ಮಂಗ ಹಾರಿದ ದೇಶಂದ ಮಂಗಳಕ್ಕೂ ಹಾರಿತ್ತು..!

ವಾರಂದ ವಾರಕ್ಕೆ ಹಲವೂ ಶುದ್ದಿಗಳ ಮಾತಾಡಿಗೊಳ್ತು ಬೈಲಿಲಿ. ಆದರೂ – ಶುದ್ದಿ ಹೇಳಿಮುಗಿಸ್ಸು ಹೇದು ಇಲ್ಲೆ!
ಒಂದು ಹೊಡೆಲಿ ಶುದ್ದಿ ಹೇಳಿಗೊಂಡು ಹೋದ ಹಾಂಗೇ – ಆಚೊಡೆಂದ ಹತ್ತು ಶುದ್ದಿ ಬಪ್ಪಲೆ ಸುರು ಆವುತ್ತು. ಅಲ್ದೋ?

ಬೈಲಿನ ಪ್ರೀತಿಯ ಹರಿಯೊಲ್ಮೆ ಅಜ್ಜಿ ಮೂರು ವಾರದ ಹಿಂದೆ ತೀರಿಗೊಂಡವು. ಆ ಸೂತಕ ಕಳಿವ ಮದಲೇ ಕುಂಬ್ರ ಉಪಾಧ್ಯಾಯರು ತೀರಿಗೊಂಡವು. ಆ ಸೂತಕ ಇನ್ನೂ ಚಾಲ್ತಿಲಿ ಇಪ್ಪಗಳೇ ಆಚಮನೆ ದೊಡ್ಡಮ್ಮನೂ ತೀರಿಗೊಂಡವು. ಯೋ ದೇವರೇ – ಇದೆಂತ ಕತೆ!
ದೇವರೇ – ಸಾಕು ಸಾಕು – ಹೇದು ಹೋವುತ್ತು ಒಂದರಿ.
ತೀರಿಗೊಂಡೋರು ಸಂಸಾರ ಬಂಧನಂದ ಮುಕ್ತ ಆದವು. ಭೂಮಂಡಲಂದ ನಭೋಮಂಡಲಕ್ಕೆ ಏರಿ, ಅಲ್ಲಿಂದ  ದೇವರ ಪಾದ ಸೇರಿದವು – ಹೇದು ನಾವು ಸಮಾದಾನ ಮಾಡಿಗೊಳ್ತು. ಅದೇನೇ ಆದರೂ, ತೀರಿಗೊಂಡ ಬೇಜಾರ ಬೇಜಾರವೇ.

ಅಲ್ಲದೋ? ಅದಿರಳಿ.

ಭೂಮಂಡಲಂದ ನಭೋಮಂಡಲಕ್ಕೆ ಏರಿತ್ತು – ಹೇಳುವಾಗ ನವಗೆ ಮತ್ತೊಂದು ಶುದ್ದಿ ನೆಂಪಾತು.
ಅದೇವದು?
ಅದೇ – ಮಂಗಳ ಯಾನ. ಆ ಬಗ್ಗೆ ಮಾತಾಡುವನೋ?

~

ಸ್ವತಂತ್ರ ಭಾರತದ ಬಾಹ್ಯಾಕಾಶ ಸಂಸ್ಥೆ – ಇಸ್ರೋ – ನಮ್ಮ ಭೂಮಿಯ ಸುತ್ತಲಿನ ಪರಿಸರವ ಅಧ್ಯಯನ ಮಾಡ್ತ ಮಹತ್ಕಾರ್ಯ ಮಾಡ್ತಾ ಇಪ್ಪದು ನವಗೆ ಗೊಂತಿಪ್ಪದೇ. ಆರ್ಯಭಟ ಹೇಳ್ತ ಸುರೂವಾಣ ಉಪಗ್ರಹವ ಕಳುಸಿದ ಮತ್ತೆ ಇಂದಿನ ವರೆಗೆ ಹಲವಾರು ಉಪಗ್ರಹಂಗಳ, ಯಾನನೌಕೆಗಳ ಅಂತರಿಕ್ಷಕ್ಕೆ ಕಳುಸಿಕೊಟ್ಟವಡ ಇಸ್ರೋ ಸಂಸ್ಥೆಯವು. ಅಂತರಿಕ್ಷಕ್ಕೆ ಅಂತೇ ರಿಕ್ಷ ಕಳುಸಿಕೊಟ್ರೆ ಆವುತ್ತಿಲ್ಲೆ, ರೋಕೆಟ್ಟು – ರೋಕೆಟ್ಟು ಕಳುಸಿಕೊಡೆಕ್ಕು. ಅದರ್ಲಿ ಅಧ್ಯಯನಕ್ಕೆ ಬೇಕಾದ ವಿಶೇಷ ತಂತ್ರಜ್ಞಾನಂಗಳೂ ಅಭಿವೃದ್ಧಿ ಆಯೇಕಾದ ಅಗತ್ಯ ಇದ್ದು. ಆ ಕೆಲಸವನ್ನೂ ಅದೇ ಸಂಸ್ಥೆ ಮಾಡಿಗೊಂಡು ಇದ್ದವಾಡ.

