೇ ಕಬ್ಬಿಣದ ಅಂಗುಡಿಂದ ತಂದ ನಮುನೆದು.
ಚಂದ್ರನತ್ತರೆ ಆ ಗೂಡು ಇದ್ದಿದಾ. ಮಂಗಂಗೊ ಪೂರ ಒಳ ಆದ ಮತ್ತೆ ಗೂಡುಗಳ ಬಾಯಿಗೆ-ಬಾಯಿ ಮಡಗಿ ಒಂದರಿಂದ ಒಂದಕ್ಕೆ ಪಗರುಸುದು.
ಒಂದು ಹೊಡೆಲಿ ನಿಂದು ಓಡುಸಿರೆ ಇನ್ನೊಂದು ಹೊಡೆಂಗೆ ಓಡ್ತವಿದಾ- ಹಾಂಗೆ ಒಂದು ಗೂಡಿಂದ ಇನ್ನೊಂದು ಗೂಡಿಂಗೆ ಓಡುಸುದು – ಅದರ್ಲಿಯೂ ಒಗ್ಗಟ್ಟಿದ್ದನ್ನೇ, ಒಬ್ಬ ಹೋದಪ್ಪದ್ದೇ ಎಲ್ಲೋರುದೇ ಹೋಗಿಗೊಳ್ತವಾಡ.
ಆ ಸಣ್ಣಗೂಡಿನ ನಾಕುಜೆನ ಸೇರಿ ಒಪಾಸು ಆಚಮನೆ ಜಾಲಿಂಗೆ ತಂದದು, ಜೀಪಿಲಿ ಮಡಗಿಂಡು ಕಾಡಕರೆಂಗೆ ಹೋದ್ಸು.
ಕಾಡಿಲಿ ಈ ಗೂಡಿನ ಬಾಗಿಲು ತೆಗದರೆ ಸಾಕಡ – ಅಯ್ಯೋ ಉಳ್ಳೋ ಹೇದು – ಅವರ ಹೊಸಮನೆಗೆ ಓಡಿಗೊಳ್ತವಾಡ, ಅದರ್ಲಿಯೂ ಒಗ್ಗಟ್ಟೇ.
~
ಚಂದ್ರ° ಹೇಳಿಗೊಂಡೇ ಹೋತು; ಎಷ್ಟೋ ಒರಿಶದ ಸರುವೀಸಿನ ನಮುನೆ.
ಕೇಳಿಗೊಂಡಿದ್ದ ಒಪ್ಪಣ್ಣಂಗೆ ಎಂತ ಅನುಸಿದ್ದು ಹೇದರೆ – ಮಂಗಂಗಳ ಪುಂಡಿಲಿಯೂ ಒಂದು ಕ್ರಮಾಗತ ಸಾಮಾಜಿಕ ಜೀವನವೇ ಕಾಣ್ತು; ಒಗ್ಗಟ್ಟೇ ಕಾಣ್ತು.
ಮಂಗಂಗಳ ಪುಂಡಿನ ಹಿಡಿವಲೆ ಈ ಒಗ್ಗಟ್ಟೇ ಅಸ್ತ್ರ ಆಗಿ ಬಳಕೆ ಆವುತ್ತು!
ಪುಂಡಿನ ಇಡೀಯಾಗಿ ಹಿಡಿವಲೆ ಈ ಒಗ್ಗಟ್ಟೆ ಕಾರಣ” ಹೇಳ್ತದು ಚಂದ್ರನ ಮಾತಿಂದ ಅರಡಿಗಾತು.
~

ಮೂರೂರಿಲಿ ರಾಮಕಥೆ ಆಗಿಂಡಿದ್ದು, ನವಗೆ ಗೊಂತಿಪ್ಪದೇ.
ಸೀತೆಯ ಹುಡ್ಕಿಂಡು ದಕ್ಷಿಣ ಭಾರತಕ್ಕೆ ಬಂದ ರಾಮಂಗೆ ಮಂಗಂಗೊ ಮಾಡಿದ ಉಪಕಾರ ವಿಶೇಷವಾಗಿ ರಾಮಕತೆಲಿ ನವಗೆ ನೆಂಪುಮಾಡಿದವು ಗುರುಗೊ.
ಸುಗ್ರೀವ, ಅಂಗದಾದಿ ರಾಜರಲ್ಲದ್ದೆ, ಹನುಮಂತನ ಹಾಂಗಿದ್ದ ಸೇವಕರೂ ಇತ್ತಿದ್ದವು.