ಮೂರೊರಿಶ ಹಿಂದೆ ಚಂದ್ರಯಾನ – ಹೇಳ್ತ ಒಂದು ರೋಕೆಟ್ಟಿನ ಹಾರ್ಸಿದ್ದವಾಡ ನಮ್ಮ ಇಸ್ರೋದವು. ಯಶಸ್ವಿಯಾಗಿ ಚಂದ್ರನಲ್ಲಿಗೆ ಹೋಗಿ, ಅಲ್ಯಾಣ ವಿವರಂಗಳ, ಸೂಕ್ಷ್ಮ ಸಂಗತಿಗಳ ಕಂಡು ತಿಳುದು ಭೂಮಿಗೆ ಎತ್ತುಸುದು ಇದರ ಕಾರ್ಯ.
ಕಾರ್ಯ ಒಳ್ಳೆ ರೀತಿಲಿ ಸಾಗಿತ್ತು. ಚಂದ್ರನ ಒಳ-ಹೆರ ಪೂರಾ ಸುತ್ತಿ ಮಾಹಿತಿಗಳ ತರುಸಿಕೊಟ್ಟತ್ತು.

ಚಂದ್ರಯಾನದ ಯಶಸ್ವಿಯ ಹಿಂದೆಯೇ ಇನ್ನೊಂದು ಏರ್ಪಾಡು ನಿಘಂಟಾಗಿದ್ದತ್ತು. ಅದೆಂತರ? – ಅದುವೇ ಮಂಗಳಯಾನ.

~
ಕಳುದೊರಿಶ – ಕಾವೇರಿ ಶೆಂಕ್ರಾಂತಿಯ ಸಮಯಲ್ಲಿ ಒಂದು ರೋಕೆಟ್ಟು ಹಾರ್ಸಿದವಡ ಇದೇ ಇಸ್ರೋ ಸಂಸ್ಥೆ.  ಅದುವೇ ಮಂಗಳಯಾನದ ರೋಕೆಟ್ಟು. ನವೆಂಬ್ರ ಐದನೇ ತಾರೀಕಿಂಗೆ ಶ್ರೀಹರಿಕೋಟಾ ಕೇಂದ್ರಂದ ಈ ರೋಕೆಟ್ಟು ಹಾರಿತ್ತು. ಪ್ರತಿ ಕ್ಷಣ ವಿಜ್ಞಾನಿಗೊ ಈ ರೋಕೆಟ್ಟಿನ ಚಲನವಲನಂಗಳ ತಿದ್ದಿ ತೀಡಿ ಬೇಕಾದ ಹಾಂಗೆ ಮಾರ್ಪಾಡುಗಳ ಮಾಡುಸಿಗೊಂಡು ಕೊಟ್ಟುಗೊಂಡಿತ್ತವಾಡ. ಆ ಪ್ರಕಾರ ಮತ್ತಾಣ ದಿನಂಗಳಲ್ಲಿ ಹಂತಹಂತವಾಗಿ ಭೂಕಕ್ಷೆಲಿ ಕೂರ್ಸಿಗೊಂಡು – ಭೂಮಿಯ ಹೆರಹೆರಾಂಗೆ ಕೊಂಡು ಹೋದವಾಡ. ದಶಂಬ್ರ ಒಂದನೇ ತಾರೀಕಿಂಗೆ ಅಪ್ಪಗ ಈ ರೋಕೆಟ್ಟು ಭೂಕಕ್ಷೆಂದ ಸಂಪೂರ್ಣ ಹೆರ ಹೋಗಿ, ಚಂದ್ರನಿಂದಲೂ ದೂರ ಎತ್ತಿತ್ತಾಡ.

ಇನ್ನೂ ಹೋಯೇಕು ಸುಮಾರು.  ಹೋತು ಹೋತು, ಇರುಳು ಹೇಳಿ ಇಲ್ಲೆ, ಹಗಲು ಹೇಳಿ ಇಲ್ಲೆ – ನಿತ್ಯವೂ ಹೋಪದೊಂದೇ ಕೆಲಸ.  ಓ ಮನ್ನೆ ಒಯಿಶಾಕಕ್ಕೆ ಅಪ್ಪಗ ಅರ್ಧ ದಾರಿಗೆ ಎತ್ತಿತ್ತು – ಹೇಯಿದವು ಪೇಪರಿನೋರು.

~

ಅದಾಗಿ ಮತ್ತೆ ಬೈಲಿನೋರೆಲ್ಲ ಅವರವರ ಕೆಲಸಲ್ಲಿ ಬೆಶಿ ಆದವು. ಪೇಪರಿನೋರು ಅವರವರ ಕಾರ್ಯವ್ಯಾಪ್ತಿಲಿ ಇದ್ದಿದ್ದವು. ಆದ್ದರೆ ಇಸ್ರೋದವು ಬಿಟ್ಟಿದವೋ? ಇಲ್ಲೆ. ಅವು ನಿರಂತರ ಆ ರೋಕೆಟ್ಟಿನ ಮಂಗಳನ ಹತ್ತರೆ ಸೇರ್ಸುಲೆ ಹೊಣಕ್ಕೊಂಡೇ ಇದ್ದಿದ್ದವು.
ಪೇಪರುಗಳಲ್ಲಿ ಆ ಸುದ್ದಿ ಪುನಾ ಕೇಳಿದ್ದು ಓ ಮನ್ನೆ, ಕಳುದವಾರ.
ಅದೆಂತ ಹೇದರೆ, ಈ ರೋಕೆಟ್ಟಿನ ಒಳ ಇಪ್ಪ ಇಂಧನ ಸರಿಯಾಗಿ ಹೊತ್ತಿ ಬೇಕಾದ ಹಾಂಗೆ ಕೆಲಸ ಮಾಡ್ತಾ ಇದ್ದು –ಹೇಳ್ತ ಶುಭಶುದ್ದಿ. ಅದಾಗಿ ಎರಡೇ ದಿನಲ್ಲಿ ಮಂಗಳನ ಒಳಾಂಗೆ ಸೇರ್ಪಡೆ ಅಪ್ಪ ಸುಮಹೂರ್ತವೂ ಬತ್ತು – ಹೇಳ್ತದು ಮತ್ತೂ ಕೊಶಿಯ ಸಂಗತಿ.

ಆ ಪ್ರಕಾರ, ನಿನ್ನೆಲ್ಲ ಮೊನ್ನೆ ಸುಮಹೂರ್ತಲ್ಲಿ ಎಲ್ಲವೂ ಸುಸೂತ್ರಲ್ಲಿ ನೆಡದು ಯಶಸ್ವಿಯಾಗಿ ಉಪಗ್ರಹ ನೌಕೆಯ ಮಂಗಳನ ಕಕ್ಷೆಲಿ ಸೇರುಸುತ್ತಲ್ಯಂಗೆ ಮಂಗಳಯಾನ ಮಂಗಳ ಆತು.

~
ಯಾನ ಮಂಗಳ ಆತು- ಹೇದರೆ, ಆ ಯಾನಿಯ ನಿಜವಾದ ಕೆಲಸ ಇನ್ನು ಇಪ್ಪದಷ್ಟೆ.
ಅಲ್ಯಾಣ ನೈಜ ವಿಷಯಂಗಳ ಅಧ್ಯಯನ, ಮಾಹಿತಿಗಳ ಕ್ರೋಢೀಕರಣ, ಸಂಗ್ರಹಣ – ಎಲ್ಲವುದೇ ಆಯೆಕ್ಕು.
ಅದೇ ಉದ್ದೇಶಕ್ಕೇ ಅದರ ಅಲ್ಲಿಗೆ ಕಳುಸಿದ್ದು. ಅಲ್ದೋ?
ಮಂಗಳನಲ್ಲಿ ನೀರು ಇದ್ದೋ? ಮಂಗಳನ ಮೈಲ್ಮೈಲಿ ಕಬ್ಬಿಣ ಇದ್ದೋ? ಇನ್ನೊಂದು ಇದ್ದೋ? ಮತ್ತೊಂದು ಇದ್ದೋ – ಹೇದು ವಿಮರ್ಶೆಗೊ ಆಯೇಕಾಯಿದು.