ಅಂತೂ- ಈ ದಕ್ಷಿಣ ದೇಶಂಗಳ ಕಾಡಿಲಿ ಮಂಗಂಗೊ ಇತ್ತಿದ್ದವು ಹೇದು ಉತ್ತರ ಕಾಡಿಲಿ ಜೆಪಮಾಡಿದ ವಾಲ್ಮೀಕಿಗೂ ಗೊಂತಿತ್ತು.
ವೇದ ಪುರಾಣ ಕಾಲಂದಲೇ ನಮ್ಮ ಊರಿಲಿ ಮಂಗಂಗೊ ಇದ್ದ ಕಾರಣ – ಅವರ ಅಳಿಶಲೆ ಎಡಿಯ; ಅತವಾ ಅಳಿಶುದು ಸಾಧುವೂ ಅಲ್ಲ.

ಬೈಲಕರೆಲಿ ಅದರಷ್ಟಕ್ಕೇ ಇದ್ದಿದ್ದ ಮರಂಗಳ, ಕಾಡುಗಳ ನಾವೇ ಕಡುದಿಕ್ಕಿ – ಮಂಗಂಗೊಕ್ಕೆ ಏನೂ ತಿಂಬಲೆಡಿಯದ್ದ ನಮುನೆಲಿ ಮಾಡಿ ಹಾಕಿ, ಅಕೇರಿಗೆ ಅವು ತೋಟಕ್ಕೆ ಬಪ್ಪಗ “ಮಂಗಂಗೊ ತೋಟಕ್ಕೆ ಬತ್ತವೂ – ಬೊಂಡ ಎಳೆತ್ತವೂ” ಹೇದು ಬೊಬ್ಬೆ ಹೊಡೆಸ್ಸು ಬುದ್ಧಿಬೆಳದ ’ಮಂಗಂಗಳ’ ಕ್ರಮ ಇದಾ! 🙁
ಅದೇನೇ ಇರಳಿ, ಜೀವನೋಪಾಯಕ್ಕೆ ತೋಟ ಇದ್ದು – ತೋಟಲ್ಲಿ ಫಲವಸ್ತು ಇದ್ದು; ಜಾಗ್ರತೆ ಮಾಡುಸ್ಸು ನಮ್ಮ ಹೊಟ್ಟಗೊಳ್ಳೆದು! ಅಲ್ಲದೋ?
ಮಂಗಂಗಳ ಹಿಡುದರೆ ಮೋಸ ಇಲ್ಲೆ, ಹಿಡುದು ಅವಕ್ಕೆ ಬೇನೆ ಮಾಡದ್ದ ನಮುನೆಲಿ ಯೇವದಾರು ಕಾಡಿಂಗೆ ಬಿಟ್ರಾತು.
ಅವರ ಒಗ್ಗಟ್ಟಿಲಿ ಬದ್ಕಲೆ ಬಿಟ್ರಾತು.

ಅವರ ಹಿಡಿಯಲೂ ಒಗ್ಗಟ್ಟೇ ಸುಲಬ ಅಪ್ಪದು ಹೇಳ್ತ ಸಂಗತಿ ಒಪ್ಪಣ್ಣಂಗೆ ಉಂಬ ಕುತೂಹಲಕಾರಿಯಾಗಿತ್ತು.

ಒಂದೊಪ್ಪ: ಒಗ್ಗಟ್ಟು ಬೇಕು; ಆದರೆ ಅಪಾಯಕ್ಕಪ್ಪಗ ವೈಯಕ್ತಿಕ ಆಲೋಚನೆಯೂ ಅರಡಿಯೇಕು. ಅಲ್ಲದೋ?

ಸೂ: ಆಚಮನೆಲಿ ಮಂಗನ ಹಿಡಿಶುವಗ ಬೈಲಕರೆ ಗಣೇಶಮಾವ ಕೆಲವು ಪಟ ತೆಗದಿತ್ತವು.
ಅವರತ್ರೆ ತುಂಬ ಪಟ ಇಕ್ಕು, ಕೆಲವರ ಇಲ್ಲಿ ನೇಲ್ಸಿದ್ದೆ. ನೋಡಿಕ್ಕಿ:

10 thoughts on “ಒಗ್ಗಟ್ಟಿನ ಮಂಗಂಗಳ ಹಿಡಿವಲೂ ಸುಲಭ ಆಡ..!