ಭಾರತದ ವೈಜ್ಞಾನಿಕ ಅನ್ವೇಷಣೆಗೊಕ್ಕೆ ವಿಶೇಷ ಮಾಹಿತಿಗಳ ಹುಡ್ಕಿ ತಂದು ಕೊಡ್ತ ಮಹತ್ಕಾರ್ಯ ಈ ಮಂಗಳಯಾನಿಯ ಕೈಲಿ ಇದ್ದು.

ಎಲ್ಲ ಕೊಶಿಯ ವಿಷಯವೇ. ಚೆಂದಕೆ ಸಾಗಲಿ. ಭಾರತದ ಅಭಿವೃದ್ಧಿಲಿ ದೊಡ್ಡ ಹೆಜ್ಜೆ ಇದಾಗಲಿ.

~

ಇದರ್ಲಿ ಒಂದೆರಡು ಹೆಮ್ಮೆ ಇದ್ದಾಡ. ಅದೆಂತರ ಕೇಳಿರೆ, ಈ ಇಡೀ ಕೆಲಸಕ್ಕೆ ಖರ್ಚಾದ ಪೈಶೆ – ಇದೇ ನಮುನೆ ಕೆಲಸ ಮಾಡಿದ ಇತರೆ ದೇಶಕ್ಕೆ ಹೋಲುಸಿರೆ ಬರೇ ಸಣ್ಣ ಮೊತ್ತ ಅಡ. ಕಿಲೋಮೀಟ್ರಿಂಗೆ ಆರು ರುಪಾಯಿಂದಲೂ ಕಮ್ಮಿ – ಹೇದು ಒಂದು ಜೋಕು ಕೊಳಚ್ಚಿಪ್ಪು ಭಾವ ಹೇಳ್ತ ಕ್ರಮ ಇದ್ದು. ಅದೇನೇ ಇರಳಿ- ಭಾರತದ ಸ್ಥಿತಿಗತಿಗೆ ಅನುಕೂಲ ಆವುತ್ತ ಹಾಂಗೆ ತುಂಬ ಕಡಮ್ಮೆಯ ಒಯಿವಾಟು.
ಅಷ್ಟೂ ಕಡಮ್ಮೆಗೆ ಮಂಗಳನಲ್ಲಿಗೆ ಎತ್ತುಸುವ ಇಕ್ನೀಸು ಎಂತರ?
ಅದೇ – ವಿಶ್ವಲ್ಲಿ ಧರ್ಮಕ್ಕೇ ಸಿಕ್ಕುವ ಶೆಗ್ತಿ – ಗುರುತ್ವಾಕರ್ಷಣ ಶೆಗ್ತಿಯ ಅತಿ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಗೊಂಡದಾಡ.

ವಸ್ತುವೊಂದು ಅದರ ದಾರಿಲಿ ತಿರುಗುತ್ತಾ ಹೋವುತ್ತು, ಗುರುತ್ವ ಬಲಲ್ಲಿ. ದಾರಿ ಬದಲುಸೇಕಾದಲ್ಲಿ ಮಾಂತ್ರ ಇಂಜಿನು ಎಳಗುಸೆಕ್ಕಪ್ಪದು ಇದಾ – ಈ ನಮುನೆಲಿ ಅತಿ ಕಡಮ್ಮೆ ಖರ್ಚು.

ಮತ್ತೆ, ಹೆಚ್ಚಿಂದುದೇ ದೇಶೀಯ ನಿರ್ಮಾಣ ಆದ ಕಾರಣ ಅತ್ಯುತ್ಕೃಷ್ಟ ದರ್ಜೆ, ಅತಿ ಒಳ್ಳೆ ಕೆಲಸವೂ ಆಗಿದ್ದು. ಹಾಂಗಾಗಿ ಒಟ್ಟು ಆರುಕೋಟಿ ಕಿಲೋಮೀಟ್ರು ಪ್ರಯಾಣ ಮಾಡಿರೂ ಏನೂ ಸಮಸ್ಯೆ ಆಗದ್ದೆ ಇಪ್ಪದು.
ಇದೊಂದು “ಭಾರತದ ತಯಾರಿ”ಗೆ ನಿದರ್ಶನ.

ಮಂಗಳಯಾನ

ಮಂಗಳಯಾನ

ಹೀಂಗಿರ್ತ ಸಾಧನೆಯ ಮಾಡಿದ  ನಾಲ್ಕನೇ ದೇಶ ನಮ್ಮದೇ ಅಡ. ಅಮೇರಿಕ, ಯುರೋಪು, ರಷ್ಯಾ – ಮೂರು ಜೆನ ದೈತ್ಯಂಗಳ ಎಡಕ್ಕಿಲಿ ನಾವು – ಭಾರತೀಯರು ಈ ಸಾಧನೆ ಮಾಡಿದ್ದಾಡ.

ಅದರ್ಲಿಯೂ – ಸುರೂವಾಣ ಪ್ರಯತ್ನಲ್ಲೇ ಮಂಗಳನ ಬಾನ ಎತ್ತಿದ್ದು ನಾವು ಮಾಂತ್ರ ಆಡ.

ಒಳುದ್ದೆಲ್ಲವೂ ಸುರೂವಾಣ ಪ್ರಯತ್ನ ಎಡೆದಾರಿಲಿ ಹರುದು ಬಿದ್ದಿದಾಡ.  ಅವಕ್ಕೆಲ್ಲ ತಾಕತ್ತಿತ್ತು, ಮಾಡಿದವು. ನಮ್ಮ ಸಾಮರ್ಥ್ಯಕ್ಕೆ ಇದೊಂದರ ಖರ್ಚೇ ದೊಡ್ಡದು ಆಗಿದ್ದತ್ತು. ಒಂದುವೇಳೆ ಬುಡಂದ ಮಾಡೇಕಾಗಿ ಬಂದಿದ್ದರೆ ದೊಡ್ಡ ಪೆಟ್ಟು ಆವುತಿತು. ದೇವರು ಕೈಬಿಟ್ಟಿದಯಿಲ್ಲೆ, ಹಾಂಗಾಗಿ ಇದು ಸುರೂವಾಣ ಸರ್ತಿಯೇ ಅಲ್ಲಿಗೆತ್ತುಲೆ ಸಾಧ್ಯ ಆತು.

ರಾಮಾಯಣದ ಕಾಲದ ತ್ರೇತಾಯುಗಲ್ಲಿ ಒಬ್ಬ ಅಮೋಘ ಮಂಗ ಭಾರತಂದ ಹಾರಿ – ಲಂಕೆಗೆ ಏರಿದ್ದನಾಡ.
ಇಂದಿಂಗೆ ಮಂಗಳನಲ್ಲಿಗೆ ಹಾರ್ಲೆ ಸಾಧ್ಯ ಆತು ಹೇದರೆ ಆ ತ್ರೇತಾಯುಗಲ್ಲಿ ಹಾರಿದವನ ಆತ್ಮವಿಶ್ವಾಸ, ಅಂತಃಶಕ್ತಿಯೇ ಕಾರಣ.
ಮುಂದಂಗೂ ಅಂತಾ ಧೃಢ ಆತ್ಮವಿಶ್ವಾಸ ನಮ್ಮ ಕೈಬಿಡದ್ದೆ ಒಟ್ಟಿಂಗಿರಳಿ  – ಹೇಳ್ತದು ನಮ್ಮ ಆಶಯ.

~

ಭಾರತ ಅಭಿವೃದ್ಧಿ ಆವುತ್ತಾ ಇದ್ದು – ಹೇಳ್ತದಕ್ಕೆ ಸಂಶಯವೇ ಇಲ್ಲೆ.
ಸರ್ಕಾರದ ಎಲ್ಲಾ ಅಂಗಂಗೊ ಅಭಿವೃದ್ಧಿ ಆಗಿ, ದೇಶದ ಸಮಗ್ರ ಬೆಳವಣಿಗೆಗೆ ಕಾರಣ ಆಯೇಕು.

ಆ ರೀತಿಲಿ ನೋಡಿರೆ ಈ ಇಸ್ರೋ – ಒಳುದ ಸಂಸ್ಥೆಗೊಕ್ಕೆ ಆದರ್ಶಪ್ರಾಯವೂ, ಅನುಕರಣೀಯವೂ ಆಗಿದ್ದು.

ಹಗಲಿರುಳು ದುಡುದ ಇಸ್ರೋದ ವಿಜ್ಞಾನಿಗೊಕ್ಕೆ, ಪ್ರೋತ್ಸಾಹ ಕೊಟ್ಟ ಸರ್ಕಾರಕ್ಕೆ, ಎಲ್ಲವೂ ಚೆಂದಲ್ಲಿ ಎತ್ತುವ ಹಾಂಗೆ ನೋಡಿಗೊಂಡ ಆ ಮಹಾ ಶೆಗ್ತಿ ದುರ್ಗಾಮಾತೆಗೆ ಈ ನವರಾತ್ರಿಯ ಸಂದರ್ಭಲ್ಲಿ ಕೈಜೋಡುಸಿವಂದನೆಗೊ.