  1. ಒಪ್ಪಣ್ಣಾ, ಇದರ ಓದುವಗ ಆನು ಸಣ್ಣದಿಪ್ಪಗ ಬೊಂಡ ಎಳವಲೆ ಬಂದೊಡಿದ್ದ ಮಂಗನ ಓಡ್ಸಿದ ಸಂದರ್ಭ ನೆಂಪಾತಿದ ಅಲ್ಲಿ ಆಚಕರೆ ಗುಡ್ಡೇಹೊಡೆಲಿ ಒಂದುಸಣ್ಣ ಬಯಲು ಅಲ್ಲಿದ್ದ ತೆಂಗಿನಮರಕ್ಕೆ ಮಂಗ ಬಪ್ಪಾಗ ಎಂಗೊಲ್ಲ ಅಟ್ಟುಸಲೆ ಹೋಪದಿದ ಕಲ್ಲು ಇಡ್ಕುವಗ ಮಂಗಂಗೊ ಬೊಂಡದ ತೊಂಡಿನ ಇತ್ಲಾಗಿ ಇಡ್ಕುಗು ಮಿನಿಯ ಅಂತೂ ಮಂಗಂಗಳ ಒಗ್ಗಟ್ಟು ನವಗೊಂದು ಸಂದೇಶವೇ

  2. ಬಾಳೆ ಗೊನೆಯ, ಗೂಡಿಲ್ಲಿ ಮಡುಗಿ ಮಂಗಂಗಳ ಹಿಡಿತ್ತವು ಹೇಳಿ ಕೇಳಿತ್ತಿದ್ದೆ. ಆದರೆ ಇಷ್ಟೊಂದು ವಿವರ ಸಿಕ್ಕಿತ್ತಿದ್ದಿಲ್ಲೆ.
    ನಮ್ಮ ಬೆಳೆ ಕೈಗೆ ಸಿಕ್ಕೆಕ್ಕಾರೆ ಇದು ಅನಿವಾರ್ಯವೇ. ಕಾಡಿನ ನಾಶವೇ ಮಂಗಂಗೊ ಊರಿಂಗೆ ಬಪ್ಪಲೆ ಒಂದು ಕಾರಣ. ಅವರ ಕಾಡಿನ ವಾತಾವರಣಕ್ಕೆ ಬಿಡುವದು ಒಳ್ಳೆ ಕಾರ್ಯ.
    ಮಂಗಂಗಳ ಒಗ್ಗಟ್ಟೇ ಅವರ ಬಂಧನಕ್ಕೆ ಎಡೆ ಮಾಡಿ ಕೊಟ್ಟದು ಒಂದು ವಿಪರ್ಯಾಸ.
    ನಮ್ಮ ಒಗ್ಗಟ್ಟಿನ ಮುರಿವಲೆ ಹಲವಾರು ಜೆನಂಗೊ ಕುತಂತ್ರ ಮಾಡುಗು. ಅದಕ್ಕೆ ನಾವು ಬಲಿ ಬೀಳ್ಲಾಗ ಹೇಳಿ ನವಗೊಂದು ಪಾಠ ಇದು.

  3. ಮ೦ಗ೦ಗಳ ಹಿಡಿವ ಕೆಲಸದ ಮಾಹಿತಿಯೊಟ್ಟಿ೦ಗೆ ಪ್ರಾಣಿಗಳನ್ನೂ ಬದುಕ್ಕುಲೆ ಬಿಡೇಕು ಹೇಳುವ ಸ೦ದೇಶ ಚೆ೦ದಕ್ಕೆ ಬ೦ತು ಒಪ್ಪಣ್ಣ.ಶುದ್ದಿ ಓದೊಗ ಬೇಜಾರಾದರೂ ಕೃಷಿಕರ ಅನಿವಾರ್ಯತೆ ಅಲ್ಲದೋ?ಹಿಡುದು ಕಾಡಿ೦ಗೆ ಕಳುಗದ್ದೆ ಬೇರೆ ದಾರಿ ಇಲ್ಲೆ,ತೋಟಲ್ಲಿ ನಾಕು ಕಾಯಿ ಹೆರ್ಕಲೆ ಸಿಕ್ಕೆಕ್ಕಾರೆ.
    ಅದು ಸರಿ,ಓ ಅಲ್ಲಿ ಬೆಳಗಾ೦ ವಿಧಾನಸೌಧಲ್ಲಿ ಈ ವರುಷ ಭಾರೀ ಮ೦ಗ೦ಗಳ ಹಾವಳಿಯಡ. ಗಡೀಪಾರಿ೦ಗೆ ಸುಲಾಭ ದಾರಿ ಸಿಕ್ಕುಗೋ?

  4. ಮಂಗಂಗಳ ಖೆಡ್ಡಾ ಕಾರ್ಯಕ್ರಮದ ಶುದ್ದಿಲಿ ತುಂಬಾ ಹೊಸ ವಿಷಯಂಗೊ ಗೊಂತಾತು. ಒಟ್ಟೊಟ್ಟಿಂಗೆ ಇಪ್ಪಗ ಹಿಡಿವಲೆ ಸುಲಬ ನಿಜ. ಒಗ್ಗಟ್ಟಿಲ್ಲಿ ಒಂದೇ ಗೂಡಿಲ್ಲಿಪ್ಪ ಕಡಂದಲು ಹುಳುಗವಕ್ಕೆ ಕಿಚ್ಚು ಕೊಡುತ್ತದು ಇದೇ ಲೆಕ್ಕಕ್ಕೆ ಬತ್ತು ಅಲ್ಲದೊ ? ಮಂಗಂಗಳ ಹಿಡಿವ ಕ್ರಮ ಎಂಗಳ ಊರಿಲ್ಲಿ ಇತ್ತಿಲ್ಲೆ, ಈಗಳುದೆ ತಿಳುದ ಮಟ್ಟಿಂಗೆ ಇಲ್ಲೆ. ಮಂಗಂಗಳ ಇನ್ನೊಂದು ರೂಪ, ಮುಜುಗಳ ಎಷ್ಟೊ ಕಂಡಿದೆ ಅವಕ್ಕೆ, ಮಂಗಂಗಳಷ್ಟು ಬುದ್ದಿವಂತಿಕೆ ಇಲ್ಲೆ ಹೇಳಿ ಕಾಣ್ತು. ಮದಲಾಣ ಕಾಲಲ್ಲಿ ಮುಜುಗವಕ್ಕೆ ಬೆಡಿ ಮಡಗ್ಗು, ಅದರ ಶಬ್ದಕ್ಕೆ ಮುಜುಗೊ ಹೆದರಿ ಓಡುಗು, ಈಗ ಅದು ಎಡಿಯ, ಅದು ಸರಿಯೂ ಅಲ್ಲ. ಎಂತೇ ಇರಳಿ, ಬೈಲಿಲ್ಲಿ ಹೊಸ ಶುದ್ದಿ ಕೊಟ್ಟ ಒಪ್ಪಣ್ಣಂಗೆ ಧನ್ಯವಾದಂಗೊ.

  5. ಗೋಪಾಲಣ್ಣ ಹೇಳಿದಾಂಗೆ, ಮಂಗಂಗಳ ಪಳಗಿಸಿ ಕಾಯಿ, ಆಡಕ್ಕೆ ಕೊಯಿಶುವ ಕೆಲಸಕ್ಕೆ ಹಾಕಿದರೆ, ಅಷ್ಟು ಉಪಯೋಗ ಅಕ್ಕು. ಬೋಸ ಭಾವನೋ, ನೆಗೆಮಾಣಿಗೋ ಗೊಂತಿಕ್ಕು ಇದರ ಬಗ್ಗೆ.

    ಥಾಯ್ಲೇಂಡ್ ಲಿ ಮಂಗಂಗಳ ಕಾಯಿ ಕೊಯಿಶಲೆ ಪಳಗುಸುತ್ತವಡ.

  6. ಒಪ್ಪಣ್ಣೋ….ಶುದ್ದಿ ಭಾರಿ ಲಾಯ್ಕ ಆಯ್ದಿದಾ….
    ಎಂಗಳಲ್ಲಿ ಹಂದಿಗಳ ಉಪದ್ರ ಜಾಸ್ತಿ. ಮಂಗಂಗಳ ಉಪದ್ರ ಇಲ್ಲೆ….ಹಂದಿ ಹಿಡಿವಲೆ ಎಂತ ಉಪಾಯ…..

    1. ಹಂದಿಗಲ ಹಿಡಿವದರ ಬಗ್ಗೆ ದೊಡ್ಡ ಭಾವನತ್ರ ಕೇಳಿ ಅವರ ನೆರೆಕರೆಲಿ ಇದ್ದವು ಹಂದಿ ಹಿಡಿತ್ತ ಎಕ್ಸ್ಪರ್ಟ್ಗ…

  7. ಮಂಗವ ಹಿಡಿದು ಪಳಗಿಸಿದರೆ,ಅಡಕ್ಕೆ-ತೆಂಗಿನಕಾಯಿ ಕೊಯಿಶಲೆ ಅಕ್ಕೋ ಏನೋ?
    ಮಂಗ ಹಿಡಿವ ಕ್ರಮ ವಿವರಿಸಿದ್ದು ಓದಿ ಹೊಸ ವಿಷಯ ಗೊಂತಾತು.ನಮ್ಮ ಕರಾವಳಿಲಿ ಇಷ್ಟೆಲ್ಲಾ ಮಂಗಂಗೊ ಇಲ್ಲೆಪ್ಪಾ!
    ಆನೆ ಹಿಡಿವಲೂ ಇನ್ನೂ ‘ಭಯಂಕರ’ ಇಪ್ಪ ಖೆಡ್ಡಾ ಕ್ರಮ ಮಾಡುತ್ತವಡ!

  8. ಕಳುದ ವಾರದ ಶುಧ್ಧಿಲಿ ಬಂದ, ಜಾಲು ಕೆರಸುವ ಬಗ್ಗೆ, ಮೊನ್ನೆ ಮನೆಗೆ ಫೋನ್ ಮಾಡಿಪ್ಪಗ ಹೇಳಿದ್ದದು ನೆಂಪಾದ್ದರ ಮೊನ್ನೆ ಬರದೆ ಆನು ಒಪ್ಪಲ್ಲಿ.
    ಈ ವಾರದ ಶುಧ್ಧಿಯ ಮಂಗಂಗಳ ಉಪದ್ರ ತಡವಲೇ ಎಡಿತಿಲ್ಲೆ ಹೇಳಿದೆ ಮೊನ್ನೆ ಮನೆಗೆ ಫೋನ್ ಮಾಡುವಗ ಹೇಳಿದ್ದವು.
    ಎಷ್ಟೆಷ್ಟೋ ಬೊಂಡ ದಿನಾ ಎಳದು ಹಾಕುತ್ತವಡ.

    ಅಪ್ಪು ಎಲ್ಲಾ ಮಂಗಂಗಳ ಒಗ್ಗಟ್ಟಿಲಿ ಹಿಡುದು ಅವಕ್ಕೆಲ್ಲಾ ಬೇಕಾದ ಅಹಾರ ಸಿಕ್ಕುವ ಹಾಂಗೆ ಕಾಡಿಂಗೆ ಬಿಡುದು ಎಷ್ಟು ಲಾಯಿಕ ಅಲ್ಲದಾ?
    ನಮ್ಮ ಉತ್ಪತ್ತಿದೆ ಹಾಳಪ್ಪಲೆ ಇಲ್ಲೆ, ಅವಕ್ಕುದೆ ಬೇಕಾದ ಹಾಂಗೆ ಜೀವಿಸಿಲೆ ಲಾಯಿಕ….

    ತರವಾಡು ಮನೆ ಬಿಟ್ಟು ಕಂಪ್ಯೂಟರ್ ಕೆಲಸ ಆದರೆ ಲಾಯಿಕ ಹೇಳಿ ವಿದ್ಯಕ್ಕ ಗ್ರೇಶುದು ಅಷ್ಟೆ.
    ಯಾವದೇ ಕೆಲಸಲ್ಲೂ ಅದರದ್ದೇ ಆದ ತಲೆಬೆಶಿ ಇದ್ದೆ ಇರ್ತು.
    ತಲೆ ಇದ್ದವಂಗೆ ತಲೆಬೆಶಿ ಇದ್ದು ಅಲ್ಲದಾ?

    ಇನ್ನಾಣ ವಾರ ಇನ್ನೆಂತ ಶುಧ್ಧಿ ಒಪ್ಪಣ್ಣಾ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×