~

ಒಂದೊಪ್ಪ: ಭಾರತದ ಹೆಮ್ಮೆಯ ಹೊಸ ಗಾದೆ – ಪ್ರಥಮ ಲಂಘನಮ್ –ಮಂಗಲಂ ಲಬ್ಧಮ್ !!

ಒಪ್ಪಣ್ಣ

   

You may also like...

5 Responses

 1. ಮೇಕ್ ಇನ್ ಇಂಡಿಯಾ ಕನಸ್ಸಿನ ಸಮಯಲ್ಲೇ ಪ್ರಪ್ರಥಮವಾಗಿ ಇದು ಯಶಸ್ಸು ಕಂಡದು ತುಂಬಾ ಹೆಮ್ಮೆ ಆವುತ್ತು. ಭವ್ಯ ಭಾರತವಾಗಿ ನಮ್ಮ ದೇಶ ಬೇಗಲ್ಲಿ ಕಂಗೊಳುಸಲಿ ಹೇದು ಪ್ರೋತ್ಸಾಹುಸುವೊ°. ಅಭಿವೃದ್ಧಿಶೀಲರಾಷ್ಟ್ರ ಹೇದು ಏವುತ್ತಿಂದಲೋ ಹೇದೊಂಡು ಬಪ್ಪ ನಮ್ಮ ಭಾರತ ಅಭಿವೃದ್ಧಿ ದೇಶವಾಗಿ ತಲೆನೆಗ್ಗಿ ನಿಂಬಾಂಗಾಗಲಿ ಬೇಗನೆ. ಹರೇ ರಾಮ ಸಕಾಲಿಕ ಶುದ್ದಿಗೆ.

 2. GOPALANNA says:

  ಬಹಳ ಸಂತೋಷ ಆವುತ್ತು..ಭೂಮಿ ಮಂಗಳನ ತಾಯಿ ಹೇಳುತ್ತು ಪುರಾಣ .ಮಂಗಲ್ ಕೊ ಮಾಮ್ ಮಿಲ್ ಗಯಾ! ಹೇಳಿ ಮೋದಿಯ ಉದ್ಗಾರ ಕುಶಿ ಆತು.

 3. ಸಾಂದರ್ಭಿಕ, ಸುಂದರ, ಅಭಿಮಾನಪೂರ್ಣ ಸುದ್ದಿ!
  ಒಂದೊಪ್ಪವೂ ಉತ್ಕೃಷ್ಟ ಆಯಿದು – “ಪ್ರಥಮಂ ಲಂಘನಮ್! ಲಬ್ಧಂ ಮಂಗಲಮ್!!”

  ಮಂಗಲಯಾನ! ವಿಶ್ವೇಸ್ಮಿನ್
  ರಾಷ್ಟ್ರಗೌರವವರ್ಧಕ!
  ಪರ್ಯಟನ್ಮಂಗಲಂ ಸಮ್ಯಕ್
  ವಿತನು ಮಂಗಲಂ ಸದಾ!!

  “ ಈ ವಿಶ್ವಲ್ಲಿ ನಮ್ಮ ರಾಷ್ಟ್ರದ ಗೌರವವ ವರ್ಧಿಸುವ ಹೇ ಮಂಗಲಯಾನ! ನೀನು ಮಂಗಳನ ಪರ್ಯಟನೆ ಮಾಡ್ಯೊಂಡು ಯಾವಾಗಲೂ ಮಂಗಳವ ಕೊಡುತ್ತಿರು (ಮಂಗಳಗ್ರಹದ ಮಾಹಿತಿ ಒದಗಿಸುವ ಕೆಲಸ ನಿರಂತರವಾಗಿ ಮಾಡು).”

 4. ಗೋಪಾಲ ಬೊಳುಂಬು says:

  ಶುದ್ದಿಯ ತಲೆಬರಹದ ಹಾಂಗೆಯೇ ಶುದ್ದಿಯುದೆ ತುಂಬಾ ಲಾಯಕಿತ್ತು. ಭಾರತದ ಸಾಧನೆಗೆ ನಮೋ ನಮ:.

 5. ಹನುಮಂತನ ಹಾಂಗೆ ಸೂರ್ಯನನ್ನೂ ಮುಟ್ಟಲಿ ಹೇಳಿ ನಮ್ಮ ಹಾರೈಕೆ…. 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *